ಚಿಕ್ಕ ಹಸಿರು ಗುಂಗುರು ಪಂಚ (SMALLGREEN BEE-EATER)
ಮೀ.. ಓರಿಯೆಂಟಾಲಿಸ್ (Merops orientalis)

278_69_PP_KUH

ಗಾತ್ರ : ೧೬-೧೮ ಸೆಂ.ಮೀ.

ಆವಾಸ : ಮೈದಾನ, ಹುಲ್ಲುಗಾವಲು, ತೋಟ, ಗದ್ದೆ ಇತ್ಯಾದಿಗಳಲ್ಲಿ ಕಂಡುಬರುವ ಸಾಮಾನ್ಯ ಹಕ್ಕಿ. ಸ್ಥಳೀಯ ಪ್ರಭೇದ.

ಲಕ್ಷಣಗಳು : ಗಂಡುಹೆಣ್ಣು ಒಂದೇ ತೆರನಾಗಿವೆ. ಸಣ್ಣ ಗಾತ್ರ, ನೀಲಿಕೆನ್ನೆ ಕಪ್ಪು ಕತ್ತು ಪಟ್ಟಿ ತಿಳಿಕಂದು ತಲೆ. ಬಾಲದ ಮಧ್ಯದಲ್ಲಿ ಎರಡು ಕಡ್ಡಿಗಳಂತಿರುವ ಉದ್ದದ ಗರಿಗಳಿರುತ್ತವೆ. ಉದ್ದ, ತೆಳುವಾದ, ತುಸು ಬಾಗಿದ ಕಪ್ಪು ಕೊಕ್ಕು, ಕೆಂಗಣ್ಣು. ತಂತಿಕಂಬ, ಬೇಲಿ, ತಂತಿಗಳು ಮೇಲೆ ಕುಳಿತಿರುತ್ತದೆ.

ಆಹಾರ : ಹಾರುವ ಕೀಟಗಳು. ಹಾರುತ್ತಲೇ ಹಿಡಿಯುತ್ತವೆ. ಜೇನ್ನೊಣ ಇತ್ಯಾದಿ ನೊಣಗಳು ಪ್ರಮುಖ ಆಹಾರ.

ಸಂತಾನಾಭಿವೃದ್ಧಿ : ಮಾರ್ಚ್‌ನಿಂದ ಮೇ ತಿಂಗಳ ಅವಧಿ. ಗದ್ದೆಯ ಅಂಚು, ಮಣ್ಣಿನ ದಿಣ್ಣೆಯಲ್ಲಿ ಟನೆಲ್‌ನಂತಹ ಗೂಡು ರಚಿಸಿ ೪-೬ ಬಿಳಿ ಮೊಟ್ಟೆಗಳನ್ನಿಡುತ್ತದೆ.

 —-

ನೀಲಕಂಠ (BLUE JAY)
ಕೊರಾಸಿಯಾಸ್ ಬೆಂಗಾಲೆನ್ಸಿಸ್ (Coracias benghalensis)

279_69_PP_KUH

ಗಾತ್ರ : ೩೩ ಸೆಂ.ಮೀ.

ಆವಾಸ : ಗದ್ದೆ, ರಸ್ತೆ, ಬದಿ, ತೋಟ, ತೆರೆದ ಕಾಡು ಇತ್ಯಾದಿಗಳಲ್ಲಿ ಕಂಡುಬರುವ ಸ್ಥಳೀಯ ಸಾಮಾನ್ಯ ಪಕ್ಷಿ.

ಲಕ್ಷಣಗಳು : ಗಂಡುಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ನೀಲಿ ನೇರಳೆ, ಕಂದು, ಕಪ್ಪು ಮೊದಲಾದ ಬಣ್ಣದ ಸುಂದರ ಪಕ್ಷಿ. ಸ್ವಲ್ಪ ದೊಡ್ಡದಾಗಿ ಕಾಣುವ ತಲೆ, ಭಾರವಾದ ಕೊಕ್ಕು, ತಿಳಿ ಕಂದು ಕುತ್ತಿಗೆ, ತಿಳಿ ನೀಲಿ ಹೊಟ್ಟೆ ಮತ್ತು ಬಾಲದ ಕೆಳಭಾಗ ರೆಕ್ಕೆಗಳಲ್ಲಿ ನೇರಳೆ ಬಣ್ಣ, ಅಂಚ್ಚು ಕಪ್ಪು, ಬಾಲದ ತುದಿ ಕಡು ನೀಲಿಯಾಗಿರುತ್ತದೆ.

ಆಹಾರ : ಗದ್ದೆಗಳ ಹಾನಿಕಾರಕ ಕೀಟ ತಿನ್ನುವ ಉಪಕಾರಿ ಪಕ್ಷಿ.

ಸಂತಾನಾಭಿವೃದ್ಧಿ : ಮಾರ್ಚ್‌ನಿಂದ ಜೂನ್ ವರೆಗಿನ ಅವಧಿ. ಮರದ ಪೊಟರೆಯಲ್ಲಿ ಕಡ್ಡಿ, ಹುಲ್ಲು, ಎಲೆ ಇತ್ಯಾದಿಗಳಿಂದ ಕೂಡಿದ ಗೂಡುಕಟ್ಟಿ ೪-೫ ಹೊಳೆಯುವ ಬಿಳಿ ಮೊಟ್ಟೆಗಳನ್ನು ಇಡುತ್ತದೆ.

 —-

ಚಂದ್ರಮುಕುಟ (HOOPE)
ಯುಪುಪ ಇಪಾಪ್ಸ್ (Upupa epops)

280_69_PP_KUH

ಗಾತ್ರ : ೩೦-೩೧ ಸೆಂ.ಮೀ.

ಆವಾಸ : ಮೈದಾನ, ಗುಡ್ಡಬೆಟ್ಟ, ಗದ್ದೆಗಳು ತೆರೆದ ಕಾಡು ಇತ್ಯಾದಿ ಕಡೆಗಳಲ್ಲಿರುತ್ತದೆ. ಸ್ಥಳೀಯವಾಗಿ ವಲಸೆ ಹೋಗುವ ಪಕ್ಷಿ.

ಲಕ್ಷಣಗಳು : ಗಂಡುಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ತಿಳಿಕಂದು (ಹಳದಿಕಂದು) ಬಣ್ಣದ, ಕಪ್ಪು ಬಿಳಿ ವಿನ್ಯಾಸದ ಹಕ್ಕಿ. ಬೀಸಣಿಗೆಯಂತೆ ಮಡಚಿ ಬಿಡಿಸಬಲ್ಲ ತಲೆಯ ಮೇಲಿನ ಮುಕುಟ ಪ್ರಮುಖ ಲಕ್ಷಣ. ಮೊನಚಾದ ಉದ್ದನೆಯ ಕೊಕ್ಕು, ಕಪ್ಪು ಬಿಳಿ ರೆಕ್ಕೆ ಮತ್ತು ಬಾಲ. ಬಾಲದ ತುದಿ ಚೌಕಾಕಾರ, ಕಪ್ಪು ಪಟ್ಟಿ ಇರುತ್ತದೆ.

ಆಹಾರ : ಕೀಟ, ಹುಳು ಮತ್ತು ಡಿಂಬ. ಮಣ್ಣನ್ನು ಕೆದಕಿ ಕೀಟ ಹೆಕ್ಕುತ್ತದೆ.

ಸಂತಾನಾಭಿವೃದ್ಧಿ : ಫೆಬ್ರವರಿಯಿಂದ ಮೇ ವರೆಗಿನ ಅವಧಿ. ಹಳೆಯ ಗೋಡೆ ಅಥವಾ ಮರದ ಪೊಟರೆಯಲ್ಲಿ ಕಸದ ರಾಶಿಯಂತಹ ಗೂಡು ರಚಿಸಿ ೫-೬ ಬಿಳಿ ಮೊಟ್ಟೆಗಳನ್ನು ಇಡುತ್ತದೆ.

 —-

ಬೂದು ಮಲೆಹಕ್ಕಿ (ಕೊಂಬುಕೊಕ್ಕು) (GREY HORNBILL)
ಟಾಕಸ್ ಬೈರೊಸ್ಟ್ರಿಸ್ (Tockus birostris)

281_69_PP_KUH

ಗಾತ್ರ : ೫೦ ಸೆಂ.ಮೀ.

ಆವಾಸ : ತೆರೆದ ಕಾಡು, ಎತ್ತರದ ಮರಗಳಿರುವ ಪ್ರದೇಶಗಳಲ್ಲಿರುತ್ತದೆ. ಸ್ಥಳೀಯ ಪಕ್ಷಿ.

ಲಕ್ಷಣಗಳು : ಸ್ವಲ್ಪ ಕಂದು ಬೂದು ಬಣ್ಣದ ಹಕ್ಕಿ. ತುಂಬಾ ದೊಡ್ಡದಾದ, ಕಪ್ಪು ಬಿಳಿ ಕೊಕ್ಕು. ತುದಿ ಸ್ವಲ್ಪ ಬಾಗಿದೆ. ಕೊಕ್ಕಿನ ಮೇಲೆ ಶಿಖೆ. ಹೆಣ್ಣು ಹಕ್ಕಿಯಲ್ಲಿ ಶಿಖೆ ಸ್ವಲ್ಪ ಚಿಕ್ಕದು. ಹೊಟ್ಟೆಯ ಭಾಗ. ಸ್ವಲ್ಪ ತಿಳಿ ಬೂದು. ಬಾಲದ ತುದಿಯಲ್ಲಿ ಕಪ್ಪು ತೇಪೆಗಳಿರುತ್ತದೆ.

ಆಹಾರ : ಮುಖ್ಯವಾಗಿ ಹಣ್ಣು ಆಲದ ಹಣ್ಣೆಂದರೆ ಹೆಚ್ಚು ಪ್ರೀತಿ. ಕೀಟ, ಸರೀಸೃಪಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಮಾರ್ಚ್‌ನಿಂದ ಜೂನ್‌ನ ಅವಧಿ. ಎತ್ತರದ ಮರದ ಪೊಟರೆ, ಹಿಕ್ಕೆಗಳಿಂದ ಭಿತ್ತಿ, ಹೆಣ್ಣು ಒಳಗಡೆ ಬಂಧನ. ೨-೩ ಬಿಳಿ ಮೊಟ್ಟೆಗಳನ್ನಿಡುತ್ತದೆ. ಮರಿಗಳು ಹೊರ ಬರುವವರೆಗೆ ಗಂಡು ಹೆಣ್ಣಿಗೆ ಆಹಾರ ಪೂರೈಸುತ್ತದೆ.

—- 

ಮಲಬಾರು ಬೂದು ಮಲೆಹಕ್ಕಿ (MALABAR GREY HORNBILL)
ಟಾ. ಗ್ರಿಸಿಯಸ್ (Tockus griseus)

282_69_PP_KUH

ಆವಾಸ : ಆಲ, ಆಸ್ವತ್ಥ ಮರಗಳಿರುವ ದಟ್ಟ ಕಾಡು ಮತ್ತು ತೆರೆದ ಕಾಡಿನಲ್ಲಿ ವಾಸಿಸುತ್ತವೆ.

ಲಕ್ಷಣಗಳು : ಸಾಮಾನ್ಯವಾಗಿ ಬೂದು ಮಳೆಹಕ್ಕಿಯನ್ನು ಹೋಲುತ್ತದೆ. ಆದರೆ ಕೊಕ್ಕಿನ ಮೇಲೆ ಸಿಖೆ ಇಲ್ಲ. ಕಣ್ಣುಗಳ ಮೇಲೆ ಎರಡು ಬಿಳಿ ರೇಖೆಗಳು. ಕೊಕ್ಕು ಹಳದಿ. ಕಪ್ಪು ಬಾಲ ತುದಿಯಲ್ಲಿ ಬಿಳಿ. ಕಡುಬೂದು ಮೇಲ್ಭಾಗ ತಿಳಿಯಾದ ಹೊಟ್ಟೆಯ ಭಾಗ. ಹೆಣ್ಣು ಹಕ್ಕಿಯ ಕೊಕ್ಕಿನ ಬುಡದಲ್ಲಿ ಕಪ್ಪು ಮಚ್ಚೆ ಇದೆ. ಕೊಕ್ಕು ತಿಳಿ ಹಳದಿ.

ಆಹಾರ : ಗೋಳಿ, ಆಲ, ಅಶ್ವತ್ಥ ಹಣ್ಣುಗಳು. ಕೀಟ, ಚಿಕ್ಕಪುಟ್ಟ ಇತರೆ ಪ್ರಾಣಿಗಳನ್ನು ತಿನ್ನುವುದು.

ಸಂತಾನಾಭಿವೃದ್ಧಿ : ಜನವರಿಯಿಂದ ಏಪ್ರಿಲ್ ನ ಅವಧಿ. ಮರದ ಪೊಟರೆಯ ಗೂಡಲ್ಲಿ ೩-೪ ಮೊಟ್ಟೆಗಳನ್ನಿಡುತ್ತದೆ.