ಗಣ : ರಾಜಿಫಾರ್ಮಿಸ್‌(Rajiformes)
ಕುಟುಂಬ : ರೈನೊಬೇಟಿಡೀ (Rhinobatidae)
ಉದಾ : ಗಿಟಾರ್ ಮೀನು (Guitar fish)
ಶಾಸ್ತ್ರೀಯ ನಾಮ : ರೈನೊಬೇಟಸ್
ಗ್ರಾನುಲೇಟಸ್‌(Rhinobatus gnanulatus)

ಇದರ ಆಕಾರ ಇಂಗ್ಲಿಷ್‌ವಾದ್ಯ ಗಿಟಾರ್ ನಂತಿರುವುದರಿಂದ ಅದನ್ನು ಈ ಹೆಸರಿನಿಂದ ಕರೆಯುತ್ತಾರೆ. ಇದು ಆಕಾರದಲ್ಲಿ, ಈಜುರೆಕ್ಕೆ ಲಕ್ಷಣಗಳಲ್ಲಿ ಶಾರ್ಕುಮೀನುಗಳನ್ನು ಹೋಲುತ್ತದೆಯಾದರೂ ರೇಮೀನುಗಳ ಲಕ್ಷಣಗಳನ್ನು ಹೊಂದಿದೆ. ಕಿವಿರು ರಂಧ್ರಗಳು ಶಾರ್ಕಿನಂತೆ ದೇಹದ ಪಕ್ಕದಲ್ಲಿರದೆ ರೇಮೀನುಗಳಂತೆ ತಳಭಾಗದಲ್ಲಿ ತೆರೆಯುತ್ತವೆ. ಕಣ್ಣುಗಳು ತಲೆಯ ಪಕ್ಕಗಳಲ್ಲಿಲ್ಲದೆ ತಲೆಯ ಮೇಲಿವೆ. ಅವುಗಳ ಹಿಂದೆ ಶಾರ್ಕುಗಳಲ್ಲಿಲ್ಲದ ಸ್ಪೈರಕಲ್‌ಗಳಿವೆ.

—- 

ಗಣ : ಟಾರ್ಪೆಡಿನಿಫಾರ್ಮಿಸ್‌(Torpediniformes)
ಕುಟುಂಬ : ಟಾರ್ಪೆಡೀನಿಡೀ (Torpedinidae)
ಉದಾ : ವಿದ್ಯುತ್
ರೇ ಮೀನು (Electric ray)
ಶಾಸ್ತ್ರೀಯ ನಾಮ : ನಾರ್ಕೆ ಡಿಪ್ಟಿರೀಜಿಯ (Narke dipterigia)

004_69_PP_KUH

ಇವು ಸುಮಾರಾಗಿ ಚಕ್ರಾಕಾರದ ದೇಹವನ್ನು ಪಡೆದಿರುವ ಮೀನುಗಳು. ಭುಜದ ಈಜುರೆಕ್ಕೆಗಳಿಗೂ ದೇಹಕ್ಕೂ ನಡುವೆ ಸ್ನಾಯುಗಳು ಮಾರ್ಪಟ್ಟು ರೂಪುಗೊಂಡ ವಿದ್ಯುತ್‌ಅಂಗಗಳಿವೆ. ನೀರಿನಲ್ಲಿ ಚಲಿಸುವಾಗ ಉತ್ಪತ್ತಿಯಾಗುವ ಘರ್ಷಣೆಯಿಂದಾಗಿ ಇವುಗಳಲ್ಲಿ ವಿದ್ಯುತ್‌ಉತ್ಪತ್ತಿಯಾಗುತ್ತದೆ. ಇವು ತಮ್ಮ ಆಹಾರ ಜೀವಿಯನ್ನು ಕೊಲ್ಲಲು ಅಥವಾ ಪ್ರಜ್ಞೆತಪ್ಪಿಸಲು ಈ ವಿದ್ಯುತ್‌ಶಕ್ತಿಯನ್ನು ಬಳಸುತ್ತವೆ. ಹಾಗೇ ತನ್ನನ್ನು ಆಕ್ರಮಿಸಲು ಬರುವ ಶತ್ರುಗಳನ್ನು ಎದುರಿಸಿ ಹೆದರಿಸಿ ರಕ್ಷಣೆಯನ್ನು ಪಡೆಯಲು ಈ ವಿದ್ಯುತ್‌ಶಕ್ತಿಯನ್ನು ಬಳಸುತ್ತವೆ. ಉಳಿದಂತೆ ಇವು ಸೊರಕೆ (ರೇ) ಮೀನುಗಳು.

—-

ಗಣ : ರಾಜಿಫಾರ್ಮಿಸ್‌/ ಹೈಪೊಟ್ರಿಮೇಟ
ಕುಟುಂಬ : ಪ್ರಿಸ್ಟಿಡೀ (Pristidae)
ಉದಾ : ಗರಗಸ ಮೀನು (Saw fish)
ಶಾಸ್ತ್ರೀಯ ನಾಮ : ಪ್ರಿಸ್ಟಿಸ್ ಮೈಕ್ರೊಡಾನ್
(Pristis microdon)

005_69_PP_KUH

ವಿತರಣೆ : ಕಡಲು, ಅಳಿವೆಗಳು, ಹಲವು ಮೈಲಿಗಳ ದೂರ ನದಿಗಳಲ್ಲಿಯೂ ಪ್ರವೇಶಿಸಿ ಬರಬಹುದು.

ಗಾತ್ರ : ೧೦-೨೦ ಆಡಿ ಉದ್ದ

ಆಹಾರ : ಸಣ್ಣ ಮೀನುಗಳು ತಿಮಿಂಗಿಲಗಳು ಮತ್ತು ಇತರ ಕಡಲು ಪ್ರಾಣಿಗಳ ಮಾಂಸವನ್ನು ತಿನ್ನುತ್ತದೆ.

ಲಕ್ಷಣಗಳು : ಈ ಮೀನು ಹೈಪೊಟ್ರಿಮೇಟ ಗಣಕ್ಕೆ ಸೇರಿದ್ದರೂ ನೋಡಲು ಶಾರ್ಕುಗಳಂತೆಯೇ ಇದೆ. ಕೊರಕೆಗಳಂತೆ ಸ್ಟೈರಕಲ್ ಗಳಿವೆ ಮತ್ತು ಕಿವಿರು ರಂಧ್ರಗಳು ತಲೆಯ ತಳ ಭಾಗದಲ್ಲಿವೆ. ಆದರೆ ದೇಹ ಚಪ್ಪಟೆಯಾಗಿಲ್ಲ ಮತ್ತು ಅಗಲವಾಗಿಲ್ಲ ಇದರ ಗಮನಾರ್ಹವಾದ ಒಂದು ಲಕ್ಷಣವೆಂದರೆ ಉದ್ದವಾದ ಕತ್ತಿಯಂತಹ ಮೂತಿ, ಅಥವಾ ರೋಸ್ಟ್ರಮ್. ಆರು ಅಡಿಗಳಷ್ಟು ಉದ್ದ ಬೆಳೆಯುವ, ಎರಡು ಅಂಗುಲ ಅಗಲವಿರುವ ಈ ಮೂತಿಯ ಎರಡೂ ಕಡೆ ಬೆಳ್ಳಗಿನ ಹಲ್ಲುಗಳಂತಹ ಚೂಪಾದ ಹುರುಪೆಗಳು ವ್ಯವಸ್ಥಿತವಾಗಿ ಹರಡಿ ಗರಗಸದಂತಾಗಿವೆ. ಇದು ಉಭಯ ಅಲಗುಗಳ ಗರಗಸ ರಚನೆ. ಪ್ರತಿ ಅಲುಗಿನಲ್ಲಿಯೂ ಉದ್ದಕ್ಕೂ ಹರಡಿದಂತೆ ೨೨ ರಿಂದ ೩೨ ಹಲ್ಲುಗಳಿವೆ. ಈ ಹಲ್ಲುಗಳು ಮಾರ್ಪಟ್ಟ ಚೂಪಾದ ಹುರುಪೆಗಳು. ಈ ರಚನೆಯಿಂದಾಗಿ ಈ ಮೀನುಗಳಿಗೆ ಗರಗಸ ಮೀನುಗಳೆಂದು ಹೆಸರು ಬಂದಿದೆ. ಇದು ಆಹಾರ ಜೀವಿಗಳನ್ನು ಆಕ್ರಮಿಸುವ ಮತ್ತು ಶತ್ರುಗಳಿಂದ ರಕ್ಷಿಸಿಕೊಳ್ಳುವ ರಚನೆ. ಈ ಗರಗಸದ ಪಕ್ಕದ ಹೊಡೆತದಿಂದ ಆಹಾರ ಜೀವಿಗಳನ್ನು ಕತ್ತರಿಸಿ ಕೊಂದು ತಿನ್ನುತ್ತದೆ.

ಇದರ ಹೊಡತಕ್ಕೆ ಸಿಕ್ಕ ಕಡಲು ಸ್ನಾನಿಗರ ದೇಹ ಎರಡಾಗಿ ತುಂಡರಿಸಿದ ನಿದರ್ಶನಗಳಿವೆ. ಇದು ಜರಾಯುಜ ಪ್ರಾಣಿ.

ಇದರಿಂದ ದೊರೆಯುವ ಉತ್ಕೃಷ್ಟ ಲಿವರ್ ಆಯಿಲ್ ನಿಂದಾಗಿ ಇದಕ್ಕೆ ಬೇಡಿಕೆ ಉಂಟು. ಇದರ ಎಣ್ಣೆಯಲ್ಲಿ ಬಹಳಷ್ಟು ಅನ್ನಾಂಗಗಳಿವೆ. ಇದರ ಮಾಂಸವನ್ನು ತಿನ್ನುತ್ತಾರೆ. ಇದರ ಗರಗಸ ಮೂತಿಯಿಂದ ಕತ್ತಿಯ ಓರೆಯನ್ನು ತಯಾರಿಸುತ್ತಾರೆ.

ಮಾದರಿ ಮೂಳೆ ಮೀನಿನ ರಚನೆ

ಇವು ಕಡಲ ಉಪ್ಪು ನೀರು ಮತ್ತು ಸಿಹಿ ನೀರುಗಳೆರಡರಲ್ಲೂ ವಾಸಿಸುತ್ತವೆ. ಕೆಲವು ಸಿಹಿನೀರಿನಿಂದ ಉಪ್ಪು ನೀರಿಗೂ, ಉಪ್ಪು ನೀರಿನಿಂದ ಸಿಹಿನೀರಿಗೂ ವಲಸೆ ಹೋಗುತ್ತವೆ. ಇನ್ನು ಕೆಲವು ನದಿಗಳು ಕಡಲನ್ನು ಸೇರುವ ಅಳಿವೆಗಳಲ್ಲಿ ವಾಸಿಸುವುದನ್ನು ರೂಢಿಸಿ ಕೊಂಡಿರುತ್ತವೆ.

006_69_PP_KUH

ನೀರಿನಲ್ಲಿ ಹೆಚ್ಚು ಘರ್ಷಣೆ ಬಾರದಂತೆ ಸುಲಲಿತವಾಗಿ ಈಜಲು ದೇಹವು ಕದುರಿನಾಕಾರವಾಗಿರುತ್ತದೆ. ಪ್ರಭೇಧ, ಜಾತಿಗಳನ್ನನುಸರಿಸಿ ದೇಹದ ಉದ್ದ ಅಗಲ, ಗಾತ್ರ, ತೂಕಗಳು ಬದಲಾಗುತ್ತವೆ. ಉದಾಹರಣೆಗೆ ಲೇಬಿಯೊ ರೋಹಿಟ ಪ್ರಭೇಧದ ಮೀನು ಒಂದು ಮೀಟರ್ ಉದ್ದ ಬೆಳೆಯುತ್ತದೆ ಮತ್ತು ೨೦ ರಿಂದ ೨೫ ಕೆ. ಜಿ. ತೂಗುತ್ತದೆ. ಮೇಲ್ಭಾಗ ಬೂದು ಅಥವಾ ತಿಳಿ ಕಪ್ಪು ಮತ್ತು ಪಕ್ಕೆಗಳು ಹಾಗೂ ಹೊಟ್ಟೆಯಭಾಗ ತಿಳಿ ಅಥವಾ ಬೆಳ್ಳಿಬಿಳುಪಾಗಿರುತ್ತದೆ.

ಈ ಮೀನಿನ, (ಇದು ಎಲ್ಲಾ ಮೀನುಗಳಿಗೂ ಅನ್ವಯಿಸಬಹುದು) ದೇಹವನ್ನು ತಲೆ, ಮುಂಡ ಮತ್ತು ಬಾಲ ಎಂದು ಮೂರು ಭಾಗಗಳಾಗಿ ಗುರುತಿಸಬಹುದು.

ತಲೆಯು ಮೂತಿಯ ಮುಂತುದಿಯಿಂದ ಕಿವಿರು ಕವಚದ ಅಂಚಿನವರೆಗೂ ವಿಸ್ತರಿಸುತ್ತದೆ. ಮೂತಿ ತಟ್ಟಿದಂತೆ ಚಪ್ಪಟೆಯಾಗಿದೆ, ಮೋಟು ಮತ್ತು ಮೊಂಡು. ಬಾಯಿ ಮುಂತುದಿಯಲ್ಲಿ ತುಸು ಹಿಂದಿದೆ. ಬಾಯಿ ಅಗಲವಾದ ರಂಧ್ರದಂತಿದ್ದು ದಪ್ಪ ಮಾಂಸಲ ತುಟಿಗಳಿಂದ ಸುತ್ತುವರಿಯಲ್ಪಟ್ಟಿದೆ. ಸಾಮಾನ್ಯವಾಗಿ ಎರಡು ಹೊರೆ ಮ್ಯಾಕ್ಸಿಲ್ಲ ದಾಡಿಮೀಸೆಗಳಿರುತ್ತವೆ,. ಇವು ಬಾಯಿಯ ಎರಡು ತುದಿಗಳಲ್ಲಿವೆ. ರಾಸ್ಟ್ರಲ್ ಜೊತೆ (ಹಿಂದಿನ) ದಾಡಿ ಮೀಸೆಗಳು ಇರಬಹುದು ಅಥವಾ ಇಲ್ಲದಿರಬಹುದು ದವಡೆಗಳಲ್ಲಿ ಹಲ್ಲುಗಳಿವೆ. ಮೂತಿಯ ತುದಿಯ ಮೇಲ್ಭಾಗದಲ್ಲಿ ಒಂದು ಜೊತೆ ನಾಸಿಕಗಳಿವೆ. ಕಣ್ಣು ರೆಪ್ಪೆಗಳಿಲ್ಲದ ಒಂದು ಜೊತೆ ಕಣ್ಣುಗಳು ತಲೆಯ ಪಕ್ಕದ ಭಾಗಗಳಲ್ಲಿವೆ. ಎರಡೂ ಕಡೆ ಕಣ್ಣುಗಳ ಹಿಂದೆ ಅಲುಗಾಡಬಹುದಾದ ದೊಡ್ಡ ಮೂಳೆ ಕಿವಿಯ ಕವಚ (ಅಪರ್ ಕ್ಯುಲಮ್) ಗಳಿವೆ. ಇವುಗಳ ಹಿಂದಿನ ಮತ್ತು ತಳ ಅಂಚುಗಳು ಮುಕ್ತವಾಗಿವೆ. ಈ ಕಿವಿರು ಕವಚಗಳ ಕೆಳಗೆ ನಾಲ್ಕು ಬಾಚಣಿಗೆಯಂತಿರುವ ಕಿವಿರುಗಳು ಕಿವಿರು ಕೋಣೆಯಲ್ಲಿವೆ.

ದೇಹದ ದಪ್ಪನಾದ ಮಧ್ಯ ಭಾಗವೇ ಮುಂಡ. ಇದರ ಅಡ್ಡಸೀಳಿಕೆಯು ಅಂಡಾಕಾರವಾಗಿದ್ದು ಅಗಲಕ್ಕಿಂತ ಹೆಚ್ಚು ಎತ್ತರವಾಗಿರುತ್ತದೆ. ಮುಂಡ ಮತ್ತು ಬಾಲದ ಎರಡೂ ಪಕ್ಕಗಳಲ್ಲಿ ಪಾರ್ಶ್ವಪಂಕ್ತಿಗಳಿವೆ. ಇದರಲ್ಲಿ ಒಂದು ಜಾಡು ಇದ್ದು, ಆ ಜಾಡಿನಲ್ಲಿ ಪಾರ್ಶ್ವಪಂಕ್ತಿ ಸಂವೇದನಾಂಗಗಳಿದ್ದು ಸುತ್ತಲ ನೀರಿನಲ್ಲಿನ ಕಂಪನಗಳು ಮತ್ತು ಒತ್ತಡದ. ವ್ಯತ್ಯಾಸಗಳನ್ನು ಗುರುತಿಸಿ ನಿವೇದಿಸುತ್ತವೆ.

ಮುಂಡದ ನಡು ಬೆನ್ನಿನ ಭಾಗದಲ್ಲಿ ಒಂದು ದೊಡ್ಡದಾದ ವಜ್ರಾಕೃತಿಯ ಬೆನ್ನಿನ ಈಜುರೆಕ್ಕೆ (ಡಾರ್ಸಲ್ ಫಿನ್) ಇದೆ. ಕಿವಿರು ಕವಚಗಳ ಹಿಂದೆ ಒಂದು ಜೊತೆ ಸಾಪೇಕ್ಷಿಯಾವಾಗಿ ತುಸು ದೊಡ್ಡದಾದ ಅಧೋಪಾರ್ಶ್ವ ಭುಜದ (ಪೆಕ್ಟೂರಲ್) ಈಜುರೆಕ್ಕೆಗಳಿವೆ. ಇದರ ಹಿಂದೆ ತುಸು ಸಣ್ಣವಾದ ಅಧೋಪಾರ್ಶ್ವಭಾಗದ ಒಂದು ಜೊತೆ ಸೊಂಟದ (ಪೆಲ್ವಿಕ್) ಈಜುರೆಕ್ಕೆಗಳಿವೆ. ಮುಂಡದ ಪಶ್ಚ ಅಧೋಮಧ್ಯ ತುದಿಯಲ್ಲಿ ಮೂರು ಸಣ್ಣ ರಂಧ್ರಗಳಿವೆ. ಅವು ಕ್ರಮವಾಗಿ ಮುಂದಿನ ಕ್ಲೋಯಕ ತೆರಪು, ನಡುವಿನ ಜನನೇಂದ್ರೀಯ ತೆರಪು ಮತ್ತು ಹಿಂದಿನ ಮೂತ್ರ ದ್ವಾರಗಳು.

ಮುಂಡದ ಹಿಂಭಾಗದಲ್ಲಿ ಬಾಲವಿದೆ. ಇದು ದೇಹದ ಒಟ್ಟು ಉದ್ದದಲ್ಲಿ ಮೂರನೆಯ ಒಂದರಷ್ಟು ಉದ್ದವಿದೆ. ಸಾಮಾನ್ಯವಾಗಿ ಯಾವುದೇ ಕಶೇರುಕ ಪ್ರಾಣಿಯಲ್ಲಿ ಗುದದ್ವಾರದ ಹಿಂದಿನ ಭಾಗವನ್ನು ಬಾಲ ಎಂದು ಪರಿಗಣಿಸುತ್ತಾರೆ. ಬಾಲವು ಪಕ್ಕಗಳಲ್ಲಿ ಅದುಮಿದಂತೆ ಚಪ್ಪಟೆಯಾಗಿದೆ ಮತ್ತು ಹಿಂದಿನ ತುದಿಯಲ್ಲಿ ಕಿರಿದಾಗಿ, ಮೇಲೆ ಮತ್ತು ಕೆಳಗೆ ಅಂಟಿದಂತೆ ಬಾಲದ ಈಜುರೆಕ್ಕೆಯುಂಟು. ಬಾಲದ ಈಜುರೆಕ್ಕೆಯು ಆಳವಾಗಿ ಕವಲೊಡೆದು ಎರಡು ಸಮಪಾಲಿಗಳಾಗಿ ವಿಭಾಗವಾಗಿದೆ. ಬಾಲದ ತಳಬಾಗದಲ್ಲಿ ಮೂತ್ರದ್ವಾರದಿಂದ ತುಸು ಹಿಂದೆ ಒಂದು ಒಂಟಿ ಗುದ (ಏನಲ್) ಈಜುರೆಕ್ಕೆ ಇದೆ. ಬಾಲವು ಮೀನಿನ ಮುಖ್ಯಸಂಚಲನಾಂಗ.

ಸಾಮಾನ್ಯವಾಗಿ ಮೀನುಗಳು ಅಂಡಜಗಳು, ಆಲಿಂಗನಾಂಗಗಳಿರುವುದಿಲ್ಲ. ನಿಷೇಚನ ಹೆಣ್ಣು ಮೀನಿನ ದೇಹದ ಹೊರಗಡೆ ನೀರಿನಲ್ಲಿ ನಡೆಯುತ್ತದೆ. ಮೊಟ್ಟೆಗಳಲ್ಲಿ ಬಂಡಾರವೆಂಬ ಸಂಚಿತ ಆಹಾರ ಇರುತ್ತದೆ. ಮೊಟ್ಟೆ ಒಡೆದು ಹೊರಬಂದ ಮರಿಗಳು ಸ್ವಯಂ ಆಹಾರ ಸೇವನೆಗೆ ತೊಡಗುತ್ತವೆ.

—-

ಗಣ : ಕ್ಲೂಪಿಯಿಫಾರ್ಮಿಸ್ (Clupeiformes)
ಕುಟುಂಬ : ಕ್ಲೂಪಿಯಿಡೀ (Clupeidae)
ಉದಾ : ಪಾಲಾಸ (Palasa), ಪಾಟಿಯ (Patiya)
ಶಾಸ್ತ್ರೀಯ ನಾಮ : ಹಿಲ್ಸ ಇಲಿಷ (Hilsa ilisha)

007_69_PP_KUH

ವಿತರಣೆ : ಕರಾವಳಿಯ ಸನಿಹದ ಸಿಹಿನೀರು ಭಾಗಗಳು ಮತ್ತು ನದಿಗಳು.

ಗಾತ್ರ : ೩೮- ೪೬ ಸೆಂ. ಮೀ. ಉದ್ದ, ೨೪.೯ ಪೌಂ. ತೂಕ.

ಆಹಾರ : ಜಲಸಸ್ಯಗಳು ಮತ್ತು ತೇಲು ಸಸ್ಯಗಳು.

ಲಕ್ಷಣಗಳು : ದೇಹವು ಕದುರಿನಾಕಾರವಾಗಿದ್ದು ಚಪ್ಪಟೆಯಾಗಿದೆ. ಮೇಲು ದವಡೆಯಲ್ಲಿ ಒಂದು ನೀಳವಾದ ಕಚ್ಚು ಇದೆ. ಇದು ಮೇಲಿನಿಂದ ನೋಡಿದಾಗ ಮಾತ್ರ ಕಾಣಿಸುತ್ತದೆ. ಕಿವಿರುಗಳಿಗೆ ಆಧಾರವಾಗಿ ಅನೇಕ ಸೂಕ್ಷ್ಮ ಕಿವಿರು ಕಡ್ಡಿಗಳಿವೆ. ಮೊದಲನೆಯ ಕಿವಿರು ಆಧಾರ ಕಮಾನಿನಲ್ಲಿ ೧೦೦ ರಿಂದ ೨೫೦ ಕಿವಿರು ಕಡ್ಡಿಗಳಿರುತ್ತವೆ.

ದೇಹ ಕಡುಕೆಂಪು ಬಣ್ಣ ಮತ್ತು ಬಂಗಾರ ಛಾಯೆಯ ಬೆಳ್ಳಿ ಬಣ್ಣ. ಕಿವಿರು ತೆರಪು ಬಳಿ ಕಪ್ಪು ಕಲೆ ಇದೆ. ಇದರ ಪಕ್ಕದಲ್ಲಿ ಸಣ್ಣ ಗುರುತಗಳಿವೆ. ಕಿವಿರುಗಳು ನವಿರು, ಪಾರದರ್ಶಕವಾಗಿವೆ.

ಸಂತಾನಾಭಿವೃದ್ಧಿ : ಈ ಮೀನುಗಳು ಸಂತಾನೋತ್ಪತ್ತಿಗಾಗಿ ಕಡಲಿನಿಂದ ಸಿಹಿನೀರಿಗೆ ವಲಸೆ ಬರುತ್ತವೆ. ನದಿಯು ಕಡಲನ್ನು ಸೇರುವ ಅಳವೆಗಳ ಬಳಿ ನದಿಯನ್ನು ಪ್ರವೇಶಿಸಿ ೫೦ ರಿಂದ ೧೦೦ ಕಿ. ಮೀ. ದೂರ ಪ್ರವಾಹಕ್ಕೆ ಎದುರಾಗಿ ಈಜಿ ನುಗ್ಗಿ ಬರುತ್ತವೆ. ಈ ಮೀನುಗಳು ಸುಮಾರು ೧೨೦೦ ಕಿ. ಮೀ. ದೂರ ನದಿಯಲ್ಲಿ ಪ್ರವಾಹಕ್ಕೆ ಎದುರಾಗಿ ಈಜಿ ಬಂದ ನಿದರ್ಶನಗಳಿವೆ. ನದಿಯ ಸಿಹಿನೀರಿನಲ್ಲಿ ಸಂತಾನೋತ್ಪತ್ತಿ ನಡೆದು ಮೊಟ್ಟೆಗಳನ್ನಿಡುತ್ತವೆ. ಇತ್ತೀಚೆಗೆ ನೀರಾವರಿಗೆಂದು ಕೆಲವು ನದಿಗಳಿಗೆ ಅಡ್ಡಲಾಗಿ ಅಣೆಕಟ್ಟುಗಳನ್ನು ಕಟ್ಟಿರುವುದರಿಂದ ಈ ಮೀನುಗಳ ವಲಸೆಗೆ ತೊಂದರೆಯಾಗಿದೆ.

ಸ್ವಭಾವ : ಇತ್ತೀಚಿನ ವರ್ಷಗಳಲ್ಲಿ ಈ ಮೀನುಗಳ ಸಂಖ್ಯೆ ನಮ್ಮ ನದಿಗಳಲ್ಲಿ ಕಡಿಮೆಯಾಗುತ್ತಿದೆ. ಇದಕ್ಕೆ ನದಿಗಳ ಮಾಲೀನ್ಯತೆ ಕಾರಣ ಎನ್ನಲಾಗಿದೆ. ಮೀನುಕೃಷಿ ದೃಷ್ಟಿಯಿಂದ ಇದೊಂದು ಪ್ರಮುಖ ಮೀನು. ಬಂಗಾಳೀಯರು, ಆಂಧ್ರರು, ಮತ್ತು ತಮಿಳರು ಈ ಮೀನನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ.

—- 

ಗಣ : ಆಂಗುಯಿಲ್ಲಿಫಾರ್ಮಿಸ್ (Anguilliformes)
ಕುಟುಂಬ : ಆಂಗುಯಿಲ್ಲಿಡೀ (Anguillidae)
ಉದಾ : ಹಾವು ಮೀನು (Eel)
ಶಾಸ್ತ್ರೀಯ ನಾಮ : ಆಂಗುಯಿಲ್ಲ ಬೆಂಗಾಲೆನ್ಸಿಸ್
‌(Anguillia bengalensis)

008_69_PP_KUH

ವಿತರಣೆ : ಎಳೆಯ ಬೆಳವಣಿಗೆಯ ಅವಸ್ಥೆಯಲ್ಲಿ ಕಡಲು ವಾಸಿ. ಪ್ರೌಢಾವಸ್ಥೆಯನ್ನು ಸಿಹಿನೀರಿನಲ್ಲಿ ಕಳೆಯುತ್ತದೆ. ಅಳಿವೆಗಳಲ್ಲಿಯೂ ಕಂಡುಬರುತ್ತದೆ.

ಗಾತ್ರ : ೧೨೦ ಸೆಂ. ಮೀ. ಉದ್ದ ಬೆಳೆಯಬಹುದು. ಸಾಮಾನ್ಯವಾಗಿ ೮೦ ಸೆಂ. ಮೀ. ಉದ್ದ ಇರುತ್ತವೆ.

ಆಹಾರ : ಕೊಳೆತ ವಸ್ತುಗಳನ್ನು ತಿನ್ನುತ್ತದೆ.

ಲಕ್ಷಣಗಳು : ದೇಹ ಉದ್ದವಾಗಿ ಹಾವನ್ನು ಹೋಲುವುದರಿಂದ ಇದನ್ನು ಹಾವು ಮೀನೆಂದು ಕರೆಯುತಾರೆ. ತಲೆ ಶಂಕುವಿನಾಕಾರವಾಗಿದ್ದು ಮುಂದಿನ ತುದಿ ಚೂಪು, ಬಾಯಿ ಮುಂದಿನ ತುದಿಯಲ್ಲಿದೆ. ಬಾಯಿ ಪಕ್ಕದಲ್ಲಿ ಕಣ್ಣುಗಳ ನೇರದವರೆಗೆ ವಿಸ್ತರಿಸುತ್ತದೆ. ತುಟಿಗಳು ಎದ್ದು ಕಾಣುವಂತಿವೆ ಸಣ್ಣ ಗಾತ್ರದ ಹಲ್ಲುಗಳ ದವಡೆಗಳ ಮೇಲೆ ಕಿರಿದಾದ ಪಟ್ಟಿಗಳಂತೆ ಹರಡಿವೆ. ಬಾಯಂಗಳದ ಮೇಲ್ಛಾವಣಿಯ ವೋಮರ್ ಮೂಳೆಯ ಮೇಲೂ ಹಲ್ಲುಗಳ ಒಂದು ಅಗಲ ಪಟ್ಟಿ ಇದೆ. ಭುಜದ ಈಜುರೆಕ್ಕೆ ಹಿಂದೆ ಬಾಲದ ಈಜುರೆಕ್ಕೆ ಮತ್ತು ಅದು ಕೆಳಗೆ ಗುದ ಈಜುರೆಕ್ಕೆಗೆ ಹೊಂದಿಕೊಂಡಂತೆ ಏಕ ಪ್ರಕಾರವಾಗಿ ಹರಡಿದೆ. ಬಹಳೊಮ್ಮೆ ಸೊಂಟದ ಜೋಡಿ ಈಜುರೆಕ್ಕೆ ಇರುವುದಿಲ್ಲ. ಇದ್ದರೆ ಉದರ ಭಾಗದಲ್ಲಿರುತ್ತದೆ. ಆದರೆ ಭುಜದ ಜೋಡಿ ಈಜುರೆಕ್ಕೆಗಳಿವೆ. ಚರ್ಮದ ಹುರುಪೆಗಳು ಸಣ್ಣವಾಗಿ ಕೃಷವಾಗಿ ಇವೆ ಅಥವಾ ಇಲ್ಲದಿರಲೂಬಹುದು. ವಾಯುಕೋಶವಿದ್ದು ನಾಳದ ನೆರವಿನಿಂದ ಫ್ಯಾರಿಂಕ್ಸ್‌ಗೆ ಸಂಪರ್ಕ ಪಡೆದಿದೆ.

ಸಂತಾನಾಭಿವೃದ್ಧಿ : ಹೆಚ್ಚು ವಿಷಯಗಳು ತಿಳಿಯದು.

ಸ್ವಭಾವ : ಇದು ಭಾರತದ ಸಾಮಾನ್ಯ ಹಾವು ಮೀನು. ವಾಣಿಜ್ಯ ದೃಷ್ಟಿಯಿಂದ ಮುಖ್ಯವಾದುದು. ಹೊರದೇಶಗಳಲ್ಲಿ ಇದಕ್ಕೆ ಬೇಡಿಕೆ ಉಂಟು. ಬೇಸಗೆಯ ಕಡೆಯಲ್ಲಿ (ಆಟಮ್ನ) ಇವು ಕಡಲಿಗೆ ವಲಸೆ ಹೋಗುತ್ತವೆ. ಆಳವಾದ ನೀರಿನಲ್ಲಿ ಮೊಟ್ಟೆ ಇಡುತ್ತವೆ. ಇವು ವಲಸೆ ಹೋಗುವ ಸ್ವಭಾವದಿಂದ ಹೆಸರಾಗಿವೆ. ಸಾಲ್ಮನ್‌ನಂತಹ ಮೀನುಗಳು ಸಂತಾನೋತ್ಪತ್ತಿಗೆ ಕಡಲಿನಿಂದ ಸಿಹಿನೀರಿಗೆ ಬರುವುದಕ್ಕೆ ಹೆಸರಾಗಿದ್ದರೆ, ಹಾವು ಮೀನುಗಳು ಇದಕ್ಕೆ ವಿರುದ್ದವಾಗಿ ಸಂತಾನೋತ್ಪತ್ತಿಗೆ ಕಡಲಿಗೆ ತೆರಳುತ್ತವೆ. ಇದನ್ನು ಕೆಟಡ್ರೊಮಸ್‌ವಿಧಾನದ ವಲಸೆ ಎಂದು ಕರೆಯುತ್ತಾರೆ. ಆದ್ದರಿಂದ ಇವು ಸಿಹಿನೀರು ಉಪ್ಪು ನೀರುಗಳೆರಡರಲ್ಲಿಯೂ ವಾಸಿಸಬಲ್ಲವು. ಹಾವು ಮೀನುಗಳು ಮೊಟ್ಟೆ ಇಡುವ ಸಂಖ್ಯೆಗೆ ಗಮನಾರ್ಹ. ಒಮ್ಮೆಗೆ ೧೨೦ ಮಿಲಿಯ ಮೊಟ್ಟೆಗಳನ್ನಿಡುತ್ತವೆ.

ಈ ಮೀನಿನ ವಿಷಯದಲ್ಲಿ ಮತ್ತೊಂದು ಗಮನಾರ್ಹ ಅಂಶವೆಂದರೆ ಇದರ ಲಾರ್ವ! ಇದನ್ನು ಲೆಪ್ಪೊಸೆಫಾಲಸ್‌ಎಂದು ಕರೆಯುತ್ತಾರೆ. ಬಹಳ ನವಿರಾದ, ಪಾರದರ್ಶಕವಾದ ಗಾಜಿನ ಪಟ್ಟಿಗಳಂತಿರುತ್ತವೆ. ಈ ಲಾರ್ವಾಗಳು ತೇಲು ಜೀವನ (ಪೆಲಾಜಿಕ್‌) ನಡೆಸುತ್ತವೆ. ಅನಂತರ ಕಡಲಿನಲ್ಲಿ ೨೩ ವರ್ಷಗಳವರೆಗೆ ಬೆಳೆದು ರೂಪ ಪರಿವರ್ತನೆಗೊಂಡು ಪ್ರಬುದ್ಧಾವಸ್ಥೆ ತಲಪುತ್ತವೆ. ಈ ಎಳೆಯ ಮರಿಗಳನ್ನು ಎಲ್ವರ್ ಗಳೆಂದು ಕರೆಯುತ್ತಾರೆ.