ಹಳದಿ ಹಿಂತಲೆ ಮರಕುಟಿಕ (YELLOWNAPED WOODPECKER)
ಪೈಕಸ್ ಕ್ಲೋರೊಲೊಪಸ್ (
Picus chlorolopus)

298_69_PP_KUH

ಗಾತ್ರ : ೨-೭ ಸೆಂ.ಮೀ.

ಆವಾಸ : ತೋಟ, ಕಾಡು, ದ್ವಿತೀಯ ಹಂತದ ಸಸ್ಯಗಳಿರುವ ಕಡೆ ಕಂಡುಬರುವ ಇದು ಸ್ಥಳೀಯ ಪಕ್ಷಿ.

ಲಕ್ಷಣಗಳು : ಮಧ್ಯಮ ಗಾತ್ರದ ಮರಕುಟಿಕ. ಬಂಗಾರಹಳದಿಯ ಹಿಂತಲೆ ಮುಖ್ಯಲಕ್ಷಣ. ಕಣ್ಣಿನ ಮೇಲೆ, ಕೆಳಗೆ ಹಿಂಬದಿಯಲ್ಲಿ ಕೆಂಪು ಗೆರೆಗಳಿರುತ್ತವೆ. ಹೆಣ್ಣು ಹಕ್ಕಿಯ ನೆತ್ತಿಯ ಇಕ್ಕೆಡೆ ಅಗಲವಾದ ಕೆಂಪು ಗೆರೆಗಳಿರುತ್ತವೆ. ಎದೆ ಬಿಳಿ, ಕಪ್ಪು ಅಡ್ಡ ಪಟ್ಟಿಗಳು ಕಂಡುಬರುತ್ತವೆ.

ಆಹಾರ : ಇರುವೆ, ಗೆದ್ದಲು, ಡಿಂಬಗಳು ಇತ್ಯಾದಿಯನ್ನು ತಿನ್ನುತ್ತವೆ.

ಸಂತಾನಾಭಿವೃದ್ಧಿ : ಜನವರಿಯಿಂದ ಜುಲೈನ ಅವಧಿ. ಕಾಡಿನ ಮರದಲ್ಲಿ ತೂತುಕೊರೆದು ೨ ಬಿಳಿ ಮೊಟ್ಟೆಗಳನ್ನಿಡುತ್ತದೆ.

—- 

ಪಿಟ್ಟ (PITTA)
ಪಿಟ್ಟ ಬ್ರಾಕಿಯೂರ (
Pitta brachyura)

299_69_PP_KUH

ಗಾತ್ರ : ೧೯ ಸೆಂ.ಮೀ.

ಆವಾಸ : ಕುರುಚಲು ಕಾಡು, ಎಲೆ ಉದುರುವ ಕಾಡು, ನಿತ್ಯ ಹರಿದ್ವರ್ಣ ಕಾಡುಗಳಲ್ಲಿ, ನೆಲದ ಮೇಲೆ ಕಾಣಿಸಿಕೊಳ್ಳುತ್ತದೆ. ಸ್ಥಳೀಯ ಪಕ್ಷಿ.

ಲಕ್ಷಣಗಳು : ನೆಲದ ಮೇಲೆ ಸದ್ದಿಲ್ಲದೆ ಓಡಾಡುವ ಬಣ್ಣ ಬಣ್ಣದ ಪುಟ್ಟ ಹಕ್ಕಿ. ನೀಲಿ, ಹಸಿರು, ನಸುಗೆಂಪಿನ ಹಳದಿ, ಕಪ್ಪು ಮತ್ತು ಬಿಳಿವರ್ಣಗಳ ಸಂಯುಕ್ತ ವಿನ್ಯಾಸವನ್ನು ಕಾಣಬಹುದು. ಗಂಡು ಹೆಣ್ಣು ಒಂದೇ ತೆರನಾಗಿವೆ. ತಲೆ ಮೇಲೆ ಕಪ್ಪು, ಕಣ್ಣಿನ ಮೂಲಕ ಕಪ್ಪು ಪಟ್ಟಿ ಹಾದಿ ಹೋಗುತ್ತದೆ. ಕುತ್ತಿಗೆ, ಕೆನ್ನೆ ಬಿಳಿ, ಹೊಟ್ಟೆ ಬಾಲದ ಕೆಳಗೆ ಕಗ್ಗೆಂಪು. ರೆಕ್ಕೆ ಹಸಿರು ಬುಡದಲ್ಲಿ ನೀಲಿ ಇರುತ್ತದೆ.

ಆಹಾರ : ಒದ್ದೆಯಾಗಿರುವ ನೆಲ ಕೆದರಿ ಕೀಟ, ಹುಳು, ಹೆಕ್ಕಿ ತಿನ್ನುವುದು.

ಸಂತಾನಾಭಿವೃದ್ಧಿ : ಮೇನಿಂದ ಆಗಸ್ಟ್ ತಿಂಗಳ ಅವಧಿ. ಪೊದೆ ಅಥವಾ ಚಿಕ್ಕ ಮರದ ನೆಲ್ಲುಗಳ ನಡುವೆ ಹುಲ್ಲು, ಬೇರು, ಕಡ್ಡಿಗಳ ದೊಡ್ಡ ಗೂಡು ರಚಿಸಿ ಚುಕ್ಕಿಗಳಿರುವ ೪-೬ ಮೊಟ್ಟೆಗಳನ್ನು ಇಡುತ್ತದೆ.

—- 

ಸಾಮಾನ್ಯ ಕವಲು ತೋಕೆ (COMMON SWALLOW)
ಹಿರುಂಡೊ ರಸ್ಟಿಕಾ (
Hirundo rustica)

300_69_PP_KUH

ಗಾತ್ರ : ೧೮ ಸೆಂ.ಮೀ.

ಆವಾಸ : ನದಿ, ಸರೋವರ, ಬಯಲು ಗದ್ದೆ ಮತ್ತು ಹಳ್ಳಿಗಾಡಿನಲ್ಲಿ ಕಾಣಸಿಗುತ್ತದೆ. ವಲಸೆ ಹಕ್ಕಿ.

ಲಕ್ಷಣಗಳು : ಕೆಂಪೊತ್ತಿನ ಕಡು ನೀಲಿ ಮೇಲ್ಭಾಗ. ಗಂಡುಹೆಣ್ಣಿನ ನಡುವೆ ವ್ಯತ್ಯಾಸವಿಲ್ಲ. ತಿಳಿಗೆಂಪಿನ ಕೆಳಭಾಗವಿರುತ್ತದೆ. ಮುಂತಲೆ ಮತ್ತು ಗಂಟಲು ಕೆಂಪು. ಬಾಲದ ಇಕ್ಕಡೆಯ ಗರಿಗಳು ತುಂಬಾ ಉದ್ದ ವಿರುವುದು ಕವಲು ತೋಕೆಯ ಲಕ್ಷಣ. ಗುಂಪಾಗಿ ತಂತಿಯ ಮೇಲೆ ಕುಳಿತಿರುತ್ತವೆ.

ಆಹಾರ : ಕೀಟಗಳನ್ನು ತಿನ್ನುತ್ತವೆ.

ಸಂತಾನಾಭಿವೃದ್ಧಿ : ಉತ್ತರ ಭಾರತದಲ್ಲಿ. ಚಳಿಗಾಲದಲ್ಲಿ ವಲಸೆ ಬರುತ್ತವೆ.

 —-

ನೀಲಗಿರಿ ಕವಲು ತೋಕೆ (NILGIRI HOUSE SWALLOW)
ಹಿ. ಟ್ಯಾಲೈಟಿಕ (
Hirundo talhitica)

301_69_PP_KUH

ಗಾತ್ರ : ೧೩ ಸೆಂ.ಮೀ.

ಆವಾಸ : ಹುಲ್ಲುಗಾವಲಿನ ಬೆಟ್ಟ, ನದಿ ಮತ್ತು ಮನುಷ್ಯರ ವಾಸಸ್ಥಳದ (ಕೊಡಗು ಜಿಲ್ಲೆ) ಸಮೀಪ ಇರುತ್ತವೆ. ಸ್ಥಳೀಯ ಪಕ್ಷಿಯಿದು.

ಲಕ್ಷಣಗಳು : ಚಿಕ್ಕ ಕೊಕ್ಕು, ಗಂಡುಹೆಣ್ಣು ಒಂದೇ ತೆರನಾಗಿವೆ. ಮುಂತಲೆ ಕೆಂಗಂದು ಹಾಗೆಯೇ ಗಲ್ಲ ಮತ್ತು ಕುತ್ತಿಗೆ. ಉಳಿದಂತೆ ಹೊಳೆಯುವ ಕಪ್ಪು ಮೈಬಣ್ಣವಿರುತ್ತದೆ. ಮೇಲ್ಭಾಗದಲ್ಲಿ ಲೋಹದ ಹಸಿರು ಲೇಪವಿದೆ. ಹೊಟ್ಟೆಯ ಭಾಗ ಬೂದುಬಿಳಿ. ಬಾಲ ಕವಲಾಗಿದೆ ಆದರೆ ಉದ್ದನೆಯ ಗರಿಗಳಿಲ್ಲ.

ಆಹಾರ : ಹಾರುತ್ತಿರುವ ಕೀಟಗಳನ್ನು ತಿನ್ನುತ್ತವೆ.

ಸಂತಾನಾಭಿವೃದ್ಧಿ : ಮಾರ್ಚ್‌ನಿಂದ ಮೇ ವರೆಗಿನ ಅವಧಿ. ಗೋಡೆ, ಕಿರುಸೇತುವೆ. ಎತ್ತರದ ಬಂಡೆಗಳ ಮೇಲೆ ತಟ್ಟೆಯಂಥ ಮಣ್ಣಿನ ಗೂಡುಕಟ್ಟಿ ಚಿಕ್ಕ ಚುಕ್ಕೆಯಿರುವ ೨-೩ ಬಿಳಿ ಮೊಟ್ಟೆಗಳನ್ನಿಡುತ್ತದೆ.

 —-

ತಂತಿ ಬಾಲದ ಕವಲು ತೋಕೆ (WIRETAILED SWALLOW)
ಹಿ. ಸ್ಮಿಥೀ (
Hirundo smithi)

302_69_PP_KUH

ಗಾತ್ರ : ೧೪ ಸೆಂ.ಮೀ.

ಆವಾಸ : ನೀರಿನ ಬಳಿ ಇರುವ ಗದ್ದೆ ಬಯಲು ಮತ್ತು ಗುಡ್ಡದಲ್ಲಿ ಕಾಣಸಿಗುತ್ತದೆ. ಸ್ಥಳೀಯ ಸಾಮಾನ್ಯ ಪಕ್ಷಿ.

ಲಕ್ಷಣಗಳು : ಮೇಲ್ಭಾಗ ಹೊಳೆಯುವ ಕಬ್ಬಿಣನೀಲಿ. ಕೆಂಗಂದು ಟೋಪಿ. ಹೊಳೆಯುವ ಬಿಳಿ ಕೆಳಭಾಗ. ಬಾಲದಿಂದ ಹೊರಟ ಎರಡು ತಂತಿಯಂತಹ ಗರಿಗಳು ಪ್ರಮುಖ ಲಕ್ಷಣವಾಗಿದೆ. ಹೆಣ್ಣು ಹಕ್ಕಿಯಲ್ಲಿ ಈ ಬಾಲದ ತಂತಿಗಳು ಸ್ವಲ್ಪ ಗಿಡ್ಡ. ಉಳಿದಂತೆ ಗಂಡುಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ.

ಆಹಾರ : ನೆಲದಿಂದ ಜಿಗಿಯುವ ಕೀಟಗಳನ್ನು ಹಿಡಿದು ತಿನ್ನುತ್ತವೆ.

ಸಂತಾನಾಭಿವೃದ್ಧಿ : ಹೆಚ್ಚು ಕಡಿಮೆ ವರ್ಷವಿಡೀ ಸಂತಾನಾಭಿವೃದ್ಧಿಯಲ್ಲಿ ತೊಡಗುತ್ತವೆ. ಮಣ್ಣಿನ ಬಟ್ಟಲಿನಂತಹ ಗೂಡನ್ನು ಸೇತುವೆಯ ಕೆಳಗೆ, ಗೋಡೆಯಲ್ಲಿ, ಸಮುದ್ರ ತೀರದ ಜಟ್ಟಿಯ ಕೆಳಗೆ ಇತ್ಯಾದಿ ಸಾಮಾನ್ಯವಾಗಿ ಕೆಳಗೆ ನೀರಿರುವ ಸ್ಥಳಗಳಲ್ಲಿ ರಚಿಸಿ ೩-೫ ಚಿಕ್ಕ ಚುಕ್ಕೆಗಳಿರುವ ಬಿಳಿ ಮೊಟ್ಟೆಗಳನ್ನು ಇಡುತ್ತವೆ.