ಗಣ : ಸೈಲೂರಿಫಾರ್ಮಿಸ್
ಕುಟುಂಬ : ಬ್ಯಾಗ್ರಿಡೀ (Bagridae)
ಉದಾ : ಕಕ್ಕಂಡಕ (Rita)
ಶಾಸ್ತ್ರೀಯನಾಮ : ರಿಟ ರಿಟ (Rita rita)

033_69_PP_KUH

ವಿತರಣೆ : ಸಿಹಿನೀರು ಮತ್ತು ಉಬ್ಬರವಿಳಿತ ಅರೆಉಪ್ಪು ನೀರುಗಳಲ್ಲಿ ವಾಸ.

ಗಾತ್ರ : ೧೫೦ ಸೆಂ. ಮೀ. ಉದ್ದ ಬೆಳೆಯುತ್ತದೆ.

ಆಹಾರ : ಜಲಸಸ್ಯಗಳು ಮತ್ತು ತೇಲು ಜೀವಿಗಳು.

ಲಕ್ಷಣಗಳು : ಚಪ್ಪಟೆಯಾದ ನೀಳದೇಹ. ಚಪ್ಪಟೆ ತಲೆ. ಅಡ್ಡನಾಗಿರುವ ಅಗಲವಾದ ಬಾಯಿ. ಮೂರು ಜೊತೆ ದಾಡಿ ಮೀಸೆಗಳಿವೆ. ಮುಂದಿನ ಜೊತೆ ದಾಡಿ ಮೀಸೆಗಳು ಕಿವಿರು ಕವಚದವರೆಗೆ ವಿಸ್ತರಿಸುವಷ್ಟು ಉದ್ದವಾಗಿದೆ. ಹಿಂದಿನ ಜೊತೆ ದಾಡಿ ಮೀಸೆ ಉದ್ದದಲ್ಲಿ ಸಣ್ಣ ಮಧ್ಯದ ಜೊತೆ ತುಂಬಾ ಮೋಟು. ಬೆನ್ನು ಈಜುರೆಕ್ಕೆಯ ಮುಳ್ಳು ಗಟ್ಟಿಯಾಗಿ ಮತ್ತು ಬಲವಾಗಿಯೂ ಇದೆ. ಪಾರ್ಶ್ವ ಪಂಕ್ತಿ ನೇರವಾಗಿದೆ.

ದೇಹದ ಬೆನ್ನುಭಾಗ ಮತ್ತು ಪಕ್ಕೆಗಳು ಹಸಿರು, ಹೊಟ್ಟೆ ಭಾಗ ಮೊಬ್ಬು ಬಿಳುಪು.

ಸಂತಾನಾಭಿವೃದ್ಧಿ : ಮುಂಗಾರಿಗೆ ಮೊದಲು ಸಂತಾನೋತ್ಪತ್ತಿ ಕ್ರಿಯೆ ನಡೆಸುತ್ತದೆ.

ಸ್ವಭಾವ : ಇದು ಜನಪ್ರಿಯ ಆಹಾರ ಮೀನು ಮತ್ತು ದೊಡ್ಡ ಗಾತ್ರದ ಮೀನುಗಳಲ್ಲಿ ಒಂದು. ಮೀನು ಸಾಕಾಣಿಗೆ ಇದರ ಕೊಡುಗೆ ಅಪಾರ.

—-

ಗಣ : ಸೈಲೂರಿಡಿಫಾರ್ಮಿಸ್ (Silurideaformes)

ಈ ಗಣದ ಮೀನುಗಳ ಚರ್ಮದಲ್ಲಿ ಹುರುಪೆಗಳಿಲ್ಲ ಚರ್ಮವು ನಯವಾಗಿದ್ದು ಹರಡಿದಂತಿರುವ ಸಣ್ಣಗಂತಿ ಗಂಟುಗಳಿವೆ. ಬೆನ್ನು ಈಜುರೆಕ್ಕೆಯ ಹೊರ ರೆಕ್ಕೆ ಕಡ್ಡಿಯು ಮೂಳೆಯ ಮುಳ್ಳು ಅಥವಾ ದಪ್ಪ ಕಡ್ಡಿಯಾಗಿ ಮಾರ್ಪಟ್ಟಿದೆ.

ಕುಟುಂಬ : ಸೈಲೂರಿಡೀ (Siluridae)

ಈ ಕುಟುಂಬದ ಮೀನುಗಳಿಗೆ ಮೂಗಿನ ಬಳಿ ದಾಡಿ ಮೀಸೆಗಳಿಲ್ಲ ಇವುಗಳಲ್ಲಿ ಅನುಷಂಗಿಕ ಶ್ವಾಸಾಂಗಗಳಿರುವುದಿಲ್ಲ.

ಉದಾ : ಭಾರತದ ಬೆಣ್ಣೆ ಮಾರ್ಜಾಲ ಮೀನು (Indian butter-catfish)
ಶಾಸ್ತ್ರೀಯ ನಾಮ : ಓಂಪೋಕ್
ಬೈಮ್ಯಾಕುಲೇಟಸ್‌(Ompok bimaculatus)
ಇದನ್ನು ಕರ್ನಾಟಕದಲ್ಲಿ ಕೆಂಬಾರಿ, ಗೋಡ್ಲ ಎಂದು ಕರೆಯುತ್ತಾರೆ.

034_69_PP_KUH

ವಿತರಣೆ : ಹೆಚ್ಚು ಕಡಿಮೆ ಏಷ್ಯಾ ಖಂಡ ಪೂರ್ತಿ ಹರಡಿದೆ. ಸಾಮಾನ್ಯವಾಗಿ ಬಯಲುಸೀಮೆ ಮತ್ತು ಬೆಟ್ಟಗುಡ್ಡಗಳ ಪಕ್ಕದ ಸಿಹಿನೀರಿನ ಕೊಳ್ಳ, ಕೆರೆ, ನದಿಗಳಲ್ಲಿ ದೊರಕುತ್ತದೆ.

ಗಾತ್ರ : ಸುಮಾರು ೨೫ ಸೆಂ. ಮೀ. ಉದ್ದ ಗರಿಷ್ಠ ೪೫ ಸೆಂ. ಮೀ. ಉದ್ದ ಬೆಳೆಯುತ್ತದೆ.

ಆಹಾರ : ಜಲಸಸ್ಯಗಳು ಮತ್ತು ತೇಲು ಜೀವಿಗಳು.

ಲಕ್ಷಣಗಳು : ಉದ್ದವಾದ, ದೃಢವಾದ, ಚಪ್ಪಟೆ ದೇಹ, ಸಾಧಾರಣ ಗಾತ್ರ, ತಟ್ಟಿದಂತಿರುವ ತಲೆ, ಸಾಧಾರಣ ಗಾತ್ರದ ಕಣ್ಣುಗಳಿವೆ. ಬಾಯಿಯ ಸೀಳಿನ ಮಟ್ಟದ ಮೇಲೆ ಕುಳಿತಂತೆ ಕಾಣುವ ಕಣ್ಣುಗಳು. ಬಾಯಿ ದೊಡ್ಡದು ಮತ್ತು ಓರೆಯಾಗಿದೆ. ದವಡೆಗಳ ಮೇಲೆ ಮೊಳಕೆ ಯಂತಿರುವ ಹಲ್ಲು ಪಟ್ಟೆಗಳಿವೆ. ಎರಡು ತೇಪೆಗಳಂತಿರುವ ವೋಮರ್ ಮೇಲಿನ ಹಲ್ಲುಗಳು ಎರಡು ಜೊತೆ ಬಾರ್ಬೆಲ್ (ದಾಡಿಮೀಸೆ) ಗಳಿವೆ. ಮುಂದಿನದನ್ನು ಮ್ಯಾಕ್ಸಿಲರಿ- ಮತ್ತು ಹಿಂದಿನದನ್ನು ಮ್ಯಾಂಡಿಬುಲಾರ್ ಬಾರ್ಬೆಲ್ ಗಳೆಂದು ಕರೆಯುತ್ತಾರೆ. ಮ್ಯಾಕ್ಸಿಲರಿ ಬಾರ್ಬೆಲ್ ಗಳು ತುಂಬಾ ಉದ್ದ ಮತ್ತು ಗುದ ಈಜುರೆಕ್ಕೆಯವರೆಗೆ ಅಥವಾ ಅದಕ್ಕೂ ತುಸು ಹಿಂದಿನವರೆಗೆ ವಿಸ್ತರಿಸುವಷ್ಟು ಉದ್ದವಾಗಿವೆ. ಮ್ಯಾಂಡಿಬುಲಾರ್ ಬಾರ್ಬೆಲ್ ಜೊತೆಗಳು ಮೋಟು. ಗುದ ಈಜುರೆಕ್ಕೆ ಉದ್ದವಾಗಿದ್ದು ಭುಜದ ಈಜುರೆಕ್ಕೆಯ ಹಿಂದಿನವರೆಗೂ ವಿಸ್ತರಿಸುತ್ತದೆ. ಭುಜದ (ಈಜುರೆಕ್ಕೆಯ) ಮುಳ್ಳು ದೃಢವಾಗಿದೆ ಮತ್ತು ಅದರ ಒಳ ಅಂಚು ನವಿರು ಗರಗಸದಂತಿದೆ. ಬಾಲದ ಈಜುರೆಕ್ಕೆ ಅಳವಾಗಿ ಕವಲೊಡೆದಿದೆ. ಎರಡೂ ಪಾಲಿಗಳೂ ಚೂಪಾಗಿ ಚಾಚಿವೆ.

ದೇಹದ ಬಣ್ಣ ಕಂದು ಬೆರೆತ ಬಿಳುಪು. ಬೆನ್ನಿನ ಭಾಗ ಬೂದು ಹಸಿರಿನಿಂದ ಕಂದು ಬಣ್ಣದವರೆಗೆ ಬದಲಾಗಬಹುದು. ಇದರಲ್ಲಿ ಬಂಗಾರ ವರ್ಣದ ಛಾಯೆ ಇರಬಹುದು. ಪಕ್ಕದಲ್ಲಿ ಪಾರ್ಶ್ವ ಪಂಕ್ತಿಯ ಮುಂತುದಿಯಲ್ಲಿ ಸಣ್ಣದೊಂದು ಕಪ್ಪು ಚುಕ್ಕಿ ಇದೆ. ಪಾರ್ಶ್ವ ಪಂಕ್ತಿಯ ತುಸು ಮೇಲೆ ಬಾಲದ ತೊಟ್ಟಿನ ಬಳಿಯೂ ಒಂದು ಕಪ್ಪು ಚುಕ್ಕಿ ಇದೆ. ಜೊತೆಗೆ ಅಡ್ಡನಾದ ಪಟ್ಟಿಯೊಂದು ಬಾಲದ ಈಜು ರೆಕ್ಕೆಯ ಬುಡದ ಬಳಿ ಕಂಡುಬರುತ್ತದೆ. ಈಜುರೆಕ್ಕೆಗಳು ತೆಳು ಬಂಗಾರ ಛಾಯೆ ತೋರುತ್ತವೆ. ಮೀನುಮರಿಗಳು ಮೊಟ್ಟೆಯಿಂದ ಹೊರಬಂದಾಗ ಗಾಜಿನಂತೆ ಪಾರದರ್ಶಕವಾಗಿರುತ್ತವೆ.

ಸಂತಾನಾಭಿವೃದ್ಧಿ : ಮುಂಗಾರು ಕಾಲದಲ್ಲಿ ಮೊಟ್ಟೆ ಇಡುತ್ತದೆ. ರಕ್ಷಿತ ನೀರುಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಇದು ಬಹಳ ರುಚಿ ಯಾದುದೆಂದು ಜನಪ್ರಿಯವಾಗಿದೆ.

—-

ಗಣ : ಸೈಲೂರಿಫಾರ್ಮಿಸ್
ಕುಟುಂಬ : ಸೈಲೂರಿಡೀ (Siluridae)
ಉದಾ : ಬಾಳೆ/ ಗೂಡ್ಲೆ/ ಕಾಟೆ (Boal)
ಶಾಸ್ತ್ರೀಯ ನಾಮ : ವೆಲ್ಲಾಗೊ ಅಟ್ಟು (Wallago atta)

ವಿತರಣೆ : ಸಿಹಿ ನೀರು ಮತ್ತು ಉಬ್ಬರ ನೀರುಗಳು, ನದಿಗಳು, ಕೆರೆಗಳು, ನಾಲೆಗಳು, ಜಲಾಶಯಗಳು ಇತ್ಯಾದಿ ಇದರ ವಾಸಸ್ಥಾನಗಳು.

ಗಾತ್ರ : ೨ ಮೀ. ಉದ್ದ ೫ ಕೆ.ಜಿ. ತೂಕ ಬೆಳೆಯುತ್ತದೆ.

ಆಹಾರ : ಹೊಟ್ಟೆಬಾಕ ಸಿಕ್ಕಿದ್ದನ್ನೆಲ್ಲ ತಿನ್ನುತ್ತದೆ. ಉಗ್ರ ಮಾಂಸಾಹಾರಿ.

ಲಕ್ಷಣಗಳು : ಉದ್ದವಾದ ಚಪ್ಪಟೆ ದೇಹ. ಸಣ್ಣ ಕಣ್ಣುಗಳು. ಕಣ್ಣಿನ ಹಿಂಭಾಗದವರೆಗೂ ವಿಸ್ತರಿಸುವ ಅಗಲವಾದ ಬಾಯಿ. ಎರಡು ಜೊತೆ ದಾಡಿ ಮೀಸೆಗಳಿವೆ. ಮ್ಯಾಕ್ಸಿಲರಿ (ಮುಂದಿನ) ಜೊತೆ ದಾಡಿ ಮೀಸೆಗಳು ಗುದ ಈಜುರೆಕ್ಕೆಯವರೆಗೆ ವಿಸ್ತರಿಸುತ್ತವೆ. ಹಿಂದಿನ ಜೋತೆ ಮೋಟು, ಕೇವಲ ಮೂತಿಯಷ್ಟು ಮಾತ್ರ ಉದ್ದ ಸೊಂಟದಿಂದ ಮುಂದಿರುವ ಬೆನ್ನು ಈಜುರೆಕ್ಕೆ ಚಿಕ್ಕದು, ಭುಜದ ಈಜುರೆಕ್ಕೆ ದುರ್ಭಲವಾಗಿವೆ. ಇವುಗಳ ಒಳ ಅಂಚು ಮೊಂಡು ಗರಗಸದಂತಿವೆ. ಬಾಲ ಈಜುರೆಕ್ಕೆ ಆಳವಾಗಿ ಕವಲೊಡೆದಿದೆ. ಮತ್ತು ಮೇಲಿನ ಪಾಲಿಯು ಕೆಳಗಿನದಕ್ಕಿಂತ ಹೆಚ್ಚು ಉದ್ದವಾಗಿದೆ.

ದೇಹವಿಡೀ ಸುಮಾರು ಬೆಳ್ಳಿ ಬಿಳುಪು ಬಣ್ಣ ಕೆಲವೊಮ್ಮೆ ಬೆನ್ನು ಭಾಗ ಆಲಿವ್ ಹಸಿರು- ಬಂಗಾರದ ಹೊಳಪಿನ ಛಾಯೆ ಇದೆ. ಪಕ್ಕೆಗಳು ಮಾಸಲು ಬಿಳುಪು. ಕೆಲವು ಸಾರಿ ಪಾರ್ಶ್ವ ಪಂಕ್ತಿಯ ಉದ್ದಕೂ ಕಿತ್ತಲೆ ಹಳದಿ ಬಣ್ಣದ ಪಟ್ಟಿ ಇರಬಹುದು. ಗುದ ಮತ್ತು ಬಾಲದ ಈಜುರೆಕ್ಕೆಗಳು ಮಾಸಲು ಬಣ್ಣವಾಗಿವೆ.

ಸಂತಾನಾಭಿವೃದ್ಧಿ : ಮುಂಗಾರು ಆರಂಭಕ್ಕೆ ಮುನ್ನ ಮೊಟ್ಟೆ ಇಡುತ್ತದೆ.

ಸ್ವಭಾವ : ಹೊಟ್ಟೆ ಬಾಕತನಕ್ಕೆ ಹೆಸರಾದ ಮೀನು, ತನ್ನೊಡನಿರುವ ಇತರ ಮೀನುಗಳನ್ನು ತಿಂದು ಸಾಕುವವರೆಗೆ ಹಾನಿಯುಂಟು ಮಾಡುತ್ತದೆ. ಇದು ಇರುವೆಡೆಗಳಲ್ಲಿ ಇತರ ಮೀನುಗಳು ಬದುಕುವುದಿಲ್ಲ. ಮೀನು ಸಾಕಾಣಿಕೆದಾರರು ಸಾಮಾನ್ಯವಾಗಿ ಇದನ್ನು ಕೈಬಿಡುತ್ತಾರೆ. ವರ್ಷವಿಡೀ ದೊರಕುವ ಮೀನು. ಇದನ್ನು ಹೆಚ್ಚು ಇಷ್ಟ ಪಡುವುದಿಲ್ಲವಾಗಿ ಬೇಡಿಕೆ ಇಲ್ಲ. ಬೆಲೆ ಕಡಿಮೆ, ಆದ್ದರಿಂದ ಇದು ಬಡವರ ಆಹಾರ.

ಸ್ವಭಾವತಃ ಸೋಮಾರಿ. ತಳದಲ್ಲಿ ಉಳಿದು ಬೇಟೆಯಾಡುತ್ತದೆ. ಇದನ್ನು ಹಿಡಿಯುವವರು ಜಾಗರೂಕರಾಗಿರಬೇಕು. ಅದು ಕಚ್ಛುವ ಸಾಧ್ಯತೆ ಉಂಟು. ಈ ಮೀನಿನಿಂದ ಅಪಾರ ಎಣ್ಣೆ ದೊರಕುತ್ತದೆ. ಹಿಂದುಗಳು ಈ ಮೀನನನ್ನು ಕಾಳಿಕಾದೇವಿಗೆ ಬಲಿ ಕೊಡುತ್ತಾರೆ.

—-

ಗಣ : ಸೈಲೂರಿಫಾರ್ಮಿಸ್
ಕುಟುಂಬ : ಕ್ಲೇರಿಡೀ (Claride)
ಉದಾ : ಹಾಲಿಮೀನು (Magur)
ಶಾಸ್ತ್ರೀಯ ನಾಮ : ಕ್ಲೇರಿಯಸ್ ಬೆಟ್ರಾಕಸ್ (Clarias betrachas)

035_69_PP_KUH

ವಿತರಣೆ : ಬಯಲು ಸೀಮೆಯ ಸಿಹಿ ನೀರು ಮತ್ತು ಉಪ್ಪು ನೀರು ಭಾವಿ, ಕೆರೆ, ಕೊಳಗಳೆರಡರಲ್ಲಿಯೂ ವಾಸಿಸುತ್ತದೆ.

ಗಾತ್ರ : ೪೫. ಸೆಂ. ಮೀ. ಉದ್ದ ಬೆಳೆಯುತ್ತದೆ.

ಆಹಾರ : ಜಲಸಸ್ಯಗಳು ಮತ್ತು ತೇಲು ಜೀವಿಗಳು.

ಲಕ್ಷಣಗಳು : ಉದ್ದವಾದ ದೇಹ. ತುಸು ಚಪ್ಪಟೆಯಾದ ತಲೆ, ಬಾಯಿ ಮುಂದಿನ ತುದಿಯಲ್ಲಿದೆ. ಮೊಳಕೆಯಾಕಾರದ ಹಲ್ಲುಗಳು ಬಾಯಲ್ಲಿ ಪಟ್ಟಿಗಳಂತೆ ವ್ಯವಸ್ಥಿತವಾಗಿವೆ. ನಾಲ್ಕು ಜೋತೆ ದಾಡಿ ಮೀಸೆಗಳಿವೆ. ಮುಂದಿನ ಜೊತೆ ಮೀಸೆಗಳು ಭುಜದ ಈಜುರೆಕ್ಕೆ ಮಟ್ಟದವರೆಗೂ ಬಾಚಬಲ್ಲಷ್ಟು ಉದ್ದ, ನಡುವಿನ ಜೊತೆ ಮೀಸೆಗಳು ಚಿಕ್ಕವು ಮತ್ತು ಕಿವಿರು ರಂಧ್ರಗಳವರೆಗೆ ಮಾತ್ರ ಬಾಚಬಲ್ಲಷ್ಟು ಉದ್ದ ಬೆನ್ನು ಈಜುರೆಕ್ಕೆ ಉದ್ದವಾಗಿದ್ದು ಭುಜದ ಈಜುರೆಕ್ಕೆ ಮಟ್ಟದಿಂದ ಬಾಲದ ಬುಡದ ವರೆಗೆ ಹರಡಿದೆ. ಭುಜದ ಈಜುರೆಕ್ಕೆಗಳಲ್ಲಿ ಬಲವಾದ ಮುಳ್ಳುಗಳಿವೆ. ಈ ಮುಳ್ಳಿನ ಎರಡೂ ಅಂಚುಗಳು ಗರಗಸಾಕಾರವಾಗಿವೆ.

ಈ ಮೀನಿನಲ್ಲಿ ಅನುಷಂಗಿಕ ಶ್ವಾಸಾಂಗಗಳಿವೆ. ಈ ಶ್ವಾಸಾಂಗಗಳು ಕವಲೊಡೆದ ರಚನೆಯೋಪಾದಿಯಲ್ಲಿ ಕಿವಿರು ಕೋಣೆಯಲ್ಲಿವೆ. ಇವು ಗಾಳಿಯನ್ನು ಉಸಿರಾಡಬಲ್ಲವು.

ಬದುಕಿದ ಮೀನಿನ ಬಣ್ಣ ಕಂದು ಬಣ್ಣದಿಂದ ಹಸಿರು ಮಿಶ್ರಿತ ನೀಲಿ. ಬೆನ್ನಿನ ಭಾಗದ ಬಣ್ಣ ದಟ್ಟವಾಗಿದ್ದು ಹಸಿರು ಹೊಳಪಿರುತ್ತದೆ. ಪಕ್ಕೆಗಳು ಮತ್ತು ಹೊಟ್ಟೆ ಭಾಗವು ತೆಳುಕಂದು ಮತ್ತು ನವಿರಾದ ಕೆಂಫು. ಪಕ್ಕೆಗಳಲ್ಲಿ ಬಹಳೊಮ್ಮೆ ತಿಳಿಯಾದ ಬಿಳಿ ಚುಕ್ಕಿಗಳಿರುತ್ತವೆ. ಬೆನ್ನಿನ ಮತ್ತು ಗುದ ಈಜುರೆಕ್ಕೆಗಳಿಗೆ ಕೆಂಪು ಅಂಚಿರುತ್ತದೆ. ಬೆನ್ನಿನ ಈಜುರೆಕ್ಕೆ ಹೆಚ್ಚು ಹಳದಿ.

ಸಂತಾನಾಭಿವೃಧಿ : ಮಳೆಗಾಲದಲ್ಲಿ ಮೊಟ್ಟೆ ಇಡುತ್ತದೆ.

ಸ್ವಭಾವ : ಆಕಾರದಲ್ಲಿ ತುಂಬ ಬದಲಾವಣೆ ತೋರುವ ಮೀನು ಇದು. ಕೆಲವು ಆಸಾಮಾನ್ಯ ಮೀನುಗಳಲ್ಲಿ ಬಾಲದ ಈಜುರೆಕ್ಕೆಯು ಬೆನ್ನಿನ ಮತ್ತು ಗುದ ಈಜುರೆಕ್ಕೆಗಳೊಂದಿಗೆ ಕೂಡಿಕೊಂಡಿರುತ್ತದೆ. ಬೆಳವಣಿಗೆ ಯೊಡನೆ ದವಡೆಗಳಲ್ಲಿನ ಹಲ್ಲುಗಳೂ ಸಾಕಷ್ಟು ಬದಲಾಗಬಹುದು ಮತ್ತು ಅನೇಕ ವಿಧಗಳಾಗಿ ಕಾಣಬಹುದು.

—-

ಗಣ : ಸೈಲೂರಿಫಾರ್ಮಿಸ್
ಕುಟುಂಬ : ಹೆಟಿರೊನ್ಯುಸ್ಟಿಡೀ (Heteropneustitdar)
ಉದಾ : ಸಿನಿ ಮೀನು/ ಸೇರುವ (Stinging catfish)
ಶಾಸ್ತ್ರೀಯನಾಮ : ಹೆಟರೊನ್ಯುಸ್ಟಿಸ್ ಫಾಸಿಲ್ಲಿಸ್ (Hetropneustes fossilis)

036_69_PP_KUH

ವಿತರಣೆ : ಸಿಹಿ ನೀರಿನ ವಾಸಿ. ಅಪರೂಪವಾಗಿ ಕ್ಷಾರನೀರಿ ನಲ್ಲಿಯೂ ಇರುತ್ತದೆ. ಹೆಚ್ಚಾಗಿ ಕೊಳ, ಗುಂಡಿಗಳಲ್ಲಿ ಮತ್ತು ಜೌಗು ನೀರುಗಳಲ್ಲಿಯೂ, ಬಗ್ಗಡ ನೀರಿನಲ್ಲಿಯೂ ದೊರಕಬಹುದು.

ಗಾತ್ರ : ೩೦ ಸೆಂ. ಮೀ. ಉದ್ದ ಬೆಳೆಯುತ್ತದೆ.

ಆಹಾರ : ಜಲಸಸ್ಯಗಳು ಮತ್ತು ತೇಲು ಜೀವಿಗಳು.

ಲಕ್ಷಣಗಳು : ನೀಳವಾದ ದೇಹ. ಸೊಂಟದ ಈಜುರೆಕ್ಕೆಯವರೆಗೆ ಉರುಳೆಯಾಕಾರದ ಶರೀರ. ಪುಟ್ಟಬಾಯಿ ಮುಂತುದಿಯಲ್ಲಿದೆ. ಮೊಳಕೆ ಹಲ್ಲುಗಳು ದವಡೆಗಳಲ್ಲಿ ಪಟ್ಟಿಗಳಂತೆ ವ್ಯವಸ್ಥಿತವಾಗಿವೆ. ಚೆನ್ನಾಗಿ ಬೆಳೆದ ನಾಲ್ಕು ಜೊತೆ ದಾಡಿ ಮೀಸೆಗಳಿವೆ. ಪುಟ್ಟದಾದ ಬೆನ್ನಿನ ಈಜುರೆಕ್ಕೆ. ಇದು ಭುಜದ ಈಜುರೆಕ್ಕೆಗಳ ಸಮಕ್ಕೆ ಇದೆ. ಬೆನ್ನಿನ ಈಜುರೆಕ್ಕೆ ಅಂಚುಗಳು ಗರಗಸದಂತಿವೆ. ಮುಂತುದಿಯಂಚು ಬಲವಾಗಿ ಗರಗಸದಂತಿದೆ. ಗುದ ಈಜುರೆಕ್ಕೆಯ ಬುಡ ಉದ್ದವಾಗಿದೆ. ಮತ್ತು ಬಾಲದ ಈಜುರೆಕ್ಕೆಯಿಂದ ಪ್ರತ್ಯೇಕಿಸಿ ಗುರುತಿಸಬಹುದಾದಂತೆ ಸ್ಪಷ್ಟವಾದ ಕಚ್ಚು ಜಾಗ ಇದೆ.

ಬೆನ್ನಿನ ಭಾಗ ಹಳದಿ ಅಥವಾ ಸೀಸ ವರ್ಣ ಮಿಶ್ರಿತ ಕಡು ಕೆಂಪು ಹೊಟ್ಟೆಯ ಭಾಗ ತಿಳಿಬಣ್ಣ. ಪಕ್ಕೆಗಳಲ್ಲಿ ಸಾಮಾನ್ಯವಾಗಿ ಎರಡು ಹಳದಿ ಪಟ್ಟೆಗಳಿರುತ್ತವೆ. ಮರಿಯಲ್ಲಿ ಬಣ್ಣ ಕೆಂಪಾಗಿರುತ್ತದೆ.

ಸಂತಾನಾಭಿವೃಧಿ : ಸಾಮಾನ್ಯವಾಗಿ ಮುಂಗಾರು ಕಾಲದಲ್ಲಿ ಮೊಟ್ಟೆ ಇಡುತ್ತದೆ. ಕೃತಕವಾಗಿಯೂ ಸಂತಾನೋತ್ಪತ್ತಿ ಮಾಡಿಸಬಹುದು. ಒಂದು ವರ್ಷದಲ್ಲಿ ಲೈಂಗಿಕ ಪ್ರೌಢತನಗಳಿಸುತ್ತವೆ.

ಸ್ವಭಾವ : ಆರ್ಥಿಕವಾಗಿ ಮತ್ತು ಸಂಶೋಧನೆ ದೃಷ್ಟಿಯಿಂದ ಮುಖ್ಯವಾದ ಮೀನು. ಇದು ಗಾಳಿಯನ್ನು ಉಸಿರಾಡಬಲ್ಲದು. ಅದಕ್ಕೆಂದು ಚೆನ್ನಾಗಿ ಬೆಳೆದ ವಾಯು ಕೋಶಗಳಿವೆ. ಇದರ ಮಾಂಸ ಮೀರ್ಯವರ್ಧಕ ಎಂಬ ಭಾವನೆ ಇದೆ. ಅದ್ದರಿಂದ ಇದಕ್ಕೆ ಹೆಚ್ಚು ಬೇಡಿಕೆ ಇದೆ. ಇದಕ್ಕೆ ವೈದ್ಯಕೀಯ ಗುಣವೂ ಇದೆ. ಎಂಬ ಭಾವನೆಯೊಂದಿದೆ. ಇದು ತುಂಬಾ ಅಪಾಯಕಾರಿ, ಅಕ್ರಮಣಕಾರಿ ಸ್ವಭಾವದ ಮೀನು. ಇದರ ಭುಜದ ಈಜುರೆಕ್ಕೆ ಮುಳ್ಳುಗಳು ತೀರ್ವ ಅಪಾಯಕಾರಿ. ಆದ್ದರಿಂದ ಇದನ್ನು ಹಿಡಿಯುವಾಗ ಜಾಗರೂಕರಾಗಿರಬೇಕಾದ ಆಗತ್ಯವಿದೆ.