ಗಣ : ಬೆಲೊನಿಫಾರ್ಮಿಸ್
ಕುಟುಂಬ : ಸ್ಕಾಂಬ್ರಿಸೊಸಿಡೀ (Scombresocidae)
ಉದಾ : ಹಾರುವ ಮೀನು (Flying fish)
ಶಾಸ್ತ್ರೀಯ ನಾಮ : ಎಕ್ಸಾಸಿಟಸ್ ವೊಲಿಟಾನಸ್ (Exocoetus volitons)

037_69_PP_KUH

ವಿತರಣೆ : ಹಿಂದೂ ಮಹಾಸಾಗರವೂ ಸೇರಿದಂತೆ ಉಷ್ಣವಲಯ ಮತ್ತು ಸಮಶೀತೋಷ್ಣ ವಲಯಗಳ ಕಡಲುಗಳಲ್ಲಿ ವಾಸಿಸುತ್ತದೆ. ಸಮುದ್ರದ ಮೇಲ್ಮೈ, ತಟ್ಟೆ ನೀರಿನಲ್ಲಿ ಕಂಡು ಬರುವ ಮೀನು, ಕರ್ನಾಟಕದ ಕರಾವಳಿಯ ಮೀನುಗಾರರ ಬಲೆಗಳಲ್ಲಿ ಕೆಲವೊಮ್ಮೆ ಸಿಕ್ಕಿ ಬೀಳುವುದುಂಟು.

ಗಾತ್ರ : ಒಂದರಿಂದ ಒಂದುವರೆ ಅಡಿ ಉದ್ದ.

ಆಹಾರ : ಕಡಲು ಪ್ಲಾಂಕ್ಟಾನ್ ಮತ್ತು ಚಿಕ್ಕಪುಟ್ಟ ಜೀವಿಗಳಾದ ಸೀಗಡಿ ಮತ್ತು ಇತರ ಚಿಕ್ಕ ಮೀನುಗಳು, ಅವುಗಳ ಮೊಟ್ಟೆಗಳು ಇದರ ಆಹಾರ.

ಲಕ್ಷಣಗಳು : ಅಡಕವಾದ ದೇಹ, ಸೈಕ್ಲಾಯಿಡ್ ಹುರುಪೆಗಳ ಹೊದಿಕೆ ಇದೆ. ಕಣ್ಣುಗಳು ದೊಡ್ಡವು. ದೇಹದ ಮೇಲ್ಭಾಗ ನೀಲಿ, ತಳಭಾಗ ಬಿಳುಪು. ಬಾಯಿ ಅಗಲ. ಎರಡೂ ದವಡೆಗಳಲ್ಲಿ ಹಲ್ಲುಗಳಿವೆ. ವಾಯುಕೋಶವಿದೆ.

ಬೆನ್ನಿನ ಈಜುರೆಕ್ಕೆ ಮತ್ತು ಗುದ ಈಜುರೆಕ್ಕೆಗಳು, ದೇಹದ ಮೇಲೆ ಮತ್ತು ಕೆಳಗೆ ಒಂದೇ ನೇರದಲ್ಲಿವೆ. ಭುಜದ ಈಜುರೆಕ್ಕೆ ನೀಳವಾಗಿ ರೆಕ್ಕೆಗಳಂತೆ ಬೆಳೆದಿವೆ. ಅದರ ಮೇಲೆ ಕಪ್ಪು ಚುಕ್ಕಿಗಳಿವೆ. ಸೊಂಟದ ಈಜುರೆಕ್ಕೆಗಳು ಸಣ್ಣವು. ಬಲಯುತವಾದ ಬಾಲದಿಂದ ಜೋರಾಗಿ ನೀರನ್ನು ಬಡಿಯುತ್ತ ವೇಗವಾಗಿ ಈಜುತ್ತ ನೀರಿನ ಮೇಲ್ಮೈ ಸ್ತರಕ್ಕೆ ಬಂದು, ಬಾಲವನ್ನು ನೀರಿಗೆ ಒತ್ತಿ ನೀರಿನಿಂದ ಮೇಲಕ್ಕೆ ನೆಗೆಯುತ್ತದೆ.ವಿಸ್ತಾರವಾದ ಭುಜದ ಈಜುರೆಕ್ಕೆಗಳನ್ನು ವಿಶಾಲವಾಗಿ ಹರಡಿ ಗಾಳಿಯ ಮೂಲಕ ಜಾರಿ ೨೦೦-೪೦೦ ಮೀಟರ್ ದೂರ ಸಾಗಿ ಬಂದು, ನೀರಿಗೆ ಇಳಿದು ಪುನಃ ಹಿಂದಿನಂತೆಯೆ ಸ್ಪಲ್ಪ ದೂರ ನೀರಿನಲ್ಲಿ ವೇಗವಾಗಿ ಈಜಿ ಮೇಲಕ್ಕೆ ನೆಗೆದು ಹಾರುತ್ತದೆ. ಇದು ನಿಜವಾದ ಹಾರಾಟವಲ್ಲ. ಮೇಲಕ್ಕೆ ಜಿಗಿದು ಈಜುರೆಕ್ಕೆಯನ್ನು ಪ್ಯಾರಚೂಟ್ ನಂತೆ ಬಳಸಿ ಗಾಳಿಯಲ್ಲಿ ಜಾರಿ ಸಾಗುತ್ತದೆ. ಅದ್ದರಿಂದ ಇವಕ್ಕೆ ಹಾರುವ ಮೀನು ಎಂಬ ಹೆಸರು ಬಂದಿದೆ.

ಸಂತಾನಾಭಿವೃದ್ಧಿ : ಇದು ಅಂಡಜ. ಉಳಿದ ವಿವರಗಳು ಗೊತ್ತಿಲ್ಲ. ಇದು ಉತ್ತಮ ಆಹಾರ ಮೀನು. ಆದ್ದರಿಂದ ಹಿಡಿಯುತ್ತಾರೆ, ತಿನ್ನುತ್ತಾರೆ.

—-

ಗಣ : ಸಿಂಗ್ನಾತಿಫಾರ್ಮಿಸ್ (Syngnathiformes)
ಕುಟುಂಬ : ಸಿಂಗ್ನಾತಿಡೀ (Syngnathidae)
ಉದಾ : ಕೊಳವೆ ಮೀನು (Pipe fish)
ಶಾಸ್ತ್ರೀಯ ನಾಮ : ಫಿಸ್ಟುಲೇರಿಯ ವಿಲ್ಲೋರ (Fistularia villora)

038_69_PP_KUH

ವಿತರಣೆ : ಉಷ್ಣವಲಯ ಮತ್ತು ಸಮಶೀತೋಷ್ಣ ವಲಯದ ಕಡಲುಗಳಲ್ಲಿ ದೊರಕುತ್ತದೆ. ಸಾಮಾನ್ಯವಾಗಿ ಕಡಲು ದಂಡೆಗಳಲ್ಲಿ ಕಾಣಸಿಗುತ್ತದೆ. ಈ ಮೀನನ್ನು ಕೊಳಲು ಮೀನೆಂದೂ ಕರೆಯುತ್ತಾರೆ.

ಗಾತ್ರ : ೧೦-೧೫ ಅಂಗುಲ ಉದ್ದ

ಆಹಾರ : ಜಲ ಸೂಕ್ಷ್ಮ ಜೀವಿಗಳು, ತೇಲು ಜೀವಿಗಳು.

ಲಕ್ಷಣಗಳು : ವಿಕಾರ ರೂಪದ ಅದಿಯ ಮೀನುಗಳು. ತೆಳುವಾದ ಹಾವು ಮೀನಿನಂತಹ ದೇಹ, ಉದ್ದ ಕೊಳವೆಯಂತೆ ಮುಂದೆ ಚಾಚಿದ ಮೂತಿ. ಹುರುಪೆಗಳ ಹೊದಿಕೆ ಇಲ್ಲದೆ ಚರ್ಮ ಬೆತ್ತಲಾಗಿದೆ. ಪುಟ್ಟ ಬಾಯಿ, ಹೀರುಬಟ್ಟಲಿನಂತೆ ಮಾರ್ಪಟ್ಟಿದೆ. ಸೂಕ್ಷ್ಮಾಕಾರದ ಹಲ್ಲುಗಳು. ಬಾಲದ ಈಜುರಕ್ಕೆ ಉಂಟು. ಮಧ್ಯದ ಈಜುರಕ್ಕೆ ಕಡ್ಡಿಗಳು ನೀಳವಾಗಿವೆ. ದೇಹದ ಮೇಲೆ ಉಂಗುರಗಳಂತಹ ಅಥವಾ ರಕ್ಷಕ ತಟ್ಟೆಗಳ ಹೊದಿಕೆ ಇದೆ. ಈ ಹೊದಿಕೆ ಒಳಗೆ ದೇಹದ ಅಸ್ಥಿಪಂಜರದೊಂದಿಗೆ ಕೂಡಿಕೊಂಡು ದೇಹಕ್ಕೆ ಮೂಳೆಯ ರಕ್ಷಾಕವಚದ ಹೊದಿಕೆಯಾಗಿದೆ. ವಾಯು ಕೋಶವಿದೆ. ಆದರೆ ಅದಕ್ಕೂ ಗಂಟಲು ಗೂಡಿಗೂ ಸಂಪರ್ಕವಿಲ್ಲ. ಆದ್ದರಿಂದ ಅದು ಪ್ರಾಣಿಗೆ ಉಪಯುಕ್ತವೇ ಅಲ್ಲವೇ ತಿಳಿಯದು.

—-

ಗಣ : ಅತೆರಿನಿಫಾರ್ಮಿಸ್/ ಸಿಂಗ್ನಾತಿಫಾರ್ಮಿಸ್ (Syngnathiformes)
ಕುಟುಂಬ : ಹೆಮಿರಾಂಫಿಡೀ (Hemiramphidae)
ಉದಾ : ಅರೆಕೊಕ್ಕು ಮೀನು (Half beak fish)
ಶಾಸ್ತ್ರೀಯನಾಮ : ಹೆಮಿರಾಂಫಸ್ ಲೂಟಕಿ (Hemiramphus lutkei)

039_69_PP_KUH

ವಿತರಣೆ : ನದಿ, ಕೆರೆ ಮತ್ತು ಕೊಳವೆಗಳು

ಗಾತ್ರ : ೧೦-೧೨ ಅಂಗುಲ ಉದ್ದ.

ಆಹಾರ : ಸೂಕ್ಷ್ಮ ಜೀವಿಗಳು, ತೇಲು ಜೀವಿಗಳು.

ಲಕ್ಷಣಗಳು : ದೇಹದ ರಚನೆ ಕೊಳವೆ ಮೀನಿನಂತೆಯೆ ಇದೆ. ಆಕಾರವೂ ಕೊಳವೆಯಂತಿದ್ದರೂ, ಆಡ್ಡ ಸೀಳಿಕೆಯಲ್ಲಿ ದುಂಡಗಿರದೆ ಕೋನಾಕಾರವಾಗಿದ್ದ ಕೆಳಗಿನ ದವಡೆ ಮೇಲು ದವಡೆಗಿಂತ ಮುಂದಕ್ಕೆ ಚಾಚಿ, ಮೇಲು ದವಡೆಯ ಎರಡರಷ್ಟು ಉದ್ದವಿದೆ. ಇದರಿಂದಲೇ ಅದಕ್ಕೆ ಅರೆಕೊಕ್ಕು ಎಂಬ ಹೆಸರು. ಎರಡು ದವಡೆಗಳಲ್ಲಿ ಚೂಪಾದ ಹಲ್ಲುಗಳಿವೆ. ದೇಹದ ಮೇಲೆ ಸೈಕ್ಲಾಯಿಡ್ ಹುರುಪೆಗಳ ಹೊದಿಕೆ ಇದೆ. ಭುಜದ ಈಜುರೆಕ್ಕೆಗಳು ದೇಹದ ಮೇಲು ತುದಿಯಲ್ಲಿದೆ. ಇವಕ್ಕೆ ಮೃದುವಾದ ಕಡ್ಡಿಗಳ ಆಧಾರವಿದೆ. ಇವು ಸಾಮಾನ್ಯವಾಗಿ ತೇಲು ಜೀವಿಗಳು. ಇವು ಜಿಗಿದು ಚಲಿಸುತ್ತವೆ. ಸಾಮಾನ್ಯವಾಗಿ ಗುಂಪಿನಲ್ಲಿ ವಾಸಿಸುತ್ತವೆ.

—-

ಗಣ : ಸಿಂಗ್ನಾತಿಫಾರ್ಮಿಸ್ (Syngnathiformes)
ಕುಟುಂಬ : ಸಿಂಗ್ನಾತಿಡೀ (Syngnathidae)
ಉದಾ : ಕಡಲು ಕುದುರೆ (Sea horse)
ಶಾಸ್ತ್ರೀಯನಾಮ : ಹಿಪ್ಪೊಕ್ಯಾಂಪಸ್
ಕೊಡ (Hippocampus koda)

040_69_PP_KUH

ವಿತರಣೆ : ಹಿಂದೂ ಮಹಾಸಾಗರವೂ ಸೇರಿದಂತೆ ಉಷ್ಣವಲಯದ ಮತ್ತು ಸಮಶೀತೋಷ್ಣ ವಲಯದ ಕಡಲುಗಳಲ್ಲಿ ವಾಸಿಸುತ್ತವೆ. ಕರ್ನಾಟಕದ ಕರಾವಳಿಯಲ್ಲೂ ದೊರಕುತ್ತವೆ. ತೀರ ಪ್ರದೇಶದ ಉತ್ತಳ ನೀರಿನ ಕಡಲು ಚೊಂಡುಗಳ ನಡುವೆ, ಹಲ ಕೆಲವು ಸಾರಿ ಅಳವೆ ಪ್ರದೇಶಗಳಲ್ಲಿಯೂ ದೊರಕುತ್ತವೆ.

ಗಾತ್ರ : ೫ ರಿಂದ ೨೦ ಸೆಂ. ಮೀ. ಉದ್ದ ಬೆಳೆಯುತ್ತವೆ.

ಆಹಾರ : ಕಡಲು ಸಸ್ಯಗಳು, ತೇಲು ಜೀವಿಗಳು (ಪ್ಲಾಂಕ್ಟಾನ್

[Plankton])

ಲಕ್ಷಣಗಳು : ದೇಹದ ಮೇಲೆ ಗಟ್ಟಿಯಾದ ಮೂಳೆ ತಟ್ಟೆಗಳು ಒಂದರ ಪಕ್ಕ ಒಂದು ಕೂಡಿ ಪೆಟ್ಟಿಗೆಯಂತಹ ಮೇಲು ಕವಚ. ಸೃಷ್ಠಿಯಾಗಿದೆ. ಇದು ಪ್ರಾಣಿಗೆ ರಕ್ಷಣೆ ಒದಗಿಸುತ್ತದೆ. ತಲೆಯು ದೇಹದಿಂದ ಸಮಕೋನದಲ್ಲಿ ಬಾಗಿ ನೀಳವಾದ ಕೊಳವೆಯಂತಾಗಿದೆ. ಇದು ಕುದುರೆಯ ಮೂಖ / ತಲೆಯನ್ನು ಹೋಲುವುದರಿಂದ ಈ ಮೀನಿಗೆ ಕಡಲು ಕುದುರೆ ಎಂಬ ಹೆಸರು ಬಂದಿದೆ. ಪುಟ್ಟಬಾಯಿ, ಬಾಯಿಯೊಳಗೆ ಹಲ್ಲುಗಳಿಲ್ಲ ಅಥವ ಅದು ಹೀರು ನಳಿಕೆಯಂತೆ ರೂಪುಗೊಂಡಿದೆ. ಭುಜದ ಈಜುರೆಕ್ಕೆಗಳು ಕಿವಿರು ಕವಚದ ಹಿಂಭಾಗದಲ್ಲಿವೆ. ಭುಜದ ಈಜುರೆಕ್ಕೆಗಳು ಸಣ್ಣವು ಮತ್ತು ಪಾರದರ್ಶಕವಾಗಿವೆ. ಆದರೂ ಈಜಲು ನೆರವಾಗುತ್ತದೆ. ಈ ಮೀನಿನಲ್ಲಿ ಸೊಂಟದ, ಗುದ ಮತ್ತು ಬಾಲದ ಈಜುರೆಕ್ಕೆಗಳಿಲ್ಲ. ಬಾಲ ತುಸು ನೀಳವಾಗಿ ತುದಿಯವರೆಗೆ ನಿಧಾನವಾಗಿ ಚೂಪಾಗುತ್ತಾ ಹೋಗುತ್ತದೆ. ಬಾಲವು ವಸ್ತುಗಳ ಸುತ್ತ ಸುತ್ತಿಕೊಳ್ಳಬಲ್ಲುದಾಗಿದೆ. ಕಡಲ ಕಳೆಗಳಿಗೆ ಬಾಲದಿಂದ ಸುತ್ತಿಕೊಂಡು, ಒಂದೆಡೆ ತಗಲಿಕೊಂಡು ವಿಚಿತ್ರವಾಗಿ ತೇಲುತ್ತ ನಿಂತು ವಿರಮಿಸುತ್ತವೆ. ಇವುಗಳ ಚಲನೆಯೂ ವಿಚಿತ್ರ. ಭುಜದ ಈಜುರೆಕ್ಕೆಗಳನ್ನು ಬಡಿದು ನೇರವಾಗಿ ಮೇಲಕ್ಕೆ ಕೆಳಕ್ಕೆ ಚಲಿಸುತ್ತವೆ. ಮಂದಗತಿಯಲ್ಲಿ ಈಜುತ್ತವೆ. ಪ್ರಧಾನವಾದ ಎರಡು ಕಣ್ಣುಗಳಿವೆ ಮತ್ತು ಅವು ಪ್ರತ್ಯೇಕವಾಗಿ ಚಲಿಸಬಲ್ಲವು.

ಸಂತಾನಾಭಿವೃದ್ಧಿ : ಈ ಮೀನುಗಳು ಒಂದು ರೀತಿಯ ಲಿಂಗ ದ್ವಿರೂಪತೆ ತೋರುತ್ತವೆ. ಗಂಡು ಮೀನಿನ ಉದರ ಭಾಗದ ಮೇಲೆ ತೆಳವು ಪಾರದರ್ಶಕ ಸಂತಾನ ಸಂಚಿ ಇದೆ. ಹೆಣ್ಣು ಮೀನುಗಳನ್ನು ಮೊಟ್ಟೆ ಇಡಲು ಪ್ರಚೋದಿಸಿ, ಮೊಟ್ಟೆಗಳು ಸಂತಾನ ಸಂಚಿಯಲ್ಲಿ ಇಟ್ಟುಕೊಂಡು ಕಾಪಾಡುತ್ತದೆ. ಮರಿಗಳನ್ನು ಸಹ, ಆಶ್ರಯ ಕೊಟ್ಟು ಕೆಲವು ಕಾಲ ಕಾಪಾಡುತ್ತದೆ. ಹೆಣ್ಣು ಮೀನಿನಲ್ಲಿ ಸಣ್ಣದೊಂದು ಗುದ ಈಜುರೆಕ್ಕೆ ಇದೆ.

—-

ಗಣ : ಸಿಪ್ರಿನೊಡಾಂಟಿಫಾರ್ಮಿಸ್
ಕುಟುಂಬ : ಪೋಸಿಲಿಡಿ (Poecilidae)
ಉದಾ : ಸೊಳ್ಳೆ ಮೀನು (Mosquito fish)
ಶಾಸ್ತ್ರೀಯನಾಮ : ಗ್ಯಾಂಬೂಸಿಯ ಆಫಿನಿಸ್ (Gambusia affinis)

041_69_PP_KUH

ವಿತರಣೆ : ಇದು ಮೂಲತಃ ದಕ್ಷಿಣ ಅಮೇರಿಕಾದ ಮೂಲನಿವಾಸಿ ಸಿಹಿನೀರು ಮೀನು. ಆದರೆ ಅವು ಸೊಳ್ಳೆ ಮರಿಗಳನ್ನು ತಿನುತ್ತದೆ ಎಂಬ ಕಾರಣದಿಂದ ಪ್ರಪಂಚಾದ್ಯಾಂತ ತಂದು ಬಿಡಲಾಗಿದೆ.

ಗಾತ್ರ : ಸಾಧಾರಣ ಗಾತ್ರದ ಮೀನು ೬-೭ ಸೆಂ.ಮೀ. ಉದ್ದ ಬೆಳೆಯುತ್ತದೆ.

ಆಹಾರ : ಹೊಟ್ಟೆಬಾಕ. ತನ್ನ ಮರಿಗಳನ್ನೆ ತಿನ್ನುತ್ತದೆ. ಸೊಳ್ಳೆ ಲಾರ್ವಗಳನ್ನು ವಿಶೇಷವಾಗಿ ತಿನ್ನುತ್ತದೆ.

ಲಕ್ಷಣಗಳು : ಸಾಧಾರಣ ಉದ್ದವಾದ ದೇಹ. ದೇಹದ ಗಾತ್ರಕ್ಕೆ ದೊಡ್ಡವಾದ ಕಣ್ಣುಗಳು, ಬೆನ್ನು ಈಜುರೆಕ್ಕೆ ಸರಿ ಸುಮಾರು ಬೆನ್ನಿನ ಮಧ್ಯ ಭಾಗದಲ್ಲಿದೆ. ಸುಮಾರು ಗಾತ್ರದ ಹುರುಪೆಗಳು, ಹೆಣ್ಣು ಮೀನಿಗಳಲ್ಲಿ ಬೆನ್ನು ಈಜುರೆಕ್ಕೆಯ ಸ್ಥಾನ ಬದಲಾಗುತ್ತದೆ. ಹುರುಪೆಗಳು ೩೦-೩೨ರ ಪಕ್ಕ ಸಾಲುಗಳಲ್ಲಿ ವ್ಯವಸ್ಥಿತವಾಗಿವೆ. ಸಂತಾನೋತ್ಪತ್ತಿ ಋತುವಿನಲ್ಲಿ ಹೆಣ್ಣು ಮೀನಿನ ಉದರದ ಪಕ್ಕೆಗಳಲ್ಲಿ ಗುದ ಈಜುರೆಕ್ಕೆಯ ಮೇಲೆ ಕಪ್ಪು ಮಚ್ಚೆಗಳು ಕಾಣಿಸಿಕೊಳ್ಳುತ್ತವೆ.

ಪಕ್ಕೆಗಳು ನೀಲಿ ಛಾಯೆಯ ಪಾರದರ್ಶಕ ಬೂದು ಮಿಶ್ರಿತ ಬಣ್ಣ. ಬೆನ್ನಿನ ಭಾಗ ಆಲಿವ್ ಹಸಿರು ಕಂದು ಮಿಶ್ರಣ. ಹೊಟ್ಟೆಯ ಭಾಗ ಬಿಳಿಪು. ಚದುರಿದಂತೆ ಕಪ್ಪು ಚುಕ್ಕೆಗಳಿರಬಹುದು. ಕಣ್ಣಿನ ಸುತ್ತ ದಟ್ಟ ಅಡ್ಡ ಪಟ್ಟಿ ಇದೆ. ಈಜುರೆಕ್ಕೆಗಳು ತಿಳಿ ಹಳದಿ, ಬೆನ್ನಿನ ಮತ್ತು ಬಾಲದ ಈಜುರೆಕ್ಕೆಗಳ ಮೇಲೆಕಪ್ಪು ಮಚ್ಚೆಗಳಿವೆ.

ಸಂತಾನಾಭಿವೃದ್ಧಿ : ನಿರ್ದಿಷ್ಟ ಋತು ಮಾಸವಿಲ್ಲ. ಕೃತಕವಾಗಿ ಸಂತಾನೋತ್ಪತ್ತಿ ನಡೆಸಬಹುದು.

ಸ್ವಭಾವ : ಮೂಲತಃ ಅಮೇರಿಕ ಸಂಯುಕ್ತ ಸಂಸ್ಥಾನದ ಈ ಮೀನುಗಳನ್ನು ಸೊಳ್ಳೆ ಮರಿಗಳನ್ನು ಇಂದು ಮಲೇರಿಯಾ ನಿರೋಧಕ್ಕೆ ನೆರವಾಗುತ್ತದೆಂದು ಕರ್ನಾಟಕದಲ್ಲಿ ತಂದು ಬಿಡಲಾಯ್ತು. ಹೊಸ ವಸತಿಗಳಲ್ಲಿ ಚೆನ್ನಾಗಿ ಹೊಂದಿಕೊಂಡು ಬೆಳೆಯುತ್ತದೆ. ಎಲ್ಲಾ ರೀತಿಯ ಕೊಳಕು ನಿಂತ ನೀರುಗಳಲ್ಲಿಯೂ ಯಶಸ್ವಿಯಾಗಿ ಬದುಕುತ್ತದೆ. ಆದರೆ ಇದರಿಂದ ಒಂದು ಕೆಟ್ಟ ಅನುಭವವಾಗಿದೆ. ಹೊಸದಾಗಿ ತಂದು ಬಿಟ್ಟ ಕಡೆಗಳಲ್ಲಿ ಈ ಮೀನು ವರವಾಗುವುದರ ಬದಲು ಶಾಪವಾಗಿ ಪರಿಣಮಿಸಿದೆ. ಹೊಸ ವಸತಿಗಳಲ್ಲಿ ಹಾನಿಕಾರಕವಾಗಿ ವರ್ತಿಸುತ್ತಿದೆ.