ಗಣ : ಒಫಿಯೊಸಿಫಾಲಿಫಾರ್ಮಿಸ್ (Ophiocephaliformes)
ಕುಟುಂಬ : ಒಫಿಯೊಸಿಫಾಲಿಡೀ (Ophiociphalidae)
ಉದಾ : ಹಾವು ತಲೆ ಮೀನು (Snake- head fish)
ಶಾಸ್ತ್ರೀಯನಾಮ : ಚೆನ್ನ ಪಂಕ್ಟೇಟಸ್

042_69_PP_KUH

ವಿತರಣೆ : ಕರ್ನಾಟಕದ ಎಲ್ಲ ಸಿಹಿನೀರು ಕೊಳ ಕೆರೆ, ಗುಂಡಿಗಳು, ನದಿಗಳಲ್ಲಿ ದೊರಕುತ್ತದೆ :

ಗಾತ್ರ : ೨ ಅಡಿ / ೬೦ ಸೆಂ. ಮೀ. ಉದ್ದ ಬೆಳೆಯುತ್ತದೆ.

ಆಹಾರ : ಎಲ್ಲಾ ವಿಧವಾದ ಜಲಸಸ್ಯಗಳು ಮತ್ತು ಕೊಳೆತ ಜೀವ ಪದಾರ್ಥಗಳು.

ಲಕ್ಷಣಗಳು : ತಲೆ ಹಾವಿನ ತಲೆಯಂತೆ ತ್ರಿಕೋನಾಕಾರವಾಗಿದೆ. ಮೂತಿ ಚೂಪಾಗಿದೆ. ಆದ್ದರಿಂದ ಈ ಮೀನನ್ನು ಹಾವಿನ ತಲೆ ಮೀನು ಎಂದು ಹೆಸರಿಸಿದ್ದಾರೆ. ಬೆನ್ನಿನ ಮತ್ತು ಗುದ ಈಜುರೆಕ್ಕೆಗಳು ಉದ್ದವಾಗಿದ್ದರೂ ಬಾಲದ ಈಜುರೆಕ್ಕೆಯೊಂದಿಗೆ ಕೂಡಿಕೊಂಡಿಲ್ಲ. ಭುಜದ ಈಜು ರೆಕ್ಕೆಗಳು ಸೊಂಟದ ಈಜುರೆಕ್ಕೆಗಳ ಮೇಲಿವೆ. ಪಾರ್ಶ್ವ ಪಂಕ್ತಿ ವಿಚ್ಛಿನ್ನ ವಾಗಿದೆ. ಚರ್ಮದ ಮೇಲೆ ತೀನಾಯಿಡ್ ರೀತಿಯ ಹುರುಪೆಗಳ ಹೊದಿಕೆ ಉಂಟು.

ಸಂತಾನಾಭಿವೃದ್ಧಿ : ಮಳೆಗಾಲ, ಹೆಚ್ಚಾಗಿ ಮುಂಗಾರು ಕಾಲದಲ್ಲಿ

ಸ್ವಭಾವ : ಇದು ವಾಸಿಸುವ ನೀರಿನ ತಾಣಗಳಲ್ಲಿ ನೀರು ಕಡಿಮೆಯಾದಾಗ, ಅಥವಾ ಅದು ಒಣಗಿದಾಗ ಒಂದು ನೀರು ತಾಣದಿಂದ ಇನ್ನೊಂದಕ್ಕೆ ವಲಸೆ ಹೋಗುತ್ತದೆ. ಇದು ಗಾಳಿಯನ್ನು ಉಸಿರಾಡಬಲ್ಲದು ಎನ್ನುವುದು ವಿಶೇಷ ಲಕ್ಷಣ ಮತ್ತು ಇದರ ವಸತಿಗೆ ಹೊಂದಿ ಕೊಳ್ಳುವ ಪ್ರವೃತ್ತಿಗೆ ಉದಾಹರಣೆ, ಕಿವಿರು ಕೋಣೆಯ ಊರ್ಧ್ವ ಭಾಗವು ರಕ್ತನಾಳ ಪೂರಿತವಾಗಿದ್ದು ಅಲ್ಲಿಗೆ ಒಳಬರುವ ಗಾಳಿಯಿಂದ ಆಮ್ಲಜನಕವನ್ನು ಹೀರಿಕೊಳ್ಳುಬಲ್ಲ ಶಕ್ತಿ ಇದೆ. ಈ ಭಾಗವು ಪುಪ್ಪುಸಗಳಂತೆ ವರ್ತಿಸುತ್ತದೆ. ಅಷ್ಟೇನು ರುಚಿ ಇಲ್ಲದ ಮೀನು, ಆದರೆ ಇದು ದುಬಾರಿ ಅಲ್ಲವಾದ್ದರಿಂದ ಬಡವರಿಗೆ ಸುಲಭವಾಗಿ ದೊರಕುವ, ಅವರು ಇಷ್ಟಪಡುವ ಬಡವರ ಬಂಧು.

—-

ಗಣ : ಚೆನ್ನಿಫಾರ್ಮಿಸ್
ಕುಟುಂಬ : ಚೆನ್ನಿಡೀ
ಉದಾ : ದೈತ್ಯ ಹಾವು ತಲೆ ಮೀನು (Giant snake head), ಹೂವಿನ ಮರಲೆ, ಮದಿಂಚೆ, ಅವಿಯು
ಶಾಸ್ತ್ರೀಯನಾಮ : ಚೆನ್ನ ಮಾರುಲಿಯಸ್ (Chenna marulius)

043_69_PP_KUH

ವಿತರಣೆ : ದೊಡ್ಡ ಕೆರೆಗಳು, ನದಿಗಳಲ್ಲಿ ಸಮಾನ್ಯವಾಗಿ ವಾಸ. ಹೆಚ್ಚು ಆಳವಿಲ್ಲದ ನೀರಿನಲ್ಲಿ ಇರುತ್ತವೆ.

ಗಾತ್ರ : ೧೨೨ ಸೆಂ. ಮೀ. ಉದ್ದ ಬೆಳೆಯುತ್ತದೆ. ಸಾಧಾರಣ ೪೬ ಸೆಂ. ಮೀ ಉದ್ದವಿರುತ್ತದೆ.

ಆಹಾರ : ಜಲಸಸ್ಯಗಳು, ಮಾಂಸಾಹಾರಿಯೂ ಹೌದು ಮುಸುರೆ, ಕಪ್ಪೆ ಕೀಟಗಳನ್ನು ತಿನ್ನುತ್ತದೆ.

ಲಕ್ಷಣಗಳು : ಉದ್ದವಾದ ದುಂಡು ದೇಹ. ಇದರ ತಲೆ ಹಾವಿನ ತಲೆಯಂತಿದೆ ಎಂದೇ ಇದನ್ನು ಹಿಂದೆ ಹಾವಿನ ತಲೆ ಮೀನು ಎಂಬ ಅರ್ಥ ಬರುಬ ಓಫಿಯೋಸಿಫಾಲಸ್ ಜಾತಿಯ ಹೆಸರಿನಿಂದ ಕರೆಯಿತ್ತಿದ್ದರು. ಇತ್ತೀಚಿಗಷ್ಟೇ ವರ್ಗೀಕರಣ ತಜ್ಞರು ಈ ಜಾತಿಗೆ ಚೆನ್ನ ಎಂಬ ಹೆಸರು ಕೊಟ್ಟಿದ್ದಾರೆ. ಇದಕ್ಕೆ ಸಾಧಾರಣ ಗಾತ್ರದ ಕಣ್ಣುಗಳಿವೆ. ಬಾಯಿ ದೊಡ್ಡದು. ತಲೆಯ ಮೇಲೆ ಅನೇಕ ಕುಳಿಗಳಿವೆ. ಈ ಕುಳಿಗಳು ಹೆಚ್ಚು ಕಡಿಮೆಶ್ವಾಸಕೋಶಗಳಂತೆ ಗಾಳಿಯನ್ನು ಉಸಿರಾಡಲು ನೆರವಾಗುತ್ತವೆ. ಈ ಅನುಕೂಲದಿಂದಾಗಿ ಈ ಮೀನು ನೀರಿನಿಂದ ಹೊರಗೂ ಕೆಲಕಾಲ ಬದುಕಿರಬಲ್ಲದು. ಕೆಳಗಿನ ದವಡೆಯಲ್ಲಿ ೭ ರಿಂದ ೮ ಕೋರೆ ಹಲ್ಲುಗಳಿವೆ. ಈ ಕೋರೆ ಹಲ್ಲುಗಳ ಮುಂದೆ ಮೊಳಕೆ ಹಲ್ಲು ಸಾಲುಗಳಿವೆ. ಇದರ ಭುಜದ ಈಜುರೆಕ್ಕೆಗಳು ಸಾಧಾರಣ ಗಾತ್ರದವು. ಗುಲಾಬಿ ಎಸಳಿನಾಕಾರದ ಹುರುಪೆಗಳಿವೆ. ಪಾರ್ಶ್ವ ಪಂಕ್ತಿಯಲ್ಲಿ ೬೦ ರಿಂದ೭೦ ಹುರುಪೆಗಳಿವೆ. ನಾಲ್ಕು ಜೊತೆ ಕಿವಿರು ರಂಧ್ರಗಳುಂಟು.

ದೇಹದ ಮೇಲ್ಭಾಗ ಬೂದುಮಿಶ್ರಿತ ಹಸಿರು ಬಣ್ಣ ತಳಭಾಗ ಮಾಸಲು ಬಿಳುಪು. ಪಕ್ಕೆಗಳಲ್ಲಿ ೫ ರಿಂದ ೬ ಅಂಡಾಕಾರದ ದಟ್ಟ ಮಾಸಲು ಹಳದಿ ಮತ್ತು ಕೆಂಪು ಛಾಯೆಯ ಮಚ್ಚೆಗಳಿವೆ. ದೇಹದ ಮೇಲೆಲ್ಲಾ ಹರಡಿದಂತೆ, ಬೆನ್ನು ಮತ್ತು ಗುದ ಈಜುರೆಕ್ಕೆಗಳ ಮೇಲೂ ಬಿಳಿ ಮಚ್ಚೆಗಳಿವೆ. ಮಚ್ಚೆಗಳು ದೇಹದ ಹಿಂತುದಿಯ ಕಡೆಗೆ ಹೆಚ್ಚು ಕೇಂದ್ರೀಕೃತವಾಗಿವೆ. ಜೋಡು ಈಜುರೆಕ್ಕೆಗಳು ಮಾಸಲು ಕೆಂಪು ಛಾಯೆಯ ಬಣ್ಣ ಹೊಂದಿವೆ. ಬಾಲದ ಈಜುರೆಕ್ಕೆಯ ಮೇಲೆ ಒಡೆದ ಸಾಲುಗಳಂತೆ ಹರಡಿದ ಬಿಳಿಯ ಮಚ್ಚೆಗಳಿವೆ. ಮರಿಗಳಲ್ಲಿ ಕಣ್ಣಿನ ಹಿಂಭಾಗದಿಂದ ಬಾಲದ ತುದಿಯವರೆಗೆ, ಬಾಲದ ಈಜುರೆಕ್ಕೆಯ ನಡುವಿನವರೆಗೆ ಕಿತ್ತಳೆ ಬಣ್ಣದ ಪಟ್ಟಿ ಇರುತ್ತದೆ.

ಸಂತಾನಾಭಿವೃದ್ಧಿ : ಈ ಮೀನುಗಳು ವರ್ಷವಿಡಿ ಸಂತಾನೋತ್ಪತ್ತಿ ನಡೆಸುತ್ತವಾದರೂ ಮಳೆಗಾಲದಲ್ಲಿ ಹೆಚ್ಚು ಮೊಟ್ಟೆಗಳನಿಡುತ್ತವೆ. ಹೆಣ್ಣು ಮೀನು ಸಂತಾನ ರಕ್ಷಣೆಯ ಸ್ವಭಾವ ತೋರುತ್ತದೆ. ಮೊಟ್ಟೆಗಳನ್ನು ಗೂಡಿನಲ್ಲಿಟ್ಟು ಕಾದು ರಕ್ಷಿಸುತ್ತದೆ. ಒಂದೆರಡು ದಿನಗಳಲ್ಲಿ ಮೊಟ್ಟೆ ಒಡೆದು ಮರಿಗಳು ಹೊರಬರುತ್ತದೆ. ಒಂದು ಅಡಿ ಉದ್ದ ಬೆಳೆಯುವಷ್ಟರಲ್ಲಿ ಲಿಂಗಪ್ರೌಡತನಗಳಿಸುತ್ತವೆ.

ಸ್ವಭಾವ : ದಕ್ಷಿಣ ಭಾರತದಲ್ಲಿ ನೀರಾವರಿ ಕೊಳಗಳಲ್ಲಿ ಇದನ್ನು ಸಾಕುತ್ತಾರೆ. ಇದರ ಮಾಂಸಾಹಾರಿ ಸ್ವಭಾವದಿಂದ, ಕೊಳೆದ ಇತರ ಮೀನುಗಳನ್ನು ತಿನ್ನಬಹುದೆಂಬ ಭಾವನೆಯಿಂದ ಜಲಕೃಷಿ ಕೈಗೊಳ್ಳುವವರು ಇದನ್ನು ವರ್ಜಿಸುತ್ತಾರೆ.

ಈ ಜಾತಿಯ ಇನ್ನೊಂದು ಬಳಕೆಯ ಉದಾಹರಣೆ
ಪಟ್ಟೆ ಹಾವು ತಲೆ ಮೀನು (Striped or banded snake head)
ಶಾಸ್ತ್ರೀಯನಾಮ : ಚೆನ್ನ ಸ್ಟ್ರೆಯೇಟಸ್ (Channa striatus)

ವಿತರಣೆ : ಭಾರತದಲ್ಲಿ ಎಲ್ಲೆಡೆ ಸಾಮಾನ್ಯವಾಗಿ ದೊರಕುತ್ತದೆ. ಸಿಹಿನೀರಿನ ಕೊಳ, ನದಿ, ಕೆರೆಗಳು, ಹುಲ್ಲು ಜೊಂಡು ಕೆರೆಗಳು, ಬತ್ತದ ಗದ್ದೆಗಳಲ್ಲಿ ವಾಸಿಸುತ್ತದೆ.

ಗಾತ್ರ : ೬೦ ರಿಂದ ೭೫ ಸೆಂ. ಮೀ. ಉದ್ದ ಬೆಳೆಯುತ್ತದೆ. ಸಾಮಾನ್ಯ ಗಾತ್ರ ೩೦ ರಿಂದ ೪೦ ಸೆಂ. ಮೀ.

ಆಹಾರ : ಚೆನ್ನ ಮಾರುಲಿಯಸ್ ನಂತೆಯೇ

ಲಕ್ಷಣಗಳು : ಕೆಳದವಡೆಯಲ್ಲಿ ೪ ರಿಂದ ೭ ಕೋರೆ ಹಲ್ಲುಗಳಿವೆ. ಇಲ್ಲಿಯೂ ಮೊಳಕೆ ಹಲ್ಲುಗಳಿವೆ. ಪಾರ್ಶ್ವ ಪಂಕ್ತಿಯಲ್ಲಿ ೫೦ ರಿಂದ ೫೭ ಹುರುಪೆಗಳಿರುತ್ತವೆ. ದೇಹದ ಮೇಲೆ ಓರೆಯಾಗಿ ಹರಡಿದ, ನಡುಭಾಗದಿಂದ ಬೆನ್ನಿನ ಅಂಚು ಮತ್ತು ಹೊಟ್ಟೆ ಭಾಗದ ಅಂಚಿನ ಕಡೆಗೆ ಹರಡಿದ ಕಡು ಹಸಿರು ಪಟ್ಟಿಗಳಿವೆ. ಇದರಿಂದಲೇ ಇದಕ್ಕೆ ಪಟ್ಟೆ ಹಾವು ಮೀನೆಂಬ ಸಾಮಾನ್ಯ ಹೆಸರು. ಬೆನ್ನಿನ ಮತ್ತು ಗುದ ಈಜುರೆಕ್ಕೆಗಳ ಮೇಲೂ ಪಟ್ಟಿಗಳಿವೆ. ಮೂತಿಯ ತುದಿಯಿಂದ ಕಿವಿರು ಕವಚದವರೆಗೆ ಓರೆಯಾಗಿ ಹರಡಿದ ಪಟ್ಟಿ ಇದೆ.

ಸಂತಾನಾಭಿವೃದ್ಧಿ : ೩೦ ಸೆಂ. ಮೀ. ಉದ್ದ ಬೆಳೆಯುತ್ತಿದ್ದಂತೆ ಎರಡು ವರ್ಷ ವಯಸ್ಸಾದಂತೆ ಹೆಣ್ಣು ಲಿಂಗ ಪ್ರೌಡತನಗಳಿಸಿ ಮೊಟ್ಟೆ ಇಡಲು ಆರಂಭಿಸುತ್ತದೆ. ಕೆಲವು ನೂರರಿಂದ ಸಾವಿರಕ್ಕೂ ಮೇಲ್ಪಟ್ಟು ಸಂಖ್ಯೆ ಮೊಟ್ಟೆಗಳನ್ನಿಡುತ್ತದೆ. ಇದು ಬಹಳ ಜನಪ್ರಿಯವಾದ ಆಹಾರ ಮೀನು ಇದರ ಮಾಂಸ ಗಟ್ಟಿ ರುಚಿ ಮತ್ತು ಹೆಚ್ಚು ಕಡಿಮೆ ಮೂಳೆ ರಹಿತ.

—-

ಗಣ : ಪ್ಲೂರೊನೆಕ್ಟಫಾರ್ಮಿಸ್ (Pleuronectiformes)
ಕುಟುಂಬ : ಪ್ಲೂರೊನೆಕ್ಟೆಡೀ (Pleuronectidae)
ಉದಾ : ಚಪ್ಪಟೆ ಮೀನು (Flast fish) ಸೆಟ್ಟೊಡಿಡೀ(Psettodidae)
ಶಾಸ್ತ್ರೀಯನಾಮ : ಪ್ಲೊರೋನೆಕ್ಟಿಸ್
ಇರುಮಿ (Pleuronectis erumi)

044_69_PP_KUH

ವಿತರಣೆ : ಕಡಲ ತಡಿವಾಸಿ. ಉಷ್ಣ ವಲಯ ಮತ್ತು ಸಮಶೀತೋಷ್ಣ ವಲಯದ ಕಡಲುಗಳಲ್ಲಿ ದೊರಕುವುದು.

ಗಾತ್ರ : ಸಾಧಾರಣ ಗಾತ್ರದ ಮೀನುಗಳು. ೬ ರಿಂದ ೮ ಅಂಗುಲ ಉದ್ದ ಇರುತ್ತವೆ.

ಆಹಾರ : ಕಡಲ ತಳದ ಸೂಕ್ಷ್ಮಜೀವಿಗಳು ಕಡಲ ಮೇಲಿನ ಸ್ತರಗಳಿಂದ ಸತ್ತು, ಕೊಳೆತು ತಳಕ್ಕೆ ಮುಳುಗುವ ಜೀವಿ ಭಾಗಗಳು ವಿಸರ್ಜಿತ ವಸ್ತುಗಳು ಇತ್ಯಾದಿ.

ಲಕ್ಷಣಗಳು : ದೇಹ ಅಸಮಮಿತಿಯನ್ನು ಪ್ರದರ್ಶಿಸುತ್ತದೆ. ದೇಹವು ಓರೆಯಾಗಿ ಊರ್ಧ್ವ ಪಾರ್ಶ್ವದಿಂದ ಅಧೋಪಾರ್ಶ್ವದ ಕಡೆಗೆ ತಟ್ಟಿದಂತೆ ಚಪ್ಪಟೆಯಾಗಿದೆ. ಆದುದರಿಂದ ಈ ಕುಟುಂಬದ ಮೀನುಗಳಿಗೆ ಚಪ್ಪಟೆ ಮೀನುಗಳೆಂಬ ಹೆಸರು ಬಂದಿದೆ. ಇದು ಕೆಳಗೆ ವಿರಮಿಸಿದಾಗ ಕಣ್ಣುಗಳೆರಡೂ ಒಂದೆಡೆ ಮೇಲಿರುತ್ತವೆ. ಕಡಲ ತಳವನ್ನು ತಲುಪುವ ಅಲ್ಪಸ್ವಲ್ಪ ಬೆಳಕನ್ನು ಗ್ರಹಿಸುವ ಯತ್ನವಿದ್ದಂತೆ ತೋರುತ್ತದೆ. ಮೊಟ್ಟೆಯಿಂದ ಹೊರಬಂದ ಮರಿ ಉಳಿದೆಲ್ಲ ಮೀನುಗಳಂತೆ ಮತ್ತು ಮೀನು ಮರಿಗಳಂತೆ ದ್ವಿಪಾರ್ಶ್ವ ಸಮಮಿತಿಯನ್ನೇ ತೋರುತ್ತದೆ. ಇದರ ಕಣ್ಣುಗಳು ತಲೆಯ ಪಾರ್ಶ್ವ ಭಾಗದಲ್ಲಿರುತ್ತವೆ. ಮೀನು ಬೆಳದಂತೆ, ತನ್ನ ಈಜುವ ಸ್ವತಂತ್ರ ಜೀವನವನ್ನು ತೊರೆದು ಕಡಲ ತಡಿ ವಾಸವನ್ನು ಆರಂಭಿಸಿದಾಗ ದೇಹ ಓರೆಯಾಗಿ ಚಪ್ಪಟೆಯಾಗುತ್ತದೆ ಮತ್ತು ಕಣ್ಣುಗಳು ಸ್ಥಳಾಂತರಗೊಂಡು ಒಂದೆಡೆ ಸೇರುತ್ತವೆ. ಉಳಿದೆಲ್ಲ ಲಕ್ಷಣಗಳು ಮೀನುಗಳಂತೆ. ಬಾಯಿ ಒಂದು ಪಕ್ಕದಲ್ಲಿವೆ, ಕಿವಿರು ರಂಧ್ರಗಳೂ ಪಕ್ಕಕ್ಕೆ ಜರುಗಿದೆ.

ದೇಹದ ಮೇಲೆ ಟೀನಾಯಿಡ್‌ಅಥವಾ ಸೈಕ್ಲಾಯಿಡ್‌ಹುರುಪೆಗಳ ಹೊದಿಕೆ ಇದೆ. ಬೆನ್ನಿನ ಮತ್ತು ಗುದ ಈಜುರೆಕ್ಕೆಗಳು ಉದ್ದವಾದರು ಮುಳ್ಳು ರಹಿತವಾಗಿವೆ. ಅವು ದೇಹದ ಅಂಚಿನಲ್ಲಿ ಅಂಚು ಕಟ್ಟಿದಂತೆ ಕಾಣುತ್ತವೆ. ಭುಜದ ಈಜುರೆಕ್ಕೆಗಳು ಸಣ್ಣವು ಮತ್ತು ಪಕ್ಕದಲ್ಲಿ ಎತ್ತರದಲ್ಲಿವೆ. ಮೂಳೆ ಮೀನುಗಳಿಗೆ ಸೀಮಿತವಾದ ವಾಯುಕೋಶ ಚಪ್ಪಟೆ ಮೀನುಗಳಲ್ಲಿ ಇಲ್ಲ. ಪ್ರಾಯಶಃ ಅಗತ್ಯ ಇಲ್ಲದಿರುವುದರಿಂದ ಕಳೆದು ಹೋಗಿರಬಹುದು. ಬಾಯಿ ಕಿರಿದು, ಬಾಲದ ಈಜುರೆಕ್ಕೆ ಚೆನ್ನಾಗಿ ಬೆಳೆದಿದೆ. ಇವು ಅಂಕುಡೊಂಕಾಗಿ ವಿಕಾರವಾಗಿ ಚಲಿಸುತ್ತವೆ.

ಇದು ಆಹಾರವಾಗಿ ಬಳಸುವ ಮೀನು, ವಾಣಿಜ್ಯ ದೃಷ್ಟಿಯಿಂದ ಮುಖ್ಯವಾದುದು.

—-

ಗಣ : ಪರ್ಸೀಫಾರ್ಮಿಸ್ (Perciformes)
ಕುಟುಂಬ : ಮುಗಿಲಿಡೀ (Mugilidae)
ಉದಾ : ಗೋಬಿ (Tank goby)
ಶಾಸ್ತ್ರೀಯನಾಮ : ಗ್ಲಾಸ್ಸೊಗೋಬಿಯಸ್
ಗಿಯುರಿಸ್‌(Glossogobius giuris)

ವಿತರಣೆ : ಮುಖ್ಯವಾಗಿ ಸಿಹಿನೀರು ವಾಸಿ. ಅಳಿವೆಗಳಲ್ಲಿ ಮತ್ತು ಕಡಲಿನಲ್ಲಿಯೂ ದೊರಕುತ್ತದೆ.

ಗಾತ್ರ : ೩೦ ಸೆಂ. ಮೀ. ಉದ್ದ ಬೆಳೆಯುತ್ತದೆ.

ಆಹಾರ : ಜಲಸಸ್ಯಗಳು ಮತ್ತು ತೇಲು ಜೀವಿಗಳು.

ಲಕ್ಷಣಗಳು : ದೇಹ ನೀಳವಾಗಿ ಚಪ್ಪಟೆಯಾಗಿದೆ. ಕಣ್ಣುಗಳು ಸಣ್ಣವು. ಜೀವಂತ ಮೀನು ಹಳದಿ-ಕಂದು, ಪಕ್ಕೆಗಳಲ್ಲಿ ಐದು ಕಪ್ಪು ಗುರುತುಗಳಿವೆ. ತಲೆಯ ಪಕ್ಕೆಗಳಲ್ಲಿ ಅಕ್ರಮ ನೇರಳೆ ಬಣ್ಣದ ಕಲೆಗಳಿವೆ. ಬೆನ್ನಿನ, ಭುಜದ ಮತ್ತು ಬಾಲದ ಈಜುರೆಕ್ಕೆಗಳು ಕಪ್ಪು ಚುಕ್ಕಿಗಳ ಕಲಸು ಮೇಲೋಗರವಾಗಿವೆ. ಎರಡನೆಯ ಬೆನ್ನಿನ ಈಜುರೆಕ್ಕೆ ಬುಡದ ಬಳಿ ಕಡುಕಪ್ಪು ಕಲೆ ಇದೆ.

ಸಂತಾನಾಭಿವೃದ್ಧಿ : ಮುಂಗಾರಿನಲ್ಲಿ ಮೊಟ್ಟೆ ಇಡುತ್ತದೆ.

ಸ್ವಭಾವ : ಮೀನುಗಾರಿಕೆ ದೃಷ್ಟಿಯಿಂದ ಈ ಮೀನು ಅಷ್ಟು ಪ್ರಮುಖವಲ್ಲ.

—-

ಗಣ : ಪರ್ಸೀಫಾರ್ಮಿಸ್ (Perciformes)
ಕುಟುಂಬ : ಅಂಬಾಸ್ಸಿಡೀ (Ambassidae)
ಉದಾ : ಸಿಪಾರಿ ಮೀನು (Seepari fish)
ಶಾಸ್ತ್ರೀಯನಾಮ : ಸೊಡೆಂಬಾಸ್ಸಿಸ್ ರಂಗ (Pseudembassis ranga)

045_69_PP_KUH

ಇದು ಪರ್ಸಿಫಾರ್ಮಿಸ್‌ಗಣದ ಲಕ್ಷಣಗಳನ್ನೆಲ್ಲ ತೋರುತ್ತದೆ. ಆದರೆ ಇದರ ಪಾರ್ಶ್ವ ಪಂಕ್ತಿಯಿಂದ ಬಾಗಿದೆ ಕಮಾನಿನಂತಿದೆ.

ದೇಹ ಅಂಡಾಕಾರ ಮತ್ತು ಚಪ್ಪಟೆ. ಈಜುರೆಕ್ಕೆಗಳಿಗೆ ಮುಳ್ಳುಗಳಿವೆ. ಕಣ್ಣುಗಳು ದೊಡ್ಡವು. ಬಾಯಿ ತುದಿಯಲ್ಲಿದೆ ಮತ್ತು ಅಗಲವಾಗಿದೆ. ಕೆಳ ತುಟಿ ದಪ್ಪ ಮತ್ತು ಮಾಂಸಲವಾಗಿದೆ. ಕಣ್ಣಿನ ಸುತ್ತ ಏಣಿದೆ. ಈ ಏಣು ಮೇಲಿನಿಂದ ಕೆಳದವಡೆಯವರೆಗೆ ವಿಸ್ತರಿಸುತ್ತದೆ.