ಗಣ : ಸಿಪ್ರಿನಿಫಾರ್ಮಿಸ್ (Cypriniformes)
ಕುಟುಂಬ : ಸಿಪ್ರಿನಿಡೀ (Cyprinidae)
ಉದಾ : ಕಾವೇರಿಯ ಬಿಳಿಯ ಕಾರ್ಪ (Cauvery white carp)
ಶಾಸ್ತ್ರೀಯ ನಾಮ : ಸಿಪ್ರಿನಸ್
ಸಿರ್ಹೊಸಸ್(Cyprinus cirrhosus)

ವಿತರಣೆ : ಗೋದಾವರಿಯಿಂದ ಕಾವೇರಿಯವರೆಗೆ ಬಂಗಾಳ ಕೊಲ್ಲಿ ಸೇರುವ ನದಿಗಳು ಮತ್ತು ಅವುಗಳ ಉಪನದಿಗಳು.

ಗಾತ್ರ : ೨೫ ರಿಂದ ೩೦ ಸೆಂ. ಮೀ. ಉದ್ದ, ೩೩೦ ಗ್ರಾಂ ತೂಕ. ಒಂದು ವರ್ಷ ವಯಸ್ಸಿಗೆ ೬೧ ಸೆಂ. ಮೀ. ಉದ್ದ ಮತ್ತು ೧ ರಿಂದ ೨ ಕೆ.ಜಿ. ತೂಕ ಬೆಳೆಯುತ್ತದೆ.

ಆಹಾರ : ಜಲಸಸ್ಯಗಳು ಮತ್ತು ತೇಲು ಜೀವಿಗಳು. ಮುಖ್ಯವಾಗಿ ಆಲ್ಗಗಳು.

ಲಕ್ಷಣಗಳು : ದೇಹ ಉದ್ದವಾಗಿ, ತಲೆಗಿಂತ ದಪ್ಪನಾಗಿ ಇರುತ್ತದೆ. ಮೂತಿ ಬಾಯಿಯಿಂದ ಮುಂದಕ್ಕೆ ಚಾಚುವುದಿಲ್ಲ. ಮೂತಿಯ ಮೇಲೆ ಕೆಲವು ಸೂಕ್ಷ್ಮರಂಧ್ರಗಳಿವೆ. ಬಾಯಿ ಅಗಲ, ಕೆಳತುಟಿ ದಪ್ಪ. ಮೇಲ್ತುಟಿ ಸಾಪಾಟಾಗಿದೆ. ಎರಡು ಜೊತೆ ಚೆನ್ನಾಗಿ ಬೆಳೆದ ದಾಡಿ ಮೀಸೆ (ಬಾರ್ಬೆಲ್‌ಗಳು) ಗಳಿವೆ. ಹಿಂದಿನ ಜೊತೆ ಮುಂದಿನ ದಾಡಿ ಮೀಸೆ ಜೊತೆಗಿಂತ ಹೆಚ್ಚು ಉದ್ದ, ಗಂಟಲು ಗೂಡಿನಲ್ಲಿ ಮೂರು ಸಾಲು ಹಲ್ಲುಗಳಿವೆ. ಬೆನ್ನು ಈಜುರೆಕ್ಕೆ ಎತ್ತರವಾಗಿದೆ. ಬೆನ್ನಿನ ಈಜುರೆಕ್ಕೆಯ ಮುಂದಿನ ಕೆಲವು ರೆಕ್ಕೆಕಡ್ಡಿಗಳು ಕೆಲವೊಮ್ಮೆ ಉದ್ದವಾಗಿರುತ್ತವೆ. ಬಾಲದ ಈಜುರೆಕ್ಕೆ ಆಳವಾಗಿ ಕವಲೊಡೆದಿದೆ. ಪಾರ್ಶ್ವ ಪಂಕ್ತಿಯಲ್ಲಿ ೪೨ ರಿಂದ ೪೬ ಹುರುಪೆಗಳಿರುತ್ತವೆ. ಉಳಿದ ಹುರುಪೆಗಳು ಪಕ್ಕೆಗಳಲ್ಲಿ ಅಡ್ಡಡ್ಡವಾಗಿ ಹರಡಿವೆ.

ಮೇಲ್ಭಾಗ ಮತ್ತು ಪಕ್ಕೆಗಳು ಬಿಳಿ ಬಣ್ಣ, ತಳಭಾಗ ಮೊಬ್ಬು ಹಳದಿ ಅಥವಾ ಬಿಳುಪು. ಪಕ್ಕೆಯಲ್ಲಿನ ಹುರುಪೆಗಳ ಮೇಲೆ ಒಂದೊಂದಕ್ಕೂ ಒಂದು ನಡುವಿನ ಕೆಂಪು ಗುರುತಿದೆ. ಬೆನ್ನಿನ ಮತ್ತು ಬಾಲದ ಈಜು ರೆಕ್ಕೆಗಳು ಮೊಬ್ಬು, ಗುದ ಮತ್ತು ಭುಜದ ಈಜು ರೆಕ್ಕೆಗಳ ತುದಿ ಕಪ್ಪು.

ಸಂತಾನಾಭಿವೃದ್ಧಿ : ೨೦- ೨೫ ಸೆಂ. ಮೀ. ಉದ್ದ ಬೆಳೆಯುತ್ತಿದ್ದಂತೆಯೇ ಲೈಂಗಿಕ ಪ್ರಬುದ್ಧತೆಗಳಿಸುತ್ತದೆ. ಕೃತಕವಾಗಿ ಮೊಟ್ಟೆ ಇಡಲು ಪ್ರಚೋದಿಸಬಹುದು.

ಸ್ವಭಾವ : ತುಂಬಾ ಚಟುವಟಿಕೆಯ ಮೀನು. ಕೊಳಗಳಲ್ಲಿ ಚೆನ್ನಾಗಿ ಬೆಳೆದರೂ ಸಂತಾನೋತ್ಪತ್ತಿಗೆ ಜೋರಾಗಿ ಹರಿಯುವ ನೀರು ಬೇಕು. ಬಹಳ ಗಟ್ಟಿಯಾದ ಕಷ್ಟ ಸಹಿಷ್ಣು ಮೀನು. ಕಾವೇರಿ ಜಲಾನಯನ ಪ್ರದೇಶದ ಪ್ರಧಾನ ಮೀನು. ಕರೆಗಳಲ್ಲೂ ಸಾಕಬಹುದು. ಉತ್ತಮ ಗಾಳದ ಮೀನು. ಸಾಕಲು ಹೆಚ್ಚು ಇಷ್ಟಪಡುವ ಮತ್ತು ಹೆಚ್ಚು ಬೇಡಿಕೆ ಇರುವ ಮೀನು. ಒಂದು ವರ್ಷದಲ್ಲಿ ಸುಮಾರು ೩೮ ರಿಂದ ೪೧ ಸೆಂ. ಮೀ. ಉದ್ದ ಬೆಳೆಯುತ್ತದೆ.

—- 

ಗಣ : ಸಿಪ್ರಿನಿಫಾರ್ಮಿಸ್ (Cypriniformes)
ಕುಟುಂಬ : ಸಿಪ್ರಿನಿಡೀ (Cyprinidae)
ಉದಾ : ಲೋಹು/ಗೆಂಡೆಮೀನು/ರೋಹು/ಕನ್ನಡಿ ಮೀನು (Rohu)
ಶಾಸ್ತ್ರೀಯ ನಾಮ : ಲೇಬಿಯೊ ರೊಹಿಟ (Labeo rohita)

016_69_PP_KUH

ವಿತರಣೆ : ನದಿಗಳಲ್ಲಿ ವಾಸಿಸುತ್ತದೆ. ಭಾರತದ ಪ್ರಧಾನ ಕಾರ್ಫ್‌ಗಳಲ್ಲಿ ಒಂದು. ಮೂಲತಃ ಉತ್ತರ ಭಾರತದ ನದಿಗಳಲ್ಲಿ ವಾಸಿಸುತ್ತಿದ್ದು ಈಗ ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತಕ್ಕೆ ತರಲಾಗಿದೆ. ಈ ಮೀನು ರಫ್ತಾಗುತ್ತಿದೆ.

ಗಾತ್ರ : ೧ ಮೀಟರ್ ಉದ್ದ ಬೆಳೆಯುತ್ತದೆ.

ಆಹಾರ : ನೀರಿನ ತಳದಲ್ಲಿನ ಆಹಾರ ಸೇವಿಸಲಿಷ್ಟಪಡುತ್ತದೆ. ಕೊಳೆಯುತ್ತಿರುವ ಸೊಪ್ಪು ಸೆದೆ, ಮುಂತಾದ ಸಸ್ಯಗಳನ್ನು ತಿನ್ನುತ್ತದೆ.

ಲಕ್ಷಣಗಳು : ಸಾಧಾರಣ ಉದ್ದ ಬೆಳೆಯುತ್ತದೆ. ಕುದುರಿನಾಕಾರದ ದೇಹ ಮೇಲೆ ಕಮಾನಿನಂತಿದೆ. ಮೂತಿ ಚಪ್ಪಟೆಯಾಗಿದೆ ಮತ್ತು ಬಾಯಿಯಿಂದ ಮುಂದಕ್ಕೆ ಚಾಚಿದೆ. ಕಣ್ಣುಗಳು ದೊಡ್ಡವು. ಬಾಯಿ ಸಣ್ಣದು ಮತ್ತು ಮೂತಿಯ ತಳದಲ್ಲಿದೆ. ತುಟಿಗಳು ದಪ್ಪ ಮತ್ತು ಕಪ್ಪಾಗಿವೆ. ಎರಡು ತುಟಿಗಳಲ್ಲೂ ಒಂದೊಂದು ಒಳ ಪಾಲಿ ಇದೆ. ಪಕ್ಕದ ಕಚ್ಚಿನ್‌ನಲ್ಲಿ ಮುಚ್ಚಿಹೋದ ಒಂದು ಜೊತೆ ದಾಡಿ ಮೀಸೆಗಳಿವೆ. ಬೆನ್ನು ಈಜುರೆಕ್ಕೆ ಬೆನ್ನಿನ ಮಧ್ಯಭಾಗದಲ್ಲಿದೆ. ಭುಜದ ಈಜುರೆಕ್ಕೆಗಳು ಸಣ್ಣವು. ಬಾಲದ ಈಜುರೆಕ್ಕೆ ಆಳವಾಗಿ ಕವಲೊಡೆದಿದೆ. ಹುರುಪೆಗಳು ಸಾಧಾರಣ ಗಾತ್ರದವು. ಪಾರ್ಶ್ವಪಂಕ್ತಿಯಲ್ಲಿ ೪೦ ರಿಂದ ೪೪ ಹುರುಪೆಗಳು ಸೇರಿವೆ. ಪಾರ್ಶ್ವಪಂಕ್ತಿಯಿಂದ ತಳಕ್ಕೆ ೬ ಮತ್ತು ಮೇಲಕ್ಕೆ ೧೨ ರಿಂದ ೧೬ ಹುರುಪೆ ಸಾಲುಗಳು ವ್ಯವಸ್ಥಿತವಾಗಿವೆ.

ಸಂತಾನಾಭಿವೃದ್ಧಿ : ಎರಡೇ ವರ್ಷಕ್ಕೆ ಲಿಂಗ ಪ್ರೌಢನತಗಳಿಸುತ್ತವೆ. ಮುಂಗಾರು ಆರಂಭಕ್ಕೆ ಇವುಗಳ ಸಂತಾನೋತ್ಪತ್ತಿ ಚಟುವಟಿಕೆ ಆರಂಭವಾಗುತ್ತದೆ. ಒಮ್ಮೆಗೆ ಹೆಣ್ಣು ಗಾತ್ರವನ್ನುನುಸರಿಸಿ ೨,೨೬,೦೦೦ ದಿಂದ ೨೭,೯೪,೦೦೦ ಮೊಟ್ಟೆಗಳನ್ನಿಡುತ್ತದೆ. ಮುಂಗಾರು ಕಾಲದಲ್ಲಿ ಇದರ ಮೊಟ್ಟೆಗಳನ್ನು ಸಂಗ್ರಹಿಸಿ ಕೆರೆ ಕೊಳಗಳಿಗೆ ವರ್ಗಾಯಿಸಿ ಸಾಕಬಹುದು. ಇದು ಬಹಳ ಜನಪ್ರಿಯ ಮೀನು. ಇದರ ಮೊಟ್ಟೆಗಳಿಗೆ ಅಪಾರ ಬೇಡಿಕೆ ಇದೆ. ಇದರ ಮಾಂಸ ತುಂಬಾ ರುಚಿ ಮತ್ತು ಹೆಚ್ಚು ಬೆಲೆ ದೊರಕುತ್ತದೆ. ಇದು ಕೆರೆಕೊಳಗಳಿಗಿಂತ ನದಿಗಳ ಹರಿಯುವ ನೀರಿನಲ್ಲಿ ಹೆಚ್ಚು ಚಟುವಟಿಕೆ ಯುಕ್ತವೂ ಮತ್ತು ಬಲಯುತವಾಗಿಯೂ ಇರುತ್ತದೆ.

ಸ್ವಭಾವ : ಇದನ್ನು ಇತರ ಜಾತಿಗಳೊಂದಿಗೆ ತಳಿಸಮ್ಮಿಶ್ರಣ ಮಾಡಲು ಬಳಸಿದ್ದಾರೆ. ಕಾಟ್ಲದೊಂದಿಗಿನ ಇದರ ಸಂಕರ ತುಂಬಾ ಯಶಸ್ವಿಯಾಗಿದೆ.

ಈ ಕುಟುಂಬದ ಇನ್ನೆರಡು ಜನಪ್ರಿಯ ಪ್ರಭೇಧಗಳಿವೆ.

೧. ಲೇ. ಕೇಂಟಿಕಸ್‌ : ಮೊಂಡು ಮೂತಿ ಮತ್ತು ಬೆನ್ನು ಈಜುರೆಕ್ಕೆ ಬುಡದ ಬಳಿ ಒಂದು ಡುಬ್ಬ ಇದೆ.

೨. ಲೇ. ನೈಗ್ರೆಸೆನ್ಸ್‌ : ಕುರ್ರಿಮೀನು, ಪಾರ್ಶ್ವ ಪಂಕ್ತಿಯಲ್ಲಿ ೩೮ ಹುರುಪೆಗಳಿವೆ.

—-

ಗುಣ : ಸಿಪ್ರಿನಿಫಾರ್ಮಿಸ್ (Cypriniformes)
ಕುಟುಂಬ : ಸಿಪ್ರಿನಿಡೀ (Cyprinidae)
ಉದಾ : ಮಚ್ಚಿಲು/ಕುರ್ರಿಮೀನು (Kalbasu/black rohu)
ಶಾಸ್ತ್ರೀಯ ನಾಮ : ಲೇಬಿಯೊ ಕಾಲ್ಬಾಸು (Labeo calbasu)

017_69_PP_KUH

ವಿತರಣೆ : ನದಿಗಳು ಮತ್ತು ಕೊಳಗಳು.

ಗಾತ್ರ : ೯೦ ಸೆ. ಮೀ. ಉದ್ದ.

ಆಹಾರ : ಪ್ರಮುಖವಾಗಿ ನೀರಿನ ತಳದಲ್ಲಿ ಆಹಾರ ತಿನ್ನುವ ಮೀನು, ಕೊಳತಿನಿ.

ಲಕ್ಷಣಗಳು : ದಪ್ಪನಾದ ದೇಹ, ಶಂಖುವಿನಾಕಾರದ ದೊಡ್ಡ ತಲೆ. ಉದ್ದಕಿಂತ ಹೆಚ್ಚು ದಪ್ಪನಾದ ತಲೆ. ಚಪ್ಪಟೆಯಾದ ಮತ್ತು ಚೂಪು ಮೂತಿ. ಮೂತಿಯ ಮೇಲೆ ಅನೇಕ ರಂಧ್ರಗಳಿವೆ. ಮೂತಿಯ ತಳದಲ್ಲಿರುವ ಬಾಯಿ, ಎರಡು ಜೊತೆ ದಾಡಿ ಮೀಸೆಗಳಿವೆ. ಬುಡ ಅಗಲವಾದ ಬೆನ್ನು ಈಜುರೆಕ್ಕೆ, ಬೆನ್ನಿನ ಮೇಲೆ ಮೂತಿ ಮತ್ತು ಬಾಲಗಳ ನಡು ಪ್ರದೇಶದಲ್ಲಿದೆ. ಆಳವಾಗಿ ಕವಲೊಡೆದ ಬಾಲದ ಈಜುರೆಕ್ಕೆ, ಸಾಧಾರಣ ಗಾತ್ರದ ಹುರುಪೆಗಳ ಹೊದಿಕೆ. ಪಾರ್ಶ್ವಪಂಕ್ತಿಯಲ್ಲಿ ೪೦ ರಿಂದ ೪೪ ಹುರುಪೆಗಳಿವೆ. ಸೊಂಟದ ಈಜುರೆಕ್ಕೆ,ಗೂ ಪಾರ್ಶ್ವಪಂಕ್ತಿಗೂ ನಡುವೆ ೫ ರಿಂದ ೬ ಸಾಲು ಹುರುಪೆಗಳಿವೆ. ಪಾರ್ಶ್ವಪಂಕ್ತಿಯ ಮೇಲೆ ಬೆನ್ನಿನ ಮೇಲು ತುದಿಯವರೆಗೂ ೧೫ ರಿಂದ ೧೬ ಸಾಲು ಹುರುಪೆಗಳಿವೆ.

ದೇಹದ ಮೇಲ್ಭಾಗ ಕಪ್ಪು ಹಸಿರು ಮತ್ತು ಕೆಳಭಾಗ ತೆಳುಬಣ್ಣ ಪಕ್ಕೆಗಳಲ್ಲಿ ಕಡುಕೆಂಪು ಅಥವಾ ಕೇಸರಿ ಬಣ್ಣದ ಚುಕ್ಕೆಗಳಿವೆ. ಈಜುರೆಕ್ಕೆಗಳ ಬಣ್ಣ ಕಪ್ಪು, ಬಾಲದ ಈಜುರೆಕ್ಕೆಯ ಮೇಲಿನ ಪಾಲಿಯ ಅಂಚು ಬಿಳುಪು.

ಸಂತಾನಾಭಿವೃದ್ಧಿ : ಕೊಳಗಳಲ್ಲಿ ಸಾಮಾನ್ಯವಾಗಿ ಸಂತಾನೋತ್ಪತ್ತಿ ನಡೆಸುವುದಿಲ್ಲ. ಆದರೆ ಪಿಟುಯಿಟರಿ ರಸಿಕೆಯಿಂದ ಮೊಟ್ಟೆ ಇಡಲು ಪ್ರಚೋದಿಸಬಹುದು.

ಸ್ವಭಾವ : ಭಾರತದ ಪ್ರಧಾನ ಕಾರ್ಪ್ ಗಳಲ್ಲಿ ಒಂದು. ವ್ಯಾಪಕವಾಗಿ ವಿತರಣೆಯಾಗಿದೆ. ಪ್ರಮುಖ ಆಹಾರ ಮೀನು. ಕೆಲವು ಕಡೆ ಇದನ್ನು ‘ಕಪ್ಪು ರೋಹು’ ಎಂದು ಕರೆಯುತ್ತಾರೆ. ಗಾಳ ಬಳಸಿ ಮೀನು ಹಿಡಿಯುವ ಆಟಕ್ಕೆ ಒಗ್ಗುವ ಮೀನು. ಇದನ್ನು ಇತರ ಮೀನು ಜಾತಿಗಳೊಂದಿಗೆ ಸಾಕಬಹುದು. ನದಿ, ಹೊಳೆಗಳ ಹರಿಯುವ ನೀರಿಗಿಂತ ಕೆರೆ ಕೊಳಗಳ ನಿಂತ ನೀರಿನಲ್ಲಿ ಚೆನ್ನಾಗಿ ಬೆಳೆಯುತ್ತದೆ. ಇದು ಉಪ್ಪು ನೀರಿನಲ್ಲಿಯೂ ಬದುಕಬಲ್ಲದು.

—-

ಗಣ : ಸಿಪ್ರಿನಿಫಾರ್ಮಿಸ್‌(Cypriniformes)
ಕುಟುಂಬ : ಸಿಪ್ರಿನಿಡೀ (Cyprinidae)
ಉದಾ : ಕುರಿ ಮೀನು
ಶಾಸ್ತ್ರೀಯ ನಾಮ : ಲೇಬಿಯೊ ನೈಗ್ರಿಸೆನ್ಸ್
(Labeo nigrescens)

018_69_PP_KUH

ವಿತರಣೆ : ಸಿಹಿನೀರು ಕೊಳ, ಹಳ್ಳ, ನದಿಗಳು.

ಗಾತ್ರ : ಮಧ್ಯಮ ಗಾತ್ರ.

ಆಹಾರ : ಜಲಸಸ್ಯಗಳು.

ಲಕ್ಷಣಗಳು : ಜಲಕೃಷಿಯೋಗ್ಯ ಮತ್ತು ಗಾಳದಿಂದ ಹಿಡಿಯುವ ಆಟಕ್ಕೆ ಯೋಗ್ಯವಾದ ಮೀನು.

—-

ಉದಾ : ಕುರಿಮೂತಿ ಮೀನು
ಶಾಸ್ತ್ರೀಯ ನಾಮ : ಲೇಬಿಯೊ ಕೊಂಟಿಯಸ್
(Labeo Kontius)

019_69_PP_KUH

—-

ಗಣ : ಸಿಪ್ರಿನಿಫಾರ್ಮಿಸ್ (Cypriniformes)
ಕುಟುಂಬ : ಸಿಪ್ರಿನಿಡೀ (Cyprinidae)
ಉದಾ : ಹಳದಿ ಮಶೀರ್/ಡೆಕ್ಕನ್
ಮಶೀರ್/ಮಶಿರ್ (Masheer)
ಶಾಸ್ತ್ರೀಯ ನಾಮ : ಟಾರ್ ಕುದ್ರೀ (Tor khudree)

020_69_PP_KUH

ವಿತರಣೆ : ಗೋದಾವರಿ ಮತ್ತು ಡೆಕ್ಕನ್‌ಪ್ರಸ್ಥ ಭೂಮಿಯ ಇತರ ನದಿಗಳ ಜಲಾನಯನ ಪ್ರದೇಶಗಳಲ್ಲಿ ಸಾಮಾನ್ಯ.

ಗಾತ್ರ : ೪೬ ಸೆ. ಮೀ. ಉದ್ದ ಬೆಳೆಯುತ್ತದೆ ಮತ್ತು ೨೨.೫ ಕೆ.ಜಿ. ತೂಕ ಇರುತ್ತದೆ.

ಆಹಾರ : ಜಲಸಸ್ಯಗಳು ಮತ್ತು ತೇಲು ಜೀವಿಗಳು.

ಲಕ್ಷಣಗಳು : ಉದ್ದವಾದ ದೇಹ, ದಪ್ಪ ತಲೆ, ಸಣ್ಣ ಕಣ್ಣುಗಳು, ಸಾಧಾರಣ ಗಾತ್ರದ ಬಾಯಿ. ಬಾಯಿಗೆ ಮಾಂಸಲವಾದ ತುಟಿಗಳಿವೆ. ಎರಡು ಜೊತೆ ಸಮ ಉದ್ದ ಗಾತ್ರದ ದಾಡಿ ಮೀಸೆಗಳಿವೆ. ಬೆನ್ನಿನ ಈಜುರೆಕ್ಕೆ ಮೋಟು. ದೇಹದ ಮೇಲಿನ ಹುರುಪೆಗಳು ದೊಡ್ಡವು. ಪಾರ್ಶ್ವ ಪಂಕ್ತಿಯಲ್ಲಿ ೨೫ ರಿಂದ ೨೭ ಹುರುಪೆಗಳಿರುತ್ತವೆ. ಮೂತಿಯ ಪಕ್ಕಗಳಲ್ಲಿ ಸಣ್ಣ ಗುಂಟುಗಳಿವೆ.

ದೇಹವು ಬೆಳ್ಳಿ ಬಿಳುಪಿನ ಹಿನ್ನೆಲೆಯಲ್ಲಿ, ಪಾರ್ಶ್ವಪಂಕ್ತಿಯ ಮೇಲ್ಭಾಗ ನೀಲ ವರ್ಣ ಮತ್ತು ಕೆಳಭಾಗ ತೆಳುಹಳದಿ. ಹೊಟ್ಟೆಯ ಭಾಗ ನೀಲಿಮಿಶ್ರಿತ ಬೂದು. ತಲೆಯ ಮೇಲ್ಭಾಗ ಆಲಿವ್‌ಹಸಿರು, ತಳಭಾಗ ಕೆನೆ ಹಳದಿ. ಕಣ್ಣುಗಳು ಕೆಂಪು. ಹುರುಪೆಗಳಿಗೆ ಕೆಂಪು ಮಿಶ್ರಿತ ಬೂದು ಬಣ್ಣದ ಅಂಚುಗಳಿವೆ. ಆದರೆ ಹುರುಪೆಗಳ ಉಳಿದ ಭಾಗ ಕೇವಲ ಬೂದು. ಬಾಲ ನೀಲಿ ಮಿಶ್ರಿತ ಬೂದು ಮತ್ತು ಕೆಲವು ಸಾರಿ ಬಾಲದ ತುದಿಯು ಹಳದಿ ಕೆಂಪು ಛಾಯೆ ತೋರಬಹುದು.

ಸಂತಾನಾಭಿವೃದ್ಧಿ : ಅಂಡಜ, ಮುಂಗಾರು ಸುಮಾರಿನಲ್ಲಿ ಮೊಟ್ಟೆ ಇಡುತ್ತದೆ. ಗಾತ್ರ, ತೂಕ ಮತ್ತು ಬೆಳವಣಿಗೆಯಿಂದಾಗಿ ಸಾಕಾಣಿಕೆಗೆ ಬಳಕೆಯಾಗಿರುವ ಮೀನು.

ಸ್ವಭಾವ : ತಮಿಳುನಾಡಿನಲ್ಲಿ ಇದು ೧೩ ಸೆಂ.ಮೀ. ಉದ್ದ ಮೀರಿ ಬೆಳೆಯುವುದಿಲ್ಲ. ಈ ಮೀನಿಗೆ ಔಷಧ ಗುಣವಿದೆಯೆಂದು ನಂಬುತ್ತಾರೆ. ೧೯೨೧ರಲ್ಲಿ ಮೊಟ್ಟಮೊದಲ ಬಾರಿಗೆ ಈ ಮೀನನ್ನು ದಕ್ಷಿಣ ಭಾರತದಲ್ಲಿ ನೀಲಗಿರಿಯ ಪೈಕಾರಕ್ಕೆ ತಂದು ಬಿಟ್ಟರು. ಅಲ್ಲಿ ಇಂದಿಗೂ ಚೆನ್ನಾಗಿ ಬೆಳೆಯುತ್ತಿದೆ. ಈ ಮೀನು ಗಾಳ ಹಾಕಿ ಹಿಡಿಯುವವರ ದೃಷ್ಟಿಯಿಂದ ಮುಖ್ಯ ಮತ್ತು ಉತ್ತಮ ಆಹಾರ. ಇದನ್ನು ಯಶಸ್ವಿಯಾಗಿ ಸಾಕುತ್ತಿದ್ದಾರೆ.

ಈ ಜಾತಿಯಲ್ಲಿ ಟಾರ್ ಪುಟಿಟೋರ (Tor putitora) ಮತ್ತು ಟಾರ್ ಟಾರ್ (Tor tor) ಎಂಬೆರಡು ಪ್ರಭೇಧಗಳಿವೆ.