ಗಣ : ಒಫಿಡಿಯ
ಕುಟುಂಬ : ಕೋಲುಬ್ರಿಡೀ (Colubridae)
ಉದಾ : ಇಲಿಭಕ್ಷಕ ಹಾವು ಅಥವಾ ಪಟ್ಟಿ ಹಾವು (Rat Snake or Banded racer)
ಶಾಸ್ತ್ರೀಯನಾಮ : ಆರ್ಜಿರೊಜಿನ ಫ್ಯಾಸಿಯೊಲೇಟಸ್ (Argyrogona faciolatus)

095_69_PP_KUH

ವಿತರಣೆ : ಪಶ್ಚಿಮ ಘಟ್ಟದಲ್ಲಿ ಸಾಮಾನ್ಯ. ಬಹುವಾಗಿ ವನವಾಸಿ. ಅಪರೂಪವಾಗಿ ಬಯಲು ಸೀಮೆ ಮತ್ತು ಊರುಗಳ ಬಳಿ ಕಾಣಿಸಿಕೊಳ್ಳಬಹುದು.

ಗಾತ್ರ : ದೊರಕಿರುವ ದತ್ತಾಂಶಗಳ ಪ್ರಕಾರ ಗರಿಷ್ಟ ಮಿತಿ ೧.೨೬ ಮೀಟರ್

ಆಹಾರ : ಸಣ್ಣ ಸಸ್ತನಿಗಳು, ವಿಶೇಷವಾಗಿ ಇಲಿಗಳು ಮತ್ತು ಕಪ್ಪೆಗಳು ಇದರ ಆಹಾರ.

ಲಕ್ಷಣಗಳು : ಉದ್ದವಾದ, ಸಾಕಷ್ಟು ದಪ್ಪವಾದ ದೇಹ. ಚಪ್ಪಟೆಯಾಕಾರವಾಗಿರದೆ ಎರಳೆಯಾಕಾರವಾಗಿದೆ. ಕುತ್ತಿಗೆ ಸಂಪೀಡಿತವಾಗಿದೆ, ಚಪ್ಪಟೆಯಾದ ತಲೆ ಕಣ್ಣುಗಳಿರುವ ಬಳಿ ತಲೆ ಅಗಲವಾಗಿದೆ. ಮೇಲಿನ ದವಡೆ ಪ್ರಧಾನವಾಗಿ ಮುಂದೆ ಚಾಚಿದೆ. ಚೂಪಾದ ಮೂಗು, ಮೋಟು ಬಾಲ, ನಯವಾದ ಹುರುಪೆಗಳ ಹೊದಿಕೆ.

ಕಂದು ಅಥವಾ ಆಲಿವ್ ಕಂದು ಬಣ್ಣ ಹೊಟ್ಟೆಯ ಭಾಗ ಹಳದಿಯಿಂದ ಗಾಢ ಕಂದು ಛಾಯೆ. ಎಳೆಯ ಹಾವುಗಳಲ್ಲಿ ಕಪ್ಪು ಬಿಳುಪು ಪಟ್ಟಿಗಳಿರುತ್ತವೆ. ಈ ಪಟ್ಟಿಗಳು ದೇಹದ ಮುಂಭಾಗದಲ್ಲಿ ಸ್ಪಷ್ಟವಾಗಿದ್ದು ನಡುದೇಹದಿಂದ ಹಿಂದಕ್ಕೆ ಕಣ್ಮರೆಯಾಗುತ್ತವೆ ಇಲ್ಲವೆ ಅಸ್ಪಷ್ಟವಾಗಿವೆ. ತಲೆಯ ಮೇಲೆ ಯಾವ ಗುರುತೂ ಇಲ್ಲ.

ಸಂತಾನಾಭಿವೃದ್ಧಿ : ಮಾರ್ಚ್ – ಜುಲೈ ತಿಂಗಳುಗಳ ಕಾಲದಲ್ಲಿ ಮೊಟ್ಟೆ ಇಡುತ್ತವೆ. ಒಂದು ಸಾರಿಗೆ ೫ ಮೊಟ್ಟೆಗಳನ್ನಿಡಬಹುದು. ೫೦ ದಿನಗಳ ನಂತರ ಮೊಟ್ಟೆ ಒಡೆದು ಮರಿ ಹೊರಬರುತ್ತದೆ. ಚಳಿಗಾಲದಲ್ಲಿಯೂ ಕೆಲವೊಮ್ಮೆ ಮೊಟ್ಟೆಗಳು ದೊರಕಿದ ನಿದರ್ಶನಗಳಿವೆ.

ಸ್ವಭಾವ : ಇವು ಇಲಿ, ಹಲ್ಲಿಗಳನ್ನು ತಿನ್ನುವುದು ಹೆಚ್ಚು ಇಲಿಗಳು ಮನುಷ್ಯನ ವಸತಿಯ ಬಳಿ ಹೆಚ್ಚಾದುದರಿಂದ ಈ ಹಾವುಗಳು ಅಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಇದು ಹಗಲು ಬೇಟೆಯಾಡುವ ಪ್ರಾಣಿ. ಮನುಷ್ಯನ ಸ್ವಭಾವವನ್ನು ಚೆನ್ನಾಗಿ ಅನುಭವದಿಂದ ಕಲಿತ ಹಾಗೆ ಕಾಣುತ್ತದೆ. ಆತನ ದಿನಚರಿಗೆ ಅಡ್ಡಿ ಬರುವುದಿಲ್ಲ. ಇದು ವಿಷರಹಿತ ಹಾವು. ಆದರೂ ಇದು ಕಚ್ಚಿದರೆ ನೋವಾಗುತ್ತದೆ. ಶತೃಗಳು ಎದುರಾದಾಗ ತನ್ನ ತಲೆಯನ್ನು ಹೆಡೆಯಂತೆ ಆಡಿಸಿ ಬುಸುಗುಟ್ಟುತ್ತದೆ. ಈ ಹಾವು ಯಾವ ಪರಿಸರಕ್ಕೆ ಬೇಕಾದರೂ ಸುಲಭವಾಗಿ ಹೊಂದಿಕೊಳ್ಳುವಂತೆ ಕಾಣುತ್ತದೆ. ಇದು ಸಾಮಾನ್ಯವಾಗಿ ಇಲಿಯ ಬಿಲಗಳು, ಹುತ್ತಗಳಲ್ಲಿ ಬತ್ತದ ಗದ್ದೆಗಳಲ್ಲಿ ಬತ್ತದ ಕಣಜಗಳ ಬಳಿ ಸಾಮಾನ್ಯವಾಗಿ ವಾಸಿಸುತ್ತದೆ.

—- 

ಗಣ : ಒಫಿಡಿಯ
ಕುಟುಂಬ : ಕೋಲುಬ್ರಿಡೀ (Colubridae)
ಉದಾ : ಕಂಚು ಬೆನ್ನು ಮರ ಹಾವು (Bronze Back kree snake)
ಶಾಸ್ತ್ರೀಯನಾಮ : ಡೆಂಡ್ರಲೆಫಿಸ್ ಟ್ರಿಸ್ಟಿಸ್ (Dendrelaphes tristis)

096_69_PP_KUH

ವಿತರಣೆ : ಕರ್ನಾಟಕವೂ ಸೇರಿದಂತೆ ಭಾರತದ ಬಹುಭಾಗಳಲ್ಲಿ ಮರಗಳ ಕೆಳಗಿನ ಕೊಂಬೆಗಳಲ್ಲಿ ಮೋಟು ಪೊದರುಗಳಲ್ಲಿ ಅಕಾಸಿಯದಂತಹ ಮುಳ್ಳುಮರಗಳು, ಈಚಲು, ತಾಳೆಮರಗಳು ಇದರ ವಾಸಸ್ಥಾನ.

ಗಾತ್ರ : ಸರಾಸರಿ ಉದ್ದ ೧ ಮೀ. ಗಂಡು ಹೆಣ್ಣಿಗಿಂತ ಚಿಕ್ಕದು. ಹೆಣ್ಣು ೧.೬೯ ಮೀ. ಉದ್ದ ಇರಬಹುದು.

ಅಹಾರ : ಇದರ ಮುಖ್ಯ ಆಹಾರ ಹಲ್ಲಿಗಳು ಮತ್ತು ಕಪ್ಪೆಗಳು. ಮರಗಳಲ್ಲಿ ವಾಸಿಸುವುದರಿಂದ ಸಾಮಾನ್ಯವಾಗಿ ಮರಗಪ್ಪೆಗಳು ಇದರ ಆಹಾರ. ಗುಡಿಸಲುಗಳಿಗೆ ಹೊದಿಸಿದ ಹುಲ್ಲಿನ ಚಾವಣಿಯಲ್ಲಿ ಗೌಳಿಗಳಿಗಾಗಿ ಹುಡುಕುವುದು ಸಾಮಾನ್ಯ ಸ್ವಭಾವ. ಇದರಿಂದಾಗಿ ಕೆಲವು ಸಲ ಮನುಷ್ಯನಿಂದ ಕಷ್ಟಗಳನ್ನು ಎದುರಿಸಬೇಕಾಗುವುದು.

ಲಕ್ಷಣಗಳು : ಉದ್ದವಾದ ತೆಳುವು ದೇಹ, ನಯವಾದ ಹುರುಪೆಗಳ ಹೊದಿಕೆ, ನೋಡುವುದಕ್ಕೆ ಸೊಬಗಿನ ಸುಂದರ ಹಾವು, ಸ್ಟಷ್ಟವಾಗಿ ಕಾಣುವ ಕತ್ತು ಇದೆ. ದೇಹದ ಬೆನ್ನು ಭಾಗ ತುಸು ಚಪ್ಪಟೆ. ತಳಭಾಗದ ಎರಡೂ ಪಕ್ಕಗಳಲ್ಲಿ ಏಣುಗಳಿವೆ. ಬಾಲ ಉದ್ದ ಮತ್ತು ತೆಳಪು, ದೇಹದ ಮೂರನೇ ಒಂದರಷ್ಟು ದಪ್ಪ. ಹೊಟ್ಟೆಯ ಭಾಗದಲ್ಲಿರುವಂತೆಯೆ ಬಾಲದ ಭಾಗದಲ್ಲಿಯೂ ತಳಿಗಿನ ಎರಡೂ ಪಕ್ಕಗಳಲ್ಲಿ ಏಣುಗಳಿವೆ.

ಬೆನ್ನಿನ ಭಾಗದ ಬಣ್ಣ ಕಡುಕೆಂಪು ಕಂದು ಅಥವಾ ಕಂದು ಕಂಚು. ತಳಭಾಗವು ತೆಳವು ಬಣ್ಣ ಕಡೆಯ ಹುರುಪೆ ಸಾಲು ಮತ್ತು ಅರ್ಧಸಾಲು ಹೊಟ್ಟೆಯ ಭಾಗ ಹಳದಿ. ಕತ್ತು ಮತ್ತು ದೇಹದ ಮುಂಭಾಗದಲ್ಲಿ ಜೋಡು ಕಪ್ಪು ಪಟ್ಟಿಗಳಿವೆ. ಪಕ್ಕೆಗಳು ಹಳದಿ ಅಥವಾ ಕಪ್ಪು. ನೆತ್ತಿಯ ಮೇಲೊಂದು ಕಪ್ಪು ಅಂಚಿನ ಹಳದಿಯ ಗುರುತಿದೆ. ಪ್ರತಿ ಹುರುಪೆಯ ತೆಳಗಿನ ಅರ್ಧಭಾಗ ಕಪ್ಪು ಅಂಚಿನ ತೆಳು ನೀಲಿ. ಈ ಭಾಗ ಹಾವು ಉದ್ರೇಕಗೊಂಡು ದೇಹವನ್ನು ಹಿಗ್ಗಿಸಿದಾಗ ಮಾತ್ರ ಕಾಣಿಸುತ್ತದೆ. ತಳಭಾಗ ಉದ್ದಕ್ಕೂ ಏಕ ರೀತಿಯಾಗಿ ಕೆನೆ ಹಳದಿ, ತೆಳು ಬೂದು, ಹಸಿರು ಅಥವಾ ನೀಲ ಮಿಶ್ರಿತ ಹಸಿರು. ತಲೆಯ ಭಾಗದಲ್ಲಿ ಪ್ರಕಾಶಿಕ ಪಟ್ಟಿಗಳಿವೆ. ಈ ಪಟ್ಟಿಗಳು ಹಾವಿನ ವಸತಿಯನ್ನುನುಸರಿಸಿ ಬದಲಾಗಬಹುದು.

ಸಂತಾನಾಭಿವೃದ್ಧಿ : ಸೆಪ್ಟೆಂಬರನಿಂದ ಫೆಭ್ರುವರಿ, ಆಗಷ್ಟ ತಿಂಗಳಲ್ಲಿ ಅಂಡವಾಹಿನಿಯಲ್ಲಿ ಮೊಟ್ಟೆಗಳಿರುವ ಹೆಣ್ಣು ಹಾವುಗಳು ದೊರಕುತ್ತವೆ. ಗರ್ಭಾವಸ್ಥೆ ೪-೬ ತಿಂಗಳುಗಳು. ಫೆಬ್ರುವರಿ ಮಾರ್ಚ್ ತಿಂಗಳುಗಳಲ್ಲಿ ಮೊಟ್ಟೆ ಇಡುತ್ತವೆ. ಒಂದು ಸಾರಿಗೆ ೬-೧೨ ಮೊಟ್ಟೆಗಳನ್ನಿಡುತ್ತವೆ.

ಇವು ಆಹಾರ ಹುಡುಕುವುದು ಹಗಲಿನಲ್ಲಿ ಶತೃಗಳು ಅಟ್ಟಿಸಿ ಕೊಂಡು ಬಂದಾಗ ಹಾರಿ ತಪ್ಪಿಸಿಕೊಳ್ಳುತ್ತವೆ.

ಸ್ವಭಾವ : ಇದೊಂದು ವಿಷದ ಹಾವೆಂಬ ತಪ್ಪು ಅಭಿಪ್ರಾಯವಿದೆ. ಇದರ ವಿಷಯದಲ್ಲಿ ಇನ್ನೂ ಅನೇಕ ಮೂಢನಂಬಿಕೆಗಳಿವೆ. ತಾನು ಕಚ್ಚಿದ ವ್ಯಕ್ತಿ ಸತ್ತನೆಂದು ಆತನ ಅಂತ್ಯಕ್ರಿಯೆ (ಸುಡುವುದು) ನೋಡಲು ಸ್ಮಶಾನದಲ್ಲಿ ಮರ ಏರಿಕುಳಿತು ಕಾಯುತ್ತದೆ ಎಂದು ಹೇಳುತ್ತಾರೆ. ಹಾಗೆಂದು ಹಾವಿನ ಕುತೂಹಲವನ್ನು ತೃಪ್ತಿಪಡಿಸಲು ಅಂತ್ಯಕ್ರಿಯೆಯ ನಾಟಕ ಆಡುವುದುಂಟು. ಪಕ್ಕೆಲಬುಗಳನ್ನು ಹಿಗ್ಗಿಸಿ, ಪಕ್ಕದಲ್ಲಿ ನೀಡಿ ಗಾಲಿಯಲ್ಲಿ ಜಾರಿ ಹಾರುತ್ತದೆ. ಕಡಿದ ವ್ಯಕ್ತಿಯ ದೇಹದಿಂದ ವಿಷಹೊರಬಂದು ವ್ಯಕ್ತಿ ಚೇತರಿಸಿಕೊಳ್ಳುತ್ತಾನೆಂಬ ಭಾವನೆ ಪ್ರಚಲಿತವಿದೆ. ಇದು ತನ್ನ ಬಾಲವನ್ನು ನೆಲದಲ್ಲಿ ತೂರಿಸಿ ಬಿಲ್ಲಿನಂತೆ ನೆಟ್ಟಗೆ ನಿಲ್ಲುತ್ತದೆ ಎಂಬ ತಪ್ಪು ಭಾವನೆಯೂ ಉಂಟು.

—- 

ಗಣ : ಒಫಿಡಿಯ
ಕುಟುಂಬ : ಕೋಲುಬ್ರಿಡೀ (Colubridae)
ಉದಾ : ಬಂಗಾರು ಮರ ಅಥವಾ ಹಾರುವ ಹಾವು (Golden tree or flying sanke)
ಶಾಸ್ತ್ರೀಯನಾಮ : ಕ್ರೈಸೊಪಿಲಿಯ ಆರ್ನೇಟ (Chrysopelea ornata)

097_69_PP_KUH

ವಿತರಣೆ : ಪಶ್ಚಿಮ ಘಟ್ಟದ ದಟ್ಟಕಾಡುಗಳ ದೊಡ್ಡ ಮರಗಳಲ್ಲಿ ಹೆಚ್ಚು ವಾಸ. ಕೆಲವೊಮ್ಮೆ ಮನುಷ್ಯ ವಸತಿಯ ಬಳಿಯೂ ಕಂಡು ಬರಬಹುದು.

ಗಾತ್ರ : ೧ ರಿಂದ ೧.೭೫ ಮೀಟರ್ (ಮೂರರಿಂದ ಐದುವರೆ ಅಡಿ) ಉದ್ದ ಇರುತ್ತದೆ. ಅಪರೂಪವಾಗಿ ೨೩ (೭ ಅಡಿ) ಮೀಟರ್ ಉದ್ದದ ಈ ಹಾವುಗಳೂ ದೊರಕಿವೆ.

ಆಹಾರ : ಕಪ್ಪೆಗಳು, ಗೌಳಿಗಳು, ಹಲ್ಲಿಗಳು, ಸಣ್ಣ ಪುಟ್ಟ ಹಕ್ಕಿಗಳು (ಬಹುಶಃ ಹಕ್ಕಿಯ ಮೊಟ್ಟೆಗಳನ್ನು ತಿನ್ನಬಹುದು), ಹಾರುವ ಹಲ್ಲಿಗಳು, ಬಾವಲಿಗಳು ಇದರ ಆಹಾರ.

ಲಕ್ಷಣಗಳು : ತೆಳುವು ದೇಹದ, ವೇಗವಾಗಿ ಚಲಿಸುವ ವರ್ಣರಂಜಿತ ಹಾರುವ ಹಾವು ಇದು. ಇದರ ನೋಟ ಒಂದು ರೀತಿಯ ರೋಮಾಂಚಕ ಅನುಭವ ! ತಲೆ ಚಪ್ಪಟೆ ಮತ್ತು ಬುಗುರಿಯಾಕಾರ. ಕಣ್ಣುಗಳು ದೊಡ್ಡವು ಮತ್ತು ಪಾಪೆ ಸಹ ದುಂಡು. ಕುತ್ತಿಗೆ ಭಾಗ ಸಂಪೀಡಿತವಾಗಿ ಸ್ಟಷ್ಟವಾಗಿ ಕಾಣಿಸುತ್ತದೆ. ಹೊಟ್ಟೆಯ ಅಂಚಿನಲ್ಲಿ ಹರಿತ ಏಣುಗಳಿವೆ. ಬಾಲ ದೇಹದ ಉದ್ದದಲ್ಲಿ ಕಾಲುಭಾಗದಷ್ಟಿದೆ.

ಬೆನ್ನಿನ ಮೇಲೆ ಕಪ್ಪು ಹಳದಿ ಅಥವಾ ಬಿಳಿಯ ಸುಂದರ ಅಡ್ಡಪಟ್ಟಿಗಳಿವೆ. ಜೊತೆಗೆ ಮಚ್ಚೆಗಳೂ, ಗುಲಾಬಿಯಾಕಾರದ ಗುರುತುಗಳೂ ಇವೆ. ಹೊಟ್ಟೆಯ ಭಾಗ ಹಸಿರು ಮತ್ತು ಹೊಟ್ಟೆಯ ಭಾಗದ ಹುರುಪೆಗಳ ಮೇಲೆ ಪಕ್ಕೆಗಳಲ್ಲಿ ಮಡಿಕೆಗಳಿವೆ. ಮರ ಹತ್ತುವಾಗ ಇವನ್ನು ಬಳಸಿಕೊಳುತ್ತವೆ. ತಲೆಯ ಮೇಲೂ ಕಡುಕಪ್ಪಾದ ಅಡ್ಡಪಟ್ಟಿಗಳಿವೆ. ಹುರುಪೆಗಳು ನಯವಾಗಿವೆ ಮತ್ತು ಹೊಳಪಾಗಿವೆ.

ಪಶ್ಚಿಮ ಘಟ್ಟಗಳ ಹಾರುವ ಹಾವುಗಳ ದೇಹದ ಮೇಲಿನ ಹುರುಪೆಗಳ ಮಧ್ಯೆ ಕಪ್ಪು ಗೆರೆ ಅಥವಾ ಚುಕ್ಕೆಗಳಿರುತ್ತವೆ. ಹುರುಪೆಗಳ ಅಂಚುಗಳೂ ಕಪ್ಪಾಗಿದ್ದು ಕ್ರಮವಾಗಿ ಬಿಡಿಸಿದ ರಂಗೋಲಿ ಅಥವಾ ರೇಖಾಚಿತ್ರದ ಪ್ರರೂಪಗಳಂತೆ ಕಾಣಿಸುತ್ತವೆ.

ಸಂತಾನಾಭಿವೃದ್ಧಿ : ಈ ಹಾವಿನ ಸಂತಾನೋತ್ಪತಿಯ ವಿಷಯವಾಗಿ ಹೆಚ್ಚು ತಿಳಿಯದು. ಆದರೆ ಮೊಟ್ಟೆ ಇರುವ ಹೆಣ್ಣು ಹಾವುಗಳು ಮೇ, ಜೂನ್ ತಿಂಗಳುಗಳಲ್ಲಿ ದೊರಕುತ್ತವೆ. ಅಂಡಾಕಾರದ ಮೊಟ್ಟೆಗಳ ಉದ್ದಗಲ ೬x೧೨ ಮಿ. ಮೀ.

ಸ್ವಭಾವ : ಸಾಮಾನ್ಯವಾಗಿ ಹಗಲು ಸಂಚರಿಸುವ ಹಾವು, ಸುಂದರವಾದ ಈ ಹಾವು ಶಾಖಾವಾಸಿ. ಕೆಲವು ಸಾರಿ ಹುಲ್ಲು ಮತ್ತು ಪೊದರುಗಳಲ್ಲಿಯೂ ಕಂಡುಬರಬಹುದು. ಗಂಭೀರವಾಗಿ ಮತ್ತು ವೇಗವಾಗಿ ಮರಗಳನ್ನೇರಬಲ್ಲದು. ರೆಂಬೆಗಳಿಂದ ರೆಂಬೆಗಳಿಗೆ ಮರದಿಂದ ಮರಕ್ಕೆ, ಕಾಂಡಗಳ ಮೇಲೆ ಸುಲಭವಾಗಿ ಓಡಾಡಬಲ್ಲದು. ತನ್ನನ್ನು ಅಟ್ಟಿಸಿಕೊಂಡು ಬರುವ ಶತ್ರುಗಳಿಂದ ತಪ್ಪಿಸಿಕೊಳ್ಳಲು ಹಾರುತ್ತದೆ. ಮರಗಳ ಎತ್ತರದ ತುದಿಯಿಂದ ಕೆಳಕ್ಕೆ, ಒಂದು ಮರದಿಂದ ಇನ್ನೊಂದಕ್ಕೆ ಗಾಳಿಯಲ್ಲಿ ಜಾರಿ ಹಾರಬಹುದು. ಹಾರುವಾಗ ತನ್ನಹೊಟ್ಟೆಯನ್ನು ಒಳಕ್ಕೆಳೆದುಕೊಂಡು ಟೊಳ್ಳುಮಾಡಿ, ಗಾಳಿ ತುಂಬಿಕೊಂಡು ಹಾರಲು ನೆರವಾಗುವಂತೆ ದೇಹದ ಬಾರವನ್ನು ಹಗುರ ಮಾಡಿಕೊಳ್ಳಬಹುದು. ತನ್ನ ಪಕ್ಕೆಲಬುಗಳನ್ನು ಪಕ್ಕಕ್ಕೆ ಚಾಚಿ, ದೇಹವನ್ನು ಚಪ್ಪಟೆಯಾಗಿಸಿ ಗಾಳಿಯಲ್ಲಿ ಜಾರಲು ಅನುಕೂಲ ಮಾಡಿಕೊಳ್ಳುತ್ತದೆ. ಇದು ಸುಮಾರು ೫೦ ಮೀಟರ್ ದೂರ ಒಮ್ಮೆಗೆ ಹಾರಬಹುದು. ೬ ಮೀಟರ್ ಎತ್ತರದಿಂದ ನೆಗೆದು ಹಾರಿ, ಜಾರಿ ನೆಲ ಮುಟ್ಟಬಹುದು. ನೆಗೆಯುವ ಮೊದಲು ರೆಂಬೆಗಳಿಗೆ ತಲೆಕೆಳಗಾಗಿ ನೇತುಬಿದ್ದು ದೇಹವನ್ನು ‘S’ ಆಕಾರದಲ್ಲಿ ಬಾಗಿಸಿ ಜಿಗಿಯುತ್ತದೆ. ಈ ಹಾವು ಹಾರುವುದನ್ನು ನೋಡಲು ಚೆಂದ. ಪಾಶ್ಚಿಮಾತ್ಯರು ಈ ಹಾವು ಹಾರುವುದನ್ನು ನೋಡಲು ಚೆಂದ. ಪಾಶ್ಚಿಮಾತ್ಯರು ಈ ಹಾವನ್ನು ಪ್ರೀತಿಯ ಪ್ರಾಣಿಯಾಗಿ ಸಾಕುತ್ತಾರೆ.

ಈ ಹಾವಿನ ಬಾಯಿಯ ಹಿಂಭಾಗದಲ್ಲಿ ವಿಷದಂತಗಳಂತಹ ಹಲ್ಲುಗಳಿವೆ. ಆದರೂ ಇದು ತನ್ನ ಆಹಾರ ಜೀವಿಯನ್ನು ಇಡಿಯಾಗಿ ನುಂಗುತ್ತದೆ. ಇದರ ಜೊಲ್ಲುರಸಕ್ಕೆ ತುಸು ವಿಷದ ಸ್ವಭಾವ ಇದ್ದಂತಿದೆ. ಇದರ ಸಹಾಯದಿಂದ ಆಹಾರ ಜೀವಿಯನ್ನು ನಿಶ್ಚೇತನಗೊಳಿಸಿ, ಅನಂತರ ನುಂಗುತ್ತದೆ.

—- 

ಗಣ : ಒಫಿಡಿಯ
ಕುಟುಂಬ : ಕೋಲುಬ್ರಿಡೀ (Colubridae)
ಉದಾ : ಹಾರುವ ಹಾವು (Flying snake) ಬಂಗಾರ ಮರ ಹಾವು (ಮಿಡಿ ನಾಗರ) (Golden tree snake)
ಶಾಸ್ತ್ರೀಯ ನಾಮ : ಕ್ರೈಸೊಪೀಲಿಯ ಒರ್ನೇಟಸ್
‌(Chrysopelea ornates)

098_69_PP_KUH

ವಿತರಣೆ : ಪಶ್ಚಿಮ ಘಟ್ಟದ ಗುಡ್ಡಗಾಡುಗಳಲ್ಲಿ ಸಮುದ್ರ ಮಟ್ಟದಿಂದ ೨೦೦೦ ಮೀ. ಎತ್ತರದವರೆಗೆ ದೊರಕುತ್ತವೆ.

ಗಾತ್ರ : ಸರಾಸರಿ ೧ ಮೀ. ಉದ್ದ. ಹುಟ್ಟಿದಾಗ ೨೦ ಸೆಂ. ಮೀ. ಉದ್ದ ಇರುತ್ತವೆ. ಗರಿಷ್ಠ ೧.೭೫ ಮೀ. ಉದ್ದ ಬೆಳೆಯಬಹುದು.

ಆಹಾರ : ಕಪ್ಪೆಗಳು, ಹಲ್ಲಿಗಳು, ಪುಟ್ಟ ಹಕ್ಕಿಗಳು ಮತ್ತು ಅವುಗಳ ಮೊಟ್ಟೆಗಳು.

ಲಕ್ಷಣಗಳು : ತೆಳು, ಉದ್ದ ಮತ್ತು ಅತ್ಯಂತ ವೇಗದಲ್ಲಿ ಚಲಿಸುತ್ತವೆ. ಬೆನ್ನು ಕಪ್ಪು, ಅದರ ಮೇಲೆ ಹಳದಿ ಅಥವಾ ಬಿಳಿ ಪಟ್ಟಿಗಳು ಮತ್ತು ಚುಕ್ಕೆಗಳು ಅಥವಾ ಕೆಂಪು ದುಂಡು ಕಲೆಗಳಿರುತ್ತವೆ. ಹೊಟ್ಟೆಭಾಗ ಹಳದಿಯಾಗಿದೆ. ಪಕ್ಕೆಗಳಲ್ಲಿ ಮಡಿಕೆಗಳು ಮತ್ತು ಹೊಟ್ಟೆಭಾಗದಲ್ಲಿ ಮರ ಹತ್ತಲು ಅನುಕೂಲವಾದ ಹುರುಪೆಗಳಿವೆ. ತಲೆಯ ಮೇಲೆ ಪ್ರಕಾಶವಾದ ಪಟ್ಟಿಗಳಿವೆ. ಅವು ವಾಸಿಸುವ ನೆಲಭಾಗವನ್ನನುಸರಿಸಿ ಬಣ್ಣ ಮತ್ತು ಪಟ್ಟಿ ಪ್ರರೂಪಗಳು ಬದಲಾಗಬಹುದು. ಹುರುಪೆಗಳು ನಯವಾಗಿದ್ದು ಗಾಜಿನಂತೆ ಹೊಳೆಯುತ್ತಿರಬಹುದು.

ಸಂತಾನಾಭಿವೃದ್ಧಿ : ಅಂಡಜಗಳು. ಹೆಚ್ಚು ವಿವರಗಳು ತಿಳಿಯದು.

ಸ್ವಭಾವ : ಇದು ದಟ್ಟ ಕಾಡುಗಳು ಮತ್ತು ದೊಡ್ಡ ಮರಗಳಲ್ಲಿ ಹೆಚ್ಚು. ಕೆಲವೊಮ್ಮೆ ಮನೆಗಳ ಬಳಿ ಹಾಗೂ ತೋಟಗಳಲ್ಲಿಯೂ ಕಂಡು ಬರಬಹುದು.

ದಿವಾಚರಿಗಳು, ಹಗಲಿನಲ್ಲಿ ಚಟುವಟಿಕೆ ತೋರುತ್ತವೆ. ನೆಗೆದು ಹಾರಿ ಶತ್ರುಗಳಿಂದ ತಪ್ಪಿಸಿಕೊಳ್ಳುತ್ತದೆ. ಎತ್ತರದ ರೆಂಬೆಗಳಿಂದ ನೆಗೆದು ಪಕ್ಕೆಯ ಮಡಿಕೆಗಳನ್ನು ಚಾಚಿ ಜಾರಿ ಕೆಳಗಿಳಿಯುತ್ತದೆ. ಇದು ಮರಗಳ ಕೊಂಬೆಯಿಂದ ಕೊಂಬೆಗೆ ಹಾರುವುದನ್ನು ನೋಡಲು ಆಕರ್ಷಕವಾಗಿರುತ್ತದೆ.

—- 

ಗಣ : ಒಫಿಡಿಯ
ಕುಟುಂಬ : ಕೋಲುಬ್ರಿಡೀ (Colubridae)
ಉದಾ : ಸಾಮಾನ್ಯ ಪಚ್ಚೆಬಳ್ಳಿ/ ಚಾಟಿ ಹಾವು (Common green vine / whip snake)
ಶಾಸ್ತ್ರೀಯ ನಾಮ : ಅಹೀಟುಲ್ಲ ನಸುಟಸ್
‌(Ahaitulla nasutus)

ವಿತರಣೆ : ಕರ್ನಾಟಕವೂ ಸೇರಿದಂತೆ, ವಾಯುವ್ಯ, ಗಂಗಾಜಮುನಾ ಜಲಾನಯನ ಪ್ರದೇಶ ಉಳಿದು ಮಿಕ್ಕೆಲ್ಲ ಭಾರತ ಭಾಗಗಳಲ್ಲಿ ಈ ಹಾವು ದೊರಕುತ್ತದೆ. ಬೆಟ್ಟಗುಡ್ಡಗಳ ಮಳೆ ಕಾಡುಗಳಿಂದ ಬಯಲು ಪ್ರದೇಶದವರೆಗಿನ ಸಣ್ಣಪುಟ್ಟ ಪೊದರುಗಳು, ತೋಟಗಳು, ತೋಪುಗಳು ಮತ್ತು ಜನವಸತಿಯ ಪ್ರದೇಶಗಳಲ್ಲಿ ಈ ಹಾವುಗಳನ್ನು ಕಾಣಬಹುದು.

ಗಾತ್ರ : ೧ ರಿಂದ ೨ ಮೀಟರನ ಉದ್ದ. ೭೫ ಸೆಂ. ಮೀ. ಉದ್ದದ ಒಂದು ಹಾವು ದೊರಕಿದೆ ದಾಖಲೆ ಇದೆ.

ಆಹಾರ : ಇದರ ಮುಖ್ಯ ಆಹಾರ ಹಲ್ಲಿಗಳು, ಇಲಿಗಳು, ಸಣ್ಣ ಹಕ್ಕಿಗಳು ಮತ್ತು ಅಪರೂಪವಾಗಿ ಕಪ್ಪೆಗಳು ಮತ್ತು ಇತರ ಹಾವುಗಳನ್ನು ತಿನ್ನುವುದುಂಟು.

ಲಕ್ಷಣಗಳು : ಈ ಹಾವುಗಳು ತೆಳವು ಮತ್ತು ಉದ್ದ. ತಲೆ ತುಂಬಾ ಚೂಪು, ಇದರಿಂದಾಗಿಯೆ ಬಳ್ಳಿ, ಚಾಟಿ ಹಾವುಗಳೆಂದು ಕರೆಯುವುದು, ಮೂತಿ ಉದ್ದವಾಗಿದೆ. ಕಣ್ಣುಗಳು ದೊಡ್ಡವು, ಅಡ್ಡನಾದ ಕಣ್ಣು ಪಾಪೆ. ಅದು ಬಂಗಾರದ ಬಣ್ಣ. ಇದರ ಎರಡು ಕಣ್ಣುಗಳು ಪರಸ್ಪರ ಹತ್ತಿರವಿರುವುದರಿಂದ ಒಂದು ವಸ್ತುವನ್ನು ಏಕಕಾಲದಲ್ಲಿ ನೋಡಬಲ್ಲ ಶಕ್ತಿ ಇವಕ್ಕೆ ಇರುವ ಸಾಧ್ಯತೆ ಉಂಟು. ನಾಲಿಗೆ ತೇಲವ ಕೆನ್ನೀಲಿ, ತುಟಿಗಳು ಬಿಳುಪು ಬಾಯಿ ಒಳಗೆ ಕೆನ್ನೀಲಿ ಉರುಳೆಯಾಕಾರದ ಬಾಲ, ಗಂಡು ಹಾವುಗಳಲ್ಲಿ ಬಾಲ ದೇಹದ ಉದ್ದದ ಮೂರನೆಯ ಒಂದು ಭಾಗದಷ್ಟಿರಬಹುದು. ಈ ಹಾವುಗಳಿಗೆ ಇತರೆ ಹಾವುಗಳಿಗಿಂತ ಉದ್ದವಾದ ಬಾಲವಿದೆ.

ಬೆನ್ನಿನ ಭಾಗ ಹಚ್ಚಹಸಿರು. ಹೊಟ್ಟೆಯ ಭಾಗವೂ ಹಸಿರಾದರೂ ತುಸು ತೆಳು ಹಸಿರು. ಎರಡೂ ಕಡೆ ಪಕ್ಕೆಗಳಲ್ಲಿ ಸ್ಪಷ್ಟವಾದ ಉದ್ದ ಪಟ್ಟಿಗಳಿವೆ. ಕೆನ್ನೆ ಮತ್ತು ಕುತ್ತಿಗೆಯ ಬಳಿ ಆಕಾಶನೀಲಿ ಮತ್ತು ಹಳದಿ ಗುರುತುಗಳಿರಬಹುದು. ಹುರುಪೆಗಳು ನಯವಾಗಿದ್ದರೂ ಹೊಳಪಿಲ್ಲ. ಕಣ್ಣು ಅಡ್ಡ ಓರೆಯಾಗಿವೆ. ಅದು ಈ ಹಾವಿನ ವಿಶಿಷ್ಟ ಲಕ್ಷಣಗಳಲ್ಲಿ ಒಂದು. ಇವುಗಳ ದೇಹದ ಬಣ್ಣ. ಇವು ವಾಸಿಸುವ ಮರಗಿಡಗಳೆಲೆಗಳ ನಡುವೆ ಮುಳುಗಿ ಮರೆಯಾಗುವುದರಿಂದ ಇದನ್ನು ಸುಲಭವಾಗಿ ಕಂಡುಹಿಡಿಯುವುದು ಕಷ್ಟ.

ಸಂತಾನಾಭಿವೃದ್ಧಿ : ಇವು ಅಂಡಜರಾಯುಜಗಳೆಂದು ಹೇಳುತ್ತಾರೆ. ವಾಸ್ತವಾಗಿ ಅಂಡಜಗಳು. ಮರಿಗಳು ಯಾವ ತೊಂದರೆಯೂ ಇಲ್ಲದೆ ಹುಟ್ಟುತ್ತವೆ. ಮಾರ್ಚ್‌ಮತ್ತು ಡಿಸೆಂಬರ್‌ತಿಂಗಳುಗಳಲ್ಲಿ ಮರಿಗಳು ಕಾಣಿಕೊಳ್ಳುತ್ತವೆ. ಗರ್ಭಾವಸ್ಥೆ ೧೭೨ ದಿನಗಳು, ಅಥವಾ ೬ ತಿಂಗಳು, ಸಾಮಾನ್ಯವಾಗಿ ಗಂಡು ಹೆಣ್ಣುಗಳ ಸಂಭೋಗ ಜೂನ್‌ತಿಂಗಳುಗಳಲ್ಲಿ ನಡೆಯುತ್ತದೆ. ಒಮ್ಮೆಗೆ ೩ ರಿಂದ ೨೨ ಮರಿಗಳನ್ನು ಹಾಕಬಹುದು.

ಸ್ವಭಾವ : ಇದು ವಿಷದ ಹಾವಾದರೂ ಉಗ್ರ ವಿಷದ ಹಾವಲ್ಲ. ಇದರ ವಿಷವೂ ನಾಗರ ಹಾವಿನ ವಿಷದಷ್ಟೇ ಉಗ್ರ, ಪ್ರಭಾವಶಾಲಿ. ಇದು ಮನುಷ್ಯನಲ್ಲಿ ಯಾವ ಪ್ರಭಾವವು ಆಗುವುದಿಲ್ಲ. ಕಚ್ಚಿದ ಭಾಗ ಊದುತ್ತದೆ, ಜೋವು ಹಿಡಿಯಬಹುದು. ಈ ಹಾವೂ ತನ್ನ ಬಣ್ಣ ಮತ್ತು ಆಕಾರದಿಂದ ಕಣ್ಣು ತಪ್ಪಿಸುತ್ತದೆ. ಇದು ಹೆಚ್ಚು ವೇಗವಾಗಿ ಚಲಿಸಬಲ್ಲದು. ಕೀಟಲೆ ಮಾಡಿದಾಗ ಕಚ್ಚುವಂತೆ ಬಾಯನ್ನು ಅಗಲವಾಗಿ ತೆರೆಯುತ್ತದೆ. ದೇಹ ಊದುತ್ತದೆ. ಇರುವ ವಿಷದಂತಿಗಳು ಬಾಯಿಯ ಹಿಂಭಾಗದಲ್ಲಿವೆ. ವಿಷದ ಪ್ರಭಾವ ಏರಿ ಆಹಾರ ಜೀವಿ ಸಾಯುವವರೆಗೆ ಅವನ್ನೇ ಕಚ್ಚಿ ಹಿಡಿದಿತುತ್ತದೆ. ಸಂತಾನೋತ್ಪತ್ತಿ ಕಾಲದಲ್ಲಿ ಗುಂಪು ಕೂಡುತ್ತವೆ. ಇದು ಕಚ್ಚುವ ಸ್ವಭಾವ ವಿಜಾತೀಯ. ಸಾಮಾನ್ಯವಾಗಿ ಕತ್ತಲಿನಲ್ಲಿಯೂ ಸ್ಪಷ್ಟವಾಗಿ ಕಾಣುವ ಕಣ್ಣುಗಳಿಗೆ ಬಡಿಯುತ್ತದೆ. ಈ ಸ್ವಭಾವದಿಂದಾಗಿ ಈ ಹಾವನ್ನು ತಮಿಳಿನಲ್ಲಿ ಕಣ್ಣುಕುಕ್ಕುವ (ಕಣ್ಣು ಕೋಟಿ ಪಾಂಬು) ಹಾವು ಎಂದು ಕರೆಯುತ್ತಾರೆ.