ಗಣ : ಒಫಿಡಿಯ
ಕುಟುಂಬ : ಇಲಾಫೀಡೀ
(Elaphidae)
ಉದಾ : ತೆಳು ಹವಳದ ಹಾವು (Slender Coral Snake)
ಶಾಸ್ತ್ರೀಯ ನಾಮ : ಕ್ಯಾಲ್ಲೊಫೀಸ್ ಮೆಲನುರಸ್ (Callophis melanuras)

103_69_PP_KUH

ವಿತರಣೆ : ಕರ್ನಾಟಕವೂ ಸೇರಿದಂತೆ ಭಾರತದ ಎಲ್ಲಡೆ ಕಡಲ ಈರದ ಕುರುಚಲು ಕಾಡಿನಲ್ಲಿ ಕಾಣಿಸಿಕೊಳ್ಳುತ್ತವೆ. ಇದರ ಒಂದು ಪ್ರಭೇದ, ಬಿಬ್ರೋನ್ಸ್ (bibrons) ಪಶ್ಚಿಮ ಘಟ್ಟಗಳಲ್ಲಿ ದೊರಕುತ್ತದೆ. ಇದು ಕಡಲ ತೀರದಿಂದ ೧೦೦೦ ಮೀ. ಎತ್ತರದವರೆಗೆ ಕಂಡುಬರುತ್ತದೆ.

ಗಾತ್ರ : ೨೫ ರಿಂದ ೩೫ ಸೆಂ.ಮೀ. ಉದ್ದ ಬೆಳೆಯುತ್ತವೆ. ದೇಹ ೫ ಸೆಂ.ಮೀ. ವ್ಯಾಸವಿದೆ.

ಆಹಾರ : ಹುಳ, ಹುಪ್ಪಡಿ, ಮಳೆ ಹುಳುಗಳು, ಓತಿ, ಕಪ್ಪೆ, ಇತರ ಸಣ್ಣ ಪುಟ್ಟ ಹಾವುಗಳು ಇದರ ಆಹಾರ.

ಲಕ್ಷಣಗಳು : ನಾಜೂಕು ಸರೀರ, ಹೊಳಪಿನ ನಯವಾದ ಹುರುಪೆಗಳ ಹೊದಿಕೆ. ಮೈಮೇಲೆ ೧೩ ರಿಂದ ೧೫ ಸಾಲುಗಳಲ್ಲಿ ಜೋಡಿಸಿದ ಹುರುಪೆಗಳಿವೆ. ಈ ಹುರುಪೆಗಳ ಮೇಲೆ ಕಂದು ಬಣ್ಣದ ಚುಕ್ಕೆಗಳಿವೆ. ಈ ಚುಕ್ಕೆಗಳು ನೇರವಗಿ ಉದ್ದ ಸಾಲಿನಲ್ಲಿ ವ್ಯವಸ್ಥೆ ಗೊಂಡಿರುವಂತೆ ಭಾಸವಾಗುತ್ತದೆ. ಮೈ ಬಣ್ಣ ಕಂದು. ತಲೆ ಮೊಂಡು ಮತ್ತು ಕಪ್ಪು. ಕುತ್ತಿಗೆಯೂ ಕಪ್ಪು. ತಲೆಯ ಮೇಲೆ ಎದ್ದು ಕಾಣುವ ಎರಡು ಹಳದಿ ಗುರುತುಗಳಿವೆ. ಬಾಲದ ಬುಡದ ಬಳಿ ಮತ್ತು ಹಿಂತುದಿಯಲ್ಲಿ ಒಂದೊಂದು ಉಂಗುರಗಳಿವೆ. ಬಾಲದ ತಳಭಾಗ ತಿಳಿ ನೀಲಿ ಕಡು ಕೆಂಪು. ಹೊಟ್ಟೆಯ ಭಾಗ ಕೆಂಪು ಅಥವಾ ಕಡುಕೆಂಪು, ಇವುಗಳ ವರ್ಣವೈವಿಧ್ಯ ಹವಳಗಳಂತಿರುವುದರಿಂದ ಇವುಗಳನ್ನು ಹವಳದ ಹಾವುಗಳೆಂದು ಕರೆಯುತ್ತಾರೆ.

ಸಂತಾನಾಭಿವೃದ್ಧಿ : ಜುಲೈ-ಅಗಸ್ಟ್ ತಿಂಗಳಲ್ಲಿ ಮೊಟ್ಟ ಇಡುತ್ತವೆ. ಒಂದು ಸಾರಿಗೆ ೬ ರಿಂದ ೧೪ ಮೊಟ್ಟೆಗಳನ್ನಿಡುತ್ತವೆ.

ಸ್ವಭಾವ : ಭಾರತದಲ್ಲಿ ಇರುವ ಈ ಜಾಗಿಯ ಐದು ಪ್ರಭೇದಗಳಲ್ಲಿ ನಾಲ್ಕು ಪ್ರಭೇದಗಳು ಪಶ್ಚಿಮ ಘಟ್ಟಗಳಲ್ಲಿ ದೊರಕುತ್ತವೆ. ಇವು ನಿಶಾಚರಿಗಳು. ಅಪರೂಪವಾಗಿ ಬೆಳಗಿನ ತಂಪು ಹೊತ್ತಿನಲ್ಲಿ ಓಡಾಡುತ್ತಿರುವುದು ಕಂಡು ಬರಬಹುದು. ಬಿಲವಾಸಿಗಳು. ತಮ್ಮ ಬಿಲಗಳನ್ನು ತಾವೆ ಮರಳಲ್ಲಿ ತೋಡುತ್ತವೆ. ಬಿಲಹೊಕ್ಕು ತಲೆ ಮತ್ರ ಹೊರಗೆ ಕಾಣುವಂತೆ ಹುದುಗಿ ನಿಶ್ಚಲವಾಗಿ ಉಳಿದು, ಆಹಾರ ಜೀವಿಗಳು ಬರುವುದನ್ನು ಕಾಯುತ್ತದೆ. ಉದ್ರೇಕಗೊಂಡಾಗ ತನ್ನ ಬಾಲವನ್ನು ಎತ್ತಿ, ತನ್ನ ವರ್ಣ ವೈವಿದ್ಯವನ್ನು ಪ್ರದರ್ಶಿಸುತ್ತ ಒಂದು ರೀತಿ ವಿಚಿತ್ರವಾಗಿ ಆಡಿಸುತ್ತದೆ. ಕಾಡಿನ ಪ್ರಾಣಿಯಾದುದರಿಂದ ಕಾಡಿನೊಳಕ್ಕೆ ನುಸುಳಿ ಮರೆಯಾಗುತ್ತದೆ. ಈ ಹಾವುಗಳು ನಾಗರ ಹಾವಿನ ಸಮೀಪದ ಬಂದುಗಳು. ಇದು ವಿಷದ ಹಾವೆಂಬುದರ ವಿನಹ ಇದರ ವಿಷದ ಸ್ವಭಾವದ ಬಗ್ಗೆ ಹೆಚ್ಚು ತಿಳಿಯದು. ಇದು ಸುಮಾರು ಒಂದು ಅಡಿ ಉದ್ದವಿರುವುದರಿಂದ ಮನುಷ್ಯನಿಗೆ ಮರೆಯಾಗಿದ್ದು ಅಪಾಯ ತಂದೊಡ್ಡಬಹುದು.

—- 

ಗಣ : ಒಫಿಡಿಯ
ಕುಟುಂಬ : ಇಲಾಫಿಡೀ
(Elaphidae)
ಉದಾ : ನಾಗರ ಹಾವು (Cobra Snake)
ಶಾಸ್ತ್ರೀಯ ನಾಮ : ನಾಜ ನಾಜ (Naja Naja)

104_69_PP_KUH

ವಿತರಣೆ : ಕರ್ನಾಟಕದ ಎಲ್ಲಾ ಭಾಗದಲ್ಲಿ ಈ ಹಾವು ದೊರಕುತ್ತದೆ. ಸಮುದ್ರ ಮಟ್ಟದಿಂದ ೧೮೦೦ ಮೀ. ಎತ್ತರದವರೆಗಿನ ಪ್ರದೇಶಗಳ, ಬಿಲ, ದಟ್ಟಕಾಡು, ಪೊಟರು, ಪಾಲು ಮನೆಗಳು, ಹುತ್ತ ಇವುಗಳ ಸ್ವಾಭಾವಿಕ ವಾಸಸ್ಥಾನಗಳು. ಆಹಾರ ಹುಡುಕುತ್ತ ಜನವಸತಿಗಳ ಬಳಿಗೂ ಬರಬಹುದು.

ಗಾತ್ರ : ೩ ರಿಂದ ನಾಲ್ಕು ಅಡಿ ಉದ್ದ ಬೆಳೆಯುತ್ತವೆ. ಗಂಡು ಹಾವುಗಳು ಹೆಣ್ಣು ಹಾವುಗಳಿಗಿಂತ ಹೆಚ್ಚು ಉದ್ದವಾಗಿರುತ್ತವೆ.

ಆಹಾರ : ಇಲಿ, ಕಪ್ಪೆ, ಓತಿ, ಮೀನು, ಪಕ್ಷಿಯ ಮೊಟ್ಟೆಗಳು ಈ ಹಾವಿನ ಸ್ವಾಭಾವಿಕ ಆಹಾರ, ಸಮಯ ಬಂದರೆ ಸಣ್ಣ ಹಾವುಗಳನ್ನು ತಿನ್ನಬಹುದು.

ಲಕ್ಷಣಗಳು : ದೇಹದ ಮೇಲೆ ನುಣುಪಾದ ಹುರುಪೆಗಳ ಹೊದಕೆ ಇದೆ. ಈ ಹುರುಪೆಗಳು ಓರೆ ಸಾಲಿನಲ್ಲಿ ಜೋಡಣೆಯಾಗಿವೆ. ಇದು ನಾಗರ ಹಾವಿನ ವಿಶಿಷ್ಟ ಲಕ್ಷಣ. ಕತ್ತಿನ ಬಾಗದಲ್ಲಿ ೨೫-೩೫, ದೇಹದ ಮೇಲೆ ತಳಭಾಗ ನಡುಭಾಗದಲ್ಲಿ ೧೫ ರಿಂದ ೧೭ ವೆಂಟ್ರಲ್ ಹುರುಪೆಗಳಿವೆ. ಬಾಲದ ಭಾಗದಲ್ಲಿ ವೆಂಟ್ರಲ್ ಹುರುಪೆಗಳು ಜೋಡಿ ಸಾಲಿನಲ್ಲಿ ವ್ಯವಸ್ಥಿತವಾಗಿವೆ.

ದೇಹದ ಮಿರುಗುತ್ತದೆ. ಕಣ್ಣಗಳು ಕಪ್ಪು. ಅಗಲವಾದ ಕತ್ತು, ಸಾಧಾರಣ ಗಾತ್ರದ ತಲೆ ಮತ್ತು ದೇಹವಿದೆ. ದೇಹದ ತಳಭಾಗ ಬಿಳುಪು ಅಥವಾ ಹಳದಿ. ಕತ್ತಿನ ಭಾಗದಲ್ಲಿ ಅಗಲವಾದ ಪಟ್ಟಿ ಇದೆ. ಪ್ರಸಿದ್ಧವಾದ ಹೆಡೆ ಇರುವುದು ಈ ಹಾವಿನ ವಿಶಿಷ್ಟ ಲಕ್ಷಣ. ಕತ್ತಿನ ಭಾಗದ ಪಕ್ಕೆಲಬುಗಳನ್ನು ಪಕ್ಕಕ್ಕೆ ಚಾಚಿ, ಕತ್ತಿನ ಸುತ್ತ ಸಡಿಲವಾಗಿ ವಿಸ್ತರಿಸಿರುವ ಚರ್ಮವನ್ನು ಹಿಗ್ಗಿಸಿ ಅಗಲಿಸುವ ಮೂಲಕ ಈ ಹಾವು ತನ್ನ ಹೆಡೆಯನ್ನು ಬಿಚ್ಚುತ್ತದೆ. ಹೆಡೆಯ ಮೇಲ್ಭಾಗದಲ್ಲಿ ಕನ್ನಡಕದ ಅಥವ ಒಂದಕ್ಕೊಂದು ಸಂಬಂದವಿಲ್ಲದ ಎರಡು ಉಂಗುರಗಳ ಗುರುತಿದೆ. ಈ ಗುರುತಿನ ನಮೂನೆ ವ್ಯತ್ಯಾಸ ತೋರುತ್ತದೆ. ಕೆಲವು ನಾಗರ ಹಾವುಗಳಲ್ಲಿ ಈ ಗುರುತು ಇಲ್ಲದಿರಲೂಬಹುದು. ಹೆಡೆಯ ಕೆಳಭಾಗದಲ್ಲಿ ಮೂರು ಕಪ್ಪು ಅಡ್ಡ ಪಟ್ಟಿಗಳು ಇದ್ದೇ ಇರುತ್ತವೆ. ಇದೂ ಕೂಡ ನಾಗರ ಹಾವಿನ ವಿಶಿಷ್ಟ ಲಕ್ಷಣ.

ಎರಡೂ ದವಡೆಗಳಲ್ಲಿ ಹಲ್ಲುಗಳು ಒಳಕ್ಕೆ ಬಾಗಿ, ನುಂಗುತ್ತಿರುವ ಆಹಾರ ಜೀವಿ ನುಣುಚಿಕೊಂಡು ಹೋಗದಂತೆ ಬಿಗಿಯಾಗಿ ಹಿಡಿಯಲು ಅನುಕೂಲವಾಗಿವೆ. ಈ ಹಾವಿನಲ್ಲಿ ವಿಷದಂತಗಳಿವೆ. ವಿಷಗ್ರಂಥಿಯಿಂದ ಬಂದ ನಾಳವು ಈ ಹಲ್ಲುಗಳ ಬುಡದಲ್ಲಿ, ವಿಷದಂತಗಳ ಒಳ ಮುಖದಲ್ಲಿರುವ ನಾಲೆಗಳಿವೆ ತೆರೆಯುತ್ತದೆ. ಈ ನಾಲೆಯ ಮೂಲಕ ಹರಿದು ವಿಷವು ಕಚ್ಚಿದ ಪ್ರಾಣಿಯ ದೇಹವನ್ನು ಸೇರುತ್ತದೆ.

ನಾಗರ ಹಾವಿನ ವಿಶಿಷ್ಟ ಲಕ್ಷಣ ಮತ್ತು ಈ ಹಾವನ್ನು ನಿಖರವಾಗಿ ಗುರುತಿಸಬಹುದಾದ ಲಕ್ಷಣವೆಂದರೆ, ಹಾವಿನ ಮೇಲು ದವಡೆಯ ಅಂಚಿನಲ್ಲಿ ಹರಡಿರುವ ಹುರುಪೆಗಳು. ಅವುಗಳನ್ನು ಸೂಪ್ರಲೇಬಿಯಿಲ್ ಹುರುಪೆಗಳೆಂದು ಕರೆಯುತ್ತಾರೆ. ಬಾಯಿಯ ನಡುತುದಿಯಿಂದ ಎರಡೂ ಕಡೆ ಎಣಿಸುತ್ತ ಬಂದರೆ ಮೂರನೆಯ ಸೂಪ್ರಲೇಬಿಯಲ್ ಉಳಿದವಕ್ಕಿಂತ ದೊಡ್ಡದು ಮತ್ತು ಇದು ಮೇಲು ಮುಂದಿನ ತುದಿಯಲ್ಲಿ ನಾಸಿಕ ರಂಧ್ರವನ್ನು ಒಳಗೊಂಡ ನೇಸಲ್ ಹುರುಪೆಯನ್ನು ಮತ್ತು ಮೇಲು ಹಿಂದಿನ ತುದಿಯಲ್ಲಿ ಕಣ್ಣುಗಳನ್ನು ಒಳಗೊಮಡ ಆಕ್ಯುಲರ‍್ ಹುರುಪೆಯನ್ನು ಮುಟ್ಟುತ್ತದೆ. ಈ ವ್ಯವಸ್ಥೆ ಮತ್ತಾವ ಹಾವುಗಳಲ್ಲಿಯೂ ಇಲ್ಲ (ಪುಟ ೧೧೬ ನೋಡಿ)

ತಲೆ ಚಪ್ಪಟೆಯಾಗಿದೆ. ಮೂತಿ ತುಂಡು ಮತ್ತು ದುಂಡು. ನಾಸಿಕಗಳು ದೊಡ್ಡವು. ಕಣ್ಣಿನಲ್ಲಿ ದುಮಡು ಪಪೆಗಳಿವೆ. ಹೊರ ಕಿವಿಗಳಿಲ್ಲ. ತಲೆಯ ಮೇಲೆ ಹೊದಿಕೆಯ ಪ್ರಶಲ್ಕಗಳು ಮಿರುಗುತ್ತವೆ.

ಸಂತಾನಾಭಿವದ್ಧಿ : ಜನವರಿಯಲ್ಲಿ ಹೆಣ್ಣು-ಗಂಡು ಹಾವುಗಳು ಕೂಡುತ್ತವೆ. ಏಪ್ರಿಲ್ ಮೊಟ್ಟೆಗಳನ್ನಿಡುತ್ತವೆ. ಮೊಟ್ಟೆ ಎಡುವ ಕ್ರಿಯೆ ಅಗಸ್ಟ್ ವರೆಗೂ ಮುಂದುವರಿಯಬಹುದು. ಮೊಟ್ಟೆ ಇಡುವ ಕ್ರಿಯೆ ಅಗಸ್ಟ್ ವರೆಗೂ ಮುಂದುವರಿಯಬಹುದು. ಮೊಟ್ಟೆ ಇಟ್ಟ ೪೮-೬೯ ದಿನಗಳ ನಂತರ ಮೊಟ್ಟೆಗಳು ಒಡೆದು ಮರಿಗಳು ಹೊರಬರುತ್ತವೆ. ಒಂದು ಸಾರಿಗೆ ೧೨ ರಿಂದ ೨೨ ಮೊಟ್ಟೆಗಳನ್ನಿಡ ಬಹುದು. ಒಮ್ಮೆಗೆ ೪೫ ಮೊಟ್ಟೆ ಗಳನ್ನಿಟ್ಟ (ಅವುಗಳಲ್ಲಿ ೩೬ ನಿಷೇಚಿತ ಮೊಟ್ಟೆಗಳು) ದಾಖಲೆ ಇದೆ. ಮೊಟ್ಟೆಗಳಿಗೆ ಮೃದುವಾದ ಚಿಪ್ಪಿನ ಹೊದಿಕೆ ಇರುತ್ತದೆ. ಮೊಟ್ಟೆಯು ಅಂಡಾಕಾರ ಮತ್ತು ಅವುಗಳ ಉದ್ದಗಲ ೪೦ x ೨೮ ಮಿ.ಮೀ. ಮೊಟ್ಟೆ ಇಡುವ ಮೊದಲು ಜೊತೆ ಕೂಡಿದ ಹೆಣ್ಣು-ಗಂಡು ಹಾವುಗಳು ಒಟ್ಟಾಗಿ ಕೆಲವು ಕಾಲ ಉಳಿಯಬಹುದು. ಎರಡರಲ್ಲಿ ಒಂದು ಮೊಟ್ಟೆಗಳನ್ನು ಕಾದು ಪಾಲಿಸಬಹುದು. ಸಾಮಾನ್ಯವಾಗಿ ಕಸಕಡ್ಡಿಗಳ ನಡುವೆ ಮತ್ತು ಮಣ್ಣಿನ ಒಳಗೆ ಮೊಟ್ಟೆಗಳನ್ನಿಡುತ್ತವೆ. ಹೆಣ್ಣು ಹಾವು ತನ್ನ ಮೊಟ್ಟೆಗಳ ಸುತ್ತಸುತ್ತಿಕೊಂಡು ರಕ್ಷಿಸಬಹುದು. ಒಂದಲ್ಲ ಒಂದು ಹಾವು ಮೊಟ್ಟೆಗಳಿಗೆ ಕಾವು ಕೊಡಬಹುದು. ೫೮ ದಿನಗಳಲ್ಲಿ ಮೊಟ್ಟೆಗಳು ಒಡೆದು ಮರಿಗಳು ಹೊರಬರುತ್ತವೆ.

ಸ್ವಭಾವ : ಇದು ನಿಶಾಚರಿ. ಬಿಸಿಲು ಕಾಸಲು ಮುಂಜಾನೆ ಅಥವಾ ಸಂಜೆ ಹೊರಬರುತ್ತದೆ. ಈ ಹಾವನ್ನು ಸಾಮಾನ್ಯವಾಗಿ ಬಯಲುಗಳಲ್ಲಿ ಮುಂಜಾನೆ ಅಥವಾ ಸಂಜೆ ಕಾಣಬಹುದು. ಆಹಾರವಾದ ಇಲಿಗಳನ್ನು ಹುಡುಕುತ್ತ ಜನವಸತಿಯ ಬಳಿಗೆ ಬರುತ್ತದೆ. ಗಲಾಟೆ ಮಾಡಿದರೆ ಪ್ರತಿಭಟಿಸುತ್ತದೆ. ಕಚ್ಚಲು ಪ್ರಯತ್ನಿಸಬಹುದು. ಇದೊಂದು ಉಪದ್ರವ ಕಾರಿ ವಿಷದ ಹಾವು. ಜೊಲ್ಲು ರಸ ಗ್ರಂಥಿಗಳು ವಿಷಗ್ರಂಥಿಗಳಾಗಿ ಮಾರ್ಪಟ್ಟಿವೆ. ವಿಷವನ್ನು ಆಹಾರ ಜೀವಿಗೆ ತಲುಪಿಸಲು ಮಾರ್ಪಟ್ಟ ವಿಷದಂತಗಳಿವೆ. ಈ ಹಾವೆ ಯಾಕೆ, ಹಾವುಗಳೆ ಸಾಮಾನ್ಯವಾಗಿ ತಮ್ಮ ಆಹಾರವನ್ನು ಅಗಿದು ತಿನ್ನಲಾರವು. ಅವನ್ನು ಇಡಿಯಾಗಿ ನುಂಗುತ್ತವೆ. ಆಹಾರ ಜೀವಿಯು ಜೀವದಿಂದಿದ್ದು ಒದ್ದಾಡುತ್ತಿದ್ದರೆ, ನುಂಗುವುದು ದಕಷ್ಟವಾಗುತ್ತದೆ. ಆದ್ದರಿಂದ ಅವುಗಳನ್ನು ಕಚ್ಚಿ, ಗಾಯ ಮಾಡಿ, ರಕ್ತಕ್ಕೆ ವಿಷಸೂಸಿ, ಮಂಪರು ಬರಿಸಿ ನಿಶ್ಚೇತಗೊಳಿಸಿ, ಇಲ್ಲವೆ ಸಾಯಿಸಿ ನಿಧಾನವಾಗಿ ನಿರಾತಂಕವಾಗಿ ನುಂಗುತ್ತವೆ. ಆದ್ದರಿಂದ ಈ ವಿಷದ ಹಾವುಗಳ ವಿಷ ಮುಖ್ಯವಾಗಿ ಅದರ ಆಹಾರ ಜೀವಿಯನ್ನು ನಿಶ್ಚೇತನಗೊಳಿಸಲು ಅಥವಾ ಕೊಲ್ಲಲ್ಲು ಬಳಸುವ ವಸ್ತು. ಇದನ್ನು ತನ್ನ ಮೇಲೆ ಆಕ್ರಮಿಸಿ ಬರುವ ಶತ್ರುಗಳ (ಮನುಷ್ಯನೂ ಸೇರಿದಂತೆ) ಆಕ್ರಮಣದಿಂದ ತಪ್ಪಿಸಿಕೊಳ್ಳಲು, ಪ್ರತಿಭಟಿಸಲೆಂದು, ತನ್ನನ್ನು ರಕ್ಷಿಸಿಕೊಳ್ಳಲು ನಾಗರಹಾವು ಕಚ್ಚುವ, ವಿಷಸೂಸುವ ವಿಧಾನವನ್ನು ಅನುಸರಿಸುತ್ತದೆ.

ನಾಗರ ಹವಿನ ವಿಷ ತುಂಬಾ ಅಪಾಯ. ಮನುಷ್ಯನಿಗೆ ಮಾರಕವಾಗುತ್ತದೆ. ನಾಗರ ಹಾವಿನ ವಿಷ ತೆಳು ಹಳದಿ ಬಣ್ಣದ ಪಾರದರ್ಶಕ ಸ್ನಿಗ್ಧ ಧ್ರವ. ಒಂದು ಸಾರಿ ಕಚ್ಚಿದಾಗ ೦.೨ ಗ್ರಾಂ (ಒಣ ತೂಕ) ಹೊರ ಸೂಸುತ್ತದೆ. ವಿಷ ರಕ್ತದ ಮೂಲಕ ದೇಹದಲ್ಲಿ ವ್ಯಾಪಿಸಿ ಕೇಂದ್ರ ನರ ಮಂಡಲದ ಮೇಲೆ ಪ್ರಭಾವ ಬೀರುತ್ತದೆ.

ನಾಗರ ಹಾವು ಸ್ವಾಭಾವಿಕವಾಗಿ ಅಂಜುಬುರುಕ ಪ್ರಾಣಿ. ಆದರೆ ತನಗೆ ತೊಂದರೆಯಾದಾಗ ಬುಸುಗುಟ್ಟುತ್ತ, ಹೆಡೆ ಬಿಚ್ಚಿ ಎದುರಿಸುತ್ತದೆ. ಕಚ್ಚಿ ಗಾಯಗೊಳಿಸಿ ಕೊಲ್ಲದೆ ಉಳಿಸಿದರೆ ಜಿದ್ದು ಸಾಧಿಸುತ್ತದೆ. ನಾಗರ ಹಾವಿನ ಸೇಡು ಹನ್ನೆರಡು ವರ್ಷ ಎಂಬ ಭಾವನೆ ನಿಜವಲ್ಲ. ನಾಗರಹಾವು ಹಾವಾಡಿಗರ ಪ್ರಿಯವಾದ ಪ್ರಾಣಿ. ಹಾವಾಡಿಗ ಪುಂಗಿ ಊದಿ ಹಾವಾಡಿಸುವ ಆಟ ನೀವೆಲ್ಲ ನೋಡಿದ್ದೀರಿ, ಆನಂದ ಪಟ್ಟಿದ್ದೀರಿ. ಆದರೆ ವಾಸ್ತವ ಸಂಗತಿ ಎಂದರೆ ಹಾವಾಡಿಗನ ಪುಂಗಿನ ನಾದಕ್ಕೆ ಇದು ಆನಂದದಿಂದ ತಲೆದೂಗಿ ಸಂತೋಷದಿಂದ ಹೆಡೆ ಆಡಿಸುತ್ತದೆ ಎನ್ನುವುದು ತಪ್ಪು ಭಾವನೆ. ಹಾವಿಗೆ ಹೊರ ಕಿವಿ ಇಲ್ಲದಿರುವುದರಿಂದ ಗಾಳಿಯ ಮೂಲಕ ಪ್ರಸಾರವಾಗುವ ಶಬ್ದದ ಅಲೆಗಳನ್ನು ಅದು ಗ್ರಹಿಸಲಾರದು. ಆದ್ದರಿಂದ ಹಾವು ಪುಂಗಿಯ ನಾದಕ್ಕೆ ಮೆಚ್ಚಿ ತಲೆ ತೂಗುವುದಿಲ್ಲ, ಹಾವಾಡಿಗ ಊದುತ್ತ ಅಲ್ಲಾಡಿಸುವ ಪುಂಗಿಯನ್ನು ಕಣ್ಣುಗಳಿಂದ ಗಮನಿಸುತ್ತ ಅದರ ಚಲನೆಯನ್ನು ಅನುಸರಿಸಿ ತಲೆಯನ್ನು ಆಡಿಸುತ್ತದೆ.

ಹಿಂದೂಗಳು ನಾಗರ ಹಾವನ್ನು ದೇವರಂದು ಪೂಜಿಸುತ್ತಾರೆ. ನಾಗರಹಾವು ತನ್ನ ಹೊರ ಚರ್ಮವನ್ನು ಕಳಚಿ ಕಳೆದುಕೊಳ್ಳುವುದು ಅಥವಾ ಪೊರೆ ಬಿಡುವುದು ಸಾಮಾನ್ಯ. ಹಾವಿನ ವಿಷವನ್ನು ಔಷಧವಾಗಿಯೂ ಬಳಸುತ್ತಾರೆ.

—- 

ಗಣ : ಒಫಿಡಿಯ
ಕುಡುಂಬ : ಇಲಾಫಿಡೀ
(Elaphidae)
ಉದಾ : ಕಾಳಿಂಗ ಸರ್ಪ / ರಾಜ ನಾಗರ ಹಾವು (The King Cobra)
ಶಾಸ್ತ್ರಿಯ ನಾಮ : ಒಫಿಯೊಫೇಗಸ್ ಹನ್ನ (Ophiophagus Hannah)

105_69_PP_KUH

ವಿತರಣೆ : ಕರ್ನಾಟಕದ ಪಶ್ಚಿಮ ಘಟ್ಟಗಳ ದಟ್ಟಕಾಡುಗಳಿಗೆ ಸೀಮಿತವಾದ ಹಾವು ನೀಲಗಿರಿ, ಪಳನಿ, ಕರ್ನಾಟಕದ ಪಶ್ಚಿಮ ಘಟ್ಟಗಳಿಂದ ಗೋದಾವರಿವರೆಗಿನ ಪ್ರದೇಶದಲ್ಲಿ ಇವು ವಾಸಿಸುತ್ತವೆ. ಸಮುದ್ರ ಮಟ್ಟದಿಂದ ೧೯೦೦ ಮೀಟರ‍್ ಎತ್ತರದವರೆಗೂ ದೊರಕುತ್ತವೆ. ಹೆಚ್ಚು ಮಳೆ ಬೀಳುವ, ಹೆಚ್ಚುದ ತಳಗಿಡ ಮೆಳೆಗಳ ಪೊದರುಗಳಲ್ಲಿ ಇವುಗಳ ವಾಸ. ಆಗುಂಬೆ ಕರವಾರಗಳಲ್ಲಿ ದೊರಕುತ್ತದೆ. ಬೆಟ್ಟ ಸೀಮೆಗಳಲ್ಲಿ ವಾಸ. ನೆಲ ಮರಗಿಡಗಳು ನೀರಿನಲ್ಲಿಯೂ ವಾಸಿತುತದೆ.

ಗಾತ್ರ : ಇದರ ಸರಾಸರಿ ಉದ್ದ ೧೦ ಅಡಿ. ಆದರೆ ೧೮ ಅಡಿಗಳ ಉದ್ದದ ಕಾಳಿಂಗ ಸರ್ಪಗಳು ದೊರಕಿವೆ. ಇದರ ತೂಕ ೧೨ ಕೆ.ಜಿ.

ಆಹಾರ : ಸಾಮಾನ್ಯವಾಗಿ ಇತರ ವಿಷದ, ವಿಷವಲ್ಲದ ಹಾವುಗಳು, ಮೊಲ, ಇಲಿ, ಹೆಗ್ಗಣ, ಉಡ, ಹಲ್ಲಿಗಳು, ಪಕ್ಷಿಗಳು, ಪಕ್ಷಿಗಳ ಮೊಟ್ಟೆಗಳನ್ನು ತಿಂದು ಬದುಕುತ್ತವೆ. ಬಂಧನದಲ್ಲಿದ್ದಾಗ ಕುದುರೆ ಮಾಂಸವನ್ನು ತಿನ್ನುತ್ತದೆ.

ಲಕ್ಷಣಗಳು : ಹಾವುಗಳಲ್ಲಿಯೇ ಅತ್ಯಂತ ಉದ್ದವಾದ ದೈತ್ಯ ಹಾವು. ಅದು ವಾಸಿಸುವ ಪರಿಸರ, ಸನ್ನಿವೇಶಗಳಿಗನುಗುಣವಾಗಿ ಅದರ ದೇಹದ ಬಣ್ಣ ಹಸಿರು, ಕಂದು, ಅರಿಶಿಣ, ಕಪ್ಪು ಮುಂತಾಗಿ ಇರುತ್ತದೆ. ತಲೆ ದೊಡ್ಡದು ಮತ್ತು ಕುತ್ತಿಗೆಗಿಂತ ತುಸು ಅಗಲವಾಗಿದೆ. ತಲೆಯ ಮೇಲೆ ಕಪ್ಪು ಅಂಚಿನ ಹುರುಪೆಗಳಿವೆ. ನಯವಾದ ಹೊಳಪು ಹೂಗಳಿವೆ. ಬಾಲ ಆಲಿವ್ ಹಸಿರು ಅಥವಾ ಪೂರ್ಣ ಕಪ್ಪು, ಹೊಟ್ಟೆಯ ಭಾಗ ತಿಳಿಬಣ್ಣವಾಗಿದೆ. ದೇಹದ ಮೇಲೆ ೩೨ ರಿಂದ ೪೩ ಮತ್ತು ಬಾಲದ ಮೇಲೆ ೧೧ ರಿಂದ ೧೩ ಕಪ್ಪು ಅಡ್ಡ ಪಟ್ಟಿಗಳಿವೆ. ಮೈ ಬಣ್ಣ ಕಪ್ಪಾಗಿದ್ದರೆ ಪಟ್ಟಿಗಳು ಬಿಳಿ ಅಥವಾ ಮಾಸಲು ಹಳದಿಯಾಗಿರುತ್ತವೆ. ಹಾವಿಗೆ ವಯಸ್ಸು ಹೆಚ್ಚಿಂದತೆ ಪಟ್ಟಿಗಳ ಬಣ್ಣ ಮಾಸುತ್ತದೆ.

ಇದಕ್ಕು ಹೆಡೆ ಉಂಟು. ಇದರ ಹೆಡೆ ನಾಗರ ಹಾವಿನ ಹೆಡೆಗಿಂತ ಉದ್ದ, ಅಗಲ ಕಡಿಮೆ. ಹೆಡೆಯ ಮೇಲೆ ಹಿಂದು ಮುಂದಾದ ‘V’ ಗುರುತಿದೆ. ಕನ್ನಡಕದ ಗುರುತಿಲ್ಲ. ತಲೆ ಚಪ್ಪಟೆಯಾಗಿದೆ. ದುಂಡು ಮೂತಿ, ಸುಮರಾಗಿ ದುಂಡಗಿರುವ ಕಣ್ಣಗಳು, ಇವಕ್ಕೆ ದುಂಡು ಪಾಪೆ ಇದೆ. ಗಂಡು ಕಾಳಿಂಗ ಸರ್ಪಗಳು ಹೆಣ್ಣುಗಳಿಗಿಂತ ದೊಡ್ಡವು. ವಿಷದ ಹಾವುಗಳಲ್ಲಿಯೆ ಅತ್ಯಂತ ವಿಷದ ಹಾವು ಇದು. ಇದರ ವಿಷದಂತಗಳು ತುಂಬಾ ಉದ್ದ.

ಸಂತಾನಾಭಿವೃದ್ಧಿ : ಸಾಮಾನ್ಯವಾಗಿ ಮಳೆಗಾಲ ಆರಂಭವಾಗುವ ಮುನ್ನ ಮಾರ್ಚ ತಿಂಗಳಲ್ಲಿ ಹೆಣ್ಣು ಗಂಡುಗಳು ಕೂಡವ ಕಾಲ. ಗರ್ಭಾವಧಿ ೫-೬ ವಾರಗಳು. ಸಾಮಾನ್ಯವಾಗಿ ಬಹುಪಾಲು ಸರಿಸೃಪಗಳು ಮೊಟ್ಟೆ ಇಡುವ ಮುನ್ನ ನಿಷೇಚಿತ ತತ್ತಿಗಳನ್ನು ತಮ್ಮ ಅಂಡವಾಹಿನಿಯಲ್ಲಿ ಕೆಲವು ದಿನಗಳಿಂದ ಕೆಲವು ವಾರಗಳವರೆಗೆ ಉಳಿಸಿಕೊಳ್ಳುತ್ತವೆ. ಆ ಕಾಲದಲ್ಲಿ ತಾಯಿ ದೇಹದೊಂದಿಗೆ ಸಂಪರ್ಕ ಬೆಳಸದೆ ಮೊಟ್ಟೆಗಳೊಳಗೆ ಮರಿಗಳು ಬೆಳೆಯುತ್ತವೆ. ಇದನ್ನು ಗರ್ಭಾವಸ್ಥೆ ಎಂದು ಹೇಳುವುದುಂಟು. ಆದರೆ ಇದನ್ನು ಸಸ್ತನಿಗಳ ಗರ್ಭಾವಧಿಗೆ ಹೋಲಿಸಲಾಗದು. ಎಪ್ರಿಲ್ ತಿಂಗಳಲ್ಲಿ ಮೊಟ್ಟೆ ಇಡುತ್ತವೆ. ಜುಲೈ ತಿಂಗಳುಗಳ ವರೆಗೆ ಈ ಸರ್ಪದ ಮೊಟ್ಟೆಗಳು ದೊರಕಿವೆ. ಕಸಕಡ್ಡಿ, ಎಲೆ, ಸೊಪ್ಪು, ಬಿದಿರುಗಳಿಂದ ಕೂಡಿದ ವಸ್ತುಗಳಿಂದ ಗೂಡುಕಟ್ಟಿ ಅದರಲ್ಲಿ ಮೊಟ್ಟೆ ಇಡುತ್ತವೆ. ಸಾಮಾನ್ಯವಾಗಿ ಹೆಣ್ಣು ಹಾವು ಗೂಡಿನ ಮೇಲೆ ಸುರುಳಿ ಸುತ್ತಿಕೊಂಡು ಉಳಿದು ಮೊಟ್ಟೆಗಳನ್ನು ಕಾಪಾಡುತ್ತದೆ. ಇವು ಒಮ್ಮೆಗೆ ೨೦-೫೧ ಮೊಟ್ಟೆಗಳನ್ನಿಡುತ್ತವೆ. ಹೆಣ್ಣು ಗಂಡುಗಳು ಕೂಡಿದ ೫-೬ ವಾರಗಳನಂತರ ಮೊಟ್ಟೆ ಇಡುತ್ತವೆ. ೫೯.೪ x ೩೪.೪ ಮಿ.ಮೀ. ಉದ್ದಳತೆ ಇರುತ್ತವೆ. ೪೦.೯ ಗ್ರಾಂ ತೂಗುತ್ತವೆ.

೧೦ ವಾರಗಳಲ್ಲಿ ಮೊಟ್ಟೆಗಳು ಒಡೆದು ಮರಿ ಹೊರಬರುತ್ತದೆ. ಹೆಣ್ಣು ಗಂಡು ಹಾವುಗಳೆರಡೂ ಮೊಟ್ಟೆಗಳನ್ನು ಕಾಯುತ್ತವೆ.

ಸ್ವಭಾವ : ಇವು ಸಾಮಾನ್ಯವಾಗಿ ಹಗಲು ಸಂಚಾರಿಗಳು. ಸ್ವಭಾವತಃ ಉಗ್ರ ಪ್ರಾಣಿಗಳು ಎಂಬ ಭಾವನೆ ಜನರ ಮನಸ್ಸಿನಲ್ಲಿ ಬೇರೂರಿದ್ದರೂ ಅಂಜು ಬುರುಕ ಪ್ರಾಣಿಗಳು. ಮನುಷ್ಯರು ಎದುರಾದಾಗ ಹಿಂದೆ ಸರಿದು ಓಡಿ ಹೋಗಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತವೆ. ಆದರೂ ಅವುಗಳನ್ನು ಅವುಗಳ ಸ್ವಭಾವಿಕ ವಾಸಸ್ಥಾನಗಳಲ್ಲಿ ಕಂಡಾಗ ಭಯಂಕರವಾಗಿ ಕಾಣುತ್ತವೆ ಮತ್ತು ಭಯವಾಗುತ್ತದೆ. ಕೆಣಕಿದಾಗ, ರೇಗಿದಾಗ, ಶತೃ ಎದುರಾದಾಗ ಬಾಯನ್ನು ಅಗಲವಾಗಿ ತೆರೆದು ಎದುರಿಸುತ್ತವೆ, ಆಕ್ರಮಣ ಮಾಡುತ್ತವೆ, ಗುರುಗುಟ್ಟುವ ಶಬ್ದ ಮಾಡುತ್ತವೆ. ಹಾವುಗಳಲ್ಲಿಯೇ ಅತ್ಯಂತ ಬುದ್ಧಿವಂತ ಪ್ರಾಣಿಗಳು. ವೇಗವಾಗಿ ಓಡಬಲ್ಲವು. ಆದರೆ ಬೆನ್ನಟ್ಟಿ ಬಂದಾಗ ಓಡುತ್ತಿರುವ ಮನುಷ್ಯನನ್ನು ಹಿಡಿಯುವಷ್ಟು ವೇಗವಾಗಿ ಓಡಲಾರವು. ಆಕ್ರಮಿಸುವಾಗ ಮುಂದಿನ ದೇಹ ಭಾಗದ ಮೂರನೆ ಒಂದು ಭಾಗವನ್ನು ನೆಲದಿಂದ ಮೇಲೆತ್ತಿ, ಹೆಡೆ ತೆರೆದು ಬುಸುಗುಡುತ್ತ ಆಕ್ರಮಿಸುತ್ತದೆ.

ಇದರ ವಿಷ ಅತ್ಯಂತ ಆಂತಕಕಾರಿ. ಆದರೆ ತೀಕ್ಷ್ಣತೆಯಲ್ಲಿ ನಾಗರ ಹಾವಿನ ವಿಷಕ್ಕಿಂತ ಕಡಿಮೆ ಪ್ರಭಾವಕಾರಿ. ಇದರ ವಿಷಗ್ರಂಥಿಗಳು ತುಂಬಾ ದೊಡ್ಡದು. ಗ್ರಂಥಿಗಳಲ್ಲಿ ಒಮ್ಮೆಗೆ ೬ ಮಿ.ಲೀ.ನಷ್ಟು ವಿಷ ಉತ್ಪತ್ತಿಯಾಗಬಹುದು. ಇಷ್ಟು ವಿಷ ಒಂದು ಆನೆಯಂತಹ ಬೃಹತ್ ಪ್ರಾಣಿಯನ್ನು ಕೊಲ್ಲಲು ಸಾಕು. ಕಾಳಿಂಗ ಸರ್ಪದ ವಿಷ ಸ್ಪಷ್ಟ, ರುಚಿ ಇಲ್ಲದ ಮತ್ತು ತುಸು ಆಮ್ಲೀಯ ಸ್ವಭಾವದ ಧ್ರವ. ಒಮ್ಮೆ ಕಚ್ಚಿದರೆ ಸೂಸುವ ವಿಷ ಹತ್ತು ಜನ ಮನುಷ್ಯರನ್ನು ಕೊಲ್ಲಬಹುದಾದಷ್ಟು ಮೊತ್ತದ ವಿಷ ಪ್ರಯೋಗಿಸುತ್ತದೆ. ಇದರ ವಿಷ ಎಷ್ಟು ತೀಕ್ಷ್ಣ ಎಂದರೆ ೧೫-೨೦ ನಿಮಿಷಗಳಲ್ಲಿ ಸಾವು ಸನ್ನಿಹತ. ಭಾರತದಲ್ಲಿ ಇದಕ್ಕೆ ಪ್ರತಿವಿಷ ಔಷಧ ದೊರಕುವುದಿಲ್ಲ. ಆದರೆ ಥೈಲ್ಯಾಂಡಿನಲ್ಲಿ ತಯಾರಾಗುತ್ತದೆ. ದೊರಕುತ್ತದೆ. ಬಂಧನದಲ್ಲಿ ಈ ಹವು ೧೨ ವರ್ಷಗಳು ಬದುಕಿದ ದಾಖಲೆ ಇದೆ.

—- 

ಗಣ : ಒಫಿಡಿಯ
ಕುಟುಂಬ : ವೈಪರಿಡೀ
(Viperidae)
ಉದಾ : ಕಲ್ಲು ಹಾವು (Saw-Scaled Viper)
ಶಾಸ್ತ್ರೀಯ ನಾಮ : ಎಕಿಸ್ ಕ್ಯಾರಿನೇಟಸ್ (Echis Carinatus)

106_69_PP_KUH

ವಿತರಣೆ : ಕರ್ನಾಟಕವೂ ಸೇರಿದಂತೆ ಭಾರತಾದ್ಯಂತ, ಹೆಚ್ಚಾಗಿ ಬಯಲು ಸೀಮೆ, ಕುರುಚಲು ಕಾಡುಗಳಲ್ಲಿ ದೊರಕುತ್ತದೆ.

ಗಾತ್ರ : ಸರಾಸರಿ ಉದ್ದ ೩೦ ಸೆಂ.ಮೀ. ೪೫ ಸೆಂ.ಮೀ. ನಿಂದ ೬೦ ಸೆಂ.ಮೀ. ವರೆಗೂ ಬೆಳೆಯಬಹುದು. ಅತ್ಯಂತ ಹೆಚ್ಚಿನ ಉದ್ದದ ಹಾವಿನ ದಾಖಲೆ ೧೦೫ ಸೆಂ.ಮೀ.

ಆಹಾರ : ಜರಿ, ಚೇಳು, ದೊಡ್ಡ ಕೀಟಗಳು, ಚುಂಡಿಲಿ, ಹಾವುರಾಣಿ, ಗೌಳಿ ಮತ್ತು ಕಪ್ಪೆಗಳು ಇದರ ಆಹಾರ.

ಲಕ್ಷಣಗಳು : ಇದರ ತಲೆಯ ಮೇಲೆ ಪ್ರಶಲ್ಕಗಳಿಲ್ಲ, ಬದಲು ಸಣ್ಣ ಹುರುಪೆಗಳಿವೆ. ಇದು ಮಂಡಲದ ಹಾವುಗಳ ಕುಟುಂಬಕ್ಕೆ ಸೇರುತ್ತದೆ. ಹೊಟ್ಟೆಯ ಭಾಗದಲ್ಲಿ ಅಗಲವಾದ ಅಡ್ಡ ಹರಡಿದ ಹುರುಪೆಗಳಿವೆ. ಉರುಳೆಯಾಕಾರದ ದೇಹ, ಮೋಟು, ದಪ್ಪ ಇದರ ಹುರುಪೆಗಳಿಗೆ ಗರಗಸ ಏಣು ಇರುವುದರಿಂದ ದೇಹ ಒರಟಾಗಿರುವಂತೆ ಭಾಸವಾಗುತ್ತದೆ. ಸ್ಪಷ್ಟವಾದ ಕುತ್ತಿಗೆ ಇದೆ. ತಲೆ ಸರಿಸುಮಾರು ಅಂಡಾಕಾರ. ದುಂಡು ಮೂತಿ, ದೊಡ್ಡ ಕಣ್ಣುಗಳು, ನೇರವಾಗಿರುವ ಕಣ್ಣು ಪಾಪೆ, ಮೋಟುಬಾಲ.

ಬಣ್ಣದ ನಮೂನೆ ವಸತಿಯಿಂದ ವಸತಿಗೆ ಬದಲಾಗುತ್ತದೆ. ತೆಳು ಕಂದಿನಿಂದ ಕಡುಕಂದು, ಅದರ ಮೇಲೆ ಕಂದು ಅಥವಾ ಕಪ್ಪು ಚುಕ್ಕೆಗಳಿರಬಹುದು. ದೇಹದ ಮೇಲೆಲ್ಲಾ ಅಗಲವಾದ ಮಚ್ಛೆಗಳಿವೆ. ತಲೆಯ ಮೇಲೆ ಬಾಣದ ಗುರುತಿದೆ. ಉಳಿದ ಲಕ್ಷಣಗಳಲ್ಲಿ ಹೆಚ್ಚಾಗಿ ಮಂಡಲದ ಹಾವನ್ನು ಹೋಲುತ್ತದೆ.

ಸಂತಾನಾಭಿವೃದ್ಧಿ : ಇದು ಜರಾಯುಜಿ. ಒಂದು ಸಾರಿಗೆ ೪ ರಿಂದ ೮ ಮರಿಗಳನ್ನು ಹಾಕುತ್ತದೆ. ಚಳಿ ಹವೆ ಕಾಲದಲ್ಲಿ ಗಂಡು-ಹೆಣ್ಣು ಕೂಡುತ್ತವೆ. ಏಪ್ರಿಲ್-ಅಗಷ್ಟ ತಿಂಗಳುಗಳಲ್ಲಿ ಮರಿಗಳು ಹುಟ್ಟುತ್ತವೆ. ಒಂದು ವರ್ಷದಲ್ಲಿ ಎರಡು ಸಾರಿ ಮರಿ ಹಾಕುತ್ತದೆ.

ಸ್ವಭಾವ : ನಿಶಾಚರಿ. ಬಿಸಿಲು ಕಾಯಿಸುವ ಅಭ್ಯಾಸ ಒಂದನ್ನು ಬಿಟ್ಟರೆ ಮಿಕ್ಕಂತೆ ಹಗಲು ಹೊತ್ತು ಹೊರಗೆಲ್ಲೂ ಕಾಣಿಸಿಕೊಳ್ಳುವುದಿಲ್ಲ, ಬಿಲ, ಕಲ್ಲು ರಾಶಿ, ಪೊದರುಗಳಲ್ಲಿ ಅಡಗಿ ಉಳಿಯುತ್ತವೆ. ಹುರುಪೆ ಅಂಚುಗಳು ಗರಗಸಾಕಾರವಿರುವುದರಿಂದ ಈ ಹಾವಿಗೆ ಗರಗಸ ಹುರುಪೆ ಕಟ್ಟು ಹಾವು ಎಂತಲೂ ಕರೆಯುತ್ತಾರೆ. ಓಡಾಡುವಾಗ ಈ ಗರಗಸ ಅಂಚುಗಳು ಪರಸ್ಪರ ಉಜ್ಜಿ ಶಬ್ದ ಉಂಟಾಗುತ್ತದೆ. ಇದು ವಿಷದ ಹಾವು ಮತ್ತು ಇದು ಕಚ್ಚಿ ಅನೇಕ ಸಾವು-ನೋವುಗಳಾಗುತ್ತದೆ. ಆದರೆ ಇದು ಸಣ್ಣ ಗಾತ್ರದ ಹಾವಾದುದರಿಂದ ಇದರ ಕಡಿತ ಹೆಚ್ಚು ಮಾರಕವಲ್ಲ.

ಇದರ ವಿಷ ರಕ್ತವನ್ನು ಹೆಪ್ಪುಗಟ್ಟಿಸಿ, ರಕ್ತಪರಿಚಲನೆಗೆ ಅಡ್ಡಿ ಉಂಟು ಮಾಡುತ್ತದೆ. ಸಾವು ನಿಧಾನ. ಈ ಅಂತರದಲ್ಲಿ ವಿಷವಿರೋಧಿ ಔಷಧ ಕೊಟ್ಟು ಅದರ ಪ್ರಭಾವ ತಗ್ಗಿಸಬಹುದು ಅಥವಾ ಉಪಶಮನಗೊಳಿಸಬಹುದು. ಆಂಟಿವಿನಮ್, ಪೊರೈಕೆ, ರಕ್ತಪೂರಣ, ಕೆ-ಅನ್ನಾಂಗ, Ca2Co3 ಸಂಸ್ಕರಣದಿಂದ ಇದರ ವಿಷದ ಪ್ರಭಾವವನ್ನು ತಡೆಯ ಬಹುದು.

—- 

ಗಣ : ಒಫಿಡಿಯ
ಕುಟುಂಬ : ವೃಪರಿಡೀ
(Viperidae)
ಉದಾ : ಬಿದಿರು ಕುಳಿ ಮಂಡಲ (Bamboo Pit Viper)
ಶಾಸ್ತ್ರೀಯ ನಾಮ : ಟ್ರೈಮೆರಿಸುರಸ್ ಗ್ರಾಮಿನಿಯಸ್ (Trimeresurus Gromineus)

ವಿತರಣೆ : ದಕ್ಷಿಣ ದ್ವೀಪಕಲ್ಪದ ಗುಡ್ಡ ಕಾಡುಗಳಲ್ಲಿ ಕಂಡು ಬರುತ್ತದೆ.

ಗಾತ್ರ : ೪೦ ಸೆಂ.ಮೀ. ಸರಾಸರಿ, ೬೦-೭೦ ಸೆಂ.ಮೀ ಉದ್ದ

ಆಹಾರ : ಈ ಹಾವು ಸಣ್ಣ ಸಸ್ತನಿಗಳನ್ನು ಹೆಚ್ಚು ಇಷ್ಟಪಟ್ಟರೂ ಇತರ ಕಶೇರುಕಗಳನ್ನು ತಿನ್ನುತ್ತದೆ. ಸಣ್ಣ ಇಲಿಗಳು, ಚಿಟ್ಟಿಲಿಗಳು, ಮೂಗಿಲಿಗಳು, ಸಣ್ಣ ಹಕ್ಕಿಗಳು ಮತ್ತು ಹಲ್ಲಿಗಳು ಇದರ ಆಹಾರ. ಇತರ ಹಾವುಗಳನ್ನು ತಿಂದ ನಿದರ್ಶನಗಳಿವೆ. ಮರಿಗಳು ಕಪ್ಪೆಗಳನ್ನು ತಿನ್ನುತ್ತವೆ.

ಲಕ್ಷಣಗಳು : ಮೂಗಿನ ಹೊಳ್ಳೆಗಳಿಗೂ ಕಣ್ಣುಗಳಿಗೂ ನಡುವೆ ಲೋರಿಯಲ್ ಹುರುಪೆಯಲ್ಲಿರುವ ಸಂವೇದನಾ ಕುಳಿಗಳಿರುವುದರಿಂದ ಈ ಕುಳಿ ಮಂಡಲವನ್ನು ಇತರ ಮಂಡಲದ ಹಾವುಗಳಿಂದ ಗುರುತಿಸಬಹುದು. ಈ ಕುಳಿ ಮಂಡಲದ ಹೊಟ್ಟೆ ಭಾಗದಲ್ಲಿ ೧೫ ರಿಂದ ೧೭ ಸಾಲು ಕಾಸ್ಟಲ್ ಹುರುಪೆಗಳಿವೆ. ಈ ಲಕ್ಷಣದ ಆಧಾರದಿಂದ ಇದನ್ನು ಇತರ ಕುಳಿಮಂಡಲಗಳಿಂದ ಪ್ರತ್ಯೇಕಿಸಿ ಗುರುತಿಸಬಹುದು. ತಲೆ ಚಪ್ಪಟೆಯಾಗಿ ತ್ರಿಕೋನಾಕಾರವಾಗಿದೆ. ಕುತ್ತಿಗೆ ಕಿರಿದಾಗಿರುವುದರಿಂದ ತಲೆ ಹೆಚ್ಚು ಅಗಲವಾಗಿದೆ. ಎಂಬ ಭಾವನೆಯನ್ನು ಕೊಡುತ್ತದೆ. ದೇಹದಪ್ಪ, ಬಾಲ ಮೋಟು ಮತ್ತು ಚೂಪು, ಬಿಲ ವಸ್ತುಗಳ ಸುತ್ತ ಸುತ್ತಿಕೊಳ್ಳಬಲ್ಲದು. ಹೆಣ್ಣು ಹಾವುಗಳಲ್ಲಿ ಬಾಲ ಚಿಕ್ಕದು.

ಮಂಡಲ ಹಾವಿನ ಲಕ್ಷಣದಂತೆ ತಲೆಯ ಮೇಲೆ ಪ್ರಶಲ್ಕಗಳ ಬದಲು ಸಣ್ಣ ಹುರುಪೆಗಳಿವೆ. ಬೆನ್ನಿನ ಹುರುಪೆಗಳಿಗೆ ಹರಿತವಾದ ಏಣುಗಳಿವೆ. ಬೆನ್ನಿನ ಭಾಗ ಹುಲ್ಲು ಹಸಿರು. ಹೊಟ್ಟೆಯ ಭಾಗ, ಮೇಲ್ತುಟಿ, ಕೆನ್ನೆ ಮತ್ತು ಕತ್ತುಗಳು ಹೊಳಪು ಬಿಳಿ, ಹಳದಿ ಅಥವ ಹಸಿರು ಛಾಯೆಯ ಬಿಳುಪು, ಬಾಲ ಹಳದಿಯಾಗಿದೆ. ಇಲ್ಲವೆ ಕೆಂಪು ಮಿಶ್ರಿತ ಚಿತ್ತಾರವಿದೆ. ಅಪರೂಪವಾಗಿ ತಲೆ ಕಪ್ಪು, ಇಲ್ಲವೆ ಕಪ್ಪು ಗುರುತುಗಳಿರಬಹುದು. ಬೆನ್ನಿನ ಮೇಲೆ ಪಟ್ಟಿ ಗುರುತುಗಳಿರಬಹುದು. ತುಂಬಾ ಅಪರೂಪವಾಗಿ ಈ ಹಾವುಗಳು ಹಳದಿ ಅಥವಾ ಆಲಿವ್ ಹಸಿರಾಗಿಯೂ ಇರಬಹುದು.

ಸಂತಾನಾಭಿವೃದ್ಧಿ : ಎಲ್ಲಾ ಮಂಡಲ ಹಾವುಗಳಂತೆ ಇವೂ ಜರಾಯುಜಗಳು. ಒಂದು ಸಾರಿಗೆ ೭ ರಿಂದ ೧೫ ಮರಿಗಳನ್ನು ಹಾಕುತ್ತವೆ. ಮರಿಗಳ ಬಾಲದ ತುದಿ ಕೆಂಪಾಗಿರುತ್ತದೆ.

ಸ್ವಭಾವ : ಪಶ್ಚಿಮ ಘಟ್ಟದ ಕಾಡುಗಳ ಬಿದಿರ ಮೆಳೆಗಳಲ್ಲಿ ಸಾಮಾನ್ಯ. ಎತ್ತರವಲ್ಲದ ಮರಗಿಡ ಪೊದರುಗಳಲ್ಲಿ ವಾಸ. ಬಿದಿರು ಮೆಳೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ನಿಶಾಚರಿಗಳು. ಹಗಲು ಚಟುವಟಿಕೆ ಕಡಿಮೆ. ಮರಗಿಡಗಳ ಟೊಂಗೆಗಳ ಮೇಲೆ ಅಡ್ಡಾಗಿ ವಿಶ್ರಮಿಸುತ್ತವೆ. ಇವುಗಳ ಬಣ್ಣ ಗಿಡಮರಗಳ ಬಣ್ಣದೊಂದಿಗೆ ಬೆರೆತು ಇವು ಕಾಣಿಸುವುದಿಲ್ಲ. ಇವುಗಳ ಚಲನೆ ನಿಧಾನ. ವಿಶ್ರಮಿಸುವಾಗ ಟೊಂಗೆಗಳ ಸುತ್ತ ಬಾಲಸುತ್ತಿ ಬಿಗಿಯಾಗಿ ಹಿಡಿದುಕೊಳ್ಳುತ್ತವೆ. ಪ್ರತಿಕ್ರಿಯೆ ನಿಧಾನವಾದರೂ ಬಿರುಸಿನಿಂದ ಹೊಡೆಯುತ್ತದೆ ಮತ್ತು ಮಿಂಚಿನಂತೆ ಬಡಿದು ಕಚ್ಚುತ್ತದೆ. ಅಂಜಿದಾಗ ಅಥವಾ ಶತ್ರು ಎದುರಾದಾಗ ಬಾಲ ಅಲ್ಲಾಡಿಸುವ ಅಭ್ಯಾಸವಿದೆ.

ಇದರ ವಿಷದ ಪ್ರಭಾವ ಹೆಚ್ಚಿಲ್ಲದಿದ್ದರೂ ಹೆಚ್ಚು ಉರಿ ನೋವು ಉಂಟು ಮಾಡುತ್ತದೆ. ಕಚ್ಚಿದ ಜಾಗ ಊದುತ್ತದೆ. ತಲೆ ಸುತ್ತು, ವಾಂತಿ ಮತ್ತು ಜ್ವರ ಬರಬಹುದು. ಆದರೆ ೪೮ ಗಂಟೆಗಳ ನಂತರ ಈ ಎಲ್ಲ ಸೂಚನೆಗಳು ಮರೆಯಾಗುತ್ತವೆ.

ವಿಷದ ಹಾವುಗಳನ್ನು ಗುರುತಿಸುವುದು

ಹಾವನ್ನು ಕಂಡೇ ಹೆದರಿ ಗಾಬರಿಗೊಳ್ಳುವ ಜನರನ್ನು ಅದನ್ನು ಗುರುತಿಸಿ ಕಚ್ಚಿಸಿಕೊಳ್ಳಿ ಎಂದು ಹೇಳುವ ಮೂಢತನಕ್ಕೆ ಮುಂದಾಗುತ್ತಿಲ್ಲ. ಹಾವನ್ನು ಕಂಡತಕ್ಷಣ, ಅದರಿಂದ ನಮಗೆ ಯಾವ ತೊಂದರೆಯೂ ಆಗದಿರುವ ಸಂದರ್ಭದಲ್ಲಿ ಅದರಿಂದ ದೂರ ಉಳಿಯುವುದು ಲೇಸು. ನಾವು ಹಾವಿಗೆ ಹೆದರುವಂತೆ ಹಾವೂ ಕೂಡ ನಮಗೆ ಹೆದರುತ್ತದೆ ಮತ್ತು ನಮ್ಮಿಂದ ದೂರ ಇರಲು ಪ್ರಯತ್ನಿಸುತ್ತದೆ. ಕಚ್ಚುವುದು ಕೇವಲ ಅದರ ಆಹಾರ ಜೀವಿಯನ್ನು ಮಣಿಸುವುದಕ್ಕೆ ಮಾತ್ರ. ಅನಿವಾರ್ಯವಾದಾಗ ಶತ್ರುವಿನೊಡನೆ ಹೋರಾಡುವಾಗ ಕಚ್ಚಲೆತ್ನಿಸುತ್ತದೆ. ಅದಕ್ಕೆ ತೊಂದರೆಯಾದಾಗ, ಆಕಸ್ಮಿಕವಾಗಿ ನಮ್ಮ ಭೇಟಿ ಆದಾಗ ಪ್ರತಿಕ್ರಿಯೆ ಎಂಬಂತೆ ತನ್ನ ರಕ್ಷಣೆಗಾಗಿ ಕಚ್ಚಲು ಪ್ರಯತ್ನಿಸುತ್ತದೆ. ವಿಷದ ಹಾವುಗಳು ವಿಷಪ್ರಯೋಗ ಮಾಡುವುದು, ತೊಂದರೆ ಇಲ್ಲದೆ ಆಹಾರ ಜೀವಿಯನ್ನು ನುಂಗಲು ಅನುಕೂಲವಾಗಲೆಂದು. ಕಚ್ಚಿ ವಿಷಪ್ರಯೋಗಿಸಿ, ಆಹಾರ ಜೀವಿಯನ್ನು ನಿಶ್ಚೇತನಗೊಳಿಸಿ ನಿಧಾನವಾಗಿ ನುಂಗುತ್ತದೆ. ಮನುಷ್ಯನನ್ನು ಕಚ್ಚಲು, ವಿಷ ಪ್ರಯೋಗಿಸಲು ಅದರ ವಿಷದ ಉಪಕರಣ ಬೆಳೆದಿಲ್ಲ.

ನಾವು ಅಷ್ಟೆ. ಹಾವಿಗೆ ನಾವು ತೊಂದರೆ ಕೊಡದದ್ದಿರೆ, ಅದೂ ಕೂಡ ನಮಗೆ ತೊಂದರೆ ಕೊಡುವುದಿಲ್ಲ. ಆದರೆ ಕೆಲವು ಸಂದರ್ಭಗಳಲ್ಲಿ. ಕತ್ತಲಿನಲ್ಲಿ, ಕಾಡು, ಪೊದರುಗಳ ನಡುವೆ ನಡೆಯುವಾಗ ಹಟಾತ್ತನೆ ಹಾವು ಎದುರಾಗಬಹುದು. ಅದು ಕಚ್ಚಲೂಬಹುದು. ಹಾವು ಕಚ್ಚಿದಾಗ ವಿಷದ ಪ್ರಭಾವಕ್ಕಿಂತ ಮಿಗಿಲಾಗಿ ಮನದ ಮೇಲಾಗುವ ಆಘಾತ ಹೆಚ್ಚು ಅಪಾಯಕರ. ತಿಳುವಳಿಕೆ ಕಳೆದುಕೊಂಡು, ವಿಷವಲ್ಲದ ಹಾವು ಕಚ್ಚಿದಾಗಲೂ ಆಘಾತದಿಂದ ಸತ್ತವರು ಬಹಳ. ಆದ್ದರಿಂದ ಹಾವು ಕಚ್ಚಿದ ವ್ಯಕ್ತಿಗೆ ತಕ್ಷಣ ಯಾವ ಪ್ರಥಮ ಚಿಕಿತ್ಸಾ ಕ್ರಮವನ್ನು ತೆಗೆದುಕೊಳ್ಳಬಹುದೊ ಅದನ್ನು ಕೈಗೊಂಡು, ಅನಂತರ ಕಚ್ಚಿದ ಹಾವು ದೊರಕುವಂತಿದ್ದರೆ, ಹಿಡಿದೊ, ಹಿಡಿಸಿಯೊ (ಅಥವಾ ಬಹಳೊಮ್ಮೆ ಸಾಯಿಸಿಯೊ) ಅದನ್ನು ಪರೀಕ್ಷಿಸಿ ಅದು ವಿಷದ ಹಾವೆ, ಅಲ್ಲವೇ, ವಿಷದ ಹಾವಾಗಿದ್ದರೆ ಯಾವ ರೀತಿಯ ವಿಷದ ಹಾವು ಎಂಬುದನ್ನು ನಿರ್ಧರಿಸಿ ಮುಂದಿನ ಚಿಕಿತ್ಸೆಗೆ ತೊಡಗಬಹುದು. ಆಗ ಕೆಳಗೆ ತಿಳಿಸಿರುವ ಕ್ರಮಗಳನ್ನು ಅನುಸರಿಸಬಹುದು.

೧. ಮೊದಲು ಹಾವಿನ ಬಾಲವನ್ನು ಪರೀಕ್ಷಿಸಿರಿ. ಬಾಲವು ಪಕ್ಕದಿಂದ ಪಕ್ಕಕ್ಕೆ ಅದುಮಿದಂತೆ ಚಪ್ಪಟೆಯಾಗಿದ್ದು ದೋನೀಯ ಹುಟ್ಟಿನಂತಿದ್ದರೆ (ಚಿತ್ರ ೧) ಅದು ಕಡಲ ಹಾವು. ಕಡಲ ಹಾವುಗಳಲ್ಲೆವೂ ವಿಷದ ಹಾವುಗಳು. ಬಾಲ ಚಪ್ಪಟೆಯಾಗಿಲ್ಲದೆ ದುಂಡಗೆ ಉರುಳೆ ಯಾಕಾರವಾಗಿದ್ದರೆ ಅದು (ಚಿತ್ರ ೨) ವಿಷದ ಅಥವಾ ವಿಷವಲ್ಲದ ಹಾವಾಗಿರಬಹುದು. ಆಗ ಅದರ ಹೊಟ್ಟೆಯ ಭಾಗವನ್ನು ಪರೀಕ್ಷಿಸಿರಿ.

೨. ಹೊಟ್ಟೆಯ ಭಾಗವು ಸಣ್ಣ ಹುರುಪೆಗಳ ಹೊದಿಕೆಯನ್ನು ಹೊಂದಿದ್ದರೆ (ಚಿತ್ರ ೩) ಅದು ವಿಷದ ಹಾವಲ್ಲ. ಬದಲು ಹೊಟ್ಟೆಯ ಭಾಗದ ಹುರುಪೆಗಳು ಅಗಲವಾಗಿ, ಒಮದು ಪಕ್ಕದಿಂದ ಇನ್ನೊಂದು ಪಕ್ಕದವರೆಗೆ ಅಡ್ಡಡ್ಡವಾಗಿ ಹರಡಿದ್ದರೆ (ಚಿತ್ರ೪) + (ಚಿತ್ರ ೫) ಅದು ವಿಷ ಅಥವಾ ವಿಷವಲ್ಲದ ಹಾವಾಗಿರಬಹುದು.

೩. ಆಗ ಅದರ ತಲೆಯನ್ನು ಪರೀಕ್ಷಿಸಿರಿ. ತಲೆಯ ಮೇಲೆ ಸಣ್ಣ ಹುರುಪೆಗಳ ಹೊದಿಕೆ ಇದ್ದರೆ (ಚಿತ್ರ ೬) ಅದು ಮಂಡಲದ ಹಾವು, ಎಲ್ಲಾ ರೀತಿಯ ಮಂಡಲದ ಹಾವುಗಳೂ ವಿಷದ ಹಾವುಗಳು.

೪. ಕಣ್ಣಿನ ಪ್ರಶಲ್ಕಕ್ಕೂ ಮತ್ತು ನಾಸಿಕ ಪ್ರಶಲ್ಕಕ್ಕೂ ನಡುವಿನ ಲೋರಿಯಲ್ ಪ್ರಶಲ್ಕದಲ್ಲಿ ಲೋರಿಯಲ್ ಕುಳಿ ಇದ್ದರೆ (ಚಿತ್ರ ೭) ಅದು ಕುಳಿ ಮಂಡಲ ಹಾಗು ಅದೊಂದು ವಿಷದ ಹಾವು.

೫. ತಲೆಯ ಮೇಲೆ ತಟ್ಟೆಗಳಂತಹ ಪ್ರಶಲ್ಕಗಳ ಹೊದಿಕೆ ಇದ್ದರೆ (ಚಿತ್ರ ೮) ಅವು ವಿಷದ ಅಥವಾ ವಿಷವಲ್ಲದ ಹಾವಾಗಿರ ಬಹುದು.

೬. ಈಗ ಹಾವಿನ ಬಾಯಿಯ ಮೇಲು ತುಟಿ ಮತ್ತು ಕೆಳ ತುಟಿಯ ಅಂಚಿನ ಹುರುಪೆಗಳನ್ನು (ಅವುಗಳನ್ನು ಕ್ರಮವಾಗಿ ಸೂಪ್ರಲೇಬಿಯಲ್ ಮತ್ತು ಇನ್ ಫ್ರಲೇಬಿಯಲ್ ಗಳೆಂದು ಕರೆಯುತ್ತಾರೆ) ಪರೀಕ್ಷಿಸಿರಿ.

೭. ಮೂರನೆಯ ಸೂಪ್ರಲೇಬಿಯಲ್ ಪ್ರಶಲ್ಕವು ದೊಡ್ಡದಾಗಿದ್ದು ನಾಸಿಕ ಮತ್ತು ಕಣ್ಣುಗಳೆರಡನ್ನು ಮುಟ್ಟುವಂತಿದ್ದರೆ (ಚಿತ್ರ ೯) ಅದು ನಾಗರ ಹಾವು ಮತ್ತು ಅದು ವಿಷದ ಹಾವು.

೮. ಹಾಗಿಲ್ಲದೆ ನಾಲ್ಕು ಮಾತ್ರ ಇನ್ ಫ್ರಿಲೇಬಿಯಲ್ ಪ್ರಶಲ್ಕಗಳಿದ್ದು ನಾಲ್ಕನೆಯದೇ ಕಡೆಯದು ಮತ್ತು ಅತ್ಯಂತ ದೊಡ್ಡದು. (ಚಿತ್ರ ೧೦) ಆಗಿದ್ದರೆ ಅದು ಕಟ್ಟು ಹಾವು ಮತ್ತು ವಿಷದ ಹಾವು.

೯. ಆರು ಇನ್ ಫ್ರಲೇಬಿಯಲ್ ಗಳಿದ್ದು, ತಲೆಯ ಹಿಂಭಾಗದಲ್ಲಿ ಬಿಳಿಯ ಅಡ್ಡ ಪಟ್ಟಿ ಇದ್ದು, ದೇಹದ ಉದ್ದಕ್ಕೂ ವರ್ಣ ರಂಜಿತ ಪಟ್ಟಿಗಳಿದ್ದರೆ (ಚಿತ್ರ ?) ಅದು ಹಳವದ ಹಾವು ಮತ್ತು ವಿಷದ ಹಾವು.

ಇದಾವ ಸೂಚನೆಯೂ, ಗುರುತೂ ಇಲ್ಲದಿದ್ದರೆ ಅದೊಂದು ವಿಷವಿಲ್ಲದ ನಿರುಪದ್ರವಿ ಹಾವು. ಇದರ ಕಡಿತದಿಂದ ಸ್ಥಳೀಯವಾಗಿ ಊತ, ಉರಿ, ನೋವು ಉಂಟಾಗಬಹುದು. ಅದರ ಉಪಶಮನಕ್ಕೆ ಅನುವಾದ ಚಿಕಿತ್ಸೆ ನೀಡಿರಿ. ಅದು ವಿಷದ ಹಾವೆಂದು ತಿಳಿದರೆ ಅದಕ್ಕೆ ಸೂಕ್ತವಾದ ಪ್ರತಿವಿಷ ಔಷಧ (ಆಂಟಿವೆನಮ್) ಕೊಟ್ಟು ಚಿಕಿತ್ಸೆ ನಡೆಸಿರಿ.

107_69_PP_KUH