ಗಣ : ಒಫಿಡಿಯ
ಕುಟುಂಬ : ನೇಟ್ರಿಸಿಡೀ (Nitricidae)
ಉದಾ : ಚೌಕುಳಿ ಅಡಿಗಟ್ಟು (ನೌತಳ) ನೀರು ಹಾವು (Checkered keel back)
ಶಾಸ್ತ್ರೀಯ ನಾಮ : ಕ್ಸಿನೊಕ್ರೋಪಿಸ್
ಪಿಸ್ಕೇಟರ್ (Xenochropis piscator)

090_69_PP_KUH

ವಿತರಣೆ : ಇದು ಸಾಮಾನ್ಯವಾಗಿ ಎಲ್ಲೆಡೆ ಕಂಡು ಬರುವ ನೀರು ಹಾವು. ಪಶ್ಚಿಮ ಘಟ್ಟದ ಹೊಳೆಹಳ್ಳಗಳಲ್ಲಿ, ಕರೆ ಕಟ್ಟೆಗಳಲ್ಲಿ ಕಂಡು ಬರುತ್ತದೆ.

ಗಾತ್ರ : ೧.೭೫ ರಿಂದ ೨ ಮೀಟರ್ ಉದ್ದ.

ಆಹಾರ : ಕಪ್ಪೆಯ ಗೊದಮೊಟ್ಟೆಗಳು, ಜಲಕೀಟಗಳು, ದೊಡ್ಡವಾದ ಮೇಲೆ ಮೀನು, ಕಪ್ಪೆ ಅಪರೂಪವಾಗಿ ದಂಶಕ ಸಸ್ತನಿಗಳು ಮತ್ತು ಪಕ್ಷಿಗಳು. ಸಾಮಾನ್ಯವಾಗಿ ಆಹಾರ ಜೀವಿಗಳನ್ನು ನುಂಗುತ್ತವೆ.

ಲಕ್ಷಣಗಳು : ಸಾಕಷ್ಟು ದಪ್ಪ ದೇಹದ, ಆದರೆ ಸಣ್ಣ ತಲೆಯ ಹಾವು. ತಲೆ ಅಂಡಾಕಾರವಾಗಿದೆ. ಮೂಗಿನ ಹೊಳ್ಳೆಗಳು ಸೀಳಿಕೆಗಳಂತಿವೆ. ಸಾಧಾರಣ ಗಾತ್ರದ ಕಣ್ಣುಗಳು. ದೇಹದ ಉದ್ದದ ಕಾಲುಬಾಗ ಅಥವಾ ಮೂರನೆಯ ಒಂದು ಭಾಗದಷ್ಟಿರುವ ಬಾಲ.

ದೇಹದ ಬಣ್ಣ ಪ್ರಾಣಿಯಿಂದ ಪ್ರಾಣಿಗೆ ಬದಲಾಗುತ್ತದೆ. ನೌತಳದಂತೆ ಏಣಿರುವ ಹುರುಪೆಗಳ ಹೊದಿಕೆ ಇದೆ. ಬೆನ್ನು ಬಣ್ಣ ಸಮೃದ್ಧವಾದ ಆಲಿವ್‌ಹಸಿರು. ಕೆಲವು ಸಾರಿ ಪಕ್ಕೆಗಳಲ್ಲಿ ಇಕ್ಕೆಡೆಗಳಲ್ಲಿಯೂ ಕೆಲವು ಪಟ್ಟಿಗಳು ಉದ್ದವಾಗಿ ಹರಡಿರಬಹುದು ಕೆಂಪು ಪಟ್ಟಿಗಳಿರಬಹುದು. ಹೊಟ್ಟೆಯ ಭಾಗ ಹಳದಿ ಅಥವಾ ಕಿತ್ತಲೆ ಬಣ್ಣ. ಸಾಮಾನ್ಯವಾಗಿ ಗಂಡು ಹಾವಿಗಿಂತಲೂ ಹೆಣ್ಣು ಹಾವು ಉದ್ದ. ಬೆನ್ನಿನ ಮೇಲೆ ವಿವಿಧ ಗಾತ್ರದ ಚುಕ್ಕೆ ಗುರುತುಗಳಿವೆ. ತಲೆ ಬಣ್ಣ ಆಲಿವ್‌ಕಂದು. ಕಣ್ಣಿನ ಕೆಳಗೆ ಮತ್ತು ಹಿಂದೆ ಒಂದೊಂದು ಕಪ್ಪು ಪಟ್ಟಿಗಳಿವೆ.

ಕೆಲವು ಹಾವುಗಳಲ್ಲಿ ಗುಲಾಬಿ, ಕಡುಕೆಂಪು ಚುಕ್ಕಿಗಳು ಇರಬಹುದು. ಈ ರೀತಿಯ ಆಕರ್ಷಕ ವರ್ಣ ವಿನ್ಯಾಸ ಹುರುಪೆಗಳ ಕೆಳಗಿನ ಅರ್ಧಭಾಗಕ್ಕೆ ಮಾತ್ರ ಸೀಮಿತ. ಹಾವು ದೇಹವನ್ನು ಉಬ್ಬಿಸಿದಾಗ ಈ ವಿನ್ಯಾಸ ಸ್ಪಷ್ಟವಾಗಿ ಕಾಣಿಸುತ್ತದೆ.

ಸಂತಾನಾಭಿವೃದ್ಧಿ : ಹೆಣ್ಣು ಹಾವು ಗಂಡಿಗಿಂತ ಹೆಚ್ಚು ಉದ್ದವಾದರು ಅದರ ಬಾಲ ಮೋಟು. ಹೆಣ್ಣು ಮತ್ತು ಗಂಡು ಕೆಲವು ಕಾಲ ಜೋಡಿಯಾಗಿ ಕಾಲ ಕಳೆಯುತ್ತವೆ. ಸಂಭೋಗ ಕ್ರಿಯೆ ನಡೆದು ಹೆಣ್ಣು ಗರ್ಭಧರಿಸಿದ ಮೇಲೂ ಒಟ್ಟಿಗೆ ಇರುತ್ತವೆ. ಅಕ್ಟೋಬರ್ ತಿಂಗಳಲ್ಲಿ ಸಂಭೋಗ ನಡೆದು, ೫೫ ರಿಂದ ೬೭ ದಿನಗಳ ವರೆಗಿನ ಗರ್ಭಾವಸ್ಥೆಯ ನಂತರ ಮೊಟ್ಟೆಗಳನ್ನಿಡುತ್ತವೆ. ಒಂದು ಸಾರಿಗೆ ೮ ರಿಂದ ೯೧ ಮೊಟ್ಟೆಗಳನ್ನಿಡಬಹುದು.

ಸ್ವಭಾವ : ಇದು ಬಹಳ ಸಾಮಾನ್ಯವಾದ ಹಾವು. ನದಿ, ಕೆರೆ, ಕೊಳಗಳಲ್ಲಿ, ವಿಶೇಷವಾಗಿ ಬತ್ತದ ಗದ್ದೆ, ಜೌಗು ನೆಲದಲ್ಲಿಯೂ ಕಂಡು ಬರಬಹುದು. ಇದು ತುಂಬಾ ಕ್ರೂರವಾದ ಪ್ರಾಣಿ. ಎದುರಿಸಿದವರಿಗೆ ಬಡಿಚುವ ಮೊದಲು ದೇಹದ ಮುಂಭಾಗವನ್ನು ನೆಟ್ಟಗೆ ನಿಲ್ಲಿಸಿ ಹಿಗ್ಗಿಸುತ್ತದೆ. ತುಂಬಾ ಚೂಟಿಯಾದ ಹಾವು. ನೆಲದ ಮೇಲೆಯೆ ಮೇಲಕ್ಕೆ ಜಿಗಿಯಬಲ್ಲದು. ಶತ್ರು ಅಟ್ಟಿಸಿಕೊಂಡು ಬಂದಾಗ, ಪುನಃ ಪುನಃ ಜಿಗಿದು, ಹಾರಿ ಓಡಿ ಹೋಗುತ್ತದೆ. ನೀರಿನಲ್ಲಿ ಸಮರ್ಥವಾಗಿ, ವೇಗವಾಗಿ ಈಜುತ್ತದೆ. ಸಮರ್ಥ ಮುಳುಗಕನೂ ಹೌದು.

ಮುಂಗುಸಿಯಂತಹ ಹಿಂಸ್ರ ಪ್ರಾಣಿ ಮೆಲೇರಿ ಬಂದಾಗ ಸತ್ತಂತೆ ಬಿದ್ದುಕೊಂಡು ನಟನೆ ಮಾಡುತ್ತದೆ. ಇದರ ಕಿವಿಯ ಬಳಿ ಇರುವ ಗ್ರಂಥಿಗಳ ಸ್ರಾವಿಕೆಯು ಕೆಲವು ಸಸ್ತನಿಗಳಿಗೆ ಮಾರಕವಾಗಬಹುದು. ಆದರೆ ಮನುಷ್ಯ ಮತ್ತು ದೊಡ್ಡ ಸಸ್ತನಿಗಳ ಮೇಲೆ ಯಾವ ಕೆಟ್ಟ ಪ್ರಭಾವವನ್ನು ಬೀರದು.

—- 

ಗಣ : ಒಫಿಡಿಯ
ಕುಟುಂಬ : ನೇಟ್ರಿಸಿಡೀ (Nitricidae)
ಉದಾ : ಪಟ್ಟಿ ನೌತಲ ಹಾವು (Striped keelback)
ಶಾಸ್ತ್ರೀಯ ನಾಮ : ಅಂಫಿಸ್ಮ ಸ್ಟೊಲೇಟ (Ampniesma stolata)

091_69_PP_KUH

ವಿತರಣೆ : ಇವು ನೀರು ಹಾವುಗಳಿಗೆ ತೀರಾ ಹತ್ತಿರದ ಸಂಬಂಧಿಗಳು ಮತ್ತು ನೀರಿನಲ್ಲಿ ಸುಲಲಿತವಾಗಿ ಈಜಿಕೊಂಡು ಓಡಾಡಬಲ್ಲವು. ಗುಡ್ಡ ಗಾಡಿನಲ್ಲಿ ಸಮುದ್ರ ಮಟ್ಟದಿಂದ ೨೦೦೦ ಮೀ. ರವರೆಗೆ ವಾಸಿಸುತ್ತವೆ. ಬತ್ತದ ಗದ್ದೆಗಳು, ಕೆರೆಗಳ ದಂಡೆಯಲ್ಲಿ ಹುಲ್ಲು ಮತ್ತು ಪೊದರುಗಳ ನಡುವೆ ಇರುತ್ತವೆ.

ಗಾತ್ರ : ಸರಾಸರಿ ಉದ್ದ ೪೦ ಸೆಂ.ಮೀ. ಗರಿಷ್ಟ ಉದ್ದ ಹೆಣ್ಣು ಹಾವು ೮೦ ಸೆಂ.ಮೀ. ಉದ್ದ ಬೆಳೆಯುತ್ತದೆ.

ಆಹಾರ : ಕಪ್ಪೆಗಳು ಮುಖ್ಯ ಆಹಾರ ಇವು ನೆಲಗಪ್ಪೆಗಳು, ಸಣ್ಣ ಹಲ್ಲಿಗಳು ಮತ್ತು ದಂಶಕ (ಇಲಿಗಳು) ಗಳನ್ನು ನುಂಗುತ್ತವೆ. ಕೀಟಗಳು, ಗೊದಮೊಟ್ಟೆಗಳು ಮುಂತಾದವನ್ನೂ ಸೇವಿಸುತ್ತವೆ.

ಲಕ್ಷಣಗಳು : ಇವುಗಳಿಗೆ ಕಪ್ಪೆಗಳನ್ನು ಹಿಡಿಯಲು ಅನುಕೂಲವಾದ ಬಾಯಂಗಳದಲ್ಲಿ ಹಿಂದಿನ ಹಲ್ಲುಗಳಿವೆ. ದೇಹದ ಬಣ್ಣ ಕಡುಕಂದು. ದೇಹದ ಉದ್ದಕ್ಕೂ ಬೆನ್ನಿನ ಇಕ್ಕೆಡಗಳಲ್ಲಿ ಎರಡು ಹಳದಿ ಅಥವಾ ಟ್ಯಾನ್‌ಪಟ್ಟೆಗಳಿವೆ. ದೇಹದ ಹಿಂಭಾಗದಲ್ಲಿ ಈ ಪಟ್ಟಿಗಳು ಹೆಚ್ಚು ಪ್ರಕಾಶಿಕವಾಗಿವೆ. ತಲೆಯು ತೆಳು ಕಂದು ಬಣ್ಣ. ತಲೆಯ ಪಕ್ಕಗಳು, ತುಟಿ ಭಾಗ ಮತ್ತು ಕೆನ್ನೆಗಳು ಬಿಳಿ ಅಥವಾ ಹಳದಿ. ಇದು ಭಾರತದ ಸಾಮಾನ್ಯ ಹುಲ್ಲು ಹಾವು.

ಸಂತಾನಾಭಿವೃದ್ಧಿ : ಅಂಡಜಗಳು, ಒಮ್ಮೆಗೆ ೧೨ ರವರೆಗೆ ಮೊಟ್ಟೆಗಳನ್ನಿಡಬಹುದು. ವರ್ಷಪೂರ್ತಿ ಮೊಟ್ಟೆ ಇಡುತ್ತವೆ. ನಿರ್ದಿಷ್ಟ ಋತು ಮಾನವಿಲ್ಲ.

ಸ್ವಭಾವ : ದಿವಾಚರಿಗಳು, ರಾತ್ರಿಗಳನ್ನು ಬಂಡೆಗಳ ಕೆಳಗೆ ನಿದ್ರಿಸಿ ಕಾಲಕಳೆಯುತ್ತವೆ. ಬಿಲಗಳಲ್ಲಿ, ಮರಗಳ ರೆಂಬೆಗಳ ನಡುವೆ ಅಥವಾ ಪೊದರುಗಳಲ್ಲಿ. ಋತುಮಾಸದಲ್ಲಿ ಒಂದು ಹೆಣ್ಣು ಹಾವಿನ ಬಳಿ ೬ ಅಥವಾ ಅದಕ್ಕೂ ಹೆಚ್ಚು ಸಂಖ್ಯೆಯ ಸಣ್ಣ ಗಂಡು ಹಾವುಗಳು ಸುತ್ತಾಡುತ್ತಿರುವುದು ಸಾಮಾನ್ಯ ದೃಶ್ಯ. ಬಹಳ ಸಾಧು ಸ್ವಭಾವದ ಹಾವು. ಕಡಿಯುವುದು ಅಪರೂಪ. ಹೆದರಿದಾಗ, ರೇಗಿದಾಗ ಸಣ್ಣ ಹೆಡೆ ಬಿಚ್ಚಿ ಸುಂದರ ನೀಲ, ಕೆಂಪು ಅಥವಾ ಬಿಳಿ ಹುರುಪೆ ಅಂತರ ಬಣ್ಣ ಪ್ರದರ್ಶಿಸುತ್ತವೆ.

—- 

ಗಣ : ಒಫಿಡಿಯ
ಕುಟುಂಬ : ಕೊಲುಬ್ರಿಡೀ (Colubridae)
ಉದಾ : ಟ್ರಿಂಕೆಟ್
ಹಾವು (Trinket snake)
ಶಾಸ್ತ್ರೀಯ ನಾಮ : ಇಲಾಫೆ ಹೆಲೆನ (Elaphe helena)

092_69_PP_KUH

ವಿತರಣೆ : ಕರ್ನಾಟಕ ರಾಜ್ಯದ ಬಯಲು ಪ್ರದೇಶ ಮತ್ತು ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಸಮುದ್ರ ಮಟ್ಟದಿಂದ ೧೦೦೦ ಮೀಟರ್ ಎತ್ತರದವರೆಗೆ ಕಂಡುಬರುತ್ತವೆ. ಅಪರೂಪವಾಗಿ ಮನುಷ್ಯನ ವಸತಿಗಳ ಬಳಿಯೂ ಕಂಡುಬರಬಹುದು.

ಗಾತ್ರ : ಸಾಮಾನ್ಯವಾಗಿ ೪ ಅಡಿ ಉದ್ದವಿರುತ್ತದೆ. ಅತ್ಯಂತ ಉದ್ದ ದಾಖಲೆ ೫ ಅಡಿ ೩ ಅಂಗುಲ. ಹೆಣ್ಣು ಗಂಡಿಗಿಂತ ಹೆಚ್ಚು ಉದ್ದವಿರುತ್ತದೆ.

ಆಹಾರ : ದಂಶಕ ಪ್ರಾಣಿಗಳು ಇದರ ಮುಖ್ಯ ಆಹಾರ. ಅಪರೂಪವಾಗಿ ಹಕ್ಕಿಗಳನ್ನು ಮತ್ತು ಹಕ್ಕಿಗಳ ಮೊಟ್ಟೆಗಳನ್ನು ತಿನ್ನುತ್ತವೆ. ಹಾವಿನ ಮರಿಗಳು ಕೀಟಗಳು ಮತ್ತು ಸಣ್ಣ ಹಲ್ಲಿಗಳನ್ನು ಹಾವುರಾಣಿಗಳನ್ನು ತಿನ್ನುತ್ತವೆ.

ಲಕ್ಷಣಗಳು : ಸಾಧಾರಣ ಗಾತ್ರ. ತೆಳವು, ನಯವಾದ, ಹೊಳಪು ಹುರುಪೆಗಳ ಹೊದಿಕೆ. ಮುಂಭಾಗ ಬಿಳಿಪು ಮತ್ತು ದಟ್ಟ ಬಣ್ಣದ ಬಾಲ. ದೇಹ ಕಂದಿದ ಚಾಕಲೇಟ್‌ಕಂದು ಬಣ್ಣ. ದೇಹದ ಪಕ್ಕದಲ್ಲಿ ಎರಡು ಪ್ರಧಾನ ದಟ್ಟ ಬಣ್ಣದ ಪಟ್ಟಿಗಳಿವೆ. ಮುಂಭಾಗದಲ್ಲಿ ಚೌಕಳಿ ಗುರುತುಗಳಿವೆ. ತಲೆ ಉದ್ದ. ಕುತ್ತಿಗೆಯ ಮೇಲ್ಭಾಗದಲ್ಲಿ ಹಿಂದೆ ಮುಂದಾದ ‘V’ ಗುರುತು ಇದೆ. ಹೊಟ್ಟೆಯ ಭಾಗ ಮುತ್ತು ಬಿಳಿಪು. ಕಣ್ಣುಗಳ ಮುಂದಿನ ಹುರುಪೆಗಳ ಮೇಲೆ ಅನೇಕ ರಂಧ್ರಗಳಿವೆ. ಅವು ಸಂವೇದನಾ ರಚನೆಗಳಿರಬಹುದೆಂದು ಭಾವಿಸಲಾಗಿದೆ.

ಸಂತಾನಾಭಿವೃದ್ಧಿ : ಈ ಹಾವುಗಳಲ್ಲಿ ವರ್ಷ ಪೂರ್ತಿ ಸಂತಾನೋತ್ಪತ್ತಿ ಕ್ರಿಯೆ ನಡೆಯುತ್ತದೆ. ಒಂದು ಹೆಣ್ಣು ಹಾವು ಒಂದು ಸಾರಿಗೆ ೬-೮ ಸಂಖ್ಯೆಯ, ಉದ್ದ ಆಕಾರದ ಮೊಟ್ಟೆಗಳನ್ನಿಡುತ್ತದೆ. ೫೫ ದಿನಗಳ ಮೇಲೆ ಮೊಟ್ಟೆ ಒಡೆದು ಮರಿ ಹೊರಬರುತ್ತವೆ. ಹೆಣ್ಣು ಹಾವು ತನ್ನ ಮೊಟ್ಟೆ ಮರಿಗಳ ಸುತ್ತ ಸುತ್ತಿಕೊಂಡು ರಕ್ಷಿಸುವ ಅಭ್ಯಾಸವಿದೆ.

ಸ್ವಭಾವ : ಗೊಂದಲವಾದಾಗ ಉದ್ರೇಕಗೊಂಡು ರೇಗುತ್ತವೆ. ದೇಹವನ್ನು ನೆಲದಿಂದ ಮೇಲೆತ್ತಿ ಬಡಿಯುತ್ತವೆ. ಇವು ರಾತ್ರಿಹಗಲು ಎರಡೂ ಹೊತ್ತು ಚಟುವಟಿಕೆಯಿಂದಿರುತ್ತವೆ. ಮನುಷ್ಯ ಅವನ್ನು ಹಿಡಿದಾಗ ಬಹಳ ವೇಳೆ ಸಾಧುವಾಗಿ ತಾಳ್ಮೆಯಿಂದ ವರ್ತಿಸಿದರೂ ಕೆಲವು ಸಾರಿ ಕತ್ತನ್ನು ಉಬ್ಬಿಸಿ, ತಲೆ ಎತ್ತಿ ಬಾಯಿ ತೆರೆದು ತನ್ನನ್ನು ಹಿಡಿದವರತ್ತ ಬಡಿಯುತ್ತವೆ. ಕೆಲವೊಮ್ಮೆ ರಕ್ಷಣೆಗಾಗಿ ತನ್ನ ಬಾಲವನ್ನು ಅಲ್ಲಾಡಿಸಿಸುತ್ತದೆ. ಹವೆಬಿಸಿಯಾಗಿದ್ದಾಗ ಇವು ಹುತ್ತ, ಬಿಲಗಳ ಆಳಕ್ಕೆ ಹೋಗುತ್ತವೆ. ಕಲ್ಲುರಾಶಿಗಳ ಮತ್ತು ಪೊದರುಗಳಲ್ಲಿ ಅಡಗಿದ್ದು ಹೊರಗೆ ತಂಪು ಮರಳಿದಾಗ ಹೊರಬರುತ್ತವೆ.

—- 

ಗಣ : ಒಫಿಡಿಯ
ಕುಟುಂಬ : ನೇಟ್ರಿಸಿಡೀ (Nitricidae)
ಉದಾ : ಕಾಪರಹೆಡ್
‌(Copper head)
ಶಾಸ್ತ್ರೀಯ ನಾಮ : ಇಲಾಫೆ ರೇಡಿಯೇಟ (Elaphe radiata)

093_69_PP_KUH

ವಿತರಣೆ : ಭಾರತದ ದಕ್ಷಿಣ ದ್ವೀಪ ಕಲ್ಪದ ಕಾಡುಗಳ ಅಂಚಿನ ಪ್ರದೇಶಗಳಲ್ಲಿ ವಿಶೇಷವಾಗಿ ಕಂಡುಬರುತ್ತವೆ. ಅಪರೂಪವಾಗಿ ಜನ ವಸತಿಯ ಬಳಿಯೂ ಸುಳಿಯಬಹುದು. ಸಮುದ್ರ ಮಟ್ಟದಿಂದ ೫೦೦-೨೦೦೦ ಮೀಟರ್ ಎತ್ತರದವರೆಗೆ ದೊರಕುತ್ತವೆ.

ಗಾತ್ರ : ೧.೩ ರಿಂದ ೧.೫ ಮೀಟರ್ ಉದ್ದ. ಹೆಣ್ಣು ಹಾವುಗಳು ಗಂಡುಗಳಿಗಿಂತ ಹೆಚ್ಚು ಉದ್ದ.

ಆಹಾರ : ಸಣ್ಣ ಸಸ್ತನಿಗಳನ್ನು ತಿನ್ನುವುದು ಹೆಚ್ಚು. ಆದರೆ ಹಲ್ಲಿಗಳು, ಹಸಿವಾದಾಗ ಸಣ್ಣ ಹಾವುಗಳನ್ನು ತಿನ್ನುತ್ತವೆ.

ಲಕ್ಷಣಗಳು : ನಡುದೇಹದಲ್ಲಿ ೨೫ ರಿಂದ ೨೯ ಸಾಲು ಹುರುಪೆಗಳ ಹೊದಿಕೆಯುಂಟು. ಎರಡು ಅಥವಾ ಮೂರು ಲೇಬಿಯ (ಮೇಲ್ತುಟಿಯ) ಪ್ರಶಲ್ಕಗಳು ಕಣ್ಣನ್ನು ಮುಟ್ಟುತ್ತವೆ.

ದೇಹದ ಮೇಲ್ಭಾಗ ವಿಧವಿಧವಾದ ಕಂದು ಬಣ್ಣವನ್ನು ತೋರುತ್ತದೆ. ತುಟಿಗಳು ಹಳದಿ ಅಥವಾ ಬಿಳುಪು. ತುಟಿಯವರೆಗೆ ಹರಡಿದ ಒಂದು ಓರೆ ಪಟ್ಟಿ ಇದೆ. ಜೊತೆಗೆ ದೇಹದ ಮುಂಭಾಗವು ವಿವಿಧ ರೀತಿಯ ಪಟ್ಟಿ ನಮೂನೆಗಳನ್ನು ತೋರುತ್ತದೆ. ಇದು ಪಶ್ಚಿಮ ಘಟ್ಟದಲ್ಲಿ ವಾಸಿಸುವ ಹಾವುಗಳ ವಿಶೇಷ ಲಕ್ಷಣ. ಈ ಪಟ್ಟಿಗಳು ಪಕ್ಕೆಗಳ ಮೇಲೂ ಇರಬಹುದು. ಕುತ್ತಿಗೆಯ ಭಾಗದಲ್ಲಿ ಒಂದು ಅಸಾಮಾನ್ಯವಾದ ‘<‘ ಆಕಾರದ ಕಪ್ಪು ಗುರುತಿದೆ. ಈ ಗುರುತು ಎರಡು ಸಮಾಂತರ ರೇಖೆಗಳಂತೆ ಹರಡಿರಬಹುದು ಅಥವಾ ಕೂಡಿಕೊಂಡಿರುವ ವಿನ್ಯಾಸವನ್ನೂ ತೋರಬಹುದು.

ಸಂತಾನಾಭಿವೃದ್ಧಿ : ಏಪ್ರಿಲ್‌ಮೇ ತಿಂಗಳಲ್ಲಿ ಇಟ್ಟ ಮೊಟ್ಟೆಗಳು ಜೂನ್‌ತಿಂಗಳ ಹೊತ್ತಿಗೆ ಒಡೆದು ಮರಿಗಳು ಹೊರ ಬರುತ್ತವೆ.

ಸ್ವಭಾವ : ಕೆಣಕಿದಾಗ, ಶತ್ರುಗಳು ಆಕ್ರಮಿಸಿದಾಗ ತಾವೂ ಮೇಲೆ ಬೀಳುತ್ತವೆ. ಆಗ ತಲೆ, ದೇಹದ ಮುಂಭಾಗವನ್ನು ನೆಲದಿಂದ ಮೇಲೆತ್ತಿ, ಕತ್ತನ್ನು ಕುಗ್ಗಿಸಿ, ಬೆನ್ನನ್ನು ಬಾಗಿಸಿ, ಬಡಿಯುತ್ತವೆ, ಉದ್ರೇಕಗೊಂಡಾಗ ದೇಹದ ಹುರುಪೆಗಳು ಹಿಗ್ಗಿ ಅವುಗಳ ನಡುವಿನ ಕೆಂಪು ಚರ್ಮ ಕಾಣಿಸುತ್ತದೆ.

—- 

ಗಣ : ಒಫಿಡಿಯ
ಕುಟುಂಬ : ಕೊಲುಬ್ರಿಡೀ (Colubridae)
ಉದಾ : ಸಾಮಾನ್ಯ ಮೂಷಕ ಭಕ್ಷಕ ಹಾವು (Common rat snake)
ಶಾಸ್ತ್ರೀಯ ನಾಮ : ಟಿಯಾಸ್
ಮ್ಯೂಕೋಸಸ್‌(Ptyas mucosus)

094_69_PP_KUH

ವಿತರಣೆ : ಪ್ರಮುಖವಾಗಿ ಬಯಲು ಸೀಮೆವಾಸಿಯಾದರೂ ಈ ಹಾವು ಸಮುದ್ರ ಮಟ್ಟದಿಂದ ೧೮೦೦ ಮೀ. ಎತ್ತರದವರೆಗೆ ಗುಡ್ಡಗಾಡಿನಲ್ಲಿಯೂ ದೊರಕುತ್ತದೆ.

ಗಾತ್ರ : ಇವು ೫ ರಿಂದ ೬ ಅಡಿಗಳು ಉದ್ದ. ಅತ್ಯಂತ ಉದ್ದ ದಾಖಲಾಗಿರುವುದೆಂದರೆ ೧೦ ಅಡಿಗಳು. ಹೆಣ್ಣು ಸಾಮಾನ್ಯವಾಗಿ ಗಂಡಿಗಿಂತಲೂ ಹೆಚ್ಚು ಉದ್ದ.

ಆಹಾರ : ಇದರ ಮುಖ್ಯ ಆಹಾರ ದಂಶಕ ಸಸ್ತನಿಗಳು. ಜೊತೆಗೆ ಕಪ್ಪೆ, ಹಲ್ಲಿ, ಹಕ್ಕಿ ಮತ್ತು ಸಣ್ಣ ಹಾವುಗಳನ್ನು ತಿನ್ನುತ್ತವೆ. ಈ ಹಾವಿನ ಮರಿಗಳು ಕಪ್ಪೆಗಳನ್ನು ತಿನ್ನುತ್ತವೆ. ಇದು ಆಹಾರ ಜೀವಿಯನ್ನು ಇಡಿಯಾಗಿ ನುಂಗುತ್ತದೆ. ನುಂಗುವ ಮುನ್ನ ಆಹಾರ ಜೀವಿಯನ್ನು ತನ್ನ ದವಡೆಗಳಿಂದ ಅದುಮಿ, ಹಿಸುಕಿ, ಕೊಂದು ಅನಂತರ ನುಂಗುತ್ತದೆ.

ಲಕ್ಷಣಗಳು : ಇವು ವಾಸಿಸುವ ಪ್ರದೇಶವನ್ನು ಅವಲಂಬಿಸಿ ಇವುಗಳ ದೇಹದ ಬಣ್ಣವು ಬದಲಾಗುತ್ತದೆ. ಬಯಲು ಸೀಮೆಯಲ್ಲಿ ವಾಸಿಸುವ ಹಾವುಗಳ ಬಣ್ಣವು ತಿಳಿಹಳದಿಯಾಗಿದ್ದು ಗುಡ್ಡಗಾಡುಗಳಲ್ಲಿ ವಾಸಿಸುವ ಹಾವುಗಳ ಮೈಬಣ್ಣ ದಟ್ಟವಾಗಿದ್ದು ಹಸಿರು ಛಾಯೆ, ಆಲಿವ್ ಅಥವಾ ಕಂದು ಛಾಯೆಯೂ ಇರಬಹುದು. ಇಡೀ ದೇಹ ಒಂದೇ ಬಣ್ಣವಿದ್ದರೂ ಹುರುಪೆಗಳ ನಡುವೆ ಗುರುತುಗಳು ಇರಬಹುದು. ದೇಹ ಹಿಗ್ಗಿದಾಗ ಈ ಗುರುತುಗಳು ಕಾಣಿಸಿಕೊಳ್ಳುತ್ತವೆ. ಬಹಳೊಮ್ಮೆ ಹೊಟ್ಟೆಯ ಮೇಲೆ ಅಡ್ಡಪಟ್ಟಿಗಳಿರುತ್ತವೆ. ಕೆಳತುಟಿಯ ಮೇಲೆ ಅನೇಕ ಕಪ್ಪು ಸಾಲುಗಳಿವೆ. ಮೊದಲ ನೋಟಕ್ಕೆ ಇವು ನಾಗರ ಹಾವನ್ನು ಹೋಲುತ್ತವೆ. ಆದರೆ ಇವುಗಳು ಉದ್ದ ಹೆಚ್ಚು ದೇಹ ತೆಳವು, ತಲೆ ದುಂಡು ಮತ್ತು ಎದ್ದು ಕಾಣುವ ಕಣ್ಣುಗಳು ಇದ್ದು ಹೆಚ್ಚು ಹೊಳಪನ್ನು ಹೊಂದಿವೆ, ನಾಸಿಕ ರಂಧ್ರಗಳು ದೊಡ್ಡವು, ಕತ್ತು ಸ್ಪಷ್ಟವಾಗಿ ಸಂಪೀಡಿತವಾಗಿ ಪ್ರತ್ಯೇಕವಾಗಿ ಕಾಣುತ್ತದೆ.

ದೇಹ ದಪ್ಪನಾಗಿದ್ದು ಚಪ್ಪಟೆಯಾಗಿದೆ ಮತ್ತು ಎರಡೂ ತುದಿಗಳು ಚಪ್ಪಟೆಯಾಗಿವೆ.

ಸಂತಾನಾಭಿವೃದ್ಧಿ : ಪ್ರದೇಶವನ್ನು ಅನುಸರಿಸಿ ಇವು ಸಂತಾನೋತ್ಪತ್ತಿ ನಡೆಸುವ ಕಾಲವೂ ಬದಲಾಗುತ್ತದೆ. ಬಯಲು ಸೀಮೆಯಲ್ಲಿ ವಾಸಿಸುವ ಇವುಗಳು ಮೇ- ಜೂನ್ ತಿಂಗಳುಗಳಲ್ಲಿ ಸಂತಾನಾಭಿವೃದ್ದಿ ಚಟುವಟಿಕೆ ತೋರಿ ಆಗಸ್ಟ್- ಸೆಪ್ಟೆಂಬರ್ ತಿಂಗಳುಗಳಲ್ಲಿ ಮೊಟ್ಟೆ ಇಡುತ್ತವೆ. ಸೆಪ್ಟೆಂಬರ್ ನಿಂದ ಜನವರಿಯವರೆಗೆ ಮರಿಗಳನ್ನು ಕಾಣಬಹುದು. ಒಂದು ಸಾರಿಗೆ ೬ ರಿಂದ ೧೪ ರವರೆಗೆ ಮೊಟ್ಟೆಗಳನ್ನಿಡುತ್ತವೆ. ಮೊಟ್ಟೆಗಳ ಬಣ್ಣ ಹೊಳಪು ಬಿಳುಪು, ಅಂಡಾಕರ, ಎರಡೂ ತುದಿಗಳು ಗುಮ್ಮಟಗಳಂತಿವೆ. ಮೊಟ್ಟೆಗಳ ಚಿಪ್ಪು ಚರ್ಮದಂತಿರುತ್ತದೆ. ಮೊಟ್ಟೆಗಳನ್ನಿಡುವಾಗ ಅಂಟು ಅಂಟಾಗಿದ್ದು ಒಂದಕ್ಕೊಂದು ಅಂಟಿಕೊಳ್ಳುತ್ತವೆ. ಹೆಣ್ಣು ಹಾವು ಮೊಟ್ಟೆಗಳು ಸುತ್ತ ಸುತ್ತಿಕೊಂಡು ಅವುಗಳನ್ನು ಕಾಪಾಡುತ್ತದೆ. ಮೊಟ್ಟೆಗಳು ಸಾಮಾನ್ಯವಾಗಿ ೪೧ ರಿಂದ ೬೦ ಮೀ ಮೀ. ೨೫ ರಿಂದ ೩೨ ರವರೆಗಿನ ಉದ್ದಗಲ ಇರುತ್ತವೆ. ಈ ಹಾವುಗಳು ೧೧ ವರ್ಷಗಳ ವರೆಗೆ ಬದುಕುತ್ತವೆ.

ಸ್ವಭಾವ : ಇವು ಹೆಚ್ಚಾಗಿ ತಿನ್ನುವುದು ಇಲಿಗಳನ್ನು ಇಲಿಗಳು ವಿಶೇಷವಾಗಿ ಮನುಷ್ಯನ ವಸತಿಯ ಬಳಿ ಹೆಚ್ಚು ಇರುವುದರಿಂದ ಹಾವುಗಳು ಅವನ್ನು ಹುಡುಕುತ್ತ ಅಲ್ಲಿ ಕಾಣಿಸಿಕೊಳ್ಳುತ್ತವೆ. ಇವು ಆಹಾರ ಬೇಟೆಯಾಡುವುದು ಹಗಲಿನಲ್ಲಿ ರೇಗಿದಾಗ ತಮ್ಮ ಕತ್ತನ್ನು ಹಿಗ್ಗಿಸಿ ಬುಸುಗುಟ್ಟುವ ಸದ್ದು ಮಾಡುತ್ತವೆ. ತಲೆಯನ್ನು ಮೇಲೆತ್ತಿ ಜೋರಾಗಿ ಅಪ್ಪಳಿಸುತ್ತವೆ. ಈ ಹಾವು ನಿರುಪದ್ರವಕಾರಿಯಾದರೂ ಕಡಿದಾಗ ನೋವಾಗುತ್ತದೆ. ಈ ಹಾವು ನೀರಿನಲ್ಲಿ ಚೆನ್ನಾಗಿ ಈಜಬಲ್ಲದು ಮರ ಹತ್ತಬಲ್ಲದು. ಆರು ಮೀಟರ್ ಎತ್ತರದಿಂದ ಧುಮುಕಬಲ್ಲದು. ಮನುಷ್ಯನನ್ನು ಕಂಡಾಗ ಹೆದರಿ ಹಿಂದೆ ಸರಿಯುತ್ತದೆ. ಅನಿವಾರ್ಯವಾದಗ ಧೈರ್ಯವಾಗಿ ಎದುರಿಸುತ್ತದೆ. ಈ ಹಾವಿನಲ್ಲಿ ಗಂಡುಗಳು ಕಾದಾಡುವಾಗ ಪರಸ್ಪರ ನುಲಿದುಕೊಂಡು ಹೊರಾಡುವುದು ಇವುಗಳ ಒಂದು ಗಮನಾರ್ಹ ವರ್ತನೆ, ಇದನ್ನು ಕಂಡವರು ‘ಹೋರಾಟ ನೃತ್ಯ’ ಎಂದು ವರ್ಣಿಸುತ್ತಾರೆ.

ಮಲಬಾರದ ಕೆಲವು ಕಡೆ ಈ ಹಾವಿನ ಮಾಂಸವನ್ನು ತಿನ್ನುತ್ತಾರೆ. ಈ ಹಾವು ನಾಗರ ಹಾವಿನ ಜಾತಿಯ ಗಂಡು ಹಾವು ಎನ್ನುವ ತಪ್ಪು ಅಭಿಪ್ರಾಯವಿದೆ. ಈ ಹಾವು ಹಸುಗಳ ಕಣ್ಣಿರನ್ನು ಹೀರುತ್ತದೆಂಬ ಮತ್ತೊಂದು ತಪ್ಪು ಕಲ್ಪನೆ ಉಂಟು.