ಗಣ : ಕ್ರೊಕೊಡೀಲಿಯ
ಕುಟುಂಬ : ಕ್ರೊಕೊಡಿಲಿಡೀ (Crocodilidae)
ಉದಾ : ಮಗ್ಗರ್, ಜೌಗು ಮೊಸಳೆ (Mugger, marsh crocdile)
ಶಾಸ್ತ್ರೀಯನಾಮ : ಕ್ರೊಕೊಡೈಲಸ್
ಪಾಲುಸ್ಟ್ರಿಸ್ (Crocodilus palustris)

063_69_PP_KUH

ವಿತರಣೆ : ಕರ್ನಾಟಕವೂ ಸೇರಿದಂತೆ ಭಾರತದ ನದಿಗಳು, ಕೆರೆಗಳು, ಇತರ ನೀರಿನ ಜಲಾಶಯಗಳು ಇದರ ವಾಸ ಸ್ಥಾನಗಳು, ಬಯಲು ಸೀಮೆ ಮತ್ತು ಗುಡ್ಡಗಾಡುಗಳಲ್ಲಿಯೂ, ಸಮುದ್ರ ಮಟ್ಟದಿಂದ ೬೦೦ ಮೀಟರ್ ಎತ್ತರದವರೆಗೆ ನೀರಿನ ವಸತಿಗಳಲ್ಲಿ ವಾಸಿಸುತ್ತದೆ.

ಗಾತ್ರ : ನಾಲ್ಕು ಮೀಟರ್ ಉದ್ದ, ೧.೬ ಮೀ. ದಪ್ಪ, ಸುತ್ತಳತೆ, ಸುಮಾರು ೨೦೦ ಕೆ.ಜಿ. ತೂಕ.

ಆಹಾರ : ಹೆಚ್ಚು ಕಡಿಮೆ ಎಲ್ಲ ಜಲಚರಿ ಪ್ರಾಣಿಗಳನ್ನು ಬೇಟೆಯಾಡುತ್ತದೆ. ಹೆಚ್ಚಾಗಿ ಮತ್ಸ್ಯಾಹಾರಿ. ಯಾವುದೇ ಪ್ರಾಣಿಯನ್ನು ಮಣಿಸಿ ಹಿಡಿಯಬಹುದಾದರೆ ಅದನ್ನು ತಿನ್ನುತ್ತದೆ. ನೀರು ಕುಡಿಯಲು ಬರುವ ಚಿರತೆ, ಬಗಳುವ ಜಿಂಕೆ, ಕಾಡುನಾಯಿ, ಕಪಿಗಳು, ಜಿಂಕೆಗಳು, ಕಡವೆ, ಕರುಗಳು, ಹಂದಿ, ಬಾತು, ಅನೇಕ ಹಕ್ಕಿಗಳು ಮತ್ತು ಹುಲಿಯನ್ನು ಹಿಡಿದು, ಕೊಂದು, ನೀರಿನಲ್ಲಿ ಮುಳುಗಿಸಿ, ಕೊಳೆಸಿ, ಸಿಗಿದು ತಿನ್ನುತ್ತದೆ. ಆಹಾರ ಜೀರ್ಣ ಮಾಡುವುದರಲ್ಲಿ ಸಹಾಯವಾಗುವುದೆಂದು ಕಲ್ಲುಗಳನ್ನು ನುಂಗುತ್ತದೆ ಮರಿಯಾಗಿದ್ದಾಗ ಜಲಕೀಟಗಳು, ಶಂಕು ಹುಳು, ಕಪ್ಪೆಗಳು ಮತ್ತು ಮೀನುಗಳನ್ನು ತಿನ್ನುತ್ತದೆ. ಇದರ ಜಠರದಲ್ಲಿ ಗಿಲೀಟಿನ ಒಡವೆಗಳು ಮತ್ತು ಮನುಷ್ಯ ದೇಹಭಾಗಗಳೂ ದೊರಕಿರುವುದರಿಂದ ಇದು ಹೆಣಗಳನ್ನು ತಿನ್ನಬಹುದೆಂದು ಶಂಕಿಸಲಾಗಿದೆ.

ಲಕ್ಷಣಗಳು : ನೀಳವಾದ ದೇಹ ಮತ್ತು ತಲೆಗಳು ಉರುಳೆಯಾಕಾರದಲ್ಲಿದ್ದರೂ ತುಸು ತಟ್ಟಿದಂತೆ ಕೆಳಗೆ ಚಪ್ಪಟೆ ಅಗಲವಾದ ಮೂತಿ, ನಾಸಿಕಗಳು, ಕಣ್ಣುಗಳು ಮತ್ತು ಕಿವಿ ತೆರಪುಗಳು ತಲೆಯ ಮೇಲಿದ್ದು ಇಡೀ ದೇಹವು ನೀರಿನಲ್ಲಿ ಮುಳುಗಿದ್ದಾಗಲು ಇವು ಮೂರು ನೀರಿನಿಂದ ಮೇಲಿರುತ್ತವೆ. ಇದರಿಂದ ಉಸಿರಾಟ, ನೋಟ ಶ್ರಾವಣ ಕ್ರಿಯೆಗಳು ತೊಂದರೆ ಇಲ್ಲದೆ ನಡೆಯುತ್ತವೆ. ನೀರಿನಲ್ಲಿ ಮುಳುಗಿದಾಗ ನಾಸಿಕಗಳನ್ನು ಮುಚ್ಚಲು ಕವಾಟಗಳಿವೆ. ಕಣ್ಣಿನ ನಿಮೇಷಕ ಪಟಲವಿದೆ. ಇದರಿಂದ ನೀರಿನಲ್ಲಿ ಮುಳುಗಿಯೂ ಆಬಾದಿತವಾಗಿ ನೋಡಬಹುದು. ಮುಳುಗಿದಾಗ ಕಿವಿ ತೆರಪುಗಳನ್ನು ಮುಚ್ಚುವ ಚರ್ಮದ ಮಡಿಕೆಗಳಿವೆ. ಕಣ್ಣುಗಳ ಮುಂದೆ ಸ್ಪಷ್ಟ ಏಣುಗಳಿಲ್ಲ. ಕಾಲುಗಳು ಮೋಟು ಮತ್ತು ಒಂದೊಂದರಲ್ಲಿಯೂ ಐದೈದು ಬೆರಳುಗಳಿವೆ ಮತ್ತು ಬೆರಳುಗಳಿಗೆ ಜಾಲಪಾದವಿದೆ. ದೇಹದ ಮೇಲೆ ದಪ್ಪ ತೊಗಲಿನಂತಹ ಚರ್ಮವಿದೆ. ಇದರಲ್ಲಿ ಬಲವಾದ ಕೊಂಬಿನ ತಟ್ಟಿಗಳಂತಹ ಪ್ರಶಲ್ಕಗಳು ದೇಹಕ್ಕೆ ರಕ್ಷಣೆ ನೀಡುತ್ತವೆ. ತಲೆಯ ಹಿಂಭಾಗದಲ್ಲಿ ಚೂಪಾದ ಮೇಲೆ ಚಾಚಿದ ನಾಲ್ಕು ಸಾಲು ಪುರುಪೆಗಳಿವೆ. ಇವನ್ನು ಪೋಸ್ಟ್ ಆಕ್ಸಿಪಿಟಲ್ ಹುರುಪೆಗಳೆಂದು ಕರೆಯುತ್ತಾರೆ. ಬೆನ್ನಿನ ಮೇಲೆ, ೧೬ ಅಥವಾ ೧೭ ಅಡ್ಡ ಹರಡಿದ ಮತ್ತು ೬ ಉದ್ದಸಾಲಿನ ಮೂಳೆ ತಟ್ಟಿಗಳಿವೆ. ಇವು ಚರ್ಮದಲ್ಲಿ ಹುದುಗಿ ಚರ್ಮವನ್ನು ಅಬೇಧ್ಯ ರಕ್ಷಣಾ ಸ್ತ್ರಾಣವನ್ನಾಗಿ ಮಾಡಿವೆ. ಆದರೆ ಹೊಟ್ಟೆಯ ಭಾಗದಲ್ಲಿ ಯಾವ ರಕ್ಷಣಾ ಫಲಕಗಳೂ ಇಲ್ಲ. ಬಾಲದ ಭಾಗದಲ್ಲಿ ಚಪ್ಪಟೆಯಾದ ನೇರವಾಗಿ ವ್ಯವಸ್ತಿತವಾದ ಎರಡು ಶ್ರೇಣಿ ಹುರುಪೆಗಳಿವೆ. ಇವು ಹಿಂದೆ ಕೂಡಿಕೊಂಡು ಒಂದೇ ಶ್ರೇಣಿಯಾಗಿ ಬಾಲದ ತುದಿಯವರೆಗೂ ಹರಡಿದೆ. ಬಾಲವು ಮಾಂಸಲವಾಗಿದ್ದು ಪಕ್ಕದಿಂದ ಪಕ್ಕಕ್ಕೆ ಬಡಿದು ಸಂಚಲಿಸಲು ಶಕ್ತಿ ಒದಗಿಸುತ್ತದೆ.

ಎರಡು ಜೊತೆ ಸುಗಂಧ ಗ್ರಂಥಿಗಳಿವೆ, ಒಂದು ಜೊತೆ ಕತ್ತಿನ ಬಳಿ ಮತ್ತು ಇನ್ನೊಂದು ಜೊತೆ ಕ್ಲೋಯೊಕ ಬಳಿ ಇವೆ. ಕೋಯಕ್ ಉದ್ದ ಸೀಳಿನಂತಿದೆ.

ಬೆನ್ನಿನ ಭಾಗ ಆಲಿವ್ ಹಸಿರು ಮತ್ತು ಹರಡಿದಂತೆ ಕಪ್ಪು ಚುಕ್ಕೆಗಳಿವೆ. ಹೊಟ್ಟೆಯಭಾಗ ಬಿಳುಪು ಅಥವಾ ಹಳದಿ ಬಿಳುಪು.

ಸಂತಾನಾಭಿವೃದ್ಧಿ : ಇವು ಅಂಡಜಗಳು, ಋತು ಮಾಸದಲ್ಲಿ ಸುಗಂಧ ಗ್ರಂಥಿಗಳು ಸ್ರವಿಸತೊಡಗುತ್ತವೆ. ಇದರ ಸಹಾಯದಿಂದ ಹೆಣ್ಣು ಗಂಡುಗಳು ಸಂಧಿಸಲು ಅನುಕೂಲವಾಗುತ್ತದೆ. ಜನವರಿಯಿಂದ ಮಾರ್ಚವರೆಗೆ ಹೆಣ್ಣು-ಗಂಡುಗಳ ಸಂಭೋಗ ನಡೆಯುತ್ತದೆ. ಸಂಭೋಗ ಸಮಾನ್ಯವಾಗಿ ನೀರಿನಲ್ಲಿ ನಡೆಯುತ್ತದೆ. ಹೆಣ್ಣು ನೀರಿನಿಂದ ೩ ರಿಂದ ೫೦೦ ಮೀಟರ ದೂರದಲ್ಲಿ ಮರಳಿನಲ್ಲಿ ಹೂಜಿಯಾಕಾರದ ೩೦ ಸೆಂ. ಮೀ. ಆಳದ ಗುಂಡಿಗಳನ್ನು ತೋಡಿ ಮೊಟ್ಟೆಗಳನಿಟ್ಟು ಮುಚ್ಚಿಬಿಡುತ್ತದೆ. ಒಂದು ಸಾರಿಗೆ ೩ ರಿಂದ ೪೦ ಮೊಟ್ಟೆಗಳನ್ನಿಡುತ್ತದೆ ಮೊಟ್ಟೆಗಳ ಬಣ್ಣ ಬಿಳುಪು, ೭೦’ ೫೦ ರಿಂದ ೮೦’ ೫೦ ಮಿ. ಮೀ. ಉದ್ದಗಲವಿರುತ್ತವೆ. ಮೊಟ್ಟೆಗಳು ಒಡೆದು ಮರಿಗಳು ಹೊರಬರುವವರೆಗೂ ಹೆಣ್ಣು ಸನಿಹದಲ್ಲಿದ್ದು ಕಾಯುತ್ತದೆ ಮೊಟ್ಟೆಗಳಿಗೆ ೨೯- ೩೦oC ಶಾಖಬೇಕು. ಸುಮಾರು ೯೦ ದಿನಗಳ ಕಾವು ಕಾಲದನಂತರ ಮರಿಗಳು ಹೊರಬರುತ್ತವೆ.

ಸ್ವಭಾವ : ಪ್ರಬುದ್ಧ ಮೊಸಳೆಗೆ ಶತ್ರುಗಳು ಕಡಿಮೆಯಾದರೂ ಇದರ ಮೊಟ್ಟೆಗಳನ್ನು ಉಡ, ನರಿ, ಕಾಡುಹಂದಿಗಳು ಸಿಕ್ಕರೆ ತಿನ್ನುತ್ತವೆ.

ಬೇಸಿಗೆಯಲ್ಲಿ ವಸತಿಯ ನೀರು ಒಣಗಿದಾಗ ಗ್ರೀಷ್ಮ ನಿದ್ರೆಯಲ್ಲಿ ಕಳೆಯುತ್ತವೆ ಅಥವಾ ರಾತ್ರಿಯಲ್ಲಿ ನೀರಿರುವ ವಸತಿಗಳಿಗೆ ವಲಸೆ ಹೋಗುತ್ತವೆ. ನೀರಿನ ವಸತಿಯ ನೆರೆಯಲ್ಲಿ, ಗುಡ್ಡಗಳ ತಪ್ಪಲಲ್ಲಿ ಬಿಲಗಳನ್ನು ನಿರ್ಮಿಸುತ್ತದೆ ಸಮರ್ಥವಾಗಿ ನೀರಿನಲ್ಲಿ ಈಜುತ್ತದೆ. ಬಾಲ ಈಜಲು ನೆರವಾಗುತ್ತದೆ. ನೆಲದ ಮೇಲೆಯೂ ನಡೆದಾಡಬಲ್ಲದು ಮತ್ತು ಓಡಾಡಬಲ್ಲದು. ಹಗಲು ಹೊಟ್ಟೆ ಮಗ್ಗುಲಾಗಿ ಮಲಗಿ ಬಿಸಿಲು ಕಾಯಿಸುತ್ತದೆ. ಇದಕ್ಕೆ ಉತ್ತಮ ನೋಟ, ಶ್ರವಣ, ಘ್ರಾಣಶಕ್ತಿ ಇದೆ. ಬಿಸಿಲು ಕಾಯಿಸುವಾಗ ಎಚ್ಚರಿಕೆಯಿಂದಿರುತ್ತದೆ.

ಇತ್ತೀಚೆಗೆ ಮೊಸಳೆಗಳನ್ನು ಬೆಳೆಸುವ, ಸಾಕುವ ಫಾರಂಗಳು ಆರಂಭವಾಗಿವೆ. ಇದರ ಚರ್ಮಕ್ಕೆ ಉತ್ತಮ ಬೇಡಿಕೆಯುಂಟು. ಇದರ ಚರ್ಮದಿಂದ ಬೆಲ್ಟು ಪರ್ಸು, ಚೀಲ, ಶೂ, ಸೂಟುಕೇಸುಗಳನ್ನು ತಯಾರಿಸುತ್ತಾರೆ.

—- 

ಗಣ : ಲ್ಯಾಸರ್ ಟೀಲಿಯಾ
ಕುಟುಂಬ : ಅಗಾಮಿಡೀ (Agamidae)
ಉದಾ : ಕಲ್ಲುಹಲ್ಲಿ (Rock agama)
ಶಾಸ್ತ್ರೀಯನಾಮ : ಸೆಮ್ಮೊಫಿಲಸ್ ಡಾರ್ಸಾಲಿಸ್ (Prammophilus darsalis)

064_69_PP_KUH

ವಿತರಣೆ : ಕರ್ನಾಟಕದ ಬಂಡೆಕಲ್ಲುಗಳಿರುವ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ. ಮೈಸೂರಿನ ಬಳಿ ಚಾಮುಂಡಿ ಬೆಟ್ಟದ ಮೇಲೆ, ಮಂಡ್ಯ ಜಿಲ್ಲೆಯ ಪಾಂಡವಪುರದ ಬಳಿಯ ಕಲ್ಲು ಗುಡ್ಡಗಳಲ್ಲಿ ಮೇಲುಕೋಟಿಯ ಗುಡ್ಡಗಳಲ್ಲಿ ದೊರಕುತ್ತದೆ. ಹಾಸನ ಜಿಲ್ಲೆಯ ಹಳೇಬೀಡಿನ ಸುತ್ತ ಮುತ್ತ ದೊರಕುತ್ತದೆ. ಬೆಂಗಳೂರಿನ ಬಳಿಯೂ ದೊರಕುತ್ತದೆಂದು ಹೇಳುತ್ತಾರೆ. ಪ್ರಧಾನವಾಗಿ ಕಲ್ಲು ಬಂಡೆಗಳಿರುವಲ್ಲಿ ವಾಸ, ಸಮುದ್ರ ಮಟ್ಟದಿಂದ ೨೦೦೦ ಮೀ. ಎತ್ತರದವರೆಗೆ ದೊರಕುತ್ತದೆ.

ಗಾತ್ರ : ಓತಿಗಿಂತ ಹೆಚ್ಚು ಉದ್ದ ಹೆಚ್ಚು ಸದೃಢವಾದ ಪ್ರಾಣಿ. ೧೫ ರಿಂದ ೨೫ ಸೆಂ. ಮೀ. ಉದ್ದ ಇರುತ್ತದೆ. ಇದರಲ್ಲಿ ಬಾಲವೇ ಅರ್ಧಕ್ಕಿಂತ ಹೆಚ್ಚು ಉದ್ದ ಇರುತ್ತದೆ.

ಆಹಾರ : ಕೀಟಾಹಾರಿ. ಬಂಧನದಲ್ಲಿ ಜಿರಲೆ ಮತ್ತು ರೇಷ್ಮೆ ಪತಂಗಗಳನ್ನು ತಿನ್ನುತ್ತದೆ.

ಲಕ್ಷಣಗಳು : ಚಪ್ಪಟೆಯಾದ ದೇಹ. ಕುತ್ತಿಗೆಯ ಬಳಿ ಚರ್ಮದ ಮಡಿಕೆಗಳಿವೆ. ಕ್ರಮವಾಗಿ ಜೋಡಿಸಿದ ಹುರುಪೆ ಹೊದಿಕೆ.

ಮಾಸಲು ಕಂದು ಮೈ ಬಣ್ಣ ಅಲ್ಲಲ್ಲಿ ಕಪ್ಪು ಚುಕ್ಕೆಗಳಿರಬಹುದು. ಹೆಣ್ಣು ಹಲ್ಲಿ ಅಡಗು ಬಣ್ಣ ತೋರುತ್ತದೆ. ತಾನು ವಾಸಿಸುವ ಬಂಡೆಕಲ್ಲುಗಳ ನಡುವೆ ಮುಳುಗುವ ಮೈಬಣ್ಣ ಹೊಂದಿರುತ್ತದೆ.

ಸಂತಾನಾಭಿವೃದ್ಧಿ : ಅಂಡಜಗಳು ಲಿಂಗದ್ವಿರೂಪತೆ ಇದೆ. ಹೆಣ್ಣು ಹಲ್ಲಿ ಗಂಡಿಗಿಂತ ಆಕಾರ, ಗಾತ್ರದಲ್ಲಿ ಭಿನ್ನ ಮತ್ತು ಸಣ್ಣ. ಇದನ್ನು ಬೇರೆ ಪ್ರಭೇಧದ ಪ್ರಾಣಿ ಎಂದೇ ತಪ್ಪು ತಿಳಿಯುವಷ್ಟು ಭಿನ್ನ. ಕ್ರಮವಾದ ಸುವ್ಯವಸ್ಥಿತವಾದ ಪ್ರಜನನ ಚಕ್ರವಿದೆ. ಓತಿಯಂತೆ ಜನವರಿಯಿಂದ ಮಾರ್ಚಿವರೆಗೆ ಸಂತಾನೋತ್ಪತ್ತಿ ಚಟುವಟಿಕೆಯ ಪುನಃಶ್ಚೇತನದ ಕಾಲ. ಏಪ್ರಿಲ್‌ನಿಂದ ಆಗಸ್ಟ್‌ವರೆಗೆ ಸಂತಾನೋತ್ಪತ್ತಿ ಕಾಲ. ಗಂಡು ಆಗ ಕಾಮವರ್ಣ ತಾಳುತ್ತದೆ. ತಲೆ ಮತ್ತು ದೇಹದ ಮುಂಭಾಗ ಪ್ರಕಾಶಕ ಕಡುಕೆಂಪು ಬಣ್ಣ ತಾಳುತ್ತದೆ. ಉಳಿದ ಭಾಗವೆಲ್ಲ ಕಪ್ಪು. ಉಳಿದ ಋತುಗಳಲ್ಲಿ ದೇಹದ ಬಣ್ಣ ಮಾಸಲು ಕಪ್ಪು, ಸೆಪ್ಟೆಂಬರ್ ನಿಂದ ಡಿಸೆಂಬರ್ ವರೆಗೆ ಸಂತಾನೋತ್ಪತ್ತಿ ಚಟುವಟಿಕೆ ಸ್ತಗಿತಗೊಳ್ಳುತ್ತದೆ. ಒಂದು ಸಾಲಿಗೆ ೮-೧೦ ಮೊಟ್ಟೆಗಳನ್ನಿಡುತ್ತವೆ. ಒಂದು ಪ್ರಜನನ ಚಕ್ರದಲ್ಲಿ ೨ ಅಥವಾ ಮೂರು ಸಾರಿ ಮೊಟ್ಟೆ ಇಡಬಹುದು. ಹೆಣ್ಣಿನಲ್ಲಿ ಗರ್ಭಸ್ತ ಅವಸ್ಥೆಯೂ ಇದ್ದು ನಷೇಚಿತ ತತ್ತಿಗಳನ್ನು ೨೦-೨೫ ದಿನಗಳವರೆಗೆ ದೇಹದಲ್ಲಿಯೆ ಉಳಿಸಿಕೊಂಡಿದ್ದು ಅನಂತರ ಇಡುತ್ತದೆ. ಗರ್ಭಸ್ತ ಕಾಲದಲ್ಲಿ ಮರಿ ಬೆಳೆಯುತ್ತದೆ. ೪೦-೪೫ ದಿನಗಳ ಕಾವು ಕಾಲದ ನಂತರ ಮರಿಗಳು ಹೊರ ಬೀಳುತ್ತವೆ.

ಸ್ವಭಾವ : ದಿವಾಚರಿ, ಬಿಸಿಲು ಕಾಯಿಸುವ ಅಭ್ಯಾಸ ಇದೆ. ಗಂಡು ಹಲ್ಲಿ ಕ್ಷೇತ್ರ ಪಾಲನೆ ಮಾಡುತ್ತದೆ. ಎತ್ತರದ ಸ್ಥಳದಲ್ಲಿ ಇದ್ದು ತನ್ನ ಕೇತ್ರವನ್ನು ಗಮನಿಸುತ್ತದೆ. ಆಗ ಎದ್ದು ಕೂರುವ, ತಲೆಯನ್ನು ತೂಗುವ ಪ್ರವೃತ್ತಿಯನ್ನು ತೋರುತ್ತದೆ. ಅಪಾಯದ ಮುನ್ಸೂಚನೆ ದೊರಕುತ್ತಿದ್ದಂತೆಯೆ ಕಲ್ಲು ಸಂದುಗಳಿಗೆ ಹೋಗಿ ಅಡಗಿ ರಕ್ಷಿಸಿಕೊಳ್ಳುತ್ತದೆ.

—- 

ಗಣ : ಲ್ಯಾಸರ್ ಟೀಲಿಯಾ
ಕುಟುಂಬ : ವೆರಾನಿಡೀ (Varanidae)
ಉದಾ : ಉಡ (Monitor lizard)
ಶಾಸ್ತ್ರೀಯನಾಮ : ವೆರಾನಸ್
ಬೆಂಗಾಲೆನ್ಸಿಸ್‌(Varanus bengalensis)

065_69_PP_KUH

ವಿತರಣೆ : ಕರ್ನಾಟಕವೂ ಸೇರಿದಂತೆ ಇಡೀ ಭಾರತದ ಬೆಟ್ಟ ಗುಡ್ಡಗಳು ಮತ್ತು ಬಯಲು ಸೀಮೆಗಳಲ್ಲಿ ವಾಸಿಸುತ್ತದೆ. ನಿತ್ಯ ಹರಿದ್ವರ್ಣ ಕಾಡುಗಳಿಂದ ಬಯಲು ಸೀಮೆಯವರೆಗೆ ಎಲ್ಲಾ ರೀತಿಯ ಪರಿಸರಗಳಲ್ಲಿಯೂ ಜೀವಿಸುತ್ತದೆ. ಪೊಟರುಗಳು, ದಟ್ಟ ಪೊದೆಗಳು, ಕರಾವಳಿಯ ಬಳಿಯೂ, ನಾಲೆಗಳು, ಹಾಳು ಬಿದ್ದ ಮನೆಗಳು ಇತ್ಯಾದಿಗಳಲ್ಲಿ ದೊರಕುತ್ತದೆ.

ಗಾತ್ರ : ಇದು ೧೭.೫ ಸೆಂ. ಮೀ. ಉದ್ದ ಬೆಳೆಯುತ್ತದೆ. ಅದರ ಬಾಲವೇ ೧೦. ಸೆಂ. ಮೀ. ಉದ್ದ ಇರುತ್ತದೆ.

ಆಹಾರ : ಇದು ಮಾಂಸಾಹಾರಿ ಪ್ರಾಣಿ. ತಾನು ಹಿಡಿದು ಮಣಿಸಬಹುದಾದ ಯಾವುದೇ ಪ್ರಾಣಿಯನ್ನು ಹಿಡುದು ತಿನ್ನುತ್ತದೆ. ಸಣ್ಣ ಸಸ್ತನಿಗಳು, ಪಕ್ಷಿಗಳು, ಪಕ್ಷಿ ಮತ್ತು ಮೊಸಳೆ ಮೊಟ್ಟೆಗಳು, ಹಾವು ರಾಣಿ, ಓತಿ, ಸಣ್ಣ ಆಮೆ, ಹಾವು ಮೀನು, ಸೀಗಡಿ, ಕೀಟಗಳು, ಜೇಡ, ಚೇಳು ಇತ್ಯಾದಿ ಇದರ ಆಹಾರ. ಸತ್ತ ಪ್ರಾಣಿಗಳನ್ನು ತಿನ್ನುತ್ತದೆ.

ಲಕ್ಷಣಗಳು : ದೊಡ್ಡ ಗಾತ್ರದ ಹಲ್ಲಿಯನ್ನು ಹೋಲುತ್ತದೆ. ಮುಂದೆ ಚೂಪಾದ ಮೂತಿ, ಉದ್ದವಾದ ತಲೆ, ಚಪ್ಟಟೆಯಾದ ದೇಹ ಮತ್ತು ಬಾಲಗಳು. ನಾಸಿಕಗಳು ಕಣ್ಣಿನ ಬಳಿ ಇವೆ. ಬಲವಾದ ಕಾಲುಗಳು. ಕಾಲುಗಳಿಗೆ ಬಲವಾದ ನಖಗಳಿವೆ. ದೇಹದ ಮೇಲೆ ನಯವಾದ ಹುರುಪೆಗಳು ಹೊದಿಕೆ ಇದೆ.

ದೇಹ ಆಲಿವ್‌ಕಂದು ಅಥವಾ ಕಂದು ಮೈ ಬಣ್ಣ. ದೇಹದ ಮೇಲೆಲ್ಲಾ ಹರಡಿದಂತೆ ಕಪ್ಪು ಚುಕ್ಕೆಗಳಿರಬಹುದು. ಹೊಟ್ಟೆಯ ಭಾಗ ಹಳದಿ, ಶುದ್ಧ ಹಳದಿ ಅಥವಾ ಕಪ್ಪು ಮಿಶ್ರಿತ ಹಳದಿ, ಮರಿಗಳು ಹೆಚ್ಚು ಹೊಳಪು ಬಣ್ಣವಾಗಿರುತ್ತವೆ.

ಸಂತಾನಾಭಿವೃದ್ಧಿ : ಇದು ಅಂಡಜ. ಬಿಲಗಳನ್ನು ಗುಂಡಿಗಳನ್ನು ತೋಡಿ ಮೊಟ್ಟೆಗಳನ್ನಿಟ್ಟು ಮಣ್ಣು, ಎಲೆ, ಕಸದಿಂದ ಮುಚ್ಚಿ ಬಿಡುತ್ತದೆ. ಒಮ್ಮೆಗೆ ೮ ರಿಂದ ೩೩ ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆಗಳು ೪೭ x ೩೬ ಮಿ. ಮೀ. ಉದ್ದಳತೆ, ಅಂಡಾಕಾರ, ಮೃದು ಚಿಪ್ಪು ಇದ್ದು ಬೆಳ್ಳಗಿರುತ್ತವೆ. ಬೇಸಗೆಯಲ್ಲಿ ಮೊಟ್ಟೆ ಇಡುತ್ತವೆ.

ಸ್ವಭಾವ : ಇದು ದಿವಾಚರಿ. ಸೂಯೋದಯವಾದ ಮೇಲೆ ತನ್ನ ಅಡಗು ತಾಣದಿಂದ ಹೊರಬಂದು ನಡು ಹಗಲವರೆಗೂ ಓಡಾಡಿಕೊಂಡಿದ್ದು ಮದ್ಯಾಹ್ನದ ಸುಡು ಬಿಸಲಿನಲ್ಲಿ ವಿಶ್ರಾಂತಿಗೆ ಸುರಕ್ಷಿತ ನೆರಳಿನ ಪ್ರದೇಶಗಳಿಗೆ ವಿರಮಿಸುತ್ತದೆ. ಶತೃಗಳು ಅಟ್ಟಿಸಿಕೊಂಡು ಬಂದಾಗ ಓಡಿಹೋಗಿ ಮರದ ಪೊಟರುಗಳಲ್ಲಿ ಹೊಕ್ಕು, ಮರ ಹತ್ತಿ ಅಥವ ನೀರಿಗಿಳಿದು ತಪ್ಪಿಸಿಕೊಳ್ಳುತ್ತದೆ. ನಿರಿನಲ್ಲಿ ಚೆನ್ನಾಗಿ ಈಜಬಲ್ಲದು, ಮರ ಹತ್ತಬಲ್ಲದು. ಪಕ್ಷಿಗೂಡುಗಳಿಗೆ ಲಗ್ಗೆ ಹತ್ತಿ ಮೊಟ್ಟೆಗಳನ್ನು ಕದಿಯುತ್ತದೆ. ಎದರು ಬಿದ್ದು ಕಚ್ಚುವುದುಂಟು. ಕಚ್ಚಿದಾಗ ಇದರಿಂದ ಬಿಡಿಸಿಕೊಳ್ಳುವುದು ಕಷ್ಟ. ಕಾಲು ನಖಗಳು ನೆಲ ಕಚ್ಚುವುದರಲ್ಲಿ ಹೆಸರುವಾಸಿ. ಇದನ್ನರಿತೆ ಹಿಂದಿನ ರಾಜ ಮಹಾರಾಜರುಗಳು ಕೋಟೆಗಳಿಗೆ ಲಗ್ಗೆ ಹತ್ತುವಾಗ ಈ ಪ್ರಾಣಿಗಳನ್ನು ಬಳಸುತ್ತಿದ್ದರು. ಇದರ ಹೊಟ್ಟೆ ಭಾಗಕ್ಕೆ ಹಗ್ಗ ಕಟ್ಟಿ ಕೋಟೆಯ ಮೇಲಕ್ಕೆ ಎಸೆದರೆ ಅದು ಕೋಟೆಯ ಮೇಲೆ ಕೋಟೆಯನ್ನು ಬಲವಾಗಿ ಹಿಡಿದು ಉಳಿಯುತ್ತಿತ್ತು. ಆಗ ಅದಕ್ಕೆ ಕಟ್ಟಿದ ಹಗ್ಗದ ಸಹಾಯದಿಂದ ಸೈನಿಕರು ಮೇಲೇರಿ ಹೋಗುತ್ತಿದ್ದರು. ಇದು ಕೋಳಿ ಮರಿ, ಮೊಟ್ಟೆಗಳನ್ನು ಹುಡುಕಿಕೊಂಡು ಕೋಳಿ ಸಾಕಾಣಿಕೆ ಕೇಂದ್ರಗಳಿಗೆ ಧಾಳಿ ಇಟ್ಟು ಅಪಾರ ಹಾನಿಯುಂಟು ಮಾಡುತ್ತದೆ.

ಇದರ ಚರ್ಮ, ಮಾಂಸ, ಮೊಟ್ಟೆಗಳಿಗೆ ಅಪಾರ ಬೇಡಿಕೆ ಇದ್ದು ಇದನ್ನು ಕೊಲ್ಲುತ್ತಾರೆ. ಇದರ ಮಾಂಸ, ಮೊಟ್ಟೆಗಳು ರುಚಿಯಾದ ಅಪರೂಪದ ತಿನಿಸುಗಳೆಂದು ಪರಿಗಣಿಸುತ್ತಾರೆ. ಇದರ ಕೊಬ್ಬಿಗೆ (ಉಡದ ತುಪ್ಪ) ಔಷಧ ಗುಣವಿದೆಯೆಂದು ನಂಬುತ್ತಾರೆ. ಇದರ ಚರ್ಮಕ್ಕೂ ಅಪಾರ ಬೇಡಿಕೆ ಉಂಟು.

ಇದನ್ನು ಬೆನ್ನಟ್ಟಿದಾಗ ಪ್ರತಿಭಟಿಸಲು ಮುಂಗಾಲುಗಳನ್ನು ಮೇಲೆತ್ತಿ ಬುಸು ಗುಟ್ಟುತ್ತಾ ಬಾಲವನ್ನು ಎತ್ತಿ ಎತ್ತಿ ಬಡಿಯುತ್ತದೆ.

—- 

ಗಣ : ಲ್ಯಾಸರ್ ಟೀಲಿಯ
ಕುಟುಂಬ : ಸಿನ್
ಸಿಡೀ (Scincidae)
ಉದಾ : ಹಾವುರಾಣಿ (Common or brahminy skink)
ಶಾಸ್ತ್ರೀಯನಾಮ : ಮಬುಯ ಕೆರಿನೇಟ (Mabuya carinata)

066_69_PP_KUH

ವಿತರಣೆ : ಭಾರತದ ದಕ್ಷಿಣ ದ್ವೀಪಕಲ್ಪದಲ್ಲಿ ವ್ಯಾಪಕವಾಗಿ ಹರಡಿದೆ. ಭಾರತದ ಸುಪ್ರಸಿದ್ಧ ಹಾವುರಾಣಿ. ಹೆಚ್ಚು ಕಡಿಮೆ ಇದು ಮನುಷ್ಯನ ಸಹಜೀವಿಯಾಗಿದೆ. ಕಾಡಿನಲ್ಲಿ ಇದ್ದಷ್ಟೇ ಮುಕ್ತವಾಗಿ ಊರುಗಳಲ್ಲಿಯೂ ವಾಸಿಸುತ್ತವೆ. ಮುಖ್ಯವಾಗಿ ನೆಲದಮೇಲೆ ಓಡಾಡುವ ಪ್ರಾಣಿ.

ಗಾತ್ರ : ಒಟ್ಟು ೨೯೦ ಮಿ. ಮೀ. ಉದ್ದ. ಅದರಲ್ಲಿ ೧೬೫ ಮಿ. ಮೀ. ಉದ್ದ ಬಾಲವೆ ಇರುತ್ತದೆ.

ಆಹಾರ : ಸಾಮಾನ್ಯವಾಗಿ ಸಂಪೂರ್ಣವಾಗಿ ಕೀಟಾಹಾರಿ. ಅಪರೂಪವಾಗಿ ಸಣ್ಣ ಸಸ್ತನಿಗಳನ್ನು ತಿನ್ನುವುದುಂಟು.

ಲಕ್ಷಣಗಳು : ಈ ಹಾವು ರಾಣಿ ಗುಂಪುನ್ನು ಇತರ ಹಾವುರಾಣಿ ಗುಂಪಿನಿಂದ (ಉದಾಹರಣೆಗೆ ಉಮಿಸಿಸ್

[Eumeces] ಜಾತಿಯ ಹಾವುರಾಣಿಗಳಿಂದ ) ಅವುಗಳ ಚೆನ್ನಾಗಿ ಬೆಳೆದ ಕಾಲುಗಳು ಮತ್ತು ಮೂಗಿನ ಮೇಲಿರುವ ಪ್ರಶಲ್ಕಗಳಿಂದ ಗುರುತಿಸಬಹುದು. ದೇಹದಮೇಲೆ ಏಕರೀತಿಯ, ಏಕಾಗಾತ್ರದ ಹುರುಪೆಗಳಿವೆ. ಸಾಮಾನ್ಯ ಹಾವುರಾಣಿ ಹುರುಪೆಗಳನ್ನೊಳಗೊಂಡ ಕೆಳ ಕಣ್ಣು ರೆಪ್ಪೆಯುಂಟು. ದೇಹದ ಸುತ್ತ ೩೦-೩೪ ಹುರುಪೆಗಳಿವೆ ಮತ್ತು ಬೆನ್ನಿನ ಹುರುಪೆಗಳಿಗೆ ೩, ೫ ಅಥವಾ ೭ ಏಣುಗಳಿವೆ. ನಾಲ್ಕನೆಯ ಹಿಂಗಾಲು ಬೆರಳಿಗೆ ೧೪ ರಿಂದ ೧೮ ಫಲಕಗಳಿವೆ. ಇದರಲ್ಲಿ ೪ ಬೆರಳಿನ ಕೆಳಗಿವೆ.

ಇದರ ಮೈ ಬಣ್ಣ ಹೊಳಪು ಕಂದು. ಬೆನ್ನಿನ ಭಾಗ ಆಲಿವ್ ಅಥವ ಕಂಚು ಬಣ್ಣ ಮೇಲೆ ಅಲ್ಲಲ್ಲಿ ಕಡು ಬಣ್ಣದ ಚುಕ್ಕಿಗಳಿರುತ್ತವೆ. ಕಣ್ಣಿನಿಂದ ಬಾಲದ ವರೆಗೆ ತೆಳುಬಣ್ಣದ ಒಂದು ಪಟ್ಟಿ ಇದೆ. ಮೇಲ್ತುಟಿ ಬಿಳುಪು. ಕೆಳತುಟಿ ಬಿಳಿ ಅಥವ ಹಳದಿ. ಸಂತಾನೋತ್ಪತ್ತಿ ಕಾಲದಲ್ಲಿ ಗಂಡು ಹಾವು ರಾಣಿಯ ಪಕ್ಕೆಗಳು ಕೇಸರಿ ಬಣ್ಣವಾಗಿರುತ್ತವೆ.

ಸಂತಾನಾಭಿವೃದ್ಧಿ : ಉಳಿದೆಲ್ಲ ಹಲ್ಲಿ ಜಾತಿಯ ಮತ್ತು ಹಾವುರಾಣಿ ಜಾತಿಗಳು ಏಪ್ರಿಲ್ ಆಗಸ್ಟ್ ತಿಂಗಳುಗಳ ನಡುವಣ ಬೇಸಗೆಯಲ್ಲಿ ಸಂತಾನೋತ್ಪತ್ತಿ ನಡೆಸಿದರೆ ಈ ಹಾವುರಾಣಿ, ಮಬೂಯ ಕೆರಿನೇಟ, ಅಕ್ಟೋಬರ್-ಡಿಸೆಂಬರ ತಿಂಗಳುಗಳ ಚಳಿಗಾಲದಲ್ಲಿ ಸಂತಾನೋತ್ಪತ್ತಿ ನಡೆಸುತ್ತದೆ. ಒಂದು ವರ್ಷದಲ್ಲಿ ಒಂದೇ ಸಾರಿ ಮೊಟ್ಟೆ ಇಡುತ್ತದೆ. ಒಮ್ಮೆಗೆ ೧೦- ೧೫ ಬಿಳಿಯ ಮೊಟ್ಟೆಗಳನ್ನಿಡುತ್ತದೆ. ೨೦-೨೫ ದಿನಗಳ ಗರ್ಭಕಾಲವಿದೆ. ಮೊಟ್ಟೆಗಳು ೧೫ x ೧೦ ಮಿ. ಮೀ. ಉದ್ದಗಲ ಇರುತ್ತವೆ. ಈ ಜಾತಿಯ ಹೆಣ್ಣು ಹಾವುರಾಣಿಯಲ್ಲಿ ಪುರುಷಾಣುಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ಅನುಕೂಲವಿಲ್ಲ. ಪ್ರಾಯಶಃ ಇದೇ ಕಾರಣಕ್ಕೆ ಇದು ಒಂದು ತಂಡ ಮೊಟ್ಟೆಗಳನ್ನಿಡುತ್ತದೆ.

ಸ್ವಭಾವ : ಇದು ಮನುಷ್ಯನೊಂದಿಗೆ ಜೀವಿಸಲು ಹೊಂದಿಕೊಂಡುಬಿಟ್ಟಿದೆ. ಮನೆಗಳಲ್ಲೆಲ್ಲಾ ಓಡಾಡುತ್ತದೆ. ಇದು ದಿವಾಚಾರಿ. ಹಗಲಿನಲ್ಲಿ ಆಹಾರಾನ್ವೇಷಣೆ ನಡೆಸುತ್ತದೆ. ಇದರಲ್ಲಿ ಅನೇಕ ಪ್ರಭೇಧಗಳಿವೆ.

ಮ. ಬೆಡ್ಡೊಮಿ (M. beddomi)
ಮ. ಕ್ವಾಡ್ರಿಕೇರಿನೇಟ (M. quadricarinata)
ಮ. ಟ್ರಿವಿಟ್ಟೇಟ (M. triviata)
ಮ. ಬಿಬ್ರೋನಿ (M. bibroni)
ಮ. ಮ್ಯಾಕುಲೇರಿಯ (M. Macnlaria)
ಈ ಹಲ್ಲಿಗಳಲ್ಲಿ ಅವುಗಳ ಬಾಲದ ಪುನರುತ್ಪಾದನೆ ಗಮನಾರ್ಹ.

—- 

ಗಣ : ಲ್ಯಾಸೆರ್ ಟೀಲಿಯ
ಕುಟುಂಬ : ಗೆಕ್ಕೊನಿಡೀ (Gekkonidae)
ಉದಾ : ಗೌಳಿ (Gecko)
ಶಾಸ್ತ್ರೀಯನಾಮ : ಹೆಮಿಡ್ಯಾಕ್ಟೆಲಸ್ ಬ್ರೂಕಿ (Hemidactylus brooki)

067_69_PP_KUH

ವಿತರಣೆ : ಬಹಳ ಸಾಮಾನ್ಯವಾಗಿ ಮನುಷ್ಯ ವಸತಿಗಳ ಪಕ್ಕದಲ್ಲಿ ವಾಸಿಸುವ ಹಲ್ಲಿ. ಭಾರತದ ದಕ್ಷಿಣ ದ್ವೀಪ ಕಲ್ಪದಲ್ಲಿ ಬಹಳ ಸಾಮಾನ್ಯ.

ಗಾತ್ರ : ೧೩೫ ಮಿ. ಮೀ. ಉದ್ದ ಬೆಳೆಯುತ್ತದೆ.

ಆಹಾರ : ಸಂಪೂರ್ಣವಾಗಿ ಕೀಟಾಹಾರಿ.

ಲಕ್ಷಣಗಳು : ದೇಹ ಸಂಪೂರ್ಣವಾಗಿ ಹುರುಪೆಗಳಿಂದ ಅವೃತವಾಗಿದೆ. ಬೆನ್ನಿನ ಮೇಲೆ ಕ್ರಮವಾಗಿ, ವ್ಯವಸ್ಥಿತವಾಗಿ ಹರಡಿದ ಶಂಖುವಿನಾಕಾರದ ಗುಬಟುಗಳಿವೆ. ಹಸ್ತ ಮತ್ತು ಪಾದಗಳ ಕೆಳಗೆ ಮೊದಲ ಬೆರಳಿನಡಿ ೫ ರಿಂದ ೬ ಫಲಕಗಳು ಮತ್ತು ನಾಲ್ಕನೆ ಕಾಲು ಬೆರಳಿನಡಿ ೭ ರಿಂದ ೧೦ ಫಲಕಗಳಿವೆ.

ಮೈಬಣ್ಣ ಬೆನ್ನಿನ ಭಾಗ ತೆಳು ಕಂದು ಅಥವಾ ವಿವಿಧ ರೀತಿಯ ಬೂದು. ಮೇಲೆ ಕಂದು ಗುರುತುಗಳಿರುತ್ತವೆ. ಹೊಟ್ಟೆಯ ಭಾಗ ಬಿಳುಪು.

ಸಂತಾನಾಭಿವೃದ್ಧಿ : ಸಾಮಾನ್ಯವಾಗಿ ಏಪ್ರಿಲ್-ಆಗಸ್ಟ್ ತಿಂಗಳುಗಳ ಬೇಸಗೆಯಲ್ಲಿ ಸಂತಾನೋತ್ಪತ್ತಿ ಚಟುವಟಿಕೆ. ಸಂಭೋಗ ಕಾಲದಲ್ಲಿ ಗಂಡುಗಳು ಒಂದರೊಡನೊಂದು ಕಾದಾಡುತ್ತವೆ. ಹೆಣ್ಣು ಮೂಲೆ, ಗೋಡೆ ಬಿರುಕುಗಳು ಸಂದುಗಳಂತಹ ಹೆಚ್ಚು ಗೋಚರಿಸದ ಭಾಗದಲ್ಲಿ ಒಮ್ಮೆಗೆ ಕೇವಲ ಎರಡು ಮೊಟ್ಟೆಗಳನ್ನು ಇಡುತ್ತದೆ. ೩೫-೪೪ ದಿನಗಳ ಕಾವು ಕಾಲದನಂತರ ಮರಿಗಳು ಹೊರಬರುತ್ತವೆ. ಮೊಟ್ಟೆಗಳು ೯ x ೧೪ ಮಿ. ಮೀ ಉದ್ದಗಲವಿರುತ್ತವೆ. ೯೦೦ ಮಿ. ಗ್ರಾಂ. ತೂಗುತ್ತವೆ. ಅಂಡಾಕಾರವಾಗಿರುತ್ತವೆ.

ಸ್ವಭಾವ : ನಿಶಾಚರಿ ಮತ್ತು ಹಗಲು ಕತ್ತಲು ಕೋಣೆ, ಮೂಲೆಗಳಲ್ಲಿ ಉಳಿದು ವಿಶ್ರಾಂತಿ ಪಡೆಯುತ್ತದೆ. ಇದು ಮನೆಗಳ ಜೊತೆಗೆ ಮರಗಳು, ಕಲ್ಲುಗಳ ಕೆಳಗೂ ವಾಸಿಸುತ್ತದೆ. ಇತರ ಗಂಡುಗಳೊಡನೆ ಕಾದಾಡುವಾಗ, ಶತ್ರು ಅಟ್ಟಿಸಿಕೊಂಡು ಬಂದಾಗ ಅಥವಾ ಆಕಸ್ಮಿಕಗಳಲ್ಲಿ ಬಾಲವನ್ನು ಕಳೆದುಕೊಳ್ಳಬಹುದು. ಹೀಗೆ ಕಳೆದುಕೊಂಡ ಬಾಲವನ್ನು ಪುನಃ ಬೆಳೆಸಿಕೊಳ್ಳುತ್ತದೆ.

ಶತ್ರು ಅಟ್ಟಿಸಿಕೊಂಡು ಬಂದು ಬಾಲವನ್ನು ಹಿಡಿದಾಗ ತಾನಾಗಿಯೆ ತನ್ನ ಬಾಲವನ್ನು ಕಳಚಿ ಹಿಂದೆ ಬಿಟ್ಟು ಓಡಿ ಹೋಗುತ್ತವೆ. ಪ್ರಾಣಿಯ ದೇಹದಿಂದ ಬೇರ್ಪಟ್ಟ ಮೇಲೂ ಬಾಲದ ಚೂರು ನುಲಿದು, ಬಾಗಿ ಜೀವವಿರುವ ಪ್ರಾಣಿಯ ಭ್ರಮೆ ಹುಟ್ಟಿಸುತ್ತದೆ. ಇದನ್ನು ಹಿಡಿದು ತಿನ್ನಲೆಂದು ಅಟ್ಟಿಸಿಕೊಂಡು ಬಂದ ಶತ್ರು ತನ್ನ ತಪ್ಪನ್ನು ಅಂದರೆ ಮೋಸ ಹೋಗಿರುವುದನ್ನು ತಿಳಿದುಕೊಳ್ಳುವಷ್ಟರಲ್ಲಿ ಹಲ್ಲಿ ಸುರಕ್ಷಿತ ಸ್ಥಾನವನ್ನು ಸೇರಿ ಪ್ರಾಣ ರಕ್ಷಣೆ ಮಾಡಿಕೊಂಡಿರುತ್ತದೆ. ಇದನ್ನು ಆಟೊಟೊಮಿ (Autotomy) ಎನ್ನುತ್ತಾರೆ. ಇದು ಈ ಹಲ್ಲಿಗಳ ವಿಶೇಷ ಲಕ್ಷಣ. ಇವು ಕಾಲು ಬೆರಲುಗಳಲ್ಲಿರುವ ಫಲಕಗಳ ನೆರವಿನಿಂದ ನೇರವಾದ ನಯವಾದ ಗೋಡೆಗಳನ್ನು ಹತ್ತಬಲ್ಲವು ಮತ್ತು ಮೇಲ್ಛಾವಣಿಯ ಮೇಲೆ ತಲೆಕೆಳಗಾಗಿ ಓಡಾಡಬಲ್ಲವು ಈ ಹಲ್ಲಿ ಲೊಚಗುಟ್ಟುವ ಶಬ್ಧಮಾಡುವುದೊಂದು ವಿಶೇಷ. ಈ ಶಬ್ಧವನ್ನುನುಸರಿಸಿ ದಿಕ್ಕು. ಕಾಲ ಮತ್ತು ವಾರದ ಆಧಾರದ ಮೇಲೆ ಹಲ್ಲಿ ಶಕುನ ಹೇಳುವ ರೂಢಿ ಇಂದಿಗೂ ಹಳ್ಳಿಗಳಲ್ಲಿದೆ.

ಈ ಜಾತಿಯಲ್ಲಿ ಇನ್ನೂ ಅನೇಕ ಪ್ರಭೇಧಗಳಿವೆ.

ಹೆ. ಫ್ರೆನೆಟಸ್ (H.- frenetus) ಬಹಳೊಮ್ಮೆ ಮನೆಗಳಲ್ಲಿ ಕಂಡುಬರುತ್ತದೆ.
ಹೆ. ಟ್ರೈಡ್ರುಸ್ (H. triedron) ಬಂಡೆಗಳ ನಡುವೆ ವಾಸ.
ಹೆ. ಸಿಮೊಪ್ಸಿಸ್ (H. chemapsis) ಗುಡ್ಡ ವಾಸ,

ಪಶ್ಚಿಮ ಘಟ್ಟದಲ್ಲಿ ೧೧ ಪ್ರಭೇಧಗಳು ದೊರಕುತ್ತವೆ.