ಗಣ : ಕಿಲೋನಿಯ (Chelonia)
ಕುಟುಂಬ : ಕಿಲೋನಿಡೀ (Cheloniidae)
ಉದಾ : ಹಸಿರು ಆಮೆ (Green turtle)
ಶಾಸ್ತ್ರೀಯನಾಮ : ಕಿಲೊನಿಯ (ಟೆಸ್ಟುಡೊ) ಮೈದಾಸ್
‌(Chelonia (testudo) mydas)

074_69_PP_KUH

ವಿತರಣೆ : ಬಹಳವಾಗಿ ಬಿಸಿಯಾದ ವಾತಾವರಣಕ್ಕೆ ಹೊಂದಿಕೊಂಡ ಪ್ರಾಣಿ. ಬೆಳೆದ ಆಮೆಗಳು ಆಲ್ಗ (ಪಾಚಿ) ಹೆಚ್ಚಾಗಿ ಬೆಳೆಯುವ ಎಡೆಗಳಲ್ಲಿ ವಾಸಿಸುತ್ತವೆ. ಈ ಆಮೆಗಳು ಕರಾವಳಿಯ ಉದ್ದಕ್ಕೂ ಕಂಡುಬರುತ್ತವೆ.

ಗಾತ್ರ : ಪ್ರಬುದ್ಧ ಆಮೆಯ ಚಿಪ್ಪು ೧.೦೧ (೩.೩ ಅಡಿ) ಮೀ. ಹೆಚ್ಚು ಉದ್ದ ಬೆಳೆಯುತ್ತವೆ. ತೂಕ ೧೫೫ ಕೆ. ಜಿ. ಇರುತ್ತವೆ.

ಆಹಾರ : ಇದು ಸಸ್ಯಾಹಾರಿ, ಆಲ್ಗ ಮತ್ತು ಸೈಮೊಡೇನಿಯ ಜಾತಿಯ ಕಡಲ ಹುಲ್ಲನ್ನು ಇಷ್ಟಪಟ್ಟು ತಿನ್ನುತ್ತವೆ. ಬಂಧನದಲ್ಲಿ ಇಟ್ಟ ಆಮೆಗಳಿಗೆ ದಿನ ಒಂದಕ್ಕೆ ಸುಮಾರು ೪.೫ ಕೆ.ಜಿ. ಆಹಾರ ಒದಗಿಸಬೇಕಾಗುತ್ತದೆ.

ಲಕ್ಷಣಗಳು : ಇದರ ಮೇಲ್ಚಿಪ್ಪು ಅಂಡಾಕಾರವಾಗಿ, ಒಂದು ರೀತಿಯಲ್ಲಿ ಹೃದಯಾಕಾರವಾಗಿದೆ. ಕ್ಯಾರಪೇಸ್‌ನಲ್ಲಿ ೪ ಕಾಸ್ಟಲ್‌ಮತ್ತು ೨೫ ಮಾರ್ಜಿನಲ್‌ಪ್ರಶಲ್ಕಗಳಿವೆ. ಕ್ಯಾರಪೇಸ್‌ನಲ್ಲಿ ಪ್ರಶಲ್ಕಗಳು ಹೆಂಚು ಹೊದಿಸಿದಂತೆ ವ್ಯವಸ್ತಿತವಾಗಿಲ್ಲ. ತಲೆಯ ಹಣೆ ಭಾಗದಲ್ಲಿ ಒಂದು ಜೊತೆ ಪ್ರಶಲ್ಕಗಳಿವೆ. ದವಡೆಗಳು ಕೊಕ್ಕಿನಂತಿಲ್ಲ. ಕಾಲು ಬೆರಳುಗಳಿಗೆ ನಖಗಳಿವೆ. ಆದರೆ ಒಂದು ಕಾಲಿಗೆ ಒಂದು ನಖ ಮಾತ್ರ ಉಂಟು. ಕಾಲುಗಳ ಮೇಲೆ ಹುರುಪೆಗಳ ಹೊದಿಕೆ ಇದೆ.

ಕ್ಯಾರಪೇಸ್‌ನ ಮೇಲ್ಬಾಗ ಆಲಿವ್‌ಕಂದು ಬಣ್ಣ. ಅದಕ್ಕೆಂದೇ ಇದಕ್ಕೆ ಹಸಿರು ಆಮೆ ಎಂಬ ಸಾಮಾನ್ಯ ಹೆಸರು ಬಂದಿದೆ. ಇದರ ಮೇಲೆ ತ್ರಿಜ್ಯಾಕಾರದ ಪ್ರರೂಪ ರಚನೆ ಇದೆ. ಕೆಳಗಿನ ಚಿಪ್ಪು ಭಾಗವಾದ ಪ್ಲಾಸ್ಟ್ರನ್‌ ತಿಳಿ ಹಳದಿ ಬಣ್ಣ. ತಲೆಯ ಮೇಲಿನ ಹುರುಪೆಗಳಿಗೆ ಹಳದಿ ಅಂಚಿದೆ.

ಸಂತಾನಾಭಿವೃದ್ಧಿ : ಈ ಆಮೆಯ ಸಂತಾನೋತ್ಪತ್ತಿ ಚಟುವಟಿಕೆಯ ಕಾಲ ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತದೆ. ಕರ್ನಾಟಕದ ಪಶ್ಚಿಮ ಕರಾವಳಿಯಲ್ಲಿ ಜುಲೈನಿಂದ ಜನವರಿವರೆಗೆ ಮೊಟ್ಟೆ ಇಡುವ ಪ್ರಕ್ರಿಯೆ ನಡೆಯುತ್ತದೆ. ಮೊಟ್ಟೆ ಇಡುವ ಮೊದಲು ಹೆಣ್ಣು ಆಮೆ ಗೂಡು ರಚಿಸುತ್ತದೆ. ಸಾಮಾನ್ಯವಾಗಿ ರಾತ್ರಿಯ ಹೊತ್ತು ಗೂಡು ಕಟ್ಟುವ ಪರಿಶ್ರಮವಿದೆ. ಮೊಟ್ಟೆ ಇಡುವ ಮುನ್ನ ೫೦ ಸೆಂ. ಮೀ. ಆಳದ ಗುಂಡಿ ತೋಡುತ್ತದೆ. ಸುಮಾರು ೧೦೪ ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಗಳು ೪೦ ಮಿ. ಮೀ. ವ್ಯಾಸ, ೩೪ ಗ್ರಾಂ. ತೂಕ ಇರುತ್ತವೆ. ಮೊಟ್ಟೆ ಇಟ್ಟ ೪೫ ದಿನಗಳನಂತರ ಮೊಟ್ಟೆ ಒಡೆದು ಮರಿಗಳು ಹೊರಬರುತ್ತವೆ. ಮೊಟ್ಟೆಗಳಲ್ಲಿ ಮರಿಗಳು ಬೆಳೆಯಲು ಸುಮಾರು ೨೮oC ಉಷ್ಣತೆ ಬೇಕಾಗುತ್ತದೆ. ಗೂಡಿಗೆ ಮುಚ್ಚಿದ ಮರಳು ಸೂರ್ಯನ ಬಿಸಿಲ ಶಾಖಕ್ಕೆ ಕಾದು ಕೊಡುವ ಕಾವಿನ ಸೆಲೆಯಲ್ಲಿ ಮರಿಗಳು ಬೆಳೆಯುತ್ತವೆ. ಈ ಆಮೆಗಳು ವರ್ಷವಿಡೀ ಸಂತಾನೋತ್ಪತ್ತಿ ಚಟುವಟಿಕೆ ತೋರುತ್ತವೆ. ಇವುಗಳ ಜೀವನದಲ್ಲಿ ನಿರ್ಧಾರಕವಾದ ಪ್ರಜನನ ಚಕ್ರವಿದೆ. ಪ್ರತಿ ಸಾರಿ ಮೊಟ್ಟೆ ಇಡುವಾಗಲೂ ಹಿಂದೆ ಮೊಟ್ಟೆ ಇಟ್ಟ ಜಾಗಕ್ಕೆ ಪದೇ ಪದೇ ಬರುತ್ತದೆ. ನಾಲ್ಕರಿಂದ ಆರು ವರ್ಷಗಳಲ್ಲಿ ಇವು ಪ್ರಾಯಕ್ಕೆ ಬರುತ್ತವೆಂಬ ಅಭಿಪ್ರಾಯವಿದೆ.

ಸ್ವಭಾವ : ಈ ಆಮೆ ಮನುಷ್ಯನ ಹಾವಳಿ, ದುರಪಯೋಗಕ್ಕೆ ತುತ್ತಾಗಿ ನಾಶವಾಗುತ್ತಿದೆ. ಈ ಆಮೆಯ ಹಸಿರು ಕೊಬ್ಬು ಮೃದ್ವಸ್ಥಿ ಮಾಂಸಗಳಿಗಾಗಿ ಇದನ್ನು ಹಿಡಿಯುತ್ತಾರೆ. ಈ ಪ್ರಾಣಿಯ ಸೂಪ್‌ಬಹಳ ರುಚಿ ಮತ್ತು ಪ್ರಿಯವಾದ ತಿನಿಸು. ಇದರ ಹಸಿರು ಕೊಬ್ಬಿನಿಂದಾಗಿ ಈ ಆಮೆಗೆ ಹಸಿರು ಆಮೆ ಎಂಬ ಹೆಸರು ಬಂದಿದೆ.

ಇದು ವಿಷ್ಣುವಿನ ಅವತಾರವೆಂದು ಕೆಲವು ಹಿಂದೂಗಳು ಪೂಜಿಸುತ್ತಾರೆ ಮತ್ತು ಇದರ ಮಾಂಸವನ್ನು ತಿನ್ನುವುದಿಲ್ಲ.

—- 

ಗಣ : ಕಿಲೋನಿಯ (Chelonia)
ಕುಟುಂಬ : ಕಿಲೋನಿಡೀ (Cheloniicdae)
ಉದಾ : ಆಲಿವ್
ರಿಡ್ಲಿ ಕಡಲಾಮೆ (Olive ridley sea turtle)
ಶಾಸ್ತ್ರೀಯನಾಮ : ಲೆಪಿಡೊಕೆಲಿಸ್
ಆಲಿವೇಸಿಯ (Lepidochelys olivacea)

075_69_PP_KUH

ವಿತರಣೆ : ಉಷ್ಣವಲಯದ ವಾಸಿ, ಜೀವನದ ಬಹುಭಾಗವನ್ನು ಕಡಲಿನಲ್ಲಿ ಕಳೆದರೂ ಮೊಟ್ಟೆ ಇಡುವ ಕಾಲಕ್ಕೆ ಮುಖ್ಯ ಖಂಡದ ಮರಳು ತೀರಗಳಿಗೆ, ವಿಶೇಷವಾಗಿ ಮ್ಯಾಂಗ್ರೋವ್‌ಸಸ್ಯವಲಯದ ಕಡಲ ತೀರಕ್ಕೆ ಬರುತ್ತದೆ. ಇದು ಕರ್ನಾಟಕದ ಕಡಲ ತೀರದಲ್ಲಿಯೂ ಮ್ಯಾಂಗ್ರೊವ್‌ಸಸ್ಯ ವಲಯದ ಬಳಿ ಬಂದು ಮೊಟ್ಟೆ ಇಡುತ್ತದೆ. ಜಗತ್ಪ್ರಸಿದ್ಧ ಒರಿಸ್ಸಾ ರಾಜ್ಯ ಕಡಲ ತೀರದ ಬಳಿ ಬರುವ ಅಪಾರ ಸಂಖ್ಯೆಗೆ ಹೋಲಿಸಿದರೆ ಇದು ಅಲ್ಪ. ಆದರೂ ಗಮನಾರ್ಹ.

ಗಾತ್ರ : ೮೦ ಸೆಂ. ಮೀ. ನಿಂದ ೧ ಮೀಟರ್ ಉದ್ದ ಬೆಳೆಯುತ್ತದೆ.

ಆಹಾರ : ಇದಕ್ಕೆ ಇಂತಹುದೇ ಅಹಾರ ಆಗಬೇಕೆಂದಿಲ್ಲ. ಸಿಕ್ಕಿದ ಆಹಾರವನ್ನು ತಿನ್ನುವುದು ರೂಢಿ. ಮೀನು, ಶಂಕದ ಹುಳುಗಳು, ಏಡಿಗಳು, ಅಂಬಲಿ ಮೀನುಗಳು, ಸೀಗಡಿಗಳು, ಸಮುದ್ರ ನಳ್ಳಿ, ಷ್ರಿಂಪ್‌, ಕಡಲ ಚುರುಕಿಗಳು, ಮುತ್ತು ಚಿಪ್ಪು ಪ್ರಾಣಿ (ಆಯಿಸ್ಟರ್), ಕಂಟಕಚರ್ಮಿಗಳು, ಆಲ್ಗೆ ಸತ್ತ ಮೀನುಗಳು, ಇತ್ಯಾದಿ ವಿಶಾಲ ಆಯ್ಕೆಯ ಆಹಾರ.

ಲಕ್ಷಣ : ಅಗಲವಾದ, ಹೃದಯಾಕಾರದ, ಬಾಂಡಲೆಯಂತೆ ಮೇಲೆ ಉಬ್ಬಿದ ಚಿಪ್ಪು. ತುದಿಗಳು ಚಪ್ಪಟೆಯಾಗಿವೆ. ಹಿಂದಿನ ತುದಿಯ ಅಂಚು ಗರಗಸದಂತೆ ಒರಟಾಗಿದೆ. ತಲೆ ಸಣ್ಣದು. ತಲೆ ತ್ರಿಕೋನಾಕಾರ. ಇದರ ಹಣೆಯ ಮೇಲೆ ನಾಲ್ಕು ಪ್ರಿಫ್ರಾಂಟಲ್‌ಹುರುಪೆಗಳಿವೆ. ಮೇಲಿನ ದವಡೆಗೆ ಕೊಕ್ಕಿದೆಯಾದರೂ ಚೂಪು ಏಣಿಲ್ಲ.

ಕ್ಯಾರಪೇಸ್‌ಆಲಿವ್‌ಹಸಿರು ಬಣ್ಣ ಹೊಟ್ಟೆಯ ಭಾಗವೂ, ಅಂದರೆ ಪ್ಲಾಸ್ಟ್ರಾನ್‌ಸಹ ಹಸಿರು ಮಿಶ್ರಿತ ಹಳದಿ. ಮರಿಗಳ ಕ್ಯಾರಪೇಸ್‌ಕಂದು ಕಪ್ಪು, ಕೆಳಗೆ ಕೆನೆಬಣ್ಣ.

ಸಂತಾನಾಭಿವೃದ್ಧಿ : ಸಾವಿರಾರು ಮೈಲಿಗಳು ಪಯಣಿಸಿ, ಮೊಟ್ಟೆ ಇಡಲು ಕಡಲು ತೀರದ ಆಳವಿಲ್ಲದ ನೀರಿಗೆ ವಲಸೆ ಬರುತ್ತವೆ. ನುರಾರು ಆಮೆಗಳು ಗುಂಪು ಗುಂಪಾಗಿ ಮೊಟ್ಟೆ ಇಡುವ ಜಾಗಕ್ಕೆ, ನಿರ್ದಿಷ್ಟ ಪ್ರದೇಶಕ್ಕೆ, ನಿರ್ದಿಷ್ಟ ಕಾಲದಲ್ಲಿ, ಬರುವುದು ಸಾಮಾನ್ಯ ದೃಶ್ಯ. ಮೊಟ್ಟೆ ಇಡುವ ಜಾಗಕ್ಕೆ ಬಂದಾಗ ನೀರಿನ ಮೇಲ್ಮೈನಲ್ಲಿ ಹೆಣ್ಣು ಗಂಡುಗಳು ಸಂಭೋಗ ನಡೆಯುತ್ತದೆ. ಗಂಡು ಹಿಂದಕ್ಕೆ ಬಾಗಿದ ತನ್ನ ಕಾಲು ಬೆರಳುಗಳ ನಖಗಳಿಂದ ಹೆಣ್ಣು ಆಮೆಯ ಕ್ಯಾರಪೇಸನ್ನು ಭಂದ್ರವಾಗಿ ಹಿಡಿದುಕೊಳ್ಳುತ್ತದೆ. ಮೊಟ್ಟೆ ಇಡುವ ಕಾಲದಲ್ಲಿ ಕರಾವಳಿ ಪ್ರದೇಶದಲ್ಲಿ ಅನೇಕ ಹೆಣ್ಣು ಗಂಡು ಜೋಡಿಗಳನ್ನು ಕಾಣಬಹುದು. ಮೊಟ್ಟೆಯಿಡಲೆಂದು ಅಳವೆಗಳ ಮೂಲಕ ನದಿಗಳನ್ನು ಪ್ರವೇಶಿಸಿ ೧೦೦ ಕಿ. ಮೀ. ದೂರ ಕ್ರಮಿಸಿದ ನಿದರ್ಶನಗಳು, ಬಂಗಾಳದ ಸುಂದರಬನ್‌ಪ್ರದೇಶದಲ್ಲಿ ದೊರಕುತ್ತವೆ. ಹೀಗೆ ಬಂದ ಆಮೆಗಳು ಸಾಮಾನ್ಯವಾಗಿ ಮೊಟ್ಟೆ ಇಡುವುದು ರಾತ್ರಿ. ಒಂದು ರಾತ್ರಿಯಲ್ಲಿ ಒಂದೆಡೆ ಸಾವಿರಾರು ಮೊಟ್ಟೆ ಇಡುಬಹುದು. ಈ ಆಮೆಯು ಮೊಟ್ಟೆ ಇಡುವ ಪ್ರದೇಶಗಳಲ್ಲಿ ಒರಿಸ್ಸಾ ರಾಜ್ಯದ ಕರಾವಳಿಯ ಸಣ್ಣ ಬೀಚ್‌, ಅಕ್ರಿಬಾಡ ಜಗತ್ಪ್ರಸಿದ್ಧ, ಹಾಗೆ ಗಾತಿಮಾಡ ತೀರಕ್ಕು ಸಾವಿರಾರು ಸಂಖ್ಯೆಯಲ್ಲಿ ಬಂದು ಲಕ್ಷಾಂತರ ಮೊಟ್ಟೆಗಳನ್ನಿಡುತ್ತವೆ. ಈ ಪ್ರದೇಶಕ್ಕೆ ಪ್ರತಿವರ್ಷವೂ ಬರುವುದೊಂದು ವಿಶೇಷ.

ಕರ್ನಾಟಕದ ಕರಾವಳಿ ತೀರದಲ್ಲಿ ೮೦ ರಿಂದ ೧೬೦ ಮೊಟ್ಟೆಗಳನ್ನಿಡುತ್ತವೆ. ಈ ಮೊಟ್ಟೆಗಳು ೪೫ ರಿಂದ ೬೦ ದಿನಗಳು ಕಾವು ಕಾಲದ ನಂತರ ಒಡೆದು ಮರಿಗಳು ಹೊರಬರುತ್ತವೆ. ಪಶ್ಚಿಮ ಕರಾವಳಿಯಲ್ಲಿ ಮೊಟ್ಟೆ ಇಡಲು ಮಳೆಗಾಲವನ್ನು ಆರಿಸಿಕೊಂಡರೆ, ಪೂರ್ವ ಕರಾವಳಿಯಲ್ಲಿ ನವೆಂಬರ್ ಫೆಬ್ರುವರಿಯ ಚಳಿಗಾಲವನ್ನು ಆರಿಸಿಕೊಳ್ಳುತ್ತವೆ.

ಒಂದು ವರ್ಷದಲ್ಲಿ ಮೂರು ಸಾರಿ ಮೊಟ್ಟೆ ಇಡುತ್ತವೆ. ಮೊಟ್ಟೆಗಳು ಒಡೆದು ಮರಿಗಳು ಹೊರಬರುವುದಕ್ಕೂ ಅಂಬಲಿ ಮೀನುಗಳ ಸುಗ್ಗಿಗೂ ಸಂಬಂಧವಿರುವಂತೆ ತೋರುತ್ತದೆ.

ಸ್ವಭಾವ : ಇದು ಭಾರತ ಉಪಖಂಡದ ಸಾಮಾನ್ಯ ಆಮೆ. ಮನುಷ್ಯ ಇದನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾನೆ. ಇದನ್ನು ಅದರ ಮಾಂಸ ಮತ್ತು ಚರ್ಮಕ್ಕಾಗಿ ಕೊಲ್ಲಲಾಗುತ್ತಿದೆ. ಇದರ ಕ್ಯಾರಪೇಸನ್ನು ಸಾಮಾನು ಸಾಗಿಸಲು; ಸಗಣಿ ಕಲಸಲು, ಕೋಳಿ ಮತ್ತು ದನಗಳಿಗೆ ಮೇವು ತಿನ್ನಿಸಲು, ಗುಡಿಸಲುಗಳಿಗೆ ಮೇಲೆ ಮುಚ್ಚಲು ಬಳಸುತ್ತಾರೆ.

ಮನುಷ್ಯನ ಜೊತೆಗೆ, ನೀರು, ಉಡ, ಗಲ್‌ಹಕ್ಕಿ, ಕಡಲು ಟರ್ನ್‌ಮತ್ತು ಬೀದಿ ನಾಯಿಗಳು ಇದರ ಶತ್ರುಗಳು.

ಪಶ್ಚಿಮ ಕರಾವಳಿಯಲ್ಲಿ ಇದು ಮೊಟ್ಟೆ ಇಡುವುದು ಕಡಿಮೆಯಾದರೂ ಅವುಗಳ ದುರ್ಬಳಕೆ ಅಪಾರ. ಇದರ ಕೊಬ್ಬು ಶ್ವಾಸಕೋಶ ಸಂಬಂಧ ರೋಗಗಳಿಗೆ ಉತ್ತಮ ಔಷಧ ಎಂಬ ಭಾವನೆ ಇದೆ. ಮಂಗಳೂರಿನ ಬಳಿ ನವೆಂಬರ್ ಫೆಬ್ರುವರಿ ತಿಂಗಳುಗಳಲ್ಲಿ ಮೊಟ್ಟೆ ಇಡಲು ಬರುತ್ತವೆ. ೧೯೭೨ ಭಾರತ ಸರ್ಕಾರದ ಕಾಯಿದೆ ಇವುಗಳಿಗೆ ರಕ್ಷಣೆ ನೀಡುತ್ತದೆ.

—- 

ಗಣ : ಕಿಲೋನಿಯ (Chelonia)
ಕುಟುಂಬ : ಟೆಸ್ಟುಡಿನಿಡೀ (Testudinidae)
ಉದಾ : ಕಾಡು ಆಮೆ / ಭಾರತದ ತಾರಾ ಆಮೆ (Indian star tortoise)
ಶಾಸ್ತ್ರೀಯನಾಮ : ಜಿಯೊಕಿಲೋನ್
‌(ಟೆಸ್ಟುಡೊ) ಎಲಿಗನ್ಸ (Geochelone (testudo) elegans)

ವಿ. ಸೂ : ಈ ಆಮೆಯು ಹಿಂದೆ ಟೆಸ್ಟುಡೊ ಎಂಬ ಜಾತಿಗೆ ಸೇರಿಸಿದ್ದು ಈಗ ಅದನ್ನು ಬದಲಾಯಿಸಿ ಜಿಯೊಲೆರ್ಮೆನ್ ಎಂಬ ಜಾತಿಗೆ ಸೇರಿಸಿದ್ದಾರೆ.

076_69_PP_KUH

ವಿತರಣೆ : ಒಣನೆಲ, ಕಲ್ಲಮರಳು ಇರುವ ನೆಲ, ಕರ್ನಾಟಕದ ಕರಾವಳಿಯ ಪೊದರು ಗಿಡಗಳ ನಡುವೆ ವಾಸಿಸುತ್ತದೆ. ಈ ಆಮೆ ದಕ್ಷಿಣ ಭಾರತದ ದ್ವೀಪಕಲ್ಪದಲ್ಲಿ ವಿಶೇಷ. ಕೋಲಾರ ಜಿಲ್ಲೆಯಲ್ಲಿ ದೇವರಾಯಾನದುರ್ಗ ಗುಡ್ಡದಲ್ಲಿ ವಿಶೇಷವಾಗಿ ದೊರಕುತ್ತದೆ. ಹುಲ್ಲು ಕುರುಚಲು ಗಿಡಗಳು ಬೆಳೆಯುವ ಶುಷ್ಕ ಪರಿಸರ ಇದರ ವಾಸಸ್ಥಳ.ತೇವಾಂಶ ಇರುವ ವಸತಿಯನ್ನು ಈ ಆಮೆ ತನ್ನ ವಾಸಕ್ಕೆ ಏಕೆ ಆರಿಸಿಕೊಳ್ಳುವುದಿಲ್ಲ ಎಂಬುದು ತಿಳಿಯದು. ಭಾರತಾದ್ಯಂತ ಸಾಮಾನ್ಯವಾಗಿ ಇದು ಕಂಡುಬರುವ ಆಮೆ.

ಗಾತ್ರ : ಇದರ ಕ್ಯಾರಪೇಸ್ ೨೭ ಸೆಂ. ಮೀ. ಉದ್ದ ಇರುತ್ತದೆ. ಹೆಣ್ಣು ಆಮೆಗಳು ಗಂಡು ಆಮೆಗಳಿಗಿಂತ ದೊಡ್ಡವು. ಗಂಡು ಆಮೆಯ ಕ್ಯಾರಪೇಸ್ ೧೬ ಸೆಂ. ಮೀ. ಗಿಂತ ಉದ್ದ ಬೆಳೆಯುವುದಿಲ್ಲ.

ಆಹಾರ : ಸಸ್ಯಾಹಾರ ಮತ್ತು ಮಾಂಸಾಹಾರಗಳೆರಡನ್ನೂ ತಿನ್ನುವ ಸರ್ವ ಭಕ್ಷಕ. ಸಾಮಾನ್ಯವಾಗಿ ಸಸ್ಯಾಹಾರಿ, ರಸಭರಿತ ಸಸ್ಯ ಭಾಗಗಳು, ಉದುರಿದ ಹಣ್ಣು ಹೂವುಗಳು, ಹುಲ್ಲು ತರಕಾರಿ ಮತ್ತು ಸುಲಭವಾಗಿ ದೊರಕುವ ಎಲ್ಲ ರೀತಿಯ ಸಸ್ಯಗಳನ್ನು ತಿನ್ನುತ್ತದೆ. ಶಂಕದ ಹುಳು, ಪ್ರಾಣಿ, ಪಕ್ಷಿಗಳ ಹಿಕ್ಕೆಯನ್ನು ತಿನ್ನುತ್ತದೆ. ಬಂಧನದಲ್ಲಿ ಎಲ್ಲ ರೀತಿಯ ತರಕಾರಿಗಳು, ಹಣ್ಣುಗಳನ್ನು ತಿನ್ನುತ್ತದೆ. ಇದಕ್ಕೆ ಪ್ರಿಯವಾದ ಹಣ್ಣುಗಳೆಂದರೆ ಟೊಮೆಟೊ, ಕಿತ್ತಲೆ, ಕಲ್ಲಂಗಡಿ ಹಣ್ಣು ಇಲಿ, ಹಲ್ಲಿ, ಕಪ್ಪೆ, ಚಿಪ್ಪಿನ ಪ್ರಾಣಿ ಮತ್ತು ಸತ್ತು ಕೊಳೆಯುತ್ತಿರುವ ಪ್ರಾಣಿಗಳನ್ನು ತಿನ್ನುತ್ತದೆ.

ಲಕ್ಷಣಗಳು : ಈ ಆಮೆಯ ಕ್ಯಾರಪೇಸ್ ಕಪ್ಪು ಮತ್ತು ಗುಮ್ಮಟಾಕಾರವಾಗಿದೆ. ಅಂದರೆ ಉದ್ದವಾಗಿ ಮೇಲಕ್ಕೆ ಉಬ್ಬಿದೆ. ಕ್ಯಾರಪೇಸ್ ಮೇಲೆ ಗಮನಾರ್ಹವಾದ ಶಂಕಿನಾಕಾರದ ಡುಬ್ಬದಂತಹ ಅನೇಕ ಉಬ್ಬಿದ ರಚನೆಗಳಿವೆ. ಇವು ಉದ್ದಕ್ಕಿಂತ ಹೆಚ್ಚು ಅಗಲವಾಗಿವೆ. ಪ್ರತಿಯೊಂದು ಡುಬ್ಬದ ಮೇಲೂ ಕನಿಷ್ಟ ನಾಲ್ಕು ಹಳದಿಯ ಕಲೆಗಳು ಮತ್ತು ಅದರಿಂದ ತ್ರಿಜ್ಯಾಕಾರದಲ್ಲಿ ಹರಡಿದಂತೆ ಪಟ್ಟಿಗಳಿವೆ. ಈ ರಶ್ಮಿಗಳು ಡುಬ್ಬದ ಹೊರ ಅಂಚಿನೊಂದಿಗೆ ಕೂಡಿಕೊಂಡು ಆಕರ್ಷಕ ನಮೂನೆಯನ್ನು ಸೃಷ್ಟಿಸಿವೆ.

ಕ್ಯಾರಪೇಸ ಬಲವಾದ ಕೊಂಬಿನಂತಹ ವಸ್ತುವಿನಿಂದಾದ ಪ್ರಶಲ್ಕಗಳನ್ನೊಳಗೊಂಡ ಭಾರವಾದ ರಚನೆಯಾಗಿ ರೂಪುಗೊಂಡಿದೆ. ಕ್ಯಾರಪೇಸನ ಮುಂದಿನ ಮತ್ತು ಹಿಂದಿನ ತುದಿಗಳು, ತಲೆ ಸೇರುವಲ್ಲಿ ಮತ್ತು ಬಾಲ ಸೇರುವಲ್ಲಿ ತುಸು ಮೇಲಕ್ಕೆ ಬಾಗಿದಂತೆ ಕಾಣುತ್ತದೆ. ತಲೆಯ ಮೇಲೆ ಅವ್ಯವಸ್ಥಿತ ಹುರುಪೆಗಳ ಹೊದಿಕೆ ಉಂಟು. ತಲೆಯ ಮೇಲಿನ ಚರ್ಮವು ಅನೇಕ ಫಲಕಗಳಾಗಿ ವಿಭಾಗವಾಗಿದೆ.

ಈ ಆಮೆಗಳ ವರ್ಣಾ ವಿನ್ಯಾಸ ಬಹಳ ವಿಶಿಷ್ಟ ಮತ್ತು ಆಕರ್ಷಕ. ಪ್ಲಾಸ್ಟ್ರಾನ್ ಕಪ್ಪು ಹಿನ್ನಲೆ ಬಣ್ಣದ ಮೇಲೆ ಹಳದಿ ಪಟ್ಟಿಗಳಿದ್ದು ನೋಡಲು ಅಂದವಾಗಿದೆ. ಮತ್ತು ಆಕರ್ಷಕವಾಗಿದೆ. ತಲೆ ಮತ್ತು ಕಾಲುಗಳು ಕಂದು ಮಿಶ್ರಿತ ಹಳದಿ ವರ್ಣ ತೊಡೆದಂತಿವೆ. ಕಾಲುಗಳು ಕಂಬಗಳಂತಿವೆ. ಮತ್ತು ಗಡುಸಾಗಿವೆ. ಹಸ್ತ ಮತ್ತು ಪಾದಗಳೆರಡರಲ್ಲೂ ಐದೈದು ಬೆರಳುಗಳಿವೆ. ಬೆರಳುಗಳಲ್ಲಿ ಹೊರಕ್ಕೆ ಕಾಣಿಸುವ ಮೊಂಡು ನಖಗಳಿವೆ. ಬಾಲ ಉದ್ದದಲ್ಲಿ ಗಿಡ್ಡ.

ಸಂತಾನಾಭಿವೃದ್ಧಿ : ಮಳೆಗಾಲದ ಆರಂಭದಲ್ಲಿ ಹೆಣ್ಣುಗಂಡುಗಳ ಕೂಡುವಿಕೆ ನಡೆಯುತ್ತದೆ. ಮಾರ್ಚ್, ಜೂನ್, ಜುಲೈ, ಆಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಈ ಆಮೆಯ ಮೊಟ್ಟೆಗಳು ಕಂಡು ಬರುತ್ತವೆ. ಒಂದು ಸಾಲಿಗೆ ೩.೫-೩.೭,೪೫-೪೬ ಮಿ. ಮೀ.ಉದ್ದಗಲದ ೩ ರಿಂದ ೬ ಮೊಟ್ಟೆಗಳನ್ನಿಡುತ್ತವೆ. ಹೆಣ್ಣು ಆಮೆ ಗುಂಡಿ ತೋಡಿ ಮೊಟ್ಟೆಗಳನಿಟ್ಟು ಮುಚ್ಚುತ್ತದೆ. ಒಂದು ವರ್ಷದಲ್ಲಿ ಒಂದಕ್ಕಿಂತ ಹೆಚ್ಚು ಸಾರಿ, ಕನಿಷ್ಟ ಮೂರು ಸಾರಿ ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆಗಳಿಗೆ ಗಟ್ಟಿಯಾದ ಚಿಪ್ಪು ಇದ್ದು ಅವು ಬಿಳಿ ಬಣ್ಣವಾಗಿರುತ್ತವೆ. ಬಿಳಿಯ ಬಣ್ಣದ ಮೇಲೆ ಕಪ್ಪು ಬಣ್ಣದ ಗುರುತುಗಳಿರಬಹುದು. ಹದಿನೈದು ಸೆಂ. ಮೀ. ಆಳ, ೧೦ ಸೆಂ. ಮೀ. ಅಗಲದ ಗುಂಡಿಗಳನ್ನು ತೋಡಿ ಅದರಲ್ಲಿ ಮೊಟ್ಟೆಗಳನಿಟ್ಟು ಮಣ್ಣು ಮುಚ್ಚಿ ಬಿಡುತ್ತದೆ. ಗುಂಡಿ ತೋಡಲು ಅರಿಸಿಕೊಂಡ ನೆಲಭಾಗ ಗಟ್ಟಿಯಾಗಿದ್ದರೆ, ಮೂತ್ರ ವಿಸರ್ಜನೆ ಮಾಡಿ, ಒದ್ದೆ ಮಾಡಿ ಗುಂಡಿ ತೋಡುತ್ತದೆ. ಗುಂಡಿ ತೋಡುವ ಮತ್ತು ಮೊಟ್ಟೆ ಇಡುವ ಪ್ರಕ್ರಿಯೆ ಮುಗಿಯಲು ಸುಮಾರು ನಾಲ್ಕು ಗಂಟೆಗಳು ಹಿಡಿಯುತ್ತವೆ. ಸುಮಾರು ೧೭೧-೧೭೮ ದಿನಗಳ ಕಾವು ಕಾಲದನಂತರ ಚಿಪ್ಪು ಒಡೆದು ಬೆಳೆದ ಮರಿಗಳು ಹೊರ ಬರುತ್ತವೆ.

ಸ್ವಭಾವ : ಇವು ನಿಶಾಚರಿಗಳಾದರೂ ಮುಂಜಾವು ಮುಸ್ಸಂಜೆಗಳಲ್ಲಿ ಆಹಾರಾನ್ವೇಷಣೆಗೆ ತೊಡಗುವ ಅಭ್ಯಾಸವನ್ನು ರೂಢಿಸಿಕೊಂಡಿವೆ. ಉಳಿದ ಹಗಲು ವೇಳೆಯಲ್ಲಿ ಅವಿತು ತಲೆಮರೆಸಿಕೊಂಡಿದ್ದು ವಿಶ್ರಮಿಸಿ ಕೊಳ್ಳುತ್ತವೆ. ಅಪಾಯದ ಮುಮ್ಸೂಚನೆ ದೊರೆತೊಡನೆ ತಲೆಕಾಲುಗಳನ್ನು ಚಿಪ್ಪಿನ ಒಳಕ್ಕೆಳೆದುಕೊಂಡು ರಕ್ಷಿಸಿಕೊಳ್ಳುವ ಪ್ರಯತ್ನ ಮಾಡುತ್ತವೆ. ಮುಂಗಾರು ಸಮಯದಲ್ಲಿ ಇವುಗಳ ಸಡಗರದ ಚಟುವಟಿಕೆ ಅಪಾರ. ಹಗಲಿನಲ್ಲಿಯೂ ಒಡಾಡುತ್ತವೆ.

ಅನೇಕ ಮೂಲ ನಿವಾಸಿ ಪಂಗಡಗಳವರು ಇವುಗಳನ್ನು ಹಿಡಿದು ತಿನ್ನುತ್ತಾರೆ. ಸಾಕು ಪ್ರಾಣಿಗಳಾಗಿ ಮಾರುತ್ತಾರೆ. ಕಳೆದ ತಿಂಗಳಷ್ಟೇ (ಅಗಷ್ಟ್ ೨೦೦೦) ಪಶ್ಚಿಮ ಬಂಗಾಳದಲ್ಲಿ ಮಾರಾಟಕ್ಕೆಂದು ಸಾಗಿಸುತ್ತಿದ್ದ ಸಾವಿರಾರು ಈ ಜಾತಿಯ ಆಮೆಗಳನ್ನು ಪತ್ತೆ ಮಾಡಿ ಹಿಡಿಯಲಾಗಿದೆ. ಕಾನೂನಿನಿಂದ ರಕ್ಷಿಸಲ್ಪಟ್ಟಿದ್ದರೂ ಜನರ ಅಜ್ಞಾನದಿಂದ ಅಪರೂಪದ ಆಕರ್ಷಕ ಪ್ರಾಣಿಗಳ ನಾಶ ಆಗುತ್ತಿದೆ.

 —-

ಗಣ : ಕಿಲೋನಿಯ
ಕುಟುಂಬ : ಟೆಸ್ಟುಡಿನಿಡೀ (Testudinidae)
ಉದಾ : ತಿರುವಾಂಕೂರು ಆಮೆ (Travancore tortoise) (ಬೆಟ್ಟ ಆಮೆ, ಕಾಡು ಆಮೆ, ಗುಡ್ಡದ ಆಮೆ, ಕಲ್ಲಾಮೆ)
ಶಾಸ್ತ್ರೀಯನಾಮ : ಇಂಡೊಟೆಸ್ಟುಡೊ (ಟೆಸ್ಟುಡೊ) ಫಾರಸ್ಟೆನೀ (Indotestudo (testudo) forestinii)

077_69_PP_KUH

ವಿತರಣೆ : ಯಲ್ಲಾಪುರ, ನೆರೆಯ ಗುಂಡಿಯ, ಜಾಡಿಬ್ರಿ, ಸುಬ್ರಮಣ್ಯದ ಬಳಿಯ ನಿತ್ಯಹರಿದ್ವರ್ಣದ ಮತ್ತು ಅರೆನಿತ್ಯ ಹರಿದ್ವರ್ಣದ ಕಾಡುಗಳು, ಇಲ್ಲಿ ಹರಿಯುವ ನದಿಗಳ ದಂಡೆಯ ಉದ್ದಕೂ ಕಲ್ಲು ಪೊಟರೆಗಳಲ್ಲಿ ಕಾಡುಗಳಲ್ಲಿ ವಾಸಿಸುತ್ತದೆ.

ಗಾತ್ರ : ೩೩.೧ ಸೆಂ. ಮೀ. ಉದ್ದ ಬೆಳೆಯುತ್ತದೆ.

ಆಹಾರ : ಪ್ರಮುಖವಾಗಿ ಸಸ್ಯಾಹಾರಿ, ಬೂಷ್ಟು ಬಿದಿರು ಮೊಳಕೆ (ಕಳಲೆ), ಕೆಳಗೆ ಉದುರಿದ ಹಣ್ಣು ಹೂವುಗಳು ಇತ್ಯಾದಿಗಳು ಇದರ ಆಹಾರ. ಜೊತೆಗೆ ಕಪ್ಪೆ, ಕೀಟಗಳನ್ನು ತಿನ್ನುತ್ತದೆ. ಬಂಧನದಲ್ಲಿದ್ದಾಗ, ಮೀನು, ಮಾಂಸ, ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುತ್ತದೆ.

ಲಕ್ಷಣಗಳು : ಉದ್ದವಾದ ಮತ್ತು ತಗ್ಗಿದ ಆಮೆ ಚಿಪ್ಪು. ವಯಸ್ಕ ಆಮೆಗಳಲ್ಲಿ ಚಿಪ್ಪಿನ ಹಿಂಭಾಗ ಅಗಲವಾಗಿರುತ್ತದೆ ಬಾಲದ ತುದಿಯಲ್ಲಿ ನಖವನ್ನು ಹೋಲುವ ಮುಳ್ಳು ಇದೆ. ಮೇಲು ದವಡೆ ತುಸು ಕೊಕ್ಕೆಯಾಗಿದೆ.

ಚಿಪ್ಪಿನ ಮೇಲ್ಭಾಗ ಆಲಿವ್ ಅಥವಾ ಕಂದು ಬಣ್ಣ ಅದರ ಮೇಲೆ ಕಪ್ಪು ಮಚ್ಚೆಗಳಿವೆ. ಕಾಲುಗಳ ಮೇಲೆ ಹಳದಿ ಹುರುಪೆಗಳಿವೆ. ತಲೆಯು ಹಳದಿ ಮಿಶ್ರಿತ ಕಂದು ಬಣ್ಣವಾಗಿದೆ.

ಸಂತಾನಾಭಿವೃದ್ಧಿ : ಗಂಡು ಆಮೆಯು ಹೆಣ್ಣು ಆಮೆಗಿಂತ ದೊಡ್ಡದು. ಗಂಡು ಆಮೆಯ ಬಾಲದ ಮುಳ್ಳು ಬಲವಾಗಿದೆ. ಸಂತಾನೋತ್ಪತ್ತಿ ಚಟುವಟಿಕೆಯ ಕಾಲದಲ್ಲಿ ಕಣ್ಣಿನ ಸುತ್ತ ಮತ್ತು ನೆತ್ತಿಯ ಮೇಲೆ ಪ್ರಕಾಶ ಕಡುಕೆಂಪು ಬಣ್ಣ ಕಾಣಿಸಿಕೊಳ್ಳುತ್ತದೆ. ಇದು ಈ ಪ್ರಾಣಿಯ ಸಂಭೋಗ ವರ್ಣ ಅಲಂಕಾರ ಇರಬಹುದು. ಈ ಆಮೆ ಮುಂಗಾರು ಆರಂಭದಲ್ಲಿ ಸಂಭೋಗಿಸುತ್ತದೆ. ಸುಗಂಧ ದ್ರವ್ಯ ಉತ್ಪತ್ತಿಯಾಗಿ ಲೈಂಗಿಕ ಆಕರ್ಷಣೆಗೆ ನೆರವಾಗಬಹುದು. ಮುಸ್ಸಂಜೆ ಅಥವಾ ಮುಂಜಾನೆ ಅವು ಸಂಭೋಗಿಸುತ್ತವೆ. ನವೆಂಬರ್ ಜನವರಿ ತಿಂಗಳುಗಳ ಕಾಲ ಇವುಗಳ ಸಂತಾನೋತ್ಪತ್ತಿ ಚಟುವಟಿಕೆಯ ಕಾಲ. ಎರಡನೆ ಮುಂಗಾರು (ಹಿಂಗಾರು) ಕಾಲಕ್ಕೆ ಮೊಟ್ಟೆ ಇಡುತ್ತವೆ. ಒಂದು ಸಾರಿಗೆ ೧ ರಿಂದ ೩ ಮೊಟ್ಟೆಗಳನ್ನಿಡುತ್ತವೆ. ೪೧ x ೩೧ ಮಿ.ಮೀ. ಉದ್ದಳತೆಯ ಮೊಟ್ಟೆಗಳನ್ನಿಡುತ್ತವೆ. ಅಕ್ಟೋಬರ್, ಜನವರಿ, ಮಾರ್ಚ್ ತಿಂಗಳುಗಳಲ್ಲಿ ಇವುಗಳ ಮೊಟ್ಟೆಗಳು ದೊರಕುತ್ತವೆ. ಕಾವು ಕಾಲಾವಧಿ ೧೪೬-೧೪೯ ದಿನಗಳು.

ಸ್ವಭಾವ : ಮುಂಜಾನೆ ಮುಸ್ಸಂಜೆ ಆಹಾರ ಹುಡುಕುತ್ತ ಹೊರಡುತ್ತವೆ. ಮಧ್ಯಾಹ್ನ ಬಿಸಿಲು ಕಾಯಿಸುತ್ತವೆ, ಉಳಿದಂತೆ ಉದುರಿದ ಎಲೆಗಳರಾಶಿಯಲ್ಲಿ ಆಡಗಿ ವಿರಮಿಸುತ್ತವೆ. ಇದು ಕಾಯಿದೆ ರಕ್ಷಿತ ಪ್ರಾಣಿ.

—- 

ಗಣ : ಕಿಲೋನಿಯ
ಕುಟುಂಬ : ಟ್ರಿಯೊನಿಕ್ಕಿಡೀ (Trioniehidae)
ಉದಾ : ಲೈತಿಯವರ ಮೃದುಚಿಪ್ಪು ಆಮೆ ಆಡಿಕೆ ಆಮೆಬಾಗ್ಲ ಆಮೆ (Leith’s soft shell tortoise)
ಶಾಸ್ತ್ರೀಯ ನಾಮ : ಟ್ರಿಯೊನಿಕ್ಸ್ (ಆಸ್ಟಿಡಿರ್ವಿಸ್) ಲೈತಿ (Trionyx (aspidertes) leitihi)

ವಿತರಣೆ : ಭಾರತದ ದಕ್ಷಿಣ ಜೀವಕಲ್ಪದಲ್ಲಿ ದೊರಕುತದೆ. ದಕ್ಷಿಣ ಭಾರತದ ನದಿಗಳ ಜಲಾನಯನ ಪ್ರದೇಶಕ್ಕೆ ಸೇರಿದ ಅಥವಾ ಸ್ವತಂತ್ರವಾದ ಕೆರೆಕೊಳಗಳಲ್ಲಿ ವಾಸಿಸುತ್ತದೆ. ಕರ್ನಾಟಕದ ಶರಾವತಿ ವನ್ಯಜೀವಿ ಪ್ರಾಣಿಧಾಮ, ಸುಬ್ರಹ್ಮಣ್ಯಗಳ ಬಳಿ ನದಿ, ಹೊಳೆ, ಜಲಾಶಯದಲ್ಲಿ ಕಂಡುಬರುತ್ತದೆ.

ಗಾತ್ರ : ಈ ಆಮೆಯ ಚಿಪ್ಪು ೬೩.೫ (೨.೧ ಅಡಿ ) ಸೆಂ. ಮೀ. ಉದ್ದ ಬೆಳೆತುತ್ತದೆ.

ಆಹಾರ : ಮೀನು, ಶಂಕದ ಹುಳು, ಏಡಿ, ಕಪ್ಪೆ, ಚಿಪ್ಪಿನ ಹುಳುಗಳನ್ನು ತಿನ್ನುತ್ತದೆ. ಬಂಧನದಲ್ಲಿ ಎರೆಹುಳು, ಸೀಗಡಿ, ಮೃದ್ವಂಗಿಗಳು, ಮೀನು ಮರಿಗಳು, ಗೊದಮೊಟ್ಟೆಗಳನ್ನು ತಿನ್ನುತ್ತದೆ. ಹೊಟ್ಟೆ ಹಸಿದಾಗ ನೀರಿನಲ್ಲಿ ತೇಲುವ ಸಸ್ಯಗಳ ಬೇರು ಕುಸರಿಗಳನ್ನು ಕಚ್ಚಿ ತಿನ್ನುತ್ತದೆ. ಸೊಳ್ಳೆಡಿಂಬ (ಲಾರ್ವ) ಗಳನ್ನು ತಿನ್ನುತ್ತದೆ. ಈ ಆಮೆಯನ್ನು ಸೊಳ್ಳೆ ನಿಯಂತ್ರಣಕ್ಕೆ ಬಳಸಲಾಗುವುದಿಲ್ಲ. ಆಂಧ್ರ ಪ್ರದೇಶದಲ್ಲಿ ಕೆಲವು ಕಡೆಗಳಲ್ಲಿ ಈ ಆಮೆಗಳನ್ನು ದೇವಸ್ಥಾನದ ಕೊಳಗಳಲ್ಲಿ ಸಾಕಿ ಕೆಂಪು ದಾಸವಾಳ ಹೂವಿನ ಎಸಳುಗಳನ್ನು ತಿನ್ನಿಸುತ್ತಾರೆ. ಈ ಆಮೆ ಸತ್ತು ಕೊಳೆಯಿತ್ತಿರುವ ಮೀನುಗಳನ್ನು ತಿನ್ನುತ್ತದೆ.

ಲಕ್ಷಣಗಳು : ಕ್ಯಾರಪೇಸ್ ಚಪ್ಪಟೆ ಮತ್ತು ಅಂಡಾಕಾರವಾಗಿದೆ. ಕ್ಯಾರಪೇಸನ ಮುಂತುದಿಯಲ್ಲಿ ಚಪ್ಪಟೆ ಗಂತಿಯಾಕಾರದ ಗುಬಟುಗಳಿವೆ. ಹೆಸರೇ ಸೂಚಿಸುವಂತೆ ಚಿಪ್ಪು ಮೃದುವಾಗಿದೆ.

ಕ್ಯಾರಪೇಸಿನ ಮೇಲ್ಭಾಗ ಹಸಿರಾಗಿದೆ ಅಥವಾ ಕಂದು ಹಸಿರಾಗಿದೆ. ಅದರ ಮೇಲೆ ಹಸಿರು ಅಥವಾ ಕಪ್ಪು ಹಸಿರಿನ ಪಟ್ಟಿಗಳ ಜಾಲಜಾಡುಗಳಿವೆ. ಕಣ್ಣಿನಿಂದ ಕುತ್ತಿಗೆಯವರೆಗೆ ಹರಡುವ ಕಪ್ಪು ಪಟ್ಟಿಗಳಿವೆ. ಬಾಯಿಯ ಎರಡೂ ಮೂಲೆಗಳಲ್ಲಿ ಹಳದಿ ಅಥವಾ ಕೆಂಪು ಮಿಶ್ರಿತ ಕಿತ್ತಲೆ ಬಣ್ಣದ ಚುಕ್ಕಿಗಳಿವೆ. ಹಣೆಯ ಮೇಲೂ ಚುಕ್ಕಿಗಳು ಕಂಡು ಬರುತ್ತವೆ. ಕಾಲುಗಳ ಹೊರಭಾಗ ಆಲಿವ್ ಹಸಿರು ಮತ್ತು ಒಳಭಾಗ ಕೆನೆ ಬಣ್ಣ.

ಸಂತಾನಾಭಿವೃದ್ಧಿ : ಲಿಂಗ ದ್ವಿರೂಪತ್ವ ಇದೆ. ಗಂಡು ಆಮೆಗಳ ಚಿಪ್ಪು ಹೆಣ್ಣು ಆಮೆಗಳ ಚಿಪ್ಪಿಗಿಂತ ಹೆಚ್ಚು ಉದ್ದವಿವೆ. ಇವು ಜೂನ್ ತಿಂಗಳ ಮಧ್ಯಭಾಗದಲ್ಲಿ ಮೊಟ್ಟೆ ಇಡುತ್ತವೆ. ಒಂದು ವರ್ಷದಲ್ಲಿ ಎರಡು ಸಾರಿ ಮೊಟ್ಟೆ ಇಡುತ್ತವೆ. ಮೊಟ್ಟೆಗಳು ದುಂಡು ಮತ್ತು ೨.೩ ಸೆಂ. ಮೀ. ವ್ಯಾಸವಿರುತ್ತವೆ. ಒಂದು ಸಾಲಿಗೆ ಹತ್ತು ಮೊಟ್ಟೆಗಳನ್ನಿಡುತ್ತವೆ. ನೆಲವನ್ನು ಬಗೆದು ಗುಂಡಿ ತೋಡಿ ಮೊಟ್ಟೆ ಇಟ್ಟು ಮುಚ್ಚಿಬಿಡುತ್ತವೆ. ಕಾವು ಕಾಲಾವಧಿ ತಿಳಿಯದು.

ಸ್ವಭಾವ : ಸಂಖ್ಯೆಯಲ್ಲಿ ಹೆಚ್ಚುತ್ತಿರುವ ಈ ಕುಟುಂಬದ ಆಮೆಗಳು ನದಿಗಳನ್ನು ಮತ್ತು ಜಲಾಶಯಗಳನ್ನು ಆಕ್ರಮಿಸಿಕೊಳ್ಳುತ್ತಿವೆ. ಗಂಗಾನದಿಯಲ್ಲಿ ಹೇರಳವಾಗಿರುವ ಇದೇ ಜಾತಿಯ ಆಗ್ಯಾಂಜೆಟಿಕಸ್ ನಂತೆ ದಕ್ಷಿಣ ದ್ವೀಪಕಲ್ಪಗಳ ನದಿಗಳಲ್ಲಿ ತಾನು ಹರಡಿವೆ. ಇವು ಉತ್ತರ ಭಾರತದಲ್ಲಿಯೂ ಗುಜಾರಾತಿನಲ್ಲಿಯೂ ದೊರಕುತ್ತವೆ ಎಂಬ ವರದಿಗಳಿವೆ. ಸಾಕಿದ ಆಮೆಗಳು ಬಿಸಿಲು ಕಾಯಿಸುತ್ತವೆಂಬ ವರದಿಗಳಿವೆ. ಆದರೆ ಇದು ತನ್ನ ಉತ್ತರದ ಜಾತಿಯ ಬಂಧುವಿನಂತೆ ಆಕ್ರಮಣಕಾರಿಯಲ್ಲ.