ಗಣ : ಲ್ಯಾಸರ್ ಟೀಲಿಯ
ಕುಟುಂಬ : ಅಗಾಮಿಡೀ (Agamidae)
ಉದಾ : ಓತಿ/ಓತಿಕೆತ್ತ / ಹೆಂಟೆಗೊದ್ದ (Garden lizard)
ಶಾಸ್ತ್ರೀಯನಾಮ : ಕೆಲೊಟಿಸ್ ವರ್ಸಿಕೊಲಾರ್ (Calotes versicolor)

068_69_PP_KUH

ವಿತರಣೆ : ಭಾರತಾದ್ಯಂತ ಬೇಲಿ, ಪೋದೆಗಳಲ್ಲಿ ದೊರಕುತ್ತದೆ. ಇದು ಎಲ್ಲಾ ಪರಿಸರಗಳಲ್ಲಿಯೂ ವಾಸಿಸುತ್ತದೆ.

ಗಾತ್ರ : ಒಂದು ಗಂಡಿನ ಗರಿಷ್ಠ ಉದ್ದ ೪೯ ಸೆಂ. ಮೀ. ಬಾಲವೇ ೩೫ ಸೆಂ. ಮೀ. ಉದ್ದ ಇರುತ್ತದೆ. ಹೆಣ್ಣು ಓತಿಗಳು ಗಂಡಿಗಿಂತ ಚಿಕ್ಕವು.

ಅಹಾರ : ಕೀಟಹಾರಿಗಳು, ಇರುವೆ, ಗೊದ್ದಗಳು, ಸಣ್ಣ ಹಕ್ಕಿಗಳು, ಹಕ್ಕಿ ಗೂಡು ಮರಿಗಳು, ಕಪ್ಪೆ, ಮುಂತಾದ ಸಣ್ಣ ಪ್ರಾಣಿಗಳು ಇದರ ಆಹಾರ. ಬಂಧನದಲ್ಲಿ ಜಿರಲೆ, ರೇಷ್ಮೆಪತಂಗಗಳನ್ನು ತಿನ್ನುತ್ತವೆ.

ಲಕ್ಷಣಗಳು : ಸಾಧಾರಣ ಗಾತ್ರದ ಶಾಖಾವಾಸಿ. ತಲೆ ಅಂಡಾಕಾರವಾಗಿದೆ ಮತ್ತು ಪಕ್ಕದಿಂದ ಪಕ್ಕಕ್ಕೆ ಚಪ್ಪಟೆಯಾಗಿದೆ. ಗಂಡು ಓತಿಗಳಲ್ಲಿ ಕೆನ್ನೆಗಳು ಮಾಂಸಲವಾಗಿ ಊದಿಕೊಂಡತಿವೆ. ಕೆನ್ನೆಯ ಹಿಂಭಾಗದಲ್ಲಿ ಎರಡೂ ಪಕ್ಕಗಳಲ್ಲಿ ತಗ್ಗುಗಳಿವೆ. ಇವೇ ಹೊರ ಕಿವಿ ನಾಲೆಗಳು ಅದರ ತಳದಲ್ಲಿ ಕಿವಿ ತಮ್ಮಟೆ ಉಂಟು. ಈ ಹೊರಕಿವಿ ತಗ್ಗಿನ ಹಿಂದೆ ಎರಡು ದೊಡ್ಡ ಹುರುಪೆಗಳಿವೆ. ಬೆನ್ನಿನ ಮೇಲೆ ಉದ್ದಕ್ಕೂ ಹರಡಿರುವ ಹುರುಪೆಗಳ ಉದ್ದ ಏಣುಗಳು ಶಿಖೆಗಳ ಈಟಿಗಳಂತೆ ಚಾಚಿರುತ್ತವೆ, ನಡು ದೇಹವನ್ನು ೩೫ ರಿಂದ ೫೩ ಸಾಲು ಹುರುಪೆಗಳು ಮುಚ್ಚುತ್ತವೆ. ಬಾಲ ಉದ್ದವಾಗಿದೆ ಮತ್ತು ಉರುಳೆಯಾಕಾರವಾಗಿದೆ. ಬಾಲದ ಬುಡ ತುಸು ಊದಿದಂತಿದೆ. ಬೆರಳುಗಳಿಗೆ ನಖಗಳಿವೆ. ದವಡೆಗಳಲ್ಲಿ ಚೂಪಾದ ಹಲ್ಲುಗಳಿವೆ.

ಬೆನ್ನಿನ ಭಾಗ ಕಂದು ಅಥವಾ ಮರಳು ಕಂದು ಬಣ್ಣ ಕೆಲವೊಮ್ಮೆ ಅಲ್ಲಲ್ಲಿ ಚಿಕ್ಕಿಗಳು ಮತ್ತು ಪಟ್ಟಿಗಳು ಇರುತ್ತವೆ.

ಸಂತಾನಾಭಿವೃದ್ಧಿ : ಈ ಪ್ರಾಣಿಗಳು ಚೆನ್ನಾಗಿ ರೂಪುಗೊಂಡ ಋತು ಚಕ್ರವನ್ನು ತೋರುತ್ತವೆ. ಜನವರಿಯಿಂದ ಏಪ್ರಿಲ್ ವರೆಗೆ ಸ್ಥಗಿತಗೊಂಡಿದ್ದ ಸಂತಾನೋತ್ಪತ್ತಿ ಅಂಗಗಳು ಚೇತರಿಸಿಕೊಂಡು ಮುಂದಿನ ಸಂತಾನೋತ್ಪತ್ತಿ ಚಟುವಟಿಕೆಗಳಿಗೆ ಸಿದ್ಧವಾಗುತ್ತವೆ. ಮೇಯಿಂದ ಆಗಸ್ಟ್ ತಿಂಗಳವರೆಗೆ ಸಂತಾನೋತ್ಪತ್ತಿ ಚಟುವಟಿಕೆ ಪರಕಾಷ್ಟೆ ತಲುತ್ತದೆ. ಗಂಡು ಹೆಣ್ಣುಗಳು ಸಂಧಿಸುತ್ತವೆ. ಸಂಭೋಗಿಸುತ್ತವೆ. ಈ ಕಾಲದಲ್ಲಿ ಗಂಡುಗಳು ದಪ್ಪ ಪುಷ್ಟವಾಗಿದ್ದು ತಲೆ-ಕತ್ತುಗಳು ಕಡು ಕೆಂಪು ಬಣ್ಣ ತಾಳುತ್ತವೆ. ರಕ್ತ ಓಕುಳಿಯಾಡಿದಂತೆ ಕಾಣುತ್ತದೆ. ಇದರಿಂದ ಇವುಗಳನ್ನು ರಕ್ತ ಹೀರು (Blood sucker) ಎಂಬ ಆಡ್ಡಹೆಸರಿನಿಂದ ಕರೆಯುತ್ತಾರೆ. ಹೆಣ್ಣು ಓತಿ ಹಿಂಗಾಲುಗಳಿಂದ ಗುಂಡಿ ತೋಡಿ ಮೊಟ್ಟೆಗಳನ್ನಿಟ್ಟು ಮಣ್ಣು ಮುಚ್ಚಿಬಿಡುತ್ತವೆ. ಮೊಟ್ಟೆ ಇಡುವ ಮೊದಲು ಹೆಣ್ಣು ನಿಷೇಚಿತ ಮೊಟ್ಟೆಗಳನ್ನು ತನ್ನ ಪ್ರಜನನಾಂಗಗಳಲ್ಲಿ ೩೫ ದಿನಗಳವರೆಗೆ ಉಳಿಸಿ ಕೊಂಡಿರುತ್ತದೆ. ಇದನ್ನು ಗರ್ಭಸ್ತ ಕಾಲ ಎನ್ನುವುದುಂಟು ಈ ಕಾಲದಲ್ಲಿ ಮೊಟ್ಟೆಗಳ ಒಳಗೆ ಮರಿಯ ಬೆಳವಣಿಗೆ ಮುಂದುವರಿಯುತ್ತದೆ. ಒಮ್ಮೆಗೆ ೨೮ ರಿಂದ ೩೫ ಬಿಳಿಯ ಮೊಟ್ಟೆಗಳನ್ನಿಡುತ್ತವೆ. ಈ ಮೊಟ್ಟೆಗಳು ೪೦ x ೮೦ ಮಿ. ಮೀ. ಉದ್ದಗಲ ಇರುತ್ತವೆ. ಒಂದು ಹೆಣ್ಣು ಓತಿ ಒಂದು ಋತು ಚಕ್ರದಲ್ಲಿ ಎರಡರಿಂದ ಮೂರು ಸಲ ನಿಷೇಚಿತ ಮೊಟ್ಟೆಗಳನ್ನಿಡುತ್ತದೆ. ೩೭- ೪೭ ದಿನಗಳು ಕಾವು ಕಾಲ. ಮೊಟ್ಟೆಗಳಿಗೆ ತೊಗಲಿನಂತಹ ಚಿಪ್ಪಿನ ಆವರಣವಿದೆ.

ಸ್ವಭಾವ : ಗಂಡು ಓತಿ ಒಂದು ರೀತಿಯ ಕ್ಷೇತ್ರಸ್ವಾಮ್ಯ ಮತ್ತು ಅದರ ರಕ್ಷಣೆಯ ವರ್ತನೆಯನ್ನು ತೋರುತ್ತದೆ. ತನ್ನ ಕ್ಷೇತ್ರದ ಎತ್ತರದ ಗಿಡದ ತುದಿ ಅಥವ ದಿಟ್ಟ ತುದಿಯಲ್ಲಿ ಕುಳಿತು ತನ್ನ ಕ್ಷೇತ್ರವನ್ನು ಕಾಯುತ್ತದೆ.

ಈ ಜಾತಿಯಲ್ಲಿ ಕರ್ನಾಟಕದಲ್ಲಿ ದೊರಕುವ ಇನ್ನು ಮೂರು ಪ್ರಭೇಧಗಳಿವೆ.

—- 

ದಕ್ಷಿಣದ ಹಸಿರು ಓತಿ (Southern green calotes)
ಶಾಸ್ತ್ರೀಯನಾಮ : ಕೆಲೊಟಿಸ್ ಕೆಲೊಟಿಸ್ (Caloter calotes)

069_69_PP_KUH

ಇದೂ ಸಹ ಶಾಖಾವಾಸಿ. ಇದರ ಹುರುಪೆಗಳು ಹಿಂದಕ್ಕೆ ಚಾಚಿವೆ. ಇದು ೧೩೦ x ೫೦೦ ಮಿ. ಮೀ. ಉದ್ದವಿದೆ. ಬೆನ್ನು ಭಾಗ ಹಸಿರು. ಇದರ ಮೇಲೆ ಬಿಳಿಯ ಅಥವ ಕೆನೆ ಬಣ್ಣದ ಪಟ್ಟೆಗಳಿವೆ. ಇದು ಸಾಮಾನ್ಯವಾಗಿ ದಟ್ಟ ಕಾಡುಗಳಲ್ಲಿ ಮತ್ತು ಎತ್ತರವಾದ ಮರಗಳಲ್ಲಿ ವಾಸಿಸುತ್ತದೆ ೫ ಸೆಂ. ಮೀ. ಆಳದ ಗುಂಡಿ ತೋಡಿ ಮೊಟ್ಟೆಗಳನ್ನಿಡುತ್ತದೆ.

 

ಕೆಲೊಟಿಸ್ ಜೆರ್ದೋ (Calotes jerdoni)

070_69_PP_KUH

ಉತ್ತರ ಪ್ರಾಂತ್ಯಕ್ಕೆ ಸೀಮಿತವಾಗಿದೆ. ಉದ್ದ ೩೮೮ ಮಿ. ಮೀ.

—- 

ಗಣ : ಲ್ಯಾಸರ್ ಟೀಲಿಯ
ಕುಟುಂಬ : ಡ್ರಾಕೋನಿಡೀ (Draconidae)
ಉದಾ : ಹಾರುವ ಹಲ್ಲಿ (Flying lizard)
ಶಾಸ್ತ್ರೀಯನಾಮ : ಡ್ರ್ಯಾಕೊ ಡುಸ್ಸುಮಿಯರಿ (Draco dusumieric)

071_69_PP_KUH

ವಿತರಣೆ : ಪಶ್ಚಿಮ ಘಟ್ಟದ (ಕೊಡಗು ಜಿಲ್ಲೆ) ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಕಂಡುಬರುತ್ತದೆ. ಸಮುದ್ರ ಮಟ್ಟದಿಂದ ೧೦೦೦ ಮೀ.ಎತ್ತರದವರೆಗೆ ದೊರಕುತ್ತದೆ ಆಡಿಕೆ, ತೆಂಗು, ವಿಳ್ಳೆದೆಲೆ, ಮೆಣ್ಸಿನ ತೋಟಗಳಲ್ಲಿ ಸಾಮಾನ್ಯ. ಇದು ಸಂಪೂರ್ಣ ಶಾಖಾವಾಸಿ.

ಗಾತ್ರ : ೨೩ಸೆಂ. ಮೀ. ಉದ್ದ ಗಂಡು ಹಾರುವ ಹಲ್ಲಿ ಹೆಣ್ಣಿಗಿಂತ ಚಿಕ್ಕದು.

ಆಹಾರ : ಇರುವೆಗಳು ಮತ್ತು ಗೊದ್ದಗಳು. ವಿಶೇಷವಾಗಿ ಕೆಂಪಿರುವೆ.

ಲಕ್ಷಣಗಳು : ಉಳಿದಂತೆ ಇದು ಇನ್ನುಳಿದ ಹಲ್ಲಿಗಳನ್ನು ಬಹಳ ಮಟ್ಟಿಗೆ ಹೋಲಿದರೂ ಇದಕ್ಕೆ ‘ಪೆಟಾಜಿಯಂ’ ಎಂಬ ರಚನೆ ಇರುವುದು ವಿಶೇಷ ಲಕ್ಷಣ. ಪ್ರತಿ ಪಕ್ಕದಲ್ಲಿಯೂ ಆಯಾ ಪಕ್ಕದ ಮುಂಗಾಲು ಮತ್ತು ಹಿಂಗಾಲುಗಳ ನಡುವಿನಲ್ಲಿ ಚರ್ಮದ ಸಡಿಲ ಮಡಿಕೆಯೊಂದಿದ್ದು ಆರು ಮತ್ತು ಅಪರೂಪವಾಗಿ ಏಳು ಪಕ್ಕೆಲುಬುಗಳು ವಿಸ್ತರಿಸಿ ಈ ಚರ್ಮದ ಮಡಿಕೆಗೆ ಆಧಾರ ಒದಗಿಸುತ್ತವೆ. ಇವುಗಳ ನೆರವಿನಿಂದ ಮಡಿಕೆಯನ್ನು ರೆಕ್ಕೆಯಂತೆ ಬಿಚ್ಚಬಹುದು. ಅಥವಾ ಉಪಯೋಗಿಸದಿದ್ದಾಗ ಮಡಿಸಬಹುದು. ಇದನ್ನು ‘ರೆಕ್ಕೆ ಪಟಲ’ ಅಥವಾ ಪೆಟಾಜಿಯಂ ಎಂದು ಕರೆಯುತ್ತಾರೆ. ಇದನ್ನು ಬಿಚ್ಚಿ ಎತ್ತರದ ಪ್ರದೇಶದಿಂದ ತಗ್ಗಿನ ಪ್ರದೇಶಕ್ಕೆ ಜಾರಿ ಸುರಕ್ಷಿತವಾಗಿ ಇಳಿಯಬಹುದು.

ಇದು ಮರಗಳ ಮೇಲೆ ಕುಳಿತಿರುವುದರಿಂದ ಇದರ ದೇಹದ ಬಣ್ಣ ಮರದ ತೊಗಟೆಯನ್ನು ಹೋಲುತ್ತದೆ. ಶತ್ರುಗಳಿಗೆ ಸುಲಭವಾಗಿ ಗೋಚರಿಸಿದಂತೆ ಮಾಡಿ ರಕ್ಷಣೆ ಒದಗಿಸುತ್ತದೆ. ಇದರ ಬಣ್ಣ ಬೂದುಕಂದು. ಅದರ ಮೇಲೆ ಕಡು ಬಣ್ಣದ ವೃತ್ತಗಳಿವೆ. ತಲೆಯ ಮೇಲೆ ಅಡ್ಡಪಟ್ಟಿಗಳಿವೆ. ತಳಭಾಗ ಹಸಿರು-ಹಳದಿ. ಪೆಟಾಜಿಯಂ ಮೇಲ್ಭಾಗ ಕಂದು ಮತ್ತು ಕಡುಕೆಂಪು, ಕೆಳಗೆ ಅಂಚು ಹಳದಿ. ಕೊರಳ ಉಪಾಂಗ ನಿಂಬೆ ಹಳದಿ. ರೆಕ್ಕೆಗಳ ವರ್ಣ ವೈವಿದ್ಯದಿಂದಾಗಿ ಅದು ಹಾರುತ್ತಿರುವಾಗ ಆಕರ್ಶಕ ಬಣ್ಣದಿಂದ ಗಮನ ಸೆಳೆದು, ಇಳಿದು ಕುಳಿತು, ರೆಕ್ಕೆ ಮಡಿಚಿ ಕೊಂಡಾಗ ಹಟಾತ್ತನೆ ಕಣ್ಮರೆಯಾಗುತ್ತದೆ.

ಸಂತಾನಾಭಿವೃದ್ಧಿ : ಸಂತಾನೋತ್ಪತ್ತಿಯಲ್ಲಿ ಋತುಮಾನೀಯ ವ್ಯವಸ್ಥೆಯನ್ನು ತೋರುತ್ತದೆ. ಹೆಣ್ಣು ಗಂಡು ಕೂಡುವ ಮೊದಲು ಅನುರಂಜನೆ ಉಂಟು. ಗಂಡು ತಾನು ಒಂದು ಪ್ರದೇಶವನ್ನು ಆಕ್ರಮಿಸಿ ಕೊಂಡು ಎಚ್ಚರಿಕೆಯಿಂದ ಕಾಯುತ್ತದೆ. ಅನುರಂಜನೆಯ ಕಾಲದಲ್ಲಿ ಹೆಣ್ಣನ್ನು ಆಕರ್ಶಿಸಲು ಗಂಡು ತಲೆಯನ್ನು ತೂಗುತ್ತದೆ, ಮುಂಗಾಲನ್ನು ನೀಡುತ್ತದೆ. ಕೊರಳ ಉಪಾಂಗವನ್ನು ಮಡಿಸಿಕೊಳ್ಳುತ್ತದೆ. ಬಣ್ಣ ಹೊಳಪಾಗುತ್ತದೆ. ಜುಲೈ-ಸೆಪ್ಟಂಬರ್ ತಿಂಗಳುಗಲ್ಲಿ ಗರ್ಭಸ್ತ ಹೆಣ್ಣುಗಳು ದೊರಕುತ್ತವೆ. ಹೆಣ್ಣು ೫ ಸೆಂ. ಮೀ. ಆಳದ ಗುಂಡಿಗಳನ್ನು ತೋಡಿ ಬಿಳಿ ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆ ೧೪ x ೮ ಮಿ. ಮೀ. ಉದ್ದಗಲ ಇರುತ್ತವೆ. ೦.೫೪ ಗ್ರಾಂ ತೂಗುತ್ತವೆ.

ಸ್ವಭಾವ : ಇದು ಮರದಿಂದ ಮರಕ್ಕೆ, ಎತ್ತರದಿಂದ ತಗ್ಗಿಗೆ ಜಾರಿ ಹಾರುತ್ತದೆ. ಒಂದು ಸಾರಿ ನೆಗೆದು ಜಾರಿದರೆ ೨೦. ಮೀಟರ್ ದೂರ ಕ್ರಮಿಸುತ್ತದೆ. ಇನ್ನೊಂದು ಮರದ ತಳಭಾಗದಲ್ಲಿ ಇಳಿದ ಹಲ್ಲಿ ಅದರ ತುದಿಗೆ ಹತ್ತುತ್ತದೆ. ಇದು ದಿವಾಚರಿಯಾದರೂ ಬೆಳಗು ಮತ್ತು ಸಂಜೆ ಚಟುವಟಿಕೆಯಂದಿದ್ದು ನಡು ಹಗಲು ವಿಶ್ರಾಂತಿ ಪಡೆಯುತ್ತದೆ.

—- 

ಗಣ : ಲ್ಯಾಸರ್ಟೀಲಿಯ
ಕುಟುಂಬ : ಕೆಮಿಲಿಯಾನಿಡೀ
ಉದಾ : ಊಸರವಳ್ಳಿ /ಗೋಸುಂಬಿ (Chameleon)
ಶಾಸ್ತ್ರೀಯನಾಮ : ಕೆಮಿಲಿಯಾನ್ ಜಿಲಾನಿಕಸ (Chamelem zelanicus)

072_69_PP_KUH

ವಿತರಣೆ : ಇದು ಸಾಮಾನ್ಯವಾಗಿ ಶಾಖಾವಾಸಿ, ಭಾರತದ ದಕ್ಷಿಣ ದ್ವೀಪಕಲ್ಪದಲ್ಲಿ ವ್ಯಾಪಕವಾಗಿ ಹರಡಿವೆ. ಹೆಚ್ಚು ಮಳೆ ಬೀಳದಿರುವ ಕಾಡುಗಳ ಮರಗಿಡಗಳಲ್ಲಿ ಬೇಲಿ, ಪೊದರುಗಳಲ್ಲಿ ವಾಸಮಾಡುತ್ತವೆ.

ಗಾತ್ರ : ದೊರಕಿರುವ ಅತ್ಯಂತ ದೊಡ್ಡ ಪ್ರಾಣಿ ೩೭.೫.ಸೆಂ. ಮೀ. ಉದ್ದ ಇತ್ತು.

ಅಹಾರ : ಹೆಚ್ಚಾಗಿ ಕೀಟಾಹಾರಿ. ಸಣ್ಣ ಕಪ್ಪೆಗಳನ್ನು ಹಿಡಿದು ನುಂಗಿದ ನಿದರ್ಶನಗಳಿವೆ.

ಲಕ್ಷಣಗಳು : ಊಸರವಳ್ಳಿ ಅನೇಕ ದೇಹ ರಚನಾ ಮಾರ್ಪಾಡುಗಳ ಆಗರ. ಇದರ ದೇಹಪಕ್ಕದಿಂದ ಪಕ್ಕಕ್ಕೆ ಒತ್ತಿದಂತೆ ಚಪ್ಪಟೆಯಾಗಿದೆ. ತಲೆ ತ್ರಿಕೋನಾಕಾರವಾಗಿದ್ದು ಮೇಲೊಂದು ಚೂಪಾದ ಶಂಕುವಿನಾಕಾರದ ಶಿಖೆ ಇದೆ. ಪ್ರಾಯಶಃ ಗಿಡಗಳ ರೆಂಬೆ, ಎಲೆಗಳ ನಡುವೆ ಓಡಾಡುವಾಗ ದೃಷ್ಟಿಗೆ ಅಡ್ಡಿ ಬರಬಹುದಾದ ಎಲೆ, ಸಣ್ಣ ರೆಂಬೆಗಳನ್ನು ಅತ್ತಿತ್ತ ಸರಿಸಿ ತನ್ನನೋಟದ ಹಾದಿಯನ್ನು ಸುಗಮ ಮಾಡಿಕೊಳ್ಳಲು ಈ ಶಿಖೆ ನೆರವಾಗಬಹುದು. ದೇಹದ ಮೇಲೆ ಕಣಿಕಾಮಯ ಹುರುಪೆಗಳ ಹೊದಿಕೆ ಉಂಟು. ಕಣ್ಣುಗಳು ದೊಡ್ಡವು ಮತ್ತು ಕಣ್ಣಿನ ಪಾಪೆ ಮಾತ್ರ ಕಾಣುವಂತೆ ಒಂದು ಸಣ್ಣ ರಂಧ್ರವನ್ನು ಬಿಟ್ಟು ಉಳಿದೆಲ್ಲ ಭಾಗವೂ ಕಣೀಕೃತ ಹುರುಪೆಗಳಿಂದ ಆವೃತವಾಗಿದೆ. ಈ ಕಣ್ಣುಗಳು ತಮ್ಮ ಅಕ್ಷಿ ಗೂಡಿನಲ್ಲಿ ಎತ್ತೆಂದರತ್ತ ತಿರುಗಿಸಿಬಹುದಾದಂತೆ ಕೂತಿರುವುದರಿಂದ ಮತ್ತು ಕಣ್ಣುಗಳನ್ನು ಪ್ರತ್ಯೇಕವಾಗಿ ವೈಯಕ್ತಿಕವಾಗಿ ತಿರುಗಿಸಿ ತನ್ನ ಸುತ್ತಿನ ಪ್ರದೇಶವನ್ನು ವೀಕ್ಷಿಸಬಹುದು. ಇದಕ್ಕೆ ಕಿವಿತಮಟೆ ಇಲ್ಲ. ಎರಡೂ ಜೊತೆ ಕಾಲುಗಳಲ್ಲಿನ ಬೆರಳುಗಳು ಎರಡು ಗುಂಪುಗಳಾಗಿ, ಆ ಗುಂಪುಗಳು ಎದುರು ಬದರಾಗಿದ್ದು ರೆಂಬೆಗಳನ್ನು ಹಿಡಿದುಕೊಳ್ಳಲು ಮಾರ್ಪಟ್ಟಿವೆ. ಬಾಲವೂ ಸಹ ರೆಂಬೆಗಳ ಸುತ್ತ ಸುತ್ತಿಕೊಂಡು ಹಿಡಿತ ಸಾಧಿಸಲು ಪರಿಗ್ರಾಹಿ ಲಕ್ಷಣವನ್ನು ತೋರುತ್ತದೆ. ಇದರ ನಾಲಿಗೆಯೂ ವಿಶೇಷವಾಗಿ ಮಾರ್ಪಟ್ಟಿದೆ. ನಾಲಗೆಗೆ ಸ್ಥಿತಿಸ್ತಾಪಕ ಶಕ್ತಿ ಇದ್ದು ಅದನ್ನು ಬಾಯಿಂದ ಹೊರಕ್ಕೆ ಒಂದು ಅಡಿಯಷ್ಟು ದೂರ ಚಾಚಬಹುದಾದಷ್ಟು ಉದ್ದವಾಗಿದೆ ಮತ್ತು ಅದರ ತುದಿಯಲ್ಲಿ ಅಂಟುಗುಣದ ಗದೆಯಾಕಾರವಿದೆ.

ತತ್‌ಕ್ಷಣದಲ್ಲಿ ವೇಗವಾಗಿ ಬಣ್ಣ ಬದಲಾಯಿಸಬಲ್ಲ ಸಾಮರ್ಥಕ್ಕೆ ಈ ಪ್ರಾಣಿ ಪ್ರಸಿದ್ಧವಾಗಿದೆ. ಇದು ಎಷ್ಟು ಹೆಸರಾಗಿದೆ ಎಂದರೆ ‘ಊಸರವಳ್ಳಿಯಂತೆ ಬಣ್ಣ ಬದಲಾಯಿಸುವುದು’ ಎಂಬ ಗಾದೆಯೆ ಹುಟ್ಟಿದೆ. ಮೂಲತಃ ಇದರ ದೇಹದ ಬಣ್ಣ ಹಸಿರು. ಇದರ ಮೇಲೆ ಹಳದಿ, ಕಪ್ಪು ಚುಕ್ಕಿಗಳು ಮತ್ತು ಪಟ್ಟಿಗಳಿವೆ. ಒಮ್ಮೊಮ್ಮೆ ಈ ಪ್ರಾಣಿ ತನ್ನ ಪರಿಸರದ ಹಿನ್ನಲೆ ಬಣ್ಣಕ್ಕೆ ಹೊಂದಿಕೊಳ್ಳುವಂತೆ ಬಣ್ಣ ಬದಲಾಯಿಸಿ ಕೊಳ್ಳುತ್ತದೆ ಎನ್ನುವುದು ನಿಜವಲ್ಲ. ಬೆಳಕು, ಉಷ್ಣತೆ, ಪ್ರಾಣಿಯ ಉದ್ವೇಗ ಪರಿಸ್ಥಿತಿಗಳ ಪ್ರಚೋದನೆಯಲ್ಲಿ ಈ ಪ್ರಾಣಿ ಒಂದೇ ಸಮನೆ ಬಣ್ಣ ಬದಲಾಯಿಸುತ್ತ ಹೋಗುತ್ತದೆ. ಅದರ ಹಿನ್ನೆಲೆಯ ಬಣ್ಣವನ್ನು ಹೋಲಿಸಿದರೆ ಅದು ಆಕಸ್ಮಿಕ.

ಸಂತಾನಾಭಿವೃದ್ಧಿ : ಈ ಪ್ರಾಣಿಗಳಲ್ಲಿ ಅನುರಂಜನೆ (ಕೋರ್ಟಶಿಪ್) ನಡೆಯುವುದಿಲ್ಲ. ಹೆಣ್ಣು ಗಂಡುಗಳು ಸಂದಿಸಿ ಸಂಭೋಗ ಅಕ್ಟೋಬರ್ ನಲ್ಲಿ ನಡೆಯಬಹುದು. ಮೊಟ್ಟೆ ಇಡುವ ಕಾಲಕ್ಕೆ ಹೆಣ್ಣು ಊಸರವಳ್ಳಿ ಮರಗಳಿಂದ ಕೆಳಕ್ಕಿಳಿದು ಬಂದು ನೆಲದಲ್ಲಿ ಮುಂಗಾಲುಗಳಿಂದ ೩೦ ಸೆಂ. ಮೀ. ಆಳದ ಗುಂಡಿಗಳನ್ನು ತೋಡಿ, ಒಂದು ಸಾರಿಗೆ ೨೨ ರಿಂದ ೩೩ ರವರೆಗೆ ಮೊಟ್ಟೆಗಳನ್ನಿಟ್ಟು ಗುಂಡಿಗಳನ್ನು ಮಣ್ಣಿನಿಂದ ಮುಚ್ಚಿ ಬಿಡುತ್ತದೆ. ಮೊಟ್ಟೆಗಳು ೧೬ ಮಿ. ಮೀ. ಉದ್ದವಿರುತ್ತವೆ. ೮೧ ದಿನಗಳಿಂದ ೨೪೦ ದಿನಗಳ ಕಾವು ಕಾಲದನಂತರ ಮರಿಗಳು ಹೊರಬರುತ್ತವೆ.

ಸ್ವಭಾವ : ಇದು ದಿವಾಚರಿ. ಹಗಲು ಆಹಾರ ಜೀವಿಗಳ ಬೇಟೆಯಾಡುತ್ತದೆ. ನೆಲದ ಮೇಲೆ ಇದರ ಚಲನೆ ವಿಕಾರವಾದುದು. ಮೆಟ್ಟುಗೋಲು ತೊಟ್ಟು ನಡೆದಂತೆ ಕಾಣುತ್ತದೆ. ಮರದ ರೆಂಬೆಗಳ ನಡುವೆಯೂ ಇದರ ಓಡಾಟ ನಿಧಾನ ಮತ್ತು ನಿಃಶಬ್ಧವಾದುದು. ಇದು ತನ್ನ ದೇಹದ ಬಣ್ಣ ಬದಲಾಯಿಸುವ ಮತ್ತು ಆಹಾರ ಜೀವಿಯನ್ನು ಹಿಡಿಯುವ ಕ್ರಿಯೆಗಳು ಗಮನಾರ್ಹವಾದ ಲಕ್ಷಣಗಳು. ಎಲೆಗಳ ಮರೆಯಲ್ಲಿ ಅವಿತಿದ್ದು ತನ್ನ ಬಣ್ಣ ವೈವಿಧ್ಯದಿಂದ ಆಹಾರ ಜೀವಿಗೆ ಕಾಣದಂತೆ ಉಳಿದು ಕಣ್ಣುಗಳನ್ನು ತಿರುಗಿಸುತ್ತ ಆಹಾರ ಜೀವಿಗಳಿಗಾಗಿ ಹುಡುಕುತ್ತದೆ. ಇದರ ಎರಡು ಕಣ್ಣುಗಳು ಪ್ರತ್ಯೇಕವಾಗಿ ವೈಯಕ್ತಿವಾಗಿ ಚಲಿಸಿ ನೋಡಬಲ್ಲವಾದರೂ ಎರಡೂ ಕಣ್ಣುಗಳನ್ನು ಒಂದೇ ವಸ್ತುವಿನ ಮೇಲೆ ಕೇಂದ್ರೀಕರಿಸಿ ಒಟ್ಟಾಗಿ ನೋಡಬಹುದು. ಆಹಾರ ಜೀವಿ ಅದರ ದೃಷ್ಟಿಗೆ ಬಿದ್ದಂತೆ ಅದರ ನಾಲಿಗೆಯನ್ನು ತಕ್ಷಣ ಹೊರಕ್ಕೆಸೆಯುತ್ತದೆ. ನಾಲಿಗೆಯ ತುದಿಗೆ ಆಹಾರ ಜೀವಿ ಅಂಟಿಕೊಂಡ ತಕ್ಷಣ ನಾಲಿಗೆಯನ್ನು ಆಹಾರ ಜೀವಿಯೊಂದಿಗೆ ಬಾಯಳಕ್ಕೆ ಸೆಳೆದುಕೊಳ್ಳುತ್ತದೆ. ಈ ಕ್ರಿಯೆ ಕಣ್ಣು ಮುಚ್ಚಿ ಕಣ್ಣು ತೆರೆಯುವುದರೊಳಗೆ ಎಸಗುತ್ತದೆ. ತತ್ ಕ್ಷಣ ತನ್ನ ನಾಲಿಗೆಯನ್ನು ಪುನಃ ಹೊರಗೆಸೆಯಬಲ್ಲದು. ಒಂದು ಪ್ರಯೋಗದಲ್ಲಿ ಇದು ೬೨ ಸೆಕೆಂಡುಗಳಲ್ಲಿ ೮ ಕೊಡತಿಹುಳಗಳನ್ನು ಹಿಡಿದು ತಿಂದ ನಿದರ್ಶನವಿದೆ. ಕೀಟ ಬಾರವಾಗಿದ್ದರೆ ನಾಲಿಗೆಯ ಮೇಲಿಂದ ಬಿದ್ದು ಹೋಗಬಹುದು. ನುಣುಪು ದೇಹದ ಕೀಟಗಳು ಇದರ ನಾಲಿಗೆಯ ಹಿಡಿತಕ್ಕೆ ಸಿಗದೆ ಜಾರಿಹೋಗಬಹುದು.

ಮಲೆನಾಡಿನಲ್ಲಿ ಇದರಿಂದ ಸಂಗ್ರಹಿಸಿದ ಒಂದು ವಸ್ತುವನ್ನು ಜನರಿಗೆ ಮದ್ದು ಹಾಕಲು ಬಳಸುತ್ತಾರೆಂಬ ಪ್ರತೀತಿ ಇದೆ. ಈ ರೀತಿ ಮದ್ದಿನ ಪ್ರಯೋಗಕ್ಕೆ ಒಳಗಾದವರು ನವೆದುಹೋಗುತ್ತಾರೆಂದು ಹೇಳುವುದುಂಟು. ವೈಜ್ಞಾನಿಕವಾಗಿ ಇದನ್ನು ವಿವರಿಸುವುದು ಕಷ್ಟ.

 —-

ಗಣ : ಕಿಲೋನಿಯ (Chelonia)

ಸರೀಸೃಪಗಳಲ್ಲಿಯೆ ಅತ್ಯಂತ ಪ್ರಾಚೀನವಾದ ಆದಿಮ ಪ್ರಾಣಿಗಳು ಈ ಗಣಕ್ಕೆ ಸೇರುತ್ತವೆ. ಈ ಗಣಕ್ಕೆ ಸೇರುವ ಆಮೆಗಳನ್ನು ಇಂಗ್ಲೀಷನಲ್ಲಿ ‘ಟಾರ್ ಟಾಯ್ಸ್‌’, ‘ಟರ್ಟಲ್‌’, ‘ಟೆರಪಿನ್‌’ ಎಂದು ಬೇರೆ ಬೇರೆ ಹೆಸರುಗಳಿಂದ ಕರೆದರೂ, ಅವೆಲ್ಲವೂ ಸಮಾನಾರ್ಥ ಕೊಡುವ ಪರ್ಯಾಯ ಪದಗಳು. ಆಮೆಗಳ ವಸತಿ ಲಕ್ಷಣವನ್ನು ಅನುಸರಿಸಿ, ನೆಲವಾಸಿ ಆಮೆಗಳನ್ನು ಟಾರಟಾಯ್ಸ್‌ಗಳೆಂದು, ಸಿಹಿನೀರಿನ ಆಮೆಗಳನ್ನು ಟರ್ಟಲ್‌ಗಳೆಂದು ಕಡಲಾಮೆಗಳನ್ನು ಟೆರಪಿನ್‌ಗಳೆಂದೂ ಕರೆಯುವುದು ರೂಢಿಯಲ್ಲಿದೆ.

ಆಮೆಗಳು ಹೆಚ್ಚಾಗಿ ಉಷ್ಣವಲಯ ಮತ್ತು ಸಮಶೀತೋಷ್ಣ ವಲಯಗಳಲ್ಲಿ ವಾಸಿಸುತ್ತವೆ. ಇವುಗಳಲ್ಲಿ ೩೦೦ಕ್ಕೂ ಹೆಚ್ಚು ಪ್ರಭೇಧಗಳಿವೆ. ಇಂದು ಬದುಕಿರುವ ಆಮೆಗಳಲ್ಲಿ ಕಡಲಾಮೆಗಳು ದೊಡ್ಡವು. ಇವು ಅರ್ಧ ಟನ್‌(೫೦೦ ಕೆ. ಜಿ.)ಗೂ ಹೆಚ್ಚು ತೂಗುತ್ತವೆ. ಜೀವ ವಿಜ್ಞಾನ ಇತಿಹಾಸದಲ್ಲಿ ಪ್ರಮುಖ ಸ್ಥಾನಗಳಿಸಿಕೊಂಡಿವೆ. ಜೀವವಿಕಾಸ ಸಿದ್ಧಾಂತ ಪ್ರತಿಪಾದಕ ಚಾರ್ಲಸ್‌ಡಾರ್ವಿನ್‌ತನ್ನ ದೇಶಪರ್ಯಟನೆಯ ಕಾಲದಲ್ಲಿ. ದಕ್ಷಿಣ ಅಮೇರಿಕಾ ಖಂಡದಿಂದ ಪಶ್ಚಿಮಕ್ಕೆ ೮೦೦ ಮೈಲಿಗಳಾಚೆ ಇರುವ ಗೆಲಪಾಸಗೋಸ ದ್ವೀಪಸ್ತೋಮಗಳಲ್ಲಿ ಅತ್ಯಂತ ದೊಡ್ಡ ಕಡಲಾಮೆಗಳನ್ನು ಕಂಡು, ಮೆಚ್ಚಿ ಸವಾರಿ ಮಾಡಿ ಆನಂದಿಸಿದ. ಆಮೆಗಳು ಪ್ರಾಣಿ ಜಗತ್ತಿನಲ್ಲಿಯೆ ಅತ್ಯಧಿಕ ವರ್ಷಗಳು ಬದುಕುವ ದೀರ್ಘಾಯುಷಿಗಳು. ನೂರು ವರ್ಷಗಳಿಗೂ ಹೆಚ್ಚು ಕಾಲ ಬದುಕುತ್ತವೆ. ಮೈಸೂರಿನ ಚಾಮರಾಜ ಮೃಗಾಲಯದಲ್ಲಿ ಹೆಚ್ಚು ಕಡಿಮೆ ನೂರು ವರ್ಷಗಳ ಬೃಹದ್‌ಆಮೆಗಳಿವೆ. ಕೆಲವು ವರ್ಷಗಳ ಹಿಂದೆ ಮದ್ರಾಸ್‌ನಗರದ ಮೃಗಾಲಯ ಶತಮಾನೋತ್ಸವ ಆಚರಿಸಿದಾಗ ಮೈಸೂರಿನ ಈ ಆಮೆಗಳನ್ನು ಎರವಲು ಪಡೆದು ಪ್ರದರ್ಶನಕ್ಕಿಟ್ಟಿದ್ದರು! ಡಾರ್ಮಿನ್‌ಕಂಡ ಆಮೆಗಳು ೧.೫ ಮೀಟರ್ (ಸುಮಾರು ೫ ಅಡಿ) ಉದ್ದ, ೦.೨೬ ಮೀ. (ಸುಮಾರು ಮೂರು ಅಡಿ) ಎತ್ತರವಿದ್ದು ೯೦ ರಿಂದ ೧೩೫ ಕೆ. ಜಿ. ತೂಗುತ್ತಿದ್ದವು.

ಆಮೆಗಳು ಸಸ್ಯಾಹಾರಿಗಳು ಮತ್ತು ಕೆಲವು ಮಾಂಸಾಹಾರಿಗಳು. ಕೆಲವು ಎರಡೂ ಆಹಾರವನ್ನು ಸೇವಿಸುವ ಸರ್ವಭಕ್ಷಕ ಪ್ರಾಣಿಗಳು. ಜಲಸಸ್ಯ, ಕೀಟಗಳು, ಮೃದ್ವಂಗಿಗಳು, ಕಪ್ಪೆಗಳು ಇವುಗಳ ಸಾಮಾನ್ಯ ಆಹಾರ.

ಆಮೆಗಳ ದೇಹವು ಮೂಳೆ ಫಲಕಗಳ ಜೋಡು ಪೆಟ್ಟಿಗೆಯಂತಹ ರಚನೆಯ ಒಳಗಿದ್ದು ಸುರಕ್ಷಿತವಾಗಿದೆ. ಈ ಪೆಟ್ಟೆಗೆ ರಚನೆಯನ್ನು ‘ಆಮೆ ಚಿಪ್ಪು’ ಎಂದು ಕರೆಯುತ್ತಾರೆ. ಬೆನ್ನಿನ ಚಿಪ್ಪು ಭಾಗವನ್ನು ಕ್ಯಾರಪೇಸ್‌(Carapace) ಮತ್ತು ಎದೆಯ ಭಾಗದ ಚಿಪ್ಪನ್ನು ಪ್ಲಾಸ್ಟ್ರಾನ್‌(Plastron) ಎಂದು ಕರೆಯುತ್ತಾರೆ. ಇವೆರಡು ಗೋಲಾಕಾರವಾಗಿದ್ದು ಅಸ್ಥಿಬಂಧನದಿಂದ ಒಂದಕ್ಕೊಂದು ಬೆಸದಂತೆ ಬಂಧಿತವಾಗಿವೆ. ಈ ಪೆಟ್ಟಿಗೆಯ ರಕ್ಷಣಾ ಸ್ಥಾನದೊಳಗಿನಿಂದ ತಲೆ, ಕೈ, ಕಾಲು ಮತ್ತು ಬಾಲ ಹೊರಕ್ಕೆ ಚಾಚುತ್ತವೆ. ಕೆಣಕಿದಾಗ, ಗಲಭೆಯಾದಾಗ, ಹಿಂಸ್ರಪ್ರಾಣಿಗಳು ಆಕ್ರಮಿಸಿದಾಗ, ಅಪಾಯದ ವೇಳೆ ಆಮೆ ತನ್ನ ತಲೆ ಮತ್ತು ಎಲ್ಲ ಅಂಗಾಂಗಳನ್ನು ಪೆಟ್ಟಿಗೆಯೊಳಕ್ಕೆ ಒಳಸೆಳೆದುಕೊಂಡು ರಕ್ಷಿಸಿಕೊಳ್ಳುತ್ತವೆ.

ಅವುಗಳ ದವಡೆಗಳಲ್ಲಿ ಹಲ್ಲುಗಳಿಲ್ಲ. ಆದರೆ ಕೊಂಬಿನ ಹೊದಿಕೆಯುಂಟು. ಬಲವಾಗಿ ಕಡಿಯಬಲ್ಲದು. ಆಮೆಯ ಕೈಕಾಲುಗಳು ಗಿಡ್ಡ ಮತ್ತು ದಪ್ಪ, ಜಲವಾಸಿ ಆಮೆಗಳ ಕಾಲು ಬೆರಳುಗಳಿಗೆ ಜಾಲಪಾದವಿದ್ದು ಈಜಲು ನೆರವಾಗಿದೆ. ಆಮೆಯ ಕಾಲುಗಳಲ್ಲಿ ನಾಲ್ಕು ಅಥವಾ ಐದು ಬೆರಳುಗಳಿರುತ್ತವೆ. ಬೆರಳುಗಳಲ್ಲಿ ಉಗುರುಗಳಿವೆ. ಇದರ ಸಹಾಯದಿಂದ ಮೊಟ್ಟೆ ಇಡುವಾಗ ನೆಲ ತೋಡುತ್ತದೆ.

ಆಮೆಗಳು ಅಂಡಜಗಳು, ನೆಲವಾಸಿ ಆಮೆಗಳು ಒಂದು ಸಾರಿಗೆ ೫ ರಿಂದ ೧೧ ಮೊಟ್ಟೆಗಳನ್ನಿಡುತ್ತವೆ. ಕಡಲಾಮೆಗಳು, ಸಿಹಿ ನೀರು ಆಮೆಗಳು, ಕಡಲು ದಂಡೆ, ಅಥವಾ ನದಿಗಳ ತೀರಕ್ಕೆ ನೆಲದ ಮೇಲೆ ಮೊಟ್ಟೆ ಇಡಲು ಬರುತ್ತವೆ. ಒರಿಸ್ಸಾ ಮತ್ತು ಆಂದ್ರಪ್ರದೇಶದ ಕರಾವಳಿಗಳು ಕಡಲಾಮೆಗಳು ಮೊಟ್ಟೆ ಇಡಲು ಬರುವ ಜಗತ್ಪ್ರಸಿದ್ಧ ತಾಣಗಳು. ಆಮೆಗಳು ಪ್ರತಿವರ್ಷವೂ ಮೊಟ್ಟೆ ಇಡಲು ಒಂದೇ ಜಾಗಕ್ಕೆ ಬರುತ್ತವೆ. ಮೊಟ್ಟೆಗಳು ಬಿಸಿಲು, ಪರಿಸರದ ಕಾವಿನಲ್ಲಿ ಬೆಳೆದು ೨೩ ತಿಂಗಳಲ್ಲಿ ಮರಿಗಳು ಹೊರ ಬರುತ್ತವೆ. ಮೊಟ್ಟೆಯಿಂದ ಹೊರಬಂದ ಮರಿಗಳು ನೇರವಾಗಿ ಕಡಲಿಗೆ ನಡೆದು ತಮ್ಮ ಜೀವನವನ್ನು ಮುಂದುವರಿಸುತ್ತವೆ. ಮೊಟ್ಟೆ ಇಡುವ ಮೊದಲು ಗುಂಡಿ ತೋಡಿ, ಮೊಟ್ಟೆ ಇಟ್ಟ ಮೇಲೆ ಗುಂಡಿಯನ್ನು ಮುಚ್ಚುವುದರ ವಿನಹ ಆಮೆಗಳು ತಮ್ಮ ಸಂತಾನದ ವಿಷಯದಲ್ಲಿ ಮತ್ತಾವ ಗಮನವನ್ನು ಹರಿಸುವುದಿಲ್ಲ.

ಮಾಂಸಕ್ಕಾಗಿ ಆಮೆಗಳನ್ನು ಕೊಲ್ಲುತ್ತಾರೆ. ಕಡಲಾಮೆಯ ಸೂಪ್‌ಪಾಶ್ಚಿಮಾತ್ಯ ದೇಶಗಳಲ್ಲಿ ಬಹಳ ಪ್ರಿಯವಾದ ತಿನಿಸು. ಆಮೆಯ ಮೊಟ್ಟೆಗಳನ್ನು ತಿನ್ನುತ್ತಾರೆ. ಆಮೆ ಚಿಪ್ಪುಗಳನ್ನು ದಿನಬಳಕೆಯ ಆಟದ, ಅಲಂಕಾರಿಕ ವಸ್ತುಗಳ ರಚನೆಯಲ್ಲಿ ಬಳಸುತ್ತಾರೆ. ಅಮೇರಿಕೆಯಲ್ಲಿ ಆಮೆಗಳನ್ನು ಮುದ್ದಿನ ಪ್ರಾಣಿಗಳನ್ನಾಗಿ ಸಾಕುತ್ತಾರೆ. ಕೊಳ, ಬಾವಿಗಳಲ್ಲಿ ಕೊಳೆ, ಕೀಟಗಳನ್ನು ತಿಂದು ನೀರನ್ನು ಸ್ವಚ್ಛಪಡಿಸಲು, ಮನೆಯ ಬಾವಿಗಳು, ತೋಟದ ಕೊಳಗಳಲ್ಲಿ ಇವನ್ನು ಸಾಕುತ್ತಿದ್ದರು. ವಾಸ್ತವವಾಗಿ ಈ ಪ್ರಾಣಿಗಳು ಮನುಷ್ಯನಿಗೆ ಯಾವ ರೀತಿಯ ಹಾನಿಯನ್ನು ಉಂಟುಮಾಡದೆ ಹುಳು ಹುಪ್ಪಡಿಗಳನ್ನು ತಿಂದು ಉಪಕಾರ ಮಾಡಿದರೂ, ಮನುಷ್ಯನಿಂದಲೇ ಅಪಾಯ ಎದುರಿಸುತ್ತಿರುವುದು ವಿಪರ್ಯಾಸ. ಕೆಲವು ಅಪರೂಪದ ಪ್ರಭೇಧಗಳು ಅವಸಾನದ ಅಂಚನ್ನು ತಲುಪಿರುವುದು ದುರ್ದೈವದ ವಿಷಯ. ಉಪಕಾರ ಮಾಡುವ ಈ ಪ್ರಾಣಿಗಳಿಗೆ ಅಪಕಾರ ಎಸಗುತ್ತಿರುವ ಮನುಷ್ಯನ ಈ ಶೋಚನೀಯ ವರ್ತನೆಗೆ ನಾಚಿಕೆಯಿಂದ ತಲೆತಗ್ಗಿಸಬೇಕಾಗಿದೆ.

ಕೋಟ್ಯಾಂತರ ವರ್ಷಗಳ ಹಿಂದೆ ದೈತ್ಯೋರಗಗಳ ಜೊತೆಯಲ್ಲಿ ಮೀಸೊಜೊಯಿಕ್‌ಅವಧಿಯಲ್ಲಿ ಕಾಣಿಸಿಕೊಂಡ ಆಮೆಗಳು ತಮ್ಮ ಸಹಚರ ಬಂಧುಗಳು ಹೇಳ ಹೆಸರಿಲ್ಲದಂತೆ ಕಣ್ಮರೆಯಾಗಿ ಹೋದರೂ, ತನ್ನ ಆದಿಮ ದೇಹ ರಚನೆ ಸ್ವಭಾವಗಳಿಂದ ಇಂದಿನ ಜೀವನಕ್ಕೆ ಅನುವಾಗಿ ಹೊಂದಿಕೊಂಡಿಲ್ಲದಿದ್ದರೂ ಇಂದಿಗೂ ಬುದುಕಿರುವುದು ಆಶ್ಚರ್ಯದ ವಿಷಯ! ಆದರೆ ಇಂದು ಈ ಆಮೆಗಳು ಮತ್ತಾವ ಹಿಂಸ್ರ ಪ್ರಾಣಿಗಳಿಗಿಂತಲೂ ಹೆಚ್ಚಾಗಿ ಮನುಷ್ಯನಿಂದ ಹೆಚ್ಚಿನ ಅಪಾಯವನ್ನು ಎದುರಿಸುತ್ತಿವೆ.

—- 

ಗಣ : ಕಿಲೋನಿಯ (Chelonia)
ಕುಟುಂಬ : ಡರ್ಮೊಕೈಲಿಡೀ (Dermochelyidae)
ಉದಾ : ಈಶ್ವರ ಆಮೆ / ತೊಗಲುಬೆನ್ನು ಕಡಲಾಮೆ (Leatherback sea turtle)
ಶಾಸ್ತ್ರೀಯನಾಮ : ಡರ್ಮೊಕೆಲಿಸ್
‌(ಟೆಸ್ಟುಡೊ) ಕೋರಿಯೇಸಿಯ (Dermochelys (testudo) coriacea)

073_69_PP_KUH

ವಿತರಣೆ : ಅಂಬಲಿ ಮೀನುಗಳಿಗಾಗಿ ಈ ಆಮೆ ಉತ್ತರದ ಕಡಲುಗಳೆಲ್ಲೆಲ್ಲಾ ಅಡ್ಡಾಡುತ್ತದೆ. ಇದು ನಿಜವಾದ ತೇಲು ಜೀವಿ. ಕೇವಲ ವಿಶ್ರಾಂತಿಗೆಂದು ದಂಡೆಗೆ ಬರುತ್ತದೆ ಇದು ಪರಿಣಿತ ಮುಳುಗು ಪ್ರಾಣಿ. ಸಮುದ್ರ ಮಟ್ಟದಿಂದ ೧೨೦೦ ಮೀ. ಆಳಕ್ಕೆ ಮುಳುಗುತ್ತದೆ. ಪಶ್ಚಿಮ ಕರಾವಳಿಯ ಕಡಲ ತೀರದಲ್ಲಿ ಇದು ಕಂಡು ಬಂದಿದೆ.

ಗಾತ್ರ : ೨೫೬.೫ ಸೆಂ. ಮೀ. ಉದ್ದ, ೯೧೬ ಕೆ. ಜಿ. ತೂಗುವ ಒಂದು ಆಮೆ ದೊರಕಿದ ದಾಖಲೆ ಇದೆ.

ಆಹಾರ : ಇದು ಅಂಬಲಿ ಮೀನುಗಳನ್ನು ತಿನ್ನಲು ತುಂಬಾ ಇಷ್ಟ ಪಡುತ್ತದೆ. ಅಂಬಲಿ ಮೀನುಗಳ ಜೊತೆ ಇರುವ ಕ್ರಸ್ಟೇಸಿಯ ಪರತಂತ್ರ ಜೀವಿಗಳ ಜೊತೆ ಸಹ ಜೀವನ ನಡೆಸುವ ಏಡಿಗಳು ಮೀನುಗಳು ಮತ್ತು ಕಡಲ ಚುರುಕಿಗಳನ್ನು ತಿನ್ನುತ್ತದೆ. ಮೇಲಿನ ದವಡೆಯಲ್ಲಿರುವ ಎರಡು ಚೂಪಾದ ಏಣುಗಳು ಜಾರಿಹೋಗುವಂತಹ ಆಹಾರ ಜೀವಿಯನ್ನು ಹಿಡಿಯಲು ಅನುವಾಗಿವೆ. ಕಡಲ ಚುರಕಿ ಪೈರೊಸೋಮಗಳನ್ನು ತಿನ್ನುತ್ತದೆ.

ಲಕ್ಷಣಗಳು : ಚಿಪ್ಪು ಉದ್ದವಾಗಿದ್ದು ಹಿಂದಿನ ತುದಿ ಕಿರಿದಾಗಿ ಚೂಪಾಗಿ ಕೊನೆಗೊಳ್ಳುತ್ತದೆ. ಏಣಿರುವ ತೊಗಲಿನಂತಿದೆ ಇದರ ಚಿಪ್ಪು. ಅದಕ್ಕೆಂದು ತೊಗಲು ಚಿಪ್ಪಿನ ಆಮೆ ಎಂಬ ಹೆಸರು ಬಂದಿದೆ. ಮೇಲು ದವಡೆಯಲ್ಲಿ ‘W’ ಆಕಾರದ ಶಿಖೆ ಇದೆ. ಕತ್ತು ಮೋಟಾಗಿದೆ ಮತ್ತು ಒಳಕ್ಕೆಳೆದುಕೊಳ್ಳಬಹುದಾಗಿದೆ. ತಲೆ ಮತ್ತು ಕಾಲುಗಳಿಗೆ ಪ್ರಶಲ್ಕಗಳ ಹೊದಿಕೆ ಇಲ್ಲ. ಪ್ಲಾಸ್ಟ್ರಾನ್‌ಗಳಲ್ಲಿ ಎರಡು ಪಾಲಿಗಳಿವೆ. ಮುಂದಿನ ಪಾಲಿ ಹಿಂದಿನಕ್ಕಿಂತ ಹೆಚ್ಚು ಉದ್ದವಾಗಿದೆ ಮತ್ತು ಅಗಲವಾಗಿದೆ. ಕಾಲುಗಳು ದೋಣಿಯ ಹುಟ್ಟಿನಂತಾಗಿವೆ ಮತ್ತು ನಖರಹಿತವಾಗಿವೆ. ದಪ್ಪ ಪಟಲವೊಂದರಿಂದ ಹಿಂಗಾಲುಗಳು ಬಾಲದೊಂದಿಗೆ ಸೇರಿವೆ.

ಮೇಲ್ಭಾಗ ಕಪ್ಪಾಗಿದ್ದು ಕುತ್ತಿಗೆ ಮತ್ತು ಕಾಲಿನ ಬುಡದ ಬಳಿ ಬಿಳಿಯ ಗುರುತುಗಳಿವೆ. ಈ ಗುರುತುಗಳು ನೀಲವರ್ಣ ಅಥವಾ ಕಡುಕೆಂಪಾಗಿಯೂ ಇರಬಹುದು. ತಳಭಾಗವು ತೆಳುಕೆಂಪು ಮತ್ತು ಬಿಳುಪಾಗಿದೆ.

ಸಂತಾನಾಭಿವೃದ್ದಿ : ಪಶ್ಚಿಮ ಕರಾಳವಳಿಯಲ್ಲಿ ಮುಂಗಾರು ಕಾಲದಲ್ಲಿ ಇದು ಮೊಟ್ಟೆ ಇಡುತ್ತದೆ. ಎರಡು ಮೂರು ವರ್ಷಗಳಲ್ಲಿ ಪ್ರಾಯಕ್ಕೆ ಬರುತ್ತದೆ. ರಾತ್ರಿಯ ಹೊತ್ತು ಮೊಟ್ಟೆ ಇಡುತ್ತದೆ. ಮೊಟ್ಟೆಗಳನ್ನು ಒಂದೇ ಕಡೆ ಇಡದೆ ಹಲವಾರು ಕಡೆಗಳಲ್ಲಿ ಹರಡಿದಂತೆ ಇಡುತ್ತದೆ. ಒಮ್ಮೆಗೆ ೯೦-೧೩೦ ಮೊಟ್ಟೆಗಳನ್ನಿಡುತ್ತದೆ. ವರ್ಷದಲ್ಲಿ ೩ ರಿಂದ ೪ ಸಾರಿ ಮೊಟ್ಟೆ ಇಡಬಹುದು. ಮೊಟ್ಟೆಗಳು ದುಂಡಾಗಿದ್ದು ಮೃದುಚಿಪ್ಪು ಇದ್ದು ೫೦-೫೪ ಮಿ. ಮೀ. ವ್ಯಾಸವಿರುತ್ತದೆ. ಮೊಟ್ಟೆ ಚಿಪ್ಪು ಬೆಳ್ಳಗಿದ್ದು ಸಣ್ಣ ಹಸಿರು ಚಿಕ್ಕೆಗಳು ಹರಡಿದಂತೆ ಇರಬಹುದು. ಕಾವು ಕಾಲ ೫೫-೫೬ ದಿನಗಳು. ಈ ಆಮೆಗಳಲ್ಲಿ ಕಾವು ಶಾಖದ ವ್ಯತ್ಯಾಸ ಬೆಳೆಯುವ ಮರಿಯ ಲಿಂಗದ ಮೇಲೆ ಪ್ರಭಾವ ಬೀರುವುದಾಗಿ ಕಂಡು ಬಂದಿದೆ. ೨೭-೨೮.೭೫oC ಯಲ್ಲಿ ಕಾವು ಪಡೆದು ಮೊಟ್ಟೆಗಳಲ್ಲಿ ಹೆಚ್ಚಾಗಿ ಗಂಡುಗಳು, ೨೯.೭೫ ರಿಂದ ೩೨oC ಯಲ್ಲಿ ಹೆಣ್ಣು ಮರಿಗಳು ಬೆಳೆಯುತ್ತವೆ.

ಸ್ವಭಾವ : ಜಗತ್ತಿನಲ್ಲಿ ಮೊಟ್ಟೆ ಇಡುವ ಹೆಣ್ಣುಗಳ ಸಂಖ್ಯೆ ೧೧೫,೦೦೦ ಇರಬಹುದೆಂದು ಅಂದಾಜು ಮಾಡಲಾಗಿದೆ ಮನುಷ್ಯ ಇದರ ಮೊಟ್ಟೆಗಳನ್ನು ಬಳಸುತ್ತಾನಾಗಿ ಇದರ ಸಂಖ್ಯೆ ಕ್ಷೀಣಿಸುತ್ತಿದೆ.

ತಮಿಳುನಾಡಿನಲ್ಲಿ ಇದರ ಚಿಪ್ಪನ್ನು ಚೂರುಮಾಡಿ ಒಂದು ರೀತಿಯ ಎಣ್ಣೆ ತೆಗೆಯುತ್ತಾರೆ. ಇದನ್ನು ಸೋರುವ ದೋಣಿಗಳಿಗೆ ಹಚ್ಚಿ ಸೋರುವುದನ್ನು ನಿಲ್ಲಿಸುತ್ತಾರೆ. ಇದರ ಮಾಂಸವನ್ನು ತಿನ್ನುತ್ತಾರೆ.

ಕಡಲು ಸವೆತವನ್ನು ತಡೆಯಲು ಬಂಡೆಗಳನ್ನು ಬಳಸಿ ಅಡ್ಡಗಟ್ಟು ಕಟ್ಟಿ ಇದು ಮೊಟ್ಟೆ ಇಡಲು ಬರುವ ಜಾಗ ಅದಕ್ಕೆ ದೊರಕದಾಗಿದೆ. ಜೊತೆಗೆ ಕಾಡು ಹಂದಿ, ನರಿಗಳು ಇದರ ಮೊಟ್ಟೆಗಳನ್ನು ತಿನ್ನುತ್ತವೆ. ಇತ್ತೀಚೆಗೆ ಕಡಲಿನಲ್ಲಿ ಕಂಡು ಬರುವ ಪ್ಲಾಷ್ಟಿಕ್‌ಚೀಲಗಳು ಇದರ ಜೀವಕ್ಕೆ ಮಾರಕವಾಗತೊಡಗಿದೆ. ಆಮೆ ಅವು ಅಂಬಲಿ ಮೀನುಗಳಿರಬಹುದೆಂದು ನುಂಗಿ ಬಿಡುತ್ತದೆ. ಇದು ಸಹ ಭಾರತದಲ್ಲಿ ಕಾನೂನು ಸಂರಕ್ಷಣೆಗೆ ಒಳಪಟ್ಟಿದೆ.