ಗಣ : ಓಫಿಡಿಯ
ಕುಟುಂಬ : ಟಿಪ್ಲೊಪಿಡೀ (Typhlopidae)
ಉದಾ : ಸಾಮಾನ್ಯ ಹುಳುಹಾವು ಅಥವಾ ಕುರುಡು ಹಾವು (Common worm snake or blind snake)
ಶಾಸ್ತ್ರೀಯ ನಾಮ : ಟ್ರಿಪ್ಲಿನ ಬ್ರಾಮಿನ (Tryplina bromina)

081_69_PP_KUH

ವಿತರಣೆ : ಕರ್ನಾಟಕವೂ ಸೇರಿದಂತೆ ಈ ಹಾವು ಭಾರತದಲ್ಲಿ ಎಲ್ಲೆಡೆಯೂ ಕಂಡುಬರುತ್ತದೆ. ಮಣ್ಣು, ಕಲ್ಲುಗಳು, ಕಸದ ಕುಪ್ಪೆಗಳ ಕೆಳಗೆ ಸಾಮಾನ್ಯವಾಗಿ ಇರುತ್ತವೆ. ಇವುಗಳನ್ನು ಅಗೆದು ತೆಗೆದಾಗ ಕಾಣಿಸಿಕೊಳ್ಳುತ್ತದೆ. ಮಳೆ ಬಿದ್ದು ಇವುಗಳ ಅವಾಸಸ್ಥಾನದ ಮೇಲೆ ನೀರು ನುಗ್ಗಿದಾಗ ತಮ್ಮ ಬಿಲಗಳಿಂದ ಹೊರ ಬರುತ್ತವೆ.

ಗಾತ್ರ : ಸಾಮಾನ್ಯವಾಗಿ ೧೨.೫ ಸೆಂ. ಮೀ. ನಿಂದ ೧೭ ಸೆಂ. ಮೀ. ಉದ್ದ ಇರುತ್ತದೆ. ಈ ಜಾತಿಯ ಒಂದು ಪ್ರಭೇಧ ಟ್ರಿ. ಅಕುಟಸ್‌೬೦ ಸೆಂ. ಮೀ. ಉದ್ದ ಇದ್ದ ನಿದರ್ಶನವಿದೆ. ಇವು ಭಾರತದ ಹಾವುಗಳಲ್ಲಿಯೇ ಅತ್ಯಂತ ಚಿಕ್ಕವು.

ಆಹಾರ : ಇವು ಇರುವೆ, ಗೆದ್ದಲು, ಇತರ ಕೀಟಗಳು ಮತ್ತು ಅವುಗಳ ಡಿಂಬಗಳನ್ನು ತಿನ್ನುತ್ತವೆ. ಬಂಧನದಲ್ಲಿರುವವು ಎರೆಹುಳುಗಳನ್ನು ತಿನ್ನುತ್ತವೆ.

ಲಕ್ಷಣಗಳು : ದೇಹ ಭಾಗಗಳನ್ನು ತಲೆ, ಕತ್ತು, ಮುಂಡ ಮತ್ತು ಬಾಲಗಳೆಂದು ಸ್ಪಷ್ಟವಾಗಿ ಸುಲಭವಾಗಿ ಗುರುತಿಸಲಾರದ ಹುಳುವಿನಂತಹ ದೇಹ. ದೇಹದ ಮೇಲಿನ ಹುರುಪೆಗಳೂ ಸಹ ಒಂದೇ ರೀತಿಯಾಗಿವೆ. ಈ ಲಕ್ಷಣಗಳನ್ನು ಅನುಸರಿಸಿ, ಇದರ ಪ್ರಭೇಧಗಳನ್ನು ವಿಂಗಡಿಸುವುದು, ಗುರುತಿಸುವುದು ಕಷ್ಟ ಮೊದಲ ನೋಟಕ್ಕೆ ಈ ಹಾವು ಎರೆ ಹುಳುವಿನಂತೆ ಕಾಣುತ್ತದೆ. ಬಾಲವೂ ತಲೆಯಂತೆ ಮೊಂಡಾಗಿದೆ ಬಾಲದ ತುದಿಯಲ್ಲಿ ಒಂದು ಮುಳ್ಳಿದೆ.

ದೇಹದ ಮೇಲ್ಬಾಗದ ಬಣ್ಣ ಕಂದು ಅಥವಾ ಕಪ್ಪು ಕಂದು. ತಳಭಾಗ, ಮೂತಿ, ಗಲ್ಲಗಳು ತುಸು ತೆಳುಬಣ್ಣ ಬಾಲದ ತುದಿಯೂ ಬಿಳಿಚಿಕೊಂಡಂತೆ ತಿಳಿಯಾಗಿದೆ. ಇವುಗಳ ದೇಹವನ್ನು ಮುಚ್ಚುವ ಹುರುಪೆಗಳು ಮತ್ತು ಅವುಗಳ ನಾಲಿಗೆಯನ್ನು ಮಸೂರದ ನೆರವಿನಿಂದಲೇ ನೋಡಬೇಕು. ಇವೆಲ್ಲವು ಕ್ಷೀಣಿಸಿ ನಶಿಸಿದ ಅಂಗ ರಚನೆಗಳೆಂದು ಕೆಲವರು ಭಾವಿಸುವರಾದರು ಈ ಹಾವುಗಳು ತಮ್ಮ ನೆಲದೊಳಗಿನ ಜೀವನಕ್ಕೆ ಚೆನ್ನಾಗಿ ಹೊಂದಿಕೊಂಡಿರುವುದು ಕಂಡು ಬರುತ್ತದೆ. ಹಿಂದೆ ಇವುಗಳನ್ನು ಟಿಪ್ಲಾಪ್ಸ್ಬ್ರಾಮಿನಸ್ ಎಂದು ಕರೆಯುತ್ತಿದ್ದರು. ಇತ್ತೀಚೆಗೆ ಈ ಜಾತಿಯಲ್ಲಿ ಅನೇಕ ಉಪಜಾತಿಗಳಿರುವುದಾಗಿ ತಿಳಿದುಬಂದಿದೆ.

ಸಂತಾನಾಭಿವೃದ್ಧಿ : ಇವು ಅಂಡಜಗಳು. ಏಪ್ರಿಲ್‌ಜುಲೈ ತಿಂಗಳುಗಳ ಕಾಲದಲ್ಲಿ ಮೊಟ್ಟೆ ಇಡುತ್ತವೆ. ಆದರೂ ಭಾರತದ ವಿವಿಧೆಡೆಗಳಲ್ಲಿ ಇದರ ಸಂತಾನೋತ್ಪತ್ತಿ ವಿಧಾನ ಸರಿಯಾಗಿ ತಿಳಿಯದು. ಒಂದು ತಂಡದಲ್ಲಿ ೫ ರಿಂದ ೮ ಮೊಟ್ಟೆಗಳನ್ನಿಡುತ್ತವೆ. ಇವುಗಳಲ್ಲಿ ಅನಿಷೇಕ ಜನನ (ಪಾರ್ತಿನೊಜೆನಿಸಿಸ್‌ : ಪುರುಷಾಣು ಕೂಡದೆಯೇ ಅಂಡಾಣು ಬೆಳೆಯ ತೊಡಗುವುದು) ನಡೆಯುತ್ತದೆಂದು ನಂಬುತ್ತಾರೆ. ಇವುಗಳಲ್ಲಿ ಹೆಚ್ಚಾಗಿ ಹೆಣ್ಣು ಹಾವುಗಳೇ ದೊರಕುವುದರಿಂದ ಈ ಭಾವನೆ ಬೆಳೆದು ಬಂದಿರಬಹುದು.

ಸ್ವಭಾವ : ಒದ್ದೆ ಒಣ ಕಾಡುಗಳಲ್ಲಿ ಕೈ ತೋಟಗಳಲ್ಲಿ ಮಣ್ಣು ಕಲ್ಲು, ಕಸ, ಬಿದ್ದ ಎಲೆಗಳ ಕುಪ್ಪೆಗಳಲ್ಲಿ ಕಂಡುಬರುತ್ತವೆ. ಇದಕ್ಕೆ ಅನೇಕ ಶತೃಗಳಿದ್ದಾರೆ. ಇದು ನಿಶಾಚರಿ. ತನ್ನ ಬಾಲದ ಮುಳ್ಳನ್ನು ಅಡಗಿದೆಡೆಯಿಂದ ಹೊರಗೆ ಆಡಿಸಿ, ಚುಚ್ಚುವಂತೆ ನಟಿಸುತ್ತದೆ. ಸಾಮಾನ್ಯವಾಗಿ ಒಂಟಿ ಜೀವಿಗಳು. ಅಪರೂಪವಾಗಿ ಕೆಳಗೆ ಬಿದ್ದು ಕೊಳೆಯುತ್ತಿರುವ ಮರದ ಕಾಂಡಗಳ ಕೆಳಗೆ ಗುಂಪಾಗಿ ಇರಬಹುದು. ಚೂಟಿಯಾಗಿ ಬಿಲ ತೋಡುತ್ತವೆ. ಇದರ ನಯವಾದ ಹುರುಪೆ ಹೊದಿಕೆ ಅಡ್ಡಿಯಾಗದಂತೆ ಸುಲಭವಾಗಿ ಬಿಲ ಪ್ರವೇಶಿಸಲು ಅನುಕೂಲವಾಗಿವೆ. ನೆಲದ ಮೇಲೆ ನಿಧಾನವಾಗಿ ಚಲಿಸಿದರೂ ಗೊಂದಲವಾದಾಗ ಚೂಟಿಯಾಗಿ ಚಲಿಸಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತವೆ. ಇವು ಕೆಲವು ಸಾರಿ ಮನೆಗಳಲ್ಲಿಯೂ ಕಂಡು ಬರಬಹುದು. ಇತರ ಹಾವುಗಳು ಇವುಗಳನ್ನು ತಿನ್ನುತ್ತವೆ.

ಮಲಗಿದವರ ಕಿವಿಗಳೊಳಕ್ಕೆ ಪ್ರವೇಶಿಸುತ್ತವೆ ಎಂಬ ತಪ್ಪು ಆಭಿಪ್ರಾಯವಿದೆ. ಇದರಿಂದಾಗಿ ಇವನ್ನು ತಮಿಳುನಾಡಿನಲ್ಲಿ ‘ಸೆವಿ ಪಾಂಬು’ (ಕಿವಿ ಹಾವು) ಎಂದು ಕರೆಯುತ್ತಾರೆ.

ಈ ಜಾತಿಯ ಉಳಿದ ಪ್ರಭೇಧಗಳಾದ : ಟ್ರಿಪ್ಲನ ಟಿಂಡಲ್ಲಿ (ಮಲಬಾರಿನ ಹುಳು ಹಾವು) ಪಶ್ಚಿಮ ಘಟ್ಟ ಪ್ರದೇಶದಲ್ಲಿ ದೊರಕುತ್ತದೆ.

ಟ್ರಿ. ಪೊರ್ರೆಕ್ಟಸ್ (ತೆಳು ಹುಳು ಹಾವು) ಭಾರತಾದ್ಯಂತ ದೊರಕುತ್ತದೆ.

ಟ್ರಿ. ತರ್ ಸ್ಟೋನಿ (ತರಸ್ಟೋನರ ಹುಳು ಹಾವು) ಭಾರತಾದ್ಯಂತ ದೊರಕುತ್ತವೆ. ಕೆಲವು ಅಪ್ರಧಾನ ಲಕ್ಷಣಗಳಲ್ಲಿ ವ್ಯತ್ಯಾಸಗಳನ್ನು ತೋರಿದರೂ ಉಳಿದಂತೆ ಟ್ರಿ. ಬ್ರಾಮಿನವನ್ನು ಹೋಲುತ್ತವೆ.

—-

ಗಣ : ಒಫಿಡಿಯ
ಕುಟುಂಬ : ಯೂರೊಪೆಲ್ಟಿಡೀ
ಉದಾ : ಪ್ಯೆರ್ರೊಟೆಟರ ಗುರಾಣಿತೋಕೆ ಹಾವು (Perrotet’s shield tail snake)
ಶಾಸ್ತ್ರೀಯನಾಮ : ಪ್ಲೆಕ್ಟುರಸ್ ಪೆರ್ರೊಟೆಟಿ (Plecturus perrotetei)

082_69_PP_KUH

ವಿತರಣೆ : ಗೋವಾದಿಂದ ಪಶ್ಚಿಮಕ್ಕಿರುವ ಪಶ್ಚಿಮ ಘಟ್ಟಗಳಲ್ಲಿ ನೀಲಗಿರಿ ಮತ್ತು ಅಣ್ಣಾಮಲೈ ಬೆಟ್ಟಗಳಲ್ಲಿ ಬಹಳವಾಗಿ ದೊರಕುತ್ತವೆ. ಈ ಹಾವಿನ ವಿವಿಧ ಪ್ರಭೇಧಗಳು ಪಶ್ಚಿಮ ಘಟ್ಟ ಸಾಲಿನಲ್ಲಿ ಸಮುದ್ರ ಮಟ್ಟದಿಂದ ವಿವಿಧ ಎತ್ತರಗಳಲ್ಲಿ ವಾಸಿಸುತ್ತವೆ.

ಗಾತ್ರ : ೪೪ ಸೆಂ. ಮೀ. ಉದ್ದ ೧೧ ಮಿಲಿಮೀಟರ್ ವ್ಯಾಸ.

ಆಹಾರ : ಎರೆಹುಳುಗಳು ಮತ್ತು ವಿವಿಧ ಕೀಟ ಡಿಂಬಗಳು ಇದರ ಆಹಾರ.

ಲಕ್ಷಣಗಳು : ಇದು ತುಂಬಾ ಚಿಕ್ಕ ಹಾವು. ತಲೆ ಚೂಪು, ಬಾಲ ಮೊಂಡು, ಹೊಟ್ಟೆಯ ಭಾಗದಲ್ಲಿ ನಯವಾದ ನುಣುಪು, ಹೊಳಪಿನ ಹುರುಪೆಗಳಿವೆ. ಈ ಭಾಗ ಸಾಮಾನ್ಯವಾಗಿ ಪ್ರಕಾಶಕ ವರ್ಣವಾಗಿರುತ್ತದೆ. ಸಮಾನ್ಯ ಅದು ಕಂದು ಬಣ್ಣ. ಪ್ರತಿ ಹುರುಪೆಯ ನಡುವೆಯೂ ಕೆಂಪು ಅಥವಾ ಹಳದಿಯ ಗುರುತಿರುತ್ತದೆ. ಹೊಟ್ಟೆಯ ಭಾಗ ಕಿತ್ತಳೆ ಬಣ್ಣ ಬಾಲ ಎರಡು ಚೂಪು ತುದಿಗಳಾಗಿ ಕೊನೆಗೊಂಡಿದೆ. ಬಿಸಿಲಿನಲ್ಲಿ ಈ ಹಾವಿನ ದೇಹ ಹೊಳೆಯುತ್ತದೆ. ಇದಕ್ಕೆ ಕಾರಣ ಧೂಳು ಅಂಟಿಕೊಳ್ಳದ ಗುಣದ ಹುರುಪೆಗಳ ಹೊದಿಕೆ. ಬಹಳೊಮ್ಮೆ ಈ ಹಾವುಗಳನ್ನು ಎರೆಹುಳುವೆಂದು ತಪ್ಪು ಗ್ರಹಿಸಬಹುದು.

ಸಂತಾನಾಭಿವೃದ್ಧಿ : ಒಮ್ಮೆಗೆ ೩-೫ ಮರಿಗಳು ಹುಟ್ಟುತ್ತವೆ.

ಸ್ವಭಾವ : ಬಿಲವಾಸಿಗಳಾದ ಇವು ತಮ್ಮ ಜೀವನದ ಬಹುಭಾಗವನ್ನು ನೆಲದೊಳಗೆ ಕಳೆಯುತ್ತವೆ. ಬಿದ್ದು ಕೊಳೆಯುತ್ತಿರುವ ಎಲೆಗಳ ರಾಶಿ, ಕಸಕಡ್ಡಿಗಳ ಕುಪ್ಪೆ, ಕಲ್ಲು ರಾಶಿಗಳಡಿಯಲ್ಲಿ ನೆಲದ ಮಟ್ಟದಿಂದ ೫-೬ ಅಂಗುಲ ಕೆಳಗೆ ವಾಸಿಸುತ್ತವೆ. ಶುಷ್ಕ ವಾತಾವರಣ ಕಾಲದಲ್ಲಿ ಇನ್ನು ಹೆಚ್ಚು ಆಳಕ್ಕೆ ಹೋಗಬಹುದು. ರಾತ್ರಿಯ ಮೇಳೆ ಹೊರ ಬರುತ್ತವೆ. ಮಳೆ ಬಿದ್ದಾಗ ಹೆಚ್ಚು ಚಟುವಟಿಕೆಯನ್ನು ತೋರುತ್ತವೆ. ಹಿಡಿದರೂ ಕಚ್ಚದ ಸಾಧು ಸ್ವಭಾವದ ಹಾವುಗಳು.

ಈಗ ನಡೆದಿರುವ ಸತತ ಅರಣ್ಯ ನಾಶದಿಂದ ಇಂತಹ ಅಪರೂಪದ ನಿರಿಪದ್ರವಕಾರಿ ಪ್ರಾಣಿಗಳು ನಾಶವಾಗಿ ಕಣ್ಮರೆಯಾಗುವ ಸಾಧ್ಯತೆ ಉಂಟು.

 —-

ಗಣ : ಒಪಿಡಿಯ
ಕುಟುಂಬ : ಯೂರೊಪೆಲ್ಟಿಡೀ
ಉದಾ : ಆಸಲ್ಲೇಟ್ ಗುರಾಣಿತೋಕೆ ಹಾವು (Oscellate shieldtail snake)
ಶಾಸ್ತ್ರೀಯನಾಮ : ಯುರೋಪೆಲ್ಟಿಸ್ ಆಸಲ್ಲೇಟಸ್ (Uropeltis oscellatus)

083_69_PP_KUH

ವಿತರಣೆ : ನೀಲಗಿರಿ, ಅಣ್ಣಾಮಲೈ ಮತ್ತಿತ್ತರ ಧಕ್ಷಿಣ ಭಾರತದ ಬೆಟ್ಟಗುಡ್ಡಗಳಲ್ಲಿನ ದಟ್ಟಕಾಡುಗಳು, ಸಮುದ್ರ ಮಟ್ಟದಿಂದ ೬೦೦-೧೦೦೦ ಮೀಟರ್ ಎತ್ತರದಲ್ಲಿ ಮೃದು ತೇವ ನೆಲದಲ್ಲಿ ವಾಸಿಸುತ್ತವೆ. ಈ ಹಾವು ನೀಲಗಿರಿ, ವೈನಾಡ್ ಮತ್ತು ಕೊಡಗಿನಲ್ಲಿ ಸಾಮಾನ್ಯ.

ಗಾತ್ರ : ದೊರಕಿದ ಹಾವುಗಳಲ್ಲಿ ಗರಿಷ್ಠ ಉದ್ದ ೫೩ ಸೆಂಟಿಮೀಟರ್.

ಆಹಾರ : ಸಂಪೂರ್ಣ ಎರೆಹುಳುಗಳನ್ನು ತಿನ್ನುತ್ತದೆ.

ಲಕ್ಷಣಗಳು : ಓರೆಯಾಗಿ ಮೊಂಡಾಗಿ ಕೊನೆಗೊಳ್ಳುವ ಬಾಲ ಇರುವುದು ಈ ಹಾವಿನ ವಿಶೇಷ ಲಕ್ಷಣ. ಬಾಲದ ಕೊನೆಯ ಪ್ರಶಲ್ಕ (ಹುರುಪೆ) ಎರಡು ಮೊನೆಯಾಗಿ ಕೊನೆಗೊಳ್ಳುತ್ತದೆ. ೧೭ ಸಾಲು ಪಕ್ಕೆಯ ಹುರುಪೆಗಳು, ೧೮೫ ರಿಂದ ೨೩೪ ಸಾಲು ಉದರ ಹುರುಪೆಗಳಿರುತ್ತವೆ. ಪುಟ್ಟ ಆಡಕವಾದ ದೇಹ, ತಲೆಯು ಉಳಿದ ದೇಹ ಭಾಗಕ್ಕಿಂತ ಕಿರಿದು ಮತ್ತು ಮೊಂಡು ಮುಂತುದಿಯಲ್ಲಿ ಕೊನೆಗೊಳ್ಳುತ್ತದೆ. ಕುತ್ತಿಗೆಯು ಉಳಿದ ದೇಹಭಾಗದಷ್ಟೇ ದಪ್ಪನಾಗಿದೆ. ಕಣ್ಣುಗಳು ಸಣ್ಣವು ಮತ್ತು ಚಾಕ್ಷುತ (ಆಕ್ಯುಲರ್) ಪ್ರಶಲ್ಕದ ಒಳಗಿದೆ. ಬಾಲ ಉದ್ದದಲ್ಲಿ ಸಣ್ಣದು ಮತ್ತು ಹಟಾತ್ತನೆ ಕೊನೆಗೊಂಡು ಕತ್ತರಿಸಿದಂತೆ ಕಾಣುತ್ತದೆ. ಹೆಣ್ಣು ಹಾವಿನ ಬಾಲ ಗಂಡಿನದಕ್ಕಿಂತ ಉದ್ದವಾದರೂ ಮೊಂಡು.

ಬೆನ್ನಿನ ಭಾಗ ತಿಳಿಹಸಿರು, ಪಕ್ಕೆಗಳಲ್ಲಿ ಆಲಿವ್ ಕಂದು ಆಲಿವ್ ಹಸಿರು ಅಂಚಿದೆ. ದೇಹದ ಮೇಲೆ ಎಲ್ಲಾ ಕಡೆ ಗಿಣಿ ಹಳದಿ ಚುಕ್ಕೆಗಳಿವೆ. ಈ ಚುಕ್ಕೆಗಳು ಅವ್ಯವಸ್ಥಿತವಾಗಿ ಒಂದಕ್ಕೊಂದು ಕೂಡಿ ಸರಪಳಿಯಂತೆ ಕಾಣುತ್ತವೆ. ಜೊತೆಗೆ ಮಸುಕು ಕಪ್ಪು ಆಡ್ಡಪಟ್ಟಿಗಳೊಂದಿಗೆ ಈ ಸರಪಳಿ ಕೂಡಿದಂತೆ ಕಾಣುವುದು. ಕೆಳಭಾಗದಲ್ಲಿ ಹಳದಿ ಗುರುತುಗಳಿವೆ.

ಸಂತಾನಾಭಿವೃದ್ಧಿ : ಇವು ಅಂಡಜರಾಯುಜಗಳು ಒಂದು ಸಾರಿಗೆ ೩ ರಿಂದ ೫ ಮರಿಗಳನ್ನು ಹಾಕುತ್ತವೆ. ಮರಿ ಹಾಕುವ ಪ್ರಕ್ರಿಯೆ ಜುಲೈ ತಿಂಗಳಲ್ಲಿ ಮುಗಿಯುತ್ತದೆ. ಹುಟ್ಟಿದ ಮರಿಗಳು ೧೧ ರಿಂದ ೧೨ ಸೆಂಟಿಮೀಟರ್ ಉದ್ದ ಇರುತ್ತವೆ.

ಸ್ವಭಾವ : ಇದೊಂದು ನಿರುಪ್ರದವಿ ಸೌಮ್ಯ ಸ್ವಭಾವದ ಪುಟ್ಟ ಹಾವು. ತನ್ನ ವಾಸಸ್ಥಾನವನ್ನು ಸ್ವಇಚ್ಛೆಯಿಂದ ಆರಿಸಿಕೊಂಡು ಮೃದು ಮಣ್ಣಿನೊಳಗೆ, ಕಲ್ಲು ರಾಶಿಗಳಲ್ಲಿ ಅಥವಾ ಬಿದ್ದ ಎಲೆಗಳ ರಾಶಿಯ ನಡುವೆ ಜೀವಿಸುತ್ತವೆ. ಸಡಿಲ ಮಣ್ಣಿನಲ್ಲಿ ಮೂತಿಯನ್ನು ಬಳಸಿ ಬಿಲ ತೋಡುತ್ತವೆ.

ಇದು ಕರ್ನಾಟಕದ ಪಶ್ಚಿಮ ಘಟ್ಟಗಳ ಮಳೆ ಕಾಡುಗಳಲ್ಲಿ ಮಾತ್ರ ದೊರಕುತ್ತವೆ. ಅಲ್ಲಿ ಇದರ ಅನೇಕ ಪ್ರಭೇಧಗಳು ದೊರಕುತ್ತವೆ.

—- 

ಗಣ : ಒಫಿಡಿಯ
ಕುಟುಂಬ : ಬೊಯಿಡೀ (Boidae)
ಉದಾ : ಹೆಬ್ಬಾವು (Python)
ಶಾಸ್ತ್ರೀಯನಾಮ : ಪೈತಾನ್ ಮೊಲುರಸ್ (Python molurus)

084_69_PP_KUH

ವಿತರಣೆ : ಕರ್ನಾಟಕವೂ ಸೇರಿದಂತೆ ಭಾರತದ ಎಲ್ಲೆಡೆಯೂ ದೊರಕುತ್ತದೆ. ಇದು ಸಾಮಾನ್ಯವಾಗಿ, ಕಲ್ಲು ಬಂಡೆಗಳ ನಡುವೆ, ಪೊದೆಗಳು, ನೀರಿನ ಆಸರೆ ಚೆನ್ನಾಗಿರುವ ಸ್ಥಳಗಳಲ್ಲಿ, ಅಳವೆಯ ಮ್ಯಾಂಗೋವ್ ಕಾಡುಗಳು, ಶುಷ್ಕ್ ಕುರುಚಲು ಜಂಗಲಿ ಮತ್ತು ತಂಪಾದ, ಸಮುದ್ರ ಮಟ್ಟದಿಂದ ೨೦೦೦ ಮೀಟರ್ ಎತ್ತರದವರೆಗಿನ ಮಳೆಕಾಡುಗಳಲ್ಲಿ, ಸಮುದ್ರ ತೀರದ ಕಾಂಡ್ಲ ಮರಗಳ ಬನದಲ್ಲಿಯೂ ವಾಸಿಸುತ್ತದೆ.

ಗಾತ್ರ : ಸುಮಾರು ೩ ಮೀಟರ್ ಉದ್ದ ಸಾಮಾನ್ಯವಾಗಿ ೨ ರಿಂದ ೩ ಮೀಟರ್ ವರೆಗಿನ ಉದ್ದ ಗರಿಷ್ಠ ೭ ಮೀಟರ್ ಉದ್ದದ ಹಾವು ಕಂಡ ದಾಖಲೆ ಇದೆ. ದೇಹವು ಅತ್ಯಂತ ದಪ್ಪಗಾದ ಭಾಗವು ಒಂದು ಮೀಟರ್ ಸುತ್ತಳತೆ ಇರುತ್ತದೆ. ಇದು ಭಾರತದ ಅತ್ಯಂತ ಗಾತ್ರದ ಹಾವು. ೧೧೨ ಕೆ. ಜಿ. ತೂಗುತ್ತದೆ.

ಆಹಾರ : ಪಕ್ಷಿಗಳು, ಸರೀಸೃಪಗಳು ಮತ್ತು ಸಸ್ತನಿಗಳು ಇದರ ಆಹಾರ. ಸಾಮಾನ್ಯವಾಗಿ ಬಿಸಿ ರಕ್ತದ ಪ್ರಾಣಿಗಳನ್ನು ತಿನ್ನಲು ಇಷ್ಟ ಪಡುತ್ತದೆ. ಸಣ್ಣ ಸಸ್ತನಿಗಳಾದ ಇಲಿಗಳಿಂದ ಮೊಲ, ಆಡು, ಕುರಿ, ನರಿ, ಬೆಕ್ಕು, ಜಿಂಕೆ. ಹಂದಿ, ಕಾಡುಹಂದಿಗಳಂತಹ ದೊಡ್ಡ ದೊಡ್ಡ ಪ್ರಾಣಿಗಳನ್ನು ತಿನ್ನುತ್ತದೆ. ಇದರ ಜಠರದಲ್ಲಿ ಕಪ್ಪೆ, ಉಡಗಳ ಜೀರ್ಣಾವಶೇಷಗಳು ಕಂಡು ಬಂದಿವೆ.

ಲಕ್ಷಣಗಳು : ಭಾರ ದೇಹದ, ನಯವಾದ ಹುರುಪೆಗಳ ಹೊದಿಕೆ ಇರುವ, ಭಲ್ಲೆ ಆಕಾರದ ತಲೆ ಮತ್ತು ಮೋಟು ಬಾಲದ ಪ್ರಾಣಿ. ದೇಹದ ಮೇಲೆ ಹಳದಿಯಿಂದ ಕಡುಕಂದು ಬಣ್ಣದವರೆಗೆ ಬದಲಾಗುವ ಹೊಳೆಯುವ ಮಚ್ಚೆಗಳಿವೆ. ಪಶ್ಚಿಮ ಘಟ್ಟಗಳಲ್ಲಿ ದೊರಕುವ ಹೆಬ್ಬಾವುಗಳ ದೇಹದ ಬಣ್ಣ ತುಸು ಕಪ್ಪು ಛಾಯೆಯದಾಗಿರುತ್ತದೆ. ಹೊಟ್ಟೆಯ ಭಾಗವು ತಿಳಿ ಬಣ್ಣವಾಗಿದ್ದು ಬಿಳಿ, ಹಳದಿ ಅಥವಾ ಕಿತ್ತಲೆ ಬಣ್ಣವಾಗಿರುತ್ತದೆ.

ಹೆಬ್ಬಾವುಗಳ ದೇಹದ ಒಳಗೆ ಗುದದ್ವಾರದ ಅಕ್ಕಪಕ್ಕಗಳಲ್ಲಿ ಮುಳ್ಳುಗಳಿವೆ. ಇವು ವಾಸ್ತವವಾಗಿ ಕ್ಷಯಿಸಿಹೋದ ಹಿಂಗಾಲುಗಳ ಅವಶೇಷಗಳು. ಗಂಡು ಹೆಬ್ಬಾವುಗಳಲ್ಲಿ ಈ ಮುಳ್ಳುಗಳು ಸ್ಪಲ್ಪ ದೊಡ್ಡವಾಗಿರುತ್ತವೆ. ಮುಳ್ಳುಗಳು ೪೫ ಮಿ. ಮಿ. ಉದ್ದ ೨೦ ಮಿ. ಮಿ. ದಪ್ಪನಾಗಿರುತ್ತವೆ.

ಮೂತಿಯ ಪ್ರಶಲ್ಕದ ಮೇಲೆ ಮತ್ತು ಮುಂದಿನ ಮೊದಲೆರಡು ಪ್ರಶಲ್ಕಗಳ ಮೇಲೆ ಇಂದ್ರಿಯ ಗುಣವಿರುವ ಕುಳಿಗಳಿವೆ. ಇವು ಹೆಬ್ಬಾವಿಗೆ ಮಾತ್ರ ಸೀಮಿತವಾದ ವಿಶೇಷ ಲಕ್ಷಣಗಳು ಈ ಕುಳಿಗಳಿಗೆ ಶಾಖ ಸಂವೇದನಾ ಶಕ್ತಿಯುಂಟು. ಇದರಿಂದ ಸನಿಹದಲ್ಲಿರುವ ಶತೃ ಅಥವಾ ಆಹಾರ ಜೀವಿಯ ಇರುವಿಕೆಯನ್ನು ಕಂಡು ಹಿಡಿದು ಕೊಳ್ಳುತ್ತದೆ.

ಇದು ದೇಹದ ಮೇಲಿನ ಹುರುಪೆ ಹೊದಿಕೆಯ ನಮೂನೆ ವಿಶಿಷ್ಟವಾದುದು ಪಕ್ಕೆಗಳಲ್ಲಿ ೫೮-೭೩, ಹೊಟ್ಟೆಭಾಗದಲ್ಲಿ ೨೪೫ ರಿಂದ ೨೭೦, ಬಾಲದ ಮೇಲೆ ೬೦-೭೨ ಜೊತೆ ಹುರುಪೆ ಸಾಲುಗಳಿವೆ.

ಹಾವು ತುಂಬಾ ದಪ್ಪ. ದೇಹದ ಉದ್ದ ಮತ್ತು ಇದರಲ್ಲಿರುವಂತೆ ಮತ್ತಾವ ಹಾವಿನಲ್ಲಿಯೂ ಕಂಡುಬರುವುದಿಲ್ಲ. ದೇಹವು ನಡು ಭಾಗದಲ್ಲಿ ದಪ್ಪ. ದೇಹದ ಸುತ್ತಳತೆ ಸರಿಸುಮಾರು ದುಂಡು ಆಕಾರ. ಇದರ ದೇಹ ತಲೆ ಮತ್ತು ಬಾಲದ ಕಡೆಗೆ ಕ್ರಮೇಣ ತೆಳ್ಳಗಾಗುತ್ತದೆ. ದೇಹದ ಮೇಲಿನ ಹುರುಪೆಗಳು ಗಾಜಿನಂತೆ ನಯವಾಗಿವೆ. ಇವುಗಳಿಗೆ ಸ್ವಷ್ಟವಾದ ಕುತ್ತಿಗೆ ಉಂಟು. ತಲೆ ಚಪ್ಪಟೆಯಾಗಿದೆ. ಮೂತಿ ಉದ್ದ. ನಾಸಿಕ ರಂಧ್ರಗಳು ದೊಡ್ಡವು ಮತ್ತು ಮೇಲ್ಮುಖನಾಗಿವೆ ಹಾಗೂ ಮೂತಿಯ ಮೇಲೆ ಎತ್ತರದಲ್ಲಿವೆ. ಕಣ್ಣುಗಳು ಸಣ್ಣವು. ಕಣ್ಣಿನ ಪಾಪೆ ನೇರವಾಗಿದೆ. ಪಾಪೆ ಬಂಗಾರ ಬಣ್ಣದ್ದು ಬಾಲ ಮೊಂಡು ಮತ್ತು ಸುತ್ತಿಕೊಳ್ಳಬಲ್ಲುದು.

ಸಂತಾನಾಭಿವೃದ್ಧಿ : ಚಳಿಗಾಲದಲ್ಲಿ (ಡಿಸೆಂಬರ್, ಜನವರಿ ಮತ್ತು ಫೆಬ್ರವರಿ) ಗಂಡು ಹೆಣ್ಣುಗಳ ಸಂಧಿಸುವಿಕೆ, ಸಂಭೋಗ ನಡೆಯುತ್ತದೆ. ಮೂರು ನಾಲ್ಕು ತಿಂಗಳುಗಳ ನಂತರ ಮಾರ್ಚ, ಏಪ್ರೀಲ್. ಮೇ ಮತ್ತು ಜೂನ್ ತಿಂಗಳುಗಳಲ್ಲಿ ೮ ರಿಂದ ೧೦೦ ರವರೆಗೆ ಮೊಟ್ಟೆಗಳನ್ನಿಡುತ್ತವೆ. ಮೊಟ್ಟೆಗಳು ೧೨.೬ ಸೆಂ ಮೀ. ಉದ್ದಳತೆ, ಮೃದುವಾದ, ಬಿಳಿ ಮತ್ತು ಎರಡೂ ತುದಿಗಳಲ್ಲಿ ಉಬ್ಬಿರುತ್ತವೆ. ಹೆಣ್ಣು ಹೆಬ್ಬಾವು ಮೊಟ್ಟೆಗಳ ಸುತ್ತ ಸುತ್ತಿಕೊಂಡು ರಕ್ಷಿಸುತ್ತದೆ. ಆದರೆ ಮೊಟ್ಟೆ ಒಡೆದು ಮರಿಗಳು ಹೊರ ಬಂದ ಮೇಲೆ ಅವುಗಳ ವಿಷಯದಲ್ಲಿ ಯಾವ ಗಮನವನ್ನೂ ತೆದೆದುಕೊಳ್ಳುವುದಿಲ್ಲ. ಮೊಟ್ಟೆಗಳು ಒಡೆಯಲು ಕಾವು ಕಾಲ ೫೮ ದಿನಗಳು ಹೆಬ್ಬಾವುಗಳು ದೀರ್ಘಾಯುಷಿಗಳು. ಅವು ೨೨ ವರ್ಷಗಳವರೆಗೆ ಬದುಕುತ್ತವೆ.

ಸ್ವಭಾವ : ಇವು ನಿಶಾಚರಿಗಳು ಹಗಲಿನಲ್ಲಿ ನಿದ್ರಿಸುತ್ತವೆ ಇಲ್ಲವೆ ಬಿಸಿಲು ಕಾಯಿಸುತ್ತವೆ. ರಾತ್ರಿ ಆಹಾರ ಹುಡುಕುತ್ತ ಸಂಚರಿಸುತ್ತವೆ. ಇತರ ಪ್ರಾಣಿಗಳು ನೀರು ಕುಡಿಯಲು ಬರುವ ನೀರಿನ ಮೂಲಗಳ ಬಳಿ ಹೊಂಚು ಹಾಕಿ ಕಾದಿದ್ದು ನೀರು ಕುಡಿಯಲು ಬಂದ ಪ್ರಾಣಿಗಳನ್ನು ಹಿಡಿದು ತಿನ್ನುತ್ತವೆ. ಇವು ಸಾಮಾನ್ಯವಾಗಿ ಹೆಚ್ಚು ಚಲಿಸುವುದನ್ನು ಇಷ್ಟಪಡುವುದಿಲ್ಲ. ಒಂದು ನಿಗದಿಯಾದ ಪ್ರದೇಶವನ್ನು ಆರಿಸಿಕೊಂಡು, ಅದರ ಸ್ವಾಮ್ಯವನ್ನು ಸ್ಥಾಪಿಸಿಕೊಂಡು ಅಲ್ಲಿ ಉಳಿಯುತ್ತವೆ. ಇವು ಸೋಮಾರಿಗಳು, ನಿಧಾನಿಗಳು. ಅಂಜದ ಪ್ರಾಣಿಗಳು, ಶತೃಗಳು ತನ್ನನ್ನು ಆಕ್ರಮಿಸಿದಾಗಲೂ ಓಡಿಹೋಗುವುದಿಲ್ಲ. ಇತರ ಹಾವುಗಳು ಸುತ್ತಿ, ಬಳಸಿ, ಹೊರಳಿ ಚಲಿಸಿದರೆ ಹೆಬ್ಬಾವುಗಳು ನೇರವಾಗಿ ಚಲಿಸುತ್ತವೆ. ಆಹಾರ ಜೀವಿಯನ್ನು ಹುಡುಕುತ್ತ ಮರಗಳನ್ನು ಹತ್ತುತ್ತವೆ, ನೀರಿನಲ್ಲಿ ಈಜುತ್ತದೆ. ಈಜುವಾಗ ನಾಸಿಕವಿರುವ ಮೂತಿಯ ತುದಿಯೊಂದರ ವಿನಹ ದೇಹದ ಉಳಿದಭಾಗ ನೀರಿನಲ್ಲಿ ಮುಳುಗಿರುತ್ತದೆ.

ಪರಿಸರದ ಪರಿಸ್ಥಿಗಳು ಮತ್ತು ಮನುಷ್ಯ ಸೃಷ್ಟಿಸಿದ ಗೊಂದಲಗಳಿಂದಾಗಿ ಇದು ನಿಶಾಚರಿಯಾಗಿರಬಹುದು. ಕೆಲವೊಮ್ಮೆ ಹಗಲು ಚಟುವಟಿಕೆಯೂ ಇರಬಹುದು.

ಬೇಟೆಯನ್ನು ಆರಿಸಿದ ಮೇಲೆ, ಒಮ್ಮೆಲೆ ಅದರ ಮೇಲೆ ಎರಗಿ ಅದನ್ನು ಕಚ್ಚಿ ಅದರ ಸುತ್ತಲೂ ಸುತ್ತಿಕೊಂಡು ಬಿಗಿಯಾಗಿ ಅಪ್ಪುತ್ತದೆ. ಅಪ್ಪುಗೆಯ ಬಿಗಿಯಿಂದ ಏರುವ ಸ್ನಾಯು ಒತ್ತಡದಿಂದ ಆಹಾರ ಜೀವಿ ಉಸಿರು ಕಟ್ಟಿ ಸಾಯುತ್ತದೆ. ಇದರ ಬಾಯಲ್ಲಿನ ಹಲ್ಲುಗಳು ಬಾಯಿಯ ಹಿಂದಕ್ಕೆ ಬಾಗಿರುವುದರಿಂದ, ಒಮ್ಮೆ ಇದರ ಹಲ್ಲಿಗೆ ಸಿಕ್ಕ ಪ್ರಾಣಿ ಸುಲಭವಾಗಿ ಬಿಡಿಸಿಕೊಳ್ಳಲಾರದು. ಆಹಾರ ಜೀವಿಯ ಬಡಿದಾಟಗಳು ನಿಂತು, ಸತ್ತ ಮೇಲೆ ನಿಧಾನವಾಗಿ ಅದನ್ನು ನುಂಗುತ್ತದೆ. ಜಿಂಕೆ, ಆಡು, ಕುರಿಗಳಂತಹ ದೊಡ್ಡ ಪ್ರಾಣಿಗಳನ್ನು ನುಂಗುವಾಗ ಹಾವಿನ ಬಾಯಿ ಹಿಗ್ಗಿ ನುಂಗಲು ಸಹಕರಿಸುತ್ತದೆ. ಉದ್ದ ಕೊಂಬಿನ ಪ್ರಾಣಿಗಳನ್ನು ಹಿಡಿದಾಗ, ಅವುಗಳನ್ನು ಮರದ ರೆಂಬೆಗಳ ಕವಲಿನಲ್ಲಿ ಸಿಕ್ಕಿಸಿ ಕತ್ತನ್ನು ನುಲಿದು ಕೊಂಬುಗಳನ್ನು ಬೇರ್ಪಡಿಸಿ ಉಳಿದ ದೇಹವನ್ನು ನುಂಗುತ್ತದೆ ಎಂದು ಹೇಳುತ್ತಾರೆ. ನುಂಗಿದ ಮೇಲೆ ದಪ್ಪ ಮರದ ಕಾಂಡಗಳಿಗೆ ಸುತ್ತಿಕೊಂಡು ನುಂಗಿದ ಆಹಾರ ಜೀವಿಯನ್ನು ಚೂರು ಮಾದುತ್ತದೆ ಎಂದು ಹೇಳುವುದೂ ಉಂಟು. ದೊಡ್ಡ ಆಹಾರ ಜೀವಿಯನ್ನು ನುಂಗಿದ ಮೇಲೆ ನಿಶ್ಚಲನಾಗಿ ಬಿದ್ದುಕೊಳ್ಳುತ್ತದೆ.

ಇದಕ್ಕೆ ವಿಷವಿಲ್ಲವಾದುದರಿಂದ ಆಹಾರ ಜೀವಿಯ ನೇಣು ಬಿಗಿದು, ಉಸಿರು ಕಟ್ಟಿಸಿ ಸಾಯಿಸಿ ನುಂಗುವ ಅಭ್ಯಾಸ ರೂಢಿಸಿಕೊಂಡಂತೆಕಾಣುತ್ತದೆ. ಒಮ್ಮೆ ತಿಂದು ತೃಪ್ತಿಯಾದ ಮೇಲೆ ಅನೇಕ ವಾರಗಳವರೆಗೆ ಪುನಃ ಆಹಾರ ತಿನ್ನದೆ ಉಪವಾಸ ಇರಬಲ್ಲುದು. ಬಂಧನದಲ್ಲಿ ವರ್ಷಗಳನರೆಗೆ ಉಪವಾಸವಿದ್ದ ಉದಾಹರಣೆಗಳಿವೆ.

ಹೆಬ್ಬಾವಿನ ಮಾಂಸವನ್ನು ತಿನ್ನುವವರಿದ್ದಾರೆ. ಅವುಗಳ ಚರ್ಮಕ್ಕೂ ಅತೀವ ಬೇಡಿಕೆ ಇರುವುದರಿಂದಾಗಿ ಅವುಗಳನ್ನು ಕೊಲ್ಲಲಾಗುತ್ತಿದೆ.

—- 

ಗಣ : ಒಫಿಡಿಯ
ಕುಟುಂಬ : ಬೊಯಿಡೀ (Boidae)
ಉದಾ : ಸಾಮಾನ್ಯ ಮರಳು ಹೆಬ್ಬಾವು, ಕಲ್ಲು ಹಾವು (Common sand boa)
ಶಾಸ್ತ್ರೀಯನಾಮ : ಈರಿಕ್ಸ್ ಕೋನಿಕಸ್ (Eryx conicus)

085_69_PP_KUH

ವಿತರಣೆ : ಬಯಲು ಸೀಮೆಯಲ್ಲಿ ವ್ಯಾಪಕವಾಗಿ ಹರಡಿದೆ. ಸಮುದ್ರ ಮಟ್ಟದಿಂದ ೬೦೦ ಮೀಟರ ಎತ್ತರದವರೆಗೆ ದೊರಕುತ್ತವೆ. ಮರಳು ನೆಲ, ಇಲಿಯ ಬಿಲ, ಇಟ್ಟಿಗೆಯ ರಾಶಿ, ಕಲ್ಲು ಬಂಡೆಗಳ ನದುವೆ ವಿಶೇಷವಾಗಿ ಕಂಡುಬರುತ್ತದೆ.

ಗಾತ್ರ : ೩ ರಿಂದ ೪ ಅಡಿಗಳ ಉದ್ದ. ೨.೫ ಪೌಂ. ತೂಕ. ಹೆಣ್ಣು ಹಾವು ಗಂಡಿಗಿಂತಲೂ ಹೆಚ್ಚು ಉದ್ದ.

ಆಹಾರ : ಮುಖ್ಯವಾಗಿ ಇಲಿಗಳು ಮತ್ತು ದಂಶಕ ಜಾತಿಗೆ ಸೇರಿದ ಇತರ ಸಣ್ಣ ಪುಟ್ಟ ಸಸ್ತನಿಗಳು ಇದರ ಆಹಾರ. ಮರಿ ಹಾವುಗಳು ಕೀಟ, ಸಣ್ಣ ಹಲ್ಲಿಗಳನ್ನು ಅಪರೂಪವಾಗಿ ಕಪ್ಪೆಗಳನ್ನು ತಿನ್ನುತ್ತವೆ.

ಲಕ್ಷಣಗಳು : ದೇಹದ ಬಣ್ಣ ಕಡು ಕೆಂಪು ಮಿಶ್ರಿತ ಬಣ್ಣದಿಂದ ಕಪ್ಪು ಕಂದು ಬಣ್ಣದವರವಿಗೆ ಬದಲಾಗಬಹುದು. ದೇಹದ ಮೇಲೆಲ್ಲಾ ಅವ್ಯವಸ್ಥಿತವಾಗಿ ಹರಡಿದ ತೆಳು ಬಣ್ಣದ ಮಚ್ಚೆಗಳಿಗೆ ಕಪ್ಪು ಅಂಚು ಇದೆ. ಹೊಟ್ಟೆಯ ಭಾಗ ತೆಳುಹಳದಿಯಾಗಿದ್ದು ಹುರುಪೆಗಳ ಹೊರ ಅಂಚಿನಲ್ಲಿ ಕಂದು ಚುಕ್ಕೆಗಳಿರುತ್ತವೆ.

ತಲೆ ತ್ರಿಕೋನಾಕಾರವಾಗಿದೆ. ತಲೆಯ ಮೇಲೆ ಕಂದು ಹಿನ್ನೆಲೆಯಲ್ಲಿ ಬಿಳಿ ಬಾಣದ ಗುರುತಿದೆ. ತಲೆಯ ಮೇಲೆ ಅರೆಚಂದ್ರಾಕೃತಿಯ ಹುರುಪೆಗಳಿದ್ದು, ಅವು ಒಂದು ಇನ್ನೊಂದನ್ನು ಮುಚ್ಚುತ್ತವೆ. ಈ ಹುರುಪೆಗಳಿಗೆ ಮೇಲ್ಮುಖ ಏಣುಗಳಿವೆ. ತಲೆಕುತ್ತಿಗೆಗಳು ಏಕ ಪ್ರಕಾರವಾಗಿದ್ದು ಪ್ರತ್ಯೇಕಿಸುವುದಾಗುವುದಿಲ್ಲ. ಕಣ್ಣುಗಳು ತುಂಬಾ ದೊಡ್ಡವು ಮತ್ತು ಇವುಗಳ ಸುತ್ತ ೧೦-೧೫ ಸಣ್ಣ ಹುರುಪೆಗಳ ಉಂಗುರಗಳಿವೆ. ಕಣ್ಣು ಪಾಪೆ ನೇರವಾಗಿದೆ. ನಾಸಿಕರಂಧ್ರಗಳು ಸೀಳಿಕೆಗಳಂತಿವೆ ಮತ್ತು ಅವು ಮೂತಿಯ ತುದಿಯಲ್ಲಿವೆ. ದೇಹದ ಹೊದಿಕೆಯ ಹುರುಪೆಗಳು ೪೦-೪೫ ಸಾಲಿನಲ್ಲಿ ವ್ಯವಸ್ಥಿತವಾಗಿವೆ. ಬಾಲದ ಹುರುಪೆಗಳಿಗೆ ಏಣುಗಳಿವೆ. ಹೊಟ್ಟೆಯ ಭಾಗದ ಹುರುಪೆಗಳು ಅಡ್ಡಡ್ಡ ಹರಡಿಲ್ಲ. ಬಾಲವು ಮೊಂಡಾಗಿ ಮತ್ತೊಂದು ತಲೆಯಂತೆ ಕಾಣುತ್ತದೆ. ಆದ್ದರಿಂದ ಒಮ್ಮೊಮ್ಮೆ ಇದನ್ನು ಇತ್ತಲೆ ಹಾವೆಂದು ಹೇಳುವುದುಂಟು. ದೇಹ ಮೋಟು. ತಲೆ ಸುಮಾರು ಉದ್ದ ಮತ್ತು ದುಂಡಾಗಿದೆ. ಮೂತಿ ಉದ್ದ, ಕೆನ್ನೆಗಳ ಮುಂದೆ ಮುಂಚಾಚಿದೆ. ಹೆಣ್ಣು ಹಾವುಗಳಲ್ಲಿ ಹಿಂಗಾಲುಗಳ ಅವಶೇಷಗಳು ಬಾಗಿದ ಸಣ್ಣ ನಖಗಳಂತಹ ರಚನೆಗಳಾಗಿ ಉಳಿದಿವೆ. ಹುರುಪೆಗಳಿಗೆ ಏಣುಗಳಿರುವುದರಿಂದ ಬೆನ್ನಿನ ಭಾಗ ಒರಟಾಗಿರುವಂತೆ ಭಾಸವಾಗುತ್ತದೆ. ಬಾಲ ಮತ್ತು ದೇಹದ ಹಿಂಭಾಗ ಹೆಚ್ಚು ಒರಟು. ದೇಹವು ಸಣ್ಣದಾಗಿದ್ದು ಬಿಲವಾಸಕ್ಕೆ ಅನುಕೂಲವಾಗಿದೆ.

ಸಂತಾನಾಭಿವೃದ್ಧಿ : ಇವು ಅಂಡಜರಾಯುಜಗಳೆಂದು ಹೇಳುತ್ತಾರೆ. ವಾಸ್ತವವಾಗಿ ಅಂಡಜಗಳೇ. ಹೆಣ್ಣುಗಂಡು ಹಾವುಗಳು ನವೆಂಬರ ಸುಮಾರಿಗೆ ಕೂಡುತ್ತವೆ. ಮತ್ತು ಮಳೆಗಾಲ ಆರಂಭವಾದ ಮೇಲೆ ಜುಲೈನಲ್ಲಿ ಮೊಟ್ಟೆ ಇಡುತ್ತವೆ. ಒಂದುಸಾರಿಗೆ ೬ ರಿಂದ ೮ ಮರಿಗಳನ್ನು ಹಾಕುತ್ತವೆ.

ಸ್ವಭಾವ : ನಿಶಾಚರಿಗಳು ಸ್ವಭಾವತಃ ಸಾಧು ಪ್ರಾಣಿ, ಮುಟ್ಟಿದರೂ ಕಚ್ಚುವುದಿಲ್ಲ. ಸೋಮಾರಿ ನಿರುಪದ್ರವಕಾರಿ ಹಾವು. ಹಗಲು ಮರಳು ನೆಲದಲ್ಲಿ ಅಡಗಿರುತ್ತವೆ. ವರ್ಷಕ್ಕೆ ನಾಲ್ಕು ಸಾರಿ ಪೊರೆ ಬಿಡುತ್ತವೆ. ಆಹಾರ ಜೀವಿಯನ್ನು ಹಿಡಿದು, ತನ್ನ ದೇಹದಿಂದ ಸುರುಳಿ ಸುತ್ತಿ ಹಿಸುಕಿ ಉಸಿರು ಸಿಕ್ಕಿಸಿ ಸಾಯಿಸುತ್ತದೆ. ಸತ್ತ ಮೇಲೆ ನಿರಾತಂಕವಾಗಿ, ನಿಧಾನವಾಗಿ ಆಹಾರ ಜೀವಿಯನ್ನು ನುಂಗುತ್ತದೆ. ಹೆದರಿಸಿದಾಗ, ಹೆದರಿದಾಗ ತಲೆಯನ್ನು ತನ್ನ ದೇಹದ ಸುರುಳಿಗಳ ನಡುವೆ ಮುಚ್ಚಿಟ್ಟುಕೊಂಡು ತನ್ನನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತದೆ. ತಲೆಯಂತೆಯೆ ಕಾಣುವ ತನ್ನ ಮೊಂಡು ಬಾಲವನ್ನು ಅಲ್ಲಾಡಿಸಿ ಶತೃವಿನ ಗಮನವನ್ನು ಬೇರೆಡೆಗೆ ಸೆಳೆದು ರಕ್ಷಿಸಿಕೊಳ್ಳುವ ಪ್ರಯತ್ನ ಮಾಡುತ್ತದೆ.

ಹೆಚ್ಚು ಕೆಣಕಿದಾಗ, ರೇಗಿದಾಗ, ನೆಲದಿಂದ ತಲೆಯನ್ನು ಎಂಟು ಅಂಗುಲದಷ್ಟು ಮೇಲೆತ್ತಿ ಬಡಿಯುತ್ತದೆ. ಪರಿಸರದಲ್ಲಿ ಮರೆಯಾಗುವ ಬಣ್ಣ ಸಣ್ಣ ಗಾತ್ರ ಮತ್ತು ಕಲ್ಲು ಮಣ್ಣುಗಳ ಮಧ್ಯೆ ಇರುವ ಈ ಹಾವು ನೋಡುವವರ ಕಣ್ಣಿಗೆ ಕಾಣದೆ ಉಳಿದು ಬಿಡುವುದರಿಂದ, ಇದರ ಇರಿವು ಕಾಣದೆ ಅದರ ಬಳಿಗೆ ಬರುವವರು ತುಳಿಯುವರು ಇವುಗಳಿಂದ ಕಡಿತಕ್ಕೆ ಗುರಿಯಾಗುತ್ತಾರೆ.

ಇವು ವಿಷದ ಹಾವುಗಳಾದರೂ ಕಚ್ಚಿದಾಗ ಸೂಸುವ ವಿಷದ ಮೊತ್ತ ಮನುಷ್ಯನನ್ನು ಕೊಲ್ಲಲು ಸಾಲದು. ಕಚ್ಚಿದ ಭಾಗ ಊದುವುದು, ರಕ್ತಸೋರುವುದು, ಹಲ್ಲಿನ ಸಂದುಗಳಲ್ಲಿ ಮೂತ್ರಪಿಂಡಗಳಲ್ಲಿ ಮೂಗಿನಲ್ಲಿ ರಕ್ತಸ್ರಾವ ಸಾಮಾನ್ಯ. ಇಂತಹ ಅನೇಕ ಜಟಿಲ ಪರಿಣಾಮಗಳಿಂದ ಕೆಲವು ದಿನಗಳ ಮೇಲೆ ಸಾವು ಬರಬಹುದು. ಕೆಲವು ಪ್ರದೇಶಗಳಲ್ಲಿ ಈ ಹಾವುಗಳು ಕಡಿದರೆ ಕುಷ್ಟ ರೋಗ ಬರುತ್ತದೆಂಬ ತಪ್ಪು ಭಾವನೆ ಇದೆ.

ಕತ್ತಿನ ಹಿಂಭಾಗದಲ್ಲಿರುವ ಏಣಿರುವ ಹುರುಪೆಗಳು, ಹಾವು ಚಲಿಸಿದಾಗ ಪರಸ್ಪರ ಉಜ್ಜಿ ಶಬ್ಧ ಮಾಡುತ್ತವೆ.