ಗಣ : ಒಫಿಡಿಯ
ಕುಟುಂಬ : ಬೋಯಿಡೀ
ಉದಾ : ಇಟಾಲ್ಕಿ ಹಾವು, ಕೆಂಪು ಮರಳು ಹಾವು, ಕೆಂಪು ಕಲ್ಲು ಹಾವು (Red sand snake)
ಶಾಸ್ತ್ರೀಯ ನಾಮ : ಈರಿಕ್ಸ್ ಜಾನಿ (Eryx johnii)

ವಿತರಣೆ : ಮರಳು ನೆಲದಲ್ಲಿ ಸಾಮಾನ್ಯ. ಇಲಿಬಿಲಗಳು ಇದರ ಸಾಮಾನ್ಯ ಅವಾಸ ಸ್ಥಳ.

ಗಾತ್ರ : ಎರಡುವರೆ ಅಡಿ ಉದ್ದ ಬೆಳೆಯುತ್ತದೆ.

ಅಹಾರ : ಇಲಿಗಳು ಮತ್ತು ಇತರ ಸಣ್ಣ ದಂಶಕ ಸಸ್ತನಿಗಳು ಇದರ ಆಹಾರ. ಇತರ ಹಾವುಗಳನ್ನು ತಿನ್ನುತ್ತದೆ.

ಲಕ್ಷಣಗಳು : ಇದರ ಬಣ್ಣ ಕೆಂಪು ಮಿಶ್ರಿತ ಕಂದು ಅಥವಾ ಮಬ್ಬು ಕಂದು ಇಲ್ಲವೇ ಹಳದಿಯಿಂದ ಕಪ್ಪಿನವರೆಗೆ. ಇದರ ದೇಹ ಬಿಲವಾಸಕ್ಕೆ ಅನುವಾಗಿದೆ. ಇದೊಂದು ವಿಜಾತೀಯ ವಿಕಾರದ ಹಾವು. ಗುದ್ದಲಿ ಆಕಾರದ ಮೂತಿ, ಮೊಂಡು ಬಾಲ, ಅರ್ಧದಲ್ಲಿ ಕತ್ತರಿಸಿದಂತೆ ಕಾಣಬರುತ್ತದೆ. ಇದರಿಂದಾಗಿ ಇವುಗಳನ್ನು ಎರಡು ತಲೆಯ ಹಾವು ಗಳೆಂದು ಭಾವಿಸುತ್ತಾರೆ.

ನಾಲಿಗೆ ಬುಡದಲ್ಲಿ ಕಪ್ಪು ಮತ್ತು ತುದಿ ಹಳದಿ. ಕಣ್ಣುಗಳು ಸಣ್ಣವು ಮತ್ತು ನೇರಪಾಪೆಗಳು. ನಾಸಿಕ ರಂಧ್ರಗಳು ಮೂತಿಯ ತುದಿಯಲ್ಲಿವೆ ಮತ್ತು ವಿಸೃತಗೊಂಡ ಎರಡು ಪ್ರಶಲ್ಕಗಳ ನಡುವೆ ಇವೆ. ಬಾಲಮೋಟು, ಮೊಂಡು ಮತ್ತು ತೊಣಪ, ತಲೆಯನ್ನು ಹೋಲುತ್ತದೆ. ಈ ಹಾವಿನಲ್ಲಿಯೂ ನಖಗಳಂತಿರುವ ಹಿಂಗಾಲು ಅವಶೇಷಗಳಿವೆ. ಮೂತಿಯ ಮೇಲಿರುವ ಆಡ್ಡ ಏಣನ್ನು ಬಿಲ ತೋಡಲು ಬಳಸುತ್ತದೆ. ಇದರ ಹೊಟ್ಟೆಯ ಭಾಗದಲ್ಲಿ ವೆಂಟ್ರಲ್ ಹುರುಪೆಗಳ ಸಂಖ್ಯೆ ಕಡಿಮೆ. ಇದರಿಂದಾಗಿ ಇವುಗಳ ಚಲನೆ ನಿಧಾನ ಮತ್ತು ವಿಕಾರ.

ಉಳಿದೆಲ್ಲ ವಿಷಯಗಳಲ್ಲಿ ಸಾಮಾನ್ಯ ಕಲ್ಲು ಹಾವುಗಳನ್ನು ಹೋಲುತ್ತವೆ.

ಸಂತಾನಾಭಿವೃದ್ದಿ : ಹೆಚ್ಚು ವಿವರಗಳು ದೊರಕುವುದಿಲ್ಲ. ಜೂನ್ ತಿಂಗಳ ಸುಮಾರಿನಲ್ಲಿ ೬ ರಿಂದ ೮ ಮರಿಗಳನ್ನು ಹಾಕುತ್ತದೆ. ಮರಿಗಳ ದೇಹದ ಮೇಲೆ ಸ್ಪಷ್ಟವಾದ ಪಟ್ಟೆಗಳಿರುತ್ತವೆ.

ಸ್ವಭಾವ : ಬಾಲದ ವಿಜಾತೀಯ ರಚನೆಯಿಂದ ಇದನ್ನು ಇತ್ತಲೆಯ ಹಾವೆಂದು ತಪ್ಪು ತಿಳಿಯುತ್ತಾರೆ. ಈ ಹಾವು ತನ್ನ ಎರಡು ತಲೆಗಳನ್ನು ಪರ್ಯಾಯವಾಗಿ ಬಳಸುತ್ತದೆಂದು ನಂಬುತ್ತಾರೆ. ಹಾವಾಡಿಗರು ಇದು ಇತ್ತಲೆ ಹಾವೆಂದು ಪ್ರದರ್ಶಿಸುತ್ತಾರೆ. ಬಾಲದ ಮೇಲೆ ಚುಕ್ಕಿಗಳನ್ನಿಟ್ಟು ಅವು ಕಣ್ಣುಗಳೆಂದು, ಅಡ್ಡಗೆರೆ ಎಳೆದು ತುದಿಯನ್ನು ನೀಳ ಅದು ಬಾಯಿ ಎಂದೂ ಹೇಳುತ್ತಾರೆ. ಸುದೈವದಿಂದ ಹಾವಿನ ಚರ್ಮ ಆಶಿಸುವವರ ದೃಷ್ಟಿಯಿಂದ ತಪಿಸಿಕೊಂಡಿದೆ.

 —

ಗಣ : ಒಫಿಡಿಯ
ಕುಟುಂಬ : ಲೈಕೊಡಾಂಟಿಡೀ (Lycodontidae)
ಉದಾ : ಸಾಮಾನ್ಯ ತೋಳ ಹಾವು (Common wolf snake)
ಶಾಸ್ತ್ರೀಯ ನಾಮ : ಲೈಕೊಡಾನ್ ಆಲಿಕನ್ (Lycodon aulicus)

086_69_PP_KUH

ವಿತರಣೆ : ಕರ್ನಾಟಕ ದ ಕಾಡುಗಳು ಮತ್ತು ಬಯಲು ಸೀಮೆವಾಸಿಗಳು. ಬಹಳೊಮ್ಮೆ ಇವು ಮಾನವ ವಸತಿಗಳ ಹತ್ತಿರ ಕಂಡುಬರುತ್ತವೆ. ಸಾಮಾನ್ಯವಾಗಿ ಸಮುದ್ರ ಮಟ್ಟದಿಂದ ೨೦೦೦ ಮೀಟರ್ ಎತ್ತರದವರೆಗೂ ದೊರಕುತ್ತವೆ.

ಗಾತ್ರ : ಎರಡರಿಂದ ಎರಡುವರೆ ಅಡಿ ಉದ್ದ ಇರುತ್ತವೆ.

ಆಹಾರ : ಗೌಳಿ, ಹಲ್ಲಿಗಳು, ಹಾವುರಾಣಿ, ಸುಂಡಿಲಿಗಳು ಇದರ ಆಹಾರ. ಗೌಳಿಗಳನ್ನು ಇಷ್ಟಪಟ್ಟು ತಿನ್ನುತ್ತವೆ.

ಲಕ್ಷಣಗಳು : ದೇಹದ ಮೇಲೆ ಸಣ್ಣ ನಯವಾದ, ಹೊಳಪು ಹುರುಪೆಗಳ ಹೊದಿಕೆ ಇದೆ. ತಲೆಯ ಮೇಲೆ ಬಾಣದ ಗುರುತು ಇದೆ. ದೇಹದ ಮೇಲೆ ಎದ್ದು ಕಾಣುವ ಅಗಲ ಅಡ್ಡ ಪಟ್ಟಿಗಳಿವೆ. ಚಪ್ಪಟೆಯಾಗಿರುವ ಬುಗುರಿಯಾಕಾರದ ತಲೆ, ಉಬ್ಬಿದ ಕಪ್ಪು ಕಣ್ಣುಗಳು, ಕಡು ಕೆಂಪಾದ ನಾಲಿಗೆ. ಅದರ ತುದಿ ಬೆಳ್ಳಗಿದೆ. ಕುತ್ತಿಗೆ ತುಸು ಸಂಪೀಡಿತವಾಗಿ ತಲೆಯಿಂದ ಬೇರ್ಪಡಿಸಿ ಗುರುತಿಸಬಹುದು. ಬಾಲ ಸಣ್ಣದು, ದೇಹದ ಐದನೆ ಅಥವಾ ಆರನೆಯ ಒಂದು ಭಾಗದಷ್ಟು ಉದ್ದ.

ದೇಹದ ಬಣ್ಣ, ಅದರ ಮೇಲಿರುವ ಗುರುತುಗಳು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗಬಹುದು ಮತ್ತು ಎರಡು ಸ್ಪಷ್ಟ ವಿಧದ ಬಣ್ಣ ವೈವಿಧ್ಯವನ್ನು ಕಾಣಬಹುದು. ಸಣ್ಣ ಮರಿಹಾವುಗಳ ದೇಹ, ಒಳಗಿನ ಅಂಗಾಂಗಗಳು ಕಾಣಿಸುವಷ್ಟೇ ಪಾರದರ್ಶಕವಾಗಿರುತ್ತದೆ. ಕೆಲವು ಸಲ ಪ್ರಕಾಶಕ ವರ್ಣದ ಹಾವುಗಳು ವಸತಿಮನೆಗಳಲ್ಲಿ ಇರಬಹುದು.

ಸಂತಾನಾಭಿವೃದ್ಧಿ : ವರ್ಷದ ಮೊದಲರ್ಧ ಭಾಗದಲ್ಲಿ ಈ ಹಾವುಗಳು ಸಂತಾನೋತ್ಪತ್ತಿ ಚಟುವಟಿಕೆ ತೋರುತ್ತವೆ. ಆ ಕಾಲದಲ್ಲಿ ಹೆಣ್ಣು ಹಾವುಗಳು ತತ್ತಿಭರಿತವಾಗಿರುತ್ತವೆ. ಡಿಸೆಂಬರ್- ಜನವರಿ ತಿಂಗಳುಗಳಲ್ಲಿ ಮೊಟ್ಟೆಗಳನ್ನಿಡುತ್ತವೆ. ಒಂದು ಸಾರಿಗೆ ೫ ರಿಂದ ೭ ಮೊಟ್ಟೆ ಗಳನ್ನಿಡುತ್ತವೆ. ಹಾವಿನ ಗಾತ್ರಕ್ಕೂ ಅದು ಇಡುವ ಮೊಟ್ಟೆಗಳ ಸಂಖ್ಯೆಗೂ ಸಂಬಂಧ ಇರುವಂತೆ ತೋರುತ್ತದೆ.

ಸ್ವಭಾವ : ಇವು ಸಂಪೂರ್ಣವಾಗಿ ನಿಶಾಚರಿಗಳು, ಹಗಲು ಈ ಹಾವುಗಳು ಸಾಮಾನ್ಯವಾಗಿ ಕಾಣಸಿಗುವುದಿಲ್ಲ. ನೇರವಾದ ಮನೆ ಗೋಡೆ, ಮರಗಳನ್ನು ಸಮರ್ಥವಾಗಿ ಹತ್ತುತ್ತವೆ. ನಯವಾದ ಮೇಲ್ಮೈ ಇರುವ ರಚನೆಗಳನ್ನು ಹತ್ತಬಲ್ಲವು. ಇವುಗಳನ್ನು ಹಿಡಿಯುವುದು ಕಷ್ಟ ಸ್ವಲ್ಪ ಉದಾಸೀನ ಮಾಡಿದರೂ ಕ್ರೂರವಾಗಿ ಕಚ್ಚುತ್ತವೆ. ಇದರಿಂದ ವಿಪರೀತ ಉರಿನೋವು ಉಂಟಾಗುತ್ತದೆ. ತೋಳದ ಕೋರೆ ಹಲ್ಲುಗಳನ್ನು ಹೋಲುವಂತೆ ಬಾಯಿಯ ಮುಂಭಾಗದಲ್ಲಿ ಮುಂಚಾಚಿದ ಉದ್ದವಾದ ಹಲ್ಲುಗಳಿವೆ. ಅದರಿಂದ ಇವಕ್ಕೆ ತೋಳ ಹಾವುಗಳೆಂದು ಹೆಸರು ಬಂದಿದೆ. ತಾನಾಗಿಯೆ ಮಾನವ ವಸತಿ ತಾಣಗಳನ್ನು ಹುಡಕಿ ಅಲ್ಲಿ ವಾಸಿಸುತ್ತದೆ. ಹಗಲು ಗೋಡೆ ಸಂದುಗಳಲ್ಲಿ ಸಾಮಾನುಗಳ ಹಿಂದೆ, ಕಲ್ಲುಗಳ ಕೆಳಗೆ ಅಥವಾ ಮತ್ತಾವುದೇ ಸುಲಭ ಅಡಗುತಾಣಗಳಲ್ಲಿ ಅವಿತಿಟ್ಟು ಕೊಂಡಿದ್ದು ರಾತ್ರಿ ಬೇಟೆಗೆ ಹೊರ ಬರುತ್ತದೆ. ಕೆಣಕಿದರೆ ಕಚ್ಚುತ್ತದೆ. ಇದನ್ನು ಸಾಕಿದರೆ ಸಾಧುವಾಗಿ ಸಾಕಿದವರಿಗೆ ಹೊಂದಿಕೊಂಡು ಬಾಳುತ್ತದೆ. ವಿಶ್ರಮಿಸುವಾಗ ದೇಹವನ್ನು ಸುರಳಿ ಸುತ್ತಿಕೊಂಡು ವಿರಮಿಸುತ್ತದೆ. ಹೆದರಿದಾಗ ತನ್ನ ತಲೆಯನ್ನು ದೇಹದ ಸುರಳಿಗಳ ನಡುವೆ ಮುಚ್ಚಿಕೊಳ್ಳತ್ತದೆ/ ಸುತ್ತಿಕೊಂಡಿರುವ ಸ್ಥಿತಿಯಲ್ಲಿಯೇ, ದೇಹದ ಸುರುಳಿ ಬಿಡಿಸಕೊಳ್ಳದಂತೆ ಗಂಟುಬಿದ್ದ ಹಗ್ಗದ ಸುರುಳಿಯಂತೆ ಮೇಲೆ ಹಾರುತ್ತದೆ. ಇದೊಂದು ಸಮರ್ಥ ಏರಬಲ್ಲ ಹಾವು. ನಯವಾದ ಮೇಲ್ಮೈಗಳನ್ನು ಸುಲಭವಾಗಿ ಹತ್ತುತ್ತದೆ. ಹತ್ತಲು ತನ್ನ ದೇಹದ ಪಕ್ಕೆಲಬು ಏಣುಗಳು ಮತ್ತು ಪಕ್ಕೆಯ ಹುರುಪೆಗಳ ಮುಕ್ತ ಏಣುಗಳನ್ನು ಹತ್ತುವ ಮೇಲ್ಮೈನಲ್ಲಿ ಭದ್ರವಾದ ಹಿಡಿತ ಪಡೆಯಲು ಉಪಯೋಗಿಸುತ್ತದೆ. ಹಗಲು ಮನೆಯ ಮಾಡುಗಳು, ತೊಲೆಗಳ ನಡುವಿನ ಸಂದುಗಳು, ಹಂಚುಗಳ ಕೆಳಗೆ ಅಡಗಿದ್ದು ಕೆಲವೊಮ್ಮೆ ಆಕಸ್ಮಿಕವಾಗಿ ಅನಿರೀಕ್ಷಿತವಾಗಿ ಕೆಳಗೆ ಬಿದ್ದು ಅಲ್ಲಿ ವಾಸಿಸುವರಿಗೆ ಗಾಬರಿ ಉಂಟು ಮಾಡಬಹುದು. ಸ್ವಲ್ಪ ಗಲಾಟೆಯಾದರೂ ಹತ್ತಿರಿದ್ದವರನ್ನು ಕಚ್ಚುತ್ತದೆ. ಕೆಲವೊಮ್ಮೆ ಇದನ್ನು ಕಚ್ಚು ಹಾವೆಂದು ತಪ್ಪುಗ್ರಹಿಸಬಹುದಾದ ಸಾಧ್ಯತೆ ಉಂಟು. ಇಂತಹ ಸಂದರ್ಭಗಳಲ್ಲಿ ವಿಷದ ಹಾವು ಕಚ್ಚಿದೆ ಎಂದು ಮಾಯಾಮಂತ್ರ ನಾಟಿ ಔಷಧ ಫಲಕಾರಿಯಾಗಿ ಮಂತ್ರವಾದಿಗೆ, ನಾಟಿ ವೈದ್ಯರಿಗೆ ಹೆಸರು ತಂದುಕೊಡಲು ಅವಕಾಶವಾಗುತ್ತದೆ. ಇದು ಕಚ್ಚಿ ಅಕಸ್ಮಾತ್‌ಕಚ್ಚಿದವರು ಸಾವನ್ನಪ್ಪಿದರೆ ಅದು ಈ ಹಾವಿನ ವಿಷದಿಂದಲ್ಲ ಕೇವಲ ಗಾಬರಿ, ಆಘಾತಗಳಿಂದ ಮಾತ್ರ.

ಎರಡನೆ ಉದಾಹರಣೆ : ತಿರುವಾಂಕೂರು ತೋಳ ಹಾವು (Travancore wolf snake)
ಶಾಸ್ತ್ರೀಯ ನಾಮ : ಲೈಕೊಡಾನ್ ಟ್ರವೆಂಕೊರಿಕಸ್
‌(Lycodon travancoricus)

ಇದು ತಿರುವಾಂಕೂರು ಪ್ರದೇಶದಲ್ಲಿ ದೊರಕುತ್ತದೆ. ಬಣ್ಣದಲ್ಲಿ ಸ್ವಲ್ಪ ಬದಲಾವಣೆ ತೋರುತ್ತದೆ. ಬೆನ್ನಭಾಗ ಕಡುಕೆಂಪು ಅಥವಾ ಕಪ್ಪು ದೇಹದ ಮೇಲೆ ಹಳದಿಯ ಅಡ್ಡ ಪಟ್ಟಿಗಳಿವೆ.

ಮೂರನೆ ಉದಾಹರಣೆ : ಶಾರ ತೋಳ ಹಾವು (Shaw’s wolf snake)
ಶಾಸ್ತ್ರೀಯ ನಾಮ : ಲೈಕೊಡಾನ್ ಸ್ಟ್ರೇಯೇಟಸ್
‌(Lycodon striatas)

ಇದರ ಬೆನ್ನು ಭಾಗವೂ ಕಡುಕೆಂಪು ಅಥವಾ ಕೆಂಪು ದೇಹದ ಮೇಲೆ ೧೧ ರಿಂದ ೧೮ ಬಿಳಿ ಅಥವಾ ಹಳದಿ ಅಡ್ಡ ಪಟ್ಟಿಗಳಿವೆ. ಈ ಪಟ್ಟಿಗಳು ಪಕ್ಕಗಳಲ್ಲಿ ಒಡೆದು ತ್ರಿಕೋನಾಕಾರದ ಕಂದು ಬಣ್ಣದ ರಚನೆಗಳು ನಿರ್ಮಾಣವಾಗಿವೆ. ಹೊಟ್ಟೆಯ ಭಾಗ ಮತ್ತು ತುಟಿಗಳು ಬಿಳಿಪು. ಸಾಮಾನ್ಯವಾಗಿ ಅಂಜುಬುರುಕ ಹಾವು. ಅಂಜಿದಾಗ ತನ್ನ ತಲೆಯನ್ನು ದೇಹದ ಸುರುಳಿಗಳಡಿಯಲ್ಲಿ ಅಡಗಿಕೊಳ್ಳುತ್ತದೆ. ಅಗಸ್ಟ್‌ತಿಂಗಳಲ್ಲಿ ಗಂಡು ಹೆಣ್ಣುಗಳು ಸಂಭೋಗಿಸುತ್ತವೆ. ಆನಂತರ ಹೆಣ್ಣು ಗರ್ಭಧರಿಸುತ್ತದೆ (ಅಂದರೆ ದೇಹದ ಒಳಗೆ ನಿಷೇಚಿತ ತತ್ತಿಗಳು ಕಾಣಿಸಿಕೊಳ್ಳುತ್ತವೆ) ಮತ್ತು ಕೆಲವು ವಾರಗಳನಂತರ ಮೊಟ್ಟೆ ಇಡುತ್ತದೆ. ಒಂದು ಬಾರಿಗೆ ೨ ರಿಂದ ೪ ಮೊಟ್ಟೆಗಳನ್ನಿಡುತ್ತದೆ.

—- 

ಗಣ : ಒಫಿಡಿಯ
ಕುಟುಂಬ : ಡಿಪ್ಸಡಿಡೀ (Dipsadidae)
ಉದಾ : ಪಟ್ಟಿಕುಕ್ರಿ ಹಾವು (Banded kukri snake)
ಶಾಸ್ತ್ರೀಯ ನಾಮ : ಆಲಿಗೊಡಾನ್
ಆರ್ನೆಸಿಸ್‌(Oligodon arnensis)

087_69_PP_KUH

ವಿತರಣೆ : ಇದು ಬಯಲು ಪ್ರದೇಶದ ಹಾವು. ಕೆಲವೊಮ್ಮೆ ಹುತ್ತಗಳಲ್ಲಿ ಇರುವುದಾದರೂ ಪೊಟರುಗಳು, ಕಲ್ಲುಗಳ ಕೆಳಗಿನ ಸಂದುಗಳು, ಬಿಲಗಳು ಮತ್ತು ಪಾಳುಬಿಟ್ಟ ಮನೆಗಳಲ್ಲಿ ಇದರ ವಾಸ.

ಗಾತ್ರ : ಸರಾಸರಿ ಉದ್ದ ೨೫ ಸೆಂ. ಮೀ. ೬೬ ಸೆಂ. ಮೀ. ಉದ್ದದ ಹಾವೂ ದೊರಕಿದೆ.

ಆಹಾರ : ಗೌಳಿಗಳು, ಹಾವುರಾಣಿ, ಸಣ್ಣ ಇಲಿಗಳು ಇದರ ಆಹಾರ. ಸರೀಸೃಪಗಳು ಮತ್ತು ಹಕ್ಕಿಗಳನ್ನು ಇಷ್ಟಪಟ್ಟು ತಿನ್ನುತ್ತದೆ.

ಲಕ್ಷಣಗಳು : ಉದ್ದವಾದ ಉರಳೆಯಾಕಾರದ ದೇಹ. ಉದ್ದಕ್ಕೆ ತಕ್ಕ ಗಾತ್ರ. ಗಾಜಿನಂತೆ ನಯವಾದ ದೇಹ. ಅಸ್ಪಷ್ಟವಾದ ಕುತ್ತಿಗೆ. ದೇಹದ ಉದ್ದಕ್ಕೂ ಸ್ಪಷ್ಟವಾದ ಅಡ್ಡ ಪಟ್ಟಿಗಳಿವೆ. ಚಪ್ಪಟೆಯಾದ ತಲೆ. ತಲೆಯ ಮೇಲೆ ‘V’ ಆಕಾರದ ಗುರುತುಗಳಿವೆ. ಮೂತಿ ಮೊಂಡು ಮತ್ತು ಮೋಟು. ಬಾಲ ತಳಭಾಗದಲ್ಲಿ ತಟ್ಟಿದಂತೆ ಚಪ್ಪಟ್ಟೆಯಾಗಿದೆ. ಹಲ್ಲುಗಳು ಸಿಕ್ಕರ ಕುಕ್ರಿ (ಬಾಕು)ಗಳಂತೆ ಬಾಗಿವೆ. ಆದ್ದರಿಂದ ಈ ಹಾವುಗಳನ್ನು ಕುಕ್ರಿ ಹಾವುಗಳೆಂದು ಕರೆಯುತ್ತಾರೆ. ಈ ಹಲ್ಲುಗಳು ಆಹಾರಜೀವಿಯನ್ನು ಭದ್ರವಾಗಿ ಹಿಡಿದುಕೊಳ್ಳಲು ಅನುವಾಗಿವೆ. ಕಣ್ಣುಗಳಲ್ಲಿ ದುಂಡು ಪಾಪೆ ಇದೆ.

ದೇಹವು ಕೆಂಪು ಅಥವಾ ಕಂದು ಬೂದು ಬಣ್ಣ ದೇಹದ ಮೇಲೆ ೧೦ ರಿಂದ ೧೨ ಕಡು ಕಂದು ಪಟ್ಟಿಗಳಿವೆ. ಹೊಟ್ಟೆಯ ಭಾಗದ ಬಣ್ಣ ಬಿಳಿಪು.

ಸಂತಾನಾಭಿವೃದ್ಧಿ : ಅಗಸ್ಟ್‌ತಿಂಗಳಲ್ಲಿ ಇವು ಗರ್ಭಸ್ತವಾಗಿರುವಂತೆ ಕಾಣುತ್ತವೆ. ಏಪ್ರಿಲ್‌ನಲ್ಲಿ ಮೊಟ್ಟೆ ಇಡುತ್ತವೆ. ಒಂದು ಸಾರಿಗೆ ೩ ರಿಂದ ೬ ಮೊಟ್ಟೆಗಳನ್ನಿಡುತ್ತವೆ.

ಸ್ವಭಾವ : ನಿಶಾಚರಿ, ಕಚ್ಚದ ನಿರುಪದ್ರವಕಾರಿ ಹಾವು. ಎದುರಿಸಿದಾಗ ನಿಮಿರಿ ಸರಿದು ಮರೆಯಾಗುತ್ತದೆ.

—- 

ಗಣ : ಒಫಿಡಿಯ
ಕುಟುಂಬ : ನೇಟ್ರಿಸಿಡೀ (Natricidae)
ಉದಾ : ಹಸಿರು ನಾಗ (Green keel back)
ಶಾಸ್ತ್ರೀಯ ನಾಮ : ಮ್ಯಾಕ್ರೊಪಿಸ್ತೊಡಾನ್
ಪ್ಲಂಬಿಕೊಲಾರ್ (Macropisthodon plumbicolor)

088_69_PP_KUH

ವಿತರಣೆ : ಕರ್ನಾಟಕವನ್ನು ಒಳಗೊಂಡ, ವಾಯುವ್ಯ ಭಾರತ ಮತ್ತು ಗಂಗಾ ನದಿಯ ಪಾತ್ರದ ಪ್ರಾಂತಗಳ ವಿನಹ ಉಳಿದೆಲ್ಲ ಭಾರತದಲ್ಲಿ ಎಲ್ಲೆಡೆ ದೊರಕುತ್ತವೆ. ಸಮುದ್ರ ಮಟ್ಟದಿಂದ ೧೫೦೦ ಮೀಟರ್ ಎತ್ತರದವರೆಗೆ ಎಲ್ಲೆಡೆ ಕಂಡು ಬರುತ್ತವೆ.

ಗಾತ್ರ : ೫೫ ರಿಂದ ೬೦ ಸೆಂ. ಮೀ. ಉದ್ದ ಇರುತ್ತದೆ.

ಆಹಾರ : ಸಾಮಾನ್ಯವಾಗಿ ನೆಲಗಪ್ಪೆ, ಬ್ಯೂಪೊ ಮೆಲನೊಸ್ಟಿಕ್ಟಸ್‌(Bufo melanostictus)ಯನ್ನೇ ಹೆಚ್ಚು ತಿನ್ನತ್ತವೆ. ಅಪರೂಪವಾಗಿ ಇತರ ಉಭಯಚರಿಗಳು ಮತ್ತು ಹಲ್ಲಿಗಳನ್ನು ತಿನ್ನುತ್ತವೆ.

ಲಕ್ಷಣಗಳು : ಬಣ್ಣ ಅಚ್ಚ ಹಸಿರು. ಅಸ್ಪಷ್ಟ ಅಥವಾ ಅಕ್ರಮ ಕಪ್ಪು ಅಡ್ಡ ಪಟ್ಟಿಗಳಿವೆ. ತಲೆ ಮತ್ತು ಕುತ್ತಿಗೆಯ ಮೇಲೆ ತಲೆಕೆಳಕಾದ ‘V’ ಆಕಾರದ ಗುರುತುಗಳಿವೆ. ರೇಗಿದಾಗ ಈ ಹಾವು ತನ್ನ ಕುತ್ತಿಗೆಯನ್ನು ಹಿಗ್ಗಿಸಿ ಹೆಡೆಯಂತೆ ಬಿಚ್ಚುತ್ತದೆ. ಆಗ ಈ ‘V’ ಗುರುತು ಹೆಡೆಯ ಮೇಲೆ ಕಾಣಿಸುತ್ತದೆ. ಚರ್ಮ ಏಣುಮಯ ಮತ್ತು ಹೊಳಪಿನಿಂದ ಕೂಡಿದೆ. ಅಗಲವಾದ ತಲೆ ದುಂಡು ಪಾಪೆಯ ದೊಡ್ಡ ಕಣ್ಣುಗಳಿವೆ. ಹೊಟ್ಟೆಯ ಭಾಗ ಬೂದುಬಿಳಪು.

ಸಂತಾನಾಭಿವೃದ್ಧಿ : ಈ ಹಾವಿನ ಸಂತಾನೋತ್ಪತ್ತಿ ಚಟುವಟಿಕೆಯ ವಿಷಯಗಳು ಹೆಚ್ಚು ತಿಳಿಯದು. ಮಾರ್ಚ-ಜೂನ್ ತಿಂಗಳುಗಳಲ್ಲಿ ಇದರ ಮೊಟ್ಟೆಗಳು ಮತ್ತು ಏಪ್ರೀಲ್‌ಸೆಪ್ಟೆಂಬರ್ ತಿಂಗಳುಗಳಲ್ಲಿ ಈ ಹಾವಿನ ಮರಿಗಳು ಕಂಡುಬಂದಿವೆ. ಒಮ್ಮೆಗೆ ೭ ರಿಂದ ೧೬ ಮೊಟ್ಟೆಗಳನ್ನಿಡುತ್ತವೆ.

ಸ್ವಭಾವ : ಈ ಹಾವಿನ ಸ್ವಭಾವ ಹೆಚ್ಚು ತಿಳಿಯದು. ಆಗಾಗ ಅಪರುಪವಾಗಿ ಹುಲ್ಲು ನಡುವೆ ಕಾಣಿಸಿಕೊಂಡರೂ ಇದು ಸ್ವಾಭಾವಿಕವಾಗಿ ನಿಶಾಚರಿ. ಬೇಸಿಗೆಯಲ್ಲಿ ಇವು ವಾಸಿಸುವ ಕೆರೆಕಟ್ಟೆಗಳು, ಹಳ್ಳ ಹೊಳೆಗಳು ಬತ್ತಿ ಒಣಗಿದಾಗ ನೆಲದಲ್ಲಿ ಬಿಲ ಮಾಡಿಕೊಂಡು ಗ್ರೀಷ್ಮ ನಿದ್ರೆ (ಈಸ್ವಿವೇಶಸ್‌)ಯ ನಿಷ್ಕ್ರಿಯೆಯಲ್ಲಿ ಅನಾನುಕೂಲ ಪರಿಸ್ಥತಿಯನ್ನು ಕಳೆಯುತ್ತವೆ. ರೇಗಿದಾಗ ತನ್ನ ಕತ್ತನ್ನು ಹೆಡೆಯಂತೆ ಹಿಗ್ಗಿಸುವುದರಿಂದ ಇದಕ್ಕೆ ಹಸಿರುನಾಗ ಎಂಬ ಹೆಸರು ಬಂದಿದೆ.

—- 

ಗಣ : ಒಫಿಡಿಯ
ಕುಟುಂಬ : ನೈಟ್ರಿಸಿಡೀ (Nitricidae)
ಉದಾ : ಆಲಿವ್
ಅಡಿಗಟ್ಟು ನೀರು ಹಾವು (Olive keel back)
ಶಾಸ್ತ್ರೀಯ ನಾಮ : ಅಟ್ರಿಟಿಯಮ್
ಸ್ಕೈಸ್ಟೊಸಮ್‌(Atretium schistosum)

089_69_PP_KUH

ವಿತರಣೆ : ಸಾಮಾನ್ಯವಾಗಿ ನೀರಿನ ಬಳಿ ಇದರ ವಾಸ. ಬೆಂಗಳೂರಿನ ಸುತ್ತಮುತ್ತ ಈ ಹಾವು ಹೆಚ್ಚಾಗಿ ಕಂಡು ಬರುತ್ತದೆ. ಕೆರೆಕೊಳಗಳಂತಹ ನಿಂತ ನೀರುಗಳಲ್ಲಿ ಏಡಿ, ಬಿಲ, ಮತ್ತಿತರ ಡೊಗರುಗಳಲ್ಲಿ ಇದರ ವಾಸ.

ಗಾತ್ರ : ಸಮಾರು ೨.೩ ಅಡಿ ಉದ್ದ.

ಆಹಾರ : ಗೊದಮೊಟ್ಟೆ ಮೀನು ಮತ್ತು ಕಪ್ಪೆಗಳು ಇದರ ಆಹಾರ. ಇದು ಸೊಳ್ಳೆಡಿಂಬಗಳನ್ನು ತಿನ್ನುತ್ತದೆ.

ಲಕ್ಷಣಗಳು : ತೆಳು ತಲೆಯ ಹಾವು. ದೇಹ ಸಾಕಷ್ಟು ದಪ್ಪನಾಗಿದೆ. ಮೋಟು ಮೂತಿ. ಸೀಳಿಕೆಗಳಂತಿರುವ ನಾಸಿಕಗಳು. ನಾಸಿಕಗಳು ತಲೆಯ ಮೇಲೆ ಸಾಕಷ್ಟು ಎತ್ತರದಲ್ಲಿವೆ. ಹಾವು ನೀರಿನಲ್ಲಿರುವಾಗ, ನೀರಿನಿಂದ ಹೊರಗಿದ್ದು ಹಿಸರಾಟಕ್ಕೆ ಅನುಕೂಲವಾಗಿದೆ. ಏಣಿರುವ ಹುರುಪೆಗಳಿರುವುದರಿಂದ ದೇಹ ಒರಟಾಗಿದೆ. ಬಾಲ ದೇಹದ ಕಾಲು ಭಾಗ ಆಥವಾ ಮೂರನೆಯ ಒಂದು ಭಾಗದಷ್ಟಿದೆ.

ಬೆನ್ನಿನ ಭಾಗ ಪೂರ್ತಿ ಸಮಾನವಾಗಿ ಆಲಿವ್‌ಹಸರು, ಹೊಟ್ಟೆಯ ಭಾಗ ಹಳದಿ, ಕೆಲವು ಸಾರಿ ಕಡು ಕೆಂಪು ಮಿಶ್ರಣವೂ ಇರಬಹುದು. ಹೆಣ್ಣು ಹಾವು ಗಂಡಿಗಿಂತ ದೊಡ್ಡದು.

ಸಂತಾನಾಭಿವೃದ್ಧಿ : ಮಳೆಗಾಲದಲ್ಲಿ ಮೊಟ್ಟೆ ಇಡುತ್ತವೆ. ಒಂದು ಸಾರಿಗೆ ೧೦ ರಿಂದ ೩೨ ಬಿಳಿ ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಗಳು ಮೃದುವಾಗಿಯೂ ೩೦ x ೩೫ ಮಿ. ಮೀ. ಉದ್ದವಾಗಿಯೂ ಇರುತ್ತವೆ.

ಸ್ವಭಾವ : ಈ ಹಾವುಗಳು ಹಗಲು ಮತ್ತು ರಾತ್ರಿ ಎರಡು ವೇಳೆಗಳಲ್ಲಿಯೂ ಚಟುವಟಿಕೆಯಿಂದಿರುತ್ತವೆ. ಹವೆ ಬಿಸಿಯಾದಾಗ ಶಾಖ ತಾಳಲಾರದೆ ಈ ಹಾವುಗಳು ಹುತ್ತಗಳ ಆಳಕ್ಕೆ ಕಲ್ಲುರಾಶಿಗಳೊಳಕ್ಕೆ, ಸಂದುಗೊಂದುಗಳಲ್ಲಿ ಅಡಗಿಕೊಳ್ಳುತ್ತವೆ. ಹವೆ ತಂಪು ತಿರುಗಿದಾಗ ಮೇಲೆ ಬಂದು ತಮ್ಮ ಚಟುವಟಿಕೆ ಆರಂಭಿಸುತ್ತವೆ. ಸಾಧುಸ್ವಭಾವದ ಹಾವುಗಳು ಕೆಣಕಿದಾಗ ಮಾತ್ರ ಕುತ್ತಿಗೆ ಉಬ್ಬಿಸಿ, ಬಾಯಿ ತೆರೆದು, ಹಿಂದಕ್ಕೆ ವಾಲಿ ಮುಂದೆ ಬಡಿಯಲು ಪ್ರಯತ್ನಿಸುತ್ತವೆ. ಕೆಲವು ಸಾರಿ ಬಾಲ ಅಲ್ಲಾಡಿಸುವುದೂ ಉಂಟು.