ಜೀವವಿಕಾಸದಲ್ಲಿ ಇತ್ತೀಚೆಗಷ್ಟೆ ಕಾಣಿಸಿಕೊಂಡು, ಉಳಿದೆಲ್ಲ ಪ್ರಾಣಿಗಳಿಗಿಂತ ಆಧುನಿಕವೂ ಹೆಚ್ಚು ಮುಂದುವರಿದವೂ ಎಂದು ಪರಿಗಣಿಸಲ್ಪಟ್ಟಿರುವ ಪಕ್ಷಿಗಳು ಮತ್ತು ಸಸ್ತಿನಿಗಳು ಈ ಜಗತ್ತಿನಲ್ಲಿ ಕಾಣಿಸಿಕೊಳ್ಳುವುದಕ್ಕೂ ೨೦೦ ಮಿಲಿಯ ವರ್ಷಗಳ ಹಿಂದೆಯ ಸರೀಸೃಪಗಳು ಅಸ್ತಿತ್ವದಲ್ಲಿದ್ದವು. ಅದ್ದರಿಂದ ಸರೀಸೃಪಗಳನ್ನು ಪ್ರಾಚೀನ ಪ್ರಾಣಿಗಳೆಂದು, ಕನಿಷ್ಠ ಪಕ್ಷಿಗಳು ಮತ್ತು ಸಸ್ತಿಗಳಿಗಿಂತಲೂ ಪ್ರಾಚೀನ ಎಂದು ಒಪ್ಪಿ ಕೊಳ್ಳಬದಾದರೂ, ಅದೊಂದೇ ಕಾರಣದಿಂದ ಅವನ್ನು ಹಿಂದುಳಿದ ಆದಿಮ ಪ್ರಾಣಿಗಳು ಎಂದು ಪರಿಗಣಿಸುವುದು ತಪ್ಪಾಗುತ್ತದೆ. ಈ ಆದಿಮ ಪ್ರಾಣಿಗಳು ತಾವು ವಾಸಿಸುವ ವಸತಿಗಳಿಗೆ ಹೊಂದಿಕೊಳ್ಳುವಲ್ಲಿ ತೋರುವ ಅಸಾಮಾನ್ಯ ಪದ್ಧತಿಗಳು ಮತ್ತು ಹೇಹರಚನೆಗಳು ಅದ್ಭುತ ! ಅತ್ಯಂತ ಮುಂದುವರಿದ ಪ್ರಾಣಿಗಳೆಂದು ಪ್ರಸಿದ್ಧವಾದ ಸಸ್ತನಿಗಳು ಜೀವಿಸಲಾರದಂತಹ ಪರಿಸರ, ಪರಿಸ್ಥಿತಿಗಳಲ್ಲಿ ಉದಾಹರಣೆಗೆ, ಪ್ರಪಂಚದ ಅತ್ಯಂತ ಒಣವಾತಾವರಣವನ್ನು ಹೊಂದಿದ ಸುಡು ಮರಳಿನ ಮರಳು ಕಾಡುಗಳಂತಹ ವಿಕೋಪ ವಾತಾವರಣಗಳಿಗೂ ಹೊಂದಿಕೊಂಡು ಯಶಸ್ವಿಯಾಗಿ ಬದುಕಿವೆ, ಬದುಕುತ್ತಿವೆ.

ಈ ಯಶಸ್ವಿ ಬದುಕಿನ ಗುಟ್ಟು ಬಹುಶಃ ನಾವು ಕೀಳು ಲಕ್ಷಣ ಎಂದು ಭಾವಿಸುವ ತಂಪು ರಕ್ತ ಗುಣ. ಈ ವಾದ ವಾಸ್ತವವಾಗಿ ತಪ್ಪು ದಾರಿಗೆಳೆಯುವ ಭಾವನೆ. ಮನುಷ್ಯ ತನ್ನ ಮೂಗಿನ ನೇರಕ್ಕೆ ನೋಡುವ ದೃಷ್ಟಿಕೋನದ ಪ್ರಭಾವ ಇದು! ನಿಜ ಹೇಳಬೇಕೆಂದರೆ ಸರೀಸೃಪಗಳೂ ಸಹ ಮನುಷ್ಯನಷ್ಟೇ ಚಟುವಟಿಕೆಯ ಜೀವನ ನಡೆಸುತ್ತವೆ. ಅವುಗಳ ದೇಹದ ಉಷ್ಣತೆ ಬಹಳವಾಗಿ ಮನುಷ್ಯನ ದಕ್ಷ ದೇಹ ಉಷ್ಣತೆಯನ್ನು ಹೊಲುತ್ತದೆ. ಆದರೆ ಮನುಷ್ಯ (ಸಸ್ತನಿಗಳು) ಮತ್ತು ಸರೀಸೃಪಗಳು ತಮ್ಮ ದೇಹದ ಉಷ್ಣತೆಯನ್ನು ಗಳಿಸಿಕೊಳ್ಳುವ ವಿಧಾನಗಳು ಭಿನ್ನ. ಆಂತರಿಕವಾಗಿ, ಅಂದರೆ ತಾನು ಸೇವಿಸುವ ಆಹಾರದಿಂದ ಪಡೆಯುವ ಶಕ್ತಿಯ ಬಹುಭಾಗವನ್ನು ಉರಿಸಿ ಮನುಷ್ಯ ತನ್ನ ಉಷ್ಣತೆಯ ಅಗತ್ಯಗಳನ್ನು ಪೋರೈಸಿಕೊಳ್ಳುತ್ತಾನೆ. ಸರೀಸೃಪಗಳು ಇದಕ್ಕೆ ಭಿನ್ನವಾಗಿ ಬಿಸಿಲು ಕಾಯಿಸಿ ಇಲ್ಲವೇ ಬಿಸಿ ನೀರಿನಲ್ಲಿ ಈಜುತ್ತಾ ಶಾಖವನ್ನು ಪಡೆಯುತ್ತವೆ. ಅದ್ದರಿಂದ ತಮ್ಮ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಸರೀಸೃಪಗಳು ಹೆಚ್ಚು ಆಹಾರವನ್ನು ಸೇವಿಸ ಬೇಕಾಗಿಲ್ಲ ಅಂದರೆ ತನ್ನಷ್ಟೇಗಾತ್ರದ ಸಸ್ತನಿಯೊಂದು ಬದುಕುಳಿಯಲು ಬಳಸಬೇಕಾಗುವ ಆಹಾರದ ಕಡಿಮೆ ಭಾಗಾಂಶವನ್ನು ಬಳಸಿ ಸರೀಸೃಪಗಳು ಬದುಕುಳಿಯಬಲ್ಲವು. ಬದುಕುಳಿಯಲು ಬೇಕಾಗುವಷ್ಟು ಉಷ್ಣತೆಯನ್ನು ಪರಿಸರದಿಂದ ಗಳಿಸಿಕೊಳ್ಳಬಹುದಾದ ಸಾದ್ಯತೆಯಿಂದಾಗಿ ಸರೀಸೃಪಗಳು ಆಹಾರ ವಿರಳವಾದ ತಾಣಗಳಲ್ಲಿಯೂ ಬದುಕುಳಿಯಬಲ್ಲವು.

ಆಮೆಗಳು, ಮೊಸಳೆಗಳು, ಹಾವು ಹಲ್ಲಿಗಳನ್ನೊಳಗೊಂಡ ಸರೀ ಸೃಪಗಳ ಗುಂಪು ತಮ್ಮ ಪೂರ್ವಜರಾದ ಉಭಯಚರಿಗಳಿಂದ ಒಂದು ನಿರ್ಣಾಯಕ ವ್ಯತ್ಯಾಸ ತೋರುತ್ತವೆ. ಸರೀಸೃಪಗಳ ಹೊರ ಚರ್ಮ ಜಲಾಬೇದ್ಯವಾದುದು. ದೇಹದ ತೇವಾಂಶ ಕಳೆದುಹೋಗುವುದನ್ನು ತಡೆಯುವ ಹುರುಪೆಗಳ ಹೊದಿಕೆ ಸರೀಸೃಪಗಳಿಗಿದೆ. ಅವುಗಳ ಮೊಟ್ಟೆಗಳಿಗೂ ತೇವಾಂಶ ಸಂರಕ್ಷಕ ಚಿಪ್ಪುಗಳಿವೆ. ಈ ಹೊಂದಾಣಿಕೆಗಳಿಂದಾಗಿ ಸರೀಸೃಪಗಳಿಗೆ ನೀರಿನಿಂದ ಮುಕ್ತ ಜೀವನವನ್ನು ಸಾಧ್ಯ ಮಾಡಿಕೊಟ್ಟಿದೆ. ಆದ್ದರಿಂದ ಅವು ನೀರಿನಲ್ಲಿ ಅಥವಾ ನೀರಿನ ಬಳಿ ವಾಸಿಸಬೇಕಾದ ಅಗತ್ಯವಿಲ್ಲ. ಮರಳುಗಾಡುಗಳು, ಬೆಟ್ಟಗಳು, ಹುಲ್ಲುಗಾವಲು, ಕಾಡುಗಳು, ಸಿಹಿನೀರು ಹಾಗೂ ಉಪ್ಪು ನೀರಿನಂತಹ ಅನೇಕ ವಿಧವಾದ ವಸತಿಗಳಲ್ಲಿ ವಾಸಿಸಬಲ್ಲವು. ನೀರಿನ ಅವಲಂಬನ ಜೀವನದಿಂದ ಮುಕ್ತವಾದ ಈ ಪ್ರಾಣಿಗಳು ನೆಲದ ಮೇಲಿನ ಅಪಾರ ಅನುಕೂಲಗಳನ್ನು ಬಳಸಿಕೊಳ್ಳಲು ಸಿದ್ಧವಾದವು. ಏಕೆಂದರೆ ಸರೀಸೃಪಗಳು ನೆಲದ ಮೇಲೆ ವಾಸಿಸಲು ಆರಂಭಿಸಿದಾಗ ಅವುಗಳೊಡನೆ ಸ್ಪರ್ಧಿಸಲು ಸಸ್ತನಿಗಳಂತಹ ಅಸಾಮಾನ್ಯಪ್ರಾಣಿಗಳು ಇರಲಿಲ್ಲ. ಅಂದು ಸರೀಸೃಪಗಳ ಯುಗ ಆರಂಭವಾಯ್ತು. ೨೮೦ ಮಿಲಿಯ ವರ್ಷಗಳ ಹಿಂದೆ ಆರಂಭವಾದ ಸರೀಸೃಪಗಳ ಯುಗ ೬೫ ಮಿಲಿಯ ವರ್ಷಗಳ ಹಿಂದಿನವರೆಗೆ ಸುಮಾರು ೨೦೦ ಮಿಲಿಯ ವರ್ಷಗಳವರೆಗೆ ಅವ್ಯಾಹತವಾಗಿ ಮುಂದುವರಿಯಿತು. ಅನುಕೂಲವಾದ ಈ ಅವಧಿಯಲ್ಲಿ ಸರೀಸೃಪಗಳು ಅನೇಕ ಆಕಾರ-ವಿಕಾರಗಳನ್ನು ತಾಳಿದವು. ಭಿನ್ನ ವಿಭಿನ್ನ ಪರಿಸರಕ್ಕೆ ತಮ್ಮ ಜೀವನವನ್ನು ಅಳವಡಿಸಿಕೊಂಡು, ವಿವಿಧ ಗಾತ್ರ ಬೆಳೆದವು; ತೆವಳಿದವು, ಓಡಿದವು, ಹಾರಿದವು, ಈಜಿದವು, ಬಿಲಹೊಕ್ಕವು. ಅತ್ಯಂತ ಸಣ್ಣ ಸರೀಸೃಪಗಳೆಂದು ಹೇಳಬಹುದಾದ ಹಲ್ಲಿಗಳಿಂದ ಆ ಕಾಲಕ್ಕೆ ಬದುಕಿ ಮೆರೆದ ದೈತ್ಯಾಕಾರದ ಡೈನೊಸಾರ್ಗಳು ಕಾಣಿಸಿಕೊಂಡವು.

ಕ್ರಿಟೀಷಿಯಸ್ ಅವಧಿಯ ಅಂತ್ಯದಲ್ಲಿ ಅಂದರೆ ಸುಮಾರು ೬೫ ಮಿಲಿಯ ವರ್ಷಗಳವರೆಗೆ ಹಿಂದೆ, ಪ್ರಾಯಶಃ ಅಂದಿನ ವಾಯುಗುಣದ ನಾಟಕೀಯ ಬದಲಾವಣೆಗಳಿಂದಾಗಿ ದೈತ್ಯೋರಗ ಡೈನೊಸಾರ್ಗಳು ಕಣ್ಮರೆಯಾದವು. ಅಂದಿನ ಆ ಪ್ರಳಯದಲ್ಲಿ ಅಳಿದು ಉಳಿದವೆಂದರೆ ಹಾವು ಹಲ್ಲಿಗಳಂತಹ ಸಣ್ಣ ಪುಟ್ಟ ಪ್ರಾಣಿಗಳು. ಅವು ಉಳಿದು ಊರ್ಜಿತಗೊಂಡು, ಇಂದು ಬದುಕುಳಿದ ೬೫೪೭ ಸರೀಸೃಪಗಳಲ್ಲಿ ಹಾವು ಹಲ್ಲಿಗಳದೇ ಇಂದು ಸಿಂಹಪಾಲು.

ಸರೀಸೃಪಗಳ ದೇಹದ ಮೇಲೆ ಕಾಣಿಸಿಕೊಂಡ ಹುರುಪೆಗಳ ಹೊದಿಕೆ ಅಭೇಧ್ಯ ಚರ್ಮ ಒಂದು ಮುಖ್ಯ ಲಕ್ಷಣ. ಇದು ಅವುಗಳ ದೇಹ ಒಣಗುವುದನ್ನು ತಡೆಯುತ್ತದೆ. ಎಲ್ಲಾ ಕಶೇರುಕಗಳಲ್ಲಿಯೂ ಇರುವಂತೆ ಇವುಗಳ ಚರ್ಮದಲ್ಲಿಯೂ ಒಳಗಿನ ಡರ್ಮಿಸ್ ಮತ್ತು ಹೊರಗಿನ ಎಪಿಡರ್ಮಿಸ್ ಎಂಬ ಎರಡು ಪದರಗಳಿವೆ. ಎಪಿಡರ್ಮಿಸ್ ಕೆರಾಟಿನ್ ಎಂಬ ವಸ್ತುವಿನಿಂದಾದ ರಚನೆ. ಸರೀಸೃಪಗಳಲ್ಲಿ ಈ ರಚನೆ ತಟ್ಟಿಗಳು ಅಥವಾ ಹುರುಪೆಗಳಾಗಿ ರೂಪುಗೊಂಡಿದೆ. ಸರೀಸೃಪಗಳ ಹುರುಪೆಗಳು ತಮ್ಮ ಮೇಲೆಯೆ ಮಡಚಿಕೊಂಡು, ಮನೆಯ ಹೆಂಚುಗಳಂತೆ, ಒಂದರ ತುದಿ ಇನ್ನೊಂದರ ತುದಿಯ ಮೇಲಿರುವಂತೆ ಜೋಡಿಸಲ್ಪಟ್ಟಿವೆ. ಇದು ದೇಹಕ್ಕೆ ರಕ್ಷಣೆಯನ್ನು ಒದಗಿಸುತ್ತದೆ. ಸರೀಸೃಪಗಳ ಹುರುಪೆಗಳು ಮೀನುಗಳ ಹುರುಪೆಗಳನ್ನು ಹೋಲಿದರೂ ರಚನೆಯಲ್ಲಿ ಭಿನ್ನವಾಗಿವೆ. ಮೀನುಗಳ ಹುರುಪೆಗಳು ಚರ್ಮದೊಂದಿಗೆ ಸಡಿಲವಾಗಿ ಅಂಟಿಕೊಂಡ ಗಾಜಿನ ಫಲಕಗಳಂತಿರುವ ರಚನೆಗಳು. ಆದರೆ ಸರೀಸೃಪಗಳ ಹುರುಪೆಗಳು ಚರ್ಮದ ಒಂದು ಬಾಗ. ಸರೀಸೃಪ ಹುರುಪೆಗಳು ಸುಲಭವಾಗಿ ಮಣಿಯುವ ಚರ್ಮದ ಮಡಿಕೆಗಳ ನೆರವಿನಿಂದ ಅಂಟಿಕೊಂಡಿವೆ. ಹುರುಪೆಗಳ ನಡುವೆಯೂ ಪರಸ್ಪರ ಸಂಬಂಧವಿದೆಯಾಗಿ ಸರೀಸೃಪಗಳು ತಮ್ಮ ಹೊರ ಚರ್ಮವನ್ನು ಸುಲಭವಾಗಿ ಕಳಚಿ ಹೊರ ಚರ್ಮವನ್ನು ಹೊಸದಾಗಿ ಬೆಳೆಸಿಕೊಳ್ಳುತ್ತವೆ. ಇದೇ ಹಾವುಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಪೊರೆ ಬಿಡುವ ಕ್ರಿಯೆ. ಸರೀಸೃಪಗಳು ತಮ್ಮ ಜೀವಿತ ಕಾಲದಲ್ಲಿ ಅನೇಕ ಸಾರಿ ಪೊರೆ ಕಳಚುತ್ತವೆ. ಈ ಪೊರೆ ಒಂದು ಅಖಂಡ ರಚನೆಯಾಗಿ ಪರಿಪೂರ್ಣವಾಗಿ ಕಳಚಲ್ಪಡುತ್ತದೆ.

ಸರೀಸೃಪಗಳಲ್ಲಿ ಅನೇಕ ವಿಧವಾದ ಹುರುಪೆಗಳಿವೆ. ಅವು ಸಣ್ಣ ತಟ್ಟೆಗಳಂತಿದ್ದು ಒಂದರ ಮೇಲೊಂದರಂತೆ ಹೊದಿಸಿದ್ದು ಅವುಗಳ ಬಿಡಿ ಅಂಚುಗಳು ಮೀನು ಹುರುಪೆಗಳಂತೆ ದುಂಡಾಗಿರಬಹುದು, ಕೋನಾಕಾರವಾಗಿರಬಹುದು, ಅಥವಾ ಮುಳ್ಳುಗಳಂತೆ ಚಾಚಿರಬಹುದು. ಮೊಸಳೆಗಳಲ್ಲಿರುವಂತೆ ಹುರುಪೆಗಳು ಪ್ರಶಲ್ಕಗಳಾಗಿರಬಹುದು. ಹಾವು ಹಲ್ಲಿಗಳ ಮೇಲೆ ದೊಡ್ಡ-ದೊಡ್ಡ ಹುರುಪೆಗಳಿದ್ದು ಒಂದಕ್ಕೊಂದು ಅಂಟಿಕೊಂಡಿರಬಹುದು. ಹಾವುಗಳ ಉದರ ಭಾಗದ ಹುರುಪೆಗಳು ಅಗಲವಾಗಿ ಹರಡಿದ್ದು, ಪಕ್ಕದ ತುದಿಯ ಅಂಚುಗಳು ಕೆಳಕ್ಕೆ ಬಾಗಿ ನೆಲದ ಮೇಲೆ ಹಿಡಿತ ಒದಗಿಸುವಲ್ಲಿ ನೆರವಾಗಿ ಸಂಚಲನೆಗೆ ಸಹಾಯಮಾಡುತ್ತವೆ, ಕೆಲವು ಸರೀಸೃಪಗಳಲ್ಲಿ ಹುರುಪೆಗಳ ಮೇಲೆ ತಂತುಗಳಂತಹರಚನೆಗಳಿರಬಹುದು, ಗೌಳಿಗಳ ಅಂಗಾಲುಗಳಲ್ಲಿ ಈ ತಂತುಗಳು ಫಲಕಗಳಾಗಿ, ಗಾಜಿನಂತೆ ನಯವಾದ ಗೋಡೆಗಳನ್ನು ಹತ್ತಲು ಮತ್ತು ಮೇಲ್ಭಾವಣಿಗಳಿಗೆ ನೇತುಬಿದ್ದು ತಲೆಕೆಳೆಗಾಗಿ ಓಡಾಡಲು ಸಹಕರಿಸುತ್ತವೆ.

ಹಲ್ಲಿ ಆಮೆ, ಮೊಸಳೆಗಳ ಕಾಲು ಬೆರಳುಗಳಿಗೆ ನಖಗಳಿವೆ. ಅಮೆ ಮತ್ತು ಮೊಸಳೆಗಳ ನಖಗಳಿಗೆ ಮೇಲೆ ಮತ್ತು ಕೆಳಗೆ ಕೊಂಬಿನ ಪದರಗಳಿವೆ. ಆದರೆ ಹಲ್ಲಿನ ನಖಗಳಿಗೆ ಮೇಲಿನ ಕೊಂಬು ಹೊದಿಕೆ ಮಾತ್ರವಿದೆ. ಈ ಪ್ರಾಣಿಗಳು ನಡೆದಾಡಿದಾಗ ನಲಕ್ಕೆ ತಾಗುವ ನಖಬಾಗವು ಸವೆಯುತ್ತದೆ ಮತ್ತು ಈ ಸವೆತ ಅವುಗಳನ್ನು ಚೂಪಾಗಿ ಇಡುತ್ತದೆ.

ಅನೇಕ ಸರೀಸೃಪಗಳಲ್ಲಿ ಚರ್ಮದ ಡರ್ಮಿಸ್ ಒಳ ಪದರದಲ್ಲಿ ಅಸ್ಟಿಯೊಡರ್ಮಗಳೆಂಬ ತಟ್ಟೆಯಾಕಾರದ ಮೂಳೆ ರಚನೆಗಳಿವೆ. ಇವು ಒಳಪದರ ಕೆಳಗಿನಿಂದ ಮೇಲಕ್ಕೆ ಬೆಳೆಯುತ್ತವೆ. ಮತ್ತು ಮೇಲಿರುವ ಹುರುಪೆಗಳಿಗೆ ಭದ್ರವಾದ ಆಧಾರವನ್ನು ಒದಗಿಸುತ್ತವೆ. ಹಲ್ಲಿಗಳಲ್ಲಿ ದೇಹದ ಮೇಲೆಲ್ಲಾ ಹರಡಿದಂತೆ ಅಸ್ಟಿಯೊಡರ್ಮಗಳಿವೆ. ಆದರೆ ಮೊಸಳೆಗಳಲ್ಲಿ ಅಸ್ಟಿಯೊಡರ್ಮ ಫಲಕಗಳು ತಲೆ, ಬೆನ್ನು ಮತ್ತು ಬಾಲದ ಮೇಲೆ ಮಾತ್ರ ಇದ್ದು ಏಣು ರಚನೆಗಳಿಗೆ ಕಾರಣವಾಗಿವೆ. ಆಮೆಗಳಲ್ಲಿ ಅಸ್ಟಿಯೊಡರ್ಮಗಳು ವ್ಯಪಕವಾಗಿ ಬೆಳೆದು ಒಂದಕ್ಕೊಂದು ಕೂಡಿಕೊಂಡು ಆಮೆಚಿಪ್ಪಿನ ಮೂಲ ರಚನೆಗಳಾಗಿವೆ. ಆಮೆ ಚಿಪ್ಪಿನ ಮೇಲೆ ಕಾಣಬರುವ ಗಾಜಿನಂತೆ ಹೊಳೆಯುವ ತಟ್ಟೆಗಳು ವಾಸ್ತವವಾಗಿ ಮಾರ್ಪಟ್ಟ ಹುರುಪೆಗಳು.

ಸರೀಸೃಪಗಳಲ್ಲಿ ದೇಹದ ಮೇಲೆ ನಿರ್ಜೀವ ಕೊಂಬಿನ ಹುರುಪೆ ಹೊದಿಕೆ ಇದ್ದರೂ ಅವುಗಳ ಚರ್ಮ ಸಂವೇದನಾಶೀಲವಾಗಿದೆ. ಸರೀಸೃಪಗಳ ಚರ್ಮದಲ್ಲಿ ಹೆಚ್ಚು ಗ್ರಂಥಿಗಳಿಲ್ಲ ಮತ್ತು ಉಭಯಚರಿಗಳಂತೆ ಇವುಗಳ ಚರ್ಮವನ್ನು ಒದ್ದೆಯಾಗಿ ಇಡಬೇಕಾದ ಅಗತ್ಯ ಇಲ್ಲದೆ ಗ್ರಂಥಿಗಳು ಕಳೆದು ಹೋಗಿರಬಹುದು. ಅನೇಕ ಹಲ್ಲಿಗಳು ಮತ್ತು ಆಮೆಗಳ ಹಿಂಗಾಲುಗಳ ಬಳಿ ಕೆಲವು ಗ್ರಂಥಿಗಳಿವೆ. ಅವುಗಳ ಸ್ರಾವಿಕೆಯು ಲಿಂಗಾರ್ಷಕ ಕ್ರಿಯೆಯನ್ನು ನಿರ್ವಹಿಸುವಂತೆ ತೋರುತ್ತದೆ. ಮೊಸಳೆಗಳ ಕತ್ತಿನಲ್ಲಿರುವ ಸುವಾಸನಾ ಗ್ರಂಥಿಗಳ ಸ್ರಾವಿಕೆಯೂ ಪ್ರಾಯಶಃ ಅವುಗಳ ಲೈಂಗಿಕ ವರ್ತನೆಯನ್ನು ನಿಯಂತ್ರಿಸಬಹುದು ಎಂದು ಹೇಳುತ್ತಾರೆ.

ಹಾವುಗಳ ವಿನಹ ಉಳಿದೆಲ್ಲ ಸರೀಸೃಪಗಳಿಗೆ ಎರಡು ಜೊತೆ ಕಾಲುಗಳಿವೆ. ರಚನೆಯಲ್ಲಿ ಅವು ಸಸ್ತನಿ ಕಾಲುಗಳನ್ನು ಹೋಲಿದರೂ ಅವು ದೇಹಕ್ಕೆ ಕೀಲಿಕೊಂಡಿರುವ ವಿಧಾನ ಭೀನ್ನವಾಗಿದೆ. ಅವು ದೇಹದ ಪಕ್ಕಗಳಲ್ಲಿ ಕೀಲಿಕೊಂಡಿರುವುದರಿಂದ ಅವುಗಳ ಪಾದಗಳು ಮುಂದಕ್ಕೆ ಚಾಚಿರುವ ಬದಲು ಪಕ್ಕಕ್ಕೆ ಚಾಚಿರುತ್ತವೆ. ಈ ವ್ಯವಸ್ಥೆಯಿಂದಾಗಿ ಸರೀಸೃಪಗಳ ಸಂಚಲನೆ ವಿಕಾರವಾಗಿ ಕಾಣುತ್ತದೆ.

ಸರೀಸೃಪಗಳ ಆಸ್ಥಿಪಂಜರ ಒಂದು ವಿಶಿಷ್ಟ ರೀತಿಯಲ್ಲಿ ಮಾರ್ಪಟ್ಟಿದೆ. ಆಮೆಗಳಲ್ಲಿ ಬೆನ್ನು ಮೂಳೆ ಮತ್ತು ಪಕ್ಕೆಲಬುಗಳು ಚಿಪ್ಪಿನ ಒಳಭಾಗದೊಂದಿಗೆ ಕೂಡುಕೊಂಡಿವೆ. ಕಡಲಾಮೆಗಳಲ್ಲಿ ಕಾಲುಗಳು ದೋಣಿ ಹುಟ್ಟುಗಳಂತೆ ಮಾರ್ಪಟ್ಟಿವೆ. ಹಾವುಗಳ ಜೀವನ ಕ್ರಮದಿಂದ ಕಾಲುಗಳು ಕಳೆದು ಹೋಗಿವೆ. ಇದರ ಫಲಿತಾಂಶ ಇಡೀ ದೇಹವು ಸಂಚಲನಾಂಗವಾಗಿ ಮಾರ್ಪಟ್ಟಿದೆ. ಹಾವುಗಳಲ್ಲಿ ಕಶೇರು ಮಣಿಗಳ ಸಂಖ್ಯೆಯೂ ವೃದ್ಧಿಯಾಗಿದೆ. ಕೆಲವು ಹಾವುಗಳಲ್ಲಿ ೪೦೦ ಕ್ಕೂ ಹೆಚ್ಚು ಕಶೇರು ಮಣಿಗಳಿವೆ.

ಹಾವುಗಳ ಬಾಯಿ ವಿಪರೀತ ಅಗಲವಾಗಿದೆ. ದವಡೆಗಳ ನಿರ್ಮಾಣದಲ್ಲಿಯೂ ಮಾರ್ಪಾಡಾಗಿದೆ. ಅವುಗಳ ಅರ್ಧಭಾಗಗಳು ಮುಂದಿನ ತುದಿಯಲ್ಲಿ ಉಳಿದ ಕಶೇರುಕಗಳಂತೆ ಕೂಡಿರದೆ ಅಸ್ಥಿಬಂಧಗಳಿಂದ ಕೂಡಿಕೊಂಡಿವೆ. ಇದರಿಂದ ಅವುಗಳನ್ನು ಪಕ್ಕಕ್ಕೇ ಹಿಂಜಿ ಹಿಗ್ಗಿಸಬಹುದು. ಹೀಗಾಗಿ ಹಾವುಗಳು ತನ್ನ ಗಾತ್ರದ ಎರಡರಷ್ಟು ಗಾತ್ರದ ಆಹಾರ ಜೀವಿಗಳನ್ನು ನುಂಗುವುದು ಸಾಧ್ಯ.

ಸರೀಸೃಪಗಳ ಹಲ್ಲುಗಳು ಹೂಟದಂತಿದ್ದು ದವಡೆಗಳಿಗೆ ಅಂಟಿಕೊಂಡಿವೆ. ಹಲ್ಲುಗಳು ಹಿಂದಕ್ಕೆ ಬಾಗಿದ್ದು ಆಹಾರವನ್ನು ಅಗಿಯುವುದಕ್ಕಿಂತ ಹೆಚ್ಚಾಗಿ ಆಹಾರ ಜೀವಿ ಬಾಯಿಂದ ಸುಲಭವಾಗಿ ನುಸುಳಿ ಹೋಗದಂತೆ ಭದ್ರವಾಗಿ ಹಿಡಿಯಲು ಅನುಕೂಲವಾಗಿವೆ. ಆಮೆಗಳ ದವಡೆಗಳಲ್ಲಿ ಹಲ್ಲುಗಳಿಲ್ಲ. ಬದಲು ದವಡೆಗಳ ಮೇಲೆ ಕೊಂಬಿನ ಪದಾರ್ಥದ ಹೊದಿಕೆ ಇದೆ. ವಿಷದ ಹಾವುಗಳಲ್ಲಿ ಕೆಲವು ಹಲ್ಲುಗಳು ಉದ್ದವಾಗಿದ್ದು ಆಹಾರ ಜೀವಿಗೆ ವಿಷವನ್ನು ತಲುಪಿಸಲು ಇಂಜೆಕ್ಷನ್ ಸೂಜಿಗಳಂತಿವೆ. ಇವುಗಳನ್ನು ವಿಷದಂತಗಳೆನ್ನುತ್ತಾರೆ.

ಸಸ್ತನಿಗೆ ಹೋಲಿಸಿದರೆ ಸರೀಸೃಪಗಳ ಮಿದುಳು ಗಾತ್ರದಲ್ಲಿ ಸ್ಸಾಪೇಕ್ಷಿಯವಾಗಿ ಸಣ್ಣದು. ಸರೀಸೃಪಗಳನ್ನು ಬುದ್ಧಿವಂತ ಪ್ರಾಣಿಗಳೆಂದು ಹೇಳುವಂತಿಲ್ಲವಾದರೂ ಅವುಗಳಿಗೆ ಉತ್ತಮವೆಂದು ಹೇಳಬಹುದಾದ ಸಂವೇದನಾಂಗಗಳಿವೆ. ಸರೀಸೃಪಗಳಿಗೆ ಹೊರಕಿವಿಗಳಿಲ್ಲ. ಆದರೆ ಒಳಕಿವಿಗೆ ಸಂಪರ್ಕ ಕಲ್ಪಿಸುವ ಸಂವೇದನಾ ಶಕ್ತಿ ಇರುವ ನರಕೋಶಗಳು, ನರಗಳು ಆ ಕುಳಿಗಳ ಭಿತ್ತಿಯಲ್ಲಿದೆ. ಈ ನರಗಳು ಕುಳಿಗಳನ್ನು ತಲುಪುವ ಕಂಪನಾ ಅಲೆಗಳನ್ನು ಗ್ರಹಿಸಿ ಮಿದುಳಿಗೆ ತಲುಪಿಸುತ್ತವೆ. ಹಾವುಗಳಲ್ಲಿ ಈ ಕುಳಿಗಳೂ ಕೂಡ ಇಲ್ಲ. ಆದರೆ ಹಾವುಗಳು ಕುಳಿಗಳಿಲ್ಲದ ನ್ಯೂನತೆಯನ್ನು ಬೇರೊಂದು ರೀತಿಯಲ್ಲಿ ಪರಿಹರಿಸಿಕೊಂಡಿವೆ. ನೆಲದ ಮೂಲಕ ಹರಡುವ ಕಂಪನಾಲೆಗಳನ್ನು ಗ್ರಹಿಸಿ ಒಳಕಿವೆಗೆ ಒಯ್ದು ಮುಟ್ಟಿಸುವ ಕ್ರಿಯೆಯನ್ನು ಕೆಳದವಡೆಯ ಮೂಳೆಗಳು ವಹಿಸಿಕೊಂಡಿವೆ. ಹಾವುಗಳು ಶಬ್ಧವನ್ನು ಕೇಳಬೇಕಾದರೆ ಅವುಗಳ ಕೆಳದವಡೆಯು ನೆಲಕ್ಕೆ ತಾಗಿರಬೇಕು!

ಸರೀಸೃಪಗಳ ನಾಸಿಕ ರಂಧ್ರಗಳು ಉಸಿರಾಡಿಸಲು ಸಹಾಯ ಮಾಡುವುದರ ಜೊತೆಗೆ ಘ್ರಾಣೇಂದ್ರೀಯಗಳಾಗಿಯೂ ಕೆಲಸ ಮಾಡುತ್ತವೆ. ಅನೇಕ ಸರೀಸೃಪಗಳಲ್ಲಿ ನಾಸಿಕ ನಾಲೆಗೆ ತಾಗುವಂತೆ ಜಾಕಬ್ ಸನ್ನರ ಅಂಗ ಎಂಬ ರಚನೆಯೊಂದಿದ್ದು ಅದು ರಾಸಾಯನಿಕ ಸಂವೇದನೆಗೆ ಪರಿಣಿತವಾಗಿ, ಪ್ರಾಣಿಗಳ ವಾಸನೆಯನ್ನು ಗ್ರಹಿಸುವ ಶಕ್ತಿ ಅಧಿಕಕೊಂಡು ಸ್ಸೂಕ್ಷ್ಮವಾಸನೆಯನ್ನು ತಿಳಿಯುವಲ್ಲಿ ಸಹಾಯವಾಗಿದೆ. ಈ ಪ್ರಾಣಿಗಳು ಉದ್ದವಾದ ತಮ್ಮ ನಾಲಿಗೆಯನ್ನು (ಹಾವುಗಳ ನಾಲಿಗೆ ತುಂಬ ಉದ್ದವೂ ಮುಂತುದಿಯ ಇಬ್ಭಾಗವಾಗಿಯೂ ಇದೆ) ಹೊರಕ್ಕೆ ಚಿಮ್ಮಿ ಚಾಚಿ, ಚಲಿಸುವಾಗ ಸುತ್ತಲ ಗಾಳಿಯಲ್ಲಿನ ರಾಸಾಯನಿಕ ಅಣುಗಳನ್ನು ಸಂಗ್ರಹಿಸುತ್ತವೆ. ಜಾಕಬ್ ಸನ್‌ರ ಅಂಗ ರಾಸಾಯನಿಕ ಅಣುಗಳ ವಿಶ್ಲೇಷಣೆಗೆ ವಿಶೇಷವಾಗಿ ಪರಿಣಿತಿ ಹೊಂದಿರುವಂತೆ ತೋರುತ್ತದೆ. ಇದರ ಸಹಾಯದಿಂದ ಹಲ್ಲಿಗಳು ನೀರಿರುವ ಜಾಗವನ್ನು ಕಂಡುಕೊಳ್ಳುತ್ತವೆ.

ಸರೀಸೃಪಗಳ ಕಣ್ಣುಗಳು ಇತರ ಕಶೇರುಕಗಳ ಕಣ್ಣುಗಳಂತೆಯೇ ಇವೆ. ಹಲ್ಲಿಗಳು ಮತ್ತು ಆಮೆಗಳ ಕಣ್ಣುಗಳ ಒಳಗೆ ಅನೇಕ ಸಣ್ಣ ಮೂಳೆ ಫಲಕಗಳಿದ್ದು ಕಣ್ಣುನ್ನು ಒಂದು ವಸ್ತುವಿನ ಮೇಲೆ ಕೇಂದ್ರೀಕರಿಸುವ ಕ್ರಿಯೆಯಲ್ಲಿ ಸಹಕರಿಸುತ್ತವೆ. ಕಣ್ಣುಗಳನ್ನು ಇಷ್ಟಬಂದಂತೆ ತಿರುಚಿ ವಿಕಾರಗೊಳಿಸಿ, ಮಸೂರಕ್ಕೂ ಅಕ್ಷಿಪಟಲಕ್ಕೂ ನಡುವಿನ ದೂರವನ್ನು ಬದಲಿಸಿ, ವಸ್ತು ದೂರವಿರಲಿ, ಹತ್ತಿರವಿರಲಿ ಸ್ಪಷ್ಟವಾಗಿ ನೋಡಬಹುದಾಗಿದೆ. ಹಾವುಗಳಲ್ಲಿ ಕಣ್ಣು ರೆಪ್ಪೆಗಳು ಶಾಶ್ವತವಾಗಿ ಸ್ಥಿರವಾಗಿದ್ದು ಕಣ್ಣನ್ನು ಮುಚ್ಚಲಾರದಂತಾಗಿ ಅವುಗಳ ಕಣ್ಣುಗಳು ಸದಾ ತೆರೆದಿರುತ್ತವೆ. ಆದರೆ ಕಣ್ಣುಗಳನ್ನು ಧೂಳು ಮತ್ತಿತರ ಪರಿಸರದಿಂದ ಪರಕೀಯ ವಸ್ತುಗಳಿಂದ ರಕ್ಷಿಸಲು ‘ಬ್ರಿಲ್ಲೆ’(Brille) ಎಂಬ ಪಾರದರ್ಶಕ ಫಲಕಗಳಿವೆ. ಹಾವುಗಳು ಪೊರೆ ಕಳಚುವಾಗ ಬ್ರಿಲ್ಲೆಗಳನ್ನು ಕಳಚಿ ಕಳೆದುಕೊಂಡು ಅನಂತರ ಹೊಸದನ್ನು ಬೆಳೆಸಿಕೊಳ್ಳತ್ತವೆ. ಉಳಿದ ಸರೀಸೃಪಗಳಲ್ಲಿ ಕಣ್ಣು ರೆಪ್ಪೆಗಳಿದ್ದು ಕಣ್ಣುಗಳನ್ನು ರಕ್ಷಿಸುತ್ತವೆ. ಇವುಗಳಲ್ಲಿ ನೀಮೇಷಕ (ಪಾರದರ್ಶಕವಾದ ಮೂರನೆಯ ಕಣ್ಣುರೆಪ್ಪೆ) ಪಟಲವೂ ಉಂಟು. ಇದು ಕಣ್ಣುಗಳ ಮೇಲೆ ಪಕ್ಕದಿಂದ ಪಕ್ಕಕ್ಕೆ ಚಲಿಸುತ್ತದೆ. ಸರೀಸೃಪಗಳ ಕಣ್ಣಿನ ಪಾಪೆಯ ಆಕಾರ ಪ್ರಾಣಿಯ ಜೀವನ ಕ್ರಮವನ್ನು ಅನುಸರಿಸಿ ಬದಲಾಗುತ್ತದೆ ದಿವಾಚರಿ (ಹಗಲು ಜೀವಿ) ಗಳಲ್ಲಿ ಅದರ ಆಕಾರ ದುಂಡು ಮತ್ತು ನಿಶಾಚರಿಗಳಲ್ಲಿ ಲಂಬಾಕಾರ.

ಸರೀಸೃಪಗಳಿಗೆ ಸೀಮಿತವಾಗಿರುವ ವಿಶೇಷ ರೀತಿಯ ಸಂವೇದನಾಂಗಗಳೆಂದರೆ ಶಾಖ ಸಂವೇದನಾಂಗಗಳು. ಇವುಗಳ ಸಹಾಯದಿಂದ ತಮ್ಮ ಸುತ್ತಲ ಪರಿಸರದಲ್ಲಿನ ಸೂಕ್ಷ್ಮಾತಿ ಸೂಕ್ಷ್ಮ ಶಾಖ ಬದಲಾವಣೆಗಳನ್ನು ಪ್ರಾಣಿಗಳು ಗ್ರಹಿಸಬಲ್ಲವು. ಈ ಅಂಗಗಳಿರುವ ಸರೀಸೃಪಗಳು ೦.೦೦೧oC ಯಷ್ಟು ಉಷ್ಣತೆಯ ಬದಲಾವಣೆಯನ್ನು ಗ್ರಹಿಸಬಲ್ಲವು. ಕುಳಿ ಮಂಡಲದಂತಹ ಕೆಲವು ಹಾವುಗಳಲ್ಲಿ ಅನೇಕ ಹೆಬ್ಬಾವು ಜಾತಿ ಗಳಲ್ಲಿ ಶಾಖ ಸಂವೇದನಾಂಗಗಳಿವೆ. ಈ ಸಂವೇದನಾಂಗಗಳು ಕುಳಿಗಳ ರೂಪದಲ್ಲಿವೆ. ಈ ಕುಳಿಗಳು ಸುತ್ತಲ ಪರಿಸರದ ಶಾಖದ ಸೂಕ್ಷ್ಮ ಏರಿಳಿತ ಗಳನ್ನು ಗ್ರಹಿಸಬಲವು. ನಿರ್ದಿಷ್ಟವಾಗಿ ವಿವರಿಸುವುದಾದರೆ, ಪ್ರಾಣಿಯ ಸುತ್ತ ಸುಳಿದಾಡುವ ಬಿಸಿ ರಕ್ತದ ಪ್ರಾಣಿಗಳ (ಸಸ್ತನಿಗಳು, ಪಕ್ಷಿಗಳು) ಉಪಸ್ಥಿತಿಯಿಂದ ಉಂಟಾಗುವ ಸೂಕ್ಷ್ಮ ಬದಲಾವಣೆಗಳನ್ನು ಇವು ಗುರುತಿಸಬಲ್ಲವು. ಈ ಸಂವೇದನಾಂಗಗಳು ಸರಳ ಕುಳಿಗಳಂತೆ ಇದ್ದರೂ ಅವುಗಳ ಸಂಖ್ಯೆ ಮತ್ತು ರಚನಾ ವ್ಯವಸ್ಥೆ ಭಿನ್ನವಾಗಿರುತ್ತದೆ. ಕುಳಿ ಮಂಡಲದ ನಾಸಿಕ ಮತ್ತು ಕಣ್ಣುಗಳ ನಡುವೆ ಇರುವ ಕುಳಿಗಳಲ್ಲಿ ಈ ಸಂವೇದನಾಂಗಗಳಿವೆ. ಹೆಬ್ಬಾವುಗಳಲ್ಲಿ ತುಟಿಗಳ ಮೇಲಿವೆ. ಪ್ರತಿ ಕುಳಿಯಲ್ಲಿಯೂ ಹೊರಗಿನ ಗಾಳಿಗೆ ತೆರೆದಿಟ್ಟ ಹೊರಕೋಣೆ ಮತ್ತು ಒಳಗೆ ಆಳದ ಒಳಕೋಣೆಗಳೆಂಬ ಎರಡು ಕೋಣೆಗಳಿರುತ್ತವೆ. ಎರಡೂ ಕೋಣೆಗಳ ನಡುವೆ ಸೂಕ್ಷ್ಮ ರಕ್ತನಾಳಗಳು, ನರಾಗ್ರಗಳು ಹೆಚ್ಚಾಗಿ ಹರಡಿದ ತೆಳು ಪಟಲವೊಂದಿದ್ದು ಎರಡೂ ಕೋಣೆಗಳನ್ನು ಪ್ರತ್ಯೇಕಿಸುತ್ತದೆ. ಇದರ ನರಾಗ್ರಗಳು ಉಷ್ಣತೆಯ ಏರಿಳಿತಗಳನ್ನು ಗ್ರಹಿಸಿ ಮಿದುಳಿಗೆ ವರದಿ ಒಪ್ಪಿಸುತ್ತವೆ. ಇದರ ಸಹಾಯದಿಂದ ಸರೀಸೃಪ ತನ್ನ ನೆರೆಯಲ್ಲಿರುವ ಪ್ರಾಣಿ ಆಹಾರ ಜೀವಿ (ಉದಾ : ಸಣ್ಣ ಸುಂಡಲಿ, ಹಕ್ಕಿಗಳು)ಯ ಉಪಸ್ಥಿತಿ ಮತ್ತು ಅವಿರುವ ದಿಕ್ಕು ಹಾಗೂ ದೂರವನ್ನು ಅವುಗಳ ಇರಿವನ್ನು ಕಾಣುವ ಅಥವಾ ಕೇಳುವ ಮೊದಲೇ ಅರಿತುಕೊಳ್ಳುತ್ತದೆ, ಕುಳಿಗಳು ಸಾಮಾನ್ಯವಾಗಿ ಜೋಡಿಯಲ್ಲಿರುವುದರಿಂದ ಎರಡು ಸಂವೇದನಾಂಗಗಳನ್ನು ಏಕಾಲದಲ್ಲಿ ಒಂದು ನಿರ್ದಿಷ್ಟ ಗುರಿ ಇಲ್ಲವೇ ಆಹಾರ ಜೀವಿಯ ಮೇಲೆ ಕರಾರುವಾಕ್ಕಾಗಿ ಕೇಂದ್ರೀಕರುಸುವುದಷ್ಟೇ ಅಲ್ಲ ಅದು ಇರುವ ದಿಕ್ಕು ಮತ್ತು ದೂರವನ್ನು ನಿರ್ಧರಿಸಬಹುದು. ಈ ಗ್ರಹಣ ಶಕ್ತಿಯಿಂದಾಗಿ ದಟ್ಟ ಕತ್ತಲಿನಲ್ಲಿಯೂ ಆಹಾರ ಜೀವಿಯನ್ನು ಗುರುತಿಸಿ, ನಿಃಶಬ್ಧವಾಗಿ ಸಮೀಪಿಸಿ, ಹಿಡಿದು ಸಾಯಿಸಿ ನುಂಗುತ್ತವೆ.

ನೀರಿನ ಜೀವನವನ್ನು ಸಂಪೂರ್ಣವಾಗಿ ತ್ಯಜಿಸಿ ಭೂಮಿಯ ಮೇಲೆ ವಾಸಿಸತೊಡಗಿದ ಸರೀಸೃಪಗಳ ಸಂತಾನೋತ್ಪತ್ತಿ ವಿಧಾನವೂ ಮಾರ್ಪಡಬೇಕಾಯ್ತು. ಲಿಂಗಾಣುಗಳನ್ನು ನೀರಿನಲ್ಲಿ ವಿಸರ್ಜಿಸಿ, ಅವು ಪರಸ್ಪರರನು ಸಂಧಿಸಿ, ನಿಷೇಚಿಸಿ ಬೆಳೆಯುವ ಮುಕ್ತ ಅವಕಾಶ ಭೂವಾಸಿ ಗಳಾದ ಸರೀಸೃಪಗಳಿಗೆ ವರ್ಜಿತವಾಯ್ತು. ಪುರುಷಾಣುಗಳ ರಚನೆ, ಸ್ವಭಾವ ಈಜಿ ಅಂಡಾಣುಗಳನ್ನು ಸಮೀಪಿಸಲು ಬೇಕಾಗುವ ತೇವಾಂಶ ಪರಿಸರದ ಅಗತ್ಯ ಇಲ್ಲ. ಭೂಮಿಯ ಮೇಲಿನ ಒಣಪರಿಸರದಲ್ಲಿ ಪೊರೈಕೆ ಆಗಲಾರದಾಯ್ತು. ಪುರುಷಾಣುಗಳನ್ನು ಅಂಡಾಣುಗಳಿರುವ, ಅಂದರೆ ಹೆಣ್ಣು ಪ್ರಾಣಿಯ ದೇಹಕ್ಕೆ ತಲುಪಿಸಬೇಕಾಯ್ತು. ದೇಹದ ಒಳಗಡೆಯೆ ನಿಷೇಚನೆಗೆ ಅನುವು ಮಾಡಿಕೊಡುವುದು ಅಗತ್ಯವಾಯ್ತು, ಅನಿವಾರ್ಯ ವಾಯ್ತು. ಹೀಗಾಗಿ ಅಂತಃಅನಿಷೇಚನ ಜಾರಿಗೆ ಬಂದಿತು. ಪುರುಷಾಣುಗಳನ್ನು ಹೆಣ್ಣು ಪ್ರಾಣಿಯ ದೇಹಕ್ಕೆ ತಲುಪಿಸಲು ಮೈಥುನಾಂಗಗಳು ಬೆಳೆದವು. ಸದಾ ಶತ್ರುಗಳ ಭಾದೆ ಇರುವ ಆತಂಕ ಭರಿತ ವಾತಾವರಣದಲ್ಲಿ ಹೆಣ್ಣು-ಗಂಡುಗಳು ಪದೇ ಪದೇ ಸಂಧಿಸುವ ಕಷ್ಟ ತಪ್ಪಿಸಲು, ಒಮ್ಮೆ ನಡೆದ ಸಂಭೋಗ ಕಾಲದಲ್ಲಿ ಅದಷ್ಟು ಹೆಚ್ಚು ಪುರುಷಾಣುಗಳನ್ನು ವರ್ಗಾಯಿಸಿ, ಅವುಗಳ ಬಳಕೆಯಾಗುವವರೆಗೆ ಹೆಣ್ಣು ಪ್ರಾಣಿಯ ದೇಹದಲ್ಲಿ ಸಂಗ್ರಹಿಸಿಟ್ಟುಕೊಂಡು ಬಳಸುವ ಕ್ರಮ ರೂಢಿಗೆ ಬಂದಿತು. ಇದರಿಂದಾಗಿ ಅವು ಒಂದು ಸಾಲಿನಲ್ಲಿ ಒಂದಕ್ಕಿಂತ ಹೆಚ್ಚು ಸಲ ನಿಷೇಚಿತ ತತ್ತಿಗಳನ್ನಿಡುವುದು ಸಾಧ್ಯವಾಯ್ತು. ಮೊಟ್ಟೆ ಇಟ್ಟಾದ ಮೇಲೆ ಅವುಗಳ ರಕ್ಷಣೆಗೆ ಅವಕಾಶ, ವ್ಯವಧಾನ ಇಲ್ಲದೆ ಸ್ಪಲ್ಪವಾದರೂ ತನ್ನ ಸಂತಾನವನ್ನು ಕಾಪಾಡುವ ಉದ್ದೇಶದಿಂದ ನಿಷೇಚಿತ ತತ್ತಿಗಳನ್ನು ಕೆಲಕಾಲ ಹೆಣ್ಣು ಪ್ರಾಣಿ ತನ್ನ ದೇಹದಲ್ಲಿಯೆ ಉಳಿಸಿಕೊಳ್ಳುವ ಪರಿಪಾಠ ರೂಢಿಗೆ ಬಂದಿತು. ಕೆಲವು ಹಲ್ಲಿಗಳು ೩೦ ರಿಂದ ೪೫ ದಿನಗಳವರೆಗೆ ನಿಷೇಚಿತ ತತ್ತಿಗಳನ್ನು ದೇಹದಲ್ಲಿ ಉಳಿಸಿಕೊಳ್ಳುತ್ತವೆ. ಮತ್ತು ಈ ಕಾಲದಲ್ಲಿ ಭ್ರೂಣೀಯ ಬೆಳವಣಿಗೆ ಮುಂದುವರಿಯುತ್ತದೆ. ಮಂಡಲದ ಹಾವುಗಳಂತಹ ಕೆಲವು ಸರೀಸೃಪಗಳ ಮರಿಗಳು ಪೂರ್ಣ ಬೆಳೆಯುವರೆಗೆ ಮೊಟ್ಟೆಗಳನ್ನು ದೇಹದಲ್ಲಿಯೇ ಉಳಿಸಿಕೊಂಡು ಪೂರ್ಣ ಬೆಳೆದ ಮರಿಗಳನ್ನು ಈಯುತ್ತವಾದರೂ ಬಹುಪಾಲು ಸರೀಸೃಪಗಳು ಅಂಡಜಗಳು. ಮೊಟ್ಟೆಗಳು ಹೆಣ್ಣು ಸರೀಸೃಪ ಪ್ರಾಣಿಯ ದೇಹದಲ್ಲಿ ಉಳಿದಿರುವ ಕಾಲವನ್ನು ಗರ್ಭಸ್ಥಕಾಲ ಎಂದೂ ಹೇಳುವುದುಂಟು. ಆದರೆ ಇದಕ್ಕೂ ಸಸ್ತನಿಗಳ ಗರ್ಭಾವಧಿಗೂ ಅರ್ಥಾರ್ತ ಸಂಬಂಧವಿಲ್ಲ. ಸರೀಸೃಪಗಳ ಮೊಟ್ಟೆಗಳಿಗೆ ಒಣಗುವುದನ್ನು ತಡೆಯುವ ಚಿಪ್ಪು ಇದ್ದು, ಒಳಗೆ ಬೆಳೆಯುತ್ತಿರುವ ಮರಿಯನ್ನು ರಕ್ಷಿಸುತ್ತದೆ.

ಸರೀಸೃಪಗಳಲ್ಲಿ ಇನ್ನೊಂದು ಆಶ್ಚರ್ಯಕರವಾದ ಅದ್ಭುತ ವಿಷಯವೆಂದರೆ ಆಮೆಚಿಪ್ಪು. ಅದು ಏಕೆ, ಹೇಗೆ ಅಸ್ತಿತ್ವಕ್ಕೆ ಬಂದಿತೆಂಬ ವಿಷಯ ಸ್ಪಷ್ಟವಾಗಿ ತಿಳಿಯದು. ರಕ್ಷಣಾ ರಹಿತ ಅಮೆಗಳ ದೇಹಕ್ಕೆ ಭದ್ರವಾದ ರಕ್ಷಣಾ ಕವಚವನ್ನು ಸೃಷ್ಟಿಸಿಕೊಟ್ಟಿದೆ. ಆಮೆಚಿಪ್ಪಿನಲ್ಲಿ ಎರಡು ಭಾಗಗಳಿವೆ. ಮೇಲಿನ ಕ್ಯಾರಪೇಸ್ ಮತ್ತು ಕೆಳಗಿನ ಪ್ಲಾಸ್ಟ್ರಾನ್. ಎರಡೂ ಭಾಗಗಳನ್ನು ಅಸ್ಥಿ ರಜ್ಜುಗಳು ಬಂಧಿಸುತ್ತವೆ. ಅಮೆಗಳ ಬೆನ್ನು ಮೂಳೆ ಮತ್ತು ಪಕ್ಕೆಲಬುಗಳು ಕ್ಯಾರಪೇಸ್ ನೊಂದಿಗೆ ಕೂಡಿಕೊಂಡಿವೆ ಮತ್ತು ಅದೇ ರೀತಿ ಕುತ್ತಿಗೆಯ ಕೊರಳ ಮೂಳೆ ಮತ್ತು ಉದರ ಪಕ್ಕೆಲಬುಗಳು ಪ್ಲಾಸ್ಟ್ರಾನ್ ನೊಂದಿಗೆ ಕೂಡಿಕೊಂಡು ಆಮೆಚಿಪ್ಪು ಆಮೆಗಳ ಅವಿಭಾಜ್ಯ ಅಂಗವಾಗಿದೆ. ಚಿಪ್ಪಿನ ಮೇಲೆ ಪ್ರಶಲ್ಕಗಳೆಂಬ ಕೊಬ್ಬಿನ ಫಲಕಗಳ ಹೊದಿಕೆ ಇದೆ. ಚಿಪ್ಪಿನ ಮುಂಭಾಗದಲ್ಲಿ ತಲೆ ಮತ್ತು ಮುಂಗಾಲುಗಳು, ಹಿಂದೆ ಹಿಂಗಾಲುಗಳು ಮತ್ತು ಬಾಲ ಹೊರಕ್ಕೆ ಚಾಚಲು ಮತ್ತು ಚಿಪ್ಪಿನ ರಕ್ಷಣೆಗೆ ಒಳಕ್ಕೆಳೆದುಕೊಳ್ಳಲು ಅನುಕೂಲವಾದ ಎರಡು ತೆರೆಪುಗಳಿವೆ. ಕೆಲವರಲ್ಲಿ ಈ ತೆರೆಪುಗಳನ್ನು ಮುಚ್ಚುವ ವ್ಯವಸ್ಥೆಯೂ ಇದೆ.

ಸರೀಸೃಪಗಳ ಬೆಳವಣಿಗೆಯಲ್ಲಿ ಬೆಳೆಯುತ್ತಿರುವ ಮರಿಗೆ ರಕ್ಷಣೆ ಒದಗಿಸಲು, ಆವರಣ ಸೃಷ್ಟಿಸಲು, ಕೂಡಿಟ್ಟ ಆಹಾರ ಬಳಸಿಕೊಳ್ಳಲು ನೆರವಾಗುವ ಮತ್ತು ಉಸಿರಾಟ ಹಾಗೂ ವಿಸರ್ಜನೆಯಲ್ಲಿ ಸಹಾಯಕ ವಾಗುವ ಕೆಲವೊಂದು ಭ್ರೂಣೀಯ ಪಟಲಗಳೆಂಬ ರಚನೆಗಳು, ಕೋರಿಯಾನ್, ಆಮ್ನಿಯಾನ್, ಯೋಕ್ ಸ್ಯಾಕ್ (ಬಂಡಾರ ಸಂಚಿ) ಮತ್ತು ಅಲ್ಲಂಟಾಯಿಸ್ ಗಳು ಬೆಳೆದು ನೆರವಾಗುತ್ತವೆ. ಇವು ಪಕ್ಷಿಗಳು ಮತ್ತು ಸಸ್ತನಿಗಳ ಬೆಳವಣಿಗೆಯ ಕಾಲದಲ್ಲಿಯೂ ಕಾಣಿಸಿಕೊಂಡು ಇವೇ ಕೆಲಸಗಳನ್ನೂ ನಿರ್ವಹಿಸುತ್ತವೆ. ಆಮ್ನಿಯಾನ್ ಪಟಲ ಈ ಮೂರು ವರ್ಗದ ಕಶೇರುಕಗಳ ಉಭಯ ಸಾಮಾನ್ಯ ರಚನೆಯಾದುದರಿಂದ ಇವುಗಳನ್ನು ಒಟ್ಟಾರೆ ಆಮ್ನಿಯೋಟ ಎಂದು, ಮೀನುಗಳು ಮತ್ತು ಉಭಯಚರಿಗಳನ್ನು ಆನಾಮ್ನಿಯೋಟಗಳೆಂದೂ ಕರೆಯುತ್ತಾರೆ.

ಸರೀಸೃಪಗಳಲ್ಲಿ ಐದು ಗಣಗಳಿವೆ, ಅಂದರೆ ಇಂದು ಬದುಕಿರುವವು.

. ಕೀಲೋನಿಯ ಉದಾ : ಆಮೆಗಳು

. ಕ್ರೊಕೊಡೀಲಿಯ ಉದಾ : ಮೊಸಳೆಗಳು.

. ರಿಂಕೊಸಿಫಾಲಿಯಾ ಉದಾ : ಟುವಟಾರ-ನ್ಯೂಜಿಲ್ಯಾಂಡ ವಿನಹ ಪ್ರಪಂಚದ ಉಳಿದೆಲ್ಲೂ ದೊರಕುವುದಿಲ್ಲ.

. ಲ್ಯಾಸರ್ ಟೀಲಿಯ ಉದಾ : ಹಲ್ಲಿಗಳು

. ಒಫಿಡಿಯ ಉದಾ : ಹಾವುಗಳು.