ಗಣ : ಪ್ರೈಮೇಟ್ಸ್
ಕುಟುಂಬ : ಸರ್ಕೊಪಿತೆಸಿಡೀ (ಸೈನೊಮಾರ್ಫ)
ಉದಾ : ಕಪಿ ಅಥವಾ ಬಾನೆಟ್ ಮಕಾಕ (Bonnet Macaque)
ಶಾಸ್ತ್ರೀಯ ನಾಮ : ಮಕಾಕ ರೇಡಿಯೇಟ (Macaca radiate)

438_69_PP_KUH

ವಿತರಣೆ ಮತ್ತು ಆವಾಸ : ಇದು ದಕ್ಷಿಣ ಭಾರತಕ್ಕೆ ಮಾತ್ರ ಸೀಮಿತವಾದ ಪ್ರಾಣಿ. ಇದು ಎಲ್ಲ ಪರಿಸರಗಳಲ್ಲಿಯೂ ಇತರ ಮಂಗಗಳೊಂದಿಗೆ ಸಹಬಾಳ್ವೆ ಮಾಡುತ್ತದೆ. ಇವು ದಕ್ಷಿಣ ಭಾರತದಲ್ಲಿ ಕೆಳಗೆ ಕನ್ಯಾಕುಮಾರಿಯಿಂದ ಮೇಲೆ ಪಶ್ಚಿಮಕ್ಕೆ ಮುಂಬೈವರೆಗೆ ಮತ್ತು ಪೂರ್ವಕ್ಕೆ ಗೋದಾವರಿ ನದಿಯವರೆಗೆ ಹರಡಿವೆ. ಇದರಲ್ಲಿ ಎರಡು ಉಪಪ್ರಭೇದಗಳಿವೆ. ಮಕಾಕ ರೇಡಿಯೇಟ ರೇಡಿಯೇಟ ಮತ್ತು ಮಕಾಕ ರೇಡಿಯೇಟ ಡೈಲ್ಯೂಟ.

ಗಾತ್ರ : ಕುಳಿತಾಗ ಇದು ಎತ್ತರದಲ್ಲಿ ೨ ಅಡಿಗಿಂತ ಚಿಕ್ಕದಾಗಿರುತ್ತದೆ. ಮಕಾಕಗಳಲ್ಲೆಲ್ಲಾ ಹೋಲಿಸಿದರೆ ಇದರ ಬಾಲ, ತಲೆ ಮತ್ತು ದೇಹಕ್ಕಿಂತಲೂ ಹೆಚ್ಚು ಉದ್ದವಾಗಿದೆ. ಪೂರ್ಣ ಬೆಳೆದ ಗಂಡು ಕಪಿ ೬ ರಿಂದ ೯ ಕೆ.ಜಿ. ತೂಕವಿರುತ್ತದೆ. ಹೆಣ್ಣು ೩ ರಿಂದ ೪ ಕೆ.ಜಿ. ಇರುತ್ತದೆ.

ಆಹಾರ : ಹಣ್ಣು-ಹಂಪಲು, ಎಲೆ, ಕಾಂಡ, ಹುಳುಹುಪ್ಪಟೆ, ಜೇಡ, ಹಕ್ಕಿಯ ಮೊಟ್ಟೆಗಳನ್ನು ಇವು ತಿನ್ನುತ್ತವೆ.

ಲಕ್ಷಣಗಳು : ಉದ್ದ ಕಪ್ಪು ಕೂದಲುಗಳು ತಲೆಯ ಮೇಲೆ ಸುತ್ತಲೂ ಚೆನ್ನಾಗಿ ಕಾಣುವಂತೆ ಹರಡಿವೆ. ಹಣೆ ಉಬ್ಬಿದೆ. ಹಣೆಯ ಮೇಲೆ ಕೂದಲುಗಳಿಲ್ಲ. ತಲೆಯ ಮುಂದಿನ ಭಾಗದ ಕೂದಲುಗಳು ಮೋಟು ಮತ್ತು ಬೈತಲೆ ತೆಗೆದಂತೆ ಇಬ್ಬಾಗವಾಗಿ ಹರಡಿವೆ. ಋತುಗಳಿಗೆ ಅನುಸಾರವಾಗಿ ಮತ್ತು ಪ್ರಾಣಿಯಿಂದ ಪ್ರಾಣಿಗೆ ಮೈಬಣ್ಣ ವ್ಯತ್ಯಾಸವಾಗುತ್ತದೆ. ಚಳಿಗಾಲದಲ್ಲಿ ಮೈಬಣ್ಣ ಹೊಳಪಿನ ಆಲಿವ್ ಕಂದುಬಣ್ಣವಾಗಿದ್ದು ಬೇಸಿಗೆಯಲ್ಲಿ ಮಾಸಿದಂತೆ ಕಾಣುತ್ತದೆ. ಹೊಟ್ಟೆಯ ಭಾಗ ಬಿಳುಪಾಗಿರುತ್ತದೆ.

ಸಂತಾನಾಭಿವೃದ್ಧಿ : ಸಂತಾನೋತ್ಪತ್ತಿಯ ಚಟುವಟಿಕೆ ವರ್ಷವಿಡೀ ನಡೆಯುತ್ತಿರುತ್ತದೆ. ಆದರೆ ಅಕ್ಟೋಬರ್-ನವೆಂಬರ್ ಗಳಲ್ಲಿ ಚಟುವಟಿಕೆ ಹೆಚ್ಚು ಮತ್ತು ಮರಿಗಳು ಜನವರಿಯಿಂದ ಏಪ್ರೀಲ್‌ವರೆಗೆ, ಅಪರೂಪವಾಗಿ ಜೂನ್‌ನಲ್ಲಿ ಜನಿಸುತ್ತವೆ. ಗರ್ಭಾವಧಿಯ ಕಾಲ ೧೬೦-೧೭೯ ದಿನಗಳು. ಗಂಡು ಮತ್ತು ಹೆಣ್ಣುಗಳೆರಡು ೨ ೧/೨ ಯಿಂದ ೩ ೧/೨ ವರ್ಷದವುಗಳಾದ ಮೇಲೆ ಪ್ರಾಯಕ್ಕೆ ಬರುತ್ತವೆ. ಒಂದು ಸೂಲಿಗೆ ಒಂದೇ ಒಂದು ಮರಿ ಹುಟ್ಟುತ್ತದೆ. ಮರಿಯನ್ನು ಎದೆಗೆ ಅಪ್ಪಿಕೊಂಡು ತಾಯಿ ಕಪಿ ಹೊತ್ತು ತಿರುಗುತ್ತದೆ. ಮತ್ತು ರಕ್ಷಿಸುತ್ತದೆ. ಅವುಗಳ ಸ್ವಾಭಾವಿಕ ಪರಿಸರದ ಜೀವಾವಧಿ ಕಾಲ ಗೊತ್ತಿಲ್ಲ. ಆದರೆ ಬಂಧನದಲ್ಲಿ ೧೨ ರಿಂದ ೧೫ ವರ್ಷಗಳವರೆಗೆ ಬದುಕುತ್ತವೆ. ಒಂದು ಕಪಿ ೩೦ ವರ್ಷದವರೆಗೆ ಬದುಕಿದ ದಾಖಲೆ ಇದೆ.

ಸ್ವಭಾವ : ಮರವಾಸಿಗಳು ಮತ್ತು ಗುಂಪು ಜೀವಿಗಳು. ಒಂದು ಗುಂಪಿನಲ್ಲಿ ಎಲ್ಲಾ ವಯಸ್ಸಿನ ಹೆಣ್ಣು, ಗಂಡು ಕಪಿಗಳು ೨೦ ರಿಂದ ೩೦ ಸಂಖ್ಯೆಗಳವರೆಗೆ ಒಟ್ಟಾಗಿ ಆಹಾರವನ್ನರಸಿ ಹೊರಡುತ್ತವೆ. ಇವುಗಳಲ್ಲಿ ಒಂದು ರೀತಿಯ ಸಮಾಜ ಜೀವನ ಕಂಡುಬರುತ್ತದೆ. ಬಲಿಷ್ಠವಾದ ಗಂಡು ಗುಂಪಿನ ಯಜಮಾನನಾಗಿ ವರ್ತಿಸುತ್ತದೆ. ಉಳಿದ ಕಪಿಗಳು ಯಜಮಾನನ ಆಜ್ಞಾನುಸಾರಿ ಅನುಯಾಯಿಗಳಾಗಿ ಬದುಕುತ್ತವೆ. ೨ ಚದರ ಮೈಲುಗಳಷ್ಟಿನ ಚೆನ್ನಾಗಿ ವ್ಯವಸ್ಥಿತವಾದ ಜಾಗ ಒಂದು ಹಿಂಡಿನ ಪ್ರದೇಶವಾಗುತ್ತದೆ. ಗುಂಪಿನ ರಕ್ಷಣೆಗೆ ಯಜಮಾನ ಕಪಿ ಇತರ ಗಂಡುಗಳೊಂದಿಗೆ ಸಹಕರಿಸಬಹುದು.

ಪ್ರಾಣಿಗಳನ್ನು ಆಡಿಸುವವರ ಬಳಿ ಸಾಮಾನ್ಯವಾಗಿ ಕಂಡುಬರುವ ಸ್ವಲ್ಪ ಬಿಳಿಚಿಕೊಂಡ ಮುಖದ ಕಪಿ ಇದು. ಕಣಿವೆಗಳಲ್ಲಿ, ಬಯಲು ಪ್ರದೇಶದಲ್ಲಿ, ಕಾಡು ಮತ್ತು ಹಳ್ಳಿಗಳ ಬಳಿ ಕಾಣಿಸಿಕೊಳ್ಳುವ ಸಾಮಾನ್ಯ ಪ್ರಭೇದದ್ದು. ಊರುಗಳಿಂದ ದೂರದ ಕಾಡಿನಲ್ಲಿರುವ ಕಪಿಗಳು ಸ್ವಲ್ಪ ನಾಚಿಕೆಯ ಸ್ವಭಾವ ತೋರಿಸಿದರೂ, ಊರುಗಳಲ್ಲಿ ಮನುಷ್ಯನ ಜೊತೆಯಲ್ಲಿ ವಾಸಮಾಡುವ ಕಪಿಗಳು ಅಂಜಿಕೆಯನ್ನು ಕಳೆದುಕೊಂಡು ಧೈರ್ಯವಾಗಿ ವರ್ತಿಸುತ್ತವೆ.

ಮಕಾಕ ಜಾತಿಯು ೧೨ ಪ್ರಭೇದಗಳು ಮತ್ತು ೪೬ ಉಪಪ್ರಭೇದಗಳನ್ನು ಹೊಂದಿದೆ. ಮುಖ್ಯ ಪ್ರಭೇದಗಳೆಂದರೆ, ಮಕಾಕ ರೇಡಿಯೇಟ ಮತ್ತು ಮಕಾಕ ಸೈಲಿನಸ್ ಇವುಗಳಲ್ಲಿ ಯೋನಿಯ ಪಕ್ಕದ ಚರ್ಮವು ರಜಸ್ಸು ಆವರ್ತನ ಪೂರ್ತಿ ಕೆಂಪು ಛಾಯೆಯ ಕೆನ್ನೀಲಿ ಬಣ್ಣತಾಳಿರುತ್ತದೆ.

ಮಕಾಕ ರೇಡಿಯೇಟದ ಎರಡು ಉಪಪ್ರಭೇದಗಳಾದ .ರೇ. ರೇಡಿಯೇಟವು ದಕ್ಷಿಣ ಭಾರತದ ದ್ವೀಪ ಕಲ್ಪಗಳಲ್ಲಿ ಕಂಡುಬರುತ್ತದೆ. ಮ. ರೇ. ಡೈಲ್ಯೂಟವು ದಕ್ಷಿಣ ಕೇರಳ ಭಾಗಕ್ಕೆ ಸೀಮಿತವಾಗಿದೆ. ಗಂಡು ಕಪಿಯ ದೇಹದ ಉದ್ದ ೫೦೩ ರಿಂದ ೫೯೦ ಮಿ.ಮೀ. ತೂಕ ೫.೬ ಕೆ.ಜಿ.ಯಿಂದ ೮.೮೫ ಕೆ.ಜಿ. ಬಾಲವು ತಲೆ ಮತ್ತು ದೇಹಗಳೆರಡಕ್ಕಿಂತ ಉದ್ದವಾಗಿದೆ. ನಯವಾದ ಕೂದಲುಗಳಿಂದ ಮುಚ್ಚಿದೆ. ದೊಡ್ಡದಾದ ಶಿಶ್ನುವಿದೆ.

—- 

ಗಣ : ಪ್ರೈಮೇಟ್ಸ್
ಕುಟುಂಬ : ಸರ್ಕೊಪಿತೆಸಿಡೀ (ಸೈನೊಮಾರ್ಫ)
ಉದಾ : ಸಾಮಾನ್ಯಲಾಂಗೂರ್ ಅಥವಾ ಹನುಮಾನ ಕಪಿ (Common Langur) (Hanuman Monkey)
ಶಾಸ್ತ್ರೀಯ ನಾಮ : ಪ್ರೆಸ್
ಬೈಟಿಸ್ ಎನ್ಟೆಲ್ಲಸ್ (Presbytis entellus)

439_69_PP_KUH

ವಿತರಣೆ ಮತ್ತು ಆವಾಸ : ಇದನ್ನು ಮುಸುವ ಅಥವಾ ಕರಿಮಂಗ ಎಂದೂ ಕರೆಯುತ್ತಾರೆ. ಭಾರತದ ಎಲ್ಲೆಡೆ ಇದರ ವಿವಿಧ ಕುಲಗಳು ವಾಸಿಸುತ್ತವೆ. ಪಶ್ಚಿಮ ಭಾರತದ ಮರುಭೂಮಿ ವಿನಹ ಮಿಕ್ಕೆಲ್ಲ ಕಡೆ ಇವು ಹೇರಳವಾಗಿವೆ. ಹೆಚ್ಚು ಕಡಿಮೆ ೧೪ ಕುಲಗಳನ್ನು ಗುರುತಿಸಲಾಗಿದೆ.

ಇವು ಹೆಚ್ಚಾಗಿ ಶಾಖಾವಾಸಿಗಳು, ಕೆಲವೆಡೆ ಬಂಡೆಗಳು ಮತ್ತು ಪ್ರಪಾತಗಳ ಬಳಿ ವಾಸಿಸುವುದುಂಟು. ದಕ್ಷಿಣ ಭಾರತದ ಕಾಡುಗಳು, ಕೆರೆ ಮತ್ತು ದೇವಸ್ಥಾನಗಳ ಸುತ್ತಲಿನ ತೋಪುಗಳು ಮತ್ತು ಊರು, ಹಳ್ಳಿಗಳಲ್ಲಿಯೂ ವಾಸಿಸುತ್ತವೆ. ನೀರು ಇಲ್ಲದೆ ಕೇವಲ ಎಲೆ ಮತ್ತು ತೊಗಟೆಗಳ ನೀರನ್ನೇ ಅವಲಂಬಿಸಬೇಕಾದ ಬಯಲು ಸೀಮೆಯಲ್ಲಿಯೂ ಇವು ಕಂಡುಬರುತ್ತವೆ. ಇವು ದೇವಸ್ಥಾನಗಳ ಬಳಿ, ರೈಲ್ವೆ ನಿಲ್ದಾಣಗಳಲ್ಲಿ ಭಕ್ತರಿಂದ ಹಾಗೂ ಪ್ರಯಾಣಿಕರಿಂದ ಆಹಾರವನ್ನು ಸ್ವೀಕರಿಸುತ್ತವೆ. ಇಲ್ಲವೇ ಕದಿಯುತ್ತವೆ. ಆಹಾರಕ್ಕಾಗಿ ತೋಟ ಮತ್ತು ಜಮೀನುಗಳಿಗೂ ಲಗ್ಗೆ ಹಾಕುವುದುಂಟು.

ಗಾತ್ರ : ಕುಳಿತ ಭಂಗಿಯಲ್ಲಿ ೨ ರಿಂದ ೨ ೧/೨ ಅಡಿ ಎತ್ತರದ, ಬಾಲ ತುಂಬಾ ಉದ್ದವಾಗಿದ್ದು ೨ ರಿಂದ
೨ ೧/೨ ಅಡಿ ಉದ್ದ ಇರುತ್ತದೆ. ತೂಕ ೯ ರಿಂದ ೧೬ ಕೆ.ಜಿ.

ಆಹಾರ : ಸಂಪೂರ್ಣ ಸಸ್ಯಾಹಾರಿಗಳು. ಹಣ್ಣು, ಹೂವು, ಕಾಯಿ, ಚಿಗುರು, ಮೊಗ್ಗು, ಎಲೆಗಳು ಇದರ ಆಹಾರ.

ಲಕ್ಷಣಗಳು : ಉದ್ದ ಕೈಕಾಲುಗಳ, ಉದ್ದ ಬಾಲದ ಕರಿಯ ಮುಖದ ಕಪಿ. ಇದು ಕಾಡಿನಲ್ಲಿದ್ದಷ್ಟೇ ಸ್ವತಂತ್ರವಾಗಿ ಪಟ್ಟಣಗಳಲ್ಲಿ ಮತ್ತು ಹಳ್ಳಿಗಳಲ್ಲಿ ಕಂಡುಬರುತ್ತದೆ. ವಿವಿಧ ಭಾಗಗಳ ಪ್ರಾಣಿಗಳು ತಮ್ಮ ಮೈಬಣ್ಣದಲ್ಲಿ ವ್ಯತ್ಯಾಸ ತೋರುತ್ತವೆ. ಬಿಳಿಚಿಕೊಂಡ ಅಥವಾ ಪೂರ್ಣ ಬೆಳ್ಳಗಿರುವ ತಲೆಯು ಕಪ್ಪಾದ ದೇಹದಿಂದ ಸ್ಪಷ್ಟವಾಗಿ ಕಾಣುತ್ತದೆ. ಕಾಲು ಮತ್ತು ದೇಹದ ಬಣ್ಣಗಳೂ ಬದಲಾಗುವುದುಂಟು. ಡಕ್ಕನ್ ಪ್ರಸ್ಥಭೂಮಿಯ ಕಪಿಗಳಲ್ಲಿ ಬಣ್ಣ ತಿಳಿಯಾಗಿದೆ. ಮತ್ತು ಕರ್ನಾಟಕದಲ್ಲಿರುವ ಕಪಿಗಳಲ್ಲಿ ಹೆಚ್ಚು ಕಡಿಮೆ ಬಿಳುಪು. ಆದರೆ ಬೆಟ್ಟಗಾಡು ಪ್ರದೇಶದವುಗಳು ತುಸುಕಪ್ಪಾಗಿರುತ್ತವೆ.

ಸಂತಾನಾಭಿವೃದ್ಧಿ : ಇವಕ್ಕೆ ಗುರುತರವಾದ ಋತುಮಾಸವಿದೆ. ಜನವರಿ-ಫೆಭ್ರವರಿ ತಿಂಗಳಲ್ಲಿ ಹೆಚ್ಚು ಜನನಗಳಾಗುತ್ತವೆ. (೧ ಬಾರಿ ಮರಿಹಾಕುತ್ತವೆ). ಗರ್ಭಾವಧಿಯ ಕಾಲ ೬ ತಿಂಗಳು. ಹೆಣ್ಣು ೩ ೧/೨ ವರ್ಷಕ್ಕೆ ಲಿಂಗ ಪ್ರೌಢತನವನ್ನು ಪಡೆಯುತ್ತದೆ. ತಾಯಿ ಓಡಾಡುವಾಗ, ನಿದ್ದೆ ಮಾಡುವಾಗ ಮರಿಯನ್ನು ಅಪ್ಪಿಕೊಂಡಿರುತ್ತದೆ. ಒಂದು ಸೂಲಿಗೆ ಸಾಮಾನ್ಯವಾಗಿ ಒಂದೇ ಮರಿ ಹುಟ್ಟುತ್ತದೆ.

ಸ್ವಭಾವ : ಕಪಿಗಳಿಗಿಂತಲೂ ಇವು ಹೆಚ್ಚಾಗಿ ಮರವಾಸಿಗಳು. ರೆಂಬೆಯಿಂದ ರೆಂಬೆಗೆ ಸುಲಭವಾಗಿ ಹಾರಬಲ್ಲವು. ನೆಲದ ಮೇಲೆ ನಾಲ್ಕೂ ಕಾಲುಗಳಿಂದ ನಡೆಯುತ್ತವೆ. ಬೇರೆ ಕಪಿಗಳಿಗೆ ಹೋಲಿಸಿದರೆ ಇವು ತೋಟಗಳಲ್ಲಿ ಕದಿಯುವುದಾಗಲೀ ಅಥವಾ ತೋಟಕ್ಕೆ ಲಗ್ಗೆ ಹಾಕುವುದಾಗಲೀ ಹೆಚ್ಚು ತೀವ್ರವಾಗಿರುವುದಿಲ್ಲ. ತಮ್ಮ ನಡತೆಯಲ್ಲಿ ಒಂದು ರೀತಿಯ ಗಂಭೀರತೆಯನ್ನು ಪ್ರದರ್ಶಿಸುತ್ತವೆ. ಪ್ರಾಯಶಃ ಈ ನಡತೆಯಿಂದಾಗಿಯೇ ಇವುಗಳನ್ನು ಗೌರವಿಸಿ ಪೂಜಿಸುವುದು. ಹಿಂದುಗಳು ಇವನ್ನು ಅದರದಿಂದ ಕಾಣುತ್ತಾರೆ ಮತ್ತು ಅವಕ್ಕೆ ತೊಂದರೆ ಕೊಡುವುದಿಲ್ಲ. ಹೀಗಾಗಿ ಅವು ಮನುಷ್ಯನಿಗೆ ಹೆದರುವುದಿಲ್ಲ. ಆಹಾರಾನ್ವೇಷಣೆಗೆ ಸಾಮಾನ್ಯವಾಗಿ ಬೆಳಗಿನ ಮತ್ತು ಸಂಜೆಯ ಹೊತ್ತಿನಲ್ಲಿ ಹೊರಡುತ್ತವೆ. ಬಿಸಿಲಿನ ತೀವ್ರತೆ ಹೆಚ್ಚಾದ ನಡು ಹಗಲಿನಲ್ಲಿ ತೋಟದ ನೆರಳಿನಲ್ಲಿ ಅಥವಾ ನಾಲೆಗಳ ಬಳಿ ವಿಶ್ರಮಿಸಿಕೊಂಡಿದ್ದು ಸಂಜೆ ಪುನಃ ಆಹಾರ ಹುಡುಕಿಕೊಂಡು ಹೊರಡುತ್ತವೆ. ಈ ಆಹಾರನ್ವೇಷಣೆಯ ಕಾಲದಲ್ಲಿ ಇತರ ಜಾತಿಯ ಕಪಿಗಳೊಡನೆ ಬೆರೆಯಬಹುದಾದರೂ ಸಂಜೆ ತಮ್ಮ ವಿಶ್ರಾಂತ ತಾಣಕ್ಕೆ ಹಿಂತಿರುಗುವಾಗ ತಮ್ಮ ಗುಂಪಿನಲ್ಲಿಯೇ ಉಳಿಯುತ್ತವೆ. ಇದಕ್ಕೆ ತುಂಬಾ ಕ್ರೂರವಾದ ಶತ್ರುವೆಂದರೆ ಚಿರತೆ, ಹುಲಿ ಅಥವಾ ಯಾವುದೇ ಸಂಶಾಯಾಸ್ಪದ ಪ್ರಾಣಿಯನ್ನು ಕಂಡ ತಕ್ಷಣ, ಇವು ಒಂದು ರೀತಿಯ ಭಯದ ಕೂಗನ್ನುಂಟುಮಾಡಿ ಗುಂಪಿನ ಉಳಿದ ಸದಸ್ಯರನ್ನು ಎಚ್ಚರಿಸುತ್ತವೆ ಮತ್ತು ಅಲ್ಲಿಂದ ಓಡಿ ಹೋಗುತ್ತವೆ. ಆದರೆ ಆಹಾರ ದೊರಕಿ, ತೃಪ್ತಿಯಾಗಿ, ಸಂತೋಷವಾಗಿದ್ದಾಗ, ಒಂದು ರೀತಿಯ ಸಂತೋಷದಿಂದ ಕೂಗಿಕೊಂಡು ಮರದಿಂದ ಮರಕ್ಕೆ ನೆಗೆದಾಡುತ್ತವೆ. ಇವು ಮರದಿಂದ ಮರಕ್ಕೆ ಕರಾರುವಕ್ಕಾಗಿ ನೆಗೆಯುವುದು ಆಶ್ಚರ್ಯಕರವಾಗಿರುತ್ತದೆ. ನೆಲದ ಮೇಲೆ ಓಡಾಡುವಾಗ ನಾಲ್ಕೂ ಕಾಲುಗಳಿಂದ ಓಡಾಡುತ್ತವೆ. ಶಾಂತವಾಗಿ, ವಿನೋದದಿಂದ ಗುಂಪುಗಳಲ್ಲಿ ವಾಸಿಸುತ್ತವೆ. ಗುಂಪುಗಳಲ್ಲಿ ಎಲ್ಲಾ ವಯಸ್ಸಿನ ಮತ್ತು ಎರಡೂ ಲಿಂಗದ ೧೮-೨೫ ಸಂಖ್ಯೆಯ ಪ್ರಾಣಿಗಳು ಸೇರಿರುತ್ತವೆ. ಕೆಲವೊಮ್ಮೆ ಬರೀ ಗಂಡುಗಳೇ ಇರುವ ಗುಂಪುಗಳು ಇರುವುದುಂಟು. ಈ ಗುಂಪುಗಳು ಒಡೆಯದಂತೆ ಸ್ಥಿರವಾಗಿ ಉಳಿಯುತ್ತವೆ. ಈ ಗುಂಪಿನ ಆಹಾರಾನ್ವೇಷಣೆಯ ಚಟುವಟಿಕೆಯ ವ್ಯಾಪ್ತಿ ಸುಮಾರು ೫ ಚದರ ಮೈಲಿಗಳವರೆಗೆ ವಿಸ್ತರಿಸಬಹುದು. ಇದರ ಮುಖ್ಯ ಸ್ಥಳ ಸಾಮಾನ್ಯವಾಗಿ ವಿಶ್ರಮಿಸುವ ಮರ, ಮರದ ಗುಂಪುಗಳಿಗೆ ಸೀಮಿತವಾಗಿರುತ್ತದೆ. ಈ ಜಾಗಕ್ಕೆ ರಾತ್ರಿಯಲ್ಲಿ ವಿಶ್ರಾಂತಿಗೆಂದು ವಿರಮಿಸುತ್ತವೆ ಮತ್ತು ರೆಂಬೆಗಳ ತುದಿಗಳಲ್ಲಿ ಕುಳಿತು ನಿದ್ರಿಸುತ್ತವೆ. ಇದು ಇವುಗಳನ್ನು ಅರಸಿ ಬರುವ ಹಿಂಸ್ರ ಪ್ರಾಣಿಗಳಿಂದ ರಕ್ಷಣೆಯ ವಿಧಾನವೆಂದು ಭಾವಿಸಲಾಗಿದೆ. ಇತರ ಪ್ರೈಮೇಟ್ ಸಮಾಜಗಳಂತೆ ಇವುಗಳಲ್ಲಿಯೂ ವಯಸ್ಕ ಗಂಡುಗಳು ಗುಂಪಿನ ನಾಯಕರಾಗುತ್ತವೆ. ನಾಯಕರ ನಡುವೆ, ಜಗಳ, ಹೋರಾಟ ಕಡಿಮೆ.

ಪ್ರೆಸ್‌ಬೈಟಿಸ್ ಎನ್‌ಟೆಲ್ಲಸ್ ಪ್ರಭೇದದಲ್ಲಿ ಎಂಟು ಉಪಪ್ರಭೇದಗಳಿವೆ. ಇವು ವಿತರಣೆಯಲ್ಲಿ ಒಂದು ರೀತಿಯ ವಿಶಿಷ್ಟ ಸೀಮಿತತೆಯನ್ನು ತೋರುತ್ತವೆ. ಪ್ರೆ. ಎನ್‌.ಅಕೇಟಿಸ್ (p.e. achates) ಧಾರವಾಡ, ಬಳ್ಳಾರಿ, ಕೆನರಾ ; ಪ್ರೆ. ಎನ್‌. ಇಯುಲಸ್‌(p. e. iulus) ಕೆನರಾ, ಮೈಸೂರು ಜಿಲ್ಲೆಗಳು ; ಪ್ರೆ. ಎನ್‌. ಡುಸುಮಿಯರಿ (p.e.dussumieri) ಮಲಬಾರ್ ಕರಾವಳಿ ; ಪ್ರೆ. ಎನ್‌. ಹೈಪೊಲ್ಯೂಕಾಸ್‌(p.e. hypoleucos) ತಿರುವಾಂಕೂರು; ಪ್ರೆ. ಎನ್‌.ಪ್ರಿಯಾಂ (p.e. priam) ಕೋರಮಂಡಲ ಕರಾವಳಿ, ನೀಲಗಿರಿ; ಪ್ರೆ. ಎನ್‌.ಪ್ರಿಯಾಮೆಲ್ಲಸ್‌(p. e. elissa) ದಕ್ಷಿಣ ಕೊಡಗು. ಪ್ರೆ. ಎನ್‌. ಥೆರ್ಸಿಟಿಸ್‌(p. e. thersites) ಸಿಲೋನ್‌ಮತ್ತು ತಿರುವಾಂಕೂರುಗಳಲ್ಲಿ ಕಂಡುಬರುತ್ತವೆ.

—- 

ಗಣ : ಪ್ರೈಮೇಟ್ಸ್
ಕುಟುಂಬ : ಸರ್ಕೊಪಿತೆಸಿಡೀ (ಸೈನೊಮಾರ್ಫ)
ಉದಾ : ಸಿಂಗಳೀಕ (ಸಿಂಹ ಬಾಲದ ಮಂಗ)(Lion tailed monkey)
ಶಾಸ್ತ್ರೀಯ ನಾಮ : ಮಕಾಕ ಸೈಲಿನಸ್ (Macaca silenus)

440_69_PP_KUH

ವಿತರಣೆ ಮತ್ತು ಆವಾಸ : ಕರ್ನಾಟಕದ ಪಶ್ಚಿಮ ಘಟ್ಟಗಳ ನಿತ್ಯಹಸಿರಾಗಿರುವ ಕಾಡುಗಳಲ್ಲಿ ಸುಮಾರು ೮೦೦-೧೩೦೦ ಮೀ. ಎತ್ತರದಲ್ಲಿ ನೆಲಸಿವೆ. ಸಾಮಾನ್ಯವಾಗಿ ಮರಗಳ ತುದಿಯಲ್ಲಿ ಇರುತ್ತವೆ. ತಿರುವಾಂಕೂರು, ಕೊಚ್ಚಿನ್ ಮತ್ತು ಕರ್ನಾಟಕದ ಕಾಡಿನಲ್ಲಿ ವಾಸಿಸುತ್ತವೆ. ಕೆಲವು ವೇಳೆ ಮರಗಳಿಲ್ಲದ ಪ್ರಪಾತದಲ್ಲಿ ಕಂಡುಬರುತ್ತವೆ. ಪಶ್ಚಿಮ ಘಟದಲ್ಲಿ ಉತ್ತರ ಕನ್ನಡ ಜಿಲ್ಲೆಯಿಂದ ಆಗುಂಬೆ, ಕುದುರೆಮುಖ ಸಕಲೇಶಪುರದವರೆಗೆ ಮತ್ತು ದಕ್ಷಿಣಕ್ಕೆ ಕೇರಳದ ಮೌನಕೊಳ್ಳ (ಸೈಲೆಂಟ್‌ವ್ಯಾಲಿ) ಕನ್ಯಾಕುಮಾರಿಯವರೆಗೆ ಹರಡಿವೆ.

ಗಾತ್ರ : ತಲೆ ಮತ್ತು ದೇಹದ ಉದ್ದ ೧ ೧/೨ ಅಡಿಯಿಂದ ೨ ೧/೨ ಅಡಿ ಬಾಲ ೧೦ ಅಂಗುಲದಿಂದ ೧೬ ಅಂಗುಲ ಉದ್ದ. ತೂಕ ೬-೮ ಕೆ.ಜಿ. (೧೩ ಕೆ.ಜಿ.ಯವರೆಗೂ ತೂಗಿದೆ.) ಹೆಣ್ಣು ಗಂಡಿಗಿಂತ ಚಿಕ್ಕದು.

ಆಹಾರ : ಇವು ಕೂಡ ಇತರೆ ಕಪಿಗಳಂತೆ ಸರ್ವಭಕ್ಷಕಗಳು. ಎಲ್ಲಾ ರೀತಿಯ ಆಹಾರವನ್ನು ತಿನ್ನುತ್ತವೆ. (ಹಣ್ಣು, ಹೂವು ಎಲೆ, ಕಾಂಡ, ತೊಗಟೆ, ಬೆಂಡು, ಬೇರು ಇತ್ಯಾದಿ). ಬೆಳಗಿನಿಂದ ಸಂಜೆಯವರೆಗೆ ಆಹಾರ ಸೇವನೆಯಲ್ಲಿರುತ್ತವೆ. ಪರಿಸರದಲ್ಲಿ ಸಿಗುವ ಆಹಾರ ಮತ್ತು ಮಳೆ ಆಹಾರ ಸೇವನೆ ಮತತು ಇನ್ನಿತರ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ. ಮಳೆ ಇಲ್ಲದಿದ್ದರೆ ಇವು ಹಗಲಿನ ಯಾವ ವೇಳೆಯಲ್ಲಿ ಬೇಕಾದರೂ ಆಹಾರ ಸೇವನೆಗೆ ತೊಡಗುತ್ತವೆ. ಅನಾನುಕೂಲವಾದ ಹವಾಮಾನ ಕಾಲದಲ್ಲಿ ಇವುಗಳ ಚಟುವಟಿಕೆ ಕಡಿಮೆಯಾಗುತ್ತದೆ. ಆಹಾರ ಹೇರಳವಾಗಿ ದೊರಕಿದರೆ ಮಧ್ಯಾಹ್ನದ ಹೊತ್ತಿಗೆ ಆಹಾರ ಸೇವನೆ ಮುಗಿಸಿ ವಿಶ್ರಮಿಸಿಕೊಳ್ಳುತ್ತವೆ. ಆಹಾರ ಸಾಕಾಗದಿದ್ದಾಗ ಪಕ್ಷಿಗಳ ಮೊಟ್ಟೆಗಳು. ಕೀಟಗಳು ಮತ್ತು ಕೀಟಗಳ ಕೋಶಾವಸ್ಥೆಯನ್ನು ತಿನ್ನುತ್ತವೆ. ಅವಕಾಶ ದೊರಕಿದರೆ ಭತ್ತವನ್ನು ತಿನ್ನುತ್ತವೆ. ಸಂಭೋಗ ಕಾಲದಲ್ಲಿ ಹೊರಬೀಳುವ ವೀರ್ಯವನ್ನು ಹೆಣ್ಣು ಗಂಡುಗಳೆರಡೂ ಸೇವಿಸುತ್ತವೆ. ಹೆಚ್ಚಾಗಿ ಇವು ಸಸ್ಯಮೂಲ ಆಹಾರವನ್ನು ಸೇವಿಸುವುದರಿಂದ ನೀರಿನ ಬೇಡಿಕೆ ಸಾಮಾನ್ಯ.

ಲಕ್ಷಣಗಳು : ಮಧ್ಯಮ ಗಾತ್ರದ, ಬಲಿಷ್ಠ ದೇಹದ ಮತ್ತು ಗಟ್ಟಿ ಕಾಲುಗಳುಳ್ಳ ಪ್ರಾಣಿ. ಇದರ ಬಣ್ಣ ಹಳದಿಕಂದು, ಹೊಟ್ಟೆಯ ಭಾಗ ತೆಳು ಹಳದಿ, ಇದಕ್ಕೆ ಕಂದುಬೂದು ಅಥವಾ ಕಪ್ಪು ಬೂದು ಬಣ್ಣದ ಕೂದಲುಗಳ ಹೊದಿಕೆ ಇದೆ. ಬಾಲ ಚಿಕ್ಕದು. ತಲೆ ಮತ್ತು ಗಲ್ಲದಿಂದ ಬೆಳೆದ ಒರಟಾದ ಉದ್ದಕೂದಲುಗಳು ಕುತ್ತಿಗೆಯ ಕೆಳಕ್ಕೆ ಜೋತು ಬಿದ್ದು ಗಂಡುಸಿಂಹದ ಆಯಾಲದಂತಾಗಿದೆ. ಇದು ಗಂಡು ಸಿಂಹದ ಆಯಾಲವನ್ನು ಹೋಲುವುದರಿಂದ ಮತ್ತು ಬಾಲದ ತುದಿಯು ಪೊದೆಯಾಗಿ ಸಿಂಹದ ಬಾಲದಂತಿರುವುದರಿಂದ ಈ ಕಪಿಗೆ ‘ಸಿಂಹ ಬಾಲದ ಮಂಗ’ ಎಂಬ ಹೆಸರು ಬಂದಿದೆ. ಇವುಗಳ ತುಪ್ಪುಳು ಹೊಳಪುಕಪ್ಪು. ಮುಖದ ಮೇಲೆ ಕೂದಲುಗಳಿಲ್ಲದೆ ಮುಖವು ಕಪ್ಪಾಗಿದೆ. ಎಲ್ಲಾ ವಯಸ್ಸಿನ ಹೆಣ್ಣು, ಗಂಡುಗಳೆರಡೂ ಗುಂಪಿನಲ್ಲಿರುತ್ತವೆ.

ಸಂತಾನಾಭಿವೃದ್ಧಿ : ಹೆಚ್ಚು ವಿಷಯ ತಿಳಿಯದು. ನಿರ್ದಿಷ್ಟವಾದ ಸಂತಾನೋತ್ಪತ್ತಿಯ ಕಾಲವಿಲ್ಲ. ಹೊಸದಾಗಿ ಜನಿಸಿದ ಮರಿಗಳು ಸೆಪ್ಟೆಂಬರ್ ತಿಂಗಳಿನಲ್ಲಿ ಕಾಣಿಸುತ್ತವೆ. ಗರ್ಭಾವಧಿಯ ಕಾಲ ೫ ರಿಂದ ೭ ತಿಂಗಳು. ಇವುಗಳ ಆಯಸ್ಸು ಕೂಡ ತಿಳಿಯದು (ಗೊತ್ತಿಲ್ಲ).

ಸ್ವಭಾವ : ಇವುಗಳ ವಸತಿಯ ಮೇಲಾದ ಔದ್ಯೋಗಿಕರಣದ ಅತಿಕ್ರಮಣ ಮತ್ತು ಇವುಗಳ ತುಪ್ಪುಳಕ್ಕಾಗಿ ಇವುಗಳನ್ನು ಕೊಲ್ಲುವುದರಿಂದ ಇವುಗಳ ಸಂಖ್ಯೆ ತುಂಬಾ ಕಡಿಮೆಯಾಗಿ ಇವು ಕಣ್ಮರೆಯಾಗುವ ಸ್ಥಿತಿಯಲ್ಲಿವೆ. ಇದು ಗುಂಪುಗಳಲ್ಲಿ ವಾಸಮಾಡುತ್ತದೆ.

. ಗಣ : ರೊಡೆನ್ಷಿಯ

ಅಳಿಲುಗಳು, ಇಲಿಗಳು, ಬಯಲಿಲಿಗಳು, ಸುಂಡಿಲಿಗಳು, ಮುಳ್ಳು ಹಂದಿಗಳು ಈ ಗಣಕ್ಕೆ ಸೇರುತ್ತವೆ. ಇವುಗಳಲ್ಲಿ ಕಡಿಯುವುದಕ್ಕೆ ಮತ್ತು ಅಗಿಯುವುದಕ್ಕೆ ಮಾರ್ಪಟ್ಟ ದಂತವಿನ್ಯಾಸವಿರುವದು ಒಂದು ವಿಶೇಷ ಲಕ್ಷಣ ಬಾಚಿಹಲ್ಲುಗಳು ಉದ್ದವಾಗಿದ್ದು ಮುಂದಕ್ಕೆ ಚಾಚಿವೆ. ಇವುಗಳ ತುದಿಗಳು ನವೆದಂತೆ ಜೀವನ ಪೂರ್ತಿ ನಿರಂತರವಾಗಿ ಬೆಳೆಯುತ್ತಿರುತ್ತದೆ. ಪ್ರತಿ ದವಡೆಯಲ್ಲಿಯೂ ಕೇವಲ ಒಂದು ಜೊತೆ ಬಾಚಿ ಹಲ್ಲುಗಳಿವೆ. ಕೋರೆಹಲ್ಲುಗಳಿಲ್ಲ. ಬಾಚಿಹಲ್ಲುಗಳಿಗೂ ಮತ್ತು ಮುಂದವಡೆ ಹಲ್ಲುಗಳಿಗೂ ನಡುವೆ ಡಯಸ್ಟೆಮ(ದಂತಾವಕಾಶ) ಎಂಬ ಖಾಲಿ ಜಾಗವಿದೆ. ದವಡೆ ಹಲ್ಲುಗಳು ಅರೆಯಲು ಅನುವಾಗಿವೆ. ಕಾಲುಬೆರಳುಗಳಿಗೆ ಮೊಂಡಾದ ಉಗುರಿನಂತಹ ನಖಗಳಿವೆ. ಇವು ಪಾದಚರಿಗಳು ಅಥವಾ ಅಂಗುಲಿಗಾಮಿಗಳು. ವೃಷಣಗಳು ತೊಡೆ ಸಂದು ಅಥವಾ ಉದರಾವಕಾಶದಲ್ಲಿರುತ್ತದೆ. ಸ್ತನಗಳು ಉದರ ಭಾಗಕ್ಕೆ ಸೀಮಿತವಾಗಿರಬಹುದು ಅಥವಾ ಎದೆ ಮತ್ತು ಉದರಭಾಗಗಳೆರಡಲ್ಲಿಯೂ ಇರುತ್ತವೆ. ಗರ್ಭಕೋಶ ಇಪ್ಪಾಲಿಯದು.

—- 

ಗಣ : ರೊಡೆನ್ಷಿಯ
ಕುಟುಂಬ
: ಕೇವಿಡೀ
ಉದಾ : ಗಿನಿ ಹಂದಿ(Guinea pig)
ಶಾಸ್ತ್ರೀಯ ನಾಮ : ಕೇವಿಯ ಪಾರ್ಸೆಲಸ್
(Cavia paracellus)

441_69_PP_KUH

ಗಿನಿ ಎಂಬ ಪದ ಬಹುಶಃ ಗಿಯಾನ ಎಂಬ ಪದದಿಂದ ಪಡೆದುದಾಗಿರಬಹುದು. ಡಚ್‌ ಮತ್ತು ಇಂಗ್ಲೀಷ್‌ ವ್ಯಾಪಾರಸ್ಥರು ಈ ಪ್ರಾಣಿಗಳನ್ನು ಗಿಯಾನದಿಂದ ಕೊಂಡೊಯ್ದುದರಿಂದ ಈ ಹೆಸರು ಬಂದಿರಬೇಕು. ಇದನ್ನು ಮುದ್ದು ಪ್ರಾಣಿಯಂತೆ ಸಾಕುತ್ತಿದ್ದಾರೆ.

ವಿತರಣೆ ಮತ್ತು ಆವಾಸ : ಕಾಡುಗಳು ಅಥವಾ ಹುಲ್ಲುಗಾವಲುಗಳ ಪಕ್ಕದಲ್ಲಿ ಬಂಡೆ ಕಲ್ಲುಗಳ ಮತ್ತು ಜೌಗು ಇರುವ ಪ್ರದೇಶದಲ್ಲಿ ದೊರಕುತ್ತದೆ.

ಗಾತ್ರ : ಚೆನ್ನಾಗಿ ಬೆಳೆದ ಪ್ರಬುದ್ಧ ಪ್ರಾಣಿಯ ದೇಹದ ಉದ್ದ ೨೫ಸೆಂ.ಮೀ ತೂಕ ಸುಮಾರು ೯೦೦ ಗ್ರಾಂ.

ಆಹಾರ : ಸಸ್ಯಾಹಾರಿ. ಹುಲ್ಲು, ಸೊಪ್ಪುಗಳೇ ಇದರ ಮುಖ್ಯ ಆಹಾರ. ಆಹಾರವನ್ನು ಸಾಕಷ್ಟು ಮೊತ್ತದಲ್ಲಿ ಒದಗಿಸಿದರೆ ಇದು ನೀರಿಲ್ಲದೆಯೇ ಬಹುಕಾಲ ಬದುಕಬಲ್ಲದು. ಆದರೆ ಮರದ ಪೆಟ್ಟಿಗೆಯಲ್ಲಿ ಗೂಡುಮಾಡಿ, ಇಲಿ, ಮೊಲ ಮುಂತಾದವಕ್ಕೆ ಕೊಡುವ ಆಹಾರವನ್ನು ಕೊಟ್ಟಲ್ಲಿ, ನೀರನ್ನು ಕೊಡುವುದು ಅನಿವಾರ್ಯ ಇದು ಸಗಣಿಯನ್ನು ತಿನ್ನುತ್ತದೆ.

ಲಕ್ಷಣಗಳು : ದೇಹದ ಬಣ್ಣ ಸಾಮಾನ್ಯವಾಗಿ ಬಿಳಿ, ಕಪ್ಪು, ಕೆಂಪು, ಕಂದು ಹೀಗೆ ವೈವಿಧ್ಯಮಯ. ಬಾಲವಿಲ್ಲ. ಬಾಲ ಇದ್ದರೆ ಅದು ಅಪೂರ್ಣ. ಆದರೆ ಬಾಲಕ್ಕೆ ಸಂಬಂಧಿಸಿದ ಏಳು ಕಶೇರುಕಮಣಿಗಳು ದೇಹದೊಳಗೆ ಹುದುಗಿರುತ್ತದೆ. ಸ್ಥೂಲದೇಹ, ದಪ್ಪತಲೆ, ಉದ್ದವಾದ ತೆಳುವಾದ ಕೈಕಾಲುಗಳು, ರೋಮರಹಿತವಾದ ಮತ್ತು ಗುಂಡನೆಯ ಚಿಕ್ಕ ಕಿವಿಗಳು, ಮುಂಗಾಲಿನಲ್ಲಿ ನಾಲ್ಕು, ಹಿಂಗಾಲಿನಲ್ಲಿ ೩ ಬೆರಳುಗಳು, ಪ್ರತಿ ಬೆರಳಿನಲ್ಲಿ ಅಗಲವಾದ ನಖಗಳಿವೆ. ದೇಹದ ಮೇಲಿರುವ ಕೂದಲು ರೇಷ್ಮೆಯಂತೆ ನಯವಾಗಿರಬಹುದು, ಅಥವಾ ಒರಟಾಗಿರಬಹುದು. ಚಿಕ್ಕದಾಗಿರಬಹುದು ಇಲ್ಲವೆ ನೀಳವಾಗಿರಬಹುದು.

ಸಂತಾನಾಭಿವೃದ್ಧಿ : ಸಂತಾನ ಶಕ್ತಿಗೆ ಹೆಸರಾದ ಗಿನಿ ಹಂದಿ ವರ್ಷಕ್ಕೆ ೫ ರಿಂದ ೬ ಸಲ ಮರಿಹಾಕುತ್ತದೆ. ಒಂದು ಸೂಲದಲ್ಲಿ ೨-೮ ಮರಿಗಳು ಹುಟ್ಟುತ್ತವೆ. ಗರ್ಭಾವಧಿಯ ಕಾಲ ೬೩-೭೫ ದಿನಗಳು. ಹುಟ್ಟಿದ ಮರಿಗಳಿಗೆ ಕಣ್ಣು ಕಾಣಿಸುತ್ತದೆ. ಅಲ್ಲದೆ ಮರಿಗಳು ಹುಟ್ಟಿದ ತಕ್ಷಣವೇ ಘನ(ಗಟ್ಟಿ) ರೂಪದ ಆಹಾರವನ್ನು ಸೇವಿಸುವ ಸಾಮರ್ಥ್ಯ ಹೊಂದಿರುತ್ತವೆ. ಹುಟ್ಟಿದ ಒಂದರೆಡು ಗಂಟೆಗಳಲ್ಲಿಯೇ ತಾಯಿಯನ್ನು ಹಿಂಬಾಲಿಸಿ ಓಡಾಡುತ್ತವೆ. ಎರಡು ವಾರಗಳ ಕಾಲ ತಾಯಿಯ ಹಾಲನ್ನು ಕುಡಿದು ಬೆಳೆದು ಅನಂತರ ಸ್ವತಂತ್ರ ಜೀವನವನ್ನು ಆರಂಭಿಸುತ್ತವೆ. ಎರಡು ತಿಂಗಳಲ್ಲಿ ಪ್ರೌಢಾವಸ್ಥೆಗೆ ಬರುತ್ತವೆ. ಆಯಸ್ಸು ಸುಮಾರು ೬-೮ ವರ್ಷಗಳು.

ಸ್ವಭಾವ : ತನ್ನ ಬಿಲವನ್ನು ತಾನೇ ತೋಡಿಕೊಳ್ಳುತ್ತದೆ. ಇಲ್ಲವೆ ಇತರ ಪ್ರಾಣಿಗಳ ಬಿಲಗಳನ್ನು ಆಕ್ರಮಿಸಿಕೊಳ್ಳುತ್ತದೆ. ಇದು ಮೊಲಗಳಂತೆ ಮುಂಜಾತೆ ಅಥವಾ ಮುಸ್ಸಂಜೆಯಲ್ಲಿ ಆಹಾರಾನ್ವೇಷಣೆಗೆ ಹೊರಡುತ್ತದೆ. ಇದನ್ನು ಸುಲಭವಾಗಿ ಪಳಗಿಸಬಹುದು.

ಈಗ ಇವನ್ನು ವೈಜ್ಞಾನಿಕ ಪ್ರಯೋಗ ಮಂದಿರಗಳಲ್ಲಿ ಹೆಚ್ಚಾಗಿ ಉಪಯೋಗಿಸುತ್ತಾರೆ. ವೈದ್ಯಕೀಯ, ಜೈವಿಕ ತಳಿವಿಜ್ಞಾನ ಮತ್ತು ಪೋಷಣ ಸಂಬಂಧ ಸಂಶೋಧನೆಗಳಲ್ಲಿ ಇವನ್ನು ಪ್ರಯೋಗ ಪ್ರಾಣಿಯಾಗಿ ಬಳಸಲಾಗುತ್ತದೆ. ಇವು ಎಷ್ಟು ಪ್ರಚಲಿತವೆಂದರೆ ‘ಗಿನಿಹಂದಿಯನ್ನಾಗಿ ಬಳಸು’ ಎಂಬುದು ಈಗ ಒಂದು ನುಡಿಗಟ್ಟಾಗಿ ಬಿಟ್ಟಿದೆ.

—- 

ಗಣ : ರೊಡೆನ್ಷಿಯ
ಕುಟುಂಬ : ಮ್ಯೂರಿಡೀ (Muridae)
ಉದಾ : ಮೃದು ತುಪ್ಪುಳು ಬಯಲು ಇಲಿ (Soft furred rat)
ಶಾಸ್ತ್ರೀಯ ನಾಮ : ಮಿಲಾರ್ಡಿಯ ಮೆಲ್ಟಾಡ (Millardia meltada)

442_69_PP_KUH

ವಿತರಣೆ ಮತ್ತು ಆವಾಸ : ಇದು ಬಹಳ ಸಾಮಾನ್ಯವಾದ ಬಯಲಿಲಿ. ಕೃಷಿ ಮಾಡಿದ ಕುಷ್ಕಿಜಮೀನನ ಪೊದೆಗಳಲ್ಲೊ, ಅವುಗಳ ಹತ್ತಿರದ ಬಿಲಗಳಲ್ಲೊ ಕಲ್ಲು ಗುಡ್ಡೆಗಳಲ್ಲೊ, ಮಣ್ಣು ಬಿರುಕುಗಳಲ್ಲಿಯೋ ಅಥವಾ ಇತರ ಜಾತಿಯ ಇಲಿಗಳು ವಾಸಿಸುವ ಬಿಲದಲ್ಲಿ ವಾಸಿಸುವುದುಂಟು. ಅಲ್ಲದೆ ಬೇಲಿ ಮತ್ತು ಹಸಿರು ಬಯಲಲ್ಲಿ, ಒಣಗಿ ಬಿರುಕು ಬಿಡುವ ನೆಲದ ಬಿರುಕುಗಳಲ್ಲಿ, ಕೆರೆ ಏರಿಗಳಲ್ಲಿಯೂ ಕಂಡು ಬರುತ್ತವೆ.

ಗಾತ್ರ : ತಲೆ ಮತ್ತು ದೇಹದ ಉದ್ದ ೫ ಅಂಗುಲ (೧೨.೫ ಸೆಂ.ಮೀ) (೧೦೦-೧೫೦ ಮಿ.ಮೀ).

ಲಕ್ಷಣಗಳು : ಮೂತಿ ಕಿರಿದು ಮತ್ತು ಮೊನಚು. ಬಾಲ ಮೋಟು. ಇವು ತೀರ ಸಣ್ಣ ಇಲಿಗಳು. ತುಪ್ಪುಳು ಬಿಳುಪು ಮತ್ತು ಮೃದು. ದೇಹದ ಮೇಲ್ಭಾಗ ಮರಳು ಬೂದು, ಬೂದು ಕಂದು ಅಥವಾ ಒರಟು ಬಿಳುಪು. ಕಂದು ಪಟ್ಟೆಗಳಿರಬಹುದು. ಹೊಟ್ಟೆಯ ಭಾಗ ಬಿಳುಪು ಅಥವಾ ಬೂದು. ಬಾಲ ಮೇಲ್ಭಾಗದಲ್ಲಿ ದಟ್ಟ ಬಣ್ಣ, ತಳಭಾಗದಲ್ಲಿ ತಿಳಿಬಣ್ಣ. ಪಾದಗಳ ಮೆತ್ತೆಗಳು ಕ್ಷಯಿಸಿವೆ. ೫ನೆಯ ಕಾಲ್ಬೆರಳು ಚಿಕ್ಕದು. ಕಿವಿಗಳು ದೊಡ್ಡವು-ಬಾಲದ ಮೇಲೆ ಸೊಂಪಾಗಿ ಕೂದಲಿವೆ.

ಸಂತಾನಾಭಿವೃದ್ಧಿ : ಬಹು ಬೆದೆಯ ಪ್ರಾಣಿ. ವರ್ಷವಿಡೀ ಸಂತಾನೋತ್ಪತ್ತಿ ನಡೆಸುತ್ತದೆ. ಸುಗ್ಗಿಯ ಕಾಲದಲ್ಲಿ ಹೆಚ್ಚಾಗಿರುತ್ತದೆ.

ಸ್ವಭಾವ : ನಿಶಾಚರಿ. ೧ ರಿಂದ ೪ ತೆರಪುಗಳಿರುವ ಬಿಲಗಳಲ್ಲಿ ವಾಸಿಸುತ್ತವೆ. ಇವುಗಳಲ್ಲಿ ಒಂದು ಹಠಾತ್‌ನಿಷ್ಕ್ರಮಣ ದ್ವಾರ. ಬಿಲ ಕೊರೆಯುವ ಶಕ್ತಿ ಇವಕ್ಕೆ ಕಡಿಮೆ. ಆದ್ದರಿಂದ ಇತರ ಜಾತಿಯ ಇಲಿಗಳ ಬಿಲಗಳಲ್ಲಿ ಅಥವಾ ಸ್ವಾಭಾವಿಕ ವಸತಿಗಳಲ್ಲಿ ವಾಸಿಸುತ್ತವೆ. ಒಂದು ಗೂಡಿನಲ್ಲಿ ಹಲವಾರು (೫-೬) ಇಲಿಗಳು ವಾಸಿಸುವುದುಂಟು. ಈ ಇಲಿಗಳು ಪ್ರಮುಖ ವಾಣಿಜ್ಯ ಬೆಳೆಗಳಾದ ಭತ್ತ, ಹತ್ತಿ ಮುಂತಾದ ಬೆಳೆಗಳಿಗೆ ತುಂಬಾ ಹಾನಿ ಉಂಟು ಮಾಡುತ್ತವೆ. ಇವು ನೀರಿನಲ್ಲಿ ಇಳಿಯಲಾರವು. ಅನೇಕ ವೇಳೆ ಮಳೆ ಬಿದ್ದು ನೀರಿನ ಪ್ರವಾಹ ಇವುಗಳ ಬಿಲಗಳಿಗೆ ನುಗ್ಗಿ ಇವುಗಳ ಸಾವಿಗೆ ಕಾರಣವಾಗುತ್ತದೆ. ಈ ಇಲಿಗಳನ್ನು ಮೈಸೂರು, ಕೋಲಾರಗಳಲ್ಲಿಯೂ ಸಂಶೋಧಕರು ಸಂಗ್ರಹಿಸಿದ್ದಾರೆ.

ಇದರಲ್ಲಿ ಎರಡು ಪ್ರಭೇದಗಳಿವೆ.

೧. ಮಿಲಾರ್ಡಿಯ (Millardia gleadown) ಮತ್ತು

೨. ಮಿಲಾರ್ಡಿಯ ಕ್ಯಾಥಲಿನೆ (Millardia Kahtalenae)