ಗಣ : ಕಾರ್ನಿವೋರ
ಕುಟುಂಬ : ಕೈನಿಡೀ
ಉದಾ : ಮುಂಗುಸಿ (ಕೇರಿ)
(Common Mongoose)
ಶಾಸ್ತ್ರೀಯ ನಾಮ : ಹರ್ಪೆಸ್ಟಿಸ್ ಎಡ್‌ವರ್ಡ್ಸಿ (Herpestes edwardsi)

463_69_PP_KUH

ವಿತರಣೆ ಮತ್ತು ಆವಾಸ : ಕರ್ನಾಟಕವೂ ಸೇರಿದಂತೆ ಇಡೀ ಭಾರತದಲ್ಲಿ ಹಿಮಾಲಯದ ತಪ್ಪಲಿನಿಂದ ಕನ್ಯಾಕುಮಾರಿಯವರೆಗೆ ದೊರಕುತ್ತದೆ. ಇವು ಕಾಡುಪ್ರಾಣಿಗಳಲ್ಲ. ಬಯಲು ಪ್ರದೇಶದ ಕುರುಚಲು ಕಾಡುಗಳಲ್ಲಿ ಮತ್ತು ಕೃಷಿ ಭೂಮಿಯ ಪಕ್ಕಗಳಲ್ಲಿ ವಾಸಿಸುತ್ತವೆ. ಇವು ಮರದ ಬುಡಗಳಲ್ಲಿರುವ ಪೊಟರುಗಳಲ್ಲಿ, ಪೊದರುಗಳಲ್ಲಿ ಮರದ ಗುಂಪುಗಳ ನಡುವೆ, ಕೃಷಿ ಭೂಮಿಯಲ್ಲಿ ಬೇಲಿ, ಬಂಡೆ ಕಲ್ಲುಗಳ ಕೆಳಗೆ ವಾಸಿಸುತ್ತವೆ. ಪೊಟರುಗಳು ಇಲ್ಲದಿದ್ದರೆ ತಾವೇ ತೋಡಿದ ಪೊಟರುಗಳಲ್ಲಿ ವಿಶ್ರಮಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ಜನವಸತಿಯ ಸಮೀಪ ವಾಸಿಸುತ್ತವೆ.

ಗಾತ್ರ : ತಲೆ ಮತ್ತು ದೇಹದ ಉದ್ದ (೧೦೫ ಸೆಂ.ಮೀ) ೩ ಅಡಿ, ಅದರಲ್ಲಿ (೪೫ ಸೆಂ.ಮೀ. ಉದ್ದದ) ೧ ೧/೨ ಅಡಿ ಬಾಲವೇ ಇರುತ್ತದೆ. ಸರಾಸರಿ ತೂಕ ೧.೪ ಕೆ.ಜಿ. ಗಂಡುಗಳು ಹೆಣ್ಣುಗಳಿಗಿಂತ ಗಾತ್ರದಲ್ಲಿ ದೊಡ್ಡವು ಮತ್ತು ಹೆಚ್ಚು ತೂಕದವು.

ಆಹಾರ : ಸರ್ವಭಕ್ಷಕಗಳು. ಇವು ಇಲಿ, ಹೆಗ್ಗಣ, ಹಾವು, ಓತಿ, ಕಪ್ಪೆ, ಚೇಳು, ಜರಿ ಮುಂತಾದ ಕ್ರಿಮಿ ಕೀಟಗಳನ್ನು ತಿನ್ನುತ್ತವೆ. ಕೋಳಿ ಮೊಟ್ಟೆಗಳನ್ನು ಕದ್ದು ತಿನ್ನುತ್ತವೆ. ಕೆಲವು ಸಾರಿ ಬೇರು, ಹಣ್ಣುಕಾಯಿಗಳನ್ನು ತಿನ್ನುವುದುಂಟು. ಮುಖ್ಯವಾಗಿ ಮಾಂಸಾಹಾರಿ. ಸತ್ತ ಪ್ರಾಣಿಗಳ ಮಾಂಸವೂ ಆಗುತ್ತದೆ.

ಲಕ್ಷಣಗಳು : ಮೈ ಬಣ್ಣ ತುಕ್ಕು ಹಿಡಿದ ಹಳದಿ ಮಿಶ್ರಿತ ಬೂದು. ಕುತ್ತಿಗೆಯ ಮೇಲೆ ಯಾವ ರೀತಿಯ ಪಟ್ಟೆಗಳೂ ಇಲ್ಲ. ಮೈಮೇಲೆ ಎದ್ದು ನಿಲ್ಲುವ ಕೂದಲುಗಳಿವೆ. ಕೂದಲುಗಳು ಉದ್ದ ಮತ್ತು ಒರಟು. ಈ ಕೂದಲುಗಳಿಗೆ ಇರುವ ತಿಳಿ ಮತ್ತು ಕಪ್ಪು ಉಂಗುರಗಳಿಂದಾಗಿ ನರೆಗೂದಲಿನ, ಕಪ್ಪು ಬಿಳುಪು ಭಾವನೆಯನ್ನು ಕೊಡುತ್ತವೆ. ಬಾಲವೂ ದೇಹದಷ್ಟೇ ಉದ್ದವಾಗಿದೆ ಮತ್ತು ಪೊದೆಯಂತಿದೆ. ಅದರ ತುದಿ ಬಿಳಿ ಅಥವಾ ಹಳದಿಕೆಂಪು ಅಥವಾ ಕಪ್ಪು ಬಣ್ಣವಾಗಿರುತ್ತದೆ. ದೃಷ್ಟಿ ಸಾಧಾರಣ. ಕಿವಿಗಳು ಚಿಕ್ಕವಿದ್ದು ತುಪ್ಪಳದಲ್ಲಿ ಹುದುಗಿವೆ. ಬಣ್ಣ, ಗಾತ್ರ ಮತ್ತು ವಸತಿಯನ್ನನುಸರಿಸಿ ಭಾರತದಲ್ಲಿ ಮೂರು ಉಪಪ್ರಭೇದಗಳನ್ನು ವಿವರಿಸುತ್ತಾರೆ.

ಸಂತಾನಾಭಿವೃದ್ಧಿ : ವರ್ಷದ ಎಲ್ಲಾ ಕಾಲದಲ್ಲಿಯೂ ಮರಿಗಳನ್ನು ಹಾಕುತ್ತದೆ. ವರ್ಷದಲ್ಲಿ ಮೂರು ಸಾರಿ ಮರಿಹಾಕಬಹುದು. ಗರ್ಭಾವಧಿ ೬೦ ದಿನಗಳು. ಒಂದು ಸೂಲದಲ್ಲಿ ೨ ರಿಂದ ೩ ಮರಿಗಳು ಹುಟ್ಟುತ್ತವೆ. ಗಂಡು ಹೆಣ್ಣುಗಳು ಮರಿಗಳನ್ನು ಬೆಳೆಸುವಲ್ಲಿ ಆಸಕ್ತಿವಹಿಸುವುದಿಲ್ಲ. ಇವುಗಳ ಆಯಸ್ಸು ೫ ರಿಂದ ೮ ವರ್ಷಗಳು.

ಸ್ವಭಾವ : ಇದು ಕಾಡಿನ ಪ್ರಾಣಿಯಲ್ಲ. ಮೈದಾನ ಪ್ರದೇಶ, ಕೃಷಿಭೂಮಿ ಮತ್ತು ಕುರುಚಲು ಅರಣ್ಯಗಳಲ್ಲಿ ವಿಶೇಷವಾಗಿ ವಾಸಿಸುತ್ತದೆ. ಆಹಾರವನ್ನು ಹುಡುಕುತ್ತಾ ಒಂಟಿಯಾಗಿ ಅಥವಾ ಗಂಡು ಮತ್ತು ಹೆಣ್ಣು ಜೊತೆಯಾಗಿ ಅಲೆಯುತ್ತವೆ. ಜನವಸತಿಯ ಪಕ್ಕದಲ್ಲಿ ವಾಸಮಾಡುವ ಮುಂಗುಸಿಗಳು ಮೇಲ್ಚಾವಣಿಯಲ್ಲಿ, ಚರಂಡಿಯಲ್ಲಿ ರಕ್ಷಣೆ ಪಡೆಯುತ್ತವೆ. ಕೆಲವೊಮ್ಮೆ ಹುತ್ತಗಳಲ್ಲಿಯೂ ವಾಸಿಸುವುದುಂಟು. ಇವು ಆಹಾರವನ್ನು ಹಗಲು ಮತ್ತು ರಾತ್ರಿ ವೇಳೆಗಳೆರಡರಲ್ಲಿಯೂ ಹುಡುಕುತ್ತವೆ. ಕೆಲವು ಸಾರಿ ತಾಯಿ ಪ್ರಾಣಿ ತನ್ನ ಮರಿಗಳೊಂದಿಗೆ ಗುಂಪಿನಲ್ಲಿ ಓಡಾಡುವುದನ್ನು ಕಾಣಬಹುದು. ಬಹುವೇಳೆ ದೊಡ್ಡ ಮಾಂಸಾಹಾರಿಗಳು ಕೊಂದ ಪ್ರಾಣಿಗಳನ್ನು ತಿನ್ನುವುದರಲ್ಲಿ ಪಾಲ್ಗೊಳ್ಳುವುದುಂಟು. ಊರಿನ ಪಕ್ಕದಲ್ಲಿ ವಾಸಮಾಡುವ ಇವು ಕೋಳಿ ಸಾಕಾಣಿಕೆ ಕೇಂದ್ರಗಳ ಮೇಲೆ ಲಗ್ಗೆ ಇಡಬಹುದು. ಮುಂಗುಸಿ ಹಾವಿನ ಜೊತೆಯಲ್ಲಿ ಕಾದಾಡುವ ವಿಷಯ ವಿಶೇಷವಾಗಿದೆ. ಹಾವಾಡಿಗರು ಇದರ ಮತ್ತು ನಾಗರ ಹಾವಿನ ಕಾಳಗವನ್ನು ಆಟಕ್ಕಾಗಿ ಏರ್ಪಡಿಸುತ್ತಾರೆ. ಮುಂಗುಸಿಯ ಜೊತೆ ಹೋರಾಡುವ ಹಾವು ಕಚ್ಚುವುದಕ್ಕೆಂದು ಹೆಡೆ ಬಿಚ್ಚಿ ಅಪ್ಪಳಿಸುವ ಕ್ಷಣದಲ್ಲಿ ಮುಂಗುಸಿ ಮಿಂಚಿನ ವೇಗದಲ್ಲಿ ದೂರಸರಿದು ಹೆಡೆಯ ಮುಂಭಾಗದ ತಲೆಬುರುಡೆಯನ್ನು ಹಿಡಿದು ಕತ್ತರಿಸುತ್ತದೆ. ಮುಂಗುಸಿಗಳು ಹಾವಿನ ವಿಷದಿಂದ ಮುಕ್ತವಿಲ್ಲ. ಆದರೆ ಮನುಷ್ಯ ಮತ್ತು ಇನ್ನುಳಿದ ಪ್ರಾಣಿಗಳಿಗಿಂತಲೂ ಹೆಚ್ಚಾಗಿ ವಿಷದ ಭಾದೆಯನ್ನು ತಡೆದುಕೊಳ್ಳಬಲ್ಲವು. ಹಾವು-ಮುಂಗುಸಿಗಳು ಕಾಳಗ ತಾಸೆರಡು-ತಾಸು ನಡೆಯುತ್ತದೆ. ಈ ಅವಧಿಯಲ್ಲಿ ಹಾವು ಆಯಾಸಗೊಳ್ಳುತ್ತದೆ. ಇದಕ್ಕೆ ಹಾವಿನ ವಿಷವೇರುವುದಿಲ್ಲ ಎಂಬ ತಪ್ಪು ಅಭಿಪ್ರಾಯವಿದೆ. ಅದು ತಪ್ಪು. ಇದು ತನ್ನ ಚುರುಕತನದಿಂದ ಹಾವಿನ ಕಡಿತದಿಂದ ತಪ್ಪಿಸಿಕೊಳ್ಳುತ್ತದೆ. ಮುಂಗುಸಿ ಮರಿಗಳನ್ನು ಹಿಡಿದು ಸಾಕಿ ಪಳಗಿಸಬಹುದು.

ಉದಾ : ಪಟ್ಟೆ ಕತ್ತಿನ ಮುಂಗುಸಿ
(Striped necked mongoose)
ಶಾಸ್ತ್ರೀಯ ನಾಮ : ಹರ್ಪೆಸ್ಟಿಸ್‌ವಿಟ್ಟಿಕೋಲಿಸ್ (Herpestes vitticolis)

464_69_PP_KUH

ವಿತರಣೆ ಮತ್ತು ಆವಾಸ : ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಿಂದ (ಕಾರವಾರ) ಕೆಳಗಡೆ ಪಶ್ಚಿಮಘಟ್ಟದ ಗುಡ್ಡಗಾಡು ಪ್ರದೇಶದಲ್ಲಿ ದೊರಕುತ್ತದೆ.

ಗಾತ್ರ : ಪೂರ್ಣ ಉದ್ದ (೧೦೫ ಸೆಂ.ಮೀ) ೩ ಅಡಿ. ಬಾಲ (೩೭ ಸೆಂ.ಮೀ) ೧ ೧/೪ ಅಡಿ, ತೂಕ ೩೨ ಕೆ.ಜಿ.

ಆಹಾರ : ಸರ್ವಭಕ್ಷಕ. ಮೊಲ, ಹೆಗ್ಗಣ, ಹಾವು, ಕಪ್ಪೆ ಮತ್ತು ಇನ್ನಿತರ ಸುಲಭವಾಗಿ ಸಿಗುವ ಸಣ್ಣಪುಟ್ಟ ಕಾಡುಪ್ರಾಣಿಗಳನ್ನು ತಿನ್ನುತ್ತದೆ. ಹಣ್ಣು, ಕಾಯಿ, ಗೆಡ್ಡೆ-ಗೆಣಸುಗಳನ್ನು ತಿನ್ನುತ್ತವೆ.

ಲಕ್ಷಣಗಳು : ಇದು ಏಷ್ಯಾದ ಮುಂಗುಸಿಗಳಲ್ಲಿಯೇ ದೊಡ್ಡದು ಮತ್ತು ಬಲವಾದ ಮೈಕಟ್ಟಿನ ಪ್ರಾಣಿ. ಕುತ್ತಿಗೆಯ ಎರಡೂ ಬದಿಗಳಲ್ಲಿ ಕಪ್ಪು ಪಟ್ಟೆಗಳು ಕಿವಿಯ ಹಿಂಭಾಗದಿಂದ ಭುಜದವರೆಗೆ ಹರಡಿವೆ. ಅದರಿಂದ ಪಟ್ಟೆ ಕತ್ತಿನ ಮುಂಗುಸಿ ಎಂಬ ಹೆಸರು ಬಂದಿದೆ. ತಲೆಯ ತುಪ್ಪುಳ ಬಿಳಿಮಿಶ್ರಿತ ಬೂದು, ದೇಹದ ಹಿಂಭಾಗ ತುಕ್ಕು ಹಿಡಿದ ಕೆಂಪು, ಬಾಲದ ತುದಿ ಕಪ್ಪು.

ಸಂತಾನಾಭಿವೃದ್ಧಿ : ಸಂತಾನಾಭಿವೃದ್ಧಿಯ ಬಗೆಗೆ ಏನೂ ತಿಳಿದಿಲ್ಲ.

ಸ್ವಭಾವ : ಸ್ವಭಾವತಃ ಅರಣ್ಯ ಪ್ರಾಣಿಗಳು. ಜನವಸತಿಯ ಸಮೀಪ ಕಾಣಿಸುವುದಿಲ್ಲ. ಬಹುಶಃ ಜೊತೆಯಲ್ಲಿ ಉಳಿದು ಹಗಲು ಬೇಟೆಯಾಡುತ್ತವೆ. ಸಾಕಿದ ಸಣ್ಣ ಸಸ್ತನಿಗಳನ್ನು ಮತ್ತು ಕೋಳಿಗಳನ್ನು ಹಿಡಿದು ತಿನ್ನುವುದರಿಂದ ಇದು ಉಪದ್ರವಕಾರಿ, ಇದರ ಒಂದು ಉಪಪ್ರಭೇದವಾದ ಹರ್ಪೆಸ್ಟಿಸ್‌ವಿಟ್ಟಿಕೋಲಿಸ್ ವಿಟ್ಟಿಕೋಲಿಸ್‌ಎಂಬುದು ಕೊಡಗು ಜಿಲ್ಲೆಯಲ್ಲಿ ದೊರಕುತ್ತದೆ. ಇದರ ದೇಹದ ಬಣ್ಣ ಚೆಸ್ಟ್‌ನೆಟ್ ಕೆಂಪು. ಉತ್ತರ ಕನ್ನಡ ಜಿಲ್ಲೆಯ ಉಪಪ್ರಭೇದವನ್ನು ಹರ್ಪೆಸ್ಟಿಸ್‌ವಿಟ್ಟಿಕೋಲಿಸ್ ಇನೊರೆನೇಟಸ್‌ಎಂದು ಹೆಸರಿಸಿದ್ದಾರೆ. ಇದರ ಶರೀರದ ಹಿಂಭಾಗದಲ್ಲಿರುವ ಕೆಂಪು ರಂಗು ಮುಂಭಾಗದಲ್ಲಿ ಇಲ್ಲ.

 

ಉದಾ : ನೀಲಗಿರಿ ಕಂದು ಮುಂಗುಸಿ (Brown Mongoose)
ಶಾಸ್ತ್ರೀಯ ನಾಮ : ಹರ್ಪೆಸ್ಟಿಸ್‌ಫುಸ್ಕಸ್ (Herpestes fuscus)

ವಿತರಣೆ ಮತ್ತು ಆವಾಸ : ದಕ್ಷಿಣ ಭಾರತದ ಪರ್ವತ ಪ್ರದೇಶಗಳ ಅರಣ್ಯಗಳಲ್ಲಿ ೯೦೦-೧,೮೫೦ ಮೀಟರ್ ಎತ್ತರದ ವರೆಗೆ ನೆಲಸಿವೆ. ಹೆಚ್ಚಾಗಿ ಕಾಫಿತೋಟಗಳ ಬಳಿ ಕಂಡುಬರುತ್ತವೆ.

ಗಾತ್ರ : ದೇಹದ ಉದ್ದ (೫೦ ಸೆಂ.ಮೀ) ೧ ೧/೩ ಅಡಿ. ಬಾಲ (೩೦ ಸೆಂ.ಮೀ) ೧ ಅಡಿ, ತೂಕ ೨.೭ ಕೆ.ಜಿ.

ಆಹಾರ : ಸಣ್ಣ ಪುಟ್ಟ ಪ್ರಾಣಿಗಳನ್ನು ತಿನ್ನುತ್ತವೆ.

ಲಕ್ಷಣಗಳು : ಮೈಕಟ್ಟು ಬಡವಾಗಿದೆ. ಬಣ್ಣ ತಿಳಿಹಳದಿಯಿಂದ ಕೂಡಿದ ಕಪ್ಪು ಕಂದು, ಪಾದಗಳು ಕಪ್ಪು.

ಸಂತಾನಾಭಿವೃದ್ಧಿ : ವಿವರಗಳು ತಿಳಿಯದು. ಒಂದು ಸೂಲದಲ್ಲಿ ೩-೪ ಮರಿಗಳು ಹುಟ್ಟುತ್ತವೆ.

ಸ್ವಭಾವ : ಇವು ಬಂಡೆಗಲ್ಲುಗಳ ಪೊದರುಗಳಲ್ಲಿ ಮತ್ತು ಬೇರುಗಳ ದೊಗರುಗಳಲ್ಲಿ ಮನೆ ಮಾಡಿ ಈಯುತ್ತವೆ. ಜನವಸತಿಯ ಸಮೀಪವಿದ್ದು ಕೋಳಿಗಳನ್ನು ಅಪಹರಿಸುತ್ತವೆ.

 

ಉದಾ : ಕೆಂಗೆಳೆಯ ಮುಂಗುಸಿ (Ruddy Mongoose)
ಶಾಸ್ತ್ರೀಯ ನಾಮ : ಹರ್ಪೆಸ್ಟಿಸ್ ಸ್ಮಿತಿ (Herpestes smithe)

ವಿತರಣೆ ಮತ್ತು ಆವಾಸ : ಇದುಮಧ್ಯ ಮತ್ತು ದಕ್ಷಿಣ ಭಾರತದಲ್ಲಿ ಕಂಡುಬರುತ್ತದೆ. ಸಾಮಾನ್ಯ ಮುಂಗುಸಿಯಷ್ಟೇ ದೊಡ್ಡದು. ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತದೆ. ಇದರ ಬಾಲದ ತುದಿ ಕಪ್ಪಾಗಿರುವುದರಿಂದ ಇದನ್ನು ಸಾಮಾನ್ಯ ಮುಂಗುಸಿಯಿಂದ ಪ್ರತ್ಯೇಕಿಸಿ ಗುರುತಿಸಬಹುದು. ಆಹಾರ ಮತ್ತು ಸ್ವಭಾವ ಸಾಮಾನ್ಯ ಮುಂಗುಸಿಯಂತೆಯೇ ಇದೆ. ಇದು ಅರಣ್ಯವಾಸಿಯಾದುದರಿಂದ ಸಾಮಾನ್ಯವಾಗಿ ಕಾಣಬರುವುದಿಲ್ಲ.

—- 

ಗಣ : ಕಾರ್ನಿವೋರ
ಕುಟುಂಬ : ಕೈನಿಡೀ
ಉದಾ : ಸಣ್ಣ ನರಿ
(The Indian Fox)
ಶಾಸ್ತ್ರೀಯ ನಾಮ : ವಲ್ಫಸ್ ಬೆಂಗಾಲೆನ್ಸಿಸ್ (Vulpes bengalensis)

465_69_PP_KUH

ವಿತರಣೆ ಮತ್ತು ಆವಾಸ : ಹಿಮಾಲಯದ ತಪ್ಪಲಿನಿಂದ ಕನ್ಯಾಕುಮಾರಿಯವರೆಗೆ ಇಡೀ ಭಾರತದಲ್ಲಿ ಇದು ಕಾಣಬರುತ್ತದೆ. ಬಯಲು ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತದೆ ಮತ್ತು ಅಪರೂಪವಾಗಿ ಕಾಡುಗಳನ್ನು ಪ್ರವೇಶಿಸುತ್ತದೆ. ಕೆಲವು ಕೃಷಿ ಜಮೀನುಗಳ ಸುತ್ತಮುತ್ತ ವಾಸಿಸುವುದುಂಟು. ಕಲ್ಲು ಗುಡ್ಡಗಳಲ್ಲಿ, ಕಣಿವೆ ಪ್ರದೇಶಗಳಲ್ಲಿ, ತಾನೇ ತೋಡಿದ ಬಿಲಗಳಲ್ಲಿ, ಇಲ್ಲವೆ ಪೊದರುಗಳಲ್ಲಿ ವಾಸಿಸುತ್ತದೆ.

ಗಾತ್ರ : ತಲೆ ಮತ್ತು ದೇಹದ ಉದ್ದ (೪೫-೬೦ ಸೆಂ.ಮೀ.) ೧ ೧/೨ ಅಡಿಯಿಂದ ೨ ಅಡಿ. ಬಾಲದ ಉದ್ದ (೨೫-೩೫ ಸೆಂ.ಮಿ.) ೧೦ ರಿಂದ ೧೪ ಅಂಗುಲ. ಇದರ ತೂಕ ೧.೮ ರಿಂದ ೩.೨ ಕೆ.ಜಿ.

ಆಹಾರ : ಸಾಮಾನ್ಯವಾಗಿ ಹೊಲದ ಇಲಿ, ಮೊಲ ಮುಂತಾದ ಸಣ್ಣ ಸಸ್ತನಿಗಳನ್ನು ಹಿಡಿದು ತಿನ್ನುತ್ತದೆ. ಕೆಲವು ಬಾರಿ ಕೋಳಿಗಳನ್ನು ಕದ್ದು ತಿನ್ನುವುದುಂಟು. ಸರೀಸೃಪಗಳು ಮತ್ತು ಕೀಟಗಳನ್ನು ಆಹಾರವಾಗಿ ಬಳಸುವುದುಂಟು. ಆದರೆ ಪಕ್ಷಿಗಳನ್ನು ಮುಟ್ಟುವುದಿಲ್ಲ. ಫೆನ್ನಿಕಸ್ ಪ್ರಭೇದದ ನರಿಗಳು ಸಸ್ಯಾಹಾರಿಗಳೂ ಹೌದು.

ಲಕ್ಷಣಗಳು : ಇದು ಭಾರತದ ಬಯಲು ಪ್ರದೇಶಗಳ ಸಾಮಾನ್ಯ ನರಿ. ಸುಂದರವಾದ ತೆಳು ಕಾಲುಗಳ ಮತ್ತು ತೆಳು ದೇಹದ ಪ್ರಾಣಿ. ಇದರ ಬಾಲದ ತುದಿ ಕಪ್ಪು. ಕಿವಿ, ತಲೆ ಮತ್ತು ಕುತ್ತಿಗೆಯ ಮೇಲ್ಭಾಗ ಒಂದೇ ಬಣ್ಣ, ಇದು ಅಚ್ಚ ಕಪ್ಪಾಗಿರುವುದಿಲ್ಲ. ಇದರ ಸಾಮಾನ್ಯ ಬಣ್ಣ ಕಂದು. ಕಾಲುಗಳು ಕೆಂಗಂದು. ಬಾಲ ಪೊದೆಯಂತಿದೆ. ಚರ್ಮದ ಮೇಲೆ ದಟ್ಟವಾದ ಕೂದಲುಗಳ ಹೊದಿಕೆ ಇದೆ. ಕಣ್ಣು, ಕಿವಿ ಮತ್ತು ಮೂಗು ತೀಕ್ಷ್ಣವಾಗಿದ್ದು ಆಹಾರವನ್ನು ಪತ್ತೆ ಹಚ್ಚುವುದರಲ್ಲಿ ನೆರವಾಗುತ್ತವೆ. ಗಾಳಿ ತುಂಬಿದ ಕೋಶಗಳಿರುವುದರಿಂದ ಹಣೆಯು ಊದಿಕೊಂಡು ಉಬ್ಬಿದ ಹಾಗೆ ಕಾಣುತ್ತದೆ. ಬಾಲವು ತಲೆ ಮತ್ತು ದೇಹದ ಉದ್ದದ ಅರ್ಧದಷ್ಟಿದೆ.

ಸಂತಾನಾಭಿವೃದ್ಧಿ : ಇವು ಬೆದೆಯ ಕಾಲದಲ್ಲಿ ಒಟ್ಟಾಗಿ ಕಾಣಿಸುತ್ತವೆ. ಈ ಜೋಡಿಗಳು ತಾತ್ಕಾಲಿಕವಾಗಿ ಕೂಡಿರುತ್ತವೋ ಅಥವಾ ಇಡೀ ಜೀವನ ಪೂರ್ತಿ ಜೊತೆಯಲ್ಲಿರುತ್ತವೆಯೋ ತಿಳಿಯದು. ಒಂದು ಬಾರಿಗೆ ೩-೪ ಮರಿಗಳನ್ನು ಹಾಕುತ್ತವೆ. ಹೆಣ್ಣುಗಂಡುಗಳೆರಡೂ ಜೊತೆಗೂಡಿ ಮರಿಗಳ ಪಾಲನೆಯಲ್ಲಿ ಪಾಲ್ಗೊಳ್ಳುತ್ತವೆ. ಮುಖ್ಯವಾಗಿ ಚಳಿಗಾಲದಲ್ಲಿ ಮರಿ ಹಾಕುತ್ತವೆ. ಮರಿಗಳನ್ನು ಬಿಲಗಳಲ್ಲಿ ಹಾಕಿ, ಬಿಲಗಳಲ್ಲಿಯೇ ಸಾಕುತ್ತವೆ. ಫೆಬ್ರವರಿ-ಏಪ್ರೀಲ್ ತಿಂಗಳುಗಳು ಮರಿಯನ್ನು ಈಯುವ ಕಾಲ. ಗರ್ಭಾವಧಿ ೫೦ ರಿಂದ ೫೩ ದಿನಗಳು. ಮರಿ ಮತ್ತು ತಾಯಿ ಒಟ್ಟಿಗೆ ಕಾಣಿಸುವುದು ಅಪರೂಪ.

ಸ್ವಭಾವ : ನರಿಗಳು ನಿಶಾಚರಿಗಳು. ಸಾಮಾನ್ಯ ಜೀವನದಲ್ಲಿ ನಿಧಾನವಾಗಿ ಓಡಾಡಿದರೂ, ಆಹಾರ ಜೀವಿಯನ್ನು ಹಿಡಿಯುವಾಗ ಅಥವಾ ಶತ್ರು ಬೆನ್ನಟ್ಟಿ ಬಂದಾಗ ವೇಗವಾಗಿ ಓಡಬಲ್ಲವು, ಅಕ್ಕಪಕ್ಕಗಳಿಗೆ ಸುಲಭವಾಗಿ ತಿರುಗಬಲ್ಲವು ಮತ್ತು ಹಿಮ್ಮೆಟ್ಟಬಲ್ಲವು. ಈ ಕಾರ್ಯದಲ್ಲಿ ಬಾಲವು ಅವುಗಳ ಸಮತೋಲನವನ್ನು ಕಾಪಾಡಲು ನೆರವಾಗುತ್ತದೆ. ನಡೆಯುವಾಗ ನೆಲದ ಮೇಲೆ ಬೀಳುವ ಬಾಲ ಓಡುವಾಗ ನೆಟ್ಟಗೆ ಚಾಚಿ, ತಿರುಗುವಾಗ ಮೇಲಕ್ಕೆ ನಿಮರಿ ನಿಲ್ಲುತ್ತದೆ. ತನ್ನ ಅವಾಸಸ್ಥಾನವನ್ನು ಆರಿಸಿಕೊಳ್ಳುವಾಗ, ಬಿಲಗಳನ್ನು ತೋಡುವ ಜಾಗವನ್ನು ನಿರ್ಧರಿಸುವಾಗ ಮಳೆಯ ನೀರಿನ ಪ್ರವಾಹದಿಂದ ದೂರವಿರುವ ಪ್ರದೇಶವನ್ನು ಆರಿಸಿಕೊಳ್ಳುತ್ತದೆ. ಇದು ಒಂದು ರೀತಿಯ ಬಗುಳುವ ಶಬ್ದ ಮಾಡುತ್ತದೆ. ಶಬ್ದಗಳ ಬದಲಾವಣೆಯಿಂದ ಪರಸ್ಪರ ಸುದ್ದಿ ವಿನಿಮಯ ಮಾಡಿಕೊಳ್ಳುತ್ತವೆ. ಇದು ಮನುಷ್ಯನಿಗೆ ಹಾನಿ ಮಾಡುವ ಇಲಿಗಳು ಮತ್ತು ನೆಲದ ಮೇಲಿನ ಏಡಿಗಳನ್ನು ತಿಂದು ರೈತನಿಗೆ ನೆರವಾಗುತ್ತದೆ. ಮಳೆಬೀಳುವ ಮುನ್ನ ನೆಲದ ಮೇಲೇರಿ ಬರುವ ಗೆದ್ದಲು, ಇರುವೆಗಳನ್ನು ತಿನ್ನಲು ಮುಂದಾಗುತ್ತದೆ ಮತ್ತು ಅವು ದೊಗರುಗಳ ಮೇಲೆ ಬರುತ್ತಿದ್ದಂತೆಯೇ ಅವುಗಳನ್ನು ನೆಕ್ಕಿ ನುಂಗುತ್ತದೆ. ಹಣ್ಣಿನ ಕಾಲದಲ್ಲಿ ಕಲ್ಲಂಗಡಿ, ಗೆಡ್ಡೆ ಗೆಣಸುಗಳನ್ನು ತಿನ್ನುವುದುಂಟು. ನರಿಯು ತನ್ನ ಯುಕ್ತಿಗೆ ಮತ್ತು ಕುಶಲತೆಗೆ ಹೆಸರಾಗಿದೆ. ಆಹಾರ ಜೀವಿಯನ್ನು ಹಿಡಿಯುವಾಗ ತುಂಬಾ ಎಚಚರಿಕೆ ಹಾಗೂ ಜಾಣ್ಮೆಯನ್ನು ಪ್ರದರ್ಶಿಸುತ್ತದೆ.

ನರಿ ಒಂದು ಪಿಡುಗೂ ಹೌದು. ಕೋಳಿ ಸಾಕಣೆ ಕೇಂದ್ರಗಳ ಮೇಲೆ ಮತ್ತು ಗದ್ದೆಗಳಿಗೆ ದಾಳಿ ಇಟ್ಟು ಅಪಾರ ಹಾನಿ ಉಂಟು ಮಾಡಿದರೂ ಮನುಷ್ಯನಿಗೆ ಹಾನಿಕಾರಕಗಳಾದ ದಂಶಕ ಪ್ರಾಣಿಗಳನ್ನು ಹತೋಟಿಯಲ್ಲಿಡುವುದರಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

—- 

ಗಣ : ಕಾನಿವೋರ
ಕುಟುಂಬ : ಫೀಲಿಡೀ
ಉದಾ : ಕಾಡುಬೆಕ್ಕು (
Jungle Cat)
ಶಾಸ್ತ್ರೀಯ ನಾಮ : ಫೀಲಿಸ್ ಕಾಸ್ (Felis chaus)

466_69_PP_KUH

ವಿತರಣೆ ಮತ್ತು ಆವಾಸ : ಭಾರತದಲ್ಲಿ ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ ವ್ಯಾಪಕವಾಗಿ ಹರಡಿದೆ. ಇದು ಒಣ ಹವೆ ಇರುವ ಬಯಲು ಪ್ರದೇಶಗಳಲ್ಲಿ, ಹೆಚ್ಚಾಗಿ ಹುಲ್ಲುಗಾವಲು, ಕುರುಚಲು ಕಾಡು, ನದಿಗಳ ದಂಡೆಗಳಲ್ಲಿ, ಜೌಗು ಮತ್ತು ಜೊಂಡುಗಳ ನಡುವೆ ವಾಸಿಸುತ್ತದೆ.

ಗಾತ್ರ : ತಲೆ ಮತ್ತು ದೇಹದ ಉದ್ದ (೬೦ ಸೆಂ.ಮೀ.) ೨ ಅಡಿಗಿಂಗ ತುಸು ಹೆಚ್ಚು. ಬಾಲದ ಉದ್ದ ೩೦ ಸೆಂ.ಮೀ. ಇದರ ತೂಕ ೫ ರಿಂದ ೬ ಕೆ.ಜಿ.

ಆಹಾರ : ಸಣ್ಣ ಸಸ್ತನಿಗಳು, ಹಾವುಗಳು ಮತ್ತು ಪಕ್ಷಿಗಳು ಇದರ ಆಹಾರ. ಹಳ್ಳಿಗಳ ಪಕ್ಕದಲ್ಲಿರುವಾಗ ಕೋಳಿಗಳನ್ನು ಹಿಡಿದು ತಿನ್ನುವುದುಂಟು.

ಲಕ್ಷಣಗಳು : ಮೈ ಬಣ್ಣ ಬೂದು ಅಥವಾ ಮರಳು ಹಳದಿಯಿಂದ ಹಳದಿಬೂದು. ಬಾಲದ ತುದಿ ಕಪ್ಪು. ದೇಹದ ಹಿಂಭಾಗದಲ್ಲಿ ದಟ್ಟ ಮತ್ತು ಉದ್ದ ಕೂದಲಿವೆ. ಕೂದಲು ಕಾಡುಬೆಕ್ಕು ವೇಗವಾಗಿ ಓಡಲು ಸಹಾಯಮಾಡುತ್ತವೆ. ಕಿವಿಗಳು ಕೆಂಪು, ಕಣ್ಣು ತಿಳಿ ಹಸಿರು, ರಾತ್ರಿಯಲ್ಲಿ ಹೊಳೆಯುತ್ತಿರುತ್ತವೆ. ಕಣ್ಣುಗಳ ರಚನೆಯಲ್ಲಿ ಗ್ವಾನಿಸ್ ಎಂಬ ರಾಸಾಯನಿಕ ವಸ್ತು ಇರುವುದರಿಂದ ಅದರ ಮೇಲೆ ಬೆಳಕು ಬಿದ್ದಾಗ, ಅದು ಪ್ರತಿಫಲಿಸಿ ಹೊಳೆಯುತ್ತದೆ. ಕಾಲುಗಳು ಉದ್ದ. ಕವಿಗಳ ತುದಿಯಲ್ಲಿ ಕಪ್ಪು ಕೂದಲಿವೆ. ಇವಕ್ಕೆ ಗ್ರಹಣ ಶಕ್ತಿ ಉತ್ತಮಮಟ್ಟವಾಗಿದ್ದು ಕಣ್ಣಿಗೆ ಕಾಣದಿರುವಂತಹ ವಸ್ತುಗಳ ಚಲನವಲನಗಳನ್ನು ಗುರುತಿಸಲು ಸಹಾಯಕವಾಗಿದೆ. ದಕ್ಷಿಣ ಭಾರತದ ಕಾಡುಬೆಕ್ಕುಗಳಲ್ಲಿ ತುಪ್ಪಳದ ಮೇಲೆ ಮಚ್ಚೆಗಳಿವೆ. ಬಾಲದ ತುದಿಯಲ್ಲಿ (ಕೊನೆಯಲ್ಲಿ) ಉಂಗುರಗಳಿವೆ. ಅಂಗೈಗಗಳು ತಿಳಿಹಳದಿ, ಕಪ್ಪು ಅಥವಾ ಕಪ್ಪು ಮಿಶ್ರಿತ ಕಂದು. ದೇಹದ ತಳಭಾಗ ಬೆಳ್ಳಗಿದೆ ಮತ್ತು ಗೆರೆಗಳಿದ್ದ ಗುರುತುಗಳು ಕಾಣಿಸುತ್ತವೆ. ಕೋರೆ ಹಲ್ಲುಗಳು ಉದ್ದ ಮತ್ತು ಚೂಪಾಗಿವೆ. ಮೇಲಿನ ಮತ್ತು ಕೆಳಗಿನ ಕೋರೆ ಹಲ್ಲುಗಳು ಕತ್ತರಿಯಂತೆ ಕೆಲಸ ಮಾಡಿ ಮಾಂಸವನ್ನು ಕತ್ತರಿಸಲು ನೆರವಾಗುತ್ತವೆ. ಬೆರಳುಗಳಲ್ಲಿ ಅತಿ ಚೂಪಾದ ನಖಗಳಿವೆ. ಉಪಯೋಗಿಸದಿದ್ದಾಗ ಈ ನಖಗಳನ್ನು ಪಾದದೊಳಕ್ಕೆ ಮಡಿಚಿಟ್ಟುಕೊಂಡು ಮರೆಯಾಗಿಟ್ಟಿರುತ್ತದೆ. ಮೂಗು ಸದಾ ಒದ್ದೆಯಾಗಿರುತ್ತದೆ. ಈ ರೀತಿ ಒದ್ದೆಯಾಗಿರುವುದು ವಾಸನೆಯಿಂದ ಆಹಾರವನ್ನು ಗುರುತಿಸಲು ಸಹಾಯ ಮಾಡುತ್ತದೆ.

ಸಂತಾನಾಭಿವೃದ್ಧಿ : ಸಾಮಾನ್ಯವಾಗಿ ಜನವರಿ-ಏಪ್ರೀಲ್ ಮತ್ತು ಆಗಸ್ಟ್-ನವೆಂಬರ್ ತಿಂಗಳಲ್ಲಿ ಮರಿ ಹಾಕುತ್ತವೆ. ಒಂದು ಸೂಲದಲ್ಲಿ ಸಾಮಾನ್ಯವಾಗಿ ೨ ಮರಿಗಳನ್ನು ಹಾಕುತ್ತವೆ. ಅಪರೂಪವಾಗಿ ೫ ಮರಿಗಳು ಹುಟ್ಟಬಹುದು. ಹುಟ್ಟಿದ ಮರಿಗಳು ಕುರಡು. ೧೧ ರಿಂದ ೧೫ ದಿನಗಳ ವೇಳೆಗೆ ಕಣ್ಣು ತೆರೆಯುತ್ತವೆ. ಮರಿಗಳನ್ನು ಸುಲಭವಾಗಿ ಸಾಕಬಹುದು. ಗರ್ಭಾವಧಿ ೬೫ ರಿಂದ ೬೭ ದಿನಗಳು.

ಸ್ವಭಾವ : ಸಾಮಾನ್ಯವಾಗಿ ರಾತ್ರಿ ಬೇಟೆಯಾಡಿದರೂ, ಹಗಲಿನಲ್ಲಿಯೂ ಅಂದರೆ ಮುಂಜಾನೆ ಮತ್ತು ಸಂಜೆಗಳಲ್ಲಿ ಆಹಾರದ ಬೇಟೆಯಾಡುವುದು ಸಾಮಾನ್ಯ. ಇದು ತುಂಬಾ ಬಲಯುತವಾದ ಪ್ರಾಣಿ ಮತ್ತು ಬೇಗ ಪ್ರತಿಕ್ರಿಯಿಸುತ್ತದೆ. ತನಗಿಂತ ದೊಡ್ಡ ಆಹಾರ ಪ್ರಾಣಿಗಳನ್ನು ಇದು ಹಿಡಿದು ಸೋಲಿಸಬಲ್ಲದು. ಇದು ಮುಳ್ಳು ಹಂದಿಗಳನ್ನೂ ಆಕ್ರಮಿಸಿದ ಅಥವಾ ಕೊಮದ ನಿದರ್ಶನಗಳಿವೆ. ಇದಕ್ಕೆ ಸಾಕ್ಷಿಯಾಗಿ ಇದರ ಅಂಗಾಲುಗಳಲ್ಲಿ ಮುಳ್ಳುಗಳು ಹುದುಗಿರುವುದನ್ನು ಕಂಡವರಿದ್ದಾರೆ. ತುಂಬ ಧೈರ್ಯ ತೋರುತ್ತದೆ. ಜನರಿದ್ದಾಗಲೂ ಅವರ ಇದಿರಿನಲ್ಲಿಯೇ ಕೋಳಿಗಳನ್ನು ಹಿಡಿದ ದಾಖಲೆಗಳಿವೆ.

—- 

ಗಣ : ಕಾರ್ನಿವೋರ
ಕುಟುಂಬ : ಫೀಲಿಡೀ
ಉದಾ : ಭಾರತದ ಸಾಮಾನ್ಯ ಚಿರತೆ
(Common Indian Panther)
ಶಾಸ್ತ್ರೀಯ ನಾಮ : ಪ್ಯಾಂಥೆರ ಪಾರ್ಡಸ್ (Panthera pardus)

467_69_PP_KUH

ಇದನ್ನು ಕುರುಬ, ಹೊನಿಗ, ಮೊಟಗ ಎಂದೂ ಕರೆಯುವುದುಂಟು.

ವಿತರಣೆ ಮತ್ತು ಆವಾಸ : ಚಿರತೆಗಳು ಇಡೀ ಭಾರತದ ಮತ್ತು ಸಿಲೋನ್ (ಶ್ರೀಲಂಕಾ)ನ ಅನೇಕ ಪರಿಸರಗಳಲ್ಲಿ ನೆಲಸಿವೆ. ನಿಬಿಡಕಾಡು, ಹುಲ್ಲುಗಾವಲು, ಕುರುಚಲು ಅರಣ್ಯ, ಬಂಡೆಗಲ್ಲಿನ ಬೆಟ್ಟಗಳಲ್ಲಿ ಅಥವಾ ಬಯಲುಗಳಿರುವ ಪ್ರದೇಶದಲ್ಲಿ ಕಾಣಬರುತ್ತವೆ. ಇವು ವಿಶೇಷವಾಗಿ ಅರಣ್ಯದ ಬಳಿಯ ಹಳ್ಳಿಗಳ ಸುತ್ತಮುತ್ತ ತಿರುಗುತ್ತವೆ. ನಿಬಿಡಕಾಡುಗಳಲ್ಲಿ ವಿರಳ. ಕಪ್ಪು ಚಿರತೆಗಳು ಹೆಚ್ಚಾಗಿ ದಕ್ಷಿಣ ಭಾರತ ಮತ್ತು ಮಲಯದ ಅಧಿಕ ಮಳೆ ಬೀಳುವ ಹಚ್ಚಹಸಿರು ಅರಣ್ಯಗಳಲ್ಲಿ ಕಾಣಿಸುತ್ತವೆ.

ಗಾತ್ರ : ಗಂಡು ಚಿರತೆಯ ಪೂರ್ಣ ಉದ್ದ ೭ ಅಡಿ, ಬಾಲದ ಉದ್ದ ೨ ೧/೨ ಅಡಿಯಿಂದ ೩ ಅಡಿ. ಎತ್ತರ ೨ ೧/೨ ಅಡಿ. ತೂಕ ೬೮ ಕೆ.ಜಿ. ಹೆಣ್ಣು ಚಿರತೆ ಉದ್ದಳತೆಯಲ್ಲಿ ಗಂಡಿಗಿಂತ ೧ ಅಡಿ ಕಡಿಮೆ ಮತ್ತು ಇದರ ತೂಕ ೫೦ ಕೆ.ಜಿ. ಮಾತ್ರ.

ಆಹಾರ : ಇದು ಜಿಂಕೆ, ನರಿ, ನಾಯಿ, ಹಂದಿ, ಏದು, ಏಡಿ, ಎರಳೆ, ಹಕ್ಕಿ, ಆಡುಕುರಿ, ಕೋಳಿ, ಮಂಗ, ಮೊಲ ಮೊದಲಾದ ಅನೇಕ ಸಣ್ಣ ಪ್ರಾಣಿಗಳನ್ನು ಗಂಟಲಿಗೆ ಬಾಯಿ ಹಾಕಿಕೊಂಡು ತಿನ್ನುತ್ತದೆ. ಅದರ ದೊಡ್ಡ ಸಸ್ತನಿಗಳಾದ ಕಾಟಿ, ಕಾಡೆಮ್ಮೆಗಳ ಗೊಡವೆಗೆ ಹೋಗುವುದಿಲ್ಲ. ಚಿರತೆಗಳು ಉರಗಗಳನ್ನೂ ತಿನ್ನುತ್ತವೆ. ಅಂದರೆ ಇವು ಮಾಂಸಾಹಾರಿಗಳು.

ಲಕ್ಷಣಗಳು : ಚಿರತೆಗಳ ಗಾತ್ರ, ಬಣ್ಣ, ತುಪ್ಪುಳ, ಚುಕ್ಕೆಗಳ ಸಾಂದ್ರತೆ, ಬಾಲದ ಉದ್ದ ಅವುಗಳ ವಾಸಿಸುವ ಪ್ರದೇಶ ಮತ್ತು ವಾತಾವರಣಕ್ಕೆ ತಕ್ಕಂತೆ ಬದಲಾವಣೆ ಹೊಂದಿವೆ. ಹಳದಿ ಅಥವಾ ನಸುಗೆಂಪು ಬಣ್ಣದ ದೇಹದ ಮೇಲೆ ಕಪ್ಪು ಚುಕ್ಕೆಗಳಿವೆ. ಈ ಚುಕ್ಕೆಗಳ ನಡುವೆ ಬೊಟ್ಟು ಇಟ್ಟಂತೆ ತಿಳಿಕಂದು ಬಣ್ಣದ ಕಲೆಗಳಿವೆ. ಇವುಗಳಿಗೆ ರೊಜೆಟ್ಸ್ (Rosettes) ಎಂದು ಹೇಳುವುದುಂಟು. ಹೊಟ್ಟೆಯ ಬುಡದ ಬಣ್ಣ ಬಿಳಿ. ಬಾಲದಲ್ಲಿ ಮತ್ತು ಕಾಲುಗಳಲ್ಲಿ ಚುಕ್ಕೆಗಳಿವೆ. ಮುಂಗಾಲುಗಳಲ್ಲಿ ೫ ಬೆರಳು ಮತ್ತು ಹಿಂಗಾಲುಗಳಲ್ಲಿ ೪ ಬೆರಳುಗಳಿವೆ. ಬೆರಳುಗಳಿಗೆ ಬಿಳಿ ನಖಗಳಿವೆ. ಈ ನಖಗಳನ್ನು ಹಿಂದಕ್ಕೆಳೆದುಕೊಳ್ಳಬಹುದು. ಚಿರತೆ ೫ ಬೆರಳುಗಳ ಮೇಲೆ ನಡೆಯುತ್ತದೆ ಪಾದದಲ್ಲಿ ದಪ್ಪನಾದ ಮೆತ್ತೆ ಇದೆ. ೨೮ ಅಥವಾ ೩೦ ಹಲ್ಲುಗಳಿವೆ. ದಂತ ಸೂತ್ರ ೩/೩, ೧/೧, ೨/೨, ೩/೩. ಕಿವಿ ಮತ್ತು ಕಣ್ಣುಗಳು ಚುರುಕು, ಆದರೆ ಮೂಗಿನ ಸಂವೇದನಾ ಶಕ್ತಿ ಕಡಿಮೆ. ಕಪ್ಪು ಚಿರತೆಗಳ ಮೈಮೇಲೆ ಚುಕ್ಕೆಗಳಿವೆ. ಇವು ಪ್ರಾಣಿಯನ್ನು ದಿಟ್ಟಿಸಿ ನೋಡಿದಲ್ಲಿ ಮಾತ್ರ ಕಾಣಿಸುತ್ತವೆ.

ಸಂತಾನಾಭಿವೃದ್ಧಿ : ವರ್ಷವಿಡೀ ಮರಿಹಾಕಬಹುದು. ಇದರಿಂದಾಗಿ ಮರಿಗಳನ್ನು ವರ್ಷದ ಎಲ್ಲಾ ಕಾಲದಲ್ಲಿಯೂ ಕಾಣಬಹುದು. ಆದರೆ ಏಪ್ರೀಲ್ ತಿಂಗಳಲ್ಲಿ ಹೆಚ್ಚು ಸಂಖ್ಯೆಯಲ್ಲಿ ಕಾಣಬಹುದು. ೨ ೧/೨ ಯಿಂದ ೪ ವರ್ಷಗಳಲ್ಲಿ ಲಿಂಗಪ್ರೌಢತನ ಗಳಿಸುತ್ತದೆ. ಬೆದೆಯಕಾಲ ಬಹುಶಃ ಚಳಿಗಾಲ. ಗರ್ಭಾವಧಿ ೯೦-೯೫ ದಿನಗಳು. ಒಂದು ಸೂಲದಲ್ಲಿ ೨-೩ ಮರಿಗಳು ಹುಟ್ಟುತ್ತವೆ. ಕೆಲವೊಮ್ಮೆ ೫ ಮರಿಗಳು ಹುಟ್ಟಬಹುದು. ಇವುಗಳಲ್ಲಿ ೨ ಮಾತ್ರ ಉಳಿಯುತ್ತವೆ ಮತ್ತು ಅದರಲ್ಲಿ (ಪ್ರೌಢಾವಸ್ಥೆ) ಪ್ರಾಯವನ್ನು ತಲುಪುವುದು ಒಮದೇ. ಹುಟ್ಟಿದಾಗ ಮರಿಗಳು ಕುರುಡ. ೯ ದಿನಗಳ ನಂತರ ಕಣ್ಣು ತೆರೆಯುತ್ತವೆ. ಮರಿಗಳ ತೂಕ ೫೦೦-೬೦೦ ಗ್ರಾಂ. ತಾಯಿ ಚಿರತೆಯು ಮರಿಗಳನ್ನು ತರಬೇತಿಗೊಳಿಸುತ್ತದೆ. ಮರಿಗಳು ೩-೪ ತಿಂಗಳಿಗೆ ಹಾಲು ಕುಡಿಯುವುದನ್ನು ಬಿಟ್ಟರೂ ತಾಯಿಯ ಜೊತೆಯಲ್ಲಿ ಒಂದು ವರ್ಷದವರೆಗಿದ್ದು ನಂತರ ಬೇರೆಯಾಗುತ್ತವೆ. ಮರಿಗಳು ೩-೪ ವರ್ಷಕ್ಕೆ ಪೂರ್ಣ ಬೆಳೆದು ಪ್ರಾಯಕ್ಕೆ ಬರುತ್ತವೆ. ಅನುವಂಶೀಯ ಗುಣದಿಂದಾಗಿ ಕೆಲವೊಮ್ಮೆ ಒಂದೇ ಸೂಲದಲ್ಲಿ ಕಪ್ಪು ಮತ್ತು ಹಳದಿ ಬಣ್ಣದ ಚಿರತೆಗಳು ಹುಟ್ಟುವುದುಂಟು. ಮೃಗಾಲಯದಲ್ಲಿ ಹುಲಿ ಮತ್ತು ಸಿಂಹಗಳ ಜೊತೆ ಚಿರತೆ ಲೈಂಗಿಕ ಸಂಪರ್ಕ ಬೆಲೆಸಿ ಮರಿಗಳನ್ನು ಪಡೆದ ನಿದರ್ಶನಗಳಿದ್ದರೂ ಮುಂದೆ ಅಷ್ಟೊಂದು ವಿವರಗಳು ದೊರಕಿಲ್ಲ.

ಸ್ವಭಾವ : ಇವು ಎಲ್ಲಿಬೇಕಾದರೂ ಇರಬಲ್ಲವು. ಹುಲಿಗಳಂತೆ ದಟ್ಟ ಕಾಡುಗಳು ಬೇಕಾಗಿಲ್ಲ. ಹೆಚ್ಚು ತೂಕದ ಇತರೇ ಮಾಂಸಾಹಾರಿ ಪ್ರಾಣಿಗಳಿಗಿಂತ ಇದು ವೇಗ ಮತ್ತು ಶಕ್ತಿಯಲ್ಲಿ ಮಿಗಿಲಾದದ್ದೆಂದು ಹೇಳಬಹುದು. ದೊಡ್ಡ ಮಾಂಸಾಹಾರಿಗಳಲ್ಲಿಯೇ ಮೋಸಗಾರ ಮತ್ತು ಚಾಣಾಕ್ಷ ಪ್ರಾಣಿ. ಇದು ಅತಿಕ್ರೂರ ಮತ್ತು ಅಪಾಯಕಾರಿ ಪ್ರಾಣಿ. ಗಾಯಗೊಂಡಾಗ ಅಥವಾ ಮರಿಗಳಿದ್ದಾಗ ಇದನ್ನು ಸಮೀಪಿಸುವುದು ಅಪಾಯ. ಹುಲಿ, ಸಿಂಹಗಳನ್ನು ಬಿಟ್ಟರೆ ಅದೇ ದೊಡ್ಡ ಮಾಂಸಾಹಾರಿ. ಇದು ನಿರಾಯಾಸವಾಗಿ ಮರ ಹತ್ತಬಲ್ಲದು, ಮರದ ಮೇಲಿಂದ ಚಂಗನೆ ಜಿಗಿದು ಕೆಳಗೆ ಹೋಗುತ್ತಿರುವ ಪ್ರಾಣಿಗಳನ್ನು ಕೊಲ್ಲಬಹುದು. ಮರ ಇಳಿಯುವಾಗ ಮುಖ ಕೆಳಗೆ ಮಾಡಿ ಇಳಿಯುತ್ತದೆ. ತನ್ನ ತೂಕದ ಎರಡರಷ್ಟು ಗಾತ್ರದ ಹಸುವಿನ ಮತ್ತು ಎಮ್ಮೆ ಕರುಗಳನ್ನು ಕೊಂದು ೩ ರಿಂದ ೫ ಕಿ.ಮೀ. ಎಳೆದೊಯ್ಯಬಹುದು. ಜಿಂಕೆಗಳನ್ನು ಕೊಂದು ಮರದ ರೆಂಬೆಗಳ ಮೇಲಕ್ಕೊಯ್ದು ಹುಲಿ, ಸಿಂಹ, ಕಾಡುನಾಯಿ, ತೋಳಗಳಿಗೆ ಸಿಗದಂತೆ ಇಟ್ಟುಕೊಂಡು ತಿನ್ನುತ್ತದೆ. ತಾನು ಬೇಟೆಯಾಡಿ ಹಿಡಿದ ಪ್ರಾಣಿಗಳನ್ನು ಹೊಟ್ಟೆಯ ಕಡೆಯಿಂದ ತಿನ್ನಲು ಆರಂಭಿಸುತ್ತದೆ. ಆದರೆ ಅಷ್ಟೊಂದು ಚೊಕ್ಕಟವಾಗಿ ತಿನ್ನುವುದಿಲ್ಲ. ಒಂಟಿಯಾಗಿ ಬೇಟೆಯಾಡುತ್ತದೆ. ಆಕಸ್ಮಾತ್ತಾಗಿ ಜನರ ಮೇಲೆರಗುತ್ತದೆ. ಕೆಲವು ಸರ್ವಭಕ್ಷಕಗಳಾಗುವುದುಂಟು. ರುದ್ರಪ್ರಯಾಗದ ನರಭಕ್ಷಕ ಚಿರತೆಯ ಕಥೆ ಬರೆದು ಗೇಬೇಟ್‌ಸುಪ್ರಸಿದ್ಧಪಡಿಸಿದ್ದಾರೆ. ಕೆಲವೊಮ್ಮೆ ಆಡು, ಕುರಿ, ದನಕರುಗಳನ್ನು ಎತ್ತಿಕೊಂಡು ಹೋಗುವುದುಂಟು. ಭಾರತದಲ್ಲಿ ಒಂದು ಚಿರತೆಯು ೫೨೦ ಜನರನ್ನು ಆಹುತಿ ತೆಗೆದುಕೊಂಡ ದಾಖಲೆ ಉಂಟು. ಆಶೆಬುರುಕ ಪ್ರಾಣಿ. ನಾಯಿಗಳ ಬೆನ್ನುಹತ್ತಿ ಮನೆಗಳಿಗೂ ನುಗ್ಗುತ್ತದೆ. ಮಬ್ಬುಗತ್ತಲಾಗುವದರೊಳಗೆ ಕೊಂದು ಪ್ರಾಣಿಯನ್ನು ತಿನ್ನಲು ಬರುತ್ತದೆ. ಒಂದೊಂದು ಚಿರತೆಗೆ ಒಂದೊಂದು ತರದ ಆಹಾರ ಸೇರುತ್ತದೆಂದು ಕಂಡುಬಂದಿದೆ. ಕೆಲವಕ್ಕೆ ಜಿಂಕೆಗಳು, ಇನ್ನು ಕೆಲವಕ್ಕೆ ಹಂದಿಗಳು ಮತ್ತೆ ಕೆಲವುಗಳಿಗೆ ಮೀನುಗಳು ಇಷ್ಟ ಎಂದು ತಿಳಿದು ಬಂದಿದೆ. ಈ ಕಾರಣದಿಂದಾಗಿ ಮನುಷ್ಯನ ಮಾಂಸದ ರುಚಿಯಿಂದ ನರಭಕ್ಷಕವಾಗಿರಬಹುದು ಎಂದು ಭಾವಿಸಲಾಗಿದೆ. ಪ್ರಣಯದ ಹೋರಾಟದಲ್ಲಿ ಎದುರಾಳಿಯನ್ನು ಕೊಂದು ಸ್ವಜಾತಿಭಕ್ಷಕವಾದ ನಿದರ್ಶನಗಳಿವೆ. ಗಂಡು ಹೆಣ್ಣುಗಳು ಜೊತೆಯಲ್ಲಿರುತ್ತವೆ. ಹೆಣ್ಣುಗಳಲ್ಲಿ ತಾಯ್ತನವು ಅಧಿಕವಾಗಿದೆ.

ಚಿರತೆ ಚಂಗನೆ ಹಾರಿ ಗುರಿ ತಪ್ಪದಂತೆ ತನ್ನ ಬೇಟೆಯನ್ನು ಹಿಡಿದು ಕೊಂದು ತಿನ್ನುವುದರಲ್ಲಿ ಅಸಾಮಾನ್ಯ ಕೌಶಲವನ್ನು ಪ್ರದರ್ಶಿಸುತ್ತದೆ. ಹಗಲು ವೇಳೆಯಲ್ಲಿ ಮಳೆಗಳ ಅಥವಾ ಬಂಡೆಗಳ ಸಂದುಗಳಲ್ಲಿ ಅಥವಾ ಮರದ ಕೊಂಬೆಗಳ ಮೇಲೇರಿ ಅಡಗಿದ್ದು ರಾತ್ರಿಯಲ್ಲಿ ಬೇಟೆಗೆ ಹೊರಡುತ್ತದೆ. ಇದರ ಹಳದಿ ಚರ್ಮದ ಮೇಲೆ ಕಪ್ಪು ಚುಕ್ಕೆಗಳಿರುವುದರಿಂದ ಮರದ ಎಲೆಗಳ ನಡುವೆ ತೂರುವ ಬಿಸಿಲು ನೆರಳುಗಳ ವಿನ್ಯಾಸಕ್ಕೆ ತನ್ನ ಮೈಬಣ್ಣವನ್ನು ಹೊಂದಿಸಿಕೊಳ್ಳುವುದರ ಮೂಲಕ ಸನ್ನಿವೇಶದಲ್ಲಿ ಬೆರೆತು ಹೋಗಿ ಆತ್ಮರಕ್ಷಣೆ ಮಾಡಿಕೊಳ್ಳುತ್ತದೆ. ಇದು ಹುಲಿಗಿಂತಲೂ ಧೈರ್ಯಶಾಲಿ. ಕೆಲವು ವೇಳೆ ಸ್ವಲ್ಪವೂ ಅಂಜದೆ ಜನವಾಸಿಸುವ ಕಡೆಗಳಲ್ಲೇ ಅಡಗಿದ್ದು ರಾತ್ರಿ ವೇಳೆ ಅವರ ಮೇಲೆ ಬಿದ್ದು ಕೊಂದು ತಿನ್ನುತ್ತವೆ. ಇದು ಬಲು ಚುರುಕು ಪ್ರಾಣಿ. ಇಂದ್ರಿಯಗಳು ಬಲು ಚುರುಕಗಿರುವುದರಿಂದ ಸಣ್ಣಪುಟ್ಟ ಪ್ರಾಣಿಗಳನ್ನು ಹಿಡಿದು ತಿನ್ನುವಾಗ ಹೆಚ್ಚಿಗೆ ಬುದ್ಧಿವಂತಿಕೆಯನ್ನು ಪ್ರದರ್ಶಿಸುತ್ತದೆ.

ಚಿರತೆ ೨ ಮೀ ಎತ್ತರ, ೬ ಮೀ. ಉದ್ದ ಜಿಗಿಯಬಲ್ಲದು. ವೇಗವಾಗಿ ಓಡುತ್ತದೆ. ಕೆಲವು ಬಾರಿ ಅಗಾಗ ಗಂಟೆಗೆ ೯೬ ಕಿ.ಮೀ. ವೇಗವನ್ನೂ ತಲುಪಬಹುದು. ಆದರೆ ಇದು ಹೆಚ್ಚು ಹೊತ್ತು ಅದೇ ವೇಗದಲ್ಲಿ ಓಡಲಾರದು, ಈಜಬಲ್ಲದು. ಆದರೆ ಒದ್ದೆಯಾಗಲು ಬಯಸುವುದಿಲ್ಲ. ಒಂಟಿ ಜೀವಿ. ಬೆದೆಯ ಸಮಯದಲ್ಲಿ ಅಥವಾ ಮರಿಗಳ ಜೊತೆ ಇದ್ದಾಗ ೨-೩ ಪ್ರಾಣಿಗಳ ಒಟ್ಟಿಗೆ ಇರುವುದನ್ನು ನೋಡಬಹುದು. ಬೇಟೆಗಾಗಿ ರಾತ್ರಿ ಅಲೆಯುತ್ತದೆ. ಹಸಿದಾಗ ಹಗಲೂ ಬೇಟೆಯಾಡುತ್ತದೆ. ಗಂಡಾಂತರ ಕಾಲದಲ್ಲಿ ಒಮ್ಮೆಲೇ ನುಸುಳಿ ಅಥವಾ ನೆಲ ಉಜ್ಜಿ ಮಾಯವಾಗುತ್ತದೆ. ಮನುಷ್ಯನು ಚಿರತೆಯನ್ನು ತಿಳಿಯುವದಕ್ಕಿಂತಲೂ ಚಿರತೆಯು ಮನುಷ್ಯನನ್ನು ಚೆನ್ನಾಗಿ ತಿಳಿದುಕೊಂಡಿದೆ ಎಂಬ ಅಭಿಪ್ರಾಯವಿದೆ.

ಚಿರತೆಯನ್ನು ರಾಜಪುತ್ರನೆಂದು ಕರೆಯುವುದುಂಟು. ಇದು ಅತ್ಯಂತ ಸುಂದರ ಪ್ರಾಣಿ. ಈ ಸುಂದರ ಪ್ರಾಣಿಯ ಚರ್ಮಕ್ಕಾಗಿ ಈಗಲೂ ಇವುಗಳನ್ನು ಹೆಚ್ಚು ಸಂಖ್ಯೆಯಲ್ಲಿ ಕೊಲ್ಲುತ್ತಿದ್ದಾರೆ. ಇದರಿಂದಾಗಿ ಇತ್ತೀಚೆಗೆ ಇವುಗಳ ಸಂಖ್ಯೆ ಕಡಿಮೆಯಾಗಿದೆ.

ಭಾರತದಲ್ಲಿ ಚಿರತೆಯ ೩ ಉಪ ಪ್ರಭೇದಗಳನ್ನು ಗುರುತಿಸಿದ್ದಾರೆ. ಇವು ಬಿಸಿಲನ್ನು ಸಹಿಸುತ್ತವೆ ಮತ್ತು ಬಹಳೊಮ್ಮೆ ಹಗಲು ಬೇಟೆಯಾಡುವುದುಂಟು. ಇದರ ಮುಖ್ಯ ಶತ್ರು ಹುಲಿ, ಇದರ ಸ್ವಭಾವದಿಂದ ಕೆಲವೊಮ್ಮೆ ಮನುಷ್ಯ ವಸಸತಿಗಳಿಗೆ ಬರುವುದುಂಟು. ಇದರಿಂದ ಮನುಷ್ಯನಿಗೆ ಹೆಚ್ಚು ತೊಂದರೆ. ಮನುಷ್ಯ ವಸತಿಗಳ ಹತ್ತಿರ ಕಾಡುಗಳ ಹೊರಗೆ ಉಳಿದು ಸಾಕುಪ್ರಾಣಿಗಳಾದ ಕರು, ಕುರಿ, ಆಡು, ಸಾಕಿದ ನಾಯಿ, ಕತ್ತೆಗಳನ್ನು ಹಿಡಿದು ತಿನ್ನುತ್ತದೆ.

—- 

ಗಣ : ಕಾರ್ನಿವೋರ
ಕುಟುಂಬ : ಫೀಲಿಡೀ
ಉದಾ : ಮೀನುಗಾರ ಬೆಕ್ಕು (
Fishing Cat)
ಶಾಸ್ತ್ರೀಯ ನಾಮ : ಪ್ರಿಯೊನೈಲೂರಸ್‌ವಿವೆರಿನಸ್‌(Prionailurus viverrinus)

468_69_PP_KUH

ವಿತರಣೆ ಮತ್ತು ಆವಾಸ : ಇದು ಮಂಗಳೂರಿನಿಂದ ಕನ್ಯಾಕುಮಾರಿಯವರೆಗೆ ಮಲಬಾರ ಕರಾವಳಿಯ ಹಿಮ್ಮೆಟ್ಟಿದ ಸಮುದ್ರ ನೀರಿನ ಕೊಲ್ಲಿಗಳಲ್ಲಿ ವಾಸಿಸುತ್ತದೆ. ಸಮುದ್ರದ ಉಬ್ಬರವಿಳಿತಗಳ ಕೊರಕಲುಗಳು ನದಿಳು, ಮ್ಯಾಂಗ್ರೂವ್‌ಜೌಗುಪ್ರದೇಶ, ಬೆಟ್ಟದ ಜರಿಗಳು ಮತ್ತು ಜೊಂಡುಗಳ ನಡುವೆಯೂ ವಾಸಿಸುತ್ತದೆ.

ಗಾತ್ರ : ತಲೆ ಮತ್ತು ದೇಹದ ಉದ್ದ (೯೦ ರಿಂದ ೧೦೫ ಸೆಂ.ಮೀ) ೩ ರಿಂದ ೩ ೧/೨ ಅಡಿ, ಬಾಲ ೧ ಅಡಿ, ತೂಕ ೧೧ರಿಂದ ೧೫ ಕೆ.ಜಿ.

ಆಹಾರ : ನೀರಿನ ಸಮೀಪದಲ್ಲಿ ವಾಸಿಸಿ ಮೀನು ಮತ್ತು ಏಡಿಗಳನ್ನು ಹಿಡಿದು ತಿನ್ನುತ್ತದೆ. ಸಣ್ಣ ಹಕ್ಕಿಗಳು ಮತ್ತು ಮೃದ್ವಂಗಿಗಳು ಇದರ ಆಹಾರ.

ಲಕ್ಷಣಗಳು : ಸಾಧಾರಣ ಗಾತ್ರದ ದೇಹ, ಮೋಟು ಬಾಲ ಮತ್ತು ಆದರೆ ದಪ್ಪ ಕಾಲುಗಳು. ದೇಹದ ಮೇಲೆ ಬಿರುಸಾದ ಗಿಡ್ಡ ತುಪ್ಪುಳವಿದೆ. ತಲೆ ಉದ್ದ, ಬಾಲ ಗಿಡ್ಡ. ಕಂದು ಬೂದು ಅಥವಾ ಆಲಿವ್‌ಬೂದು ಮೈಬಣ್ಣದ ಮೇಲೆ ಉದ್ದ ಸಾಲುಗಳಲ್ಲಿ ಭಿನ್ನ ಆಕಾರದ ಕಪ್ಪು ಚುಕ್ಕೆಗಳಿವೆ. ಕಪ್ಪು ರೇಖೆಗಳು ಹಣೆಯಿಂದ ತಲೆಯ ಮೇಲೆ ಹಾಯ್ದು ಕುತ್ತಿಗೆಯನ್ನು ಮುಟ್ಟಿ ಭುಜದ ಮೇಲೆ ಸಣ್ಣ ಪಟ್ಟೆ ಮತ್ತು ಚುಕ್ಕೆಗಳಾಗಿ ಪರಿವರ್ತನೆಗೊಂಡಿವೆ. ಗಲ್ಲಗಳು ಬೂದು ಬಿಳಿ ಬಣ್ಣವಿದ್ದು ಅವುಗಳ ಮೇಲೆ ಕಪ್ಪು ಅಥವಾ ಕಂದು ಅಡ್ಡಪಟ್ಟೆಗಳಿವೆ. ದೇಹದ ಕೆಳಭಾಗದಲ್ಲಿ ಚುಕ್ಕೆಗಳಿವೆ. ಮತ್ತು ಬಾಲದ ಮೇಲೆ ಅಪೂರ್ಣ ಕಪ್ಪು ಉಂಗುರಗಳಿವೆ. ಕಿವಿ ಸಣ್ಣವು ಮತ್ತು ಮೊಂಡು, ಕಿವಿ ಹೊರ ಭಾಗದಲ್ಲಿ ಕಪ್ಪು ಮತ್ತು ಒಂದು ಬಿಳಿಯ ಗುರುತಿದೆ. ಮುಂಗಾಲುಗಳ ಬೆರಳುಗಳ ನಡುವೆ ಜಾಲ ಪಾದವಿದೆ. ಕಾಲುಗಳ ಮೇಲೆ ಅಸ್ಪಷ್ಟ ಗುರುತುಗಳಿರುತ್ತವೆ ಅಥವಾ ಇಲ್ಲದೇ ಇರಬಹುದು.

ಸಂತಾನಾಭಿವೃದ್ಧಿ : ಗರ್ಭಾವಧಿ ೬೩ ದಿನಗಳು. ಒಂದು ಸೂಲದಲ್ಲಿ ೧ ರಿಂದ ೪ ಮರಿಗಳು ಹುಟ್ಟುತ್ತವೆ. ಹುಟ್ಟಿದ ಮರಿಗಳು ೧೭೦ ಗ್ರಾಂ ತೂಕವಿರುತ್ತದೆ. ಅವುಗಳ ತಲೆ ಮತ್ತು ದೇಹದ ಉದ್ದ ೬ ರಿಂದ ೭ ಅಂಗುಲ. ಈ ಬೆಕ್ಕಿನ ಆಯಸ್ಸು ೯ ವರ್ಷಗಳು.

ಸ್ವಭಾವ : ಉಗ್ರವಾದ ಪ್ರಾಣಿ. ಇದು ಆಡುಗಳನ್ನು ಮತ್ತು ಎಳೆಯ ಕರುಗಳನ್ನು ಆಕ್ರಮಿಸಿದ ನಿದರ್ಶನಗಳಿವೆ. ಕುರಿ, ಕರು, ನಾಯಿಗಳನ್ನು ಅಪಹರಿಸುತ್ತದೆ.