೧೨. ಗಣ : ಕಾರ್ನಿವೋರ (Carnivora)

ಈ ಗಣಕ್ಕೆ ಸೇರಿದ ಪ್ರಾಣಿಗಳು ಮಾಂಸಾಹಾರಿಗಳು. ಲ್ಯಾಟಿನ್ ಮೂಲದಿಂದ ಕಾರ್ನಿವೋರ ಎಂಬ ಹೆಸರು ಬಂದಿದೆ. ವಿಶಿಷ್ಟ ಹಲ್ಲುಗಳ ಲಕ್ಷಣಗಳಿಂದಾಗಿ ಇದು ಇನ್ಸ್‌ಕ್ಟಿವೋರ ಗಣಕ್ಕೆ ಹತ್ತಿರವಾಗಿದ್ದು ಆ ಗಣದ ಬುಡದಿಂದ ವಿಕಾಸಗೊಂಡಿದೆ ಅಥವಾ ಉದ್ಭವಿಸಿದೆ ಎಂದು ಭಾವಿಸಲಾಗಿದೆ. ನಾಯಿಗಳು, ಬೆಕ್ಕುಗಳು, ಹುಲಿ, ಸಿಂಹ, ಕರಡಿ ಮುಂತಾದ ಮಾಂಸಾಹಾರಿ ಸಸ್ತನಿಗಳು ಈ ಗಣಕ್ಕೆ ಸೇರುತ್ತವೆ.

ಈ ಪ್ರಾಣಿಗಳ ಹಲ್ಲುಗಳು ಮಾಂಸವನ್ನು ಸಿಗಿಯಲು, ಕತ್ತರಿಸಲು ಅನುಕೂಲವಾಗುವಂತೆ ಮಾರ್ಪಟ್ಟಿವೆ. ಪ್ರತಿದವಡೆಯ ಒಂದೊಂದು ಭಾಗದಲ್ಲಿ ೩ ಸಣ್ಣ ಬಾಚಿಹಲ್ಲುಗಳು, ಚೆನ್ನಾಗಿ ಬೆಳೆದ ಮತ್ತು ಚೂಪಾದ ಕೋರೆಹಲ್ಲುಗಳು, ಕತ್ತರಿಸುವ ಅಂಚನ್ನುಳ್ಳ ಮುಂದವಡೆ ಹಲ್ಲುಗಳು. ಮೇಲಿನ ದವಡೆಯ ಹಲ್ಲುಗಳು ಪರಸ್ಪರ ಕತ್ತರಿಯ ಅಲಗುಗಳಂತೆ ಕತ್ತರಿಸಲು ಅನುವಾಗಿವೆ. ಈ ಮಾರ್ಪಟ್ಟ ಹಲ್ಲುಗಳನ್ನು ಕಾರ್ನೇಷಿಯಲ್ ಹಲ್ಲು ಎಂದು ಕರೆದಿದ್ದಾರೆ. ಪಾದಚಾರಿಗಳು ಅಥವಾ ಅರೆ ಅಂಗುಲಿಗಾಮಿಗಳು ಅಥವಾ ಅರೆ ಪಾದಚಾರಿಗಳು. ಕಾಲುಗಳಲ್ಲಿ ೪ಕ್ಕಿಂತ ಕಡಿಮೆ ಸಂಖ್ಯೆಯ ಬೆರಳುಗಳಿರುವುದಿಲ್ಲ. ಬೆರಳುಗಳಿಗೆ ಚೂಪಾದ ನಖಗಳಿವೆ. ದವಡೆಗಳ ಮತ್ತು ಕತ್ತಿನ ಮಾಂಸಖಂಡಗಳು ಬಲವಾಗಿವೆ. ಈ ಮಾಂಸಖಂಡಗಳು ಅಂಟಿಕೊಳ್ಳುವ ಸಲುವಾಗಿ ಕಪಾಲದ ಮೇಲೆ ಶಿಖಗಳಿವೆ. ಟಿಂಫೆನಿಕ್ ಬುಲ್ಲಾ ದುಂಡಾಗಿದ್ದು ದೊಡ್ಡದಾಗಿವೆ. ಗರ್ಭಕೋಶದಲ್ಲಿ ೨ ಪಾಲಿಗಳಿವೆ. ಸ್ತನಗಳು ಉದರ ಭಾಗದಲ್ಲಿವೆ.

ಕಾರ್ನಿವೋರ ಗಣವನ್ನು ಪಿನ್ನಿಪೀಡಿಯ ಮತ್ತು ಫಿಸ್ಸಿಪೀಡಿಯ ಎಂಬ ಎರಡು ಉಪಗಣಗಳಾಗಿ ವರ್ಗೀಕರಿಸಿದೆ. ಪಿನ್ನಿಪೀಡಿಯಕ್ಕೆ ಸೇರುವ ಕಡಲ ಪ್ರಾಣಿಗಳು ಜಲವಾಸಕ್ಕೆ ಹೊಂದಿಕೊಂಡಿವೆ. ಇವುಗಳಲ್ಲಿ ಕಾಲು ಮತ್ತು ಕೈ ಬೆರಳುಗಳು ಪೂರ್ತಿಯಾಗಿ ಜಾಲಬಲೆಯಲ್ಲಿ ಸೇರಿವೆ. ಉದಾ : ಸೀಲ್ ಪ್ರಾಣಿಗಳು-ನಮ್ಮ ಕರ್ನಾಟಕದಲ್ಲಿಲ್ಲ. ಫಿಸ್ಸಿಪೀಡಿಯಕ್ಕೆ ಸೇರಿದ ಪ್ರಾಣಿಗಳಲ್ಲಿ ಬೆರಳುಗಳು ಬಿಡಿಯಾಗಿವೆ ಮತ್ತು ಅವುಗಳಿಗೆ ನಖಗಳಿವೆ.

ಕೆಲವು ಪ್ರಾಣಿಗಳಲ್ಲಿ (ಉದಾ : ಬೆಕ್ಕುಗಳು) ನಖಗಳು ಸವೆಯುವುದನ್ನು ತಡೆಯಲು ಮತ್ತು ಅವುಗಳನ್ನು ಹಿಂದೆಳೆದುಕೊಂಡು ರಕ್ಷಿಸಿಕೊಳ್ಳಲು ಅನುಕೂಲವಾಗುವ ಹೊದಿಕೆಗಳಿವೆ.

 ಗಣ : ಕಾರ್ನಿವೋರ

ಕುಟುಂಬ : ಅರ್ಸಿಡೀ
ಉದಾ : ಕರಡಿ (
Sloth Bear)
ಶಾಸ್ತ್ರೀಯ ನಾಮ : ಮೆಲರ್ಸಸ್‌ಅರ್ಸಿನಸ್ (Melursus ursinus)

459_69_PP_KUH

ವಿತರಣೆ ಮತ್ತು ಆವಾಸ : ಕರ್ನಾಟವೂ ಸೇರಿದಂತೆ ಇಡೀ ಭಾರತದಲ್ಲಿ ಈ ಕರಡಿ ಕಂಡುಬರುತ್ತದೆ. ಅರಣ್ಯ ಪ್ರದೇಶದ ಬಂಡೆಗಲ್ಲುಗಳ ಗವಿಗಳಲ್ಲಿ ವಾಸಿಸುತ್ತದೆ.

ಗಾತ್ರ : ೧.೪ ರಿಂದ ೧.೮ ಮೀಟರ್ ಅಂದರೆ ೪ ಅಡಿಯಿಂದ ೫ ಅಡಿ ಉದ್ದ (೭೫ ಸೆಂ.ಮೀ.). ೨ ೧/೨ ಅಡಿಯಿಂದ (೧೦೫ ಸೆಂ.ಮೀ.) ೩ ಅಡಿ ಎತ್ತರ. ಗಂಡು ೧೨೫ ರಿಂದ ೧೪೫ ಕೆ.ಜಿ. ತೂಕವಿರುತ್ತದೆ.

ಆಹಾರ : ಗೆದ್ದಲು ಹುಳು ಮತ್ತು ಜೇನು ಇದರ ಇಷ್ಟವಾದ ಆಹಾರ. ಮಾವು, ನೇರಳೆ, ಆಲ, ಅತ್ತಿಹಣ್ಣು, ಹಲಸು ಮುಂತಾದ ಅರಣ್ಯದಲ್ಲಿ ದೊರಕುವ ಬೇಸಿಗೆ ಹಣ್ಣುಗಳನ್ನು ತಿನ್ನುತ್ತದೆ. ಇಷ್ಟೆಯ ಹೂಗಳನ್ನು ಯಥೇಚ್ಛವಾಗಿ ತಿನ್ನುತ್ತದೆ. ಗೆಡ್ಡೆಗೆಣಸು, ಬೇರುಗಳನ್ನೂ ಸಹ ತಿನ್ನುತ್ತದೆ. ಕೆಲವು ಸಲ ಈಚಲು ಮರವನ್ನೇರಿ ಮರಕ್ಕೆ ಶೇಂದಿಯ ಸಲುವಾಗಿ ಕಟ್ಟಿದ ಮಡಕೆಗಳಲ್ಲಿನ ಶೇಂದಿಯನ್ನು ಕುಡಿದ ನಿದರ್ಶನಗಳಿವೆ. ಕಬ್ಬಿನ ತೋಟ-ಕೆಂಪು ಜೋಳದ (ಗೋವಿನ ಜೋಳ) ಹೊಲಗಳ ಮೇಲೆ ಧಾಳಿ ಮಾಡುತ್ತವೆ. ಅಕಸ್ಮಾತ್ತಾಗಿ ಮಾಂಸವನ್ನೂ ತಿನ್ನುವುದುಂಟು. ಎಲ್ಲಾ ರೀತಿಯ ಕೀಟಗಳನ್ನು ತಿನ್ನುತ್ತವೆ.

ಲಕ್ಷಣಗಳು : ದೇಹದ ಮೇಲೆ ಕಪ್ಪು ಬಣ್ಣದ ಒರಟು ಒಒದೆ ಕೂದಲ ಹೊದಿಕೆ ಇದೆ. ಮತ್ತು ದಪ್ಪ ತುಟಿಗಳಿವೆ. ಹಿಂಗಾಲುಗಳು ಮುಂಗಾಲುಗಳಿಗಿಂತ ಮೋಟು. ಪಾದಗಳ ಬೆರಳುಗಳಿಗೆ ಬಾಗಿದ ಉದ್ದವಾದ (೮-೧೦ ಸೆಂ.ಮೀ) ಬಲವಾದ ನಖಗಳಿವೆ. ಎದೆಯ ಮೇಲೆ ‘A’ ಅಥವಾ ‘Y’ ಆಕಾರದ ಬಿಳಿಯ ಮಚ್ಚೆ ಇದೆ. ಇದರ ಮೂತಿ ಬಹಳ ಉದ್ದ. ತುಟಿಗಳು ಸರಾಗವಾಗಿ, ಅಡ್ಡಡ್ಡವಾಗಿ ಚಲಿಸಬಲ್ಲವು. ತುಟಿಗಳು ಬೆತ್ತಲೆಯಾಗಿದ್ದು, ಉದ್ದವಾಗಿದ್ದು ಗೆದ್ದಲು ಹುಳುಗಳನ್ನು ಹೀರಿಕೊಳ್ಳುವಾಗ ಬಾಯಿ ನಳಿಕೆಯಂತಾಗುತ್ತದೆ. ಮುಚ್ಚಿಕೊಳ್ಳಬಲ್ಲ ಮೂಗಿನ ಹೊಳ್ಳೆಗಳಿವೆ. ಬಾಚಿಹಲ್ಲುಗಳು ಇಲ್ಲ. ಮೂತಿ, ಪಾದದ ತುದಿ ಬೂದು ಅಥವಾ ತಿಳಿಹಳದಿ. ಭುಜ ಮತ್ತು ಕುತ್ತಿಗೆಯ ಮೇಲೆ ಇನ್ನುಳಿದ ಕಡೆಗಳಿಗಿಂತಲೂ ಒತ್ತಾದ ಉದ್ದ ಕಾಲುಗಳಿವೆ. ಕರಡಿಗಳಲ್ಲಿ ಪೂರ್ಣ ಕಂದು ಇಲ್ಲವೆ ಕಂದು ಬಣ್ಣದ ಛಾಯೆಯುಳ್ಳ ಕರಡಿಗಳಿವೆ. ಇವು ಊರುಗಾಲಿಗಳು. ನಡೆಯುವಾಗ ಅಂಗಾಲನ್ನು ಅದರಲ್ಲಿಯೂ ಹಿಮ್ಮಡಿಯನ್ನು ನೆಲಕ್ಕೆ ಊರುವುದರಿಂದ ಇವುಗಳ ನಡಿಗೆ ವಿಚಿತ್ರವಾಗಿದ್ದು ತೂಗುತ್ತಾ ನಡೆಯುವಂತೆ ಕಾಣುತ್ತದೆ. ನಾಲ್ಕು ಕಾಲುಗಳನ್ನೂ ಊರಿ ನಡೆದರೂ ಕೆಲವೊಮ್ಮೆ ಬರಿಯ ಹಿಂಗಾಲುಗಳ ಮೇಲೆ ನಡೆಯುವುದೂ ಉಂಟು. ನೆಲದ ಮೇಲೆ ತಮ್ಮ ಚಟುವಟಿಕೆಗಳನ್ನು ನಿರ್ವಹಿಸಿದರೂ ಅವುಗಳ ಅಂಗಾಲಿನ ಮೇಲೆ ಕೂದಲುಗಳಿವೆ. ದೃಷ್ಟಿ ಮತ್ತು ಶ್ರವಣ ಶಕ್ತಿಗಳು ಕಡಿಮೆ. ಆದರೆ ಘ್ರಾಣಶಕ್ತಿ ಅತಿ ಚುರುಕು. ವಾಸನೆಯಿಂದಲೇ ಆಹಾರ ಮತ್ತು ಶತ್ರುಗಳ ಸುಳಿವನ್ನು ಕಂಡುಹಿಡಿಕೊಳ್ಳುತ್ತವೆ.

ಸಂತಾನಾಭಿವೃದ್ಧಿ : ಸಾಮಾನ್ಯವಾಗಿ ಮೇ-ಜೂನ್‌ತಿಂಗಳುಗಳಲ್ಲಿ ಗರ್ಭತಾಳುತ್ತವೆ. ಅದಕ್ಕೆ ಮೊದಲು ಚೀರಾಟದ ಚಿನ್ನಾಟವೇ ಇವುಗಳ ಪ್ರಣಯ ಕೇಳಿ. ಗರ್ಭಾವಧಿಯ ಕಾಲ ೬ ರಿಂದ ೯ ತಿಂಗಳು. ಸಾಮಾನ್ಯವಾಗಿ ಅಕ್ಟೋಬರ್-ಮಾರ್ಚ್‌ತಿಂಗಳುಗಳ ನಡುವಿನ ಕಾಲದಲ್ಲಿ ಮರಿ ಹಾಕುತ್ತವೆ. ಒಂದು ಸೂಲಿನಲ್ಲಿ ೧ ಅಥವಾ ೨ ಮರಿಗಳನ್ನು ಹಾಕುತ್ತದೆ. ಮರಿಗಳು ೨೩ ವರ್ಷ ಬೆಳೆಯುವವರೆಗೆ ತಾಯಿಯ ಬಳಿಯೇ ಇರುತ್ತವೆ. ಹೆಣ್ಣು ೩ ವರ್ಷಕ್ಕೊಮ್ಮೆ ಗರ್ಭಧರಿಸುತ್ತದೆ. ಆಹಾರದ ಅನ್ವೇಷಣೆಗಾಗಿ ಅತೀವ ಅಲೆದಾಡಬೇಕಾಗುವದರಿಂದ ಮರಿಗಳನ್ನು ಬೆನ್ನ ಮೇಲೆ ಏರಿಸಿಕೊಂಡು ತಿರುಗುತ್ತದೆ. ೨ ೧/೨ ವರ್ಷಗಳಿಂದ ೬ ವರ್ಷಗಳಲ್ಲಿ ಪ್ರೌಢಾವಸ್ಥೆ ತಲುಪುತ್ತವೆ. ದೀರ್ಘಾಯುಷಿಗಳು. ಸಾಕಿದ ಕರಡಿಗಳು ೪೦ ವರ್ಷಗಳ ಕಾಲ ಬದುಕಿದ ನಿದರ್ಶನಗಳುಂಟು.

ಸ್ವಭಾವ : ನಿಶಾಚರಿ. ಹಗಲು ಗುಡ್ಡಬೆಟ್ಟಗಳಲ್ಲಿನ ಗವಿಗಳಲ್ಲಿ, ದಟ್ಟವಾದ ಪೊದೆಗಳಲ್ಲಿ, ದೊಡ್ಡ ದಿಮ್ಮಿಗಳ ಪೊಟರೆಗಳಲ್ಲಿ ಅಥವಾ ನೆಲ ತೋಡಿಕೊಂಡು ಮಾಡಿಕೊಂಡ ಬಿಲಗಳಲ್ಲಿ ನಿದ್ರಿಸುತ್ತಾ ಕಾಲಕಳೆದು ಸಂಜೆ ಅಥವಾ ರಾತ್ರಿ ಆಹಾರಾನ್ವೇಷಣೆಗಾಗಿ ಹೊರಡುತ್ತದೆ. ಇದು ಅಷ್ಟೊಂದು ಉಗ್ರಪ್ರಾಣಿಯಲ್ಲದಿದ್ದರೂ ಸ್ವಾಭಾವಿಕವಾಗಿ ಶಾಂತ ಪ್ರಾಣಿಯಾದರೂ ತಾನಾಗಿಯೇ ಇತರ ಪ್ರಾಣಿಗಳ ಮೇಲೆ (ಆಹಾರ ಪ್ರಾಣಿಗಳನ್ನು ಬಿಟ್ಟು) ಆಕ್ರಮಣ ಮಾಡುವುದಿಲ್ಲ. ತನ್ನ ಮತ್ತು ಮರಿಗಳ ರಕ್ಷಣೆಗಾಗಿ, ಆಹಾರಕ್ಕಾಗಿ ಇಕ್ಕಟ್ಟಿಗೆ ಸಿಕ್ಕಿದಾಗ ಬಹುಕ್ರೂರವಾಗಿ ಮತ್ತು ಅಪಾಯಕಾರಿಯಾಗಿ ಹೋರಾಡಬಲ್ಲವು, ಮರಗಳನ್ನು ಹತ್ತಬಲ್ಲವು. ಇಳಿಯುವಾಗ ಹಿಂದಿನಿಂದ ಜಾರುತ್ತವೆ. ಕರಡಿಗಳು ವೇಗವಾಗಿ ಹಾಗೂ ಅತ್ಯಂತ ಜಾಗರೂಕತೆಯಿಂದ ನಡೆಯಬಲ್ಲವು. ಸಾಮಾನ್ಯವಾಗಿ ಒಂಟಿ ಜೀವಿಗಳು. ಸಂತಾನಾಭಿವೃದ್ಧಿಯ ಕಾಲದಲ್ಲಿ ಮಾತ್ರ ಜೊತೆಗೂಡುತ್ತವೆ. ಗಾಢನಿದ್ರೆಯವು. ಇವುಗಳಿಗೆ ಮುಂದಿನ ಕಾಲ ನೆಕ್ಕುವ ಸ್ವಭಾವವಿದೆ. ಕರಡಿಗಳು ಎದ್ದು ನಿಂತು ಮನುಷ್ಯನ್ನು ಎದುರಿಸುವುದಿಲ್ಲ. ಅವನ್ನು ಕೆಡವಿ ಮುಖ, ಕಣ್ಣು ಹರಿಯುತ್ತವೆ ಮತ್ತು ಕಡಿಯುವುದೂ ಉಂಟು. ಕರಡಿಗಳನ್ನು ಪಳಗಿಸಿ ಸಾಕಬಹುದಲ್ಲದೆ ಇದಕ್ಕೆ ಹಲವಾರು ಆಟಗಳನ್ನು ಕಲಿಸಬಹುದು.

ಇದು ಗೆದ್ದಲು ಹುಳುವನ್ನು ತಿನ್ನುವ ವಿಧಾನ ಬೇರೆಲ್ಲಾ ಪ್ರಾಣಿಗಳು ಇರುವೆಗಳನ್ನು ತಿನ್ನುವ ವಿಧಾನದಿಂದ ಭಿನ್ನವಾಗಿದೆ ಮತ್ತು ವೈಶಿಷ್ಟ್ಯಪೂರ್ಣವಾಗಿದೆ. ಹುತ್ತವನ್ನು ಒಡೆದು, ಕೆಡವಿ, ಮಣ್ಣನ್ನೂ ಕೊಳೆಯನ್ನೂ ಊದಿ ಮೂತಿಯನ್ನು ಕೊಳವೆಯಂತೆ ಮಾಡಿಕೊಂಡು ಬಾಯನ್ನು ಹುತ್ತದ ಬಾಯಿಗಿಟ್ಟು ಗೆದ್ದಲುಗಳನ್ನು ಬಾಯೊಳಕ್ಕೆ ಸೆಳೆದುಕೊಳ್ಳುತ್ತದೆ. ಹುತ್ತವನ್ನು ಒಡೆಯಲು ತನ್ನ ಬಲವಾದ ನಖಗಳನ್ನು ಬಳಸುತ್ತದೆ. ತನಗೆ ಇಷ್ಟವಾದ ಜೇನನ್ನು ಹುಡುಕಿಕೊಂಡು ಹಲವಾರು ಮೈಲಿಗಳಷ್ಟು ಅಲೆಯುವುದುಂಟು.

ಇದು ಸರ್ವಭಕ್ಷಕ. ಆಹಾರ ನೀತಿಯಿಂದಾಗಿ ಹಲ್ಲುಗಳು ವಿಶೇಷವಾಗಿ ಮಾರ್ಪಟ್ಟಿವೆ. ಮಾಂಸ ತಿನ್ನುವುದು ತ್ಯಜಿಸುವ ಮುಂಚೆ ತನ್ನ ಕೊನೆಯ ದವಡೆ ಹಲ್ಲುಗಳನ್ನು ಕಳೆದುಕೊಂಡಿದೆ. ಇದಕ್ಕೆ ಬದಲಾಗಿ ಉಳಿದ ದವಡೆ ಹಲ್ಲುಗಳು ಹೆಚ್ಚು ಉದ್ದವಾಗಿವೆ ಮತ್ತು ಅವುಗಳ ಅಗಿಯುವ ಮೇಲ್ಮೈ ಸುಕ್ಕುಗಟ್ಟಿದೆ. ಮಾಂಸಾಹಾರವನ್ನು ತ್ಯಜಿಸಿದ ಮೇಲೆ ಆಹಾರ ಜೀವಿಯನ್ನು ಹಿಂಬಾಲಿಸುವ ಅಭ್ಯಾಸ ತಪ್ಪಿದುದರಿಂದ ಕಾಲುಗಳು ಪಾದಗಳು ದಪ್ಪನಾಗಿವೆ ಮತ್ತು ಕುಳ್ಳಾಗಿವೆ. ನೆಲದ ಮೇಲಿನ ಮಾಂಸಾಹಾರಿಗಳಲ್ಲೆಲ್ಲಾ ಇದು ಅತ್ಯಂತ ದೊಡ್ಡದು, ಆದರೆ ಕಂದು ಕರಡಿಗಿಂತ ಚಿಕ್ಕದು.

—- 

ಗಣ : ಕಾರ್ನಿವೋರ
ಕುಟುಂಬ : ಕ್ಯಾನಿಡೀ
ಉದಾ : ಗುಳ್ಳೆನರಿ (
Jackal)
ಶಾಸ್ತ್ರೀಯ ನಾಮ : ಕೇನಿಸ್ ಆರಿಯಸ್ (Canis aureus)

460_69_PP_KUH

ಇದನ್ನು ಕುನ್ನಿನರಿ, ಶೃಗಾಲ ಎಂದೂ ಕರೆಯುತ್ತಾರೆ.

ವಿತರಣೆ ಮತ್ತು ಆವಾಸ : ಭಾರತದ ಕರ್ನಾಟಕವೂ ಸೇರಿದಂತೆ ಪ್ರಪಂಚದ ಬಹು ಭಾಗಗಳಲ್ಲಿ ಈ ನರಿ ಕಂಡುಬರುತ್ತದೆ. ಇದರಲ್ಲಿ ಅನೇಕ ಪ್ರಭೇದಗಳಿದ್ದು, ಮುಖ್ಯವಾದುದು ಕೇನಿಸ್ ಆರಿಯಸ್. ಭಾರತದ ವಿವಿಧ ಭಾಗಗಳಲ್ಲಿ ಈ ಪ್ರಭೇದದ ವಿವಿಧ ತಳಿಗಳು ಕಂಡುಬಂದರೂ ದಕ್ಷಿಣ ಭಾರತಕ್ಕೆ ಸೀಮಿತವಾದ ಈ ಗುಳ್ಳೆ ನರಿಯು ಮುಖ್ಯ. ದಟ್ಟವಾದ ಕಾಡುಗಳಿಗಿಂತ ಹೆಚ್ಚಾಗಿ ಬಯಲು ಪ್ರದೇಶಗಳಲ್ಲಿ ಇಲ್ಲವೇ ಕುರುಚಲು ಕಾಡಿನ ಪ್ರದೇಶಗಳಲ್ಲಿ ವಾಸಿಸಲು ಇಷ್ಟಪಡುತ್ತವೆ. ಪಟ್ಟಣ, ಹಳ್ಳಿಗಳ ಸುತ್ತಮುತ್ತ, ಗಿಡಗೆಂಟೆಗಳಲ್ಲಿ, ಹೊಲಗಳ ಒಡ್ಡುಗಳಲ್ಲಿ ಆಳದ ಹೋರುಗಳಲ್ಲಿ ವಾಸಿಸುತ್ತವೆ.

ಗಾತ್ರ : ತಲೆ ಮತ್ತು ದೇಹದ ಉದ್ದ (೬೦-೭೫ ಸೆಂ.ಮೀ.) ೨ ರಿಂದ ೨ ೧/೨ ಅಡಿ. ಬಾಲ ಸುಮಾರು (೩೦ ಸೆಂ.ಮೀ) ೧ ಅಡಿ ಉದ್ದ ಎತ್ತರ ಸುಮಾರು (೩೦-೪೫ ಸೆಂ.ಮೀ) ೧ ರಿಂದ ೧ ೧/೨ ಅಡಿ. ತೂಕ ೮ ರಿಂದ ೧೧ ಕೆ.ಜಿ. ದಕ್ಷಿಣ ಭಾರತದ ಪ್ರಾಣಿಗಳು ಗಾತ್ರ ಮತ್ತು ತೂಕದಲ್ಲಿ ತುಸು ಕಡಿಮೆ.

ಆಹಾರ : ಇವು ಹುಲಿ, ಚಿರತೆ ಮುಂತಾದವುಗಳನ್ನು ಹಿಂಬಾಲಿಸಿ ಅವು ತಿಂದು ಬಿಟ್ಟ ಮಾಂಸವನ್ನು ತಿಂದು ಬದುಕುತ್ತವೆ. ಕೆಲವೊಮ್ಮೆ ಹುಲಿ ಅಥವಾ ಚಿರತೆ ಜಿಂಕೆಯೊಂದನ್ನು ಕೊಂದು, ಅವು ತಮಗೆ ತೃಪ್ತಿಯಾಗುವ ತನಕ ತಿಂದು ಮುಗಿಸುವವರೆಗೂ ಹಲವಾರು ಗಂಟೆಗಳು ಕಾದಿದ್ದು ಅನಂತರ ಬಿಟ್ಟು ಹೋದ ಜಿಂಕೆಯ ಮಾಂಸವನ್ನು ತಿನ್ನುವುದುಂಟು. ಇವು ಸತ್ತ ಪ್ರಾಣಿಗಳನ್ನು ತಿನ್ನುತ್ತವೆ. ರಾತ್ರಿವೇಳೆ ಹಳ್ಳಿಗಳಿಗೆ ನುಗ್ಗಿ ಅಲ್ಲಿ ಸಿಕ್ಕುವ ಹೊಲಸನ್ನು, ಕೆಲವೊಮ್ಮೆ ಕೋಳಿ, ಕುರಿಮರಿ ಮುಂತಾದ ಸಾಕುಪ್ರಾಣಿಗಳನ್ನು ತಿನ್ನುವುದುಂಟು. ಹಲ್ಲಿ, ಓತಿ, ಕೀಟಗಳು, ಸಣ್ಣಪುಟ್ಟ ಸಸ್ತನಿ ಮುಂತಾದವುಗಳನ್ನು ತಿನ್ನುತ್ತವೆ. ಇದೇ ಅಲ್ಲದೆ ಕಾಫಿ ಹಣ್ಣು, ಎಲಚಿಹಣ್ಣು, ಅನೇಕ ಸಲ ದ್ರಾಕ್ಷಿ, ಕಲ್ಲಂಗಡಿ, ಕಕ್ಕೆ, ಬೋರೆ, ಅತ್ತಿ, ನೆಲ್ಲಿಕಾಯಿ, ಕಬ್ಬು ಇತ್ಯಾದಿ ಸಸ್ಯಾಹಾರವನ್ನು ಸೇವಿಸುತ್ತವೆ.

ಲಕ್ಷಣಗಳು : ಮೈಬಣ್ಣ ಕಪ್ಪು ಮಿಶ್ರಿತ ಬಿಳಿ. ಭುಜ, ಕಿವಿ ಮತ್ತು ಕಾಲುಗಳು ಬಾದಾಮಿ ಬಣ್ಣ, ಬಾಲದ ತುದಿ ಕಪ್ಪು. ಇವುಗಳಲ್ಲಿ ಕೆಂಪು, ಬೂದು ಮತ್ತು ನೀಲಿಗಪ್ಪು ತಳಿಗಳೂ ಉಂಟು. ಕಿವಿಗಳು ಉದ್ದವಾಗಿವೆ. ಕಣ್ಣು ಹಳದಿಯಾಗಿದ್ದು ರಾತ್ರಿಯ ಹೊತ್ತು ಹೊಳೆಯುತ್ತವೆ. ಬಾಲವು ಹೊತ್ತೆಯಾಗಿದ್ದು ಮೊನಚಾಗಿಲ್ಲ. ಯಾವಾಗಲೂ ಕೆಳಕ್ಕೆ ಬಾಗಿರುತ್ತದೆ. ಇದು ತನ್ನ ಹತ್ತಿರದ ಸಂಬಂಧಿ ತೋಳಗಳನ್ನು ಹೆಚ್ಚು ಹೋಲುತ್ತದೆ. ಆದರೆ ತೋಳಕ್ಕಿಂತ ಗಾತ್ರದಲ್ಲಿ ಚಿಕ್ಕದು ಮತ್ತು ಸ್ವಭಾವದಲ್ಲಿ ನೀಚಪ್ರಾಣಿ. ಬಾಲದ ಬಳಿ ಒಂದು ರೀತಿಯ ವಾಸನೆಯನ್ನು ಉತ್ಪತ್ತಿ ಮಾಡುವ ಗ್ರಂಥಿಗಳಿವೆ.

ಸಂತಾನಾಭಿವೃದ್ಧಿ : ಎಲ್ಲಾ ಋತುಗಳಲ್ಲಿಯೂ ಮರಿಗಳು ಕಂಡು ಬರುತ್ತವೆ. ಆದರೆ ಹೆಚ್ಚಾಗಿ ಮಾರ್ಚ ತಿಂಗಳಲ್ಲಿ ಮರಿಗಳು ಕಾಣಿಸಿಕೊಳ್ಳುತ್ತವೆ. ಇತರ ಪ್ರಾಣಿಗಳು ಬಿಟ್ಟು ಹೋದ, ಇಲ್ಲವೇ ತಾವೇ ತೋಡಿದ ಬಿಲಗಳಲ್ಲಿ ಮರಿಗಳನ್ನು ಹಾಕಿ ಸಾಕುತ್ತವೆ. ಗರ್ಭಾವಧಿ ೬೦ ರಿಂದ ೬೩ ದಿನಗಳು. ಒಂದು ಸೂಲದಲ್ಲಿ ೩ ರಿಂದ ೫ ಮರಿಗಳು ಹುಟ್ಟುತ್ತವೆ. ಹುಟ್ಟಿದ ಮರಿಗಳು ಕುರುಡು, ೯ ದಿನಗಳನಂತರ ಕಣ್ಣು ಬಿಡುತ್ತವೆ. ೧೦ ತಿಂಗಳಲ್ಲಿ ದೊಡ್ಡವಾಗಿ ಸ್ವತಃ ಆಹಾರ ಹುಡುಕಲು ಹೊರಡುತ್ತವೆ. ಎಳೆಯ ಮರಿಗಳನ್ನು ಹೆಣ್ಣುಗಂಡುಗಳೆರಡೂ (ತಂದೆತಾಯಿ ನರಿ) ಜೋಪಾನವಾಗಿ ನೋಡಿಕೊಳ್ಳುತ್ತವೆ. ಗಂಡು ೨೨ ತಿಂಗಳಿಗೆ ಮತ್ತು ಹೆಣ್ಣು ೧೧ ರಿಂದ ೧೨ ತಿಂಗಳುಗಳಲ್ಲಿ ಲಿಂಗಪ್ರೌಢತನ ಗಳಿಸಿಕೊಳ್ಳುತ್ತವೆ. ಬಂಧನದಲ್ಲಿ ಇವುಗಳ ಆಯಸ್ಸು ೧೫ ರಿಂದ ೧೮ ವರ್ಷಗಳು.

ಸ್ವಭಾವ : ನಿಶಾಚರಿಗಳು. ವಾಡಿಕೆಯಾಗಿ ಒಂಟಿ ಅಥವಾ ಜೋಡಿ. ಹಲವು ಬಾರಿ ಗುಂಪುಗಳಾಗಿ ಓಡಾಡುತ್ತವೆ. ಗಂಡುಹೆಣ್ಣು ಜೀವನದುದ್ದಕ್ಕೂ ಜೋಡಿಯಾಗಿದ್ದು ಉದಾಹರಣೆಗಳಿವೆ. ಹಾಳು ಬಿದ್ದ ಜಾಗಗಳಲ್ಲಿನ ಬಿಲಗಳಲ್ಲಿ ಇಲ್ಲವೇ ಪೊದೆಗಳ ನಡುವೆ ಹಗಲಿನಲ್ಲಿ ಅಡಗಿಕೊಂಡಿದ್ದು ಮಬ್ಬಗತ್ತಲ ವೇಳೆ ಮತ್ತು ಮುಚ್ಚಂಜೆಯಲ್ಲಿ ಆಹಾರವನ್ನು ಹುಡುಕಿಕೊಂಡು ಹೊರಬರುತ್ತವೆ. ಇವು ಬಹಳ ಗೋಪ್ಯ ಸ್ವಭಾವದವು. ಆದ್ದರಿಂದ ಇವುಗಳ ಚಲನವಲನಗಳನ್ನು ತಿಳಿಯುವುದು ಕಷ್ಟ. ಬೇಟೆಯಾಡಿ ತಿಂದು ಬಿಟ್ಟ ಮತ್ತು ಸತ್ತ ಪ್ರಾಣಿಗಳನ್ನು ತಿನ್ನುವುದರಿಂದ ಗುಳ್ಳೆ ನರಿಗಳನ್ನು ಕಾಡಿನ ಜಾಡಮಾಲಿಗಳೆಂದು ಕರೆಯುತ್ತಾರೆ. ತಿಂದು ಉಳಿದ ಹೆಚ್ಚಿನ ಮಾಂಸವನ್ನು ಹೂಳಿಟ್ಟು ಆಮೇಲೆ ತಿನ್ನುವುದುಂಟು. ಹಳ್ಳಿಗಳಿಗೆ ನುಗ್ಗಿ ಕೋಳಿಗಳನ್ನು ಕದಿಯುವುದುಂಟು. ಕೃಷಿ ಭೂಮಿಯಲ್ಲಿ ಬೆಳೆದ ಗೋವಿನಜೋಳ ಮುಂತಾದ ತೋಟದ ಪೈರುಗಳ ಮೇಲೆ ಧಾಳಿ ಮಾಡುವುದುಂಟು. ಸಾಮಾನ್ಯವಾಗಿ ಒಂಟಿಯಾಗಿಯೇ ಆಹಾರ ಹುಡುಕಿದರೂ ಕೆಲವು ಸಲ ಗುಂಪು ಕೂಡಿಕೊಂಡು ಚಿಗರಿಗಳನ್ನು ಬೇಟೆಯಾಡುವುದುಂಟು. ಬೇಟೆ ಪ್ರಾಣಿಯನ್ನು ಅಟ್ಟಿಸಿಕೊಂಡು ವೇಗವಾಗಿ ಅಂದರೆ ಗಂಟೆಗೆ ೩೫ ಮೈಲಿ ವೇಗದಲ್ಲಿ ಓಡಬಲ್ಲವು ಎಂದು ತಿಳಿದುಬಂದಿದೆ. ಸಂಜೆಯ ವೇಳೆಯಲ್ಲಿ ಲಕ್ಷಣ. ದೀರ್ಘವಾದ ೩೪ ಕೂಗುಗಳು, ಕೊನೆಯಲ್ಲಿ ಹ್ರಸ್ವ ಬಗುಳುವಿಕೆಗಳನ್ನು ಒಳಗೊಂಡಿರುವ ಈ ಊಳಿಡುವಿಕೆಯನ್ನು ಕೇಳಿದವರು ಸುಲಭವಾಗಿ ಮರೆಯಲಾರರು.

ಕೇನಿಸ್ ಅಡಸ್ಟಸ್‌ : ಇವು ಸತ್ತಪ್ರಾಣಿಗಳನ್ನು, ಸಸ್ಯಾಹಾರವನ್ನು ತಿನ್ನುತ್ತವೆ. ಬಿಲಗಳು, ಗುಹೆಗಳು, ಪೊಟರೆಗಳು ಮತ್ತು ಬಂಡೆಸಂದುಗಳಲ್ಲಿ ವಾಸಿಸುತ್ತವೆ. ದಣಿವಾಗದಂತೆ ಓಡಾಡಬಲ್ಲವು. ತಮ್ಮ ಬೆರಳುಗಳ ಮೇಲೆ ಓಡುತ್ತವೆ. ಅಥವಾ ನಡೆಯುತ್ತವೆ. ಒಂದು ಸೂಲಿಗೆ ೨ ರಿಂದ ೩ ಮರಿಗಳನ್ನು ಹಾಕುತ್ತವೆ. ಗರ್ಭಾವಧಿ ೪೯-೭೦ ದಿನಗಳು. ಹುಟ್ಟಿದ ಮರಿಗಳು ಕುರುಡಾಗಿರುತ್ತವೆ. ಆದರೆ ತುಪ್ಪುಳ ಹೊದಿಕೆ ಇರುತ್ತದೆ. ೬ ವಾರಗಳವರೆಗೆ ಮರಿಗಳಿಗೆ ಹಾಲುಣಿಸಿ ಪೋಷಿಸುತ್ತವೆ.

—- 

ಗಣ : ಕಾರ್ನಿವೋರ
ಕುಟುಂಬ : ಕೈನಿಡೀ
ಉದಾ : ಕಾಡುನಾಯಿ (
Wild dog)
ಶಾಸ್ತ್ರೀಯ ನಾಮ : ಕ್ಯೂಅನ್‌ಆಲ್ಪಿನಸ್ (Cuon alpinus)

461_69_PP_KUH

ಕಾಡುನಾಯಿ ಶಾಸ್ತ್ರೀಯ ಹೆಸರು ಅಥವಾ ಶಾಸ್ತ್ರೀಯ ನಾಮ ಕ್ಯೂಅನ್‌ಅಲ್ಪಿನಸ್ (Cuon alpinus).ಇದನ್ನು ಹಂಟಿಂಗ್ ಡಾಗ್ ಎಂತಲೂ ಹೇಳುತ್ತಾರೆ. ಭಾರತದಲ್ಲಿ ಇದಕ್ಕೆ ಡೋಲ್ ಎಂದು ಹೆಸರಿದೆ. ಕೆಲವೆಡೆ ಇದನ್ನು ಸೀಳು ನಾಯಿ ಎಂದೂ ಕರೆಯುವುದುಂಟು.

ವಿವರಣೆ ಮತ್ತು ಆವಾಸ : ಕರ್ನಾಟಕವೂ ಸೇರಿದಂತೆ ಭಾರತದಲ್ಲಿ ಹಿಮಾಲಯದಿಂದ ಕನ್ಯಾಕುಮಾರಿಯವರೆಗೂ ಕಾಡು ನಾಯಿಗಳು ಕಂಡುಬರುತ್ತವೆ. ದಟ್ಟವಾದ ಕಾಡುಗಳಲ್ಲಿ ವಾಸಿಸುತ್ತವೆ. ಸಾಧಾರಣವಾಗಿ ಗುಹೆಗಳಲ್ಲೊ, ಪೊದೆಗಳಲ್ಲೊ ಇದ್ದು ಹಗಲಿನಲ್ಲಿ ವಿಶ್ರಾಂತಿ ಪಡೆಯುತ್ತವೆ.

ಗಾತ್ರ : ದೇಹದ ಉದ್ದ (೬೦-೯೦ ಸೆಂ.ಮೀ.) ೨ ರಿಂದ ೩ ಅಡಿ. ಬಾಲ ಸುಮಾರು (೪೫ ಸೆಂ.ಮೀ.) ೧ ೧/೨ ಅಡಿ ಉದ್ದ. ಈ ಪ್ರಾಣಿಯ ಎತ್ತರ (೪೫ ರಿಂದ ೬೦ ಸೆಂ.ಮೀ.) ೧ ೧/೨ ಅಡಿಯಿಂದ ೨ ಅಡಿ. ತೂಕ ಸುಮಾರು ೨೦ ಕೆ.ಜಿ.

ಆಹಾರ : ಸಾರಗ (ಎರಳೆ), ಜಿಂಕೆ, ಕಾಡುಹಂದಿ, ಕಾಡೆಮ್ಮೆ, ಕಾಟಿ ಮುಂತಾದವುಗಳನ್ನು ಗುಂಪಿನಲ್ಲಿ ಬೇಟೆಯಾಡಿ ತಿನ್ನುತ್ತವೆ.

ಲಕ್ಷಣಗಳು : ಕಾಡುನಾಯಿ ಬಹುವಿಧದಲ್ಲಿ ಸಾಕಿದ ನಾಯಿಗಳನ್ನೇ ಹೋಲುವಂತಿದ್ದರೂ ಕೆಲವು ಲಕ್ಷಣಗಳಲ್ಲಿ ಅವುಗಳಿಂದ ಭಿನ್ನವಾಗಿದೆ. ದೇಹದ ಮೇಲೆ ಕುದಲು ಕಡಿಮೆ, ಬಾಲ ಹೆಚ್ಚು ಕಡಿಮೆ ನರಿಯ ಬಾಲದಂತಿದೆ. ದವಡೆಯಲ್ಲಿ ೬ ದವಡೆ ಹಲ್ಲುಗಳಿವೆ. ೧೨ ರಿಂದ ೧೪ ಮೊಲೆ (೬-೭ ಜೊತೆ ಸ್ತನ)ಗಳಿವೆ. ದೇಹದ ಬಣ್ಣ ಏಕ ರೀತಿಯ ಹಳದಿಯ ಮೆರಗು ಕೂಡಿದ ಕೆಂಪು. ಹೊಟ್ಟೆಯ ಭಾಗ ಮಾಸಲು ಬಿಳುಪು. ಹೆಣ್ಣು ನಾಯಿಗಳ ಬಣ್ಣ ಸ್ವಲ್ಪ ತಿಳಿ. ಕಿವಿಗಳ ತುದಿ ದುಂಡಾಗಿದೆ. ಬಾಲವು ಪೊದೆಯಾಗಿ ತುದಿಯಲ್ಲಿ ಕಪ್ಪು. ಬಾಲದ ಕೂದಲುಗಳು ಅರ್ಧ ಅಡಿಯಷ್ಟು ಉದ್ದವಿರುತ್ತವೆ. ಇದರ ಮೂಗು ತೀಕ್ಷ್ಣ ಮತ್ತು ಇದು ಬೇಟೆಯನ್ನು ಹಿಡಿಯಲು ನೆರವಾಗುತ್ತದೆ.

ಸಂತಾನಾಭಿವೃದ್ಧಿ : ಜನವರಿ-ಫೆಬ್ರವರಿ ತಿಂಗಳುಗಳಲ್ಲಿ ಮರಿಗಳನ್ನು ಹಾಕುತ್ತವೆ. ಗರ್ಭಾವಧಿಯಕಾಲ ೭೦ ದಿನಗಳು. ಒಂದು ಸೂಲದಲ್ಲಿ ೪-೬ ಮರಿಗಳು ಹುಟ್ಟುತ್ತವೆ. ಹುಟ್ಟಿದ ಮರಿಗಳು ಕಣ್ಣು ತೆರೆದಿರುವುದಿಲ್ಲ ಮತ್ತು ಚರ್ಮದ ಮೇಲೆ ಕೂದಲುಗಳು ಇರುವುದಿಲ್ಲ. ಒಂದು ವರ್ಷ ಆಗುವವರೆಗೂ ಗಂಡು ಮತ್ತು ಹೆಣ್ಣು ನಾಯಿಗಳೆರಡೂ ಅವುಗಳ ಪಾಲನೆ ಮಾಡುತ್ತವೆ. ಬೇಟೆಗೆ ಹಿಂಡು ನಾಯಿಗಳು ಹೋದಾಗ ಹೆಣ್ಣು ನಾಯಿಯೊಂದೇ ಮರಿಗಳ ರಕ್ಷಣೆ ಮಾಡುತ್ತದೆ. ಒಂದು ವರ್ಷಕ್ಕೇ ಲಿಂಗಪ್ರೌಢತನಗಳಿಸುತ್ತವೆ. ಇವು ಸಾಕಿದ ನಾಯಿಗಳೊಂದಿಗೆ ಸಂಭೋಗ ನಡೆಸಬಹುದು.

ಸ್ವಭಾವ : ಅರಣ್ಯವಾಸಿಗಳು, ಸಂಘಜೀವಿಗಳು ಮತ್ತು ನಿಶಾಚರಿಗಳು. ಸ್ವಭಾವತಃ ಹೆಚ್ಚು ಕ್ರೂರಿಗಳು. ಬೇಟೆಯಾಡುವಲ್ಲಿ ಹೆಚ್ಚು ನೈಪುಣ್ಯತೆ ತೋರುತ್ತವೆ. ಮತ್ತು ಗುಂಪಿನಲ್ಲಿ ಬೇಟೆಯಾಡುತ್ತವೆ. ಇವು ಬೇಟೆಯಾಡುವ ಕ್ರಮವೂ ವಿಶಿಷ್ಟವಾದುದು. ಇವು ತಮ್ಮ ಚುರುಕಾದ ಘ್ರಾಣ ಶಕ್ತಿಯಿಂದ ಆಹಾರ ಜೀವಿಗಳ ಸುಳಿವು ಹಿಡಿದು ಅವನ್ನು ಬೆನ್ನಟ್ಟುತ್ತವೆ. ಒಂದು ಹಿಂಡಿನಲ್ಲಿ ೪೦ರ ವರೆಗೆ ನಾಯಿಗಳಿರಬಹುದು. ಹಿಂಡಿನ ಮಂಚೂಣಿಯಲ್ಲಿ ದೊಡ್ಡ ಗಂಡು ನಾಯಿಯೊಂದಿರುತ್ತದೆ. ಆಹಾರ ಜೀವಿಯ ಸುಳಿವು ಸಿಕ್ಕ ತಕ್ಷಣ ಅದು ಸಿಳ್ಳಿನಂತೆ ಕೂಗಿ ಹಿಂಡಿನ ಉಳಿದ ನಾಯಿಗಳಿಗೆ ಸುದ್ದಿ ಕೊಡುತ್ತದೆ ಮತ್ತು ಬೇಟೆಗೆ ಆಹ್ವಾನಿಸುತ್ತದೆ. ನಿಧಾನವಾಗಿ ಅದನ್ನು ಓಡಿಸಿಕೊಂಡು ಹೋಗಿ ಯಾವುದಾದರೂ ಇಕ್ಕಟ್ಟಿನ ಸ್ಥಳದಲ್ಲಿ ಸಿಕ್ಕಿಸಿಕೊಂಡು, ಸುತ್ತುವರಿದು ನಂತರ ಎಲ್ಲಾ ದಿಕ್ಕುಗಳಿಂದ ಅದರ ಮೇಲೆ ಎರಗುತ್ತವೆ. ಆಹಾರ ಜೀವಿಯನ್ನು ಬೆನ್ನಟ್ಟುವಾಗ ಸದ್ದುಮಾಡದಂತೆ ಎಚ್ಚರಿಕೆ ವಹಿಸುತ್ತವೆ. ಆದರೆ ಆಗಾಗ ಕುಂಯ್ ಗುಡುವುದುಂಟು. ಮುಂಚೂಣಿಯ ಮುಂದಾಳು ನಾಯಿ ಮಾತ್ರ ಲಘುವಾಗಿ ಕೀರಲು ಧ್ವನಿಯಲ್ಲಿ ಬಗಳುವುದರ ಮೂಲಕ ತನ್ನ ಹಿಂಡನ್ನು ನಿರ್ದೇಶಿಸುತ್ತದೆ. ಬಹಳ ಎಚ್ಚರಿಕೆಯಿಂದ ಆಹಾರ ಜೀವಿಯನ್ನು ಸುತ್ತುವರಿದು ಅದು ಸಾಕಷ್ಟು ಬಳಲಿ ಎಚ್ಚರ ತಪ್ಪಿದಾಗ ಮುಂದಾಳು ನಾಯಿ ಅದರ ಮೇಲೆ ಹಠಾತ್ತನೆ ಎರಗಿ ಅದರ ಕುತ್ತಿಗೆ ಅಥವಾ ಹೊಟ್ಟೆಗೆ ಬಾಯಿ ಹಾಕುತ್ತದೆ. ಇದೇ ಸೂಚನೆಯೆಂಬಂತೆ ಹಿಂಡಿನ ಉಳಿದೆಲ್ಲ ನಾಯಿಗಳು ಅದರ ಮೇಲೆರಗಿ ಅದನ್ನು ಕಚ್ಚಿ ತಿನ್ನುತ್ತವೆ.

ಕಾಡು ನಾಯಿಗಳು ಊಳಿಡುತ್ತವೆ. ಸಣ್ಣದನಿಯಲ್ಲಿ (ಲಘುವಾಗಿ) ಬಗುಳುತ್ತವೆ. ಸಿಳ್ಳಿನ ಕೂಗು ಹಾಕುತ್ತವೆ. ಆಹಾರ ಜೀವಿ ನೀರಿನಲ್ಲಿ ಸೇರಿದರೂ ಅದನ್ನು ಬಿಡದೆ ಬೆನ್ನಟ್ಟುತ್ತವೆ. ಹಿಂಡಿನ ಒಂದೊಂದು ನಾಯಿಯ ಧ್ವನಿ ಭಿನ್ನವಾಗಿದ್ದರೂ, ಹಿಂಡಿನ ಇತರ ನಾಯಿಗಳು ಗುರುತಿಸುತ್ತವೆ. ಇವು ಮನುಷ್ಯನ ಮೇಲೆ ಎರಗಿದ ನಿದರ್ಶನಗಳಿಲ್ಲ ಇವುಗಳನ್ನು ಸಾಕಲಾಗಿಲ್ಲ.

ಈ ಕಾಡುನಾಯಿಗಳು ಹೊಲಗದ್ದೆಗಳಿಗೆ ನುಗ್ಗಿ ಪೈರನ್ನು ಹಾಳು ಮಾಡುವ ಕಾಡು ಹಂದಿಗಳನ್ನು ಕೊಂದು ರೈತನಿಗೆ ಉಪಕಾರ ಮಾಡಿದರೂ, ಕೆಲವೊಮ್ಮೆ ಸಾಕಿದ ಪ್ರಾಣಿಗಳನ್ನು ತಿಂದು ಹಾನಿ ಮಾಡುವುದುಂಟು. ಇವುಗಳನ್ನು ಪಳಗಿಸುವುದು ಸಾಧ್ಯವಿಲ್ಲ.

ಕ್ಯೂಆನ್‌ಡಕ್‌ನೆನ್ಸಿಸ್‌(Cuon dukhnensis)ಎಂಬ ಸೀಳು ನಾಯಿಯು ದಕ್ಷಿಣದ ಪರ್ಯಾಯ ದ್ವೀಪದ ದಟ್ಟಕಾಡುಗಳಲ್ಲಿ ಕಂಡುಬರುತ್ತದೆ.

—- 

ಗಣ : ಕಾರ್ನಿವೋರ
ಕುಟುಂಬ : ಕೈನಿಡೀ
ಉದಾ : ತೋಳ
(Common Wolf)
ಶಾಸ್ತ್ರೀಯ ನಾಮ : ಕೇನಿಸ್ ಲೂಪಸ್ (Canis lupus)

462_69_PP_KUH

ವಿತರಣೆ ಮತ್ತು ಆವಾಸ : ದಕ್ಷಿಣ ಭಾರತದಲ್ಲಿ ಒತ್ತಾದ ಮರಗಳಿರುವ ಪೊದೆ ಹಾಗೂ ಗುಡ್ಡಗಾಡುಗಳಲ್ಲಿ ವಾಸಿಸುತ್ತವೆ. ಇತ್ತೀಚೆಗೆ ಕರ್ನಾಟಕದ ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ತೋಳಗಳ ಅಭಯಾರಣ್ಯವನ್ನು ಸ್ಥಾಪಿಸಿರುವುದು ಗಮನಾರ್ಹ.

ಗಾತ್ರ : ತೋಳದ ಶರೀರದ ಉದ್ದ ೧೦೫ ಸೆಂ.ಮೀ. ಬಾಲದ ಉದ್ದ (೩೦ ರಿಂದ ೪೫ ಸೆಂ.ಮೀ.) ೧ ರಿಂದ ೧ ೧/೨ ಅಡಿ ಮತ್ತು ಇದರ ಎತ್ತರ ೨ ರಿಂದ ೨ ೧/೨ ಅಡಿ (೬೦-೭೫ ಸೆಂ.ಮೀ.) ತೂಕ ೧೮ ರಿಂದ ೨೭ ಕೆ.ಜಿ.

ಆಹಾರ : ಗಂಡು ಎರಳೆ, ಜಿಂಕೆ, ಮೊಲ, ಹಂದಿ, ಮುಂಗಸಿ ಮುಂತಾದ ಚಿಕ್ಕ ಪ್ರಾಣಿಗಳನ್ನು ಮತ್ತು ಕುದುರೆಯಂತಹ ದೊಡ್ಡ ಪ್ರಾಣಿಯನ್ನೂ, ಊರಿನ ಸಮೀಪ ಬಂದಾಗ ಆಡು, ಕುರಿ, ನಾಯಿ, ಕರುಗಳನ್ನು ಬೇಟೆಯಾಡುತ್ತವೆ. ಬೇಟೆ ದೊರಕದಿದ್ದಾಗ ಕೊಳೆತ ಮಾಂಸವನ್ನು ತಿನ್ನುವುದುಂಟು. ಇತ್ತೀಚೆಗೆ ಕರ್ನಾಟಕದ ತುಮಕೂರು ಜಿಲ್ಲೆಯ ಪಾವಗಡದ ಬಳಿ ಮಕ್ಕಳನ್ನು ಅಪಹರಿಸಿ ಸುದ್ದಿಮಾಡಿವೆ.

ಲಕ್ಷಣಗಳು : ತೋಳದ ಮೈಮೇಲಿನ ತುಪ್ಪುಳು ಒತ್ತಾಗಿ ಮತ್ತು ಉದ್ದವಾಗಿದೆ. ಒಂದು ರೀತಿಯ ಜಿಗುಟು (ಜಿಡುಪು) ಸ್ವಭಾವದ ತುಪ್ಪಳು. ಮೈ ಬಣ್ಣ ಬೂದು ಅಥವಾ ಕಪ್ಪು ಮಿಶ್ರಿತ ಬೂದು. ಮೈದಾನದಲ್ಲಿ ವಾಸಿಸುವುದರಿಂದ ಮೈ ಬಣ್ಣ ಮರಳಿನ ಬಣ್ಣವಾಗಿದ್ದು ದೃಷ್ಟಿಗೆ ಬೀಳದಂತೆ ತಪ್ಪಿಸಿಕೊಳ್ಳು ನೆರವಾಗುತ್ತದೆ. ಇದರ ತಲೆಬುರುಡೆ ಅಗಲವಾಗಿದೆ. ಕಾಲುಗಳು ದಪ್ಪಗೆ ಬಲಯುತವಾಗಿವೆ. ಪಾದ ಅಗಲವಾಗಿದೆ. ಸಿಟ್ಟಿನಲ್ಲಿದ್ದಾಗ ಇದರ ಕುತ್ತಿಗೆಯ ಕೂದಲುಗಳು ನಿಮಿರಿ ನಿಲ್ಲುತ್ತವೆ. ವಕ್ರಾಕಾರದ ಹುಬ್ಬು ಮತ್ತು ಎತ್ತರದ ಹಣೆ ತೋಳಗಳಿಗೆ ವಿಶಿಷ್ಟ ರೂಪುಕೊಟ್ಟಿದೆ.

ಸಂತಾನಾಭಿವೃದ್ಧಿ : ತೋಳಗಳು ೨-೩ ವರ್ಷ ವಯಸ್ಸಾದಾಗ ಲೈಂಗಿಕ ಪ್ರೌಢತನಗಳಿಸಿ ಬೆದೆಗೆ ಬರುತ್ತವೆ. ಗಂಡು ಮತ್ತು ಹೆಣ್ಣುಗಳು ಒಮ್ಮೆ ಜೊತೆ ಕೂಡಿದರೆ ಜೀವನ ಪೂರ್ತಿ ಅನ್ಯೋನ್ಯ ಸಂಗಾತಿಗಳಾಗಿ ಬಾಳುತ್ತವೆ. ಹೆಣ್ಣುಗಂಡುಗಳು ಜನವರಿ-ಮಾರ್ಚ್‌ತಿಂಗಳುಗಳಲ್ಲಿ ಸಂಭೋಗ ನಡೆಸುತ್ತವೆ. ಗರ್ಭಾವಧಿಯ ಕಾಲ ೬೦ ರಿಂದ ೬೩ ದಿನಗಳು. ಒಂದು ಸೂಲದಲ್ಲಿ ೩ ರಿಂದ ೯ ಮರಿಗಳು ಹುಟ್ಟುತ್ತವೆ. ಹುಟ್ಟಿದ ಮರಿಗಳು ಕುರುಡು ಮತ್ತು ಕಿವುಡು. ೮ ವಾರಗಳ ನಂತರ ಹಾಲು ಕುಡಿಯುವುದನ್ನು ಬಿಟ್ಟು ತಂದೆ-ತಾಯಿಗಳು ತಂದು ಒದಗಿಸಿದ ಮಾಂಸವನ್ನು ತಿನ್ನಲು ಆರಂಭಿಸುತ್ತವೆ. ಹೆಣ್ಣು ಮರಿಗಳ ಪಾಲನೆಯಲ್ಲಿ ಇದ್ದಾಗ ಗಂಡು ಆಹಾರ ಒದಗಿಸುತ್ತದೆ.

ಸ್ವಭಾವ : ತೋಳಗಳು ಜೊತೆಯಾಗಿ ಬಾಳುತ್ತವೆ. ಒಂಟಿಯಾಗಿ ಅಥವಾ ತಂಡದಲ್ಲಿ ಬೇಟೆಯಾಡುತ್ತವೆ. ತಂಡದಲ್ಲಿರುವ ಪ್ರಾಣಿಗಳು ಸಾಮಾನ್ಯವಾಗಿ ಒಂದೇ ಕುಟುಂಬಕ್ಕೆ ಸೇರಿದವು. ತಂಡದಲ್ಲಿ ೩೦ರ ವರೆಗೂ ಇರುತ್ತವೆ. ಗವಿಯಂತಿರುವ ದೊಗರು, ಗವಿ ಮುಂತಾದ ತಾಣಗಳಲ್ಲಿ ವಾಸಿಸುತ್ತವೆ. ಬೇರೆ ಪ್ರಾಣಿಗಳು ನಿರ್ಮಿಸಿಕೊಂಡಿದ್ದ ವಾಸಸ್ಥಳಗಳನ್ನು ಆಕ್ರಮಿಸಿಕೊಳ್ಳುವುದುಂಟು. ಚೆನ್ನಾಗಿ ಗಾಳಿ ಮತ್ತು ಬೆಳಕು ಬೀಳುವ ಸ್ಥಳಗಳನ್ನು ಇವು ಇಷ್ಟಪಡುತ್ತವೆ. ಒಂದೇ ಕುಟುಂಬದ ತೋಳಗಳು ಒಂದರೊಡನೊಂದು ಹೊಂದಿಕೊಂಡು ಸ್ನೇಹದಿಂದ ಬದುಕುತ್ತವೆ, ಅಲ್ಲದೆ ತಮ್ಮ ಗುಂಪಿಗೆ ಬೇರೆ ಗುಂಪಿನ ತೋಳಗಳನ್ನು ಸೇರಿಸುವುದಿಲ್ಲ. ಹಸಿದಾಗ ಇವು ಮನುಷ್ಯನ ಮೇಲೂ ಎರಗಬಹುದು. ಕೀಟಲೆ ಮಾಡಿದರೆ ಉಗ್ರವಾಗಿ ವರ್ತಿಸುತ್ತವೆ. ತೋಳಗಳು ಮಕ್ಕಳನ್ನು ಎತ್ತಿಕೊಂಡು ಹೋಗಿ ಸಾಕಿದ ಕತೆಗಳು ಹಿಂದಿನ ಕಾಲದಿಂದಲೂ ಉಂಟು. ಇವುಗಳ ಚಟುವಟಿಕೆಯ ಪ್ರದೇಶವು ೮೦ ಕಿ.ಮೀ. ವ್ಯಾಸವಿರುತ್ತದೆ.

೧೯೮೩ರಲ್ಲಿ ಪಾವಗಡದಿಂದ ಏಳು ಮಕ್ಕಳನ್ನು ಕೊಂಡೊಯ್ದವೆಂದು ೧೩ ತೋಳಗಳನ್ನು ಕೊಲ್ಲಲಾಯಿತು. ಆದರೆ ನಿಜವಾದ ನರಭಕ್ಷಕ ತೋಳಗಳು ತಪ್ಪಿಸಿಕೊಂಡಿವೆ. ಇವು ನರಭಕ್ಷಕವಾಗಲು ಕಾರಣ ಅವುಗಳ ಆಹಾರದ ಅಭಾವ ಮತ್ತು ನೆಲೆಯ ನಾಶವಿರಬಹುದು. ಸಾಮಾನ್ಯವಾಗಿ ತೋಳಗಳು ಚಿಕ್ಕ ಚಿಕ್ಕ ಗುಂಪುಗಳನ್ನು ಕಟ್ಟಿಕೊಂಡು ಬೇಟೆಯಾಡುತ್ತವೆ. ಬೇಟೆಯ ಸಮಯದಲ್ಲಿ ಇವು ತೋರುವ ತಾಳ್ಮೆ ಹಾಗೂ ವೇಗ ಮೆಚ್ಚತಕ್ಕದ್ದು. ಮುದಿ ತೋಳಗಳು ಹೆಚ್ಚಾಗಿ ಸಾಕುಪ್ರಾಣಿಗಳನ್ನು ಬೇಟೆಯಾಡುವುದುಂಟು.

ಕೇನಿಸ್ ಲೂಪಸ್ ಪ್ಯಾಲಿಪಸ್ ಎಂಬ ತೋಳವು ದಕ್ಷಿಣ ಭಾರತದಲ್ಲಿ ಧಾರವಾಡದವರೆಗೂ ಕಂಡುಬರುತ್ತದೆ.