ಗಣ : ಕಾರ್ನಿವೋರ
ಕುಟುಂಬ : ವಿವೆರಿಡೀ
ಉದಾ : ತಾಳೆಬೆಕ್ಕು (
Plam civet)
ಶಾಸ್ತ್ರೀಯ ನಾಮ : ಪ್ಯಾರಡಕ್ಸೂರಸ್ ಹರ್ಮಾಪ್ರೊಡೈಟಸ್‌ (Paradoxurus hermaphroditus)

474_69_PP_KUH

ವಿತರಣೆ ಮತ್ತು ಆವಾಸ : ಇದಕ್ಕೆ ಮರಬೆಕ್ಕು. ಮಂಚಬೆಕ್ಕು ಎಂಬ ಹೆಸರುಗಳೂ ಉಂಟು. ಕರ್ನಾಟಕವೂ ಸೇರಿದಂತೆ ಇಡೀ ದಕ್ಷಿಣ ಭಾರತದ ಬಯಲು ಪ್ರದೇಶಗಳಲ್ಲಿ ಈ ಬೆಕ್ಕು ಕಂಡುಬರುತ್ತದೆ. ಇದು ಮರವಾಸಿ. ಬಹಳವಾಗಿ ತಾಳೆಮರ, ಮಾವಿನಮರ ಮುಂತಾದ ಮರಗಳ ಮೇಲೆ ವಾಸಿಸುತ್ತದೆ. ದಟ್ಟ ಕಾಡುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ನಗರಗಳು ಮತ್ತು ಹಳ್ಳಿಗಳ ಹತ್ತಿರವೂ ಕಂಡು ಬರುವುದುಂಟು. ಆದರೆ ತಾಳೆ ಮರವೇ ಇದಕ್ಕೆ ತುಂಬಾ ಪ್ರಿಯವಾದ ಆವಾಸ ಸ್ಥಾನ.

ಗಾತ್ರ : ತಲೆ ಮತ್ತು ದೇಹ ೨ ಅಡಿ ಉದ್ದ. ಅಷ್ಟೇ ಉದ್ದದ ಬಾಲ. ತೂಕ ೨.೭ ರಿಂದ ೪.೫ ಕೆ.ಜಿ. ಮನೆಯ ಬೆಕ್ಕುಗಳಿಗಿಂತ ಸ್ವಲ್ಪ ದೊಡ್ಡದು.

ಆಹಾರ : ಇಲಿ, ಅಳಿಲು, ಸಣ್ಣಪುಟ್ಟ ಹಕ್ಕಿಗಳು ಇದರ ಮುಖ್ಯ ಆಹಾರ. ಇದು ಜೊತೆಗೆ ವಿವಿಧ ಬಗೆಯ ಹಣ್ಣುಕಾಯಿಗಳನ್ನು ತಿನ್ನುವುದೂ ಉಂಟು. ಕೆಲವು ಸಲ ಊರುಗಳಿಗೆ ನುಗ್ಗಿ ಕೋಳಿ ಮರಿಗಳನ್ನು ಹಿಡಿದು ಕೊಂಡೊಯ್ದು ತಿನ್ನುವುದುಂಟು. ಈಚಲು ಮರಕ್ಕೆ ಹೆಂಡ ಇಳಿಸಲೆಂದು ಕಟ್ಟುವ ಮಡಿಕೆಗಳನ್ನು ಕೊಳ್ಳೆ ಹೊಡೆದು ಅದರಲ್ಲಿ ಶೇಖರಿಸಿರುವ ಹೆಂಡವನ್ನು ಕುಡಿಯುವ ವಿಚಿತ್ರ ಅಭ್ಯಾಸ ಇದಕ್ಕೆ ಇರುವುದರಿಂದಾಗಿ ತಾಳೆಬೆಕ್ಕು ಎನ್ನುವ ಹೆಸರು ಬಂದಿದೆ.

ಲಕ್ಷಣಗಳು : ದೇಹದ ಬಣ್ಣ ಕಪ್ಪು ಅಥವಾ ಕಪ್ಪು ಮಿಶ್ರಿತ ಕಂದು. ಹೊಟ್ಟೆಯ ಭಾಗ ಬಿಳುಪು, ಮಾಸಲು ಬಿಳಿ, ಇಲ್ಲವೇ ಹಳದಿ. ದೇಹದ ಮೇಲೆ ಬಿರುಸಾದ ಕೂದಲುಗಳಿವೆ. ಕಣ್ಣಿನ ಕೆಳಗೆ, ಕೆನ್ನೆಯ ಮೇಲೆ ಬಿಳಿಯ ಮಚ್ಚೆಗಳು ಇರುತ್ತವೆ. ವರ್ಷಕ್ಕೊಮ್ಮೆ ಮೈಮೇಲಿನ ಕೂದಲಿನ ಹೊದಿಕೆ ಉದುರಿ ಹೊಸ ಹೊದಿಕೆ ಹುಟ್ಟುತ್ತದೆ. ಹೊಸ ಹೊದಿಕೆ ಹುಟ್ಟುವಾಗ ಬೆನ್ನಿನ ಮೇಲೆ ಪಕ್ಕೆಗಳಲ್ಲಿ ಉದ್ದುದ್ದನೆಯ ಪಟ್ಟೆಗಳು ಮತ್ತು ಭುಜ ಹಾಗೂ ತೊಡೆಗಳ ಮೇಲೆ ಮಚ್ಚೆಗಳು ಕಾಣುತ್ತವೆ. ಕಾಲುಗಳು ಸದಾ ಕಪ್ಪು ಅಥವಾ ಕಡುಕಂದು. ಮುಖದ ಮೇಲಿನ ಗುರುತುಗಳು ಪ್ರಾಣಿಯಿಂದ ಪ್ರಾಣಿಗೆ ಬದಲಾಗಬಹುದು. ಸಾಮಾನ್ಯವಾಗಿ ಕಣ್ಣಿನ ಕೆಳಗೆ, ಕೆಲವೊಮ್ಮೆ ಅದರ ಮೇಲೂ ಮತ್ತು ಮೂಗಿನ ಎರಡು ಕಡೆಗಳಲ್ಲಿಯೂ ಬಿಳಿಯ ಮಚ್ಚೆಗಳು ಅಥವಾ ಚುಕ್ಕೆಗಳು ಇರುವುದುಂಟು.

ಸಂತಾನಾಭಿವೃದ್ಧಿ : ವರ್ಷದ ಎಲ್ಲಾ ಕಾಲದಲ್ಲಿಯೂ ಮರಿ ಹಾಕುತ್ತದೆ. ಮರಿಗಳನ್ನು ಮರದ ಪೊಟರುಗಳಲ್ಲಿ ಅಥವಾ ಬಂಡೆಗಳ ನಡುವಿನ ಸುರಕ್ಷಿತ ಸ್ಥಾನದಲ್ಲಿ ಹಾಕುತ್ತದೆ. ಒಮ್ಮೆಗೆ ಸಾಮಾನ್ಯವಾಗಿ ೩-೪ ಮರಿಗಳನ್ನು ಈಯುತ್ತದೆ. ಮರಿಗಳನ್ನು ಈಯಲು ನಿರ್ದಿಷ್ಟ ಪ್ರಾಯವಿಲ್ಲ.

ಸ್ವಭಾವ : ನಿಶಾಚರಿ, ವನವಾಸಿ ಮತ್ತು ಮರವಾಸಿಯಾದರೂ ಆ ಜೀವನ ಬಿಟ್ಟು ಜನ ಸಂದಣಿಯಿರುವ ಊರುಗಳಲ್ಲಿ ವಾಸಿಸಲು ಹೊಂದಿಕೊಂಡಿದೆ. ಕಾಡಿನಲ್ಲಿದ್ದಾಗ ಮರದ ಪೊಟರೆಗಳಲ್ಲಿ ಹಗಲೆಲ್ಲಾ ಅವಿತಿದ್ದು ರಾತ್ರಿ ಆಹಾರಾನ್ವೇಷಣೆಗೆ ಹೊರಡುತ್ತದೆ. ಮನೆಯ ಮೇಲ್ಚಾವಣಿ, ಮನೆಯ ಹಿಂದಿನ ಸಣ್ಣ ಮನೆಗಳು, ಚರಂಡಿ ಮುಂತಾದ ಸ್ಥಳಗಳಲ್ಲಿ ಅವಿತಿಟ್ಟುಕೊಳ್ಳುತ್ತದೆ. ಹಗಲು ಹೊತ್ತು ಮರಗಳಲ್ಲಿಯೊ ಅಥವಾ ನೆಲದ ಮೇಲೊ ಇದ್ದು ರಾತ್ರಿ ಹೊತ್ತು ಆಹಾರವನ್ನು ಅರಸುತ್ತದೆ. ಪಕ್ಷಿ ಮತ್ತು ಸಣ್ಣ ಸಸ್ತನಿಗಳನ್ನು ಕೊಂದು ತಿನ್ನುತ್ತದೆ. ಕೆಲವು ಸಾರಿ ಹಣ್ಣುಗಳನ್ನು ತಿನ್ನಬಹುದು. ಮನುಷ್ಯನನ್ನು ಅವಲಂಬಿಸಿ ಜೀವಿಸುವ ಈ ಪ್ರಾಣಿ ಆತನ ವಸತಿಯ ಸುತ್ತ ಬರುವ ಇಲಿಗಳನ್ನು ಮುಖ್ಯವಾಗಿ ತಿನ್ನುತ್ತದೆ. ಇದು ಹಣ್ಣುಗಳಿಗಾಗಿ ಕಾಫಿತೋಟ ಮತ್ತು ಅನಾನಸ್ ತೋಟಗಳಿಗೆ ಲಗ್ಗೆ ಹಾಕುವುದುಂಟು. ಕಾಫಿ ಹಣ್ಣುಗಳನ್ನು ತಿಂದು ಜೀರ್ಣಿಸಲಾಗದ ವಿಸರ್ಜಿತ ಬೀಜಗಳು ಅತ್ಯುತ್ತಮ ಗುಣಮಟ್ಟದವು ಎನ್ನುವ ಭಾವನೆ ಇದೆ. ಇದನ್ನು ಸುಲಭವಾಗಿ ಸಾಕಬಹುದು.

ಉತ್ತರ ಕನ್ನಡ ಜಿಲ್ಲೆಯ ಬೆಟ್ಟಕಾಡುಗಳಲ್ಲಿ ಕಂದುಬಣ್ಣದ ತಾಳೆ ಬೆಕ್ಕು ಜಾತಿ ದೊರಕುತ್ತದೆ. ಇದರ ಶಾಸ್ತ್ರೀಯನಾಮ ಪ್ಯಾರಡಕ್ಸೂರಸ್ ಜೆರ್ಡೋನಿ (Paradoxurus jerdoni) ಇದು ನಾಚಿಕೆಯ ಸ್ವಭಾವದ ಕಾಡು ಪ್ರಾಣಿ. ಅಪರೂಪವಾಗಿ ಮನುಷ್ಯನ ವಸತಿಗಳ ಹತ್ತಿರ ಬರುತ್ತದೆ. ಇದರ ಮೈಬಣ್ಣ ಕಡುಕಂದಾದುದರಿಂದ ಇದನ್ನು ಕಂದು ತಾಳೆ ಬೆಕ್ಕು ಎಂದೇ ಕರೆಯುತ್ತಾರೆ. ಇದು ತಾಳೆಬೆಕ್ಕನ್ನೇ ಹೆಚ್ಚಾಗಿ ಹೋಲುತ್ತದೆ.

—-

ಗಣ : ಕಾರ್ನಿವೋರ
ಕುಟುಂಬ : ವಿವೆರಿಡೀ
ಉದಾ : ಪುನುಗುಬೆಕ್ಕು (
Small Indian Civet Cat)
ಶಾಸ್ತ್ರೀಯ ನಾಮ : ವಿವೆರಿಕುಲ ಇಂಡಿಕ (
Viverricula indica)

475_69_PP_KUH

ವಿತರಣೆ ಮತ್ತು ಆವಾಸ : ಕರ್ನಾಟಕವೂ ಸೇರಿದಂತೆ ಭಾರತದ ತುಂಬೆಲ್ಲಾ ಹರಡಿದೆ. ದಟ್ಟಕಾಡುಗಳಿಂದ ದೂರವಿರುತ್ತದೆ. ಆದರೆ ಉದ್ದಹುಲ್ಲುಗಾವಲು ಅಥವಾ ಕುರುಚಲು ಕಾಡುಗಳಲ್ಲಿ ಇರಲು ಇಷ್ಟಪಡುತ್ತದೆ. ತನ್ನ ವಸತಿಯ ಆಯ್ಕೆಯಲ್ಲಿ ಒಣ ಅಥವಾ ತೇವದ ಪರಿಸ್ಥಿತಿಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಇದು ಪೊಟರುಗಳಲ್ಲಿ ಅಥವಾ ಕಲ್ಲುಗಳ ಕೆಳಗೆ ಅಥವಾ ಹುಲ್ಲಿನ ಮಧ್ಯೆ ಅಥವಾ ಪೊದರುಗಳಲ್ಲಿ ರಕ್ಷಣೆ ಪಡೆಯುತ್ತದೆ. ಹೆಚ್ಚು ಸಂಖ್ಯೆಯಲ್ಲಿ ಊರುಗಳ ಬಳಿ ವಾಸಿಸಿ, ಜನಸಂಖ್ಯೆ ಹೆಚ್ಚಾಗಿರುವ ವಸತಿಗಳ ಮಧ್ಯೆ ಚರಂಡಿಗಳ ಮತ್ತು ಮನೆಯ ಹಿಂಭಾಗದ ಚಿಕ್ಕ ಮನೆಗಳಲ್ಲಿ ರಕ್ಷಣೆ ಪಡೆಯುತ್ತವೆ.

ಗಾತ್ರ : ಪೂರ್ಣ ಉದ್ದಳತೆ (೧೧೫ ಸೆಂ.ಮೀ.) ೩ ಅಡಿ ಬಾಲ (೩೦ ಸೆಂ.ಮೀ) ೧ ಅಡಿಗಿಂತಲೂ ಸ್ವಲ್ಪ ಉದ್ದ. ತೂಕ ೩ ರಿಂದ ೪ ಕೆ.ಜಿ.

ಆಹಾರ : ಇವು ಸರ್ವಭಕ್ಷಕಗಳು. ಇಲಿ, ಹೆಗ್ಗಣ, ಏಡಿ, ಅಳಿಲು, ಹಕ್ಕಿ, ಓತಿ, ಕ್ರಿಮಿಕೀಟಗಳನ್ನು ತಿನ್ನುತ್ತದೆ. ಅವಕಾಶ ದೊರಕಿದರೆ ಕೋಳಿ ಗೂಡುಗಳು ಮೇಲೆ ಧಾಳಿ ಇಕ್ಕುತ್ತವೆ. ಕೆಲವೊಮ್ಮೆ ಹಣ್ಣುಹಂಪಲು, ಗೆಡ್ಡೆಗೆಣಸುಗಳನ್ನು ತಿನ್ನುವುದುಂಟು.

ಲಕ್ಷಣಗಳು : ದೇಹ ಉದ್ದ. ಕಾಲುಗಳು ಗಿಡ್ಡ. ಪ್ರತಿಕಾಲಿನಲ್ಲಿಯೂ ೫ ಬೆರಳುಗಳಿದ್ದು ಪ್ರತಿಬೆರಳಿಗೂ ಒಳಕ್ಕೆ ಸೆಳೆದುಕೊಳ್ಳಬಹುದಾದ ನಖಗಳಿವೆ. ತಲೆ ನೀಳ ಮತ್ತು ಮೂತಿ ಚೂಪು. ಇದಕ್ಕೆ ೪೦ ಹಲ್ಲುಗಳಿವೆ. ದಂತಸೂತ್ರ ೩, ೧, ೪, ೨ / ೩, ೧, ೪, ೨. ಕೊಳೆ ಬೂದು ಅಥವಾ ಬೂದು ಕಂದು ಮೈಬಣ್ಣ. ಬೆನ್ನಿನ ಭಾಗದಲ್ಲಿ ಉದ್ದಕ್ಕೆ ಹರಡಿದ ಪಟ್ಟೆಗಳಿವೆ. ಪಕ್ಕೆಗಳಲ್ಲಿ ಸಾಲುಗಳಲ್ಲಿ ವ್ಯವಸ್ಥಿತವಾದ ಚುಕ್ಕೆಗಳಿವೆ. ಕುತ್ತಿಗೆಯ ಬಳಿ ಹೆಚ್ಚು ಕಡಿಮೆ ಅಡ್ಡಪಟ್ಟೆಯ ಸಾಲುಗಳಿವೆ. ಇದರ ಆಕಾರವನ್ನು ಪುನುಗು ಬೆಕ್ಕಿನ ರೀತಿಯ ಆಕಾರವೇ ಎಂದು ಹೇಳುತ್ತಾರೆ. ದೊಡ್ಡ ಜಾತಿಯ ಪುನುಗು ಬೆಕ್ಕಿನಿಂದ ಇದರ ಬೆನ್ನಿನ ಮೇಲಿರುವ ಶಿಖೆಯು ಇಲ್ಲದಿರುವುದರಿಂದ ಇದನ್ನು ಗುರುತಿಸಬಹುದು. ಬಾಲ ಬಿಳಿ. ಬಾಲದುದ್ದಕ್ಕೂ ಕಪ್ಪು ಉಂಗುರಗಳಿವೆ. ಗಿಡ್ಡತಲೆ, ದೊಡ್ಡಕಿವಿ, ಹದನಾದ ನಖಗಳಿವೆ. ಗಂಡು ಮತ್ತು ಹೆಣ್ಣು ಗಳೆರಡರಲ್ಲಿಯೂ ಜನನೇಂದ್ರಿಯಗಳ ಬಳಿ ಸುಗಂಧ ಗ್ರಂಥಿಗಳಿವೆ. ಇವು ದೊಡ್ಡ ಚೀಲಗಳಂತಿದ್ದು ಅದನ್ನು ಮುಚ್ಚುವ ಮತ್ತು ತೆರೆಯುವ ರೋಮಭರಿತ ತುಟಿಗಳಿವೆ.

ಸಂತಾನಾಭಿವೃದ್ಧಿ : ಮರಿಗಳು ವರ್ಷದ ಎಲ್ಲಾ ಕಾಲದಲ್ಲಿಯೂ ಕಂಡುಬರುತ್ತವೆ. ಆದ್ದರಿಂದ ಸಂತಾನಾಭಿವೃದ್ಧಿಯು ವರ್ಷದ ಯಾವುದೇ ಋತುವಿಗೆ ಸೀಮಿತವಾದಂತೆ ಕಂಡುಬರುವುದಿಲ್ಲ. ಚಿಕ್ಕ ಬಿಲದ ಒಳ ತುದಿಯಲ್ಲಿ ಕೊರೆದು ಸಣ್ಣಕೋಣೆಯನ್ನು ರಚಿಸಿ, ಅದರಲ್ಲಿ ಮರಿಯನ್ನು ಹಾಕಿ ಸಾಕಿ ಬೆಳಸುತ್ತವೆ. ಈ ಬಿಲಗಳು ಬಂಡೆಗಳ ಕೆಳಗೆ ಅಥವಾ ಮರಗಳ ಬುಡದಲ್ಲಿ ಅಥವಾ ನೀರು ಹರಿಯುವ ಬಯಲ ನಾಲೆಗಳ ಕೆಳಗೆ ಕೊರೆದು ಮಾಡಿದ್ದಾಗಿರಬಹುದು. ಇವು ಯಾವಾಗಲೂ ಜೋಡಿಯಲ್ಲಿ ಇಲ್ಲದಿರುವುದರಿಂದ ಮರಿಗಳ ಪಾಲನೆಯ ತಾಯಿಯ ಸಂಪೂರ್ಣ ಜವಾಬ್ದಾರಿಯಾಗುತ್ತದೆ. ಒಂದು ಸೂಲದಲ್ಲಿ ೪-೫ ಮರಿಗಳನ್ನು ಹಾಕಬಹುದು.

ಸ್ವಭಾವ : ಇವು ತೀವ್ರವಾದ ನಿಶಾಚರಿಗಳಲ್ಲ. ಒಂಟಿ ಜೀವಿಗಳು. ತನ್ನ ವಸತಿಯನ್ನು ಆರಿಸುವಾಗ ಒಣ ಅಥವಾ ತೇವ ಪರಿಸರಗಳನ್ನು ಪರಿಗಣಿಸುವುದಿಲ್ಲ. ಇವುಗಳಿಗೆ ದಟ್ಟ ಕಾಡುಗಳು ಆಗುವುದಿಲ್ಲ. ಆದ್ದರಿಂದ ಹೆಚ್ಚಾಗಿ ಹುಲ್ಲುಗಾವಲು ಮತ್ತು ಕುರುಚಲು ಕಾಡುಗಳಲ್ಲಿ ವಾಸಿಸುತ್ತವೆ. ಮರಗಳನ್ನು ಹತ್ತಬಲ್ಲವು. ನೀರಿನಲ್ಲಿ ಈಜಬಲ್ಲವು. ಕುತ್ತಿಗೆಯ ಮೇಲೆ ನಿಮಿರಿಸುವ ಕೂದಲುಗಳಿಲ್ಲ. ಸ್ವಾಭಾವಿಕವಾಗಿ ನಾಲಿಗೆಯಿಂದ ನೆಕ್ಕಿ ಮೈಯನ್ನು ಸ್ವಚ್ಛ ಮಾಡಿಕೊಳ್ಳುತ್ತವೆ. ಮರಿಗಳು ಬೆಕ್ಕುಗಳ ರೀತಿಯಲ್ಲಿ ಮಿಯಾವ್ ಎಂದು ಕೂಗುತ್ತವೆ. ಪ್ರಬುದ್ಧ (ವಯಸ್ಕ) ಪ್ರಾಣಿಗಳು ಸಂತೋಷವಾಗಿದ್ದಾಗ ಲೊಚಗುಟ್ಟುತ್ತವೆ. ಇವುಗಳಲ್ಲಿರುವ ಸುಗಂಧ ಗ್ರಂಥಿಯು ಸ್ರವಿಸುವ ದ್ರವವು ಚೀಲಕ್ಕೆ ಒಸರದೆ ಮುಚ್ಚಿದ ಚರ್ಮಕ್ಕೆ ಸ್ರವಿಸುತ್ತವೆ. ಇದನ್ನು ಮರದ ಚಮಚದಿಂದ ತೆಗೆಯುತ್ತಾರೆ. ಈ ದ್ರವದ ಸಾಂದ್ರತೆಯು ಹೆಚ್ಚಿದಾಗ ದುರ್ವಾಸನೆ ಬರುತ್ತದೆ. ಆದರೆ ತಿಳಿಯಾದಂತೆ ಸುವಾಸನೆಯು ಹೆಚ್ಚುತ್ತದೆ. ಸಾಕಿದ ಪುನುಗು ಬೆಕ್ಕಿನ ಪುನುಗನ್ನು ವಾರಕ್ಕೆ ೧/೮ ಔನ್ಸ್ ತೆಗೆಯಬಹುದು. ಇದನ್ನು ಬೆಲೆ ಬಾಳುವ ಸುಗಂಧ ದ್ರವ್ಯ ತಯಾರಿಕೆಯಲ್ಲಿ ಬಳಸುತ್ತಾರೆ. ಆದರೆ ಇತ್ತೀಚೆಗೆ ಕೃತಕ ಸುಗಂಧ ದ್ರವ್ಯಗಳು ಬಂದು ಈ ಪ್ರಾಣಿಯ ಸುಗಂಧ ದ್ರವ್ಯದ ಬೇಡಿಕೆ ಕಡಿಮೆಯಾಗಿದೆ. ಸುಗಂಧ ದ್ರವ್ಯವನ್ನು ಪಡೆಯುವದಕ್ಕೋಸ್ಕರ ಊದುಗಡ್ಡಿ ತಯಾರಿಕರು ಇವುಗಳನ್ನು ಸಾಕುತ್ತಾರೆ. ಇವುಗಳನ್ನು ಸುಲಭವಾಗಿ ಪಳಗಿಸಬಹುದು. ಇದರಲ್ಲಿ ೫ ಉಪಪ್ರಭೇದಗಳಿವೆ. ಅವುಗಳಲ್ಲಿ ಕೆಲವು ಕರ್ನಾಟಕದಲ್ಲಿಯೂ ದೊರಕುತ್ತವೆ.

—- 

ಗಣ : ಕಾರ್ನಿವೋರ
ಕುಟುಂಬ : ವಿವೆರಿಡೀ
ಉದಾ : ಮಲಬಾರ್ ಪುನುಗು ಬೆಕ್ಕು (
Malabar Civet)
ಶಾಸ್ತ್ರೀಯ ನಾಮ : ವಿವೆರ ಮೆಗಾಸ್ಟಿಲ (Viverra megaspila)

ವಿತರಣೆ ಮತ್ತು ಆವಾಸ : ಕೇರಳ ಮತ್ತು ನೆರೆಯ ಕರ್ನಾಟಕದ ಕರಾವಳಿಗೆ ಸೇರಿದಂತಿರುವ ಜಿಲ್ಲೆಗಳು, ದಕ್ಷಿಣ ಕನ್ನಡ ಮತ್ತು ಕೊಡಗಿನಲ್ಲಿ ಕಂಡುಬರುತ್ತವೆ. ಮರಗಳಿರುವ ಬಯಲು ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತವೆ. ಅಪರೂಪವಾಗಿ ಬೆಟ್ಟಗುಡ್ಡಗಳ ಕಾಡುಗಳಲ್ಲಿಯೂ ಕಾಣಬರುತ್ತವೆ.

ಗಾತ್ರ : ತಲೆ ಮತ್ತು ದೇಹ ೨ ೧/೨ ಅಡಿಯಿಂದ ೨ ೩/೪ ಅಡಿ ಉದ್ದ (೭೫ ರಿಮದ ೮೦ ಸೆಂ.ಮೀ.). ಬಾಲದ ಉದ್ದ ೧ ರಿಂದ ೧ ೧/೨ ಅಡಿ (೩೨ ರಿಂದ ೩೫ ಸೆಂ.ಮೀ.)

ಆಹಾರ : ಪುನಗುಬೆಕ್ಕಿನಂತೆ ಇದು ಕೂಡ ಇಲಿ, ಹೆಗ್ಗಣ, ಏಡಿ, ಅಳಿಲು, ಹಕ್ಕಿ, ಓತಿ, ಕ್ರಿಮಿ ಕೀಟಗಳನ್ನು ತಿನ್ನುತ್ತದೆ.

ಲಕ್ಷಣಗಳು : ಎಲ್ಲಾ ವಿಧದಲ್ಲಿಯೂ ಇದು ಭಾರತದ ಪುನುಗುಬೆಕ್ಕನ್ನೇ ಹೋಲುತ್ತದೆ. ಪಾದ ಮೃದುವಾಗಿ ಅರಕ್ಷಿತವಾಗಿದೆ. ಬೆರಳುಗಳ ನಡುವೆ ಜಾಲಪಾದವಿದೆ. ಭುಜದಿಂದ ಬಾಲದ ತುದಿಯವರೆಗೂ ನೆಟ್ಟಗೆ ನಿಲ್ಲುವ ಕಪ್ಪು ಕೂದಲಿನ ಶಿಖೆಯಂತಹ ರಚನೆ ಇದೆ. ಬಾಲದಲ್ಲಿ ಅಗಲವಾದ ಕಪ್ಪು ಉಂಗುರಗಳಿವೆ. ಇದರ ನಡುವೆ ಅಪೂರ್ಣವಾದ ಹಳದಿ ಬಿಳುಪು ಉಂಗುರುಗಳಿವೆ. ದೇಹದ ಬಣ್ಣ ಹಳದಿ ಹಿಂಭಾಗದಲ್ಲಿ ಕಪ್ಪು ಪಟ್ಟೆಗಳ ಬದಲು ಗುರುತುಗಳಿವೆ. (Spot). ತಲೆಯ ಬಣ್ಣ ಬೂದು ಕೆನ್ನೆಗಳು ಕಂದು ಮತ್ತು ಕಿವಿಯ ಬುಡಗಳು ಹೆಚ್ಚು ಬಣ್ಣವಾಗಿರುತ್ತವೆ. ಕತ್ತು ಮುಂಭಾಗದಲ್ಲಿ ಬಿಳುಪು. ಮೇಲ್ಭಾಗದಲ್ಲಿ ಮಬ್ಬು ಕಪ್ಪು, ಪಕ್ಕಗಳಲ್ಲಿ ಕಂಠಾಹಾರದ ರೀತಿಯ ೩ ಕಪ್ಪು ಪಟ್ಟೆಗಳಿವೆ.

—- 

ಗಣ : ಕಾರ್ನಿವೋರ
ಕುಟುಂಬ : ಹೈಯನಿಡೀ
ಉದಾ : ಕತ್ತೆಕಿರುಬ
ಶಾಸ್ತ್ರೀಯ ನಾಮ : ಹಾಯನಾ ಹಾಯನಾ (
Hyaena hyaena)

476_69_PP_KUH

477_69_PP_KUH

ವಿತರಣೆ ಮತ್ತು ಆವಾಸ : ಇದು ದಕ್ಷಿಣ ಭಾರತದಲ್ಲಿ ಎಲ್ಲೆಡೆಯೂ ಕಾಣಬರುತ್ತದೆ.

ಗಾತ್ರ : ತಲೆ ಮತ್ತು ದೇಹದ ಉದ್ದ ೩ರಿಂದ ೪ ಅಡಿ (೯೦-೧೨೦ ಸೆಂ.ಮೀ.) ಬಾಲದ ಉದ್ದ ೧-ಅಡಿ (೩೦ ಸೆಂ.ಮೀ.). ತೂಕ ೨೪ ರಿಂದ ೫೪ ಕೆ.ಜಿ.

ಆಹಾರ : ಮುಖ್ಯವಾಗಿ ಸತ್ತಪ್ರಾಣಿಗಳನ್ನು ತಿಂದು ಜೀವಿಸುತ್ತದೆ. ಹುಲಿ, ಚಿರತೆ, ಮುಂತಾದ ಹಿಂಸ್ರ ಪ್ರಾಣಿಗಳ ಬೇಟೆಯಾಡಿ ತಿಂದು ಮುಗಿಸಿ ಉಳಿದಿದ್ದು ಇದರ ಆಹಾರ. ಕೆಲವೊಮ್ಮೆ ಕುರಿ, ಆಡು, ನಾಯಿ, ಮುಂತಾದ ಸಾಕು ಪ್ರಾಣಿಗಳನ್ನು ಕದ್ದೊಯ್ಯೊವುದು ಉಂಟು, ಆಹಾರವನ್ನು ವಾಸನೆಯಿಂದ ಪತ್ತೆ ಹಚ್ಚುತ್ತವೆ.

ಲಕ್ಷಣಗಳು : ಕತ್ತೆಕಿರುಬಗಳು ಮೈಕಟ್ಟು ಮತ್ತು ಬಾಹ್ಯರೂಪದಲ್ಲಿ ಸಾಮಾನ್ಯವಾಗಿ ನಾಯಿ ಕುಟುಂಬದ ಪ್ರಾಣಿಗಳನ್ನು ಹೋಲಿದರೂ, ತಲೆ ಬುರುಡೆ, ಹಲ್ಲು ಮತ್ತು ಅಂಗರಚನೆಗಳಲ್ಲಿ ಬೆಕ್ಕಿನ ಬಳಗದ ಪ್ರಾಣಿಗಳನ್ನು ಹೋಲುತ್ತವೆ. ಇದು ಸುಮಾರು ತೋಳದ ಗಾತ್ರದಷ್ಟಿರುತ್ತದೆ. ಕತ್ತೆ ಕಿರುಬಗಳಿಗೆ ದೊಡ್ಡ ತಲೆ, ನಿಮಿರಿ ನಿಲ್ಲುವ ಆಯಾಲ, ಅಗಲವಾದ ಕಿವಿ ಮತ್ತು ಗಿಡ್ಡ ಬಾಲ ಇವೆ. ಮೈಕಟ್ಟು ಬಲವಾಗಿ ಭಾರವಾಗಿದೆ. ಇದರ ಮೈ ಬಣ್ಣ ಬೂದು ಮಿಶ್ರಿತ ಕಂದು, ಇದರ ದೇಹದ ಮೇಲೆ ಅಸ್ಪಷ್ಟವಾದ ಉದ್ದುದ್ದ ಹರಡಿದ ಪಟ್ಟೆಗಳಿವೆ. ಕುತ್ತಿಗೆ ಮತ್ತು ಬೆನ್ನಿನ ಉದ್ದಕ್ಕೂ ಕೇಸರಗಳ ಸಾಲಿವೆ. ಮುಂಗಾಲುಗಳು ಹೆಚ್ಚು ಬಲವಾಗಿ, ಎತ್ತರವಾಗಿ, ಶರೀರವು ಹಿಂದೆ ಬಾಗಿದಂತೆ ಕಾಣುತ್ತದೆ. ಹಿಂದಿನ ಕಾಲುಗಳು ಗಿಡ್ಡ ಮತ್ತು ದುರ್ಭಲ. ಇವು ಅಂಗುಲಿಗಾಮಿಗಳು. ನಾಲ್ಕು ಕಾಲುಗಳಲ್ಲಿ ಒಂದೊಂದಕ್ಕೂ ನಾಲ್ಕು ಬೆರಳುಗಳಿದ್ದು ಹಿಂದಕ್ಕೆ ಸೆಳೆದು ಕೊಳ್ಳಲಾಗದ ನಖಗಳಿವೆ. ನಖಗಳು ದುಮಡಾಗಿ ಮೊಂಡಾಗಿವೆ. ಬೆರಳುಗಳಲ್ಲಿ ಜಾಲ ಪಾದವಿದೆ. ದವಡೆಗಳು ಮತ್ತು ಕತ್ತು ಸ್ಥೂಲವಾಗಿ ಶಕ್ತಿಯುತವಾಗಿವೆ. ದೇಹದ ಮೇಲ್ಭಾಗದಲ್ಲಿರುವ ಕೂದಲಿನ ಸಾಲು ತಲೆಯಿಂದ ಬಾಲದವರೆಗೆ ಹಬ್ಬಿದೆ. ಇದಕ್ಕೆ ೩೨ ರಿಂದ ೩೪ ಹಲ್ಲುಗಳಿವೆ. ಹಲ್ಲುಗಳು ತುಂಬಾ ಬಲವಾಗಿದ್ದು, ದಪ್ಪನಾದ ಮೂಳೆಗಳನ್ನು ಅಗಿಯುವಷ್ಟು ಬಲವಾಗಿವೆ. ದಂತ ಸೂತ್ರ ೩, ೧, ೩-೪, ೧ / ೩, ೧, ೩-೩, ೧. ಇವುಗಳ ಕಾಲಿನ ಹೆಜ್ಜೆಯ ಗುರುತುಗಳು ನಾಯಿಯ ಕಾಲಿನಂತಿದ್ದು, ಹಿಂದಿನ ಕಾಲಿನ ಹೆಜ್ಜೆಗಳು ಚಿಕ್ಕವಿವೆ.

ಸಂತಾನಾಭಿವೃದ್ಧಿ : ಹೆಣ್ಣು-ಗಂಡುಗಳು ಚಳಿಗಾಲದಲ್ಲಿ ಕೂಡುತ್ತವೆ. ಗರ್ಭಾವಧಿ ಮೂರು (೩) ತಿಂಗಳು. ಮರಿಗಳು ಬೇಸಿಗೆಯಲ್ಲಿ ಹುಟ್ಟುತ್ತವೆ. ಒಂದು ಸೂಲಿಗೆ ೨-೪ ಮರಿಗಳು ಹುಟ್ಟುತ್ತವೆ. ಹುಟ್ಟಿದಾಗ ಮರಿಗಳು ಕುರುಡು ಮತ್ತು ಕಿವುಡು. ಸಾಮಾನ್ಯವಾಗಿ ತಾಯಿಯೇ ಮರಿಗಳನ್ನು ಹಾಲುಣಿಸಿ ಸಾಕುವುದು. ಕೆಲವೊಮ್ಮೆ ಗಂಡು-ಹೆಣ್ಣು ಗಳೆರಡೂ ಮರಿಗಳನ್ನು ಪಾಲಿಸುತ್ತವೆ. ಒಂದು ಹೆಣ್ಣು ವರ್ಷದಲ್ಲಿ ೨ ಸಲ ಈಯಬಹುದು. ಜೀವಾವಧಿ-ಬಂಧನದಲ್ಲಿ ೨೪ ವರ್ಷಗಳು ಬದುಕಿದ ನಿದರ್ಶನಗಳಿವೆ.

ಸ್ವಭಾವ : ಇವು ಸ್ವಭಾವ ಮತ್ತು ರೂಪದಲ್ಲಿ ಜಿಗುಪ್ಸೆ ಹುಟ್ಟಿಸುವ ಕುರೂಪಿ ವನ್ಯ ಪ್ರಾಣಿಗಳು. ನಿಶಾಚರಿಗಳು. ಆದರೆ ಇವಕ್ಕೆ ಆಕ್ರಮಣಕಾರಿ ಸ್ವಭಾವವಿದೆ. ಮನುಷ್ಯನನ್ನು ಕಂಡರೆ ಭಯ, ಆದುದರಿಂದ ಮನುಷ್ಯನ ವಾಸಸ್ಥಾನದಿಂದ ದೂರವಿರುತ್ತವೆ. ಆಕಸ್ಮಾತ್ತಾಗಿ ಮನುಷ್ಯನ ಮೇಲೆ ಎರಗುವುದುಂಟು. ಕತ್ತೆಕಿರುಬಗಳನ್ನು ಪಳಗಿಸುವುದೂ ಉಂಟು. ಸಾಕಿದ ಕಿರುಬಗಳು ಸಾಧುವಾಗಿಯೂ ನಂಬಿಕೆಗೆ ಅರ್ಹವಾಗಿಯೂ ಇರುತ್ತವೆ.

ರೋಗ-ರುಜಿನಗಳಿಂದ ಸತ್ತ ಮತ್ತು ಇತರೆ ಮಾಂಸಹಾರಿ ಪ್ರಾಣಿಗಳು ಕೊಂದು ತಿಂದುಳಿದ ಮುಸುರೆಯನ್ನು ತಿನ್ನುವುದರಿಂದ ಇವುಗಳಿಗೆ ಜಾಡಮಾಲಿಗಳೆಂದು ಹೇಳುವುದುಂಟು. ಇವು ಕೂಡಿ ಬೇಟೆಯನ್ನಾಡಿ ಕೊಂದ ಚಿರತೆಯನ್ನು ಓಡಿಸಿ ಆ ಕೊಂದ ಬೇಟೆಯನ್ನು ತಾವು ಕಸಿದುಕೊಳ್ಳುತ್ತವೆ. ಇವುಗಳ ಧ್ವನಿ ನಗುವ ಧ್ವನಿಯಂತೆ ಕೇಳುತ್ತದೆ. ನಾಯಿಗಳು ಬೆನ್ನು ಹತ್ತಿದಾಗ ಸತ್ತಂತೆ ಬಿದ್ದಿದ್ದು, ಆ ಮೇಲೆ ಎದ್ದು ಓಡಿ ಹೋಗುವ ಅಭ್ಯಾಸವಿದೆ.

ಹಗಲಿನಲ್ಲಿ ಬಂಡೆಗಳ ಮತ್ತು ಹೋರುಗಳಲ್ಲಿ ವಾಸಿಸುತ್ತವೆ. ಸಾಮಾನ್ಯವಾಗಿ ಹೆಣ್ಣು-ಗಂಡು ಕೂಡಿ ಬಾಳುತ್ತವೆ. ಕೆಲವು ಸಾರಿ ೫-೬ ಪ್ರಾಣಿಗಳ ಕುಟುಂಬದ ಗುಂಪುಗಳನ್ನು ನೋಡಬಹುದು.

—- 

೧೩. ಗಣ : ಹೈರಾಕಾಯಿಡಿಯಾ
ಉದಾ : ಕೋನಿಗಳು, ಇವು ಕರ್ನಾಟಕದಲ್ಲಿ ಇರುವುದಿಲ್ಲ