೧೪. ಗಣ : ಪ್ರೊಬಾಸಿಡಿಯ

ಆನೆಗಳು ಈ ಗಣಕ್ಕೆ ಸೇರುತ್ತವೆ. ಉದ್ದನಾದ ಬಾಗಬಲ್ಲ ಸೊಂಡಿಲು, ವಿಶೇಷವಾದ ದಂತ ವಿನ್ಯಾಸ, ಬೃಹದಾಕಾರದ ದೇಹ ಈ ಪ್ರಾಣಿಗಳ ಕೆಲವು ಲಕ್ಷಣಗಳು. ಅಗಲವಾದ ಕಿವಿ ಮತ್ತು ದಪ್ಪ ಚರ್ಮ ಇದೆ. ಕೂದಲು ಬಾಲದ ತುದಿಗೆ ಮಾತ್ರ ಸೀಮಿತವಾಗಿದೆ. ಮೂಗು ಮತ್ತು ಮೇಲಿನ ತುಟಿಗಳು ಲಂಬಿಸಿ ಸೊಂಡಿಲಾಗಿದೆ. ಸೊಂಡಿಲ ತುದಿಯಲ್ಲಿ ನಾಸಿಕ ರಂಧ್ರಗಳಿವೆ. ಸೊಂಡಿಲನ್ನು ಅಪ್ಪು ಅಂಗವಾಗಿ ಬಳಸುತ್ತವೆ. ಮುಖ ಚಿಕ್ಕದು. ದೊಡ್ಡ ಗಾತ್ರದ ತಲೆಬುರುಡೆ, ತಲೆಬುರುಡೆಯ ಅನೇಕ ಮೂಳೆಗಳಲ್ಲಿ ಗಾಳಿ ಅವಕಾಶಗಳಿವೆ. ಅವು ನಾಸಿಕ ನಾಲೆಯೊಂದಿಗೆ ಸಂಪರ್ಕ ಹೊಂದಿವೆ. ಕಾಲುಗಳು ದೊಡ್ಡವು ಮತ್ತು ಕಂಬಗಳಂತಿವೆ. ಮೊಳಕೈ ಅಥವಾ ಮಂಡಿಯ ಬಳಿ ಮಡಿಸಿಕೊಳ್ಳಲು ಆಗುವುದಿಲ್ಲ. ಕಾಲುಗಳಲ್ಲಿ ಐದೈದು ಬೆರುಳುಗಳಿದ್ದು ಅವು ಮಾಂಸ ಮತ್ತು ಚರ್ಮದ ಒಳಗೆ ಹುದುಗಿ ಹೋಗಿವೆ. ಬೆರಳಿನ ತುದಿಯಲ್ಲಿ ಗೊರಸಿನ ರೀತಿಯ ಉಗುರುಗಳಿವೆ. ಅರೆಪಾದಚರಿ ವಿಧಾನದ ನಡಿಗೆ, ಕಣ್ಣುಗಳು ಚಿಕ್ಕವು. ದಂತಸೂತ್ರ ೧, ೦, ೩, ೩ / ೦, ೦, ೩, ೩. ಕೋರೆಹಲ್ಲುಗಳಿಲ್ಲ. ಮುಂದಿನ ಎರಡನೇ ಜೊತೆ ಬಾಚಿಹಲ್ಲುಗಳು ಮಾತ್ರವಿದ್ದು ಅವು ದಂತಗಳಾಗಿ ರೂಪುಗೊಂಡಿವೆ. ದವಡೆ ಹಲ್ಲುಗಳು ಚೆನ್ನಾಗಿ ರೂಪುಗೊಂಡಿವೆ. ಸಣ್ಣ ಮುಂದವಡೆ ಹಲ್ಲುಗಳಿದ್ದು ಅವು ಬೇಗನೆ ಬಿದ್ದು ಹೋಗುತ್ತವೆ. ಎಲ್ಲಾ ದವಡೆ ಹಲ್ಲುಗಳೂ ಏಕಕಾಲದಲ್ಲಿ ಕೆಲಸ ಮಾಡುವುದಿಲ್ಲ. ಒಮ್ಮೆಗೆ ಪ್ರತಿ ಅರ್ಧದವಡೆಗಳಲ್ಲಿ ಒಂದು (ಮೇಲು ಮತ್ತು ಕೆಳದವಡೆಯದು) ಜೊತೆ ಮಾತ್ರ ಕೆಲಸ ಮಾಡುತ್ತವೆ. ಅವು ಸವೆದು ಬಿದ್ದ ಮೇಲೆ ಇನ್ನೊಂದು ಜೊತೆ ಮಾತ್ರ ಕೆಲಸ ಮಾಡುತ್ತವೆ. ಅವು ಸವೆದು ಬಿದ್ದ ಮೇಲೆ ಇನ್ನೊಂದು ಜೊತೆ ಬೆಳೆಯುತ್ತವೆ. ಹೀಗೆ ಒಂದಾದನಂತರ ಮತ್ತೊಂದು ಜೊತೆ ದವಡೆ ಹಲ್ಲುಗಳು ಕಾರ್ಯನಿರ್ವಹಿಸುತ್ತವೆ. ಜಠರ ಸರಳ. ವೃಷಣಗಳು ಉದರಾವಕಾಶದಲ್ಲಿವೆ. ಗರ್ಭಕೋಶವು ಎರಡು ಪಾಲಿಯದು. ಸ್ತನಗಳು ಎರಡು ಮಾತ್ರ. ಅವು ಎದೆಯ ಭಾಗದಲ್ಲಿವೆ.

ಈ ಗಣಕ್ಕೆ ಸೇರಿದಂತೆ ಎರಡೇ ಎರಡು ಪ್ರಭೇದಗಳಿವೆ. ಎಲಿಫಾಸ್‌ಆಫ್ರಿಕಾನ ಎಂಬುದು ಆಫ್ರಿಕಾ ಖಂಡಕ್ಕೆ ಸೀಮಿತವಾಗಿದೆ. ಎಲಿಫಾಸ್‌ಮ್ಯಾಕ್ಸಿಮಸ್‌ಎಂಬುದು ಕರ್ನಾಟಕವೂ ಸೇರಿದಂತೆ ಭಾರತಕ್ಕೆ ಮಾತ್ರ ಸೀಮಿತವಾಗಿದೆ. ಭಾರತದ ಆನೆಯು ಆಫ್ರಿಕಾದ ಆನೆಗಿಂತ ಚಿಕ್ಕದು.

 

ಗಣ : ಪ್ರೊಬಾಸಿಡಿಯ
ಉದಾ : ಭಾರತದ ಆನೆ (
Elephant)
ಶಾಸ್ತ್ರೀಯ ನಾಮ : ಎಲಿಫಾಸ್‌ಮ್ಯಾಕ್ಸಿಮಸ್‌(Elephas maximus)

478_69_PP_KUH

ವಿತರಣೆ ಮತ್ತು ಆವಾಸ : ಆನೆಗಳು ಭಾರತ, ಶ್ರೀಲಂಕ, ಥೈಲಾಂಡ್‌, ಬರ್ಮಾ, ಇಂಡೊಚೈನಾ, ಮಲಯ ಸುಮಾತ್ರವರೆಗೆ ಹರಡಿವೆ. ಭಾರತದಲ್ಲಿ ಆನೆಗಳ ಸಂಖ್ಯೆ ಇನ್ನುಳಿದ ಕಡೆಗಳಿಗಿಂತ ಹೆಚ್ಚಾಗಿದೆ. ಭಾರತದಲ್ಲಿ ಆನೆಗಳು ಉತ್ತರಪ್ರದೇಶದ ಪೂರ್ವಭಾಗ, ಅಸ್ಸಾಂ, ಪಶ್ಚಿಮಬಂಗಾಳ, ಓರಿಸ್ಸಾ, ನೀಲಗೀರಿ, ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ನೆಲಸಿವೆ. ಈ ಪ್ರದೇಶಗಳಲ್ಲಿಯೂ ಒಂದೆಡೆಗಳಿಂದ ವಿತರಣೆಗೊಂಡಿಲ್ಲ. ಅರಣ್ಯನಾಶದಿಂದಾಗಿ ಕೆಲವು ಕ್ಷೇತ್ರಗಳಿಗೆ ಹಂಚಿಹೋಗಿವೆ.

ಆನೆಗಳು ಮೈಸೂರಿನಿಂದ ದಕ್ಷಿಣಕ್ಕೆ ಪಶ್ಚಿಮಘಟ್ಟದ ಪ್ರದೇಶದಲ್ಲಿ ವಾಸಿಸುತ್ತವೆ. ದಟ್ಟವಾದ ಕಾಡುಗಳಿಂದ ಬಯಲು ಪ್ರದೇಶದ ಹುಲ್ಲುಗಾವಲುಗಳಲ್ಲಿ ಕಂಡುಬರುತ್ತದೆ.

ಗಾತ್ರ : ಜೀವಂತ ಭೂಚರ ಪ್ರಾಣಿಗಳಲ್ಲಿಯೇ ಇದು ಅತಿ ದೊಡ್ಡದು. (೩.೧೫ಮಿ) ೧೦ ೧/೨ ಅಡಿಗಿಂತ ಹೆಚ್ಚು ಎತ್ತರವಿರುವುದಿಲ್ಲ. ಒಂದು ಗಂಡು ಆನೆಯ ಸರಾಸರಿ ಎತ್ತರ (೨.೭ ಮಿ) ೯ ಅಡಿ ಮತ್ತು ಹೆಣ್ಣು ಗಂಡಿನದಕ್ಕಿಂತ (೩೦ ಸೆಂ.ಮೀ) ೧ ಅಡಿ ಕಡಿಮೆ ಎತ್ತರವಿರುತ್ತದೆ. (೨.೫ ಮೀ) ೮ ೧/೨ ಅಡಿ ಎತ್ತರವಿರುವ ಹೆಣ್ಣು ಆನೆಗಳು ಬಹಳ ವಿರಳ. ಬಾಲ (೧೨೦ ಸೆಂ.ಮಿ) ೪ ಅಡಿಯಿಂದ (೧೫೦ ಸೆಂ.ಮಿ) ೫ ಅಡಿ ಉದ್ದವಿರುತ್ತದೆ. ತೂಕ ೪,೦೦೦ ಕೆ.ಜಿ.ಗಳಷ್ಟು ದಂತ ಗಂಡು ಆನೆಗಳಲ್ಲಿ ಮಾತ್ರ ಕಂಡುಬರುತ್ತದೆ. ದಂತ (೧೫೦-೧೮೦ ಸೆಂ.ಮೀ) ೫-೬ ಅಡಿ ಉದ್ದ ಬೆಳೆಯುತ್ತವೆ. ಗರಿಷ್ಟ ದಾಖಲೆ (೨೫೫ ಸೆಂ.ಮೀ) ೮ ೧/೨ ಅಡಿ ಮತ್ತು ೭೩ ಕೆ.ಜಿ.ಯಷ್ಟು ತೂಕ.

ಆಹಾರ : ವಿವಿಧ ರೀತಿಯ ಹುಲ್ಲುಗಳು, ಎಲೆಗಳು, ಕಾಂಡಗಳು ಮತ್ತು ಕಾಡುಬಿದರಿನ ಎಲೆಗಳು ಮತ್ತು ಬಾಳೆಗಿಡಗಳು. ಎಲ್ಲಾ ತರದ ಪಯಿರು ಮತ್ತು ಗೊತ್ತಾದ ಜಾತಿಯ ಮರದ ತೊಗಟೆಗಳು, ಹಣ್ಣುಗಳು. ಕಬ್ಬು ಇದಕ್ಕೆ ತುಂಬಾ ಇಷ್ಟವಾದ ಆಹಾರ. ಪೂರ್ಣ ಬೆಳೆದ ಆನೆಯು ಒಂದು ದಿನಕ್ಕೆ ೨೭೦-೩೨೦ ಕೆ.ಜಿ. ಆಹಾರವನ್ನು ತಿನ್ನುತ್ತದೆ.

ಲಕ್ಷಣಗಳು : ಏಷ್ಯಾದ ಆನೆಗಳು ಆಫ್ರಿಕಾದ ಆನೆಗಳಿಗಿಂತ ಚಿಕ್ಕವು. ಕಿವಿಗಳು ಮೊರದಂತೆ ದೊಡ್ಡದಾಗಿ ಅಗಲವಾಗಿವೆ. ಕಂಬದಂತಿರುವ ಉದ್ದವಾದ ಕಾಲುಗಳಿವೆ. ಮುಂಗಾಲುಗಳಲ್ಲಿ ೫ ಮತ್ತು ಹಿಂಗಾಲುಗಳಲ್ಲಿ ೪ ಬೆರಳುಗಳಿರುತ್ತವೆ. ಬೆರಳುಗಳಿಗೆ ಉಗುರುಗಳಿವೆ. ಮಂಡಿಭಾಗ ಬಾಗಿಲ್ಲ. ನಡೆಯುವಾಗ ತನ್ನ ದೇಹದ ಭಾರವನ್ನು ಕಾಲಿನ ಹಿಂಭಾಗದಲ್ಲಿರುವ ಮೆತ್ತೆಯ ಮೇಲೆ ಹೇರುತ್ತದೆ. ಕಾಲಿನ ಹರಡಿನಲ್ಲಿ ಕೀಲು ಇಲ್ಲ. ಗಂಡು ಆನೆಗಳಲ್ಲಿ ಬಾಚಿ ಹಲ್ಲುಗಳು ಕೋರೆ (ದಂತ)ಗಳಾಗಿ ಮಾರ್ಪಟ್ಟಿವೆ. ಹೆಣ್ಣುಗಳಲ್ಲಿ ದಂತ ಇರುವುದಿಲ್ಲ. ಇದ್ದರೂ ಅವು ಚಿಕ್ಕವು ಮತ್ತು ಬಾಯಿಯಿಂದ ಕೆಲವು ಇಂಚು ಮಾತ್ರ ಹೊರಕ್ಕೆ ಚಾಚುತ್ತದೆ. ಕೋರೆಗಳು ವಕ್ರಾಕಾರವಾಗಿರುತ್ತವೆ. ಆಕಾರದಲ್ಲಿ ವ್ಯತ್ಯಾಸವಿರುತ್ತದೆ. ಅವು ಅಗಲವಾಗಿ ಚಾಚಿರಬಹುದು, ಬಾಗಿರಬಹುದು, ನೇರವಾಗಿರಬಹುದು ಅಥವಾ ಚೂಪಾಗಿ ಕೆಳಕ್ಕೆ ಚಾಚಿರಬಹುದು. ಕೆಲವು ಗಂಡು ಆನೆಗಳಲ್ಲಿ ದಂತ ಇರವುದಿಲ್ಲ. ಇಂತಹ ಆನೆಗಳನ್ನು ಮಕಾಸ್‌(Makhnas) ಎಂದು ಕರೆಯುತ್ತಾರೆ.

ವಿಶಿಷ್ಟ ರೀತಿಯ ದಂತ ವಿನ್ಯಾಸವಿದೆ. ದಂತಸೂತ್ರ ೧, ೦, ೩, ೩ / ೦, ೦, ೩, ೩ ಎಲ್ಲಾ ದವಡೆ ಹಲ್ಲುಗಳೂ ಒಟ್ಟಿಗೆ ಕಾಣಿಸಿಕೊಳ್ಳುವುದಿಲ್ಲ. ಒಂದು ಅಥವಾ ಎರಡು ದವಡೆ ಹಲ್ಲು ಮಾತ್ರ ಒಂದೇ ಕಾಲಕ್ಕೆ ಕೆಲಸ ಮಾಡುತ್ತವೆ. ಅದು ಸವೆದಂತೆ ಹಿಂದಿನ ದವಡೆ ಹಲ್ಲು ಕೆಲಸ ಮಾಡಲು ಆರಂಭಿಸುತ್ತದೆ. ಹೀಗೆ ಒಂದಾದ ಮೇಲೆ ಒಂದರಂತೆ ಅನುಕ್ರಮವಾಗಿ ಹಲ್ಲುಗಳು ಕೆಲಸ ನಿರ್ವಹಿಸುತ್ತವೆ. ದವಡೆಗಳು ತುಂಬಾ ಚಿಕ್ಕವು. ಆದರೆ ದವಡೆ ಹಲ್ಲುಗಳು ತುಂಬಾ ದೊಡ್ಡವು.

ಮೇಲಿನ ತುಟಿ ಮತ್ತು ಮೂಗು ಸೇರಿ ಮುಂದಕ್ಕೆ ಚಾಚಿ ಸೊಂಡಿಲಾಗಿದೆ. ಸೊಂಡಿಲ ತುದಿಯಲ್ಲಿ ಒಂದು ತುಟಿ ಇದೆ. ದೇಹವು ಸ್ಥೂಲವಾಗಿ ಬೆಳೆದಿದೆ. ಬಾಲ ಉದ್ದವಾಗಿದೆ. ಅದರ ತುದಿಯಲ್ಲಿ ಕುಚ್ಚಿನಂತಿರುವ ಕೂದಲುಗಳಿವೆ. ಇವುಗಳ ಬಣ್ಣ ದಟ್ಟ ಬೂದು ಬಣ್ಣದಿಂದ ಕಂದು ಬಣ್ಣದ್ದಾಗಿರಬಹುದು. ಹಣೆಯ ಮೇಲೆ ಕಿವಿಗಳು ಮತ್ತು ಮುಂಡಭಾಗದ ತಳ ಹಾಗೂ ಎದೆ ಬಿಳಿ ಮಚ್ಚೆಗಳನ್ನು ಹೊಂದಿರಬಹುದು. ಬೆನ್ನಿನ ಹಿಂಭಾಗವು ಇಳಿಜಾರಾಗಿದೆ. ದೇಹದ ಚರ್ಮದಪ್ಪ ಮತ್ತು ದೇಹದ ಮೇಲೆ ಕಡಿಮೆ ಕೂದಲುಗಳಿವೆ. ಅವು ಒರಟಾಗಿ ಬಿರುಗೂದಲಿನಂತಿವೆ. ದೃಷ್ಟಿ ಮಂದ. ಕಿವಿ ಮತ್‌ಉತ ಮೂಗುಗಳು ಇತರ ಪ್ರಾಣಿಗಳಿಗಿಂತ ತೀಕ್ಷ್ಣವಾಗಿವೆ. ಘ್ರಾಣೀಂದ್ರಿಯ, ಶ್ರವಣೇಂದ್ರಿಯಗಳು ಚೆನ್ನಾಗಿ ಬೆಳೆದಿವೆ. ಸಾಧಾರಣವಾಗಿ ಆನೆ ೧೦೦-೧೫೦ ವರ್ಷಗಳವರೆಗೆ ಜೀವಿಸುತ್ತದೆ.

ಸಂತಾನಾಭಿವೃದ್ಧಿ : ನಿರ್ಧಿಷ್ಟ ಋತುಮಾಸವಿಲ್ಲ. ಆದರೆ ಸಾಮಾನ್ಯವಾಗಿ ಮರಿಗಳು ಸೆಪ್ಟೆಂಬ್‌ನವೆಂಬ್‌ತಿಂಗಳುಗಳಲ್ಲಿ ಹುಟ್ಟುತ್ತವೆ. ಗರ್ಭಾವಧಿ ೧೮ ರಿಂದ ೨೨ ತಿಂಗಳುಗಳು. (೬೦೭-೬೧೪ ದಿನಗಳು). ಒಂದು ಸೂಲದಲ್ಲಿ ಸಾಮಾನ್ಯವಾಗಿ ಒಂದು ಮರಿ, ಅಪರೂಪವಾಗಿ ೨ ಮರಿಗಳು ಹುಟ್ಟಬಹುದು. ಹುಟ್ಟಿದ ಮರಿ ೧೦೦ ಕೆ.ಜಿ. ತೂಕವಿರುತ್ತದೆ. ಮತ್ತು ೩ ೧/೨ ಅಡಿ ಎತ್ತರವಿರುತ್ತದೆ. ಹುಟ್ಟಿದ ೫ ನಿಮಿಷಗಳಲ್ಲಿ ಎದ್ದು ನಿಲ್ಲುತ್ತದೆ ಮತ್ತು ಒಂದು ಗಂಟೆಯಲ್ಲಿ ನಡೆದಾಡುತ್ತದೆ. ಸುಮಾರು ೨ ತಿಂಗಳುವರೆಗೆ ತಾಯಿಯ ಹಾಲು ಕುಡಿದು ಬೆಳೆಯುತ್ತವೆ. ಮುಂಗಾಲುಗಳ ಹಿಂದೆ ಇರುವ ೨ ಸ್ತನಗಳಿಂದ ಮರಿ ಸೊಂಡಿಲನ್ನು ಹಿಂದಕ್ಕೆ ಸರಸಿ ಬಾಯಿಂದ ಹಾಲು ಕುಡಿಯುತ್ತದೆ. ಮರಿಗಳಲ್ಲಿ ಒಮ್ಮೆ ಕಾಣಿಸಿಕೊಂಡ ದಂತಗಳು ಜೀವಮಾನವಿಡೀ ಬೆಳೆಯುತ್ತಿರುತ್ತವೆ. ಗಂಡು ಆನೆ ಪ್ರಬುದ್ಧಕ್ಕೆ ಬರಬೇಕಾದರೆ ಕನಿಷ್ಠ ಪಕ್ಷ ೨೦-೨೫ ವರ್ಷಗಳಾಗಬೇಕು. ಆದರೆ ಹೆಣ್ಣಿಗೆ ೨೦ ವರ್ಷಗಳ ಸಾಕು.

ಸ್ವಭಾವ : ಆನೆಗಳು ಮುಖ್ಯವಾಗಿ ಹೆಚ್ಚಾಗಿ ಬಿದಿರು ಬೆಳೆಯುವ ಮತ್ತು ದಟ್ಟಕಾಡುಗಳಿಮದ ಕೂಡಿದ ಬೆಟ್ಟ ಪ್ರದೇಶಗಳಲ್ಲಿ ಕಂಡುಬರುತ್ತವೆ. ದಟ್ಟಕಾಡುಗಳಿಂದ ಕೂಡಿದ ಬೆಟ್ಟ ಪ್ರದೇಶಗಳಲ್ಲಿ ಕಂಡಬರುತ್ತವೆ. ತೇವವಾದ ಕಾಡು ಪ್ರದೇಶದಲ್ಲಿ ಅಥವಾ ತಂಪಾದ ಎತ್ತರವಾದ ದಟ್ಟಕಾಡು ಪ್ರದೇಶಕ್ಕೆ ಹೊಂದಿಕೊಂಡು ಅಲ್ಲಿ ಬದುಕಬಲ್ಲವು. ಬೇಸಿಗೆ ಕಾಲದಲ್ಲಿ ದಟ್ಟಕಾಡುಗಳಲ್ಲಿದ್ದು ಮಳೆಗಾಲದಲ್ಲಿ ಕಾಡುಗಳಿಂದ ಬಯಲು ಪ್ರದೇಶಕ್ಕೆ ಬರುವುದಲ್ಲದೆ, ಆಗಾಗ್ಗೆ ಕೃಷಿ ಮಾಡಿದ ಪ್ರದೇಶಗಳಿಗು ಪ್ರವೇಶಿಸುತ್ತವೆ.

ಆನೆಗಳು ಸಂಘಜೀವಿಗಳು. ಒಂದು ಗುಂಪಿನಲ್ಲಿ ಪ್ರಬಲವದ ಗಂಡು ಆನೆ (ಸಲಗ) ನಾಯಕನಾಗಿರುತ್ತದೆ ಮತ್ತು ತನ್ನ ಗುಂಪಿನಲ್ಲಿ ಬೇರೆ ಗಂಡು ಆನೆಗಳು ಇರಲು ಬಿಡುವುದಿಲ್ಲ. ಒಂದು ಗುಂಪಿನಲ್ಲಿ ಒಂದೇ ಕುಟುಂಬದ ಆನೆಗಳಿರುವುದು ಸಾಮಾನ್ಯ. ಆದರೆ ಕೆಲವು ಸಾರಿ ಹೆಣ್ಣಾನೆಗಳು ತಮ್ಮ ಮರಿಗಳೊಂದಿಗೆ ಹಿಂಡನ್ನು ಬದಲಾಯಿಸಬಹುದು. ಒಂದೊಂದು ಗುಂಪಿನಲ್ಲಿ ೫೬೦ ಆನೆಗಳಿರುತ್ತವೆ. ಗುಂಪಿನಲ್ಲಿ ವಿವಿಧ ಗಾತ್ರದ, ವಯಸ್ಸಿನ ಆನೆಗಳಿರುತ್ತವೆ. ಒಂದು ಗುಂಪಿನ ಆನೆಗಳು ಇನ್ನೊಂದು ಗುಂಪಿನದರ ಜೊತೆ ಸೇರುವುದಿಲ್ಲ. ಆದರೆ ತಪ್ಪಿಸಿಕೊಂಡ ಹೆಣ್ಣಾನೆ (ಹಿಂಡಿನಿಂದ ಬೇರೆಯಾದ) ಮತ್ತು ಗಂಡುಮರಿ ಆನೆಗಳು ಒಂದು ಗುಂಪಿನಿಂದ ಇನ್ನೊಂದು ಗುಂಪಿಗೆ ಬರಬಹುದು.

ಆಹಾರವು ವಿರಳವಾದಾಗ ಆನೆಯ ದೊಡ್ಡ ಗುಂಪುಗಳು ಸಣ್ಣ ಗುಂಪುಗಳಾಗಿ ಬೇರ್ಪಡುತ್ತವೆ. ನಂತರ ಆಹಾರ ಯಥೇಚ್ಛವಾಗಿ ದೊರಕಿದಾಗ ಪುನಃ ಎಲ್ಲವೂ ಒಂದುಗೂಡುತ್ತವೆ. ಸಾಮಾನ್ಯವಾಗಿ ದೊಡ್ಡ ಕೊಂಬಿನ ಆನೆಗಳು ತಮ್ಮ ಪ್ರಧಾನ ಗುಂಪಿನಿಂದ ದೂರವಿದ್ದು ಒಂಟಿಯಾಗಿ ಆಹಾರವನ್ನು ತಿನ್ನುತ್ತಿರುವುದು ಕಾಣಬರುತ್ತದೆ. ಒಂದು ಗಂಡು ಆನೆ ಒಂದು ಗೊತ್ತಾದ ವಯಸ್ಸನ್ನು ತಲುಪಿದ ನಂತರ ಒಂಟಿಯಾಗಿ ಆಹಾರವನ್ನು ತಿನ್ನುತ್ತಿರುವುದು ಕಾಣಬರುತ್ತದೆ. ಒಂದು ಗಂಡು ಆನೆ ಒಂದು ಗೊತ್ತಾದ ವಯಸ್ಸನ್ನು ತಲುಪಿದ ನಂತರ ಒಂಟಿಯಾಗಿ ಜೀವನ ನಡೆಸುತ್ತದೆ. ಕೆಲವು ವೇಳೆ ಸಮಾನ ವಯಸ್ಸಿನ ಎರಡು ಗಂಡಾನೆಗಳು ಒಟ್ಟಾಗಿರುವುದುಂಟು. ಕಾಡಿನ ಒಂದೇ ಭಾಗದಲ್ಲಿದ್ದಾಗ ಒಂಟಿ ಗಂಡಾನೆ ಗುಂಪಿನ ಆನೆಗಳ ಜೊತೆ ಹುಲ್ಲನ್ನು ತಿನ್ನುತ್ತದೆ. ಅಲ್ಲದೆ ಸಂಭೋಗ ಕಾಲದಲ್ಲಿಯೂ ಗುಂಪುಗಳ ಜೊತೆ ಇದ್ದು ಸಂಭೋಗಾನಂತರ ಅವುಗಳನ್ನು ತೊರೆದು ಬರುತ್ತದೆ. ಕೆಲವೊಮ್ಮೆ ಸಲಗ ಮದವೇರಿದಾಗ ರೊಚ್ಚಿಗೆದ್ದು ಅಪಾಯಕಾರಿಯಾಬಲ್ಲದು. ಅಂಥ ಮದಗಜ ಹಿಂಡಿನಿಂದ ಹೊರದೂಡಲ್ಪಡುತ್ತದೆ.

ಆನೆಗಳು ಹಗಲಿನಲ್ಲಿ ವಿಶ್ರಾಂತಿ ಪಡೆದು ರಾತ್ರಿ, ಬೆಳಗಿನ ಜಾವ ಮತ್ತು ಸಂಜೆ ಆಹಾರಕ್ಕಾಗಿ ಅಲೆದಾಡುತ್ತವೆ. ಇವು ನೀರಿನಿಂದ ದೂರ ಉಳಿಯುವುದಿಲ್ಲ. ಸಂಜೆಯಾದ ನಂತರ ಒತ್ತಾಗಿಲ್ಲದ ಕಾಡಿಗೆ ಅಥವಾ ಕೃಷಿಪ್ರದೇಶಕ್ಕೆ ಬರುತ್ತವೆ. ಅಲ್ಲಿಂದ ಮಧ್ಯರಾತ್ರಿಯ ನಂತರ ಮಲಗಲು ಹಿಂದಕ್ಕೆ ಹೋಗುತ್ತವೆ. ಆಹಾರ ಅಧಿಕ ಪ್ರಮಾಣದಲ್ಲಿ ಬೇಕು. ಆದ್ದರಿಂದ ಇವು ಆಹಾರಕ್ಕಾಗಿ ಬಹುದೂರ ಸಂಚರಿಸುತ್ತವೆ. ವೇಗ ಒಂದು ಗಂಟೆಗೆ ಸುಮಾರು ೧೫ ಮೈಲಿ. ಕೆರೆಗಳನ್ನು, ನದಿಗಳನ್ನು ಈಸಿ ದಾಟುತ್ತವೆ. ಆನೆಗಳಿಗೆ ಹೆಚ್ಚಿನ ನೆನಪಿನ ಶಕ್ತಿ ಇದೆ. ಆನೆಗಳನ್ನು ಸಾಕಬಹುದು ಮತ್ತು ಅವುಗಳನ್ನು ಸವಾರಿ ಹಾಗೂ ಸಾಮಾನುಗಳನ್ನು ಸಾಗಿಸಲು ಬಳಸಬಹುದು. ಈಗಲೂ ಕಾಡುಗಳಲ್ಲಿ ಮರದ ದಿಮ್ಮಿಗಳನ್ನು ಎಳೆಯಲು ಆನೆಯನ್ನು ಬಳಸುತ್ತಾರೆ. ಹಿಂದೆ ರಾಜಮಹಾರಾಜರುಗಳು ಕುದುರೆಗಳಂತೆ ಆನೆಗಳನ್ನು ಸೈನ್ಯಕ್ಕೆ ಸೇರಿಸಿಕೊಂಡು ಗಜದಳಗಳನ್ನು ಸ್ಥಾಪಿಸುತ್ತಿದ್ದುದು ಸಾಮಾನ್ಯ. ಇವುಗಳನ್ನು ಬೇಟೆಗೂ ಬಳಸುತ್ತಿದ್ದರು. ಏಷ್ಯಾದ ಆನೆಗಳು ಬಹಳ ಹಿಂದಿನಿಂದಲೂ ಮನುಷ್ಯನಿಗೆ ಉಪಯುಕ್ತ ಪ್ರಾಣಿ ಎನಿಸಿವೆ. ಕಾಡಾನೆಗಳನ್ನು ಪಳಗಿಸಿ, ಮಠಗಳಲ್ಲಿ, ಅರಮನೆಗಳಲ್ಲಿ (ಪಟ್ಟದಾನೆ) ಗೌರವ ಸಂಕೇತವಾಗಿ ಇಡುತ್ತಿದ್ದರು. ಆನೆಗಳನ್ನು ಹಿಡಿದು ಅವುಗಳನ್ನು ಪಳಗಿಸುವುದು ಒಂದು ದೊಡ್ಡ ವಿದ್ಯೆ. ಇದನ್ನು ಖೆಡ್ಡಾ ಎಂದು ಕರೆಯುತ್ತಿದ್ದರು. ಹಳೆಯ ಮೈಸೂರಿನಲ್ಲಿ ಇದು ನಡೆಯುತ್ತಿತ್ತು. ಈಗ ಇಲ್ಲ.

ಆನೆಗಳು ತೀವ್ರ ಗತಿಯಲ್ಲಿ ನಡೆಯುತ್ತವೆ. ಆದರೆ ಓಡಲಾರವು. ಕೆಲವು ಸಾರಿ ಗಂಡಾನೆಗಳ ನೆತ್ತಿಯ ಮೇಲೆ ಒಂದು ರೀತಿಯ ದ್ರವ ಒಸರುತ್ತದೆ. ಈ ದ್ರವವನ್ನು ಮಸ್ತ್ ಎನ್ನುತ್ತಾರೆ. ಮಸ್ತ್ ಅನ್ನು ಜಿಂಕೆಗಳ ಮದಕ್ಕೆ ಸಮ ಎಂದು ಹೇಳುವುದುಂಟು. ಇದಕ್ಕೂ ಗಂಡಿನ ಲೈಂಗಿಕ ಚಟುವಟಿಕೆಗೂ ಸಂಬಂಧ ಇರುವಂತೆ ತೋರುತ್ತದೆ. ಮಸ್ತ್ ಹೆಚ್ಚಾಗಿ ಚಳಿಗಾಲದಲ್ಲಿ ಕಂಡುಬರುತ್ತದೆ. ಇದು ಯಾವಾಗಲೂ ನಿಜ ಅಲ್ಲ.

ಆನೆಯ ಶತ್ರು ಹುಲಿ.

ಆನೆಗಳಲ್ಲಿ ಎರಡು ಪ್ರಭೇದಗಳಿವೆ. ಆಫ್ರಿಕಾದ ಆನೆ ಮತ್ತು ಏಷ್ಯಾದ ಆನೆ. ಇವೆರಡಕ್ಕೂ ಎತ್ತರದಲ್ಲಿ, ಕಿವಿ ಮತ್ತು ದಂತರಚನೆಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ.

ಭಾರತದಲ್ಲಿ ಮುಸಲ್ಮಾನರು ಮತ್ತು ಕಾಡುಕುರುಬರು ಆನೆಗಳನ್ನು ಹಿಡಿದು ಪಳಗಿಸುವುದರಲ್ಲಿ ಚೆನ್ನಾಗಿ ನುರಿತವರು. ಆನೆಗಳನ್ನು ಅವುಗಳ ಸಂಚಾರ ಮಾರ್ಗದಲ್ಲಿ ದೊಡ್ಡಗುಂಡಿಗಳನ್ನು ತೆಗೆದು ಅದರಲ್ಲಿ ಬೀಳಿಸಿ ಹಿಡಿಯುತ್ತಾರೆ. ಇದನ್ನು ಖೆಡ್ಡಾ ಎನ್ನುತ್ತಾರೆ. ಬಯಲು ಶಿಕಾರಿಯಿಂದಲೂ ಹಿಡಿಯುತ್ತಾರೆ.

೧೫. ಗಣ : ಪೆರಿಸ್ಸೊಡ್ಯಾಕ್ಟೈಲ

ಈ ಗಣಕ್ಕೆ ಕುದುರೆ, ಕತ್ತೆ ಮತ್ತು ಖಡ್ಗ ಮೃಗಗಳು ಸೇರುತ್ತವೆ. ಇವು ಗೊರಸು ಸಸ್ತನಿಗಳು, ಏಕಖುರ ಪ್ರಾಣಿಗಳು, ಸಸ್ಯಾಹಾರಿಗಳು, ಕಾಲುಗಳಲ್ಲಿ ಬೆರಳುಗಳ ಸಂಖ್ಯೆ ಒಂದಕ್ಕೆ ಕ್ಷಯಿಸಿದೆ. ಮಧ್ಯದ ಬೆರಳು ದೊಡ್ಡದಾಗಿದ್ದು ಅದು ದೇಹದ ಭಾರವನ್ನು ಹೊರುತ್ತದೆ. ಇದು ಓಡುವುದಕ್ಕೆ ಆಗಿರುವ ಮಾರ್ಪಾಡು. ಬೆರಳಿನ ತುದಿಯಲ್ಲಿ ಗೊರಸು ಇದೆ. ಮುಂದವಡೆ ಹಲ್ಲುಗಳು ದವಡೆ ಹಲ್ಲುಗಳನ್ನು ಹೋಲುತ್ತವೆ ಮತ್ತು ಅವು ಲೋಪೊಡಾಂಟ್ ಮಾದರಿಯವು. ಸರಳವಾದ ಜಠರವಿದೆ. ಮಿದುಳು ಹೆಚ್ಚು ನುಲಿದು ಕೊಂಡಿದೆ. ಸ್ತನಗಳು ತೊಡೆಯ ಸಂಧುಗಳಲ್ಲಿವೆ.

—-

ಗಣ : ಪೆರಿಸ್ಸೊಡ್ಯಾಕ್ಟೈಲ
ಕುಟುಂಬ : ಈಕ್ವಿಡೀ
ಉದಾ : ಕತ್ತೆ (
Ass/Donkey)
ಶಾಸ್ತ್ರೀಯ ನಾಮ : ಈಕ್ವಸ್ ಅಸಿನಸ್ (ಈ ಹೆಮಿಯೋನಸ್)
(Equass ascins)

ವಿತರಣೆ ಮತ್ತು ಆವಾಸ : ಇದು ಮೂಲತಃ ಈಶಾನ್ಯ ಆಫ್ರಿಕಾದ ನಿವಾಸಿ. ಇಂದು ಕರ್ನಾಟಕದಲ್ಲಿ ಕಂಡುಬರುವ, ಅಗಸರು ಬಳಸುವ ಸಾಕು ಕತ್ತೆ ತಳಿ ಇದರಿಂದ ಅಭಿವೃದ್ಧಿ ಗೊಂಡುದೆಯ ನಂಬಲಾಗಿದೆ. ಭಾರತದ ಗುಜರಾತ್ ರಾಜ್ಯದ ಕಚ್ ಪ್ರದೇಶದಲ್ಲಿ ಕಾಡು ಕತ್ತೆ (ಈ.ಹೆ.ಆನಜರ್) ತಳಿ ದೊರಕುತ್ತದೆ.

ಗಾತ್ರ : ಎತ್ತರ ಮತ್ತು ಗಾತ್ರದಲ್ಲಿ ಕುದುರೆಗಿಂತ ಚಿಕ್ಕದು.

ಆಹಾರ : ಸಸ್ಯಾಹಾರಿ. ಸಸ್ಯಮೂಲವಾದ ಕಾಗದವನ್ನು ತಿನ್ನುತ್ತದೆ.

ಲಕ್ಷಣಗಳು : ಕಿವಿಗಳು ಉದ್ದ, ಕುದುರೆಗಳಿಗಿಂತ ಸಣ್ಣದಾದ ಗೊರಸು, ಕುಚ್ಚಿನಂತಿರುವ ಬಾಲದ ತುದಿ, ಕತ್ತಿನ ಮೇಲೆ ಉದ್ದವಾದ ಕೆಳಕ್ಕೆ ಬಾಗಿರುವ ಅಥವಾ ನೆಟ್ಟಗಿರುವ ಕೂದಲಿನ ಆಯಾಲವಿದೆ. ಬೆನ್ನಿನ ಮೇಲೆ ನಡು ಭಾಗದಲ್ಲಿ ಬಾಲದವರೆಗೂ ವಿಸ್ತರಿಸಿದ ಪಟ್ಟೆ ಇದೆ. ಭುಜದಿಂದ ಭುಜಕ್ಕೆ ಹರಡುವ ಅಡ್ಡ ಪಟ್ಟಿ ಇದೆ. ಕಾಲುಗಳ ಮೇಲೂ ಮಸುಕಾದ ಪಟ್ಟೆಗಳಿರಬಹುದು. ಕತ್ತೆಯ ಕೂಗು ಬಹಳ ವಿಶಿಷ್ಟವಾದುದು ಮತ್ತು ವಿಚಿತ್ರವಾದುದು. ದೇಹದ ಬಣ್ಣ, ಬೂದು, ಕಂದು, ಕಪ್ಪು ಅಥವಾ ಈ ಮೂರು ಬಣ್ಣಗಳ ಮಿಶ್ರ ಬಣ್ಣ.

ಸಂತಾನಾಭಿವೃದ್ಧಿ : ಸಾಮಾನ್ಯವಾಗಿ ಆಗಸ್ಟ್-ಅಕ್ಟೊಬರ್, ತಿಂಗಳುಗಳಲ್ಲಿ ಸಂಭೋಗಿಸುತ್ತವೆ. ಒಮ್ಮೆಗೆ ಒಂದು ಮರಿಯನ್ನು ಈಯುತ್ತವೆ. ಗರ್ಭಾವಧಿ ೧೧ ರಿಂದ ೧೨ ತಿಂಗಳುಗಳು. ಹುಟ್ಟಿದ ಮರಿಯ ಕಣ್ಣುಗಳು ತೆರೆದಿರುತ್ತವೆ. ದೇಹದ ಮೇಲೆ ಕೂದಲಿನ ಹೊದಿಕೆ ಇರುತ್ತದೆ ಮತ್ತು ನೆಗೆದು ಓಡಾಡಬಲ್ಲದು.

ಸ್ವಭಾವ : ಸಾಮಾನ್ಯವಾಗಿ ಹೇರು ಹೊರಲು ಮಾತ್ರ ಇವನ್ನು ಬಳಸುತ್ತಾರೆ. ಇದು ಕಷ್ಟು ಸಹಿಷ್ಣು. ಬುಡಕಟ್ಟಿನ ಜನರು ಕತ್ತೆ ಹಾಲು ಕುಡಿಯುವುದುಂಟು, ಮಾಂಸವನ್ನು ತಿನ್ನುವುದುಂಟು.

—-

ಗಣ : ಪೆರಿಸ್ಸೊಡ್ಯಾಕ್ಟೈಲ
ಕುಟುಂಬ : ಈಕ್ವಿಡೀ
ಉದಾ : ಸಾಕಿದ ಕುದುರೆ
(Horse)
ಶಾಸ್ತ್ರೀಯ ನಾಮ : ಈಕ್ವಸ್ ಕೆಬಲಸ್ (
Equs Cabalus)

ವಿತರಣೆ ಮತ್ತು ಆವಾಸ : ಇದು ಭಾರತದ/ಕರ್ನಾಟಕದ ಮೂಲ ನಿವಾಸಿಯಲ್ಲ. ಉತ್ತರ ಮಧ್ಯ ಏಷ್ಯಾ (ಅರೇಬಿಯಾ)ದಿಂದ ಬಂದುದು. ಅನೇಕಾನೇಕ ಉಪಯೋಗಗಳಿಂದಾಗಿ ಸಾಕಿ, ಈಗ ಇದು ಸಾಕು ಪ್ರಾಣಿಯಾಗಿ ಉಳಿದಿದೆ.

ಗಾತ್ರ : ಅನೇಕ ವಿಧದ ಕುದುರೆಗಳಿವೆ. ಅವುಗಳ ಉಪಯುಕ್ತತೆಯ ಆಧಾರದ ಮೇಲೆ ಅವನ್ನು ಸಾಕುತ್ತಿದ್ದಾರೆ ಮತ್ತು ಈ ಆಧಾರದಿಂದ ಅವುಗಳ ಗಾತ್ರ ಬದಲಾಗುತ್ತದೆ. ಸಣ್ಣದು ೫೬” ಎತ್ತರ ಮೀರದು. ಕೆಲವು ೬೮-೮೦” ಎತ್ತರವಿದೆ.

ಆಹಾರ : ಸಸ್ಯಾಹಾರಿ, ಹುಲ್ಲನ್ನು ತಿನ್ನುತ್ತದೆ.

ಲಕ್ಷಣಗಳು : ಇದು ಗೊರಸಿನ ಪ್ರಾಣಿ. ಏಕಖುರಿ. ಕಾಲುಗಳಲ್ಲಿ ಒಂದೇ ಒಂದು ಬೆರಳಿದೆ. ಉದ್ದನಾದ ತಲೆ, ಮುಂದಿನ ತುದಿಯಲ್ಲಿ ಬಾಯಿ. ಬಾಯಿಯ ಮೇಲೆ ನಾಸಿಕಗಳಿವೆ. ಕಾಲುಗಳು ಸಾಪೇಕ್ಷಿಯವಾಗಿ ಉದ್ದವೂ ಬಲಯುತವೂ ಆಗಿದ್ದು ವೇಗವಾಗಿ ಓಡಲು ಮಾರ್ಪಟ್ಟಿವೆ. ಗೊರಸು ಅಗಲವಾಗಿದೆ ಮತ್ತು ಇದರ ಇಕ್ಕೆಡೆಗಳಲ್ಲಿಯೂ ಕೊಂಬಿನ ಕೆಲ್ಲೊಸಿಟಿ (Callosity) ಎಂಬ ಕ್ಷಯಿಸಿದ ಗೊರಸುಗಳಿವೆ. ಸಂಪೂರ್ಣ ಕೂದಲಿನಿಂದ ಆವೃತವಾದ, ಪೊದರಿನಂತಹ ಬಾಲವಿದೆ. ನೇರವಾಗಿರುವ ಆದರೆ ಸಣ್ಣ ಕಿವಿಗಳಿವೆ. ಕಿವಿಯ ಹಿಂಭಾಗದಿಂದ ಭುಜದವರೆಗೆ ಮೇಲ್ಭಾಗದಲ್ಲಿ ಉದ್ದವಾದ ಕೂದಲಿನ ಆಯಾಲವಿದೆ. ಮೈಯಮೇಲೆ ಹೊಳಪಾದ ಕೂದಲು ಹೊದಿಕೆ ಇದೆ. ದೇಹದ ಬಣ್ಣದಲ್ಲಿ ವ್ಯತ್ಯಾಸ ತೋರುತ್ತವೆ. ಕಂದು, ಕಪ್ಪು, ಚೆಸ್ಟ್‌ನಟ್‌ಬೂದು, ಕೆಂಗಂದು, ಬಿಳಿಬೂದು ಇತ್ಯಾದಿ, ದಂತಸೂತ್ರ ೩, ೧, ೪, ೨ / ೩, ೧, ೪, ೩ = ೪೨.

ಸಂತಾನಾಭಿವೃದ್ಧಿ : ವರ್ಷಕ್ಕೆ ಒಮ್ಮೆ ಬೆದೆಗೆ ಬರುತ್ತದೆ. ಅದಕ್ಕೆ ನಿರ್ದಿಷ್ಟವಾದ ಕಾಲವಿಲ್ಲ. ಗರ್ಭಾವಧಿ ೩೪೦ ದಿವಸಗಳು. ಒಮ್ಮೆಗೆ ಸಾಮಾನ್ಯವಾಗಿ ಒಂದು ಮರಿಯನ್ನು ಈಯುತ್ತದೆ. ಹುಟ್ಟಿದ ಮರಿಗೆ ಕಣ್ಣು ಕಾಣಿಸುತ್ತವೆ. ಮೈಮೇಲೆ ಕೂದಲ ಹೊದಿಕೆ ಇದೆ. ಹುಟ್ಟಿದ ಮರಿ ಎದ್ದು ಓಡಾಡಬಲ್ಲದು.

ಸ್ವಭಾವ : ಅನೇಕ ವಿಧದಲ್ಲಿ ಮನುಷ್ಯನಿಗೆ ಉಪಯುಕ್ತವಾದ ಪ್ರಾಣಿ. ಸವಾರಿ ಮಾಡಲು, ಹೇರು ಹೊರಲು, ಗಾಡಿ ಎಳೆಯಲು, ಸ್ಪರ್ಧೆಗೆ ಓಡಿಸಲು ಮುಂತಾಗಿ. ರೇಸ್ ಕುದುರೆ ತಳಿಗಳ ಅಭಿವೃದ್ಧಿಗೆಂದು ಕರ್ನಾಟಕದ ಕುಣಿಗಲ್ ಬಳಿ ತಳಿ ಅಭಿವೃದ್ಧಿ (ಸ್ಟಡ್‌ಫಾರಂ) ಕೇಂದ್ರವಿದೆ. ಅತಿ ಹಿಂದಿನ ಕಾಲದಿಂದಲೂ ಕುದುರೆ ರಾಜಮಹಾರಾಜರ ರಥ ಎಳೆಯಲು, ಸೈನಿಕರು ಸವಾರಿ ಮಾಡಲು (ಅಶ್ವದಳ) ಮುಂತಾಗಿ ಬಳಕೆಯಲ್ಲಿದ್ದವು. ರಾಮಾಯಣ ಮಹಾಭಾರತಗಳಲ್ಲಿಯೂ ಇವುಗಳ ಪ್ರಸ್ತಾಪ ಬರುತ್ತದೆ. ರಾಮಾಯಣದಲ್ಲಿ ಶ್ರೀರಾಮ, ಮಹಾಭಾರತದಲ್ಲಿ ಧರ್ಮರಾಜ ಅಶ್ವಮೇಧಯಾಗಗಳನ್ನು ಆಚರಿಸಿದ ಪ್ರಸಂಗಗಳಿವೆ. ಹಿಂದೂಗಳಿಗೆ ಕುದುರೆ ಪೂಜ್ಯವಾದ ಪ್ರಾಣಿ. ರಾಜಮಹಾರಾಜರುಗಳು ತಮ್ಮ ರೀತಿ ರಿವಾಜುಗಳಲ್ಲಿ ಅದಕ್ಕೆ ಪ್ರಮುಖ ಸ್ಥಾನವಿತ್ತು ಪಟ್ಟದ ಕುದುರೆಗಳನ್ನು ನೇಮಿಸಿಕೊಳ್ಳುತ್ತಿದ್ದರು. ಕುದುರೆಯ ಮಾಂಸವನ್ನು ತಿನ್ನುತ್ತಾರೆ. ಚರ್ಮವನ್ನು ಹದಗೊಳಿಸಿ ಉಡುಪು, ಚಪ್ಪಲಿ, ಬೂಟು ಇತ್ಯಾದಿಗಳನ್ನು ತಯಾರಿಸಲು ಬಳಸುತ್ತಾರೆ. ಕುದುರೆ ಹಾಲನ್ನು ಕುಡಿಯುತ್ತಾರೆ. ಇದರ ದೇಹದ ಅಂಗಾಂಶಗಳಿಂದ ಅಂಟು ಸೀರಮ್ ತಯಾರಿಸುತ್ತಾರೆ.

—-

೧೬. ಗಣ : ಆರ್ಟಿಯೊಡ್ಯಾಕ್ಟೈಲ

ಇವು ಸಮಖುರ ಸಸ್ತನಿಗಳು. ಈ ಗಣಕ್ಕೆ ಕುರಿ, ಹಂದಿ, ಆಡು, ದನ, ಜಿಂಕೆ, ನೀರುಕುದುರೆ, ಒಂಟೆಗಳು ಸೇರುತ್ತವೆ. ಸಂಪೂರ್ಣವಾಗಿ ಸಸ್ಯಾಹಾರಿಗಳು, ಕಾಲುಗಳಲ್ಲಿ ೨ ಅಥವಾ ೪ ಬೆರಳುಗಳಿರುತ್ತವೆ. ಮುಂದವಡೆ ಮತ್ತು ದವಡೆ ಹಲ್ಲುಗಳು ಭಿನ್ನವಾಗಿದ್ದು ಬ್ಯುನೊಡಾಂಟ್ ಅಥವಾ ಸೊಲೆನೊಡಾಂಟ್ ಮಾದರಿಯವಾಗಿರುತ್ತವೆ. ಈ ಪ್ರಾಣಿಗಳು ಮೆಲಕು ಹಾಕುವ ಲಕ್ಷಣಗಳನ್ನು ಬೆಳೆಸಿಕೊಂಡಿವೆ. ಜಠರವು ೪ ಭಾಗಗಳಾಗಿ ವಿಭಾಗವಾಗಿದೆ. ಸ್ತನಗಳು ಕಡಿಮೆ ಸಂಖ್ಯೆಯಲ್ಲಿದ್ದಾಗ ತೊಡೆಯ ಸಂದುಗಳಲ್ಲಿರುತ್ತವೆ. ಹೆಚ್ಚು ಸಂಖ್ಯೆಯಲ್ಲಿದ್ದಾಗ ಉದರ ಭಾಗದಲ್ಲಿರುತ್ತವೆ. ಪ್ರಪಂಚದ ಎಲ್ಲಾ ಭಾಗಗಳಲ್ಲಿ ಕಂಡುಬರುತ್ತವೆ. ಇವು ಕೂಡ ಪೆರಿಸ್ಸೊಡ್ಯಾಕ್ಟೈಲ್‌ಗಳಂತೆ ಗೊರಸು ಪ್ರಾಣಿಗಳು.

 

ಗಣ : ಆರ್ಟಿಯೊಡ್ಯಾಕ್ಟೈಲ
ಕುಟುಂಬ : ಟ್ರಾಗುಲಿಡೀ
ಉದಾ : ಭಾರತದ ಚೆವರೋಷಿಯನ್ (
The Indian chevrotain)
ಮೌಸ್ ಡೀಯರ್ (Mouse deer)
ಶಾಸ್ತ್ರೀಯ ನಾಮ : ಟ್ರಾಗುಲಸ್ ಮೆಮಿನ
(Tragulus mamina)

479_69_PP_KUH

ವಿತರಣೆ ಮತ್ತು ಆವಾಸ : ಕರ್ನಾಟಕದ ಕಾಡುಗಳಲ್ಲಿ ಸುಮಾರು ೧,೮೫೦ ಮೀಟರ್ ಎತ್ತರದವರೆಗೆ ಕಾಣಬರುತ್ತವೆ. ಹುಲ್ಲು ಬೆಳೆದ ಬಂಡೆಗಲ್ಲಿನ ಗುಡ್ಡಗಳ ಓರೆಗಳಲ್ಲಿ ಮತ್ತು ಕಾಡಿನಲ್ಲಿ ನೆಲಸಿವೆ.

ಗಾತ್ರ : ೩೦ ಸೆಂ.ಈ. (೧ ಅಡಿ) ಎತ್ತರ. ೪೫ ಸೆಂ.ಮೀ. (೧ ೧/೨ ಅಡಿಯಷ್ಟು) ಉದ್ದ, ೨ ೧/೪ ರಿಂದ ೨ ೧/೨ ಕೆ.ಜಿ. ತೂಕ.

ಆಹಾರ : ಹುಲ್ಲು ಮತ್ತು ಗಿಡ ಗಂಟೆಗಳು, ಸೊಪ್ಪು ತಿನ್ನುತ್ತವೆ.

ಲಕ್ಷಣಗಳು : ಇವುಗಳನ್ನು ಬಹಳ ನಾಜೂಕಾದ, ಮೊಲಗಳಂತಹ ಚಿಕ್ಕ ಜಿಂಕೆಗಳೆಂದು ಹೇಳಬಹುದು. ದೇಹದ ಬಣ್ಣ ಆಲಿವ್ ಕಂದು ಬಣ್ಣದ ಮೇಲೆ ಹಳದಿ ಚುಕ್ಕೆಗಳಿವೆ. ಪಕ್ಕಗಳಲ್ಲಿ ಬಿಳಿಯ ಚುಕ್ಕೆಗಳ ಸಾಲುಗಳಿವೆ. ಇವು ಉದ್ದನೆಯ ಪಟ್ಟಿಗಳಂತೆ ಕಾಣುತ್ತವೆ. ಕೊಂಬುಗಳಿಲ್ಲ. ಅಷ್ಟೇನೂ ಮುಂದುವರಿದ ಜಿಂಕೆಗಳಲ್ಲ. ಕಾಲುಗಳು ತುಂಬಾ ಕೃಶವಾಗಿವೆ. ಹಿಂಭಾಗ ಎತ್ತರವಾಗಿದೆ. ಎರಡೂ ದವಡೆಗಳಲ್ಲಿ ಕೋರೆ ಹಲ್ಲುಗಳಿವೆ. ಮೇಲ್ದವಡೆಯ ಕೋರೆಹಲ್ಲುಗಳು ದೊಡ್ಡವು ಮತ್ತು ದಾಡೆಗಳಂತೆ ಕಾಣುತ್ತವೆ. ಮೇಲ್ದವಡೆಯಲ್ಲಿ ಬಾಚಿ ಹಲ್ಲುಗಳು ಇಲ್ಲ. ಪ್ರತಿಕಾಲಿನಲ್ಲಿಯೂ ನಾಲ್ಕು ಬೆರಳುಗಳಿವೆ. ಪೂರ್ಣ ಬೆಳೆದ ನಾಲ್ಕು ಬೆರಳುಗಳಿದ್ದರೂ, ಎರಡನ್ನು ಮಾತ್ರ ಉಪಯೋಗಿಸುತ್ತವೆ. ಇವುಗಳಿಗೆ ೩೪ ಹಲ್ಲುಗಳಿವೆ. ದಂತ ಸೂತ್ರ = ೧, ೧, ೩, ೩ / ೩, ೧, ೩, ೩. ಮುಂದಿನ ಕಾಲುಗಳು ಗಿಡ್ಡ ಆದುದರಿಂದ ದೇಹದ ಹಿಂಭಾಗ ಎತ್ತರವಾಗಿ ಕಾಣುತ್ತದೆ.

ಸಂತಾನಾಭಿವೃದ್ಧಿ : ಸಾಮಾನ್ಯವಾಗಿ ಒಂಟಿಯಾಗಿ (ಏಕಾಂಗಿ)ರುವ ಗಂಡುಗಳು, ಬೆದೆಯ ಸಮಯದಲ್ಲಿ ಮಾತ್ರ ಹೆಣ್ಣುಗಳನ್ನು ಕೂಡುತ್ತವೆ. ಗರ್ಭಾವಧಿ ೧೫೦-೧೫೫ ದಿನಗಳು. ಒಂದು ಸೂಲದಲ್ಲಿ ಒಂದು ಅಥವಾ ೩ ಮರಿಗಳು ಹುಟ್ಟುತ್ತವೆ. ಮಳೆಗಾಲದ ನಂತರ ಅಥವಾ ಚಳಿಗಾಲದ ಪ್ರಾರಂಭದಲ್ಲಿ ಮರಿಹಾಕುತ್ತವೆ.

ಸ್ವಭಾವ : ನಾಚಿಕೆಯ ಮತ್ತು ಸಾಧು ಸ್ವಭಾವದ ಜಿಂಕೆಗಳು. ಅಂಜಿದಾಗ ಅಥವಾ ವೈರಿಗಳನ್ನು ಕಂಡಾಗ ಅವುಗಳ ಕಣ್ಣಿಗೆ ಕಾಣಿಸದಂತೆ, ಹುಲ್ಲು, ಗಿಡ-ಗಂಟೆಗಳಲ್ಲಿ ನುಸುಳಿ ಮರೆಯಾಗುತ್ತವೆ. ಸಾಮಾನ್ಯವಾಗಿ ಒಂಟಿಜೀವಿಗಳು.

—-

ಗಣ : ಆರ್ಟಿಯೊಡ್ಯಾಕ್ಟೈಲ
ಕುಟುಂಬ : ಬೋವಿಡೀ
ಉದಾ : ಆಡು (ಮೇಕೆ)
(Goat)
ಶಾಸ್ತ್ರೀಯ ನಾಮ : ಕ್ಯಾಪ್ರ ಹಿರ್ಕಸ್ (
Capra hircus)

ವಿತರಣೆ ಮತ್ತು ಆವಾಸ : ಇದು ಕರ್ನಾಟಕವಿರಲಿ, ಭಾರತದ ಮೂಲ ನಿವಾಸಿಯಲ್ಲ. ಮೂಲತಃ ಇದರ ತೌರುಮನೆ ನೈಋತ್ಯ ಏಷ್ಯಾ. ೮೧೦ ಸಾವಿರ ವರ್ಷಗಳ ಹಿಮದೆ ಪಳಗಿಸಲ್ಪಟ್ಟು ಎಲ್ಲಾ ಕಡೆಗೂ ಹರಡಿವೆ. ಕರ್ನಾಟಕದಲ್ಲಿಯೂ ಹಾಲು, ಚರ್ಮ, ಮಾಂಸಕ್ಕಾಗಿ ಸಾಕುತ್ತಾರೆ. ಇಂದಿಗೂ ಕಾಡು ಆಡುಗಳೂ ಇದ್ದರೂ, ಕರ್ನಾಟಕದಲ್ಲಿ ಇಲ್ಲ. ಹಳ್ಳ ತಗ್ಗಿನ ಪರ್ವತ ಪ್ರದೇಶ ಇವು ವಾಸಿಸಲು ಇಷ್ಟ ಪಡುವ ಜಾಗ. ಕುರುಚಲು ಗಿಡಗಳ ಮೈದಾನ ಪ್ರದೇಶದಲ್ಲಿಯೂ ಕಂಡಬುರುತ್ತವೆ.

ಗಾತ್ರ : ೧.೩ – ೧.೪ ಅಡಿ ಉದ್ದ. ೦.೭೫ – ೧.೦ ಮೀ. ಎತ್ತರ ಉದ್ದವಾದ ಕಾಲುಗಳು ೧.೩ – ೧.೪ ಮೀ. ಉದ್ದ. ೫೦ – ೫೫ ಕೆ.ಜಿ. ತೂಕ. ಹೋತದ ತೂಕ ೭೫ – ೧೨೦ ಕೆ.ಜಿ.

ಆಹಾರ : ಸಸ್ಯಾಹಾರಿಗಳು. ಏನೆಲ್ಲಾ ಗಿಡಗಳನ್ನು ತಿನ್ನುತ್ತವೆ. ಆಡುಮುಟ್ಟದ ಸೊಪ್ಪಿಲ್ಲ ಎಂಬ ಗಾದೆಯೇ ಇದೆ. ಗಿಡದ ಎಳೆಯ ಕುಡಿಗಳನ್ನು ಕುರುಕಿ, ತೊಗಟಿ ಸುಲಿದು ಹಾಳುಗೈಯುತ್ತವೆ.

ಲಕ್ಷಣ : ಸಿಂಪೀಡಿತವಾಗಿ ಚಪ್ಪಟೆಯಾದ, ಹಿಂದಕ್ಕೆ ಮತ್ತು ಹೊರಕ್ಕೆ ಬಾಗಿದ, ಸಾಮಾನ್ಯವಾಗಿ ಏಣುಗಳಿರುವ ಒಂದು ಜೊತೆ ಕೊಂಬುಗಳಿರುತ್ತವೆ. ಕೆಲವೊಮ್ಮೆ ೧ ಮೀ. ಉದ್ದ ಇರಬಹುದು. ಮೇಲ್ದವಡೆಯಲ್ಲಿ ಮುಂದಿನ ಹಲ್ಲುಗಳಿಲ್ಲ (ಬಾಚಿ). ದಂತಸೂತ್ರ : ದನಗಳಂತೆ ೩೨ = ೦, ೦, ೩, ೩ / ೩, ೧, ೩, ೩. ಮೇಲಕು ಹಾಕುವ ಪ್ರಾಣಿಗಳು. ದೇಹದ ಮೇಲೆ ನುಣುಪಾದ ಹೊಳಪು ಕೂದಲ ಹೊದಿಕೆ ಇದೆ. ಗಂಡು ಆಡನ್ನು ಹೋತ ಎನ್ನುತ್ತಾರೆ. ಹೋತದ ಗಡ್ಡದ ಬಳಿ ಹೆಣ್ಣುಗಳಿಗಿಂತಲೂ ಉದ್ದವಾದ ಗಡ್ಡ ಕೂದಲುಗಳಿವೆ. ಇದರಿಂದಾಗಿಯೆ ಆಡಿನ ಗಡ್ಡ ಎಂಬ ನಾಣ್ಣುಡಿ ಹುಟ್ಟಿದೆ. ಉಬ್ಬಿದ ಹಣೆ, ಮುಸುಡಿ ಚೂಪಾಗಿದೆ. ಗಡ್ಡದ ಬಳಿ ಗ್ರಂಥಿಗಳು ಸಿಂಡು ವಾಸನೆಯ ದ್ರವ ಉತ್ಪತ್ತಿ ಮಾಡುತ್ತವೆ. ಕಾಲುಗಳಲ್ಲಿ ನಾಲ್ಕು ಬೆರಳುಗಳಿದ್ದು ಎರಡು ಮಾತ್ರ ಪ್ರಧಾನವಾಗಿದ್ದು ಗೊರಸಿರುತ್ತದೆ. ಉಳಿದೆರಡು ಕ್ಷೀಣವಾಗಿ ಹಿಂದಕ್ಕೆ ಚಾಚಿದ ಗಂಟುಗಳಂತೆ ಕಾಣುತ್ತವೆ. ಇವು ದೊಡ್ಡವಾದ ಬೆರಡಳ ಗೊರಸುಗಳ ಮೇಲೆ ಓಡಾಡುತ್ತವೆ. ನಿಗರಿದ ಮೋಟು ಕಿವಿಗಳಿವೆ.

ಸಂತಾನಾಭಿವೃದ್ಧಿ : ೧೫ ತಿಂಗಳಿಗೆ (ಮೇಕೆ) ಆಡು ಬೆದೆಗೆ ಬರುತ್ತದೆ. ಯಾವ ಕಾಲದಲ್ಲಿ ಬೇಕಾದರೂ ಬೆದೆಗೆ ಬರಬಹುದು. ನಿರ್ದಿಷ್ಟ ಋತು ಮಾಸವಿಲ್ಲ. ಗರ್ಭಾವಧಿ ೧೪೭ – ೧೫೪ ದಿನಗಳು. ಅವಳಿ ಮರಿಗಳು ಹುಟ್ಟುವುದು ಸಾಮಾನ್ಯ. ೮-೧೨ ವರ್ಷ ಬದುಕಿರುತ್ತವೆ. ೧೮ ವರ್ಷ ಬದುಕಿದ ನಿದರ್ಶನವಿದೆ.

ಸ್ವಭಾವ : ೫ – ೧೦ರ ಮಂದೆಗಳಲ್ಲಿ ವಾಸಿಸುತ್ತವೆ. ಆದರೆ ಆಡು ಸಾಕುವವರು ನೂರರವರೆಗೆ ಸಾಕುತ್ತಾರೆ. ಆಡು ಹೋದ ಕಾಡು ಹಾಳು ಎಂಬ ನಾಣ್ಣುಡಿ ಇದೆ. ಇವು ಬೇಸಾಯಗಾರನ, ಗೋಟಗಾರನ ಶತ್ರು. ಕುರಿಗಳಿಗೆ ಹೋಲಿಸಿದರೆ ಇದು ಚುರುಕಾದ ಪ್ರಾಣಿ. ಇದರ (ಮೇಕೆ) ಹಾಲು ಪುಷ್ಟಿಕರ. ಹಾಲು, ಮಾಂಸಕ್ಕಾಗಿ ಸಾಕುತ್ತಾರೆ. ಕಾಶ್ಮೀರದ ಅಂಗೋರ ಆಡು ತನ್ನ ಮೃದುವಾದ ತುಪ್ಪಳಿಗೆ ಹೆಸರುವಾಸಿ.