ಗಣ : ಕಾರ್ನಿವೋರ
ಕುಟುಂಬ : ಫೀಲಿಡೀ
ಉದಾ : ತುಕ್ಕು ಚುಕ್ಕೆಗಳ ಬೆಕ್ಕು (
Rusty Spotted Cat)
ಶಾಸ್ತ್ರೀಯ ನಾಮ : ಪ್ರಿಯೊನೈಲೂರಸ್‌ರುಬಿಜಿನೊಸಸ್‌ (Prionailurus rubliginousus)

469_69_PP_KUH

ವಿತರಣೆ ಮತ್ತು ಆವಾಸ : ದಕ್ಷಿಣ ಭಾರತದ ಹುಲ್ಲುಗಾವಲು ಮತ್ತು ಒಣಹವೆಯ ಕುರುಚಲು ಕಾಡುಗಳಲ್ಲಿ ಕಂಡುಬರುತ್ತದೆ.

ಗಾತ್ರ : ತಲೆ ಮತ್ತು ದೇಹದ ಉದ್ದ ೧ ೧/೨ ಅಡಿ ಅಥವಾ ಅದಕ್ಕಿಂತ ಸ್ವಲ್ಪ ಕಡಿಮೆ. ಬಾಲ ಸುಮಾರು ೩/೪ ಅಡಿ ಉದ್ದ.

ಆಹಾರ : ಸಣ್ಣ ಸಸ್ತನಿಗಳು, ಪಕ್ಷಿಗಳು, ಓತಿಗಳನ್ನು ಬೇಟೆಯಾಡಿ ತಿನ್ನುತ್ತದೆ.

ಲಕ್ಷಣಗಳು : ನಯವಾದ ತುಪ್ಪುಳಿದೆ. ಕೆಂಪು-ಬೂದು ಮೈಬಣ್ಣದ ಮೇಲೆ ತಿಳಿವರ್ಣದ ಪಟ್ಟೆಗಳು ಮತ್ತು ಚುಕ್ಕೆಗಳು ಸರಿಯದ ಸಾಲಿನಲ್ಲಿವೆ. ಬಾಲದ ಮೇಲೆ ಚುಕ್ಕೆಗಳಿಲ್ಲ. ಈ ಕಾರಣದಿಂದಾಗಿ ಇದನ್ನು ಚಿರತೆ ಬೆಕ್ಕಿನಿಂದ ಗುರುತಿಸಬಹುದು. ಇದು ಮನೆಯ ಬೆಕ್ಕಿನ ಗಾತ್ರದ ಅರ್ಧ ಅಥವಾ ಮುಕ್ಕಾಲಷ್ಟು ಉದ್ದ ಇದೆ. ಸಾಧಾರಣ ಉದ್ದದ ಬಾಲ. ಕಣ್ಣುಗಳಿಂದ ಮತ್ತು ಮೂಗಿನ ತುದಿಯಿಂದ ತಲೆಯ ಮೇಲಿನವರೆಗೆ ನಾಲ್ಕು ಕಪ್ಪು ಸಾಲುಗಳಿವೆ. ಕೆನ್ನೆಗಳ ಮೇಲೂ ಒಂದೊಂದು ಜೊತೆ ಪಟ್ಟೆಗಳಿವೆ. ಹೊಟ್ಟೆಯ ಭಾಗ ಮತ್ತು ಕಾಲುಗಳ ಒಳಭಾಗ ಬೆಳ್ಳಗಿದ್ದು ದೊಡ್ಡ ಕಪ್ಪು ಗುರುತುಗಳಿವೆ. ಬಾಲ ಒಂದೇ ತೆರನಾದ ಬಣ್ಣವುಳ್ಳದ್ದು ಮತ್ತು ಅಸ್ಪಷ್ಟ ನಮೂನೆಯನ್ನು ತೋರುತ್ತದೆ. ಕಿವಿಗಳು ಸಣ್ಣವು, ದುಂಡುಗಿದೆ ಮತ್ತು ಹೊರಭಾಗದಲ್ಲಿ ಕೆಂಗಂದು ಬಣ್ಣವಾಗಿದ್ದು, ಒಂದು ದೊಡ್ಡ ಬಿಳಿಯ ಗುರುತಿದೆ. ಇದು ಹೆಚ್ಚು ಮರವಾಸಿಯಲ್ಲ. ಸಾಮಾನ್ಯವಾಗಿ ಕುರುಚಲು ಕಾಡುಗಳಲ್ಲಿ ವಾಸಿಸುತ್ತದೆ ಮತ್ತು ಹಳ್ಳಿಗಳ ಸನಿಹದಲ್ಲಿರುವ ಕಾಡುಗಳಲ್ಲಿ ಹೆಚ್ಚು ಕಂಡುಬರುತ್ತದೆ.

—- 

ಗಣ : ಕಾರ್ನಿವೋರ
ಕುಟುಂಬ : ಫೀಲಿಡೀ
ಉದಾ : ಚಿರತೆ ಬೆಕ್ಕು (
Leopard Cat)
ಶಾಸ್ತ್ರೀಯ ನಾಮ : ಪ್ರಿಯೊನೈಲೂರಸ್‌ಬೆಂಗಾಲೆನ್ಸಿಸ್‌(Prionailurus bengalensis)

ವಿತರಣೆ ಮತ್ತು ಆವಾಸ : ಕರ್ನಾಟಕವೂ ಸೇರಿದಂತೆ ಭಾರತದ ದ್ವೀಪಕಲ್ಪಗಳಲ್ಲಿ ಕಂಡುಬರುತ್ತದೆ. ಹೆಚ್ಚಾಗಿ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತದೆ. ಇದು ಪಶ್ಚಿಮ ಘಟ್ಟಗಳಲ್ಲಿ ಮತ್ತು ಕೊಡಗಿನ ಕಾಡುಗಳಲ್ಲಿಯೂ ಕಂಡುಬರುತ್ತದೆ. ಮಾನವ ವಸತಿಯ ಹತ್ತಿರದಲ್ಲಿಯೂ ಕಾಣಬರುತ್ತದೆ.

ಗಾತ್ರ : ತಲೆ ಮತ್ತು ದೇಹದ ಉದ್ದ ೨ ಅಡಿ, ಬಾಲ ೧ ಅಡಿ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು ೩ ರಿಂದ ೪ ಕೆ.ಜಿ. ತೂಕವಿರುತ್ತದೆ. ಮನೆ ಬೆಕ್ಕಿನ ಗಾತ್ರ.

ಆಹಾರ : ಸಣ್ಣ ಸಸ್ತನಿ ಮತ್ತು ಪಕ್ಷಿಗಳನ್ನು ತಿಂದು ಜೀವಿಸುತ್ತದೆ. ಕೋಳಿ ಸಾಕಣಿಕೆ ಕೇಂದ್ರಗಳಿಗೆ ಧಾಳಿಯಿಟ್ಟು ಕೋಳಿಗಳಿಗೆ ಆಹಾರವಾಗಿ ಬಳಸುವ ಹುಳುಗಳನ್ನು ವಿಶೇಷವಾಗಿ ತಿನ್ನುತ್ತದೆ. ಇದರಿಂದಾಗಿ ಕೋಳಿ ಸಾಕಣಿಕಾ ಕೇಂದ್ರಗಳಿಗೆ ನಷ್ಟ ಉಂಟುಮಾಡುತ್ತದೆ.

ಲಕ್ಷಣಗಳು : ದೇಹದ ಮೇಲ್ಭಾಗದ ಬಣ್ಣ ಹಳದಿ. ಕೆಳಭಾಗ ಬಿಳುಪು. ದೇಹದ ಮತ್ತು ಬಾಲದ ಮೇಲೆ ಕಪ್ಪು ಅಥವಾ ಕಂದುಕಪ್ಪು ಚುಕ್ಕೆಗಳಿವೆ. ಇದು ಸಾಮಾನ್ಯವಾಗಿ ಸಾಕಿದ ಬೆಕ್ಕಿನಂತೆ ಕಾಣುತ್ತಾದರೂ ಚುಕ್ಕೆಗಳಿಂದ ಚಿರತೆಯಂತೆ ಕಾಣುತ್ತದೆ. ಕಿವಿಗಳು ದುಂಡುಗಿವೆ. ಕಿವಿಯ ಹಿಂಭಾಗದಲ್ಲಿ ದೊಡ್ಡದಾದ ಒಂದು ಬಿಳಿಯ ಗುರುತಿದೆ. ಕಾಲುಗಳು ಉದ್ದ. ಕೆನ್ನೆಗಳ ಮೇಲೆ ಎರಡು ಕಿರಿದಾದ ಕಪ್ಪು ಪಟ್ಟೆಗಳಿದ್ದು ನಡುವೆ ಬೆಳ್ಳಗಿದೆ. ಕಣ್ಣಿನ ಒಳತುದಿಯಿಂದ ತಲೆಯ ಮೇಲೆ ಹಬ್ಬಿದಂತೆ ೪ ಕಪ್ಪು ಪಟ್ಟೆಗಳಿವೆ. ಬಾಲದ ಮೇಲಿನ ಗುರುತುಗಳು ತುದಿಯಲ್ಲಿ ಅಡ್ಡಪಟ್ಟೆಗಳಂತಿವೆ.

ಸಂತಾನಾಭಿವೃದ್ಧಿ : ಗರ್ಭಾವಧಿ ೬೫ ರಿಂದ ೭೦ ದಿನಗಳು. ಒಂದು ಸೂಲದಲ್ಲಿ ೨ ರಿಂದ ೪ ಮರಿಗಳು ಹುಟ್ಟುತ್ತವೆ. ಮೇ ತಿಂಗಳಲ್ಲಿ ಸಾಮಾನ್ಯವಾಗಿ ಈಯುತ್ತವೆ. ಹುಟ್ಟಿದ ಮರಿಗಳು ತುಂಬಾ ಸಣ್ಣವು. ಮರಿಗಳು ೭೮ ರಿಂದ ೯೫ ಗ್ರಾಂ ತೂಕವಿರುತ್ತದೆ.

ಸ್ವಭಾವ : ಗಂಡು-ಹೆಣ್ಣುಗಳು ಜೊತೆಯಾಗಿರುತ್ತವೆ ಎಂದು ತಿಳಿದು ಬಂದಿದೆ. ಇದು ಸಾಕು ಬೆಕ್ಕಿನ ಕೂಡ ಲೈಂಗಿಕ ಸಂಪರ್ಕ ಬೆಳೆಸುತ್ತದೆ. ನಿಶಾಚರಿ. ಇದು ಮರದ ಪೊಟರುಗಳಲ್ಲಿ ವಾಸಿಸುತ್ತದೆ. ಇದು ಕೊಡಗಿನಲ್ಲಿ ಸಾಮಾನ್ಯ. ಅಲ್ಲಿ ಕೋಳಿಸಾಕಣಿಕೆಗೆ ತುಂಬಾ ತೊಂದರೆ ಕೊಡುತ್ತದೆ ಎಂದು ತಿಳಿದು ಬರುತ್ತದೆ. ಇದರಲ್ಲಿ ೩ ಉಪಪ್ರಭೇದಗಳಿವೆ.

—- 

ಗಣ : ಕಾರ್ನಿವೋರ
ಕುಟುಂಬ : ಫೀಲಿಡೀ (
Felidae)
ಉದಾ : ಹುಲಿ (Tiger)
ಶಾಸ್ತ್ರೀಯ ನಾಮ : ಪ್ಯಾಂಥೆರ ಟೈಗ್ರಿಸ್‌(Phanthera tigris)

470_69_PP_KUH

ವಿತರಣೆ ಮತ್ತು ಆವಾಸ : ಹುಲಿಯು ಫೀಲಿಡೀ ಕುಟುಂಬದಲ್ಲಿಯೇ ಅತ್ಯಂತ ದೊಡ್ಡ ಗಾತ್ರದ ಪ್ರಾಣಿ. ಹುಲಿಗಳು ಏಷ್ಯಾ ಖಂಡಕ್ಕೆ ಮಾತ್ರ ಸೀಮಿತವಾಗಿವೆ. ದಕ್ಷಿಣ ಭಾರತದಲ್ಲಿ ಇವು ಕಂಡುಬರುತ್ತವೆ. ಭಾರತದಲ್ಲಿ ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ ಕಾಡುಗಳಲ್ಲಿ ಕಂಡುಬರುತ್ತದೆ. ಹಿಮಾಲಯದಲ್ಲಿ ೧೦,೦೦೦ ಅಡಿ ಎತ್ತರದವರೆಗೆ ಹುಲಿಗಳು ಕಂಡಿವೆ. ಸಾಮಾನ್ಯವಾಗಿ ತೇವ ವಾತಾವರಣದ ದಟ್ಟಕಾಡಿನ ನಿರ್ಜನ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಆದರೆ ಕೆಲವು ಸಲ ಆರ್ದ್ರ ಶುಷ್ಕಪರ್ಣಿ, ಶುಷ್ಕಪರ್ಣಿ ಅರಣ್ಯಗಳಲ್ಲಿಯೂ ವಾಸಿಸುತ್ತವೆ.

ಗಾತ್ರ : ಗಂಡು ಹುಲಿಯ ಪೂರ್ಣ ಉದ್ದ ೮.೮ ಅಡಿಯಿಂದ ೯.೬ ಅಡಿ. ಎತ್ತರ ೩ ರಿಂದ ೩ ೧/೨ ಅಡಿ. ಬಾಲ ೩ ಅಡಿ. ಹುಲಿಯ ತೂಕ ೧೮೦ ರಿಂದ ೨೩೦ ಕೆ.ಜಿ. ಹೆಣ್ಣು ಹುಲಿ ಗಂಡಿಗಿಂತ ಉದ್ದದಲ್ಲಿ ೧/೪ ಅಡಿಯಿಂದ ೧/೨ ಅಡಿ, ತೂಕದಲ್ಲಿ ೪೫ ಕೆ.ಜಿ. ಕಡಿಮೆ. ದಕ್ಷಿಣ ಭಾರತದ ಹುಲಿಗಳು ಬಂಗಾಳ ಮತ್ತು ಹಿಮಾಲಯದಡಿ ಪ್ರದೇಶದ ಹುಲಿಗಳಿಗಿಂತ ಮೈಕಟ್ಟಿನಲ್ಲಿ ಸಣ್ಣವು.

ಆಹಾರ : ಮಾಂಸಾಹಾರಿ, ಹುಲಿಯು ಸಣ್ಣ ಪ್ರಾಣಿಗಳಿಂದ ದೊಡ್ಡ ಪ್ರಾಣಿಗಳವರೆಗೆ ಬೇಟೆಯಾಡುತ್ತದೆ. ವಿಶೇಷವಾಗಿ ಕಡವೆ, ಜಿಂಕೆ, ಚಿಗರಿ (ಎರಳೆ), ಕಾಟಿ, ಕಾಡು ಹಂದಿ, ಕಾಡು ಎಮ್ಮೆಗಳನ್ನು ಹಿಡಿಯುತ್ತದೆ. ಹಿಂಡುಗಳಲ್ಲಿದ್ದ ಆನೆ, ಘೆಂಡಾಮೃಗ, ಕಾಟಿ, ಕಾಡು ಎಮ್ಮೆಗಳ ಸಮೀಪಕ್ಕೆ ಸುಳಿಯುವುದಿಲ್ಲ. ಆದರೆ ಹಿಂಡಿನಿಂದ ಹಿಂದುಳಿದ ಮರಕರುಗಳನ್ನು ರೋಗರುಜಿನುಗಳಿಂದ ಬಳಲಿ ಅಶಕ್ತವಾದ ಪ್ರಾಣಿಗಳನ್ನು ಹಿಡಿಯುತ್ತದೆ. ಅರಣ್ಯ ಪ್ರಾಣಿಗಳು ಸಿಕ್ಕದೆ ಇದ್ದಾಗ ಸಾಕಿದ ದನಕರುಗಳ ಮೇಲೆ ಬೀಳಬಹುದು. ಅನಿವಾರ್ಯ ಸಂದರ್ಭಗಳಲ್ಲಿ ಇವು ನರಭಕ್ಷಕವೂ ಆಗಬಹುದು. ಸ್ವಾಭಾವಿಕವಾಗಿ ಮನುಷ್ಯನ ಭಯ, ಹಸಿವೆಯನ್ನು ಹಿಂಗಿಸುತ್ತದೆ. ಇದು ಎಲ್ಲಾ ತರಹದ ಮಾಂಸವನ್ನು ತಿನ್ನುತ್ತದೆ. ಕೊಳೆತ ಮಾಂಸವನ್ನು ತಿನ್ನುತ್ತದೆ. ಒಂದೊಂದು ಸಲ ಮಾಂಸಾಹಾರಿ ಪ್ರಾಣಿಗಳಾದ ಕರಡಿ, ನಾಯಿಗಳನ್ನು ಹಿಡಿಯುತ್ತದೆ. ಸ್ವಜಾತೀಯ ಪ್ರಾಣಿಗಳನ್ನು ತಿಂದ ಉದಾಹರಣೆಗಳಿವೆ. ಸಣ್ಣ ಪ್ರಾಣಿಗಳಾದ ಜಿಂಕೆ, ಎರಳೆಗಳನ್ನು ಹಿಡಿದರೆ ಒಂದೇ ರಾತ್ರಿಯಲ್ಲಿ ತಿಂದು ಮುಗಿಸಿ ಬಿಡುತ್ತದೆ. ದೊಡ್ಡ ಪ್ರಾಣಿಗಳಾದರೆ ಅವುಗಳ ಮಾಂಸವನ್ನು ಬಚ್ಚಿಟ್ಟು ಎರಡುಮೂರು ದಿನ ತಿನ್ನುತ್ತದೆ. ಒಂದು ಸಲಕ್ಕೆ ೧೮-೨೭ ಕೆ.ಜಿ. ಮಾಂಸವನ್ನು ತಿನ್ನುತ್ತದೆ. ತಿಂಗಳಲ್ಲಿ ೩-೪ ಬಾರಿಯಾದರೂ ಹೊಟ್ಟೆ ಹರಿಯುವ ಊಟಬೇಕು. ಬೆಳೆದ ಹುಲಿ ೩೦ ಕೆ.ಜಿ. ಮಾಂಸವನ್ನು ತಿನ್ನುತ್ತದೆ.

ಲಕ್ಷಣಗಳು : ಸಾಮಾನ್ಯವಾಗಿ ಕೆಂಪುಕೂಡಿದ ಕಿತ್ತಳೆ ಹಳದಿ ಅಥವಾ ನಸುಗೆಂಪಿನ ದೇಹದ ಬಣ್ಣದ ಮೇಲೆ ನೇರವಾಗಿ ಇಳಿದ ಕಪ್ಪು ಪಟ್ಟೆಗಳಿವೆ. ಈ ಪಟ್ಟೆಗಳು ಉದ್ದ ಮತ್ತು ಅಗಲದಲ್ಲಿ ಬೇರೆ ಬೇರೆ ಹುಲಿಗಳಲ್ಲಿ ಭಿನ್ನವಾಗಿವೆ. ಗಲ್ಲ, ಗಂಟಲು, ಹೊಟ್ಟೆ, ಕಾಲು, ಕವಿಯ ಒಳಮಗ್ಗಲು ಬಿಳಿ ಬಣ್ಣ. ಮರಗಳ ಮೇಲೆ ಇರುವ ಪಟ್ಟೆಗಳ ವಿನ್ಯಾಸ ದೊಡ್ಡವಾದ ಮೇಲೂ ಹಾಗೆ ಉಳಿಯುತ್ತವೆ. ಬೇಸಿಗೆಯಲ್ಲಿ ಮೈಬಣ್ಣಮಾಸಲಾಗುತ್ತದೆ. ಕಣ್ಣುಗಳ ಮೇಲಿನ ಬಿಳಿ ಕೂದಲಿನ ತೇಪೆಯಲ್ಲಿಯ ಕಪ್ಪುಕಲೆಗಳ ಮತ್ತು ಪಾದಗಳು ಊರಿದ ಹೆಜ್ಜೆಗಳ ಮೇಲೆ ಹುಲಿಗಳನ್ನು ಒಂದರಿಂದ ಇನ್ನೊಂದನ್ನು ಗುರುತಿಸಬಹುದು. ಪರಿಸರಗಳಿಗೆ ಅನುಗುಣವಾಗಿ ಹುಲಿಗಳು ಆಕಾರ ಉದ್ದ, ತೂಕ ಬಣ್ಣದಲ್ಲಿ ಬೇರೆಯಾಗಿವೆ. ಬಿಳಿಹುಲಿಗಳು ಭಾರತದಲ್ಲಿ ಅಪರೂಪವಾಗಿ ಕಂಡಿವೆ. ದೃಷ್ಟಿ ಮತ್ತು ಘ್ರಾಣಶಕ್ತಿ ಕಡಿಮೆ. ಆದರೆ ಶ್ರವಣ ಶಕ್ತಿ ಚುರುಕು. ಈ ಇಂದ್ರಿಯಗಳ ಶಕ್ತಿ ಪ್ರಮಾಣ ೨ : ೫ : ೭ ಎಂದು ಹೇಳಬಹುದು. ಕಣ್ಣುಗಳು ತಿಳಿಹಳದಿ. ಕಿವಿ ಗಿಡ್ಡ ಮತ್ತು ದುಂಡು. ಬಲವಾದ ಸ್ನಾಯುಗಳಿರುವ ದೇಹ ಮತ್ತು ಮೊನಚಾದ ಕೋರೆಹಲ್ಲುಗಳು ಹುಲಿಗಳ ವೈಶಿಷ್ಟ್ಯ. ಮುಂಗಾಲುಗಳಲ್ಲಿ ೫, ಹಿಂಗಾಲುಗಳಲ್ಲಿ ೪ ಬೆರಳುಗಳಿದ್ದು, ಬೆರಳುಗಳಿಗೆ ಒಳ ಸೇರುವ ನಖಗಳಿವೆ. ಇವುಗಳಿಗೆ ಬೆಕ್ಕುಗಳಂತೆ ಮೆತ್ತನೆಯ ಪಾದ, ಬಿರುಸಾದ ಮೀಸೆ, ಒರಟಾದ ನಾಲಿಗೆ ಇವೆ. ಬಾಲದಲ್ಲಿ ಕಪ್ಪು ಉಂಗುರಗಳಿವೆ. ಪ್ರಾಯದ ಹುಲಿಯ ಚರ್ಮ ಹೊಳಪಾಗಿದ್ದು ನೋಡಲು ಸುಂದರವಾಗಿರುತ್ತದೆ. ವಯಸ್ಸಾದಂತೆ ಚರ್ಮದ ಬಣ್ಣ ಮಸುಕಾಗುತ್ತದೆ. ಗಲ್ಲಗಳ ಮೇಲೆ ಗಡ್ಡದ ಹಾಗೆ ಕೂದಲುಗಳಿವೆ. ಇವು ಗಂಡು ಹುಲಿಗಳಲ್ಲಿ ಎದ್ದು ಕಾಣುತ್ತವೆ.

ಸಂತಾನಾಭಿವೃದ್ಧಿ : ಗಂಡು ಹುಲಿ ಅನೇಕ ಹೆಣ್ಣು ಹುಲಿಗಳ ಜೊತೆ ಬೆದೆಯ ಸಮಯದಲ್ಲಿ ಮಾತ್ರ ಲೈಂಗಿಕ ಸಂಪರ್ಕ ಬೆಳೆಸುತ್ತದೆ. ಗಂಡು ಸಾಮಾನ್ಯವಾಗಿ ಒಂಟಿಯಾಗಿರುತ್ತದೆ. ಹೆಣ್ಣು ೨-೩ ಮರಿಗಳೊಂದಿಗೆ ಕಾಣಿಸಿಕೊಳ್ಳುತ್ತದೆ. ಹೆಣ್ಣು ೩-೪ ವರ್ಷಕ್ಕೆ ಮತ್ತು ಗಂಡು ೪-೫ ವರ್ಷಕ್ಕೆ ಪ್ರಾಯಕ್ಕೆ ಬರುತ್ತವೆ. ಹೆಣ್ಣುಗಳು ವರ್ಷವಿಡೀ ಮರಿಹಾಕುತ್ತವೆ. ಆದರೆ ಹೆಚ್ಚಾಗಿ ಮಳೆಗಾಲದ ನಂತರ ನವೆಂಬರ್ ನಲ್ಲಿ ಮತ್ತು ಬೇಸಿಗೆಯ ಪ್ರಾರಂಭದ ಏಪ್ರೀಲ್ ತಿಂಗಳಲ್ಲಿ ಮರಿಗಳು ಕಣ್ಣಿಗೆ ಬೀಳುತ್ತವೆ. ಗರ್ಭಾವಧಿ ೧೦೫-೧೩೩ ದಿನಗಳು. ಒಂದು ಸೂಲದಲ್ಲಿ ೨-೩ ಮರಿಗಳು ಹುಟ್ಟುತ್ತವೆ. ೭ ಮರಿಗಳು ಹುಟ್ಟಿದ ದಾಖಲೆಗಳಿವೆ. ಹುಟ್ಟಿದಾಗ ಮರಿಗಳ ಕಣ್ಣುಗಳಲ್ಲಿ ಪೊರೆ ಇರುವುದರಿಂದ ಅವು ಕುರುಡು. ಮರಿಗಳ ತೂಕ ೮೦೦ ರಿಂದ ೧,೫೦೦ ಗ್ರಾಂ. ಹುಟ್ಟಿದ ೯-೧೪ ದಿನಗಳ ನಂತರ ಪೊರೆ ಹರಿದು ಕಣ್ಣು ತೆರೆಯುತ್ತವೆ. ಮರಿಗಳು ಮೊದಲ ೯೦-೧೦೦ ದಿನಗಳವರೆಗೆ ಮೊಲೆ ಹಾಲು ಕುಡಿಯುತ್ತವೆ. ನಂತರ ಮಾಂಸ ತಿನ್ನಲು ಆರಂಭಿಸುತ್ತವೆ. ತಾಯಿಯ ದಕ್ಷತೆಯಲ್ಲಿ ತರಬೇತಿ ಹೊಂದಿ ೧೬ ತಿಂಗಳಲ್ಲಿ ತಾಯಿಯ ಗಾತ್ರ ಬೆಳೆದು, ಆಮೇಲೆ ತಾವೇ ಸ್ವತಃ ಬೇಟೆಯಾಡಲು ಪ್ರಾರಂಭಿಸುತ್ತವೆ. ಸುಮಾರು ೩೦ ತಿಂಗಳಲ್ಲಿ ಪೂರ್ಣ ಶಾರೀರಿಕ ಬೆಳವಣಿಗೆ ಹೊಂದಿ ಪ್ರಾಯಕ್ಕೆ ಬರುತ್ತವೆ. ಮರಿಗಳ ಪೋಷಣೆಯಲ್ಲಿ ಇನ್ನಿತರ ಗಂಡುಹೆಣ್ಣುಗಳು ಪಾಲುಗೊಳ್ಳುವುದಿಲ್ಲ. ತಾಯಿಯು ಸತ್ತರೆ ಆಹಾರವಿಲ್ಲದೆ ಮರಿಗಳೂ ಸಾಯುತ್ತವೆ. ೬ ತಿಂಗಳವರೆಗೆ ಗಂಡು ಮತ್ತು ಹೆಣ್ಣು ಮರಿಗಳು ಒಂದೇ ಉದ್ದ ಮತ್ತು ತೂಕದವಾಗಿರುತ್ತವೆ. ನಂತರ ಗಂಡು ವೇಗವಾಗಿ ಬೆಳೆಯಲು ತೊಡಗುತ್ತದೆ. ೧೮ ತಿಂಗಳವರೆಗೆ ಈ ಬೆಳವಣಿಗೆ ತೀವ್ರಗತಿಯಲ್ಲಿದ್ದು ನಂತರ ೪ ವರ್ಷಕ್ಕೆ ನಿಲ್ಲುತ್ತದೆ. ಹುಟ್ಟಿದ ಮರಿಗಳು ಯಾವುದಾದರೂ ಕಾರಣದಿಂದ ಸತ್ತರೆ ತಾಯಿಯು ಪುನಃ ತೀವ್ರ ಬೆದೆಗೆ ಬರುತ್ತದೆ. ಬೆದೆಯಲ್ಲಿದ್ದ ಹೆಣ್ಣು ಸಂಭೋಗ ನಡೆಸದೆ ಹೋದರೆ, ಆ ಹೆಣ್ಣು ೪೫-೫೫ ದಿನಗಳ ನಂತರ ಮತ್ತೆ ಬೆದೆಗೆ ಬರುತ್ತದೆ. ಹೆಣ್ಣು ೨-೩ ವರ್ಷಗಳ ಅಂತರದಲ್ಲಿ ಮರಿಗಳನ್ನು ಹಾಕುತ್ತದೆ ಎಂದು ತಿಳಿದಿದೆ. ಒಂದು ಹೆಣ್ಣು ಹುಲಿಯು ತನ್ನ ಜೀವಮಾನದಲ್ಲಿ ಸರಾಸರಿ ವರ್ಷಕ್ಕೆ ಒಂದು ಮರಿಯನ್ನು ಯಶಸ್ವಿಯಾಗಿ ಬೆಳೆಸಿದರೆ ಅದರ ಸಂತಾನಾಭಿವೃದ್ಧಿಯು ಸಮಾಧಾನವಾಗಿದೆ ಎಂದು ಹೇಳಬಹುದು. ಒಮ್ಮೊಮ್ಮೆ ಒಂದು ಗುಂಪಿನಲ್ಲಿ ಒಂದು ಗಂಡು ಬೆಳೆದ ಎರಡು ಹೆಣ್ಣು ಮತ್ತು ೨-೩ ಮರಿಗಳನ್ನು ಕಾಣಬಹುದು. ವಾಡಿಕೆಯಾಗಿ ಗಂಡುಹೆಣ್ಣಿನ ಪ್ರಮಾಣ ೪೫ : ೫೫ ಎಂದು ತಿಳಿದಿದೆ. ಜೀವಾವಧಿ ೨೦-೨೫ ವರ್ಷಗಳು. ಭಾರತದ ಹುಲಿಯು ಬಂಧನದಲ್ಲಿ ೨೬ ವರ್ಷ ಬದುಕಿದ ದಾಖಲೆ ಇದೆ.

ಸ್ವಭಾವ : ವಾಡಿಕೆಯಾಗಿ ಹುಲಿಗಳಿಗೆ ಶಾಖವನ್ನು ಸಹಿಸಲಾಗುವುದಿಲ್ಲ. ನೀರು, ನೆರಳು, ತೇವವಿದ್ದ ಜಾಗವನ್ನು ಆರಿಸುತ್ತವೆ. ಚೆನ್ನಾಗಿ ಈಜಬಲ್ಲವು. ಬೇಸಿಗೆಯಲ್ಲಿ ನೀರಿನ ಆಶ್ರಯವನ್ನು ಹೊಂದುತ್ತವೆ. ಗಿಡಮರಗಳನ್ನು ಏರುವುದಿಲ್ಲ. ಸ್ವಾಭಾವಿಕವಾಗಿ ಮನುಷ್ಯನನ್ನು ಎದುರಿಸುವುದಿಲ್ಲ ಮತ್ತು ಸಾಕಿದ ಜಾನುವಾರುಗಳನ್ನು ಎತ್ತಿಕೊಂಡು ಹೋಗುವುದಿಲ್ಲ. ಹುಲಿಯು ಶಕ್ತಿ, ವೇಗ ಮತ್ತು ಕ್ರೂರತನದ ಲಾಂಛನ. ಅದು ಮಾಂಸಮೂಳೆ ತುಂಬಿದ ಪಟ್ಟೆ ಪಟ್ಟೆ ಚರ್ಮದ ಪ್ರಾಣಿಯಲ್ಲಿ ಅರಣ್ಯದ ನಿರಂಕುಶ ಪ್ರಭು. ನಂಬಲಾರದ ಶಕ್ತಿಯ ಸಂಕೇತ. ಕಾಡಿನ ಸುಂದರ ಪ್ರಾಣಿ, ನಿಸರ್ಗದ ಲಾವಣ್ಯ. ನಿಶಾಚರಿ, ರಾತ್ರಿಯಲ್ಲಿ ಬೇಟೆಯಾಡುತ್ತದೆ. ಭಿನ್ನ ಪರಿಸರಗಳಲ್ಲಿ ನೆಲಸಿದ ಹುಲಿಗಳ ಸ್ವಭಾವದಲ್ಲಿ ಭಿನ್ನತೆಯು ಎದ್ದು ಕಾಣುತ್ತದೆ.

ಹುಲಿಗಳು ಸಾಮಾನ್ಯವಾಗಿ ಸಾಂಬಾರ್, ಬಾರಾಸಿಂಗ, ಕಾಟ, ಚಿತ್ರಲ, ಸಾಕಿದ ಆಕಳು, ಸಾಕಿದ ಎಮ್ಮೆ ಮತ್ತು ಒಂದೆರಡು ಕಾಡುಹಂದಿಗಳನ್ನು ಬೇಟೆಯಾಡುತ್ತವೆ. ಈ ಆಹಾರವು ಪ್ರಾದೇಶಿಕ ಸಸ್ಯಾಹಾರಿಗಳ ವಿಫಲತೆಯ ಮೇಲೆ ಹೆಚ್ಚು ಕಡಿಮೆ ಆಗುವುದುಂಟು. ಹುಲಿ ಕೊಲ್ಲಬೇಕೆಂದು ಪ್ರಾಣಿಗಳನ್ನು ಕೊಲ್ಲುವುದಿಲ್ಲ. ಆದರೆ ಒಂದೊಂದು ಸಲ ಅದೇ ತಾನೇ ಪ್ರಾಯಕ್ಕೆ ಬಂದ ಪ್ರಾಣಿಗಳು ತಮ್ಮ ಶಕ್ತಿ ಪ್ರದರ್ಶನಕ್ಕಾಗಿ ಹಿಂಡಿನಲ್ಲಿನ ನಾಲ್ಕಾರು ಹಸುಗಳನ್ನು ಕೊಲ್ಲಬಹುದು. ಒಂದು ಹುಲಿಯ ಅಧೀನ ಪ್ರದೇಶ ಸುಮಾರು ೪೫-೫೫ ಚದರ ಕಿಲೊ ಮೀಟರ್. ಈ ಕ್ಷೇತ್ರವನ್ನು ಅದು ಕಟ್ಟು-ನಿಟ್ಟಾಗಿ ರಕ್ಷಿಸುತ್ತದೆ. ಮಲ-ಮೂತ್ರದಿಂದ ಕ್ಷೇತ್ರದ ಗಡಿಯನ್ನು ನಿರ್ಮಿಸುತ್ತದೆ. ವಿವಿಧ ಪ್ರಾಣಿಗಳನ್ನು ಹಿಡಿಯುವ ವಿಧಾನಗಳು ಬೇರೆ ಬೇರೆಯಾಗಿವೆ. ವೇಗವಾಗಿ ಓಡುವ ಪ್ರಾಣಿಗಳನ್ನು ಬೇಟೆಯಾಡುವಾಗ ನೆಲಕ್ಕೆ ದೇಹವನ್ನು ರಬ್ಬಿ, ಅವಿತುಕೊಂಡು ಸಾವಕಾಶವಾಗಿ ಸಮೀಪಿಸಿ, ತಾಸಿಗೆ ೬೪ ಕಿ.ಮೀ. ವೇಗದಲ್ಲಿ ಒಮ್ಮೆಗೆ ಹಾರಿ ಒಂದೆರಡು ಜಿಗಿತದಲ್ಲಿ ಕೋಡುಗಳು ತಾಗದಂತೆ ಕುತ್ತಿಗೆಯ ಮೂಳೆಯನ್ನು ತನ್ನ ಮೊನಚಾದ ಕೋರೆ ಹಲ್ಲುಗಳಿಂದ ಹಿಸುಕಿ, ಹೊರಳಿಸಿ, ಕೆಡವಿ ಕೊಲ್ಲುತ್ತದೆ. ಇಲ್ಲವೆ ಗಂಟಲಿಗೆ ಬಾಯಿ ಹಾಕಿ ಅದರ ಕತ್ತಿನ ಹತ್ತಿರದ ಅಭಿಧಮನಿಯನ್ನು ಹರಿಯುತ್ತವೆ. ಇವುಗಳ ಹಿಡಿತದಲ್ಲಿ ಸಿಕ್ಕ ಪ್ರಾಣಿಗಳು ಪಾರಾಗುವುದು ಕಠಿಣ. ಆದರೆ ಒಮ್ಮೆ ಪಾರಾದ ಪ್ರಾಣಿಗಳ ಬೆನ್ನು ಹತ್ತುವುದಿಲ್ಲ. ಕೊಂದ ಪ್ರಾಣಿಯನ್ನು ಕೆಲವು ಸಲ ೧-೬ ಕಿ.ಮೀ. ದೂರದವರೆಗೆ ಜಗ್ಗಿ ಎಳೆದೊಯ್ಯುತ್ತವೆ. ಸಣ್ಣ ಪ್ರಾಣಿಯಾದರೆ ಬಾಯಲ್ಲಿ ಹಿಡಿದ ಎತ್ತಿ ಬೇರೆ ಕಡೆಗೆ ಸಾಗಿಸುತ್ತವೆ.

ನರಭಕ್ಷಕಗಳಾದ ಅಥವಾ ಸಾಕಿದ ಜಾನುವಾರುಗಳನ್ನು ಎತ್ತುವ ತಂದೆತಾಯಿಗಳ ಸಹವಾಸದಲ್ಲಿ ಬೆಳೆದ ಮರಿಗಳು. ಇಲ್ಲವೆ ಗಾಯಗೊಂಡು ಅಥವಾ ಮುಪ್ಪಾಗಿ ಬೇಟೆಯಾಡಲು ಅಸಮರ್ಥವಾದ ಹುಲಿಗಳು, ಹೂಳದೆ ಇದ್ದ ಅಥವಾ ಅರೆಮರೆಯಾಗಿ ಹೂಳಿದ ಮೃತ ದೇಹವನ್ನು ತಿಂದು ಮನುಷ್ಯನ ಮಾಂಸದ ರುಚಿ ನೋಡಿದ ಹುಲಿಗಳು ಸಾಮಾನ್ಯವಾಗಿ ನರಭಕ್ಷಕಗಳಾಗುವುದುಂಟು. ದಕ್ಷಿಣಭಾರತದಲ್ಲಿ ನರಭಕ್ಷಕ ಹುಲಿಗಳ ಉಪಟಳವಿಲ್ಲ. ಆದರೆ ಕೆಲವು ಸಲ ಆಹಾರದ ಅಭಾವವಾಗಿ ಸಾಕಿದ ಜಾನುವಾರಗಳ ಮೇಲೆ ಬೀಳುತ್ತವೆ.

‘ಜಿಮ್ ಕಾರ್ಬೆಟ್’ ಅವರು ಕುಮಾವು ಬೆಟ್ಟದಲ್ಲಿ ಗುಂಡಿಕ್ಕಿ ಕೊಂದ ಚಂಪಾವತ್ತ ಬಳಿಯ ನರಭಕ್ಷಕಿ ೪೩೪ ಜನರನ್ನು ಆಹುತಿ ತೆಗೆದುಕೊಂಡಿತ್ತು. ಒಮ್ಮೆ ನರಭಕ್ಷಕವಾದ ಹುಲಿಯು ನರಭಕ್ಷಕವಾಗಿಯೇ ಉಳಿಯುತ್ತದೆಂದು ಹೇಳಲು ಬರುವುದಿಲ್ಲ.

ನಿಸರ್ಗದಲ್ಲಿ ಹುಲಿ, ಸಿಂಹಗಳು ಲೈಂಗಿಕವಾಗಿ ಕೂಡುವುದಿಲ್ಲ. ಮೃಗಾಲಯಗಳಲ್ಲಿ ಹುಲಿ, ಸಿಂಹಗಳನ್ನು ಒತ್ತಟ್ಟಿಗಿಟ್ಟು ಮರಿಗಳನ್ನು ಪಡೆದದ್ದುಂಟು. ಗಂಡು ಹುಲಿ ಮತ್ತು ಹೆಣ್ಣು ಸಿಂಹದಿಂದ ಹುಟ್ಟಿದ ಸಂತತಿಗೆ ಟಾಯಗಾನ್ (Tigan)ಎಂದು, ಗಂಡು ಸಿಂಹ ಮತ್ತು ಹೆಣ್ಣು ಹುಲಿಯಿಂದಾದ ಸಂತತಿಗೆ ಲಾಯಗನ್ (Ligan) ಎಂದು ಹೆಸರಿಡಲಾಗಿದೆ. ಆದರೆ ಈ ಸಂಕರಣಗಳಿಂದ ಹುಟ್ಟಿದ ಮರಿಗಳು ಮುಂದೆ ಬದುಕಿದ ದಾಖಲೆಗಳಿಲ್ಲ.

೧೯ನೆಯ ಶತಮಾನದ ಅಂತ್ಯದಲ್ಲಿ ಮತ್ತು ೨೦ನೆಯ ಶತಮಾನದ ಆದಿಯಲ್ಲಿ ಬ್ರಿಟಿಷ್ ಅಧಿಕಾರಿಗಳು ಮತ್ತು ನಮ್ಮ ದೇಶದ ಸಂಸ್ಥಾನಿಕರು ಹುಲಿಗಳನ್ನು ಅಮಾನುಷವಾಗಿ ಬೇಟೆಯಾಡಿದರು. ಒಬ್ಬೊಬ್ಬರೂ ೪,೦೦೦ಕ್ಕೂ ಮೇಲ್ಪಟ್ಟು ಹುಲಿಗಳನ್ನು ಕೊಂದ ಉದಾಹರಣೆಗಳಿವೆ.

ಹುಲಿಗಳ ಆವಾಸದ ಮೇಲಾದ ಹಾವಳಿ, ನೆಲೆಯ ಅತಿಕ್ರಮಣ ಮತ್ತು ವಿಪರೀತ ಕೊಲೆ, ಅವುಗಳ ಕ್ಷೀಣತೆಗೆ ಕಾರಣ ಎಂದು ನಂಬಲಾಗಿದೆ. ನಾಶದ ಹಾದಿಯಲ್ಲಿದ್ದ ಈ ಸುಂದರ ಹುಲಿಗಳ ಸಂರಕ್ಷಣೆ ಮತ್ತು ವಂಶಾಭಿವೃದ್ಧಿಗಾಗಿ ಭಾರತವು ೧೯೭೩ ರಿಂದ “ಪ್ರೊಜೆಕ್ಟ್ ಟಾಯ್ಗರ್” (Tiger Project) ಎಂಬ ಬೃಹತ್ ಯೋಜನೆಯನ್ನು ಜಾಗತಿಕ ವನ್ಯಜೀವಿಗಳ ನಿಧಿ ಸಂಸ್ಥೆಯ ಸಹಾಯದಿಂದ ಹಮ್ಮಿಕೊಂಡು ೧೫ ಅರಣ್ಯ ಕ್ಷೇತ್ರಗಳನ್ನು ಕಾಯ್ದಿರಿಸಿದೆ. ಅಲ್ಲದೆ ಇಡೀ ಭಾರತದಲ್ಲಿ ಹುಲಿಗಳ ಬೇಟೆಯನ್ನು ನಿಷೇಧಿಸಿದೆ. ಕರ್ನಾಟಕದ, ಬಂಡೀಪುರ ಅರಣ್ಯ ಪ್ರದೇಶವೂ ಕಾಯ್ದಿಟ್ಟ ಕ್ಷೇತ್ರಗಳಲ್ಲಿ ಒಂದು. ಇದರ ವಿಸ್ತಾರ ೬೯೦ ಚ.ಕಿ.ಮೀ. ಈ ರೀತಿ ಕಾಯ್ದಿಟ್ಟ ಕ್ಷೇತ್ರಗಳಲ್ಲಿ ಹುಲಿಗಳ ಸಂಖ್ಯೆಯು ನಿಧಾನವಾಗಿ ಸುಧಾರಿಸುತ್ತಿರುವುದು ಶುಭ ಚಿಹ್ನೆ.

ಹುಲಿಯು ಭಾರತದ ರಾಷ್ಟ್ರೀಯ ಮೃಗ.

—-

ಗಣ : ಕಾರ್ನಿವೋರ
ಕುಟುಂಬ : ಮಸ್ಟೆಲಿಡೀ
ಉದಾ : ನೀರು ನಾಯಿ (
Otter)
ಶಾಸ್ತ್ರೀಯ ನಾಮ : ಲುಟ್ರ ಲುಟ್ರ (
Lutra lutra)

471_69_PP_KUH

ವಿತರಣೆ ಮತ್ತು ಆವಾಸ : ಇದು ಮಾಂಸಾಹಾರಿ, ಜಲವಾಸಿ ಸಸ್ತನಿ. ದಕ್ಷಿಣ ಭಾರತದ ನದಿಗಳು ಮತ್ತು ಜಲಾಶಯಗಳಲ್ಲಿ ಕಂಡು ಬರುತ್ತದೆ. ನದಿ ನೀರಿನ ಪ್ರಾಣಿಗಳು. ಹೊಳೆ, ಹಳ್ಳ, ಕೆರೆಕುಂಟೆಗಳ ಸಮೀಪದಲ್ಲಿ ವಾಸಿಸುತ್ತವೆ.

ಗಾತ್ರ : ತಲೆ ಮತ್ತು ದೇಹ (೬೦ ಸೆಂ.ಮೀ) ೨ ಅಡಿ ಯಿಂದ (೮೦ ಸೆಂ.ಈ) ೨ ಅಡಿ ೮ ಅಂಗುಲ ಉದ್ದ. ಬಾಲ (೪೫ ಸೆಂ.ಮೀ) ೧ ೧/೨ ಅಡಿ ಉದ್ದ ಇರುತ್ತದೆ. ಉತ್ತರ ಭಾರತದಲ್ಲಿರುವ ಪ್ರಾಣಿಗಳಿಗೆ ಹೋಲಿಸಿದರೆ, ದಕ್ಷಿಣ ಭಾರತದ ನೀರುನಾಯಿಯು ಗಾತ್ರದಲ್ಲಿ ಸಣ್ಣದು.

ಆಹಾರ : ಸಾಮಾನ್ಯವಾಗಿ ಮತ್ಸ್ಯಾಹಾರಿ (ಪ್ರಧಾನ ಆಹಾರ ಮೀನು), ಆದರೆ ಪಕ್ಷಿ, ಕಪ್ಪೆ, ಕ್ರಿಮಿ ಕೀಟಗಳು, ನೀರಾಮೆ, ಸೀಗಡಿ ಮುಂತಾದುವನ್ನು ತಿನ್ನುತ್ತದೆ. ಕೆಲವೊಮ್ಮೆ ಸಣ್ಣಪುಟ್ಟ ಸಸ್ತನಿಗಳನ್ನು ಬೇಟೆ ಯಾಡುವುದಿದೆ. ಇದು ಕೆಲವು ಬಾರಿ ಮೀನು ಹುಡುಕುತ್ತಾ ಸಮುದ್ರಕ್ಕೂ ನುಗ್ಗುವುದುಂಟು. ಹಿಡಿದ ಮೀನುಗಳನ್ನು ದಡಕ್ಕೆ ತಂದು ತಿನ್ನುತ್ತದೆ. ಸಾಕಿದ ನೀರುನಾಯಿಗಳು ಹಣ್ಣುಕಾಯಿ, ತರಕಾರಿಯನ್ನು ತಿನ್ನುತ್ತವೆ.

ಲಕ್ಷಣಗಳು : ನೀರುನಾಯಿ ಹೆಚ್ಚು ಕಡಿಮೆ ಮುಂಗುಸಿಯಂತೆ ಕಾಣುತ್ತದೆ. ದೇಹವು ಜಲವಾಸಕ್ಕೆ ಹೊಂದಿಕೊಂಡಿದೆ. ದೇಹವು ಉದ್ದವಾಗಿದ್ದು, ಕಾಲುಗಳು ಗಿಡ್ಡವಾಗಿವೆ. ಬಾಲವು ಬುಡದಲ್ಲಿ ಗಡುತರವಾಗಿದ್ದು ತುದಿಯ ಕಡೆಗೆ ಕ್ರಮೇಣ ಚೂಪಾಗುತ್ತದೆ. ಬಾಲವು ಚುಕ್ಕಾಣಿಯಂತೆ ವರ್ತಿಸಿ ಈಜುವುದಕ್ಕೆ ನೆರವಾಗುತ್ತದೆ. ದೇಹ ಉರುಳೆಯಂತಿದ್ದು ಸುಲಭವಾಗಿ ಬಳಕುತ್ತದೆ. ತಲೆ ಅಗಲವಾಗಿದ್ದು ಚಪ್ಪಟೆಯಾಗಿದೆ. ಅಗಲವಾದ ಮೂತಿ ಇದೆ. ಮೂತಿಯಲ್ಲಿ ಬಿರುಸಾದ ಮೀಸೆಗಳಿವೆ. ಹೊರ ಕಿವಿಗಳು ಚಿಕ್ಕವು. ದೇಹದ ಮೇಲೆ ಒತ್ತಾಗಿ ಹರಡಿದ ನಯವಾದ ಜಲವಿರೋಧಿ ತುಪ್ಪುಳದ ಹೊದಿಕೆ ಇದೆ. ಕಾಲುಬೆರಳುಗಳ ನಡುವೆ ಜಾಲವುಂಟು. ಮುಂಗಾಲುಗಳು ಹಿಂಗಾಲುಗಳಿಗಿಂತ ಚಿಕ್ಕವು. ನಾಸಿಕ ರಂಧ್ರಗಳಿಗೆ ಕವಾಟಗಳಿವೆ. ನೀರಿನಲ್ಲಿ ಮುಳುಗಿದಾಗ ನೀರು ಮೂಗಿನ ಮೂಲಕ ಒಳನುಗ್ಗುವುದನ್ನು ಕವಾಟಗಳು ತಡೆಯುತ್ತವೆ. ಮೂತಿಯ ತುದಿಯಲ್ಲಿರುವ ಮೀಸೆಗಳು ಸಂವೇದನಾಂಗಗಳಂತೆ ಆಹಾರ ಜೀವಿಗಳನ್ನು ಪತ್ತೆ ಹಚ್ಚುವುದರಲ್ಲಿ ನೆರವಾಗುತ್ತವೆ. ಇದರ ಅಂಗಾಲುಗಳೂ ಕೂಡ ಆಹಾರ ಜೀವಿಯನ್ನು ಪತ್ತೆಹಚ್ಚಲು ನೆರವಾಗುವಂತೆ ಸೂಕ್ಷ್ಮಗ್ರಾಹಿಗಳಾಗಿವೆ. ನದಿಯ ತಳದ ಉಸುಕಿನಲ್ಲಿ ಹುದುಗಿರಬಹುದಾದ ಮೀನುಗಳನ್ನು ಸುಲಭವಾಗಿ ಪತ್ತೆ ಹಚ್ಚಬಲ್ಲವು. ಹಿಡಿದ ಮೀನುಗಳನ್ನು ಕಳಚಿಕೊಂಡು ಹೋಗದಂತೆ ದೃಢವಾಗಿ ಹಿಡಿಯಲು ಅನುಕೂಲವಾಗುವಂತೆ ಹಲ್ಲುಗಳಲ್ಲಿ ಚೂಪಾದ ಹಲವಾರು ಮೊನೆಗಳುಂಟು. ಇವೆಲ್ಲವೂ ನೀರಿನಲ್ಲಿ ಈಜಲು ಮತ್ತು ಜಲವಾಸಕ್ಕೆ ಉತ್ತಮ ರೀತಿಯಲ್ಲಿ ಹೊಂದಿ ಕೊಂಡಿವೆ. ಕೂದಲುಗಳು ತಳದಲ್ಲಿ ಬೂದು ಮತ್ತು ತುದಿಯಲ್ಲಿ ಕಂದುಬಣ್ಣವಾಗಿವೆ. ಕುತ್ತಿಗೆ ಬಳಿಯ ಮತ್ತು ಹೊಟ್ಟೆಯ ತಳಭಾಗದ ಕೂದಲುಗಳು ಮಾಸಲು ಕಂದು. ನೀರುನಾಯಿಗಳಿಗೆ ಒಟ್ಟು ೩೬ ಹಲ್ಲುಗಳಿವೆ.

ದಂತ ಸೂತ್ರ ೩, ೧, ೪, ೧ / ೩, ೧, ೩, ೨

ಸಂತಾನಾಭಿವೃದ್ಧಿ : ವಸಂತ ಋತುವಿನಲ್ಲಿ ಹೆಣ್ಣುಗಂಡುಗಳು ಕೂಡುತ್ತವೆ. ಗರ್ಭಾವಧಿ ೨ ತಿಂಗಳು. ಒಂದು ಸೂಲದಲ್ಲಿ ೨ ರಿಂದ ೩ ಮರಿಗಳು ಹುಟ್ಟುತ್ತವೆ. ಹುಟ್ಟಿದ ಮರಿಗಳು ಕುರುಡು ಮತ್ತು ಅವಕ್ಕೆ ಹಲ್ಲುಗಳಿರುವುದಿಲ್ಲ. ಹುಟ್ಟಿದ ೩೫ ದಿನಗಳ ನಂತರ ಕಣ್ಣು ತೆರೆಯುತ್ತವೆ. ಮರಿಗಳು ೮ ವಾರ ನೀರಿನ ಅಂಚಿನಲ್ಲಿನ ಗೂಡಿನಲ್ಲಿ ಉಳಿದಿರುತ್ತವೆ. ತಾಯಿ ಮರಿಗಳನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತದೆ. ಸಾಮಾನ್ಯವಾಗಿ ಒಂದು ವರ್ಷ ವಯಸ್ಸಾಗುವವರೆಗೆ ಅಥವಾ ಪುನಃ ಗರ್ಭಧರಿಸುವವರೆಗೆ ಮರಿಗಳು ತಾಯಿಯನ್ನು ಹಿಂಬಾಲಿಸುತ್ತವೆ. ತಾಯಿ ಅವಕ್ಕೆ ಈಜುವುದು ಬೇಟೆಯಾಡುವುದು ಮುಂತಾದ ಚಟುವಟಿಕೆಗಳನ್ನು ಕಲಿಸುತ್ತದೆ. ಇವು ವರ್ಷಕ್ಕೆ ಒಮ್ಮೆ ಮಾತ್ರ ಮರಿಹಾಕುತ್ತವೆ. ಜೀವಾವಧಿ ೧೫ ವರ್ಷಗಳು. ಪ್ರಾಣಿ ಸಂಗ್ರಹಾಲಯದಲ್ಲಿ ಸುಮಾರು ೨೦ ವರ್ಷಗಳು ಬದುಕಿದ ದಾಖಲೆಗಳಿವೆ.

ಸ್ವಭಾವ : ಇವು ಈಜುವುದಕ್ಕೆ ಮತ್ತು ನೀರಿನಲ್ಲಿ ಮುಳುಗುವುದಕ್ಕೆ ಪರಿಣಿತಿ ಪಡೆದ ಪ್ರಾಣಿಗಳು. ನೀರಿನ ಜೀವನಕ್ಕೆ ಅತಿಯಾಗಿ ಹೊಂದಿಕೊಂಡು ತಾಸು ತಾಸುಗಳವರೆಗೆ ನೀರಿನಲ್ಲಿ ಆಡುತ್ತವೆ. ನದಿಯ ದಂಡೆಗಳನ್ನು ಕೊರೆದು ಬಿಲ ರಚಿಸಿ ಅಲ್ಲಿ ಮಲಗುತ್ತವೆ. ವಿಶ್ರಮಿಸಿಕೊಳ್ಳುತ್ತವೆ ಮತ್ತು ಮರಿಗಳನ್ನು ಹಾಕಿ ಪೋಷಿಸುತ್ತವೆ. ಒಣ ಸಸ್ಯಗಳನ್ನು ಸಂಗ್ರಹಿಸಿ ತಂದು ಬಿಲಗಳ ಗೋಡೆಗಳಿಗೆ ಮೆತ್ತುವ ಪರಿಪಾಠವೂ ಉಂಟು. ಆಹಾರವನ್ನು ಇವು ಒಂಟಿಯಾಗಿ ಮತ್ತು ಕೆಲವೊಮ್ಮೆ ಜೊತೆಯಾಗಿ ಬೇಟೆಯಾಡುತ್ತವೆ.

472_69_PP_KUH

ಕರ್ನಾಟಕದ ಕೊಡಗಿನಲ್ಲಿ ದೊರಕುವ ಮತ್ತೊಂದು ಮುಖ್ಯ ನೀರುನಾಯಿ ಪ್ರಭೇದ ಇಯೊನಿಕ್ಸ್‌ಸಿನೇರೆ (Aonyx Cinerae) ಇದನ್ನು ನಖಗಳಿಲ್ಲದ ನೀರುನಾಯಿ (Clawless otter) ಎಂದು ಕರೆಯುತ್ತಾರೆ. ಇದರಲ್ಲಿ ನಖಗಳು ಹೆಚ್ಚು ನಶಿಸಿವೆ. ಇದು ಲುಟ್ರಲುಟ್ರ ಪ್ರಭೇದಕ್ಕಿಂತ ಚಿಕ್ಕದು. ದೇಹ ಮತ್ತು ತಲೆಯ ಉದ್ದ (೪೫ ಸೆಂ.ಮೀ) ೧ ೧/೨ ಅಡಿಯಿಂದ (೬೦ ಸೆಂ.ಮೀ) ೨ ಅಡಿ ಬಲ (೨೪ ಸೆಂ.ಮೀ) ೩ ೩/೪ ಅಡಿಯಿಂದ (೩೦ ಸೆಂ.ಮೀ) ೧ ಅಡಿ. ತೂಕ ೩ ರಿಂದ ೬ ಕೆ.ಜಿ. ಇದರ ದೇಹದ ಬಣ್ಣ ಬೂದು ಅಥವಾ ಕಪ್ಪು ಕಂದು. ಕತ್ತು ಬಿಳುಪು. ಹೊಳೆಹಳ್ಳಗಳ ಬದಿಯಲ್ಲಿ ವಾಸಿಸುತ್ತದೆ. ಏಡಿ, ಬಸವನ ಹುಳುಗಳು ಇದರ ಮುಖ್ಯ ಆಹಾರ. ಅಷ್ಟಾಗಿ ಮೀನುಗಳನ್ನು ಹಿಡಯುವುದಿಲ್ಲ.

ಭಾರತದ ಕೆಲವು ಭಾಗಗಳಲ್ಲಿ ನೀರುನಾಯಿಗಳನ್ನು ಮೀನುಗಳನ್ನು ಹಿಡಿಯಲು ಬಳಸುತ್ತಾರೆ.

—-

ಗಣ : ಕಾರ್ನಿವೋರ
ಕುಟುಂಬ : ಮಸ್ಟೆಲಿಡೀ (
Mustelidae)
ಉದಾ : ಹಳದಿ ಕಂಠದ ಮಾರ್ಟಿನ್‌(ಮುರ್ರನಾಯಿ) (Yellow Throated Morten)
ಶಾಸ್ತ್ರೀಯ ನಾಮ :
(ನೀಲಗಿರಿ ಮಾರ್ಟಿನ್‌) ಮಾರ್ಟಿಸ್‌ಗ್ವಾಲ್‌ಕೆನ್ಸಿ (The Nilgiri Morten, (Martes gwalkinsi)

473_69_PP_KUH

ವಿತರಣೆ ಮತ್ತು ಆವಾಸ : ಕರ್ನಾಟಕವೂ ಒಳಗೊಂಡಂತೆ ಭಾರತ, ಮುಖ್ಯವಾಗಿ ನೀಲಗಿರಿ, ದಕ್ಷಿಣ ಕೊಡಗು ಮತ್ತು ತಿರುವಾಂಕೂರಿನಲ್ಲಿ ಕಂಡುಬರುತ್ತದೆ.

ಗಾತ್ರ : ತಲೆ ಮತ್ತು ದೇಹ (೪೫ ರಿಂದ ೬೦ ಸೆಂ.ಮೀ) ೧ ೧/೨ ಯಿಂದ ೨ ಅಡಿ. ಬಾಲ ೩೮-೪೭ ಸೆಂ.ಮೀ.

ಆಹಾರ : ಹೂವು, ಹಣ್ಣು, ಹೂವುಗಳ ಮಧು, ಸಣ್ಣಪುಟ್ಟ ಪ್ರಾಣಿಗಳು. ಮರಗಳ ಮೇಲಿರುವ ಅಳಿಲುಗಳು, ಪಕ್ಷಿಗಳು ಮತ್ತು ಅವುಗಳ ಮೊಟ್ಟೆಮರಿಗಳು. ನೆಲದ ಮೇಲೆ ಇಲಿಚುಂಡಿಲಿಗಳು, ಮೊಲಗಳು, ಫೆಸಂಟ ಹಕ್ಕಿ ಮತ್ತು ಕವುಜಲಹಕ್ಕಿ. ಅರಕ್ಷಿತ ದೊಡ್ಡ ಪ್ರಾಣಿಗಳಾದ ಜಿಂಕೆಗಳನ್ನು ಆಕ್ರಮಿಸುತ್ತವೆ. ಹಸಿವೆ ಹೆಚ್ಚಾದಾಗ ಸತ್ತ ಪ್ರಾಣಿಗಳು, ಹಾವುಗಳು, ಹಲ್ಲಿಗಳು ಮತ್ತು ಕೀಟಗಳನ್ನೂ ತಿನ್ನುತ್ತವೆ.

ಲಕ್ಷಣಗಳು : ದೇಹದ ಮುಕ್ಕಾಲು ಭಾಗ ಉದ್ದ ಬಾಲವಿರುವ ಬಂಡೆ ಮಾರ್ಟಿನ್‌ಗಿಂತ ದೊಡ್ಡದಾದ ಪ್ರಾಣಿ. ಋತುಗಳನ್ನನುಸರಿಸಿ ಮತ್ತು ಪ್ರಾಣಿಗಳನ್ನನುಸರಿಸಿ ಬಣ್ಣ ಬದಲಾಗುತ್ತದೆ. ಆದರೂ ಅದರ ಬಣ್ಣ ಏಕರೀತಿಯಾಗಿ ಬಂಡೆ ಮಾರ್ಟಿನ್‌ನಂತೆ ಕಂದು ಅಥವಾ ಬೂದುಕಂದು ಬಣ್ಣವಿರುವುದಿಲ್ಲ. ಬೆನ್ನಿನ ಭಾಗದ ತುಪ್ಪುಳು ಗಾಢಕಂದು, ಕಪ್ಪು ಮತ್ತು ಹಳದಿ ಮಿಶ್ರಿತವಾಗಿರುತ್ತದೆ. ಕತ್ತಿನ ಹಳದಿ ಬಣ್ಣವು ಗಾಢ ಬಣ್ಣದ ಪಟ್ಟೆಗಳಿಂದ ಎದ್ದು ಕಾಣುತ್ತದೆ. ಅದರಿಂದ ಹಳದಿ ಕಂಠದ ಮಾರ್ಟಿನ್‌ಎಂದೇ ಹೆಸರಾಗಿದೆ. ಆದರೆ ಇದರ ಬೆನ್ನಿನ ಬಣ್ಣ ಅಷ್ಟಾಗಿ ಎದ್ದು ಕಾಣುವುದಿಲ್ಲ. ಅದು ತಲೆಯಿಂದ ಹಿಂದಿನ ತುದಿಯವರೆಗೂ ಗಾಢ ಕಂದು. ಮುಂಭಾಗ ಹೆಚ್ಚಾಗಿ ಕೆಂಪು.

ಸಂತಾನಾಭಿವೃದ್ಧಿ : ಹೆಚ್ಚು ತಿಳಿಯದು. ಪ್ರಾಯಶಃ ಬಂಡೆ ಮಾರ್ಟಿನ್‌ಗಳಂತೆ ಫೆಬ್ರವರಿಯಲ್ಲಿ ಗಂಡು ಮತ್ತು ಹೆಣ್ಣು ಕೂಡಬಹುದು. ಏಪ್ರೀಲ್‌ಕೊನೆಗೆ ಮರಿಗಳು ಹುಟ್ಟುತ್ತವೆ. ಮರದ ಪೊಟರೆ ಅಥವಾ ಬಂಡೆಗಳ ನಡುವಿನ ಸಂದು ಮರಿಗಳನ್ನು ಬೆಳೆಸುವ ಗೂಡಾಗಬಹುದು. ಅದನ್ನು ಹುಲ್ಲು ಅಥವಾ ಒಣ ಎಲೆಗಳಿಂದ ಮೃದುವಾಗಿಸುತ್ತವೆ. ಮರಿಗಳು ಹುಟ್ಟಿದಾಗ ಕುರುಡು, ಬೆತ್ತಲೆ ಮತ್ತು ಅಸಹಾಯಕ ಸ್ಥಿತಿಯಲ್ಲಿರುತ್ತವೆ. ತುಸು ಬೆಳೆದ ಮೇಲೆ ತಾಯಿಯೊಡನೆ ಆಹಾರ ಬೇಟೆಗೆ ಹೋಗುತ್ತವೆ. ತಮ್ಮನ್ನು ತಾವು ನೋಡಿಕೊಳ್ಳುವಂತಾದ ಮೇಲೆ ತಮ್ಮ ದಾರಿ ತಾವು ಹಿಡಿಯುತ್ತವೆ.

ಸ್ವಭಾವ : ವಿವಿಧ ರೀತಿಯ ಪರಿಸರಗಳಿಗೆ ಹೊಂದಿಕೊಳ್ಳಬಲ್ಲ ಸಾಮರ್ಥ್ಯ ಗಮನಾರ್ಹ. ಇವು ಬೆಟ್ಟ ಗುಡ್ಡ ಕಾಡಿಗೆ ಸೀಮಿತವಾಗಿ ಉಳಿಯುತ್ತವೆ. ಸಾಮಾನ್ಯವಾಗಿ ಸಮುದ್ರ ಮಟ್ಟದಿಂದ ೩,೦೦೦ ಅಡಿ (೯೧೫ ಮಿ.) ಗಿಂತ ಕೆಳಗೆ ಕಾಣಬರುವುದಿಲ್ಲ. ಇವು ನಿರಂತರ ಚಟುವಟಿಕೆಯ ಪ್ರಾಣಿಗಳು. ರಾತ್ರಿ-ಹಗಲು ಎರಡೂ ಹೊತ್ತು ಬೇಟೆಯಾಡುತ್ತವೆ. ನೆಲಕ್ಕಿಂತ ಸಾಮಾನ್ಯವಾಗಿ ಮರಗಳ ನಡುವೆ ಬೇಟೆಯಾಡುವುದು ಹೆಚ್ಚು. ಋತುಮಾಸದಲ್ಲಿ ಜೋಡಿ ಅಥವಾ ತಾಯಿ ಕೆಲವು ಮರಗಳೊಂದಿಗೆ ಒಡಗೂಡಿ ಬೇಟೆಯಾಡುತ್ತದೆ. ಸಾಮಾನ್ಯವಾಗಿ ಒಂಟಿ ಜೀವಿಗಳು ಮತ್ತು ಒಂಟಿಯಾಗಿಯೇ ಬೇಟೆಯಾಡುತ್ತವೆ. ಮರಗಳ ತುದಿಯಲ್ಲಿದ್ದಾಗ ತುಂಬಾ ಚೂಟಿಯಾಗಿರುತ್ತವೆ. ರೆಂಬೆಯಿಂದ ರೆಂಬೆಗೆ ಹಾರುತ್ತಾ ಅಥವಾ ಅವುಗಳಿಗೆ ನೇತು ಬಿದ್ದು ಸಾಗುತ್ತವೆ. ಅವುಗಳ ಚಟುವಟಿಕೆಯ ವೇಗ ಮತ್ತು ಆಕ್ರಮಿಸುವಾಗಿನ ಧೈರ್ಯ ಎಂತಹ ಪ್ರಾಣಿಯನ್ನಾದರೂ ಅಂಜುವಂತೆ ಮಾಡುತ್ತದೆ. ಅವು ಸಣ್ಣ ಪ್ರಾಣಿಗೆ ಭಯಂಕರ ಶತ್ರುಗಳು. ದೂದಿ ಹತ್ತಿಮರದ ಕಡು ಕೆಂಪು ಹೂವುಗಳೊಳಕ್ಕೆ ತಮ್ಮ ಮೂತಿಯನ್ನು ತೂರಿಸಿ ಅಲ್ಲಿರುವ ಅಧಿಕ ಮಧುವನ್ನು ಹೀರುತ್ತವೆ. ಈ ರೀತಿಯಲ್ಲಿ ಅವು ಪರಾಗಾರ್ಪಣೆಗೆ ನೆರವಾಗುತ್ತವೆ. ಈ ಮಾರ್ಟಿನ್‌ಗಳು ಮಾನವ ವಸತಿಗಳಿಂದ ದೂರ ಇರುತ್ತವೆ. ಇವುಗಳನ್ನು ಸುಲಭವಾಗಿ ಸಾಕಬಹುದು ಮತ್ತು ಹೇಳಿದಂತೆ ಕೇಳಲು ಕಲಿಸಬಹುದು.