ಗಣ : ಆರ್ಟಿಯೊಡ್ಯಾಕ್ಟೈಲ
ಕುಟುಂಬ : ಬೋವಿಡೀ
ಉದಾ: ಕಾಡು ಕುರಿ
(Sheep)
ಶಾಸ್ತ್ರೀಯ ನಾಮ:

ವಿತರಣೆ ಮತ್ತು ಆವಾಸ: ನಮ್ಮಲ್ಲಿ ಕಾಡುಗಳಲ್ಲಿ ಕಾಡುಕುರುಬ ಎಂಬ ಬುಡಕಟ್ಟು ಜನರು ಇರುವುದರಿಂದ, ಅವರ ಉದ್ಯೋಗ ಕುರಿ ಸಾಕುವುದು ಮತ್ತು ಅದರ ಉತ್ಪನ್ನಗಳನ್ನು ಮಾರಿ ಜೀವಿಸುವುದರಿಂದ ಕುರಿಗಳ ವಿಷಯ ಇಲ್ಲಿ ಸೇರಿಸಲಾಗಿದೆ. ಕುರಿಗಳು ಬಹುಪಾಲು ಸಾಕು ಕುರಿಗಳು. ಒಂದು ಕಾಲಕ್ಕೆ ಇವು ಮಧ್ಯ ಏಷ್ಯಾದಲ್ಲಿ ಹೆಚ್ಚಾಗಿ ಜೀವಿಸುತ್ತಿದ್ದವು. ಕೆಲವು ಏಷ್ಯಾ ರಾಷ್ಟ್ರಗಳಲ್ಲಿ (ಉದಾ : ಲಡಕ್, ಟಿಬೆಟ್, ಮಂಗೋಲಿಯ ಮರು ಭೂಮಿಗಳಲ್ಲಿ) ಈಗಲೂ ವಾಸಿಸುತ್ತವೆ. ಮೈಸೂರು ಪ್ರಾಂತ್ಯದಲ್ಲಿಯೂ ಇವೆ.

ಗಾತ್ರ : ಎತ್ತರ ೪ ಅಡಿ. ತೂಕ ೩೦೦ ಪೌಂಡ್.

ಆಹಾರ : ಸಸ್ಯಾಹಾರಿ. ಹುಲ್ಲು, ಎಲೆ, ಗಿಡಗಂಟೆಗಳು ಮುಂತಾದುವನ್ನು ತಿನ್ನುತ್ತವೆ.

ಲಕ್ಷಣ : ಉದ್ದ ಕಾಲು, ಬಡಕಲು ದೇಹ, ಟೊಳ್ಳುಕೊಂಬು, ಆಡುಗಳನ್ನು ಹೆಚ್ಚಾಗಿ ಹೋಲುತ್ತವೆ. ಗಂಡು ಮತ್ತು ಹೆಣ್ಣುಗಳೆರಡರಲ್ಲಿಯೂ ಕೊಂಬುಗಳಿರಬಹುದಾದರೂ ಹೆಣ್ಣಿನದು ಚಿಕ್ಕವು. ಕೆಲವು ಪ್ರಭೇದದಲ್ಲಿ ಹೆಣ್ಣಿನಲ್ಲಿ ಕೊಂಬುಗಳಿರುವುದಿಲ್ಲ. ಕೊಂಬು ಹೊರಮುಖವಾಗಿ ಬಾಗಿ ಸುರಳಿ ಸುತ್ತಿರುತ್ತದೆ. ಗಂಡಿನ ಗದ್ದದ ಬಳಿ ಆಡಿಗಿರುವಂತೆ ಗದ್ದವಿಲ್ಲ. ಬಾಲ ಮೋಟು ಅಥವಾ ಮೊಟಕು. ಮೇಲು ದವಡೆಯ ಹಲ್ಲುಗಳು ಚಿಕ್ಕವು. ಮೈಬಣ್ಣ ಬಿಳಿ, ಮಾಸಲು ಕಂದು, ಬೂದು, ಬಂಗಾರದ ಬಣ್ಣ ಮತ್ತು ಕಪ್ಪು, ಗಂಡು ಕುರಿಯನ್ನು ಟಗರು ಎನ್ನುತ್ತಾರೆ. ಟಗರಿನ ತಲೆಯ ಮೇಲೆ ಎರಡು ಕೊಂಬುಗಳಿರುತ್ತವೆ. ಕಾಲಿನ ಮಧ್ಯದ ಎರಡು ಬೆರಳುಗಳ ನಡೆಉವೆ ಗ್ರಂಥಿಯೊಂದಿದ್ದು ಅದರಿಂದ ಕಟುವಾಸನೆಯ ದ್ರವ ಒಸರುತ್ತದೆ. ಅದನ್ನು ಕುರಿಗಳ ಸಿಂಡು ವಾಸನೆ ಎನ್ನುತ್ತಾರೆ. ಈ ಸಿಂಡುವಾಸನೆ ಕುರಿಗಳು ಹೋದಡೆಯಲ್ಲೆಲ್ಲಾ ಹರಡುವುದರಿಂದ ಅವು ತಮ್ಮ ಹಿಂಡಿನ ಪ್ರಾಣಿಗಳು ಹೋದುದನ್ನು ಗುರುತಿಸಿ ಅನುಸರಿಸಬಲ್ಲುವು. ಇವುಗಳಿಗೆ ತುಂಬಾ ತೀಕ್ಷ್ಣ (ಪಟುವಾದ) ಘ್ರಾಣ ಶಕ್ತಿ ಇದೆ. ಉಣ್ಣೆ ಇದರ ವಿಶೇಷ ಲಕ್ಷಣ.

ಸಂತಾನಾಭಿವೃದ್ಧಿ : ವರ್ಷಕ್ಕೆ ಒಮ್ಮೆ ಬೆದೆಗೆ ಬರುತ್ತವೆಡ. ಗಭಾವಧಿ ೫ರಿಂದ ೬ ತಿಂಗಳು. ಒಮ್ಮೆಗೆ ೧ರಿಂದ ೩ ಮರಿ ಹಾಕುತ್ತವೆ. ಹುಟ್ಟಿದ ಮರಿಗಳ ಕಣ್ಣುಗಳು ತೆರೆದಿರುತ್ತವೆ. ತುಪ್ಪುಳು ಹೊದಿಕೆ ಇರುತ್ತದೆ, ಮತ್ತು ಓಡಾಡಬಲ್ಲವು.

ಸ್ವಭಾವ : ಮಂದ ಬುದ್ಧಿಗೆ ಹೆಸರಾದ ಪ್ರಾಣಿ. ಅದು ನಾಣ್ಣುಡಿಯಾಗಿದೆ. ಬುದ್ಧಿ ಇಲ್ಲದೆ ವರ್ತಿಸುವವರನ್ನು ಕುರಿಗಳೆಂದೇ ಕರೆಯುತ್ತೇವೆ. ಅವಕ್ಕೆ ವಿವೇಚನಾ ಶಕ್ತಿ ಇಲ್ಲವೇ ಇಲ್ಲ. ಕಣ್ಣು ಮುಚ್ಚಿಕೊಂಡು ಎಂಬಂತೆ ಮುಂದಿನ ಕುರಿಯನ್ನು ಅನುಸರಿಸುತ್ತವೆ. ಇದರ ಉಣ್ಣೆ, ಹಾಲು, ಮಾಂಸ ಉಪಯುಕ್ತ ಉತ್ಪನ್ನಗಳು. ರುಚಿಯಾದ ಮಾಂಸಕ್ಕೆ ಮಂಡ್ಯ ಬಳಿಯ ಬನ್ನೂರು ಕುರಿ ಹೆಸರುವಾಸಿಯಾಗಿದೆ ಕತ್ತಿರಸಿದಂತೆ ಉಣ್ಣೆ ಬೆಳೆಯುವುದರಿಂದ ಉಣ್ಣೆಗಾಗಿಯೂ ಸಾಕುತ್ತಾರೆ. ಉಣ್ಣೆಗೆ ೨ ಸಾರಿ ಉಣ್ಣೆಯನ್ನು ಕತ್ತರಿಸಬಹುದು. ಕಾಡು ಜೀವಿಗಳಾಗಿದ್ದಾಗ ಅವು ಮಂದೆಗಳಲ್ಲಿ ವಾಸಿಸುತ್ತದ್ದವು ಮತ್ತು ವಾಸಿಸುತ್ತವೆ. ಇವುಗಳ ಹಿಕ್ಕೆ ಅತ್ಯಂತ ಉತ್ಕೃಷ್ಟವಾದ ಗೊಬ್ಬರ (ಕುರಿಗೊಬ್ಬರ) ಎಂದು ಹೆಸರಾಗಿದೆ. ಟಗರುಗಳನ್ನು ಆಟ, ಟಗರುಗಳ ಕಾಳಗಕ್ಕೂ ಸಾಕುವುದುಂಟು. ಅನೇಕ ತಳಿಗಳಿವೆ, ದಖನಿ, ನೆಲ್ಲೂರು ಜಾತಿ, ಮಂಡ್ಯ, ಹಾಸನ, ಬಳ್ಳಾರಿ. ಕುರಿಯ ಹಾಲಿಗೆ ಔಷಧ ಗುಣವಿದೆಯೆಂದು ಆಯುರ್ವೇದದಲ್ಲಿ ಹೇಳುತ್ತಾರೆ.

—- 

ಗಣ : ಆರ್ಟಿಯೊಡ್ಯಾಕ್ಟೈಲ
ಕುಟುಂಬ : ಬೋವಿಡೀ
ಉದಾ : ನೀಲ್ಗಾಯ್ ಅಥವಾ ನೀಲಿಗೂಳಿ
(Nilgai or Blue Bull)
ಶಾಸ್ತ್ರೀಯ ನಾಮ : ಬೇಸೆಲೆಫಸ್ ಟ್ರ್ಯಾಗೊಕೆಮಿಲಸ್ (Baselaphus tragocamelus)

480_69_PP_KUH

ವಿವರಣೆ ಮತ್ತು ಆವಾಸ : ಭಾರತದಲ್ಲಿ ಹಿಮಾಲಯದ ತಪ್ಪಲಿನಿಂದ ಕರ್ನಾಟಕದವರೆಗೂ ಹರಡಿರುವ ದ್ವೀಪಕಲ್ಪದಲ್ಲಿ ಮಾತ್ರ ಕಂಡುಬರುವ ಪ್ರಾಣಿ. ಪೂರ್ವದಲ್ಲಿ ಬಂಗಾಳದಲ್ಲಿ ಅಥವಾ ಅಸ್ಸಾಮ್‌ನಲ್ಲಿಯಾಗಲೀ, ದಕ್ಷಿಣದಲ್ಲಿ ಕೇರಳದಲ್ಲಿಯಾಗಲೀ ಇವು (ದೊರಕುವುದಿಲ್ಲ) ಕಂಡುಬರುವುದಿಲ್ಲ. ಇವು ಸಾಮಾನ್ಯವಾಗಿ ಸ್ಟೇಪಿಸ್ ಹುಲ್ಲುಗಾವಲು ಮತ್ತು ಕುರುಚಲು ಗಿಡದಿಂದ ಕೂಡಿರುವ ಪ್ರದೇಶದಲ್ಲಿ ಕೆಲವು ಸಾರಿ ಅರಣ್ಯ ಪ್ರದೇಶಗಳಲ್ಲಿಯೂ ಕಾಣಬರುತ್ತವೆ.

ಗಾತ್ರ : ಗಂಟು ೪ ೧/೪ ಅಡಿಯಿಂದ ೪ ೩/೪ ಅಡಿಯವರೆಗೆ ಇತ್ತರ, ಕೆಲವೊಮ್ಮೆ ಇನ್ನೂ ಎತ್ತರಕ್ಕೆ ಬೆಳೆಯಬಹುದು. ಗಂಡಿಗೆ ಹೋಲಿಸಿದಾಗ ಹೆಣ್ಣುಗಳೂ ತುಂಬಾ ಸಣ್ಣವು. ಕೊಂಬುಗಳು ೫ ಅಂಗುಲ ಉದ್ದ, ಅಪರೂಪವಾಗಿ ಒಂದು ಅಡಿಯಷ್ಟು ಉದ್ದ ಬೆಳೆಯಬಹುದು.

ಆಹಾರ : ಎಲಚಿ, ನೆಲ್ಲಿ ಮುಂತಾದ ಗಿಡಮರಗಳ ಎಳೆಚಿಗುರು, ನೆಲದ ಮೇಲೆ ಬಿದ್ದಿರುವ ಇಪ್ಪೆ ಹೂಗಳು ಇವುಗಳಿಗೆ ಬಲು ಅಚ್ಚು ಮೆಚ್ಚು ಹೊಸದಾಗಿ ಉದುರಿದ ಹೂಗಳು ತುಂಬಾ ಇಷ್ಟ. ಜಿಜಿಪಸ್ ಗಿಡದ ಹಣ್ಣುಗಳನ್ನು ಮತ್ತು ಎಲೆಗಳನ್ನು ತಿನ್ನುತ್ತವೆ. ಕಬ್ಬುಗಳನ್ನೂ ತಿನ್ನುತ್ತವೆ.

ಲಕ್ಷಣಗಳು : ಈ ಪ್ರಾಣಿಗಳು ವಿಕಾರವಾಗಿವೆ. ಎತ್ತರವಾದ ಸ್ಕಂದ ಮತ್ತು ತಗ್ಗಾದ ಪೃಷ್ಟ ಭಾಗಗಳನ್ನೊಳಗೊಂಡ ರಚನೆಯಲ್ಲಿ ಸ್ವಲ್ಪ ಕುದುರೆಗಳಂತೆ ಕಂಡುಬರುತ್ತವೆ. ಮುಖ ಕುದುರೆಯ ಮುಖದಂತಿದೆ. ತಲೆ ಉದ್ದವಾಗಿ ತುದಿ ಚೂಪಾಗಿದೆ. ದೇಹ ಹಸುವಿನಂತಿದೆ. ಕತ್ತು ಗಿಡ್ಡ, ದೇಹದ ಹಿಂಭಾಗ ಡುಬ್ಬಿನಿಂದ ಹಿಂದಕ್ಕೆ ಹೋದಂತೆ ಇಳಿಯುತ್ತಾ ಹೋಗುತ್ತದೆ. ದೇಹದ ಮುಂಬಾಗ ಹಿಂಭಾಗಕ್ಕಿಂತ ಹೆಚ್ಚು ಮಾಂಸಲವಾಗಿ ದಪ್ಪವಾಗಿ ಕಾಣುತ್ತದೆ. ಗಂಡು ನೀಲಿಗೂಳಿಗಳಲ್ಲಿ ಮಾತ್ರ ಕೊಂಬುಗಳಿವೆ. ಕೊಂಬುಗಳು ಬಲವಾದ ಬುಡ ಮತ್ತು ಚೂಪಾದ ತುದಿಯನ್ನು ಹೊಂದಿವೆ. ಬುಡವು ತ್ರಿಕೋನಾಕಾರವಾಗಿದ್ದು ತುದಿತು ವೃತ್ತಾಕಾರವಾಗಿದೆ. ಕೊಂಬುಗಳು ಚೂಪಾಗಿಯೂ ಚಿಕ್ಕದಾಗಿಯೂ ಇವೆ. ಕೊಂಬುಗಳಿಗೆ ಉಂಗುರಗಳಿಲ್ಲ. ತೂಕ ಮತ್ತು ಗಾತ್ರದಲ್ಲಿ ಗಂಡು ಹೆಣ್ಣಿಗಿಂತ ದೊಡ್ಡದು. ಗಂಡನ್ನು ನೀಲ್ಗಾವೋ ಎನ್ನುತ್ತಾರೆ. ಗಂಡಿನ ಕತ್ತಿನ ಮೇಲ್ಭಾಗದಲ್ಲಿ ಕೇಸರದಂತೆ ಮತ್ತು ಕತ್ತಿನ ಕೆಳಭಾಗದಲ್ಲಿ ಕುಚ್ಚಿನಂತಿರುವ ಕೇಶರಾಶಿ ಇದೆ. ಕೆನ್ನೆಗಳ ಮೇಲೆ ಎರಡು ಬಿಳಿಯ ಚುಕ್ಕೆಗಳಿವೆ. ದೇಹದ ಬಣ್ಣ ಕಪ್ಪು ಮಿಶ್ರಿತ ಬೂದು. ಹೆಣ್ಣನ್ನು ನೀಲ್ಗಾಯ್ ಎಂದು ಕರೆಯುತ್ತಾರೆ. ಹೆಣ್ಣಿನ ಬಣ್ಣ ಬಿಳಿ ಮಿಶ್ರಿತ ಕಂದು. ಗಂಡು ಮತ್ತು ಹೆಣ್ಣುಗಳೆರಡರಲ್ಲೂ ಕತ್ತಿನ ಕೆಳಭಾಗ ಮತ್ತು ಗೊರಸಿನ ಮೇಲ್ಭಾಗ ಬಿಳಿಯ ಕೂದಲಿನಿಂದ ಆವರಿಸಲ್ಪಟ್ಟಿವೆ. ಮುಂಗಾಲುಗಳು ಹಿಂಗಾಲುಗಳಿಗಿಂತ ಉದ್ದನಾಗಿವೆ.

ಕುದುರೆಗಳಲ್ಲಿ ಗೊರಸಿನ ಮೇಲ್ಗಡೆಯ ಮೇಲ್ಭಾಗದಲ್ಲಿ ಕೂದಲು ಕುಚ್ಚು ಕುಚ್ಚಾಗಿ ಬೆಳೆಯುವ ಸ್ಥಳವನ್ನು ಚುಂಚುಕಾಲು ಎಂತಲೂ, ಮತ್ತು ಆ ಕೂದಲನ್ನು ಕುಚ್ಚು ಕೂದಲು ಎಂದು ಕರೆಯುತ್ತಾರೆ. ಚುಂಚು ಕಾಲಿನ ಕೆಳಗೆ ಒಂದು ಬಿಳಿಯ ಉಂಗುರವಿದೆ. ಗುಟಿಗಳು, ಕೆನ್ನೆ ಕಿವಿಯ ಒಳಭಾಗ ಮತ್ತು ಬಾಲದ ಒಳ ಭಾಗಗಳು ಬಿಳುಪು. ಕರುಗಳು ಮತ್ತು ಹೆಣ್ಣುಗಳ ಬಣ್ಣ ಕಂದು ಹಳದಿ. ಗಂಡು ಮತ್ತು ಹೆಣ್ಣುಗಳೆರಡರಲ್ಲಿಯೂ ಕಪ್ಪಾದ ಆಯಾಲಗಳಿವೆ. ಆದರೆ ಗಂಡುಗಳಲ್ಲಿ ಕತ್ತಿನ ಬಳಿ ಸೆಟೆದುನಿಂತ ಕಪ್ಪು ಕೂದಲ ಗೊಂಚಲಿದೆ.

ಸಂತಾನಾಭಿವೃದ್ಧಿ : ಗಂಡು ಮತ್ತು ಹೆಣ್ಣುಗಳನ್ನು ಅವುಗಳ ಆಕಾರದಿಂದ ಗುರುತಿಸಬಹುದು. ಸಂಭೋಗ ಕಾಲ ಮಾರ್ಚ್-ಏಪ್ರೀಲ್ ತಿಂಗಳು. ಪ್ರಣಾಯಾಚಾರಣೆಯ ಸಮಯದಲ್ಲಿ ಗಂಡು ತನ್ನ ಕತ್ತನ್ನು ನೀಳವಾಗಿ ಚಾಚಿ ಹೆಣ್ಣಿನ ಹಿಂಭಾಗದ ಮೇಲೆ ತಲೆಯನ್ನು ಇಡುತ್ತದೆ. ವರ್ಷದ ಎಲ್ಲಾ ಕಾಲದಲ್ಲಿಯೂ ಕರುಗಳು ಹುಟ್ಟಬಹುದು. ಗರ್ಭಾವಧಿ ೮-೯ ತಿಂಗಳು. ಒಮ್ಮೆಗೆ ಒಂದು ಅಥವಾ ಎರಡು ಕರುಗಳನ್ನು ಈಯುತ್ತವೆ. ಮೊದಲ ಗರ್ಭಧಾರಣೆಯಲ್ಲಿ ಒಂದೇ ಒಂದು ಕರುವನ್ನು ಮತ್ತು ಅನಂತರದ ಗರ್ಭಧಾರಣೆಗಳಲ್ಲಿ ಎರಡು ಕರುಗಳನ್ನು ಹಾಕುವುದು ಸಾಮಾನ್ಯ. ಹೆಣ್ಣು ೨೫ ತಿಂಗಳಿಗೆ ಲಿಂಗ ಪ್ರೌಢತನ ಗಳಿಸಿಕೊಳ್ಳುತ್ತದೆ. ಇವು ೧೫ ವರ್ಷಗಳವರೆಗೆ ಬದುಕಿರುತ್ತವೆ.

ಸ್ವಭಾವ : ಇವು ಕಾಡಿನಿಂದ ದೂರ ಉಳಿಯುತ್ತವೆ. ಸಾಮಾನ್ಯವಾಗಿ ಗುಡ್ಡಗಳು, ಹೆಚ್ಚು ದಟ್ಟವಲ್ಲದ ಕಾಡುಗಳು ಅಥವಾ ಹುಲ್ಲು ಮತ್ತು ಕುರುಚಲು ಗಿಡಗಳನ್ನೊಳಗೊಂಡ ಬಯಲು ಸೀಮೆಗಳಲ್ಲಿ ವಾಸಿಸುತ್ತವೆ. ಇವು ಕೃಷಿ ಮಾಡಿದ ಜಮೀನುಗಳಿಗೆ ಸುಲಭವಾಗಿ ನುಗ್ಗಿ ಪೈರನ್ನು ನಾಶಪಡಿಸುತ್ತವೆ. ಪ್ರಾತಃಕಾಲ ಮತ್ತು ಸಾಯಂಕಾಲ ಇವು ಮೇಯುವ ಕಾಲ. ಬಿಸಿಲಿಗೆ ಅಷ್ಟಾಗಿ ಹೆದರುವುದಿಲ್ಲ. ಆದರೆ ವಿಪರೀತ ಶೆಖೆಯಲ್ಲಿ ನೆರಳನ್ನು ಆಶ್ರಯಿಸುತ್ತವೆ. ಇವು ಹುಲ್ಲನ್ನು ಮೇಯುತ್ತವೆ ಮತ್ತು ಸೊಪ್ಪು ಸೆದೆಗಳನ್ನು ತಿನ್ನುತ್ತವೆ. ಇವು ೨-೩ ದಿನಗಳಿಗೊಮ್ಮೆ ನೀರು ಕುಡಿಯುತ್ತವೆ. ಬೇಸಿಗೆಯಲ್ಲಿಯೂ ಕ್ರಮವಾಗಿ ನೀರು ಕುಡಿಯುವುದಿಲ್ಲ. ಇವು ಎಚ್ಚರಿಕೆಯ ಧ್ವನಿಯಾಗಿ ಗುಟುರು ಹಾಕುತ್ತವೆ. ಈ ಧ್ವನಿಯಿಂದ ಗುಂಪಿನ ಇತರ ಪ್ರಾಣಿಗಳು ಬೆದರಿ ಚದುರಿ ಹೋಗುತ್ತವೆ. ಓಡುವಾಗ ತಲೆಯನ್ನು ಮೇಲೆತ್ತಿ ಆಕಾಶ ನೋಡುತ್ತಿರುವಂತೆ ಕಾಣುತ್ತವೆ. ಶ್ರವಣ ಶಕ್ತಿ ಮಂದ, ಆದರೆ ಕಣ್ಣು ಮತ್ತು ಮೂಗು ಚುರುಕಾಗಿವೆ. ಶತ್ರುಗಳಿಂದ ತಪ್ಪಿಸಿಕೊಳ್ಳಲು ವೇಗವಾಗಿ ಓಡುತ್ತವೆ. ಜಿಂಕೆಗಳಂತೆ ಹಿಕ್ಕೆ ಹಾಕಲು ಒಂದೇ ಸ್ಥಳಕ್ಕೆ ಬರುವ ಪ್ರವೃತ್ತಿಯನ್ನು ತೋರುತ್ತವೆ. ಇವು ಗೋವುಗಳಿಗೆ ಹತ್ತಿರದ ಸಂಬಂಧಿಗಳೆಂಬ ಭಾವನೆಯಿಂದ ಹಳ್ಳಿ ಮತ್ತು ಗುಡ್ಡಗಾಡಿನ ಜನ ಅವುಗಳನ್ನು ಪೂಜನೀಯವಾಗಿ ಕಾಣುತ್ತಾರೆ, ಮತ್ತು ಅವನ್ನು ಕೊಲ್ಲುವುದಿಲ್ಲ.

ಇದು ಸಂಘಜೀವಿ. ಒಂದು ಹಿಂಡಿನಲ್ಲಿ ೪-೧೨ ನೀಲ್ಗಾಯ್‌ಗಳಿರುತ್ತವೆ. ಚೆನ್ನಾಗಿ ಬೆಳೆದ ಬಲವಾದ ಗಂಡು ಹಿಂಡಿನ ಮುಖಂಡನಂತೆ ವರ್ತಿಸುತ್ತದೆ. ಹಸುಗಳು, ಕರುಗಳು ಮತ್ತು ಎಳೆಯ ಗೂಳಿಗಳು ಒಟ್ಟಿಗೆ ಇರುತ್ತವೆ. ವಯಸ್ಸಾದ ಗೂಳಿಗಳು ಇತರೆ ನೀಲ್ಗಾಯ್‌ಗಳ ಜೊತೆ ಸೇರದೆ ತಮ್ಮಷ್ಟಕ್ಕೇ ತಾವೇ ಇರುತ್ತವೆ.

ಇದರ ಮುಖ್ಯ ವೈರಿಯೆಂದರೆ ಚಿರತೆ ಮತ್ತು ಹುಲಿ.

—-

ಗಣ : ಆರ್ಟಿಯೊಡ್ಯಾಕ್ಟೈಲ
ಕುಟುಂಬ : ಬೋವಿಡೀ
ಉದಾ : ಕೃಷ್ಣಮೃಗ ಅಥವಾ ಭಾರತದ ಚಿಗರಿ (ಸಾರಂಗ)
(Black Buck or Indian Antelope)
ಶಾಸ್ತ್ರೀಯ ನಾಮ : ಆಂಟೆಲೋಪ್‌ಸರ್ವಿಕ್ಯಾಪ್ರ (Antelope cervicapra)

481_69_PP_KUH

ವಿತರಣೆ ಮತ್ತು ಆವಾಸ : ಇದು ಹಿಂದೆ ಭಾರತದ ಎಲ್ಲಾ ಬಯಲು ಪ್ರದೇಶಗಳಲ್ಲಿಯೂ ದೊರಕುತ್ತಿತ್ತು. ಆದರೆ ಈಗ ಇವುಗಳ ಸಂಖ್ಯೆ ಕ್ಷೀಣಿಸಿದೆ. ಇವು ಬೆಟ್ಟಗುಡ್ಡಗಳ ಕಾಡುಗಳಿಂದ ದೂರವಿರುತ್ತವೆ. ಇವುಗಳ ಸಂಖ್ಯೆ ಕ್ಷೀಣಿಸುತ್ತಿರುವುದರಿಂದ ಇವುಗಳನ್ನು ಸಂರಕ್ಷಿಸಲು ಕರ್ನಾಟಕದ ರಾಣೆಬೆನ್ನೂರಿನ ಬಳಿ ಒಂದು ಪ್ರಾಣಿಧಾಮವನ್ನು ಮಾಡಿದ್ದಾರೆ.

ಗಾತ್ರ : ಮಧ್ಯಮ ಗಾತ್ರದವು. ಪೂರ್ಣ ಬೆಳೆದ ಚಿಗರಿ-ಭುಜದ ಬಳಿ ೮೦ ಸೆಂ.ಮೀ. (೩೮ ಅಂಗುಲ) ಎತ್ತರ. ತಲೆ ಮತ್ತು ದೇಹದ ಉದ್ದ ೪ ರಿಂದ ೪ ೧/೨ ಅಡಿ. ಬಾಲದ ಉದ್ದ ೧ ೧/೨ ಅಡಿ. ತೂಕ ಸುಮಾರು ೪೦ ಕೆ.ಜಿ. ಹೆಣ್ಣು-ಗಂಡಿಗಿಂತ ಚಿಕ್ಕದು.

ಆಹಾರ : ಹುಲ್ಲು ಮತ್ತು ವಿವಿಧ ರೀತಿಯ ಕೃಷಿ ಬೆಳೆಗಳನ್ನು ತಿನ್ನುತ್ತವೆ. ಗಿಡಮರಗಳ ಚಿಗುರು ಹಣ್ಣುಹಂಪಲುಗಳೂ ಇದರ ಆಹಾರ. ಇದು ನೀರು ಕುಡಿಯುವುದು ಕಡಿಮೆ.

ಲಕ್ಷಣಗಳು : ಚಿಗರಿ ಜಾತಿಯಲ್ಲಿ ಇದು ಭಾರತದ ಏಕೈಕ ಪ್ರತಿನಿಧಿ. ಇವುಗಳ ಗಮನಾರ್ಹವಾದ ಮೈ ಬಣ್ಣ ಮತ್ತು ಸುಂದರವಾದ ನುಲಿದ ಕೊಂಬುಗಳು ಇವಕ್ಕೆ ಒಂದು ರೀತಿಯ ಸೊಬಗನ್ನು ಕೊಡುತ್ತವೆ. ಮೈಬಣ್ಣದ ವೈವಿಧ್ಯತೆಯಲ್ಲಿ ಗಂಡುಹೆಣ್ಣುಗಳು ವ್ಯತ್ಯಾಸ ತೋರುತ್ತವೆ. ಗಂಡುಗಳು ಕಡುಕಂದಾಗಿದ್ದರೆ, ಹೆಣ್ಣುಗಳು ಹಲದಿ ಮಿಶ್ರಿತ ಕಂದು. ಇವು ಕೋಮಲವಾದ ಚೆಲವು ಪ್ರಾಣಿಗಳು. ಈ ರೀತಿಯ ಸೊಬಗು ಮತ್ತಾವ ಪ್ರಾಣಿಯಲ್ಲಿಯೂ ಕಂಡುಬರುವುದಿಲ್ಲ. ಭಾರತಕ್ಕೆ ಸೀಮಿತವಾದ ಈ ಚಿಗರಿಗಳು ಅವುಗಳ ಜಾತಿಯಲ್ಲಿಯೇ ಅತ್ಯಂತ ಸುಂದರ ವಾದವುಗಳು. ತುಪ್ಪುಳ ಬಣ್ಣ ಅವು ಚಿಕ್ಕವಾಗಿದ್ದಾಗ ಹಳದಿ ಛಾಯೆಯ ಕಂದು ಬಣ್ಣವಾಗಿರುತ್ತದೆ. ಇವಕ್ಕೆ ಮೂರು ವರ್ಷವಾಗುತ್ತಿದ್ದಂತೆಯೇ ತುಪ್ಪುಳ ಬಣ್ಣ ಕಪ್ಪಾಗಲು ತಿರುಗುತ್ತದೆ. ಆದ್ದರಿಂದ ಈ ಚಿಗರಿಗೆ ಕೃಷ್ಣಮೃಗವೆಂಬ ಹೆಸರು. ಗಂಡು ಮತ್ತು ಹೆಣ್ಣು ಎರಡರಲ್ಲಿಯೂ ಎದೆ, ಕಾಲುಗಳ ಒಳಭಾಗ, ಪಕ್ಕದ ಅಂಚು, ಕಿವಿಯ ಒಳಮಗ್ಗಲು, ಮುಸುಡಿ, ಕಣ್ಣಿನ ಸುತ್ತ, ಬಾಲದ ಬುಡ ಬಿಳಿ. ದಕ್ಷಿಣ ಭಾರತದಲ್ಲಿ ಪ್ರಬುದ್ಧ ಚಿಗರಿ ಸಾಮಾನ್ಯವಾಗಿ ಬೇಸಿಗೆಯಲ್ಲಿ ಅಥವಾ ಬಿಸಿವಾತಾವರಣದಲ್ಲಿ ಇದರ ಬಣ್ಣ ಮಾಸುತ್ತದೆ ಮತ್ತು ಮಳೆಗಾಲದಲ್ಲಿ ಇದರ ಮಕ್‌ಮಲ್‌ ಹೊಳಪು ಹೆಚ್ಚುತ್ತದೆ.

482_69_PP_KUH

ಗಂಡುಗಳಿಗೆ ಕಣ್ಣುಗಳ ಕೆಳಗೆ ಗ್ರಂಥಿಗಳಿವೆ ಮದವೇರಿದಾಗ ಈ ಗ್ರಂಥಿಗಳು ಅಗಲವಾಗಿ ಅವುಗಳಿಂದ ವಾಸನೆಯ ದ್ರವ ಒಸರುತ್ತದೆ. ೩೮ ರಿಮದ ೫೫ ಸೆಂ.ಮೀ. ಉದ್ದವಿರುವ ಕೊಂಬುಗಳಿಗೆ ೩ ರಿಂದ ೫ ನುಲಿಕೆಗಳು ಇದ್ದು, ಉಂಗುರಗಳಿವೆ. ತುದಿಯಲ್ಲಿ ಉಂಗುರಗಳಿಲ್ಲ. ತುದಿಗಳು ಚೂಪಾಗಿವೆ. ಕೊಂಬುಗಳು ವರ್ಷಕ್ಕೂ ಬೆಳೆಯುತ್ತವೆ. ಒಂದು ಸಾರಿ ಮುರಿದರೆ ಮತ್ತೆ ಮರಳಿ ಬೆಳೆಯುವುದಿಲ್ಲ. ಕರುಗಳ ಕೊಂಬು ನುಲಿದಿರುವುದಿಲ್ಲ. ಎರಡನೆಯ ವರ್ಷದಲ್ಲಿ ನುಲಿಯುವುದಕ್ಕೆ ಆರಂಭವಾಗಿ ಮೂರನೆ ವರ್ಷಕ್ಕೆ ಸಂಪೂರ್ಣವಾಗುತ್ತದೆ. ಹೆಣ್ಣುಗಳಲ್ಲಿಯೂ ಕೊಂಬುಗಳಿರುವ ಚಿಗರಿಗಳಿವೆ. ಆದರೆ ಅವುಗಳು ಕಾಣುವುದು ಅಪರೂಪ.

ಇದಕ್ಕೆ ಕುರಿಯ ಮೂತಿಯಂತಿರುವ ಕಿರಿದಾದ ಮುತಿ ಇದೆ. ಬಾಲ ಮೋಟು. ಗೊರಸುಗಳು ನವಿರಾಗಿವೆ ಮತ್ತು ಚೂಪಾಗಿವೆ. ಕಿವಿಗಳು ದೊಡ್ಡವು ಮತ್ತು ಚಲಿಸಬಲ್ಲವು. ಕುತ್ತಿಗೆ ಉದ್ದವಿದೆ. ಗಂಡುಗಳಿಗೆ ಶಾಶ್ವತ ಕೊಂಬುಗಳಿವೆ. ಹೆಣ್ಣುಗಳಲ್ಲಿ ಕೊಂಬುಗಳು ಸಾಮಾನ್ಯವಾಗಿ ಇಲ್ಲ. ಕೊಂಬುಗಳ ಬಣ್ಣ ಕಪ್ಪು. ಹೆಣ್ಣಿನಲ್ಲಿ ಕೆಚ್ಚಲಿನಲ್ಲಿ ಎರಡು ಮೊಲೆಗಳಿವೆ.

ಸಂತಾನಾಭಿವೃದ್ಧಿ : ಸಂತಾನಾಭಿವೃದ್ಧಿಯ ಬಗ್ಗೆ ಹೆಚ್ಚು ತಿಳಿಯದು. ಹೆಣ್ಣು ಚಿಗರಿಗಳು ೧೯ ರಿಂದ ೨೩ ತಿಂಗಳಲ್ಲಿ ಲಿಂಗ ಪ್ರೌಢತನ ಪಡೆಯುತ್ತವೆ. ಇವು ಎಲ್ಲಾ ಋತುಗಳಲ್ಲಿಯೂ ಮರಿಹಾಕುತ್ತವೆ. ಆದರೆ ಗಂಡುಗಳು ಏಪ್ರೀಲ್-ಮೇ ತಿಂಗಳಲ್ಲಿ ಮದವೇರುತ್ತವೆ. ಹೆಣ್ಣಿಗಾಗಿ ಗಂಡುಗಳ ನಡುವೆ ಕಾದಾಟ ನಡೆಯುತ್ತದೆ. ಗೆದ್ದ ಗಂಡು ಪ್ರಣಯಾಚರಣೆಯ ಅಂಗವಾಗಿ ಬಿಂಕದಿಂದ ನಡೆದು ಸವಾಲಾಗಿ ಗುಟುರು ಹಾಕುತ್ತವೆ. ಕೊಂಬುಗಳು ಬೆನ್ನಿನ ಮೇಲೆ ಬರುವಂತೆ ತಲೆಯನ್ನು ಎತ್ತಿ ಹಿಡಿದು, ಬಾಲವನ್ನು ಎತ್ತಿ ಹಿಡಿದು ತನ್ನ ಸುಮದರ ಶರೀರವನ್ನು ಹೆಣ್ಣುಗಳ ಮುಂದೆ ಪ್ರದರ್ಶಿಸುತ್ತದೆ. ಮುಖದ ಗ್ರಂಥಿಗಳನ್ನು ತೆರೆಯುತ್ತದೆ. ಹುಟ್ಟಿದ ಮರಿಗಳನ್ನು ತಾಯಿ ಚಿಗರಿ ಹುಲ್ಲಿನಲ್ಲಿ ಬಚ್ಚಿಟ್ಟು ಸಾಕುತ್ತದೆ. ಬೆಳೆದ ಮೇಲೆ ಅವು ಹಿಮಡನ್ನು ಸೇರುತ್ತವೆ. ಒಮದು ಸೂಲಿಗೆ ೧ ಅಥವಾ ೨ ಮರಿಗಳನ್ನು ಈಯುತ್ತವೆ. ಗರ್ಭಾವಧಿ ೧೭೦ ರಿಂದ ೧೮೦ ದಿನಗಳು. ಜೀವಾವಧಿ ೧೫ ವರ್ಷಗಳು.

ಸ್ವಭಾವ : ಭಾರತವನ್ನುಳಿದು, ಜಗತ್ತಿನ ಬೇರೆಡೆ ಈ ಜಾತಿಯ ಆಂಟಿಲೋಪ್‌ಗಳು ಇಲ್ಲ. ಗಂಡು ಆಂಟಿಲೋಪ್‌ಜಗತ್ತಿನಲ್ಲಿಯೇ ಸುಂದರವಾದ ಆಂಟಿಲೋಪ್‌ಗಳಲ್ಲಿ ಒಂದು. ಇವು ೨೦ ರಿಂದ ೩೦ ಪ್ರಾಣಿಗಳನ್ನೊಳಗೊಂಡ ಹಿಂಡುಗಳಲ್ಲಿ ಕಾಣಿಸಿಕೊಳ್ಳುತ್ತವೆ. ಹಿಂಡಿನಲ್ಲಿ ೫-೬ ಪ್ರಾಯಸ್ಥ ಗಂಡುಗಳು, ಉಳಿದವು ಹೆಣ್ಣು ಮತ್ತು ಕರುಗಳು. ಇವು ಕುರುಚಲು ಗಿಡಗಳಿರುವ ಅಥವಾ ಕೃಷಿಮಾಡಿದ ಬಯಲು ಪ್ರದೇಶಗಳಲ್ಲಿ ವಾಸಿಸುತ್ತವೆ. ವಿಸ್ತಾರವಾದ ಹುಲ್ಲುಗಾವಲುಗಳಿರುವ ಕಾಡು ಪ್ರದೇಶವನ್ನು ಪ್ರವೇಶಿಸುವುದುಂಟು. ಇವುಗಳಿಗೆ ತೊಮದರೆಯಾದಾಗ- ಕಾಡಿನಮರೆ ಹೋಗುವುದುಂಟು. ಇವು ನಡು ಹಗಲಿನವರೆಗೂ ಮತ್ತು ಮಧ್ಯಾಹ್ನದ ನಂತರವೂ ಮೇವು ಮೇಯುತ್ತಿರುತ್ತವೆ. ವಾತಾವರಣದಲ್ಲಿ ಬಿಸಿ ಏರಿದಾಗ ವಿಶ್ರಾಂತಿ ಪಡೆಯುತ್ತವೆ. ಶ್ರವಣಶಕ್ತಿ ಸಾಮಾನ್ಯ, ಘ್ರಾಣಶಕ್ತಿ ತುಸು ಉತ್ತಮ, ಆದರೆ ದೃಷ್ಟಿ ತುಂಬಾ ಉತ್ತಮ. ದೃಷ್ಟಿ ಮತ್ತು ವೇಗದ ಓಟಗಳೇ ಇವಕ್ಕೆ ರಕ್ಷಣೆ, ಅಪಾಯದ ಸೂಚನೆ ಸಿಕ್ಕಾಗ ನೆಗೆದು ಒಡಾಡುತ್ತವೆ ಮತ್ತು ನಾಗಾಲೋಟದಿಂದ ಓಡಬಲ್ಲವು. ಗಂಟೆಗೆ ೮೦ ಕಿ.ಮೀ. ವೇಗವನ್ನು ಮುಟ್ಟುವುದಲ್ಲದೆ, ಆ ವೇಗವನ್ನು ಬಹಳ ಕಾಲದವರೆಗೆ ಉಳಿಸಿಕೊಳ್ಳುತ್ತದೆ. ತುಂಬಾ ವಯಸ್ಸಾದ, ಅನುಭವಿ ಮತ್ತು ಹುಷಾರಿಯ ದಕ್ಷ ಹೆಣ್ಣುಗಳು ಹಿಮಡಿನ ಮುಖಂಡತ್ವ ವಹಿಸುತ್ತವೆ. ಇವು ೬ ಮೀ. ಉದ್ದ ಹಾರಬಲ್ಲವು ಮತ್ತು ೩ ಮೀ. ಎತ್ತರ ಜಿಗಿಯಬಲ್ಲವು. ಒಂದು ವರ್ಷದ ಮರಿಗಳ ಕೊಂಬುಗಳು ಗೂಟದಂತಿದ್ದು ನುಲಿದಿರುವುದಿಲ್ಲ. ಇವು ಚೆನ್ನಾಗಿ ಈಜಬಲ್ಲವು. ಬೇಟೆಗಾರರು ಇಷ್ಟಪಡುವ ಪ್ರಾಣಿ.

—-

ಗಣ : ಆರ್ಟಿಯೊಡ್ಯಾಕ್ಟೈಲ
ಕುಟುಂಬ : ಬೋವಿಡೀ
ಉದಾ : ಚೌಸಿಂಗ ಅಥವಾ ನಾಲ್ಕು ಕೊಂಬಿನ ಚಿಗರಿ (Chowsingha or Four horned Antelope)
ಶಾಸ್ತ್ರೀಯ ನಾಮ : ಬೆಟ್ರಾಸೀರಸ್‌ಕ್ವಾಡ್ರಿಕಾರ್ನಿಸ್‌(Tetraceras, quadricarnis)

483_69_PP_KUH

ವಿತರಣೆ ಮತ್ತು ಆವಾಸ : ಭಾರತದ ದ್ವೀಪಕಲ್ಪದ ದಟ್ಟ ಮರಗಿಡಗಳಿಲ್ಲದ, ವಿರಳವಾಗಿ ಹರಡಿರುವ ಕಾಡುಗಳಲ್ಲಿ ಕಾಣಬರುತ್ತವೆ. ಇವು ಕರಾವಳಿ ಪ್ರದೇಶಗಳಲ್ಲಿ ಇರುವುದಿಲ್ಲ. ವಿಪುಲವಾಗಿ ಹುಲ್ಲು ಬೆಳೆದ ಮೈದಾನ, ಏರಿಳಿತದ ಗುಡ್ಡಗಾಡಿನ ಪ್ರದೇಶಗಳು ಇವುಗಳ ವಾಸಸ್ಥಾನ. ಇವು ಸಾಮಾನ್ಯವಾಗಿ ನೀರಿರುವ ಬಳಿ ವಾಸಿಸುತ್ತವೆ. ಹೆಚ್ಚಾಗಿ ನೀಲಗಿರಿ ಮತ್ತು ಬೆಟ್ಟಗಳಲ್ಲಿ ಕಂಡುಬರುತ್ತವೆ.

ಗಾತ್ರ : ಗಂಡುಗಳು ಭುಜದ ಬಳಿ ೬೦ ಸೆಂ.ಮೀ. (೨ ಅಡಿ) ಎತ್ತರ, ಬಾಲ ೨೫ ಸೆಂ.ಮೀ. (೧೦ ಅಂಗುಲ) ಉದ್ದ. ತೂಕ, ೧೭ ರಿಂದ ೨೦ ಕೆ.ಜಿ.

ಆಹಾರ : ಹುಲ್ಲು ಮತ್ತು ಚಿಗುರು ಇವುಗಳ ಆಹಾರ.

ಲಕ್ಷಣಗಳು : ಮಾಸಿದ ಕೆಂಪು ಕಂದು ಮೈಬಣ್ಣ. ಕೆಳಗೆ ಬಿಳಿ. ವಯಸ್ಸಾದ ಗಂಡುಗಳು ತಿಳಿ ಹಳದಿಯಾಗಿರುತ್ತವೆ. ಕೂದಲು ಒರಟು ಮತ್ತು ಗಿಡ್ಡ. ಪ್ರತಿಕಾಲಿನ ಮುಂಭಾಗದಲ್ಲಿ ಎದ್ದು ಕಾಣುವ ಅಗಲವಾದ ಪಟ್ಟಿ ಇದೆ. ಹಿಂದಿನ ಕಾಲುಗಳ ಗೊರಸುಗಳ ನಡುವೆ ಚೆನ್ನಾಗಿ ಬೆಳೆದ ಎರಡು ಗ್ರಂಥಿಗಳಿವೆ. ಕೂದಲಿನಿಂದ ಆವೃತವಾದ ಬಾಲವು ಸಾಮಾನ್ಯವಾಗಿ ಕಾಲುಗಳ ನಡುವೆ ಇರುತ್ತದೆ. ಇವುಗಳಲ್ಲಿ ಎರಡು ಜೊತೆ ಕೊಂಬುಗಳಿವೆ. ಕೊಂಬುಗಳಲ್ಲಿ ಏಣುಗಳಿವೆ, ಆದರೆ ಉಂಗುರಗಳಿಲ್ಲ. ಒಂದು ಜೊತೆ ಕೊಂಬುಗಳು ಮತ್ತೊಂದು ಜೊತೆಯ ಮುಂದಿವೆ. ಮುಂದಿನ ಜೊತೆ ಹಿಂದಿನ ಜೊತೆಯ ಕೊಂಬುಗಳಿಗಿಂತ ಚಿಕ್ಕವು. ಕೆಲವೊಮ್ಮೆ ಕ್ಷಯಿಸಿ ಗಂಟಿನ ರೂಪದಲ್ಲಿ ಕಾಣಬಹುದು. ಮುಂದಿನ ಕೊಂಬುಗಳ ಉದ್ದ ೧ ರಿಂದ ೨.೫ ಸೆಂ.ಮೀ. ಮತ್ತು ಹಿಂದಿನ ಕೊಂಬುಗಳ ಉದ್ದ ೮ ರಿಂದ ೧೦ ಸೆಂ.ಮೀ. ಹೆಣ್ಣು ಚಿಗರಿಗಳಲ್ಲಿ ಕೊಂಬುಗಳಿಲ್ಲ.

ಸಂತಾನಾಭಿವೃದ್ಧಿ : ಹೆಣ್ಣು, ಬೇಸಿಗೆ ಮತ್ತು ಮಳೆಗಾಲದಲ್ಲಿ ಬೆದೆಗೆ ಬರುತ್ತದೆ. ಗರ್ಭಾವಧಿ ೮ ರಿಂದ ೮ ೧/೨ ತಿಂಗಳು. ಮರಿಗಳು ಜನವರಿ-ಫೆಬ್ರವರಿ ತಿಂಗಳುಗಳಲ್ಲಿ ಹುಟ್ಟುತ್ತವೆ. ಒಂದು ಸೂಲದಲ್ಲಿ ೧ ಅಥವಾ ೨ ಮರಿಗಳು ಹುಟ್ಟಬಹುದು.

ಸ್ವಭಾವ : ಲಜ್ಜೆಯ ಸ್ವಭಾವದವು. ಒಂಟಿಯಾಗಿ ಅಥವಾ ಜೊತೆಯಾಗಿ ಓಡಾಡುತ್ತವೆ. ಕೆಲವೊಮ್ಮೆ ಒಂದು ಗಂಡು ನಾಲ್ಕು-ಐದು ಹೆಣ್ಣುಗಳಿರುವ ಗುಂಪನ್ನು ಕಾಣಬಹುದು. ಮರಿಗಳನ್ನು ಪಳಗಿಸಬಹುದಾದರೂ ಅವು ಬೆಳೆದ ಮೇಲೆ ಕೆಲವೊಮ್ಮೆ ಉಗ್ರ ರೀತಿಯಲ್ಲಿ ವರ್ತಿಸಬಹುದು.

—- 

ಗಣ : ಆರ್ಟಿಯೊಡ್ಯಾಕ್ಟೈಲ
ಕುಟುಂಬ : ಬೋವಿಡೀ
ಉದಾ : ಚಿಂಕಾರ ಅಥವಾ ಭಾರತದ ಗಸೆಲ (
Indian Gazzelle)
ಶಾಸ್ತ್ರೀಯ ನಾಮ : ಗಸೆಲ ಗಸೆಲ ಬೆನ್ನಟ್ಟಿ (Gazzella gazzella bennetti)

484_69_PP_KUH

ವಿತರಣೆ ಮತ್ತು ಆವಾಸ : ವಾಯುವ್ಯ ಮತ್ತು ಮಧ್ಯ ಭಾರತದಿಂದ ದಕ್ಷಿಣಕ್ಕೆ ಮಹಾರಾಷ್ಟ್ರ ಮತ್ತು ಕರ್ನಾಟಕದವರೆಗೆ ಹರಡಿವೆ. ಎತ್ತರ ವಿಲ್ಲದ ಗುಡ್ಡಗಳಲ್ಲಿ ಮತ್ತು ಮೈದಾನಗಳಲ್ಲಿ ವಾಸಿಸುತ್ತವೆ. ತೊರೆ ಮತ್ತು ಕೊಳ್ಳಗಳಿಂದ ಬೇರ್ಪಟ್ಟ ಬಯಲು ಪ್ರದೇಶಗಳು, ಹರಡಿದ ಪೊದೆಗಳು ಮತ್ತು ತೆಳುಕಾಡುಗಳು ಇವುಗಳ ನೆಲೆ.

ಗಾತ್ರ : ಪೂರ್ಣ ಬೆಳೆದ ಒಂದು ಗಂಡು ಭುಜದ ಬಳಿ ೬೫ ಸೆಂ.ಮೀ. (೨೬ ಅಂಗುಲ) ಎತ್ತರವಿರುತ್ತದೆ. ೧ ರಿಂದ ೧-೨ ಮೀಟರ್ ಉದ್ದ ಮತ್ತು ಕೆ.ಜಿ. ತೂಕ. ಕೊಂಬುಗಳು ಸರಾಸರಿ ೨೫ ರಿಂದ ೩೦ ಸೆಂ.ಮೀ. (೧೦ ರಿಂದ ೧೨ ಅಂಗುಲ) ಉದ್ದ. ಹೆಣ್ಣಿನ ಕೊಂಬುಗಳು ಚಿಕ್ಕವು ಮತ್ತು ೧೦-೧೨.೫ ಸೆಂ.ಮೀ. (೪-೫ ಅಂಗುಲ) ಉದ್ದವಿರುತ್ತವೆ. ಬಾಲದ ೪ ೧/೨ ಯಿಂದ (೬ ಅಂಗುಲ) ೧೧-೧೫ ಸೆಂ.ಮೀ. ಇವು ಮಧ್ಯಮ ಗಾತ್ರದವು.

ಆಹಾರ : ಹುಲ್ಲು, ಎಳೆಚಿಗುರು ಮುಖ್ಯ ಆಹಾರ. ಕಾಯಿ, ಹಣ್ಣುಗಳನ್ನು ತಿನ್ನುತ್ತವೆ. ನೀರು ಇಲ್ಲದೆ ಬಹಳ ಕಾಲದವರೆಗೆ ಇರಬಲ್ಲವು. ಅಗತ್ಯವಾದರೆ, ನೀರನ್ನು ಹಸಿರು ಸಸ್ಯಭಾಗಗಳು, ಇಬ್ಬನಿಗಳಿಂದ ಪಡೆಯುತ್ತವೆ.

ಲಕ್ಷಣಗಳು : ಆಕಾರದಲ್ಲಿ ಸಣ್ಣವು, ತೆಳುದೇಹದ, ಸೊಬಗಿನ, ಚೆಲವು ರಚನೆಯ ಪ್ರಾಣಿಗಳು. ಈ ಚಿಗರೆಗೆ ಕೊಟ್ಟಿರುವ ಗಸ್ಸೆಲೆ ಎಂಬ ಹೆಸರು ಬೆಡಗು ಮತ್ತು ಚೆಲುವನ್ನು ಸೂಚಿಸುತ್ತದೆ. ದೇಹದ ಬಣ್ಣ ಗಾಢ ಕಂದಿನಿಂದ ಬೂದುಬಿಳಿಯವರೆಗೆ ವ್ಯತ್ಯಾಸ ತೋರಿ ವೈವಿಧ್ಯ ಪೂರ್ಣವಾಗಿದೆ. ತಳಭಾಗವು ಬಿಳಿಯಾಗಿದ್ದು, ಅದನ್ನು ಸಂಧಿಸುವ ಪಕ್ಕೆಗಳು, ಅಂಡು ಮತ್ತು ಹಿಂಭಾಗಗಳಲ್ಲಿ ಬಣ್ಣ ಗಾಢವಾಗಿದೆ. ಒಟ್ಟಿನಲ್ಲಿ ಇವುಗಳು ಚೆಸ್ಟ್‌ನಟ್‌ಬಣ್ಣದವು. ಮುಖದ ಎರಡೂ ಬದಿಗಳಲ್ಲಿ ಬಿಳಿ ಪಟ್ಟೆಗಳಿವೆ. ಮೂಗಿನ ಮೇಲೆ ತಿಳಿ ಕಪ್ಪು ಬಣ್ಣದ ಕಲೆ ಇದೆ, ಗಂಡುಗಳಲ್ಲಿ ‘‍ಲೈರ್’ (ಒಂದು ಪಾಶ್ಚಿಮಾತ್ವ ಸಂಗೀತವಾದ್ಯ) ಆಕಾರದ ಕೊಂಬು ಇದ್ದು ಅದರ ತುದಿಯಲ್ಲಿ ೧೫ ರಿಂದ ೨೫ ಉಂಗುರಗಳಿವೆ. ಮುಂದಿನಿಂದ ನೋಡಿದಾಗ ತುಸು ಇಂಗ್ಲೀಷ ಅಕ್ಷರವಾದ‘S’ಆಕಾರದಲ್ಲಿ ಬಾಗಿರುವಂತೆ ತೋರುತ್ತವೆ. ಹೆಣ್ಣು ಪ್ರಾಣಿಯ ಕೊಂಬುಗಳು ನೇರವಾಗಿ ನಯವಾಗಿವೆ ಮತ್ತು ಅವುಗಳಿಗೆ ಉಂಗುರಗಳಿಲ್ಲ. ಕೊಂಬಿಲ್ಲದ ಹೆಣ್ಣುಗಳಿರುವುದೂ ಉಂಟು. ಇವುಗಳ (ಚಿಂಕಾರಗಳ) ಕಿವಿಯ ಒಳಗೆ ವಿಪುಲ ಸಂಖ್ಯೆಯ ಬಿಳಿ ಕೂದಲುಗಳಿವೆ. ಯಾವಾಗಲೂ ಬಾಲವನ್ನು ಅಲ್ಲಾಡಿಸುತ್ತಿರುತ್ತವೆ.

ಸಂತಾನಾಭಿವೃದ್ಧಿ : ಸಂತಾನೋತ್ಪತ್ತಿ ಕ್ರಿಯೆಗೆ ಮೀಸಲಾದ ನಿರ್ದಿಷ್ಟ ಕಾಲವಿಲ್ಲದಿದ್ದರೂ, ಏಪ್ರೀಲ್-ಮೇ ತಿಂಗಳಲ್ಲಿ ಈ ಕ್ರಿಯೆ ತೀವ್ರವಾಗಿರುತ್ತವೆ. ಒಂದು ಸೂಲದಲ್ಲಿ ೧ ಅಥವಾ ೩ ಮರಿಗಳು ಹುಟ್ಟುತ್ತವೆ. ಕೆಲವೊಮ್ಮೆ ಇವು ಕೃಷ್ಣಮೃಗಗಳೊಂದಿಗೆ ಲೈಂಗಿಕ ಸಂಭೋಗ ನಡೆಸುವುದುಂಟು. ಈ ಸಂಭೋಗದಿಂದ ಹುಟ್ಟಿದ ಮಿಶ್ರತಳಿಗಳ ವಿಷಯ ಹೆಚ್ಚು ತಿಳಿಯದು. ಆದರೆ ಮಿಶ್ರತಳಿಯ ಗಂಡು ಚಿಂಕಾರಗಳು ಬಲಯುತವಾದವುಗಳೆಂದು ಹೇಳುತ್ತಾರೆ. ಒಂದು ವಾರದಲ್ಲಿಯೇ ಮರಿಗಳಿಗೆ ಸಾಕಷ್ಟು ಶಕ್ತಿ ಬಂದು ಸ್ವತಂತ್ರವಾಗಿ ಓಡಾಡುವಂತಾಗುತ್ತವೆ. ಇವುಗಳ ಆಯಸ್ಸು ಸುಮಾರು ೧೦-೧೨ ವರ್ಷಗಳು.

ಸ್ವಭಾವ : ಇವು ಅತ್ಯಂತ ನಾಚಿಕೆಯ ಸ್ವಭಾವದವು. ಮನುಷ್ಯನಿಂದ ದೂರ ಉಳಿಯುತ್ತವೆ. ಕೃಷಿ ಮಾಡಿದ ಜಮೀನುಗಳ ಬಳಿ ಹೆಚ್ಚಾಗಿ ಬರುವುದಿಲ್ಲ. ಇವು ತೀರ್ವ ನಿಶಾಚರಿಗಳು. ಈ ಎಲ್ಲಾ ವಿಷಯಗಳಲ್ಲಿ ಇವು ಕೃಷ್ಣಮೃಗಗಳಿಂದ ಭಿನ್ನವಾಗಿವೆ. ಇವು ಬೆಳಗಿನಲ್ಲಿ ಮಲಗಿದ್ದು ಸಂಜೆಯಲ್ಲಿ ಆಹಾರಾನ್ವೇಷಣೆಗೆ ಹೊರಡುತ್ತವೆ. ಗಾಬರಿಯಾದಾಗ ಹಿಂಡು ಚದುರಿ ಓಡಿ ೨೦೦-೩೦೦ ಗಜ ತಲುಪಿದ ಮೇಲೆ ನಿಂತು ಗಾಬರಿಗೆ ಕಾರಣವನ್ನು ಪರಿಶೀಲಿಸುತ್ತವೆ. ಶ್ರವಣ, ನೋಟ, ವಾಸನೆಯ ಗ್ರಹಣ ಶಕ್ತಿಗಳು ಚೆನ್ನಾಗಿ ಬೆಳೆದಿವೆ.

ಇವು ೧-೧೨ ಚಿಂಕಾರಗಳನ್ನೊಳಗೊಂಡ ಸಣ್ಣ ಹಿಂಡುಗಳಲ್ಲಿ ವಾಸಿಸುತ್ತವೆ. ಮಾಂಸಾಹಾರಿಗಳ ಆಕ್ರಮಣದಿಂದ ತಪ್ಪಿಸಿಕೊಳ್ಳಲು ಇವು ತಮ್ಮ ವೇಗದ ಓಟವನ್ನು ಅವಲಂಬಿಸುತ್ತವೆ. ಇವು ವೇಗದ ಓಟಕ್ಕೆ ಹೆಸರಾಗಿವೆ. ಬಹುಶಃ ಬೇಟೆಯಾಡುವ ಚಿರತೆ, ಬೇಟೆನಾಯಿ ಮತ್ತು ವಿಶೇಷ ತರಪೇತು ಪಡೆದ ಗಿಡುಗಗಳನ್ನು ಬಿಟ್ಟರೆ ಇವೇ ಅತ್ಯಂತ ವೇಗವಾಗಿ ಓಡಬಲ್ಲ ಕಾಡುಪ್ರಾಣಿಗಳು. ಇದರ ಮಾಂಸ ಅತ್ಯಂತ ರುಚಿಯಾಗಿರುತ್ತದೆ.