ಗಣ : ಆರ್ಟಿಯೊಡ್ಯಾಕ್ಟೈಲ
ಕುಟುಂಬ : ಬೋವಿಡೀ
ಉದಾ : ನೀಲಗಿರಿ ಟಾಹರ್ (
Nilagiri Tahr)
ಶಾಸ್ತ್ರೀಯ ನಾಮ : ಹೆಮಿಟ್ರ್ಯಾಗಸ್ ಹೈಲೊಕ್ರಿಯಸ್ (Hemitragus hylocrius)

485_69_PP_KUH

ವಿತರಣೆ ಮತ್ತು ಆವಾಸ : ನೀಲಗಿರಿ ಬೆಟ್ಟಗಳು, ಅಣ್ಣಾಮಲೈಗಳಲ್ಲಿ ಹೆಚ್ಚಾಗಿ ೪,೦೦೦ ದಿಂದ ೬, ೦೦೦ ಅಡಿ ಎತ್ತರದಲ್ಲಿ ಕಂಡುಬರುತ್ತವೆ. ಪಶ್ಚಿಮಘಟ್ಟದಲ್ಲಿ ೧,೩೦೦ ರಿಂದ ೨, ೬೦೦ ಮೀ. ಎತ್ತರದವರೆಗೆ ಕಂಡುಬರುತ್ತವೆ. ತಿರುವಾಂಕೂರಿನಿಂದ ದಕ್ಷಿಣಕ್ಕೆ ಮತ್ತು ಇತರ ದಕ್ಷಿಣ ಭಾಗಗಳಲ್ಲಿ ಮರಗಳು ಬೆಳೆದ ತಪ್ಪಲು ಪ್ರದೇಶದ ಇಳಿಜಾರುಗಳಲ್ಲಿ ವಾಸಿಸುತ್ತವೆ.

ಗಾತ್ರ : ೧.೧ ಮೀ. ಉದ್ದ. ೯ ಸೆಂ.ಮೀ. ಬಾಲದ ಉದ್ದ. ಭುಜದ ಬಳಿಯ ಎತ್ತರ ೧ ರಿಂದ ೧.೨ ಮೀ. ಹೆಣ್ಣು ತುಸು ಕುಳ್ಳು. ತೂಕ ೧೦೦ ಕೆ.ಜಿ. ಗಂಡಿನ ಕೊಂಬು ೪೪.೫ ಸೆಂ.ಮೀ. ಉದ್ದ ಮತ್ತು ೨೫ ಸೆಂ.ಮೀ. ದಪ್ಪ ಇರುತ್ತವೆ. ಆದರೆ ಹೆಣ್ಣಿನ ಕೊಂಬು ೩೬ ಸೆಂ.ಮೀ. ಉದ್ದ.

ಆಹಾರ : ಹುಲ್ಲು, ಸಸ್ಯಗಳ ಎಲೆ ಮುಂತಾದ ಸಸ್ಯಾಹಾರ.

ಲಕ್ಷಣಗಳು : ಇದೊಂದು ದಷ್ಟಪುಷ್ಟವಾದ ಕಾಡು ಆಡು, ಗಡಸು ದೇಹದ ಬೆಟ್ಟದ ಆಡು. ದೇಹದ ಬಣ್ಣ ಗಾಢ ಹಳದಿಯಿಂದ ಕೆಂಪು ಕಂದು. ಇದಕ್ಕೆ ಕಟ್ಟು ಮಸ್ತಾದ ಉದ್ದಕಾಲುಗಳು ಮತ್ತು ಕಿರಿದಾದ ನೇರ ನಿಲ್ಲುವ ಕಿವಿಗಳು ಇವೆ. ಕೊಂಬುಗಳು ಸಣ್ಣವು ಮತ್ತು ಕೊಂಬುಗಳು ಅಡ್ಡಡ್ಡನಾಗಿ ಸುಕ್ಕಾಗಿವೆ. ಕೊಂಬಿನ ಉದ್ದ ೧ ೧/೨ ಅಡಿ. ಎರಡು ಕೊಂಬುಗಳು ಬುಡದ ಬಳಿ ಹೆಚ್ಚು ಕಡಿಮೆ ಕೂಡಿಕೊಂಡಿದ್ದು ಅನಂತರ ಸಮಾಂತರವಾಗಿ ಸ್ವಲ್ಪ ದೂರದವರೆಗೆ ಮೇಲೆ ಬೆಳೆದು ಅನಂತರ ಅಗಲಿ ಹಿಂದಕ್ಕೆ ಬಾಗಿವೆ. ಮುದಿಯಾದ ಗಂಡು ಕಡುಕಂದಾಗಿರುತ್ತದೆ ಅಥವಾ ಹೆಚ್ಚು ಕಡಿಮೆ ಕಪ್ಪಾಗಿರುತ್ತದೆ. ಮತ್ತು ನರೆತ ಕೂದಲನ್ನು ನೆನಪು ಮಾಡುವಂತೆ ಇದೆ. ಇದರ ಹಿಂಭಾಗದ ತೊಡೆಯ ಸಂಧಿನಲ್ಲಿ ಒಂದು ಬಿಳಿಯ ಪಟ್ಟೆಯಿರುತ್ತದೆ. ಮರಿಗಳು ಹಳದಿ-ಕಂದು ಬಣ್ಣವಾಗಿರುತ್ತವೆ. ತಳ ಭಾಗವು ತಿಳಿ ಬಣ್ಣವಾಗಿರುತ್ತದೆ. ಗಂಡಿನ ಕುತ್ತಿಗೆಯ ಏಣಿನ ಮೇಲೆ ಮತ್ತು ಭುಜದ ಮೇಲೆ ಮೋಟಾದ ಜೂಲುಕೂದಲಿದೆ. ಮೈಮೇಲೆ ಅಷ್ಟಾಗಿ ಕೂದಲುಗಳಿಲ್ಲ. ಬೆನ್ನಿನ ಮೇಲೆ ಬಿಳಿಗೂದಲುಗಳಿವೆ. ಗಂಡಿಗೆ ಗದ್ದ ಮತ್ತು ಆಯಾಲವಿಲ್ಲ. ಕೂದಲಿಲ್ಲದ ಮೂತಿ. ಕೊಂಬುಗಳು ನುಲಿದಿಲ್ಲ ಮತ್ತು ಪಕ್ಕದಲ್ಲಿ ಚಪ್ಪಟೆಯಾಗಿವೆ. ಕಾಲುಗಳಲ್ಲಿ ಗ್ರಂಥಿಗಳಿವೆ.

ಸಂತಾನಾಭಿವೃದ್ಧಿ : ವರ್ಷವಿಡೀ ಸಂತಾನೋತ್ಪತ್ತಿಕ್ರಿಯೆ ನಡೆಯುವಂತೆ ಕಾಣಬರುತ್ತದೆ. ವರ್ಷವಿಡೀ ಮಂದೆಗಳಲ್ಲಿ ಮರಿಗಳು ಕಂಡು ಬರುತ್ತವೆ. ಒಂದು ಸೂಲದಲ್ಲಿ ೧ ಅಥವಾ ೨ ಮರಿಗಳು ಹುಟ್ಟುತ್ತವೆ. ಗರ್ಭಾವಧಿಯ ಕಾಲ ೧೮೦-೨೪೨ ದಿನಗಳು. ಜೀವಾವಧಿ ೧೬-೧೮ ವರ್ಷಗಳು.

ಸ್ವಭಾವ : ಇವು ೫ ರಿಂದ ೫೦ ರ ಮಂದೆಗಳಲ್ಲಿ ಕಡಿದು ಬಂಡೆಗಳ ನಡುವೆ, ಪ್ರಪಾತಗಳ ಬಳಿ ಮತ್ತು ಹುಲ್ಲು ಬೆಳೆದ ಬೆಟ್ಟಗುಡ್ಡಗಳಲ್ಲಿ ವಾಸಿಸುತ್ತವೆ. ಇದು ಕಾಡಿನಿಂದ ಎತ್ತರದಲ್ಲಿದ್ದು ಅಪರೂಪವಾಗಿ ಕಾಡಿಗೂ ನುಗ್ಗಿ ಮುಂಜಾನೆ ಮತ್ತು ಸಂಜೆ ಹುಲ್ಲು ಮೇಯುತ್ತವೆ. ಗುಂಪಿನ ಪ್ರಾಣಿಗಳು ವಿಶ್ರಾಂತಿ ಪಡೆಯುತ್ತಿರುವಾಗ ಒಂದೆರಡು ಹೆಣ್ಣುಗಳು ನಿಗಾ ಇಡುತ್ತವೆ. ಇದರ ಮಾಂಸ ಬಹಳ ಉತ್ಕೃಷ್ಟವಾದುದು. ಮಾಂಸಕ್ಕಾಗಿ ಮತ್ತು ಚರ್ಮಕ್ಕಾಗಿ ಇವುಗಳನ್ನು ಹೆಚ್ಚಾಗಿ ಕೊಲ್ಲುತ್ತಿದ್ದಾರೆ. ಈಗ ಇವು ನಾಶವಾಗಿ ವಿನಾಶದ ಅಂಚಿನಲ್ಲಿವೆ (ಗಂಡಾಂತರದಲ್ಲಿರುವ ಪ್ರಾಣಿಗಳು).

—- 

ಗಣ : ಆರ್ಟಿಯೊಡ್ಯಾಕ್ಟೈಲ
ಕುಟುಂಬ : ಬೋವಿಡೀ
ಉದಾ : ಕಾಡೆಮ್ಮೆ
(Wild Buffalo) ಕಾಡು ಕೋಣ
ಶಾಸ್ತ್ರೀಯ ನಾಮ : ಬುಬಾಲಸ್ ಬುಬಾಲಸ್ (Bubalus bubalus)

486_69_PP_KUH

ವಿತರಣೆ ಮತ್ತು ಆವಾಸ : ಕಾಡೆಮ್ಮೆಗಳು ಭಾರತ ದೇಶದ ಪಶ್ಚಿಮಘಟ್ಟಗಳ ಹುಲ್ಲು ಎತ್ತರವಾಗಿ ಬೆಳೆಯುವ ಕಾಡು ಪ್ರದೇಶದಲ್ಲಿ ವಾಸಿಸುತ್ತವೆ.

ಗಾತ್ರ : ತಲೆ ಮತ್ತು ದೇಹದ ಉದ್ದ. ೨೪೦-೨೭೫ ಸೆಂ.ಮೀ. ೮ ರಿಂದ ೯ ಅಡಿ. ಬಾಲ (೬೦-೧೦೫ ಸೆಂ.ಮೀ) ೨ ರಿಮದ ೩ ೧/೪ ಅಡಿ ಉದ್ದ. ಭುಜದ ಬಳಿ ಎತ್ತರ ೫ ೧/೨ ಅಡಿಯಿಂದ (೧೭೦ ಸೆಂ.ಮೀ.) ೬ ಅಡಿ. ತೂಕ ೯೦೦ ಕೆ.ಜಿ. ಕೊಂಬು ೬ ೧/೨ ಅಡಿ ಉದ್ದ. ಇದು ದಾಖಲೆಯ ಉದ್ದಕೊಂಬು, ಉದ್ದ ೧೯೭ ಸೆಂ.ಮೀ.

ಆಹಾರ : ಇದು ಹೆಚ್ಚಾಗಿ ತಿನ್ನುವುದು ಆನೆ ಮತ್ತು ಕಾಟಿಗಳು ತಿನ್ನದ ಬಿರುಸು ಹುಲ್ಲು.

ಲಕ್ಷಣಗಳು : ದೇಹ ಕಪ್ಪು, ಕೂದಲು ಕಪ್ಪು ಮತ್ತು ವಿರಳ. ಹಣೆಯ ಮೇಲೆ ಒಂದು ಕುಚ್ಚು ಮುಂದೆ ಬಾಗಿದ ಕೂದಲುಗಳಿವೆ. ಕೆಲವು ಕಾಡೆಮ್ಮೆಗಳಿಗೆ ಮೊಳಕಾಲ ಕೆಳಗೆ ಬಿಳಿ ರಾಡಿ ಬಣ್ಣವಿದೆ. ನೋಡುವುದಕ್ಕೆ ಗಂಭೀರವಾದ ಪ್ರಾಣಿಯಂತೆ ಕಂಡರೂ ಸಾಮಾನ್ಯ ಲಕ್ಷಣಗಳಲ್ಲಿ ಅದು ಸಾಕಿದ ಎಮ್ಮೆಯನ್ನೇ ಹೋಲುತ್ತದೆ. ಅದಕ್ಕಿಂತ ಬಲಯುತವಾಗಿದೆ ಮತ್ತು ಹೊಳಪು ದೇಹದ ಪ್ರಾಣಿ. ಹೆಣ್ಣುಗಂಡುಗಳೆರಡರಲ್ಲಿಯೂ ಕೊಂಬುಗಳಿವೆ. ಕೊಂಬುಗಳ ಬಣ್ಣ ಕಪ್ಪು ಅವು ಮುಂಭಾಗದಲ್ಲಿ ಚಪ್ಪಟೆಯಾಗಿ, ಅಡ್ಡಸೀಳಿಕೆಯಲ್ಲಿ ತ್ರಿಕೋನಾಕಾರವಾಗಿವೆ. ಜಗತ್ತಿನಲ್ಲಿಯೇ ಇವು ಉದ್ದಕೊಂಬಿನ ಪ್ರಾಣಿಗಳು. ಹೆಣ್ಣುಗಂಡುಗಳಲ್ಲಿ ಹೆಚ್ಚು ವ್ಯತ್ಯಾಸವಿಲ್ಲ. ಅವುಗಳನ್ನು ದೂರದಿಂದ ಗುರುತಿಸಿ, ನಿರ್ಧರಿಸುವುದು ಕಷ್ಟ ಮುಖವು ಕಿರಿದಾಗಿ ಉದ್ದನಾಗಿದೆ. ಇಬ್ಭಾಗವಾದ ದೊಡ್ಡ ಗೊರಸುಗಳಿವೆ. ಮೂಗು ತೀಕ್ಷ್ಣ ಕಿವಿ ಸಾಧಾರಣ, ಕಣ್ಣು ಮಂದ. ಸಾಕಿದ ಎಮ್ಮೆ ಕೋಣಗಳಿಗೂ ಮತ್ತು ಕಾಡು ಎಮ್ಮೆ ಕೋಣಗಳಿಗೂ ಅಷ್ಟಾಗಿ ಭೇದವಿಲ್ಲ. ಹೊಸದಾಗಿ ಹುಟ್ಟಿದ ಕರು ತಿಳಿ ಹಳದಿ.

ಭಾರತದಲ್ಲಿರುವ ಸಾಕುವ ಎಮ್ಮೆ ಕೋಣಗಳನ್ನು ಕಾಡು ಪ್ರಭೇದಗಳಿಮದ ಪಳಗಿಸಲಾಯಿತೆಂದು ತಿಳಿದುಬರುತ್ತದೆ. ಈಗಲೂ ಕಾಡು ಮತ್ತು ಸಾಕುತಳಿಗಳ ನಡುವೆ ತಳಿ ಸಂಮ್ಮಿಶ್ರಣ ಸಾಧ್ಯ ಮತ್ತು ಈ ಮಿಶ್ರತಳಿಯು ಶಕ್ತಿಯಲ್ಲಿ ಉತ್ತಮವೆಂದು ಕಂಡಬರುತ್ತದೆ.

ಸಂತಾನಾಭಿವೃದ್ಧಿ : ಸಾಮಾನ್ಯವಾಗಿ ಮಳೆಗಾಲದ ಅಂತ್ಯದಲ್ಲಿ ಹೆಣ್ಣು ಬೆದೆಗೆ ಬರುತ್ತದೆ. ಗರ್ಭಾವಧಿ ೧೦ ತಿಂಗಳು. ಮಾರ್ಚ್‌, ಏಪ್ರೀಲ್, ಮೇ ತಿಂಗಳುಗಳಲ್ಲಿ ಕರುಗಳು ಹುಟ್ಟುತ್ತವೆ. ಒಂದು ಸೂಲದಲ್ಲಿ ಒಂದೇ ಕರು ಹುಟ್ಟುತ್ತದೆ. ಅಪರೂಪವಾಗಿ ಎರಡು ಕರುಗಳು ಹುಟ್ಟುತ್ತವೆ. ಜೀವಾವಧಿ ೧೮ ವರ್ಷಗಳು.

ಸ್ವಭಾವ : ಹೇರಳವಾಗಿ ಹುಲ್ಲು ಮತ್ತು ನೀರಿರುವ ಸ್ಥಳಗಳನ್ನು ವಿಶೇಷವಾಗಿ ಆರಿಸಿಕೊಳ್ಳುತ್ತವೆ. ಕಾಟಿಗಳಷ್ಟು ನಿಶಾಚರಿಗಳಲ್ಲ. ಇವು ಬಿಸಿಲನ್ನು ಸಹಿಸುತ್ತವೆ. ಬೇಸಿಗೆಯಲ್ಲಿ ಕೆಸರಿನಲ್ಲಿ ಬಿದ್ದು ದಿನವಿಡೀ ಹೊರಳಾಡುತ್ತವೆ. ಮೈದಾನದ ಪ್ರಾಣಿಗಳು ಗುಡ್ಡವನ್ನು ಏರುವುದಿಲ್ಲ. ದನಕರುಗಳ ಜಾತಿಯಲ್ಲಿಯೇ ಇವು ಅತಿ ಹೆಚ್ಚು ಧೈರ್ಯಶಾಲಿಗಳು ಮತ್ತು ಮುಂಗೋಪಿಗಳು. ಹುಲಿಯನ್ನು ಎದುರಿಸಿ ಹೋರಾಡಬಲ್ಲವು. ಸಂಘಜೀವಿಗಳು. ಒಂದು ಹಿಂಡಿನಲ್ಲಿ ೧೦-೨೦ ಪ್ರಾಣಿಗಳಿರುತ್ತವೆ. ಮನುಷ್ಯನಿಗೆ ಅಂಜುವುದಿಲ್ಲ. ಮನುಷ್ಯನ ಸಹವಾಸವಿಲ್ಲದೆ ಸ್ವಭಾವದಲ್ಲಿ ಉಗ್ರವಾಗಿವೆ. ಕೆಣಕದೆಯೇ ಮೈಮೇಲೆರಗಬಹುದು. ವಯಸ್ಸಾದ ಕೋಣಗಳು ಒಂಟಿಯಾಗಿ ಜೀವಿಸುತ್ತವೆ. ಒಂಟಿ ಕೋಣಗಳನ್ನು ಸಮೀಪಿಸುವುದು ಗಂಡಾಂತರಕಾರಿ. ಒಳ್ಳೆಯ ಗುಣಮಟ್ಟದ ಹಾಲು ಕೊಡುತ್ತವೆ. ಇವುಗಳನ್ನು ಹೇರು ಪ್ರಾಣಿಗಳಾಗಿ ಬಳಸಬಹುದು.

ಇದರಲ್ಲಿ ಎರಡು ಉಪಪ್ರಭೇದಗಳಿವೆ :

೧) ಬುಬಾಲಿಸ್ ಬುಬಾಲಿಸ್ ಬುಬಾಲಸ್ ಮತ್ತು ಬುಬಾಲಿಸ್ ಬುಬಾಲಿಸ್ ಫುಲ್ವಸ್.

—- 

ಗಣ : ಆರ್ಟಿಯೊಡ್ಯಾಕ್ಟೈಲ
ಕುಟುಂಬ : ಬೋವಿಡೀ
ಉದಾ : ಕಾಟಿ (ಕಾಡುಕೋಣ)
(Bison)
ಅಥವಾ (Gaur) ಗೌರ್
ಶಾಸ್ತ್ರೀಯ ನಾಮ : ಬಾಸ್‌ಗೌರಸ್ (Bos gaurus)

487_69_PP_KUH

ಕಾಡುಕೋಣಗಳಲ್ಲಿ ಪ್ರಮುಖವಾಗಿ ಎರಡು ಜಾತಿಗಳಿವೆ. ಬೈಸನ್ ಬೈಸನ್ ಎಂಬುದು ಅಮೇರಿಕ ಮತ್ತು ಯುರೋಪಿನ ಕಾಡುಕೋಣ. ಬಾಸ್ ಗೌರಸ್ ಎಂಬುದು ಭಾರತದಲ್ಲಿ ವಾಸಿಸುತ್ತದೆ. ಇದನ್ನು ಕರ್ನಾಟಕದಲ್ಲಿ ಕಾಟಿ ಎಂದೂ ಕರೆಯುತ್ತಾರೆ.

ವಿತರಣೆ ಮತ್ತು ಆವಾಸ : ಬಾಸ್ ಗೌರಸ್ ಭಾರತ, ನೇಪಾಳ, ಬರ್ಮಾ, ವಿಯಟ್ನಾಂ, ಸಯಾಂ ಮತ್ತು ಮಲಯ ದ್ವೀಪಕಲ್ಪದಲ್ಲಿ ಹರಡಿದೆ. ಭಾರತದಲ್ಲಿ ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ವಿಶೇಷವಾಗಿ ಕಂಡುಬರುತ್ತದೆ. ಇದು ಸುಮಾರು ೭೫೦ ರಿಂದ ೧,೮೦೦ ಮೀಟರ್ ಎತ್ತರದ ಗುಡ್ಡ-ಗಾಡು ಪ್ರದೇಶಗಳಲ್ಲಿ, ಗುಡ್ಡಗಳ ಮೇಲೆ, ಹುಲ್ಲು ಗಾವಲುಗಳಿರುವಂತೆ ಸ್ಥಳಗಳಲ್ಲಿ ಸಾಮಾನ್ಯವಾಗಿ ವಾಸಿಸುತ್ತದೆ. ಕರ್ನಾಟಕದ ಮಲೆನಾಡು ಪ್ರದೇಶದಲ್ಲಿ ಹಿಂದೊಮ್ಮೆ ಹೇರಳ ಸಂಖ್ಯೆಯಲ್ಲಿದ್ದವು, ಈಗ ಬಿಳಿಗಿರಿರಂಗನ ಬೆಟ್ಟದ ಶ್ರೇಣಿ, ಬಂಡೀಪುರ ಅಭಯರಾಣ್ಯ, ನಾಗರಹೊಳೆ, ಲಕ್ಕವಳ್ಳಿ, ದಾಂಡೇಲಿ ಮುಂತಾದ ಪ್ರದೇಶಗಳಲ್ಲಿ ಮಾತ್ರ ಉಳಿದಿವೆ. ಇವು ದಕ್ಷಿಣ ಭಾರತದಲ್ಲಿ ಅಣ್ಣಾ ಮಲೈ, ಪಳನಿಬೆಟ್ಟ ವೈನಾಡ್‌ಮತ್ತು ಕೊಡಗುಗಳಲ್ಲಿ ಕಂಡುಬರುತ್ತವೆ.

ಗಾತ್ರ : ಕಾಟಿ ಬಹಳ ದೊಡ್ಡ ಗಾತ್ರದ ಪ್ರಾಣಿ. ದೇಹ ೩-೩.೨೫ ಮೀಟರ್ (೧೦ ರಿಂದ ೧೩ ಅಡಿ) ಉದ್ದ (ಬಾಲ ಬಿಟ್ಟು). ಭುಜದ ಬಳಿ ಎತ್ತರ (೧.೯ ಮೀ) ೬ ೧/೨ ಅಡಿ. ಎದೆಯ ಸುತ್ತಳತೆ (೩ಮಿ.) ೧೦ ಅಡಿ, ಬಾಲ (೪೫ ಸೆಂ.ಮೀ.) ೩ ಅಡಿ ಉದ್ದ. ಸುಮಾರು ೧,೦೦೦ ಕೆ.ಜಿ. ತೂಕವಿರುತ್ತದೆ.

ಆಹಾರ : ಹುಲ್ಲು, ಚಿಗುರು, ಬಿದಿರುಎಲೆ, ಗಿಡಗಳ ಎಲೆ, ತೊಗಟೆ, ಹಣ್ಣು ಕಾಯಿಗಳನ್ನು ತಿನ್ನುತ್ತದೆ.

ಲಕ್ಷಣಗಳು : ಹಸುಗಳ ಜಾತಿಯಲ್ಲಿಯೇ ನಿಲುವಿನಲ್ಲಿ ಸಾಕಷ್ಟು ಎತ್ತರದ, ಗಂಭೀರ ಪ್ರವೃತ್ತಿಯ, ದೃಢಕಾಯದ, ಭವ್ಯ ಪ್ರಾಣಿ. ಇವು ನೋಡುವುದಕ್ಕೆ ಎಮ್ಮೆ ಕೋಣಗಳಂತೆ ಕಾಣುವುದರಿಂದ ಇವುಗಳಿಗೆ ಕಾಡುಕೋಣಗಳೆಂದು ಹೆಸರು ಬಂದಿದೆ. ಆದರೆ ಇವು ಆಕಳ ಜಾತಿಯವು. ಇವುಗಳಿಗೆ ಇಂಡಿಯನ್ ಬೈಸನ್‌ಗಳೆಂದು ಹೇಳುವುದುಂಟು. ಆದರೆ ಇವು ಬೈಸನ್‌ಗಳಲ್ಲ. ಅಮೇರಿಕದ ಬೈಸನ್‌ಗಳು ಬೈಸನ್‌ ಜಾತಿಗೆ ಸೇರಿದರೆ, ಇವು ಬಾಸ್ ಜಾತಿಗೆ ಸೇರಿವೆ. ಅದೇ ಎಮ್ಮೆ-ಕೋಣಗಳು ಬ್ಯುಬಾಲಸ್ ಜಾತಿಗೆ ಸೇರುತ್ತವೆ.

ಹಿಂಗಾಲು ಸ್ವಲ್ಪ ಗಿಡ್ಡ ಮತ್ತು ಮುಂಗಾಲು ಉದ್ದ. ಕೋಣನ ಬಾಯಿಯಂತೆ ತುಸು ಅಗಲವಾದ ಬಾಯಿ. ದೊಡ್ಡ ಮುಖ, ಬೂದುಬಣ್ಣದ ಉಬ್ಬಿದ ತಲೆ ಪಟ್ಟಿ ‘C’ ಆಕಾರದ ಮೊನಚಾದ ಕೊಂಬುಗಳು. ಬಿಳಿ ‘ಕಾಲು ಚೀಲದ’ ಕಾಲುಗಳು. ಒತ್ತಾದ ಗಿಡ್ಡ ಕೂದಲಿನ ದೇಹ. ಕೊಂಬುಗಳು ಟೊಳ್ಳು. ಗಂಡುಗಳ ಕೊಂಬುಗಳು ತುದಿಯಲ್ಲಿ ಮೊನಚಾಗಿವೆ. ಗಂಡುಗಳನ್ನು ಗೂಳಿಗಳೆಂದು ಕರೆಯುತ್ತಾರೆ. ದೇಹದ ಬಣ್ಣ ಕಪ್ಪು ಮಿಶ್ರಿತ ಕಂದು. ಕಾಲುಗಳು ಮಾತ್ರ ಕೆಳಗೆ ಬೆಳ್ಳಗಿವೆ. ಮೈಮೇಲೆ ಮೃದುವಾದ ರೇಷ್ಮೆಯಂತಹ ಕೂದಲಿವೆ. ಹೆಗಲಿನಿಂದ ಬೆನ್ನಿನ ಮಧ್ಯದ ವರೆಗೂ ಎತ್ತರವಾದ ಏಣು ಇದೆ. ಕೊಂಬುಗಳ ನಡುವೆ ಇರುವ ನೆತ್ತಿ ಏಣಿನಂತೆ ಎದ್ದುಕೊಂಡಿದೆ. ಬಾಲಕ್ಕೆ ಕೂದಲುಗಳ ಗುಚ್ಛವಿದೆ. ಗಾತ್ರಕ್ಕೆ ಅನುಗುಣವಾಗಿ ಕಾಟಿಗಳ ಗದ್ದದ ಕೆಳಗೆ ಸಣ್ಣ ಗಂಗೆದೊಗಲು ಮತ್ತು ಮುಂಗಾಲುಗಳ ಮಧ್ಯೆ ದೊಡ್ಡಗಂಗೆದೊಗಲು ಇಳಿಬಿದ್ದಿವೆ. ಇವುಗಳಿಗೆ ಹಣೆ ಇಲ್ಲ. ಗೂಳಿಗಳು ಮುಪ್ಪಾದಂತೆ ಬಣ್ಣ ಅತಿ ಕಪ್ಪಾಗಿ ಮೈಗೂದಲುಗಳು ಇಲ್ಲದಂತಾಗುತ್ತವೆ. ಇವುಗಳ ಕಿವಿ ಮತ್ತು ಮೂಗು ಅತಿ ತೀಕ್ಷ್ಣ. ಕಣ್ಣು ಮಂದ ೧೫ ಮೀಟರ್ ಗಳ ದೂರದಿಂದ. ವಾಸನೆ ಹಿಡಿಯಬಲ್ಲವು.

ಸಂತಾನಾಭಿವೃದ್ಧಿ : ವರ್ಷವಿಡೀ ಕರುಗಳನ್ನು ಹಾಕುತ್ತವೆ. ಆದರೆ ದಕ್ಷಿಣ ಭಾರತದಲ್ಲಿ ಬೆದೆಯ ಸಮಯ ನವೆಂಬರ್‌ನಿಂದ ಮಾರ್ಚ್‌ವರೆಗೆ ಇರುತ್ತದೆ. ಗರ್ಭಾವಧಿಕಾಲ ೨೭೦ ರಿಂದ ೨೮೫ ದಿನಗಳು. ಒಂದು ಸೂಲದಲ್ಲಿ ಒಂದೇ ಕರು ಹುಟ್ಟುತ್ತದೆ. ಅಪರೂಪವಾಗಿ ೨ ಕರುಗಳು ಹುಟ್ಟಬಹುದು. ಕರುಗಳು ಹುಟ್ಟಿದಾಗ ತಿಳಿಹಳದಿ ಬಣ್ಣವಿದ್ದು ಅನಂತರ ಕಂದು ಬಣ್ಣಕ್ಕೆ ತಿರುಗುತ್ತವೆ. ಕರು ಹುಟ್ಟಿದ ೧೦ ನಿಮಿಷಗಳಲ್ಲಿಯೇ ಎದ್ದು ಓಡಾಡುತ್ತದೆ. ಕರುವಿನ ಪಾಲನೆಯನ್ನು ತಾಯಿ ೨ ವರ್ಷಗಳವರೆಗೆ ಮಾಡುತ್ತದೆ. ಹೆಣ್ಣು ೨ ವರ್ಷಕ್ಕೆ ಪ್ರಾಯಕ್ಕೆ ಬಂದು ಮುಂದೆ ಪ್ರತಿ ವರ್ಷ ಈಯುತ್ತದೆ. ಬಂಧನದಲ್ಲಿ ಹೆಚ್ಚುದಿನ ಬದುಕುವುದಿಲ್ಲ. ಆದರೆ ೨೪ ವರ್ಷ ಬದುಕಿದ ದಾಖಲೆ ಇದೆ.

ಸ್ವಭಾವ : ಗುಡ್ಡಗಾಡಿನ ಅರಣ್ಯ ವಾಸಿಗಳು. ಮಧ್ಯಾಹ್ನದ ಬಿಸಿಲಿನಲ್ಲಿ ದಟ್ಟವಾದ ಪೊದೆಗಳ ನೆರಳಿನಲ್ಲಿ ವಿಶ್ರಾಂತಿ ಪಡೆದು, ಮುಂಜಾನೆ ಮತ್ತು ಸಂಜೆ ಮೇಯುತ್ತವೆ. ಇವು ಮೆಲಕು ಹಾಕುತ್ತವೆ. ವಾಡಿಕೆಯಾಗಿ ರಾತ್ರಿ ಚಟುವಟಿಕೆ. ನಾಚಿಕೆ ಹಾಗೂ ಸಾಧು ಸ್ವಭಾವದವು. ನೋಡವುದಕ್ಕೆ ಉಗ್ರವಾಗಿ ಕಂಡರೂ ಪುಕ್ಕಲು ಪ್ರಾಣಿಗಳು. ತಾವಾಗಿ ಎಂದೂ ಮೈಮೇಲೆ ಬೀಳುವುದಿಲ್ಲ. ಗಾಯಗೊಂಡ ಒಂಟಿ ಗೂಳಿಯನ್ನು ಸಮೀಪಿಸುವುದು ಅಪಾಯಕರ. ಗಾಯಗೊಂಡಾಗ ಮತ್ತು ಶತ್ರುಗಳು ಆಕ್ರಮಿಸಿದಾಗ ಕ್ರೂರವಾಗಿ ಹೋರಾಡಬಲ್ಲದು. ಶತ್ರುವಿನ ಸುಳಿವು ಸಿಕ್ಕಾಗ ಸ್ಥೂಲ ಶರೀರಿಯಾದರೂ ಮರಗಿಡಗಳ ಮಳೆಗಳ ನಡುವೆ ವೇಗವಾಗಿ ಓಡಿ ಹೋಗಬಲ್ಲದು. ಸಾಮಾನ್ಯವಾಗಿ ಎಮ್ಮೆ-ಹಸುಗಳಂತೆ ಕೂಗುತ್ತಾ ಕೆಸರಿನಲ್ಲಿ ಹೊರಳಾಡುವುದಿಲ್ಲವಾದರೂ, ಅಪಾಯ ಸನ್ನಿಹಿತವಾದಾಗ ಸಿಳ್ಳೆಯಂತಹ ಗುಟುರು ಹಾಕುತ್ತವೆ.

ಸಂಘ ಜೀವಿಗಳು. ಒಂದೊಂದು ಹಿಂಡಿನಲ್ಲಿ ಆಕಳು, ಕರು, ಗೂಳಿ ಸೇರಿ ೩೦ ರಿಂದ ೪೦ ಪ್ರಾಣಿಗಳಿರಬಹುದು. ಆಕಳುಗಳು ಸಾಮಾನ್ಯವಾಗಿ ಒಂಟಿಯಾಗಿರುವುದಿಲ್ಲ. ಹಿಂಡಿಗೆ ಬಲಿಷ್ಠ ಗೂಳಿಯೇ ಯಜಮಾನ. ಆಕಳುಗಳು ಬೆದೆಗೆ ಬಂದಾಗ ಮುಖಂಡ ಗೂಳಿಯು ಉಳಿದ ಗುಂಪಿನ ಗೂಳಿ (ಹೋರಿ) ಗಳನ್ನು ಸಮೀಪ ಸುಳಿಯಗೊಡುವುದಿಲ್ಲ. ಹೆಣ್ಣನ್ನು ಒಲಿಸಿಕೊಳ್ಳಲು ಘೋರ ಕಾದಾಟ ಆಗುವುದುಂಟು. ಹರೆಯದ ಗೂಳಿಗಳು ಪ್ರಭುವಾದಾಗ ಯಜಮಾನನನ್ನು ಹಿಂದೆ ಸರಿಸಿ ತಮ್ಮ ಪ್ರಭುತ್ವವನ್ನು ಚಲಾಯಿಸುತ್ತವೆ. ಆಗ ಮುಪ್ಪಾಗಿ ನಿರ್ಭಲವಾದ ಯಜಮಾನ ಗೂಳಿ ಗುಂಪಿನಿಂದ ಹಿಂದೆ ಸರಿದು ಒಂಟಿಯಾಗಿ ಉಳಿಯುತ್ತದೆ. ಬೆದೆಯ ಸಮಯದಲ್ಲಿ ಒಂದು ಗುಂಪಿನ ಯಜಮಾನ ಗೂಳಿ ಇನ್ನೊಂದು ಗುಂಪಿನ ಆಕಳುಗಳ ಮೇಲೆ ಬಲಾತ್ಕಾರ ಮಾಡಬಹುದು.

ಹುಲಿ, ಚಿರತೆ, ಕಾಡು ನಾಯಿಗಳ ಆಕ್ರಮಣ ನಡೆದಾಗ ಹಿಂಡಿನಲ್ಲಿಯ ಇತರ ಆಕಳು ಮತ್ತು ಕರುಗಳನ್ನು ನಡುವೆ ಸೇರಿಸಿ ಸುತ್ತುವರಿದು ರಕ್ಷಿಸುತ್ತವೆ. ಆದರೆ ಒಮ್ಮೊಮ್ಮೆ ಹಿಂಡಿನಿಂದ ಹಿಂದುಳಿದ ಕರುಗಳು ಮತ್ತು ರೋಗದಿಂದ ಬಳಲುತ್ತಿರುವ ಅಸಹಾಯಕ ಕಾಟಿಗಳು ಮಾಂಸಾಹಾರಿಗಳಿಗೆ ಬೇಟೆಯಾಗುತ್ತವೆ. ಸಾಮಾನ್ಯವಾಗಿ ಒಂದೇ ಹುಲಿ ಬೆಳೆದ ಕಾಟಿಯ ಮೇಲೆ ಬೀಳುವುದಿಲ್ಲ. ಆದರೆ ಎರಡು ಹುಲಿಗಳು ಕೂಡಿ ಕಾಟಿಯನ್ನು ಬೇಟೆಯಾಡಬಹುದು. ನೀರಿನ ಸಮೀಪದಲ್ಲಿ ಮತ್ತು ಉಪ್ಪು ನೆಕ್ಕುಗಳು ಇದ್ದೆಡೆ ಅನೇಕ ಕಾಟಿಗಳು ಇರುವುದನ್ನು ಕಾಣಬಹುದು.

ಕರ್ನಾಟಕದ ಅಭಯಾರಣ್ಯವು ಕಾಟಿಗಳಿಗೆ ಹೆಸರಾದ ತೌರು. ಹಿಂದೆ ಭದ್ರಾವತಿಯ ಕಾಗದ ಕಾರ್ಖಾನೆಯವರು ನೋಟ್‌ಪುಸ್ತಕಗಳ ಮೇಲೆ ಕಾಟಿಯ ಭವ್ಯಚಿತ್ರವನ್ನು ಅಚ್ಚುಹಾಕುತ್ತಿದ್ದರು. ಸಾಕ ದನಕರುಗಳಿಗೆ ತಗಲುವ ರೋಗಗಳು ಇವುಗಳಿಗೂ ತಗುಲಿ ಗುಂಪಿಗೆ ಗುಂಪೇ ನಾಶವಾಗಬಹುದು. ೧೯೬೮ರಲ್ಲಿ ‘ರಿಂಡ್‌ಪೆಸ್ಟ್‌’ ರೋಗವು ಅಸಂಖ್ಯಾತ ಕಾಟಿಗಳನ್ನು ಬಲಿತೆಗೆದುಕೊಂಡಿತು.

 —-

ಗಣ : ಆರ್ಟಿಯೊಡ್ಯಾಕ್ಟೈಲ
ಕುಟುಂಬ : ಸರ್ವೀಡೀ
ಉದಾ : ಚಿತಾಲ್‌ ಅಥವಾ ಸಾರಂಗ ಜಿಂಕೆ ಅಥವಾ ಚುಕ್ಕೆ ಜಿಂಕೆ
(Chital or Spotted deer)
ಶಾಸ್ತ್ರೀಯ ನಾಮ : ಆಕ್ಸಿಸ್‌ಆಕ್ಸಿಸ್‌(Axis axis)

488_69_PP_KUH

ವಿತರಣೆ ಮತ್ತು ಆವಾಸ : ಇವು ಹಿಮಾಲಯದ ತಪ್ಪಲಿನಿಂದ ದಕ್ಷಿಣದ ದ್ವೀಪಕಲ್ಪದಿಂದ ಶ್ರೀಲಂಕಾದವರೆಗೆ ಹರಡಿವೆ. ನೀರಿಲ್ಲದ ಹೆಚ್ಚು ಕಡಿಮೆ ಮರುಭೂಮಿಯಾದ ಪಂಜಾಬ್‌ಮತ್ತು ರಾಜಸ್ಥಾನಗಳಲ್ಲಿ ಇವು ಕಾಣಿಸುವುದಿಲ್ಲ. ಇವು ಸಾಮಾನ್ಯವಾಗಿ ಮೇಯಲು ಹುಲ್ಲು ದೊರಕುವ ಕಾಡುಗಳಲ್ಲಿ, ಕುಡಿಯಲು ನೀರು ಸಿಗುವ ಪ್ರದೇಶಗಳಲ್ಲಿ ವಾಸಿಸುತ್ತವೆ. ಬಯಲು ಪ್ರದೇಶದ ಕುರುಚಲು ಇಲ್ಲವೆ ಪರ್ಣಪಾತಿ ಗಿಡಗಳ ಕಾಡುಗಳಲ್ಲಿ, ಹುಲ್ಲುಗಾವಲುಗಳಲ್ಲಿ ವಾಸಿಸುತ್ತವೆ. ಸಮುದ್ರ ಮಟ್ಟದಿಂದ ಸುಮಾರು ೪,೦೦೦ ಅಡಿ ಎತ್ತರದ ಪ್ರದೇಶದವರೆಗೂ ಕಾಣಬರುತ್ತವೆ. ಕರ್ನಾಟಕದಲ್ಲಿ ಇವು ಹೇರಳವಾಗಿವೆ.

ಗಾತ್ರ : ಮಧ್ಯಮ ಗಾತ್ರದ ಜಿಂಕೆಗಳು ಒಂದು ಗಂಡು ಜಿಂಕೆಯ ಉದ್ದ ೩ ರಿಂದ ೫ ಅಡಿಗಳವರೆಗೆ ಇರುತ್ತದೆ. ಭುಜದ ಬಳಿ (೯೦ ಸೆಂ.ಮಿ) ೩ ಅಡಿ ಎತ್ತರ. ತೂಕ ೮೫ ಕೆ.ಜಿ. ಕೊಂಬು ಸರಾಸರಿ (೭೫ ಸೆಂ.ಮೀ) ೨ ೧/೨ ಅಡಿಯಿಂದ (೯೦ ಸೆಂ.ಮೀ) ೩ ಅಡಿ ಉದ್ದವಿರುತ್ತವೆ. ಬಾಲ (೧೨.೫ ಸೆಂ.ಮೀ) ೫ ಅಂಗುಲದಿಂದ (೩೭.೫ ಸೆಂ.ಮೀ) ೧೩ ಅಂಗುಲ ಉದ್ದವಿರುತ್ತದೆ.

ಆಹಾರ : ಹುಲ್ಲು, ಎಳೆ ಚಿಗುರು ಇವುಗಳ ಪ್ರಧಾನ ಆಹಾರ, ಅತ್ತಿ, ಆಲ, ಕರಂಬಳ ಮೊದಲಾದ ಅರಣ್ಯ ಮರಗಳು ಫಲಬಿಟ್ಟಾಗ, ಅವುಗಳ ಬುಡದಲ್ಲಿ ಉದುರಿದ ಹಣ್ಣುಗಳಿಗಾಗಿ ಮುಗಿಬೀಳುತ್ತವೆ. ಕಪಿಗಳು ಇಂತಹ ಹಣ್ಣುಗಳನ್ನು ಉದುರಿಸುವುದರಿಂದ ಕಪಿ ಹಿಂಡುಗಳನ್ನು ಬೆನ್ನು ಹತ್ತುತ್ತವೆ. ಇವಕ್ಕೆ ಹೂಗಳು ಮತ್ತು ಹಣ್ಣುಗಳು (ಅತ್ತಿ, ಆಲ, ಕರಂಬಳದ) ಅಚ್ಚುಮೆಚ್ಚಿನ ಆಹಾರ.

ಲಕ್ಷಣಗಳು : ಮಾಟವಾದ ದೇಹ, ಹೊನ್ನಿನ ಮೈ ಬಣ್ನ. ಮೈ ಬಣ್ಣದ ಮೇಲೆ ಸುಂದರವಾದ ಬಿಳಿ ಚುಕ್ಕೆಗಳಿವೆ. ಕಪ್ಪು ಪಟ್ಟಿಯು ನಡುಬೆನ್ನಿನ ಮೆಲೆ ಹುರಿಯಾಗಿ ಕುತ್ತಿಗೆಯಿಂದ ಬಾಲದವರೆಗೆ ಹರಡಿದೆ. ಚುಕ್ಕೆಗಳು ಎಲ್ಲಾ ವಯಸ್ಸಿನ ಜಿಂಕೆಗಳಲ್ಲಿಯೂ ಮತ್ತು ಎಲ್ಲ ಋತುಗಳಲ್ಲಿಯೂ ಹೇರಳವಾಗಿರುತ್ತವೆ. ವಯಸ್ಸಾದ ಗಂಡುಗಳು ಕಡು ಕಂದು ಬಣ್ಣವಾಗಿರುತ್ತವೆ. ಪಕ್ಕೆಯ ಕೆಳಗಿನ ಸಾಲಿನ ಬಿಳಿ ಚುಕ್ಕೆಗಳು ಉದ್ದ ಸಾಲಿನಲ್ಲಿ ಹರಡಿ ವಿಚ್ಛೇದಿತ ಸರಳ ರೇಖೆಗಳಂತೆ ಕಾಣುತ್ತವೆ. ಹೊಟ್ಟೆಯ ಭಾಗ ತಿಳಿ ಬಿಳಿಯಾಗಿದೆ. ಕಾತರ ಮತ್ತು ಚಂಚಲತೆಯನ್ನು ಹೊರ ಸೂಸುವ ವಿಶಾಲವಾದ ಕಣ್ಣುಗಳು, ಸದ್ದು ಬಂದ ಕಡೆಗೆ ತಿರುಗಿ ನಿಮಿರಿ ನಿಲ್ಲುವ ಕಿವಿಗಳು. ಬಾಲದ ತಳಭಾಗ ಬೆಳ್ಳಗಿದೆ. ಇವುಗಳು ಅತ್ಯಂತ ಸುಂದರವಾದ ಹಾಗೂ ಆಕರ್ಷಕವಾದ ಜಿಂಕೆಗಳು. ಇದರಿಂದಲೇ ಕವಿಗಳು ಸುಂದರ ತರುಣಿಯರನ್ನು ಜಿಂಕೆಯ ಅಂಗಾಂಗಗಳಿಗೆ ಹೋಲಿಸಿದ್ದಾರೆ.

ಕೊಂಬುಗಳು ಒಂದು ವರ್ಷದ ಜಿಂಕೆಗಳಲ್ಲಿ (೧೦-೧೨.೫ ಸೆಂ.ಮೀ) ೪ ರಿಂದ ೫ ಅಂಗುಲ ಉದ್ದವಾಗಿದ್ದು ಟಿಸಲುಗಳಿಲ್ಲದೆ ಚೂಪಾಗಿರುತ್ತವೆ. ಇವು ಉದುರಿ ಮತ್ತೆ ಬೇರೆ ಕೊಂಬುಗಳು ಹುಟ್ಟುತ್ತವೆ. ವಯಸ್ಸಾದಂತೆ ಕೊಂಬುಗಳಲ್ಲಿ ಕವಲುಗಳು ಮುಡುತ್ತವೆ. ೪೫ ವರ್ಷ ವಯಸ್ಸಿಗೆ ಸಾಧಾರಣ (೭೫ ಸೆಂ.ಮೀ)೨ ೧/೨ ಅಡಿಯಿಂದ (೯೦ ಸೆಂ.ಮೀ) ೩ ಅಡಿ ಉದ್ದದ ಕೊಂಬುಗಳಿರುತ್ತವೆ. ಪೂರ್ಣ ಬೆಳೆದ ಕೊಂಬುಗಳಿಗೆ ೩ ತುದಿಗಳಿದ್ದು ತ್ರಿಶೂಲಾಕಾರವಾಗಿರುತ್ತವೆ. ಎತ್ತರವಾಗಿ ಬೆಳೆಯುವ ಕೊಂಬಿನ ತುದಿಯನ್ನು ಜಂತಿಕೊಂಬು ಎಂದು ಪರಿಗಣಿಸುತ್ತಾರೆ. ಹಣೆಯ ಭಾಗದಲ್ಲಿ ಜಂತಿಕೊಂಬಿನಿಂದ ಸಮಕೋನದಲ್ಲಿ ಮುಂದಕ್ಕೆ ಬೆಳೆದ ಒಂದರ ತುದಿ ಮುಂದೆ ಸ್ವಲ್ಪ ಮೇಲಕ್ಕೆ ಬಾಗಿದೆ. ಜಂತಿಕೊಂಬಿನ ಒಳಗಡೆ ಮತ್ತೊಂದು ಸಣ್ಣಟಿಸಿಲು ಕೊಂಬಿದೆ. ಮೂರು ತುದಿಗಳಲ್ಲಿ ಜಂತಿಕೊಂಬು ಸದಾ ಉದ್ದವಾಗಿರುತ್ತದೆ. ಕೊಂಬುಗಳು ವರ್ಷಕ್ಕೊಮ್ಮೆ ಉದುರಿಹೋಗಿ ಅಗಸ್ಟ್‌ಸೆಪ್ಟೆಂಬರ್ ತಿಂಗಳುಗಳಲ್ಲಿ ಮತ್ತೆ ಬೆಳೆಯುವ ಕೊಂಬುಗಳು ಮಕಮಲ್ಲಿನಂತಿರುವ ತುಪ್ಪುಳು ಚರ್ಮದಿಂದ ಆವೃತವಾಗಿರುತ್ತವೆ. ಈ ಚರ್ಮವು ಕೊಂಬನ್ನು ಮರಗಿಡಗಳಿಗೆ ಉಜ್ಜುವುದರಿಂದ ಕಳಚುತ್ತದೆ. ಡಿಸೆಂಬರ್‌ತಿಂಗಳವರೆಗೆ ಬೆಳೆಯುತ್ತಿರುವ ಕೊಂಬು ಈ ಚರ್ಮದಿಂದ ಮುಚ್ಚಿರುತ್ತದೆ. ಆದರೆ ವವಿಧ ಅವಸ್ಥೆಗಳಲ್ಲಿನ ಬೆಳೆಯುತ್ತಿರುವ ಕೊಂಬುಗಳುಳ್ಳ ಗಂಡು ಜಿಂಕೆಗಳು ವರ್ಷದ ಎಲ್ಲಾ ಕಾಲದಲ್ಲಿಯೂ ಕಂಡುಬರುತ್ತವೆ. ಪೂರ್ಣ ಬೆಳೆದ ಕೊಂಬಿನ ಗಂಡು ಜಿಂಕೆ ಉಗ್ರ ಸ್ವರೂಪಪ್ರದರ್ಶಿಸುತ್ತದೆ ಮತ್ತು ಕೊಂಬುಗಳು ಬಿದ್ದಾಗ ಅಥವಾ ಮೆದುವಾಗಿದ್ದಾಗ ಸಾಧುವಾಗಿ ವರ್ತಿಸುತ್ತವೆ.

ಬಾಲ ತೆಳುವಾಗಿಯೂ, ಉಳಿದ ಜಿಂಕೆಗಳ ಬಾಲಕ್ಕಿಂತ ಉದ್ದನಾಗಿಯೂ ಇದೆ. ಗುಂಪಿನ ನಾಯಕ ಗಂಡು ಜಿಂಕೆ. ಇದು ತನ್ನ ಬಾಲವನ್ನು ಎತ್ತಿ ಹಿಡಿದು ಬಾಲದ ಬೆಳ್ಳಗಿನ ಭಾಗವನ್ನು ಪ್ರದರ್ಶಿಸಿ ಹಿಂಡಿನ ಇತರ ಜಿಂಕೆಗಳಿಗೆ ಅಪಾಯದ ಮುನ್ಸೂಚನೆ ಕೊಡುತ್ತದೆ. ಹಲ್ಲುಗಳು ಸಸ್ಯಾಹಾರಕ್ಕೆ ಮಾರ್ಪಟ್ಟು ಹೊಂದಿಕೊಂಡಿವೆ. ಮೇಲ್ದವಡೆಯ ಕೋರೆ ಹಲ್ಲುಗಳು ಇಲ್ಲ.

ಸಂತಾನಾಭಿವೃದ್ಧಿ : ಮಾರ್ಚನಿಂದ ಜೂನ್‌ವರೆಗೆ ಗಂಡು ಜಿಂಕೆಗಳು ಮದವೇರಿ ಸಂಭೋಗ ಕ್ರಿಯೆಗೆ ಸಿದ್ಧವಾಗುತ್ತವೆ. ಮದವೇರಿದ ಗಂಡು ಒಂದು ರೀತಿಯ ಕಿರಿಕಿರಿಯ ಕರ್ಕಶವಾದ ಎತ್ತರದ ದನಿಯಲ್ಲಿ ಕೂಗುತ್ತದೆ. ಗರ್ಭಾವಧಿಯ ಕಾಲ ೭ ರಿಂದ ೮ ತಿಂಗಳು. ಸಾಮಾನ್ಯವಾಗಿ ಒಂದು ಸೂಲದಲ್ಲಿ ಒಂದೇ ಒಂದು ಮರಿ ಹುಟ್ಟುತ್ತದೆ. ಅಪರೂಪವಾಗಿ ೨ ಮರಿಗಳು ಹುಟ್ಟುಬಹುದು. ಎಲ್ಲಾ ಋತುಗಳಲ್ಲಿಯೂ ಮರಿಗಳು ಕಂಡುಬರುತ್ತವೆ. ಇವುಗಳ ಸಂತಾನೋತ್ಪತ್ತಿ ಅಪಾರ. ೬ ತಿಂಗಳಿಗೊಮ್ಮೆ ಮರಿ ಹಾಕಲು ಸಿದ್ಧವಾಗುತ್ತವೆ. ಜೀವಾವಧಿ ೧೦-೧೫ ವರ್ಷಗಳು.

ಸ್ವಭಾವ : ಇವು ಹಿಂಡುಗಳಲ್ಲಿ ವಾಸಿಸುತ್ತವೆ. ಸಾಮಾನ್ಯವಾಗಿ ಚಿತಾಲ್‌ಎಂದಾಕ್ಷಣ ಸುಂದರ ಪರಿಸರದ ಕಲ್ಪನೆ ಮೂಡುತ್ತದೆ. ಒಂದು ಹಿಂಡಿನಲ್ಲಿ ೧೦ ರಿಂದ ೩೦ ಜಿಂಕೆಗಳಿರುತ್ತವೆ. ಸಾಮಾನ್ಯವಾಗಿ ಪ್ರಾಯಸ್ತ ಹೆಣ್ಣು ಹಿಂಡಿನ ಮುಖಂಡತ್ವವನ್ನು ವಹಿಸುತ್ತದೆ. ಇವು ಹಳ್ಳಿಗಳು, ಕೃಷಿ ಮಾಡಿದ ಜಮೀನುಗಳ ಪಕ್ಕದಲ್ಲಿರುತ್ತವೆ. ಕಪಿಗಳಂತಹ ಇತರ ಕಾಡು ಪ್ರಾಣಿಗಳ ಜೊತೆಯಲ್ಲಿರುತ್ತವೆ. ಇತರ ಜಿಂಕೆಗಳಿಗೆ ಹೋಲಿಸಿದರೆ ತೀವ್ರ ನಿಶಾಚರಿಗಳಲ್ಲ. ಮುಂಜಾನೆ ಮತ್ತು ಬೆಳಗಿನಲ್ಲಿಯೂ ಮೇಯುತ್ತಿರುವುದು ಸಾಮಾನ್ಯ. ಪುನಃ ಮಧ್ಯಾಹ್ನದಲ್ಲಿಯೂ ಮೇಯಲು ತೊಡಗುತ್ತವೆ. ನಡುನಡುವೆ ಆಗಾಗ ನೆರಳಿನ ಪ್ರದೇಶದಲ್ಲಿ ಮಲಗಿ ವಿಶ್ರಮಿಸಿಕೊಳ್ಳುತ್ತವೆ. ಈ ಜಿಂಕೆಗಳು ಮನುಷ್ಯನಿಗೆ ಹೆಚ್ಚಾಗಿ ಹೆದರುವುದಿಲ್ಲ.

ಇವು ಬಲುಸುಂದರವಾಗಿರುವದರಿಂದ ಇವನ್ನು ಸಾಕುತ್ತಾರೆ. ಚರ್ಮ ಮತ್ತು ಕೊಂಬುಗಳನ್ನು ಗೃಹ ಅಲಂಕಾರಕ್ಕಾಗಿ ಬಳಸುತ್ತಾರೆ. ಹದಗೊಳಿಸಿದ ಇದರ ಚರ್ಮವನ್ನು ಸಾಧುಸಂತರು ಹಾಸಿಕುಳಿತುಕೊಳ್ಳಲು ಬಳಸುತ್ತಾರೆ. ಕೊಂಬಿಗೆ ಔಷಧೀಯ ಗುಣಗಳೂ ಉಂಟು. ಇವುಗಳ ಮಾಂಸ ಬಹಳ ರುಚಿಯೆಂದು ಹೇಳುತ್ತಾರೆ. ಆಗಾಗ ನೀರಿಗೆ ಇಳಿಯುವುದುಂಟು. ಚೆನ್ನಾಗಿ ಈಜಬಲ್ಲವು. ಜಿಂಕೆಗಳ ವೈರಿಗಳು ಕಾಡುನಾಯಿ, ಹುಲಿ, ಚಿರತೆ, ಹೆಬ್ಬಾವು ಮತ್ತು ಮನುಷ್ಯ.

—- 

ಗಣ : ಆರ್ಟಿಯೊಡ್ಯಾಕ್ಟೈಲ
ಕುಟುಂಬ : ಸರ್ವೀಡೀ
ಉದಾ : ಸಾಂಬಾರ್‌(ಕಡವೆ)
(Sambar)
ಶಾಸ್ತ್ರೀಯ ನಾಮ : ಸರ್ವಸ್‌ಯೂನಿಕೊಲರ್ (Cervus unicolor)

ವಿತರಣೆ ಮತ್ತು ಆವಾಸ : ಭಾರತ ಮತ್ತು ಶ್ರೀಲಂಕಾದ ದಟ್ಟ ಕಾಡುಗಳು, ಬೆಟ್ಟ ಗುಡ್ಡಗಳು ಇದರ ಬೀಡು. ಭಾರತದಲ್ಲಿ ನೀಲಗಿರಿ ಮತ್ತು ಪಳನಿ ಬೆಟ್ಟಗಳಲ್ಲಿ ಹೇರಳವಾಗಿ ಕಂಡು ಬರುತ್ತದೆ.

ಗಾತ್ರ : ಸುಮಾರು (೧೫೦ ಸೆಂ.ಮೀ.) ೫ ಅಡಿಗಿಂತ ಹೆಚ್ಚು ಎತ್ತರ ಮತ್ತು ೨೦೦ ರಿಂದ ೩೨೦ ಕೆ.ಜಿ. ತೂಕವಿರುತ್ತದೆ. ಭಾರತದ ಜಿಂಕೆಗಳಲ್ಲಿ ಸಾಂಬಾರ್ ಅತ್ಯಂತ ದೊಡ್ಡದು ಮತ್ತು ಪೂರ್ಣವಾಗಿ ಬೆಳೆದ ಒಂದು ಗಂಡು ೨೨೫ ರಿಂದ ೩೨೦ ಕೆ.ಜಿ. ತೂಕವಿರುತ್ತದೆ. ಒಂದು ಕವಡೆಯ ಕೊಂಬು (೧೨೦ ಸೆಂ.ಮೀ.) ೪ ಅಡಿ ಉದ್ದವಿರುತ್ತದೆ. ಆದರೆ ಈಗ ಅಪರೂಪವಾಗಿದೆ. ಈಗ ದೊರಕುವ ಕಡವೆಗಳ ಕೊಂಬು ಸಾಮಾನ್ಯವಾಗಿ (೯೦ ಸೆಂ.ಮೀ.) ೩ ಅಡಿ ಉದ್ದ ಇರುತ್ತವೆ.

ಆಹಾರ : ಹುಲ್ಲು, ಎಳೆ ಚಿಗುರು, ಹಣ್ಣುಹಂಪಲು, ಬಿದಿರು, ಕಾಡುಗಿಡಗಳ ಸೊಪ್ಪು, ತೊಗಟೆ, ಕಾಯಿ ಇತ್ಯಾದಿಗಳು ಇದರ ಆಹಾರ.

ಲಕ್ಷಣಗಳು : ಇವುಗಳ ದೇಹದ ಬಣ್ಣ ಬೂದು ಕಂದು. ವಯಸ್ಸಾದಂತೆ ಕಪ್ಪು ಕಂದಾಗುತ್ತದೆ. ಹೆಣ್ಣು ಮತ್ತು ಮರಿಗಳ ಬಣ್ಣ ಕೆಂಗಂದು. ಮೈಮೇಲೆ ಒರಟು ಬೊಂತೆ ಕೂದಲುಗಳ ಹೊದಿಕೆ ಇದೆ. ಗಂಡು ಕಡವೆಯ ಕುತ್ತಿಗೆಯ ಭಾಗದಲ್ಲಿ ಕೂದಲುಗಳು ಉದ್ದವಾಗಿದ್ದು ಒಂದು ರೀತಿಯ ‘ಆಯಾಲು ನಿರ್ಮಾಣವಾಗಿದೆ. ಬಿಸಿ ವಾತಾವರಣದಲ್ಲಿ ಕೂದಲುಗಳು ಉದುರಿ ಹೋಗುತ್ತವೆ. ಒರಟಾದ ಚರ್ಮದಿಂದ ಮುಚ್ಚಿದ ಕವಲೊಡೆದ ಗಂಭೀರ ಆಕಾರದ ಕೊಂಬುಗಳಿವೆ. ಕೊಂಬುಗಳು ಪ್ರತಿವರ್ಷ ಮಾರ್ಚ್‌ತಿಂಗಳ ವೇಳೆಯಲ್ಲಿ ಉದುರಿ ಅವುಗಳ ಸ್ಥಳದಲ್ಲಿ ಹೊಸ ಕೊಂಬುಗಳು ಹುಟ್ಟುತ್ತವೆ. ಹೆಣ್ಣು ಕಡವೆಗಳಲ್ಲಿ ಕೊಂಬುಗಳಿಲ್ಲ. ಆದುದರಿಂದ ಕೊಂಬುಗಳಿರುವುದು ಒಂದು ರೀತಿಯ ಲಿಂಗದ್ವಿರೂಪತ್ವಕ್ಕೆ ಸಾಕ್ಷಿ. ಕೊಂಬುಗಳು ತುದಿಯಲ್ಲಿ ಸಮಭಾಗಗಳಾಗಿ ಕವಲೊಡೆದಿರುತ್ತವೆ. ವಯಸ್ಸಾದ ಕಡವೆಗಳ ಕೊಂಬುಗಳು ಹೆಚ್ಚು ಹೊಳಪು ಕಪ್ಪಾಗಿರುತ್ತವೆ. ಹುಟ್ಟಿದ ಮರಿಗಳಲ್ಲಿ ಕವಲುಗಳು ಪೂರ್ಣಬೆಳೆದಿರದೆ ಮೋಟುಗೂಟದಂತಿರುತ್ತವೆ. ಒಂದು ವರ್ಷದ ನಂತರ ಬೆಳೆಯಲು ಆರಂಭಿಸುತ್ತವೆ. ಬೆಳೆಯುವಾಗ ಕೊಂಬುಗಳು ಮೃದುವಾಗಿರುತ್ತವೆ ಮತ್ತು ಅವುಗಳ ಮೇಲೆ ಪೊರೆಯಂತಹ ಚರ್ಮದ ಹೊದಿಕೆ ಇರುತ್ತದೆ. ಕೊಂಬು ಸದೃಢವಾಗಿ ಬೆಳೆದ ಮೇಲೆ ಕೊಂಬಿನ ಬುಡವನ್ನು ಮರಗಳಿಗೆ ತಿಕ್ಕಿ ಹಸನು ಮಾಡಿ, ಚರ್ಮದ ಹೊದಿಕೆಯನ್ನು ಕಳೆದುಕೊಳ್ಳುತ್ತವೆ. ಇವುಗಳ ದೃಷ್ಟಿ ಸಾಧಾರಣ. ಆದರೆ, ಉದ್ದವಾದ ದಂಡು ಚಂಚಲ ಕಿವಿಗಳು ಮತ್ತು ಅಗಲವಾದ ಮೂಗಿನ ಹೊಳ್ಳೆಗಳಿವೆ. ಅಂದರೆ ಇವುಗಳಲ್ಲಿ ಶ್ರವಣ ಮತ್ತು ಘ್ರಾಣ ಸಂವೇದನೆ ಚೆನ್ನಾಗಿ ಬೆಳೆದಿದೆ. ಸಾಮಾನ್ಯವಾಗಿ ರಾತ್ರಿಯ ವೇಳೆ ಮಾತ್ರ ಆಹಾರಕ್ಕಾಗಿ ಅಲೆದಾಡುತ್ತವೆ. ಹಗಲು ದಟ್ಟವಾದ ಪೊದೆಗಳಲ್ಲಿ ಅಡಗಿ ಕಾಲಕಳೆಯುತ್ತವೆ. ನೀರನ್ನು ಕಂಡರೆ ಇಷ್ಟ ತುಂಬಾ ಚೆನ್ನಾಗಿ ಈಜಲೂ ಬಲ್ಲವು.

ಸಂತಾನಾಭಿವೃದ್ಧಿ : ಹೆಣ್ಣನ್ನು ಒಲಿಸಿಕೊಳ್ಳಲು ಗಂಡುಗಳು ಘೋರವಾಗಿ ಹೋರಾಡುವುದುಂಟು. ಇವು ಅಕ್ಟೋಬ್‌ರ್‌ಮತ್ತು ಡಿಸೆಂಬರ್‌ನಡುವೆ ಸಂಭೋಗಕ್ಕೆ ಸಿದ್ಧವಾಗುತ್ತವೆ. ಕಾಮೋದ್ರೇಕಗೊಂಡ ಗಂಡುಗಳು ಹೂಂಕರಿಸುತ್ತವೆ. ಮದವೇರಿದ ಗಂಡುಗಳ ಕಣ್ಣಿನ ಬುಡದಲ್ಲಿರುವ ಗ್ರಂಥಿಗಳಿಂದ ತೀಕ್ಷ್ಣವಾಸನೆಯ ಒಂದು ರೀತಿಯ ದ್ರವ ಸೋರುತ್ತದೆ. ಗರ್ಭಾವಧಿ ೨೪೦ ರಿಂದ ೨೬೦ ದಿನಗಳು. ಮೇ ಮತ್ತು ಜೂನ್‌ ತಿಂಗಳುಗಳ ಪ್ರಾರಂಭದಲ್ಲಿ ಮರಿಹಾಕುತ್ತವೆ. ಒಂದು ಸೂಲದಲ್ಲಿ ೩ ಮರಿಗಳು ಹುಟ್ಟುತ್ತವೆ. ೩ ವರ್ಷಕ್ಕೆ ಹೆಣ್ಣುಗಳು ಲಿಂಗಪ್ರೌಢತನ ಗಳಿಸಿಕೊಂಡು ಈಯಲು (ಮರಿಹಾಕಲು) ಪ್ರಾರಂಭಿಸುತ್ತವೆ. ಇವು ಪ್ರತಿವರ್ಷವೂ ಮರಿ ಹಾಕುವುದುಂಟು. ಹುಟ್ಟಿದ ಮರಿಗಳಿಗೆ ಮೊದಮೊದಲು ಮೈಮೆಲೆ ಚುಕ್ಕೆಗಳಿರುವುದಿಲ್ಲ. ದೇಹ ತಿಳಿಕಂದು ಬಣ್ಣವಾಗಿರುತ್ತದೆ. ಇವು ೮-೧೦ ವರ್ಷಗಳ ಕಾಲ ಬದುಕುತ್ತವೆ.

ಸ್ವಭಾವ : ಇವು ಕಾಡಿನಲ್ಲಿ ವಾಸಮಾಡಿದರೂ, ಕೃಷಿ ಮಾಡಿದ ಜಮೀನಿನ ಬಳಿ ಇರಲು ಇಷ್ಟಪಡುತ್ತವೆ. ನೀರು, ವಿಪುಲ ಹುಲ್ಲು, ಬಿದಿರುಗಳಿದ್ದ ಪ್ರದೇಶದಲ್ಲಿ ಇರಲು ಇಷ್ಟಪಡುತ್ತವೆ. ಗಂಡು ಕಡವೆ ತಾನು ಆರಿಸಿಕೊಂಡು ನೆಲೆಸಿದ ಕ್ಷೇತ್ರವನ್ನು ಈರ್ಷೆಯಿಂದ ರಕ್ಷಿಸಿಕೊಳ್ಳುತ್ತದೆ. ಇವು ಗುಂಪುಗಳಲ್ಲಿ ವಾಸಿಸುತ್ತವೆ. ಗುಂಪಿನಲ್ಲಿ ಒಂದು ಗಂಡು ಮತ್ತು ೫ ರಿಂದ ೧೨ ರ ವರೆಗೆ ಹೆಣ್ಣುಗಳಿರುತ್ತವೆ. ಬೆದೆಯ ಕಾಲ ಮುಗಿದ ಮೆಲೆ ಗುಂಪು ಚದುರುತ್ತದೆ. ಹುಟ್ಟಿದ ಮರಿಗಳು ಕೆಲವು ಕಾಲ ತಾಯಿ ಗುಂಪಿನಲ್ಲಿ ಉಳಿದಿರುತ್ತವೆ. ಕಡವೆಗಳು ಎಮ್ಮೆಗಳಂತೆ ಕೆಸರಿನಲ್ಲಿ ಬಿದ್ದು ಹೊರಳಾಡುತ್ತವೆ. ಇವು ಬಹಳ ಆಕರ್ಷಕವಾದ ಪ್ರಾಣಿಗಳು. ಜೋರಾಗಿ ಓಡಿ ಬೆನ್ನಟ್ಟಿಬರುವ ಚಿರತೆ, ಹುಲಿ, ತೋಳ, ಕಾಡುನಾಯಿಗಳಿಂದ ತಪ್ಪಿಸಿಕೊಳ್ಳುತ್ತವೆ. ಅನಿವಾರ್ಯವಾಗಿ ಎದುರಾದಾಗ ಕೊಂಬಿನಿಂದ ಇರಿಯುವ, ಕಾಲಿನಿಂದ ಒದೆಯುವ ಪ್ರವೃತ್ತಿ ತೋರುತ್ತವೆ.

ಕೆರೆ-ಕುಂಟೆಗಳಲ್ಲಿನ ಜಲಸಸ್ಯಗಳನ್ನು ತಿನ್ನಲು ನೀರಿಗೆ ನುಗ್ಗುತ್ತವೆ. ಎತ್ತರದ ಮರದ ಎಲೆ ಸೊಪ್ಪುಗಳನ್ನು ತಿನ್ನಲು ಹಿಂಗಾಲುಗಳ ಮೇಲೆ ಎದ್ದು ನಿಂತು ಎಲೆಗಳನ್ನು ಎಟುಕಿಸಿಕೊಂಡು ತಿನ್ನುತ್ತವೆ.

ಕಡವೆಗಳು ತುಂಬಾ ಧೈರ್ಯಶಾಲಿಗಳು ಮತ್ತು ವೈರಿಗಳೊಂದಿಗೆ ಧೈರ್ಯವಾಗಿ ಹೋರಾಡುತ್ತವೆ. ಇವುಗಳ ಕೊಂಬುಗಳನ್ನು ಮನೆಗಳಲ್ಲಿ ಅಲಂಕಾರಕ್ಕಾಗಿ ಇಡುವುದು ಸಾಮಾನ್ಯ. ದಟ್ಟಕಾಡಿನಲ್ಲಿ ನಿಶ್ಯಬ್ದವಾಗಿ ಚಲಿಸಬಹುದಾದ ಇವುಗಳ ಸಾಮಥ್ಥ್ಯ ಅದ್ಭುತ. ತಲೆ ಮತ್ತು ಕೊಂಬುಗಳ ಮಾತ್ರ ನೀರಿನಿಂದ ಹೊರಗಿದ್ದು ಇಡೀ ದೇಹ ನೀರಿನಲ್ಲಿ ಮುಳುಗಿ ಈಜುತ್ತವೆ. ಇವು ಹುಲಿಗೆ ಸಾಮಾನ್ಯ ಆಹಾರವಾಗುತ್ತದೆ.

 —-

ಗಣ : ಆರ್ಟಿಯೊಡ್ಯಾಕ್ಟೈಲ
ಕುಟುಂಬ : ಸರ್ವೀಡೀ
ಉದಾ : ಬಗಳು ಜಿಂಕೆ ಅಥವಾ ಏಣು ಮುಖದ ಜಿಂಕೆ
(Barking deer or Rib faced deer)
ಶಾಸ್ತ್ರೀಯ ನಾಮ : ಮಂಟಿಯಾಕಸ್‌ಮಂಟ್‌ಜ್ಯಾಕ್‌ (Muntiacus muntjak)
(ಮಂಟಿಯಾಕಸ್‌ಮಂಟ್‌ಜ್ಯಾಕ್‌) (Muntiacus muntjak)

489_69_PP_KUH

ವಿತರಣೆ ಮತ್ತು ಆವಾಸ : ಪೂರ್ವ ಏಷ್ಯಾದಲ್ಲಿ ವಿಸ್ತಾರವಾಗಿ ಹರಡಿವೆ. ಭಾರತದ ಕಾಡುಗಳೆಲ್ಲೆಲ್ಲಾ ನೆಲಸಿವೆ. ಬಿದಿರು ಮತ್ತು ಗಿಡಗಂಟೆಗಳು ತುಂಬಿದ ದಟ್ಟ ಕಾಡುಗಳಲ್ಲಿ ಪರ್ವತ ಸೀಮೆಗಳಲ್ಲಿ ಒಂಟಿಯಾಗಿ ಅಥವಾ ಜೊತೆಜೊತೆಯಾಗಿ ಕಾಣ ಬರುತ್ತವೆ. ಸಾಮಾನ್ಯವಾಗಿ ನೀರಿರುವ ಸ್ಥಳಗಳ ಸನಿಹದಲ್ಲಿ ಓಡಾಡಿಕೊಂಡಿರುತ್ತದೆ.

ಗಾತ್ರ : ಉದ್ದ (೭೫ ಸೆಂ.ಮೀ) ೨ ೧/೨ ಅಡಿಯಿಂದ (೧೦೫ ಸೆಂ.ಮೀ) ೩ ೧/೩ ಅಡಿ. ಭುಜದ ಬಳಿ (೪೫ ಸೆಂ.ಮೀ) ೧ ೧/೨ ಅಡಿಯಿಂದ (೬೦ ಸೆಂ.ಮೀ) ೨ ಅಡಿ ಎತ್ತರ. ತೂಕ ೧೪ ರಿಂದ ೧೮ ಕೆ.ಜಿ. ಹೆಣ್ಣು ಗಂಡಿಗಿಂತಲೂ ತೂಕದಲ್ಲಿ ಕಡಿಮೆ. ಬಾಲ (೧೦ ರಿಂದ ೧೨.೫ ಸೆಂ.ಮಿ) ೪ ರಿಂದ ೫ ಅಂಗುಲ ಉದ್ದವಿದೆ, ಗಂಡಿನ ಕೊಂಬು (೧೨.೫ ಸೆಂ.ಮೀ) ೫ ಅಂಗುಲ ಉದ್ದವಿರುತ್ತದೆ.

ಆಹಾರ : ಹುಲ್ಲು, ಎಳೆ ಚಿಗುರು, ಸೊಪ್ಪು, ಹಣ್ಣು, ಕಾಯಿ, ಹೂವು, ಮೊಗ್ಗುಗಳನ್ನು ತಿನ್ನುತ್ತದೆ.

ಲಕ್ಷಣಗಳು : ದೇಹದ ಮೇಲೆ ಮೃದು ಕೂದಲಿನ ಹೊದಿಕೆ ಇದೆ. ಮೈ ಬಣ್ಣ ಗಾಢ ಕಂದು (ಚೆಸ್ಟ್‌ನಟ್‌) ಅಥವಾ ಬೂದುಮಿಶ್ರಿತ ಕಂದು, ದೇಹದ ಕೆಳಗೆ ಬಣ್ಣ ತಿಳಿಯಾಗಿ, ಬೆನ್ನಿನ ಮೇಲೆ ದಟ್ಟವಾಗಿದೆ. ತೊಡೆಯ ಹಿಂಭಾಗ, ಹೊಟ್ಟೆಯ ತಳ, ಬಾಲದಬುಡ, ಗದ್ದ ಮತ್ತು ಕುತ್ತಿಗೆಯ ಮೇಲ್ಭಾಗ ಬಿಳಿಯಾಗಿರುತ್ತವೆ. ಇವುಗಳಲ್ಲಿ ಬಿಳಿ ಬಣ್ಣದ ಗುಲಾಬಿ ಕಣ್ಣಿನ ಆಲ್ಬಿನೊ ಬಗಳು ಜಿಂಕೆಗಳೂ ಇವೆ. ಆದರೆ ಅಪರೂಪ.

ಕೊಂಬುಗಳು ಗಂಡುಜಿಂಕೆಗಳಲ್ಲಿ ಮಾತ್ರ ಕಂಡುಬರುತ್ತವೆ. ಕೊಂಬುಗಳು ಪ್ರತಿ ವರ್ಷವೂ ಮೇ ಜೂನ್‌ತಿಂಗಳಲ್ಲಿ ಉದುರಿ ಮಳೆಗಾಲದ ಪ್ರಾರಂಭದಲ್ಲಿ ಬೆಳೆಯುತ್ತವೆ. ಕೊಂಬು ೫ ಅಂಗುಲದಿಂದ ೬ ಅಂಗುಲ ಉದ್ದವಿರುತ್ತವೆ. ಕೊಂಬುಗಳು ಉದ್ದವಾಗಿ, ಗಟ್ಟಿಯಾಗಿವೆ. ಬುಡದಲ್ಲಿ ಕೂದಲುಗಳಿಂದ ಮುಚರಚಿವೆ. ಮೇಲ್ದವಡೆಯ ಕೋರೆಹಲ್ಲುಗಳು ಉದ್ದವಾಗಿ ಬಾಯಿಯಿಂದ ಹೊರಚಾಚಿ ನಸುಬಾಗಿದ ದಾಡೆಗಳಾಗಿವೆ. ಹರಿತವಾದ ಈ ದಾಡೆಗಳನ್ನು ಪರಿಣಾಮಕಾರಿ ಅಸ್ತ್ರವಾಗಿ ಬಳಸುತ್ತವೆ. ಹೆಣ್ಣುಗಳಲ್ಲಿ ಕೋರೆಹಲ್ಲುಗಳು ಸಣ್ಣವು ಮತ್ತು ಗಂಡಿನಷ್ಟು ಹರಿತವೂ ಅಲ್ಲ.

ತಲೆ ಬುರುಡೆ ಮುಖದ ವಿಚಿತ್ರ ಆಕಾರವುಳ್ಳ ಎಲುಬುಗಳ ಉಬ್ಬುಗಳನ್ನು ಹೊಂದಿದೆ. ಇದರಿಂದಾಗಿ ಇದಕ್ಕೆ ಏಣುಮುಖದ ಜಿಂಕೆ ಎಂಬ ಹೆಸರು ಬಂದಿದೆ. ಉಬ್ಬುಗಳ ಮೇಲ್ಗಡೆ ಕೊಂಬುಗಳ ಪೀಠಗಳಾಗಿವೆ. ಹೆಣ್ಣುಗಳಲ್ಲಿ ಮುಖದ ಎಲುಬಿನ ಉಬ್ಬುಗಳು ಕೊಂಬಾಗಿ ಬೆಳೆಯದೆ ಬಿರುಸು ಕೂದಲುಗಳ ಗಮ್ಮಟೆಯಾಗಿವೆ. ಕೊಂಬುಗಳಿಗೆ ಹಣೆಯ ಕವಲು ಮಾತ್ರ ಇವೆ. ಸಾಮಾನ್ಯವಾಗಿ ಕೊಂಬಿನ ಕವಲುಗಳ ಅಂತರ ೩ ೧/೨ ಅಂಗುಲ.

ಈ ಜಿಂಕೆಗೆ ಉದ್ದನಾದ ನಾಲಿಗೆ ಇದೆ. ಇದರಿಂದ ಇದು ತನ್ನ ಮುಖವನ್ನು ನೆಕ್ಕುತ್ತಿರುತ್ತದೆ. ಕಿವಿ ಮತ್ತು ಮೂಗುಗಳು ತೀಕ್ಷ್ಣವಾಗಿವೆ. ದೇಹಕ್ಕೆ ಒಂದು ರೀತಿಯ ವಾಸನೆ ಇದೆ. ಇವು ಹಗಲು ಸಂಚರಿಸುವ ಪ್ರಾಣಿಗಳು. ಉದ್ರೇಕಗೊಂಡಾಗ ಅಥವಾ ಗಾಬರಿಗೊಂಡಾಗ ಅಥವಾ ಸಂತಾನಾಭಿವೃದ್ಧಿ ಸಮಯದಲ್ಲಿ ನಾಯಿಗಳಂತೆ ಬಗುಳುತ್ತವೆ. ಆದುದರಿಂದ ಇವುಗಳನ್ನು ಬಗಳುವ ಜಿಂಕೆ ಎಂದೂ ಕರೆಯುತ್ತಾರೆ.

ಸಂತಾನಾಭಿವೃದ್ಧಿ : ವರ್ಷದ ಯಾವ ಕಾಲದಲ್ಲಿಯಾದರೂ ಗಂಡು-ಹೆಣ್ಣುಗಳು ಕೂಡಬಹುದು. ಹೆಣ್ಣು ಗರ್ಭಧರಿಸಬಹುದು ಮತ್ತು ಮರಿ ಹಾಕಬಹುದು. ಆದರೂ ಜನವರಿ ಫೆಬ್ರವರಿ ತಿಂಗಳುಗಳಲ್ಲಿ ಸಂತಾನಾಭಿವೃದ್ಧಿ ಚಟುವಟಿಕೆ ಹೆಚ್ಚು. ಚಳಿಗಾಲದಲ್ಲಿ ಗಂಡುಗಳಿಗೆ ಮದಬರುತ್ತದೆ. ಆಗ ಮುಖದ ಮೇಲಿನ ಗ್ರಂಥಿಗಳಿಂದ ತೀಕ್ಷ್ಣವಾಸನೆಯ ದ್ರವವು ಒಸರುತ್ತದೆ. ಹೆಣ್ಣನ್ನು ಒಲಿಸಿಕೊಳ್ಳುವುದಕ್ಕಾಗಿ ಮದದಲ್ಲಿರುವ ಗಂಡುಗಳು ಉಗ್ರವಾಗಿ ಹೋರಾಡುತ್ತವೆ. ಗರ್ಭಾವಧಿಯ ಕಾಲ ೧೮೦ ದಿನಗಳು. ಬೇಸಿಗೆಯಲ್ಲಿ ಮರಿ ಹಾಕಿದಾಗ ಒಂದು ಸೂಲದಲ್ಲಿ ಒಂದೆರಡು ಮರಿಗಳು ಹುಟ್ಟುತ್ತವೆ. ಹುಟ್ಟಿದಾಗ ಮರಿಗಳ ಮೈಮೇಲೆ ಚುಕ್ಕೆಗಳು ಕಾಣಿಸುತ್ತವೆ. ಇವುಗಳ ಆಯಸ್ಸು ಸುಮಾರು ೧೦ ವರ್ಷಗಳು.

ಸ್ವಭಾವ : ಒಂಟಿಯಾಗಿ ಅಥವಾ ಜೊತೆಯಾಗಿರುತ್ತವೆ. ಆಕಸ್ಮಿಕವಾಗಿ ಒಂದೇ ಕುಟುಂಬದ ೩-೪ ಜಿಂಕೆಗಳನ್ನು ಒಟ್ಟಿಗೆ ಕಾಣಬಹುದು. ಇದು ಗಾತ್ರದಲ್ಲಿ ಚಿಕ್ಕದಾದರೂ ಇದರ ಕೂಗು ಅನತಿ ದೂರದವರೆಗೂ ಕೇಳಬರುತ್ತದೆ. ಒಮ್ಮೊಮ್ಮೆ ಸತತವಾಗಿ ಅರ್ಧಗಂಟೆಯವರೆಗೆ ಬಗಳುವುದುಂಟು. ಇವು ನಡೆಯುವಾಗ ಒಂದು ರೀತಿಯ ಗಿಲಕಿ ಸಪ್ಪಳ ಉಂಟಾಗುತ್ತದೆ. ಈ ಸಪ್ಪಳ ಈ ಜಿಂಕೆಯ ಗುರುತು ಧ್ವನಿ ಎಂದು ಭಾವಿಸುತ್ತಾರೆ. ಇದು ಹಿಕ್ಕೆ ಹಾಕಲು ಪುನಃ ಪುನಃ ಒಂದೇ ಸ್ಥಳಕ್ಕೆ ಬರುವುದುಂಟು. ಇದರ ಮಾಂಸ ಮತ್ತು ಚರ್ಮಗಳಿಗಾಗಿ ಇದನ್ನು ಬೇಟೆಯಾಡುತ್ತಾರೆ. ಹುಲಿ, ಚಿರತೆಗಳು ಇವುಗಳ ಸ್ವಾಭಾವಿಕ ಶತ್ರುಗಳು.

ಈ ಜಿಂಕೆಗಳಲ್ಲಿ ೨೦ ಉಪಪ್ರಭೇದಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಮೂರು ಭಾರತದಲ್ಲಿ ದೊರಕುತ್ತದೆ.

ಎಂ.ಎಂ. ವೆಜೈನಾಲಿಸ್‌ (M.m vaginalis). ಉತ್ತರ ಭಾರತದಲ್ಲಿ ದೊರಕುತ್ತದೆ.

ಎಂ. ಎಂ. ಆರಿಯಸ್‌ (M.m aureus) ದಕ್ಷಿಣ ಭಾರತದಲ್ಲಿ ದೊರಕುತ್ತದೆ.

ಎಂ. ಎಂ. ಮಲಬಾರಿಕಸ್‌ (M. m malabaricus). ಮಲಬಾರ್‌, ಶ್ರೀಲಂಕಾದಲ್ಲಿ ಕಾಣಬರುತ್ತದೆ.

—- 

ಗಣ : ಆರ್ಟಿಯೊಡ್ಯಾಕ್ಟೈಲ
ಕುಟುಂಬ : ಸೂಯಿಡೀ
ಉದಾ : ಕಾಡು ಹಂದಿ
(Wild Boar)
ಶಾಸ್ತ್ರೀಯ ನಾಮ : ಸಸ್‌ಸ್ಕ್ರಾಫ (Sus Scrofa)

490_69_PP_KUH

ವಿತರಣೆ ಮತ್ತು ಆವಾಸ : ಇದು ವ್ಯಾಪಕವಾಗಿ ಹರಡಿರುವ ಪ್ರಾಣಿ. ಭಾರತದ ಎಲ್ಲೆಡೆಯಲ್ಲಿಯೂ ಕಂಡುಬರುತ್ತದೆ. ಹುಲ್ಲುಗಾವಲು, ಕುರುಚಲು ಕಾಡು ಮತ್ತು ದಟ್ಟ ಕಾಡುಗಳಲ್ಲಿ, ನೀರು ಮತ್ತು ಜಾಗುಪ್ರದೇಶಗಳಲ್ಲಿ ಹೆಚ್ಚಾಗಿ ಜೀವಿಸುತ್ತವೆ.

ಗಾತ್ರ : ಚೆನ್ನಾಗಿ ಬೆಳೆದ ಒಂದು ಗಂಡು ಭುಜದ ಬಳಿ (೯೦ ಸೆಂ.ಮೀ) ೩ ಅಡಿ ಎತ್ತರ ಮತ್ತು ೨೩೦ ಕೆ.ಜಿ. ತೂಕವಿರುತ್ತದೆ. ಕೆಳಗಿನ ದಾಡೆ ಹಲ್ಲುಗಳ ಬಾಗಿದ ಹೊರ ಭಾಗವೇ (೩೦ ಸೆಂ.ಮೀ) ೧ ಅಡಿ ಉದ್ದ ಇರುತ್ತದೆ.

ಆಹಾರ : ಸರ್ವಭಕ್ಷಕಗಳಾದರೂ ವಿಶೇಷತಹ ಸಸ್ಯಾಹಾರಿಗಳು. ವಿವಿಧ ಬಗೆಯ ಆಹಾರವನ್ನು ತಿನ್ನುತ್ತವೆ. ಬೇರು, ಎಲೆ, ಕಾಂಡ, ಗೆಡ್ಡೆಗಳು, ಅಣಬೆಗಳು, ಮುಂತಾದವುಗಳನ್ನೊಳಗೊಂಡ ಸಸ್ಯಾಹಾರವೇ ಮುಖ್ಯವಾದರೂ ಕೆಲವು ಬಗೆಯ ಹುಳುಹುಪ್ಪಟೆ, ಬಸವನ ಹುಳು, ಹಾವು, ಪಕ್ಷಿಗಳು, ಪಕ್ಷಿಗಳ ಮೊಟ್ಟೆಗಳು, ಸಣ್ಣ ಇಲಿಗಳು, ಹಾಗೂ ಸತ್ತ ಪ್ರಾಣಿಗಳ ಮಾಂಸವನ್ನು ತಿನ್ನುತ್ತವೆ. ಮೂತಿಯಿಂದ ದಾಡೆಗಳಿಂದ ನೆಲವನ್ನು ಬಗೆದು ಆಹಾರವನ್ನು ಹುಡುಕಿ, ಹೊರತೆಗೆದು ತಿನ್ನುವುದು ಇವಕ್ಕೆ ಇಷ್ಟ ಹೀಗೆ ಕೃಷಿ ಜಮೀನುಗಳ ಮೆಲೆ ಧಾಳಿ ಮಾಡಿ ಅತಿಯಾಗಿ ನಷ್ಟವುಂಟು ಮಾಡುತ್ತದೆ.

ಲಕ್ಷಣಗಳು : ಉದ್ದವಾದ ಚೂಪಾದ ತಲೆ, ಮೊಟಕಾದ ಕತ್ತು, ಗುಡಾಣದಂತಹ ದೇಹ, ಮೊಂಡು ತುದಿಯ ಮೂತಿ, ಮೂತಿಯ ತುದಿಯಲ್ಲಿರುವ ಮೂಗಿನ ಹೊಳ್ಳೆಗಳು, ಸಣ್ಣಕಣ್ಣುಗಳು, ಉದ್ದನೆಯ ಕಿವಿಗಳೂ, ಮೋಟು ಕಾಲುಗಳು, ಒಂದೊಂದು ಪಾದದಲ್ಲಿಯೂ ನಾಲ್ಕು ಬೆರಳುಗಳಿರುವುದು ಇವುಗಳ ಸಾಮಾನ್ಯ ಲಕ್ಷಣಗಳು. ನಾಲ್ಕು ಬೆರಳುಗಳಿದ್ದರೂ ೨ ಬೆರಳುಗಳನ್ನು ಮಾತ್ರ ಊರಿ ಓಡಾಡುತ್ತವೆ. ಮೈಮೇಲೆ ಕೂದಲ ಹೊದಿಕೆ ವಿರಳ, ಆದರೆ ಕುತ್ತಿಗೆಯಿಂದ ಬೆನ್ನಿನವರಗೆ ದಟ್ಟವಾದ ಬಿರುಸು ಕಪ್ಪು ಕೂದಲುಗಳ ಆಯಾಲವಿದೆ. ದೇಹದ ಬಣ್ಣ ಬೂದು, ಕಂದು ಮತ್ತು ಬಿಳಿಯ ಕೂದಲುಗಳನ್ನೊಳಗೊಂಡ ಕಪ್ಪು. ಮರಿ ಹಂದಿಗಳು ಹೆಚ್ಚು ಕಂದಾಗಿದ್ದರೆ, ಬೆಳೆದ ಪ್ರಾಣಿಗಳು ಹೆಚ್ಚು ಬೂದು ಅಥವಾ ಬೂದು ಕಪ್ಪು ಬಣ್ಣದವು. ಹೊಸದಾಗಿ ಹುಟ್ಟಿದ ಮರಿಗಳಿಗೆ ಮೈಮೇಲೆ ತಿಳಿಹಳದಿಯ ಅಡ್ಡಪಟ್ಟೆಗಳಿವೆ. ಗಂಡುಗಳಲ್ಲಿ ದಾಡೆಗಳು ವಕ್ರಾಕಾರವಾಗಿ ಚೆನ್ನಾಗಿ ಬೆಳೆದಿವೆ. ದಾಡೆಗಳು ಟೊಳ್ಳಾಗಿವೆ. ಮೇಲಿನ ಮತ್ತು ಕೆಳಗಿನ ದಾಡೆಗಳೆರಡೂ ಮೇಲಕ್ಕೆ ಬಾಗಿ ಬಾಯಿಯಿಂದ ಹೊರಕ್ಕೆ ಬಾಚಿಕೊಂಡಿರುತ್ತವೆ. ಇವು ಚಾಕುವಿನಂತೆ ಹರಿತವಾಗಿದ್ದು ಆತ್ಮ ರಕ್ಷಣೆಗೆ ಅನುಕೂಲವಾಗಿವೆ. ಬಾಲ ಗಿಡ್ಡನಾಗಿದ್ದು ಅದರ ತುದಿಯಲ್ಲಿ ಕುಚ್ಚು ಕೂದಲುಗಳಿವೆ.

ಸಂತಾನಾಭಿವೃದ್ಧಿ : ವರ್ಷದ ಯಾವ ಕಾಲದಲ್ಲಿ ಬೇಕಾದರೂ ಹೆಣ್ಣುಗಳು ಬೆದೆಗೆ ಬರುತ್ತವೆ. ಇವು ಬಹು ಸಂತಾನಿಗಳು. ಗರ್ಭಾವಧಿ ೧೧೪ ರಿಂದ ೧೭೫ ದಿನಗಳು. ಮಳೆಗಾಲದ ಮೊದಲು ಮತ್ತು ಅನಂತರ ವಿಶೇಷವಾಗಿ ಮರಿಗಳನ್ನು ಕಾಣಬಹುದು. ಸಾಮಾನ್ಯವಾಗಿ ಒಂದು ಸೂಲದಲ್ಲಿ ೪ ರಿಂದ ೬ ಮರಿಗಳು ಹುಟ್ಟುತ್ತವೆ. ಇವು ೪ ೧/೨ ವರ್ಷಕ್ಕೆ ಲಿಂಗ ಪ್ರೌಢತನ ಗಳಿಸಿಕೊಳ್ಳುತ್ತವೆ. ಇವಕ್ಕೆ ೬ (೩ ಜೊತೆ) ಮೊಲೆಗಳಿದ್ದು ಅವು ಹೊಟ್ಟೆಯ ಭಾಗದಲ್ಲಿವೆ. ಕೆಲವು ಬಾರಿ ೧೪ ಮರಿಗಳವರೆಗೆ ಹುಟ್ಟುಬಹುದು. ತಾಯಿ ಮರಿಗಳಿಗೆ ಹಾಲುಣಿಸಿ ರಕ್ಷಿಸುತ್ತದೆ. ಹುಲ್ಲು ಮತ್ತು ಕಸಕಡ್ಡಿಗಳಿಂದ ತಾನೇ ನಿರ್ಮಿಸಿದ ರಕ್ಷಣಾ ಸ್ಥಾನಗಳಲ್ಲಿ ಮರಿಗಳನ್ನಿಟ್ಟು ರಕ್ಷಿಸುತ್ತದೆ. ಮರಿ ಹಾಕಿದ ನಂತರ ದೊಡ್ಡ ಗಂಡು ಹಂದಿಗಳು ಒಂಟಿಯಾಗಿ ಅಥವಾ ತಮ್ಮದೇ ಗಾತ್ರದ ೧ ಅಥವಾ ೨ ಹೆಣ್ಣು ಹಂದಿಗಳೊಡನೆ ವಾಸಿಸುತ್ತವೆ. ಆಯಸ್ಸು ೩೦ ವರ್ಷ.

ಸ್ವಭಾವ : ಒಂಟಿಯಾಗಿ ಹಾಗೂ ಗುಂಪುಗಳಲ್ಲಿಯೂ ವಾಸಿಸುತ್ತವೆ. ದೃಷ್ಟಿಮಂದ, ಕಿವಿ ಮತ್ತು ಮೂಗು ಚುರುಕು. ಅವಕಾಶ ದೊರಕಿದಾಗ ಹೆಚ್ಚು ಬುದ್ಧಿವಂತಿಕೆಯನ್ನು ಮತ್ತು ಧೈರ್ಯವನ್ನು ಪ್ರದರ್ಶಿಸುತ್ತವೆ. ಇವು ಕ್ರೂರಿಗಳು ಹೌದು. ಬಲಶಾಲಿಯಾದ ಪ್ರಾಯದ ಗಂಡು ಹುಲಿಯನ್ನು ಎದುರಿಸಿ, ಕಾದಾಡಿ ಕೊಂದ ಅನೇಕ ಉದಾಹರಣೆಗಳಿವೆ. ಚೀರಾಡುತ್ತ ಕಾಡಿನಲ್ಲಿ ಓಡಾಡುತ್ತವೆ. ಪ್ರಾತಃಕಾಲ ಮತ್ತು ಸಾಯಂಕಾಲಗಳಲ್ಲಿ ಆಹಾರಾನ್ವೇಷಣೆ ನಡೆಸುತ್ತವೆ. ಹೆಚ್ಚು ಗಲಭೆಯಿದ್ದಾಗ ರಾತ್ರಿಯಲ್ಲಿ ಆಹಾರ ಹುಡುಕಿ ಹೊರಡುತ್ತವೆ. ಕಾಡುಹಂದಿಗಳು ಸಂಘಜೀವಿಗಳು. ಒಂದು ಹಿಂಡಿನಲ್ಲಿ ೪೦ ರಿಂದ ೫೦ ಪ್ರಾಣಿಗಳಿರುತ್ತವೆ. ವೇಗವಾಗಿ ಓಡಬಲ್ಲವು. ಚೆನ್ನಾಗಿ ಈಜಬಲ್ಲವು. ಕೆಸರಿನಲ್ಲಿ ಹೊರಳಾಡುವುದು ಇವಕ್ಕೆ ಹೆಚ್ಚು ಪ್ರಿಯ. ರಾತ್ರಿ ಕಾಲದಲ್ಲಿ ಅಥವಾ ವಿಶ್ರಮಿಸಿಕೊಳ್ಳುವಾಗ ಕೆಸರಿನಲ್ಲಿ ಹೊರಳಾಡಿಕೊಂಡೊ, ಉದ್ದವಾಗಿ ಬೆಳೆದ ಹುಲ್ಲಿನ ಮರೆಯಲ್ಲೋ ಅಥವಾ ತಾವೇ ನಿರ್ಮಿಸಿಕೊಂಡ ಇಲ್ಲವೇ ಬೇರೆ ಪ್ರಾಣಿಗಲ ಬಿಲಗಳಲ್ಲಿ ಉಳಿದು ಕಾಲಕಳೆಯುತ್ತವೆ. ಮಲಗುವಾಗ ಒಂದಕ್ಕೊಂದು ತಾಗಿ ಮಲಗುತ್ತವೆ. ಇವುಗಳ ಮೈಯಲ್ಲಿ ಕೊಬ್ಬು ಹೆಚ್ಚು ಇವುಗಳ ಮಾಂಸವನ್ನು ಪೋರ್ಕ್‌ ಎಂದು ಕರೆಯುತ್ತಾರೆ. ಇದು ಯುರೋಪಿನ್ನಯರಿಗೆ ಹೆಚ್ಚು ಪ್ರಿಯವಾದ ಆಹಾರ. ಆದರೆ ಮುಸಲ್ಮಾನರಿಗೆ ವರ್ಜ್ಯ.

ಕಾಡುಹಂದಿಗಳು ಹೊಲಗದ್ದೆಗಳಿಗೆ ನುಗ್ಗಿ, ಪೈರು ಹಾಳು ಮಾಡುವುದಕ್ಕೆ ಹೆಸರಾದ ಪ್ರಾಣಿಗಳು. ಗೆಡ್ಡೆ-ಗೆಣಸು ಇವಕ್ಕೆ ಬಲು ಇಷ್ಟ. ಆದುದರಿಂದ ಇವು ಮಾನವನಿಗೆ, ಮುಖ್ಯವಾಗಿ ರೈತನಿಗೆ ಶತ್ರುಗಳೆನಿಸಿವೆ. ಮಾನವ ಇವನ್ನು ಬೇಟೆಯಾಡುತ್ತಾ ಬಂದಿದ್ದಾನೆ.