೯. ಗಣ : ಲ್ಯಾಗೊಮಾರ್ಫ್‌

ಈ ಗಣಕ್ಕೆ ಮೊಲಗಳು ಸೇರುತ್ತವೆ. ಹಿಂದೆ ಇವುಗಳನ್ನು ರೊಡೆನ್ಷಿಯ ಗಣಕ್ಕೆ ಸೇರಿಸಲಾಗಿತ್ತು. ಆದರೆ ಈಗ ಇವಕ್ಕೆ ಒಂದು ಪ್ರತ್ಯೇಕ ಸ್ಥಾನಕೊಡಲಾಗಿದೆ. ಇವುಗಳ ಮೇಲುದವಡೆಯಲ್ಲಿ ಎರಡು ಜೊತೆ ಬಾಚಿಹಲ್ಲುಗಳಿವೆ. ಇವುಗಳಲ್ಲಿ ಒಂದು ಜೊತೆ ಸಣ್ಣವು ಮತ್ತು ಒಂದು ಜೊತೆ ದೊಡ್ಡವು. ಈ ಹಲ್ಲುಗಳ ಎರಡೂ ಭಾಗಗಳಲ್ಲಿ (ಹಿಂದೆ ಮತ್ತು ಮುಂದೆ) ಎನಾಮಲ್ ಹೊದಿಕೆ ಇದೆ. ಕುಪ್ಪಳಿಸಲು ಅನುಕೂಲವಾಗುವಂತೆ ಹಿಂಗಾಲುಗಳು ಮುಂಗಾಲುಗಳಿಗಿಂತಲೂ ಉದ್ದನಾಗಿವೆ. ಇವು ಸಂಪೂರ್ಣವಾಗಿ ಸಸ್ಯಾಹಾರಿಗಳು. ಅಪರೂಪವಾಗಿ ಬಸವನಹುಳು ಮತ್ತು ಕೀಟಗಳನ್ನು ತಿಂದ ನಿದರ್ಶನಗಳಿವೆ. ವೃಷಣಗಳು ಶಾಶ್ವತವಾಗಿ ಸ್ಕ್ರೋಟಮ್‌ನಲ್ಲಿರುತ್ತವೆ.

ಗಣ : ಲ್ಯಾಗೊಮಾರ್ಫ್‌
ಕುಟುಂಬ : ಲೆಪೊರಿಡೀ
ಉದಾ : ಮೊಲ (
Rabbit)
ಶಾಸ್ತ್ರೀಯ ನಾಮ : ಒರಿಕ್ಟೊಲ್ಯಾಗಸ್‌ಕ್ಯುನಿಕ್ಯುಲಸ್‌ (Oryctolagus cuniculus)

455_69_PP_KUH

ವಿತರಣೆ ಮತ್ತು ಆವಾಸ : ಕರ್ನಾಟಕವೂ ಸೇರಿದಂತೆ ಭಾರತಾದ್ಯಂತ ದೊರಕುತ್ತವೆ. ಇವು ಬಿಲಗಳಲ್ಲಿ ಗುಂಪುಗಳಲ್ಲಿ ವಾಸಿಸುತ್ತವೆ. ಸಂಘಜೀವಿ. ಇವು ವಾಸ್ತವವಾಗಿ ಪ್ರಪಂಚಾದ್ಯಂತ ದೊರಕುತ್ತವೆ. ಅಂದರೆ ಸರ್ವವ್ಯಾಪಿ. ಇವು ಮೂಲತಃ ಪಶ್ಚಿಮ ಯುರೋಪು ಮತ್ತು ಆಫ್ರಿಕಾದ ಮೂಲ ನಿವಾಸಿ. ಅಲ್ಲಿಂದ ಮನುಷ್ಯನ ನೆರವಿನಿಂದ ಪ್ರಪಂಚಾದ್ಯಂತ ಹರಡಿವೆ. ಇದು ಬಯಲು, ಹುಲ್ಲುಗಾವಲು ಮತ್ತು ವಿರಳವಾದ ತೆಳು ಕಾಡುಗಳಲ್ಲಿ ವಾಸಿಸುತ್ತದೆ. ಭಾರತದ ಕಾಡುಗಳಲ್ಲಿ ವಾಸಿಸುವುದನ್ನು ಕಾಣುವುದಿಲ್ಲ. ವಿಶೇಷವಾಗಿ ಪ್ರಯೋಗಾಲಯಗಳ ಪ್ರಾಣಿಗೃಹಗಳಿಗೆ ಸೀಮಿತವಾದುದು.

ಗಾತ್ರ : ತಲೆ ಮತ್ತು ದೇಹ ೪೦ ರಿಂದ ೫೦ ಸೆಂ.ಮೀ. ಉದ್ದ, ೧.೮ ರಿಂದ ೨.೩ ಕೆ.ಜಿ. ತೂಕದ ವರೆಗೆ ಬೆಳೆಯುತ್ತವೆ. ಹೇ ಎಂದು ಕರೆಯುವ ಲಿಪಸ್‌ ರೂಫಿಕಾಡೇಟಸ್‌ಗಿಂತ ದೊಡ್ಡದು ಮತ್ತು ತೂಕವು ಹೆಚ್ಚು.

ಆಹಾರ : ಸಸ್ಯಾಹಾರಿ. ಹುಲ್ಲು, ಪೊದರು, ಮೂಲಿಕೆ ಸಸ್ಯಗಳು. ಗೆಡ್ಡೆಗೆಣಸು, ಸೊಪ್ಪು ಎಲೆ ಮುಂತಾದವುಗಳು ಇದರ ಆಹಾರ.

ಲಕ್ಷಣಗಳು : ದೇಹವು ಮಾದರಿ ದ್ವಿಪಾರ್ಶ್ವ ಸಮಮಿತಿಯನ್ನು ಪ್ರದರ್ಶಿಸುತ್ತದೆ. ದೇಹವನ್ನು ತಲೆ, ಮುಂಡ, ಬಾಲ ಮತ್ತು ಕಾಲುಗಳೆಂದು ವಿಂಗಡಿಸಬಹುದು. ತಲೆ ದಪ್ಪ, ಬುಗುರಿಯಾಕಾರ ಮತ್ತು ಮುಂದೆ ದೊಡ್ಡ ಮೂತಿಯಾಗಿ ಚಾಚಿದೆ. ತುದಿ ಒದ್ದೆಯಾಗಿದೆ. ತಲೆಯಲ್ಲಿ ಬಾಯಿ, ಮೀಸೆಗಳು, ಮೂಗು ಹೊಳ್ಳೆಗಳು, ಕಣ್ಣುಗಳು ಮತ್ತು ಉದ್ದ ಕಿವಿಗಳಿವೆ.

ಮೂತಿಯ ಕೆಳಗೆ ಅಗಲವಾದ ಬಾಯಿ ಇದೆ. ಇದು ಸೀಳಿಕೆಯಂತೆ ಕಂಡುಬರುತ್ತದೆ. ಮಾಂಸಲವಾದ ಚಲಿಸಬಲ್ಲ ಸೀಳಿದ ಮೇಲು ತುಟಿ ಇದೆ. ಆದ್ದರಿಂದ ಇದು ಎರಡು ಸಮಭಾಗಗಳಾಗಿದೆ. ಅದಕ್ಕೆಂದೆ ಜನಿಸಿದಾಗ ಸೀಳು ತುಟಿಯನ್ನು ಹೊಂದಿದ ಮಕ್ಕಳನ್ನು ಹೇರ್ ಲಿಪ್ಡ್‌ (Hare lipped) ಎಂದು ಕರೆಯುತ್ತಾರೆ. ಮೇಲು ತುಟಿಯ ಎರಡು ಭಾಗಗಳ ಮೇಲೂ ದಪ್ಪ, ಗಡಸು ಮೀಸೆಗಳೆಂಬ ಕೂದಲುಗಳಿವೆ. ಇವು ಸ್ಪರ್ಶಾಂಗಗಳಂತೆ ವರ್ತಿಸುತ್ತವೆ. ದಂತಸೂತ್ರ ೨/೧, ೦/೦, ೩/೨, ೩/೩, = ೨೮ ಬಾಚಿ ಹಲ್ಲುಗಳಿಗೂ, ಮುಂದವಡೆ ಹಲ್ಲುಗಳಿಗೂ ನಡುವೆ ಡಯಸ್ಟೆಮ ಎಂಬ ಖಾಲಿ ಜಾಗವಿದೆ. ಮೇಲುದವಡೆಯ ಮುಂದಿನ ಬಾಚಿಹಲ್ಲುಗಳು ಉದ್ದ ಮತ್ತು ಬಾಗಿವೆ. ಹಿಂದಿನ ಬಾಚಿಹಲ್ಲುಗಳು ಚಿಕ್ಕವು ಮತ್ತು ತುಸುಬಾಗಿವೆ. ಸವೆದಂತೆ ಹಲ್ಲುಗಳು ಬೆಳೆಯುತ್ತವೆ. ಈ ಲಕ್ಷಣ ಇತರ ಗಣದ ಸಸ್ತನಿಗಳಲ್ಲಿ ಕಂಡುಬರುವುದಿಲ್ಲ. ಆಹಾರವನ್ನು ಬಾಚಿಹಲ್ಲುಗಳ ಸಹಾಯದಿಂದ ಸ್ವಲ್ಪ ಸ್ವಲ್ಪವಾಗಿ ಕಚ್ಚಿ ತಿನ್ನುತ್ತದೆ. ದವಡೆಹಲ್ಲುಗಳ ಸಹಾಯದಿಂದ ಚೆನ್ನಾಗಿ ಆಗಿದು ನುಂಗುತ್ತದೆ. ಹೊರನಾಸಿಕ ರಂಧ್ರಗಳು ಅಂಡಾಕಾರದ ಸೀಳಿಕೆಗಳಂತೆ ಮೂತಿಯ ತುದಿಯಲ್ಲಿವೆ. ಇವುಗಳನ್ನು ಒದ್ದೆಯಾದ ಬೆತ್ತಲೆ ಚರ್ಮ ಸುತ್ತುವರಿದಿದೆ. ಪ್ರಧಾನವಾದ ಎರಡು ದೊಡ್ಡ ಕಣ್ಣುಗಳು ತಲೆಯ ಪಾರ್ಶ್ವಭಾಗದಲ್ಲಿವೆ. ಇವು ತಲೆಯ ಮಧ್ಯ ನಿಟ್ಟಿನಲ್ಲಿವೆ. ಕಣ್ಣುಗಳಿಗೆ ಚಲಿಸಬಲ್ಲ ಮೇಲಿನ ಮತ್ತು ಕೆಳಗಿನ ಕಣ್ಣುರೆಪ್ಪೆಗಳಿವೆ. ಕಣ್ಣು ರೆಪ್ಪೆಗಳಿಗೆ ನವಿರಾದ ರೆಪ್ಪೆ ಕೂದಲುಗಳಿವೆ. ಕ್ಷಯಿಸಿದ ಮೂರನೆಯ ಕಣ್ಣು ರೆಪ್ಪೆ (ನಿಮೇಷಕ ಪಟಲ)ಯು ಕಣ್ಣಿನ ಮುಂದಿನ ತುದಿಯಲ್ಲಿದೆ. ಕಣ್ಣುಗಳನ್ನು ನಿಮೇಷಕ ಪಟಲವು ಮುಚ್ಚಿ ಧೂಳಿನಿಂದ ರಕ್ಷಿಸುತ್ತದೆ. ತಲೆಯ ಪಶ್ಚ ಪಾರ್ಶ್ವಭಾಗದಲ್ಲಿ ನೀಳವಾದ ಚಲಿಸಬಲ್ಲ ಚರ್ಮದ ಮಡಿಕೆಯಂತಿರುವ ಹೊರಕಿವಿಗಳಿವೆ. ತಲೆಯು ಮುಂಡ ಭಾಗಕ್ಕೆ ಕತ್ತಿನ ಮೂಲಕ ಅಂಟಿಕೊಂಡಿದೆ. ಕತ್ತು ಮೋಟು ಆದರೂ ಪ್ರಧಾನವಾಗಿದೆ. ಇದನ್ನು ಸುಲಭವಾಗಿ ಚಲಿಸಿ ತಲೆಯನ್ನು ತಿರುಗಿಸಬಹುದಾಗಿದೆ.

ಬೃಹತ್ ಹಂಡೆಯಾಕಾರದ ಮುಂಡ ಭಾಗವನ್ನು ಮುಂದಿನ ಕಿರಿದಾದ ವಕ್ಷ (ಎದೆ) ಮತ್ತು ಹಿಂದಿನ ಅಗಲವಾದ ಮೃದು ಉದರ (ಹೊಟ್ಟೆಯ) ಭಾಗಗಳೆಂದು ಗುರುತಿಸಬಹುದು. ದೇಹದ ಮೇಲೆ ಮೃದುವಾದ ತುಪ್ಪುಳ ಹೊದಿಕೆ ಇದೆ. ಹೆಣ್ಣು ಮೊಲದಲ್ಲಿ ೪ ರಿಂದ ೫ ಜೊತೆ ಸ್ತನಗಳು ವಕ್ಷ ಮತ್ತು ಉದರದ ಭಾಗಗಳಲ್ಲಿ ಇವೆ. ಇವುಗಳಲ್ಲಿ ಕ್ಲೋಯಕ ಇಲ್ಲ. ಉದರದ ಪಶ್ಚ ಭಾಗದಲ್ಲಿ ಬಾಲದ ಕೆಳಗೆ ಸಣ್ಣ ದುಂಡಾದ ಗುಧದ್ವಾರವಿದೆ. ಗುಧದ್ವಾರದ ಪಕ್ಕಗಳಲ್ಲಿ ರೋಮರಹಿತ ಪೆರಿಏನಲ್ ಸಂಚಿಗಳಿವೆ. ಇದಕ್ಕೆ ಪೆರಿಏನಲ್ ಗ್ರಂಥಿಗಳು ತೆರೆಯುತ್ತವೆ. ಈ ಗ್ರಂಥಿಗಳು ಮೊಲ ಒಂದು ಗೊತ್ತಾದ ರೀತಿಯ ಗಂಧವನ್ನುಂಟು ಮಾಡುವ ದ್ರವ್ಯವನ್ನು ಸ್ರವಿಸುತ್ತವೆ. ಗುಧದ್ವಾರದ ಮುಂದೆ ಗಂಡಿನಲ್ಲಿ ಮೂತ್ರಪ್ರಜನನ ರಂಧ್ರವಿದೆ. ಇದು ಮಾಂಸಲವಾದ ಶಿಶ್ನುವಿನ ತುದಿಯಲ್ಲಿ ತೆರೆಯುತ್ತದೆ. ವೃಷಣಗಳು ಶಿಶ್ನುವಿನ ತುಸು ಮೂತ್ರ ಪ್ರಜನನ ತೆರಪು ಕ್ಲೈಟೊರಿಸ್ ಎಂಬ ಪೆಡಸು ಸರಳಿನ ಬುಡದಲ್ಲಿ ಹೊರಕ್ಕೆ ತೆರೆಯುತ್ತದೆ.

ಪೊದೆಯಂತಿರುವ ಮೋಟು ಬಾಲವಿದೆ. ಇದು ಮುಂಡದ ಹಿಂಭಾಗಕ್ಕೆ ಅಂಟಿಕೊಂಡಿದೆ. ಚಲಿಸುವಾಗ ಅದರ ಸಮತೋಲನವನ್ನು ಕಾಪಾಡಲು ನೆರವಾಗುತ್ತದೆ. ಬಾಲದ ತಳಭಾಗದಲ್ಲಿರುವ ಬಿಳಿಯ ಗುರುತು ತನ್ನ ಹಿಂಡಿನ ಇತರ ಮೊಲಗಳಿಗೆ ಅಪಾಯದ ಮುನ್ಸೂಚನೆಯನ್ನು ಕೊಡಲು ನೆರವಾಗುತ್ತದೆ.

ಎರಡು ಜೊತೆ ಕಾಲುಗಳಿವೆ. ಇವು ಪಂಚಾಂಗುಲೀಯ ಮಾದರಿ ರಚನೆ ತೋರುತ್ತವೆ. ಹೇರ್ ಗೆ ಹೋಲಿಸಿದರೆ ಇವುಗಳ ಮುಂಗಾಲುಗಳು ಹಿಂಗಾಲುಗಳಿಗಿಂತ ಮೋಟಾಗಿದ್ದು ಜಿಗಿ ಚಲನೆಗೆ ಅನುವಾಗಿವೆ. ಹೇರ್ ಗಳಲ್ಲಿ ಎರಡೂ ಜೊತೆ ಕಾಲುಗಳು ಒಂದೇ ಉದ್ದ ಇರುತ್ತವೆ. ಹಿಂಗಾಲುಗಳು ಬಲವಾಗಿವೆ. ಪಾದ ಮತ್ತು ಹಸ್ತಗಳ ಮೇಲೆ ಕೂದಲುಗಳಿವೆ. ಬೆರಳುಗಳಿಗೆ ಚೂಪಾದ ಹರಿತವಾದ ಕೊಂಬಿನ ನಖಗಳಿವೆ.

ಸಂತಾನಾಭಿವೃದ್ಧಿ : ಇವುಭಿನ್ನಲಿಂಗಿಗಳು. ವರ್ಷವಿಡೀ ಸಂತಾನೋತ್ಪತ್ತಿ ಚಟುವಟಿಕೆ ತೋರುತ್ತವೆಯಾದರೂ ಜನವರಿ ಜೂನ್ ತಿಂಗಳಲ್ಲಿ ಹೆಚ್ಚು ಚಟುವಟಿಕೆ ಕಂಡುಬರುತ್ತದೆ. ಒಮ್ಮೆಗೆ ೬ ರಿಂದ ೮ ಮರಿಗಳನ್ನು ಈಯುತ್ತವೆ. ಹುಟ್ಟಿದ ಮರಿ ತುಪ್ಪುಳಿಲ್ಲದೆ ಬೆತ್ತಲೆಯಾಗಿರುತ್ತದೆ ಮತ್ತು ಕಣ್ಣುಗಳು ತೆರೆದಿರುವುದಿಲ್ಲ.

ಸ್ವಭಾವ : ತುಂಬಾ ಚಟುವಟಿಕೆಯ ಪ್ರಾಣಿ. ನಸುಕಿನಲ್ಲಿ ಆಹಾರಾನ್ವೇಷಣೆಗೆ ಹೊರಡುತ್ತವೆ. ಸದಾ ಎಚ್ಚರದಿಂದಿರುತ್ತವೆ. ಜಿಗಿದು ವೇಗವಾಗಿ ಚಲಿಸಬಲ್ಲವು. ಒಳ್ಳೆಯ ಮುದ್ದಿನ ಸಾಕು ಪ್ರಾಣಿ. ಇದರ ತುಪ್ಪುಳು ಮತ್ತು ಮಾಂಸಕ್ಕೆ ಬೆಲೆ ಮತ್ತು ಬೇಡಿಕೆ ಇದೆ. ಒಳ್ಳೆಯ ಪ್ರಯೋಗ ಪ್ರಾಣಿಯೂ ಹೌದು.

—-

ಗಣ : ಲ್ಯಾಗೊಮಾರ್ಫ್
ಕುಟುಂಬ : ಲೆಪೊರಿಡೀ
(Leporidae)
ಕಪ್ಪು ಕತ್ತಿನ ಕಂದು ಮೊಲ (Indian Hare)
ಶಾಸ್ತ್ರೀಯ ನಾಮ : ಲೀಪಸ್ ನೈಗ್ರಿಕೋಲಿಸ್
(Lepus nigricollis)

456_69_PP_KUH

ವಿತರಣೆ ಮತ್ತು ಆವಾಸ : ಕರ್ನಾಟಕವೂ ಸೇರಿದಂತೆ ಭಾರತಾದ್ಯಂತ ದೊರಕುತ್ತವೆ. ಸಮುದ್ರಮಟ್ಟದಿಂದ ಎತ್ತರದ ಬೆಟ್ಟಗಳವರೆಗೆ ಎಲ್ಲಾ ಕಾಡುಗಳಲ್ಲಿಯೂ ವಾಸಿಸುತ್ತವೆ. ಇದರಲ್ಲಿ ಅನೇಕ ಉಪಪ್ರಭೇದಗಳಿವೆ. ಲೀಪಸ್ ನೈಗ್ರಿಕೋಲಿಸ್ ನೈಗ್ರಿಕೋಲಿಸ್ ಉಪಪ್ರಭೇದವು ನೀಲಗಿರಿ ಮತ್ತು ಇತರ ದಕ್ಷಿಣ ಭಾರತದ ಬೆಟ್ಟ ಸಾಲುಗಳಲ್ಲಿ ದೊರಕುತ್ತದೆ.

ಗಾತ್ರ : ತಲೆ ಮತ್ತು ದೇಹದ ಉದ್ದ ೪೦ ರಿಂದ ೫೦ ಸೆಂ.ಮೀ. ತೂಕ ೧.೮ ರಿಂದ ೨.೩ ಕೆ.ಜಿ. ಲೀಪಸ್ ನೈಗ್ರಿಕೋಲಿಸ್ ನೈಗ್ರಿಕೋಲಿಸ್ ಗಾತ್ರದಲ್ಲಿ ದೊಡ್ಡದು ಮತ್ತು ಹೆಚ್ಚು ತೂಕ (೨.೨ ರಿಂದ ೩.೬ ಕೆ.ಜಿ.) ವಿರುತ್ತದೆ.

ಆಹಾರ : ಸಸ್ಯಾಹಾರಿಗಳು. ಮೋಟು ಹುಲ್ಲು, ನೆಲದ ಹಸಿರು ಸಸ್ಯಗಳು, ಸೊಪ್ಪು, ಗೆಡ್ಡೆಗೆಣಸು ಮುಂತಾದವು ಇದರ ಆಹಾರ.

ಲಕ್ಷಣಗಳು : ದಕ್ಷಿಣ ಭಾರತದ ಲೀ. ನೈ. ನೈಗ್ರಿಕೋಲಿಸ್‌ನ ಕುತ್ತಿಗೆಯ ಮೇಲೆ ಕಿವಿಗಳಿಂದ ಭುಜದವರೆಗೆ ಕಡುಕಂದು ಅಥವಾ ಕಪ್ಪು ಗುರುತು ಇರುವುದು ಮತ್ತು ಬಾಲದ ಮೇಲ್ಭಾಗ ಕಪ್ಪಾಗಿರುವುದು ಅದರ ವಿಶೇಷ ಲಕ್ಷಣ. ಈ ಕಂದು ಮೊಲಗಳನ್ನು ಪ್ರತ್ಯೇಕ ಪಂಗಡವೆಂದು ನಿರ್ಧರಿಸಲಾಗಿದೆ. ಇದರ ಇನ್ನೊಂದು ಪಂಗಡ ಲೀ. ನೈ. ರೂಫಿಕಾಡೇಟಸ್ (L. n. ruficaudatus). ಇದರ ಮುಖ, ಬೆನ್ನು, ಎದೆ, ಕಾಲುಗಳು, ಕೆನ್ನೆ, ಕತ್ತಿನ ಮೇಲ್ಭಾಗ ಮುಂತಾದ ಭಾಗಗಳಲ್ಲಿ ಕಪ್ಪು ಮಿಶ್ರಿತ ಕಡುಕಂದು ಬಣ್ಣದ ತುಪ್ಪುಳವಿದೆ. ಕೆಳಭಾಗ ಬಿಳುಪು. ಇವುಗಳ ಕಿವಿ ತುಂಬಾ ಉದ್ದ.

ಸಂತಾನಾಭಿವೃದ್ಧಿ : ಒಂದು ಸೂಲಿನಲ್ಲಿ ೧ ಅಥವಾ ೨ ಮರಿಗಳನ್ನು ಹಾಕುತ್ತವೆ. ಸಂತಾನೋತ್ಪತ್ತಿ ಋತುವಿನ ದಾಖಲೆ ಇಲ್ಲ. ಲೀ. ನೈ. ನೈಗ್ರಿಕೋಲಿಸ್‌ ಅಕ್ಟೋಬರ್ ಮತ್ತು ಫೆಬ್ರವರಿ ನಡುವಣ ಕಾಲದಲ್ಲಿ ಮರಿಹಾಕುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಕಿದ ಒಂದು ಕಂದು ಮೊಲ ನವೆಂಬರ್ ತಿಂಗಳಲ್ಲಿ ೨ ಮರಿಗಳನ್ನು ಹಾಕಿದ ದಾಖಲೆ ಇದೆ. ಹುಟ್ಟಿದ ಮರಿಗಳು ಕಣ್ಣು ತೆರೆದಿರುತ್ತವೆ ಮತ್ತು ೧೨ ಗಂಟೆಗಳೊಳಗೆ ಚೂಟಿಯಾಗಿ ಓಡಾಡುತ್ತವೆ.

ಸ್ವಭಾವ : ಇವು ಸಾಮಾನ್ಯವಾಗಿ ಹಳ್ಳಿಗಳು ಮತ್ತು ಕೃಷಿ ಭೂಮಿಯ ನೆರೆಯಲ್ಲಿ ಹೆಚ್ಚಾಗಿ ವಾಸಿಸುತ್ತವೆ. ಇವು ಆಹಾರವನ್ನು ಚೊಕ್ಕವಾಗಿ ತಿನ್ನುವುದಿಲ್ಲ. ಹುಲ್ಲು ಒಣಗಿದ ಬೇಸಿಗೆಯ ಕಾಲದಲ್ಲಿ ಇವು ಹಳ್ಳಿಗಳನ್ನು ಮತ್ತು ಮನೆಯ ಕೈತೋಟಗಳನ್ನು ಪ್ರವೇಶಿಸಿ ಅಲ್ಲಿನ ಹುಲ್ಲನ್ನು ತಿನ್ನುತ್ತವೆ. ನಿಶಾಚರಿಗಳು ಆದರೆ ಸಂಪೂರ್ಣ ನಿಶಾಚರಿಗಳಲ್ಲ. ಹಗಲಿನಲ್ಲಿಯೂ ಹುಲ್ಲು ಇರುವೆಡೆಗಳಲ್ಲಿ ಹುಲ್ಲು ತಿನ್ನುತ್ತಿರುವುದನ್ನು ಕಾಣಬಹುದು. ಕಾಲುಗಳಿಂದ ಹುಲ್ಲನ್ನು ತರಿದು, ಕೆದಕಿ ಚೆಲ್ಲಿ ತಿನ್ನುತ್ತವೆ. ಹೀಗೆ ಮಾಡಿದ ತಗ್ಗಿನಲ್ಲಿಯೇ ಮಲಗಿ ನಿದ್ರಿಸುತ್ತವೆ. ಕೆಲವು ಸಾರಿ ಕಡುಕೆಂಪು ಭೂಮಿಯಲ್ಲಿ ಮಲಗಿ ಬಿಡುತ್ತವೆ. ನರಿ, ಮುಂಗಸಿ, ಕಾಡು ಬೆಕ್ಕು ಮತ್ತು ಊರಿನ ನಾಯಿಗಳು ಕೂಡ ಇವುಗಳನ್ನು ಹಿಡಿದು ತಿನ್ನುವ ಶತ್ರುಗಳು. ನಿಶ್ಚಲವಾಗಿ ಕುಳಿತ ಇವು ಶತ್ರುಗಳ ದೃಷ್ಟಿಗೆ ಸುಲಭವಾಗಿ ಬೀಳುವುದಿಲ್ಲ. ಅವುಗಳ ಸಮೀಪಕ್ಕೆ ಆಕಸ್ಮಿಕವಾಗಿ ಬಂದಾಗಲೇ ಅವುಗಳ ಇರಿವು ತಿಳಿಯುವುದು. ಶತ್ರು ಎದುರಾದಾಗ ಜೋರಾಗಿ ಓಡುತ್ತವೆ. ಮತ್ತು ನೆಲದಲ್ಲಿರುವ ಬಿಲಗಳಲ್ಲಿ ಅಡಗಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತವೆ. ರಾತ್ರಿಯ ಹೊತ್ತು ಕಾರು ಬಸ್ಸುಗಳಲ್ಲಿ ಹೊರಟ ಪ್ರಯಾಣಿಕರಿಗೆ ಕಾರು ಬಸ್ಸುಗಳ ಬೆಳಕಿಗೆ ಹೆದರಿ ದಿಗ್ಭ್ರಮೆಯಿಂದ ಅವು ಓಡಿ ಕಣ್ಮರೆಯಾಗುವ ದೃಶ್ಯ ಸಾಮಾನ್ಯ. ತಮ್ಮ ರಕ್ಷಣೆಗೆ ಯಾವ ಅಂಗಗಳೂ ಇಲ್ಲದೆ ಇವು ವೇಗದ ಓಟವನ್ನು ಅವಲಂಬಿಸಿವೆ. ಹಗಲು ಇವು ಪೊದರುಗಳಲ್ಲಿ, ಬಹಳೊಮ್ಮೆ ಹುಲ್ಲಿನ ನಡುವೆ ಅಡಗಿ ಕುಳಿತು ಕಾಲ ಕಳೆಯುತ್ತವೆ.

—-

೧೦. ಗಣ : ಸಿಟೇಷಿಯ (Cetacea)

457_69_PP_KUH

ಲ್ಯಾಟಿನ್‌ಭಾಷೆಯಲ್ಲಿ ಸಿಟೇಷಿಯ ಎಂದರೆ ಮೀನಿನಂತಿರುವ ಸಸ್ತನಿಗಳು ಎಂದರ್ಥ. ಇವು ನೀರಿನ ಜೀವನಕ್ಕೆ (ಜಲವಾಸಕ್ಕೆ) ಚೆನ್ನಾಗಿ ಹೊಂದಿಕೊಂಡಿವೆ. ಈ ಗಣಕ್ಕೆ ತಿಮಿಂಗಿಲಗಳು ಮತ್ತು ಡಾಲ್ಫಿನ್‌ಗಳು ಸೇರುತ್ತವೆ.

ದೇಹವು ಮೀನಿನ ಆಕಾರದಲ್ಲಿದೆ. ತಲೆಯು ಉದ್ದನಾಗಿದೆ, ಸ್ಪಷ್ಟವಾದ ಕುತ್ತಿಗೆ ಇಲ್ಲ. ದೇಹದ ಮೇಲಿರಬೇಕಾದ ಕೂದಲುಗಳು ಕಳೆದು ಹೋಗಿ ಬಾಯಿಯ ಸುತ್ತಮುತ್ತ ಕೆಲವು ಒರಟು ಮೀಸೆ ಕೂದಲುಗಳು ಮಾತ್ರ ಉಳಿದಿವೆ. ಚರ್ಮದಲ್ಲಿ ಯಾವ ಗ್ರಂಥಿಗಳೂ ಇಲ್ಲ. ಬಾಲವು ಸಮತಲವಾಗಿ ಅಡ್ಡಡ್ಡನಾಗಿ ತೋರೆಗಳಾಗಿ ಚಪ್ಪಟೆಯಾಗಿದೆ. ಬಾಲವನ್ನು ಮೇಲೆಕ್ಕೆ ಕೆಳಕ್ಕೆ ಬಡಿದು ನೀರಿನಲ್ಲಿ ಈಜುತ್ತವೆ. ಮುಂಗಾಲುಗಳು ಹುಟ್ಟುಗಳಾಕಾರದ ರಚನೆಗಳಾಗಿ ಮಾರ್ಪಟ್ಟಿವೆ. ಬೆರಳುಗಳೆಲ್ಲವೂ ಒಟ್ಟಾಗಿ ಉಭಯ ಸಾಮಾನ್ಯ ಚರ್ಮದೊಳಗೆ ಸೇರಿವೆ. ಹಿಂಗಾಲುಗಳು ಹೊರಗೆ ಕಾಣುವುದಿಲ್ಲ. ಭ್ರೂಣಾವಸ್ಥೆಯಲ್ಲಿ ಅವುಗಳ ಕ್ಷಯಿಸಿದ ಉಳಿದ ಭಾಗಗಳು ಕಂಡುಬಂದರೂ ಅನಂತರ ಕಣ್ಮರೆಯಾಗುತ್ತವೆ. ಕೆಲವು ತಿಮಿಂಗಿಲಗಳಲ್ಲಿ ಮಾಂಸಲವಾದ ಕೊಬ್ಬಿನ ಒಂದು ಬೆನ್ನಿನ ಈಜುರೆಕ್ಕೆ ಇದೆ. ಇದು ಪ್ರಾಣಿಯ ಸಮತೋಲನವನ್ನು ನಿಯಂತ್ರಿಸಲು ನೆರವಾಗುತ್ತದೆ. ಚರ್ಮದ ಕೆಳಗೆ ಬ್ಲಬ್ಬರ್ ಎಂಬ ದಪ್ಪ ಕೊಬ್ಬಿನ ಪದರವಿದ್ದು ದೇಹದ ಶಾಖವು ಕಡಿಮೆಯಾಗುವುದನ್ನು ತಡೆಯುತ್ತದೆ. ಹೊರ ಕಿವಿಯಾಲೆಗಳು ಇಲ್ಲ. ಕಿವಿಯ ತೆರಪುಗಳು ತುಂಬಾ ಸಣ್ಣ ರಂಧ್ರಗಳಂತಿವೆ. ಕಣ್ಣುಗಳು ಸಣ್ಣವು ಮತ್ತು ಕಣ್ಣುರೆಪ್ಪೆಗಳು ಹೆಚ್ಚು ಅಲುಗಾಡುವುದಿಲ್ಲ. ಕಣ್ಣೀರಿನ ಗ್ರಂಥಿಗಳು (ಲ್ಯಾಕ್ರೈಮಲ್ ಗ್ರಂಥಿ) ಕ್ಷೀಣಗೊಂಡಿವೆ ಅಥವಾ ಇಲ್ಲ. ತಲೆಯ ಮೇಲೆ (ಹಿಂಭಾಗದ ತುದಿಯಲ್ಲಿ) ತೀರಾ ಹಿಂದೆ ಒಂದು ಅಥವಾ ಎರಡು ನಾಸಿಕ ರಂಧ್ರಗಳಿವೆ. ವೃಷಣಗಳು ಉದರಭಾಗದಲ್ಲಿವೆ. ಗರ್ಭ ಕೋಶವು ಎರಡು ಪಾಲಿಯದು. ತೊಡೆಯ ಸಂಧಿನ ಭಾಗದಲ್ಲಿ ಒಂದು ಜೊತೆ ಸ್ತನಗಳಿವೆ.

ಇವು ಬಹಳವಾಗಿ ಕಡಲು ವಾಸಿಗಳು. ಹೆಚ್ಚಾಗಿ ಶೀತವಲಯದ ಕಡಲುಗಳಲ್ಲಿ ಕಂಡುಬರುತ್ತವೆ. ಅಪರೂಪವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಸಮುದ್ರದ ಅಲೆಗಳು ತಿಮಿಂಗಿಲಗಳನ್ನು ತಂದು ಹಾಕಿದ್ದುಂಟು. ಆದರೆ ಬಹಳೊಮ್ಮೆ ಇವು ಸತ್ತು ಹೋಗಿರುತ್ತವೆ. ಇಂತಹದೊಂದು ಸತ್ತ ತಿಮಿಂಗಿಲದ ಅಸ್ಥಿಪಂಜರವನ್ನು ಶುಚಿಮಾಡಿ ಮುಲ್ಕಿ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಸಂಗ್ರಹಾಲಯದಲ್ಲಿ ಇಟ್ಟಿದೆ.

ಡಾಲ್ಫಿನ್ ಬಂಗಾಳಕೊಲ್ಲಿಯಲ್ಲಿ ಹೆಚ್ಚಾಗಿ ಕಂಡುಬಂದರೂ ಕರ್ನಾಟಕದ ಕರಾವಳಿಯ ಬಳಿ ಕಡಲಿನಲ್ಲಿ ಕಂಡುಬಂದಿರುವುದುಂಟು.

—- 

ಗಣ : ಸಿಟೇಷಿಯ
ಉದಾ : ಸಾಮಾನ್ಯ ಡಾಲ್ಫಿನ್
ಶಾಸ್ತ್ರೀಯ ನಾಮ : ಡಾಲ್ಫಿನಸ್ ಡೆಲ್ಫಿಸ್
(Dolphinus delphius)

ವಿತರಣೆ ಮತ್ತು ಆವಾಸ : ಇದು ಪ್ರಪಂಚದ ಉಷ್ಣವಲಯದ ಮತ್ತು ಸಮಶೀತೋಷ್ಣ ವಲಯದ ಕಡಲುಗಳಲ್ಲಿ ಕಂಡುಬರುತ್ತದೆ. ಪ್ರಮುಖವಾಗಿ ಬಂಗಾಳಕೊಲ್ಲಿಯಲ್ಲಿ ಹೇರಳವಾಗಿವೆ. ಆಗಾ ಅರಬ್ಬೀ ಸಮುದ್ರದ ಕರ್ನಾಟಕದ ಕರಾವಳಿಯಲ್ಲಿಯೂ ಕಂಡುಬರುತ್ತವೆ. ಕಡಲ ತೀರದಿಂದ ದೂರದಲ್ಲಿ ಜೊತೆಜೊತೆಯಾಗಿ ಈಜುತ್ತವೆ. ಗುಂಪಿನಲ್ಲಿ ನೂರರಿಂದ ಸಾವಿರದವರೆಗೆ (೧೦೦-೧೦೦೦) ಇರಬಹುದು.

ಗಾತ್ರ : ಇವು (೨.೪ ಮೀ.) ೮ ಅಡಿ ಉದ್ದ, ೫ ಕೆ.ಜಿ. ತೂಕವಿರುತ್ತವೆ.

ಆಹಾರ : ತಂಡ ತಂಡವಾಗಿ ಚಲಿಸುವ ಮೀನುಗಳು, ಸೆಫಿಯ, ಹೆರ್ರಿಂಗ್‌ ಮೀನುಗಳು ಇವುಗಳ ಆಹಾರ.

ಲಕ್ಷಣಗಳು : ದೇಹವು ತೆಳುವಾಗಿ ಕದುರಿನಾಕಾರದಲ್ಲಿದೆ. ತಲೆಯು ಚಪ್ಪಟೆಯಾಗಿ, ಉದ್ದನಾದ ಕೊಕ್ಕು ಅಥವಾ ಮೂತಿಯಾಗಿ ಬೆಳೆದಿದೆ. ಮೂತಿಯ ಉದ್ದ ಅರ್ಧಅಡಿ. ಜಾಡೊಂದರಿಂದ ಮೂತಿಯ ಹಣೆಯಿಂದ ಪ್ರತ್ಯೇಕವಾಗಿದೆ. ಎರಡೂ ದವಡೆಗಳಲ್ಲಿ ೩೫ ಕ್ಕಿಂತಲೂ ಹೆಚ್ಚು ಸಂಖ್ಯೆಯ ಅನೇಕ ಸಣ್ಣ ಹಲ್ಲುಗಳಿರುತ್ತವೆ. ತಲೆಯ ಮೇಲೆ ಒಂದು ಊದು ರಂಧ್ರವಿದೆ. ಭುಜದ ಈಜುರೆಕ್ಕೆಗಳು ಮತ್ತು ಬೆನ್ನಿನ ಈಜು ರೆಕ್ಕೆಗಳು ಕುಡುಗೋಲಿನಂತೆ ಬಾಗಿವೆ. ಚರ್ಮವು ಕೂದಲುಗಳಿಲ್ಲದೆ ನಯವಾಗಿದೆ. ಬೆನ್ನಿನ ಭಾಗವು ಕಪ್ಪು ಅಥವಾ ಕಡುಬೂದು ಬಣ್ಣ, ತಳಭಾಗವು ಬಿಳುಪು ಮತ್ತು ಪಕ್ಕಗಳಲ್ಲಿ ಮಾಸಲು ಹಳದಿ ಬಣ್ಣದ ಪಟ್ಟೆಗಳಿವೆ. ಕಣ್ಣಿನ ಸುತ್ತ ಕಪ್ಪು ವೃತ್ತಗಳಿರುತ್ತವೆ.

ಸಂತಾನಾಭಿವೃದ್ಧಿ : ಸಾಮಾನ್ಯವಾಗಿ ಮರಿಗಳು ಬೇಸಿಗೆಯಲ್ಲಿ ಜನಿಸುತ್ತವೆ. ಒಂದು ಸೂಲಿಗೆ ಒಂದೇ ಮರಿ ಹುಟ್ಟುತ್ತದೆ. ಗರ್ಭಾವಧಿ ೨೭೦ ದಿನಗಳು.

ಸ್ವಭಾವ : ಪ್ರಾಚೀನ ಕಾಲದಿಂದಲೂ ಹಿಂದಿನ ನಾಗರೀಕತೆಯ ದಂತ ಮತ್ತು ಪುರಾಣ ಕಥೆಗಳಲ್ಲಿ ಇದರ ವಿವರಣೆ ಇದೆ. ಅಂದರೆ ಹಿಂದಿನಿಂದಲೂ ಈ ಪ್ರಾಣಿಗಳು ಮನುಷ್ಯನಿಗೆ ಪರಿಚಿತವಾಗಿದ್ದವು. ಇವು ಸಾಮಾನ್ಯವಾಗಿ ಗುಂಪುಗಳಲ್ಲಿ ಓಡಾಡುತ್ತವೆ. ಅತ್ಯಮತ ವೇಗದಲ್ಲಿ ಚಲಿಸುವ ಕಡಲಿನ ಪ್ರಾಣಿಗಳಲ್ಲಿ ಇದೂ ಒಂದು. ಗಂಟೆಗೆ ೩೦ ನಾಟಿಕಲ್ (nautical miles In. mile =೧೮೫೨ ಮೀ.) ವೇಗದಲ್ಲಿ ಚಲಿಸಬಲ್ಲದು. ಇವು ಬೇರೆ ಗುಂಪಿನವುಗಳ ಜೊತೆಗೆ ಜಲಾಂತರ ಶಬ್ದಗಳ ಮೂಲಕ ಸುದ್ದಿ ವಿನಿಮಯ ಮಾಡಿಕೊಳ್ಳುತ್ತವೆ ಮತ್ತು ಪ್ರತಿಧ್ವನಿ ಸ್ಥಾನ ನಿರ್ಧಾರದ ಮೂಲಕ ಆಹಾರ ಜೀವಿಗಳನ್ನು ಕಂಡುಕೊಳ್ಳುತ್ತವೆ. ಸಾಮಾಜಿಕ ಜೀವನವುಳ್ಳ ಬುದ್ಧಿವಂತ ಪ್ರಾಣಿಗಳು. ಜೊತೆಯಲ್ಲಿ ಬೇಟೆಯಾಡುತ್ತವೆ. ಬಂಧನದಲ್ಲಿ ಬದುಕುವುದಿಲ್ಲ.

೧೧. ಗಣ : ಸೈರೀನಿಯ

ಕಡಲಾಕಳು ಎಂದು ಹೆಸರಾದ ಸಸ್ತನಿಗಳು ಈ ಗಣಕ್ಕೆ ಸೇರುತ್ತವೆ. ಇವು ನದಿ ಮುಖಜಭೂಮಿ (ಅಳವೆ), ಲ್ಯಾಗೂನ್‌ಗಳು ಮತ್ತು ತೆರೆದ ಕಡಲುಗಳಲ್ಲಿ ವಾಸಿಸುತ್ತವೆ. ಕಡಲಕಳೆ (ಜೊಂಡು) ಮತ್ತು ಕಡಲ ಸಸ್ಯಗಳನ್ನು ತಿನ್ನುವ ಸಸ್ಯಾಹಾರಿ ಪ್ರಾಣಿಗಳು. ಸಿಟೇಷಿಯಾದ ಪ್ರಾಣಿಗಳಂತೆಯೇ ಇವುಗಳಲ್ಲಿಯೂ ಜಲವಾಸಕ್ಕೆ ಅದೇ ಮಾರ್ಪಾಡುಗಳಿವೆ. ಈ ಲಕ್ಷಣ ಹೋಲಿಕೆ ಇದ್ದರೂ ಎರಡೂ ಗಣದ ಪ್ರಾಣಿಗಳ ನಡುವೆ ನಿಕಟ ಸಂಬಂಧ ಇರುವಂತೆ ಕಾಣಬರುವುದಿಲ್ಲ. ಇವು ವಾಸ್ತವವಾಗಿ ಆದಿಮ ಆರ್ಟಿಯೊಡ್ಯಾಕ್ಟೈಲ ಮೂಲದಿಂದ ಉದ್ಭವಿಸಿರುವಂತೆ ಕಂಡು ಬರುತ್ತದೆ.

ಘರ್ಷಣಾ ರಹಿತ ನಯವಾದ ದೇಹ, ಮೋಟುಕತ್ತು, ರೋಮ ರಹಿತ ದೇಹ, ಕಾಲುಗಳು ಹುಟ್ಟುಗಳಾಗಿ ಮಾರ್ಪಟ್ಟಿರುವುದು, ಅಡ್ಡ ಕ್ಷಿತಿಜದ ಬಾಲದ ಈಜುರೆಕ್ಕೆ, ಬ್ಲಬ್ಬರ್ ಕೊಬ್ಬಿನ ಪದರವಿರುವುದು ನಾಸಿಕ ರಂಧರಗಳು ತಲೆಯ ಮೇಲಿರುವುದು, ಸಣ್ಣ ಕಣ್ಣುಗಳು, ಕಿವಿಯಾಲೆಗಳಿಲ್ಲದಿರುವುದು ಇವೆಲ್ಲಾ ಸಿಟೇಷಿಯಾ ಗಣದ ಲಕ್ಷಣಗಳು. ಆದರೆ ಸಿಟೇಷಿಯಗಳಿಂದ ಭಿನ್ನವಾದ ಲಕ್ಷಣಗಳೆಂದರೆ ದುಂಡುಮೂತಿ, ಸೀಳು ತುಟಿ, ಭಾರವಾದ ಮೂಳೆಗಳು, ೫ ಬೆರಳುಗಳಿರುವುದು ಮತ್ತು ಅವು ಉಭಯ ಸಾಮಾನ್ಯ ಆವರಣದಲ್ಲಿರುವುದು, ಮೂರಕ್ಕಿಂತ ಹೆಚ್ಚು ಗೆಣ್ಣುಗಳಿಲ್ಲದಿರುವುದು ಸ್ತನಗಳು ಎದೆಯ ಭಾಗದಲ್ಲಿರುವುದು.

—- 

ಗಣ : ಸೈರಿನೀಯ
ಉದಾ : ಡ್ಯುಗಾಂಗ್ ಅಥವಾ ಕಡಲಾಕಳು
ಶಾಸ್ತ್ರೀಯ ನಾಮ : ಡ್ಯುಗಾಂಗ್ ಡ್ಯುಗಾಂಗ್ (
Dugong dugong)

458_69_PP_KUH

ವಿತರಣೆ ಮತ್ತು ಆವಾಸ : ಕಡಲಿನಲ್ಲಿ ಸಾಮಾನ್ಯವಾಗಿ ವಾಸಿಸುವ ಈ ಪ್ರಾಣಿ ಕರ್ನಾಟಕದ ಕರಾವಳಿಯಲ್ಲಿಯೂ ಕಾಣಿಸಿಕೊಳ್ಳುತ್ತದೆ. ಇದು ಹಿಂದೂಮಹಾಸಾಗರ ಮತ್ತು ಆಸ್ಟ್ರೇಲಿಯಾದ ಸಮುದ್ರಗಳಲ್ಲಿ ವಾಸಿಸುತ್ತದೆ. ಇದು ಸಮುದ್ರತೀರದಲ್ಲಿ ಆಳವಿಲ್ಲದ ನೀರಿನಲ್ಲಿ ವಿಶೇಷವಾಗಿ ಇರುತ್ತದೆ. ಆಳದ ನೀರಿಗೆ ಹೋಗುವುದೇ ಇಲ್ಲ. ಹಾಗೂ ನದಿಗಳಿಗೂ ನುಗ್ಗುವುದಿಲ್ಲ.

ಗಾತ್ರ : ೧೦ ಅಡಿಗಳಷ್ಟು ಉದ್ದವಿದೆ. ದೇಹದ ಸುತ್ತಳತೆ ೬ ೧/೨ ಅಡಿ. ಹೆಣ್ಣು ಗಂಡಿಗಿಂತಲೂ ಚಿಕ್ಕದು.

ಆಹಾರ : ಸಸ್ಯಾಹಾರಿ. ಇದರ ಆಹಾರ ಸಮುದ್ರದ ಜೊಂಡು ಅಥವಾ ಕಳೆ, ಮತ್ತು ಇತರ ಕಡಲ ಸಸ್ಯಗಳು.

ಲಕ್ಷಣಗಳು : ಉದರ ಭಾಗವು ಸಮತಲವಾಗಿದ್ದು, ಬೆನ್ನು ಮತ್ತು ಪಕ್ಕಗಳು ಉಬ್ಬಿವೆ. ತಲೆಯು ದಪ್ಪನಾಗಿದ್ದು, ಮುಂಡಭಾಗಕ್ಕೆ ನೇರವಾಗಿ ಸೇರಿರುವುದರಿಂದ ಕತ್ತು ಕಾಣಬರುವುದಿಲ್ಲ. ಬಾಲದಲ್ಲಿರುವ ಈಜುರೆಕ್ಕೆಯು ಸಮತಲವಾಗಿ ಚಪ್ಪಟೆಯಾಗಿದೆ. ಬೆನ್ನಿನ ಮೇಲೆ ಈಜುರೆಕ್ಕೆ ಇಲ್ಲ. ಮುಂಗಾಲುಗಳು ಅಗಲವಾಗಿ ಹುಟ್ಟಿನಂತಿವೆ. ಕಣ್ಣುಗಳು ಸಣ್ಣವು. ಬಾಯಿ ಚಿಕ್ಕದು. ಬಾಯಿಯ ಮೇಲಿನ ಸೀಳಿದ ತುಟಿಯು ಕೆಳಗಿನ ತುಟಿಯಿಂದ ಮುಂದೆ ಚಾಚಿ ಕುದುರೆಯ ಲಾಳಾ ಕೃತಿಯದಾಗಿ ಜೋಲು ಬಿದ್ದಿದೆ. ಬಾಯಿ ಸಮುದ್ರದ ಜೊಂಡು, ಕಡಲು ಸಸ್ಯಗಳನ್ನು ಮೇಯಲು ಅನುವಾಗಿದೆ. ಮೂತಿಯ ಮುಂದುಗಡೆ ಬಿರುಸು ಕೂದಲುಗಳಿವೆ. ಕಿವಿಗಳಿಗೆ ಆಲಿಕೆಗಳಿಲ್ಲ. ಸಣ್ಣ ತೂತು ಮಾತ್ರ ಇದೆ. ಹೊರಕಿವಿಗಳು ದುಂಡಗಿವೆ. ಮೂತಿಯ ತುದಿ ಮತ್ತು ಕಣ್ಣುಗಳ ನಡುವೆ ತಲೆಯ ಮೇಲೆ ಸಣ್ಣ ನಾಸಿಕ ರಂಧ್ರಗಳಿವೆ. ನೀರಿನಲ್ಲಿ ಮುಳುಗಿದಾಗ ಈ ರಂಧ್ರಗಳು ಮುಚ್ಚಿಕೊಳ್ಳುತ್ತವೆ. ಸುಕ್ಕುಗಟ್ಟಿದ ಮರದ ತೊಗಟೆಯಂತಹ ದಪ್ಪ ಚರ್ಮ, ಚರ್ಮದ ಕೆಳಗಡೆ ದಪ್ಪನಾದ ಕೊಬ್ಬಿನ ಬ್ಲಬ್ಬರ್ ಎಂಬ ಪದರವಿದೆ. ಕೆಲವು ವೇಳೆ ಚರ್ಮದ ಮೇಲೆ ವಿರಳವಾಗಿ ತೆಳುವಾದ ಕೂದಲು ಇರುತ್ತವೆ. ಗಂಡು ಪ್ರಾಣಿಯಲ್ಲಿ ಮೇಲಿನ ದವಡೆಯ ಬಾಚಿ ಹಲ್ಲುಗಳು ಉದ್ದನಾಗಿ ಬೆಳೆದು ಕೋರೆಯಂತಾಗಿವೆ. ಕಡಲು ಆಕಳಿಗೆ ಚುರುಕು ಶ್ರವಣ ಶಕ್ತಿ ಇದೆ. ಇವು ಆಗಾಗ ನೀರಿನ ಮೇಲೆ ಬಂದು ಗಾಳಿಯನ್ನು ಉಸಿರಾಡುತ್ತವೆ. ಇವು ಗಂಟೆಗೆ ೮೧೦ ಕಿ.ಮೀ. ವೇಗದಲ್ಲಿ ಈಜುತ್ತವೆ.

ಸಂತಾನಾಭಿವೃದ್ಧಿ : ವರ್ಷವಿಡೀ ಸಂತಾನೋತ್ಪತ್ತಿ ಕ್ರಿಯೆ ನಡೆಯುವಂತೆ ಕಾಣಬರುತ್ತದೆ. ಗರ್ಭಾವಧಿ ೧೧ ತಿಂಗಳು. ಒಂದು ಸೂಲದಲ್ಲಿ ಒಂದು ಮರಿ ಹುಟ್ಟುತ್ತದೆ. ತಾಯಿ ತುಂಬಾ ಅಕ್ಕರೆಯಿಂದ ಮರಿಯನ್ನು ನೋಡಿಕೊಳ್ಳುತ್ತದೆ. ಹಾಲು ಕುಡಿಸುವಾಗ ಮರಿಯ ತಲೆಯನ್ನು ಎದೆಯನ್ನು ನೀರಿನಿಂದ ಮೇಲೆಕ್ಕೆತ್ತಿ ಮುಂಗಾಲುಗಳಿಂದ ಮನುಷ್ಯರಂತೆ ಹಿಡಿದುಕೊಳ್ಳುತ್ತದೆ. ಈ ಮಾನವ ಸದೃಶ ಗುಣವನ್ನು ಕಂಡ ನಾವಿಕರು ಮಾನವ ಹೆಣ್ಣೆಂದು ತಪ್ಪುಗ್ರಹಿಸಿ ಜಲಕನ್ಯೆ ಎಂದು ಕರೆಯಲು ಆಧಾರವಾಗಿರಬಹುದು.

ಸ್ವಭಾವ : ಜಡಸ್ವಭಾವದ ಸಾಧುಪ್ರಾಣಿ. ಒಂದು ಕಾಲಕ್ಕೆ ನೂರಾರು ಪ್ರಾಣಿಗಳ ದೊಡ್ಡ ಗುಂಪುಗಳು ಸಮುದ್ರದಲ್ಲಿರುತ್ತಿದ್ದವು. ಮನುಷ್ಯರನ್ನು ಕಂಡರೆ ಹೆದರುತ್ತಿರಲಿಲ್ಲ. ಮನುಷ್ಯರು ಅವುಗಳನ್ನು ಮುಟ್ಟಿದರೂ ಅವು ಸುಮ್ಮನಿರುತ್ತಿದ್ದವು ಆದರೆ ಈಚೆಗೆ ಅವುಗಳ ರುಚಿಕರವಾದ ಮಾಂಸಕ್ಕಾಗಿ ಮತ್ತು ಕೊಬ್ಬಿನ ಎಣ್ಣೆಗಾಗಿ ಇವುಗಳನ್ನು ಕೊಂದು ನಾಶಪಡಿಸಲಾಗಿದೆ. ಆದಕಾರಣ ಇವುಗಳ ಸಂಖ್ಯೆ ತುಂಬಾ ಕಡಿಮೆಯಾಗಿದೆಲ್ಲದೆ, ಇವಕ್ಕೆ ಮನುಷ್ಯನಲ್ಲಿದ್ದ ಸಲಿಗೆಯು ಹೋಗಿ ಬಿಟ್ಟಿದೆ.