. ಗಣ : ಕೈರಾಪ್ಟೆರ
ಬಾವಲಿಗಳು (Bats)

ಬಾಪಲಿಗಳು ಪ್ರಪಂಚಾದ್ಯಂತ ದೊರಕುತ್ತವೆ. ಇವುಗಳಲ್ಲಿ ೪೨ ಜಾತಿಗಳು ೩೬೩ ಪ್ರಭೇದಗಳಿವೆ. ಸಾಮಾನ್ಯವಾಗಿ ಉಷ್ಣವಲಯ ಮತ್ತು ಸಮಶೀತೋಷ್ಣ ವಲಯಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಧ್ರುವ ಪ್ರದೇಶಗಳಲ್ಲಿ, ಮತ್ತು ಎರಡು ದ್ವೀಪ ರಾಷ್ಟ್ರಗಳಲ್ಲಿ (ಗ್ರೀನ್ ಲ್ಯಾಂಡ್ ಮತ್ತು ಐಸ್ ಲ್ಯಾಂಡ್) ಮಾತ್ರ ಕಂಡುಬರುವುದಿಲ್ಲ.

ಈ ಗಣಕ್ಕೆ ಸೇರಿದ ಸಸ್ತನಿಗಳು ಹಕ್ಕಿಗಳಂತೆ ಸ್ವತಂತ್ರವಾಗಿ ಹಾರಬಲ್ಲ ಏಕಮಾತ್ರ ಸಸ್ತನಿ ಗುಂಪು. ಬಾವಲಿ, ಕಪಟ, ಚಕ್ಕಳದ ಹಕ್ಕಿ, ತೋಲಕ್ಕಿ ಮುಂತಾದವು ಈ ಪ್ರಾಣಿಗಳನ್ನು ವಿವರಿಸಲು ಬಳಸುವ, ಪರ್ಯಾಯ ನಾಮಗಳು.

ಇವು ಹಾರಲು ಅನುಕೂಲವಾಗುವಂತೆ ‘ಪೆಟಾಜಿಯಂ’ ಎನ್ನುವ ಒಂದು ರೀತಿಯ ಎರಡು ಪದರದ ರೆಕ್ಕೆಗಳು ಬೆಳೆದಿವೆ. ಮುಂಗೈನ ಬೆರಳುಗಳು ನೀಳವಾಗಿ ಬೆಳೆದು, ಭುಜ, ಕೈಬೆರಳುಗಳ ನಡುವೆ, ಮುಂಗಾಲು ಮತ್ತು ಹಿಂಗಾಲುಗಳ ನಡುವೆ, ಹಾಗೂ ಹಿಂದೆ ಕೆಲವುಗಳಲ್ಲಿ ಹಿಂಗಾಲುಗಳ ನಡುವೆ, ಬಾಲವನ್ನು ಒಳಗೊಂಡು ಚರ್ಮದ ಮಡಿಕೆಯೊಂದು ಬೆಳೆದು ರೆಕ್ಕೆ ರೂಪುಗೊಂಡಿದೆ. ಕೈಕಾಲುಗಳು ಸೇರಿ ರೆಕ್ಕೆಗಳಾಗಿ ಮಾರ್ಪಟ್ಟಿರುವುದು ಬಾವಲಿಗಳ ವೈಶಿಷ್ಟ್ಯ. ಹಾರದಿರುವಾಗ ವಿಶ್ರಮಿಸಿಕೊಳ್ಳಲು ಯಾವುದಾದರೂ ಆಸರೆಗೆ ತಮ್ಮ ನಖಗಳಿಂದ ತಲೆಕೆಳಗಾಗಿ ನೇತು ಬೀಳುವುದು ಇವುಗಳ ಸ್ವಭಾವ.

ಕೈ ಮತ್ತು ಬೆರಳುಗಳ ಮೂಳೆಗಳು ತೆಳುವಾಗಿ ಹಾಗೂ ಉದ್ದವಾಗಿ ಬಾಚಿಕೊಂಡಿವೆ. ಆದರೆ ಕೈನ ಮೊದಲನೆಯ ಬೆರಳು (ಹೆಬ್ಬೆಟ್ಟು) ಮೋಟಾಗಿದೆ. ಇದರ ತುದಿಯಲ್ಲಿ ಚಪ್ಪಟೆಯಾದ ಮತ್ತು ಕೊಕ್ಕೆಯಂತಹ ನಖವಿದೆ. ಆದ್ದರಿಂದ ರೆಕ್ಕೆಯ ರಚನೆಯಲ್ಲಿ ಹೆಬ್ಬೆರಳು ಪಾಲುಗೊಳ್ಳುವುದಿಲ್ಲ. ಈ ನಖವು ಪ್ರಾಣಿಗಳು ವಿಶ್ರಮಿಸಿಕೊಳ್ಳುವಾಗ ಆಸರೆಯನ್ನು ಹಿಡಿದುಕೊಳ್ಳುವುದಕ್ಕೆ ಮಾತ್ರ ಉಪಯೋಗವಾಗುತ್ತವೆ. ಉಳಿದ ನಾಲ್ಕು ಬೆರಳುಗಳು ಉದ್ದವಾಗಿದ್ದು ರೆಕ್ಕೆಯನ್ನು ಬಿಚ್ಚಿ ಅಗಲವಾಗಿ ಹರಡಲು ಮತ್ತು ಹಾರದಿರುವಾಗ ರೆಕ್ಕೆಯನ್ನು ಮಡಿಸಿಕೊಳ್ಳಲು ಸಹಾಯಕವಾಗಿವೆ. ಈ ಬೆರಳುಗಳಿಗೆ ನಖಗಳಿಲ್ಲ. ತೋಳು ಮತ್ತು ಬೆರಳುಗಳ ನಡುವೆ ಹರಡಿಕೊಂಡಿರುವ ತೆಳುವಾದ ಪೊರೆಯೇ ರೆಕ್ಕೆ. ಇದು ಬೆನ್ನಿನ ಮತ್ತು ಹೊಟ್ಟೆಯ ಭಾಗದ ಚರ್ಮದ ಪಾರ್ಶ್ವ ವಿಸ್ತೃತ ರಚನೆ ಇದನ್ನು ಪೆಟಾಜಿಯಂ (ರೆಕ್ಕೆಪೊರೆ) ಎಂದು ಕರೆಯುವುದುಂಟು. ಈ ಪೊರೆ ಭುಜದಿಂದ ಆರಂಭವಾಗಿ ಮುಂಗೈ ಅಂಚಿನಲ್ಲಿ ಮತ್ತು ಹೆಬ್ಬೆಟ್ಟಿನ ಬುಡದವರೆಗೆ ಹರಡಿ, ನೀಳವಾದ ಬೆರಳುಗಳ ನಡುವೆ ಮತ್ತು ಹಿಂಭಾಗದಲ್ಲಿ ಎರಡೂ ತೊಡೆಗಳ ಮಧ್ಯೆಯೂ ಹರಡಿರುತ್ತದೆ. ಕೆಲವು ಬಾವಲಿಗಳಲ್ಲಿ ಈ ಪೆಟಾಜಿಯಂನಲ್ಲಿ ಬಾಲವೂ ಸೇರಿರಬಹುದು. ಮೊಣಕಾಲಿನ ಕೀಲು ಬಾವಲಿಗಳಲ್ಲಿ ಹಿಂದಕ್ಕೆ ಮಡಚಿಕೊಳ್ಳುತ್ತದೆ. ಇದು ಇವುಗಳ ಇನ್ನೊಂದು ವಿಶೇಷ ಲಕ್ಷಣ. ಇದರಿಂದಾಗಿ ಬಾವಲಿಗಳು ತಲೆಕೆಳಗಾಗಿ ನೇತುಹಾಕಿಕೊಂಡಾಗ ತಲೆಯನ್ನು ಕಾಲ್ಟೆರಳುಗಳ ಹತ್ತಿರಕ್ಕೆ ತರುವುದು ಸಾಧ್ಯವಾಗಿದೆ. ಹಿಂಗಾಲಿನ ಮೂಳೆಗಳು ತೆಳುವಾಗಿದ್ದರೂ ಮುಂಗೈನ ಮೊಳೆಗಳಷ್ಟು ಉದ್ದವಾಗಿಲ್ಲ. ಪಾದಗಳಲ್ಲಿ ಸಮ ಉದ್ದದ ಕೊಕ್ಕೆಗಳಂತಿರುವ ನಖಗಳನ್ನು ಹೊಂದಿದ ೫ ಬೆರಳುಗಳಿವೆ. ಈ ನಖಗಳೂ ಆಸರೆಗೆ ನೇತು ಹಾಕಿಕೊಳ್ಳಲು ನೆರವಾಗುತ್ತವೆ.

ಇವುಗಳು ಸೇವಿಸುವ ಆಹಾರವನ್ನನುಸರಿಸಿ ಈ ಗಣವನ್ನು ಎರಡು ಉಪಗಣಗಳನ್ನಾಗಿ ವಿಂಗಡಿಸಿದೆ. ೧. ಹಣ್ಣು ತಿನ್ನುವ ಮೆಗಾಕೈರಾಪ್ಟೆರ ೨. ಕೀಟಗಳನ್ನು ತಿನ್ನುವ ಮೈಕ್ರೊಕೈರಾಪ್ಟೆರ- ಹೆಸರೇ ಸೂಚಿಸುವಂತೆ ಮೆಗಾಕೈರಾಪ್ಟೆರ ಉಪಗಣಕ್ಕೆ ಸೇರಿದ ಬಾವಲಿಗಳು ಗಾತ್ರದಲ್ಲಿ ದೊಡ್ಡವು. ಮೈಕ್ರೊಕೈರಾಪ್ಟೆರಗಳು ಗಾತ್ರದಲ್ಲಿ ಸಣ್ಣವು.

ಆಹಾರ ಸೇವೆಯನ್ನನುಸರಿಸಿ ಬಾವಲಿಗಳ ಹಲ್ಲುಗಳ ಆಕಾರ, ಸಂಖ್ಯೆ ವ್ಯತ್ಯಾಸವಾಗುತ್ತವೆ. ಸಾಮಾನ್ಯ ಸಂಖ್ಯೆ ೩೮ ನ್ನು ಮೀರುವುದಿಲ್ಲ. ೨, ೧, ೩, ೩ / ೩, ೧, ೩, ೩ ಇವುಗಳ ಸಾಮಾನ್ಯ ದಂತ ಸೂತ್ರ.

ಇವು ವರ್ಷವಿಡೀ ಸಂತಾನೋತ್ಪತ್ತಿ ನಡೆಸುತ್ತವೆ. ಬಹಳ ಪ್ರಾಣಿಗಳು ನಿಯಮಿತವಾದ ಋತು ಚಕ್ರಗಳನ್ನು ತೋರುತ್ತವೆ. ಒಂದು ಸೂಲದಲ್ಲಿ ೧ ಅಥವಾ ೨ ಮರಿಗಳನ್ನು ಹಾಕುತ್ತವೆ.

ಪೆಟಾಜಿಯಂ, ಬಾಯಿಯ ಸುತ್ತಲಭಾಗ ಮತ್ತು ಮೂಗಿನ ಹೊಳ್ಳೆಯ ಪ್ರದೇಶವನ್ನುಳಿದು ದೇಹದ ಉಳಿದ ಭಾಗದಲ್ಲೆಲ್ಲಾ ಮೃದುವಾದ ತುಪ್ಪುಳದಿಂದ ಕೂಡಿದ ಕೂದಲ ಹೊದಿಕೆ ಇದೆ. ಹೊರ ಕಿವಿಗಳು ಸಾಮಾನ್ಯವಾಗಿ ದೊಡ್ಡವು. ಕೆಲವು ಬಾವಲಿಗಳಲ್ಲಿ ಕಿವಿಗಳು ಸಾಧಾರಣವಾಗಿ ತೆಳುಪೊರೆಯಂತಿವೆ ಮತ್ತು ಕೂದಲುಗಳಿಂದಾವೃತವಾಗಿಲ್ಲ. ಹೊರ ಕಿವಿಯ ಒಳಮೈಮೇಲೆ, ಕಿವಿಯ ಬುಡದಿಂದ ಹೊರ ಅಂಚಿನವರೆಗೆ ಚಾಚಿರುವ ಕೋಡುಗಳು, ದಿಂಡುಗಳು ಇವೆ. ಇವುಗಳ ಆಕಾರ, ರಚನಾ ಕ್ರಮ ಮತ್ತು ವ್ಯವಸ್ಥೆ ವಿವಿಧ ನಮೂನೆಗಳಾಗಿವೆ. ಇವುಗಳನ್ನು ಜಾತಿ ಮತ್ತು ಪ್ರಬೇಧಗಳನ್ನು ಗುರುತಿಸುವ ಚಿಹ್ನೆಗಳಾಗಿ ಬಳಸುತ್ತಾರೆ. ಕೆಲವುಗಳ ಕಿವಿಯಲ್ಲಿ ಟ್ರೇಗಸ್ ಎಂಬ ದೊಡ್ಡ ಕಿವಿಯಾಲೆಯಿದೆ. ಇದಕ್ಕೆ ಶ್ರವಣಾತೀತ ಶಬ್ದದ ಅಲೆಗಳನ್ನು ಗ್ರಹಿಸುವ ಶಕ್ತಿ ಇದೆ ಎಂದು ಹೇಳುತ್ತಾರೆ. ಇದರ ಸಹಾಯದಿಂದ ತಾನು ಚಲಿಸುವ ದಿಕ್ಕಿನಲ್ಲಿ ಇರಬಹುದಾದ ವಸ್ತು ಸ್ಥಿತಿಗಳನ್ನು ಅರಿತುಕೊಂಡು ಹಾರುವ ದಿಕ್ಕನ್ನು ಬದಲಿಸಬಹುದು. ಕೆಲವರಲ್ಲಿ ವಿವಿಧ ನಾಸಿಕ ಪತ್ರಗಳಿವೆ. ಇವೂ ಕೂಡ ಚಲಿಸುವಾಗ ದೇಹವನ್ನು ಯಾವ ಪದಾರ್ಥಕ್ಕೂ ತಗಲದಂತೆ ಹಾರುವ ಮತ್ತು ಹಾರುವ ದಿಕ್ಕಿನಲ್ಲಿ ಯಾವುದಾದರೂ ಅಡ್ಡಿ ಇದ್ದರೆ ಅದನ್ನು ದೂರದಿಂದಲೇ ತಿಳಿದುಕೊಳ್ಳುವುದರಲ್ಲಿ ನೆರವಾಗುತ್ತವೆ ಎಂದು ಹೇಳುತ್ತಾರೆ. ಈ ನಾಸಿಕ ಪತ್ರಗಳಿಂದಾಗಿ ಮನುಷ್ಯ ಗುರುತಿಸಲು ಅಸಾಧ್ಯವಾದ ಜ್ಞಾನವಾಹಿನಿ ಶಕ್ತಿ ಇವಕ್ಕೆ ಇದೆ ಎಂದು ತಿಳಿದು ಬರುತ್ತದೆ. ಬಾವಲಿಯು ತನ್ನ ಬಾಯಿಂದ ತೀಕ್ಷ್ಣವಾದ ಏರುದನಿಯ ಶಬ್ದ ತರಂಗಗಳನ್ನು ಉತ್ಪಾದಿಸಿ, ಅದರ ಸಹಾಯದಿಂದ ವಸ್ತುಗಳ ಇರುವಿಕೆಯನ್ನು ಪತ್ತೆ ಹಚ್ಚುತ್ತವೆ. ಕತ್ತಲಿನಲ್ಲಿ ಈ ಶಬ್ದತರಂಗಗಳು ಹೊರಹೊಮ್ಮಿದಾಗ ಪತ್ತೆ ಹಚ್ಚುತ್ತವೆ. ಕತ್ತಲಿನಲ್ಲಿ ಈ ಶಬ್ದತರಂಗಗಳು ಹೊರಹೊಮ್ಮಿದಾಗ ಇವು ವಸ್ತುಗಳಿಗೆ ತಾಕಿ ಬಂದ ಪ್ರತಿಧ್ವನಿಗಳಿಂದ ಸುಗುಮವಾಗಿ ಹಾರುತ್ತವಷ್ಟೇ ಅಲ್ಲ, ತನ್ನ ಬೇಟೆಗಳನ್ನು ಗುರುತಿಸುತ್ತವೆ. ಕಣ್ಣುಗಳು ಸಣ್ಣವು, ಆದರೆ, ದೃಷ್ಟಿ ಬಹು ಸೂಕ್ಷ್ಮ. ಮತ್ತೊಂದು ವಿಶಿಷ್ಟ ಲಕ್ಷಣವೆಂದರೆ ಇವುಗಳ ಮೂತಿಯ ಕೆಳಭಾಗಕ್ಕೂ ತುಪ್ಪಳಕ್ಕೂ ನಡುವೆ ಇರುವ ಸೆಬೇಷಿಯಸ್ ಗ್ರಂಥಿಗಳು. ಈ ಗ್ರಂಥಿಗಳು ಒಂದು ಬಗೆಯ ಕಮಟು ವಾಸನೆಯ ದ್ರವವನ್ನು ಒಸರುತ್ತವೆ. ಇದು ತುಪ್ಪುಳನ್ನು ಮೃದುವಾಗಿ ಮತ್ತು ನಯವಾಗಿ ಇಡುವುದಲ್ಲದೆ, ಬಾವಲಿಗಳು ವಾಸಿಸುವ ಸ್ಥಳವನ್ನು ದುರ್ಗಂಧಮಯವನ್ನಾಗಿ ಮಾಡಿ ಬೇರಾವ ಪ್ರಾಣಿಯೂ ಆ ಸ್ಥಳಕ್ಕೆ ಸುಳಿಯದಂತೆ ಮಾಡುತ್ತದೆ.

ಬಾವಲಿಗಳ ಹಾರುವಿಕೆ ವೈಶಿಷ್ಟ್ಯಪೂರ್ಣವೂ, ವೈವಿಧ್ಯಮಯವೂ ಆಗಿದೆ. ಇವು ತಲೆಕೆಳಗಾಗಿ ನೇತಾಡುತ್ತಾ ವಿಶ್ರಾಂತಿ ಪಡೆಯುವಾಗ ತಮ್ಮ ರೆಕ್ಕೆಗಳ ಒಳ ಮತ್ತು ಹೊರಭಾಗಗಳನ್ನು ನಾಲಿಗೆಯಿಂದ ನೆಕ್ಕಿ ಶುಚಿ ಮಾಡಿಕೊಳ್ಳುತ್ತವೆ. ಕಾಲಿನ ನಖಗಳಿಂದ ತುಪ್ಪುಳನ್ನು ಬಾಚಿಕೊಳ್ಳುತ್ತವೆ. ಮಲಗಿರುವಾಗ ರೆಕ್ಕೆಗಳನ್ನು ಪೂರ್ತಿ ಅಗಲಿಸಿ, ಕೊಡವಿ, ಜಾಗರೂಕತೆಯಿಂದ ಪುನಃ ಮಡಿಚಿಕೊಳ್ಳುವುದುಂಟು. ಇಷ್ಟೆಲ್ಲಾ ಎಚ್ಚರಿಕೆವಹಿಸಿದರೂ ತುಪ್ಪುಳದಲ್ಲಿ ಅನೇಕ ಪರತಂತ್ರ ಜೀವಿಗಳು ಇದ್ದೇ ಇರುತ್ತವೆ. ಇವುಗಳ ವಸತಿಯ ಬಳಿ ಇರುವ ದುರ್ಗಂಧ ವಾಸನೆಯನ್ನು ಬಿಟ್ಟರೆ ಇವು ಕೊಳಕು ಪ್ರಾಣಿಗಳು ಎನ್ನುವ ಅಭಿಪ್ರಾಯ ತಪ್ಪು.

ಇವು ಸಾಮಾನ್ಯವಾಗಿ ಸಂಘಜೀವಿಗಳು. ನೂರಾರು-ಲಕ್ಷಾಂತರ ಬಾವಲಿಗಳು ಗುಂಪು ಗುಂಪಾಗಿ ವಿರಮಿಸುತ್ತವೆ. ಮತ್ತು ಜೊತೆಯಲ್ಲಿ ಹಾರಾಡುತ್ತವೆ. ಗುಹೆಗಳಲ್ಲಿ, ಮರಗಳಲ್ಲಿ, ಪಾಳುಮನೆಗಳಲ್ಲಿ, ಸುರಂಗಗಳಲ್ಲಿ ವಾಸಿಸುತ್ತವೆ. ಹಲವಾರು ವರ್ಷಗಳು. ಕೆಲವೊಮ್ಮೆ ನೂರಾರು ವರ್ಷಗಳು ಒಂದೇ ನೆಲೆಯಲ್ಲಿ ಜೀವಿಸುವುದು ಇವುಗಳ ಇನ್ನೊಂದು ವಿಶೇಷ ಗುಣ. ರಾತ್ರಿಯೆಲ್ಲಾ ಆಹಾರದ ಬೇಟೆಯನ್ನಾಡಿ, ಬೆಳಗಿನ ಜಾವ ನೆಲೆಗೆ ಹಿಂದಿರುಗಿ ಬಂದು ಮೇಲಿನ ರೆಂಬೆಗಳಿಗೆ ಅಥವಾ ಮೇಲ್ಚಾವಣಿಗಳಿಗೆ ನೇತು ಬಿದ್ದು ನಿದ್ದೆ ಹೋಗುತ್ತವೆ.

ಸಂತಾನಾಭಿವೃದ್ಧಿ ಕಾಲದಲ್ಲಿ ಮಾತ್ರ ಗಂಡು ಹೆಣ್ಣುಗಳು ಒಂದೆಡೆ ಕೂಡಿ ಜೀವಿಸುತ್ತವೆ. ಮರಿಗಳನ್ನು ಈಯುವ ಕಾಲಕ್ಕೆ ಬೇರ್ಪಟ್ಟು ಮರಿಗಳು ಹುಟ್ಟಿದ ಕೆಲವು ವಾರಗಳ ನಂತರ ಪುನಃ ಒಂದು ಗೂಡುತ್ತವೆ. ಸಂತಾನೋತ್ಪತ್ತಿಯ ಕ್ರಮವೂ ವಿಶೇಷ ರೀತಿಯದು. ಶೀತ ವಲಯ ಮತ್ತು ಸಮಶೀತೋಷ್ಣ ವಲಯಗಳಲ್ಲಿ ವಾಸಿಸುವ ಬಾವಲಿಗಳು ಚಳಿಗಾಲವನ್ನು ಹೈಬರ್ನೇಷನ್ ಎನ್ನುವ ನಿಶ್ಚೇಷ್ಟಾವಸ್ಥೆಯಲ್ಲಿ ಕಳೆಯುವುದು ವಾಡಿಕೆ. ಚಳಿಗಾಲ ಕಳೆದು ವಸಂತ ಋತು ಆರಂಭವಾದಾಗ ಸಂತಾನೋತ್ಪತ್ತಿಯ ಚಟುವಟಿಕೆಯನ್ನು ಪ್ರಾರಂಭಿಸಿದರೆ, ಗರ್ಭಕಟ್ಟುವ ಕಾಲಕ್ಕೆ ಪುನಃ ಚಳಿಗಾಲದ ಆರಂಭವಾಗಬಹುದು. ಆದುದರಿಂದ ಇದನ್ನು ತಪ್ಪಿಸಲು ಚಳಿಗಾಲ ಆರಂಭವಾಗುವ ಮುನ್ನವೇ ಸಂತಾನೋತ್ಪತ್ತಿಯ ಪ್ರಕ್ರಿಯೆಗಳನ್ನು ಮುಗಿಸಿ, ಸಂಭೋಗ ನಡೆಸಿ ಪಡೆದ ಪುರುಷಾಣುಗಳನ್ನು ಗರ್ಭಕೋಶದಲ್ಲಿ ಕೂಡಿಟ್ಟುಕೊಂಡಿದ್ದು, ಚಳಿಗಾಲ ಮುಗಿದ ಮೇಲೆ ನಿಷೇಚಿಸಿ, ಗರ್ಭಧರಿಸಿ ಈಯುತ್ತವೆ. ಇದನ್ನು ಸಾವಕಾಶ ನಿಷೇಚನವೆಂದು ಹೇಳುತ್ತಾರೆ. ಮತ್ತು ಇದು ಬಾವಲಿಗಳ ವಿಶೇಷ ಲಕ್ಷಣ. ಇದು ಉಷ್ಣವಲಯದ ಬಾವಲಿಗಳಲ್ಲಿ ಕಂಡು ಬರುವುದಿಲ್ಲ. ಬಹುಪಾಲು ಬಾವಲಿಗಳು ವರ್ಷಕ್ಕೆ ಒಂದು ಸಾರಿ ಸಂತಾನೋತ್ಪತ್ತಿ ನಡೆಸುತ್ತವೆ. ಹುಟ್ಟಿದ ಮರಿಗಳಿಗೆ ತುಪ್ಪುಳು ಹೊದಿಕೆ ಇರುವುದಿಲ್ಲ. ಕಣ್ಣುಗಳು ತೆರೆದಿರುವುದಿಲ್ಲ. ಸಾಕಷ್ಟು ಬೆಳೆಯುವವರೆಗೆ ತಾಯಿ ಬಾವಲಿ ಮರಿ ಹಾಕುವಾಗ ಮಾತ್ರ ತನ್ನ ಕೈ ಬೆರಳುಗಳಿಂದ ಆಸರೆಯನ್ನು ಬಲವಾಗಿ ಹಿಡಿದು ನೇರವಾಗಿ ನೇತಾಡುತ್ತದೆ. ಚರ್ಮದ ಪದರದ ರೆಕ್ಕೆಗಳನ್ನು ಕೆಳಗೆ ಮಡಿಚಿ, ಮರಿಗಳು ತಾಯಿ ಬಾವಲಿ ಹಾರುವಾಗ ಅದರ ಮೈ ಮೇಲಿರುವ ತುಪ್ಪುಳವನ್ನು ಗಟ್ಟಿಯಾಗಿ ಹಿಡಿದುಕೊಂಡು ತಾನು ಬೀಳದಂತೆ ಸಂಭಾಳಿಸಿಕೊಳ್ಳುತ್ತದೆ.

ಬಾವಲಿಗಳು ಹಾರಿ ಬಂದು ಸರಕ್ಕನೆ ಕಣ್ಣುಗಳನ್ನು ಕಿತ್ತುಕೊಂಡು ಹೋಗುತ್ತವೆಂಬ ಮೂಢನಂಬಿಕೆ ಇದೆ. ಪಾಶ್ಚಾತ್ಯರು ಇದನ್ನು ಅಪಶಕುನವೆಂದು ನಂಬಿದ್ದಾರೆ.

ಮೆಗಾಕೈರಾಪ್ಟೆರ ಮೈಕ್ರೊಕೈರಾಪ್ಟೆರ
ಸಾಮಾನ್ಯವಾಗಿ ಸಸ್ಯಾಹಾರಿಗಳು, ಹೆಚ್ಚಾಗಿ ಹಣ್ಣನ್ನು ತಿನ್ನುತ್ತವೆ. ಕಣ್ಣುಗಳು ದೊಡ್ಡವು, ಮೂತಿ ಉದ್ದ, ಮೂಗಿಗೆ ಮತ್ತು ಕಿವಿಗೆ ಸಂಬಂಧಿಸಿದಂತೆ ಹೆಚ್ಚಿನ ಉಪಾಂಗಗಳಿಲ್ಲ. ಕೈಯ ಎರಡನೆ ಬೆರಳಿನಲ್ಲಿಯೂ ನಖವಿದೆ. ಬಾಲ ಇದ್ದಾಗ ಇದು ರೆಕ್ಕೆಯಲ್ಲಿ ಒಳಗೊಂಡಿರುವುದಿಲ್ಲ. ಈ ಉಪಗಣಕ್ಕೆ ಹಾರು ಬೆಕ್ಕು ಎನ್ನುವ ಟೀರೊಫಸ್ಕುಟುಂಬದ ಬಾವಲಿಗಳು ಸೇರುತ್ತವೆ. ದವಡೆಯ ಹಲ್ಲುಗಳು ವಸಡುಗಳಿಂದ ಮೇಲೆ ಹೆಚ್ಚು ಎತ್ತರ ಚಾಚಿರುವುದಿಲ್ಲ. ಮತ್ತು ಇವುಗಳ ಮೇಲ್ಭಾಗ ಅಗಲವಾಗಿಯೂ, ಚಪ್ಪಟೆಯಾಗಿಯೂ ಇದ್ದು ಆಹಾರವನ್ನು ಅರೆಯುವುದಕ್ಕೆ ಸಹಕಾರಿಯಾಗಿದೆ.

ಮಕರಂದವನ್ನು ಆಹಾರವಾಗಿ ಸೇವಿಸುವ ಬಾವಲಿಗಳಲ್ಲಿ ಮೂತಿ ಉದ್ದವಾಗಿದ್ದು ಹಲ್ಲುಗಳು ಕ್ಷಯಿಸಿವೆ. ಬಹಳ ಉದ್ದವಾದ ಹಾಗೂ ತೆಳುವಾದ ನಾಲಿಗೆ ಇದೆ. ನೀಳವಾದ ಈ ನಾಲಿಗೆಯ ನೆರವಿನಿಂದ ಹೂವಿನ ತಳದಲ್ಲಿರುವ ಮಕರಂದವನ್ನು ಇವು ಲೊಚಲೊಚನೆ ನೆಕ್ಕುತ್ತವೆ. ಭಾರತದ ಟೀರೊಫಸ್ಜಾತಿಯ ಒಂದು ಪ್ರಭೇದದ ರೆಕ್ಕೆಯ ವಿಸ್ತಾರ ೫ ಅಡಿಗಳಷ್ಟಿದೆ.

ಈ ಉಪಗಣಕ್ಕೆ ಸೇರಿದಂತೆ ಒಂದು ಕುಟುಂಬ. ೪೦ ಜಾತಿ ಮತ್ತು ೨೫೦ ಪ್ರಭೇದಗಳಿವೆ.

ಪ್ರಪಂಚದಾದ್ಯಂತ ವಿಸ್ತಾರವಾಗಿ ಹರಡಿವೆ. ವಿಶೇಷವಾಗಿ ಕೀಟಾಹಾರಿಗಳು. ಮೂತಿ ಮೋಟು. ಸಾಮಾನ್ಯವಾಗಿ ಪಟಲಾಕೃತಿಯ ನಾಸಿಕ ಮತ್ತು ಕಿವಿಯ ಉಪಾಂಗಗಳಿರುತ್ತವೆ. ಕೈಯ ಎರಡನೆಯ ಬೆರಳಿನಲ್ಲಿ ನಖವಿಲ್ಲ. ಬಾಲ ಇದ್ದಾಗ ಪಾರ್ಶ್ವವಾಗಿ ರೆಕ್ಕೆಯಲ್ಲಿ ಒಳಗೊಂಡಿರುತ್ತದೆ. ಕಣ್ಣುಗಳು ಸಣ್ಣವು ಆದರೆ ಕುರುಡಲ್ಲ. ಇವು ದಟ್ಟ ಕತ್ತಲಿನಲ್ಲಿಯೂ ಚಲಿಸಬಲ್ಲವು. ಮಾನವಕಲ್ಪಿತ ರಾಡಾರ್ ವಿಧಾನವನ್ನನುಸರಿಸುವ ಯಾಂತ್ರಿಕ ವಿಧಾನದಿಂದ ತಮ್ಮ ಸುತ್ತಲ ಪರಿಸರದ ಪರಿಸ್ಥಿತಿಗಳನ್ನು ಗ್ರಹಿಸುತ್ತವೆ. ಈ ಕ್ರಿಯೆಯನ್ನು ಇಕೊಲೊಕೇಷನ್(Echolocation) ಎಂದು ಕರೆಯುತ್ತಾರೆ. ದವಡೆ ಹಲ್ಲುಗಳಿಗೆ ಚೂಪಾದ ಶಿಖೆಗಳಿರುತ್ತವೆ.

ರಕ್ತ ಪಿಪಾಸು ಪಿಶಾಚಿಗಳೆಂದು ಹೆಸರಾದ ವ್ಯಾಂಪೈರ್ಬಾವಲಿಗಳು ಈ ಉಪಗಣಕ್ಕೆ ಸೇರುತ್ತವೆ.

ಇದರಲ್ಲಿ ೧೮ ಕುಟುಂಬಗಳು, ೨೫೦ ಜಾತಿಗಳು, ೧೦೩೦ ಪ್ರಭೇದಗಳು ಸೇರಿವೆ. ಇವು ಕೀಟಗಳ ಜೊತೆಗೆ ಸಣ್ಣ ಕಶೇರುಕಗಳನ್ನು ತಿನ್ನುತ್ತವೆ ಮತ್ತು ಮೀನುಗಳನ್ನು ಭಕ್ಷಿಸುತ್ತವೆ. ಕೋರೆ ಹಲ್ಲುಗಳು ಉದ್ದವಾಗಿಯೂ ತುದಿ ಮೊನಚಾಗಿಯೂ ಇವೆ. ಇವುಗಳ ಸಹಾಯದಿಂದ ಕೀಟಗಳನ್ನು ಹಿಡಿದು, ಸಿಗಿದು ತಿನ್ನುತ್ತವೆ.

ಬಾವಲಿಗಳು ಹಾರುವ ಜೀವನಕ್ಕೆ ನಿಜವಾಗಿ ಹೊಂದಿಕೊಂಡ ಸಸ್ತಿನಿಗಳು ಇವು. ಹಾರಲು ಅನುಕೂಲವಾಗುವಂತೆ ಇವುಗಳ ಮುಂಗಾಲುಗಳು ಮಾರ್ಪಟ್ಟಿವೆ. ಕೈಯ ಬೆರಳುಗಳು ಉದ್ದವಾಗಿ ಬೆಳೆದು, ಭುಜಕ್ಕೂ ತೋಳಿಗೂ ನಡುವೆ ಹೆಬ್ಬೆರಳ ಬುಡದಿಂದ ಬೆರಳುಗಳ ನಡುವೆ, ಮುಂಗಾಲುಗಳಿಗೂ ಹಿಂಗಾಲುಗಳಿಗೂ ನಡುವೆ ಪಕ್ಕೆಗಳ ಉದ್ದಕ್ಕೂ, ಹಿಂಗಾಲುಗಳ ನಡುವೆ ಬಾಲವನ್ನು ಒಳಗೊಂಡು ಅಥವಾ ಒಳಗೊಳ್ಳದೆ ಚರ್ಮದ ಮಡಿಕೆ ಬೆಳೆದು ರೆಕ್ಕೆ ರೂಪುಗೊಂಡಿವೆ. ಇದನ್ನು ಪೆಟಾಜಿಯಂ ಎಂದು ಕರೆಯುತ್ತಾರೆ. ಕೈಯ ಹೆಬ್ಬೆರಳಿನಲ್ಲಿ ನಖವಿದೆ. ಇದು ಪೆಟಾಜಿಯಂನಲ್ಲಿ ಸೇರಿಲ್ಲ. ಹಿಂಗಾಲುಗಳಲ್ಲಿ ನಖಗಳಿರುವ ೫ ಬೆರಳುಗಳಿವೆ. ಮಂಡಿಯು ಉಳಿದ ಸಸ್ತನಿಗಳಲ್ಲಿನಂತೆ ಮುಂದಕ್ಕೆ ಬಾಗಿರದೆ ಹಿಂದಕ್ಕೆ ಬಾಗಿದೆ. ಬಾವಲಿಗಳು ನಡೆಯಲಾರವು. ಕೈಯ ಹೆಬ್ಬೆರಳಿನ ನಖವು ದೊಡ್ಡದಾಗಿ ಬಲವಾಗಿದೆ. ನಖಗಳು ಬಾವಲಿ ಹಾರದೆ ವಿಶ್ರಮಿಸಿಕೊಳ್ಳುತ್ತಿರುವಾಗ ಯಾವುದಾದರೂ ಮರದ ಕೊಂಬೆಗಳು, ಗೋಡೆಯ ಬಿರುಕುಗಳು ಮುಂತಾದವುಗಳಿಗೆ ನೇತುಹಾಕಿಕೊಳ್ಳಲು ನೆರವಾಗುತ್ತವೆ. ನಿಶಾಚರಿಗಳು. ಕಣ್ಣುಗಳು ಕ್ಷಯಿಸಿವೆ. ದೃಷ್ಟಿ ಕಡಿಮೆ. ಸ್ಪರ್ಶಾಂಗಗಳು ಮತ್ತು ಶ್ರವಣಾಂಗಗಳು ಚೆನ್ನಾಗಿ ಬೆಳೆದಿವೆ. ಕೆಲವು ಬಾವಲಿಗಳಲ್ಲಿ ಮೂಗಿನ ಸುತ್ತ ಸಂವೇದನಾಶೀಲ ಎಲೆಯಾಕಾರದ (ನಾಸಿಕ ಪತ್ರಗಳು) ರಚನೆಗಳು ಬೆಳೆದಿವೆ. ಹೊರ ಕಿವಿಯಾಲೆಯು ತುಂಬಾ ದೊಡ್ಡದು ಮತ್ತು ನಿಶ್ಚಿತ ಮಡಿಕೆಗಳಿರುತ್ತವೆ. ಅವಕ್ಕೆ ಸ್ಪರ್ಶ ಸಂವೇದನೆ ಉಂಟು ಮತ್ತು ಶ್ರವಣ ಶಕ್ತಿ ಹೆಚ್ಚು ಇದರಿಂದಾಗಿ ಬಹಳ ಸೂಕ್ಷ್ಮವಾದ ಹಾಗೂ ಅತಿ ವೇಗದ ಶಬ್ದದ ಅಲೆಗಳನ್ನು ಗ್ರಹಿಸಬಲ್ಲವು. ಒಂದು ಅಥವಾ ೨ ಜೊತೆ ಸ್ತನಗಳಿವೆ.

424_69_PP_KUH

ಇವು ನಿಶಾಚರಿಗಳು. ಹಗಲನ್ನು ಕತ್ತಲಾದ ಜಾಗಗಳಲ್ಲಿ ಯಾವುದಾದರೂ ಆಧಾರಕ್ಕೆ ತಲೆಕೆಳಗಾಗಿ ನೇತು ಬಿದ್ದು ಕಳೆಯುತ್ತವೆ. ಸಂಜೆಗತ್ತಲಿನಲ್ಲಿ ಆಹಾರಾನ್ವೇಷಣೆಗೆ ಹೋರಡುತ್ತವೆ. ಇವು ಕೀಟಾಹಾರಿಗಳು ಅಥವಾ ಫಲಾಹಾರಿಗಳು. ಆಹಾರವನ್ನನುಸರಿಸಿ ಇವುಗಳು ಹಲ್ಲುಗಳು ಮಾರ್ಪಟ್ಟಿವೆ. ದಂತ ಸೂತ್ರ ೨, ೧, ೩, ೩ / ೩, ೧, ೩, ೩ ಕೆಲವು ಸಾರಿ ಈ ಸಂಖ್ಯೆ ಕಡಿಮೆಯಾಗಬಹುದು. ಒಮ್ಮೆಗೆ ಒಂದು ಮರಿ ಹಾಕುತ್ತವೆ ಮತ್ತು ಎಳೆಯ ಮರಿಯನ್ನು ತಾಯಿ ಹೊತ್ತು ತಿರುಗುತ್ತದೆ. ಈ ಗಣವನ್ನು ಎರಡು ಉಪಗಣಗಳನ್ನಾಗಿ ವರ್ಗೀಕರಿಸಿದೆ.

ಉಪಗಣ ೧. ಮೈಕ್ರೋಕೈರಾಪ್ಟೆರ (ಸಣ್ಣ ಕೀಟಾಹಾರಿ ಬಾವಲಿಗಳು)

ಉಪಗಣ ೨. ಮೆಗಕೈರಾಪ್ಟೆರ (ದೊಡ್ಡ ಫಲಾಹಾರಿ ಬಾವಲಿಗಳು)