ಸಸ್ತನಿಗಳ ಸಾಮಾನ್ಯ ಲಕ್ಷಣಗಳು

ಸಸ್ತನಿಗಳು ಪ್ರಾಣಿ ವರ್ಗದ ಅತ್ಯಂತ ಉನ್ನತ ಮಟ್ಟದ ಕಶೇರುಕ ಪ್ರಾಣಿಗಳು. ಕೂದಲಿನ ಹೊದಿಕೆ ಹೊಂದಿ. ಶ್ವಾಸಕೋಶಗಳಿಂದ ಉಸಿರಾಡುವ, ಬಿಸಿರಕ್ತದ, ತನ್ನಂತಹ ಮರಿಗಳಿಗೇ ಜನ್ಮವಿತ್ತು ಹಾಲುಣಿಸುವ ಮತ್ತು ಕಶೇರುಮಣಿ ಸರಣಿ ಹೊಂದಿರುವ ಚತುಷ್ಪಾದಿಗಳು.

೧. ದೇಹದ ಮೇಲೆ ಕೂದಲ ಹೊದಿಕೆ ಇದೆ. ಭೂವಾಸಿಗಳು, ಗಾಳಿಯನ್ನು ಉಸಿರಾಡುತ್ತವೆ.

೨. ದೇಹವನ್ನು ತಲೆ, ಮುಂಡ, ಬಾಲ ಮತ್ತು ಕೈಕಾಲುಗಳೆಂದು ವಿಂಗಡಿಸಬಹುದು. ತಲೆಗೂ ಮುಂಡಕ್ಕೂ ನಡುವೆ ಸಣ್ಣ ಕುತ್ತಿಗೆ ಇದೆ. ಎರಡು ಜೊತೆ ಕಾಲುಗಳಿವೆ. ಇವು ಪಂಚಾಂಗುಲಿಗಳು ಅಂದರೆ ಪ್ರತಿ ಹಸ್ತ ಮತ್ತು ಪಾದವು ಐದೈದು ಬೆರಳುಗಳನ್ನು ಹೊಂದಿವೆ. ಕಾಲು ಮತ್ತು ಬೆರಳುಗಳು ನಡೆಯಲು ಹತ್ತಲು, ಹಾರಲು, ಬಿಲತೋಡಲು, ಈಜಲು ಮಾರ್ಪಟ್ಟಿವೆ.

೩. ಚರ್ಮದಲ್ಲಿ ಬೆವರಿನ ಮತ್ತು ಶ್ವೇಧ ಗ್ರಂಥಿಗಳಿವೆ. ಕೆಲವು ಪ್ರಾಣಿಗಳಲ್ಲಿ ಸುಗಂಧ ಗ್ರಂಥಿಗಳಿರಬಹುದು. ಶ್ವೇಧ ಗ್ರಂಥಿಗಳು ಹೆಣ್ಣು ಸಸ್ತನಿಗಳಲ್ಲಿ ಸ್ತನಗಳಾಗಿ ಮಾರ್ಪಟ್ಟಿವೆ. ಅವು ಉತ್ಪತ್ತಿ ಮಾಡುವ ಹಾಲನ್ನು ಮರಿಗಳ ಪೋಷಣೆಗೆ ಮಾರ್ಪಟ್ಟಿವೆ. ಅವು ಉತ್ಪತ್ತಿ ಮಾಡುವ ಹಾಲನ್ನು ಮರಿಗಳ ಪೋಷಣೆಗೆ ಉಪಯೋಗಿಸುತ್ತವೆ. ಸ್ತನಗಳಿರುವುದು ಈ ಪ್ರಾಣಿಗಳ ವಿಶೇಷ ಲಕ್ಷಣ ಮತ್ತು ಇದರಿಂದಾಗಿಯೇ ಇವಕ್ಕೆ ಸಸ್ತನಿಗಳೆಂಬ ಹೆಸರು ಬಂದಿದೆ. ನಿರ್ಜೀವ ಕೊಂಬಿನ ಕೂದಲು, ಮುಳ್ಳುಗಳು, ಹುರುಪೆಗಳು. ನಖಗಳು, ಉಗುರು, ಗೊರಸು, ಕೊಂಬುಗಳ ಇತ್ಯಾದಿಗಳು ಬಹಿರ್ ಅಸ್ಥಿಪಂಜರವನ್ನು ಪ್ರತಿನಿಧಿಸುತ್ತವೆ.

೪. ಮುಂಡದಲ್ಲಿ ಮುಂದಿನ ವಕ್ಷ(ಎದೆ) ಮತ್ತು ಹಿಂದಿನ ಉದರಗಳಿದ್ದು, ಎರಡನ್ನೂ ಪ್ರತ್ಯೇಕಿಸುವ ವಪೆ ಎಂಬ ಸ್ನಾಯು ಪಟಲವಿದೆ.

೫. ಅಂತಃ ಅಸ್ಥಿಪಂಜರವು ಬಹಳವಾಗಿ ಅಸ್ಥೀಕರಣಗೊಂಡಿದೆ. ತಲೆ ಬುರುಡೆಯಲ್ಲಿ ಎರಡು ಅಸ್ಥಿಕಂದ (ಕಾಂಡೈಲ್)ಗಳಿವೆ. ದೊಡ್ಡ ಕಪಾಲವಿದೆ. ಜೈಗೊಮಾಟಿಕ್‌ಕಮಾನು ಇದ್ದು ಇದು ಕೆಳದವಡೆಯ ಪ್ರತಿ ಅರ್ಧವೂ ಡೆಂಟರಿ ಎಂಬ ಏಕೈಕ ಮೂಳೆಯಿಂದ ರಚಿತವಾಗಿದೆ. ನಡುಕಿವಿಯಲ್ಲಿ ಮ್ಯಾಲಿಯಸ್‌, ಇಂಕಸ್‌ಮತ್ತು ಸ್ಟೇಪಿಸ್‌ಎಂಬ ಮೂರು ಅಸ್ಥಿಕಗಳಿವೆ. ತಲೆಬುರುಡೆಯ ಮೂಳೆಗಳು ಪರಸ್ಪರ ಸೀವನೆ (ಸ್ಯೂಚರ್)ದಿಂದ ಕೂಡಿವೆ. ಸಾಮಾನ್ಯವಾಗಿ ಕಂಠ ಭಾಗದಲ್ಲಿ ಏಳು ಕಶೇರುಮಣಿಗಳಿರುತ್ತವೆ.

೬.      ಅನ್ನನಾಳವು ಗುಧದ್ವಾರದಲ್ಲಿ ಕೊನೆಗೊಳ್ಳುತ್ತದೆ. ಬಾಯಂಗಳವು ನಾಸಿಕ ನಾಳದಿಂದ ಗಟ್ಟಿಯಾದ ಪ್ಯಾಲೆಟ್‌ನಿಂದ ಪ್ರತ್ಯೇಕವಾಗಿದೆ. ಗಂಟಲಿನಲ್ಲಿ ಧ್ವನಿ ಪೆಟ್ಟಿಗೆ ಇದ್ದು, ಶಬ್ದ ಉತ್ಪತ್ತಿ ಮಾಡಲು ನೆರವಾಗುತ್ತದೆ. ಇವು ಭಿನ್ನದಂತಿಗಳು (ಹೆಟರೊಡಾಂಟ್), ಅಂದರೆ ಬಾಚಿಹಲ್ಲು, ಕೋರೆಹಲ್ಲು, ಮುಂದವಡೆ ಮತ್ತು ದವಡೆ ಹಲ್ಲುಗಳೆಂದು ನಾಲ್ಕು ರೀತಿಯಾಗಿವೆ. ಹಲ್ಲುಗಳು ಕುಳಿದಂತಿಗಳು, ಅಂದರೆ ದವಡೆಗಳಲ್ಲಿನ ಕುಳಿಗಳಲ್ಲಿ ಕುಳಿತಿವೆ. ಇದನ್ನು ತಿಕೊಡಾಂಟ್‌ ವಿಧದ ಹಲ್ಲುಗಳೆಂದು ಕರೆಯುತ್ತಾರೆ. ಸಸ್ತನಿಗಳ ಜೀವನದಲ್ಲಿ ಎರಡು ಗುಂಪು ಹಲ್ಲುಗಳು, ಎಳೆಯ ವಯಸ್ಸಿನ ಹಾಲು ಹಲ್ಲುಗಳ ಲಕ್ಷಣವನ್ನು ಡೈಫಿಯೊಡಾಂಟ್ ಎಂದು ಕರೆಯುತ್ತಾರೆ. ವಿವಿಧ ರೀತಿಯ ಹಲ್ಲುಗಳ ಸಂಖ್ಯೆ ಮತ್ತು ಹಲ್ಲುಗಳ ರಚನೆ ವಿವಿಧ ಗುಂಪುಗಳಲ್ಲಿ ಪ್ರಾಣಿಯ ಜೀವನ ಮತ್ತು ಆಹಾರ ಕ್ರಮವನ್ನನುಸರಿಸಿ ಬದಲಾಗುತ್ತದೆ. ವಿವಿಧ ಹಲ್ಲುಗಳ ಸಂಖ್ಯೆಯನ್ನು ದಂತ ಸೂತ್ರ ಎಂದು ಕರೆಯುತ್ತಾರೆ. ವಿವಿಧ ಗಣದ ಸಸ್ತನಿ ಗುಂಪುಗಳಿಗೆ ವಿಶಿಷ್ಟವಾದ ನಿಖರವಾದ ದಂತ ಸೂತ್ರವಿದೆ.

೭. ಇವು ಶ್ವಾಸಕೋಶಗಳ ಮೂಲಕ ಉಸಿರಾಡುತ್ತವೆ. ಶ್ವಾಸಕೋಶಗಳು ಸ್ಪಂಜಿನಂತಿವೆ.

೮. ರಕ್ತ ಪರಿಚಲನಾ ಮಂಡಲದಲ್ಲಿ ೪ ಕೋಣೆಗಳ ಹೃದಯವಿದೆ. ಈ ಕೋಣೆಗಳನ್ನು ಎಡ ಮತ್ತು ಬಲ ಹೃತ್ಕುಕ್ಷಿ ಮತ್ತು ಹೃತ್ಕರಣಗಳೆನ್ನುತ್ತಾರೆ. ಹೃದಯದ ಎಡಭಾಗದಿಂದ ಹೊರಡುವ ಮಹಾಪಧಮನಿ (ಅಯೊರ್ಟ) ಇದೆ. ಸಾಮಾನ್ಯವಾಗಿ ಕೆಂಪು ರಕ್ತಕಣಗಳಲ್ಲಿ ನ್ಯೂಕ್ಲಿಯಸ್‌ ಇರುವುದಿಲ್ಲ.

೯. ಬಿಸಿರಕ್ತದ ಪ್ರಾಣಿಗಳು.

೧೦. ಚೆನ್ನಾಗಿ ರೂಪುಗೊಂಡ ಮಿದುಳಿದೆ. ಮುಮ್ಮಿದುಳಿನ ಎರಡು ಸೆರಬ್ರಲ್ ಗೋಳಗಳನ್ನು ಬಂಧಿಸುವ ಕಾರ್ಪಸ್ ಕೆಲೊಸಮ್ ಎಂಬ ನರಪಟ್ಟಿಯಿದೆ. ದೃಷ್ಟಿ ಸಂವೇದನೆಗೆ ಸಂಬಂಧಿಸಿದಂತೆ ಇರುವ ದೃಷ್ಟಿ (ಅಕ್ಷು) ಗೋಳಭಾಗವು ೪ ಪಾಲಿಗಳಾಗಿ ವಿಭಾಗವಾಗಿದೆ. ಇದನ್ನು ಕಾರ್ಪೋರ ಕ್ವಾಡ್ರಿಜೆಮೈನ ಎಂದು ಕರೆಯುತ್ತಾರೆ. ಸೆರಬ್ರಮ್‌ನಲ್ಲಿ ಅಲೆಯೋಪಾದಿಯ ಮಡಿಕೆಗಳಿವೆ. ಈ ರೀತಿಯ ಮಡಿಕೆಗಳಿರುವುದು ಸಸ್ತನಿಗಳ ವಿಶೇಷ ಲಕ್ಷಣ. ೧೨ ಜೊತೆ ಕಪಾಲ ನರಗಳಿವೆ.

೧೧. ಚೆನ್ನಾಗಿ ಬೆಳೆದ ಸಂವೇದನಾಂಗಳಿವೆ. ಕಣ್ಣು ರೆಪ್ಪೆಗಳಿರುವ ಒಂದು ಜೊತೆ ಕಣ್ಣುಗಳಿವೆ. ಪಿನ್ನ ಎಂಬ ಹೊರಕಿವಿಯುಂಟು. ನಡುಕಿವಿಯಲ್ಲಿ ಮೂರು ಕರ್ಣಾಸ್ಥಿಗಳಿವೆ. ಒಳ ಕಿವಿಯ ಕಾಕ್ಲಿಯ ಭಾಗವು ಸುರುಳಿ ರೂಪದಲ್ಲಿ ನುಲಿದುಕೊಂಡಿದೆ. ಟಿಂಪೆನಿಕ್ ಬುಲ್ಲ ಎಂಬ ಶ್ರವಣೇಂದ್ರಿಯಗಳನ್ನೊಳಗೊಂಡ ಟಿಂಪನಿಕ್ ಮೂಳೆಯ ಉಬ್ಬಿದ ರಚನೆ ಇದೆ. ಇದು ಸಸ್ತನಿಗಳ ವಿಶೇಷ ಲಕ್ಷಣ.

೧೨. ಒಂದು ಜೊತೆ ಮೂತ್ರಪಿಂಡಗಳಿವೆ. ಇವು ಮೆಟನೆಫ್ರಿಕ್ ಮಾದರಿಯವು. ಮೂತ್ರವಾಹಿನಿಗಳು ಮೂತ್ರಕೋಶಕ್ಕೆ ತೆರೆಯುತ್ತವೆ. ಮೂತ್ರಪಿಂಡಗಳು ವಿಸರ್ಜನಾಂಗಗಳು. ನೈಟ್ರೊಜೆನಿಕ್ ಕಲ್ಮಷಗಳು ದ್ರವರೂಪದ ಮೂತ್ರವಾಗಿ ವಿಸರ್ಜನೆಗೊಳ್ಳುತ್ತವೆ.

೧೩. ಭಿನ್ನಲಿಂಗಿಗಳು. ವೃಷಣಗಳು ಉದರಾವಕಾಶದ ಹೊರಗೆ ಸ್ಕ್ರೋಟಮ್ ಎಂಬ ಚರ್ಮದ ಚೀಲದಲ್ಲಿರುತ್ತವೆ. ಅಂತಃ ನಿಷೇಚನ ನಡೆಯುತ್ತದೆ. ತತ್ತಿ ತುಂಬಾ ಸಣ್ಣದು ಮತ್ತು ಬಂಡಾರ ರಹಿತವಾದದ್ದು. ನಿಷೇಚಿತ ತತ್ತಿಯು ಹೆಣ್ಣಿನ ಗರ್ಭಕೋಶದಲ್ಲಿ ಉಳಿದು ಗರ್ಭಕೋಶದ ಭಿತ್ತಿಗೆ ಸಂಬಂಧ ಪಡೆದು ಪೋಷಣೆ, ರಕ್ಷಣೆ ಪಡೆದು ಬೆಳೆದು ಪೂರ್ಣಬೆಳೆದ ಮರಿ ಜನಿಸುತ್ತದೆ. ಆದ್ದರಿಂದ ಕೆಲವು ಅಪವಾದಗಳ ವಿನಹ ಇವು ಜರಾಯುಜಗಳು, ಅಂದರೆ ಮರಿ ಹಾಕುತ್ತವೆ. ಬೆಳವಣಿಗೆಯ ಕಾಲಕ್ಕೆ ಭ್ರೂಣಕ್ಕೂ ಹಾಗೂ ತಾಯಿಯ ಗರ್ಭಕೋಶಕ್ಕೂ ನಡುವೆ ಪ್ಲಾಸೆಂಟ ಎಂಬ ರಚನೆ ಬೆಳೆಯುತ್ತದೆ.

ಸಸ್ತನಿಗಳ ವರ್ಗೀಕರಣ

ಸಸ್ತನಿಗಳನ್ನು ಸ್ಥೂಲವಾಗಿ ಮೂರು ಉಪವರ್ಗಗಳಾಗಿ ವರ್ಗೀಕರಿಸಿದೆ.

ಉಪವರ್ಗ ೧ : ಪ್ರೋಟೊತೀರಿಯ (ಮಾನೊಟ್ರಿಮೇಟ) ಇವು ತುಂಬಾ ಆದಿಮ ಸಸ್ತನಿಗಳು ಮತ್ತು ಅಂಡಜಗಳು. ಇಂದು ಕೇವಲ ಎರಡು ಸಸ್ತನಿಗಳು ಮಾತ್ರ ಬದುಕಿವೆ.

ಎಕಿಡ್ನ ಮತ್ತು ಪ್ಲಾಟಿಪಸ್. ಇವು ಆಸ್ಟ್ರೇಲಿಯ ಖಂಡಕ್ಕೆ ಸೀಮಿತವಾಗಿವೆ.

ಉಪವರ್ಗ ೨ : ಮೆಟತೀರಿಯ (ಮಾರ್ಸುಪಿಯೇಲಿಯ) ಇವು ಜೋಗುಳಿ ಪ್ರಾಣಿಗಳು. ಈ ಉಪವರ್ಗಕ್ಕೆ ಸೇರಿದ ಹೆಣ್ಣಿನ ಉದರ ಭಾಗದಲ್ಲಿ ಮಾರ್ಸುಪಿಯಮ್ (ಜೋಗುಳಿ) ಎನ್ನುವ ಚರ್ಮದ ಚೀಲವಿದೆ. ಇದರಲ್ಲಿ ಅಪೂರ್ಣವಾಗಿ ಬೆಳೆದ ಮರಿಯನ್ನು ಇಟ್ಟುಕೊಂಡು ಹೆಣ್ಣು ರಕ್ಷಿಸಿ, ಪೋಷಿಸಿ ಬೆಳಸುತ್ತದೆ.

ಕಾಂಗರು, ಅಪೋಸಮ್, ಮಾರ್ಸುಪಿಯಲ್ ಮೋಲ್ ಇತ್ಯಾದಿಗಳು, ಇವು ಆಸ್ಟ್ರೇಲಿಯ ಮತ್ತು ದಕ್ಷಿಣ ಅಮೇರಿಕ ಖಂಡಗಳಿಗೆ ಸೀಮಿತವಾಗಿವೆ.

ಉಪವರ್ಗ ೩ : ಯೂತೀರಿಯ (ಪ್ಲಾಸೆಂಟಲಿಯ)

ಇವು ನಿಜವಾದ ಜರಾಯುಜ ಸಸ್ತಿನಿಗಳು ಇವುಗಳಲ್ಲಿ ತೊಟ್ಟುಳ್ಳ ಸ್ತನಗಳು ಚೆನ್ನಾಗಿ ಬೆಳೆದಿರುತ್ತವೆ. ಕಾರ್ಪಸ್ ಕೆಲೋಸಮ್ ಚೆನ್ನಾಗಿ ಬೆಳೆದಿದೆ ಮತ್ತು ಸೆರಬ್ರಲ್‌ಗೋಳಗಳು ತುಂಬಾ ದೊಡ್ಡವು. ಭ್ರೂಣಗಳನ್ನು ಪೂರ್ಣಬೆಳವಣಿಗೆಯವರೆಗೂ ಗರ್ಭಕೋಶದಲ್ಲಿ ಉಳಿಸಿಕೊಂಡು ಪ್ಲಾಸೆಂಟ ಮೂಲಕ ರಕ್ಷಿಸಿ, ಪೋಷಿಸಿ ಮರಿಗಳನ್ನು ಹೆರುತ್ತವೆ. ಸಾಮಾನ್ಯವಾಗಿ ವೃಷಣಗಳು ಸ್ಕ್ಟೋಟಮ್ ಸಂಚಿಯೊಳಗಿರುತ್ತವೆ. ಇವು ಶಿಶ್ನುವಿನ ಹಿಂಭಾಗದಲ್ಲಿರುತ್ತವೆ. ಜನನದನಂತರವೂ ಮರಿಯನ್ನು ಹಾಲುಣಿಸಿ, ಪೋಷಿಸಿ, ಸಂತಾನ ರಕ್ಷಣೆ ಮಾಡುತ್ತವೆ. ಇವುಗಳ ಮಾದರಿ ದಂತ ಸೂತ್ರವು ೩, ೧, ೪, ೩ / ೩, ೧, ೪, ೩ = ೪೪ ಯೂತೀರಿಯ ಉಪವರ್ಗವನ್ನು ೧೬ ಗಣಗಳಾಗಿ ವರ್ಗೀಕರಿಸಿದೆ.

ಗಣ ೧ : ಇನ್ಸೆಕ್ಟಿವೋರ (ಕೀಟಾಹಾರಿಗಳು)
ಉದಾ : ಮೂಗಿಲಿಗಳು.

ಗಣ ೨. ಕೈರಾಪ್ಟೆರ (ಹಾರು ಸಸ್ತನಿಗಳು)
ಉದಾ : ಬಾವಲಿಗಳು.

ಗಣ ೩. ಡರ್ಮಾಪ್ಟೆರ
ಉದಾ : ಹಾರುವ ಲೆಮರ್ (ಕರ್ನಾಟಕದಲ್ಲಿ ದೊರಕುವುದಿಲ್ಲ)

ಗಣ ೪. ಈಡೆಂಟೇಟ. (ಹಲ್ಲುಗಳು ಕ್ಷಯಿಸಿವೆ ಅಥವಾ ಇಲ್ಲ)
ಉದಾ : ದೈತ್ಯ ಇರುವೆ ತಿನಿಗಳು, ಆರ್ಮಾಡಿಲ್ಲೊ,

ಗಣ ೫. ಫೋಲಿಡೋಟ
ಉದಾ : ಚಿಪ್ಪು ಹಂದಿ.

ಗಣ ೬. ಟ್ಯೂಬಿಲಿಡೆಂಟೇಟ
ಉದಾ : ಆರ್ಡ್‌ವಾಕ್ (ಕರ್ನಾಟಕದಲ್ಲಿಲ್ಲ)

ಗಣ ೭. ಪ್ರೈಮೇಟ (ಪ್ರಮುಖಿಗಳು)
ಉದಾ : ಮಂಗಗಳು, ವಾನರಗಳು ಮತ್ತು ಮನುಷ್ಯ.

ಗಣ ೮. ರೊಡೆನ್ಷಿಯ
ಉದಾ : ಇಲಿ, ಸುಂಡಿಲಿ, ಅಳಿಲು ಇತ್ಯಾದಿ

ಗಣ ೯. ಲ್ಯಾಗೊಮಾರ್ಫ
ಉದಾ : ಮೊಲಗಳು.

ಗಣ ೧೦. ಸಿಟೇಪಿಯ
ಉದಾ : ತಿಮಿಂಗಿಲಗಳು

ಗಣ ೧೧. ಸೈರೀನಿಯ
ಉದಾ : ಡ್ಯುಗಾಂಗ್.

ಗಣ ೧೨. ಕಾರ್ನಿವೋರ (ಮಾಂಸಾಹಾರಿಗಳು)
ಉದಾ : ಹುಲಿ, ನರಿ, ಚಿರತೆ, ನಾಯಿ, ಬೆಕ್ಕು ಇತ್ಯಾದಿ

ಗಣ ೧೩. ಹೈರಕಾಯಿಡಿಯ
ಉದಾ : ಕೋನಿಗಳು. ಕರ್ನಾಟಕದಲ್ಲಿಲ್ಲ.

ಗಣ ೧೪. ಪ್ರೊಬಾಸಿಡಿಯ
ಉದಾ : ಆನೆಗಳು.

ಗಣ ೧೫. ಪೆರಿಸ್ಸೊಡ್ಯಾಕ್ಟೈಲ (ಏಕಖುರಗಳು)
ಉದಾ : ಕುದುರೆ, ಕತ್ತೆ, ಖಡ್ಗಮೃಗ ಇತ್ಯಾದಿ

ಗಣ ೧೬. ಆರ್ಟಿಯೊಡ್ಯಾಕ್ಟೈಲ (ಸಮಖುರಗಳು)
ಉದಾ : ಆಕಳುಗಳು, ಜಿಂಕೆಗಳು, ಒಂಟೆ, ಆಡು, ಕುರಿ, ಎಮ್ಮೆ ಇತ್ಯಾದಿ

ಗಣ : ಇನ್ಸೆಕ್ಟಿವೋರ (ಕೀಟಾಹಾರಿಗಳು)

ಈ ಗಣಕ್ಕೆ ಮೂಗಿಲಿ, ಮುಳ್ಳಿಲಿ ಮತ್ತು ಮೋಲ್‌ಗಳು ಸೇರುತ್ತವೆ. ಸಾಮಾನ್ಯವಾಗಿ ಗಾತ್ರದಲ್ಲಿ ಸಣ್ಣವು. ದೇಹದ ಮೇಲೆ ತುವ್ಪುಳು ಹೊದಿಕೆ ಇದೆ. ಮೂತಿಯು ಕೆಳದವಡೆಯಿಂದ ಮುಂದಕ್ಕೆ ಸೊಂಡಿಲಿನಂತೆ ಉದ್ದನಾಗಿ, ಕಿರಿದಾಗಿ ಮುಂಚಾಚಿದೆ. ದಂತ ಸೂತ್ರ ೩, ೧, ೪, ೩ / ೩, ೧, ೪, ೩ ಆದರೆ ಹಲ್ಲುಗಳೆಲ್ಲವೂ ಒಂದೇ ತೆರನಾಗಿದ್ದು ಚೂಪಾಗಿರುತ್ತವೆ. ಪಂಚಾಂಗುಲಿಗಳು ಮತ್ತು ಪಾದಗಾಮಿ (ಊರು ಗಾಮಿ)ಗಳು, (ಅಂದರೆ ಪಾದಗಳ ಮೇಲೆ ನಡೆಯುತ್ತವೆ). ಉದರ ಭಾಗದಲ್ಲಿ ಕೈಸಂದುಗಳಿಂದ ಕಾಲು ಸಂದುಗಳವರೆಗೂ ಸ್ತನಗಳು ಹರಡಿವೆ. ಗರ್ಭಕೋಶವು ಎರಡು ಪಾಲಿಗಳಾಗಿರುತ್ತದೆ. ಬೆಳವಣಿಗೆಯ ಕಾಲದಲ್ಲಿ ತಟ್ಟೆಯಾಕಾರದ ಪ್ಲಾಸೆಂಟ ರೂಪುಗೊಳ್ಳುತ್ತದೆ. ನಿಶಾಚರಿಗಳು, ಅನೇಕವು ಭೂವಾಸಿಗಳು. ಕೆಲವು ಶಾಖಾವಾಸಿಗಳು ಮತ್ತು ಕೆಲವು ಬಿಲವಾಸಿಗಳು. ಜಲವಾಸಿ ಉದಾಹರಣೆಗಳೂ ಉಂಟು.

ಯೂತೀರಿಯ ಸಸ್ತನಿಗಳಲ್ಲಿಯ ಕೀಟಾಹಾರಿಗಳು ತುಂಬಾ ಆದಿಮ ಪ್ರಾಣಿಗಳು. ಇವುಗಳ ಅಂಗರಚನೆ ತುಂಬಾ ಕೆಳಮಟ್ಟದ್ದು. ಸಾಮಾನ್ಯವಾದ ದಂತಸೂತ್ರವೇ ಇದಕ್ಕೆ ಒಂದು ನಿದರ್ಶನ. ಮಿದುಳಿನ ಸೆರಬ್ರಲ್ ಗೋಳಗಳು ತುಂಬಾ ಚಿಕ್ಕವು. ಇದರಿಂದಾಗಿ ಕಾರ್ಪಸ್ ಕೆಲೋಸಮ್ ಮತ್ತು ಕಾರ್ಪಸ್ ಕ್ವಾರ್ಡಿಜೆಮೈನ್‌ಗಳು ಅನಾವರಣಗೊಂಡು ನೇರವಾಗಿ ಕಾಣಿಸುತ್ತವೆ. ಗಂಡುಗಳಲ್ಲಿ ಸ್ಕ್ರೋಟಮ್ ಇಲ್ಲ ವೃಷಣಗಳು ಉದರಭಾಗದಲ್ಲಿವೆ. ಆಸ್ಟ್ರೇಲಿಯ ಖಂಡ ವಿನಹ ಮಿಕ್ಕೆಲ್ಲಾ ಖಂಡಗಳಲ್ಲಿಯೂ ಈ ಪ್ರಾಣಿಗಳು ಕಂಡುಬರುತ್ತವೆ.