ಗಣ : ಕೈರಾಪ್ಟೆರ
ಕುಟುಂಬ : ಎಂಬೆಲ್ಲೋನ್ಯೂರಿಡೀ (Emballonuridae)
ಉದಾ : ಪೊರೆಯಾವೃತ ಬಾಲದ ಗಡ್ಡ ಬಾವಲಿ (Bearded sheathed tailed bat)
ಶಾಸ್ತ್ರೀಯ ನಾಮ : ಟ್ಯಾಫೊಜೋಸ್‌ಮೆಲನೊಪೋಗಾನ್‌ (Taphozous melanopogan)

428_69_PP_KUH

ವಿತರಣೆ ಮತ್ತು ಆವಾಸ : ಕರ್ನಾಟಕವೂ ಸೇರಿದಂತೆ ಭಾರತದ ದಕ್ಷಿಣ ದ್ವೀಪ ಕಲ್ಪಗಳಲ್ಲಿ ಕಂಡುಬರುತ್ತವೆ.

ಗಾತ್ರ : ತಲೆ ಮತ್ತು ದೇಹ ೮ ಸೆಂ.ಮೀ. ಬಾಲ ೧ ಸೆಂ.ಮೀ. ಗಿಂತ ಕಡಿಮೆ ಉದ್ದ.

ಆಹಾರ : ಕೀಟಾಹಾರಿ

ಲಕ್ಷಣಗಳು : ಹೆಣ್ಣು ಗಂಡುಗಳ ನಡುವೆ ಬಣ್ಣದಲ್ಲಿ ವ್ಯತ್ಯಾಸವಿದೆ. ಗಂಡುಗಳು ಹಳದಿ ಮಿಶ್ರಿತ ಬೂದು ಮತ್ತು ದಟ್ಟವಾದ ಕಪ್ಪು ಕೂದಲಿನ ಗಡ್ಡವಿದೆ. ಹೆಣ್ಣುಗಳು ಕೆಂಪು ಛಾಯೆಯಿರುವ ಕಂದು, ಬಣ್ಣ-ಮರಿಗಳು ಕಡು ಕಂದು. ೫-೬ ತಿಂಗಳಿಗೆ ಗಂಡು ಮರಿಗಳಲ್ಲಿ ಗಡ್ಡ ಬೆಳೆಯಲು ಆರಂಭವಾಗುತ್ತದೆ. ಋತುಮಾಸದಲ್ಲಿ ಗಡ್ಡವು ಕೆನ್ನೆಯ ಕೆಳಗಿರುವ ಸಣ್ಣ ಗ್ರಂಥಿಗಳು ಉತ್ಪತ್ತಿ ಮಾಡಿದ ಗಟ್ಟಿ ಸ್ರಾವಿಕೆಯಲ್ಲಿ ನೆನೆದಿರುತ್ತದೆ.

ಸಂತಾನಾಭಿವೃದ್ಧಿ : ಸಂತಾನೋತ್ಪತ್ತಿ ಚಟುವಟಿಕೆ ಜನವರಿ-ಫೆಬ್ರವರಿ ತಿಂಗಳಲ್ಲಿ ಹೆಚ್ಚಾಗಿರುತ್ತದೆ. ಮರಿಗಳು ಏಪ್ರೀಲ್‌ಮೇ ತಿಂಗಳಲ್ಲಿ ಜನಿಸುತ್ತವೆ. ಇದು ಮರಿಗಳನ್ನು ಪಕ್ಕದಲ್ಲಿ ರೆಕ್ಕೆಯ ಕೆಳಗಡೆ ಒಂದು ತಿಂಗಳವರೆಗೆ ಹೊತ್ತು ತಿರುಗುತ್ತದೆ. ಸುಮಾರು ೨ ತಿಂಗಳುಗಳವರೆಗೆ ಹಾಲು ಕುಡಿಸುತ್ತದೆ. ಒಂದು ಸೂಲದಲ್ಲಿ ೧ ಮರಿಯನ್ನು ಈಯುತ್ತದೆ.

—- 

ಗಣ : ಕೈರಾಪ್ಟೆರ
ಕುಟುಂಬ : ಟೀರೊಪೋಡಿಡೀ
ಉದಾ : ಫಲ್ವಸ್ ಹಣ್ಣ ಬಾವಲಿ
ಶಾಸ್ತ್ರೀಯ ನಾಮ : ರೂಸೆಟ್ಟಸ್
ಲೆಸ್ಸಾನಾಲ್ಟಿ (Rousettus leschenaulti)

429_69_PP_KUH

ವಿತರಣೆ ಮತ್ತು ಆವಾಸ : ಭಾರತದ ದಕ್ಷಿಣ ದ್ವೀಪ ಕಲ್ಪದಲ್ಲಿ ಕಂಡು ಬರುತ್ತದೆ.

ಗಾತ್ರ : ತಲೆ ಮತ್ತು ದೇಹ ೧೩ ಸೆಂ.ಮೀ. ಬಾಲ ೧-೮ ಸೆಂ.ಮೀ.

ಆಹಾರ : ಹಣ್ಣುಗಳನ್ನು ಚೆನ್ನಾಗಿ ಅಗಿದು ಹಣ್ಣಿನ ರಸವನ್ನು ಮಾತ್ರ ಹೀರಿಕೊಂಡು ಗಟ್ಟಿಭಾಗವನ್ನು ಉಗಿಯುತ್ತವೆ.

ಲಕ್ಷಣಗಳು : ಸಾಧಾರಣ ಗಾತ್ರದ ಬಾವಲಿಗಳು ದೇಹ ಪೂರ್ತಿ ಒಂದೇ ರೀತಿಯಾಗಿ ಕಂದು ಬಣ್ಣ. ಅಪರೂಪವಾಗಿ ಹಳದಿಯೂ ಇರಬಹುದು. ವಯಸ್ಸಾದ ಗಂಡುಗಳ ಪಕ್ಕೆಗಳು ಮಂದ ಬೂದು ಬಣ್ಣವಿರುತ್ತದೆ. ಬೇಸಿಗೆ ಮತ್ತು ವಸಂತ ಋತುವಿನಲ್ಲಿ ಚರ್ಮ ಕಳೆಯುವಾಗ (ತುಪ್ಪುಳು ಬದಲಾಯಿಸುವಾಗ) ಕೂದಲು ರಹಿತ ಪ್ರಾಣಿಗಳನ್ನು ಕಾಣಬಹುದು. ಈ ಪ್ರಾಣಿಗಳಲ್ಲಿ ಹಳಸಲು ಹಣ್ಣುಗಳ ವಾಸನೆ ಕಂಡುಬರುತ್ತದೆ.

ಸಂತಾನಾಭಿವೃದ್ಧಿ : ಸಾಮಾನ್ಯವಾಗಿ ನವೆಂಬರ್‌ ಮತ್ತು ಮಾರ್ಚ್‌ ತಿಂಗಳ ನಡುವೆ ಸಂಭೋಗ ನಡೆಯುತ್ತದೆ. ಇವು ವರ್ಷದಲ್ಲಿ ೨ ಸಾರಿ. ಒಮ್ಮೆ ಮಾರ್ಚ್‌ತಿಂಗಳಲ್ಲಿ ಮತ್ತು ಇನ್ನೊಮ್ಮೆ ಆಗಸ್ಟ್‌ತಿಂಗಳಲ್ಲಿ ಮರಿಯನ್ನು ಈಯಬಹುದು. ಹುಟ್ಟಿದ ಮರಿ ಕಡುಕೆಂಪಾಗಿರುತ್ತದೆ. ಮತ್ತು ಕೂದಲುಗಳಿರುವುದಿಲ್ಲ. ಎರಡು ತಿಂಗಳುವರೆಗೆ ತನ್ನ ರಾತ್ರಿಯ ಆಹಾರಾನ್ವೇಷಣೆಯ ಸಮಯದಲ್ಲಿ ಮರಿಯನ್ನು ತಾಯಿ ಹೊತ್ತು ತಿರುಗುತ್ತದೆ. ಒಂದು ವರ್ಷದ ವೇಳೆಗೆ ಮರಿಗಳು ಪೂರ್ಣ ಬೆಳೆಯುತ್ತವೆ.

ಸ್ವಭಾವ : ಸಾಮಾನ್ಯವಾಗಿ ಗುಂಪಿನಲ್ಲಿ ವಿಶ್ರಾಮ ಸ್ಥಾನದ ಬಳಿ ವಿರಮಿಸುತ್ತವೆ. ಗುಹೆಗಳಲ್ಲಿ, ಸುರಂಗಗಳಲ್ಲಿ, ಕಲ್ಲು ತೆಗೆದ ಗೂಡುಗಳಲ್ಲಿ, ಬಾವಿಗಳಲ್ಲಿ, ಪಾಳು ಮನೆಗಳಲ್ಲಿ ೧೦ರಿಂದ ೨,೦೦೦ ಸಂಖ್ಯೆಯವರೆಗೆ ಗುಂಪಿನಲ್ಲಿ ವಾಸಿಸುತ್ತವೆ. ಗಲಾಟೆಯಾದರೆ ತಮ್ಮ ಸ್ಥಾನವನ್ನು ಬದಲಾಯಿಸಬಹುದು. ವಿರಮಿಸುವ ಜಾಗದ ಸುತ್ತ ದೊರಕುವ ಹಣ್ಣು ಮರಗಳನ್ನನುಸರಿಸಿ ತಮ್ಮ ವಿಶ್ರಾಂತಿ ಸ್ಥಳವನ್ನು ಬದಲಾಯಿಸಬಹುದು. ಇವುಗಳಿಗಿರುವ ದೊಡ್ಡ ಹೊಳಪು ಕಣ್ಣುಗಳಿಂದ ಇವುಗಳಂತೆಯೇ ಇರುವ ಕೀಟಾಹಾರಿ ಬಾವಲಿಗಳಿಂದ ಸುಲಭವಾಗಿ ಪ್ರತ್ಯೇಕಿಸಿ ಗುರುತಿಸಬಹುದು. ಸಾಮಾನ್ಯವಾಗಿ ಲಿಂಗ ಪ್ರತ್ಯೇಕತೆ ಇವುಗಳಲ್ಲಿ ಕಂಡು ಬರುವುದಿಲ್ಲ. ಆದರೆ ಕೆಲವು ವೇಳೆ ಬೇರೆ, ಬೇರೆ ಲಿಂಗದ ಪ್ರಾಣಿಗಳು ಬೇರೆ ಬೇರೆಯಾಗಿ ಗುಂಪು ಕೂಡುವುದು ಕಂಡು ಬಂದಿದೆ. ತಾಯಿಯ ಪಾಲನೆಯಿಂದ ಬಿಡಿಸಿಕೊಂಡು ಸ್ವತಂತ್ರವಾದ ಮರಿಗಳು ತಮ್ಮದೇ ಹಿಂಡು (ಗುಂಪು) ರಚಿಸಿಕೊಂಡು ಜೀವಿಸುತ್ತವೆ. ಇವಕ್ಕೆ ಚೆನ್ನಾಗಿ ಬೆಳೆದ ವಾಸನೆಯ ಸಂವೇದನೆ ಇದೆ. ಅಲ್ಲದೆ ತಾವು ವಾಸಿಸುವ ಪ್ರದೇಶದ ಸನಿಹದಲ್ಲಿರುವ ಹಣ್ಣು ಮರಗಳ ವಿಷಯದಲ್ಲಿ ಒಳ್ಳೆಯ ನೆನಪಿಟ್ಟುಕೊಳ್ಳುವಂತೆ ಕಾಣುತ್ತದೆ. ಹಣ್ಣುಗಳನ್ನು ಹುಡುಕಿಕೊಂಡು ಇವು ಅನತಿದೂರ ಹೋಗಬಹುದು.

 —-

ಗಣ : ಕೈರಾಪ್ಟೆರ
ಕುಟುಂಬ : ಟೀರೊಪೋಡಿಡೀ
ಉದಾ : ಭಾರತದ ಪಿಪಿಸ್ಟ್ರೆಲೆ (Indian Pipistrelle)
ಶಾಸ್ತ್ರೀಯ ನಾಮ : ಪಿಪಿಸ್ಟ್ರೆಲ್ಲಸ್ ಕೋರೊಮ್ಯಾಂಡ್ರ (pipistrellus coromandra)

430_69_PP_KUH

ವಿತರಣೆ ಮತ್ತು ಆವಾಸ : ಭಾರತದ ದಕ್ಷಿಣ ದ್ವೀಪ ಕಲ್ಪದಲ್ಲಿ ಕಂಡುಬರುತ್ತದೆ.

ಗಾತ್ರ : ತಲೆ ಮತ್ತು ದೇಹ ೪.೬ ಸೆಂ.ಮೀ. ಬಾಲ ೩.೬ ಸೆಂ.ಮೀ.

ಆಹಾರ : ಇದು ಕೀಟಹಾರಿ. ಆಹಾರವನ್ನರುಸುತ್ತಾ ಮನೆಗಳನ್ನು ಪ್ರವೇಶಿಸಬಹುದು.

ಲಕ್ಷಣಗಳು : ಸಾಮಾನ್ಯವಾಗಿ ದೇಹದ ಬಣ್ಣ ಕಡು ಕಂದು, ಹೊಟ್ಟೆಯ ಭಾಗ ತುಸು ತಿಳಿ. ಮೂತಿ ಮೊಂಡಾಗಿದೆ. ವಯಸ್ಕ ಪ್ರಾಣಿಯಲ್ಲಿ ತುಪ್ಪುಳು ಕಣ್ಣಿನವರೆಗೂ ಇರುವುದಿಲ್ಲ. ತಲೆ ಮತ್ತು ಹಣೆಯ ನಡುವಿನ ನೆತ್ತಿಯಲ್ಲಿ ತುಪ್ಪುಳು ಒತ್ತಾಗಿದೆ. ಕಿವಿಗಳು ಮೊಂಡು, ತ್ರಿಕೋನಾಕಾರ ಮತ್ತು ತುದಿಯಲ್ಲಿ ದುಂಡಾಗಿವೆ.

ಸಂತಾನಾಭಿವೃದ್ಧಿ : ಹೆಚ್ಚು ವಿಷಯಗಳು ತಿಳಿಯದು. ಮೇ ತಿಂಗಳಲ್ಲಿ ಮರಿಗಳು ಕಾಣಿಸಿಕೊಳ್ಳುತ್ತವೆ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಗರ್ಭ ಕಟ್ಟಿದ ಹೆಣ್ಣುಗಳು ಸಿಕ್ಕಿವೆ. ಇದರ ಆಧಾರದಿಂದ ಈ ಬಾವಲಿ ವರ್ಷಕ್ಕೆ ೨ ಸಾರಿ ಈಯಬಹುದೆಂದು ಹೇಳಬಹುದು. ಒಂದು ಸಾರಿಗೆ ೨ ಮರಿಗಳನ್ನು ಈಯುವಂತೆ ಕಾಣುತ್ತದೆ.

ಸ್ವಭಾವ : ಇದು ಮನೆಗಳ ಮೇಲ್ಛಾವಣಿಯಲ್ಲಿ, ಹೆಂಚುಗಳ ಸಂದಿನಲ್ಲಿ, ಹಳೆಯ ಮನೆಗಳಲ್ಲಿ, ಮರಗಳ ತೊಗಟೆಯ ಕೆಳಗೂ ಕಂಡುಬರುತ್ತವೆ. ಸೂರ್ಯಾಸ್ತವಾಗುತ್ತಿದ್ದಂತೆಯೇ ಆಹಾರಾನ್ವೇಷಣೆಗೆ ಹೊರಡುತ್ತವೆ. ರಾತ್ರಿಯೆಲ್ಲಾ ಹಾರಾಡುತ್ತಿದ್ದು ಸೂರ್ಯೋದಯಕ್ಕೆ ತುಸು ಮುಂಚೆ ತನ್ನ ವಿರಾಮ ಸ್ಥಾನಕ್ಕೆ ವಿರಮಿಸುತ್ತದೆ. ಇವು ಗೊತ್ತು ಗುರಿಯಿಲ್ಲದೆ ಹಾರುತ್ತಾ ಸಣ್ಣ ಕೀಟಗಳನ್ನು ಮತ್ತು ನೊಣಗಳನ್ನು ಹುಡುಕುತ್ತಾ ವಾಸದ ಮನೆಗಳನ್ನು ಪ್ರವೇಶಿಸಬಹುದು. ಕೀಟ ಮತ್ತು ನೊಣಗಳನ್ನು ಹೇರಳವಾಗಿ ಸೇವಿಸುತ್ತದೆ.

—- 

ಗಣ : ಕೈರಾಪ್ಟೆರ
ಕುಟುಂಬ : ಟೀರೊಪೋಡಿಡೀ
ಉದಾ : ಮೋಟು ಮೂಗಿನ ಹಣ್ಣು ಬಾವಲಿ (Short nosed fruit bat)
ಶಾಸ್ತ್ರೀಯ ನಾಮ : ಸೈನಾಪ್ಟೆರಸ್ ಸ್ಫಿಂಕ್ಸ್ (Cynopterus sphinx)

431_69_PP_KUH

ವಿತರಣೆ ಮತ್ತು ಆವಾಸ : ಕರ್ನಾಟಕವೂ ಸೇರಿದಂತೆ ಭಾರತದ ದಕ್ಷಿಣ ದ್ವೀಪ ಕಲ್ಪದಲ್ಲಿ ದೊರಕುತ್ತವೆ.

ಗಾತ್ರ : ತಲೆ ಮತ್ತು ದೇಹ ೧೧.೨ ಸೆಂ.ಮೀ. ಬಾಲ ೧ ಸೆಂ.ಮೀ. ಉದ್ದ

ಆಹಾರ : ಹಣ್ಣು ಮತ್ತು ಹೂವಿನ ಮಧು.

ಲಕ್ಷಣಗಳು : ಹೆಚ್ಚು ಕಡಿಮೆ ಕೂದಲಿಲ್ಲದ ಬೆತ್ತಲೆ ಕಿವಿಗಳು. ಬೇರೆ ಬೇರೆ ದಿಕ್ಕಿನಲ್ಲಿ ತಿರುಗಿದ ನಾಸಿಕಗಳು ಇದರ ನಿರ್ದಿಷ್ಟ ಲಕ್ಷಣಗಳು. ಕಿವಿಗಳಿಗೆ ಬಿಳಿಯ ಅಂಚಿದೆ. ಮೈ ಬಣ್ಣ ಭಿನ್ನವಾದ ಛಾಯೆಯ ಕಂದು ಹಳದಿ ಅಥವಾ ಮಾಸಲು ಬೂದು ಕಂದು. ಗಂಡುಗಳಲ್ಲಿ ಕುತ್ತಿಗೆಯು ಪ್ರಕಾಶಕ ಕೆಂಪು ಕಂದು ಅಥವಾ ತುಕ್ಕು ಕಂದು ಬಣ್ಣವಾಗಿರುತ್ತದೆ.

ಸಂತಾನಾಭಿವೃದ್ಧಿ : ವರ್ಷದಲ್ಲಿ ಎರಡು ಸಾರಿ ಮರಿ ಹಾಕುವ ಸೂಚನೆಗಳಿವೆ. ಫೆಬ್ರವರಿ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಮರಿಗಳನ್ನು ಹೊತ್ತು ಹೆಣ್ಣು ಬಾವಲಿಗಳು ಕಾಣಬರುತ್ತವೆ. ಗರ್ಭಾವಧಿ ೧೧೫ ರಿಂದ ೧೨೦ ದಿನಗಳು.

ಸ್ವಭಾವ : ಸಾಮಾನ್ಯವಾಗಿ ಹಣ್ಣು ಬಾವಲಿಯಾದರೂ ತೊಗಲಕ್ಕಿಯಷ್ಟು ಸಾಮಾನ್ಯವಲ್ಲ. ಒಂಟಿಯಾಗಿ ಅಥವಾ ಸಣ್ಣ ಗುಂಪುಗಳಲ್ಲಿ ತಾಳೆ ಮರ. ಆಲದ ಮರದ ನೇತು ಬಿದ್ದ ಬೇರುಗಳಲ್ಲಿ, ಮರದ ಪೊಟರುಗಳಲ್ಲಿ ಹಗಲನ್ನು ಕಳೆಯುತ್ತವೆ. ಅಪರೂಪವಾಗಿ ಪಾಳು ಬಿದ್ದ ಮನೆ ಮತ್ತು ಗುಹೆಗಳಲ್ಲಿ, ಗಂಗೋತ್ರಿಯ ವಿದ್ಯುತ್ತಿನ ಜಂಕ್ಷನ್ ಬಾಕ್ಸ್‌ಗಳಲ್ಲಿ ಕಂಡುಬರುತ್ತವೆ. ಆಹಾರಾನ್ವೇಷಣೆಗೆ ಸಂಜೆ ಬಹುಬೇಗ ಹೊರಡುತ್ತವೆ. ಹಣ್ಣಿರುವ ಮರಗಳಿಗೆ ಅಥವಾ ಮಧುವಿರುವ ಹೂವುಗಳಿಗೆ ಹಾರಿ, ಹೂವಿನಿಂದ ಹೂವಿಗೆ ನಿಲ್ಲದೆ ಮಧುವನ್ನು ಹೀರುತ್ತಾ ಹಾರುವುದು ಸಾಮಾನ್ಯ ದೃಶ್ಯ. ಬಹಳೊಮ್ಮೆ ಹಣ್ಣುಗಳನ್ನು ಕಚ್ಚಿ ದೂರಕ್ಕೊಯ್ದು, ವಿರಾಮವಾಗಿ ತಿನ್ನುತ್ತವೆ. ಅಂತರಪರಾಗಸ್ಪರ್ಶ ಮತ್ತು ಬೀಜಗಳ ಪ್ರಸರಣದಲ್ಲಿ ಪಾತ್ರವಹಿಸಿದರೂ ಹಣ್ಣುಗಳನ್ನು ತಿಂದು, ಹೂವುಗಳನ್ನು ಕೆದಕಿ ತೋಟವನ್ನು ನಾಶಪಡಿಸುತ್ತವೆ.

—- 

ಗಣ : ಕೈರಾಪ್ಟೆರ
ಕುಟುಂಬ : ಟೀರೊಪೋಡಿಡೀ
ಉದಾ : ಹಾರುವ ಬಾವಲಿ, ಹಾರು ಬೆಕ್ಕು (Flying Fox)
ಶಾಸ್ತ್ರೀಯ ನಾಮ : ಟೀರೋಪಸ್ ಜೈಜಾಂಟಿಕಸ್ (Pteropus giganticus)

432_69_PP_KUH433_69_PP_KUH

ವಿತರಣೆ ಮತ್ತು ಆವಾಸ : ಕನ್ನಡದಲ್ಲಿ ಇದನ್ನು ತೊಗಲಕ್ಕಿ (ಸಿಕಿತ್‌ಯಲ್ಲ) ಎಂದು ಕರೆಯುತ್ತಾರೆ. ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿಯೂ ದೊರಕುತ್ತದೆ. ಹಗಲು ಎತ್ತರವಾದ ಮರಗಳಿಗೆ ನೇತು ಬಿದ್ದಿರುವುದು ಸಾಮಾನ್ಯ ದೃಶ್ಯ. ಮೈಸೂರಿನ ಮೃಗಾಲಯದಲ್ಲಿ ದೊಡ್ಡ ಮರಕ್ಕೆ ನೇತುಬಿದ್ದಿರುವುದನ್ನು ಕಾಣಬಹುದು.

ಗಾತ್ರ : ತಲೆ ಮತ್ತು ದೇಹ ೨೩ ಸೆಂ.ಮೀ. ರೆಕ್ಕೆಯ ಹರವು ೧-೨೨ ಮೀ. ತೂಕ ೫೬೮-೬೫೦ ಗ್ರಾಂ.

ಆಹಾರ : ಹಣ್ಣು ಹಂಪಲುಗಳು, ಅದಕ್ಕೆಂದೇ ಅವಕ್ಕೆ ಹಣ್ಣು ತಿನ್ನುವ ಬಾವಲಿಗಳೆಂದು ಹೆಸರು ಬಂದಿದೆ. ಹಣ್ಣುಗಳನ್ನು ಚೆನ್ನಾಗಿ ಅಗಿದು ರಸವನ್ನು ಮಾತ್ರ ನುಂಗಿ ಉಳಿದ ಭಾಗವನ್ನು ಉಗಿಯುತ್ತವೆ. ಬಾಳೆಯ ಹಣ್ಣಿನಂತೆ ಹಣ್ಣುಗಳು ಮೃದುವಾಗಿದ್ದರೆ ಅವನ್ನು ನುಂಗುತ್ತವೆ. ನೀಲಗಿರಿ ಎಲೆ, ಹೂವು ಮತ್ತು ಅದರ ಪರಾಗವನ್ನು ಅಗಿದು ರಸವನ್ನು ಹೀರುತ್ತಾ ನೀರನ್ನು ಕುಡಿಯುತ್ತವೆ.

ಲಕ್ಷಣಗಳು : ತಲೆ ಸಾಮಾನ್ಯವಾಗಿ ಕೆಂಪು ಕಂದು, ಮೂತಿ ಕಡುಕಂದು, ಕಂದು ಬಣ್ಣವಾಗಿರಬಹುದು ಅಥವಾ ಕಪ್ಪಾಗಿರಬಹುದು. ಕುತ್ತಿಗೆಯ ಹಿಂಭಾಗ ಮತ್ತು ಭುಜಗಳು ತೆಳು ಕಂದು ಹಳದಿಯಿಂದ ಒಣ ಹುಲ್ಲಿನ ಬಣ್ಣವಿರಬಹುದು. ಭುಜಗಳ ಹಿಂಭಾಗ ಪುನಃ ಕಡುಕಂದು ಅಥವಾ ಕಪ್ಪು. ಹೊಟ್ಟೆಯ ಭಾಗ ಹಳದಿ ಮಿಶ್ರಿತ ಕಂದು ಕೆನ್ನೆ, ಕತ್ತು ದೇಹದ ತೆರಪುಗಳು ಮತ್ತು ಪಕ್ಕೆಗಳು ಸ್ವಲ್ಪ ತೀವ್ರ ಬಣ್ಣದಿಂದ ಕೂಡಿವೆ. ರೆಕ್ಕೆಗಳು ಕಪ್ಪು ಬಣ್ಣ. ದಂತ ಸೂತ್ರ ೨, ೧, ೩, ೨ / ೨, ೧, ೩, ೩

ಸಂತಾನಾಭಿವೃದ್ಧಿ : ವರ್ಷಕ್ಕೆ ಒಮ್ಮೆ ಈಯುತ್ತವೆ. ಗರ್ಭಾವಧಿ ೧೪೦ ರಿಂದ ೧೫೦ ದಿನಗಳು. ಸಾಮಾನ್ಯವಾಗಿ ಫೆಬ್ರವರಿ-ಮಾರ್ಚ್‌ತಿಂಗಳಲ್ಲಿ ಮರಿಹಾಕುತ್ತವೆ. ಮರಿ ಸಮರ್ಥವಾಗಿ ಹಾರುವಂತಾಗುವವರೆಗೆ ಮರಿಯನ್ನು ತಾಯಿ ಹೊತ್ತು ತಿರುಗುತ್ತವೆ.

ಸ್ವಭಾವ : ಭಾರತದಲ್ಲಿನ ಬಾವಲಿಗಳಲ್ಲಿ ಇದು ಅತ್ಯಂತ ದೊಡ್ಡದು. ಸೂರ್ಯಾಸ್ತವಾಗುತ್ತಿದ್ದಂತೆಯೇ ತಮ್ಮ ವಿಸ್ತಾರವಾದ ರೆಕ್ಕೆಗಳನ್ನು ನಿಧಾನವಾಗಿ ಬಡಿಯುತ್ತಾ ಹಾರಿ ಬರುವುದು ಸಾಮಾನ್ಯ ದೃಶ್ಯ. ಹಗಲು ಮರಗಳ ಎತ್ತರದಲ್ಲಿರುವ ರೆಂಬೆಗಳಿಗೆ ನೇತು ಬಿದ್ದು ಕಾಲ ಕಳೆಯುತ್ತವೆ. ಸಾಮಾನ್ಯವಾಗಿ ಗುಂಪಿನಲ್ಲಿ ನೂರಾರು ಅಥವಾ ಸಾವಿರಾರು ಬಾವಲಿಗಳು ಒಟ್ಟಿಗೆ ವಾಸಿಸುತ್ತವೆ. ಹೆಚ್ಚು ಮಾನವ ವಸತಿ ಮತ್ತು ಆತನ ತೀವ್ರ ಚಟುವಟಿಕೆಗಳಿರುವ ಪಟ್ಟಣಗಳು ಮತ್ತು ಹಳ್ಳಿಗಳ ನಡುವೆಯೂ ವಾಸಿಸುತ್ತವೆ. ಇವು ಅಭ್ಯಾಸಶೀಲ ಪ್ರಾಣಿಗಳು. ಸೂರ್ಯಾಸ್ತವಾದ ಅರ್ಧ ಗಂಟೆಯಲ್ಲಿ ತಮ್ಮ ನೆಲೆಯನ್ನು ಬಿಟ್ಟು ಅನುದಿನವೂ ಒಂದೇ ದಿಕ್ಕಿನಲ್ಲಿ ಒಂದರ ಹಿಂದೆ ಒಂದರಂತೆ ಒಂದು ಸಾಲಿನಲ್ಲಿ ಆಹಾರವನ್ನು ಹುಡುಕುತ್ತಾ ಹೊರಡುತ್ತವೆ. ಹಣ್ಣಿನ ಮರದಲ್ಲಿರುವಾಗಲೇ ಹೊಟ್ಟೆ ತುಂಬಾ ತಿಂದು ವಿರಮಿಸಿ ಅರಗಿಸಿಕೊಂಡು ಮರದಲ್ಲಿಯೇ ಅನೇಕ ಗಂಟೆಗಳನ್ನು ಕಳೆಯುತ್ತವೆ. ಇವು ಆಹಾರಕ್ಕಾಗಿ ಅನತಿ ದೂರ, ಕೆಲವೊಮ್ಮೆ ಕಡಲಿನ ಭಾಗಗಳನ್ನು ದಾಟಿ ಹೋಗಬಹುದು. ಇವುಗಳಿಗೆ ಹಣ್ಣು ಬಿಡುವ ಮರಗಳಿರುವ ಸ್ಥಳ ಮತ್ತು ಹಣ್ಣು ಬಿಡುವ ಕಾಲದ ವಿಷಯದಲ್ಲಿ ಅಲೌಕಿಕ ನೆನಪು ಇವೆ. ಇವು ಹಣ್ಣಿನ ತೋಟಗಳಿಗೆ ಮಾರಕವಾದ ಪಿಡುಗುಗಳು. ಈ ಬಾವಲಿಗಳನ್ನು ತೋಟಗಳಿಂದ ದೂರವಿಡಲು ಅನೇಕ ಪ್ರಯತ್ನಗಳು ನಡೆದಿದ್ದರೂ ಅವು ಸಫಲವಾಗಿಲ್ಲ. ಕೆಲವು ಭಾಗಗಳಲ್ಲಿ ಇದರ ಮಾಂಸವನ್ನು ತಿನ್ನುತ್ತಾರೆ.