ಗಣ : ರೊಡೆನ್ಷಿಯ
ಕುಟುಂಬ : ಮ್ಯುರಿಡೀ
(Muridae)
ಉದಾ : ಮರ ಇಲಿ (Indian long tailed tree Mouse)
ಶಾಸ್ತ್ರೀಯ ನಾಮ : ವ್ಯಾಂಡುಲೂರಿಯ ಓಲಿರೇಷಿಯ (Vendeleuria oleracea)

448_69_PP_KUH

ವ್ಯಾಂಡುಲೂರಿಯ ಜಾತಿಯ ಪ್ರಭೇದಗಳನ್ನು ಸುಂಡಿಲಿ ಎಂಬ ಹೆಸರಿನಿಂದ ಕರೆಯುವುದುಂಟು. ಮರಗಳಲ್ಲಿ ವಾಸಿಸುವುದು ಹೆಚ್ಚು ಆದ್ದರಿಂದ ಮರ ಇಲಿ ಎಂಬ ಹೆಸರು ಬಂದಿದೆ.

ವಿತರಣೆ ಮತ್ತು ಆವಾಸ : ಭಾರತದ ದ್ವೀಪಕಲ್ಪಗಳಲ್ಲಿ ಕಂಡು ಬರುತ್ತವೆ. ಹೊಲಗಳಲ್ಲಿ ಆಳವಾದ ತೀರ ಉದ್ದವಿಲ್ಲದ ಬಿಲಗಳಲ್ಲಿ ಕಲ್ಲು ರಾಶಿಗಳಲ್ಲೂ ವಾಸಿಸುತ್ತವೆ. ತೆಂಗಿನ ಮರಗಳು, ಬಿದಿರ ಮೆಳೆಗಳು, ಗುಡಿಸಲು ಸೂರುಗಳಲ್ಲಿಯೂ ವಾಸಿಸುವುದುಂಟು.

ಗಾತ್ರ : ಗಾತ್ರದಲ್ಲಿ ಇವು ಚಿಕ್ಕವು. ತಲೆ ಮತ್ತು ದೇಹದ ಉದ್ದ ೨ ೧/೨ ರಿಂದ ೩ ೧/೨ ಅಂಗುಲ. ಬಾಲದ ಉದ್ದ ೩ ೧/೨ ಯಿಂದ ೪ ೧/೨ ಅಂಗುಲ ಅಥವಾ ದೇಹದ ಉದ್ದದಷ್ಟೇ ಇರುತ್ತದೆ.

ಲಕ್ಷಣಗಳು : ದೇಹದ ಬಣ್ಣ ಕಂದು. ಇದರ ಬಣ್ಣ ಪ್ರದೇಶದಿಂದ ಪ್ರದೇಶಕ್ಕೆ (ಜಾಗದಿಂದ ಜಾಗಕ್ಕೆ) ಬದಲಾಗುತ್ತದೆ. ಪಾದಗಳು ಬಿಳಿ. ತುಪ್ಪುಳು ಒರಟು. ಸ್ತನಗಳು ನಸುಗೆಂಪಾಗಿವೆ. ಹೊಟ್ಟೆಯ ಭಾಗ ಬಿಳುಪು.

ಸ್ವಭಾವ : ಮರಗಳ ಮೇಲೆ ಎಲೆ ಹುಲ್ಲುಗಳಿಂದ ಗೂಡು ಕಟ್ಟುತ್ತದೆ. ರಾಗಿ, ಹತ್ತಿ ಮುಂತಾದ ಬೆಳೆಗಳಿಗೆ ಸ್ವಲ್ಪ ಮಟ್ಟಿಗೆ ನಷ್ಟವುಂಟು ಮಾಡುತ್ತವೆ.

ವ್ಯಾಂಡುಲೂರಿಯ ಓಲಿರೇಷಿಯ ನೀಲಗಿರಿಕ ಎಂಬ ಉಪಪ್ರಭೇದವು ನೀಲಗಿರಿ ಬೆಟ್ಟಗಳಲ್ಲಿ ಕೊಡಗಿನಲ್ಲಿ ಮತ್ತು ಇತರ ದಕ್ಷಿಣ ಭಾರತ ಭಾಗಗಳಲ್ಲಿ ದೊರಕುತ್ತದೆ.

—-

ಗಣ : ರೊಡೆನ್ಷಿಯ
ಕುಟುಂಬ : ಮ್ಯುರಿಡೀ (
Muridae)
ಉದಾ : ಮುಳ್ಳು ಬಯಲಿಲಿ (Spiny field mouse)
ಶಾಸ್ತ್ರೀಯ ನಾಮ : ಮಸ್ ಪ್ಲ್ಯಾಟಿಥ್ರಿಕ್ಸ್ (Mus platythrix)

449_69_PP_KUH

ವಿತರಣೆ : ಮತ್ತು ಆವಾಸ : ಮೈಸೂರಿನ ಸುತ್ತಮುತ್ತ ಕೃಷಿ ಭೂಮಿಗಳಲ್ಲಿ ದೊರಕುತ್ತದೆ ಹಾಗೂ ಭಾರತದ ಎಲ್ಲೆಡೆ ದೊರಕುತ್ತದೆ.

ಗಾತ್ರ : ಸಾಧಾರಣ ಗಾತ್ರ. ಮಸ್‌ಬೂದುಗ ಮತ್ತು ಮಸ್ ಮಸ್ಕ್ಯುಲಿಸ್‌ಗಳಿಗಿಂತ ದೊಡ್ಡದು.

ಲಕ್ಷಣಗಳು : ದಪ್ಪವಾದ ಮತ್ತು ಮುಳ್ಳು ಆವರಿಸಿದ ಬಾಲ. ಉದ್ದದಲ್ಲಿ ಬಾಲ ದೇಹಕ್ಕಿಂತ ಚಿಕ್ಕದು. ದೇಹದ ಮೇಲಿರುವ ತುಪ್ಪುಳವು ಮುಳ್ಳುಮುಳ್ಳಾಗಿದೆ. ಕಡುಕಂದು ಅಥವಾ ಕೆಲವೊಮ್ಮೆ ಬೂದು ಬಣ್ಣ. ಕೆಳಭಾಗ ಮತ್ತು ಕಾಲುಗಳು ಬಿಳುಪು ಅಥವಾ ಬೂದು. ಬಾಲವೂ ಇದೇ ರೀತಿ ಎರಡು ಬಣ್ಣಗಳನ್ನು ತೋರುತ್ತದೆ. ಮೇಲೆ ದಟ್ಟ ಬಣ್ಣ ಕೆಳಗೆ ತಿಳಿಬಣ್ಣ ಅಥವಾ ಬಿಳುಪು. ಮರಿಗಳ ದೇಹದ ಮೇಲೆ ಬೂದುಕಂದು ತುಪ್ಪುಳಿರುತ್ತದೆ.

ಸ್ವಭಾವ : ಮಣ್ಣು ನೆಲದ ಬಿಲಗಳಲ್ಲಿ ವಾಸಿಸುತ್ತದೆ. ಬಿಲಗಳು ೨ ರಿಂದ ೫ ಅಡಿ ಉದ್ದ ೬ ರಿಂದ ೧೫ ಅಂಗುಲ ಆಳವಿರುತ್ತವೆ. ಬಿಲಗಳನ್ನು ಕೃಷಿ ಭೂಮಿಯ ಪಕ್ಕದಲ್ಲಿ ತೋಡುತ್ತವೆ. ಇಲಿ ಬಿಲದೊಳಗಿರುವಾಗ ಬಿಲದ ಬಾಯನ್ನು ಸಣ್ಣ ನೊರಜು ಕಲ್ಲುಗಳಿಂದ ಮುಚ್ಚುತ್ತದೆ. ಬಿಲದ ಬಾಯಿಯ ಪಕ್ಕದಲ್ಲಿ ಸದಾ ನೊರಜು ಕಲ್ಲುಗಳ ಸಂಗ್ರಹವಿರುತ್ತದೆ. ಬಿಲಗಳಲ್ಲಿ ಇಲಿ ವಾಸಿಸುವ ಜಾಗವು ಒಣಗಿದ ಎಲೆಗಳು, ಹತ್ತಿ ಮುಂತಾದ ಮೃದುವಾದ ವಸ್ತುಗಳಿಂದ ಮತ್ತು ನೊರಜು ಕಲ್ಲುಗಳಿಂದ ಮಾಡಲ್ಪಟ್ಟಿರುತ್ತವೆ.

ಮಸ್ ಪ್ಲ್ಯಾಟಿಥ್ರಿಕ್ಸ್ ಪ್ಲ್ಯಾಟಿಥ್ರಿಕ್ಸ್ ಎಂಬ ಉಪಪ್ರಭೇದವು ದಕ್ಷಿಣ ಭಾರತದಲ್ಲಿ ಕಂಡುಬರುತ್ತದೆ.

ಡಯೋಮಿನ್ ಕರುಂಪಿ ದಕ್ಷಿಣ ದ್ವೀಪಕಲ್ಪದಲ್ಲಿ ಕಂಡುಬರುತ್ತದೆ.

—- 

ಗಣ : ರೊಡೆನ್ಷಿಯ
ಕುಟುಂಬ : ಮ್ಯುರಿಡೀ
(Muridae)
ಉದಾ : ಮಲಬಾರಿನ ಮುಳ್ಳು ಅಳಿಲುಗಳು (Malabar Spiny Dormice)
ಶಾಸ್ತ್ರೀಯ ನಾಮ : ಪ್ಲಾಟಕ್ಯಾಂಥೊಮಿಸ್ ಲ್ಯಾಸಿಯೂರಸ್ (Platacanthomys lasiurus)

ದಕ್ಷಿಣ ಭಾರತದಲ್ಲಿ ಕೊಡಗು, ತಿರುವಾಂಕೂರು ಮತ್ತು ಮಲಬಾರ್ ಪ್ರದೇಶಗಳಲ್ಲಿ ವಾಸಿಸುತ್ತದೆ. ಸಮುದ್ರ ಮಟ್ಟದಿಂದ ೬೦೦-೮೦೦ ಮೀಟರ್ ಎತ್ತರದವರೆಗಿನ ದೊಡ್ಡ ಮರಗಳಲ್ಲಿ ವಾಸಿಸುತ್ತದೆ.

ಪ್ರೌಢ ಹೆಣ್ಣಿಲಿ ೭೫ ಗ್ರಾಂ. ತೂಗುತ್ತದೆ.

ಬೆನ್ನಿನ ಭಾಗದ ತುಪ್ಪುಳ ಬಿಳುಪು. ಬೆನ್ನಿನ ಭಾಗದ ಕೂದಲುಗಳ ನಡುವೆ ಅಗಲವಾದ ಚಪ್ಪಟೆ ಉರುಳೆಗಳು ಹರಡಿವೆ. ಬಾಲ ಪೊದೆಯಂತಿದೆ.

—- 

ಗಣ : ರೊಡೆನ್ಷಿಯ
ಕುಟುಂಬ : ಮ್ಯುರಿಡೀ
(Muridae)
ಉದಾ : ಬಯಲು ಇಲಿ (Antelope rat)
ಜರ್ಬಿಲ್ (Gerbil)
ಶಾಸ್ತ್ರೀಯ ನಾಮ : ಟಾಟೆರ ಇಂಡಿಕ (Tautera indica)

450_69_PP_KUH

ವಿತರಣೆ ಮತ್ತು ಆವಾಸ : ಕರ್ನಾಟಕವೂ ಸೇರಿದಂತೆ ಹಿಮಾಲಯದಿಂದ ಕನ್ಯಾಕುಮಾರಿಯವರೆಗಿನ ಇಡೀ ಭಾರತದಲ್ಲಿ ದೊರಕುತ್ತದೆ.

ಗಾತ್ರ : ತಲೆ ಮತ್ತು ದೇಹದ ಉದ್ದ ೬ ರಿಂದ ೭ ಅಂಗುಲಗಳು (೧೫-೧೭ ಸೆಂ.ಮೀ.)

ಆಹಾರ : ಮುಖ್ಯವಾಗಿ ಕಾಳು, ಬೀಜಗಳನ್ನು ತಿನ್ನುತ್ತವೆ. ಇದರ ಜೊತೆಗೆ ಗೆಡ್ಡೆಗೆಣಸು, ಹುಲ್ಲು, ಸೊಪ್ಪು, ಮತ್ತು ಹೂವುಗಳನ್ನು ತಿನ್ನುತ್ತವೆ. ಸಾಲ್ವೆಡೇರ (Salvadera) ಗಿಡದ ಕಾಯಿ, ಬೀಜಗಳು ಇವಕ್ಕೆ ತುಂಬಾ ಪ್ರಿಯ.

ಲಕ್ಷಣಗಳು : ಬಯಲು ಇಲಿಗಳನ್ನು ಅವುಗಳ ಉದ್ದ ಬಾಲದಿಂದ ಇಲಿಗಳಿಂದ ಪ್ರತ್ಯೇಕಿಸಿ ಗುರುತಿಸಬಹುದು. ಇವುಗಳ ಮೈಮೇಲೆ ಕೂದಲಿರಬಹುದು. ಅಥವಾ ಇದ್ದರೂ ಕೂದಲುಗಳು ಕುಚ್ಚು ಕುಚ್ಚಾಗಿರುತ್ತವೆ. ಹಿಂಗಾಲುಗಳು ತುಂಬಾ ಉದ್ದ (ಇಲಿಗಳಿಗಿಂತ ಹೆಚ್ಚು ಉದ್ದವಾಗಿವೆ). ಇವು ಅವುಗಳ ನಡಿಗೆ, ಓಟಕ್ಕೆ ಅನುಕೂಲವಾಗಿ ಹೊಂದಿಕೊಂಡಿವೆ. ಈ ಇಲಿಯು ಕುಣಿದು ಕುಪ್ಪಳಿಸಿ, ಜಿಗಿಯುತ್ತಾ ಓಡಾಡುತ್ತದೆ. ಈ ಬಯಲು ಇಲಿಯು ಇದರ ಹತ್ತಿರದ ಸಂಬಂಧಿಗಳಾದ ಮರುಭೂಮಿಯ ಬಯಲು ಇಲಿಗಿಂತ ಗಾತ್ರದಲ್ಲಿ ದೊಡ್ಡದು. ಇದರ ಬಣ್ಣವು ಕೆಂಪು ಕಂದಿನಿಂದ ನಸು ಹಳದಿ ಛಾಯೆಯ ಕಂದು ಅಥವಾ ಬೂದು ನಸುಹಳದಿ ಛಾಯೆಯ ಕಂದುಗಳಾಗಿರಬಹುದು. ತಿಳಿ ಕಂದು ಬಣ್ಣದ ಪಟ್ಟೆಗಳು ಬಾಲದ ಎರಡೂ ಪಕ್ಕಗಳಲ್ಲಿ ಉದ್ದಕ್ಕೂ ಹರಡಿವೆ. ಬಾಲವು ಕೂದಲುಗಳಿಂದ ಮುಚ್ಚಿದೆ ಮತ್ತು ಬಾಲದ ತುದಿಯು ಕುಚ್ಚಾಗಿದೆ. ಬಣ್ಣದ ವ್ಯತ್ಯಾಸಗಳು ಮತ್ತು ಇತರ ಸಣ್ಣಪುಟ್ಟ ರಚನೆಯ ವಿವರಗಳ ವ್ಯತ್ಯಾಸಗಳಿಂದ ಅನೇಕ ಪ್ರಭೇದಗಳನ್ನು ಗುರುತಿಸಿದ್ದಾರೆ. ಆದರೆ ಇವು ನಿಜವಾಗಿಯೂ ಸ್ಪಷ್ಟ ಪ್ರಭೇದಗಳಲ್ಲ ಋತುಗಳ ಮತ್ತು ಪರಿಸರದ ಪ್ರಭಾವೀಯ ಬದಲಾವಣೆಗಳು ಇಲ್ಲವೆ ಭೌಗೋಳಿಕ ಉಪಪ್ರಭೇದಗಳಿರಬಹುದು. ಭಾರತದ ಇಡೀ ದಕ್ಷಿಣ ದ್ವೀಪಕಲ್ಪದಲ್ಲಿ ಇರುವುದು ಒಂದೇ ಒಂದು ಪ್ರಭೇದ ಟಾಟೆರ ಇಂಡಿಕ.

ಸಂತಾನಾಭಿವೃದ್ಧಿ : ಗಂಡು-ಹೆಣ್ಣು ಬಯಲು ಇಲಿಗಳು ಬೇರೆ ಬೇರೆಯಾಗಿ ವಾಸಿಸುತ್ತವೆ. ಎರಡೂ ಯಾವಾಗ ಸಂಧಿಸಿ ಸಂಭೋಗಿಸುತ್ತವೆ ಮತ್ತು ಎಲ್ಲಿ ಸಂಭೋಗಿಸುತ್ತವೆ (ನೆಲದ ಮೇಲೊ ಅಥವಾ ಬಿಲಗಳಲ್ಲಿಯೊ) ಎನ್ನುವುದು ತಿಳಿಯದು. ಇವು ನೆಲವನ್ನು ತೋಡಿ ಗೂಡುಗಳನ್ನು ನಿರ್ಮಿಸುತ್ತವೆ ವಿವಿಧ ಗೂಡುಗಳ ನಡುವೆ ಪರಸ್ಪರ ಸಂಬಂಧ ಇರಬಹುದು. ಇವುಗಳ ಮೂಲಕ ಅವು ಸಂಪರ್ಕ ಹೊಂದುತ್ತವೆ ಮತ್ತು ಸುದ್ದಿ ವಿನಿಮಯ ಮಾಡಿಕೊಳ್ಳುತ್ತವೆ. ನೆಲದಮೇಲೂ ಬಿಲದಿಂದ ಬಿಲಕ್ಕೆ ಹೋಗುವ ದಾರಿಗಳಿರುತ್ತವೆ. ‌ಇದು ಸಂಪರ್ಕದ ಪರ್ಯಾಯ ಮಾರ್ಗ. ಗೂಡುಕೋಣೆಗಳನ್ನು ಎಲೆಗಳಿಂದ ಮತ್ತು ಹುಲ್ಲಿನಿಂದ ಮೆತ್ತೆ ಮಾಡಿರುತ್ತವೆ. ಈ ಕೋಣೆಯ ಗೂಡಿನ ಇತರ ಕೋಣೆಗಳಿಗಿಂತ ಅಗಲವಾಗಿರುತ್ತದೆ ಮತ್ತು ಕೆಳಗಿರುತ್ತದೆ.

ವರ್ಷವಿಡೀ ಸಂತಾನೋತ್ಪತ್ತಿ ಚಟುವಟಿಕೆ ತೋರುತ್ತವೆ. ಒಮ್ಮೆಗೆ ೮-೧೨ ಮರಿಗಳನ್ನು ಹಾಕಬಲ್ಲದು. ಆದರೆ ಸಾಮಾನ್ಯವಾಗಿ ೪ ಮರಿಗಳನ್ನು ಹಾಕುತ್ತದೆ. ಗರ್ಭಕಟ್ಟದಿದ್ದಾಗ ಇದು ಒಂದಾದ ಮೇಲೊಂದರಂತೆ ಈಸ್ಟ್ರಸ್ ಆವರ್ತಗಳನ್ನು ತೋರುತ್ತದೆ. ಇವುಗಳ ಬಿಲಗಳು ನೆಲದ ಕೆಳಗೆ ೧ ಅಡಿಗಿಂತಲೂ ಹೆಚ್ಚು ಆಳದಲ್ಲಿರುತ್ತವೆ.

ಸ್ವಭಾವ : ಬಯಲು ಪ್ರದೇಶದಲ್ಲಿ ಅಥವಾ ಬೋರೆಗಳಲ್ಲಿ, ಕೃಷಿ ಭೂಮಿಯ ಪಕ್ಕದಲ್ಲಿ ವಾಸಿಸುತ್ತವೆ. ಬೇಲಿ ಮತ್ತು ಪೊದರುಗಳ ಹತ್ತಿರ ಅಥವಾ ಅವುಗಳ ಕೆಳಗೆ ಬಿಲಗಳನ್ನು ತೋಡಿ ವಾಸಿಸುತ್ತವೆ. ಕೆಲವೊಮ್ಮೆ ಬಯಲಿನಲ್ಲಿಯೇ ಬಿಗಳಿರಬಹುದು. ಇವು ಒಂದು ಬಿಲದಿಂದ ಇನ್ನೊಂದು ಬಿಲಕ್ಕೆ ಓಡಾಡಿ ಸ್ಪಷ್ಟವಾದ ದಾರಿ ನಿರ್ಮಾಣವಾಗಬಹುದು. ಗಂಡು ಮತ್ತು ಹೆಣ್ಣುಗಳು ಬೇರೆ ಬೇರೆ ಗೂಡುಗಳಲ್ಲಿ ವಾಸಿಸುತ್ತವೆ ಮತ್ತು ಗೂಡುಗಳನ್ನು ಬೇರೆ ಬೇರೆ ಮಟ್ಟದಲ್ಲಿ ಮತ್ತು ರೀತಿಯಲ್ಲಿ ಕಟ್ಟಬಹುದು. ಗಂಡು ವಾಸಿಸುವ ಬಿಲಕ್ಕೆ ಒಂದೇ ದ್ವಾರವಿದ್ದರೆ, ಹೆಣ್ಣು ವಾಸಿಸುವ ಬಿಲಕ್ಕೆ ಒಂದಕ್ಕಿಂತ ಹೆಚ್ಚು ದ್ವಾರಗಳಿರಬಹುದು. ಈ ಪ್ರವೇಶ ದ್ವಾರವು ಸಾಮಾನ್ಯವಾಗಿ ಒಂದು ಅಡಿಗೂ ಕೆಳಗಿರುವ ಮುಖ್ಯಗೂಡಿಗೆ ಸಾಗುತ್ತದೆ. ಗೂಡು ಇರುವ ಆಳವು ಮಣ್ಣಿನ ಗುಣವನ್ನು ಅವಲಂಬಿಸುತ್ತದೆ. ಈ ಗೂಡುಗಳಿಗೆ ಸಾಮಾನ್ಯವಾಗಿ ತಪ್ಪಿಸಿಕೊಂಡು ಓಡಿಹೋಗುವ ಒಂದು ದಾರಿ ಇದ್ದೇ ಇರುತ್ತದೆ. ಈ ದಾರಿಯು ಅವು ವಿಶ್ರಮಿಸುವ ಅಥವಾ ನಿದ್ದೆ ಮಾಡುವ ಗೂಡಿನಿಂದ ನೆಲದ ಮೇಲಕ್ಕೆ ದಾರಿಯಾಗುತ್ತದೆ. ತೆಳುವಾದ ಮಣ್ಣಿನ ಹೆಂಟೆಗಳಿಂದ ತಪ್ಪಿಸಿಕೊಂಡು ಹೋಗುವ ದ್ವಾರವನ್ನು ಮರೆ ಮಾಡಿರುತ್ತವೆ.

ಇವು ನಿಶಾಚರಿಗಳು. ಸ್ವಲ್ಪ ಅಪಾಯದ ಮುನ್ಸೂಚನೆ ಸಿಕ್ಕರೂ ತಮ್ಮ ಗೂಡಿನ ರಕ್ಷಣೆಗೆ ಓಡಿಹೋಗುತ್ತವೆ. ಹೆದರಿದಾಗ ಕುಣಿದು ಕುಪ್ಪಳಿಸಿ ಓಡುತ್ತವೆ. ಹೀಗೆ ಕುಪ್ಪಳಿಸಿದಾಗ ೪ ರಿಂದ ೫ ಅಡಿಗಳಷ್ಟು ದೂರ ನಡೆಯುವುದು.

ಇವು ಕೃಷಿಯ ಪೈರುಗಳನ್ನು ಅವುಗಳ ಬೆಳವಣಿಗೆಯ-ಎಲ್ಲಾ ಹಂತಗಳಲ್ಲಿಯೂ ನಾಶಮಾಡುತ್ತವೆ. ಸುಗ್ಗಿಯ ಕಾಲದಲ್ಲಿ ಇವುಗಳ ಹಾವಳಿ ವಿಪರೀತ. ಸೂರೆ ಹೊಡೆದು ತಂದ ಕಾಳು-ಕಡ್ಡಿಗಳನ್ನು ತಮ್ಮ ಗೂಡಿನಲ್ಲಿ ಶೇಖರಿಸಿಟ್ಟುಕೊಂಡು ಬೇಸಿಗೆಯಲ್ಲಿ ಉಪಯೋಗಿಸುತ್ತವೆ. ಕೂಡಿಟ್ಟ ಆಹಾರ ಮುಗಿದು ಹೋದ ಮೇಲೆ ಹತ್ತಿರದಲ್ಲಿ ಬೆಳೆಯುವ ಗಿಡಮರಗಳು ಬೇರು, ಗೆಡ್ಡೆಗೆಣಸು, ಹಣ್ಣು ಮತ್ತು ಸೊಪ್ಪನ್ನು ತಿನ್ನುತ್ತವೆ. ಹಾಗೆಯೇ ನೆಲದ ಮೇಲೆ ಗೂಡುಕಟ್ಟುವ ಪಕ್ಷಿಗಳ ಗೂಡಿಗೂ ಲಗ್ಗೆ ಇಟ್ಟು ಮೊಟ್ಟೆಗಳು ಮತ್ತು ಸಣ್ಣ ಮರಿಗಳನ್ನು ತಿನ್ನುತ್ತವೆ. ಸಣ್ಣ ದಂಶಕ ಪ್ರಾಣಿಗಳನ್ನೂ ಕೊಂದು ತಿನ್ನಬಹುದು.

ಪ್ರಯೋಗಗಳಿಗೆ ಬಳಸಲೆಂದ ಬಿಳಿ ಇಲಿಗಳನ್ನು ಸಂಶೋಧನಾಲಯಗಳ ಪ್ರಾಣಿಗೃಹಗಳಲ್ಲಿ ಸಾಕಿ ಬೆಳೆಸುವಂತೆ ಜರ್ಬಿಲ್‌ಗಳನ್ನು ಸಾಕಿ ಬೆಳೆಸುವಲ್ಲಿ ಮೈಸೂರಿನ ಕೇಂದ್ರ ಆಹಾರ ತಾಂತ್ರಿಕ ಮತ್ತು ಸಂಶೋಧನಾಯಲದವರು (ಸಿ.ಎಫ್.ಟಿ.ಆರ್.ಇ) ಯಶಸ್ವಿಯಾಗಿದ್ದಾರೆ.

ಇದರ ಉಪಪ್ರಭೇದಗಳೆಂದರೆ

ಟಾ. ಇಂ. ಹಾರ್ಡವಿಕೆ (T.i. hardwicke)ಕೊಡಗು, ಧಾರವಾಡ, ದಕ್ಷಿಣ ಕನ್ನಡ, ಉತ್ತರಕನ್ನಡ ಮತ್ತು ಮೈಸೂರು ಜಿಲ್ಲೆಗಳಲ್ಲಿ ದೊರಕುತ್ತವೆ.

ಟಾ. ಇಂ. ಕ್ಯುವೆರಿ (T.i. cuverii) ನೀಲಗಿರಿ ಬೆಟ್ಟ ಮತ್ತು ಮೈಸೂರು ಜಿಲ್ಲೆಗಳಲ್ಲಿ ದೊರಕುತ್ತವೆ.

ಇವು ನಿಶಾಚರಿಗಳು. ಬಿಲವಾಸಿಗಳು. ಸರಳ ಬಿಲಗಳಲ್ಲಿ ೨೦ರ ವರೆಗಿನ ಗುಂಪುಗಳಲ್ಲಿ ವಾಸಿಸುತ್ತವೆ. ಮಾಂಸವನ್ನು ತಿನ್ನುತ್ತವೆ. ಪಕ್ಷಿಗಳು ಮತ್ತು ಪಕ್ಷಿ ಮೊಟ್ಟೆಗಳನ್ನು ಮತ್ತು ತಮ್ಮ ಮರಿಗಳನ್ನೂ ಕೂಡ ತಿನ್ನುತ್ತವೆ. ನೀರಿನಿಂದ ಅತ್ಯಂತ ದೂರದಲ್ಲಿ ವಾಸಿಸುವುದರಿಂದ ತಮ್ಮ ನೀರಿನ ಅಗತ್ಯಗಳಿಗೆ, ಕಾಳುಗಳಲ್ಲಿ ಮತ್ತು ಗೆಡ್ಡೆಗೆಣಸು ಅಥವಾ ಬೇರುಗಳಲ್ಲಿ ದೊರಕುವ ನೀರಿನ ಅಂಶನ್ನೇ ಅವಲಂಬಿಸುತ್ತವೆ.

ಟಾ. ಇಂ. ಹಾರ್ಡವಿಕೆಯು ಇತರ ಉಪಪ್ರಭೇದಗಳಿಂದ ಅದರ ದೇಹದ ಉದ್ದಳತೆಯಲ್ಲಿ ಹಾಗೂ ಇತರೆ ಸಣ್ಣಪುಟ್ಟ ದೇಹದ ಲಕ್ಷಣಗಳಲ್ಲಿ ವ್ಯತ್ಯಾಸ ತೋರುತ್ತದೆ.

ಟಾ. ಇಂ. ಕ್ಯುವೆರಿಯ ತಲೆ ಮತ್ತು ದೇಹದ ಉದ್ದ ೧೩೫-೧೮೯ ಮಿ.ಮೀ. ಬಾಲದ ಉದ್ದ ೧೯೩ ರಿಂದ ೨೩೪ ಮಿ.ಮೀ.

—-

ಗಣ : ರೊಡನ್ಷಿಯ
ಕುಟುಂಬ : ಮ್ಯುರಿಡೀ
(Muridae)
ಉದಾ : ಬಿಳಿ ಇಲಿ
ಶಾಸ್ತ್ರೀಯ ನಾಮ : ಟಾಟೆರ ಕ್ಯುವೆರಿ (Tautera cuvieri)

ಇವು ಕೃಷಿ ಮಾಡಿದ ಹೊಗಳ ಮಣ್ಣಿನಲ್ಲಿ ಬಿಲ ಮಾಡಿಕೊಂಡು ವಾಸಿಸುತ್ತವೆ. ಈ ಬಿಲಗಳಿಗೆ ಒಳಹೋಗಲು ಮತ್ತು ಹೊರಬರಲು ಹಲವಾರು ದ್ವಾರಗಳಿರುತ್ತವೆ. ಸಂಶಯ ಹುಟ್ಟಿದೊಡನೆ ಅಪಾಯದ ಸೂಚನೆ ಕಂಡ ದ್ವಾರದ ಮಾರ್ಗವನ್ನು ಬಿಟ್ಟು ಬೇರೆ ಮಾರ್ಗದ ಮೂಲಕ ಬಿಲದಿಂದ ಓಡಿಹೋಗಿ, ಉಪಾಯದಿಂದ ಮತ್ತು ಜಾಣ್ಮೆಯಿಂದ ತಪ್ಪಿಸಿಕೊಳ್ಳುತ್ತವೆ. ಮರಿಗಳಿಗಾಗಿ ಗೂಡಿನ ಗೋಡೆಯನ್ನು ಹುಲ್ಲಿನ ಮೆತ್ತೆಯಿಂದ ತಟ್ಟಿರುತ್ತವೆ. ಬಿಳಿ ಇಲಿ ರಾಗಿ, ಜೋಳ, ನವಣೆ, ಅವರೆ, ತೊಗರಿ, ಉದ್ದು, ಹೆಸರು, ಅಲಸಂದೆ, ಹುಚ್ಚೆಳ್ಳು, ಕಡಲೆಕಾಯಿ ಹರಳು ಮುಂತಾದ ಕೃಷಿ ಧಾನ್ಯಗಳನ್ನು ತಿಂದು ರೈತನಿಗೆ ಹಾನಿ ಮಾಡುತ್ತದೆ. ಹುಲ್ಲು, ಗೆಡ್ಡೆಗೆಣಸು, ಕೊಡತಿ ಹುಳುಗಳನ್ನು ತಿನ್ನುವುದುಂಟು. ವ್ಯವಸಾಯಕ್ಕೆ ತೊಂದರೆ ಕೊಡುವ ಹುಲ್ಲು, ಕಳೆಗಿಡ, ಕೀಟಗಳು, ಕೊಡತಿ ಹುಳುಗಳನ್ನು ತಿನ್ನುವುದರಿಂದ ರೈತನಿಗೆ ಸ್ವಲ್ಪ ಮಟ್ಟಿಗೆ ಸಹಾಯವಾಗಬಹುದು. ಆದರೂ ಈ ಇಲಿಯಿಂದ ರೈತನಿಗೆ ಅಪಾಯವಾಗುವುದೇ ಹೆಚ್ಚು.