ಗಣ : ಕೈರಾಪ್ಟೆರ (ಮೈಕ್ರೊಕೈರಾಪ್ಟೆರ)
ಕುಟುಂಬ : ಮೆಗಡರ್ಮಟಿಡೀ (Megadermatidae)
ಉದಾ : ಭಾರತದ ಸಟೆ ರಕ್ತ ಪಿಶಾಚಿ (Indian false vampire)
ಶಾಸ್ತ್ರೀಯ ನಾಮ : ಮೆಗಾಡರ್ಮ ಲೈರ ಲೈರ (Megaderma lyra lyra)

434_69_PP_KUH

ವಿತರಣೆ ಮತ್ತು ಆವಾಸ : ಭಾರತದ ದಕ್ಷಿಣ ದ್ವೀಪಕಲ್ಪದಲ್ಲಿ ಕಂಡು ಬರುತ್ತದೆ. ಶ್ರೀರಂಗ ಪಟ್ಟಣದ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಹೇರಳ ಸಂಖ್ಯೆಯಲ್ಲಿ ವಾಸಿಸುತ್ತವೆ.

ಗಾತ್ರ : ತಲೆ ಮತ್ತು ದೇಹ ೯ ಸೆಂ.ಮೀ.

ಆಹಾರ : ಟಸ್ಸಾರ್ ರೇಷ್ಮೆಹುಳು, ಪತಂಗಗಳು, ಮಿಡತೆಗಳಂತಹ ದೊಡ್ಡ ಕೀಟಗಳನ್ನು ತಿನ್ನುತ್ತವೆ. ಸಣ್ಣ ಕಶೇರುಕಗಳನ್ನೂ ತಿಂದು ಬದುಕುತ್ತವೆ. ಎಳೆಯ ಇಲಿಗಳು, ಪಿಪಿಸ್ಟ್ರೆಲ್ಲಿಸ್‌ನಂತಹ ಸಣ್ಣ ಬಾವಲಿಗಳು, ಸಣ್ಣ ಹಕ್ಕಿಗಳು, ಗೌಳಿಗಳು ಮತ್ತು ಕಪ್ಪೆಗಳು ಇದರ ಆಹಾರ. ಇದು ಹಾರುತ್ತಾ ನೆಲದ ಬಳಿಗೆ ಬಂದಾಗ ಈ ಪ್ರಾಣಿಗಳನ್ನು ಎತ್ತಿಕೊಂಡು ಎತ್ತರವಾದ ಕಲ್ಲು ಬಂಡೆಗಳು ಅಥವಾ ಗೋಡೆಗಳ ಮೇಲೆ ಕುಳಿತು ನಿಧಾನವಾಗಿ ತಿನ್ನುತ್ತದೆ. ಮೀನುಗಳನ್ನು ಹಿಡಿಯುತ್ತವೆಯೋ ಅಥವಾ ದಂಡೆಯ ಮೇಲೆ ಬಂದು ಬಿದ್ದಿರುವ ಮೀನುಗಳನ್ನು ಹಾರಿಸಿ ತಂದು ತಿನ್ನುತ್ತವೆಯೋ ಗೊತ್ತಿಲ್ಲ.

ಲಕ್ಷಣಗಳು : ಕಡು ಬೂದು ಕಂದು, ಅಥವಾ ಸ್ಲೇಟಿನಂತಹ ಕಂದು ಬಣ್ಣ, ಹೊಟ್ಟೆಯ ಭಾಗ ತಿಳಿ ಬಣ್ಣ, ಕಿವಿಗಳು ಉದ್ದ ಮತ್ತು ದುಂಡಗಿವೆ. ಎರಡು ಕಿವಿಗಳು ಸುಮಾರು ಮೂರನೆಯ (೧/೩) ಒಂದು ಭಾಗದಷ್ಟು ಉದ್ದ, ಪರಸ್ಪರ ಕೂಡಿಕೊಂಡಿವೆ. ನಾಸಿಕ ಪಟಲಗಳಿವೆ ಮತ್ತು ಇವು ಕತ್ತರಿಸಿದ ಆಕಾರದಲ್ಲಿವೆ. ಬಾಲವಿಲ್ಲ.

ಸಂತಾನಾಭಿವೃದ್ಧಿ : ವರ್ಷಕ್ಕೆ ಒಂದು ಸಾರಿ ಮರಿ ಹಾಕುತ್ತವೆ. ಸಂತಾನೋತ್ಪತ್ತಿ ಚಟುವಟಿಕೆ ಅಕ್ಟೋಬರ್-ನವೆಂಬರ್ ತಿಂಗಳುಗಳಲ್ಲಿ ಹೆಚ್ಚು ಏಪ್ರೀಲ್ ತಿಂಗಳಲ್ಲಿ ಮರಿಗಳು ಹುಟ್ಟುತ್ತವೆ. ಹೆಣ್ಣು ಬಾವಲಿಗಳು ಸಾಕಷ್ಟು ಕಾಲ ಮರಿಗಳನ್ನು ಹೊತ್ತು ಸಾಕುತ್ತವೆ.

ಸ್ವಭಾವ : ಸಾಮಾನ್ಯವಾಗಿ ಗುಂಪುಗಳಲ್ಲಿ ವಾಸಿಸುತ್ತವೆ. ಬಹಳವಾಗಿ ೩೦ ಸಂಖ್ಯೆಯ ಗುಂಪುಗಳಿದ್ದರೂ, ಔರಂಗಾಬಾದ್ ಬಳಿ ೧,೫೦೦-೨,೦೦೦ ದವರೆಗಿನ ಗುಂಪು ಕಂಡುಬಂದಿದೆ. ಶ್ರೀರಂಗ ಪಟ್ಟಣದಲ್ಲಿ ನೂರಾರು ಸಂಖ್ಯೆಯ ಗುಂಪುಗಳಿವೆ. ಪಾಳು ಬಿದ್ದ ಮನೆಗಳು. ಬಾವಿಗಳು ಮತ್ತು ಗುಹೆಗಳಲ್ಲಿ ಸಾಮಾನ್ಯವಾಗಿ ವಿರಮಿಸುತ್ತವೆ. ಸೂರ್ಯಾಸ್ತವಾಗಿ ಕತ್ತಲು ಹರಡಿದ ಮೇಲೆಯೇ ಆಹಾರಾನ್ವೇಷಣೆಗೆ ಹೊರಬರುವುದು.

—- 

ಗಣ : ಕೈರಾಪ್ಟೆರ
ಕುಟುಂಬ : ವೆಸ್ಟರ್ಟಿಲಿಯೊನಿಡೀ (vespertilionidae)
ಉದಾ : ವೆಸ್ಟರ್ಟಿಲಿಯೊನಿಡೆ ಬಾವಲಿ
ಶಾಸ್ತ್ರೀಯ ನಾಮ : ಸ್ಕೊಟೊಫೈಲಸ್ ರಾಟೋನಿ (Secotophilus wroughtoni)

ವಿತರಣೆ ಮತ್ತು ಆವಾಸ : ಬೆಂಗಳೂರಿನ ಬಳಿ ಹೊಸಕೋಟೆ ಮತ್ತು ಶ್ರೀರಂಗಪಟ್ಟಣಗಳಲ್ಲಿ ಇದು ದೊರಕಿದೆ.

ಗಾತ್ರ : ಸುಮಾರು ಗಾತ್ರದ ಬಾವಲಿ.

ಆಹಾರ : ಕೀಟಾಹಾರಿ

ಲಕ್ಷಣಗಳು : ಕಂದು ಬಣ್ಣದ ಉದರ ಮತ್ತು ಕಡು ಕಪ್ಪಾದ ಬೆನ್ನು ತೊಡೆಗಳ ನಡುವಿನ ಪೆಟಾಜಿಯಂ ಪಟಲದಿಂದಾಚೆಗೆ ಬಾಲವು ತುಸು ಚಾಚಿರುತ್ತದೆ. ಉಳಿದ ಲಕ್ಷಣಗಳಲ್ಲಿ ಇತರೆ ಕೀಟಾಹಾರಿ ಬಾವಲಿಗಳನ್ನು ಹೋಲುತ್ತದೆ.

ಸಂತಾನಾಭಿವೃದ್ಧಿ : ಜನವರಿ ತಿಂಗಳಲ್ಲಿ ಗರ್ಭಕಟ್ಟಿದ ಬಾವಲಿಗಳು ದೊರಕುತ್ತವೆ. ಪ್ರತಿ ಸೂಲಿನಲ್ಲಿಯೂ ೨ ಮರಿಗಳಿರುತ್ತವೆ.

ಸ್ವಭಾವ : ಮರಗಳಲ್ಲಿನ ಪೊಟರುಗಳೊಳಗಿನ ಚಾಚುಗಳಿಗೆ ನೇತು ಬಿದ್ದು ವಿರಮಿಸುತ್ತವೆ. ಉಗ್ರವಾದ ಬಾವಲಿಗಳು ಮತ್ತು ಇವು ಕಚ್ಚುತ್ತವೆ.

—- 

ಗಣ : ಕೈರಾಪ್ಟೆರ
ಉದಾ : ರಾಟನ್ನರ ಬಿಡಿ ಬಾಲದ ಬಾವಲಿ (Wroughton’s freetailed bat)

435_69_PP_KUH

ಹೆಚ್ಚಿನ ವಿವರಗಳು ದೊರಕುತ್ತಿಲ್ಲ. ಲಪ್ತವಾಗಿದೆ ಅಥವ ಅಳಿವಿನ ಅಂಚಿನಲ್ಲಿದೆ ಎಂದು ಭಾವಿಸಿ ಕರ್ನಾಟಕದ ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೋಕಿನ ತಳೆವಾಡಿ ಸಮೀಪದ ಬಾರಾಪೇಡಿ ಗುಹೆಯೊಂದರಲ್ಲಿ ಇದೆ ಎಂದು ನಂಬಲಾಗಿತ್ತು. ಆದರೆ ಇತ್ತೀಚೆಗೆ – ೨೦೦೬ರ ಜುಲೈ ೧೫ ರಂದಿನ ಪ್ರಜಾವಾಣಿ ಮತ್ತು ಇಂಗ್ಲೀಷ್‌ನ ಹಿಂದು ಪತ್ರಿಕೆಯಲ್ಲಿ ಪ್ರಕಟವಾದಂತೆ ಅಳಿವಿನಂಚಿನಲ್ಲಿರುವ ಅಪರೂಪದ ಪ್ರಾಣಿ ಹಾಗೂ ಸಸ್ಯಸಂಕುಲಗಳನ್ನು ಗುರುತಿಸಿ ರಕ್ಷಿಸಲು ಮುಂದಾಗಿರುವ ಸೆಂಟರ್ ಫಾರ್ ಗ್ರೀನ್ ಸಂಸ್ಥೆಯ ಧಾರವಾಡದ ಚಾರಣಿಗರು ತಮ್ಮದೊಂದು ಸಂಶೋಧನಾ ಪ್ರಯತ್ನದಲ್ಲಿ ಅತ್ಯಪರೂಪವಾದ ಈ ರಕ್ಕಸ ಬಾವಲಿಯನ್ನು ಪಶ್ಚಿಮ ಘಟ್ಟಗಳ ದುರ್ಗಮ ಪ್ರದೇಶದಲ್ಲಿ ಪತ್ತೆ ಹಚ್ಚಿ ಛಾಯಾಚಿತ್ರ ಸಹಿತ ವರದಿ ಮಾಡಿದ್ದಾರೆ.

ಇಂಟರ್ ನ್ಯಾಷನಲ್ ಯೂನಿಯನ್ ಫಾರ್ ಕನ್ಸ್‌ರ್ವೇಶನ ಆಫ್ ನ್ಯಾಚುರಲ್ ರಿಸೋಸರ್ಸ್‌ಸಂಸ್ಥೆ ಅದರ ಸಂರಕ್ಷಣೆಗೆ ಶಿಫಾರಸ್ಸು ಮಾಡಿರುವ ಅಮೂಲ್ಯ ಪ್ರಾಣಿ.

. ಗಣ : ಡರ್ಮಾಪ್ಟೆರ (Dermoptera)

ಈ ಗಣಕ್ಕೆ ಸೇರಿದ ಪ್ರಾಣಿಗಳಲ್ಲಿ ಚರ್ಮದಿಂದಾದ ರೆಕ್ಕೆಗಳಿರುವುದರಿಂದ ಈ ಹೆಸರು ಬಂದಿದೆ. (ಗ್ರೀಕ್ ಭಾಷೆಯಲ್ಲಿ ಡರ್ಮ್‌ಎಂದರೆ ಚರ್ಮ. ಟೆರಾನ್ ಎಂದರೆ ರೆಕ್ಕೆ)- ಈ ಗಣಕ್ಕೆ ಗೇಲಿಯೊ ಫೆಥಿಕಸ್ ಎಂಬ ಒಂದೇ ಜಾತಿಯ ಪ್ರಾಣಿ ಸೇರುತ್ತದೆ. ಸಾಮಾನ್ಯವಾಗಿ ಇವನ್ನು ಹಾರುವ ಕಾಡು ಪಾಪ ಎಂದು ಕರೆಯುತ್ತಾರೆ. ಇದು ಮಲೇಷಿಯಾ ಮತ್ತು ಫಿಲಿಫೆನ್ಸ್ ದ್ವೀಪಸ್ತೋಮಗಳಲ್ಲಿ ಮಾತ್ರ ಕಂಡುಬರುವ ಪ್ರಾಣಿ. ಇವು ಶಾಖಾವಾಸಿಗಳು ಮತ್ತು ಸಸ್ಯಾಹಾರಿಗಳು. ಕರ್ನಾಟಕದಲ್ಲಿ ಇಲ್ಲ.

. ಗಣ : ಈಡೆಂಟೇಟ

ಈ ಗಣಕ್ಕೆ ದಕ್ಷಿಣ ಮತ್ತು ಮಧ್ಯ ಅಮೆರಿಕೆಯ ಸ್ಲಾತ್‌ಗಳು ಮತ್ತು ಆರ್ಮಡಿಲ್ಲೊಗಳಂತಹ ಇರುವೆ ತಿನಿ ಸಸ್ತನಿಗಳು ಸೇರುತ್ತವೆ. ಇರುವೆ ತಿನಿಗಳ ಬಾಯಲ್ಲಿ ಹಲ್ಲುಗಳಿಲ್ಲ. ಆದರೆ ಸ್ಲಾತ್ ಮತ್ತು ಆರ್ಮಡಿಲ್ಲೊಗಳಲ್ಲಿ ಬಾಚಿ ಹಾಗೂ ಕೋರೆಹಲ್ಲುಗಳು ಇಲ್ಲ. ದವಡೆ ಹಲ್ಲುಗಳಿಗೆ ಎನಾಮಲ್ ಹೊದಿಕೆ ಇಲ್ಲ ಮತ್ತು ಇವು ನಿರಂತರವಾಗಿ ಬೆಳೆಯುತ್ತಿರುತ್ತವೆ. ಹಾಲು ಹಲ್ಲುಗಳಿಲ್ಲ. ಇವುಗಳ ದಂತ ವಿನ್ಯಾಸ ಮಾನೊಫಿಯೊಡಾಂಟ್ ವಿಧಾನದ್ದು. ಕಾಲು ಬೆರಳುಗಳಲ್ಲಿ ಚೆನ್ನಾಗಿ ಬೆಳೆದ ನಖಗಳಿವೆ. ವೃಷಣಗಳು ಉದಾರಾವಕಾಶದಲ್ಲಿವೆ.

. ಗಣ : ಪೋಲಿಡೋಟ

ಈ ಗಣಕ್ಕೆ ಚಿಪ್ಪು ಹಂದಿಗಳು ಅಥವಾ ಪ್ಯಾಂಗೊಲಿನ್‌ಗಳು ಸೇರುತ್ತವೆ. ಇವು ಆಫ್ರಿಕಾ ಮತ್ತು ಏಷ್ಯಾ ಖಂಡಗಳಲ್ಲಿ ಮಾತ್ರ ಕಂಡುಬರುತ್ತವೆ. ದೇಹದ ಮೇಲೆ ಮನೆಯ ಹೆಂಚುಗಳಂತೆ ಜೋಡಿಸಿದ ಶಲ್ಕ ಅಥವಾ ಹುರುಪೆಗಳ ಹೊದಿಕೆ ಇವೆ. ಈ ಹುರುಪೆಗಳ ನಡುವೆ ಕೂದಲುಗಳಿವೆ. ಕೂದಲುಗಳು ಕೂಡಿಕೊಂಡು ಹುರುಪೆಗಳಾಗಿವೆ. ಆದ್ದರಿಂದ ಇವುಗಳ ಕೆಳಗೆ ಮೂಳೆಗಳ ಆಧಾರವಿಲ್ಲ. ಮುಂಡ ಭಾಗದ ಬೆನ್ನು ಪಕ್ಕೆಗಳಲ್ಲಿ, ಬಾಲ ಭಾಗದಲ್ಲಿ ಮೇಲೆ ಮತ್ತು ಕೆಳಗೆ ಎರಡೂ ಕಡೆ ಹುರಪೆಗಳು ಇವೆ. ಮೂತಿ ಉದ್ದವಾಗಿದೆ ಹಲ್ಲುಗಳು ಇಲ್ಲ. ನಾಲಿಗೆ ಉದ್ದನಾಗಿದೆ, ಅಂಟಾಗಿದೆ ಮತ್ತು ಬಾಯಿಯಿಂದ ಹೊರಕ್ಕೆ ಚಾಚಬಲ್ಲದಾಗಿದೆ. ನಾಲಿಗೆಯನ್ನು ಹಿಂದಕ್ಕೆಳೆದುಕೊಂಡಾಗ ಅದು ಒಂದು ಸಂಚಿಯಲ್ಲಿರುತ್ತದೆ. ಕಿವಿಗಳು ಕ್ಷಯಿಸಿವೆ. ಕಾಲುಗಳು ಮೋಟು ಮತ್ತು ಪ್ರತಿಯೊಂದು ಕಾಲಿನಲ್ಲಿಯೂ ಐದೈದು ಬೆರಳುಗಳಿವೆ. ಮುಂಗಾಲುಗಳಲ್ಲಿ ಚೆನ್ನಾಗಿ ಬೆಳೆದ ನಖಗಳಿವೆ. ಇವುಗಳ ನೆರವಿನಿಂದ ಮರಹತ್ತುತ್ತವೆ. ವೃಷಣಗಳು ತೊಡೆಯ ಸಂಧಿನಲ್ಲಿವೆ ಮತ್ತು ಚೆನ್ನಾಗಿ ಬೆಳೆದ ಶಿಶ್ನುವಿದೆ. ನಿಶಾಚರಿಗಳು, ಬಿಲವಾಸಿಗಳು, ಇರುವೆ, ಗೆದ್ದಲುಗಳು ಮುಖ್ಯ ಆಹಾರ. ಹೆದರಿದಾಗ ದೇಹವನ್ನು ಚೆಂಡಿನಂತೆ ಸುತ್ತಿಕೊಂಡು ರಕ್ಷಣೆ ಪಡೆಯುತ್ತವೆ. ನಡೆಯುವಾಗ ಮುಂಗಾಲಿನ ನಖಗಳು ಹಿಂದಕ್ಕೆ ಮಡಿಸಿಕೊಂಡಿರುತ್ತವೆ ಮತ್ತು ಹಿಂಗಾಲುಗಳ ಪಾದಗಳ ಮೇಲೆ ನಡೆಯುತ್ತವೆ.

—- 

ಗಣ : ಫಾಲಿಡೋಟ
ಕುಟುಂಬ : ಮ್ಯಾನಿಡೀ
ಉದಾ : ಚಿಪ್ಪು ಹಂದಿ (PANGOLIN)
ಅಥವಾ ಸ್ಕೇಲಿ ಆಂಟ್ ಈಟರ್ (Scaly ant eater)
ಶಾಸ್ತ್ರೀಯ ನಾಮ : ಮೇನಿಸ್ ಕ್ರ್ಯಾಸಿಕಾಡೇಟ (Manis crassicaudata)

436_69_PP_KUH

ಇದು ಒಂದು ರೀತಿಯ ವಿಚಿತ್ರ ಸಸ್ತನಿ. ಚಿಪ್ಪು ಹಂದಿಯನ್ನು ಸಾಮಾನ್ಯವಾಗಿ ಇರುವೆ ತಿನ್ನುವ ಚಿಪ್ಪಿನ ಪ್ರಾಣಿ ಎಂದು ಕರೆಯುತ್ತಾರೆ. ಇರುವೆ, ಗೆದ್ದಲು ಮುಂತಾದ ಕೀಟಗಳನ್ನು ತಿನ್ನುವುದರಿಂದ ಮತ್ತು ದೇಹದ ಮೇಲೆ ಚಿಪ್ಪಿನಂತಹ ಶಲ್ಕಗಳ ಹೊದಿಕೆ ಇರುವುದರಿಂದ ಇದಕ್ಕೆ ಸ್ಕೇಲಿ ಆಂಟ್ ಈಟರ್ ಎಂಬ ಹೆಸರೂ ಇದೆ. ಆಂಗ್ಲ ಭಾಷೆಯಲ್ಲಿ ಪ್ಯಾಂಗೋಲಿನ್ ಎಂದು ಕರೆಯುತ್ತಾರೆ. ಮಲಯ ಭಾಷೆಯಲ್ಲಿ ಪೆಂಗಗೋಲಿಂಗ ಎಂದರೆ ಗುಂಡಾಗಿ ಸುತ್ತಿಕೊಂಡು ಉರುಳುವುದು ಎಂಬರ್ಥ ಬರುವುದರಿಂದ ಆ ಭಾಷೆಯ ಪದಗಳನ್ನೇ ಬಳಸಿಕೊಂಡು ಪ್ಯಾಂಗೋಲಿನ್ ಎಂದು ಹೆಸರಿಸಿದ್ದಾರೆ.

ವಿತರಣೆ ಮತ್ತು ಆವಾಸ : ಇವು ಆಫ್ರಿಕಾ ಮತ್ತು ಏಷ್ಯಾ ಖಂಡಗಳಲ್ಲಿ ಸಾಮಾನ್ಯ. ಇವು ಬಯಲು ಸೀಮೆ ಮತ್ತು ಕಣಿವೆಗಳ ಕೆಳಗೆ ವಾಸಿಸುತ್ತವೆ. ನೆಲದಲ್ಲಿ ಕೊರೆದು ರಚಿಸಿದ ಬಿಲಗಳಲ್ಲಿ, ಕೆಲವೊಮ್ಮೆ ಮರಗಳ ಪೊಟರೆಗಳಲ್ಲಿಯೂ ವಾಸಿಸುವುದುಂಟು.

ಗಾತ್ರ : ತಲೆ ಮತ್ತು ಮುಂಡಭಾಗದ ಉದ್ದ ೨ ರಿಂದ ೨ ೧/೨ ಅಡಿ ಬಾಲ ೧ ೧/೨ ಅಡಿ ಉದ್ದ. ಅತ್ಯಂತ ಚಿಕ್ಕ ಚಿಪ್ಪು ಹಂದಿ ೩/೪ ಅಡಿ ಉದ್ದ ಮತ್ತು ಬಾಲವು ಉಳಿದ ದೇಹದಷ್ಟೇ ಉದ್ದವಿರುತ್ತದೆ. ದೇಹದ ಸುತ್ತ ೧೧ ರಿಂದ ೧೩ ಸಾಲ ಚಿಪ್ಪುಗಳಿವೆ. ಬಾಲದಲ್ಲಿ ೧೩ ರಿಂದ ೧೫ ಸಾಲು ಚಿಪ್ಪುಗಳಿವೆ.

ಆಹಾರ : ಇರುವೆ, ಗೆದ್ದಲು, ಅವುಗಳ ಮೊಟ್ಟೆಗಳು ಇದರ ಆಹಾರ. ಇದು ಮರಮುಟ್ಟು ಮತ್ತು ಕಲ್ಲುಗಳ ಕೆಳಗಿರುವ ಗೆದ್ದಲುಗಳನ್ನು ಮತ್ತು ತೋಟಗಳಲ್ಲಿ ಕಂಡುಬರುವ ಸಾಮಾನ್ಯ ಸಣ್ಣ ಕೆಂಪು ಇರುವೆಗಳನ್ನು ತಿನ್ನುವುದಿಲ್ಲ. ಆದರೆ ಕಪ್ಪು ಇರುವೆಗಳನ್ನು ನೆಕ್ಕುತ್ತವೆ.

ಲಕ್ಷಣಗಳು : ಅತ್ಯಂತ ಗಮನಾರ್ಹವಾದ ಲಕ್ಷಣವೆಂದರೆ ದೇಹರಕ್ಷಣೆಗಾಗಿ ದೇಹದ ಮೇಲಿರುವ ಚಿಪ್ಪಿನ ಹೊದಿಕೆ. ದೇಹವು ಉದ್ದನಾಗಿದೆ ಮತ್ತು ಚೂಪಾಗಿದೆ. ತಲೆ ಚಿಕ್ಕದು ಮತ್ತು ಅದರ ಆಕಾರ ಶಂಕುವಿನಂತಿದೆ. ಕಣ್ಣು ಹಾಗೂ ಕಿವಿಗಳು ಸಣ್ಣವು. ದೇಹದ ಮೇಲೆಲ್ಲಾ ಮನೆಗೆ ಹೊದಿಸುವ ಹಂಚುಗಳಂತೆ ಜೋಡಣೆಗೊಂಡಿರುವ ಚಿಪ್ಪುಗಳ ಹೊದಿಕೆ ಇದೆ. ಮುಸುಡಿ(ಮೂತಿ), ಗಲ್ಲ, ಮುಖದ ಎರಡು ಪಕ್ಕಗಳಲ್ಲಿ, ಕುತ್ತಿಗೆ, ಹೊಟ್ಟೆ, ಕಾಲುಗಳ ಒಳಭಾಗಗಳ ಮಗ್ಗಲುಗಳಲ್ಲಿ ಚಿಪ್ಪುಗಳಿಲ್ಲ. ಚಿಪ್ಪುಗಳು ಕಡುಕಂದು, ಕಡಹಳದಿ ಕಂದು, ತಿಳಿ ಆಲಿವ್ ಬಣ್ಣ. ಚಿಪ್ಪುಗಳಿಲ್ಲದ ಭಾಗದಲ್ಲಿರುವ ಕೂದಲುಗಳು ಬಿಳಿಯಾಗಿವೆ. ಕೊಂಬಿನಂಥ ವಸ್ತುವಿನಿಂದ ಕೂಡಿದ ಈ ಹುರುಪೆ (ಶಲ್ಕ)ಗಳು ಬಹುಶಃ ಕೂದಲುಗಳೆಲ್ಲಾ ಕೂಡಿಕೊಂಡು ಜಡ್ಡುಗಟ್ಟಿ ಉಂಟಾಗಿರಬಹುದೆಂದು ಭಾವಿಸಲಾಗಿದೆ. ಹುರುಪೆಗಳನ್ನು ದೊಡ್ಡದಾಗಿ ವಿಸ್ತಾರಗೊಂಡ ಮತ್ತು ಚಪ್ಪಟೆಯಾದ ಮುಳ್ಳುಗಳೆಂದು ಪರಿಗಣಿಸಬಹುದು. ಚಿಪ್ಪುಗಳ ಮಧ್ಯೆ ಹಾಗೂ ದೇಹದ ಕೆಳಭಾಗದಲ್ಲಿ ನಿಬಿಡವಾಗಿ ಹರಡಿದ ಕೂದಲುಗಳಿವೆ. ಕೂದಲು ಮತ್ತು ಚರ್ಮ ಕಂದು. ನಾಲಿಗೆ ಬಹಳ ಅಂಟು ಅಂಟಾಗಿ ತೆಳುವಾಗಿದೆ ಮತ್ತು ಅದನ್ನು ಉದ್ದನಾಗಿ ಚಾಚಬಲ್ಲದು. ನಾಲಿಗೆಯು ಸರಿಸುಮಾರು ೫ ಮಿ.ಮೀ. ದಪ್ಪ ಪ್ರಬುದ್ಧ ಪ್ರಾಣಿಗಳು ನಾಲಿಗೆಯನ್ನು ೨೫ ಸೆಂ.ಮೀ. ಉದ್ದಕ್ಕೆ ಚಾಚಬಲ್ಲವು. ಮುಂಗಾಲುಗಳು ಹಿಂಗಾಲುಗಳಿಗಿಂತ ಸ್ವಲ್ಪ ಉದ್ದ, ದೃಢವಾಗಿವೆ. ಪ್ರತಿಯೊಂದು ಕಾಲಿನಲ್ಲಿ ಉದ್ದವಾದ ಬಾಗಿರುವ ಮತ್ತು ಮೊನಚಾದ ನಖಗಳುಳ್ಳ ೫ ಬೆರಳುಗಳಿವೆ. ಮುಂಗಾಲಿನ ೪ ನಖಗಳು ಹೆಚ್ಚು ಉದ್ದನಾಗಿವೆ. ಎರಡು ಕಾಲು ಭಂಗಿಯಲ್ಲಿ ನಡೆಯುತ್ತದೆ. ಅಪರೂಪವಾಗಿ ಬಾಲವೂ ನೆರವಿಗೆ ಬರಬಹುದು. ನೆಲದ ಮೇಲೆ ನಡೆಯುವಾಗ ನಿಧಾನವಾಗಿ ನಡೆಯುತ್ತದೆ. ಹಿಂಗಾಲುಗಳ ಪಾದಗಳನ್ನು ಊರಿ ನಡೆಯುತ್ತದೆ. ದೂರದವರೆಗೆ ನೋಡುವಾಗ ಹಿಂಗಾಲುಗಳ ಮೇಲೆ ಎದ್ದು ನಿಲ್ಲುತ್ತದೆ. ತನ್ನ ತೀಕ್ಷ್ಣವಾದ ಘ್ರಾಣಶಕ್ತಿಯಿಂದ ಹುತ್ತ ಮತ್ತು ಇರುವೆ ಗೂಡುಗಳನ್ನು ಮೂಸುತ್ತಾ ಕೀಟಗಳ ಇರಿವನ್ನು ಪತ್ತೆ ಹಚ್ಚಿ ಮುಂಗಾಲುಗಳ ನಖಗಳಿಂದ ಗೂಡುಗಳನ್ನು ಕೆದಕಿ, ತನ್ನ ಉದ್ದ ನಾಲಿಗೆಯನ್ನು ಒಳಕ್ಕೆ ಚಾಚಿ, ಅಲುಗಾಡಿಸಿ, ನಾಲಿಗೆಗೆ ಅಂಟಿಕೊಳ್ಳುವ ಇರುವೆಗಳನ್ನು ಕೀಟಗಳನ್ನು ಬಾಯೊಳಕ್ಕೆ ಸಾಗಿಸುತ್ತವೆ. ಗಂಡು- ಹೆಣ್ಣಿಗಿಂತ ದೊಡ್ಡದು. ಹೆಣ್ಣಿನಲ್ಲಿ ಅದರ ಎದೆಯ ಭಾಗದಲ್ಲಿ ಎರಡು ಮೊಲೆಗಳಿವೆ. ಹಗಲೆಲ್ಲಾ ಬಿಲದಲ್ಲಿ ತನ್ನ ದೇಹವನ್ನು ಚಂಡಿನಂತೆ ಸುತ್ತಿಕೊಂಡು ಬಾಲದಿಂದ ಮುಚ್ಚಿಕೊಂಡು ನಿದ್ರಿಸುತ್ತಿದ್ದು, ರಾತ್ರಿಯ ವೇಳೆ ಇರುವೆಗಳನ್ನರಿಸಿ ಹೊರಡುತ್ತದೆ. ಶತ್ರುಗಳು ಆಕ್ರಮಿಸಿದಾಗ ಹೀಗೆ ದೇಹವನ್ನು ಚಂಡಿನಂತೆ ಸುತ್ತಿಕೊಂಡು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತದೆ. ಈ ಸುತ್ತಿಕೊಂಡಿರುವ ದೇಹವನ್ನು ಬಿಡಿಸುವುದು ಬಹಳ ಕಷ್ಟ.

ಸಂತಾನಾಭಿವೃದ್ಧಿ : ಜನವರಿ ಮತ್ತು ಮಾರ್ಚ ತಿಂಗಳ ಕಾಲದಲ್ಲಿ ಮರಿ ಹಾಕುತ್ತವೆ. ಒಂದು ಸೂಲದಲ್ಲಿ ೧ ರಿಂದ ೩ ಮರಿಗಳು ಜನಿಸುತ್ತವೆ. ಹುಟ್ಟಿದಾಗ ಮರಿಯು ಸುಮಾರು ೦.೪೫ ಕೆ.ಜಿ. ತೂಗುತ್ತದೆ. ಮರಿಯ ಮೈಮೇಲಿನ ಚಿಪ್ಪುಗಳು ಮೃದುವಾಗಿರುತ್ತವೆ. ಮರಿಗಳು ಬೇಗ ಬೆಳೆಯುತ್ತವೆ. ಹೆಣ್ಣು ಮತ್ತು ಗಂಡುಗಳು ಜೀವಮಾನವಿಡೀ ಜೊತೆಯಾಗಿರುತ್ತವೆ. ಅಪಾಯ ಕಂಡಾಗ ತಾಯಿ ಮರಿಯನ್ನು ತನ್ನ ಸುರುಳಿಯಲ್ಲಿ ಮರೆಮಾಡಿಕೊಂಡು ರಕ್ಷಿಸುತ್ತದೆ. ಸಾಮಾನ್ಯವಾಗಿ ಮರಿಯನ್ನು ತಾಯಿ ತನ್ನ ಬಾಲದ ಮೇಲೆ ಹೊತ್ತು ತಿರುಗುತ್ತದೆ. ಆಗ ಬಾಲವನ್ನು ನೆಲದಿಂದ ಮೇಲಕ್ಕೆ ಎತ್ತಿ ಹಿಡಿದಿರುತ್ತದೆ.

ಸ್ವಭಾವ : ಇದು ನೆಲವಾಸಿಯಾದರೂ, ಮರಗಳನ್ನು ಸುಲಭವಾಗಿ ಹತ್ತಬಲ್ಲದು. ರೆಂಬೆಗಳಿಗೆ ಬಾಲವನ್ನು ಸುತ್ತಿ ಬಲವಾಗಿ ಹಿಡಿದುಕೊಳ್ಳುತ್ತದೆ. ನಖಗಳೂ ಕೂಡ ರೆಂಬೆಗಳನ್ನು ಹಿಡಿಯಲು ಸಹಾಯಕವಾಗಿದೆ. ೬೦೦-೮೦೦ ಮೀ ಎತ್ತರದಲ್ಲಿ ಮರಗಳಲ್ಲಿ ವಾಸಿಸಬಹುದು. ಕಣ್ಣುಗಳು ಸಣ್ಣದಾಗಿರುವುದರಿಂದ ದೃಷ್ಟಿ ಮಂದ. ಘ್ರಾಣೇಂದ್ರಿಯಗಳು ತೀಕ್ಷ್ಣವಾಗಿ ಚುರುಕಾಗಿವೆ. ಕಿವಿಗಳು ವಿಶೇಷವಾಗಿ ಬೆಳೆದಿಲ್ಲ. ನಿಶಾಚರಿ, ಉದ್ರೇಕಗೊಂಡಾಗ ಬುಸುಗುಟ್ಟುವಂತೆ ಶಬ್ದ ಮಾಡುತ್ತದೆ.

ಇತರೆ : ಇದರ ಜೀವನಕ್ರಮ, ಜೀವಾವಧಿ ಮತ್ತು ಸ್ವಾಭಾವಿಕ ವಸತಿ, ಸಂತಾನೋತ್ಪತ್ತಿ ಕ್ರಮ, ಸಾಮಾಜಿಕ ವರ್ತನೆಯ ಬಗ್ಗೆ ತಿಳಿಯದು. ಪಾದಗಾಮಿ. ಗುಧದ ಬಳಿ ಇರುವ ಗ್ರಂಥಿಗಳಿಂದ ಗಾಢವಾಸನೆಯ ಸ್ರಾವಿಕೆಯನ್ನು ಚಿಮ್ಮಿ ತನ್ನನ್ನು ರಕ್ಷಿಸಿಕೊಳ್ಳುತ್ತದೆ.

. ಗಣ : ಟ್ಯೂಬಿಲಿಡೆಂಟೇಟ

ಈ ಗಣಕ್ಕೆ ‘ಆರ್ಡ್‌ವಾರ್ಕ್’ ಎಂಬ ಒಂದೇ ಒಂದು ಜಾತಿಯ ಪ್ರಾಣಿ ಸೇರುತ್ತದೆ. ದಕ್ಷಿಣ ಅಮೇರಿಕಾ (ಆಫ್ರಿಕಾ)ಕ್ಕೆ ಸೀಮಿತವಾದ ಪ್ರಾಣಿ. ಅಲ್ಲಿನ ಭಾಷೆಯಲ್ಲಿ ಆರ್ಡ್‌ವಾರ್ಕ್‌ಎಂದರೆ ‘ಮಣ್ಣು ಹಂದಿ’ ಎಂದು ಹೆಸರು. ಹಂದಿ ಗಾತ್ರದ ಬಲಿಷ್ಠ ದೇಹದ ಪ್ರಾಣಿ. ಇದರ ಮೂತಿ ಉದ್ದವಾಗಿ ಕೊಳವೆಯಾಕಾರದಲ್ಲಿದೆ ಅದರ ತುದಿಯಲ್ಲಿ ದುಂಡಾದ ಮೂಗಿದೆ. ಉದ್ದವಾದ ಕಿವಿಗಳು ನೇರವಾಗಿ ನಿಂತಿರುತ್ತವೆ. ಉದ್ದ ಮತ್ತು ಚಾಚಬಲ್ಲ ನಾಲಿಗೆಯುಂಟು. ಮುಂಗಾಲುಗಳು ಮೋಟು. ದಪ್ಪ, ಇವಕ್ಕೆ ನಾಲ್ಕು ಬೆರಳುಗಳಿವೆ. ಉಗುರುಗಳೆನ್ನಬಹುದಾದ ರಚನೆಗಳು ಬೆರಳುಗಳ ಮೇಲಿವೆ. ಕೆಲವರು ಇವನ್ನು ಗೊರಸು ಎಂದು ಭಾವಿಸುತ್ತಾರೆ. ಹಿಂಗಾಲಿನಲ್ಲಿ ೫ ಬೆರಳುಗಳಿವೆ. ಹಲ್ಲುಗಳಿದ್ದರೂ ಅವಕ್ಕೆ ಎನಾಮಲ್ ಹೊದಿಕೆ ಇಲ್ಲ. ಹಲ್ಲಿನ ಡೆಂಟಿನ್ ಭಾಗದಲ್ಲಿ ನಳಿಕೆಗಳಂತಹ ರಂಧ್ರ ಗಳಿರುವುದರಿಂದ ಟ್ಯೂಬಿಲಿಡೆಂಟೇಟ ಎಂಬ ಹೆಸರು ಬಂದಿದೆ. ಮುಖ್ಯ ಆಹಾರ ಇರುವೆ, ಗೆದ್ದಲುಗಳು. ತಮ್ಮ ನಖಗಳಿಂದ ಭೂಮಿಯನ್ನು ಅಗೆಯಬಲ್ಲವು. ಪ್ರಾಣಿಗಳ ಸಂಬಂಧ ಸ್ಪಷ್ಟವಿಲ್ಲ.

. ಗಣ : ಪ್ರೈಮೇಟ್ಸ್ (Primates)
ಪ್ರಮುಖಿಗಳು

ಮನುಷ್ಯನೂ ಸೇರಿದಂತೆ ಕಾಡುಪಾಪ, ಮಂಗಗಳು, ವಾನರಗಳು ಸೇರುವ, ಸಸ್ತನಿಗಳಲ್ಲಿಯೇ ಅತ್ಯಂತ ಮುಂದುವರಿದ ಲಕ್ಷಣಗಳನ್ನು ತೋರುವ ಗಣ. ಪಾದಚರಿಗಳು, ಸರ್ವ ಭಕ್ಷಕಗಳು, ಶಾಖಾವಾಸಿಗಳು. ಕೈ ಮತ್ತು ಕಾಲಿನ ಹೆಬ್ಬೆರಳುಗಳು ಉಳಿದ ಬೆರಳುಗಳಲ್ಲಿ ನಖಗಳ ಬದಲು ಚಪ್ಪಟೆಯಾದ ಉಗುರುಗಳಿವೆ. ಹಸ್ತ, ಪಾದ ಮತ್ತು ಮುಖದ ಕೆಲವು ಭಾಗಗಳ ವಿನಹ ಉಳಿದೆಲ್ಲಾ ದೇಹಭಾಗಗಳು ಕೂದಲಿನಿಂದ ಆವೃತವಾಗಿವೆ. ಕಣ್ಣು ಗೂಡುಗಳು ಉಳಿದ ಸಸ್ತನಿಗಳಂತೆ ಪಕ್ಕದಲ್ಲಿರದೆ ಮುಂದಿವೆ ಮತ್ತು ಸಂಪೂರ್ಣವಾಗಿ ಮೂಳೆಗಳಿಂದ ಆವೃತವಾಗಿವೆ. ಕೇವಲ ಎರಡು ಸ್ತನಗಳಿದ್ದು ಅವು ಎದೆಯ ಭಾಗದಲ್ಲಿವೆ. ವೃಷಣಗಳು ಸ್ಕ್ರೋಟಮ್ ಚೀಲದಲ್ಲಿವೆ. ಶಿಶ್ನವು ನೇತಾಡುವ ರೀತಿಯದು. ಸೆರಬ್ರಮ್ ಭಾಗವು ವಿಶಾಲವಾಗಿ ಬೆಳೆದು ಅನೇಕ ಮಡಿಕೆಗಳಾಗಿ ನುಲಿದಿದೆ. ಸರಳವಾದ ಒಂದೇ ಪಾಲಿಯ ಗರ್ಭಕೋಶವಿದೆ. ಸಾಮಾನ್ಯವಾಗಿ ಒಮ್ಮೆಗೆ ಒಂದೇ ಒಂದು ಮರಿ ಹುಟ್ಟುತ್ತವೆ.

ಇದನ್ನು ಸಸ್ತನಿಗಳಲ್ಲಿಯೇ ಅತಿ ಉನ್ನತ ಗಣವೆಂದು ಮೊದಲು ಭಾವಿಸಲಾಗಿತ್ತು. ಆದರೆ ಪಳೆಯುಳಿಕೆಗಳ ಅಭ್ಯಾಸವು ಈ ಗಣ ಬಹಳ ಸರಳ, ಸಾಮಾನ್ಯ ರಚನೆಯನ್ನು ತೋರುವುದೆಂದೂ ಮತ್ತು ಇನ್ಸೆಕ್ಟಿವೋರ (ಕೀಟಾಹಾರಿ) ಗಣಕ್ಕೆ ನಿಕಟ ಸಂಬಂಧ ಹೊಂದಿರಬೇಕೆಂದೂ ಸೂಚಿಸುತ್ತದೆ. ಇವು ಇನ್ಸೆಕ್ಟಿವೋರಗಳಿಂದಲೇ ಉದ್ಭವಿಸಿರಬಹುದೆಂಬ ಸೂಚನೆ ದೊರಕುತ್ತದೆ. ಇದನ್ನು ಮೂರು ಮುಖ್ಯ ಉಪಗಣಗಳನ್ನಾಗಿ ವರ್ಗೀಕರಿಸಿದೆ.

ಉಪಗಣ – ೧ ಲೆಮೂರಾಯಿಡಿಯ : ಸಂಪೂರ್ಣವಾಗಿ ಶಾಖಾವಾಸಿ ಮತ್ತು ನಿಶಾಚರಿಗಳು ತಲೆಯಲ್ಲಿ ಚೂಪಾದ ಮೂತಿಯಿದೆ. ಬಾಲ ಇರಬಹುದು ಅಥವಾ ಇಲ್ಲದಿರಬಹುದು. ಇದ್ದರೂ ಅಪ್ಪು ಬಾಲವಲ್ಲ. ಕಾಡುಪಾಪ ಈ ಉಪಗಣಕ್ಕೆ ಸೇರುತ್ತದೆ ಮತ್ತು ಅದು ಕರ್ನಾಟಕದಲ್ಲಿ ದೊರಕುತ್ತದೆ.

ಉಪಗಣ – ೨ ಟಾರ್ಸಿಯಾಯಿಡಿಯ : ಈ ಉಪಗಣದ ಪ್ರಾಣಿಗಳು ಕರ್ನಾಟಕದಲ್ಲಿ ಇಲ್ಲ.

ಉಪಗಣ – ೩ ಆಂಥ್ರಪಾಯಿಡಿಯ : ಮಂಗಗಳು, ವಾನರಗಳು ಮತ್ತು ಮನುಷ್ಯ ಈ ಉಪಗಣಕ್ಕೆ ಸೇರುತ್ತಾರೆ. ಸಸ್ತನಿಗಳಲ್ಲಿಯೇ ಅತ್ಯಂತ ಸಂಘಟನೆ ಮತ್ತು ಉಚ್ಛ ಮಟ್ಟದಲ್ಲಿ ಬೆಳೆದ ಮಿದುಳನ್ನು ಹೊಂದಿವೆ. ಕೆಲವು ಜಾತಿಯ ಕೋತಿಗಳು ಕರ್ನಾಟಕದಲ್ಲಿ ದೊರಕುತ್ತವೆ. ಹಲ್ಲುಗಳ ಸಂಖ್ಯೆ ೩೨ ರಿಂದ ೩೬ರವರೆಗೆ ಬದಲಾಗುತ್ತದೆ. ಕಾಲುಗಳು ಮತ್ತು ಕೈಗಳೆರಡು ಅಪ್ಪುವಿಕೆಗೆ ಮಾರ್ಪಟ್ಟಿವೆ. ಮನುಷ್ಯನ ಹಿಂಗಾಲು ಇದಕ್ಕೆ ಅಪವಾದ. ಬೆರಳುಗಳಲ್ಲಿ ಉಗುರುಗಳಿವೆ. ಸೆರಬ್ರಲ್‌ಗೋಳಗಳು ವಿಶೇಷವಾಗಿ ಬೆಳೆದು ಸೆರೆಬೆಲ್ಲಮ್ ಭಾಗವನ್ನು ಮುಚ್ಚಿಕೊಂಡಿವೆ. ಭೂವಾಸಿಗಳು ಅಥವಾ ಶಾಖಾವಾಸಿಗಳು ಸಾಮಾನ್ಯವಾಗಿ ದಿನಚರಿಗಳು.

—- 

ಗಣ : ಪ್ರೈಮೇಟ್ಸ್
ಕುಟುಂಬ
: ಕೈರೋಮೈನೀ
ಉದಾ : ಕಾಡುಪಾಪ ಅಥವಾ ತೆಳ್ಳನೆಯ ಕಾಡುಪಾಪ (Slender Loris)
ಶಾಸ್ತ್ರೀಯ ನಾಮ : ಲೋರಿಸ್ ಟಾರ್ಡಿಗ್ರೇಡಸ್
(Loris tardigradus)

437_69_PP_KUH

ಕಾಡುಪಾಪವು ಅಪೂರ್ವವಾದ ಲಕ್ಷಣಗಳನ್ನು ಹೊಂದಿರುವ ಅಪರೂಪದ ಪ್ರಾಣಿ. ಇದು ಅನೇಕ ಲಕ್ಷಣಗಳಲ್ಲಿ ತನ್ನ ಹತ್ತಿರದ ಬಂಧುಗಳಾದ. ಮಂಗ, ವಾನರ ಮತ್ತು ಮನುಷ್ಯನಂತಹ ಪ್ರಾಣಿಗಳೊಂದಿಗೆ ಹೋಲಿಕೆಯನ್ನು ತೋರಿದರೂ ಅನೇಕ ಆದಿಮ ಲಕ್ಷಣಗಳನ್ನು ಇನ್ನೂ ಉಳಿಸಿಕೊಂಡಿದೆ. ಇದು ಬಿದಿರು ಮೆಳೆಗಳಲ್ಲಿ ವಾಸಿಸಿ, ಹೆಚ್ಚು ನಾಚಿಕೆಯ ಸ್ವಭಾವವನ್ನು ತೋರುವುದರಿಂದ ಕಾವ್ಯಮಯವಾಗಿ ಜಾನಪದದಲ್ಲಿ ಇದನ್ನು “ಬಿದಿರಮೇಗಳ ಚದುರೆ” ಎಂದು ಕರೆದಿದ್ದಾರೆ.

ವಿತರಣೆ ಮತ್ತು ಆವಾಸ : ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಕರ್ನಾಟಕದಲ್ಲಿ ಕಂಡುಬರುತ್ತದೆ. ನೀಲಗಿರಿ ಮರ, ಆಲದಮರ, ಅರಳಿಮರ, ಸರ್ವೇಮರಗಳು ಮತ್ತು ಹುಣಿಸೆ ಮರಗಳಲ್ಲಿ ಹೆಚ್ಚಾಗಿ ವಾಸಿಸುತ್ತವೆ. ಇವು ದಟ್ಟಕಾಡುಗಳಿಗೆ ಸೀಮಿತವಾಗಿರದೆ ತೆಳು ಕಾಡಿನಲ್ಲಿಯ ಮೈದಾನ ಪ್ರದೇಶಗಳಲ್ಲಿಯೂ ಕಂಡು ಬರುತ್ತವೆ.

ಗಾತ್ರ : ತಲೆ ಮತ್ತು ದೇಹದ ಉದ್ದ (೨೦-೨೫ ಸೆಂ.ಮಿ.) ೮ ರಿಂದ ೧೦ ಅಂಗುಲ. ಗಂಡಿನ ತೂಕ ೨೮೦-೩೪೦ ಗ್ರಾಂ. ಹೆಣ್ಣಿನ ತೂಕ ೨೨೫ ಗ್ರಾಂ.

ಆಹಾರ : ಸರ್ವಭಕ್ಷಕ. ಹಣ್ಣು, ಕಾಯಿ, ಕೀಟಗಳು, ಜೀರುಂಡೆ, ಮಿಡತೆ, ಸಣ್ಣಹಲ್ಲಿ, ಹಾವು ರಾಣಿ, ಸಣ್ಣಹಕ್ಕಿ, ಹಕ್ಕಿಗಳ ಮೊಟ್ಟೆಗಳು, ಮರಗಪ್ಪೆ ಮುಂತಾದವುಗಳನ್ನು ತಿನ್ನುತ್ತದೆ. ಸಾಕಿದ ಕಾಡುಪಾಪಗಳು ಹಾಲು, ಹಣ್ಣು ಸೇವಿಸುವುದುಂಟು. ಕಾಡುಗಳಲ್ಲಿ ಹೇರಳವಾಗಿ ಬೆಳೆಯುವ ಲಂಟಾನ ಗಿಡಗಳ ಹಣ್ಣುಗಳು ಇದಕ್ಕೆ ಅತಿ ಪ್ರಿಯ.

ಲಕ್ಷಣಗಳು : ಕಾಡುಪಾಪಗಳು ನೋಡುವುದಕ್ಕೆ ಅಳಿಲಿನಂತೆ ಕಾಣುತ್ತವೆ. ಆಕಾರದಲ್ಲಿ ಮಂಗಗಳಿಗಿಂತ ಚಿಕ್ಕವು. ದುಂಡುತಲೆ, ಗಿಡ್ಡಮೂತಿ, ಮೂತಿಯ ಬಣ್ಣ ಬಿಳಿ. ಕಿವಿಗಳು ದೊಡ್ಡವು. ತೆಳುವಾಗಿ ದುಂಡಗಿವೆ ಮತ್ತು ಅಂಚಿನಲ್ಲಿ ಬೆತ್ತಲೆ (ತುಪ್ಪುಳು ಇಲ್ಲ). ಇದರ (ಮುಖ್ಯ) ಪ್ರಧಾನ ಲಕ್ಷಣವೆಂದರೆ ಹೊಳೆಯುವ ದುಂಡನೆಯ ದೊಡ್ಡ ಕಣ್ಣುಗಳು. ಕಣ್ಣುಗಳು ಸುತ್ತಲೂ ಕಪ್ಪು ಅಥವಾ ಕಂದು ಬಣ್ಣದ ಉಂಗುರಗಳಿವೆ. ಕಣ್ಣುಗಳು ಸೂರ್ಯನ ಬೆಳಕನ್ನು ಸಹಿಸಲಾರವು. ದೇಹದ ಮೇಲೆಲ್ಲಾ ಮೃದುವಾದ ಉಣ್ಣೆಯಂತಹ ತುಪ್ಪುಳವಿದೆ. ತುಪ್ಪುಳ ಹಳದಿ ಮಿಶ್ರಿತ ಬೂದು ಅಥವಾ ಕಡುಕಂದು ಬಣ್ಣವಾಗಿರಬಹುದು, ಹೊಟ್ಟೆಯ ಭಾಗದಲ್ಲಿ ಬೆಳ್ಳಿ ಬೂದು. ಕೈಕಾಲುಗಳು ಉದ್ದವಾಗಿ ಬಡಿಗೆಯಂತಿವೆ. ಹಿಂಗಾಲುಗಳು ಮುಂಗಾಲುಗಳಿಗಿಂತಲೂ ಚಿಕ್ಕವು, ಕೈಗಳಲ್ಲಿ ಹೆಬ್ಬೆರಳು ದೊಡ್ಡದಾಗಿದೆ. ತೋರು ಬೆರಳು ಚಿಕ್ಕದು ಮತ್ತು ಚೆನ್ನಾಗಿ ಬೆಳೆದಿದೆ. ಕೈಕಾಲುಗಳೆರಡರಲ್ಲಿಯೂ ಹೆಬ್ಬೆರಳು ಉಳಿದ ನಾಲ್ಕು ಬೆರಳುಗಳಿಂದ ವಿರುದ್ಧ ದಿಕ್ಕಿನಲ್ಲಿದ್ದು ಮರದ ರೆಂಬೆಗಳನ್ನು ಹಿಡಿಯಲು ಅನುಕೂಲವಾಗಿವೆ. ಕಾಲಿನ ಎರಡನೆಯ ಬೆರಳುಗಳಲ್ಲಿ ನಖಗಳಿವೆ. ಉಳಿದ ಬೆರಳುಗಳಲ್ಲಿ ಉಗುರುಗಳಿವೆ. ಹಸ್ತ ಮತ್ತು ಪಾದಗಳು ಆಸರೆಯನ್ನು ಹಿಡಿದುಕೊಳ್ಳಲು ಅನುವಾಗಿವೆ. ಇದರಿಂದಾಗಿ ಇವು ಬೇಗನೆ ಯಾವುದಾದರೂ ಆಸರೆಯನ್ನು ಅಥವಾ ವಸ್ತುವನ್ನು ಹಿಡಿದು ಕೊಳ್ಳಬಲ್ಲದು. ಇವುಗಳಿಗೆ ಬಾಲವಿಲ್ಲ. ತುಟಿಗಳು ವಸಡುಗಳಿಗೆ ಅಂಟಿಕೊಂಡಿವೆ ಮತ್ತು ಅವುಗಳನ್ನು ಚಾಚಲಾಗುವುದಿಲ್ಲ.
ದಂತ ಸೂತ್ರ ೨, ೧, ೩, ೩ / ೨, ೧, ೩, ೩

ಸಂತಾನಾಭಿವೃದ್ಧಿ : ಹೆಣ್ಣು ವರ್ಷಕ್ಕೆ ಎರಡು ಸಾರಿ ಬೆದೆಗೆ ಬರುತ್ತದೆ ಮತ್ತು ಎರಡು ಸಾರಿ ಮರಿಗಳನ್ನು ಹಾಕುತ್ತದೆ. ಪ್ರೈಮೇಟ್ ಗಣಕ್ಕೆ ಸೇರಿದ್ದರೂ, ಇದು ಉಳಿದೆಲ್ಲ ಪ್ರೈಮೇಟ್ಸ್‌ಗಳು ರಜಸ್ಸು ಆವರ್ತವನ್ನು ತೋರುವಂತೆ, ಇದು ರಜಸ್ಸು ಆವರ್ತವನ್ನು ತೋರದೆ ಉಳಿದ ಇನ್ನಿತರ ಸಸ್ತನಿಗಳಂತೆ ಈಸ್ಟ್ರಸ್ ಆವರ್ತವನ್ನು ತೋರದೆ ಉಳಿದ ಇನ್ನಿತರ ಸಸ್ತನಿಗಳಂತೆ ಈಸ್ಟ್ರಸ್ ಆವರ್ತವನ್ನು ತೋರಿಸುತ್ತದೆ. ಒಂದು ಸೂಲಿಗೆ ೧ ಅಥವಾ ಅಪರೂಪವಾಗಿ ಎರಡು ಮರಿಗಳು ಹುಟ್ಟಬಹುದು. ಮರಿಯು ತನ್ನನ್ನು ತಾನೇ ಕಾಪಾಡಿಕೊಳ್ಳುವಂತೆ ಆಗುವವರೆಗೆ ತಾಯಿ ಅದನ್ನು ಹೊತ್ತು ತಿರುಗುತ್ತದೆ. ಅಲ್ಲಿಯವರೆಗೆ ತಾಯಿಯ ಪಾಲನೆಯಲ್ಲಿಯೇ ಬೆಳೆಯುತ್ತದೆ. ಇದರ ಪ್ಲಾಸೆಂಟ ಬಹಳ ಹಿಂದುಳಿದ ಲಕ್ಷಣವನ್ನು ತೋರುತ್ತದೆ. ಗರ್ಭಾವಧಿಯ ಕಾಲ ೫-೪ ತಿಂಗಳು. ಹೆಣ್ಣಿನಲ್ಲಿ ಕೆಲವು ಜೊತೆ ಮೊಲೆಗಳು ಎದೆಯ ಮತ್ತು ಉದರದ ತಳಭಾಗದಲ್ಲಿ ಹರಡಿವೆ.

ಸ್ವಭಾವ : ಇವು ಒಂಟಿಯಾಗಿ ಅಥವಾ ಜೋಡಿಯಾಗಿ, ಹಾಗೂ ಅಪರೂಪವಾಗಿ ಗುಂಪುಗಳಲ್ಲಿ ವಾಸಿಸುತ್ತವೆ. ಗೋಪ್ಯ ಸ್ವಭಾವದ ನಿಶಾಚರಿಗಳು. ಹಗಲಿನಲ್ಲಿ ನೆರಳಿನಲ್ಲಿ ಮರದ ರೆಂಬೆಗಳ ಪೊಟರುಗಳಲ್ಲಿ ಎಲೆ ತುಂಬಿದ ರೆಂಬೆಗಳ ತುದಿಯಲ್ಲಿ ನಿದ್ರಿಸಿ ಕಾಲ ಕಳೆಯುತ್ತವೆ. ನಿದ್ರಿಸುವಾಗ ತಲೆಯನ್ನು ಕಾಲುಗಳ ಮಧ್ಯೆ ತೂರಿಸಿ ಚೆಂಡಿನಂತೆ ಸುತ್ತಿಕೊಂಡು ಉಂಡೆಯಾಗಿ ಮಲಗುತ್ತವೆ. ಇವುಗಳ ನಡಿಗೆ ತುಂಬಾ ನಿಧಾನ. ಇವು ಬಲು ನಾಚಿಕೆಯ ಸ್ವಭಾವದವುಗಳು ಮತ್ತು ಅಂಜುಬುರುಕ ಪ್ರಾಣಿಗಳು. ಹೊಸ ಪರಿಸರಗಳಲ್ಲಿ ಮತ್ತು ಪ್ರಖರವಾದ ಬಿಸಿಲಿನಲ್ಲಿ ತುಂಬಾ ಎಚ್ಚರಿಕೆಯಿಂದ ನಿಧಾನವಾಗಿ ಓಡಾಡುತ್ತವೆ. ಆದರೆ ಮಬ್ಬು ಬೆಳಕಿನಲ್ಲಿ (ಮುಚ್ಚಂಜೆ) ಮತ್ತು ಪರಿಚಿತ ಸ್ವಕ್ಷೇತ್ರದಲ್ಲಿ ಚುರುಕಾಗಿ ಓಡಾಡುವುದುಂಟು. ಇವು ಸಿಡುಕಿನ ಸ್ವಭಾವ ತೋರುತ್ತವೆ. ರೆಂಬೆಗಳು ಮತ್ತು ಎಲೆಗಳ ನಡುವೆ ಅಡಗಿಕೊಳ್ಳಲು ಸಾಧ್ಯವಾಗದಿದ್ದಾಗ ತಮ್ಮ ಮುಖವನ್ನು ಹಸ್ತಗಳಿಂದ ಮುಚ್ಚಿಕೊಳ್ಳುತ್ತವೆ. ಇವು ಪ್ರದೇಶ ಪ್ರಭುತ್ವ ನಡತೆಯನ್ನು ಮತ್ತು ನಿವಾಸದ ಕ್ಷೇತ್ರಕ್ಕೆ ಸೀಮಿತವಾಗಿ ಉಳಿಯುವ ಸ್ವಭಾವವನ್ನು ತೋರುತ್ತವೆ. ಮೂತ್ರದ ಮೂಲಕ ತನ್ನ ನೆಲೆಯ ಹದ್ದನ್ನು ನಿರ್ಧರಿಸುತ್ತದೆ. ಇವು ಹಾವಾಡಿಗರ ಪ್ರೀತಿಯ ಪ್ರಾಣಿಗಳು. ಇವುಗಳಿಗೆ ಸಂಬಂಧಿಸಿದಂತೆ ಅನೇಕ ಮೂಢನಂಬಿಕೆಗಳಿವೆ. ಇವುಗಳ ದೇಹ ಭಾಗಗಳಿಗೆ ಔಷಧೀಯ ಗುಣ ಇವೆ ಎಂದು ನಂಬುತ್ತಾರೆ. ಇವುಗಳ ಕಣ್ಣುಗಳಿಗೆ ಕಾಮ ಲೋಲುಪ ಶಕ್ತಿ ಇದೆ ಎಂದು ನಂಬುತ್ತಾರೆ ಮತ್ತು ನೇತ್ರ ಸಂಬಂಧವಾದ ರೋಗಗಳಿಗೆ ಇವುಗಳನ್ನು ಬಳಸುತ್ತಾರೆ. ಈ ಗುಣದಿಂದಾಗಿ ಇವುಗಳನ್ನು ಸಿಕ್ಕಾಪಟ್ಟೆ ಕೊಲ್ಲಲಾಗುತ್ತಿದೆ.

ಕಾಡುಪಾಪ ಆಹಾರ ಪ್ರಾಣಿಯನ್ನು ಕಂಡಾಗ ಅದು ತನ್ನ ಹಿಡಿತಕ್ಕೆ ಸಿಗುವವರೆಗೆ ಮೌನವಾಗಿ ಕಾದಿದ್ದು, ತನ್ನ ಹಿಂಗಾಲುಗಳ ಮೇಲೆ ಎದ್ದು ನಿಂತು ಆಹಾರ ಪ್ರಾಣಿಯ ಮೇಲೆ ಎಗರಿ ಬೇಗನೆ ಹಿಡಿದುಕೊಳ್ಳುತ್ತದೆ. ಇದು ಸದಾ ಆಕ್ರಮಣಕ್ಕೆ ಸಿದ್ಧವಾಗಿರುತ್ತದೆ. ನಡೆಯುವಾಗ ಮರದ ಕವಲುಗಳ ನಡುವೆ ನಿಧಾನವಾಗಿ ಎಚ್ಚರಿಕೆಯಿಂದ ಒಂದು ಪಕ್ಕದ ಕಾಲನ್ನು ಆ ಪಕ್ಕದ ಕೈಯವರೆಗೆ ಎತ್ತಿಟ್ಟು ಬಾಗಿ ಮುಂಗಾಲನ್ನು ಮುಂದಕ್ಕೆ ಎತ್ತಿಡುತ್ತಾ ನಡೆಯುತ್ತದೆ. ಆದುದರಿಂದ ಹೆಚ್ಚಾಗಿ ದಕ್ಷಿಣ ಭಾರತದ ಕಾಡುಗಳಲ್ಲಿ ವಿಶೇಷವಾಗಿ ಕರ್ನಾಟಕದ ನೈರುತ್ಯ ಭಾಗದಲ್ಲಿರುವ ದಟ್ಟ ಕಾಡುಗಳಲ್ಲಿ ಕಂಡುಬರುತ್ತವೆ. ಇವು ಕ್ಷೀಣವಾದ ಕಿಚಕಿಚ ಶಬ್ದ ಮಾಡುತ್ತವೆ ಮತ್ತು ಗುರುಗುಟ್ಟುತ್ತವೆ.

ಇದು ಇಂದು ಅಪಾಯದ ಅಂಚಿನಲ್ಲಿರುವ ಮತ್ತು ಕಾನೂನಿನಿಂದ ರಕ್ಷಿಸಲ್ಪಟ್ಟಿರುವ ಪ್ರಾಣಿ.

ಇದಕ್ಕೆ ನೀರನ್ನು ಕಂಡರೆ ಭಯ. ಕಾಡುಪಾಪಗಳ ಹತ್ತಿರದ ಸಂಬಂಧಿಗಳು ಜಾವ, ಮಲಯ ಪರ್ಯಾಯ ದ್ವೀಪಗಳಲ್ಲಿ ಕಂಡು ಬರುತ್ತವೆ. ಅಲ್ಲಿಯ ಮೂಲ ನೆಲೆಯಿಂದ ದಕ್ಷಿಣ ಭಾರತದ ಕರ್ನಾಟಕವನ್ನು ಇದು ಹೇಗೆ ಬಂದು ತಲುಪಿ ನೆಲೆಸಿತು ಎಂಬುದು ವಿಕಾಸ ತಜ್ಞರು ವಿವರಿಸಲಾಗದ ಸೋಜಿಗದ ಸಂಗತಿಯಾಗಿ ಉಳಿದಿದೆ. ಏಕೆಂದರೆ ಇವು ನೆಲದ ಮೇಲೆ ವಲಸೆ ಬಂದಿದ್ದರೆ ದಾರಿಯಾದ ಬಂಗಾಳ, ಒರಿಸ್ಸಾಗಳಲ್ಲಿ ಯಾವ ಕುರುಹೂ ಇಲ್ಲ.

ಇದರಲ್ಲಿ ಎರಡು ಉಪಪ್ರಭೇದಗಳಿವೆ. ಒಂದು ಲೋರಿಸ್ ಟಾರ್ಡಿಗ್ರೇಡಸ್ ಲಿಡಕೇರಿಯಾನ್ಸಸ್(L. t. lydekkerianus).ಮತ್ತುಇನ್ನೊಂದು ಲೋರಿಸ್ ಟಾರ್ಡಿಗ್ರೇಡಸ್ ಮಲಬಾರಿಕಸ್. ಇದು ಕರ್ನಾಟಕದ ಬೆಂಗಳೂರು, ಕೋಲಾರ, ತುಮಕೂರು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಿಗೆ ಸೀಮಿತವಾಗಿವೆ. ಇವು ಈ ಪ್ರದೇಶಗಳ ಕಾಡುಗಳಲ್ಲಿ ವಾಸಿಸುತ್ತವೆ. ಇದರ ತುಪ್ಪುಳು ಮೃದು ಮತ್ತು ಕಡುಬೂದಿನಿಂದ ತಿಳಿ ಕಂದಿನವರೆಗೆ ಬದಲಾಗುತ್ತದೆ. ಈ ತುಪ್ಪುಳನ್ನು ಬೆಳ್ಳಿಯ ಬಣ್ಣದ ಕೂದಲುಗಳು ಚಂದವಾಗಿ ಕಾಣುವಂತೆ ಮಾಡಿವೆ. ಇವು ಸಾಮಾನ್ಯವಾಗಿ ಅವಳಿ ಮರಿಗಳನ್ನು ಹಾಕುತ್ತವೆ.

ಲೋರಿಸ್ ಟಾರ್ಟಿಗ್ರೇಡಸ್ ಮಲಬಾರಿಕಸ್ (L. t. malabaricus) ಇದು ದಕ್ಷಿಣ ಭಾರತದ ವೈನಾಡ್, ಕೊಡಗು, ದಕ್ಷಿಣ ಕನ್ನಡ, ಉಡುಪಿ ಕಾರವಾರ, ಕರಾವಳಿಯ ಉದ್ದಕ್ಕೂ ಮತ್ತು ಇತರ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಹರಡಿದೆ. ಇದು ತಿರುವಾಂಕೂರು ಪ್ರದೇಶದಲ್ಲಿಯೂ ಕಂಡುಬರುತ್ತದೆ. ಇದು ಗಾತ್ರದಲ್ಲಿ ಸಣ್ಣದು ಇದರ ತುಪ್ಪುಳು ಮೃದು, ನೆಲಕಂದು ಬಣ್ಣ ಹೆಚ್ಚು ಒತ್ತಾಗಿಲ್ಲ ಮತ್ತು ಉಣ್ಣೆಯ ರೀತಿಯ ತುಪ್ಪುಳು. ಇದು ಒಂದು ಸೂಲದಲ್ಲಿ ಒಂದು ಮರಿಯನ್ನು ಮಾತ್ರ ಹಾಕುತ್ತದೆ. ಈ ಉಪಪ್ರಭೇದವು ಕೇರಳದ ಕಾಡುಗಳ ಮೂಲಕ ಕೊಡಗನ್ನು ತಲುಪಿದೆ.