ಗಣ : ರೊಡೆನ್ಷಿಯ
ಕುಟುಂಬ : ಸೈಯುರಿಡೀ
ಉದಾ : ಕೇಶ ಅಳಿಲು ಅಥವಾ ಭಾರತದ ದೈತ್ಯ ಅಳಿಲು
(Indian giant squirrel)
ಶಾಸ್ತ್ರೀಯ ನಾಮ : ರಟುಫ ಇಂಡಿಕ (Ratufa indica)

451_69_PP_KUH

ವಿತರಣೆ ಮತ್ತು ಆವಾಸ : ವೃಕ್ಷವಾಸಿಗಳು. ನಿತ್ಯಹರಿದ್ವರ್ಣ, ಎಲೆ ಉದುರುವ, ಅರೆನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಮಾತ್ರ ವಾಸಿಸುತ್ತವೆ. ಎತ್ತರವಾದ ಮರಗಳ ತುದಿಗಳಲ್ಲಿದ್ದು ನೆಲದ ಮೇಲೆ ಬರುವುದು ಅಪರೂಪ. ಇವು ಒಂದು ಮರದಿಂದ ಇನ್ನೊಂದು ಮರಕ್ಕೆ ಅದ್ಭುತವಾಗಿ ಜಿಗಿಯುತ್ತವೆ. ಉತ್ತರ, ದಕ್ಷಿಣ ಕನ್ನಡ ಜಿಲ್ಲೆಗಳ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಕಂಡುಬರುತ್ತವೆ.

ಗಾತ್ರ : ತಲೆ ಮತ್ತು ದೇಹದ ಉದ್ದ (೩೫-೪೦ ಸೆಂ.ಮೀ.) ೧೪-೧೬ ಅಂಗುಲ, ಬಾಲವೂ ಅಷ್ಟೇ ಉದ್ದ ಅಥವಾ ತುಸು ಉದ್ದ. ೧.೫ ರಿಂದ ೨ ಕೆ.ಜಿ. ತೂಕ.

ಆಹಾರ : ಸಸ್ಯಾಹಾರಿಗಳು. ಹಣ್ಣು, ಕಾಯಿ, ಬೀಜಗಳು ಇವುಗಳ ಮುಖ್ಯ ಆಹಾರ. ಕೆಲವು ಮರಗಳ ತೊಗಟೆ, ಎಲೆ, ಚಿಗರುಗಳನ್ನು ತಿನ್ನುತ್ತವೆ. ಕೀಟಗಳು ಮತ್ತು ಪಕ್ಷಿಗಳ ಮೊಟ್ಟೆಗಳನ್ನು ತಿನ್ನುವುದುಂಟು.

ಲಕ್ಷಣಗಳು : ಮೈಬಣ್ಣ ಹೊಳಪು ಕಪ್ಪು, ತೆಳು ಹಳದಿ ಅಥವಾ ಕಂದು. ಬೆನ್ನಿನ ಭಾಗ ಮತ್ತು ಬಾಲ ಬೂದು ಅಥವಾ ಗಾಡಕಂದುಬೂದು ಅಥವಾ ಅಲ್ಲಲ್ಲಿ ಬಿಳುಪಿದ್ದು ಬೆರೆತ ಬಣ್ಣ ಕಾಣಬಹುದು. ವಾಸಿಸುವ ಸ್ಥಳವನ್ನನುಸರಿಸಿ ಇದರ ಮೈಬಣ್ಣ ಬದಲಾಗುವುದುಂಟು. ಹೊಟ್ಟೆಯ ಬಾಗ ಮಾಸಲು ಹಳದಿ. ಕಾಲುಗಳಲ್ಲಿ ಐದೈದು ಬೆರಳುಗಳಿವೆ. ಮುಂದಿನ ಕಾಲಿನ ಮೊದಲ ಬೆರಳು ಗಿಡ್ಡ. ಇವುಗಳ ಸಸ್ಯಾಹಾರಕ್ಕೆ ಅನುವಾಗುವಂತೆ ಹಲ್ಲುಗಳು ಮಾರ್ಪಟ್ಟಿವೆ. ಕೋರೆಹಲ್ಲುಗಳು ಇಲ್ಲ. ದಂತಾವ(ಡಯಸ್ಟೆಮ)ಕಾಶವಿದೆ. ದಂತಸೂತ್ರ ೧/೧, ೦/೦, ೨/೧, ೩/೩. ಬಾಲ ಉದ್ದವಾದ ಕೂದಲುಗಳಿಂದ ಕೂಡಿದ್ದು ಪೊದೆಯಂತಿರುತ್ತದೆ. ಕಿವಿಗಳು ದುಂಡಾಗಿವೆ ಮತ್ತು ಚುರುಕಾಗಿವೆ. ಹಸ್ತಗಳು ತುಂಬಾ ಅಗಲವಾಗಿವೆ. ಮತ್ತು ಹಿಡಿದುಕೊಳ್ಳಲು ಅನುಕೂಲವಾಗುವಂತೆ ಮೆತ್ತೆಯು ವಿಸ್ತರಿಸಿದೆ. ಉದ್ದವಾದ ಮತ್ತು ಬಲವಾದ ನಖಗಳಿವೆ.

ಸಂತಾನಾಭಿವೃದ್ಧಿ : ಮಾರ್ಚ-ಎಪ್ರೀಲ್, ಸೆಪ್ಟೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಮರಿಹಾಕುತ್ತವೆ. ಮರದ ತುದಿಯಲ್ಲಿ ರೆಂಬೆಗಳ ಮಧ್ಯೆ ಎಲೆ, ಪುರಲೆಗಳಿಂದ ದುಂಡಾಗಿ ಸಾಕಷ್ಟು ಆಳವಾದ ಗೂಡುಕಟ್ಟಿ ಮರಿ ಇಡುತ್ತವೆ. ಈ ಗೂಡುಗಳನ್ನು ವಿಶ್ರಮಿಸಿಕೊಳ್ಳುವುದಕ್ಕೂ ಉಪಯೋಗಿಸಿಕೊಳ್ಳುತ್ತವೆ. ಉತ್ತರ ಕನ್ನಡದ ಜಿಲ್ಲೆಗಳಲ್ಲಿ ಮರಿಗಳು ಮಾರ್ಚ ತಿಂಗಳಲ್ಲಿ ಕಾಣಿಸಿಕೊಂಡಿವೆ. ಗರ್ಭಾವಧಿ ೨೮ ದಿವಸಗಳು.

ಸ್ವಭಾವ : ಇವು ತುಂಬಾ ಚಟುವಟಿಕೆಯ ಚುರುಕು ಪ್ರಾಣಿಗಳು ಬೆಳ್ಳಿಗೆ ಮತ್ತು ಸಂಜೆ ಹೊತ್ತಿನಲ್ಲಿ ಹೆಚ್ಚು ಚಟುವಟಿಕೆಯಿಂದಿದ್ದು, ಮಧ್ಯಾಹ್ನದಲ್ಲಿ ವಿಶ್ರಾಂತಿ ಪಡೆಯುತ್ತವೆ. ವಿಶ್ರಾಂತಿ ತೆಗೆದುಕೊಳ್ಳುವಾಗ ಅಳಿಲು ರೆಂಬೆಯೊಂದರ ಮೇಲೆ ಮಲಗಿ, ಬಾಲ ನೇತು ಬಿದ್ದಿರುವುದನ್ನು ಕಾಣಬಹುದು. ಹವೆ ಅನುಕೂಲವಾಗಿಲ್ಲದಿದ್ದರೆ ಗೂಡುಗಳಲ್ಲಿ ಉಳಿದು ವಿಶ್ರಾಂತಿ ಪಡೆಯುತ್ತವೆ. ಇವು ತುಂಬಾ ನಾಚಿಕೆಯ ಸ್ವಭಾವದ ಅಂಜುಬುರುಕ ಪ್ರಾಣಿಗಳು. ಇವುಗಳನ್ನು ಕಾಣುವುದು ತುಂಬಾ ಕಷ್ಟ. ಇವುಗಳ ದರ್ಶನಕ್ಕಿಂತ ಇವುಗಳುಂಟು ಮಾಡುವ ಕೀಚಲು ಧ್ವನಿಯಿಂದ ಇವುಗಳ ಇರಿವನ್ನು ತಿಳಿಯಬಹುದು. ಒಂದು ಅಳಿಲು ಶಬ್ದಮಾಡ ತೊಡಗಿದರೆ ಆ ಪ್ರದೇಶದಲ್ಲಿರುವ ಇತರ ಅಳಿಲುಗಳು ಪ್ರತಿಕ್ರಿಯಿಸಿ ಶಬ್ದ ಮಾಡತೊಡಗುತ್ತವೆ. ಕೋತಿಗಳಂತೆ ಇವು ಬೊಗಳುತ್ತವೆ. ಬೈಯುತ್ತವೆ ಮತ್ತು ಅಪಾಯಕಂಡಾಗ ಎಚ್ಚರಿಕೆಯ ಧ್ವನಿ ಮಾಡುತ್ತವೆ. ಹೆದರಿದಾಗ ಓಡಿ ಹೋಗುವುದರ ಬದಲು ದಪ್ಪ ರೆಂಬೆಯೊಂದರ ಮೇಲೆ ಅಪ್ಪಿ ಉಳಿಯುವುದು ಅಥವಾ ಅದರ ಹಿಂದೆ ಸರಿದು ಅವಿತುಕೊಳ್ಳುವುದು. ಕೆಲವೊಮ್ಮೆ ಮರದ ಕಾಂಡದ ಮೇಲೆ ಜಾರಿ ಕೆಳಗಿಳಿದು ಕೆಳಗಿನ ಪೊದರುಗಳಲ್ಲಿ ಕಣ್ಮರೆಯಾಗಬಹುದು. ಮರದಿಂದ ಮರಕ್ಕೆ ಜಿಗಿಯುತ್ತವೆ. ಜಿಗಿಯುವಾಗ ಕಾಲುಗಳನ್ನು ಹರಡಿ ಒಮ್ಮೆಗೆ ಸುಮಾರು ೨೦ ಅಡಿ ದೂರದವರೆಗೆ ನೆಗೆಯುತ್ತವೆ.

ಶಾಖಾವಾಸಿಗಳು ಮತ್ತು ತುಂಬಾ ಚುರುಕಾದ ಪ್ರಾಣಿಗಳು. ಒಂಟಿಯಾಗಿರುತ್ತವೆ ಅಥವಾ ಜೊತೆಯಾಗಿರುತ್ತವೆ. ಕಾಡಿನ ದಟ್ಟ ಮರಗಳ ನಡುವೆ ಮರೆಯಾಗಿರುತ್ತವೆ. ಶತ್ರುಗಳು ತಲುಪಲಾರದಂತಹ ಮರದ ರೆಂಬೆಗಳ ತುದಿಗಳಲ್ಲಿ, ಅದರಲ್ಲೂ ಚಿಕ್ಕ ತೆಳು ರೆಂಬೆಗಳ ನಡುವೆ ಕಡ್ಡಿಗಳು ಎಲೆಗಳನ್ನು ಬಳಸಿ ಗುಂಡಾದ ಗೂಡುಗಳನ್ನು ಕಟ್ಟುತ್ತವೆ. ಮರದ ಎಲೆಗಳು ಉದುರಿದಾಗ ಈ ಗೂಡುಗಳು ಎದ್ದು ಕಾಣುತ್ತವೆ.

ಇದರಲ್ಲಿ ಅನೇಕ ಉಪಪ್ರಭೇದಗಳಿವೆ.

ರಟುಫ ಇಂಡಿಕ ಇಂಡಿಕ : ಪಶ್ಚಿಮ ಘಟ್ಟಗಳು, ಉತ್ತರ ಕನ್ನಡ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಕಂಡುಬರುತ್ತವೆ.

ರಟುಫ ಇಂಡಿಕ ಮ್ಯಾಕ್ಸಿಮ : ನೀಲಗಿರಿ, ಪಳನಿ ಬೆಟ್ಟಗಳು ಮತ್ತು ಮಲಬಾರ್ ಪ್ರದೇಶಗಳಲ್ಲಿ ಕಾಣಬರುತ್ತವೆ.

ರಟುಫ ಇಂಡಿಕ ಬೆಂಗಾಲೆನ್ಸಿಸ್ : ಮೈಸೂರಿನಲ್ಲಿ ದೊರಕುತ್ತದೆ.

ರಟುಫ ಇಂಡಿಕ ಡೀಲ್‌ಬಾಟ : (R. i. dealbata)

ರಟುಫ ಇಂಡಿಕ ಎಲ್ಫಿನ್‌ಸ್ಟೋನಿ (R. i. elpinstoni) : ಇವು ಪಶ್ಚಿಮ ಘಟ್ಟಗಳಲ್ಲಿ ವಾಸಿಸುತ್ತವೆ.

ರಟುಫ ಮ್ಯಾಕ್ರೂರ (Ratufa macroura) : (ಭಾರತದ ನರೆಗೂದಲಿನ ದೈತ್ಯ ಅಳಿಲು)

ಇದು ದಕ್ಷಿಣ ಭಾರತದ ಬೆಟ್ಟಗುಡ್ಡಗಳಲ್ಲಿ ವಾಸಿಸುತ್ತದೆ. ಕಿವಿಯಲ್ಲಿ ಕುಚ್ಚು ಕೂದಲುಗಳಿವೆ. ಇದು ವರ್ಷದಲ್ಲಿ ಅನೇಕ ಬಾರಿ ಮರಿ ಹಾಕುತ್ತದೆ. ಒಂದು ಸೂಲದಲ್ಲಿ ೧ ಅಥವಾ ೨ ಮರಿಗಳನ್ನು ಹಾಕುತ್ತವೆ.

—-

ಗಣ : ರೊಡೆನ್ಷಿಯ
ಕುಟುಂಬ : ಸೈಯುರಿಡೀ
ಉದಾ : ಮೂರು ಮತ್ತು ಐದು ಪಟ್ಟೆಯ ತಾಳೆ ಅಳಿಲು
(Three Striped plam squirrel)
ಶಾಸ್ತ್ರೀಯ ನಾಮ : ಫುನಂಬುಲಸ್ ಪಾಮೇರಮ್ (Funambulus palmarum) ಮತ್ತು ಫುನಂಬುಲಸ್ ಪೆನ್ನಾಂಟ (Funumbulus pennanti)

452_69_PP_KUH

ವಿತರಣೆ ಮತ್ತು ಆವಾಸ : ಇವು ಇಡೀ ಭಾರತದಲ್ಲಿ ಕಂಡುಬರುತ್ತವೆ. ಮರಗಿಡಗಳಲ್ಲಿ ವಾಸಿಸುತ್ತವೆ. ಫುನಂಬುಲಸ್ ಪೆನ್ನಾಂಟ ಕಾಡನ್ನು ಬಿಟ್ಟು ಊರುಗಳಲ್ಲಿನ ಮನುಷ್ಯನ ವಸತಿಯ ಪಕ್ಕದಲ್ಲಿರುವ ಮನೆಗಳಲ್ಲಿ ತೋಟಗಳಲ್ಲಿ, ತೋಪುಗಳಲ್ಲಿ ಮತ್ತು ರಸ್ತೆಯ ಸಾಲುಮರಗಳಲ್ಲಿ ವಾಸಿಸುತ್ತದೆ. ಮೂರುಪಟ್ಟೆಯ ಅಳಿಲು ಕಾಡುವಾಸಿ ಮತ್ತು ದಕ್ಷಿಣ ಭಾರತಕ್ಕೆ ಸೀಮಿತವಾಗಿದೆ. ೫ ಪಟ್ಟೆಯ ಅಳಿಲು ಉತ್ತರ ಭಾರತದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಎರಡೂ ಪ್ರಭೇದಗಳು ಒಂದೇ ಪ್ರದೇಶದಲ್ಲಿ ಒಟ್ಟಿಗೆ ವಾಸಿಸಬಹುದು.

ಗಾತ್ರ : ತಲೆ ಮತ್ತು ದೇಹ (೧೨.೫ ಸೆಂ.ಮೀ., ೧೫ ಸೆಂ.ಮೀ.) ೫ ಅಂಗುಲದಿಂದ ೬ ಅಂಗುಲ ಉದ್ದ, ಬಾಲ ಅದಕ್ಕಿಂತ ತುಸು ಹೆಚ್ಚು ಉದ್ದ.

ಆಹಾರ : ಹಣ್ಣು, ಕಾಯಿ, ಮರಗಿಡಗಳ ಚಿಗುರು, ಮೊಗ್ಗು ಮತ್ತು ತೊಗಟೆ. ಕೆಲವು ಮರದ ಹೂಗಳ ಮಧುವನ್ನು ಕುಡಿಯುತ್ತವೆ. ಕೆಲವು ಸಾರಿ ಕೀಟಗಳನ್ನು ಮತ್ತು ಪಕ್ಷಿಯ ಮೊಟ್ಟೆಗಳನ್ನು ತಿನ್ನುತ್ತವೆ.

ಲಕ್ಷಣಗಳು : ಪೆನ್ನಾಂಟಿ ಪ್ರಭೇದದಲ್ಲಿ ಬೆನ್ನಿನ ಮೇಲೆ ೫ ಪಟ್ಟೆಗಳಿವೆ. ಅದರಲ್ಲಿ ೩ ನಡುವಿನ ಪಟ್ಟೆಗಳು ತಿಳಿಬಣ್ಣದವು. ಈ ಮೂರು ಬೆನ್ನಿನ ಪಟ್ಟಿಗಳ ಪಕ್ಕಗಳಲ್ಲಿ ಒಂದೊಂದು ಹೆಚ್ಚಿನ ತಿಳಿಬಣ್ಣದವು. ಈ ಮೂರು ಬೆನ್ನಿನ ಪಟ್ಟಿಗಳ ಪಕ್ಕಗಳಲ್ಲಿ ಒಂದೊಂದು ಹೆಚ್ಚಿನ ತಿಳಿಬಣ್ಣದ ಪಟ್ಟೆಗಳಿವೆ. ಈ ಪಕ್ಕದ ಪಟ್ಟೆಗಳು ಪಾಮೇರಮ್ ಪ್ರಭೇದದಲ್ಲಿ ಇಲ್ಲ. ಇದರಲ್ಲಿ ಅನೇಕ ವಿಧಗಳನ್ನು ಅದರ ದೇಹದ ಬಣ್ಣದ ತೀವ್ರತೆಯ ಮೇಲೆ ಗುರುತಿಸುತ್ತಾರೆ.

ಸಂತಾನಾಭಿವೃದ್ಧಿ : ಬೆದೆಕಾಲದಲ್ಲಿ ಗಂಡು ಮತ್ತು ಹೆಣ್ಣುಗಳು ಒಂದರೆಡು ದಿನಗಳ ಮಟ್ಟಿಗೆ ಒಟ್ಟಿಗೆ ಇರಬಹುದು. ಈ ಕಾಲದಲ್ಲಿ ಹೆಣ್ಣು ಒಂದಕ್ಕಿಂತ ಹೆಚ್ಚು ಗಂಡುಗಳೊಡನೆ ಸಂಭೋಗಿಸಬಹುದು. ಗರ್ಭಾವಸ್ಥೆ ೬ ವಾರಗಳು. ಮರಿಹಾಕುವ ಮುನ್ನ ಹೆಣ್ಣು ಹುಲ್ಲು, ಎಲೆ, ನಾರುಗಳಿಂದ ಒರಟಾದ ಗೂಡನ್ನು ಕಟ್ಟಿ ಅದರಲ್ಲಿ ಮರಿಹಾಕುತ್ತದೆ. ಗೂಡುಗಳನ್ನು ಮರಗಳಲ್ಲಿ ಅಥವಾ ಮನೆಯ ಮಾಡುಗಳಲ್ಲಿ ಅಥವಾ ಗೋಡೆಯ ಬಿರುಕುಗಳಲ್ಲಿ ಕಟ್ಟಬಹುದು. ಒಂದು ಸೂಲದಲ್ಲಿ ೨-೩ ಮರಿಗಳು ಹುಟ್ಟುತ್ತವೆ. ಹುಟ್ಟಿದ ಮರಿಗಳು ಕುರುಡು. ತಮ್ಮ ಆಹಾರವನ್ನು ತಾವು ಕಂಡುಕೊಳ್ಳುವಂತಾಗುವವರೆಗೆ ಗೂಡಿನಲ್ಲಿ ತಾಯಿಯ ಆರೈಕೆಯಲ್ಲಿರುತ್ತವೆ.

ಸ್ವಭಾವ : ಇವುಗಳ ಕೂಗು ಒಂದು ರೀತಿಯ ಪಕ್ಷಿಯ ಕೀರಲು ಧ್ವನಿಯಂತಿರುತ್ತದೆ. ಇದನ್ನೇ ಪುನಃ ಪುನಃ ಪುನಾರಾವರ್ತಿಸಿ, ಅದರ ತಾಳಕ್ಕೆ ತಕ್ಕಂತೆ ಬಾಲವನ್ನು ಕುಣಿಸುತ್ತದೆ. ಹೂವುಗಳ ಮಧುವನ್ನು ಹೀರುವಾಗ (ಬೂರುಗದ ಮರ / Silk cotton tree, pricklypear) ಪರಾಗಾರ್ಪಣೆಗೂ ನೆರವಾಗುತ್ತವೆ. ಇವು ನೋಡಲು ಅಂದವಾದ ಸದಾ ಚಟುವಟಿಕೆಯಿಂದಿರುವ, ನಿರಂತರ ಓಡಾಡುತ್ತಿರುವ ಪ್ರಾಣಿಗಳು. ಇವುಗಳ ವರ್ತನೆಯು ನೋಡಲು ಚೆನ್ನ.

ರಾಮಾಯಣದಲ್ಲಿ ಅಳಿಲುಗಳ ಸೇವೆಯ ವಿಷಯ ಪ್ರಸ್ತಾಪವಾಗಿ “ಅಳಿಲು ಸೇವೆ ಮಳಲು ಭಕ್ತಿ” ಎಂಬ ಉಕ್ತಿಯೇ ಉಂಟಾಗಿದೆ. ಶ್ರೀರಾಮ ಚಂದ್ರನ ಅನುಯಾಯಿಗಳಾದ ವಾನರರು ಲಂಕೆಗೆ ಸೇತುವೆ ಕಟ್ಟುತ್ತಿದ್ದಾಗ ಒಂದು ಅಳಿಲು ನೀರಿನಲ್ಲಿ ಮುಳುಗುವುದು, ಮರಳ ಮೇಲೆ ಹೊರಳಾಡುವುದು, ಅನಂತರ ಸೇತುವೆ ಮೇಲೆ ಮೈಕೊಡವಿ ಮರಳು ಉದುರಿಸುವುದನ್ನು ಶ್ರದ್ಧೆ ಭಕ್ತಿಯಿಂದ ಮಾಡಿ, ಸೇತುವೆ ಕಟ್ಟುವ ಕಾರ್ಯದಲ್ಲಿ ತನ್ನ ಪಾಲಿನ ಕರ್ತವ್ಯವನ್ನು ನಿರ್ವಹಿಸುತ್ತಿತ್ತು. ಇದನ್ನು ಕಂಡು ಮೆಚ್ಚಿದ ಶ್ರೀರಾಮಚಂದ್ರ ಪ್ರೀತಿ ಮತ್ತು ಕೃತಜ್ಞತೆಗಳಿಂದ ಅದರ ಬೆನ್ನಿನ ಮೇಲೆ ತನ್ನ ಕೈಯಿಟ್ಟು ಬೆರಳುಗಳಿಂದ ಬೆನ್ನು ಸವರಿದ. ಇದರಿಂದಾಗಿ ಅಳಿಲಿನ ಬೆನ್ನಿನ ಮೇಲೆ ಮೂರು ಪಟ್ಟೆಗಳು ಮೂಡಿವೆಯೆಂದು ಭಾವುಕರು ನಂಬುತ್ತಾರೆ. ಹೀಗೆ ಪ್ರತಿಫಲಾಪೇಕ್ಷೆಯಿಲ್ಲದೆ ಶ್ರದ್ಧೆ ಭಕ್ತಿಯಿಂದ ಘನ ಉದ್ದೇಶದಿಂದ ಮಾಡುವ ಕೆಲಸಗಳಿಗೆ ನಮ್ಮ ಸಾಹಿತ್ಯಪ್ರಿಯರು “ಅಳಿಲು ಸೇವೆ” ಎಂದು ನಾಮಕರಣ ಮಾಡಿದ್ದಾರೆ.

ಇದರಲ್ಲಿ ಅನೇಕ ಪ್ರಭೇದ ಮತ್ತು ಉಪಪ್ರಭೇದಗಳಿವೆ.

ಫುನಂಬುಲಸ್ ಸಬ್‌ಲಿನಿಯೇಟಸ್ : ಮಬ್ಬು ಪಟ್ಟೆ ಅಳಿಲು (Dusky striped squirrel) : ಇದು ದಕ್ಷಿಣ ಭಾರತದಲ್ಲಿ ಕಂಡು ಬರುತ್ತದೆ.

ಫ. ಸ. ಸಬ್‌ಲಿನಿಯೇಟಸ್‌ : ಕೊಡಗು ಮತ್ತು ನೀಲಿಗಿರಿ ಬೆಟ್ಟಗಳಲ್ಲಿ ಕಂಡುಬರುತ್ತದೆ.

ಫ. ಟ್ರೈಸ್ಟ್ರಯೇಟಸ್‌ : ಕಾಡು ಪಟ್ಟೆ ಅಳಿಲು : (Jungle Striped Squirrel) : ಇದು ಕೊಡಗು, ಮೈಸೂರು, ಧಾರವಾಡ, ಪಶ್ಚಿಮ ಘಟ್ಟಗಳಲ್ಲಿ ಕಂಡುಬರುತ್ತದೆ.

ಫ. ಟ್ರೈ : ಕೊಡಗನ್ನುಳಿದು ಮಿಕ್ಕ ಜಿಲ್ಲೆಗಳಲ್ಲಿ ಕಂಡುಬರುತ್ತದೆ.

ಫ. ಲಯಾರ್ಡಿ (F. layardi) : ಲೇಯಾರ್ಡನ ಪಟ್ಟೆ ಅಳಿಲು (Layard’s stripped squirrel). ಇದು ದಕ್ಷಿಣ ಭಾರತದಲ್ಲಿ ಕಂಡು ಬರುತ್ತದೆ.

ಇಲಿ, ಸುಂಡಿಲಿಗಳಂತೆ ಅಳಿಲೂ ಮನುಷ್ಯನನ್ನು ಅಹಾರಕ್ಕೆ ಅವಲಂಬಿಸುವ ಜೀವಿಯಾಗಿದೆ.

—-

ಗಣ : ರೊಡೆನ್ಷಿಯ
ಕುಟುಂಬ : ಸೈಯುರಿಡೀ
ಉದಾ : ಹಾರುವ ಅಳಿಲುಗಳು
(Flying Squirrels)
೧) ಸಣ್ಣ ತಿರುವಾಂಕೂರು ಹಾರುವ ಅಳಿಲು (Small Travancore flying Squirrel)
ಶಾಸ್ತ್ರೀಯ ನಾಮ : ಪೆಟಿನೊಮಿಸ್ ಫುಸ್ಕೊಕೆಪಿಲ್ಲಸ್ (Petinomys fuscocapillus)
೨) ದೊಡ್ಡ ಕಂದು ಹಾರುವ ಅಳಿಲು (Large brown flying Squirrel)
ಶಾಸ್ತ್ರೀಯ ನಾಮ : ಪೆಟಾರಿಸ್ಟ ಪೆಟಾರಿಸ್ಟ ಫಿಲಿಪೆನ್ಸಿಸ್‌ (Petaurista Petaurista phillipiensis)

453_69_PP_KUH

ವಿತರಣೆ ಮತ್ತು ಆವಾಸ : ಇವು ಭಾರತದ ದ್ವೀಪಕಲ್ಪದ ದಟ್ಟ ಕಾಡುಗಳಲ್ಲಿ ಕಂಡುಬರುತ್ತವೆ. ಮೊದಲನೆಯ ಪ್ರಭೇದ ನಿರ್ದಿಷ್ಟವಾಗಿ ನೆರೆಯ ಕೇರಳ ಮತ್ತು ನೀಲಗಿರಿ, ಕರ್ನಾಟಕದ ಕೊಡಗು ಜಿಲ್ಲೆಯ ಅರಣ್ಯದಲ್ಲಿ ವಾಸಿಸುತ್ತವೆ. ದೊಡ್ಡ ಕಂದು ಹಾರುವ ಅಳಿಲು ನೀಲಗಿರಿ, ಪಳನಿಬೆಟ್ಟ ಉಷ್ಣವಲಯ ಪ್ರದೇಶದಲ್ಲಿ, ಟ್ರಾವನ್‌ಕೂರ್ ಕಾಡುಗಳಲ್ಲಿ ಕಾಣಬರುತ್ತವೆ.

ಗಾತ್ರ : ಸಣ್ಣ ತಿರುವಾಂಕೂರ ಹಾರುವ ಅಳಿಲು ದೇಹದ ಉದ್ದ ಹೆಚ್ಚು ಕಡಿಮೆ ೧ ಅಡಿ, ಬಾಲವು ಅದಕ್ಕಿಂತ ಕಡಿಮೆ ಉದ್ದ. ಆದರೆ ದೊಡ್ಡ ಕಂದು ಹಾರುವ ಅಳಿಲಿನ ಉದ್ದ ೧ ೧/೨ ಅಡಿಯಿಂದ ೨ ಅಡಿ. ಬಾಲ ಸುಮಾರು ೧ ಅಡಿ ಇರಬಹುದು.

ಆಹಾರ : ಹಣ್ಣುಹಂಪಲು, ಬೀಜ-ಕಾಯಿ, ಮರಗಳ ತೊಗಟೆ, ಕ್ರಿಮಿ-ಕೀಟಗಳು, ಹಕ್ಕಿಗಳ ಮೊಟ್ಟೆ, ಅಂಟು, ಎಲೆ, ಮೊಗ್ಗು ಮೊದಲಾದವುಗಳು ಇವುಗಳ ಆಹಾರ. ಆಹಾರವನ್ನು ಮರದ ತುದಿಗಳಲ್ಲಿ ಹುಡುಕುತ್ತವೆ. ನೆಲದ ಮಟ್ಟದಲ್ಲಿ ಹುಡುಕುವುದು ಅಪರೂಪ.

ಲಕ್ಷಣಗಳು : ತೆಳ್ಳನೆಯ ಮೈಕಟ್ಟು, ಉದ್ದ ಪೊದೆ ಬಾಲ. ಬಾಲವನ್ನು ಚುಕ್ಕಾಣಿಯಂತೆ ಉಪಯೋಗಿಸುತ್ತವೆ. ಇವಕ್ಕೆ ಹಾರಲು ಪೆಟಾಜಿಯಂ ಎನ್ನುವ ರೆಕ್ಕೆಗಳು ಇರುವುದು ವಿಶೇಷ ಲಕ್ಷಣ. ಈ ಪೆಟಾಜಿಯಂ ಮುಂಗಾಲುಗಳಿಗೂ ಹಿಂಗಾಲುಗಳಿಗೂ ನಡುವೆ ದಪ್ಪ ಚರ್ಮದ ಮಡಿಕೆಯಂತಿದೆ. ಉಳಿದ ಲಕ್ಷಣಗಳು ಇತರ ಅಳಿಲುಗಳಂತೆಯೇ ಇವೆ. ಮುಂಗಾಲುಗಳಲ್ಲಿ ೪ ಮತ್ತು ಹಿಂಗಾಲುಗಳಲ್ಲಿ ೫ ಬೆರಳುಗಳಿವೆ ಎಲ್ಲಾ ಬೆರಳುಗಳಲ್ಲಿ ಬಾಗಿದ ನಖಗಳಿವೆ. ಇವುಗಳ ಕಣ್ಣು ಮತ್ತು ಕಿವಿ ಚುರುಕಾಗಿವೆ.

ಪ್ಯಾರಚೂಟ್‌ (ಪೆಟಾಜಿಯಂ) ಮುಂಗಾಲು ಮತ್ತು ಹಿಂಗಾಲುಗಳ ನಡುವೆ ಸಣ್ಣ ಟ್ರಾವಾಂಕೂರ್ (ತಿರುವಾಂಕೂರು) ಹಾರುವ ಅಳಿಲುಗಳಲ್ಲಿ ಹರಡಿರುತ್ತದೆ. ಈ ಅಳಿಲು ನಿಧಾನವಾಗಿ ಗಾಳಿಗೆ ಹಾರಿ ನೆಗೆದು ಪ್ಯಾರಚೂಟ್‌ನ ಸಹಾಯದಿಂದ ಕೆಳಕ್ಕೆ ನಿಧಾನವಾಗಿ ಜಾರಿ ಇಳಿಯುತ್ತವೆ. ಕಂದು ಹಾರುವ ಅಳಿಲಿನಲ್ಲಿ ಎರಡು ತೊಡೆಯ ಮಧ್ಯೆ ಇರುವ ಪೊರೆಯು ಕ್ಷೀಣಿಸಿದೆ ಅಥವಾ ಪೂರ್ತಿ ಇರುವುದಿಲ್ಲ.

ಸಂತಾನಾಭಿವೃದ್ಧಿ : ಇವುಗಳ ಸಂತಾನೋತ್ಪತ್ತಿಯ ಕ್ರಮವನ್ನು ಅಷ್ಟಾಗಿ ಅಭ್ಯಾಸ ಮಾಡಿಲ್ಲ. ಆದರೆ ಅಮೇರಿಕೆಯ ಹಾರುವ ಅಳಿಲುಗಳ ವಿಷಯ ಸ್ವಲ್ಪ ತಿಳಿದಿದೆ. ಅವುಗಳ ಸ್ವಭಾವ ಮರದ ಪೊಟರುಗಳಲ್ಲಿ ಗೂಡು ಮಾಡಿ ಮರಿ ಇಟ್ಟು ಪೋಷಿಸುವುದು. ಅವುಗಳಲ್ಲಿ ಗರ್ಭಾವಧಿ ೪೦ ದಿನಗಳು. ಅವು ಒಂದು ಸೂಲದಲ್ಲಿ ೨ ರಿಂದ ೬ ಮರಿಗಳನ್ನು ಹಾಕುತ್ತವೆ. ಹುಟ್ಟಿದ ಮರಿಗಳು ಕುರುಡು ಮತ್ತು ಬೆತ್ತಲೆ. ಸುಮಾರು ೨೫ ರಿಂದ ೨೮ ದಿನಗಳ ನಂತರ ಮರಿಗಳು ಕಣ್ಣುಬಿಡುತ್ತವೆ. ಜೀವಾವಧಿ ೧೦ ವರ್ಷಗಳು.

ಸ್ವಭಾವ : ಅರಣ್ಯ ವಾಸಿಗಳು ಮತ್ತು ನಿಶಾಚರಿಗಳು. ಸಂಜೆ ತಮ್ಮ ವಿಶ್ರಾಂತಿ ತಾಣದಿಂದ ಹೊರಬಿದ್ದು ಮುಂಜಾವು ಪುನಃ ತಮ್ಮ ನೆಲೆಗೆ ಹಿಂದಿರುಗುತ್ತವೆ. ಹಗಲು ಮರಗಳ ಪೊಟರುಗಳಲ್ಲಿ ಉಂಡೆಯಂತೆ ಸುತ್ತಿಕೊಂಡು ಬಾಲದ ಕೆಳಗಡೆಗೆ ಮೂತಿ ಸೇರಿಸಿ, ತಲೆ ಕೆಳಗಾಗಿ ಮಲಗುತ್ತವೆ. ಕೆಲವು ಸಾರಿ ಕಾಡು, ಮನೆಗಳ ಮೇಲ್ಚಾವಣಿಯ ಕೆಳಗಡೆ ವಿಶ್ರಮಿಸಬಹುದು. ಆಗಾಗ ಇವು ಮರದಿಂದ ಮರಕ್ಕೆ ಮತ್ತು ಮರದಿಂದ ನೆಲದ ಮೇಲಕ್ಕೆ ಹಾರುವ ಅಥವಾ ಹಾರಿ ಇಳಿಯುವ ದೃಶ್ಯವನ್ನು ಕಾಣಬಹುದು. ಹಾರುವ ಮುನ್ನ ಒಂದು ಮರದ ಎತ್ತರಕ್ಕೆ ಏರಿ ಆಮೇಲೆ ನಾಲ್ಕು ಕಾಲುಗಳನ್ನು ಪಕ್ಕಗಳಲ್ಲಿ ಚಾಚಿ ಶರೀರದ ಪಕ್ಕದಲ್ಲಿ ಮಡಿಚಿಕೊಂಡಿರುವ ತೆಳುವಾದ ಚರ್ಮವನ್ನು ಹರಡಿ ತೇಲಿಕೊಂಡು ಇಳಿಯುತ್ತವೆ. ನೆಲದ ಮೇಲೆ ಇದ್ದಾಗ ಮತ್ತು ಗಿಡಮರಗಳನ್ನು ಏರುವಾಗ ಈ ಅಳಿಲುಗಳು ಸಾಮಾನ್ಯ ಅಳಿಲುಗಳಂತೆಯೇ ಕಾಣುತ್ತವೆ. ಹಾರುವ ಕಾಲದಲ್ಲಿ ಹರಡಿಕೊಳ್ಳುವ ಚರ್ಮ ಹಾರದಿರುವಾಗ ಶರೀರದ ಪಕ್ಕದಲ್ಲಿ ಮಡಚಿಕೊಂಡು ಇರುವುದರಿಂದ ಪೆಟಾಜಿಯಂಗಳು ಕಾಣಿಸುವುದಿಲ್ಲ. ಈ ಅಳಿಲುಗಳು ಪಕ್ಷಿಯಂತೆ ಅಥವಾ ಬಾವಲಿಯಂತೆ ಹಾರಾಡಲಾರವು. ಎತ್ತರದಿಂದ ತಗ್ಗಿನ ಸ್ಥಳಗಳಿಗೆ ಗಾಳಿಯಲ್ಲಿ ಜಾರಿ ಇಳಿಯಬಲ್ಲವು. ಹೀಗೆ ಜಾರಿ ಹಾರುವಾಗ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ೯೦ ಮೀಟರ್ ದೂರ ಕ್ರಮಿಸಬಲ್ಲವು.

ರಾತ್ರಿಯಲ್ಲಿ ಸಣ್ಣ ಏಕ ಸ್ವರದಲ್ಲಿ ಪರಸ್ಪರ ಕರೆಯುತ್ತವೆ. ಶಬ್ದವನ್ನು ಉಳಿದ ಅಳಿಲುಗಳೂ ಪುನರುಚ್ಚರಿಸುವುದರಿಂದ ಶಬ್ದದಿಂದ ಅವುಗಳ ತಾಣವನ್ನು ಗುರುತಿಸುವುದು ಕಷ್ಟ. ಸುಲಭವಾಗಿ ಸಾಕಬಹುದು. ಆದರೆ ಬಹಳ ಸೂಕ್ಷ್ಮವಾದ ಪ್ರಾಣಿಗಳು.

—-

ಗಣ : ರೊಡೆನ್ಷಿಯ
ಕುಟುಂಬ : ಹಿಸ್ಟ್ರಿಸಿಡೀ
ಉದಾ : ಮುಳ್ಳುಹಂದಿ (
Porcupine)
ಶಾಸ್ತ್ರೀಯ ನಾಮ : ಹಿಸ್ಟ್ರಿಕ್ಸ್ ಇಂಡಿಕ (
Hystrix indica)
ಹಿ. ಲ್ಯುಕುರ, ಹಿ. ಬೆಂಗಾಲೆನ್ಸಿಸ್

454_69_PP_KUH

ವಿತರಣೆ ಮತ್ತು ಆವಾಸ : ಹಿಸ್ಟ್ರಿಕ್ಸ್ ಇಂಡಿಕ ಆಫ್ರಿಕಾ ಮತ್ತು ಏಷ್ಯ ಖಂಡದಲ್ಲಿ ವಾಸಿಸುತ್ತದೆ. ಹಿ. ಲ್ಯುಕರ ಮತ್ತು ಹಿ. ಬೆಂಗಾಲೆನ್ಸಿಸ್ ಗಳು ಭಾರತದಲ್ಲಿ ದೊರಕುತ್ತವೆ. ಇವು ಕಾಡುಗಳಲ್ಲಿ ಕಲ್ಲುಗುಡ್ಡಗಳಲ್ಲಿ ಕಮರಿಗಳಲ್ಲಿ ವಾಸಿಸುತ್ತವೆ. ಹಗಲು ಬಿಲಗಳಲ್ಲಿರುತ್ತವೆ.

ಗಾತ್ರ : ದೇಹದ ಉದ್ದ ೬೦-೮೦ ಸೆಂ.ಮೀ. ಬಾಲ ೧೨.೫ ರಿಂದ ೧೫ ಸೆಂ.ಮೀ. ತೂಕ ೧೭-೨೭ ಕೆ.ಜಿ.

ಆಹಾರ : ಸಸ್ಯಾಹಾರಿ. ತರಕಾರಿಗಳು, ಗಿಡದ ಬೇರುಗಳನ್ನು ತಿನ್ನುತ್ತವೆ. ಹಣ್ಣು, ತೊಗಟೆ, ಗೆಡ್ಡೆಗೆಣಸು ಮತ್ತು ಕೆಲವೊಮ್ಮೆ ಸತ್ತಪ್ರಾಣಿಯನ್ನೂ ತಿನ್ನುತ್ತವೆ.

ಲಕ್ಷಣ : ದೊಡ್ಡದೇಹ, ಮೋಟುಕಾಲುಗಳು ಮತ್ತು ಅಪ್ಪು ಬಾಲವಿರುವ ಪ್ರಾಣಿ. ದೇಹ ಮತ್ತು ಬಾಲದ ಮೇಲೆ ಉದ್ದವಾದ, ಚೂಪಾದ, ನಿಮಿರಿನಿಲ್ಲುವ ಕಪ್ಪು ಅಥವಾ ಕಡುಕಂದು ಮತ್ತು ಬಿಳುಪು ಅಥವಾ ಹಳದಿ ಪಟ್ಟೆಯ ಮುಳ್ಳು ಅಥವಾ ಉರುಳೆಗಳಿವೆ. ಉರುಳೆಗಳು ಮಾರ್ಪಟ್ಟ ಕೂದಲುಗಳು. ಇದು ಪ್ರಾಣಿಯ ರಕ್ಷಣೆಗೆ ಉಂಟಾಗಿರುವ ಮಾರ್ಪಾಡು. ಮುಳ್ಳುಗಳ ನಡುವೆ ಒರಟಾದ ಕೂದಲುಗಳಿವೆ. ಮುಳ್ಳುಗಳು ದೇಹದ ಮಧ್ಯಭಾಗದಲ್ಲಿ ಗಟ್ಟಿಯಾಗಿವೆ. ಆದರೆ ಬಾಲದ ಭಾಗದಲ್ಲಿ ಟೊಳ್ಳು ಉರುಳೆಗಳಾಕಾರದಲ್ಲಿವೆ. ಇವು ದೇಹವನ್ನು ಒದರಿದಾಗ ಬುಡುಬುಡಿಕೆ ಸದ್ದು ಮಾಡುತ್ತವೆ ಮತ್ತು ಮುಳ್ಳುಗಳನ್ನು ರಭಸದಿಂದ ಬಾಣಗಳಂತೆ ಎರಚುತ್ತವೆ. ಇದು ಈ ಪ್ರಾಣಿಗಳ ರಕ್ಷಣಾ ವಿಧಾನ. ಮುಳ್ಳುಗಳಿಗೆ ಕಪ್ಪುಪಟ್ಟೆಗಳಿವೆ. ಇವುಗಳ ನಡುವೆ ಬೆರೆತಂತೆ ಉದ್ದವಾದ, ಹೆಚ್ಚು ತೆಳುವಾದ ಮತ್ತು ಬಾಗಬಲ್ಲ ಹಾಗೂ ಸಾಮಾನ್ಯವಾಗಿ ಪೂರ್ಣಬಿಳುಪಾದ ಉರುಳೆಗಳಿವೆ. ಮುಂದಿನ ಪಾದಗಳು ಅಗಲವಾಗಿವೆ ಮತ್ತು ಚೆನ್ನಾಗಿ ಬೆಳೆದ ನಾಲ್ಕು ಬೆರಳುಗಳಿವೆ. ಬೆರಳುಗಳಿಗೆ ದಪ್ಪನಾದ ನಖಗಳಿವೆ. ಹಿಂಗಾಲುಗಳಲ್ಲಿ ೫ ಬೆರಳುಗಳಿವೆ. ೬ ಕೂದಲುಗಳ ಶಿಖೆಯಿದೆ. ಹಿ. ಇಂಡಿಕದಲ್ಲಿ ಕಣ್ಣು ಮತ್ತು ಕಿವಿಗಳು ಚಿಕ್ಕವು. ಬಾಲಸಣ್ಣದು ಮತ್ತು ಇದನ್ನು ಅಪ್ಪುವುದಕ್ಕೆ ಬಳಸುವುದಿಲ್ಲ.

ಸಂತಾನಾಭಿವೃದ್ಧಿ : ವಸಂತ ಋತುವಿನಲ್ಲಿ ಸಂತಾನೋತ್ಪತ್ತಿ ನಡೆಸುತ್ತವೆ. ಗರ್ಭಾವಧಿ ೧೧೨ ದಿನಗಳು. ಒಂದು ಸೂಲದಲ್ಲಿ ೪ ಮರಿಗಳು ಹುಟ್ಟುತ್ತವೆ. ಒಂದು ವರ್ಷದಲ್ಲಿ ೩ ಸಾರಿ ಮರಿಹಾಕುತ್ತವೆ. ಆಯಸ್ಸು ೩೦ ವರ್ಷಗಳು.

ಸ್ವಭಾವ : ಇದರ ಮುಳ್ಳುಗಳು ಲಕ್ಷಣವಾಗಿ ಮತ್ತು ಆಕರ್ಷಕವಾಗಿರುವುದರಿಂದ ಹಿಂದೆ ಇದನ್ನು ಲೇಖನಿಗಳನ್ನು ತಯಾರಿಸಲು ಬಳಸುತ್ತಿದ್ದರು. ಆದರೂ ಇವುಗಳನ್ನು ಮನೆಗಳಲ್ಲಿಟ್ಟರೆ ಜಗಳಗಳಾಗುತ್ತವೆ ಎಂಬ ಮೂಢನಂಬಿಕೆಯಿಂದ ಇಡಲು ಬಿಡುವುದಿಲ್ಲ.