ಗಣ : ರೊಡೆನ್ಷಿಯ
ಕುಟುಂಬ : ಮ್ಯೂರಿಡೀ (Muridae)
ಉದಾ : ಭಾರತದ ಮೈದಾನದ ಚುಂಡಿಲಿ (ಬಯಲು) (Indian field Mouse)
ಶಾಸ್ತ್ರೀಯ ನಾಮ : ಮಸ್‌ಬೂದುಗ (Mus booduga)

443_69_PP_KUH

ವಿತರಣೆ ಮತ್ತು ಆವಾಸ : ಬಯಲು ಇಲಿಯ ಜೊತೆಗೆ ಭಾರತದಲ್ಲಿ ಅನೇಕ ಸಂಖ್ಯೆಯಲ್ಲಿ ಮೈದಾನದ ಇಲಿಗಳಿವೆ. ಅವುಗಳಲ್ಲಿ ಅತ್ಯಂತ ಸಾಮಾನ್ಯವಾದುದೆಂದರೆ ಭಾರತದ ಮೈದಾನದ ಚುಂಡಿಲಿ (ಮಸ್‌ಬೂದುಗ). ಇದು ಭಾರತದ ಬಹುಭಾಗದಲ್ಲಿ ದೊರಕುತ್ತದೆ.

ಗಾತ್ರ : ದೇಹದ ಉದ್ದ ಸುಮಾರು (೫೭.೫ ಸೆಂ.ಮೀ) ೨ ರಿಂದ ೩ ಅಂಗುಲ, ಬಾಲದ ಉದ್ದ ೨ ಅಂಗುಲಗಳಿಗಿಂತ ತುಸು ಹೆಚ್ಚು (೫ಸೆಂ.ಮೀ)

ಲಕ್ಷಣಗಳು : ಬೆನ್ನಿನ ಭಾಗದ ಬಣ್ಣ ಮರಳು ನೆಲದಲ್ಲಿ ವಾಸಿಸುವ ಚುಂಡಿಲಿಗಳಲ್ಲಿ ತಿಳಿ ಮರಳು ಬಣ್ಣದಿಂದ ಮುಳ್ಳು ಕಾಡುಗಳಲ್ಲಿ ವಾಸಿಸುವ ಚುಂಡಿಲಿಗಳ ಕಂದು ಅಥವಾ ಕಡು ಕಂದು ಬಣ್ಣದವರೆಗೆ ಬದಲಾಗುತ್ತದೆ. ಹೊಟಟೆಯ ಭಾಗ ಬಿಳುಪು. ಕೃಷಿಭೂಮಿಯ ಸುತ್ತ ಮುತ್ತಲ ಮೈದಾನಗಳಲ್ಲಿ ಇದು ಸಾಮಾನ್ಯ. ಇದು ಪಾಂಪೊಂಡ್‌, ಕೈತೋಟಗಳಲ್ಲಿ ಇದ್ದು ಮನೆಯನ್ನು ಪ್ರವೇಶಿಸಬಹುದು. ಇದರಷ್ಟೇ ಸಾಮಾನ್ಯವಾದ ಮತ್ತೊಂದು ಪ್ರಭೇದವೆಂದರೆ ಮಸ್‌ ಪ್ಲ್ಯಾಟಿಥ್ರಿಕ್ಸ್‌ ಎಂಬ ಮುಳ್ಳು ಮೈದಾನದ ಚುಂಡಿಲಿ. ಈ ಚುಂಡಿಲಿಯ ತುಪ್ಪುಳು ಮೆಲೆ, ಕೆಳಗೆ ಎರಡೂ ಕಡೆ ಚಪ್ಪಟೆಯಾದ ಮುಳ್ಳುಗಳನ್ನೊಳಗೊಂಡಿದೆ. ಬೆನ್ನಿನ ಮೇಲಿರುವ ಮುಳ್ಳುಗಳು ಪೆಡಸು ಮತ್ತು ಒರಟು, ಹೊಟ್ಟೆಯ ಭಾಗದಲ್ಲಿ ತುಸು ಮೃದುವಾಗಿವೆ. ತುಪ್ಪುಳಿನ ಮುಳ್ಳು ಸ್ವಭಾವ ಮಸೂರದಿಂದ ನೋಡಿದಾಗ ಅಥವಾ ಅದರ ಮೇಲೆ ಕೈಯಾಡಿಸಿದಾಗ ಮಾತ್ರ ಭಾಸವಾಗುತ್ತದೆ. ಮುಳ್ಳಿನ ಮೇಲ್ಬಣ್ಣ ಮರಳು ಅಥವಾ ಕಡುಕಂದು ಮತ್ತು ಕೆಳಗೆ ಬಿಳುಪು. ಈ ಡರಡೂ ಬಣ್ಣಗಳು ಸ್ಪಷ್ಟವಾಗಿ ಪ್ರತ್ಯೇಕವಾಗಿವೆ. ಡಕ್ಕನ್‌ಪ್ರಸ್ತಭೂಮಿಯ ಮುಳ್ಳು ಚುಂಡಿಲಿಗಳು ಹೆಚು ಆಳವಿಲ್ಲದ ಬಿಲಗಳಲ್ಲಿ ವಾಸಿಸುತ್ತವೆ. ಬಿಲವನ್ನು ಹೊಕ್ಕ ಚುಂಡಿಲಿ ಸಣ್ಣ ಕಲ್ಲುಗಳಿಂದ ಬಿಲದ ತೆರಪನ್ನು ಮುಚ್ಚುತ್ತದೆ. ಈ ಕಲ್ಲುಗಳನ್ನು ತೆರಪಿನ ಪಕ್ಕದಲ್ಲಿ ಶೇಖರಿಸಿಟ್ಟಿರುತ್ತದೆ. ಮಲಗುವ ಕೋಣೆಯನ್ನು ಕಲ್ಲುಗಳಿಂದ ತುಂಬಿರಬಹುದು.

ಇದರ ಇನ್ನೊಂದು ಉಪಪ್ರಭೇದ ಮಸ್‌ಬೂದುಗ ಬೂದುಗವು ಭಾರತದ ಬಹುಭಾಗಗಳಲ್ಲಿ ದೊರಕುತ್ತದೆ.

—- 

ಗಣ : ರೊಡೆನ್ಷಿಯ
ಕುಟುಂಬ : ಮ್ಯೂರಿಡೀ (Muridae)
ಉದಾ : ಮನೆ ಇಲಿ (ಬಯಲು) (Common house rat)
ಶಾಸ್ತ್ರೀಯ ನಾಮ : ರ್ಯಾಟಸ್ (Rattus rattus)

444_69_PP_KUH

ವಿತರಣೆ ಮತ್ತು ಆವಾಸ : ಇಲಿಗಳ ಜಾತಿಗಳಲ್ಲಿ ರ್ಯಾಟಸ್ ಜಾತಿಯೇ ಅತ್ಯಂತ ದೊಡ್ಡ ಸಸ್ತನಿ ಜಾತಿ. ಇದು ೧೨೦ ಉಪಪ್ರಭೇದಗಳನ್ನು ೫೬೦ ವಿಧಗಳನ್ನು ಒಳಗೊಂಡಿದೆ. ಇದರ ವಸತಿ ಮತ್ತು ವಾಸಸ್ಥಾನ ಭಿನ್ನ ವಿಭಿನ್ನ ರೀತಿಯಲ್ಲಿ ಬದಲಾಗುತ್ತದೆ. ಇವು ಶಾಖಾವಾಸಿಗಳು, ಭೂವಾಸಿಗಳು, ನಿಶಾಚರಿಗಳು ಮತ್ತು ಬಿಲವಾಸಿಗಳು. ಮುಖ್ಯವಾಗಿ ಸಸ್ಯಾಹಾರಿಗಳು, ಆದರೂ ಕೆಲವೊಮ್ಮೆ ಮಾಂಸವನ್ನೂ ತಿನ್ನುವ ಸರ್ವಭಕ್ಷಕಗಳು.

ರ್ಯಾಟಸ್ ರೌಟನಿ, ರ್ಯಾಟಸ್ ರೂಫಿಸೆನ್ಸ್‌ಎಂಬೆರಡು ಪ್ರಭೇದಗಳನ್ನು ಮನೆ ಇಲಿ ಎಂಬ ಹೆಸರಿನಿಂದಲೇ ಕರೆಯುವುದುಂಟು. ಇವನ್ನು ಕಪ್ಪು ಇಲಿ ಎಂದೂ ಕರೆಯುತ್ತಾರೆ. ಇವುಗಳ ಉದರದ ಕೂದಲು ಸ್ಲೇಟಿನ ಬಣ್ಣ. ದೇಹದ ಮೇಲಿನ, ಕೆಳಗಿನ ಬಣ್ಣಗಳು ಪಕ್ಕದಲ್ಲಿ ಬೆರೆತಂತಿವೆ. ಅಂಗಾಲಿನಲ್ಲಿ ೬ ಅಥವಾ ಕಡಿಮೆ ಮೆತ್ತೆಗಳಿರುತ್ತವೆ. ಒಟ್ಟು ಸ್ತನಗಳು ೮.

ಇವು ಮನುಷ್ಯನು ವಾಸಿಸುವ ಮನೆಗಳಲ್ಲಿ ವಾಸಿಸುತ್ತವೆ. ಆದುದರಿಂದಲೇ ಇವಕ್ಕೆ ಮನೆ ಇಲಿ ಎಂಬ ಹೆಸರು ಬಂದಿದೆ. ತಲೆ ಮತ್ತು ದೇಹದ ಉದ್ದ (೧೨.೫ ರಿಂದ ೨೦ ಸೆಂ.ಮೀ) ೫ ರಿಂದ ೮ ಅಂಗುಲ. ಬಾಲ (೧೨.೫ ರಿಂದ ೨೫ ಸೆಂ.ಮೀ) ೫ ರಿಂದ ೧೦ ಅಂಗುಲ ಉದ್ದ. ಇವು ಪ್ರಥಮತಃ ಏಷ್ಯಾದಲ್ಲಿ ಉಗಮಿಸಿ, ವಾಣಿಜ್ಯ ಸಾರಿಗೆಗಳ ಮೂಲಕ ಇತರ ಖಂಡಗಳಿಗೂ ಹರಡಿವೆ.

ರ್ಯಾಟಸ್ ನಾರ್ವಿಜಿಕಸ್‌ ಎಂಬ ಪ್ರಭೇದ ಪ್ರಪಂಚದ ಅನೇಕ ಕಡೆಗಳಲ್ಲಿ ಹರಡಿದೆ. ಎಲ್ಲಾ ಪ್ರಭೇದಗಳೂ ಮಾನವನೊಡನೆಯೂ, ಅವನ ಕೃಷಿ ಕ್ಷೇತ್ರಗಳಲ್ಲೂ ವಾಸಿಸುತ್ತವೆ. ಕೆಲವು ಸೂರು, ಹೆಂಚಿನ ಸಂದು, ಹೆಂಚಿನ ಮನೆಗಳ ಮೇಲ್ಚಾವಣಿಯ ಮರಗಳ ಪೊಟರೆ ಇತ್ಯಾದಿ ಸ್ಥಳಗಳಲ್ಲಿ ವಾಸಿಸುತ್ತವೆ. ಈ ಇಲಿ ಗಾತ್ರದಲ್ಲಿ ಸಣ್ಣದಾದರೂ ಇದು ಮಡುವ ಹಾವಳಿ ಅಪಾರ. ಇದು ವಾಸ್ತವವಾಗಿ ಒಂದು ಪಿಡುಗು. ಸಂಗ್ರಹಿಸಿಟ್ಟ ಕಾಳುಕಡ್ಡಿ, ದವಸಧಾನ್ಯಗಳನ್ನೆಲ್ಲಾ ಒಳಗೇ ತಿಂದು ಸಿಪ್ಪೆಯನ್ನು ಮಾತ್ರ ಹಾಗೇ ಉಳಿಸುತ್ತದೆ. ಕೆಲವು ವೇಳೆ ತಿಂದು, ತಿಂದುದಕ್ಕಿಂತಲೂ ಹೆಚ್ಚು ಪಾಲನ್ನು ಸಿಕ್ಕಾಪಟ್ಟೆ ಹರಡಿ, ಹೊಲಸು ಮಾಡಿ ಕೆಡಿಸುತ್ತದೆ. ಇದು ವರ್ಷಕ್ಕೆ ನಾಲ್ಕೈದು ಬಾರಿಯದರೂ ಮರಿ ಹಾಕುತ್ತದೆ ಮತ್ತು ಪ್ರತಿಯೊಂದು ಬಾರಿಯೂ ೧೦-೧೨ ಮರಿಗಳನ್ನು ಹಾಕುವುದರಿಂದ ಇದರ ಸಂತಾನ ತೀವ್ರವೇಗದಲ್ಲಿ ಹೆಚ್ಚುತ್ತದೆ. ಈ ಕಾರಣದಿಂದಾಗಿಯೇ ಕೆಲವೊಂದು ಸಾರಿ ಹಠಾತ್ತನೆ ಇವುಗಳ ಪಿಡುಗು ತೋರುವುದುಂಟು. ಬಿಳಿ ಹೊಟ್ಟೆಯ ರೌಟಿನಿ ತೆಂಗಿನ ಮರಕ್ಕೆ ಹತ್ತಿ ತಿಂಗಿನ ಫಸಲಿಗೆ ಕಂಟಕವಾಗುತ್ತದೆ. ಮರದ ಮೇಲೆ ಸೋಗೆಗಳ ನಡುವೆ ಗೂಡು ಮಾಡಿಕೊಂಡು ತೆಂಗಿನ ಹೂವನ್ನು ತಿನ್ನುವುದು. ಎಳೆಯ ಕಾಯಿಗಳ ನೀರು ಹೀರಿ ಹಾಳುಮಾಡುವುದು, ಹೀಚುಕಾಯಿಗಳನ್ನು ಕಡಿದು ಎಸೆಯುವದರಿಂದ ತೋಟಕ್ಕೆ ವಿಪರೀತ ನಷ್ಟವುಂಟು ಮಾಡುತ್ತದೆ. ಇವು ದವಸ ಧಾನ್ಯಗಳೇ ಅಲ್ಲದೆ ವಾಣಿಜ್ಯ ದೃಷ್ಟಿಯಿಂದ ಪ್ರಮುಖವಾದ ಸಾಂಬಾರ ಪದಾರ್ಥಗಳನ್ನೂ ನಾಶಮಾಡುತ್ತವೆ. ಮಾನವನ ಆಹಾರ ಸಾಮಗ್ರಿಗಳ ನಾಶದಲ್ಲಿ ಇಲಿಗಳು ಮುಖ್ಯ ಪಾತ್ರವಹಿಸುತ್ತವೆ.

ಕರ್ನಾಟಕದಲ್ಲಿ ದೊರಕುವ ಇತರ ರ್ಯಾಟರ್ಸ್‌ ಜಾತಿಯ ಮನೆ ಇಲಿ ಅಥವಾ ರ್ಯಾಟಸ್ ಜಾತಿಯ ಪ್ರಭೇದಗಳು.

. ರ್ಯಾಟಸ್ ಬ್ಲಾನ್‌ಪೋರ್ಡಿ (R. blanfordi) : ಭಾರತದ ದಕ್ಷಿಣ ದ್ವೀಪಕಲ್ಪದ ಬಹುಭಾಗದಲ್ಲಿ ದೊರಕುತ್ತದೆ.

೨. ರ್ಯಾಟಸ್(Rattus rattus) : ಭಾರತದ ಬಹುಭಾಗಗಳಲ್ಲಿ ದೊರಕುತ್ತವೆ.

೩. ರ್ಯಾ. ರ್ಯಾ. ರೂಫಿಸೆನ್ಸ್‌(R.r. rufinsense) : ಭಾರತದ ದಕ್ಷಿಣ ದ್ವೀಪಕಲ್ಪದ ಉದ್ದಕ್ಕೂ ದೊರಕುತ್ತದೆ.

೪. ರ್ಯಾ. ರ್ಯಾ. (R. r. wronghtoni) : ದಕ್ಷಿಣ ಭಾರತದ ದಕ್ಷಿಣ ದ್ವೀಪಕಲ್ಪ ಭಾಗ, ಮುಖ್ಯವಾಗಿ ನೀಲಗಿರಿ ಬೆಟ್ಟಗಳಲ್ಲಿ ೬೮-೮೮ ಅಡಿ ಎತ್ತರದವರೆಗೆ ವಾಸಿಸುತ್ತದೆ.

ರ್ಯಾಟಸ್ ಜಾತಿಯ ಕಚ್ಚ ಎಂಬ ಇಲಿಗಳಲ್ಲಿ

ರ್ಯಾ. ಕಚ್ಚಿಕಸ್‌ ಶಿವ ಎಂಬ ಉಪಪ್ರಭೇದವು ಮೈಸೂರು ಭಾಗದಲ್ಲಿ ದೊರಕುತ್ತದೆ.

—- 

ಗಣ : ರೊಡೆನ್ಷಿಯ
ಕುಟುಂಬ : ಮ್ಯೂರಿಡೀ (Muridae)
ಉದಾ : ಹೆಗ್ಗಣ (Bandicoot Rat)
ಶಾಸ್ತ್ರೀಯ ನಾಮ : ಬ್ಯಾಂಡಿಕೋಟ ಇಂಡಿಕಾ (Bandicoota indica)

445_69_PP_KUH

ವಿತರಣೆ ಮತ್ತು ಆವಾಸ : ಸರ್ವವ್ಯಾಪಿ ಬೇರೆ ದೇಶಗಳಲ್ಲಿ ಬಯಲು ಮತ್ತು ಕಾಡಿನ ಜೀವಿಯಾದರೂ ಭಾರತದಲ್ಲಿ ಇದು ಮನುಷ್ಯನನ್ನು ಅವಲಂಬಿಸಿದ ಪರತಂತ್ರಜೀವಿಯಾಗಿದೆ. ಇದು ಮನುಷ್ಯನ ವಸತಿಗಳ ಹತ್ತಿರ ಅಂದರೆ ಮನೆಯ ಹಿತ್ತಲುಗಳಲ್ಲಿ, ತೋಟಗಳಲ್ಲಿ, ಮನೆಗಳ ಬಳಿ, ಚರಂಡಿಗಳಿಗಾಗಿ ಹಾಕಿರುವ ಕೊಳವೆಗಳಲ್ಲಿ ವಾಸಿಸುತ್ತದೆ. ನೆಲವನ್ನು ಮತ್ತು ಕೆಲವೊಮ್ಮೆ ಕಲ್ಲನ್ನು ಬಗೆದು ಬಿಲತೋಡುತ್ತದೆ. ಇದರ ಉಪ ಪ್ರಭೇದಗಳು ನೇಪಾಳ, ಅಸ್ಸಾಂ, ಬರ್ಮಾ ಮತ್ತು ಶ್ರೀಲಂಕಾಗಳಲ್ಲಿ ದೊರಕುತ್ತವೆ.

ಗಾತ್ರ : ಬೃಹತ್‌ಗಾತ್ರದ ದಂಶಕ ಪ್ರಾಣಿ. ಮೂಗಿನಿಂದ ಬಾಲದವರೆಗೆ (೩೦-೪೦ ಸೆಂ.ಮೀ) ಉದ್ದ ಮತ್ತು ಬಾಲವು ಅಷ್ಟೇ ಉದ್ದ ಇರುತ್ತದೆ. ೦.೯ ರಿಂದ ೧.೪ ಕೆ.ಜಿ. ತೂಗುತ್ತದೆ. ಈ ಗಾತ್ರದಿಂದ ಇದನ್ನು ಬೇರೆ ಇಲಿಗಳಿಂದ ಸುಲಭವಾಗಿ ಗುರುತಿಸಬಹುದು.

ಆಹಾರ : ಸರ್ವಭಕ್ಷಕ. ಹುಲ್ಲು, ಬೇರು, ಕಾಂಡ ಮತ್ತು ಬೆಳೆಗಳ ಹಾಗೂ ಮನೆಯ ಹೊಲಸುಗಳನ್ನು ತಿನ್ನುತ್ತದೆ. ಕಾಳು, ತರಕಾರಿಗಳನ್ನು ತಿನ್ನುತ್ತದೆ. ಕೆಲವೊಮ್ಮೆ ಕೋಳಿ ಕೇಂದ್ರಗಳ ಮೇಲೂ ಧಾಳಿ ಇಡುವುದುಂಟು.

ಲಕ್ಷಣಗಳು : ಬೃಹತ್‌ಗಾತ್ರದ ಜೊತೆಗೆ, ದುಂಡಾದ ತಲೆ, ದುಂಡಗಿರುವ ಕಿವಿಗಳು, ಮೋಟಾದ ಅಗಲವಾದ ಮೂತಿ, ಮೈಮೇಲಿನ ಉದ್ದ ಕೂದಲಿನ ಕುಚ್ಚುಗಳನ್ನು ನಿಮರಿ ನೆಟ್ಟಗೆ ನಿಲ್ಲಿಸಿ ಗುರುಗುಟ್ಟುವುದು ಇದರ ವಿಶೇಷ ಲಕ್ಷಣ.

ಇಂಗ್ಲೀಷಿನ ಬ್ಯಾಂಡಿಕೋಟ ಎಂಬ ಹೆಸರು, ತೆಲುಗಿನ ಪಂದಿ ಕೋಕು (ಹಂದಿ ಇಲಿ) ಎಂಬ ಹೆಸರಿನ ಅಪಭ್ರಂಶ ಇರಬಹುದು. ಮೈಮೇಲಿನ ತುಪ್ಪಳದ ಅರ್ಧದಷ್ಟು ಭಾಗದಲ್ಲಿ ಮುಳ್ಳುಗಳಿವೆ. ಕಾಲುಗಳಲ್ಲಿ ಹೆಬ್ಬೆಟ್ಟಿನ ವಿನಹ ಉಳಿದೆಲ್ಲಾ ಬೆರಳುಗಳ ಮೇಲ್ಭಾಗ ಕಪ್ಪು ಮಿಶ್ರಿತ ಕಂದು, ಪಕ್ಕಗಳಲ್ಲಿ ಬೂದು ಛಾಯೆ, ತಳಭಾಗ ಬೂದು ಮಿಶ್ರಿತ ಕಂದು.

ಸಂತಾನಾಭಿವೃದ್ಧಿ : ಒಂದು ಸೂಲದಲ್ಲಿ ೧ ರಿಂದ ೧೨ ಮರಿಗಳನ್ನು ಹಾಕುತ್ತದೆ.

ಸ್ವಭಾವ : ನಿಶಾಚರಿ ಮತ್ತು ಬಿಲವಾಸಿ. ರೋಷಪೂರಿತ ಪ್ರಾಣಿಯಾಗಿ ಕಂಡರೂ ಅಂಜುಬುರಕ ಪ್ರಾಣಿ. ನಾಯಿಗಳು ಇದನ್ನು ಕಂಡರೆ ಬೇಟೆಯಾಡಿ ತಿಂದು ಬಿಡುತ್ತವೆ. ಆದರೂ ಒಮ್ಮೊಮ್ಮೆ ಶತ್ರುಗಳನ್ನು ಎರಡು ಕಾಲುಗಳ ಮೇಲೆ ಎದ್ದು ನಿಂತು ಎದುರಿಸುವುದುಂಟು. ಕಾಳು ಕಡ್ಡಿಗಳನ್ನು, ದವಸ ಧಾನ್ಯಗಳನ್ನು ಹಣ್ಣು ಹಂಪಲು, ತರಕಾರಿಗಳನ್ನು ಕತ್ತರಿಸಿ ತಿಂದು ನಷ್ಟ ಉಂಟು ಮಾಡುತ್ತದೆ.

ಹಳ್ಳಿಗಳು ಮತ್ತು ಊರುಗಳಿಂದ ದೂರವಿರುವುದಿಲ್ಲ. ಆದರೂ ಮನೆಯ ಇಲಿಗಳಷ್ಟು (ರ್ಯಾಟಸ್ ರ್ಯಾಟಸ್) ಅಪಾರ ಸಂಖ್ಯೆಯಲ್ಲಿರುವುದಿಲ್ಲ. ಇವು ಮನೆ ಇಲಿಗಳಷ್ಟೇ ಒಗ್ಗಿಕೊಂಡಿರುತ್ತವೆ. ಮುಖ್ಯವಾಗಿ ಮನುಷ್ಯನ ವಸತಿಯ ಕಾಂಪೌಂಡ್‌, ಕೈತೋಟ, ಕುದುರೆಲಾಯ, ಕೊಟ್ಟಿಗೆ ಮತ್ತು ಹೊರಮನೆಯಗಳು ಮುಂತಾದ ಸ್ಥಳಗಳಲ್ಲಿ ವಾಸಿಸುತ್ತವೆ. ತಮ್ಮ ಬಿಲತೋಡುವ ಅಭ್ಯಾಸದಿಂದ ನೆಲ ಮತ್ತು ಇಟ್ಟಿಗೆ ಹಾಗೂ ಗಾರೆ ಮೂಲಕ ಸುರಂಗ ತೋಡುವುದರಿಂದ ವಸತಿ ಪ್ರದೇಶವನ್ನು ಕೆಡಿಸುತ್ತವೆ. ಅವುಗಳ ದೊಡ್ಡಬಿಲಗಳು ಅವುಗಳ ಇರುವಿಕೆ ಸಾಕ್ಷಿ.

ಹಗಲು ಹೊತ್ತು ಬಿಲಗಳಲ್ಲಿ ಮರೆಯಾಗಿದ್ದು ರಾತ್ರಿವೇಳೆ ಸಿಕ್ಕಿದೆಡೆಗಳನ್ನೆಲ್ಲಾ ತೋಡಿ ಮಣ್ಣುಗುಡ್ಡೆಗಳನ್ನು ಹಾಕುವುದು ಇದರ ಸ್ವಭಾವ. ಊರು, ಗ್ರಾಮಗಳು ಮತ್ತು ವ್ಯವಸಾಯ (ಕೃಷಿ) ಪ್ರದೇಶಗಳಲ್ಲಿ ಇದರ ಹಾವಳಿ ಹೆಚ್ಚು.

—- 

ಗಣ : ರೊಡೆನ್ಷಿಯ
ಕುಟುಂಬ : ಮ್ಯೂರಿಡೀ (Muridae)
ಉದಾ : ಭಾರತದ ಮಕಮಲ್
ಹೆಗ್ಗಣ /ಬ್ಯಾಂಡಿಕೋಟ
ಬೆಂಗಾಲೆನ್ಸಿಸ್
(Velvet Rat of India)
ಶಾಸ್ತ್ರೀಯ ನಾಮ : (Bandicoota bengalensis)

446_69_PP_KUH

ತೀರಾ ಕುರುಡು, ಬಿಲ ತೋಡುವ ಹೆಗ್ಗಣ. ಇದು ದಕ್ಷಿಣ ದ್ವೀಪಕಲ್ಪಕ್ಕೆ ಸೀಮಿತವಾಗಿದೆ. ನಿಶಾಚರಿ ಮತ್ತು ಬಿಲವಾಸಿ. ಎಳೆ ತುಂಬಿದ ಜಮೀನು, ಗೋಡಾನ್‌ಕಣಜಗಳಿಗೆ ದಾಳಿ ಇಡುತ್ತದೆ. ಬಿಲತೋಡುವುದರಲ್ಲಿ ನಿಷ್ಣಾತ. ವಿಸ್ತಾರವಾದ ಬಿಲಗಳನ್ನು ತೋಡುತ್ತದೆ ಮತ್ತು ಆಹಾರವನ್ನು ಕೂಡಿಟ್ಟುಕೊಳ್ಳುತ್ತದೆ. ತನ್ನ ಬಿಲವನ್ನು ಕತ್ತಲಿನ ಸುರಕ್ಷತೆಯಲ್ಲಿ ಬಿಟ್ಟು ಹೊರಬರುತ್ತದೆ. ದವಸಧಾನ್ಯಗಳನ್ನು ತಿಂದು ನಾಶಪಡಿಸುವುದೇ ಅಲ್ಲದೆ ತಮ್ಮ ಕೂದಲು, ಮೂತ್ರ ಮತ್ತು ಹಿಕ್ಕಿಗಳನ್ನು ಬಿಟ್ಟು ಧಾನ್ಯಗಳನ್ನು ಕೆಡಿಸುತ್ತದೆ.

ಇವು ಸಮರ್ಥವಾಗಿ ಈಜಬಲ್ಲವು. ಕ್ರೂರ ಮತ್ತು ಜಗಳಗಂಟಿ ಪ್ರಾಣಿ. ರೇಗಿದಾಗ ಒಂದು ರೀತಿ ಮೂಗಿನಿಂದ ಹೊರಡುವ ಶಬ್ದದಂತೆ ಬಗುಳತ್ತದೆ. ಇದನ್ನು ತಿನ್ನುತ್ತಾರೆ.

ವರ್ಷವಿಡೀ ಸಂತಾನೋತ್ಪತ್ತಿ ಕ್ರಿಯೆ ನಡೆಯುತ್ತದೆ. ಮಾರ್ಚ್‌-ಜುಲೈ, ಅಕ್ಟೋಬರ್-ಡಿಸೆಂಬರ್ ನಲ್ಲಿ ಸಂತಾನೋತ್ಪತ್ತಿ ಕ್ರಿಯೆ ಹೆಚ್ಚು ಒಂದು ಸೂಲದಲ್ಲಿ ೫-೮ ಮರಿಗಳು ಹುಟ್ಟುತ್ತವೆ.

ಇದು ಪಳಗಿಸದ ಅಥವಾ ಕಾಡು ಪ್ರಾಣಿ. ಸಾಮಾನ್ಯವಾಗಿ ಗಾತ್ರದಲ್ಲಿ ಚಿಕ್ಕದು. ದೇಹದ ತುಪ್ಪುಳು ಚಿಕ್ಕದಾಗಿದೆ. ಮತ್ತು ಒರಟು. ಬಾಲವು ತಲೆ ಮತ್ತು ದೇಹಕ್ಕಿಂತ ಚಿಕ್ಕದು (೩/೪ ನೇ ಭಾಗ) ಮತ್ತು ಕಪ್ಪಾಗಿದೆ. ದೇಹದ ಮೇಲ್ಭಾಗದ ಬಣ್ಣ ಕಡುಕಂದು ಮತ್ತು ಕೆಳಭಾಗ ಬೂದು, ಕೆಲವೊಮ್ಮೆ ಬಿಳಿ ಅಥವಾ ಕಡುಬೂದು.

ಬ್ಯಾ. ಬೆಂ. ಕಾಕ್‌ ಎಂಬ (B. be. Kok) ಹೆಗ್ಗಣವು ಮೈಸೂರು ಜಿಲ್ಲೆಯ ವಿವಿಧ ಭಾಗಗಳಲ್ಲಿ ದೊರಕುತ್ತದೆ. ಇದರ ತಲೆ ಮತ್ತು ದೇಹದ ಉದ್ದ ೧೬೩ ಮೀ.ಮೀ. ಬಾಲ ೧೨೫ ರಿಂದ ೧೫೦ ಮಿ.ಮೀ. ಉದ್ದವಿರುತ್ತದೆ.

—-

ಗಣ : ರೊಡೆನ್ಷಿಯ
ಕುಟುಂಬ : ಮ್ಯುರಿಡೀ (
Muridae)
ಉದಾ : ಮನೆಯ ಚಿಟ್ಟಲಿ (House mouse)
ಶಾಸ್ತ್ರೀಯ ನಾಮ : ಮಸ್‌ ಮಸ್ಕ್ಯುಲಸ್ (Mus musculus)

447_69_PP_KUH

ವಿತರಣೆ ಮತ್ತು ಆವಾಸ : ಭಾರತದದಕ್ಷಿಣ ದ್ವೀಪಕಲ್ಪದಲ್ಲಿ ವಿಶೇಷವಾಗಿ ಕಂಡುಬರುತ್ತದೆ. ಹೆಚ್ಚಾಗಿ ಮನೆಗಳಲ್ಲಿ, ಕೆಲವು ಸಲ ಊರು ಮತ್ತು ಹಳ್ಳಿಗಳ ಪಕ್ಕದ ಕೃಷಿಭೂಮಿ, ತೋಟಗಳಲ್ಲಿಯೂ ಕಂಡು ಬರುತ್ತದೆ. ಅದು ಏಷ್ಯಾ ಖಂಡದಲ್ಲಿ ಹುಟ್ಟಿ ಜಗತ್ತಿನ ಬೇರೆಲ್ಲಾ ಭಾಗಗಳಿಗೂ ಹರಡಿದೆ ಎಂದು ನಂಬುತ್ತಾರೆ.

ಗಾತ್ರ : ಗಾತ್ರದಲ್ಲಿ ಸಣ್ಣದು. ದೇಹ ಮತ್ತು ತಲೆ ೨-೩ ಅಂಗುಲ ಉದ್ದ. ಮತ್ತು ಅಷ್ಟೇ ಉದ್ದದ ಬಾಲ.

ಆಹಾರ : ಸಸ್ಯಾಹಾರಿ.

ಲಕ್ಷಣಗಳು : ಭಾರತದ ಕೃಷಿ ಭೂಮಿಯ ಸಾಮಾನ್ಯ ಚಿಟ್ಟಿಲಿ. ದೇಹದ ಆಕಾರದಲ್ಲಿ ಇದು ಮನೆಯ ಇಲಿಯ ತದ್ರೂಪ. ಆದರೆ ಗಾತ್ರದಲ್ಲಿ ಸಣ್ಣದು. ಮೂತಿ ಬಲು ಉದ್ದ. ತುಪ್ಪುಳು ಕಡು ಕಂದಿನಿಂದ ತಿಳಿ ಕಂದಿನವರೆಗೆ ವ್ಯತ್ಯಾಸವಾಗಬಹುದು. ಹೊಟ್ಟೆಯ ಭಾಗ ಬಿಳಚಿಕೊಂಡಿರುತ್ತದೆ. ಇದು ಬಹಳ ಚೂಟಿಯಾದ ಪ್ರಾಣಿ. ಬಾವಿಗಳನ್ನು ನೇರವಾದ ಗೋಡೆಗಳನ್ನು ಕುಣಿಯುತ್ತಾ ಹತ್ತುತ್ತದೆ. ಇತರ ಇಲಿಗಳಂತೆ ಇದು ಹೆಚ್ಚು ಓಡಾಡಿದ ದಾರಿಗಳಲ್ಲಿಯೇ ಓಡಾಡುವುದು ಸಾಮಾನ್ಯ. ಮನೆಗಳಲ್ಲಿ ಪ್ರತಿದಿನವೂ ಒಂದೇ ಹಾದಿಯಲ್ಲಿ ಸಾಮಾನ್ಯವಾಗಿ ಗೋಡೆಗಳ ಪಕ್ಕದಲ್ಲಿ ಓಡಾಡುತ್ತದೆ. ಯಾವುದಾದರೂ ಮೂಲೆಯಲ್ಲಿ ನೆಲದ ಕೆಳಗೆ ಅಥವಾ ಮೆಟ್ಟಲುಗಳ ಕೆಳಗೆ, ಪುಸ್ತಕ ಹಾಗೂ ಬಟ್ಟೆಗಳ ನಡುವೆ, ಮರ ಮುಟ್ಟುಗಳ ನಡುವೆ, ಮೆತ್ತನೆಯ ವಸ್ತುಗಳನ್ನು ಬಳಸಿ ಗೂಡುಗಳನ್ನು ಕಟ್ಟುತ್ತದೆ.

ಸಂತಾನಾಭಿವೃದ್ಧಿ : ವರ್ಷಕ್ಕೆ ೩ ರಿಂದ ೫ ಬಾರಿ ಮರಿಹಾಕುತ್ತದೆ. ಒಂದು ಸೂಲದಲ್ಲಿ ೪-೮ ಮರಿಗಳಿರಬಹುದು. ಹುಟ್ಟಿದ ಮರಿಗಳು ಕುರುಡು ಮತ್ತು ಬೆತ್ತಲೆ. ಒಂದು ತಿಂಗಳ ವಯಸ್ಸಿನೊಳಗೆ ಪೂರ್ಣ ಬೆಳೆದು ಸಂತಾನೋತ್ಪತ್ತಿ ನಡೆಸಲು ಸಿದ್ಧವಾಗುತ್ತವೆ.

ಸ್ವಭಾವ : ನಿಶಾಚರಿ, ಬಿಲವಾಸಿ, ಅಪರೂಪವಾಗಿ ದಿನಚರಿ. ಮನೆ ಇಲಿ, ಹೆಗ್ಗಣ ಮತ್ತು ಚುಂಡಿಲಿಗಳೊಂದಿಗೆ ನಿಕಟ ಸಂಬಂಧ ಹೊಂದಿರುತ್ತದೆ. ಮನೆ ಇಲಿಯ ಜೊತೆಯಲ್ಲಿ ಮನೆಗಳಲ್ಲಿ ವಾಸಿಸುತ್ತದೆ.

ಮಸ್ ಮಸ್ಕ್ಯಲಸ್‌ಭಾರತದಿಂದ ಹೊರದೇಶಗಳಿಗೂ ರವಾನೆಯಾಗಿ ಇಂದು ಜಗತ್ತಿನಾದ್ಯಂತ ವಾಸಿಸುತ್ತದೆ. ಇದರಲ್ಲಿ ಅನೇಕ ಉಪಪ್ರಭೇದಗಳಿವೆ.

೧) ಮಸ್ ಮಸ್ಕ್ಯಲಸ್ ಕ್ಯಾಸ್ಪೇನಿಯಸ್ (M.m. castaneus) ಭಾರತದ ದ್ವೀಪಕಲ್ಪದಲ್ಲಿ ದೊರಕುತ್ತದೆ.

ಮಸ್ ಜಾತಿಯ ಇನ್ನೂ ಅನೇಕ ಪ್ರಭೇದಗಳು ಮತ್ತು ಉಪಪ್ರಭೇದಗಳು ದಕ್ಷಿಣ ಭಾರತದಲ್ಲಿ ದೊರಕುತ್ತದೆ.

೧) ಮಸ್ ಸರ್ವಿಕೋಲಾರ್ (M. cervicolor)

೨) ಮ. ಸ. ಫುಲ್ವಿಡೈವೆಂಟ್ರಿಸ್ (M.c. fulvidiventris)

೩) ಮ. ಸ. ಫಿಲಿಫ್ಸಿ (M.c. phillipsi)

೪) ಮ. ಸ. ಪಲ್‌ನಿಕ (M.c. palnica) ಪಳನಿ ಬೆಟ್ಟದಲ್ಲಿ ದೊರಕುತ್ತದೆ.

ನಸು ಹಳದಿ ಛಾಯೆಯ ಕಂದು ಚುಂಡಿಲಿಗಳಲ್ಲಿ ಮಸ್ ಫೆಮುಲಸ್ (M. famulus) ದಕ್ಷಿಣ ಭಾರತ, ನಿಲಗಿರಿ ಬೆಟ್ಟಗಳಲ್ಲಿ ದೊರಕುತ್ತದೆ. ಇದರ ಉಪಪ್ರಭೇದ ಮ.ಫೆ. ಫೆಮುಲಸ್ (M.f. famulus) ನೀಲಗಿರಿ ಬೆಟ್ಟಗಳಿಗೆ ಮಾತ್ರ ಸೀಮಿತವಾದಂತಿದೆ.