. ಗಣ : ಇನ್ಸೆಕ್ಟಿವೋರ
ಉದಾ : ಮುಳ್ಳಿಲಿ (Hedge hog)
ಶಾಸ್ತ್ರೀಯ ನಾಮ : ಪ್ಯಾರ ಎಕಿನಸ್ ನ್ಯುಡಿವೆಂಟ್ರಿಸ್ (Paraechinus nudiventris)

421_69_PP_KUH

ವಿತರಣೆ ಮತ್ತು ಆವಾಸ : ಇದು ಸಾಮಾನ್ಯ ಮುಳ್ಳಿಲಿ. ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ಬಯಲು ಸೀಮೆಗಳಲ್ಲಿ ಕಂಡುಬರುತ್ತದೆ.

ಗಾತ್ರ : ಸಣ್ಣ ಇಲಿಯ ಗಾತ್ರ.

ಆಹಾರ : ಇದು ಸರ್ವಭಕ್ಷ, ಬಸವನ ಹುಳು, ಕೀಟಗಳು, ಹುಳುಗಳು ಇದರ ಸಾಮಾನ್ಯ ಆಹಾರವಾದರೂ, ಸುಂಡಿಲಿ, ಇಲಿ, ಕಪ್ಪೆ, ಹಲ್ಲಿ, ಸಣ್ಣ ಹಾವುಗಳನ್ನು ಅಪರೂಪವಾಗಿ ತಿನ್ನುತ್ತದೆ. ಇವು ಹಣ್ಣನ್ನೂ ತಿನ್ನುವುದುಂಟು. ಕೆಲವು ಬೇರು ಹಾಗೂ ಇತರೆ ಸಸ್ಯಗಳನ್ನು ತಿನ್ನುತ್ತವೆ.

ಲಕ್ಷಣಗಳು : ಇದು ಸಣ್ಣ ತುಪ್ಪಳು ಪ್ರಾಣಿ. ಇದರ ಕೂದಲುಗಳು ನವಿರಾದ ಮೃದು ಮುಳ್ಳುಗಳಾಗಿ ಮಾರ್ಪಟ್ಟಿವೆ. ಈ ಮುಳ್ಳುಗಳ ಹೊದಿಕೆಯಿಂದಾಗಿ ಈ ಪ್ರಾಣಿಯನ್ನು ಮುಳ್ಳುಹಂದಿ ಎಂದು ತಪ್ಪಾಗಿ ತಿಳಿಯಲು ಅವಕಾಶವಿದೆ. ಇದಕ್ಕೆ ಬಾಗಬಲ್ಲ, ಚೂಪಾದ ಮೂತಿ ಇದೆ. ಮೂತಿಯು ಕೆಳದವಡೆಯಿಂದ ಮುಂದಕ್ಕೆ ಚಾಚಿ ಒಂದು ಪುಟ್ಟ ಸೊಂಡಿಲಿನಂತಾಗಿದೆ. ಕಾಲುಗಳಲ್ಲಿ ಐದೈದು ಬೆರಳುಗಳಿದ್ದು ಎಲ್ಲಾ ಬೆರಳುಗಳಿಗೂ ನಖಗಳಿವೆ. ಇದು ಪಾದಗಾಮಿ. ಇದರ ಎಲ್ಲಾ ಹಲ್ಲುಗಳು ಒಂದೇ ತೆರನಾಗಿದ್ದು ಚೂಪಾದ ಶಿಖೆಗಳನ್ನು ಹೊಂದಿವೆ. ಇದರ ದಂತ ಸೂತ್ರ ೩, ೧, ೪, ೩ / ೩, ೧, ೪, ೩ ಇದ್ದು ಇದು ಸಸ್ತನಿಗಳ ಸಾಮಾನ್ಯೀಕೃತ ದಂತ ಸೂತ್ರವನ್ನು ಹೋಲುತ್ತದೆ. ಸ್ತನಗಳು ಕಂಕುಳಿಂದ ತೊಡೆ ಸಂದಿನವರೆಗೂ ಹರಡಿರುತ್ತವೆ. ವೃಷಣಗಳು ಉದರಾವಕಾಶದಲ್ಲಿವೆ. ಮುಳ್ಳುಗಳು ಬೆನ್ನು ಮತ್ತು ಪಕ್ಕೆಗಳಲ್ಲಿವೆ, ಹೊಟ್ಟೆಯ ಭಾಗದಲ್ಲಿಯೂ ಇವೆ.

ಸಂತಾನಾಭಿವೃದ್ಧಿ : ವರ್ಷದಲ್ಲಿ ಎರಡು ಬಾರಿ ಮೇ-ಜುಲೈ, ಆಗಸ್ಟ್-ಸೆಪ್ಟೆಂಬರ್ ನಲ್ಲಿ ಮರಿ ಹಾಕುತ್ತವೆ. ಗರ್ಭಾವಧಿ ೩೧-೪೦ ದಿನಗಳು. ಒಂದು ಸೂಲದಲ್ಲಿ ೩-೭ ಮರಿಗಳು ಜನಿಸುತ್ತವೆ.

ಸ್ವಭಾವ : ನಿಶಾಚರಿ, ಬೆಳಗಿನ ಹೊತ್ತು ಬಿಲಗಳಲ್ಲಿ ಅಥವಾ ಪೊದರುಗಳಲ್ಲಿ ಅಡಗಿಕೊಂಡಿದ್ದು ಕತ್ತಲಾಗುತ್ತಲೇ ಆಹಾರಾನ್ವೇಷಣೆಗೆ ಹೊರಡುತ್ತದೆ. ಅಪಾಯದ ಮುನ್ಸೂಚನೆ ಕಂಡಾಗ ಅಥವಾ ಶತ್ರು ಎದುರಾದಾಗ ಚೆಂಡಿನಂತೆ ಸುತ್ತಿಕೊಂಡು ರಕ್ಷಿಸಿಕೊಳ್ಳುತ್ತದೆ.

—- 

ಗಣ : ಇನ್ಸೆಕ್ಟಿವೋರ
ಉದಾ : ಸಿಂಡು ಮೂಗಿಲಿ (ಚುಂಡಿಲಿ) (Musk shrew)
ಶಾಸ್ತ್ರೀಯ ನಾಮ : ಕ್ರೊಸಿಡುರ ಸೆರುಲಿಯಸ್ (ಸಂಕಸ್ ಸೆರುಲಿಯಸ್) (Crocidura Caeruleus)

ವಿತರಣೆ : ಮತ್ತು ಆವಾಸ : ಇವು ಭಾರತದ ಎಲ್ಲೆಡೆಯಲ್ಲಿಯೂ ಕಂಡುಬರುತ್ತವೆ. ಕೆಲವು ಬಯಲು ಸೀಮೆಗೆ ಸೀಮಿತವಾಗಿವೆ. ಮತ್ತೆ ಕೆಲವು ಗುಡ್ಡನಾಡಿನಲ್ಲಿ ಬಿಲಗಳಲ್ಲಿ ವಾಸಿಸುತ್ತವೆ. ಸಾಮಾನ್ಯವಾದ ಬೂದು ಕಸ್ತೂರಿ ಸಿಂಡು ಮೂಗಿಲಿಗಳು ದಕ್ಷಿಣ ಭಾರತದಲ್ಲಿ ವಾಸಿಸುತ್ತವೆ. ಸಾಮಾನ್ಯ ರಚನೆಯಲ್ಲಿ ಸುಂಡಿಲಿಗಳನ್ನು ಹೋಲುವ ಪುಟ್ಟ ಪ್ರಾಣಿಗಳು. ಬಿಲಗಳಲ್ಲಿ, ಕೆಲವು ನೀರಿನ ಬಳಿ ವಾಸಿಸುತ್ತವೆ. ಇವು ಜಲಜೀವನಕ್ಕೆ ಹೊಂದಿಕೊಂಡಿವೆ.

ಗಾತ್ರ : ತಲೆ ಮತ್ತು ದೇಹ ಸೇರಿ ೬ ಅಂಗುಲ ಉದ್ದ, ಬಾಲ ೩ ಅಂಗುಲ ಉದ್ದ.

ಆಹಾರ : ಕೀಟಾಹಾರಿ. ನೊಣ, ಸೊಳ್ಳೆ, ಜಿರಲೆ, ತಿಗಣಿ ಮುಂತಾದ ಕೀಟಗಳು ಇವುಗಳ ಆಹಾರ. ಮೂಲತಃ ಕೀಟಾಹಾರಿಗಳಾದರೂ ತಾವು ಸೋಲಿಸಬಹುದಾದ ಶಂಖದ ಪ್ರಾಣಿ, ಹುಳುಗಳಂತಹ ಯಾವುದೇ ಸಣ್ಣ ಪ್ರಾಣಿಗಳನ್ನು ತಿನ್ನುತ್ತವೆ. ಸತ್ತ ಪ್ರಾಣಿಗಳ ಶವಗಳನ್ನು ತಿನ್ನುವುದುಂಟು. ಅಪರೂಪವಾಗಿ ಧಾನ್ಯಗಳನ್ನೂ ಕೆಲವೊಮ್ಮೆ ಸಸ್ಯಗಳ ಕಾಂಡವನ್ನೂ ತಿನ್ನುವುದುಂಟು ವಿಕಿರಣತೆಯಿಂದ ದೇಹದ ಶಾಖವನ್ನು ಕಳೆದುಕೊಳ್ಳುತ್ತವೆ. ಹೀಗೆ ಕಳೆದುಕೊಂಡ ಶಾಖವನ್ನು ಆಹಾರದ ಮೂಲಕ ಪುನಃ ಗಳಿಸಿಕೊಳ್ಳುತ್ತವೆ. ಇವು ಪ್ರತಿ ೩ ಗಂಟೆಗಳಿಗೊಮ್ಮೆ ಆಹಾರ ಸೇವಿಸಲೇಬೇಕು. ಇಲ್ಲದಿದ್ದರೆ ಸಾಯುತ್ತವೆ.

ಲಕ್ಷಣಗಳು : ಚಿಕ್ಕವು. ಕಿವಿ ಅಲೆಗಳು ದುಂಡಾಗಿವೆ. ದೇಹಕ್ಕೆ ಮೃದುವಾದ ತುಪ್ಪುಳ ಹೊದಿಕೆಯಿದೆ. ತುಪ್ಪುಳ ತಿಳಿ ಬೂದು ಅಥವಾ ಕಂದು ಛಾಯೆ ಇರಬಹುದು. ಕಾಲು ಮತ್ತು ಬಾಲದ ಮೇಲೆ ವಿರಳವಾಗಿ ಹರಡಿದ ಕೂದಲ ಹೊದಿಕೆ ಇದೆ. ಕಾಲುಗಳು ಹತ್ತಲು ಮತ್ತು ತೋಡಲು ಅನುವಾಗಿಲ್ಲ. ಮುಂದಿನ ಎರಡು ಹಲ್ಲುಗಳು ಇತರೆ ಹಲ್ಲುಗಳಿಂದ ಭಿನ್ನವಾಗಿವೆ. ಮೇಲು ದವಡೆಯ ಹಲ್ಲುಗಳು ಬಾಗಿವೆ ಮತ್ತ ಅವಕ್ಕೆ ಸದೃಢವಾದ ಬುಡದ ಶಿಖೆಗಳಿವೆ. ಕೆಳದವಡೆಯಲ್ಲಿ ಹಲ್ಲುಗಳು ಉದ್ದವಾಗಿದ್ದು ಸಮಾಂತರದಲ್ಲಿ ಮುಂದಕ್ಕೆ ಬಾಚಿವೆ. ಕೆಲವು ಸಾರಿ ತುದಿಯಲ್ಲಿ ಸ್ವಲ್ಪ ಮೇಲಕ್ಕೆ ಬಾಗಿರಬಹುದು. ಚೂಪಾದ ಮೂತಿ, ಅದುಮಿದಂತಿರುವ ಕಿವಿಯಾಲೆಗಳು ಮತ್ತು ಹಲ್ಲುಗಳ ಲಕ್ಷಣದಿಂದ ಈ ಮೂಗಿಲಿಗಳನ್ನು ಇಲಿಗಳಿಂದ ಪ್ರತ್ಯೇಕಿಸಿ ಗುರುತಿಸಬಹುದು. ತೀಕ್ಷ್ಣವಾದ ಕಸ್ತೂರಿ ಕಂಪನ್ನು ಈ ಚುಂಡಿಲಿ ಹೊರಸೂಸುತ್ತವೆ. ಈ ಕಂಪು ಕಂಕುಳ ಹಿಂದಿರುವ ಕಸ್ತೂರಿ ಗ್ರಂಥಿಗಳಿಂದ ಸ್ರವಿಸಲ್ಪಡುವುದು. ಕೆಲವು ಪ್ರಭೇದಗಳಲ್ಲಿ ಈ ಗ್ರಂಥಿಗಳು ಇಲ್ಲ. ಸಂಭೋಗ ಕಾಲದಲ್ಲಿ ಈ ಕಂಪು ಸ್ರಾವಿಕೆಯನ್ನು ಹೆಚ್ಚು ಉತ್ಪತ್ತಿ ಮಾಡುತ್ತವೆ. ಮೂತಿ, ಕಿವಿಗಳು, ಕಾಲುಗಳು ಮತ್ತು ಬಾಲಗಳ ಬಳಿಯ ಚರ್ಮವು ಕಡುಕೆಂಪು. ಈ ಭಾಗಗಳಲ್ಲಿ ಕೂದಲುಗಳು ವಿರಳವಾಗಿರುವುದರಿಂದ ಕಡು ಕೆಂಪು ಬಣ್ಣವು ಕಾಣಿಸುತ್ತದೆ.

ಸಂತಾನಾಭಿವೃದ್ಧಿ : ಪ್ರಬುದ್ಧಾವಸ್ಥೆಯನ್ನು ತಲುಪುವ, ಮುನ್ನವೇ ಸಂತಾನೋತ್ಪತ್ತಿ ನಡೆಸುತ್ತವೆ. ಒಣಹಲ್ಲು, ಎಲೆಗಳು ಮತ್ತು ಇತರ ಕೊಳೆಯುವ ವಸ್ತುಗಳಿಂದ ಒರಟಾದ ಗೂಡುಗಳನ್ನು ಕಟ್ಟಿ ಅದರಲ್ಲಿ ಮರಿಗಳನ್ನು ಇಡುತ್ತವೆ. ಒಂದು ಸೂಲಿಗೆ ೨ ಅಥವಾ ೩ (೪-೮) ಮರಿಗಳು ಜನಿಸುತ್ತವೆ. ಗರ್ಭಾವಧಿಯ ವಿಷಯ ತಿಳಿಯದು. ಮರಿಗಳು ಚಟುವಟಿಕೆಯಿಂದಿದ್ದು ತಾಯಿಯ ಬಾಲದ ತುದಿಯನ್ನು ಕಚ್ಚಿಕೊಂಡು ಅದರ ಹಿಂದೆ ಓಡಾಡುತ್ತವೆ. ಮರಿಗಳು ತಮ್ಮ ಮುಂದಿರುವ ತಾಯಿ ಅಥವಾ ಇನ್ನೊಂದು ಮರಿಯ ಬಾಲವನ್ನು ಕಚ್ಚಿಕೊಂಡು ಒಂದರ ಹಿಂದೆ ಒಂದರಂತೆ ಹಿಂಬಾಲಿಸುತ್ತವೆ.

ಸ್ವಭಾವ : ಇವು ಕತ್ತಲಿನಲ್ಲಿ ಮನೆಗಳನ್ನು ಪ್ರವೇಶಿಸಿ ಕೀಟಗಳನ್ನು ಹುಡುಕುತ್ತವೆ. ಹೆದರಿದಾಗ ಒಂದು ರೀತಿಯ ಕೀಚಲು ಧ್ವನಿಯನ್ನುಂಟು ಮಾಡುತ್ತವೆ. ಇವು ಇಲಿಗಳಂತಿರುವುದರಿಂದ ಅಹಿತಕರವಾದ ಕಂಪನ್ನು ಉತ್ಪತ್ತಿ ಮಾಡುವುದರಿಂದ ಈ ಮೂಗಿಲಿಗಳನ್ನು ಇಲಿಗಳೆಂದು ತಪ್ಪಾಗಿ ಭಾವಿಸಿ ಇವುಗಳನ್ನು ಕಂಡಲ್ಲಿ ಕೊಲ್ಲುವುದುಂಟು. ವಾಸ್ತವವಾಗಿ ಇವು ಉಪಯುಕ್ತ ಪ್ರಾಣಿಗಳು. ಒಂದು ರೀತಿಯಲ್ಲಿ ಗಬ್ಬು ಪಿಡಸುಗಳಾದ ಜಿರಲೆ ಮತ್ತು ಇತರ ಮನೆಯ ಕೀಟಗಳನ್ನು ತಿಂದು ನಾಶಪಡಿಸಿ ಉಪಕಾರ ಮಾಡುತ್ತವೆ. ಇವು ಇಲಿಗಳ ಇರುವನ್ನು ಸಹಿಸುವುದಿಲ್ಲ ಮತ್ತು ಇವುಗಳ ಇರುವಿನಿಂದ ಅವನ್ನು ದೂರವಿಡುತ್ತವೆ. ಹಿಂಸ್ರ ಪ್ರಾಣಿಗಳು, ಮಾಂಸಾಹಾರಿ ಪಕ್ಷಿಗಳು (ಹಕ್ಕಿಗಳು), ಅನೇಕ ಮಾಂಸಾಹಾರಿಗಳು ಚುಂಡಿಲಿಗಳನ್ನು ತಿನ್ನುತ್ತವೆ. ಇವು ಜಗಳಗಂಟಿಗಳು ಮತ್ತು ಮುಂಗೋಪಿಗಳು ಮನೆಗೆ ಚುಂಡಿಲಿ ಪ್ರವೇಶಿಸಿದರೆ ಅದೊಂದು ಶುಭ ಸೂಚನೆ ಎಂಬ ನಂಬಿಕೆಯುಂಟು.

—- 

ಗಣ : ಇನ್ಸೆಕ್ಟಿವೋರ
ಉದಾ : ಮೂಗಿಲಿ
ಶಾಸ್ತ್ರೀಯ ನಾಮ : ಸಂಕಸ್ ಮುರಿನಸ್ (Suncus murinus)

422_69_PP_KUH

ವಿತರಣೆ ಮತ್ತು ಆವಾಸ : ವ್ಯಾಪಕವಾಗಿ ವಿತರಣೆಗೊಂಡ ಕೀಟಾಹಾರಿ ಸಸ್ತನಿಗಳು ಉಷ್ಣವಲಯ ಮತ್ತು ಸಮಶೀತೋಷ್ಣವಲಯಗಳೆರಡರಲ್ಲೂ ಕಾಣಬರುತ್ತವೆ. ಇದರ ಅನೇಕ ಪ್ರಭೇದಗಳು ಭಾರತದಲ್ಲಿ ಮತ್ತು ಕರ್ನಾಟಕದಲ್ಲಿ ದೊರಕುತ್ತವೆ. ಇದು ಬಯಲು ಸೀಮೆ ಮತ್ತು ಬೆಟ್ಟಗುಡ್ಡಗಳಲ್ಲಿ ವಾಸಿಸುತ್ತವೆ. ಅವುಗಳಲ್ಲಿ ಬಹಳ ಸಾಮಾನ್ಯವಾಗಿ ದೊರಕುವುದು ಕಂದು ಕಸ್ತೂರಿ ಮೂಗಿಲಿ.

ಗಾತ್ರ : ತಲೆ ಮತ್ತು ದೇಹದ ಉದ್ದ ೧೫ ಸೆಂ.ಮೀ. ಬಾಲ ೮ ಸೆಂ.ಮಿ. ಉದ್ದ.

ಆಹಾರ : ಜಿರಲೆ ಮತ್ತು ಇತರ (ಗೃಹ) ಮನೆಯ ಕೊಳಕು ಕೀಟಗಳನ್ನು ತಿನ್ನುತ್ತವೆ.

ಲಕ್ಷಣಗಳು : ಕೆಳತುಟಿಗಿಂತಲೂ ಮುಂದಕ್ಕೆ ಚಾಚುವ ಮೂತಿಯಿಂದಾಗಿ ಇವಕ್ಕೆ ಮೂಗಿಲಿ ಎನ್ನುತ್ತಾರೆ. ಕಣ್ಣುಗಳು ಸಣ್ಣವು, ಕಿವಿದಂಡು, ಆಕಾರದಲ್ಲಿ ಹೆಚ್ಚು ಕಡಿಮೆ ಮನುಷ್ಯನ ಕಿವಿಗಳಂತಿವೆ. ದೇಹದ ಮೇಲೆ ಮೃದು ತುಪ್ಪಳು ಹೊದಿಕೆ ಇದೆ. ಆದರೆ ಕಾಲುಗಳು ಮತ್ತು ಬಾಲದ ಮೇಲೆ ತೆಳು ತುಪ್ಪುಳಿದೆ. ಕಾಲುಗಳು ಹತ್ತಲು ಮತ್ತು ತೋಡಲು ವಿಶೇಷವಾಗಿ ಪರಿಣಿತವಾಗಿವೆ. ಹಲ್ಲುಗಳು, ವಿಶೇಷವಾಗಿವೆ. ಮುಂದಿನ ಎರಡು ಹಲ್ಲುಗಳು ಉಳಿದೆಲ್ಲವುಗಳಿಂದ ಭಿನ್ನವಾಗಿವೆ. ಮೇಲು ದವಡೆಯ ಹಲ್ಲುಗಳು ಬಾಗಿವೆ, ಮತ್ತು ಅವುಗಳ ಶಿಖೆ ಅಥವಾ ಹಲ್ಲುಗಳ ಬುಡದಲ್ಲಿ ಗಮನಾರ್ಹ ಶಿಖೆಗಳಿವೆ. ಕೆಳದವಡೆಯಲ್ಲಿ ಅವು ಉದ್ದವಾಗಿದ್ದು ನೇರವಾಗಿ ಮುಂದಕ್ಕೆ ಚಾಚಿವೆ. ತುದಿಯಲ್ಲಿ ಕೆಲವೊಮ್ಮೆ ಮೇಲಕ್ಕೆ ಬಾಗಿರುತ್ತವೆ. ಮೂತಿ ಚೂಪಾಗಿದೆ. ಚೂಪಾದ ಮೂತಿ, ಚಪ್ಪಟೆಯಾದ ಕಿವಿಗಳು ಮತ್ತು ಹಲ್ಲುಗಳ ಆಕಾರದಿಂದ ಇವುಗಳನ್ನು ಇಲಿಗಳಿಂದ ಪ್ರತ್ಯೇಕಿಸಿ ಗುರುತಿಸಬಹುದು. ಇದನ್ನು ಬಹಳೊಮ್ಮೆ ಇಲಿ ಎಂದೇ ತಪ್ಪು ತಿಳಿದು ‘ಕಸ್ತೂರಿ ಇಲಿ’ ಎಂದು ಹೇಳುವುದುಂಟು. ಇವು ಒಂದು ರೀತಿಯ ಘಾಟು ವಾಸನೆಯನ್ನು ಉತ್ಪತ್ತಿ ಮಾಡುತ್ತವೆ. ದೇಹದ ಎರಡು ಕಡೆಗಳಲ್ಲಿರುವ ಗ್ರಂಥಿಗಳು ಈ ವಾಸನೆ ವಸ್ತುವನ್ನು ಉತ್ಪತ್ತಿ ಮಾಡುತ್ತವೆ. ಈ ಗ್ರಂಥಿಯ ತೆರಪುಗಳು ಹಿಂದಕ್ಕೆ ಬಾಗಿದ ಒರಟು ಬಿರುಗೂದಲುಗಳಿಂದ ಮುಚ್ಚಿದೆ. ಋತು ಮಾಸದಲ್ಲಿ ಇದರ ಸ್ರಾವಿಕೆ ಹೆಚ್ಚು.

ಇದರ ಮೃದು ತುಪ್ಪೂಳು ತಿಳಿಕಂದು ಅಥವಾ ಕಂದು ಬಣ್ಣವಾಗಿರುತ್ತದೆ. ಅಥವಾ ಬೂದು ಕಂದಾಗಿರಬಹುದು. ಮೂತಿ, ಕಿವಿಗಳು, ಕಾಲುಗಳು ಮತ್ತು ಬಾಲದ ಕಡುಕೆಂಪು ಚರ್ಮ ತೆಳು ಕೂದಲೊಳಗಿನಿಂದ (ತುಪ್ಪುಳ ಒಳಗಿನಿಂದ) ಎದ್ದು ಕಾಣುತ್ತದೆ.

ಸಂತಾನಾಭಿವೃದ್ಧಿ : ಪ್ರಾಯಕ್ಕೆ ಮೊದಲೇ ಸಂತಾನಾಭಿವೃದ್ಧಿಗೆ ತೊಡಗುತ್ತವೆ. ಒಂದು ಸೂಲಿಗೆ ೨-೩ ಮರಿಗಳು ಜನಿಸುತ್ತವೆ. ಅವುಗಳನ್ನು ಹುಲ್ಲು, ಬಿದ್ದ ಎಲೆಗಳು ಮತ್ತು ಇತರ ಕಸಕಡ್ಡಿಗಳ ನಡುವಿನ ಗೂಡುಗಳಲ್ಲಿಟ್ಟು ಸಾಕುತ್ತವೆ. ಮರಿಗಳು ತುಂಬಾ ಚೂಟಿ. ತನ್ನ ದವಡೆಗಳಿಂದ ಮುಂದಿರುವ ಮರಿಯ ಬಾಲ ಕಚ್ಚಿಕೊಂಡು ಸಾಲಾಗಿ ತಾಯಿಯನ್ನು ಹಿಂಬಾಲಿಸುತ್ತವೆ.

ಸ್ವಭಾವ : ದೀಪ ಹಚ್ಚಿದ ಮೇಲೆ ಅಥವಾ ಕತ್ತಲಿನಲ್ಲಿ ಕೀಟಗಳನ್ನು ಹುಡುಕುತ್ತಾ ಮನೆಗಳನ್ನು ಪ್ರವೇಶಿಸುವ ದೊಡ್ಡ ಗಾತ್ರದ ಮೂಗಿಲಿ ಇದು. ಹೆದರಿದಾಗ ಅದು ಉತ್ಪತ್ತಿ ಮಾಡುವ ಜೋರಾದ ‘ಕಿಚ್‌ಕಿಚ್‌’ ಸದ್ದು ಅದರ ಇರಿವನ್ನು ತಿಳಿಸುತ್ತದೆ. ಇಲಿಗಳಂತಿರುವ ಅವುಗಳ ಆಕಾರ, ಅವು ಉತ್ಪತ್ತಿ ಮಾಡುವ ದುರ್ನಾತದಿಂದಾಗಿ ಕಂಡಕೂಡಲೆ ಅವುಗಳನ್ನು ಕೊಲ್ಲುತ್ತಾರೆ. ಆದರೆ ಇವು ಮನೆಗಳಲ್ಲಿ ಜಿರಲೆ ಮತ್ತಿತರ ಕೆಟ್ಟ ಕೀಟಗಳನ್ನು ತಿಂದು ಉಪಕಾರ ಮಾಡುತ್ತವೆ. ತಾವು ಮುಟ್ಟಿದ ವಸ್ತುಗಳಿಗೆ ತಮ್ಮ ಪುನುಗು ಹೆಚ್ಚುತ್ತವೆ ಎಂಬ ಭಾವನೆ ತಪ್ಪು.

ಇದರ ಇತರ ಪ್ರಭೇದಗಳು.

ಸಂಕಸ್ ಮಲಬಾರಿಕಸ್ : ದಕ್ಷಿಣ ಭಾರತ, ಕೊಚಿನ್, ಕೊಡಗು

ಸಂಕಸ್ ಎಟ್ರೊಪಸ್ ಎಟ್ರೊಪಸ್ : ನೀಲಗಿರಿ ಬೆಟ್ಟಗಳು.

ಸಂಕಸ್ ಡೇಸ್ (ಹಗಲು ಚುಂಡಿಲಿ) : ದಕ್ಷಿಣ ಭಾರತದ ದ್ವೀಪ ಕಲ್ಪಗಳು.

ಸಂಕಸ್ ಮುರಿನಸ್ (ಮನೆಯ ಚುಂಡಿಲಿ) : ಭಾರತದೆಲ್ಲೆಡೆಗಳಲ್ಲಿ ಕಂಡುಬರುತ್ತವೆ.

—- 

ಗಣ : ಇನ್ಸೆಕ್ಟಿವೋರ
ಉದಾ : ಮರ ಮೂಗಿಲಿ (Tree Shrew)
ಶಾಸ್ತ್ರೀಯ ನಾಮ : ಟುಪೇಯ ಇಲ್ಲಿಯೋಟಿ (Tupaia ellioti)
ಸ್ಥಳೀಯ ಹೆಸರುಗಳು : ಮೂಗಿಲ್, ಅನತನ್

423_69_PP_KUH

ವಿತರಣೆ ಮತ್ತು ಆವಾಸ : ಮುಖ್ಯವಾಗಿ ಭೂವಾಸಿಗಳು. ರಕ್ಷಣೆಗಾಗಿ ಮರಗಳನ್ನು ಏರುತ್ತವೆ. ಅನತನ್ ಇಲ್ಲಿಯೋಟಿ ಭಾರತದ ಪರ್ಯಾಯ ದ್ವೀಪದಲ್ಲಿ ವಾಸಿಸುತ್ತದೆ. ಶುಷ್ಕ ಮತ್ತು ತೇವ ಕಾಡುಗಳೆರಡರಲ್ಲಿಯೂ ಕಂಡುಬರುತ್ತವೆ.

ಗಾತ್ರ : ತಲೆ ಮತ್ತು ದೇಹ ೧೭೫ ರಿಂದ ೨೦೦ ಮೀ.ಮೀ. ಉದ್ದ. ಬಾಲ ೨೦೦-೨೩೦ ಮೀ.ಮೀ. ಉದ್ದ.

ಆಹಾರ : ಹಣ್ಣುಗಳು ಮತ್ತು ಕೀಟಗಳು ಇದರ ಆಹಾರ. ಸಸ್ತನಿಗಳು ಮತ್ತು ಹಕ್ಕಿಗಳನ್ನು ಸಣ್ಣ ಪ್ರಾಣಿಗಳನ್ನೂ ತಿನ್ನುತ್ತದೆ. ಕುಡಿಯಲು ಮತ್ತು ಸ್ನಾನಮಾಡಲು ನೀರನ್ನು ಕಂಡರೆ ಇಷ್ಟ.

ಲಕ್ಷಣಗಳು : ಈ ಮರ ಮೂಗಿಲಿಯು ತನ್ನ ದೇಹ. ದುಂಡಾದ ಕಿವಿ, ಕಾಲುಗಳು ಮತ್ತು ಬಾಲದ ರಚನೆಯಲ್ಲಿ ಅಳಿಲಿನ ಆಕಾರದಲ್ಲಿದೆ. ಅಳಿಲು ಮತ್ತು ಚುಂಡಿಲಿಯನ್ನು ಹೋಲುತ್ತದೆ. ಇದರ ಉದ್ದವಾದ ಮೂತಿಯು ಚುಂಡಿಲಿಯದರಂತಿದೆ. ಪಾದಗಳು ಅಳಿಲಿನಂತಿದ್ದು ಹತ್ತಲು ಚೆನ್ನಾಗಿ ಹೊಂದಿಕೊಂಡಿವೆ. ಪಾದ ಮೆತ್ತೆಗಳು ಬೆತ್ತಲೆಯಾಗಿವೆ. ಬೆರಳುಗಳು ಉದ್ದ, ನಯವಾಗಿವೆ. ನಖಗಳು ಉದ್ದ ಮತ್ತು ಸ್ವಲ್ಪ ಬಾಗಿವೆ.

ದೇಹದ ತಳಭಾಗ ಚಿಕ್ಕಗಳಿರುವ ಹಳದಿ ಮತ್ತು ಕಂದು ಬಣ್ಣ, ಉಳಿದ ಭಾಗ ಹಳದಿಯಿಂದ ಕೆಂಪಿನವರೆಗೆ ಬದಲಾಗಬಹುದು. ಕೆಲವೊಮ್ಮೆ ಕಂದು ಆಗಿರಬಹುದು. ಇದು ಓಡಾಡುವ ರೀತಿಯಲ್ಲಿಯೂ ಅಳಿಲನ್ನು ಹೋಲುತ್ತದೆ.

ಸಂತಾನಾಭಿವೃದ್ಧಿ : ಹೆಚ್ಚು ತಿಳಿಯದು. ಹೆಣ್ಣು ಒಮ್ಮೆಗೆ ಒಂದು ಮರಿಯನ್ನು ಹಾಕುತ್ತದೆ. ಆದರೆ ೩ ಮರಿಗಳನ್ನೂ ಹಾಕಿದ ನಿದರ್ಶನಗಳಿವೆ.

ಸ್ವಭಾವ : ಮಲಯ ಭಾಷೆಯಲ್ಲಿ ಟುಪೇಯ ಅಂದರೆ ಅಳಿಲು ಎಂದರ್ಥ. ಮರ ಮೂಗಿಲಿ ಎಂಬ ಹೆಸರು ಅದು ಮರವಾಸಿ ಇರಬಹುದೆಂಬ ತಪ್ಪು ಅಭಿಪ್ರಾಯ ಮೂಡಿಸುತ್ತದೆ. ಮರ ಹತ್ತಲು ಪರಿಣಿತ ಪ್ರಾಣಿಗಳಾದರೂ, ಆತ್ಮರಕ್ಷಣೆಗೆ ಅಗತ್ಯವಾದಾಗ ಮಾತ್ರ ಮರಹತ್ತುತ್ತವೆ. ಅವು ತಮ್ಮ ಕಾಲವನ್ನೆಲ್ಲಾ ಉದುರಿದ ಎಲೆಗಳು, ಕಲ್ಲುಗಳ ಕೆಳಗೆ, ಸಂದುಗಳು, ಬಿರುಕುಗಳಲ್ಲಿ ಮತ್ತು ನೆಲದ ಮೇಲೆ ಬೆಳೆದ ಕುರುಚಲು ಗಿಡಗಳನ್ನು ಹತ್ತಿ ಇಳಿದು ನೆಲದ ಮಟ್ಟದಲ್ಲಿ ಆಹಾರ ಹುಡುಕುತ್ತಾ ಕಳೆಯುತ್ತವೆ. ಇವುಗಳ ಚುರುಕಾದ ಓಡಾಟ ಮುಂಗುಸಿಯ ನೆನಪು ಮಾಡಿಕೊಡುತ್ತದೆ. ಆದರೆ ಮರದ ಮೇಲಿನ ಇವುಗಳ ಚಟುವಟಿಕೆ ಅಳಿಲುಗಳಂತಿಲ್ಲ. ಅಳಿಲುಗಳಂತೆ ಮರದಿಂದ ಮರಕ್ಕೆ ನೆಗೆಯಲಾರವು. ಬಾಲ ಅಲ್ಲಾಡಿಸವು ಅಥವಾ ತಲೆಕೆಳಗಾಗಿ ಕಾಂಡಗಳಿಗೆ ನೇತುಬೀಳವು. ಅಳಿಲುಗಳಿಗೆ ಇವುಗಳ ಹೋಲಿಕೆ ಕೇವಲ ಆಕಾರದಲ್ಲಿ ಮಾತ್ರ. ಅವುಗಳ ಸ್ವಭಾವದಲ್ಲಿ ಅಳಿಲಿನ ಸ್ವಭಾವ ಕಿಂಚಿತ್ತೂ ಇಲ್ಲ. ಒಮ್ಮೆ ಮರಮೂಗಿಲಿ ಎಂದು ಗುರುತಿಸಿದರೆ ಅದನ್ನು ಮರೆಯುವಂತಿಲ್ಲ. ಒಂದು ಜೊತೆ ಒಂದು ಪ್ರದೇಶವನ್ನು ಅಕ್ರಮಿಸಿಕೊಂಡು ಸ್ವಾಮ್ಯ ಸ್ಥಾಪಿಸಿದವೆಂದರೆ ತಮ್ಮದೇ ಪ್ರಭೇದದ ಇತರ ಪ್ರಾಣಿಗಳನ್ನು ಅಲ್ಲಿಗೆ ಬಿಡಗೊಡುವುದಿಲ್ಲ. ಅವುಗಳನ್ನು ಸುಲಭವಾಗಿ ಪಳಗಿಸಬಹುದು. ಮನೆಗಳಿಗೆ ನುಗ್ಗಿ ಬಿಡಿಬೀಸಾಗಿ ಆಹಾರ ಹುಡುಕುತ್ತವೆ. ಹಾಸಿಗೆ, ಮೇಜುಗಳನ್ನೇರಿ ಓಡಾಡುತ್ತವೆ.