ನಂಬಿಕೆಗಳನ್ನು ಹೊರತು ಪಡಿಸಿದ ಬದುಕಿನ ಕಲ್ಪನೆಯೇ ಅಸಾಧ್ಯ. ಪುರಾತನ ಮಾನವನಿಂದ ಹಿಡಿದು ಅತ್ಯಂತ ಆಧುನಿಕ ಮನುಷ್ಯನ ಚಟುವಟಿಕೆಗಳವರೆಗೆ ಇವು ವ್ಯಾಪಿಸಿವೆ. ಬದುಕು ಎಷ್ಟು ಪ್ರಾಚೀನವೊ ನಂಬಿಕೆಗಳು ಅಷ್ಟೇ ಪ್ರಾಚೀನವಾದವು. ಆದಿಮಾನವನ ಅತಾರ್ಕಿಕ ಮನಸ್ಸು, ಅವ್ಯಕ್ತಶಕ್ತಿಯೊಂದರ ಬಗೆಗಿನ ಭಯ ನಂಬಿಕೆಗಳ ಹುಟ್ಟಿಗೆ ಕಾರಣವೆನ್ನಬಹುದು. ಅಭಿವ್ಯಕ್ತಿಗೆ ಮೂಲವಾದ ಭಾಷೆ ರೂಪುಗೊಂಡಾಗ ನಂಬಿಕೆಗಳು ಜನಜೀವನದಲ್ಲಿ ಚಲಾವಣೆ ಪಡೆದವು. ಮೊದಮೊದಲು ಇವು ವ್ಯಕ್ತಿನಿಷ್ಠ ಅನಿಸಿಕೆಗಳಾದರೂ ಕಾಲಕ್ರಮೇಣ ಸಾರ್ವತ್ರಿಕವಾದುವು. ಇವುಗಳನ್ನು ನಂಬಿ ನಡೆಯುವುದರಿಂದ ಒಳ್ಳೆಯದಾಗುತ್ತದೆ. ಆಪತ್ತು ನಿವಾರಣೆಯಾಗುತ್ತದೆ ಎಂಬ ಸಾಮೂಹಿಕ ಭಾವನೆ ಬೆಳೆಯಿತು. ಕ್ರಮೇಣ ನಂಬಿಕೆ ಎಂಬ ಕಲ್ಪನೆಯ ವೃಕ್ಷಕ್ಕೆ ಹಲವು ಕವಲುಗಳು ಮೂಡಿದುವು. ಅವು ಮುಗ್ಧ, ಅತಾರ್ಕಿಕ ಪುನರಾವರ್ತಿತ ಆಲೋಚನೆಗಳ ಚಿತ್ರಮಯ ಭಾವ ವಿನ್ಯಾಸ. ವೈಜಾರಿಕ ಪರಿಗ್ರಹಿಕೆಗೆ ನಂಬಿಕೆಗಳು ಇಂಬು ಕೊಡದಿದ್ದರೂ ವಸ್ತುಸ್ಥಿತಿಯ ನೈಜಾಭಿವ್ಯಕ್ತಿಗೆ ಆಸರೆಯಾಗದಿದ್ದರೂ ಸಾಮೂಹಿಕವಾಗಿ ನಂಬಲರ್ಹ ಜೀವನ ವಿಧಾನ. ಅದೊಂದು ನೆಮ್ಮದಿ ತಂದುಕೊಡುವ ಮಾನಸಿಕ ಸಾಧನ. ಹಾಗಾಗಿ ಅವು ಸಾಮಾನ್ಯ ಮನುಷ್ಯನ ನಿತ್ಯ ಬದುಕಿನ ನಿರಂತರ ಸಹಚರಿಗಳು ನಂಬಿದವರಿಗೆ ಅವು ಎಷ್ಟೇ ಹಾನಿಕರವಾಗಿದ್ದರೂ ಮೂಢಾಚರಣೆ ಎಂಬ ಭಾವನೆ ಮನಸ್ಸಿನಲ್ಲಿ ಸುಳಿಯುವುದಿಲ್ಲ. ಅಂಥವರಿಗೆ ನಂಬಿಕೆಗಳು ಸದಾ ಅಬಾಧಿತ ಹಾಗೂ ರಕ್ತಗತ.

ನಂಬಿಕೆಗಳು ಸಮುದಾಯದ ಭಾವನಾತ್ಮಕ ಮುಖವಾದರೆ ಆಚರಣೆಗಳು ಅದರ ಕ್ರಿಯಾತ್ಮಕ ಮುಖ. ಇವೆರಡಕ್ಕೂ ಅನ್ಯೋನ ನಂಟು. ಇವುಗಳಲ್ಲಿ ಎಷ್ಟೋ ವೇಳೆ ತರ್ಕಬದ್ಧತೆ ಇಲ್ಲದಿದ್ದರೂ ಸಮುದಾಯದ ಒತ್ತಾಸೆಯಿಂದ ವಿಶ್ವಾಸಾರ್ಹವಾಗುತ್ತದೆ. ನಂಬಿಕೆಗಳು ಹಾಗೆ ನೋಡಿದರೆ ಸಾರ್ವತ್ರಿಕ. ಆದರೂ ಪ್ರಾದೇಶಿಕ ಗುಣಲಕ್ಷಣಗಳನ್ನು ಹೊದಿರುತ್ತವೆ. ಜೊತೆಗೆ ಭಿನ್ನತೆ, ಸಮಾನತೆ ಮತ್ತು ಪರಸ್ಪರ ವೈರುಧ್ಯಗಳನ್ನು ಹೊಂದಿರಲು ಸಾಧ್ಯ, ಆಯಾ ಪ್ರದೇಶದ ಭೌಗೋಳಿಕ ಹಿನ್ನೆಲೆ ಸಾಮಾಜಿಕ ಒತ್ತಡ, ಜೀವನ ಪರಿಸರ, ಆಲೋಚನಾ ವಿಧಾನಗಳು ನಂಬಿಕೆಗಳು ಮೇಲೆ ಪ್ರಭಾವ ಬೀರುತ್ತವೆ.

ನಿರ್ದಿಷ್ಟ ಜನಸಮೂಹದ ಧೋರಣೆಯನ್ನನುಸರಿಸಿ ಪ್ರಾಣಿ ಮತ್ತು ಮನುಷ್ಯನ ಸಂಬಂಧ ನಿರ್ಧಾರವಾಗುತ್ತದೆ. ಅಂದರೆ ಬೇರೆ ಬೇರೆ ಕಾಲ, ಪ್ರದೇಶ ಮತ್ತು ಸಂಸ್ಕೃತಿಯನ್ನನುಸರಿಸಿ ಅವುಗಳ ಸಂಬಂಧದ ಸ್ವರೂಪ ರೂಪುಗೊಳ್ಳುತ್ತದೆ. ಆ ಸಂಬಂಧ ‘ಸಾಪೇಕ್ಷ ರೂಪ’ (Relative)ದ್ದೇ ಹೊರತು ‘ಕೇವಲ ಸ್ವರೂ’ (Absolute)ದ್ದಲ್ಲ. ನಮ್ಮಲ್ಲಿರುವ ಸಾಮಾಜಿಕ ಸಮೂಹವನ್ನು . ಧಾರ್ಮಿಕ ಜನಪದ ಸಮೂಹ. . ವೃತ್ತಿಜನಪದ ಸಮೂಹ ಮತ್ತು . ಆಧುನಿಕ ಜನಸಮೂಹ ಎಂದು ವಿಭಾಗ ಮಾಡಿಕೊಂಡರೆ ಅವು ಪ್ರಾಣಿ ಪಕ್ಷಿಗಳೊಂದಿಗೆ ಇಟ್ಟುಕೊಂಡಿರುವ ಸಂಬಂಧದ ಸ್ವರೂಪ ವೇದ್ಯವಾಗುತ್ತದೆ. ನಿರ್ದಿಷ್ಟ ಉದಾಹರಣೆಯೊಂದರ ಮೂಲಕ ಇದನು ಇನ್ನಷ್ಟು ಸ್ಪಷ್ಟಪಡಿಸಿಕೊಳ್ಳಬಹುದು. ಗರುಡ ಶ್ರೀಕೃಷ್ಣನ ವಾಹನವೆಂಬ ನಂಬಿಕೆ ಲಾಗಾಯ್ತಿನಿಂದ ಬಂದದ್ದು. ಅದು ಎಲ್ಲಿಯೇ ಕಾಣಿಸಿಕೊಂಡರೂ ಧಾರ್ಮಿಕ ಜನಪದರು ಭಕ್ತಿಯಿಂದ ಕೈಮುಗಿಯುತ್ತಾರೆ. ಅವರಿಗೆ ಆ ಬಗೆಯ ನಡತೆ ಪ್ರಶ್ನಾತೀತ ಶ್ರದ್ಧೆಯ ಸ್ವರೂಪದ್ದು ಆಗಿರುತ್ತದೆ. ಆದರೆ ವೃತ್ತಿಜನಪದರಿಗೆ ಗರುಡನ ಬಗ್ಗೆ ಭಿನ್ನವಾದ ದೃಷ್ಟಿಕೋನ ಇರುತ್ತದೆ. ಅದು ಧಾರ್ಮಿಕ ಜನಪದರಿಂದ ಬಂದ ಅನುಕರಣೆಯ ಸ್ವರೂಪದ್ದೆ ಹೊರತು ಗಾಢಶ್ರದ್ಧೆಯ ಮೂಲದಿಂದ ಹುಟ್ಟಿಕೊಂಡದ್ದು ಅಲ್ಲ. ವೃತ್ತಿಜನಪದರಿಗೆ ಗರುಡನ ಚಟುವಟಿಕೆ ಆತಂಕದ್ದು ಮತ್ತು ವ್ಯಾವಹಾರಿಕ ಮೂಲದಿಂದ ನಿರ್ಧರಿಸಲ್ಪಡುವ ಸಂಗತಿ. ಆದ್ದರಿಂದ ಗರುಡ ಅವರಿಗೆ ತಮ್ಮ ಮನೆಯ ಅಂಗಳದಲ್ಲಿ ಹೇಂಟೆಯೊಂದಿಗೆ ಆಡುತ್ತಿರುವ ಮರಿಗಳನ್ನು ಲಪಟಾಯಿಸಲೆತ್ನಿಸುವ ಕಳ್ಳ, ಕೋಳಿಪಿಳ್ಳೆಕಳ್ಳ. ಇಲ್ಲವೇ ರೋಗಗಳನ್ನು ಗುಣಪಡಿಸುವ ಶಕ್ತಿಯನ್ನುಳ್ಳ ಮಾಂತ್ರಿಕ ಪುಕ್ಕವನ್ನುಳ್ಳ ವೈದ್ಯ. ವೃತ್ತಿಜನಪದ ಮತ್ತು ಧಾರ್ಮಿಕ ಜನಪದದ ನಡುವೆ ಬೆಳೆದು ಬಂದಿರುವ ಇಂಥದೇ ದ್ವಂದ್ವಾತ್ಮಕ ಸಾಂಸ್ಕೃತಿಕ ವಿನ್ಯಾಸವನ್ನು ಗೋಪೂಜೆ, ಗೋಭಕ್ಷಣೆ ಮತ್ತು ಗೋರಕ್ಷಣೆ ಕ್ರಿಯೆಗಳಲ್ಲಿ ಪರಿಶೀಲಿಸಲು ಬರುತ್ತದೆ. ಶಿಷ್ಟ ಪುರಾಣ ಮತ್ತು ಪುಣ್ಯಕಥೆಗಳನ್ನು ತನ್ನ ಒಡಲಿನಲ್ಲಿ ಧಾರಣ ಮಾಡಿಕೊಂಡ ಧಾರ್ಮಿಕ ಜನಪದಕ್ಕೆ ಗೋಮಾಂಸ ಸೇವನೆ ನಿಷಿದ್ಧ, ಗೋವನ್ನು ಒದೆಯಬಾರದು, ಹಿಂಸಿಸಬಾರದೆಂಬ ಅಬಾಧಿತ ಮೌಲ್ಯ ಹಾಗೂ ಸಂದೇಶವಿರುತ್ತದೆ. ಇದೇ ನಂಬಿಕೆ ಧಾರ್ಮಿಕ ಜನಪದರಲ್ಲಿ ಸ್ಥಿರಗೊಳ್ಳಲು ಹಾಗೂ ಏಕಮುಖ ಸಂದೇಶವಾಗಿ ರೂಪುಗೊಳ್ಳಲು ಸಾಕಷ್ಟು ಕಾಲ ಹಿಡಿದಿರಬೇಕು. ಯಜ್ಞಯಾಗ ಮಾಡುವ ಹೊತ್ತಿನಲ್ಲಿ ಬ್ರಾಹ್ಮಣರು ಗೋಹತ್ಯೆ ಗೋಮಾಂಸ ಭಕ್ಷಣೆ ಮಾಡುತ್ತಿದ್ದು ಉಳಿದ ಸಂದರ್ಭಗಳಲ್ಲಿ ಪವಿತ್ರ ಭಾವನೆ ತಾಳುತ್ತಿದ್ದುದು ಇದಕ್ಕೆ ಆಧಾರವಾಗಿದೆ. ವೃತ್ತಿ ಜನಪದ ಸಮೂಹದ ವ್ಯಾಪ್ತಿಯಲ್ಲಿ ಬರುವ ಶೂದ್ರ, ಕೆಳಜಾತಿಗಳಲ್ಲಿ ಗೋವಿನ ಬಗ್ಗೆ ಇಂಥ ಸ್ಥಿರ ಹಾಗೂ ಒಪ್ಪಿತ ಭಾವನೆ ಇಲ್ಲ. ಅದರಲ್ಲೂ ಪದದಲಿತ ವರ್ಗಗಳಲ್ಲಿ ಗೋಮಾಂಸ ಆದತ್ಯೆಯ ಆಹಾರ, ಧಾರ್ಮಿಕ ಜನಪದ ಸಮೂಹಕ್ಕಿಂತ ಭಿನ್ನವಾದ ಆರಾಧನಾ ರಹಿತ ಮನೋಭಾವ ಹಾಗೂ ನಂಬಿಕೆಯ ಶಿಥಿಲತೆಗೆ ಕಾರಣವನ್ನು ಅಸಹಾಯಕತೆ ಮತ್ತು ದುರ್ಬಲ ಆರ್ಥಿಕ ಮೂಲದಲ್ಲಿ ಹುಡುಕಬೇಕೇನೊ? ವೃತ್ತಿ ಜನಪದ ಸಮೂಹದಲ್ಲಿನ ನಂಬಿಕೆಗಳ ಇಂಥ ಅಸ್ಥಿರತೆ, ಜೀವನೋಪಯೋಗಿ ದೃಷ್ಟಿ ಬಹುಮುಖತೆಯನ್ನು ಮತ್ತು ಸೃಷ್ಯುತ್ಮಕ ವೈವಿಧ್ಯವನ್ನು ತಂದುಕೊಟ್ಟಿದೆ ಎನ್ನಬಹುದು. ಒಟ್ಟಾರೆ ಧಾರ್ಮಿಕ ಜನಪದ ಪ್ರಾಣಿಗಳನ್ನು ಕುರಿತ ನಂಬಿಕೆಗಳನ್ನು ಒಪ್ಪಿತ ಭಾವನೆಯಿಂದ, ವೃತ್ತಿಜನಪದ ಔಪಯೋಗಿಕ ನೆಲೆಯಿಂದ, ಆಧುನಿಕ ಜನಪದ ಆರ್ಥಿಕ ಜನಪದ ಆರ್ಥಿಕ- ವ್ಯಾವಹಾರಿಕ ನೆಲೆಯಿಂದ ನೋಡಿರುವುದು ಕಂಡು ಬರುತ್ತದೆ. ಸಾಂಸ್ಕೃತಿಕಗೊಂಡ ಮನುಷ್ಯ ಹಾಗೂ ಪ್ರಾಣಿಗಳ ಸಂಬಂಧ ಈ ಚೌಕಟ್ಟಿನಲ್ಲಿ ರೂಪುಗೊಂಡದ್ದು ಆ ವಿನ್ಯಾಸವನ್ನನುಸರಿಸಿ ನಂಬಿಕೆಗಳ ಭಾವಸ್ತರ ವಿಸ್ತಾರ ಗೊಂಡಿರುವಂತೆ ಅನಿಸುತ್ತದೆ.

ಧಾರ್ಮಿಕ ಜನಪದ ಪ್ರಾಣಿಗಳಿಗೆ ಸ್ವೀಕೃತ ನಂಬಿಕೆಗಳನ್ನು ಆರೊಪಿಸುವುದರಿಂದ ಅವುಗಳ ಕಾರ್ಯ ಚಟುವಟಿಕೆಗಳು ಸೀಮಿತ. ಉದಾಹರಣೆಗೆ ವೃಷಭ ಈಶ್ವರನ ವಾಹನ, ಗರುಡ ವಿಷ್ಣು ವಾಹನ, ನವಿಲು ಸರಸ್ವತಿ ವಾಹನ, ಆನೆ ಲಕ್ಷ್ಮೀ -ಸರಸ್ವತಿಯರಿಗೆ ಹಾರಹಾಕಲು ಮೀಸಲು ಇವುಗಳು ದೇವರಷ್ಟೇ ಭಕ್ತಿ ಅರ್ಹವಾದುವು. ಪ್ರಾಣಿ ಮುಖದ ದೇವತೆಗಳೂ ಇದ್ದು ಇವುಗಳನ್ನು ಪೂಜಿಸುವುದರಿಂದ ಪಾರಮಾರ್ಥಿಕ ಲಾಭಗಳು- ಪುಣ್ಯ, ಸ್ವರ್ಗ, ಮುಕ್ತಿ- ದೊರೆಯುತ್ತವೆಂಬ ನಂಬಿಕೆ ಇರುತ್ತದೆ. ಇನ್ನೊಂದು ನಂಬಿಕೆಯ ಪ್ರಕಾರ ಈ ಪ್ರಾಣಿಗಳು ನಿರ್ದಿಷ್ಟ ದೇವತೆಯೊಂದಿಗೆ ನಿರ್ದಿಷ್ಟ ಕಾರ್ಯಾರ್ಥ ಹುಟ್ಟಿರುತ್ತವೆ. ದಶಾವತಾರದಲ್ಲಿನ ಪ್ರಾಣಿ ಅವತಾರದ ಕಲ್ಪನೆ ಈ ಬಗೆಯದು. ಇಲ್ಲಿ ಶಿಷ್ಟ ಸಂಸ್ಕೃತಿಯ ಸಂಕೀರ್ಣ ವ್ಯಾಪಾರಗಳೆಲ್ಲಾ ಪ್ರಾಣಿ ಸಮೂಹಕ್ಕೆ ತಳಕು ಹಾಕಿಕೊಂಡಿರುತ್ತವೆ. ಪ್ರಾಣಿಗಳು ನಿರ್ದಿಷ್ಟ ಕಾಯಕಕ್ಕೆ ಬದ್ಧವಾಗಿರುವುದಲ್ಲದೆ ಸಂಖ್ಯೆಯಲ್ಲೂ ಪರಿಮಿತವಾಗಿರುತ್ತವೆ. ಸಾಮಾನ್ಯ ಜನಸಮೂಹದ ನಂಬಿಕೆಗಳಲ್ಲಿ ಪಾತ್ರವಹಿಸುವ ಪ್ರಾಣಿಗಳಿಗೆ ಇಂಥ ಧಾರ್ಮಿಕ ಬದ್ಧತೆಯ ಹಂಗಿಲ್ಲ. ಅವು ಜನಸಾಮಾನ್ಯರ ವೃತ್ತಿ ವೈವಿಧ್ಯಗಳಂತೆ ಅಸಂಖ್ಯ, ಸೃಷ್ಟಿ- ಪ್ರತಿಸೃಷ್ಟಿಯ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತಾ ಹೊಸ ಹೊಸ ಕಲ್ಪನೆ, ಸಾಧ್ಯತೆಗಳಲ್ಲಿ ಬೆಳೆಯುತ್ತವೆ.

ಜಗತ್ತಿನ ಎಲ್ಲಾ ಜಾನಪದಗಳಲ್ಲೂ ‘ಪ್ರಾಣಿಶಕ್ತಿ’ಯನ್ನು ‘ಸರ್ವಶಕ್ತಿ’ಗೆ ಸಮಾನಾಂತರವಾಗಿ ಬಳಸಲಾಗಿದೆ. ಆದ್ದರಿಂಧ “It is all and it is all powerful” ಎಂದು ಪರಿಭಾವಿಸಲಾಗಿದೆ. ಮಾನವನ ಸಂಸ್ಕೃತಿಕ ಬದುಕಿನೊಂದಿಗೆ ಸಂಸ್ಕಾರಗೊಂಡು ಪ್ರಾಣಿ ಬದುಕು ಬೆಸೆದು ಕೊಂಡಿರುವುದರಿಂದ ಪುರಾಣ, ಕಥೆ, ಕಾವ್ಯ ಮತ್ತಿತರ ಪ್ರಕಾರಗಳಲ್ಲಿ ಮನುಷ್ಯ ವ್ಯಕ್ತಿತ್ವಕ್ಕೆ ಸಮನಾಗಿ, ಸಂವಾದಿಯಾಗಿ ಇವು ಪ್ರವೇಶ ಪಡೆದಿವೆ. ಪ್ರಾಣವೇ ‘ಪಕ್ಷಿ’ಯಾಗುವ ಆಧ್ಯಾತ್ಮಿಕ ಸ್ತರದಿಂದ ಹಿಡಿದು ‘ಪಕ್ಷಿ’ಯ ಅವಸಾನದಲ್ಲಿ ರಾಕ್ಷಸನ ಅವಸಾನವಾಗುವ ಜನಪದ ಕಥಾನಕಗಳವರೆಗೆ ಕಲ್ಪನೆ ಬೆಳೆದಿದೆ. ಮಾಂತ್ರಿಕನು ಹಕ್ಕಿತಿಂದರೆ ಧೀರನಾಗುತ್ತ, ರಾಕ್ಷಸನನ್ನು ಕೊಲ್ಲುವ ಶಕ್ತಿವಂತನಾಗುತ್ತಾನೆ. ದೇವಲೋಕಕ್ಕೆ ಹೋಗಿ ಬರುವ, ದೇವರೊಂದಿಗೆ ಸಂಭಾಷಿಸುವ, ಭೂತ -ಭವಿಷ್ಯತ್ತನ್ನು ತಿಳಿಯುವ ಅದ್ಭುತ ವ್ಯಕ್ತಿತ್ವ ಪಡೆಯುತ್ತಾನೆನ್ನುವ ರಮ್ಯನಂಬಿಕೆ ಬೆಳೆದಿದೆ. ಭಾರತೀಯ ಪ್ರಾಣಿ ಜನಪದ ಕಥೆಗಳಂತೂ ಹೆಚ್ಚಿನ ಭಾಗ ಅವು ಸಾಮಾಜೀಕರಣಗೊಂಡ ಪ್ರಕ್ರಿಯೆಯ ದೀರ್ಘ ಚರಿತ್ರೆಯನ್ನು ನಿರೂಪಿಸುವಂತಿವೆ. ನರಿ ತಂತ್ರಿ ಪ್ರಾಣಿ (Trickster) ಯಾಗಿ ರೂಪಿಸಲ್ಪಟ್ಟಿರುವಂತೆ ಜನತೆಯ ಯಜಮಾನನಾಗಿಯೂ ನಿರೂಪಿಸಲ್ಪಟ್ಟಿದೆ. ಮಾನವ ಹೆಣ್ಣುಗಳೊಂದಿಗೆ ನರಿ ಲೈಂಗಿಕ ಸಂಬಂಧ ಹೊಂದಿದ ವಿವರಗಳು ಸಿಗುತ್ತವೆ. ಕಪ್ಪೆ, ಸರ್ಪ, ಏಡಿ, ಹೋರಿಗಳು ಮನುಷ್ಯರೊಂದಿಗೆ ವೈವಾಹಿಕ ಸಂಬಂಧ ಬೆಳೆಸಿರುವ ಕಥೆಗಳಾಗಲಿ, ಗಂಡಭೇರುಂಡ ಪಕ್ಷಿಗಳು ನಾಯಕನನ್ನು ಬೆನ್ನಮೇಲೆ ಹೊತ್ತು ನಿರ್ದಿಷ್ಟ ಪ್ರದೇಶಕ್ಕೆ ಸಾಗಿಸುವುದಾಗಲಿ, ಅವು ಭವಿಷ್ಯ ಹೇಳುವುದಾಗಲಿ ಪ್ರಾಣಿಗಳು ಮನುಷ್ಯ ಪ್ರಪಂಚದೊಂದಿಗೆ ಸಾಂಸ್ಕೃತೀಕರಣಗೊಂಡ ಪ್ರಕ್ರಿಯೆಯನ್ನು ಸೂಚಿಸುವಂತವೇ ಆಗಿವೆ. ಇಂಥ ಸಾಂಸ್ಕೃತಿಕ ಸಹಚರ್ಯ ಕುಲಬಾಂಧವರ ಪ್ರಾಣಿಗಳ ಜೊತೆಗಿನ ಸಂಬಂಧದಿಂದ ಬಂದಿರಲಿ ಅಥವಾ ಸಾಂಕೇತಿಕವಾಗಿರಲಿ, ಮಿತ್ರ ಅಥವಾ ಶತ್ರು ಸಂಬಂಧವನ್ನು ಹೊಂದಿರಲಿ, ರಕ್ಷಕ ಸಹವಾಸಿ, ದೇವದೂತ, ಪಿತೃಆತ್ಮ ಹೊತ್ತ ದೇವ ಸಂಭೂತ, ಸರ್ವರೋಗ ನಿವಾರಕ ದುಡಿಮೆಗಾರ ಯಾವುದೇ ರೂಪದಲ್ಲಿ ಪರಿಭಾವಿಸಲಿ ಅವನ್ನೆಲ್ಲಾ ಪೋಷಿಸುವ ವೈವಿಧ್ಯಮಯ ಕಲ್ಪನಾವಿಲಾಸ ನಂಬಿಕೆಗಳ ರೂಪದಲ್ಲಿ ಮೂಡಿನಿಂತಿದೆ. ಅವು ಕೆಲವೊಮ್ಮೆ ಮುಗ್ಧ, ಮೂಢ, ವಿಚಿತ್ರ, ಸಮಯೋಚಿತ, ವಾಸ್ತವ, ಭಾವನಾತ್ಮಕ, ತರ್ಕಹೀನ ರೂಪದಲ್ಲಿ ಇದ್ದರೂ ನಮ್ಮ ಸಾಂಸ್ಕೃತಿಕ ಆಕೃತಿಯ ಒಳವಿನ್ಯಾಸವನ್ನು ಅರ್ಥೈಸಿಕೊಳ್ಳಲು ಸಹಾಯಕವಾಗುತ್ತವೆ.

ನಂಬಿಕೆಗಳ ಸಾಂಸ್ಕೃತಿಕ ಮಾದರಿಗಳ ವಿನ್ಯಾಸಗಳನ್ನು ಅರ್ಥಮಾಡಿಕೊಳ್ಳುವ ಸಲುವಾಗಿ ನಾಯಿ ಮತ್ತು ಬಸವನ ಬಗ್ಗೆ ಇರುವ ನಂಬಿಕೆಗಳನ್ನು ಮತ್ತು ಅದರಿಂದ ರೂಪಿತಗೊಂಡ ಕಥೆಗಳನ್ನು ಕುತೂಹಲಕ್ಕಾಗಿ ಪರಿಶೀಲಿಸಬಹುದು. ‘ನಾಯಿಗೆ ಒದೆಯಬಾರದು’, ‘ನಾಯಿಗೆ ಬರಲಲ್ಲಿ ಹೊಡೆಯಬಾರದು’, ‘ನಾಯಿ ತನ್ನ ಒಡತಿಗೆ ಮತ್ತೆರಡು ಕಣ್ಣು ಬರಲೆಂದು ಹಾರೈಸುತ್ತದೆ’, ‘ನಾಯಿ ನಾರಾಯಣ’, ‘ನಾಯಿ ತಾಯಿಗೆ ಸಮ’ ಇತ್ಯಾದಿ. ಮನುಷ್ಯ ಸಂಸ್ಕೃತಿ ಬೇಟೆ ಕಡೆಯಿಂದ ಪಶುಪಾಲನೆ, ವ್ಯವಸಾಯ, ಸಾಕುಪ್ರಾಣಿಗಳ ಸಂಸ್ಕೃತಿಯ ಕಡೆಗೆ ಪಲ್ಲಟಗೊಳ್ಳುವ ಹೊತ್ತಿನಲ್ಲಿ ಇಂಥ ನಂಬಿಕೆಗಳು ಹುಟ್ಟಿರಬಹುದು. ಬದುಕಿನ ಸುಭದ್ರತೆಯ ಹಿನ್ನೆಲೆಯಲ್ಲೂ ರೂಪುಗೊಂಡಿರಬಹುದು. ಮೊದಲೆರಡು ನಂಬಿಕೆಗಳು ನಾಯಿ ಸಿಟ್ಟಿನಿಂದ ಕಚ್ಚದಿರಲೆಂಬ ಮುಂಜಾಗ್ರತೆಯಿಂದ ಹುಟ್ಟಿದವು. ಅವು ರಕ್ಷಣಾತ್ಮಕವಾದವು ಎನ್ನಲು ಬರುತ್ತದೆ. ಪುರಾಣಗಳನ್ನು ನಂಬಿ ಅವು ಹೇಳುವ ಕಥೆಗಳಿಗೆ ಮನಸೋತು ನಂಬಿಕೆಯನ್ನು ದೃಢಗೊಳಿಸಿಕೊಳ್ಳುವ ಸಾಧ್ಯತೆಯೂ ಇರುತ್ತದೆ. ಉದಾಹರಣೆಗೆ; ನಾಯಿ ಮತ್ತು ಮನುಷ್ಯ ಆಯಸ್ಸನ್ನು ವಿನಿಮಯಮಾಡಿಕೊಂಡಿದ್ದು ಸೃಷ್ಟಿಕರ್ತ ಬ್ರಹ್ಮನನ್ನು ನಾಯಿ ಭೇಟಿ ಮಾಡಿ ಎಂಬತ್ತಕ್ಕಿಂತ ಹೆಚ್ಚು ವರ್ಷ ತಾನು ಬದುಕಬೇಕೆಂದು ಕೇಳಿ ವರ ಪಡೆಯಿತಂತೆ. ಅನಂತರ ಬ್ರಹ್ಮನನ್ನು ಭೇಟಿಯಾದ ಮನುಷ್ಯನಿಗೆ ಹತ್ತರಿಂದ ಇಪ್ಪತ್ತು ವರ್ಷ ಆಯಸ್ಸು ದಕ್ಕಿತ್ತು. ವ್ಯಕುಲಗೊಂಡ ಮನುಷ್ಯ ಆಯಸ್ಸನ್ನು ವಿನಿಮಯ ಮಾಡಿಕೊಳ್ಳಲು ಬಯಸಿ ನಾಯಿಯಲ್ಲಿ ಮಾತನಾಡಿದ. ಬದುಕಿನುದ್ದಕ್ಕೂ ಅನ್ನಹಾಕುವ ಕರಾರಿಗೆ ಒಳಪಟ್ಟು ನಾಯಿ ಸಮ್ಮತಿಸಿತು. ಮನುಷ್ಯನೊಬ್ಬ ತನ್ನ ನಾಯಿಗೆ ಯಾಕೆ ಕೃತಜ್ಞನಾಗಿರಬೇಕು ಎಂಬ ನಂಬಿಕೆಯನ್ನು ಸಮರ್ಥಿಸುವ ಕಥೆ ಇದಾಗಿದೆ. ಇಂಥದೇ ಒಂದು ಕಥೆ ಬಸವಣ್ಣರು ದೇವಲೋಕದಿಂದ ಭೂಲೋಕಕ್ಕೆ ಬಂದು ಹೊಲ ಊಳುವ ಕೆಲಸಕ್ಕೆ ತೊಡಗುತ್ತಾನೆ. ಇದಕ್ಕೆ ಕಾರಣ ಬಸವಣ್ಣನ ಅಚಾತುರ್ಯ. ಮಕ್ಕಳಿಗೆ ದಿನಕ್ಕೆ ಮೂರು ಹೊತ್ತು ಊಟ; ದೊಡ್ಡವರಿಗೆ ಒಂದು ಹೊತ್ತು ಊಟ ಎಂದು ಭೂಲೋಕದಲ್ಲಿ ಸಾರಿಬರಲು ಕಳುಹಿಸಿರುತ್ತಾನೆ. ಅದನ್ನು ಮರೆತ ಆತ ದೊಡ್ಡವರಿಗೆ ಮೂರು ಊಟ, ಮಕ್ಕಳಿಗೆ ಲೆಕ್ಕವಿಲ್ಲದಷ್ಟು ಊಟ ಎಂದು ತಪ್ಪಾಗಿ ಸಾರುತ್ತಾನೆ. ಹಾಗೆ ಸಾರಿದ್ದರಿಂದ ಭೂಲೋಕದ ಜನರಿಗೆ ಗೇದು ಹಾಕುವ ಜವಾಬ್ದಾರಿ ಅವನ ಮೇಲೆ ಬೀಳುತ್ತದೆ. ಶಿವನಿಗೆ ಕನಿಕರ ಬಂದು ಅವನ ಹೆಗಲು ನೋಯದಂತಹ ಔಷಧಿಯನ್ನು ಹಂದಿಯ ಮೂಲಕ ಕಳುಹಿಸಿ ಕೊಡುತ್ತಾನೆ. ಆ ವಜ್ರೌಷಧಿಯನ್ನು ಹಂದಿ ಬಸವಣ್ಣನಿಗೆ ತಲುಪಿಸದೆ ತಾನೇ ಮುಸುಡಿಗೆ ಹಚ್ಚಿಕೊಂಡು ಅದನ್ನು ವಜ್ರದಂತೆ ಗಟ್ಟಿಮಾಡಿಕೊಳ್ಳುತ್ತದೆ. ಇಂಥ ಕಥೆಗಳು ಕ್ರಮವಾಗಿ ನಾಯಿ, ಬಸವಣ್ಣನ ಮೇಲಿನ ನಂಬಿಕೆಯನ್ನು ಇನ್ನಷ್ಟು ದೃಢಗೊಳಿಸುವುದರಲ್ಲಿ ಸಹಕಾರಿಯಾಗುತ್ತವೆ ಎನ್ನಬಹುದು. ಇವುಗಳನ್ನನುಸರಿಸಿ ಕಾಲಕ್ರಮದಲ್ಲಿ ಮತ್ತಷ್ಟು ನಂಬಿಕೆಗಳು ಹುಟ್ಟಿಕೊಂಡಿರಲೂ ಸಾಕು.

ಗೌರವ ಮತ್ತು ಭಯ ಪ್ರಾಣಿ ಕುರಿತ ನಂಬಿಕೆಗಳ ಹಿಂದೆ ಕೆಲಸ ಮಾಡಿವೆ. ಪ್ರಾಣಿಯೊಂದು ವ್ಯಕ್ತಿಯೊಬ್ಬನ ಆಪತ್ಕಾಲದಲ್ಲಿ ಸಹಾಯಕ್ಕೆ ಬಂದು ಜೀವ ಉಳಿಸಿದ್ದರೆ ‘ಕುಲಸಂಕೇತ’ (Totem)ವಾಗಿ ಇಂಥ ಗೌರವ ಭಾವ ಅಥವಾ ಪೂಜ್ಯತೆಗೆ ಪಕ್ಕಾಗಿರಬಹುದು. ಕೊತ್ತಿಯನ್ನು ಸರ್ಪವನ್ನು ಸಾಯಿಸಬಾರದು ಎಂಬ ನಂಬಿಕೆಯಾಗಲಿ, ಕಪ್ಪೆಯನ್ನು ಕೊಂದರೆ ಮೈಯೆಲ್ಲಾ ಒಣಗುತ್ತದೆ ಎಂಬುದಾಗಲಿ ಇದೇ ಹಿನ್ನೆಲೆಯಲ್ಲಿ ಬಂದಿರುವ ಸಾಧ್ಯತೆ ಇದೆ. ಕೆಲವು ಪ್ರಾಣಿಗಳು ಆತ್ಮರಕ್ಷಕ, ಕುಲಬಂಧು, ವಿಪತ್ತಿನಲ್ಲಿ ಸಹಾಯಕ್ಕೆ ಬಂದವು ಎನ್ನುವ ಪೂಜ್ಯತೆಯಿಂದಲೂ ನಂಬಿಕೆಗಳು ಚಲಾವಣೆಗೆ ಬಂದಿವೆ. ಕೆಲವು ಪ್ರವಾಹ, ರೋಗರುಜಿನ ಬರವನ್ನು ತರಬಲ್ಲವೆಂಬ ನಂಬಿಕೆಯಿಂದ ಭಯಾಧಾರಿತ ಪೂಜೆಗೆ ಸಂದಿವೆ. ಕೋತಿಯನ್ನು ಕೊಂದರೆ ತಿಥಿ ಮಾಡಬೇಕೆಂಬ ನಂಬಿಕೆಯೊಂದಿದೆ, ಕೋತಿ ಪೂರ್ವಜರ ಪ್ರಾಣವನ್ನು ಹೊಂದಿದೆ ಎಂಬ ಭಾವನೆ ಮತ್ತು ಕೋತಿ ಮನುಷ್ಯನ ರೂಪವನ್ನು ಹೋಲುವುದು ಇದಕ್ಕೆ ಕಾರಣ. ಮನುಷ್ಯ ಸತ್ತಾಗ ಶ್ರಾದ್ಧ ಮಾಡಿದರೆ ಅವನ ಆತ್ಮಕ್ಕೆ ಶಾಂತಿ ಸಿಗುವಂತೆ ಕೋತಿಗೂ ಸಿಗಲಿ ಎನ್ನುವ ಮಾಂತ್ರಿಕ ಧರ್ಮದ ಸಾದೃಶಕ್ತಿಯ ನಿಯಮ ಅನುಕರಣೆಯಾಗಿದೆ ಇದು. ಪ್ರಾಣಿಗಳ ಸಂತತಿ ವೃದ್ಧಿಗಾಗಿ ಅದೇ ಗುಂಪಿನ ಪ್ರಾಣಿಯನ್ನು ಬಲಿಕೊಡಬೇಕೆಂಬ ನಂಬಿಕೆ ಇದೆ. ಕುರಿಸಾಕುವವರು ವರ್ಷಕ್ಕೊಮ್ಮೆ ಇದಕ್ಕಾಗಿ ಮೀಸಲು ಕುರಿ ಇರಿಸಿ ‘ಕಸರ ಹಾಕುವ’ ಕಾರ್ಯ ನಡೆಸುತ್ತಾರೆ. ಸರ್ಪವನ್ನು ಕೊಲ್ಲ ಬಾರದು, ಅರೆಜೀವ ಮಾಡಬಾರದು ಮಾಡಿದರೆ ಅದು ಹನ್ನೆರಡು ವರ್ಷ ಸೇಡಿಗಾಗಿ ಕಾದು, ಸೇಡುತೀರಿಸಿಕೊಳ್ಳಲು ಆಗದಿದ್ದಲ್ಲಿ ಜೀವ ಬಿಡುತ್ತದೆ ಎಂಬ ನಂಬಿಕೆ ವ್ಯಾಪಕವಾಗಿದೆ. ದೇವತೆಗಳು ಸರ್ಪರೂಪದಲ್ಲಿ ಬಂದು ಹೆಣ್ಣುಗಳೊಂದಿಗೆ ಮಲಗುತ್ತಾರೆ. ಸರ್ಪಸಂಗದಿಂದ ಅವರಿಗೆ ಮಕ್ಕಳಾಗುತ್ತವೆ. ಹಾಗೆ ನೋಡಿದರೆ ಸರ್ಪ ಗಂಡಸಿನ ಮತ್ತೊಂದು ರೂಪ ಎನ್ನುವ ಭಾವನೆ ಇದೆ.

ಆದಿಯಿಂದಲೂ ಮಾನವ ಕುಲ ತನ್ನ ಜೀವನ ವಿಧಾನಕ್ಕೆ ಆತಂಕವೊಡ್ಡಿದ ಜೀವ ಜಾತಿಯನ್ನು ಬೇಟೆಯಾಡಿ ಕೊಂದರೆ ಪೂರಕವಾದದ್ದನ್ನು ಪೂಜಿಸಿ ಗೌರವಿಸಿದ್ದಾನೆ. ಕೆಲವೊಮ್ಮೆ ಪ್ರಕೃತಿಸಹಜ ವ್ಯಾಪಾರಕ್ಕೆ ನಂಬಿಕೆಯ ಮುಸುಕು ಬಿದ್ದಿದೆ. ಮೊಟ್ಟೆ ಇರುವೆ ಕಚ್ಚಿದರೆ, ಕಾಗೆ ಗುಬ್ಬಿಗಳು ನೀರಿನಲ್ಲಿ ಸ್ನಾನಮಾಡಿದರೆ, ಕಪ್ಪೆ ನಿರಂತರವಾಗಿ ಕೂಗಿದರೆ, ಕೋಳಿಮರಿಗಳು ಗಾಳಿಗೆದುರಾಗಿ ಪುಕ್ಕವನೆತ್ತಿ ನಿಂತರೆ, ಮುಸ್ಸಂಜೆಯಲ್ಲಿ ಗೂಬೆ ಕೂಗಿದರೆ ಮಳೆಯಾಗುತ್ತದೆ. ಗೋವು ನರಿಗಳ ಮುಖ ನೋಡಿದರೆ, ಕನಸಿನಲ್ಲಿ ಕೋಳಿ, ಹುಂಜ, ಹಂಸ, ಆನೆ ಕಂಡರೆ ಮಾತನಾಡುವಾಗ ಹಲ್ಲಿ ಲೊಚಗುಟ್ಟಿದರೆ, ಹಿತ್ತಲಿನಲ್ಲಿ ಜೇನುಗೂಡು ಕಟ್ಟಿದರೆ ಶುಭ. ಉಡ ಮನೆಹೊಕ್ಕರೆ, ಹಾಲು ಕರೆಯುವಾಗ ಆಕಳು ಮೈಮೇಲೆ ಮಲಗಿದರೆ, ರಾತ್ರಿ ಕಾಗೆ ಕೂಗಿದರೆ, ನೆತ್ತಿಗೆ ಬಡಿದರೆ ಅಶುಭ, ಹಾವು ಕಾಲಿನಿಂದ ತಲೆಗೆ ಹತ್ತಿದರೆ ಐಶ್ವರ್ಯವಂತನಾಗುವ ಸೂಚನೆ. ಕೆಳಗಿಳಿದರೆ ಕಷ್ಟಬರುವುದರ ಸಂಕೇತ. ನಾಯಿ ದನಕರುಗಳ ಕಣ್ಣಿಗೆ ಭೂತದೆವ್ವಗಳು ಕಾಣಿಸುತ್ತವೆ. ಅದಕ್ಕಾಗಿ ಅವುಗಳು ವಿಚಿತ್ರವಾಗಿ ಒಮ್ಮೊಮ್ಮೆ ಕೂಗುತ್ತವೆ. ಎತ್ತು ದನಗಳು ತಮ್ಮೊಡೆಯನಿಗೆ ಕೇಡಾಗುವುದನ್ನು ತಮ್ಮದೇ ಭಾಷೆಯಲ್ಲಿ ತಿಳಿಸುತ್ತವೆಂಬ ನಂಬಿಕೆ ಇದೆ. ರಾತ್ರಿ ಕಾಲದಲ್ಲಿ ನಾಗಸರ್ಪ ತಲೆಯ ಮೇಲಿನ ಮಾಣಿಕ್ಯವನ್ನು ಕೆಳಗಿಟ್ಟು ಅದರ ಬೆಳಕಿನಲ್ಲಿ ಆಹಾರ ಹುಡುಕುತ್ತದೆ. ಅದರ ಮೇಲೆ ಸಗಣಿ ಎಸೆದರೆ ಸುತ್ತ ಕತ್ತಲಾಗಿ ಹಾವು ಸಾಯುತ್ತದೆ. ಮಾಣಿಕ್ಯ ವಶಮಾಡಿಕೊಂಡವರು ತಾತ್ಕಾಲಿಕವಾಗಿ ಸುಖಕಂಡರೂ ಕಾಲಾನಂತರದಲ್ಲಿ ಅಂಥವರ ವಂಶ ನಾಶವಾಗುತ್ತದೆಂಬ ಭಾವನೆ ಇದೆ. ಹಾವನ್ನು ನಿಜನಾಮದಿಂದ ಕರೆಯಬಾರದು. ಕರೆದರೆ ಕೆಡಕಾಗುತ್ತದೆ. ಅದಕ್ಕಾಗಿ ಹಾವನ್ನು ‘ನಾಗಪ್ಪ’ ‘ಮುನಿಯಪ್ಪ’ ಎಂದು ಸಂಬೋಧಿಸಲಾಗುತ್ತದೆ. ಹಾವು ಕಚ್ಚಿದಾಗ ‘ಕಚ್ಚಿದೆ’ ಎನ್ನದೆ ‘ಬಳ್ಳಿ ಮುಟ್ಟಿತು’ ಅಥವಾ ‘ಹುಳು ಮುಟ್ಟಿತು’ ಎನ್ನಲಾಗುತ್ತದೆ. ಇದು ಮನೋವೈಜ್ಞಾನಿಕ ಸತ್ಯಕ್ಕೆ ಸಂಬಂಧಿಸಿದ್ದಾಗಿದೆ. ಕೆಲವು ಪ್ರಾಣಿ ಪಕ್ಷಿಗಳ ಗರಿ, ಮುಳ್ಳು, ಕೂದಲು, ಉಗುರು ಇತ್ಯಾದಿಯನ್ನು ಮನೆಯೊಳ್ಳಕ್ಕೆ ತಂದರೆ ಜಗಳವಾಗುತ್ತದೆ, ಆರೋಗ್ಯ ಕೆಡುತ್ತದೆ, ದರಿದ್ರ ಪ್ರಾಪ್ತಿಯಾಗುತ್ತದೆ. ಆದ್ದರಿಂದ ಅವುಗಳನ್ನು ದೂರವಿರಿಸಬೇಕೆಂಬ ನಿಷೇಧಾತ್ಮಕ ನಂಬಿಕೆಗಳು ರೂಢಿಯಲ್ಲಿವೆ. ಕಪ್ಪೆಯನ್ನು ಗೂಬೆಯನ್ನು ಎರೆಹುಳುವನ್ನು ಸಾಯಿಸಬಾರದು, ತಾನು ಸಾಕಿದ ಟಗರು ಹೋತವನ್ನು ತಿನ್ನಬಾರದು, ಮನೆಯಲ್ಲಿ ಹುಟ್ಟಿದ ಹೋರಿ ಕರುಗಳನ್ನು ಮಾರಬಾರದು ಮುಂತಾದವು ನಿಷೇಧಾತ್ಮಕ ನಂಬಿಕೆಗಳು ಸಾಲಿಗೆ ಸೇರುತ್ತವೆ. ಇಲ್ಲಿನ ನಿಷೇಧಾತ್ಮಕತೆ ನಿರ್ಬಂಧದ ದೃಷ್ಟಿಯಿಂದ ಮಾತ್ರ ಬಂದುದಲ್ಲ. ಪರಿಸ್ಥಿತಿಯ ಸಮತೋಲನವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಉತ್ಪತ್ಯಾತ್ಮಕ ಹಾಗೂ ಸಂರಕ್ಷಣಾತ್ಮಕ ಕಾರಣಕ್ಕಾಗಿ ಬಂದವು ಎಂಬುದನ್ನು ಮರೆಯಬಾರದು. ಹಲ್ಲಿ, ನಾಯಿ, ನರಿ, ಕತ್ತೆ, ಕಾಗೆ, ಹುಂಜ, ಗಿಳಿ ಶಕುನದ ಪ್ರಾಣಿಗಳೆಂದು ನಂಬಿ ಅವುಗಳ ಒಂದೊಂದು ಚಟುವಟಿಕೆಯನ್ನು ಶುಭ ಅಶುಭ ಸೂಚಕವಾಗಿ ವ್ಯಾಖ್ಯಾನಿಸಲಾಗುತ್ತದೆ.

ಪ್ರಾಣಿಗಳ ಬೇರೆ ಬೇರೆ ಅಂಗಾಂಗಗಳನ್ನು ವೈದ್ಯರಲ್ಲಿ ಬಳಸಲಾಗುತ್ತದೆ. ಅವುಗಳಿಗೆ ಕಾಯಿಲೆಯನ್ನು ವಾಸಿಮಾಡುವ ಗುಣವಿದೆಯೆಂದು ನಂಬಲಾಗಿದೆ. ಆನೆಯ ಲದ್ದಿ ಮತ್ತು ಮೊಲದ ಹಿಕ್ಕೆ ಚಿಕ್ಕಮಕ್ಕಳಿಗೆ ಗಾಳಿ ಧೂಳಿನಿಂದ ಬರುವ ರೋಗವನ್ನು ನಿವಾರಣೆ ಮಾಡುತ್ತದೆಂಬುದು ಜನಪದರ ನಂಬಿಕೆ. ಹೀಗೆಯೇ ಪಂಚಗವ್ಯ, ಹಂದಿಯ ಮುಸುಡಿ, ಉಡದ ಮಾಂಸ ಹಾಗೂ ತುಪ್ಪ ಹಸುವಿನ ಬೆಣ್ಣೆ, ಕತ್ತೆಯ ಹಾಲು, ಕೊತ್ತಿಯ ಕೂದಲು, ಕೋಳಿ ಸಾರು, ಪಾರಿವಾಳದ ರಕ್ತ, ಮೀನಿನ ಕಣ್ಣು ಇವುಗಳಲ್ಲಿ ಮುಖ್ಯವಾದವು. ಪ್ರಾಣಿಗಳಿಗೆ ಬರುವ ರೋಗಗಳನ್ನು ಪ್ರಾಣಿಗಳ ಉತ್ಪನ್ನದಿಂದಲೇ ಗುಣಪಡಿಸಬಹುದೆಂಬ ನಂಬಿಕೆ ಮತ್ತು ಪ್ರಯೋಗ ರೂಢಿಯಲ್ಲಿರುವುದನ್ನು ಸಹ ಗಮನಿಸಬಹುದಾಗಿದೆ.

ಭೌಗೋಳಿಕ ಸಂಗತಿಗಳು, ಧಾರ್ಮಿಕ, ಸಾಮಾಜಿಕ ಮತ್ತು ಆರ್ಥಿಕ ಕಾರಣಗಳು ವ್ಯಕ್ತಿಗತ ಮನೋಧರ್ಮ ನಂಬಿಕೆಗಳ ಸ್ವರೂಪವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ‘ನಾಯಿ ಎಂಜಲು ತಿನ್ನಬಾರದು’, ‘ಕೋಳಿಯನ್ನು ಮುಟ್ಟಿ ಇತರ ವಸ್ತುಗಳನ್ನು ಮುಟ್ಟಬಾರದು ‘ವೈಜ್ಞಾನಿಕ ನಂಬಿಕೆಯ ಗುಂಪಿಗೆ ಸೇರಿದರೆ’ ಗರುಡ ರೇಖೆ ಇರುವವರನ್ನು ಹಾವು ಕಡಿಯುವುದಿಲ್ಲ, ‘ಬೆಕ್ಕಿನ ಕಸ ಸಿಕ್ಕುವುದಿಲ್ಲ’ ಮುಂತಾದವು ಮೂಢನಂಬಿಕೆಗಳು ಹಾಗೆ ನೋಡಿದರೆ ಬಹುತೇಕ ನಂಬಿಕೆಗಳ ತರ್ಕಹೀನ ನೆಲೆಯಿಂದ ಬಂದವು. ಸಾಂಪ್ರದಾಯಿಕ ಆಚರಣೆಯಿಂದ ಮುಂದುವರಿಸಲ್ಪಟ್ಟವು. ಆದರೆ ಎಲ್ಲಾ ನಂಬಿಕೆಗಳನ್ನು ಸಾರಸಗಟಾಗಿ ನಿರುಪಯುಕ್ತವೆಂದು ಹೇಳಲು ಬರುವುದಿಲ್ಲ. ಕೆಲವಾದರೂ ನಂಬಿಕೆಗಳಲ್ಲಿ ಆರೋಗ್ಯ ಸಂಬಂಧಿಯಾದ ಹಾಗೂ ಮನೋವೈಜ್ಞಾನಿಕವಾದ ಸತ್ಯದ ಎಳೆಗಳು ಕ್ರೋಢೀಕರಣಗೊಂಡಿರುತ್ತವೆ ಎನ್ನಬಹುದು.

ಆಧುನಿಕ ವಿದ್ಯಾಭ್ಯಾಸ ಮತ್ತು ವೈಚಾರಿಕ ಚಿಂತನೆಗಳು ಇಂಥ ಜನಪದ ನಂಬಿಕೆಗಳ ಬೇರನ್ನು ಸ್ವಲ್ಪಮಟ್ಟಿಗೆ ಅಲುಗಾಡಿಸುತ್ತವೆ. ಆದರೂ ನಂಬಿಕೆಗಳು ಹೊಸ ರೂಪ ಮತ್ತು ರೀತಿಯಲ್ಲಿ ಜೀವನವನ್ನು ಪ್ರವೇಶಿಸುತ್ತಲೇ ಇರುತ್ತವೆ. ವಿಚಾರಹೀನ ಹಾಗೂ ಆಲಸಿ ಜನವರ್ಗವಿರುವ ಕಡೆ ಇವುಗಳ ಪ್ರಾಬಲ್ಯ ಹೆಚ್ಚು. ಆದ್ದರಿಂದ ನಂಬಿಕೆಗಳ ಮೇಲೆ ನಿತ್ಯ ವೈಚಾರಿಕ ಸಮರ ನಡೆಯುತ್ತಿರುತ್ತವೆ.