ನೀನೆನ್ನ ಸರ್ವಸ್ವ, ನನ್ನ ಜೀವದ ಜೀವ, ನನ್ನೊಳಗಿನೊಳಗು ;
ನಿನ್ನ ಹೊರತೆನಗಾರು ನನ್ನವರು ಇಲ್ಲವೋ ಮೂಲೋಕದೊಳಗು !
ಶಾಂತಿ, ಸುಖ, ಆಸೆ, ಆಶ್ರಯ ಮತ್ತೆ ಸಂಪದೈಶ್ವರ‍್ಯ ನೀನೆ,
ಜ್ಞಾನಾದಿ ಬುದ್ಧಿ ಬಲ ನೀನೆ.

ಮನೆ ನೀನೆ, ಮಠ ನೀನೆ, ಆತ್ಮೀಯ ಬಂಧು ಪರಿವಾರ ನೀನೆ,
ನನ್ನಿಂದು ಮುಂದುಗಳು ನೀನೆ, ಸ್ವರ್ಗಮೋಕ್ಷವು ನೀನೆ ;
ವೇದಾದಿ ಶಾಸ್ತ್ರಗಳು ನೀನೆ, ಪರಮ ಗುರು ನೀನೆ.
ಅನಂತ ಸುಖದ ನೆಲೆವೀಡು ನೀನೆ.

ಪಥ ನೀನೆ, ಗುರಿ ನೀನೆ, ತಾಯ್ತಂದೆಗಳು ನೀನೆ,
ಸೃಷ್ಟಿಕರ್ತನು ನೀನೆ, ಪ್ರಳಯರೂಪಿಯು ನೀನೆ,
ಜೀವನದ ಜಲಧಿಯಲಿ ನನ್ನ ದೋಣಿಯ ನಡೆಪ
ಅಂಬಿಗನು ನೀನೇ.