ಬಾರದಿರಿ, ಅಯ್ಯೊ ಬಂದು ಕದಡದಿರಿ
ವನಮಹಿಷ ಖುರದಿಂದ ತಿಳಿಗೊಳಗಳ.
ಬಂದು ಹದ್ದಿನ ರೆಕ್ಕೆ ಬಿತ್ತರಿಸಬೇಡಿರೋ
ನೀಲಗಿರಿ ಶಿಖರಗಳ ಮೌನದಲ್ಲೂ.

ಬಾರದಿರಿ ದಮ್ಮಯ್ಯ, ದೇಗುಲದ ಗರ್ಭಗುಡಿ-
ಯೊಳಗುರಿವ ದೀಪದ ಸುತ್ತ ಮಿಡಿತೆಯಾಗಿ
ಜಿರಲೆಗಳಾಗಿ ಮಣೆ ಚಾಪೆಗಳ ಸಂದಿಗೊಂದಿ-
ಗಳಲ್ಲಿ ನುಸಿದು ಕೆಡಿಸದಿರಿ ನೈವೇದ್ಯವ.

ನುಗ್ಗದಿರಿ ತೊಂಡುಗೂಳಿಗಳಾಗಿ ಹೊಲದಲ್ಲಿ,
ಮುರಿಯಬೇಡಿರೊ ಎಳೆಯ ಮೊಳಕೆಗಳನು.
ಮಲಗಿದ ಹೊತ್ತು, ಇಲಿ ಹೆಗ್ಗಣಗಳಾಗಿ ಮುಕ್ಕದಿರಿ
ನಾಳೆಗೆಂದುಳಿಸಿಟ್ಟ ಗ್ರಾಸಗಳನು.

ನಾ ಬುದ್ಧನಲ್ಲ, ಸಿದ್ಧನೂ ಅಲ್ಲ, ಕಾದಿ ಗೆಲಲು,
ನನ್ನ ಮೇಲೆ ಏಕೆ ನಿಮ್ಮ ದಾಳಿ ?
(ನಿಮ್ಮ ಬಿಡುಗಡೆಯಲ್ಲೆ ನನ್ನ ಬಿಡುಗಡೆಯುಂಟೊ)
ಕೃಪೆಯಿಟ್ಟು ಸಲಿಸಿರೊ ಕೋರಿಕೆಗಳ).