ಪ್ರಾಸದ ಪ್ರಕಾರಗಳು

ವಿನುತ-ಪ್ರಾಸಂ ಶಾಂತೋಪನತಂ ವರ್ಗೋದಿತಂ ಸಮೀಪಗತಂ ಮ- |

ತ್ತನುಗತಮಂ[1]ತಗತಂ ಸಂ[2] ಜನಿತ-ವಿಭೇದೋಕ್ತಿಯಿಂದಮಿಚಿತಾಱು ತೆಱಂ ||೩೧||

೨೭. ರೂಪಕಲಂಕಾರ ಹಾಗು ವಿಶೇಷ ವಿವಕ್ಷೆಯಿರುವ ಸ್ತಳಗಳನ್ನು ಬಿಟ್ಟರೆ ಮಿಕ್ಕ ಎಡೆಗಳಲ್ಲಿ ಚಪಲಚಿತ್ತರಾಗಿ ಬಹುವಾಗಿ ವಿಶೇಷಣಗಳ ಸಮುದಾಯವನ್ನು ವಿರಸವಾಗುವಂತೆ ಬಳಸಬಾರದು.

೨೮. ಆ ನಾಡವರು ಒಳ್ಳೆಯ ಯೋಧರು, ಕವಿಗಳು, ಒಳ್ಳೆಯ ಪ್ರಭುಗಳು, ಸುಂದರರು, ವಿನಯವಂತರು, ಗುಣಿಗಳೂ, ಅಭಿಮಾನಿಗಳು, ಅತ್ಯುಗ್ರರು, ಗಂಭೀರ ಹೃದಯರು ಮತ್ತು ವಿವೇಕಿಗಳು !

೨೯. ಹೀಗೆ ‘ಅಂಕಚಾರಣೆ’ ಅಥವಾ ಸದ್ಗುಣವರ್ಣನೆಯ ಪ್ರಸಂಗವಿದ್ದಾಗ ಮಾತ್ರ ಬಹು-ವಿಶೇಷಣಗಳನ್ನು ಹೇಳುವುದು ಸಮ; ಮತ್ತಾವ ಪ್ರಸಂಗದಲ್ಲೂ ಹಾಗೆ ಹೇಳುವುದು ಸಮವಾಗದೆಂಬುದು ನೃಪತುಂಗನ ಮತ.

೩೦. ಪ್ರಖ್ಯಾತವಾದ ಶಬ್ದಾಲಂಕಾರಗಳಲ್ಲೆಲ್ಲ ಪ್ರಾಸವು ಕನ್ನಡಕ್ಕೆ ಯಾವಾಗಲೂ ಅತಿಶಯವಾದದ್ದು. ನೃಪತುಂಗನ ಮತದಂತೆ ಅದರ ವಿವರಗಳು ಈ ತೆರನಾಗಿವೆ-

೩೧. ‘ವಿನುತಪ್ರಾಸ’, ‘ಶಾಂತಪ್ರಾಸ’, ‘ವರ್ಗಪ್ರಾಸ’, ‘ಸಮೀಪಪ್ರಾಸ’, ‘ಅನು(ಗತ)ಪ್ರಾಸ’, ‘ಅಂತ(ಗತ)ಪ್ರಾಸ’-ಎಂಬ ಭೇದಗಳಿಂದಾಗಿ ಪ್ರಾಸವು ಆರು ಬಗೆಯಾಗಿದೆ.

) ವಿನುತಪ್ರಾಸ

ಪಾದದೊಳೆರಡನೆಯಕ್ಕರ[3]ಮಾದರದಿಂದಾದುದಾವುದದನಱದ[4]ನಿತಂ |

ಪಾದದೊಳಿಡುವುದದಕ್ಕುಂ ಭೇ[5]ದೋಕ್ತಿ-ಕ್ರಮ-ವಿಚಾರಿತೋರು-ಪ್ರಾಸಂ ||೩೨||

ಮನೆಗಿಂದು ಬರ್ಕುಮೆಂದಾನನೇಕತರ-ವಸ್ತು-ವಾಹನಾದಿಯನೊಸೆದಿಂ- |

ಬೆ[6]ನೆಯ ಪಸರಿಸಿ ಕ[7]ಡಲಿರ್ದೆಂ ಜನೇಶ[8]ನಿಂದೇಕೆ ಕ[9]ೞದು ಪೋದನೋ ಪೇೞೆಂ ||೩೩||

ಎಂಬುದು ವಿನುತಪ್ರಾಸಂ ಸಂಬಂಧಾಕ್ಷರದೊಳೆಲ್ಲ ಮಾತ್ರೆಗಳುಂ ತ– |

ಳ್ತಿಂಬಾಗಿ ಬೆ[10]ರಸಿ ಶೋಭಾಡಂಬರಮಂ ಪಡೆಗುಮುಚಿತ-ಕಾವ್ಯೋಕ್ತಿಗಳೊಳ್ ||೩೪||

) ಶಾಂತಪ್ರಾಸ

ಬೆರಸಿರೆ ಮುಂ ಸಂಯೋಗಾಕ್ಷರಂಗಳೇಕ-ಸ್ವರಂಗಳಿಂ ಸುಪ್ರಾಸಂ |

ನೆರೆದು ವಿಪರ್ಯಾಸ-ಕ್ರ[11]ಮಮಿರೆ ಸತತಂ ಶಾಂತಪೂರ್ವಮಕ್ಕುಂ ಪ್ರಾಸಂ ||೫೫||

೩೨. ಪಾದದಲ್ಲಿ ಎರಡನೆಯ ಅಕ್ಷರದ ಸ್ವರೂಪ ಯಾವುದೆಂಬುದನ್ನು ಸರಿಯಾಗಿ ತಿಳಿದು ಅದನ್ನೇ ಎಲ್ಲ ಪಾದಗಳಲ್ಲಿಯೂ ಹಾಗೆಯೇ ಇರಿಸುವುದು ವಿಭಾಗ ಕ್ರಮದಲ್ಲಿ ಮೊದನೆಯದಾದ ‘ವಿನುತ’ ಅಥವಾ ಶ್ರೇಷ್ಠ ಪ್ರಾಸ.

೩೩. “ ‘ರಾಜನು ಇಂದು ಮನೆಗೆ ಬರುವನು, ಅನೇಕ ವಿಧವಾದ ವಸ್ತು ವಾಹನಾದಿಗಳನ್ನು ಅವನಿಗೆ ಪ್ರೀತಿಯಿಂದ ಕಾಣಿಕೆಕೊಡುವೆನು’ ಎಂದು ಮಾಡಿಕೊಂಡಿದ್ದೆನಲ್ಲ! ಅವನು ಇಂದೇ ಸತ್ತುಹೋದನೇಕೆ ಎಂಬುದನ್ನು ಹೇಳಿರಿ.” *ಈ ಲಕ್ಷ್ಯದಲ್ಲಿ ನಾಲ್ಕು ಪಾದಗಳಲ್ಲಿಯೂ ‘ನೆ’ ಅಥವಾ ‘ನೇ’ ಎಂಬ ಒಂದೇ ಅಕ್ಷರ (ಹ್ರಸ್ವ-ದೀರ್ಘಗಳಿಗಿಲ್ಲಿ ಭೇದ ಅವಿವಕ್ಷಿತ) ಪಾದದ ಎರಡನೆಯ ಅಕ್ಷರವಾಗಿ ಬಂದಿರುವುದನ್ನು ಗಮನಿಸಿರಿ.*

೩೪. ಮೇಲಿನಂತಿರುವುದೇ “ವಿನುತಪ್ರಾಸ”. ಇಲ್ಲಿ ಸಮಾನಾಕ್ಷರದ ಎಲ್ಲ ಮಾತ್ರೆಗಳೂ ಕೂಡ ಒಂದೇ ವಿಧವಾಗಿ ಸೇರಿಕೊಂಡು ಒಳ್ಳೆಯ ಕಾವ್ಯಪ್ರಯೋಗಗಳಲ್ಲಿ ಶೋಭಾತಿಶಯವನ್ನು ಪಡೆಯುವುವು

೩೫. ಒಂದೇ ಸಮಾನವಾದ ಸ್ವರದಿಂದ ಕೂಡಿದ ಸಂಯುಕ್ತಾಕ್ಷರಗಳು (ಪ್ರಾಸ ಸ್ಥಾನದಲ್ಲಿ) ಬರುತ್ತಿರುವ ಮತ್ತು ಅದರ ಅನುಕ್ರಮದಲ್ಲಿ ವ್ಯತ್ಯಾಸವೂ ಶಕ್ಯವಿರುವ ಒಳ್ಳೆಯ ಪ್ರಾಸವೇ ‘ಶಾಂತಾನುಪ್ರಾಸ’.

ಪ[12]ತ್ತೀ ಪ್ರಮಾದ-ಫಲಕಮನತ್ಯುಗ್ರ-ಗ್ರಾಹ-ನಿವಹ-ಸಂಕ್ಷೋಭಿತದೊಳ್ |

ಮತ್ತೀ ರತ್ನಾಕರದೊಳ್ ಪು[13]ತ್ರಿಕೆಯೆನೆ ಬೞ್ದಳಿಂತು ಬಾ[14]ೞ್ವುದೆ ಚೋದ್ಯಂ ||೩೬||

ವರ್ಗಪ್ರಾಸ

ಶಾಂತಪ್ರಾಸದ ಭೇದಮದಿಂತಕ್ಕುಂ ವರ್ಗದಕ್ಕರಂಗಳ್ ನಾಲ್ಕುಂ |

ಸಂತಮಿರೆ ಪೇೞ್ವ ತಾಣದೊಳಂತಕ್ಕುಂ ಪ್ರಾಕ್ತನೋಕ್ತ-ವರ್ಗ-ಪ್ರಾಸಂ ||೩೭||

ಸಕಲ-ಜನ-ವಿನುತನಂ ಶತ-ಮುಖ-ಸದೃಶ-ವಿಶಾಲ-ವಿವಿಧ-ವಿಭವೋದಯನಂ |

ಪ್ರಗತ-ಗುಣ-ಗಣನನರಿ-ಬಲ-ವಿಘಟನನಂ ಕಂಡನಣುವನಾ ರಾಘವನಂ ||೩೮||

೩೬. ಅಕಸ್ವಾತ್ ದೊರೆತ ಈ ಹಲಗೆಯನ್ನೇರಿ, ಅತ್ಯುಗ್ರವಾದ ಮೊಸಳೆಗಳ ಸಮೂಹದಿಂದ ಕ್ಷುಭಿತವಾದ ಈ ಸಮುದ್ರದಲ್ಲಿಯೂ ಬೊಂಬೆಯಂತೆ ಬದುಕಿ ಉಳಿದಿರುವಳಲ್ಲಾ ! ಹೀಗೆ ಬಾಳುವುದು ಏನಚ್ಚರಿ ! *ಇಲ್ಲಿ ‘ತೀ’ ಎಂಬುದು ಒಂದು ಮತ್ತು ಮೂರನೆಯ ಪಾದಗಳಲ್ಲಿ ಸಮಾನಸ್ವರಸಹಿತ ತದ್ವತ್ತಾಗಿಯೇ ಬಂದಿರುವ ಸಂಯುಕ್ತಾಕ್ಷರ. ‘ಈ’ ಎಂಬುದು ಸಮಾನವಾದ ಸ್ವರ (Vowel ); ‘ತ್ತ್’ ಎಂಬುದು ಸಮಾನ ವ್ಯಂಜನದಿಂದಲೇ ಸಂಯುಕ್ತವಿರುವ ಸ್ವರ ಅತವಾ ಧ್ವನಿ (Sound). ಎರಡು ಮತ್ತು ನಾಲ್ಕನೆಯ ಪಾದಗಳಲ್ಲಿ ‘ತ್ಯು, ‘ತ್ರಿ’ ಎಂದು ಪ್ರಾಸಸ್ಥಾನದಲ್ಲಿ ಬರುವ ಅಕ್ಷರಗಳು ಭಿನ್ನ ಸ್ವರಗಳನ್ನು ಹೊಂದಿರುವಂತೆ ಭಿನ್ನ ವ್ಯಂಜನಗಳಿಂದಲೂ ಸಂಯುಕ್ತವಾಗಿವೆ.

೩೭. “ಶಾಂತಪ್ರಾಸ”ವೆಂಬ ಭೇದ ಹೀಗೆ ಇರುತ್ತದೆ. *‘ಕ’ ‘ಚ’ ‘ಟ’ ‘ತ’ ‘ಪ’ ಎಂಬ* ವ್ಯಂಜನ ವರ್ಗಗಳ *ವರ್ಣಮಾಲೆಯಲ್ಲಿ ಒಂದೊಂದೂ ‘ಕ, ಖ, ಗ, ಘ, ಙ, ಎಂಬಂತೆ ಸಾಲಾಗಿ ಐದಕ್ಷರಗಳನ್ನು ಒಳಗೊಳ್ಳುತ್ತವೆಯಷ್ಟೆ. ಒಂದೊಂದರಲ್ಲೂ* ಮೊದಲ ನಾಲ್ಕು ಅಕ್ಷರಗಳು (ಕ,ಖ,ಗ.ಘ ಇತ್ಯಾದಿ) (ಸಾಲಾಗಿ) ಅದೇ ಅನುಕ್ರಮದಲ್ಲಿ ಪ್ರಾಸಸ್ಥಾನದಲ್ಲಿ ಬರುತ್ತಿದ್ದರೆ ಪೂರ್ವಾಚಾರ್ಯರ ಮತದಂತೆ ಅದು “ವರ್ಗಪ್ರಾಸ”.

೩೮. ಎಲ್ಲ ಜನರಿಂದಲೂ ಸಂಸ್ತುತನೂ, ಇಂದ್ರನಿಗೆ ಸದೃಶವಾದ ವಿಪುಲ ವಿಭವಾನ್ವಿತನೂ, ಅಧಿಕ ಗುಣಶಾಲಿಯೂ, ಅರಿಮರ್ದನನೂ ಆದ ರಾಘವನನ್ನು ಹನುಮಂತನು ಕಂಡನು. *ಮೂಲ ಪದ್ಯದ ಪ್ರಾಸಸ್ಥಾನದಲ್ಲಿ ಅನುಕ್ರಮವಾಗಿ ‘ಕ’, ‘ಖ’, ‘ಗ’, ‘ಘ’ ಎಂಬ ಅಕ್ಷರಗಳು ಬಂದಿರುವುದನ್ನು ಗಮನಿಸಿರಿ.*

ಸಮೀಪಪ್ರಾಸ

ಇದು ದಲ್ ವರ್ಗ-ಪ್ರಾಸಕ್ಕುದಾಹೃತಂ ಕುಱತು ಶ-ಷ-ಸ*ವರ್ಣ-ತ್ರಯಮಂ |

ವಿದಿತ-ಪ್ರಾಸ-ವಿವಿಕ್ತಾಸ್ಪದದೊಳ್ ನಿಲೆ ಪೇ[15]ೞ್ವೊಡದು ಸಮೀಪ-ಪ್ರಾಸಂ ||೩೯||

ಶಶ-ಧರ-ಬಿಂಬಾನನೆಯಂ ಝಷಕೇತನ-ಕೇ[16]ತನಾಭ-ತನು-ತನುವಂ ತಾಂ |

ಬಿಸ-ವಿಶದ-ವರ್ಣೆಯಂ ಕಂಡೊಸೆದಂ ಬನದೊಳಗೆ ಜನಕ-ತನಯಳನಣುವಂ ||೪೦||

ಅನುಗತಪ್ರಾಸ

ಎಂದಿಂತು ಸಮೀಪ-ಪ್ರಾಸಂ ದರ್ಶಿತ-ಭೇದಮಾಯ್ತನುಪ್ರಾಸಮುಮಂ |

ಸಂ[17]ಧಿಸಿದೆಣೆಯಕ್ಕರವೊಂದೊಂದಱೊಳಳವಡಿಸಿ ಬಂದೊಡನುಗತಮಕ್ಕುಂ ||೪೧||

ಜನ-ವಿನುತನನಘನನುಪಮನನುನಯಪರನರಸನಿನಿಸು ನೆನೆನೆನೆದು ಮನೋ-

ಜ[18]ನಿತ-ಮುದನನಿಲ-ತನಯನನನನೃತ-ವಚನ-ಪ್ರಪಂಚನಿಂತಿರೆ ನುಡಿದಂ |೪೨||

೩೯. ಮೇಲಿನದು “ವರ್ಗಪ್ರಾಸ”ಕ್ಕೆ ಉದಾಹರಣೆ. ಉದ್ದೇಶಪೂರ್ವಕವಾಗಿ ‘ಶ’-‘ಷ’-‘ಸ’ ಎಂಬ ಅಕ್ಷರಗಳನ್ನು ಅದೇ ಅನುಕ್ರಮದಲ್ಲಿ ಪ್ರಾಸಸ್ಥಾನದೊಳಗಿರಿಸಿ ಹೇಳಿದ್ದಾದರೆ ಅದು “ಸಮೀಪಪ್ರಾಸ”ವೆನಿಸುವುದು.

೪೦. ಚಂದ್ರವದನೆಯೂ ಮನ್ಮಥನ ಧ್ವಜದ ಮೀನಿನಂತೆ ಕೃ*ಶಾಂಗಿಯೂ, ತಾವರೆಯೆಳೆಯಂತೆ ಶ್ವೇತವರ್ಣದವಳೂ ಆದ ಜನಕಾತ್ಮಜೆಯನ್ನು ವನದಲ್ಲಿ ಕಂಡು ಹನುಮಂತನು ಹರ್ಷಿಸಿದನು. *ಇಲ್ಲಿ ಪ್ರಾಸಸ್ಥಾನದಲ್ಲಿ ಅನುಕ್ರಮವಾಗಿ ‘ಶ’, ‘ಷ’, ‘ಸ’, ‘ಸೆ’, ಎಂದು ಬಂದಿರುವುದನ್ನು ಗಮನಿಸಬೇಕು. ಮೊದಲ ಮೂರಕ್ಕೆ ಉಚ್ಚಾರಣೆಯಲ್ಲಿ ಸಾಮೀಪ್ಯವಿರುವ ಕಾರಣ “ಸಮೀಪಪ್ರಾಸ’ವೆಂಬ ಹೆಸರು ಅನ್ವರ್ಥಕವಾಗಿ ಒಪ್ಪುತ್ತದೆ.*

೪೧. ಹೀಗೆ “ಸಮೀಪಪ್ರಾಸ”ದ ಭೇದವನ್ನು ಉದಾಹರಿಸಿದ್ದಾಯಿತು. ಸಮಾನಾಕ್ಷರದ ಜೋಡಿಯನ್ನು ಪದವೊಂದೊಂದರಲ್ಲೂ ಪೋಣಿಸಿಟ್ಟಂತೆ ಕೂಡಿಸಿಕೊಂಡು ಅಳವಡಿಸಿದ್ದರೆ ಅದೇ “ಅನುಪ್ರಾಸ” ಅಥವಾ “ಅನುಗತಪ್ರಾಸ”.

೪೨. ಜನವಿನುತನೂ ಅನಘನೂ ಅನುಪಮನೂ ಅನುನಯಪರನೂ ಸತ್ಯವಚನನೂ ಆದ ಅರಸನು(=ರಾಮನು) ಮನದಲ್ಲಿ ಒಂದಿನಿಸು ನೆನೆನೆನೆದು ಸಂಜನಿತ ಹರ್ಷನಾಗಿ ಅನಿಲತನಯನಿಗೆ (= ಹನುಮಂತನಿಗೆ) ಹೀಗೆ ನುಡಿದನು. *ಎಣೆಯಕ್ಕರ=ಜೋಡಿಯಾಗಿ ಬರುವ ಸಮಾನಾಕ್ಷರ. ಪ್ರಸ್ತುತ ಪದ್ಯದಲ್ಲಿ ‘ನನ’, ‘ನನು’, ‘ನುನ’, ‘ನಿನಿ’, ‘ನೆನೆ’,‘ನನಿ’,‘ನನ’,‘ನನೃ’ ಎಂದು ಇಂತಹ ಒಂಬತ್ತು ಜೋಡಕ್ಷರಗಳು ಬಂದಿವೆ; ದ್ವಿರುಕ್ತಿವಾದ ಒಂದೇ ವ್ಯಂಜನ ‘ನ್” ಇದಕ್ಕೆ ಸಮಾನ ಸ್ವರ ಕೂಡಬಹುದು ‘ನುನ’, ‘ನನೃ’, ‘ನನಿ’, ಎಂಬಂತೆ; ಇಲ್ಲವೆ ಭಿನ್ನಸ್ವರ ಕೂಡ ಬಹುದು ‘ನುನ, “ನನೃ’, ‘ನನಿ’ ಎಂಬಂತೆ. ಇಲ್ಲಿ ಪಾಸ್ರಸ್ಥಾನದ ‘ನ’ ಕಾರ ಸಾಮ್ಯಕ್ಕಿಂತ ಹೆಚ್ಚಿನ ಎಣೆಯಕ್ಷರದ ಹೆಣೆಗೆ ಗಮನಾರ್ಹ.*

ಅಂತ್ಯಪ್ರಾಸ

ಇಂತಿದನುಪ್ರಾಸಂ ಪಾದಾಂತದೊಳೊಂದಾವುದಾನುಮಿಟ್ಟಕ್ಕರಮಂ |

ಮುಂತಣ ಪಾದಾಂತಂಗಳೊಳುಂ ತಡೆಯದೆ ಪೇೞ್ವೊಡಂತದಂ[19]ತ್ಯ-ಪ್ರಾಸಂ ||೪೩||

ಅತಿ-ವಿಶದ-ಯಶೋವೃತ್ತಂ ನತ-ಸಕಳಾರಾತಿ-ಜನ-ವಿತಾನಂ ಮತ್ತಂ |

ವಿತತ-ಶ್ರೀ-ಸಂಪತ್ತಂ ಶ[20]ತಮುಖ-ಸದೃಶಾನುಭಾವನೊ[21]ಲವಂ ಪೆ*ತ್ತಂ ||೪೪||

ಪ್ರಾಸಾಭಾಸಗಳು

ಪ್ರಾಸಾನುಪ್ರಾಸಾಂತ-ಪ್ರಾಸಂಗಳ್ ಮೂಱುಮತಿಶಯಂಗಳ್ ಪ್ರಾಸಾ- |

ಭಾಸಂಗಳುಱದ ಮೂಱುಂ ಭಾಸುರ-ನೃಪತುಂಗ-ದೇವ-ವಿದಿತ-ಕ್ರಮದಿಂ ||೪೫||


[1] ಮತ್ಯಂತಗತಂ ‘ಮ, ಕ’.

[2] ‘ಸಂ’ ಲುಪ್ತ ‘ಮ, ಕ’.

[3] ಮಾದಱ ದಿನ-ದಾವುದದನ-ಕ್ರಮದಿವಿಚಾರಿತೋರು ‘ಲ’

[4] ದನಿತುಂ ‘ಪಾ’.

[5] ಭೇದೋಕ್ತ ಕ್ರಮ ‘ಮ’.

[6] ಬನೆ ‘ಪಾ,ಸೀ.

[7] ಕುಡಲಿರ್ದಂ ‘ಅ, ಬ’.

[8] ನಿಂತೇಕೆ ‘ಫಾ’.

[9] ಕಳೆದು ‘ಮ’; ಕಳಿದು ‘ಅ’.

[10] ಬೆರಸೆ ‘ಮ’.

[11] ಕ್ರಮದಿರೆ ‘ಪಾ’.

[12] ಪತ್ತಿ ‘ಪಾ, ಮ’; ಪತ್ತೀ (ಪತ್ತಿ+ಈ) ಮುಳಿಯ ತಿಮ್ಮಪ್ಪಯ್ಯನವರಿಂದ ‘ಕವಿರಾಜ ಮಾರ್ಗವಿವೇಕ’ದಲ್ಲಿ ಸೂಚಿತ ಪಾಠ, ಪು. ೨೩೫; ಮೈಸೂರು ಆವೃತ್ತಿಯಲ್ಲಿ ‘ಸೀ’ ಸ್ವೀಕೃತ.

[13] ಪುತ್ರಿಕೆಯನೆ ಬಿೞ್ದ ‘ಪಾ’; ಪುತ್ರಿಕೆಯಲಿ ಬೞ್ದ ‘ಕ, ಅ’; ಪುತ್ರಿಕೆಯಲಿ ಬಿಳ್ದ ‘ಬ’.

[14] ಬಾಳ್ವುದೆ ‘ಕ’.

[15] ಪೇಳ್ವಡದು ‘ಕ’.

[16] ಕೇತನಾಭಕರಲೋಚನೆಯಂ ‘ಬ’.

[17] ಸಂದಿಸಿಯೆಣೆಯಕ್ಕರ ‘ಕ’.

[18] ಜನಿತಮುಂ ಮಾದಲತಿಲತನಯನ-‘ಬ’.

[19] ದಂತಪ್ರಾಸಂ ‘ಪಾ, ಸೀ’.

[20] ಶತಮೂಕ-ಸದೃಶಾನುಭಾವ-ಪದವಂ ‘ಮ, ಕ’.*

[21] ಒಲವಿಂ ‘ಪಾ, ಮ, ಸೀ’; ಇದರಲ್ಲಿ ಅರ್ಥವೈಶದ್ಯವಿಲ್ಲವಾದ್ದರಿಂದ ಇಲ್ಲಿ ಪರಿಷ್ಕೃತ.

* ಪೊತ್ತಂ ‘ಪಾ’.