ಜಾನಪದ ಸಾಹಿತ್ಯದ ವಿಶ್ವಕೋಶದಂತಿರುವ ಡಾ. ಬಸಯ್ಯ ಸಾವಳಿಗಯ್ಯ ಗದ್ದಗಿಮಟ ಅವರು ಜಾನಪದ ಸಾಹಿತ್ಯದ ಸಂಶೋಧನೆಗೆ ನಾಂದಿ ಹಾಡಿದರು. ಕನ್ನಡದಲ್ಲಿ ಪ್ರಪ್ರಥಮವಾಗಿ ಜಾನಪದ ವಿಷಯದಲ್ಲಿ ಮಹಾಪ್ರಬಂಧವನ್ನು ರಚಿಸಿ ಕರ್ನಾಟಕ ವಿಶ್ವವಿದ್ಯಾಲಯದಿಂದ ೧೯೫೪ ರಲ್ಲಿ ಪಿಎಚ್‌.ಡಿ. ಪದವಿ ಪಡೆದು ‘ಜಾನಪದ ಹರಿಕಾರ‘ರೆನಿಸಿದರು. ನಿರಂತರವಾಗಿ ಸಂಶೋಧನೆಯಲ್ಲಿ ತಲ್ಲೀನರಾಗಿ ಜಾನಪದ ಕ್ಷೇತ್ರಕ್ಕೆ ವಿದ್ವತ್ತಿನ ಹೊಂಬಳೆಯನ್ನು ತೊಡಿಸಿದ ಕೀರ್ತಿಶಾಲಿಗಳು. ಕರ್ನಾಟಕ ಜಾನಪದ ಅಧ್ಯಯನಕ್ಕೆ ಮೌಲಿಕವಾದ ಕೊಡುಗೆಗಳನ್ನು ಕೊಟ್ಟವರಲ್ಲಿ ಡಾ. ಬಿ.ಎಸ್‌. ಗದ್ದಗಿಮಠ ಅವರ ಹೆಸರು ಪ್ರಮುಖವಾದುದು. ಡಾ. ಭೂಸನೂರಮಠ ಮತ್ತು ಎಸ್‌.ಎಸ್‌. ಮಾಳವಾಡ ಅವರು ಜಾನಪದ ಸಾಹಿತ್ಯ (Folk-lore) ಸಾಹಿತ್ಯವೆ? ಎಂದು ಗೇಲಿ ಮಾಡುತ್ತಿರುವ ವಾತಾವರಣದಲ್ಲಿ ಜಾನಪದ ಸಾಹಿತ್ಯವನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ ವಿಮರ್ಶೆಗೈದರು. ಅಪಾರವಾದ ಸಾಹಿತ್ಯವನ್ನು ಗ್ರಂಥರೂಪದಲ್ಲಿ ಕಾಣಿಕೆಯಾಗಿ ಸಲ್ಲಿಸಿದ ಮೊದಲಿಗರು.

ಸಾಹಿತ್ಯ ಕ್ಷೇತ್ರದಲ್ಲಿ ಸ್ವಾತಂತ್ಯ್ರಪೂರ್ವ ಜಾನಪದ ವಿದ್ವಾಂಸರಲ್ಲಿ ಪೂರ್ಣಕಾಲದ ವಿದ್ವಾಂಸರೆಂದು ಗುರುತಿಸಬಲ್ಲವರು ತುಂಬಾ ವಿರಳ. ಕನ್ನಡ ಸಾಹಿತ್ಯ ಕ್ಷಿತಿಜದಲ್ಲಿ ಪ್ರಧಾನವಾದ ಸಾಧನೆಯನ್ನು ತೋರುತ್ತಾ ಜಾನಪದದಲ್ಲಿಯು ಆಸಕ್ತಿಯನ್ನು ಉಳಿಸಿಕೊಂಡವರೆ ಹೆಚ್ಚು. ಅದರಲ್ಲೂ ನವೋದಯದ ಎಲ್ಲ ಸಂಗ್ರಹಕಾರರು ಒಂದರಡು ಸಂಕಲನಗಳನ್ನು ಜಾನಪದ ವಿಮರ್ಶಾ ಗ್ರಂಥಗಳನ್ನು ಮಾತ್ರ ನೀಡಲು ಸಾಧ್ಯವಾಗಿದೆ. ಸ್ವಾತಂತ್ಯ್ರೋತ್ತರ ದಿನಗಳ ಜಾನಪದ ಅಧ್ಯಯನಕ್ಕೆ ಒಳ್ಳೆಯ ಆರಂಭವನ್ನು ಒದಗಿಸಿದ ಖ್ಯಾತ ಪ್ರಪ್ರತಮ ಜಾನಪದ ವಿದ್ವಾಂಸರು ಡಾ. ಬಿ.ಎಸ್‌. ಗದ್ದಗಿಮಠ ಅವರು.

೧೯೫೦ರ ಅವಧಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಜಾನಪದ ಸಾಹಿತ್ಯದಲ್ಲಿ ಸಂಶೋಧನೆಯನ್ನು ಕೈಕೊಂಡು ಡಾಕ್ಟರೇಟ್‌ಪದವಿ ಪಡೆದ ಭಾರತೀಯ ವಿದ್ವಾಂಸರಲ್ಲಿ ಮೊದಲಿಗರು. ಇವರ ಪ್ರಾಮಾಣಿಕ ಪ್ರಯತ್ನದ ಫಲದ ದ್ಯೋತಕವಾಗಿ ವಿಶ್ವವಿದ್ಯಾಲಯವು ಕರ್ನಾಟಕ ಜಾನಪದವನ್ನು ಒಂದು ಮೌಲಿಕವಾದ ಅಧ್ಯಯನದ ವಿಷಯವೆಂದು ಗುರುತಿಸಲು ಪ್ರಪ್ರಥಮಬಾರಿಗೆ ಸಾಧ್ಯವಾಯಿತು. ಈವರೆಗೆ ಕನ್ನಡದಲ್ಲಿ ಕಾರ್ಯನಿರತರಾದ ವಿದ್ವಾಂಸರು ಯಾರೂ ಈ ನಿಟ್ಟಿನಲ್ಲಿ ಯೋಚಿಸಿರಲಿಲ್ಲ.

ಜನಪದ ಸಾಹಿತ್ಯ ಕ್ಷೇತ್ರದಲ್ಲಿ ೧೯೫೦ ರಿಂದ ೧೯೬೦ ರ ಅವಧಿಯಲ್ಲಿ ಡಾ. ಬಿ.ಎಸ್‌. ಗದ್ದಗಿಮಠ ಅವರಷ್ಟು ವ್ಯಾಪಕವಾಗಿ ಕ್ಷೇತ್ರಕಾರ್ಯ ಮಾಡಿದವರು ಮತ್ತೊಬ್ಬರಿರಲಿಲ್ಲ. ತಮ್ಮ ಸಮಸ್ತ ಜೀವನವನ್ನು ಜಾನಪದ ಕ್ಷೇತ್ರಕಾರ್ಯದ ನಿಮಿತ್ತ ಮೀಸಲಾಗಿರಿಸಿದರು. ಈ ಸಂದರ್ಭದಲ್ಲಿ ಅನೇಕ ಕಷ್ಟ-ನಷ್ಟಗಳನ್ನು ಅನುಭವಿಸಿ ಉತ್ತರ ಕರ್ನಾಟಕದ ಹಾಗೂ ಉತ್ತರ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಅಲೆದಾಡಿ ವಿಪುಲವಾದ ಸಾಹಿತ್ಯವನ್ನು ಸಂಗ್ರಹಿಸಿದರು. ಅದನ್ನು ವಿಶ್ಲೇಷಿಸುವ ಸಾಮರ್ಥ್ಯವನ್ನು ಬೆಳೆಸಿಕೊಂಡರು. ಜೊತೆಗೆ ತಮ್ಮ ಶ್ರೀಮತಿಯವರನ್ನು ಕರೆದುಕೊಂಡು ಎತ್ತಿನ ಗಾಡಿಯಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಸಂಚರಿಸಿ ಅನೇಕ ರೂಪದ ಗೀತೆಗಳನ್ನು  ಹಾಡಿ ವ್ಯಾಖ್ಯಾನಿಸಿ ಜಾನಪದ ಸಾಹಿತ್ಯದ ಪ್ರಚಾರ ಕಾರ್ಯವನ್ನು ಕೈಗೊಂಡರು. ಇಂಥ ಮೇಧಾವಿಗಳೆನಿಸಿದ್ದ ಡಾ. ಗದ್ದಗಿಮಠ ಅವರು ನಡುವಯಸ್ಸಿನಲ್ಲಿ ಅಕಾಲಿಕ ಮರಣಕ್ಕೆ ತುತ್ತಾಗಿರುವುದರಿಂದ ಜಾನಪದ ಸಾಹಿತ್ಯ ಕ್ಷೇತ್ರವು ತುಂಬಲಾರದ ನಷ್ಟಕ್ಕೀಡಾಗಿದೆ.

ಡಾ. ಗದ್ದಗಿಮಠ ಅವರು ಉತ್ತರ ಕರ್ನಾಟಕದ ಜಾನಪದ ಸಾಹಿತ್ಯದ ಪ್ರಕಾರಗಳ ಮೇಲೆ ಅಧಿಕಾರ ವಾಣಿಯಿಂದ ಮಾತನಾಡಬಲ್ಲ ಗಣ್ಯ ವಿದ್ವಾಂಸರು. ಎಲ್ಲ ಜನಪದ ಸಂಪ್ರದಾಯಗಳನ್ನು ಆಳವಾಗಿ ಅಧ್ಯಯನಗೈದಿರುವರೆಂಬುದಕ್ಕೆ ಅವರ ಪಿಎಚ್‌.ಡಿ. ಮಹಾಪ್ರಬಂಧ ನಿದರ್ಶನವಾಗಿದೆ. ಜಾನಪದ ಸಾಹಿತ್ಯದ ಸಂಕಲನಗಳಿಗೆ ವಿದ್ವತ್‌ಪೂರ್ಣವಾದ ಪ್ರಸ್ತಾವನೆಗಳನ್ನು ಬರೆಯುವುದರ ಮೂಲಕ ಅವುಗಳಿಗೆ ಒಂದು ವೈಜ್ಞಾನಿಕ ಸ್ವರೂಪವನ್ನು ತಂದುಕೊಟ್ಟಿರುವರು. ಅವರ ಕಂಬಿಯ ಪದಗಳು, ಮಲ್ಲಮಲ್ಲಾಣಿ, ಜನತಾಗೀತೆಗಳು, ಲೋಕಗೀತೆಗಳು, ಕುಮಾರ ರಾಮನ ದುಂದುಮೆ, ನಾಲ್ಕು ನಾಡಪದಗಳು ಈ ಮೊದಲಾದ ಕೃತಿಗಳು ಈ ದೃಷ್ಟಿಯಿಂದ ಪ್ರಮುಖವೆನಿಸುತ್ತವೆ.

ಡಾ. ಬಿ.ಎಸ್‌. ಗದ್ದಗಿಮಠ ಅವರು ಕೇವಲ ಸಾಹಿತ್ಯ  ಸಂಗ್ರಹಕಾರರಷ್ಟೇ ಅಲ್ಲ, ಹಲವಾರು ಸಂಶೋಧನಾ ಪ್ರಬಂಧಗಳನ್ನು ಬರೆದಿದ್ದಾರೆ.  ಅವರ ಅನೇಕ ಪ್ರಬಂಧಗಳು ಅಪ್ರಕಟಿತವಾಗಿಯೇ ಉಳಿದಿರುತ್ತವೆ. ದೀರ್ಘವಾದ ಕ್ಷೇತ್ರಾನುಭವದಿಂದ ಹಾಗೂ ವಿದ್ವತ್ತಿನ ಪ್ರಖರತೆಯಿಂದ ಮೆರಗು ಪಡೆದ ಡಾ. ಗದ್ದಗಿಮಟ ಅವರ ಪ್ರಬಂಧಗಳನ್ನು ಒಟ್ಟುಗೂಡಿಸಿ ‘ಗದ್ದಗಿಮಠದ ಬರಹಗಳು’ ಎಂಬ ಕೃತಿಯನ್ನು ಮೈಸೂರು ವಿಶ್ವವಿದ್ಯಾಲಯದವರು ಪ್ರಕಟಿಸಿದ್ದಾರೆ. ಜನಪದ ಸಂಪ್ರದಾಯ, ಜನಪದ ಸಾಹಿತ್ಯ, ದೊಡ್ಡಾಟ ಮುಂತಾದ ಜನಪದ ರಂಗಪ್ರಕಾರಗಳ ಮೇಲೆ ಡಾ. ಗದ್ದಗಿಮಠ ಅವರು ಅಗಾಧವಾದ ಅನುಭವವನ್ನು ಹೊಂದಿದ್ದಾರೆಂಬುದಕ್ಕೆ ಈ ಪ್ರಬಂಧಗಳು ಸಾಕ್ಷಿಯಾಗಿವೆ.

ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗದಲ್ಲಿಯು ಅಮೂಲ್ಯ ಸೇವೆ ಸಲ್ಲಿಸಿದ ಡಾ. ಬಿ.ಎಸ್‌. ಗದ್ದಗಿಮಠ ಅವರ ಜೀವನ ಚರಿತ್ರೆ ಅಂದರೆ ಜಾನಪದ ಸಾಹಿತ್ಯದ ಚರಿತ್ರೆಯ ಅಧ್ಯಯನವೆ ಆಗಿದೆ. ‘ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು’ ಎಂಬ ಉಕ್ತಿಯಂತೆ ಅವರು ಬದುಕಿದ ಅವಧಿ ಚಿಕ್ಕದಾಗಿದ್ದರೂ ಕೂಡ ಗೈದ ಸಾಧನೆ ಘನವಾದುದು. ಅಜರಾಮರವಾಗಿ ಉಳಿಯುವಂಥದು. ಮುಂಬರುವ ಸಂಶೋಧಕರಿಗೆ ಸ್ಪೂರ್ತಿದಾಯಕವಾದ ಮಾದರಿ ಬದುಕು ಬದುಕಿದ ಘನ ವ್ಯಕ್ತಿತ್ವ ಡಾ. ಗದ್ದಗಿಮಠ ಅವರದು.