ಮಾನ್ಯ ಕುಲಪತಿಗಳಾದ ಡಾ. ಎಸ್. ಜಿ. ದೇಸಾಯಿ ಅವರೇ, ಸಮ್ಮೇಲನದ ಅಧ್ಯಕ್ಷರಾದ ಡಾ.ಆರ್. ಸಿ. ಹಿರೇಮಠ ಅವರೇ, ಜಾನಪದ ವಿದ್ವಾಂಸರೇ ಮತ್ತು ಮಹಾಜನರೇ,

ಇದು ಕನ್ನಡ ಅಧ್ಯಯನಪೀಠ ಆಚರಿಸುತ್ತಲಿರುವ ೧೨ನೆಯ ಅಖಿಲ ಕರ್ನಾಟಕ ಜಾನಪದ ಸಮ್ಮೇಲನ. ೧೨ ವರ್ಷವೆಂಬುದು ವ್ಯಕ್ತಿಜೀವನದಲ್ಲಿ ಒಂದು ಘಟ್ಟವೆಂದು, ಒಂದು ತಿರುವು ಬಿಂದುವೆಂದು ಜಾನಪದರು ನಂಬುತ್ತಾರೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ೧೨ನೆಯ ಅಧಿವೇಶನ ಸೀಮೋಲ್ಲಂಘನ ಸಮ್ಮೇಲನವಾಗಿದೆ. ಆದುದರಿಂದ ಮುಂದಿನ ವರ್ಷದಿಂದ ಇದನ್ನು ವಿಷಯ ದೃಷ್ಟಿಯಿಂದ ಪುನರ್ಘಟಿಸುವ, ಉತ್ತರ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿರುವ ಇದನ್ನು ದಕ್ಷಿಣ ಕರ್ನಾಟಕಕ್ಕೂ, ಕರ್ನಾಟಕದ ಆಚೆಗೂ ಒಯ್ಯುವ ವಿಚಾರ ನಮ್ಮದಾಗಿದೆ.

ಕೇವಲ ಜನರ ಮಧ್ಯದಲ್ಲಿ ಬದುಕುತ್ತಲಿದ್ದ ’ಜಾನಪದ’ ಇಂದು ವಿದ್ವಜ್ಜನರ ಅಭ್ಯಾಸದ ವಸ್ತುವಾಗಿದೆ. ವಿಶ್ವವಿದ್ಯಾಲಯವೆಂಬುದು ವಿಶ್ವದ ಎಲ್ಲ ಜ್ಞಾನ–ವಿಜ್ಞಾನಗಳ ಅಧ್ಯಯನ-ಅಧ್ಯಾಪನ-ಸಂಶೋಧನ- ಪ್ರಕಟನ – ಪ್ರಸಾರಗಳ ಕೇಂದ್ರವಾಗಿರುವುದರಿಂದ, ಕರ್ನಾಟಕ ವಿಶ್ವವಿದ್ಯಾಲಯ ’ಜಾನಪದ’ವನ್ನೂ ತನ್ನ ಕಕ್ಷೆಗೆ ಒಳಪಡಿಸಿಕೊಂಡುದು ಸೂಕ್ತವೇ ಆಗಿದೆ. ಕಳೆದಕೆಲವು ವರ್ಷಗಳಿಂದ ಜಾನಪದ ಎಂ.ಎ. ವರ್ಗವನ್ನು ಪ್ರಾರಂಭಿಸಿದ ಅಧ್ಯಯನ ಪೀಠ, ಪ್ರತಿವರ್ಷ ೧೫ ವಿದ್ಯಾರ್ಥಿಗಳಿಗೆ ಬೋಧನಾವಕಾಶವನ್ನು ಕಲ್ಪಿಸಿದೆ. ಇದರ ಜೊತೆಗೆ ಜಾನಪದ ಸಾಹಿತ್ಯ ಸಂಗ್ರಹ ಕಾರ್ಯವನ್ನು ಕೈಗೆತ್ತಿಕೊಂಡು ಉತ್ತಮೋತ್ತಮ ಕೃತಿಗಳನ್ನು, “ಜೀವನ ಜೋಕಾಲಿ” ಮಾಲೆಯಲ್ಲಿ ಪ್ರಕಟಿಸಿದೆ. ಇದರ ಫಲವಾಗಿ ತ್ರಿಪದಿ-ಹಾಡು – ಲಾವಣಿ ಕಥನ – ಗೀತೆ – ಸಣ್ಣಾಟ- ದೊಡ್ಡಾಟ ಇತ್ಯಾದಿ ಪ್ರಕಾರಗಳು ಈ ಮಾಲೆಯಲ್ಲಿ ಬೆಳಕು ಕಂಡಿವೆ. ಇದಲ್ಲದೆ ಅಧ್ಯಯನ ಪೀಠ ಪ್ರತಿವರ್ಷ ಜಾನಪದದಲ್ಲಿ ಪಿಎಚ್‌.ಡಿ. ಅಧ್ಯಯನ ಮಾಡಬಯಸುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಲಿದೆ. ಈವರೆಗೆ ಜನಪದ ಸಾಹಿತ್ಯ – ಜನಾಂಗ – ಆಚರಣೆ  ಗ್ರಾಮದೇವತೆ – ದೃಶ್ಯಕಲೆ ಇತ್ಯಾದಿ ವಿಷಯಗಳನ್ನು ಕುರಿತು ಅನೇಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದೆ. ಕೆಲವು ಪ್ರಬಂಧಗಳು ಬೆಳಕನ್ನು ಕಂಡಿವೆ.

ಈ ವರ್ಷದಿಂದ ಜಾನಪದ ಕಲೆಗಳ ಪ್ರತ್ಯಕ್ಷ ಅಧ್ಯಯನದ ಅವಶ್ಯಕತೆಯನ್ನು ಮನಗಂಡು, ಪ್ರಾತ್ಯಕ್ಷಿಕೆಗಳನ್ನು ನಡೆಸಲಾಗುತ್ತಿದೆ. ಕಲಾವಿದರನ್ನು ಅಧ್ಯಯನ ಪೀಠಕ್ಕೆ, ಮೂರು ದಿನಗಳ ಕಾಲ ಬರಮಾಡಿಕೊಂಡು, ಅವರು ಪ್ರದರ್ಶಿಸುವ ಕಲೆಗಳ ನೇರ ಅಧ್ಯಯನ ಕೈಕೊಳ್ಳಲಾಗುತ್ತಿದೆ. ಕಲಾಪ್ರದರ್ಶನವನ್ನು ಸೂಕ್ಷ್ಮವಾಗಿ ಅವಲೋಕಿಸುವುದು, ಅಭ್ಯಸಿಸುವುದು, ಕಲಾವಿದರೊಂದಿಗೆ ಚರ್ಚಿಸುವುದು, ಸಮಾಲೋಚಿಸುವುದು ಇತ್ಯಾದಿ ಕಾರ‍್ಯಗಳು ಜರುಗಿ, ಪ್ರತಿಯೊಂದು ಕಲೆಯ ವೈಜ್ಞಾನಿಕ ಅಧ್ಯಯನ ಮಾಡುವ, ಈ ಅಧ್ಯಯನದ ಫಲವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಉದ್ದೇಶಕ್ಕಾಗಿ ಈ ಪ್ರಾತ್ಯಕ್ಷಿಕೆಗಳನ್ನು ಪ್ರಾರಂಭಿಸಲಾಗಿದೆ.

ಈ ವರ್ಷ ಪ್ರಾರಂಭಿಸಿದ ಇನ್ನೊಂದು ಹೊಸ ಉಪಕ್ರಮವೆಂದರೆ ಜಾನಪದ ವಸ್ತು ಸಂಗ್ರಹಾಲಯವನ್ನು ಅಸ್ತಿತ್ವಕ್ಕೆ ತಂದುದು. ಈಗಾಗಲೇ ಧಾರವಾಡ-ಬೆಳಗಾಂವ ಜಿಲ್ಲೆಗಳಲ್ಲಿ ಸಂಚರಿಸಿ, ಅನೇಕ ಜಾನಪದ ವಸ್ತುಗಳನ್ನು ಸಂಗ್ರಹಿಸಲಾಗಿದ್ದು, ಮುಂದಿನ ವರ್ಷಗಳಲ್ಲಿ ಒಂದು ಅಪೂರ್ವ “ಜಾಪನದ ವಸ್ತು ಸಂಗ್ರಹಾಲಯ”ವನ್ನು ಸ್ಥಾಪಿಸುವ ಹವಣಿಕೆಯಲ್ಲಿದ್ದೇವೆ.

ಈ ಎಲ್ಲ ಪ್ರಯತ್ನಗಳ ಮುಡಿಯ ಮಾಣಿಕ್ಯವೆನಿಸಿದೆ, ಈ ಜನಪದ ಸಮ್ಮೇಲನ. ವಿಶ್ವ ವಿದ್ಯಾಲಯ ಮತ್ತು ಜನತೆಯ ನಡುವೆ ಒಂದು ಸಾರ್ಥಕ ಸೇತುವೆಯಾಗಿ ಕೆಲಸ ಮಾಡಲೆಂಬ ದೃಷ್ಟಿಯಿಂದ, ಇದನ್ನು ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಜರುಗಿಸುತ್ತ ಬಂದಿದ್ದೇವೆ. ಇದು ವಿಚಾರಸಂಕಿರಣ, ರಂಗಪ್ರದರ್ಶನವೆಂಬ ಎರಡು ಆಯಾಮಗಳನ್ನೊಳಗೊಂಡಿದೆ. ಬೇರೆ ಬೇರೆ ಭಾಗಗಳಿಂದ ಆಮಂತ್ರಿಸಲ್ಪಟ್ಟ ವಿದ್ವಾಂಸರಿಂದ ಪ್ರಬಂಧ ಮಂಡನೆ – ಚರ್ಚೆ ನಡೆದು, ಇವು ಪ್ರತಿವರ್ಷ ’ಜಾನಪದ ಸಾಹಿತ್ಯ ದರ್ಶನ’ ಹೆಸರಿನಿಂದ ಪುಸ್ತಕರೂಪದಲ್ಲಿ ಪ್ರಕಟವಾಗುತ್ತಲಿವೆ. ಆಕರ ಗ್ರಂಥಗಳಾಗಿರುವ ಇವು ಈಗಾಗಲೇ ಜಾನಪದ ವಿದ್ವಾಂಸರನ್ನು ಆಕರ್ಷಿಸಿವೆ.

ಈ ಪರಂಪರೆಯ ಮುಂದುವರಿಕೆಯೆಂಬಂತೆ ಇಂದು ಜರುಗುತ್ತಲಿರುವ ಸಮ್ಮೇಲನದಲ್ಲಿ “ಆಕಾಶ ಜಾನಪದ” ಎಂಬ ವಿನೂತನ ವಿಷಯವನ್ನು ವಸ್ತುವನ್ನಾಗಿಟ್ಟುಕೊಂಡಿದ್ದೇವೆ. ಇಲ್ಲಿ ಆಕಾಶ ಮತ್ತು ಅದರ ಅಂಗಗಳದ ಸೂರ‍್ಯ, ಚಂದ್ರ, ನಕ್ಷತ್ರ, ಗ್ರಹ, ಮೋಡ, ಮಳೆ ಇತ್ಯಾದಿ ವಿಷಯಗಳ ಹಿಂದೆ ಇರುವ ಜಾನಪದರ ಅನಿಸಿಕೆ ಏನು? ಅನುಭವಗಳೇನು? ಎಂಬುದನ್ನು ಸಂಗ್ರಹಿಸುವ, ಸಂಯೋಜಿಸುವ, ಕಾರ್ಯ ಇಲ್ಲಿ ನಡೆಯುತ್ತದೆ. ಅಭ್ಯಾಸಪೂರ್ಣ ಪ್ರಬಂಧಗಳನ್ನು ಮಂಡಿಸಲು ಆಗಮಿಸಿದ ವಿದ್ವಾಂಸಮಿತ್ರರನ್ನು ಈ ಸಂದರ್ಭದಲ್ಲಿ ಸಂತೋಷದಿಂದ ಸ್ವಾಗತಿಸುತ್ತೇನೆ.

ಜನಪದ ಸಮ್ಮೇಲನದ ಹೃದಯ, ಜಾನಪದ ಕಲಾವಿದರು ಪ್ರತಿದಿನ ಸಂಜೆ ನಡೆಸಿಕೊಡಲಿರುವ ರಂಗಪ್ರದರ್ಶನ. ಇವು ಮನರಂಜನೆಯೊಂದಿಗೆ ಎರಡೂ ದಿನ ವಿದ್ವಾಂಸರ ಅಧ್ಯಯನಕ್ಕೆ ವಸ್ತುವಾಗುತ್ತಲಿರುವುದು ವಿಶೇಷವೆಂದೇ ಹೇಳಬೇಕು. ನಾಡಿನ ನಾನಾ ಭಾಗಗಳಿಂದ ಅನೇಕ ಜನ ಕಲಾವಿದರು ಇಲ್ಲಿಗೆ ಬಂದಿದ್ದಾರೆ. ಅವರು ನಗರವಿದೂರ ವ್ಯಕ್ತಿಗಳು. ಕಾರಣ ಈ ಗ್ರಾಮೀಣಕಲೆಗಳನ್ನು ನಗರವಾಸಿಗಳಾದ ನೀವು ತಾಳ್ಮೆಯಿಂದ ನೋಡಬೇಕು – ಕೇಳಬೇಕು – ಪ್ರೋತ್ಸಾಹಿಸಬೇಕೆಂದು ಕೇಳಿಕೊಳ್ಳುತ್ತೇನೆ.

ಈ ಸಮ್ಮೇಲನದ ಅಧ್ಯಕ್ಷತೆ ವಹಿಸಿದವರು ನಮ್ಮೆಲ್ಲರಿಗೆ ಹಿರಿಯರೂ, ನಮ್ಮ ನಾಡಿನ ಘನವಿದ್ವಾಂಸರೂ ಆದ ಡಾ. ಆರ್.ಸಿ.ಹಿರೇಮಠ ಅವರು. ಈ ಸಮ್ಮೇಳನವನ್ನು ಪ್ರಾರಂಭಿಸಿದವರೂ ಈ ಸಮ್ಮೇಳನದ ತವರುಮನೆಯಾದ ಕನ್ನಡ ಅಧ್ಯಯನ ಪೀಠದ ಶಿಲ್ಪಿಗಳೂ ಆಗಿರುವ ಅವರು ಶಿಷ್ಟಪದದಂತೆ ಜಾನಪದದ ಅಭ್ಯಾಸಿಗಳೂ ಹೌದು. ಇವರು ಈ ಸಮ್ಮೇಳನದ ಅಧ್ಯಕ್ಷರಾದುದು ನಮ್ಮೆಲ್ಲರಿಗೆ ವಿಶೇಷ ಸಂತೋಷವನ್ನುಂಟು ಮಾಡಿದೆ. ನಮ್ಮ ಆಮಂತ್ರಣವನ್ನು ಒಪ್ಪಿಕೊಂಡು ಆಗಮಿಸಿದೆ ಡಾ. ಹಿರೇಮಠ ಅವರನ್ನು ಗೌರವದಿಂದ ಬರಮಾಡಿಕೊಳ್ಳುತ್ತೇನೆ.

ಕನ್ನಡ ಅಧ್ಯಯನ ಪೀಠದ ಪ್ರತಿಯೊಂದು ಕಾರ್ಯಕಲಾಪಗಳಿಗೆ ಕುಲಪತಿಗಳ ಮಾರ್ಗದರ್ಶನ, ಸಹಾಯ ಅತ್ಯವಶ್ಯ. ಇದೆಲ್ಲವನ್ನು ಮುಕ್ತಹಸ್ತದಿಂದ ನೀಡುತ್ತಲಿರುವ ಕುಲಪತಿ ಡಾ. ಎಸ್.ಜಿ. ದೇಸಾಯಿ ಅವರು ನಮ್ಮ ಬಿನ್ನಹವನ್ನು ಮನ್ನಿಸಿ ಈ ಸಮ್ಮೇಳನವನ್ನು ಉದ್ಘಾಟಿಸಲು ಆಗಮಿಸಿದ್ದಾರೆ. ಅವರನ್ನು ವಿಶ್ವಾಸದಿಂದ ಸ್ವಾಗತಿಸುತ್ತೇನೆ.

ಈ ಸಮ್ಮೇಳನ ನಮ್ಮ ವಿಶ್ವವಿದ್ಯಾಲಯದ ಬೆಳಗಾವಿ ಸ್ನಾತಕೋತ್ತರ ಕೇಂದ್ರದ ಆಶ್ರಯದಲ್ಲಿ ಜರುಗುತ್ತಲಿದೆ. ಈ ಕೇಂದ್ರದ ಆಡಳಿತಾಧಿಕಾರಿಗಳೂ, ಕನ್ನಡ ವಿಭಾಗದ ಮುಖ್ಯಸ್ಥರೂ ಆಗಿರುವ ಡಾ. ಗುರುಲಿಂಗ ಕಾಪಸೆ ಅವರು ಶೈಕ್ಷಣಿಕ ಶಿಸ್ತು, ಶ್ರಮ-ಶ್ರದ್ಧೆಗಳಿಗೆ ಹೆಸರಾದವರು. ಸ್ಥಳೀಯ ಸ್ನೇಹಿತರ ಸಹಕಾರದೊಂದಿಗೆ ಈ ದೊಡ್ಡ ಹೊಣೆಯನ್ನು ಸಕ್ರಮವಾಗಿ ಸಂಘಟಿಸಿದ ಅವರಿಗೆ ನಮ್ಮ ಕೃತಜ್ಞತೆಗಳು ಸಲ್ಲುತ್ತವೆ.

ಕನ್ನಡ ಅಧ್ಯಯನಪೀಠದ ಎಲ್ಲ ಆಗು-ಹೋಗುಗಳಿಗೆ ಅಲ್ಲಿಯ ಅಧ್ಯಾಪಕ ವರ್ಗ ಹೊಣೆಯಾಗಿದೆ. ಸಮ್ಮೇಲನದಂಥ ದೊಡ್ಡ ಹೊಣೆಯ ಸಂದರ್ಭದಲ್ಲಿಯಂತೂ ಅವರು ಹೆಚ್ಚು ಶ್ರಮಿಸಬೇಕಾಗುತ್ತದೆ. ಅಂಥ ಶ್ರಮ ಶ್ರದ್ಧೆಗಳಿಂದ ಈ ಸಮ್ಮೇಲನಕ್ಕಾಗಿ ದುಡಿದ ಎಲ್ಲ ಅಧ್ಯಾಪಕ ಮಿತ್ರರಿಗೆ ಕೃತಜ್ಞತೆ ಹೇಳುತ್ತ, ನಿಮ್ಮೆಲ್ಲರನ್ನು ಇನ್ನೊಮ್ಮೆ ಆದರದಿಂದ ಬರಮಾಡಿಕೊಳ್ಳುತ್ತೇನೆ.

ಎಂ.ಎಂ. ಕಲಬುರ್ಗಿ