ಜನನ : ೧೫-೧೧-೧೯೩೫ ರಂದು ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ

ಮನೆತನ : ಸಂಸ್ಕೃತ ಹಾಗೂ ಸಂಗೀತ ವಿದ್ವಾಂಸರ ಮನೆತನ. ತಂದೆ ಪ್ರತಿವಾದಿ ಭಯಂಕರರೆನಿಸಿದ್ದ ಆಸ್ಥಾನ ವಿದ್ವಾನ್ ಸಂಪತ್ಕುಮಾರಾಚಾರ್ಯರು. ತಾಯಿ ಇಂದಿರಮ್ಮ ಹಾಗೂ ತಮ್ಮ ಡಾ|| ಪಿ. ಎಸ್. ರಾಮಾನುಜಮ್ ಸಂಗೀತ ವಿದ್ವಾಂಸರು – ಸಂಸ್ಕೃತ ವಿದ್ವಾಂಸರೂ ಸಹ.

ಗುರುಪರಂಪರೆ : ತಂದೆ ತಾಯಿಯರಿಂದಲೇ ಇವರಿಗೆ ಪ್ರಾರಂಭಿಕ ಶಿಕ್ಷಣ. ತಂದೆಯವರಿಂದ ಸಂಸ್ಕೃತ-ಸಂಗೀತ – ತಮಿಳು ಭಾಷೆಗಳನ್ನೂ ತಾಯಿಯವರ ಬಳಿ ಪಿಟೀಲು – ಹಾರ್ಮೋನಿಯಂ ವಾದನದಲ್ಲಿ ಶಿಕ್ಷಣ ಪಡೆದು ಮುಂದೆ ಹೆಚ್. ವಿ. ವೆಂಕಟೇಶಯ್ಯನವರಲ್ಲಿ ಸಂಗೀತದಲ್ಲಿ ಉನ್ನತ ಶಿಕ್ಷಣ ಪಡೆದು ಸೀನಿಯರ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನದಲ್ಲಿ ತೇರ್ಗಡೆಯಾಗಿದ್ದಾರೆ. ಚೆನ್ನರಾಯಪಟ್ಟಣದ ಗಮಕ ವಿದುಷಿ ಎಂ. ಎಸ್. ಜಯಲಕ್ಷ್ಮಮ್ಮನವರಲ್ಲಿ ಗಮಕ ಕಲೆಯ ಶಿಕ್ಷಣ ಪಡೆದು ತಮ್ಮ ಪತಿ ರಾಮಸ್ವಾಮಿ ಅನಂತಗೋಪಾಲಯ್ಯಂಗಾರ್ ಅವರ ಮಾರ್ಗದರ್ಶನದಲ್ಲಿ ಗಮಕ ಪ್ರೌಢ ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಕನ್ನಡ ಪಂಡಿತ ಪರೀಕ್ಷೆಯಲ್ಲೂ ಉತ್ತೀರ್ಣರಾಗಿದ್ದಾರೆ.

ಕ್ಷೇತ್ರ ಸಾಧನೆ : ಗಮಕ ಕಲೆಯ ಪ್ರಚಾರಕ್ಕಾಗಿ ತಮ್ಮನ್ನೇ ತೊಡಗಿಸಿಕೊಂಡು ಅದಕ್ಕಾಗಿ ಜೀವನ್ನವೇ ಮುಡಿಪಾಗಿಟ್ಟು ಅಪರೂಪದ ಗಮಕ ವಿದುಷಿ. ಹೆಸರಾಂತ ಲೇಖಕಿಯೂ ಆಗಿದ್ದು ’ಗಮಕ ನಿವೇದನೆ’ ಕನ್ನಡದಲ್ಲಿ ತಿರುಪ್ಪಾವೈ, ಧರೆಗಿಳಿದ ದೇವ, ಗುರಿ, ಸಿಡಿಲಮರಿ (ಕಾದಂಬರಿಗಳು) ಮುಂತಾದ ಗ್ರಂಥಗಳನ್ನು ರಚಿಸಿ ಪ್ರಕಟಗೊಂಡಿವೆ. ಪಂಪ ಭಾರತ, ರನ್ನನ ಗದಾಯುದ್ಧ ಕುಮಾರವ್ಯಾಸ ಭಾರತ, ಜೈಮಿನಿ ಭಾರತ ಇವರ ಅಚ್ಚುಮೆಚ್ಚಿನ ಕಾವ್ಯಗಳು. ಉತ್ತಮ ಕಂಠಶ್ರೀಯನ್ನು ಹೊಂದಿದ್ದು ಗಮಕ ವಾಚನಾಭಿರುಚಿಯನ್ನು ಬೆಳೆಸಿಕೊಂಡ ಇವರು ಹಾಸನ ಜಿಲ್ಲೆಯ ಎಲ್ಲಾ ಕೇಂದ್ರಗಳಲ್ಲಿ ಹಾಗೂ ಮೈಸೂರು, ಬೆಂಗಳೂರು, ಬಿಜಾಪುರ, ಚಿಕ್ಕಮಗಳೂರು ಮುಂತಾದೆಡೆ ಸಹಸ್ರಾರು ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಹೊಳೆನರಸೀಪುರದಲ್ಲಿ ’ಮನೆ ಮನೆ ಗಮಕ’ ಯೋಜನೆಯನ್ನು ಜಾರಿಗೆ ತಂದು ಯಶಸ್ವಿಯಾಗಿ ಅನೇಕ ಕಾರ್ಯಕ್ರಮಗಳನ್ನು ವಿವಿಧ ಗಮಕಿಗಳಿಂದ ತಮ್ಮ ಶಿಷ್ಯರಿಂದ ನಡೆಸಿರುತ್ತಾರೆ. ಸ್ವತಃ ವ್ಯಾಖ್ಯಾನಕಾರರೂ ಆಗಿ ಅನೇಕ ಗಮಕಿಗಳ ವಾಚನಕ್ಕೆ ವ್ಯಾಖ್ಯಾನ ನೀಡಿರುತ್ತಾರೆ. ತಮ್ಮ ಮನೆಯಲ್ಲೇ ಗಮಕ ತರಗತಿಗಳನ್ನು ನಡೆಸಿ ಪ್ರವೇಶ, ಪ್ರೌಢ ಕಾಜಾಣ, ಪಾರೀಣ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತಯಾರು ಮಾಡಿರುತ್ತಾರೆ. ಕರ್ನಾಟಕ ಗಮಕ ಕಲಾ ಪರಿಷತ್ತಿನ ಹಾಸನ ಜಿಲ್ಲಾ ಪ್ರತಿನಿಧಿಯಾಗಿ ಅನೇಕ ಅಭಿವೃದ್ಧಿ ಪರ ಕಾರ್ಯಗಳನ್ನು ಮಾಡಿದ್ದಾರೆ. ಬೆಂಗಳುರು – ಮೈಸೂರು, ಬೆಂಗಳೂರು ಆಕಾಶವಾಣಿ ಕೇಂದ್ರಗಳಿಂದ ಇವರ ವಾಚನ ಪ್ರಸಾರವಾಗಿರುವುದಲ್ಲದೆ ದೂರದರ್ಶನದಿಂದ ’ಗಮಕ ಸಿರಿ’ ಎಂಬ ರೂಪಕ ಪ್ರಸಾರವಾಗಿದೆ.

ಪ್ರಶಸ್ತಿ – ಪುರಸ್ಕಾರಗಳು : ಅಖಿಲ ಕರ್ನಾಟಕ ೩ನೇ ಗಮಕ ಸಮ್ಮೇಳನದಲ್ಲಿ ಸನ್ಮಾನ, ಚಿಕ್ಕಮಗಳೂರಿನಲ್ಲಿ ನಡೆದ ೫ನೇ ಗಮಕ ಸಮ್ಮೇಳನದ ಅಧ್ಯಕ್ಷ ಪದವಿ ’ಗಮಕ ರತ್ನಾಕರ’ ಬಿರುದು ಸವ್ಯಸಾಚಿ, ಸ್ವಯಂಪ್ರಭೆ, ಗಮಕ ಕೋಗಿಲೆ, ಗಮಕ ಕಲಾನಿ, ಗಮಕ ಕಲಾರಂಜನ ಚತುರೆ ಮುಂತಾದ ಬಿರುದುಗಳಿಗೆ ಪಾತ್ರರಾದ ಇವರನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೧೯೯೮೦-೯೯ ರ ಸಾಲಿನ ’ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.