ಎಲ್ಲ ಮುಗಿದ ಮೇಲೆ, ಮುಂದೆ,
ಯಾರಾದರು ಏನಾದರು ಹೆಸರಿಡಲಿ.
ಹೆಸರನಿಡುವೆ ನಿನಗೆ ಇಂದೆ,
ಓ ಶ್ರಮಜೀವರ ಶತಶತಶತ ಹಸ್ತಕೃತ,
ನಾನು, ಮಲೆಯಕವಿ, ಅನಧಿಕೃತ:
ಕರೆಯಲೆಲ್ಲ ಇಂದಿನಿಂದೆ;
ನಿನ್ನ ಹೆಸರು ಇನ್ನು ಮುಂದೆ:
“ನೃಪತುಂಗ ಸರೋವರ!”


ನಾಮಕರಣ ಸಮಾರಂಭಕನ್ಯಾರಾರು ಇಲ್ಲ;
ಮೇಲೆ ಬಾನು, ಕೆಳಗೆ ಕಾನು,
ಅಲ್ಲಿ ರವಿ, ಇಲ್ಲಿ ಕವಿ,
ಮತ್ತೆ ನಾವೆ ಎಲ್ಲ.
ಮನೆಯ ಮಕ್ಕಳಿಹರು ಕೆಲರು;
ನನೆಯ ತಳಿರ ತೂಗುವೆಲರು;
ಮರಗಳಲ್ಲಿ ಕೆಲವು ಹಕ್ಕಿ
ಏಕೊ ಏನೊ? ಹಾಡುತಿಹವು ಹರುಷವುಕ್ಕಿ!
ಮತ್ತೆ ಇವರೆ ಮಹಾಸಭೆ;
ಸಾಕು,
ಸಮಾರಂಭಕಿಷ್ಟೆ ಗಲಭೆ!
ಅನಲಾ, ಶಿವಾಣಿ, ಸರಮಾ, ಶುಭಾಂಗಿ,
ವಿದ್ಯಾಲಕ್ಷ್ಮಿ, ವಾಗೀಶ್ವರೀ,
ಅಮರೇಂದ್ರ ಕಿರೀಟಿ,
ವ್ಯೋಮಕೇಶ ಹಿಮಾಂಶು! –
ಹೆಸರು ಕೇಳಿದರೆ ಸಾಕು
ಧನ್ಯರಾಗಬೇಕು! –
ಚಿಕ್ಕ ಮಕ್ಕಳೆಂಬೆಯೇನು? –
ಇವರಿಗಿಂತ ದೊಡ್ಡವರನು
ತರುವುದೆಲ್ಲಿಂದಾನು?
ಹೇಳು, ತರಬಲ್ಲೆಯ ನೀನು?


ಉದ್ಘಾಟಿಸೆ ರಾಜ್ಯಪಾಲರೇನು ಇರಲೇಬೇಕೆ?
ಅವರ ಮೀರದೇನು ಈ ಮಕ್ಕಳೊಂದು ಕೇಕೆ!
ಮುಖ್ಯಮಂತ್ರಿ ಅಧ್ಯಕ್ಷತೆಗೇನು ಎರಡು ಕೋಡೆ?
ಸಾಕು ಸುತ್ತ ಕೋಂಟೆಕಟ್ಟಿ ನಿಂತು ಮಲೆವ ಈ ಕಾಡೆ!
ಹಾರ, ವಾದ್ಯ, ಧೂಪ, ಗಂಧ, ಭಿನ್ನವತ್ತಳೆ,
ಒಂದು ಇಲ್ಲ ಇಲ್ಲಿ; ಎಲ್ಲ ದಿವ್ಯ ಬತ್ತಲೆ!
ಯಾರಿಗಿಲ್ಲಿ ಸೊಂಟಬಗ್ಗಿ
ನಮಸ್ಕರಿಪ ತಂಟೆಯಿಲ್ಲ;
ಯಾರಿಗಿಲ್ಲಿ ತಗ್ಗಿ, ತಿಕ್ಕಿ,
ಬಾಲಬೀಸಿ ಕಾಲುನೆಕ್ಕೆ
ಮೇಲೇರುವ ಗೋಜು ಇಲ್ಲ.
ಕೇಂದ್ರದೊಂದು ಕಾಟವಿಲ್ಲ;
ರಾಜ್ಯದೊಂದು ತೋಟಿಯಿಲ್ಲ;
ಈ ಎತ್ತರದಲಿ ಯಾರ ಹಮ್ಮೂ
ನಡೆವುದಿಲ್ಲ;
ಈ ಬಿತ್ತರದಲಿ ಯಾರ ಬಿಮ್ಮೂ
ತಡೆವುದಿಲ್ಲ.


ಮೆರೆಯಲಿ ಈ ಸ್ತಂಭದಲ್ಲಿ
ನೃಪತುಂಗನ ಸುಂದರೋಕ್ತಿ;
ಕರ್ಣಾಟಕದಾದಿಕವಿಯ
ಪಂಪನೊಂದು ಕವನಪಂಕ್ತಿ.
ಜಯವಾಗಲಿ ನಿನಗೆ, ಓ ನೃಪತುಂಗ ಸರೋವರ!
ತೀರ್ಥನೀಲ ಈ ವಿಶಾಲವಕ್ಷವೀಂಟಿ
ಸೊಗಯಿಸುಗೆ ಚರಾಚರ!
ನಿನ್ನ ಸಲಿಲಬಾಹುವಪ್ಪಿ
ಸಹ್ಯಾದ್ರಿಗೆ ಸಂಜನಿಸಿಹ
ಅರಣ್ಯಶಿಖರವೆಸೆವ ಆ ದ್ವೀಪದಲ್ಲಿ
ದಿವೌಕಸರು ಇಳಿದುಬಂದು
ಅಪ್ಸರೆಯರ ಜೊತೆಗೆ ಮಿಂದು
ಕಾಣಲಿ ನಂದನವನು ಈ ಮರ್ತ್ಯದಲ್ಲಿ!

ಉಷೆಯ ಉಟ್ಟ ಸೀರೆಗೆಂಪು
ನಿನ್ನ ಹೆಸರು ಮೆಯ್ಯಲಿ
ಪ್ರತಿಫಲಿಸಲು ಓಕುಳಿಯೊಳು,
ಏಳುಕುದುರೆ ಕೈಯಲಿ
ಅರಣನೇರಿ ಬರುವ ತೇರು
ಮುಳುಗಿ
ಕರಗಿತೊ ಎನೆ, ನಿನ್ನ ನೀರು
ಹೊಳೆಯೆ ಅಗ್ನಿಯುಜ್ವಲ,
ಕಾಣ್ಬ ಕವಿ ಧನ್ಯನಲಾ!

ಜನಜನದಲಿ ಮನಮನದಲಿ ಹೊಮ್ಮಿಹರಿಯೆ ಹೃದಯತೋಷ
ಎಂದೆಂದೊ ಬತ್ತದಿರ್ಕೆ ಸಹ್ಯಾದ್ರಿಯ ಸ್ತನ್ಯಕೋಶ;
ಮುಂದೊಂದೂ ತಣ್ಣಗಕ್ಕೆ ಬರಗಾಲದ ಅಗ್ನಿರೋಷ;
ಹೆಡೆಯಾಡಲಿ ಶಾಂತಿ, ಶಕ್ತಿ, ಮೈತ್ರಿ, ಧೈರ್ಯದಾದಿಶೇಷ!
ಜಯವಾಗಲಿ ನಿನಗೆ, ಓ ನೃಪತುಂಗ ಸರೊವರ!
ತೀರ್ಥನೀಲ ಈ ವಿಶಾಲ ವಕ್ಷವೀಂಟಿ
ಸೊಗಯಿಸುಗೆ ಚರಾಚರ!


ಅಜ್ಜ, ಅಜ್ಜಿ, ಅಪ್ಪ, ಅಮ್ಮ, ದನ, ಕರು, ದೇವರು,
ಗತಕಾಲದ ಶತಮಾನದ ನೆನಪಿನೊಂದು ಸುರತರು,
ತವರು, ಗದ್ದೆ, ತೊಟ, ಮನೆ …..
ತಮ್ಮದೆಂಬುದೆಲ್ಲವೂ
ಮುಳುಗಿದವರ ಕಣ್ಣೀರನೆ
ಒಳಕೊಂಡಿಹೆ ನೀನ್ ಅದನೂ ನಾ ಬಲ್ಲೆ!

ಕಾಳಿಯವೋಲ್ ನುಂಗಿದುದನು ನೂರುಮಡಿಗೆ ಮೀರಿ
ಲಕ್ಷ್ಮಿಯವೋಲ್ ನೀಡುವೆಯೆಂಬಾಶಯವನು ಸಾರಿ
ವಂದಿಸುವೆನು ಮುಂದಪ್ಪುದಕಿಂದಿಲ್ಲೆ! –
ಜಯವಾಗಲಿ ನಿನಗೆ, ಓ ನೃಪತುಂಗ ಸರೋವರ!
ತಿರ್ಥನೀಲ ಈ ವಿಶಾಲ ವಕ್ಷವೀಂಟಿ
ಸೊಗಯಿಸುಗೆ ಚರಾಚರ!*

೧೩ – ೧೦ – ೧೯೬೧


* ಮಿತ್ರರು ಮತ್ತು ಅವರ ಮನೆಯ ಮಕ್ಕಳೊಡನೆ ಲಕ್ಕವಳ್ಳಿಯ ಅಣೆಕಟ್ಟಿಗೆ ಹೋಗಿದ್ದಾಗ ಅಲ್ಲಿರುವ ಉತ್ತುಂಗ ವೇದಿಕೆಯ ಸ್ತಂಬದ ಸಾನಿಧ್ಯದಲ್ಲಿ ನಿಂತು ಜಲಾಶಯ ಮತ್ತು ಅದಕೆ ಅಂಚುಕಟ್ಟಿದಂತಿರುವ ಅರಣ್ಯಾದ್ರಿಯನ್ನು ವೀಕ್ಷಿಸಿ.