ಆಲಿಸಿದೆ:

‘ಚತುರ್ದಶಿ;
ಶರನ್ಮೇಘ ಮಂದ ಶಶಿ;
ನಿಶ್ಯಬ್ದಮಿತ್ತು ನಿಶಿ,’
ಆಲಿಸಿದೆ:
ಒಂಟಿಕೊಪ್ಪಲಿನ ‘ಉದಯರವಿ’ಯಲಿ ಕುಳಿತು
ನ್ಯೂಯಾರ್ಕಿನಲಿ ವಿಶ್ವಸಂಸ್ಥೆಯಲಿ
ಚಪ್ಪಾಳೆ ಮೊಳಗ ಕೋಲಾಹಲದ ನಡುವೆ
ಭೋರ್ಗರೆಯುತಿದ್ದ ಭಾರತ ಶ್ರೀಕಂಠ ಭಾಷಣಕ್ಕೆ,
ಕಣ್ಮುಚ್ಚಿ, ಕಿವಿದೆರೆದು,
ಹೆಮ್ಮೆಗಟ್ಲಾಂಟಿಕವೆ ಗೋಷ್ಟದ ಜಲಂ ತಾನಾಯ್ತೆನಲ್ಕೆ:
ಆಲಿಸಿದೆ, ಆಲಿಸಿದೆ; ಆಲಿಸಿದೆ!

ಸ್ವಾಮೀಜಿಯ ಭಾವಚಿತ್ರ ಇದಿರು ಗೋಡೆಯಮೇಲೆ
ತನ್ನಾ ಚಿಕಾಗೋ ಭಾಷಣದ ಭಂಗಿಯಲ್ಲಿ
ಮಂದಹಾಸದಲಿ ನಿಂತಿತ್ತು ತೂಗಿ.
ಗಾಂಧೀಜಿಯ ವರ್ಣಚಿತ್ರ ತನ್ನ ಚೌಕಟ್ಟಿನಲ್ಲಿ
ಉದ್ಯಾನದೊಂದು ವೀಥಿಯಲ್ಲಿ
ಅರ್ಧ ಬತ್ತಲೆಯಲ್ಲಿ,
ಪತ್ರಿಕೆಯ ಹಿಡಿಯುತೊಂದು ಕೈಯಲ್ಲಿ
ಏನೊ ಅವಸರವೆನ್ನುವಂತೆ

ಮಾರುಗಾಲು ಹಾಕಿಯೂ ನಡೆಗೆಟ್ಟು ನಿಂತು,
ಆಲಿಸಿತ್ತು:
“ಸ್ವಾತಂತ್ರ್ಯ, ಐಕ್ಯತೆ, ಸರ್ವೋದಯ, ಸಮನ್ವಯ,
ಸತ್ಯ, ಅಹಿಂಸಾ, ಸ್ನೇಹ, ದಯಾ,
ಚೀನಾ, ಕಾಂಗೋ, ಮಂಗೋಲಿಯಾ,
ಶಾಂತಿಯೊಂದರೊಳೆ ಇಕ್ಕೆಲಗಳಿಗೂ ಜಯ. ….”
ಇತ್ಯಾದಿ ಮೊಳಗಿತ್ತು. ….

ಇಲ್ಲಿಯೋ? ನಾಚಿಗೆಗೇಡು!
ದಸರಾ ದರ್ಬಾರು!
ಜಂಬೂ ಸವಾರಿ!
ಜರಿಯ ಪೇಟ, ಕರಿಯ ಕೋಟು!
ಬಿಳಿ ಷರಾಯಿ, ಉತ್ತರೀಯ!
ಬಗ್ಗು ಸೊಂಟ, ಡೊಗ್ಗು ಸಲಾಮು!
ಗುಲಾಮಿಗೂ ಚಿನ್ನದ ಮುಲಾಮು!
ಹಳೆಯ ಪಾಳೆಯಗಾರಿಕೆಗೆ ಹೊಸ ಪ್ರಹಸನ!
ಭಾರತದ ಪವಿತ್ರ ರಾಜ್ಯಂಗಕೂ ಅವಮಾನ!. ….

ಆಲಿಸಿದೆ, ಆಲಿಸಿದೆ, ಆಲಿಸಿದೆ. …..
ಧೀರ್ಘ ಕರತಾಡನದಿ ಭಾಷಣವು ಕೊನೆಯಾಯ್ತು …..
ಸುಯ್ದು ನಿಂತೆ …..
ಏನೊ ನಿರಾಶೆಯ ಚಿಂತೆ …..
ನಮ್ಮ ದೇಶಕೆ ಏನು ಬಂದರೇನಂತೆ?
ಕೊನೆಗೆ
ಕಮ್ಯೂನಿಸಂ ಏ ಬಂದರೂ:
ಹಾಕುವೆವು ಅದಕ್ಕೂ ಮೂರು ನಾಮ!
ಅದರ ಹೆಗಲಿಗೂ ಬೀಳುವುದು ಜನಿವಾರ!

ಅದಕ್ಕೂ ಕಟ್ಟುವೆವು ಲಿಂಗ!
ಕ್ರಾಸು ತಗುಲಿಸಿದರೂ ಆಶ್ಚರ್ಯವಿಲ್ಲ!
ಇಲ್ಲಿ ಕಮ್ಯೂನಿಸಂ ಊ ಕಿರಸ್ತಾನ!
ಕೊನೆಗೆ,
ಹಿಂದೂಸ್ಥಾನದಲ್ಲಿಯೂ ಅದು ಮುಸಲ್ಮಾನ!
ನಮ್ಮ ರಾಜ್ಯಾಂಗದಲ್ಲಿ ಮಾತ್ರ
ನಾವು ಧರಿಸಿಹುದು ಸೆಕ್ಯೂಲರ್ ಯಜ್ಞಸೂತ್ರ!

೦೩ – ೧೦ – ೧೯೬೦


* ೦೩-೧೦-೧೯೬೦ರಲ್ಲಿ ನೆಹರು ಅವರು ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದರು. ಭಾರತೀಯ ವೇಳೆ ರಾತ್ರಿ ೯-೩೦ಕ್ಕೆ ಅದನ್ನು ಪ್ರಸಾರ ಮಾಡಲಾಯಿತು.