“ಅದೇನದಾ ಗಲಭೆ?”

“ಮುರಿದು ಬಿತ್ತಂತೆ ಶೃಂಗಸಭೆ!”
“ಹಾಳಾಯ್ತೆ ಶೃಂಗಸಭೆ?”
“ಆದರಾಯಿತು; ಇತ್ತ ನೋಡು:
ಹೊಳೆಯುತಿದೆ ಶ್ರೀಶಿಲುಬೆ, ನಮನ ಮಾಡು”!
“ಇದೇನಿದೀ ಬರಿ ಶಿಲುಬೆ?
ಕ್ರಿಸ್ತನೆಲ್ಲಿ?”

“ಕಾಣಲ್ಲಿ:
ಸಂಚರಿಸುತಿಹನಾ ಡಕಾಯಿತರ ನಾಡಿನಲ್ಲಿ,
ಮಧ್ಯಪ್ರದೇಶದಾ ಕೊರಕು ದುರ್ಗಮದ ಕಾಡಿನಲ್ಲಿ;
ಒಳ್ಳಿತನೆ ಕಡೆದೆಬ್ಬಿಸುತ ಕೇಡಿನಲ್ಲಿ!
ಧರ್ಮಘಂಟಾನಾದ ಬಾಜಿಸಿದೆ, ಅದೊ ಕೇಳಿ,
ಲೋಕ ಲೋಕಕೆ ಮಿಂಚೆ ಮೋದರೋಮಾಂಚನ!
ಶ್ರೀವಿನೋಬರ ಪಾದಯಾತ್ರೆಯ ಧವಳಧೂಳಿ
ದೇವಚಕ್ಷುಗಳನುನ್ಮೀಲಿಸಿದೆ – ಜ್ಞಾನಾಂಜನ!

ಅಂದು ದುಷ್ಟವ್ಯಾಧ ವಾಲ್ಮೀಕಿಯಾಗಿ
ಮತ್ತೆ ಅಂಗುಲಿಮಾಲ ಭಿಕ್ಷುವಾಗಿ
ದಾರಿತೋರಿದರು ಸತ್ಯಯುಗಕೆ,
ಹೆಗಲನಿತ್ತರು ಧರ್ಮನೊಗಕೆ,
ಕಣ್ಣಾದರಯ್ ಕುರುಡು ಜಗಕೆ!
ಆ ಪವಾಡವನಿಂದು ಮತ್ತೆ
ಕಂಡ ಹಿಗ್ಗಿಗೆ. …. ಅತ್ತೆ!
ಹೇಳು, ಮಗುವೆ,
ಇದು ಕಲಿಯ ಯುಗವೆ?”*

೨೩ – ೦೫ – ೧೯೬೦


* ಡಕಾಯಿತರು ಗುಂಪುಗುಂಪಾಗಿ ಶ್ರೀ ವಿನೋಬಾಜಿಗೆ ಸಕಲಾಯುಧ ಸಮೇತರಾಗಿ ಸಕುಟುಂಬ ಸಮೇತರಾಗಿ ಶರಣಾಗುತ್ತಿದ್ದಾರೆ ಎಂಬ ಪತ್ರಿಕಾವಾರ್ತೆ.