ಎಂತಹ ರಸಕ್ಷಣಂ ಕ್ಷಣಿಕದಿಂ ಪಾರಾಗಿ

ಪಡೆದಿದೆ ಚಿರತ್ವಮಂ ವರ್ಣಶಿಲ್ಪಿಯ ಕಲಾ
ಮಂತ್ರದಿಂದೀ ಚಿತ್ರದಲ್ಲಿ! – ಮೂಡುವ ಬಿಸಿಲ್
ಚುಂಬಿಸಿದೆ ದೂರದ ಹಿಮಾಲಯದ ನರೆನವಿರ
ಶೃಂಗಮಂ; ಕಣಿವೆಯಡವಿಯ ತೋಳ್ಗಳಪ್ಪುಗೆಯ
ಸರಸದಲಿ ರತಿನಿದ್ರೆಗದ್ದಿದೆ ಸರೋವರಂ;
ಸರಸಿಯೆದೆಯಿಂ ಕೆಲಸಕ್ಕೋಸರಿಸಿದಂಚಲದ
ತೆರನ ಕೊಳದಂಚಿನಲಿ ಹರಿಣ ದಂಪತಿಯೆಂತು
ನಿಂತಿರುವುವದೊ ಚಲಚ್ಚರಣ ವಿನ್ಯಾಸದಿಂ
ಚಕಿತವೆಂಬಂತೆ! – ಪರಕಾಲ ದೇಶಂಗಳಂ
ಪೊಕ್ಕೆನ್ನ ಮನಕೆ ದೊರೆಕೊಂಡತ್ತು ವಿಪಿನಗಿರಿ
ಸುಂದರ ಕಲಾಯಾತ್ರೆ. ಮೂರು ಘಂಟೆಯ ದೀರ್ಘ
ನೀರಸ ಪರೀಕ್ಷೆಯಾ ಕಾಪು ನಿನ್ನಿಂದೆ, ಓ
ವರ್ಣಕೃತಿ, ರಸ ರಥೋತ್ಸವವಾಯ್ತು: ಧನ್ಯ ನೀಂ,
ಅಜ್ಞಾತವರ್ಣಶಿಲ್ಪಿ, ನಿನಗದೋ ನಮಸ್ಕಾರ!
ಚಿರಮಕ್ಕೆ ನೀನರಿಯದೀ ನಿನ್ನ ಉಪಕಾರ!

೧೯ – ೦೨ – ೧೯೪೦


* ಬೆಂಗಳೂರು ಇಂಟರ್ಮೀಡಿಯೆಟ್ ಕಾಲೇಜಿನ ದೊಡ್ಡ ಉಪನ್ಯಾಸ ಮಂದಿರದಲ್ಲಿ ಪರಿಕ್ಷೆ ಕಾವಲು ನಡೆಸುತ್ತಿದ್ದಾಗ, ಅಲ್ಲಿ ತಗಲುಹಾಕಿದ್ದ ಹತ್ತಾರು ಚಿತ್ರಗಳಲ್ಲಿ ಈ ಒಂದು ಪರಿಣಾಮಕಾರಿಯಾಗಿತ್ತು!