ಅವನಿಗೆತ್ತು ಆರತಿ,
ಓ ದೇವಿ ಭಾರತಿ:
ನಿನ್ನ ವೀರ ರಣಮತಿ!
ಹೆಸರೊಲ್ಲದ ದಳಪತಿ!
ಎತ್ತಾರತಿ, ಓ ಭಾರತಿ,
ಅವನಿಗಲ್ತೆ ಸ್ವರ್ಗತಿ!


“ಮುಂದೆ ಹೆಣ! ಹಿಂದೆ ಹೆಣ!
ಅತ್ತ ಇತ್ತ ಸುತ್ತ ಮುತ್ತ
ಎತ್ತ ನೋಡಲತ್ತ ಹೆಣ!
ನಡುವೆ ನನ್ನ ಮೆಷೀನ್ ಗನ್ನ
ನಿರಂತರದ ಮಾರಣ!
ಡಮ ಡಮ ಡಮ! ಅಮಮ! ಅಮಮ!
ಅನುರಣಿಸಿತೊ ಹಿಮಾಲಯ!
ಕೆದರಿತೊ ಹಿಮ, ಬೆದರಿತೊ ಹಿಮ,
ನಡುಗಿತ್ತೆನೆ ಭೂಮಿಲಯ!
ಡಮ ಡಮ ಡಮ! ಡಮ ಡಮ ಡಮ!
ಅಟ್ಟಹಾಸಂಗೆಯ್ಯೆ ಯಮ
ಅಮಮ ನನ್ನ ಮೆಷಿನ್ ಗನ್ನ
ಸಿಡಿಗುಂಡಿನ ದಾರುಣ
ಬೆಟ್ಟಿತ್ತಾಯ್ತೆ ಗಿರಿರಣ!


“ಹಿಂಡು ಹಿಂಡು ಹಿಂಡು ಹಿಂಡು
ತೆರೆ ತೆರೆ ತೆರೆ ಮೇಲೆ ಮೇಲೆ
ಹಾಯ್ದು ಬಂತೊ ಚೀಣಿ ದಂಡು
ಕಾಲಾಂತಕ ನಾಯ್ಗಳೋಲೆ!
ಹಿಮಾಚಲದ ಬಂಡೆಗುಂಡು
ಉರುಳಿ ಉರುಳಿ ಹೊರಳಿ ಹೊರಳಿ
ಕೆರಳಿ ಬರುವ ತೆರದಲಿ
ಅಸಂಖ್ಯ ಭರದಲಿ
ಹಿಂಡು ಹಿಂಡು ಹಿಂಡು ಹಿಂಡು
ನುಗ್ಗಿ ಬಂತೊ ಚೀಣಿ ದಂಡು!
ಆದರೇನು? ನನ್ನ ಕೋವಿ,
ರುದ್ರಕಾಳಿ, ಮಹಾದೇವಿ,
ಯಂತ್ರರೂಪಿಯಾಗಿ ಓವಿ
ಓಕರಿಸಿತು ಸಿಡಿಮದ್ದಿನ
ಪ್ರಲಯವರ್ಷವನ್ನೆ ಕಾರಿ,
ಸತ್ಯ ಗೆಲುವುದೆಂದು ಸಾರಿ,
ಗಣಭಾರತ ರಣಭೇರಿ!
ಸದ್ಧರ್ಮದ ಜಯಭೇರಿ!”


“ಬಲಕೆ ಬಿತ್ತು ಒಂದು ಗುಂಡು;
ಕಲ್ಲು ಮಣ್ಣು ಸಿಡಿಯಿತು.
ಎಡಕೆ ಬಿತ್ತಿನ್ನೊಂದು ಗುಂಡು;
ಕುಳಿರೈಕಿಲ್ ಒಡೆಯಿತು.
ಗಿರಿಗಹ್ವರ ಗುಹಾಕಂಠ
ಶತ ಶತ ಶತ ದಿಶಾ ಕಂಠ
‘ಹೋ’ ಒಕ್ಕೊರಲೊದರಿತು!
ಹಾ ಮೃತ್ಯುವೆ ಬೆದರಿತು!
ಮೇಲೆ ಹೋಯ್ತು ಒಂದು ಗುಂಡು,
ಇದಿರೆ ಬಿತ್ತಿನ್ನೊಂದು ಗುಂಡು;
ನೆತ್ತಿ ಕೀಸಿತೊಂದು ಗುಂಡು!
ಪಕ್ಕದವನ ಕಾಲೆ ತುಂಡು:
ಚಿಮ್ಮಿ ಬಿದ್ದುದೆನ್ನ ಬಳಿ!
ಆದರವನದೆಂಥ ಕಲಿ?
ಕೂಗಲಿಲ್ಲ, ಚೀರಲಿಲ್ಲ,
ನೋವಿಗಿನಿತು ನರಳಲಿಲ್ಲ,
ಸಾವ ಮುನ್ನ ಮೆಷೀನ್ ಗನ್ನ
ತುಂಬುವುದನು ತೊರೆಯಲಿಲ್ಲ…..
ಓ ದೇವಿ ಭಾರತಿ,
ಅವನಿಗೆತ್ತು ಆರತಿ!”


“ಡಮ ಡಮ ಡಮ! ಡಮ ಡಮ ಡಮ!
ಹಿಮ ಬಂಧುರ ಗಿರಿಕಂದರ
ಅಟ್ಟಹಾಸ ಮೊರೆಯಿತು;
ಕುದಿವ ನನ್ನ ಮೆಷೀನ್‌ಗನ್ನ
ಲೌಹವರ್ಷ ಕರೆಯಿತು.
ಕೆಂಪು ಚೀಣದೊಡಲ ಕೋಡಿ
ಒಡೆದು ಹೆಪ್ಪುಗಟ್ಟಿತು;
ಹಳದಿ ಜನರ ಹೆಣದ ಬಣಬೆ
ಸುತ್ತ ಕೋಂಟೆ ಬಿದ್ದಿತು!
ಬಲಕೆ ಗುಂಡು! ಎಡಕೆ ಗುಂಡು!
ಮೇಲೆ ಗುಂಡು! ಕೆಳಗೆ ಗುಂಡು!
ಕಾಲಿಗೊಂದು! ತೋಳಿಗೊಂದು!….
ಹೊಟ್ಟೆಗೊಂದು!…. ಬಿದ್ದೆನು!
ಸುಡುವ ನನ್ನ ಮೆಷೀನ್‌ಗನ್ನ
ಆತು ಮತ್ತೆ ಎದ್ದೆನು!
ಎಡಕೆ ಬಲಕೆ ಮೇಲೆ ಕೆಳಗೆ
ಗುಂಡು ಗುಂಡು ಗುಂಡು ಗುಂಡು….
ಹಾ….
ತಾಯ ಸೇವೆಗೂನ ಬಂತೆ?
ಎದೆಗೆ ಬಿತ್ತೆ ಒಂದು ಗುಂಡು?
ಎದ್ದೆ! ಏಳದಾದೆ! ಮತ್ತೆ
ತತ್ತರಿಸುತ ಬಿದ್ದೆನು!…..

ಧಾವಿಸಿತ್ತು ಬಳಿಗೆ, ಕಂಡು,
ಚೀಣೀಯರ ಹಂದಿಹಿಂಡು!
ಸುತ್ತಲಿರದೆ ಸಿಡಿಯುತ್ತಿತ್ತು
ವೈರಿದಳದ ಮದ್ದುಗುಂಡು!
ಜೊತೆಯಿದ್ದವರೋಡಿಬಂದು
ಎತ್ತಿ ರಕ್ಷೆಗೊಯ್ಯಲೆಂದು
ತುಡುಕಿ ಹಿಡಿದರೆನ್ನನು!
ರಕ್ತ….ಕೋಡಿ ಹರಿಯುತ್ತಿತ್ತು;
ಒಡಲೊ? ಛಿದ್ರ ಛಿದ್ರವೋಗಿ
ಕುಸಿಯುತ್ತಿತ್ತು….
ಗದರಿದೆ!
‘ವೀರರಿರಾ! ಮಿತ್ರರಿರಾ!
ತಾಯ್ಗೆ ಬೇಕು ನಿಮ್ಮ ಸೇವೆ;
ಎಂತಿದ್ದರು ನಾನು ಸಾವೆ!…
ನನ್ನನುಳಿಸಲೆಳಸಿ ನೀವೆ
ವ್ಯರ್ಥ ಸತ್ತರದೂ ದ್ರೋಹ!
ಸಾಕು ಬಿಡೀ ನಿಮ್ಮ ಮೋಹ!
ಕೊಳೆಯಲಿಲ್ಲೆ ನನ್ನ ದೇಹ!….
ನಿಮಗೆ ಇದೋ ನನ್ನ ಆಜ್ಞೆ:
ಹಿಂದೆ ಸರಿದು ನಡೆಯಿರೊಡನೆ;
ಮೂಲ ದಳವ ಕೂಡಿಕೊಳ್ಳಿ;
ನನ್ನಿಲ್ಲೆ ತ್ಯಜಿಸಿರಿ!
ತಾಯ್ಗೆ ಬೇಕು ನಿಮ್ಮ ಸೇವೆ;
ಬದುಕಿ ರಿಪುವ ವಧಿಸಿರಿ!…’


“ಡಮ ಡಮ ಡಮ! ಡಮ ಡಮ ಡಮ!
ಸಿಡಿಲಕಲ್ಲ ಮಳೆಯವೊಲೆ
ಬಡಿದುದೆನಗೆ ಗುಂಡುಮಳೆ;
ಬಂಡೆ ಬಂಡೆ ಬಂಡೆ ಬಂಡೆ
ಉರುಳಿ ಹಾಯ್ವ ಹಗೆಯ ಕಂಡೆ….
ಯಾರೊ ಕೂಗಿದಂತೆ ಆಯ್ತು
ಮರಣ ಮಬ್ಬು ಕವಿಯುತ್ತಿದ್ದ
ನನ್ನ ಪ್ರಜ್ಞೆಗೆ….
ಸರಿದಿದ್ದರು ನಮ್ಮರೆಲ್ಲ
ನನ್ನ ಆಜ್ಞೆಗೆ…..
ಮತ್ತೆ….
ದೂರ ಯಾರೊ ಕೂಗಿದಂತೆ….
ಸತಿಯ ಚಿಂತೆ, ಸುತರ ಚಿಂತೆ,
ಸುಳಿದು ಹೋಯ್ತು ಊರ ಚಿಂತೆ….
ಜಗಜ್ಜನನಿ, ಭರತಮಾತೆ,
ರಕ್ಷೆಗಿರಲು ಏಕೆ ವ್ಯಥೆ?
ಮರೆವು ಮುಸುಗುತಿತ್ತು ನನ್ನ….
ಯಾರೊ? ಯಾಕೊ? ಮೆಷೀನ್ ಗನ್ನ….
ಬಳಿಯೆ ಯಾರೊ ಕೂಗಿದಂತೆ….
‘ಹಿಂದಿ ಚೀಣಿ ಭಾಯ್ ಭಾಯ್!
ಹಿಂದಿ ಚೀಣಿ ಭಾಯ್ ಭಾಯ್!
ಹಾಯ್! ಹಾಯ್! ಹಾಯ್!”

೧೪ – ೦೧ – ೧೯೬೩