ಅಮರ ಅಸುರಗಳೆರಡು ಹೆಣೆದಿವೆ

ಇವಳ ಬಾಳಿನ ಬಲೆಯಲಿ;
ಕಲೆಯ ತಾವರೆಗಿಳಿದು ಮುಳುಗಿದ-
ಳಯ್ಯೊ ಕೆಸರಿನ ಹೊಲೆಯಲಿ!

ಹಲವು ತಾರೆಯ ನಂಬಿ ತನ್ನಯ
ಜೀವಯಾನದಿ ಕೆಟ್ಟಳು;
ಒಲುಮೆ ಸೋಗಿನ ಒಡಲಿನಳುಪಿಗೆ
ಮಾನವನೆ ಬಲಿಗೊಟ್ಟಳು.

ತನ್ನ ಕಿರುದರ್ಶನಕೆ ದಿವ್ಯಾ-
ದರ್ಶವನು ಕತ್ತರಿಸುತ
ಬಾಲ ಬಯಲೊಳಗಡವಿ ನಡೆದಳೊ
ಕುಣಿವವೊಲು ತತ್ತರಿಸುತ!

ಕೈಯ ಹಿಡಿದರು ಎಲ್ಲ; ಕಡೆಯಲಿ
ಕೈಹಿಡಿವರಿಲ್ಲಾಯ್ತಲಾ!
ಬಿದಿಯ ಕರುಣೆಯು ತಿವಿದರೂ ನಿನ-
ಗೆಚ್ಚರಿಕೆ ಬರಲಿಲ್ಲಲಾ!

ಕ್ಷುದ್ರನೀಶ್ವರನಂತೆ ನಟಿಸುತ
ಜಗನೊಲಿಯಲು ಸಾಧ್ಯವೆ?
ಕಡಲಿನಗಲಕ್ಕೆಳಸಿ ಕೆರೆಯು ಸ-
ಮುದ್ರವಾಗಲು ಸಾಧ್ಯವೆ?

ಪ್ರೇಮನಾಮವನಿಟ್ಟ ಮಾತ್ರಕೆ
ಕಾಮಕಾದುದೆ ದಿವ್ಯತೆ?
ಕಲೆಯ ನೇಣಲಿ ಕೊಂದುಕೊಂಡರೆ
ಕೊಲೆಗೆ ಬರುವುದೆ ಭವ್ಯತೆ?

ತನ್ನ ನಾಗರಿಕತೆಯ ಕೆಸರಲಿ
ತಾನೆ ಮುಳುಗಿದಳಲ್ಲವೆ?
ತಿಳಿಯದಣುಗಿಯೆ ಕಲೆಯ ಹೆಸರಲಿ
ಹೊಲೆಯ ಹೊಗಳಿದಳಲ್ಲವೆ?

ರುಚಿಯೆ ಪಥ್ಯವೆ? ಸವಿಯೆ ಸತ್ಯವೆ?
ಸಂಯಮದ ತಪ ವಿಥ್ಯವೆ?
ಕ್ರಿಸ್ತಜೀವನವಾತ್ಮಹತ್ಯವೆ?
ಇಂದ್ರಿಯಂಗಳೆ ನಿತ್ಯವೆ?

ಚೆಲುವೆ ಕುಣಿದರೆ ಬರಿಯ ಕಲೆಯೇನ್‌?
ನಾಟ್ಯವೇಕಾ ನೋಟವೆ
ತರಳ ಕೀರ್ತಿಯ ಸುರೆಗೊಳ್ವುದು:
ರಸವೆ ಅಥವಾ ಬೇಟವೆ?

ಐಸಡೋರಾ, ಐಸಡೋರಾ,
ಮರುಗುವೆನು ನಾ ಬಯ್ಯೆನು;
ಅಯ್ಯೊ ಸೋದರಿ, ನನ್ನ ಸೋದರಿ,
ನಿನಗೆ ನಿಂದೆಯ ನೆಯ್ಯೆನು.

ನಿನಗೆ ವಂದಿಪೆ, ಐಸಡೋರಾ,
ನಿನ್ನ ಜೀವನ ಚರಿತೆಗೆ:
ನಿನ್ನ ಕೆಚ್ಚಿಗೆ, ಮತ್ತೆ ನೆಚ್ಚಿಗೆ,
ಸತ್ಯದಾ ತತ್ಪರತೆಗೆ.

ಐಸಡೋರಾ, ಐಸಡೋರಾ,
ಭವಿಸು ಭಾರತದೇಶಕೆ;
ಬಿಳಿಯ ಮಲ್ಲಿಗೆ ಮಡಿಯನುಡಿಸುವೆ
ಲಾಸ್ಯರಸದಾವೇಶಕೆ!

೨೧ – ೦೯ – ೧೯೩೮


* ಐಸಡೋರಾ ಡಂಕನ್‌ ಎಂಬ ಸುಪ್ರಸಿದ್ಧ ನಟರಾಣಿಯ ಆತ್ಮಕಥೆಯನ್ನು ಓದಿದ ಮೇಲೆ ಬರೆದುದು.