ಓ ಹಕ್ಕಿ,

ನಿನ್ನ ಸವಿಯ ಉಲಿಯನಾಲಿಸಲ್ಕೆ
ನನಗೆ ಈಗ ಹೊತ್ತೆ ಇಲ್ಲ:
ನಿನಗೆ ಗೊತ್ತೆ ಇಲ್ಲಾ?
ನನಗೀಗ ದೊಡ್ಡ ಹುದ್ದೆಯಾಗಿರುವುದಲ್ಲಾ:
ನಾನೀಗ
ಮೈಸೂರು ವಿಶ್ವವಿದ್ಯಾನಿಲಯದ
ವೈಸ್‌ಛಾನ್ಸಲರ್ ಕಣಾ!!

ಹಕ್ಕಿ ಮೆಲ್ಲನುಲಿಯಿತು:
“ಏನು ನಷ್ಟ! ಎಂಥ ಕಷ್ಟ!
ಅಯ್ಯೊ ಪಾಪ ದುರಾದೃಷ್ಟ!
ಕವಿ ಆದನೆ ರಸಭ್ರಷ್ಟ?”

ಅಯ್ಯೊ ಬೆಪ್ಪು ಹಕ್ಕಿ,
ಹೇಳುತಾರೆ ಎಲ್ಲ ಮಂದಿ:
“ಏನದೃಷ್ಟ! ಎಂಥ ಪುಣ್ಯ!
ಎಂಥ ಸ್ಥಾನ! ಎಷ್ಟು ಗಣ್ಯ!
ಕುಲಪತಿ! ಕುಲಪತಿ!
ವಿಶ್ವವಿದ್ಯಾ ಸ್ಥಾನಪತಿ!
ಪಡೆದ ಕವಿಯೆ ನಿಜಕು ಸುಕೃತಿ!”

ಹಕ್ಕಿ ಮೆಲ್ಲನುಲಿಯಿತು:
“ಸ್ಥಾನಪತಿ! ಸ್ಥಾನಪತಿ!
ಎಯ್ಯೋ ಎಂಥ ದುರ್ಗತಿ,
ಈ ರಸಚ್ಯುತಿ!
ಕವಿಗೊದಗಿತೆ ಈ ಕೀಳ್ಗತಿ?
ತಾನಾದೆನೆ ಕುಲಪತಿ?”

ಹಕ್ಕಿ, ನಿನಗೆ ಬುದ್ಧಿಯಿಲ್ಲ.
ಈಗ ನನ್ನ ಕೆಲಸವೆಲ್ಲ
ಬರಿಯ ಹೆಸರು ಬರೆವುದೊಂದೆ:
ಚಿಂತೆಯಿಲ್ಲ. ಚರ್ಚೆಯಿಲ್ಲ.
ಕಡೆಗೆ
ಆಲೋಚನೆಯ ಗೋಜೂ ಇಲ್ಲ.
ವ್ಯಾಕರಣ, ಶೈಲಿ, ಛಂಧಸ್ಸು
ಯಾವುದರ ಪೀಡೆಯೂ ಇಲ್ಲ.
ಗದ್ಯ ಪದ್ಯ ಭೇದವಿಲ್ಲ:
ಹೃದ್ಯ ಬರೆದುದೆಲ್ಲ! –
ಆಲಸ್ಯವೊ? ಅವಸರವೋ?
ಅಜ್ಞಾನವೊ? ಅವಿವೇಕವೊ?
ಅನುಕೂಲದ ಈ ರಿತಿಗೆ
ನಿನಗೊಂದು ಹೆಸರು ಬೇಕಾದರೆ,
ಬೇಕಾದರೆ, ಬೇಕೇ ಬೇಕಾದರೆ,
‘ನವ್ಯ’ ಎಂದು ಕರೆ!
‘ನವ್ಯ’ ಎಂಬದೂ ಹಳೆಯದಾದರೆ
‘ನವೋನವ್ಯ!’ ‘ಭವ್ಯ!’ ‘ದಿವ್ಯ!’
ಏನು ಬೇಕಾದರೂ ಕರೆ.
ಅಂತೂ ಈಗ
ಹೆಸರು ಕೊರೆವುದೊಂದೇ
ನನಗೆ ರಸಕ್ರಿಯೆ!
ಹೆಸರು! ಹೆಸರು! ನನ್ನ ಹೆಸರು!
ದಾಸರೇನು ಹೇಳಿದ್ದರು
‘ನೀನ್ಯಾಕೋ ನಿನ್ನ ಹಂಗ್ಯಾಕೋ
ನಿನ್ನ ನಾಮದ ಬಲವೊಂದಿದ್ದರೆ ಸಾಕೋ!’
ಇಂದು ನನಗೆ ತಿಳಿಯಿತದರ ಸತ್ಯ:
ಹೆಸರಿಗಿರುವ ಸತ್ತ್ವ ಮೇಣ್ ಮಹತ್ತ್ವ!
ಕಡೆಗೆ ಇಡಿಯ ಹೆಸರು ಕೂಡ ಬೇಡ;
ಮೊದಲಕ್ಕರದ ಚಿಕ್ಕರುಜುವೆ
ಸಾಕೋ ಸಾಕು
ಹಕ್ಕಿಗರ್ಥವಾಗಲಿಲ್ಲ.
ನವ್ಯಮಾರ್ಗವರಿವ ಶಕ್ತಿ ಅದಕ್ಕಿನ್ನೂ ಬಂದಿಲ್ಲ!

ಉಲಿಯಿತಿಂತು ಮತ್ತೆ
ತನಗೆ ತಾನೆ ಎಂಬಂತೆ:
“ಸ್ಥಾನಪತಿ! ಕುಲಪತಿ!
ಅಯ್ಯೋ ಎಂಥ ದುರ್ಗತಿ,
ಓ ದೇವಿ ಸರಸ್ವತಿ,
ಎಂತಾದರೂ ಕವಿಯ ಪೊರೆ;
ಅವನಿಗೊದಗದಿರಲಿ
ಈ ರಸಚ್ಯುತಿ!
ನನ್ನ ಉಲಿಯನಾಲಿಸಲೂ
ಸಮಯವಿರದ ದುರ್ಗತಿ!”

೨೧ – ೦೯ – ೧೯೫೬