ಬರಿಯ ಉಳುವ ಕುಳದ ಗೆರೆಯೆ?

ನಾಡ ಹಣೆಯ ಬರೆಹ ಬರೆವೆ!
ಹೊಲದ ಗಾಂಧಿ, ನೊಲದ ನಾಂದಿ,
ನೀನೆ ರಾಷ್ಟ್ರಶಕ್ತಿ:
ನೆಹರುಗೇನು ಕಡಮೆಯೇನು
ನಿನ್ನ ದೇಶಭಕ್ತಿ?
ಅವರೊ ಹೆಸರು; ನೀನೊ ಉಸಿರು
ನಾಡದೇವಿಗೆ:
ನಂದದೆಂದು ಕುಂದದಿರುವ
ನಂದಾ ದೀವಿಗೆ!

ಉಸಿರಿದ್ದರೆ ತಾನೆ ಹೆಸರು?
ಒಡಲಿದ್ದರೆ ತಾನೆ ಉಸಿರು?
ನಿನ್ನ ಡುಡಿಮೆ ನಮಗೆ ಭುಕ್ತಿ;
ನಿನ್ನ ಬಲದೊಳೆಮ್ಮ ಮುಕ್ತಿ.
ರಕ್ಷೆಗಿಹುದೆ ಹಿರಿಯ ಸೇನೆ?
ಅದರ ಬೆನ್ನಮೂಳೆ ನೀನೆ!
ನಿನ್ನ ಕೈಯೊಳಿಹುದು ಗೆಯ್ಮೆ;
ನಿನ್ನ ಕಾಲೊಳಿಹುದು ಮೆಯ್ಮೆ;
ಹೆಸರಿಲ್ಲದ ಹೆಸರರಿಯದೆ
ಹೆಸರೊಲ್ಲದ ನೀನೆ ಮಹಿಮೆ
ನಾಡ ದೇವಿಗೆ:
ನಂದದೆಂದು ಕುಂದದಿರುವ
ನಂದಾ ದೀವಿಗೆ!
ಅನ್ನರಣದ ಭಾರತದಲಿ
ಕುರಕ್ಷೇತ್ರದಗ್ನಿಯಲಿ
ಹಲಾಯುಧದ ಭೀಷ್ಮಕಲಿ,
ಜಗದ ಸೊಗಕೆ ಬೇಳ್ದ ಬಲಿ,
ನಮೊ ನಿನಗೆ, ಧನ್ಯ ಹಲಿ!

೦೮ – ೦೩ – ೧೯೫೦