ತೆಗೆದಿ ಬಾಯಿ ತೆರಿಗೆನಾಯಿ

ಅಟ್ಟುತಿಹುದು: ಬಂದು ಕಾಯಿ,
ಹೇ ದೇವಿ, ಕಬ್ಬತಾಯಿ!

ಕೃತಿ ಸಮಾಧಿ ಭಂಗಕಾರಿ,
ಏಕಾಗ್ರತೆಯ ತಿಂಬ ಮಾರಿ,
ಲೆಕ್ಕಪಲ್ಲುಗಳನೆ ತೋರಿ
ಮಿಕ್ಕುದೆಲ್ಲವನೂ ತೂರಿ
ಅಟ್ಟುತಿಹುದು ತೆರಿಗೆನಾಯಿ:
ಬಂದು ಕಾಯಿ, ಕಬ್ಬತಾಯಿ!

ಬೇಹಾರಿಯೊ ರೂವಾರಿಯೊ
ಶಿಲ್ಪಿವರನೊ ಕವಿಯೊ ಕಲಿಯೊ
ಅದಕೆ ಒಂದೂ ಗಣನೆಯಿಲ್ಲ;
ಭೇದಗೀದವೇನೂ ಇಲ್ಲ!
ಲಂಚದಾಶೆ ಅದಕೆ ಬಾಲ;
ಹೊಟ್ಟೆಕಿಚ್ಚೆ ಹಿಸುಣಗಿವಿ;
ಕಾನುನೆಯೆ ಜೋಲ್ವ ಜಿಹ್ವೆ;
ಅನುಮಾನವೆ ಕಾಲ ಉಗುರು;
ಅಪಮನವೆ ಸೋರ್ವ ಜೊಲ್ಲು!

ಹರಿಶ್ಚಂದ್ರ ಚಂದ್ರಮತಿಯ
ವಿಪಿನಗತಿಯ ಹಿಂದೆ
ಕುಶಿಕತನಯ ಶಿಷ್ಯನಂತೆ
ತೆರಿಗೆಶನಿಯೆ ಬಂದೆ:
ಕವನ ರಚಿಸುವೆನ್ನ ಮನಕೆ
ಪೀಡೆಯಾಗಿ ನಿಂದೆ!
ಕವಿಯ ಹರಿಶ್ಚಂದ್ರ ಮತಿಗೆ
ಏಕೆ ಶ್ರೀ ಸರಸ್ವತಿಗೆ
ಈ ನಕ್ಷತ್ರಕನ ಕಾಟ,
ಎದೆಯ ಕೊರೆವ ಕೀಟ?

ದುಡಿಮೆಯನ್ನೆ ಕಡಮೆಗೊಳಿಸಿ:
ತೆರಿಗೆ ಗೋಳಿದೇಕೆ?
ಕೊಡುವ ಮೊದಲೆ ಕಡಿದುಕೊಳ್ಳಿ:
ಕೊಟ್ಟು ಕೊರೆವುದೇಕೆ?
ತೆರಿಗೆಯಿರುವ ನಾಕವೂ
ನರಕಲೋಕವೆ!
ತೆರಿಗೆಯಿರದ ನರಕವೂ
ನಿಜದಿ ನಾಕವೆ!

೨೫ – ೧೦ – ೧೯೬೧