ಅದೊ ಆಲಿಸಿ: ಅನುರಣಿಸುತ್ತಿದೆ
ಸಮರ ತಾಂಡವ ದಮರು ಡಿಂಡಿಮ
ಕುಬೇರ ದಿಗುತಟದಿ!….
ಸ್ವಲ್ಪ ನಿಲ್ಲಿಸಿ ನಿಮ್ಮ ನೃತ್ಯವ,
ದಾಸವರ್ಯರೆ:…
ಏನೊ ಕೇಳಿಸುತಿಹುದು ಆಲಿಸಿ:….
ಗೆಜ್ಜೆ ಕಟ್ಟಿದ ಕಾಲು
ಹೆಜ್ಜೆಯಟ್ಟರೂ ಸದ್ದೆ!
ಇನ್ನು ಕುಣಿದರೆ, ಕೇಳಬೇಕೆ?…. ನಿಗೆದುಬಿದ್ದೆ!….


ಏನದಾ ಹಾಳು ಹಂಪೆಯಲಿ ಕೂಗುತಿವೆ
ಶ್ಮಶಾನ ಕುಕ್ಕುಟಪುಂಜ?
ಗದ್ದುಗೆಯ ಮೇಲಷ್ಟು ಹುಂಜ! –
ಐನುರು ವರ್ಷದಾ ಸಮ್ರಾಜ್ಯವನು ಈ ಗತಿಗೆ ತಂದ
ಹೆಣ್ಣುಭಕ್ತಿಯ ಕುಣಿತ ಸಾಕೆಮಗೆ; ಇಂದು
ಬೇಕಾಗಿಹುದು ಪೌರುಷದ ಶಕ್ತಿ:
“ಪುರಷಸಿಂಹರನ್ನಾಗಿ ಮಾಡು ನಮ್ಮ!”
ಎಂದು ಗರ್ಜಿಸಿದವನ ಶತಮಾನ ಉತ್ಸವವ
ಆಚರಿಸುತಿಹ ನಮಗೆ ಬೇಕಾಗಿಹುದು ಇಂದು
ಗಂಡುಭಕ್ತಿ, ವೀರಭಕ್ತಿ, ಶಕ್ತಿ!


ಆರೊ ನಾಲ್ವರಿಗೆ ಹಿಡಿದ ಹೃದಯದೌರ್ಬಲ್ಯ ವ್ಯಾಧಿಗೆ
ಆಗಿರಬಹುದು ಅಂದು ಆ ಸ್ತ್ರೈಣಭಕ್ತಿ ಸಿದ್ಧೌಷಧಿ.
ಅದನು ಈಗಲೂ ಎಲ್ಲರಿಗೂ ನೀಡಿದರೆ
ವಿಜಯನಗರಕೆ ಆದ ಗತಿಯೆ ಕಾದಿಹುದು ನಮ್ಮನಾಡಿಗಿಂದು.
ಚೀಣಿಯರನಟ್ಟಲ್ಕೆ ಪಾಣಿಪಂಚೆಯನುಟ್ಟು
ಹೋಗಲಾದೀತೆ ಹಿಮಗಿರಿಯ ಕದನಕ್ಕೆ?
ಚಳಿವೆಟ್ಟಿನಾ ಯದ್ಧಕ್ಕೆ ಬೇಕು
ಬೇರೆ ಪೋಷಾಕು:
ದಾಸ ಸೋಬಾನೆಯಲ್ಲ, ಬೇಕು
ವೈರಿ ಹೃದಯವ ನಡುಗಿಸುವ ಸಾಕು:
“ಜಯ ಕಾಳಿ! ಜಯ ದುರ್ಗೆ!
ಜಯ ಪಾರ್ಥಸಾರಥಿ!
ಜಯ ರಾವಣಾರಿ!….”
ಟಿಂಡಿಣಿ ಟಿಂಟಿಣಿ ತಾಳ ಕಿಂಕಿಣಿಯಲ್ಲ,
ಬೇಕು ತಂಬಟೆ, ಡಮರು, ಕಹಳೆ, ಪಾಂಚಜನ್ಯ!
ಅಲ್ಲ ದಾಸೊಹಂ,
ಬೇಕು ಈಶೋಹಂ:
ಉಪನಿಷತ್ತಿನ ಡಿಂಡಿಮ!
ಜೊತೆಗೆ ರುದ್ರನ ತಾಂಡವ!

೧೭ – ೦೧ – ೧೯೬೪